ಆನ್ ಒಟ್ಟೋ ಫ್ರಾಂಕ್ ೧೯೨೯ರಲ್ಲಿ ಐತಿಹಾಸಿಕ ಸ್ಥಳವಾದ ಫ್ರಾಂಕ್‌ಫರ್ಟನಲ್ಲಿ ಜನಿಸಿದಳು. ಆಕೆ ಜರ್ಮನಿಯ ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ತಮ್ಮ ಬಹುಮೂಲ್ಯ ಕೊಡುಗೆಗಳನ್ನು ನೀಡಿದ ಸುಮಾರು ಅರ್ಧ ಮಿಲಿಯನ್‌ರಷ್ಟಿರುವ ಯಹೂದಿ ಸಮುದಾಯಕ್ಕೆ ಸೇರಿದ್ದಳು. ಆಕೆಯ ತಂದೆ ಒಟ್ಟೋ ಫ್ರಾಂಕ್, ಒಬ್ಬ ಯಶಸ್ವಿ ಬಿಸಿನೆಸ್ ಮ್ಯಾನ್. ಅವರಿಗೆ ಇಬ್ಬರು ಹೆಣ್ಣುಮಕ್ಕಳು: ಆನ್ ಮತ್ತು ಆಕೆಯ ಅಕ್ಕ ಮಾರ್‍ಗೊಟ್, ಹೆತ್ತವರ ಅತಿಯಾದ ಪ್ರೀತಿ ಪಡೆದ, ಫ್ರಾಂಕಫರ್ಟನ ಗ್ಯಾಂಗ್ಹೋಫರ್‍ಸ್ಟ್ರಾಸಿಯ ತಮ್ಮ ವಿಶಾಲ ಪ್ಲ್ಯಾಟ್‌ನಲ್ಲಿ ಸುಖದಿಂದ ಬೆಳೆದವರು.
೧೯೩೩ರಲ್ಲಿ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆಗುತ್ತಿದ್ದಂತೆ, ಆನ್‌ಳ ಬುದ್ಧಿವಂತ ತಂದೆ ನಾಝಿಗಳಿಂದ ಮುಂದೊದಗಬಹುದಾದ ಅನಾಹುತಗಳನ್ನು ಮೊದಲೇ ಗ್ರಹಿಸಿ, ೧೯೩೩ರ ಬೇಸಿಗೆಯ ದಿನಗಳಂದು ಜರ್ಮನಿಯಿಂದ ವಲಸೆ ಹೋದರು. ಏಕಾಂಗಿಯಾಗಿ ಆತ ಹಾಲೆಂಡಿಗೆ ಹೊರಬೀಳುತ್ತಿದ್ದಂತೆ, ಹೇಗಾದರೂ ಈ ವಿರೋಧಿ ರಾಷ್ಟ್ರದಿಂದ ಹೊರನಡೆಯಲು ಆತನ ಪತ್ನಿ ಮತ್ತು ಮಕ್ಕಳು ಬೆಲ್ಜಿಯಂ ಗಡಿಯನ್ನು ಆಕನ್‌ನಲ್ಲಿ ದಾಟಲು ಮುನ್ನಡೆದರು,
ಸುರಕ್ಷಿತ ದೇಶವಾದ ಹಾಲೆಂಡ ಪೀಡನೆಗೊಳಗಾದ ನಿರಾಶ್ರಿತರಿಗೆ ಆಶ್ರಯ ನೀಡುವ ಮೂಲಕ ಶತಮಾನಗಳಿಂದ ಪ್ರಸಿದ್ಧವಾಗಿತ್ತು. ಜರ್ಮನಿಯಿಂದ ಯಹೂದಿಗಳ ಒಳನುಸುಳುವಿಕೆಗೂ ಈ ಸಂದರ್ಭಕ್ಕೂ ಮುನ್ನ ಅಂದರೆ ೧೬ನೇ ಶತಮಾನದಲ್ಲಿ ಫ್ರೇಂಚ್ ಧಾರ್ಮಿಕ ಯುದ್ಧದ ಸಂದರ್ಭದಲ್ಲಿ ಓಡಿಬಂದ ಕ್ಯಾಲ್ವನಿಷ್ಟ ಪ್ರೊಟೆಸ್ಟಂಟ ಅನುಯಾಯಿಗಳನ್ನು ಸ್ವಾಗತಿಸಿದ ಅದೇ ಹಾಲಂಡ್ ಇದಾಗಿತ್ತು. ಆನಂತರ ಶತಮಾನ ಕಳೆದ ಮೇಲೆ ಇಂಗ್ಲೆಂಡಿನಿಂದ ಹೊರದಬ್ಬಲ್ಪಟ್ಟ ಪ್ಯೂರಿಟನ್‌ರನ್ನು ಕೂಡಾ ಹಿಂಜರಿಕೆಯಿಲ್ಲದೇ ಬರಮಾಡಿಕೊಂಡಿತ್ತು.
ಫ್ರಾಂಕ್ ಕುಟುಂಬ ಹೊಸಜೀವನವನ್ನು ಪ್ರಾರಂಭಿಸುವ ಮೊದಲು, ಬದುಕನ್ನು ಪುನಃ ಸಜ್ಜುಗೊಳಿಸಿಕೊಳ್ಳಲು ಆಮ್ಸ್ಟರ್‌ಡ್ಯಾಮನಲ್ಲಿ ಒಂದು ವರ್ಷದಷ್ಟು ಸಮಯವನ್ನು ತೆಗೆದುಕೊಂಡರು. ಆನ್ ಕೊನೆಗೂ ಅಲ್ಲಿಗೆ ಹೊಂದಿಕೊಂಡಿದ್ದಳು. ಮಾಂಟೆಸ್ಸರಿ ಶಾಲೆಗೆ ಸೇರಿಸಲ್ಪಟ್ಟಳು. ಹಲವಾರು ಒಳ್ಳೆಯ ಸ್ನೇಹಿತರನ್ನು ಹೊಂದಿದ್ದಳು. ೧೯೪೦ರಲ್ಲಿ ಜರ್ಮನ್ನರು ಹಾಲೆಂಡಿಗೂ ನುಗ್ಗಿ, ರಾಣಿ ವಿಲ್ಹೆಲ್ಮಿಯಾ ಇಂಗ್ಲೆಂಡಿಗೆ ಓಡಿಹೋಗುವಂತೆ ಪ್ರೇರೇಪಿಸಿದರು. ಅಲ್ಲಿಂದಲೇ ರಾಣಿ ಗಡಿಪಾರಿನಲ್ಲಿರುವ ಸರಕಾರವನ್ನು ರಚಿಸಿಕೊಂಡಳು. ಯುದ್ಧ ಪ್ರೇರಿತನೂ ಕ್ರೂರಿ ಜರ್ಮನ್‌ನೂ ಆದ ಅರ್ಥರ್ ಸೇಯ್ಸ್ ಇನ್ಕ್ವಾರ್ಟ ಹಾಲೆಂಡನ ಆಡಳಿತ ನೋಡಿಕೊಳ್ಳಲು ಹಿಟ್ಲರನಿಂದ ನೇಮಕವಾದ. ಒಂದು ಕಾಲದಲ್ಲಿ ತುಂಬಾ ಶಾಂತಿಯುತ ದೇಶವಾಗಿದ್ದ ಇಲ್ಲಿ ದಾಳಿಕೋರರು ಕ್ರೂರ ಯಹೂದಿ ವಿರೋಧಿ ನೀತಿಗಳನ್ನು ಉತ್ತೇಜಿಸತೊಡಗಿದರು. ಪೀಡನೆಗೆ ಒಳಗಾದವರಿಗೆ ಅಪಾಯಕಾರಿ ಬಂಧನವಿದ್ದು, ಇವರೆಲ್ಲ ಯಾತನಾ ಶಿಬಿರಕ್ಕೆ ಕಳಿಸಲ್ಪಡುತ್ತಿದ್ದರು. ಆನ್ ಮಾತ್ರ ತನ್ನ ಶಾಲಾ ಸಮಯಗಳಲ್ಲಿ ಸಮುದಾಯಿಕ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಈ ಮೊದಲೇ ಈ ಯಾತನಾ ಶಿಬಿರದ ಕಠೋರ ಸತ್ಯಗಳನ್ನು ತಿಳಿದಿದ್ದಳು.
ಆನ್‌ಳ ತಂದೆ ತನ್ನ ಕುಟುಂಬವನ್ನು ರಕ್ಷಿಸಲು ಮತ್ತೊಮ್ಮೆ ದುಡುಕಿನ ಅನಿಶ್ಚಿತ ಯೋಜನೆಯೊಂದನ್ನು ಮಾಡಿದರು. ಅವರ ಸುದೈವವೆಂದರೆ ಅವರ ಡಚ್ ಪಾರ್ಟನರ್‌ಗಳು ಹಾಗೂ ಸಿಬ್ಬಂದಿಗಳಿಂದ ಸಾಕಷ್ಟು ಭರವಸೆಯ ಬೆಂಬಲ ಪಡೆಯುತ್ತಿದ್ದರು. ಹಾಗಾಗಿ ಆಮ್ಸ್ಟರ್‌ಡ್ಯಾಮ್‌ನಲ್ಲಿ ಫ್ರಾಂಕ್‌ನ ಫುಡ್ ಫ್ರಾಸೆಸಿಂಗ್ ಬಿಸಿನೆಸ್‌ನ ಉಗ್ರಾಣ ಮತ್ತು ಆಫೀಸು ಕಟ್ಟಡಗಳು ಫ್ರಾಂಕ್ ಕುಟುಂಬ ಮತ್ತು ಇನ್ನೊಂದು ಯಹೂದಿ ಕುಟುಂಬ[ವ್ಯಾನ್ಡ್ಯಾನ್ಸ್]ಗಳಿಗೆ ಅಡಗುತಾಣವಾಗಿ ರೂಪಿಸಲ್ಪಟ್ಟಿತು. ಕೆಲವು ಸಮಯದ ನಂತರ ದಂತವೈದ್ಯನಾದ ಯಹೂದಿ ಡಸೆಲ್ ಕೂಡಾ ತಾತ್ಕಾಲಿಕ ಅಡಗುತಾಣದಲ್ಲಿ ಅನಿರ್ದಿಷ್ಟವಾಗಿ ಬದುಕಲು ಬಂದು ಸೇರಿಕೊಂಡರು.
ಆನ್‌ಳ ಹದಿಮೂರನೇ ಹುಟ್ಟುಹಬ್ಬದ ಕೇವಲ ಎರಡು ದಿನಗಳ ತರುವಾಯ ೧೯೪೨, ಜೂನ್ ೧೨ರಿಂದ ಆನ್ ತನ್ನ ಬದುಕಿನಲ್ಲಿ ಘಟಿಸಿದ ಎಲ್ಲ ಘಟನೆಗಳನ್ನು ವಿವರಿಸಲು ಪ್ರಾರಂಭಿಸಿದಳು.
*****


















