Home / ಕಥೆ / ಸಣ್ಣ ಕಥೆ / ಆಕಾಂಕ್ಷೆ

ಆಕಾಂಕ್ಷೆ

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!!

ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ!

ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ ತಾಂಡವ!

ಸುಳಿಸುಳಿದು, ಏರಿಳಿದು, ತೂರಿ ತೇಲಿ, ಸುಮಸುಂದರಿಯರನು ಚುಂಬಿಸುತ್ತ ಸೌರಭವ ಸೂರೆಗೊಂಡು ಮುದವೇರಿ ಅಲೆಯುತಿಹೆ ಮಂದಾನಿಲ!

ಪೂರ್‍ವಾಕಾಶದಲಿ ಉಷಾಸುಂದರಿ, ಆಸೆಭರವಸೆಗಳ ಚಿಮುಕಿಸುತ, ಹೊಸತೊಂದು ಸೊಬಗಿಂದೆ ಮೆಲುಮೆಲನೆ ಮೂಡಿಬಹೆ ಮನಮೋಹಕ ಸಮಯ.

ಒಂದು ರಮಣೀಯ ಸರಸು: ಹೆಸರು “ಸುಮಸಾಗರ”. ಅದರ ತುಂಬ ತಾವರೆಗಳು ಶೋಭಿಸಿವೆ. ಚೆನ್ನಾಗಿ ಅರಳಿಹವು ಕೆಲವು; ಅರೆಬಿರಿದಿಹ ಕೆಲವು; ಅದೆತಾನೆ ಗಾಢನಿದ್ರೆಯಿಂದೆಚ್ಚತ್ತವು ಕೆಲವು; ಇನ್ನು ಕೆಲವು ಮೊಗ್ಗುಗಳು.

ತಿಳಿನೀರ ಮೇಲೆ ಹರಡಿ ತೇಲುವ ಹೆಸುರೆಲೆಯ ಮಡಿಲಲ್ಲಿ ಬೆಳಗುತಿಹ ಶುಭ್ರಜಲಕಣಗಳು, ಈ ಸುಮರಮಣಿಯರು, ಮೂಡಿ ಬರುವುದರಲಿಹ ಪ್ರಿಯಸಖನಿಗಾಗಿ ಪಚ್ಚೆಯ ತಟ್ಟಿಯಲಿ ಕಳೆದ ರಾತ್ರಿಯ ವಿರಹಕಂಬನಿಗಳ ಕಾಣಿಕೆಯನು ಸಂಗ್ರಹಿಸಿಟ್ಟಂತೆ ತೋರುತಿತ್ತು.

ಸರೋವರದ ತಡಿಯ ಸಮೀಪದಲಿ ಹಿರಿದಾದ ತಾವರೆಯೊಂದು, ಕಾಮುಕನಾದ ಮಂದಾನಿಲನ ಸೋಂಕಿನಿಂದಡಿಗಡಿಗೆ ಕಂಪಿಸುತ್ತ ಮಧುಕರಿಯ ಮೊರೆಯನಾಲಿಸುತ, ತಿಳಿನೀರ ಮುಖರದಲಿ ನಿಜರೂಪವನೀಕ್ಷಿಸುತ, ತುಂಬುಯೌವನದ ಭರದಲ್ಲಿ ಬಳುಕಿ ಬಾಗಿ ನಿಂತಿತ್ತು.

ತಡಿಯ ಮೇಲೊಂದು ಕಾಲು ಹಾದಿ.

ಸುಂದರಿಯೊರ್‍ವಳು ಕೈಯಲಿ ತೆರತೆರನ ಹೂಗಳ ಬುಟ್ಟಿಯ ಹಿಡಿದು, ಮಧುಮಾಸಕೆ ಮೈಸೋತು, ಕಿರುದನಿಯಲಿ ಪ್ರಣಯ ಗೀತೆಯನಾಲಾಪಿಸುತ ಮೆಲುನಡೆಯಲಿ ಕುಲುಕುಲುಕುತ ಹೋಗುತಿದ್ದಳು. ಹೋಗುತಿದ್ದವಳು ಕುಸುಮೋತ್ತಮೆಯ ನೋಡುತ ನಿಂತಳು. ಅರಳಿದ ಕಮಲವನು ಕಂಡಾ ಕಾಮಿನಿಯ ಕಮಲನಯನಗಳರಳಿದುವು.

“ಆಹಾ!” ಎಂದಳು ಸುಂದರಿ.

ಕಮಲವು ಕೇಳಿತು “ನೀನಾರು?” ಎಂದು.

“ನನ್ನ ಹೆಸರು ಕಾಂತಾರಿ” ಎಂದಳು ಚೆಲುವೆ.

“ಇರುವುದೆಲ್ಲಿ-ಕಾಂತಾರಿ?”

“ಅರಮನೆಯಲ್ಲಿ”.

“ಅ-ರ-ಮ-ನೆ! ಅದೆಂತಹ ಮನೆ?”

“ಅರಸ–ಅರಸಿಯರಿರುವ ಮನೆ.”

“ಅ-ರ-ಸ!…. ಅ-ರ-ಸಿ!…. ಯಾರವರು?

“ನಮ್ಮೆಲ್ಲರೊಡೆಯರು-ತಂದೆ ತಾಯಿ – ಪೋಷಕರು.”

“ಹೇಗಿದೆ ಆ ಅರಮನೆ?”

“ಓ! ಬಹಳ ದೊಡ್ಡದಾಗಿ ಬಲು ಚೆನ್ನಾಗಿ-ಶೃಂಗಾರವಾಗಿದೆ ಅದು! ಸುಖದ ನೆಲೆ! ಭೂಸ್ವರ್‍ಗ!!”

“ನಿನ್ನ ಕೆಲಸವೇನು ಕಾಂತಾರಿ?”

“ನಾನು ಅರಸಿಯ ಮಾಲಿನಿ.”

“ಅರಸಿ!- ಹೇಗಿರುವಳವಳು, ಮಾಲಿನಿ?”

“ನಮ್ಮರಸಿಯು ಗುಣದ ಖಣಿ! ತ್ರಿಪುರಸುಂದರಿ”

“ನಿನಗಿಂತ?”

“ನನಗೆ ನೂರ್‍ಮಡಿ!……. ನಾನವಳ ದಾಸಿ!!”

“ಆ-ಹಾ?”

“ನಿನ್ನಹಾಗಿದೆ ಅವಳ ಮುಖ.”

“ಅಮೇಲೆ?”

“ನಿನ್ನೆ ಸಳಿನಾಕೃತಿಯವಳ ಕಂಗಳು.”

“ಹುಂ?”

“ನಿನ್ನೆಸಳ ವರ್‍ಣ ಅವಳ ಕಪೋಲಗಳು.”

“ಹಾಗೆಯೇ?”

“ಅದೋ ಆ ದುಂಬಿಗಳಂತಿವೆ ಅವಳ ಅಳಕಾಳಿ.”

“ಸರಿ!”

“ನಿನ್ನ ಮೃಣಾಳದಂತೆ ಕೃಶಾಂಗಿಯವಳು.”

“ನಿಜವೇ?”

“ನಿನ್ನುಸಿರಿಗೆಣೆಯವಳ ಮೈ ಪರಿಮಳ.”

ತಳಿತ ಮಾಮರನ ಮರೆಯಿಂದ “ಕುಹೂ” ಎಂದಿತು ಕೋಗಿಲೆಯೊಂದು.

“ಅದೊ ಕೇಳಿದೆಯಾ?” ಎಂದಳು ಮಾಲಿನಿ.

“ಕೋಕಿಲಗಾನ!”

“ಅದನು ಮಿಂಚುವುದು ನಮ್ಮರಸಿಯ ಕಂಠ!”

“ನಾನು ನೋಡಬೇಕಲ್ಲ! ಆ ಸುಂದರಿಯನ್ನ!”

“ನನ್ನೊಡನೆ ಬಂದು ನೋಡು.”

“ಬರುವೆನು.”

“ಭಾ”

ಮಾಲಿನಿಯು ನಿರಿಹಿಡಿದು ನೀರಿಗಿಳಿದು, ಬಾಗಿ ಕೈಚಾಚಿ ಕುಸುಮವನು ಕಿತ್ತು ಬುಟ್ಟಿಯಲಿಟ್ಟು ಕೊಂಡು ಕುಲುಕುತ್ತ ಹೊರಟಳು ಮತ್ತೆ.

“ಎಲ್ಲಿಗೆ ತೆರಳುವೆ ಅರವಿಂದೆ?” ಎಂದು ಕೇಳಿದ ಮಂದಾನಿಲ.

“ಅರಮನೆಗೆ!” ಎಂದಿತು ಕಮಲ.

“ಹೋಗುವೆಯಲ್ಲಿಗೆ-ಸುಂದರಿ!” ಎಂದು ದುಗುಡದಿ ಕೇಳಿತು ದುಂಬಿ.

“ಸುಂದರಿಯೆಡೆಗೆ!” ಎಂದಿತು ಕಮಲ.
* * * *

ಅರಮನೆಯ ವಿಲಾಸಗೃಹದಲ್ಲಿ.

ಅರಸ ಅರಸಿಯರ ಪ್ರಣಯ ಪ್ರಸಂಗ ನಡೆದಿತ್ತು.

ಸರಸವನಾಡಿಯಾಡಿ ಸೋತಳು ಅರಸಿ, ಮೂಡಿದವು ಮುಖದಲಿ ಬೆವರು ಹನಿಗಳು. ನಿಟ್ಟುಸಿರೆಳೆಯುತ ಪವಡಿಸಿದಳು ಮೃದು ತಲ್ಪದ ಮೇಲೆ.

ಬಳಿಯಲೇ ಚಿನ್ನದ ತಟ್ಟೆ. ತಟ್ಟೆಯ ತುಂಬ ಹೂವಿನ ರಾಶಿ. ರಾಶಿಯ ಶಿಖರದಲಾ ಕಮಲ.

ರಾಜನ ಕಣ್ಣುಬಿತ್ತು ಅದರ ಮೇಲೆ. ದುಷ್ಪರನು ನಿಗ್ರಹಿಸಿ ಶಿಷ್ಟರನು ಪಾಲಿಸುವ-ರಾಜದಂಡವನು ಹಿಡಿಯುವ ಹಸ್ತವನು-ಸೇರಿತು ಆ ಕಮಲ. ಬಳಲಿದ ದೇವಿಯನುಪಚರಿಸಲದೆ ಬೀಸಣಿಗೆಯಾಯ್ತು. ಕ್ಷಣಕಾಲ ಬಿಟ್ಟು ರಾಣಿಯು, ಮೆಲುನಗೆಯ ಸೂಸುತ್ತ ಎದ್ದು ಕುಳಿತು, ಆ ಪುಷ್ಪವ್ಯಜನವನು ರಮಣನಿಂದ ಕಸಿದುಕೊಂಡಳು.

“ಆಹಾ! ಸುಂದರಿಯ ಕೈಯಲಿ ಸುಂದರಿ” ಎಂದನು ರಾಜ.

ಹುಬ್ಬ ನಡುವೆ ಕಪಟಕೋಪವನಿಟ್ಟು, ಚೆಂದುಟಿಯಲಿ ಹುಸಿ ನಗೆಯ ಚೆಲ್ಲಿ, ಪ್ರಿಯನ ಹೂವಿನಿಂದ ಹೊಡೆದಳು ರಾಣಿ.

“ಹಹ್ಹಾ! ರಾಣಿಯ ಕೈಯಲ್ಲಿ ಸುಮರಾಣಿ!!” ಎಂದನು ರಾಜ.

ಇಂತು ರಾಜರಾಣಿಯರ ಪ್ರಣಯಕಲಹದ ಆಯುಧವಾಯ್ತು ಆ ಮನುಮಥನ ಪ್ರಥಮ ಶರ! * * * *

ಸಂಧ್ಯಾಕಾಲ.

ಅರಮನೆಯ ಪ್ರಾಕಾರದ ಹೆಬ್ಬಾಗಿಲಿನ ಬಳಿಯಲಿ ಆ ಕಮಲ! -ಬಾಡಿ, ಬತ್ತಿ, ನೆಲದಲೊರಗಿ, ಧೂಳುಮುಚ್ಚಿ ಕಂಗೆಟ್ಟು ಕೊರಗುತಿತ್ತು!

ಮಾಲಿನಿ ಪುನಃ ಕೈಯಲಿ ಹೂಬುಟ್ಟಿಯನು ಹಿಡಿದು ಒಯ್ಯಾರದಿಂದ ಆ ಮಾರ್‍ಗದಲಿ ಬಂದಳು. ಹೆಬ್ಬಾಗಿಲಿನ ಬಳಿ ಪ್ರಿಯನನು ಕಂಡು ಮಾತಿಗೆ ನಿಂತಳು.

ಅವಳ ಬುಟ್ಟಿಯಿಂದರೆಬಿರಿದ ಕಮಲವೊಂದು ಹೊರಗೆ ಇಣಿಕಿಣಿಕಿ ನೋಡುತಿತ್ತು.

“ಎಲ್ಲಿಗೆ ಹೊರಟೆ ತಂಗೀ?” ಎಂದು ಕೇಳಿತು ನೆಲದಲೊರಗಿದ ಕಮಲ.

“ಅರಮನೆಗೆ, ಅಕ್ಕಾ” ಎಂದಳು ಬುಟ್ಟಿಯ ಕಮಲಬಾಲೆ.

“ಅಯ್ಯೋ, ಇಲ್ಲಿಗೇಕೆ ಬಂದೆ?”

“ಏನಾಯ್ತು?…….. ನರಳುವುದೇಕೆ?”

“ನಾನೂ ಅರಮನೆಗೆ ಬಂದವಳು!”

“ಆಹಾ?”

“ಬೆಳಿಗ್ಗೆ ರಾಣಿಯ ಅಂತಃಪುರದಲಿದ್ದೆ! ಈಗ ನೋಡು! ಹೋಗಿಬರುವವರ ಕಾಲ ತುಳಿತ!”

“ಕಾರಣ?…….. ಕಾರಣ?”

“ಅರಮನೆ ನಮಗಲ್ಲ, ತಂಗಿ! ಏನಿದ್ದರೇನಲ್ಲಿ? ನಮಗೆ ಬೇಕಾದುದಿಲ್ಲ.”

“ಹಾಗೆಂದರೇನು?”

“ತೆಂಗಾಳಿಯ ತೀಟವಿಲ್ಲ! ಮರಿದುಂಬಿಯ ಮುತ್ತಿಲ್ಲ!! ತಿಳಿ ನೀರಿನ ಕನ್ನಡಿಯಿಲ್ಲ!- ಅದು ನಮಗೆ ಜೀವನವಲ್ಲ-ಅಲ್ಲ!!”

“ಈಗ ಮಾಡುವುದೇನು, ಅಕ್ಕಾ? ಬಂದುಬಿಟ್ಟೆನಲ್ಲಾ!”

“ಮಾಡುವುದೇನು! ಹಣೆಯಲಿ ಬರೆದುದ ಅನುಭವಿಸಿ ತೀರಲಿ, ತಂಗೀ!”

ಪ್ರಿಯನೊಡನೆ ಮಾತ ಮುಗಿಸಿ ರಾಣಿಯೆಡೆಗೆ ಹೊರಟಳು ಮಾಲಿನಿ.
*****

Tagged:

Leave a Reply

Your email address will not be published. Required fields are marked *

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...