ಈ ಅಗಾಧ ವಿಶ್ವದಲ್ಲಿ ಮಾನವ ಮಾನವರನ್ನು ಒಬ್ಬರಿಗೊಬ್ಬರು ಬೆಸೆದಿರುವುದು ಹಲವಾರು ರೀತಿಯ ಸಾಮಾಜಿಕ ಸಂಬಂಧಗಳು, ಈ ‘ಸಂಬಂಧ’ಗಳ ಬೆಸುಗೆಯಿಲ್ಲದಿದ್ದರೆ ಮಾನವನೂ ಪ್ರಾಣಿಗಳಂತೆ ಮನ ಬಂದಲ್ಲಿ ಅಲೆಯುತ್ತಿದ್ದ, ಮೇಯುತ್ತಿದ್ದ. ‘ಮಾನವ’ ಈ ಸಾಮಾಜಿಕ ಸಂಬಂಧಗಳೆನ್ನುವ ಸಂಕೋಲೆಗಳ ಒಳಗೆ ಸಿಕ್ಕಿಬಿದ್ದಿರುವ ‘ಸಾಮಾಜಿಕ ಜೀವಿ’ ಎಂದರೆ ತಪ್ಪಾಗಲಾರದು. ಈ ಸಂಬಂಧಗಳ ಆಯಸ್ಕಾಂತ ಶಕ್ತಿಯಿಲ್ಲದಿದ್ದರೆ ಮಾನವನನ್ನು ಒಂದು ಕಡೆ ಹಿಡಿದು ನಿಲ್ಲಿಸುವುದು ಕಷ್ಟವಾಗುತ್ತಿತ್ತು. ಬೇಕಿದ್ದರೂ ಬೇಡವಾದರೂ ಮಾನವ ಈ ಸಂಕೋಲೆಗಳ ಬಂಧನದಲ್ಲಿ ಬದುಕಲೇಬೇಕಾದ ಅನಿವಾರ್‍ಯತೆ ಇದೆ.
ಮಾನವ ಮಾನವರೊಳಗಿನ ಈ ಸಂಬಂಧಗಳನ್ನು ಮೂರು ವಿಭಾಗಗಳನ್ನಾಗಿ ವಿಭಜಿಸಬಹುದು.
೧. ರಕ್ತ ಸಂಬಂಧಗಳು
೨. ಮಾನವೀಯ ಸಂಬಂಧಗಳು
೩. ವ್ಯವಹಾರಿಕ ಸಂಬಂಧಗಳು
ರಕ್ತ ಸಂಬಂಧಗಳಿಗೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಇವು ಬೇಕೆಂದಾಗ ಜೋಡಿಸಿಕೊಂಡು ಬೇಡವೆಂದಾಗ ಕಿತ್ತೆಸೆಯಲಾಗುವಂತಹ ಸಂಬಂಧಗಳಲ್ಲ; ಹುಟ್ಟಿನಿಂದ ಸಾವಿನವರೆಗೂ ಈ ಸಂಬಂಧಗಳನ್ನು ನಿರ್‍ವಹಿಸಲೇಬೇಕಾದ ಶಾಶ್ವತವಾದ ಸಂಬಂಧಗಳು. ಮೊದಲೆಲ್ಲಾ ರಕ್ತ ಸಂಬಂಧಿಗಳು ಅವಿಭಾಜ್ಯ ಕುಟುಂಬವಾಗಿ ಒಂದೇ ಮಾಡಿನಡಿಯಲ್ಲಿ ಜೀವಿಸುತ್ತಿದ್ದರು. ಕ್ರಮೇಣ ಇದು ಶಿಥಿಲವಾಗುತ್ತಾ ಬಂದು ಈಗ ತಂದೆ-ತಾಯಿ, ಮಕ್ಕಳು ಮಾತ್ರ ಒಟ್ಟಿಗೆ ನಿಲ್ಲುವ ಮಟ್ಟಕ್ಕೆ ಬಂದು ನಿಂತಿವೆ. ಮೊದಲಿನ ‘ಏಕತ್ವ’ (oneness) ಏನಿತ್ತೋ ಅದು ಮಾಯವಾಗಿ ಅಲ್ಲಿ ಈಗ ಸ್ವಾರ್‍ಥ ಮನೋಭಾವ (selfishness) ತುಂಬಿ ನಿಂತಿದೆ. ಚಿಕ್ಕ ಕುಟುಂಬ ಸುಖಕ್ಕೆ ಆಧಾರವೆನ್ನುವ ಮಾತು ಹೊರನೋಟಕ್ಕೆ ಆಕರ್‍ಷಣೀಯವಾಗಿ ಕಂಡರೂ ಆಳವಾಗಿ ಯೋಚಿಸಿದರೆ ಮೊದಲಿನ ಸಹಕಾರ, ಸಹಬಾಳ್ವೆ, ತ್ಯಾಗ, ಆತ್ಮೀಯತೆ ಮಾಯವಾಗಿ ಮಾನಸಿಕವಾಗಿ ಬಡತನವನ್ನು ಅನುಭವಿಸುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ.
ರಕ್ತ ಸಂಬಂಧಗಳ ಹೊರಗಿನ ಮಾನಸಿಕ ಸಂಬಂಧಗಳು ಮಾನವೀಯ ಸಂಬಂಧಗಳು, ಗಂಡ-ಹೆಂಡತಿ, ಗೆಳೆಯರು, ನೆರೆ-ಕರೆ ಯವರು, ಸಹೋದ್ಯೋಗಿಗಳು, ಗುರು-ಶಿಷ್ಯರು ಇವೆಲ್ಲಾ ಮಾನಸಿಕವಾಗಿ ಬೆಳೆದು ಬರುವ ಸಂಬಂಧಗಳು. ಇಲ್ಲಿ ಖಚಿತವಾದ, ಗಟ್ಟಿಯಾಗಿ ನಿಲ್ಲುವ ರಕ್ತ ಸಂಬಂಧವಿಲ್ಲ. ಆದರೆ ಇಲ್ಲಿ ಎರಡು ಹೃದಯಗಳು ಬೆಸೆದಾಗ ರಕ್ತ ಸಂಬಂಧದಷ್ಟೇ ಗಟ್ಟಿಯಾದ ಬಂಧನ ಏರ್‍ಪಡುವುದು ಸಾಧ್ಯ. ಮಾನವೀಯತೆಗೆ ಒರೆಗಲ್ಲು ಈ ಸಂಬಂಧಗಳು. ಬೆರೆತಷ್ಟೇ ಸುಲಭದಲ್ಲಿ ಕಡಿದು ಹೋಗುವುದೂ ಸಾಧ್ಯ. ಇವತ್ತಿನ ಆತ್ಮೀಯ ಗೆಳೆಯರು ನಾಳಿನ ವೈರಿಗಳೂ ಆಗಬಹುದು. ಗಂಡ-ಹೆಂಡತಿಯರು ಉತ್ತರ ದಕ್ಷಿಣಕ್ಕೆ ಮುಖಹಾಕಿ ನಿಲ್ಲಬಹುದು. ನೆರೆ-ಕರೆಯವರಲ್ಲಿ ಇರಬೇಕಾದ ಆತ್ಮೀಯತೆಯ ಜಾಗದಲ್ಲಿ ವೈಷಮ್ಯ, ಅಸೂಯೆ ಬೆಳೆದು ನಿಲ್ಲಬಹುದು. ಒಂದುಗೂಡಿದ ಮಾನಸಿಕ ಕೊಂಡಿಗಳು ಹೇಗೆ ಎಲ್ಲಿ ಕಳಚಿಕೊಳ್ಳುವುವು ಎಂದು ಹೇಳುವುದೂ ಅಸಾಧ್ಯ. ಒಮ್ಮೆ ಬೆಸೆದ ಮಾನಸಿಕ ಕೊಂಡಿಗಳು ಭದ್ರವಾಗಿ ನಿಲ್ಲುವುದು ಅಥವಾ ಕಳಚಿಕೊಳ್ಳುವುದು ಅವರವರ ವ್ಯಕ್ತಿತ್ವದ ಮೇಲೆ ಹೊಂದಿಕೊಂಡಿರುತ್ತದೆ. ವ್ಯಕ್ತಿತ್ವದಿಂದ ವ್ಯಕ್ತಿತ್ವಕ್ಕೆ ಈ ಸಂಬಂಧಗಳ ಭಾವನೆಗಳು ಬದಲಾಗುತ್ತಾ ಹೋಗುತ್ತವೆ. ವ್ಯಕ್ತಿತ್ವವನ್ನು ಒಂದು ಕಟ್ಟುನಿಟ್ಟುನೊಳಗೆ ನಿಗದಿಪಡಿಸಿಡುವುದೂ ಸಾಧ್ಯವಿಲ್ಲ. ಯಾಕೆಂದರೆ ಅದು ಜಾಗದಿಂದ ಜಾಗಕ್ಕೆ, ದೇಶದಿಂದ ದೇಶಕ್ಕೆ, ಪರಿಸರದಿಂದ ಪರಿಸರಕ್ಕೆ, ಪಂಗಡದಿಂದ ಪಂಗಡಕ್ಕೆ ಬದಲಾಗುತ್ತದೆ.
ಉದಾಹರಣೆಗೆ ನಮ್ಮಲ್ಲಿ ಪ್ರೀತಿ, ಸತ್ಯ, ಶಾಂತಿ, ಸಹನೆ, ತ್ಯಾಗ ಅಹಿಂಸೆಗೆ ಹೆಚ್ಚಿನ ಒತ್ತುಕೊಟ್ಟು ಒಬ್ಬನ ವ್ಯಕ್ತಿತ್ವವನ್ನು ಅಳೆಯುತ್ತಾರೆ. ಆದರೆ ಪಾಶ್ಚಾತ್ಯರಲ್ಲಿ ಇವೆಲ್ಲ ಭಾವನೆಗಳಿಗೆ ಹೆಚ್ಚಿನ ಒತ್ತು ಇಲ್ಲ. ಅವರದ್ದು ತುಂಬಾ ವ್ಯವಹಾರಿಕ ಮನೋಭಾವ. ಎಲ್ಲದಕ್ಕೂ ಒಂದೊಂದು ಮಿತಿಯನ್ನು ಹಾಕಿಕೊಂಡು ತನ್ನ ಉನ್ನತಿಗೆ ತನ್ನ ಪ್ರಗತಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ನಾವೋ ಮಹಾಭಾವುಕರು, ಸಹನೆ ಸಹನೆಯೆಂದು ಯಾವ ಚಿತ್ರಹಿಂಸೆಗೂ ಒಳಗಾಗುವ ಎದೆಗಾರಿಕೆ ನಮ್ಮಲ್ಲಿದೆ. ತ್ಯಾಗ ತ್ಯಾಗವೆಂದು ಎಲ್ಲಾ ಕಳಕೊಂಡರೂ ತ್ಯಾಗದ ಮಂತ್ರ ಜಪಿಸುವ ಕರ್‍ಣನ ಜನಾಂಗದವರು ನಾವು! ಸತ್ಯ ಸತ್ಯವೆಂದು ನಮ್ಮನ್ನೆಲ್ಲ ದೋಚಿಕೊಂಡು ಹೋದರೂ ಸತ್ಯಕ್ಕೇ ಜಯವೆನ್ನುವ ಧರ್‍ಮರಾಯನ ವಂಶಸ್ಥರು. ಶಾಂತಿ ಶಾಂತಿಯೆಂದು ಬಿದ್ದ ಹೊಡೆತಗಳನ್ನೆಲ್ಲ ಬಾಯಿಮುಚ್ಚಿ ಸಹಿಸಿಕೊಳ್ಳುವ ಕಷ್ಟ ಸಹಿಷ್ಣುಗಳು. ಅಹಿಂಸೆ ಅಹಿಂಸೆಯೆಂದು ನಮ್ಮನ್ನು ಚಿಂದಿ ಚಿಂದಿ ಮಾಡಿದರೂ ಇನ್ನೊಬ್ಬರ ಮೇಲೆ ಕೈಯೆತ್ತಬಾರದೆಂದು ಹೇಳಿದ ಗಾಂಧಿತತ್ವ ಪರಿಪಾಲಕರು. ಹಾಗಾಗಿ ನಮ್ಮ ಮಾನವೀಯ ಸಂಬಂಧಗಳು ಪಾಶ್ಚಾತ್ಯರ ವ್ಯವಹಾರಿಕ ಸಂಬಂಧಗಳಾಗಿ ಬದಲಾಗುವುದು ಅಸಾಧ್ಯ. ನಮ್ಮಲ್ಲಿ ಪತಿ-ಪತ್ನಿಯ ಸಂಬಂಧಕ್ಕೆ ಹೆಚ್ಚಿನ ಬೆಲೆಯಿದೆ. ಯಾವ ತ್ಯಾಗವನ್ನಾದರೂ ಮಾಡಿ ಈ ಸಂಬಂಧದ ರಕ್ಷಣೆಗೆ ನಾವು ಹೆಣಗುತ್ತೇವೆ. ಅಲ್ಲಿ ಈ ಸಂಬಂಧದಲ್ಲಿ ಒಮ್ಮೆ ಬಿರುಕು ಬಿಟ್ಟಿತೆಂದರೆ ಮತ್ತೆ ಪರ್‍ಯಾವಸಾನವಾಗುವುದು ಡೈವೋರ್‍ಸಿನಲ್ಲಿ. ಪತ್ತೆ ಹಾಕುವ ಪ್ರಯತ್ನ ಅವರು ಮಾಡಲಾರರು. ಆದರೆ ಪಾಶ್ಚಾತೀಕರಣದ ಪ್ರಭಾವ ನಮ್ಮ ಮೇಲೂ ಆಗುತ್ತಿದ್ದು, ಈಗ ನಮ್ಮ ಮಾನವೀಯ ಸಂಬಂಧಗಳ ಇಕ್ವೇಶನ್ ಬದಲಾಗುತ್ತಿದೆ ಎನ್ನುವುದೂ ಸತ್ಯ.
ಗೆಳೆತನ ಇನ್ನೊಂದು ಅತಿ ಸೂಕ್ಷ್ಮವಾದ ಮಾನಸಿಕ ಸಂಬಂಧ. ಮದುವೆಯಂತೆ ನಿಜವಾದ ಗೆಳೆತನ ಸ್ವರ್ಗದಲ್ಲೇ ಮಾಡಿರುವುದು ಎಂದರೆ ತಪ್ಪಾಗದು. ಎಲ್ಲರೊಂದಿಗೆ ಗೆಳೆತನ ಸ್ಪುರಿಸಿ ಬರುವುದಿಲ್ಲ. ಕೆಲವೇ ವ್ಯಕ್ತಿಗಳ ಮಧ್ಯೆ ನಿಜವಾದ ಗೆಳೆತನದ ಅಯಸ್ಕಾಂತ ಆಕರ್‍ಷಣೆ ಬೆಳೆದು ಬರುತ್ತದೆ. ಇಡೀ ಜೀವಮಾನದಲ್ಲಿ ಒಬ್ಬರೋ, ಇಬ್ಬರೋ ನಿಜವಾದ ಗೆಳೆಯರು ಸಿಕ್ಕಿದರೆ ಹೆಚ್ಚು. ನೆರೆ-ಕರೆಯ ಸಂಬಂಧ ಗೆಳೆತನದ ಸಂಬಂಧವಾಗಲಾರದು. ಅದೊಂದು ಒತ್ತಾಯದ ಸಂಬಂಧ. ಒಂದೇ ರೀತಿಯ ವ್ಯಕ್ತಿತ್ವ, ಒಂದೇ ಅನಿಸಿಕೆಗಳು, ಯಾವುದೇ ಪರಿಸರಕ್ಕೆ ಒಂದೇ ರೀತಿಯ ಪ್ರತಿಕ್ರಿಯೆಗಳು ಗೆಳೆತನಕ್ಕೆ ಮೂಲ ಆಕರ್‍ಷಣೆಗಳು ಎನ್ನಬಹುದು.
ಗುರು-ಶಿಷ್ಯರೊಳಗಿನ, ಸಹೋದ್ಯೋಗಿಗಳ ನಡುವಿನ ಸಂಬಂಧದಲ್ಲಿ ಸಿಹಿಯೂ ಇರಬಹುದು, ಕಹಿಯೂ ಇರಬಹುದು. ನೂರಾರು ಸಾವಿರಾರು ಜನರೊಡನೆ ವ್ಯವಹರಿಸುವಾಗ ಎಲ್ಲರನ್ನೂ ಮೆಚ್ಚಿಸುವುದು ಅಥವಾ ಎಲ್ಲರೊಡನೆ ಆತ್ಮೀಯವಾಗಿ ವರ್‍ತಿಸುವುದು ಕಷ್ಟ. ಯಾಕೆಂದರೆ ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ, ಗುಣದಲ್ಲಾಗಲೀ, ಒಬ್ಬೊಬ್ಬರದ್ದು ಒಂದೊಂದು ತರಹ. ಕೆಲವು ಕಡೆ ಹೊಂದಾಣಿಕೆ ಸಾಧ್ಯವಾಗದಷ್ಟು ವ್ಯತ್ಯಾಸಗಳಿರುತ್ತವೆ. ಅಂತಹ ಸಂದರ್‍ಭಗಳಲ್ಲಿ ಒತ್ತಾಯದ ಮಾಘಸ್ನಾನಕ್ಕಿಂತ ಒಪ್ಪಿಗೆಯ ದೂರೀಕರಣ ಮೇಲು.
ವ್ಯವಹಾರಿಕ ಸಂಬಂಧಗಳು ಬರೇ ವ್ಯವಹಾರದ ಅವಶ್ಯಕತೆಗಳಿಗೆ ಅನುಗುಣವಾಗಿ ಬೆಸೆದುಕೊಳ್ಳುತ್ತದೆ. ಒಮ್ಮೆ ವ್ಯವಹಾರ ಮುಗಿದರೆ ಮತ್ತೆ ನಾವು ಅಂತಹ ಸಂಬಂಧಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಅಂಗಡಿಯಾತ, ಸಹ ಪ್ರಯಾಣಿಕರು ಇತ್ಯಾದಿ. ಇಂತಹ ಸಂಪರ್‍ಕಗಳಿಂದ ಬೆಳೆಯುವ ಸಂಬಂಧಗಳು ವ್ಯವಹಾರಿಕ ಸಂಬಂಧಗಳು.
ಮೇಲಿನ ಎಲ್ಲಾ ಸಂಬಂಧಗಳಲ್ಲಿ ಸ್ವಲ್ಪ ಮನಸ್ತಾಪ, ಸ್ವಲ್ಪ ಘರ್ಷಣೆ, ಸ್ವಲ್ಪ ಮನಸ್ತಾಪ ಉಂಟಾದರೆ ನಮ್ಮ ಸಂಸಾರಿಕ ಜೀವನದಲ್ಲಿ ಅದರ ಕರಿಛಾಯೆ ಬೀಳುವುದು ಸಾಧ್ಯ. ದಿನದ ಹೆಚ್ಚಿನ ಸಮಯವನ್ನು ನಾವು ಈ ಪರಿಸರದಲ್ಲಿ ಕಳೆಯಬೇಕಾಗಿರುವುದರಿಂದ ಇಲ್ಲಿಯ ಉಲ್ಲಾಸಗಳು, ನಿಷ್ಠುರಗಳು, ಸಂತಸಗಳು, ಬೇಸರಿಕೆಗಳು ನಮ್ಮ ಸಂಸಾರಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಎಲ್ಲಾ ಸಂಪರ್‍ಕ ಸಂಬಂಧಗಳಲ್ಲಿ ಆದಷ್ಟು ಸಿಹಿ ತುಂಬುವಂತೆ ನೋಡಿಕೊಳ್ಳುವುದು ಒಳ್ಳೆಯದು.
ಅದಕ್ಕಾಗಿ ಸಾಮಾಜಿಕ ಸಂಬಂಧಗಳ ಆರ್‍ಥ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಭೂಮಿಯಲ್ಲಿ ಒಂಟಿಯಾಗಿ ಜೀವಿಸುವುದು ಅಸಾಧ್ಯ. ಯಾಕೆಂದರೆ ಸುತ್ತಲಿನವರೊಡನೆ ಒಂದಲ್ಲ ಒಂದು ರೀತಿಯ ಸಂಪರ್‍ಕ ಬೆಳೆಸಲೇಬೇಕಾಗುತ್ತದೆ. ಪ್ರತಿಯೊಂದು ಸಂಬಂಧಗಳನ್ನು ಸರಿಯಾಗಿ ತಿಳಿದುಕೊಂಡು ನಿಭಾಯಿಸಿದರೆ ಎಲ್ಲೂ ಅಪಸ್ವರಬಾರದು.
ಎಲ್ಲ ಸಂಬಂಧಗಳು ಒಂದು ಮಾನಸಿಕ ಮಟ್ಟದಲ್ಲಿ ಬೆಳೆದು ನಿಲ್ಲಬೇಕು. ಇಲ್ಲಿ ಒಂದು ರೀತಿಯ ಕೊಟ್ಟು ಕೊಂಬುವ ನೀತಿಯನ್ನು ಅನುಸರಿಸಬೇಕಾಗುತ್ತದೆ. ಒಂದು ಕಡೆ ಸ್ವಲ್ಪ ಕಳೆದುಕೊಂಡರೆ ಮತ್ತೊಂದು ಕಡೆ ಸ್ವಲ್ಪ ಪಡೆದುಕೊಳ್ಳಬಹುದು. ಮನುಷ್ಯನಲ್ಲಿ ನೆಲೆಸಿರುವ ‘ಅಹಂ’ ಯಾವುದೇ ರೀತಿಯ ಸಂಬಂಧಗಳಿಗೆ ವಿನಾಶಕಾರಿ. ಸಂಬಂಧಗಳು ಸರಿಯಾಗಿರಬೇಕಾದರೆ ಆದಷ್ಟು ಅಹಂನಿಂದ ಮುಕ್ತರಾಗಬೇಕು.
ಒತ್ತಾಯದಿಂದ ಯಾವುದೇ ಸಂಬಂಧಗಳನ್ನು ಹೇರಲಾಗದು. ಸಹಜ ಪ್ರತಿಕ್ರಿಯೆಯಾಗಿ ಅದು ತನ್ನಿಂದ ತಾನೇ ಮೂಡಿ ಬರಬೇಕು. ವ್ಯವಹಾರಿಕ ಸಂಬಂಧಗಳಲ್ಲಿ ನಾವು ಭಾವುಕರಾಗಬಾರದು. ಆದಷ್ಟು ನಿರ್‍ಲಿಪ್ತರಾಗಬೇಕು.
ಯಾವುದೇ ಸಂಬಂಧಗಳ ಅಡಿಗಲ್ಲು ನಂಬುಗೆಯಾಗಿರಬೇಕು. ನಂಬುಗೆಯಿಲ್ಲದ ಸಂಬಂಧಕ್ಕೆ ಅರ್‍ಥವಿಲ್ಲ. ಪರಿಸರಗಳನ್ನು ಅರ್‍ಥೈಸಿ ಕೊಂಡು ಸಂಪರ್‍ಕ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಹೆಚ್ಚುಹೆಚ್ಚು ಸಿಕ್ಕಿ ಹಾಕಿಕೊಂಡಷ್ಟು ತಲೆಬಿಸಿಗಳು ಜಾಸ್ತಿ.
ಆದಷ್ಟು ಬೇರೆ ಬೇರೆ ರೀತಿಯ ಸಂಬಂಧಗಳನ್ನು ಬೇರೆ ಬೇರೆಯಾಗಿಯೇ ಇಡಬೇಕು. ಉದಾಹರಣೆಗೆ ಗೆಳೆತನದೊಂದಿಗೆ ವ್ಯವಹಾರವನ್ನು ಮೇಳೈಸಬಾರದು. ಗೆಳೆತನ ಗೆಳೆತನವಾಗುಳಿದರೇ ಚೆನ್ನ.
ನಮ್ಮಲ್ಲಿ ಹಲವರಿಗೆ ಹಲವಾರು ರೀತಿಯ ಸಂಬಂಧಗಳ ಈ ಗೊಡವೆ ಇರುವುದಿಲ್ಲ. ಎಲ್ಲಿ ನೋಡಿದರೂ ವೈಷಮ್ಯ ಬೆಳೆಸಿಕೊಳ್ಳುತ್ತಾರೆ. ಒಂದು ರೀತಿಯ ಕೂಪ ಮಂಡೂಕ ಪ್ರವೃತ್ತಿ ಅವರದ್ದು. ವಿಸ್ತಾರವಾದ ಮನೋಭಾವದಲ್ಲಿ ಅವರೆಂದೂ ಯೋಚಿಸುವುದಿಲ್ಲ. ತಾನು ತನ್ನದು, ತಾನು ಹೇಳಿದ್ದು, ತಾನು ಮಾಡಿದ್ದು ಎನ್ನುವ ಸಂಕುಚಿತ ಮನೋಭಾವನೆ ಇದ್ದರೆ ಯಾವ ರೀತಿಯ ಸಂಬಂಧಗಳೂ ನಯವಾಗಿ ಮುಂದುವರಿಯುವುದಿಲ್ಲ. ಅಂತಹವರು ತಾವೂ ಸುಖವಾಗಿರೋದಿಲ್ಲ ಇತರರನ್ನೂ ಸುಖವಾಗಿರಲು ಬಿಡೋದಿಲ್ಲ.
ನಮ್ಮ ಪರಿಸರವನ್ನು, ನಾವಿರುವ ಸಮಾಜವನ್ನು ಬಿಟ್ಟು ಬದುಕುವುದು ಸಾಧ್ಯವೇ ಇಲ್ಲವೆಂದಾದ ಮೇಲೆ ಸಂಬಂಧಗಳು ನಯವಾಗಿರಲು ಪ್ರಯತ್ನಿಸಿದರೆ ಜೀವನದಲ್ಲಿ ನೆಮ್ಮದಿ ನೆಲೆಸುವುದು ಸಾಧ್ಯ. ಎಲ್ಲರ ಜೀವನದ ಧ್ಯೇಯವೇ ನೆಮ್ಮದಿ. ಸ್ವಲ್ಪ ಕಳಕೊಂಡು ಸ್ವಲ್ಪ ಪಡಕೊಂಡು ಆ ನೆಮ್ಮದಿಯನ್ನು ಕಾಯ್ದುಕೊಂಡು ಜೀವಿಸುವುದು ಒಳಿತಲ್ಲವೇ?
*****
















