ಕನಸಿನಲ್ಲಿ ಸತ್ತವನು!

ಕನಸಿನಲ್ಲಿ ಸತ್ತವನು!

ಬೆಳಗಿನ ಜಾವದಲ್ಲಿ ಸುಖಕರವಾದೊಂದು ಕನಸು. ನಾನು ಸತ್ತದ್ದು. ನನ್ನ ಕಳೇಬರ ನಾನು ಮಲಗುವ ಹಾಸಿಗೆಯಲ್ಲಿ, ನಾನು ಯಾವಾಗಲೂ ಮಲಗುವ ರೀತಿಯಲ್ಲಿ, ಅಂಗಾತ, ಮೇಲ್ಮುಖವಾಗಿ, ಮುಖದಲ್ಲಿ ಅಪೂರ್ವಶಾಂತಿ, ಬಲಗೈ ಬಲಯಕೃದಲ್ಲಿ ಹಾಸಿಗೆಯ ಮೇಲೆ, ಎಡಗೈ ಎದೆಯ ಮೇಲೆ ನಿರಾಳವಾಗಿ ಅಡಿಯಿಂದ ಮುಡಿಯವರೆಗೆ ಹೂವುಗಳಿರುವ ಶ್ವೇತ ಬಣ್ಣದ ಚಾದರನ್ನು ಹೊದ್ದು, ಅಲುಗಾಡದೆ, ಹಾಸಿಗೆಯ ಆರಡಿಯನ್ನು ಮೀರದ ರೀತಿಯಲ್ಲಿ ಮಲಗಿದಲ್ಲೆ ಸಾಯುವ ಕನಸು ಏಕೆ ಬಿತ್ತು? ಅದೂ ಈ ಹೊತ್ತಿನಲ್ಲಿ ಮುಂಜಾವಿನ ಕನಸು ನನಸಾಗುತ್ತದಂತೆ. ಇದು ನಿಷ್ಪಾಪ ಕನಸಂತೆ. ಇದು ನನಗೂ ಅನ್ವಯಿಸಿದರೆ? ಎನ್ನುವ ಗುಮಾನಿಯಾಯಿತು.

ಅಷ್ಟರಲ್ಲಿ ಹಣತೆಯಲ್ಲಿ ಉರಿಯುವಂತ ಒಂದು ನೆನೆ(ಬತ್ತಿ) ಎದುರು ನಿಂತು ಕೊಂಡಿತು. ಕ್ಷಣ ಬಿಟ್ಟು ಇನ್ನೊಂದು ಅಂಥಾದ್ದೇ ಉರಿಯುವ ನೆನೆ ಹತ್ತಿರದಲ್ಲೇ ನಿಂತು ಕೊಂಡಿತು. ಒಮ್ಮೆಲೆ ಒಂದು ದಿವ್ಯದ ಸಂಕೇತವಾಗಿ ಮನುಷ್ಯಾಕಾರದ ಎರಡು ಬಿಂಬಗಳು ಕಾಣಿಸಿಕೊಂಡವು. ಮೊದಲನೆಯ ಆಕಾರ ಸ್ವಲ್ಪ ಕುರೂಪವೂ, ವಿಕೃತವೂ ಕಾಣಿಸಿತು. ಹೆಗಲಿನ ಒಂದು ಭಾಗದಲ್ಲಿ ನಮ್ಮ ಕವಿಗಳು ಹಾಕಿಕೊಳ್ಳುವ ಚೀಲದಂತಹದೊಂದು. ಒಂದು ಕೈಯಲ್ಲಿ ನಮ್ಮ ಸರಕಾರದ ಗಲ್ಲಿನಲ್ಲಿರುವ ಪಾಶದಂತೆ, ಅದನ್ನು ಕೈಯಲ್ಲಿ ಸುತ್ತುತ್ತಾ ಹೆಚ್ಚು ಸ್ವರದಲ್ಲಿ ಗಹಗಹಿಸಿ ನಕ್ಕನು. ನೋಡುತ್ತಿದ್ದಂತೆ ಇನ್ನೊಂದು ಬತ್ತಿಯೂ ದಿವ್ಯಜ್ಞಾತಿಯನ್ನೆಬ್ಬಿಸಿ ಒಬ್ಬ ಮನುಷ್ಯನ ರೂಪದಲ್ಲಿ ತಟಸ್ಥವಾಯಿತು. ಇವನು ಸಭ್ಯನಂತೆ, ನಾಗರಿಕನಂತೆ ಬಟ್ಟೆಧರಿಸಿದ್ದನು, ತಲೆಗೊಂದು ಅರ್ಧ ಮುಂಡಾಸು, ಬಣ್ಣದ ಧೋತರ, ಕೈಯಲ್ಲಿ ನಮ್ಮ ಡೈರಿಯ ರೂಪದ ಒಂದು ಪುಸ್ತಕ, ನೋಡಿದರೆ ಮುಖಭಾವದಿಂದ – ಅವರಿಬ್ಬರೂ ಬೇರೆ ಬೇರೆ ಸಂಸ್ಕೃತಿಯ ಸಂಕೇತದಂತಿದ್ದರು.

ನನಗನಿಸಿತು ಇವರಿಬ್ಬರೂ ಯಮಲೋಕದಿಂದ ಬಂದಿರಬೇಕು. ಇವರಲ್ಲಿ ಯಮ ಇಲ್ಲ, ಒಬ್ಬ ಯಮದೂತ, ಇನ್ನೊಬ್ಬ ಯಾರು?

‘ಯಾರಪ್ಪಾ ನೀವು’

‘ನಾನು ಯಮದೂತ, ಇವರು ಚಿತ್ರಗುಪ್ತ’

‘ಯಾಕೆ ಬಂದಿರಿ…?’

‘ನಿನ್ನನ್ನು ಕರೆದೊಯ್ಯಲು’

‘ಯಾಕೆ, ಎಲ್ಲಿಗೆ…?’

‘ನಿನ್ನ ಆಯುಷ್ಯ ಮಗಿಯಿತು, ನೀನೀಗ ಸತ್ತಿರುವೆ, ಯಮಲೋಕಕ್ಕೆ ಹೊರಡು…’

‘ನಾನು ಸತ್ತದ್ದು ಅಂದರೇನು, ಯಾರು ನನ್ನನ್ನು ಸಾಯಿಸಿದರು. ನಿನ್ನ ಪಾಶ ನನ್ನ ಕೊರಳಿಗಂತೂ ಬೀಳಲಿಲ್ಲ… ಮೊನ್ನೆ ಮೊಮಿನ ಆದರೂ ಸತ್ತ ಅವನನ್ನು ಗಲ್ಲಿಗೇರಿಸಿ ಪಾಶದಿಂದ ಬಿಗಿದು ಸಾಯಿಸಿದರು. ಆ ವ್ಯಕ್ತಿ ನೀನಲ್ಲ ತಾನೆ?’

‘ಅಲ್ಲ, ಅದು ಇಲ್ಲಿ ನಡೆದ ವಿಷಯ. ನಾನು ಚಿತ್ರಗುಪ್ತರ ಆದೇಶದಂತೆ ಭೂಲೋಕದ ಮನುಷ್ಯನ ಆಯುಷ್ಯ ಮುಗಿದರೆ ಈ ಪಾಶ ಹಾಕಿ ಕರಕೊಂಡು ಹೋಗುತ್ತೇನೆ.’

‘ಶರೀರವನ್ನು ನೀನು ಒಯ್ಯಲು ಹೇಗೆ ಸಾಧ್ಯ’ ಅದನ್ನು ಇಲ್ಲಿ ಸಹ-ಸಂಬಂಧಿಕರು ಹಿಡಿದಿಡುತ್ತಾರಲ್ಲ ಅಂತಿಮ ಕ್ರಿಯೆಗಳನ್ನು ಮಾಡಲು…’

‘ಮನುಷ್ಯನ ಶರೀರ ನಮಗೆ ಬೇಡ…’

‘ಅವನ ಆತ್ಮವನ್ನು ಒಯ್ಯುವುದು…’ ಈಗ ಚಿತ್ರಗುಪ್ತಮಾತಾಡಿದರು.

‘ಆತ್ಮ ಎಂದರೇನು? ಅದಕ್ಕೆ ಆಕಾರ ಇದೆಯೆ?’

‘ಮನುಷ್ಯ ಸಾಯುವುದು ಉಸಿರು ಕಟ್ಟಿ ಅಂದರೆ ಒಳಗಿರುವುದು ವಾಯು, ಪಂಚಭೂತಗಳಲ್ಲಿ ಒಂದು.

‘ಆತ್ಮಕ್ಕೆ ಜ್ಯೋತಿಯ ಆಕಾರವಿದೆ. ಮನುಷ್ಯನಿಗೆ ಅದು ಕಾಣಿಸುವುದಿಲ್ಲ.’

‘ಈ ಆತ್ಮಗಳನ್ನು ಒಯ್ದು ಏನು ಮಾಡುತ್ತೀರಿ’. ಇಲ್ಲಿ ಒಂದು ತತ್ವ ಇದೆಯಲ್ಲ, ಆತ್ಮ ಪರಮಾತ್ಮನನ್ನು ಸೇರುತ್ತದೆ ಅಂತ…’ ಮತ್ತು ಸಾವನ್ನು ನಿರ್ಧರಿಸುವುದು ಯಾರು? ಮನುಷ್ಯನಿಗೆ ಜೀವಿಸುವ ಹಕ್ಕು ಇದ್ದಂತೆ ಸಾಯುವ ಹಕ್ಕು, ಸಾವನ್ನು ನಿರ್ಧರಿಸುವ ಹಕ್ಕು ಯಾಕೆ ಇಲ್ಲ.’

‘ಇದೆಲ್ಲ ವಿಧಿಲಿಖಿತ… ಬ್ರಹ್ಮಲಿಖಿತ ಕಾಯಿದೆಗಳು’.

‘ಈ ನಿಯಮಗಳು ಗುಂಡಿನೇಟಿಗೆ ಸಾಯುವ, ಗಡಿಪ್ರದೇಶದಲ್ಲಿ ರಾಷ್ಟ್ರದ ಸೀಮೆಗಳನ್ನು ಕಾಯುತ್ತ ವೈರಿಗಳ ಬಂದೂಕಿನ ಗುಂಡುಗಳಿಗೆ ಸಾಯುವ ವೀರಸೈನಿಕರ, ಧರ್ಮ, ಜಾತಿ, ವರ್ಣ ಕಲಹಗಳಿಗೆ ಬಲಿಯಾಗಿ ಸಾಯುವ ಬೇರೆ ಬೇರೆ ರಾಷ್ಟ್ರಗಳ ಮನುಷ್ಯರ ಆತ್ಮಗಳನ್ನು ನೀವು ಒಯ್ಯುತ್ತೀರಾ! ಈ ಎಲ್ಲಾ ನಿರ್ಣಾಯಕ ಕ್ರಮಗಳನ್ನು ಪರಿಶೀಲಿಸುವ ಅಧಿಕಾರಿ ಯಾರು…?’

‘ನಮ್ಮ ಒಡೆಯ ಯಮರಾಜ, ಅವನದೊಂದು ಲೋಕವಿದೆ. ಯಮಲೋಕ. ಬ್ರಹ್ಮಾಂಡವನ್ನು ನಡೆಸುವ ಶಕ್ತಿದೇವರು ಯಮರಾಜನಿಗೆ ವಿಶೇಷ ಅಧಿಕಾರವನ್ನು ಮನುಷ್ಯನ ನಿಯಂತ್ರಣಕ್ಕಾಗಿ ಕೊಟ್ಟಿದ್ದಾರೆ.

‘ಭೂಲೋಕದ ಮನುಷ್ಯರ ಮೇಲೆ, ಅದರಲ್ಲಿಯೂ ಭಾರತೀಯರ ಮೇಲೆ ಹೊರಗಿನವ, ಪರಕೀಯ ಯಮನ ನಿಯಂತ್ರಣ ಏಕೆ? ಇದು ಯಾವ ನ್ಯಾಯ? ಇದು ಅತಿರೇಕ ಅಲ್ಲವೆ, ದಬ್ಬಾಳಿಕೆ ಅಲ್ಲವೆ, ಗುಪ್ತರೇ, ನೀವು ಬುದ್ದಿವಂತರು, ನೀವೇ ಹೇಳಿ, ಯಾವನೋ ಒಂದು ಯಮಲೋಕದ ಒಡೆಯ ನಮ್ಮ ಬದುಕನ್ನು ನಿಯಂತ್ರಿಸುವುದು ಜಾಗತಿಕ ಕಾನೂನಿನ ವಿರುದ್ದ? ಅಲ್ಲವೆ?’

‘ಮನುಷ್ಯನ ಮೇಲೆ ನಮ್ಮ ನಿಯಂತ್ರಣ ಇಲ್ಲದಿದ್ದರೆ ಅವನು ಹಿಟ್ಲರೋ, ಚಂಗೀಜ್ ಖಾನೋ, ಉಗ್ರವಾದಿಯೋ ಆಗುತ್ತಾನೆ. ಜಗತ್ತಿನ ಸುಖ-ಶಾಂತಿಗೆ ಭಾದಕನಾಗುತ್ತಾನೆ. ಮನುಷ್ಯರಲ್ಲಿ ಭಯ ಹುಟ್ಟಿಕೊಂಡು ಜೀವನ ದುರ್ದರವಾಗುತ್ತದೆ.’

‘ಆದರೆ ಈ ಪದ್ಧತಿ ಭಾರತದಲ್ಲಿ ಮಾತ್ರ ಏಕೆ ಇದೆ? ಪಾಶ್ಚತ್ಯ ದೇಶಗಳಲ್ಲಿ ಈ ರೀತಿಯ ಕಲ್ಪನೆ ಇಲ್ಲ. ಯಮನ ಕಲ್ಪನೆಯೂ ಇಲ್ಲ. ಸಾತಾನ ನ, ಕಲ್ಪನೆ ಇದೆ. ಅವನು ಜೀವತೆಗೆಯುವ ಯಮನಲ್ಲಿ.’

‘ನೀನು ಭಾರತೀಯ ಸಂಸ್ಕೃತಿಗೆ ಒಳಗಾದವನು. ಇಲ್ಲಿಯ ವೇದಗಳೇ ಪರಮ ನೀತಿಗಳು, ಅವುಗಳನ್ನು ಮೀರುವಂತಿಲ್ಲ…’

‘ಅಂದರೆ ಭಾರತ ಮತ್ತು ಭಾರತದ ವೈದಿಕರು ಮಾತ್ರ ನಿಮ್ಮ ಆಧೀನ. ಉಳಿದ ಮತೀಯರು ನಿಮ್ಮ ಅಂಕಿತದಲ್ಲಿ ಇಲ್ಲ. ಅಲ್ಲವೆ? ಗುಪ್ತರೆ, ನಿಮ್ಮ ಜೊತೆಗೆ ಆ ಲೋಕಕ್ಕೆ ಬರುವ ಮೊದಲು ನನ್ನ ಮನಸ್ಸಿನಲ್ಲಿ ಹುಟ್ಟಿದ ಸಾಯುವ ನಂತರ ಏನಾಗುತ್ತದೆ ಎನ್ನುವ ಕುತೂಹಲಕ್ಕಾಗಿ ಕೇಳುತ್ತಿದ್ದೇನೆ. ಬೇಸರ ಮಾಡಬೇಡಿ.’

‘ಆಗಲಿ, ಉಚಿತವಾಗಿದೆ. ಹೋಗುವ, ಇನ್ನು ಸಮಯ ಕಳೆಯುವಂತಿಲ್ಲ…’

‘ತಡೆಯಿರಿ, ಇನ್ನು ಕೆಲವು ಸಂದೇಹಗಳು. ಪಾಪ, ಪುಣ್ಯ; ಸ್ವರ್ಗ-ನರಕ ಇವುಗಳದ್ದು ಸತ್ತವನಿಗೆ ಏನು ಪ್ರಯೋಜನ?

‘ಪಾಪ-ಪುಣ್ಯ ಮನುಷ್ಯನ ಕರ್ಮಾನುಭಂದ, ಅದರಂತೆ ಅವನಿಗೆ ಸ್ವರ್ಗವೊ, ನರಕವೊ ಸಲ್ಲುತ್ತದೆ.

‘ನಮ್ಮ ಗುರು ಬಸವಣ್ಣ ಹೇಳುವುದು ಸ್ವರ್ಗ-ನರಕ ಬೇರಿಲ್ಲ ಕಾಣಿರೋ ಅಂತ; ಹಾಗೆಯೆ ಪಾಪ-ಪುಣ್ಯ ಇದು ದೃಷ್ಟಿಕೋನದ ಅಂತರ. ಅಂದರೆ ಇವನ್ನು ನೀವು ನಿಯತಿಸುವುದು ಹೇಗೆ?’

‘ಯಮಲೋಕದಲ್ಲಿ ಅವುಗಳ ವಿಚಾರಣೆಯಾಗುತ್ತದೆ. ಅದರ ನಿರ್ಣಾಯಕ ಸಮಿತಿಗೆ ಯಮರಾಜರೇ ಅಧ್ಯಕ್ಷ, ಮನುಷ್ಯ ಇಲ್ಲಿ ಮಾಡಿದ ಎಲ್ಲಾ ಕರ್ಮಧರ್ಮಗಳ ಲೆಕ್ಕ-ನೊಂದಣಿ ನನ್ನ ಪುಸ್ತಕದಲ್ಲಿ ಇದೆ.’

‘ಸ್ವರ್ಗ-ನರಕವನ್ನು ಬಿಟ್ಟು ಈ ಯಮಲೋಕ ಬೇರೆಯೇ ಆಗಿದೆಯೆ? ನಮ್ಮ ದೇಶದಿಂದ ಭಾರತದಿಂದ ಬಂದ ಎಲ್ಲಾ ಆತ್ಮಗಳು ನಿಮ್ಮಲ್ಲಿ ಬಂಧಿಯಾಗಿವೆ. ಅವುಗಳು ಯಾವ ರೂಪದಲ್ಲಿ ಇವೆ. ಅವುಗಳ ಪರಿಚಯ ಹೇಗಾಗುವುದು. ಯಥಾಪ್ರಕಾರ ನೀವು ಅವುಗಳನ್ನು ಎಲ್ಲಿಗೆ ಕಳುಹಿಸುತ್ತೀರಿ, ಹೇಗೆ ಕಳುಹಿಸುತ್ತೀರಿ. ಆಕಾರವೇ ಇಲ್ಲದ, ಏನೂ ಇಲ್ಲದ… ಶೂನ್ಯದ ಗೊತ್ತು ಗುರಿ ಆಗುವುದು ಹೇಗೆ? ಸ್ವರ್ಗ ಎಲ್ಲಿ? ನರಕ ಎಲ್ಲಿ? ಅಲ್ಲಿಯ ಒಡೆಯರು ಯಾರು? ಅವರೆಲ್ಲ ಯಾವ ರೂಪದಲ್ಲಿ ಇದ್ದಾರೆ? ನಾನು ಆ ಆತ್ಮಗಳನ್ನು ನೋಡಬಹುದೆ? ಈಚೆಗೆ ನನ್ನ ಪ್ರೇಯಸಿ ಮಡದಿ ಹೃದಯ ಸ್ಥಂಭನದಿಂದ ಸತ್ತಿದ್ದಾರೆ. ಮೊನ್ನೆ ಮೊನ್ನೆ ನನ್ನ ಸಾಹಿತಿ ಮಿತ್ರರೊಬ್ಬರು ಸ್ವಲ್ಪಕಾಯಿಲೆ, ಸ್ವಲ್ಪ ಮುಪ್ಪಿನಿಂದ ಸತ್ತಿದ್ದಾರೆ. ನನಗೆ ಅವರನ್ನು ನೋಡಬೇಕಾಗಿದೆ. ಎಲ್ಲಿದ್ದಾರೆ. ಯಾವ ಲೋಕದಲ್ಲಿದ್ದಾರೆ ಎಂದು ತಿಳಿಯ ಬೇಕಾಗಿದೆ. ಚಿತ್ರಗುಪ್ತರಿಗೆ ಪಜೀತಿಯಾಯಿತೋ ಏನೋ ಈ ಮನುಷ್ಯ ಏನೆಲ್ಲ ಕೇಳುತ್ತಾ ಇದ್ದಾನಲ್ಲ, ಇವನು ಬೇಗ ಇಲ್ಲಿಂದ ಒಯ್ಯುವುದೇ ಲೇಸೆಂದು…

‘ಭಾರತದಲ್ಲಿ ಸತ್ತವರ ಎಲ್ಲ ವಿಚಾರಣೆ ಯಮಧರ್ಮ ರಾಯರ ಸಮಕ್ಷಮದಲ್ಲಿ ಆಗುತ್ತದೆ. ಅವರ ಆಜೀವನ ಧರ್ಮ ಕರ್ಮಗಳ ವರ್ಗೀಕರಣವಾಗುತ್ತದೆ. ನಂತರ ಕೆಲವರನ್ನು ಸ್ವರ್ಗಕ್ಕೆ ಕೆಲವರನ್ನು ನರಕಕ್ಕೆ, ಇನ್ನೂ ಕೆಲವರನ್ನು ಘೋರ ನರಕಕ್ಕೆ ಕಳುಹಿಸಲಾಗುತ್ತದೆ. ಈ ಮೂರು ಭಿನ್ನಲೋಕಗಳ ಆಡಳಿತ, ಕಾಯ್ದೆ ಕಾನೂನಿನಂತೆ, ಅಲ್ಲಿಯ ಸಂಸ್ಕೃತಿಯಂತೆ ಮನುಷ್ಯ ಉಳಿಯ ಬೇಕಾಗುತ್ತದೆ.’

‘ಗುಪ್ತರೇ, ಯಮಲೋಕ ಹೇಗಿದೆ? ದುಬಾಯಿ, ಮುಂಬಾಯಿಯಂತಿದೆಯೆ. ಸ್ವಚ್ಛ, ಭವ್ಯ, ಶ್ರೀಮಂತವಾಗಿದೆಯೆ? ಅಥವಾ ಪಾಕಿಸ್ತಾನದಂತೆ, ಚೈನಾದಂತಿದೆಯೆ? ಧಾರವಿ, ಚಾಂದನಿ ಚೌಕ, ಭೇಂಡಿ ಬಾಜಾರದಂತಹ ಕೊಂಪೆ, ಕೊಳಚೆಗಳು ಇವೆಯೆ… ನನ್ನನ್ನು ಎಲ್ಲಿ ಕಳುಹಿಸುತ್ತೀರೊ ಗೊತ್ತಿಲ್ಲ. ಅದು ರಸಹ್ಯ ಅಲ್ಲವೆ. ನನ್ನ ಧರ್ಮಪತ್ನಿ ತುಂಬಾ ಸಾದ್ವಿಯಾಗಿದ್ದಳು. ಅವಳನ್ನು ನೋಡಬೇಕಾಗಿದೆ. ಅವಳು ಸ್ವರ್ಗದಲ್ಲಿಯೇ ಇರಬೇಕು… ಆದರೆ ನನಗೆ ಸ್ವರ್ಗ ದಕ್ಕದಿದ್ದರೆ… ಅಲ್ಲಿಗೆ ಹೋಗುವುದು ಹೇಗೆ? ಸಾರಿಗೆ ಸಂಪರ್ಕ ಚೆನ್ನಾಗಿದೆಯೆ? ವೀಸಾ, ಪಾಸ್ ಪೋರ್ಟ ಏನಾದರೂ ಬೇಕಾಗುತ್ತದೆಯೆ? ಮತ್ತು ಒಂದು ಸವಾಲು ಎಲ್ಲಾ ಆತ್ಮಗಳು ನಿರಾಕಾರವಾಗಿ ತಿರುಗುತ್ತಾ ಇರುವುದಾದರೆ ಗಣನೆ ಯಾವರೀತಿಯಲ್ಲಿ ಆಗುವುದು. ಒಬ್ಬರೊಬ್ಬರ ಪರಿಚಯ ಹೇಗಾಗುವುದು? ತುಂಬಾ ಗೊಂದಲ! ಎಲ್ಲವೂ ಭ್ರಮೆಯಂತಿದೆ ಅಲ್ಲವೆ?’

‘ಭ್ರಮೆ ಏನೂ ಇಲ್ಲ. ನೀವು ಮರ್ತ್ಯಲೋಕದ ಮನುಷ್ಯರು, ನಿಮಗಿದು ಭ್ರಮೆ, ಅಗೋಚರ. ನಮ್ಮದು ಈ ಬ್ರಹ್ಮಾಂಡದ ರಚನೆಯಾದ ನಂತರ ಇದೇ ಕೆಲಸ, ಕಸಬು ನಮ್ಮದು ಒಂದು ಬಗೆಯ ಜೀವನ ಇದೆ. ನಾವು ಪ್ರೇತಗಳಲ್ಲಿ, ನಿರಾಕಾರ ಅಲ್ಲ. ನಮ್ಮ ಲೋಕದಲ್ಲಿ ‘ನೀವು’ ಮನುಷ್ಯರಂತೆಯೆ ನಡೆದು ಕೊಳ್ಳುತ್ತೇವೆ. ಜನನ-ಮರಣಗಳ ವಿಧಿ ನಮಗಿಲ್ಲ, ನಾವು ಅಮರರು. ಸದಾಕಾಲ ಹೀಗೇ ಇರುತ್ತೇವೆ. ನೀವು ಇಲ್ಲಿಯ ಸಂಬಂಧಗಳನ್ನು ಕಳಕೊಂಡ ಮೇಲೆ ಶೂನ್ಯವಾಗುತ್ತೀರಿ, ನಿರಾಕಾರ, ನಿರ್ಗುಣರಾಗುತ್ತೀರಿ.

‘ಹಾಂ… ನಮ್ಮ ಲೋಕಕ್ಕೆ ಬಂದ ಮೇಲೆ ಮರ್ತ್ಯಲೋಕದ ನಿಮ್ಮ ಸ್ವರುಪವನ್ನು ಮತ್ತೆ ಪಡೆಯುತ್ತೀರಿ. ನಿಮ್ಮ ಜೀವ ನಿಮಗೆ ಮತ್ತೆ ಸಿಗುತ್ತದೆ. ಆನಂತರ ಯಮರಾಜರು ವಿಧಿಸಿದ ಶಿಕ್ಷೆಯನ್ನು ನೀವು ಅನುಭವಿಸ ಬೇಕು. ನಿಮ್ಮ ಕರ್ಮಕಾಂಡದ ಪ್ರಕಾರ, ನಿಮ್ಮ ಕರ್ಮಧರ್ಮದ ಸಂಪೂರ್‍ಣ ವೃತ್ತಾಂತ ನನ್ನ ಯಾದಿಯಲ್ಲಿದೆ.’

‘ಇದರಲ್ಲಿ ವರ್ಗಭೇದ, ವರ್ಣಭೇದ, ಮನು ರಚಿಸಿದ, ಇಲ್ಲಿ ಕರ್ಕರೋಗದಂತೆ ಪ್ರಚಲಿತವಾಗಿರುವ ಮನುಷ್ಯರ ವಿಂಗಡನೆ ಅಲ್ಲಿಯೂ ಇದೆಯೆ? ಮಂತ್ರಿಗಳು, ಶ್ರೀಮಂತರು, ಉದ್ಯಮಿಗಳು, ಸರ್ವಾಧಿಕಾರಿಗಳು, ಪುರೋಹಿತರು, ಧನಸುರಿಯುವ ಭಕ್ತರು ಸ್ವರ್ಗಕ್ಕೆ ನೇರ ಆಯ್ಕೆಯಾಗುತ್ತಾರೆಯೆ? ದಲಿತರು, ಕ್ಷುದ್ರರು, ಸಾಹಿತಿಗಳು, ಶಿಕ್ಷಕರು ನರಕದ ಪಾಲಿಗೆಯೆ? ಇವೆಲ್ಲ ನನ್ನ ಅನುಮಾನಗಳು, ಕುತೂಹಲಗಳು, ಎಲ್ಲವೂ ಗೊತ್ತಿರುವ ನಿಮಗೊಂದು ಘಟನೆ ಹೇಳುತ್ತೇನೆ.’

‘ನಾವು ಇಲ್ಲಿ ಬಂದು ಕೆಲವು ಹೊತ್ತಾಯಿತು. ನೀನು ಹೊರಡಲೇ ಬೇಕಾದುದು ಅನಿವಾರ್ಯ… ದೂರ ಬಿಗಿಪಾಶ…’

‘ಮನುಷ್ಯನ ಬದುಕು ಹೀಗಿದೆ… ಅಲ್ಲಿ ನನ್ನ ಮುಖದ ಎದುರಿಗೆ, ಈವರೆಗೂ ನಿಂತಿದ್ದು ಈಗ ಕುಳಿತುಕೊಂಡಳಲ್ಲ ಆ ಸ್ತ್ರೀಯನ್ನು ನೋಡಿ, ಎಷ್ಟು ಗಂಭೀರ, ಸುಂದರ ಮುಖದಲ್ಲಿ ಎಲ್ಲಯೂ ದುಃಖದಿಂದ ಬಿಗಿದ ನರಗಳು ಕಾಣುವುದಿಲ್ಲ, ಆಕರ್ಷಕ ಮೈಕಟ್ಟಿನ ನಡುಪ್ರಾಯದ, ನೀಟಾಗಿ ಬಿಳಿ ಸೀರೆಯುಟ್ಟು ಏನನ್ನೋ ಸೂಚಿಸುವ ಅವಳು ಸುಮಾರು ಹತ್ತು ವರ್ಷದಿಂದ ಈ ಮನೆಗೆ ಬಂದಿರಲಿಲ್ಲ. ತನ್ನ ಮುಖ ತೋರಿಸಿರಲಿಲ್ಲ. ಇಂದು ನಾನು ಸತ್ತಾಗ, ನನ್ನನ್ನು ಕರೆದೊಯ್ಯಲು ನೀವು ಬಂದಿರುವಾಗ ಬಂದಿದ್ದಾಳೆ. ಮನಸ್ಸಿನಲ್ಲಿ ದುಃಖವಿರಬಹುದು. ಹಳೆಯ, ನಡೆದ ಸಂಗತಿಗಳನ್ನು ನೆನೆದು, ಇಂದಿನ ಸ್ಥಿತಿಯನ್ನು ನೋಡಿ ನಿರ್ವ್ಯಾಜ್ಯ ನೋವು, ಪೀಡಿಸುತ್ತಿರಬಹುದು.

‘ಬದುಕಿನಲ್ಲಿ ನಡೆದ ಯಾವದೋ ಒಂದು ಘಟನೆ, ವಿಷಮ ಸಮಯದಲ್ಲಿ ಉಂಟಾದ ಮನಸ್ತಾಪದ ವ್ಯಥೆ. ಮನುಷ್ಯ ಎಲ್ಲರೊಂದಿಗೆ ಸುಖ-ಸಂತೋಷದಿಂದ ಸಂಬಂಧಗಳನ್ನು ನಿಭಾಯಿಸುತ್ತಿರುವಾಗ ಕುಲ್ಲಕ, ಸ್ವಾರ್ಥಪರ ವಿಷಯಗಳು ಬಿಕ್ಕಟ್ಟಿಗೆ ಕಾರಣವಾಗುತ್ತವೆ. ಅವಳೊಂದಿಗೆ ನನ್ನದು ಅತ್ಯಂತ ಮಧುರವಾದ ಸಂಬಂಧವಿತ್ತು. ಎಳೆತನದ ಎಷ್ಟೋ ಕಾಲ ಅನ್ನೋನ್ಯವಾಗಿ, ತಂಟೆ, ತಕರಾರುಗಳೊಂದಿಗೆ, ಕಿತ್ತು ತಿನ್ನುವ ಬಡತನದ ಮಡಿಲಲ್ಲಿ ಚಂದಿಗೆ ಕಳೆದಿದ್ದ ಕಾಲ ಮರಳಿ ಬರಲಾರದು. ಮನೆ ಕೆಲಸಕ್ಕಾಗಿ ಯಾರದೋ ಜೊತೆಯಲ್ಲಿ ಅವಳು ಮುಂಬಯಿಗೆ ಬಂದಿದ್ದಾಗ ನಾನೂ ಮುಂಬಾಯಿಯ ಯಾವದೋ ಕಂಪನಿಯಲ್ಲಿ ಸಿಬ್ಬಂದಿಯ ಕೆಲಸದಲ್ಲಿದ್ದು ರಾತ್ರಿ ಶಾಲೆಯಲ್ಲಿ ಕಲಿಯುತ್ತಿದ್ದೆ. ಮೆಟ್ರಿಕ್ ಮುಗಿಸಿದ ಕೂಡಲೆ ನನಗೆ ವಿಮಾ ಕಂಪನಿಯಲ್ಲಿ ನೌಕರಿಯಾಯಿತು. ಕೊಂಕಣಿಯವರ ಮನೆಗೆಲಸದ ಒಂದು ಬಗೆಯ ಬಂಧನದಿಂದ ಅವಳನ್ನು ಬಿಡಿಸಿ ತರಬೇಕೆಂಬ ದೃಢ ಸಂಕಲ್ಪದಿಂದ ಅವಳು ಕೆಲಸ ಮಾಡುವ ಮನೆಯನ್ನು ವಡಾಲದಲ್ಲಿ ಹುಡುಕಿ ತೆಗೆದು, ಆ ಗೃಹಸ್ಥರೊಂದಿಗೆ ಜಗಳಾಡಿ ಕಾಲಾಗೋಡದ ಹತ್ತಿರದಲ್ಲಿ ನಾನು ಮಲಗುತ್ತಿದ್ದ ಪಾರಸಿಯವರ ಆಫೀಸಿಗೆ ಅಲ್ಲಿಯ ಒಬ್ಬ ಸ್ನೇಹಿತರ ಸಹಾಯದಿಂದ ಕರಕೊಂಡು ಬಂದೆ. ಆ ದಿನಗಳಲ್ಲಿ ಫೋರ್ಟನಲ್ಲಿಯ ಎಲ್ಲಾ ಆಫೀಸ್, ಬ್ಯಾಂಕಗಳಲ್ಲಿ ರಾತ್ರಿಗೆ ಸಿಪಾಯಿ ಕೆಲಸ ಮಾಡುವ ನಮ್ಮೂರಿನ ಪ್ರಾಯದವರು, ಅವರ ಸಂಬಂಧದ ತರುಣರು ತಂಗುತ್ತಿದ್ದರು, ಮಲಗುತ್ತಿದ್ದರು, ಬೆಳಿಗ್ಗೆ ಎದ್ದು ಆಫೀಸಿನ ಮಿನಿಕಿಚನ್, ಬಾತ್‌ರೂಮುಗಳನ್ನೆಲ್ಲಾ ಇವರು ಉಪಯೋಗಿಸುತ್ತಿದ್ದರು. ಬೆಳಿಗ್ಗೆ ಒಂಭತ್ತರ ಹೊತ್ತಿಗೆ ಹೊರಗಿನ ಎಲ್ಲರೂ ಹೊರಗೆ ಹೋಗಬೇಕು. ರಾತ್ರಿ ೭ ರ ನಂತರ ಮರಳಿ ಒಬ್ಬೊಬ್ಬರೆ ಬರುತ್ತಾರೆ. ಆಫೀಸಿನ ಕೆಳಗಡೆ ಒಂದು ಕೆಳ ಮಜಲು, ಅಲ್ಲಿ ಆಫೀಸಿನ ಸಾಮಾನುಗಳೊಂದಿಗೆ ನೌಕರರ ಹಾಸಿಗೆ, ಪೆಟ್ಟಿಗೆಗಳು ಇರುತ್ತಿದ್ದವು. ನಾನು ಈ ಹುಡುಗಿಯನ್ನು ಸುಮಾರು ಒಂದುವಾರ ಇಲ್ಲಿರಿಸಬೇಕಾಯಿತು. ಒಂದು ದಿನ ಅಣ್ಣ ಬಂದು ನನಗೆಷ್ಟು ಬೈದು ಬಾಂದ್ರಾದ ಹೌಸಿಂಗ ಬೋರ್ಡಿನ ತನ್ನ ಮನೆಗೆ ಕರಕೊಂಡು ಹೋದ. ಒಂದು ವರ್ಷದೊಳಗೆ ಅತ್ತಿಗೆ ಮತ್ತು ಅವಳ ನಡುವೆ ಮನಸ್ತಾಪ ಉಂಟಾಗಿ, ಅಸಹ್ಯ ಆಗಳವಾಯಿತು. ನಾನು ಹೋದಾಗ ಅಳುವುದು, ಅತ್ತಿಗೆಯ ಅಸಹನೆಯ ಕುರಿತು ದೂರುವುದು ಶುರುವಾಯಿತು. ಇಲ್ಲಿಂದ ನನ್ನನ್ನು ಎಲ್ಲಿಗಾದರೂ ಕರಕೊಂಡು ಹೋಗು’ ಎಂದು ಕಾಡುವುದು, ಇದು ಅತ್ತಿಗೆಗೆ ತಿಳಿದು ತಾನು-ಅವಳು ಏಕಾಂತದಲ್ಲಿ ಮಾತಾಡಲು ಬಿಡದಂತೆ ನಾನು ಹೋಗುವ ವರೆಗೂ ಪಕ್ಕದಲ್ಲಿ ಕದಲದೇ ಕಾದು ನಿಲ್ಲವುದು, ಇದರಿಂದ ಬೇಸರ ಪಟ್ಟು ಅಲ್ಲಿಗೆ ಹೋಗುವುದನ್ನೇ ಕಡಿಮೆ ಮಾಡಿದಾಗ ಪಕ್ಕದ ಮನೆಯವರು ಒಂದು ದಿನ ಬಾಂದ್ರಾ ನಿಲ್ದಾಣದಲ್ಲಿ ಸಿಕ್ಕಿದವರು ನನಗೆ ‘ಮಾರಾಯ, ನೀನವಳನ್ನು ಅವರ ಜಾಲದಿಂದ ತಪ್ಪಿಸು, ದಿನವಿಡೀ ಅಳುತ್ತಿರುತ್ತಾಳೆ. ಅಣ್ಣ ಸುಮ್ಮನಿರುತ್ತಾನೆ. ಹೆಂಡತಿದ್ದೇ ಕಂಟ್ರೋಲು, ಕೂದಲು ಹಿಡಿದು ಹೊರಗೆ ದೂಡುವುದನ್ನು ನಾನೇ ನೋಡಿದ್ದೇನೆ’ ಎಂದೆಲ್ಲ ಹೇಳಿ ನನ್ನ ಮನಸ್ಸನ್ನು ಕದಡಿದ್ದು, ನನಗೆ ಏನಾದರೂ ಯೋಚನೆ ಮಾಡುವಂತೆ ಮಾಡಿತು.

‘ನನ್ನ ಮಿತ್ರರೊಬ್ಬರ ಸಹಾಯದಿಂದ ನಾನು ಬಾಂದ್ರಾದಲ್ಲಿಯೆ ಬಾಡಿಗೆಗೆ ಒಂದು ಮನೆ ಮಾಡಿದೆ. ನಮ್ಮ ನಡುವೆ ಭಯಂಕರ ಕಲಹವಾದ ನಂತರ ನಾನವಳನ್ನು ಈ ಮನೆಗೆ ಕರೆತಂದೆ. ಅವಳು ಸುಂದರಾಂಗಿಯಾಗಿ, ಉದ್ದ ಕೂದಲು, ಪುಟಿಯುವ ಯವ್ವನದಿಂದ ನೋಡುವವರ ಕಣ್ಣು-ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ದೊಡ್ಡವಳಾಗಿದ್ದಳು. ವಡಾಲದಲ್ಲಿರುವಾಗ ಹೊರಗಿನ ಆಧುನಿಕ ಜೀವನಕ್ರಮದ ವರ್ಚಸ್ಸೂ ಅವಳ ಮೇಲೆ ಒಳ್ಳೆಯ ಪರಿಣಾಮ ಮಾಡಿತ್ತು. ಅತ್ತಿಗೆಯ ಮನೆಯ ಬಂಧನ ಅವಳಿಗೆ ಬೇಡವಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ಮನಬಂದಂತೆ ಬದುಕುವುದು ಅವಳಿಗೆ ಬೇಕಾಗಿತ್ತು. ನಾವಿಬ್ಬರು ಒಂದು ಬಗೆಯ ಸಂಸಾರ ಮಾಡಿದೆವು. ನಾನು ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುತ್ತಿದ್ದೆ. ಆಗ ನಾನು ಬಿ.ಎ. ಮಾಡುತ್ತಿದ್ದೆ. ಅಲ್ಲಿಂದ ನೇರ ಫೌಂಟನ ಹತ್ತಿರ ಎಲ್.ಐ.ಸಿ ಆಫೀಸಿಗೆ, ಸಂಜೆ ಏಳರ ಒಳಗಾಗಿ ಮನೆಗೆ ತಪ್ಪದೇ ಬರುತ್ತಿದ್ದೆ. ಕೆಲಸಮಯ ಸರಿಯಾಗಿ ತೊಂದರೆ ಇಲ್ಲದೆ ನಡೆಯುತ್ತಿತ್ತು. ಹಗಲಿನಲ್ಲಿ ಅವಳೊಬ್ಬಳೇ ಇದ್ದು ಅಕ್ಕಪಕ್ಕದ ಹೆಂಗಸರ ಪರಿಚಯ ಮಾಡಿಕೊಂಡಳು. ಈ ನಡುವೆ ಅತ್ತಿಗೆ ರೂಮಿಗೆ ಬಂದು ಅವಳಿಗೆ ನೂರಾರು ರೀತಿಯಲ್ಲಿ ಬೈದು, ಶಪಿಸಿಹೋಗುವುದು ಸಾಮಾನ್ಯವಾಯಿತು.

‘ಹೀಗಿರಲು ಒಮ್ಮೆ ನಮ್ಮ ಎಲ್.ಐ.ಸಿ ಕ್ಲಬ್ಬಿನಲ್ಲಿ ನನ್ನ ಜೊತೆಗೆ ಟೆನ್ನಿಸ್ ಆಡುತ್ತಿದ್ದ ತರುಣನ ಪರಿಚಯವಾಯಿತು. ಅವನು ಬ್ಯಾಂಕಿನಲ್ಲಿ ಕೆಲಸಕ್ಕಿದ್ದ. ನನ್ನ ಜೊತೆಯಲ್ಲಿ ಮನೆಗೆ ಬಂದ. ಚಾ ಕುಡಿದು ನಂತರ ರಾತ್ರಿ ಊಟ ಮಾಡಿಯೆ ಹೋರಟು ಹೋದ. ಮಾತು ಕತೆಯಿಂದ ಅವನು ಅವಿವಾಹಿತನೆಂದು, ಸ್ವತಂತ್ರನಾಗಿ ಯಾವದೋ ಬಾಡಿಗೆ ಮನೆಯಲ್ಲಿ ತಾಯಿಯ ಜೊತೆಯಲ್ಲಿ ಇರುತ್ತಿದ್ದನೆಂದು, ಬಿ.ಕೊಂ ಮಾಡಿ ಎಲ್‌ಎಲ್‌ಬಿ ಮುಗಿಸಿ ಬ್ಯಾಂಕಿನ ಲೀಗಲ್-ವಿಭಾಗದಲ್ಲಿ ಅಧಿಕಾರಿಯಾಗಿದ್ದನೆಂದು, ತಿಳಿಯಿತು.

ಒಂದು ದಿನ ಆಟ ಮುಗಿಸಿ ನಾವು ಕೆಂಟಿನನಲ್ಲಿ ಚಾ ಕುಡಿಯುತ್ತಿರುವಾಗ ಅವಳ ಕುರಿತಾದ ತನ್ನ ಬೇಡಿಕೆಯನ್ನು ನಯವಾಗಿ ವ್ಯಕ್ತ ಪಡಿಸಿದ, ‘ನಿಮ್ಮ ಯಾರದು ಅಭ್ಯಂತರ ಇಲ್ಲದಿದ್ದರೆ ನಾನು ಮದುವೆಯಾಗುತ್ತೇನೆ’ ಎಂದ. ಈ ವಿಷಯದ ಕರಿತು ನಾನು ಅವಳೊಂದಿಗೆ ವಿಚಾರ ವಿನಿಮಯ ಮಾಡಿದೆ. ಅವಳು ಆಗಬಹುದೆಂದು ಒಪ್ಪಿಗೆ ನೀಡಿದಳು. ಅವನು ವಿದ್ಯಾನಂದ, ಒಳ್ಳೆಯ ಮನೆತನ, ಭದ್ರ ನೌಕರಿ, ಪ್ರಗತಿ ಮಾಡುವ ಹೆಚ್ಚು ಅವಸರ ಎದುರಿನಲ್ಲಿ ಸುಂದರ ವ್ಯಕ್ತಿತ್ವ, ಉದ್ದ, ದೃಢ ಮತ್ತು ಸಪೂರ, ತಲೆತುಂಬ ಕೂದಲರಾಶಿ, ಮತ್ತೆ ಮತ್ತೆ, ಹಣೆಗೆ ಬೀಳುತ್ತಿತ್ತು. ವಿನಯಶೀಲ, ಮಾತುಗಳು ಚಂದ, ದುಡುಕು ಇಲ್ಲದ ಸ್ವಭಾವ ವಿದ್ಯಾವಂತ ಮತ್ತು ಇವಳಿಗೆ ತಕ್ಕವ, ಅರ್ಹ ಎಂಬದನ್ನು ಪ್ರಕಟ ಪಡಿಸುವ ಆಕರ್ಷಣೆಯಿಂದ ಕೂಡಿದವ.

ಇಷ್ಟವಾಯಿತು. ನಮ್ಮ ಕುರಿತ ಚಿಕ್ಕ ಇತಿಹಾಸ, ಬಡತನ, ಅಣ್ಣ-ಅತ್ತಿಗೆಯವರ ದುರ್ವ್ಯವಹಾರ ಎಲ್ಲವನ್ನು ತಿಳಿಸಿ ಒಪ್ಪಿಸಲಾಯಿತು. ವಿವಾಹ ಸುಗಮವಾಗಿ ಸಂಪನ್ನವಾಗಲು ತುಂಬಾ ಅಡಚಣೆಗಳು ಉಂಟಾದುವು. ಅಣ್ಣ-ಅತ್ತಿಗೆಯವರ ಪ್ರತಿರೋಧದಿಂದ ಮನೆಗೆ ಪೋಲೀಸರು ಬಂದು ಥಾಣೆಗೆ ಕರೆದರು ಅಲ್ಲಿ ಅವರಿಗೆ ಒಪ್ಪುವ ವಿವರಣೆಗಳನ್ನು ಕೊಟ್ಟ ಮೇಲೆ ಕರಿಮೋಡ ತಿಳಿಯಾಯಿತು. ಆದರೂ ನಾನಿಲ್ಲದಾಗ ಅವಳನ್ನು ಗದರಿಸಿ ಅಣ್ಣ‌ಅತ್ತಿಗೆ ಮನೆಗೆ ಬಂದು ಭಯ ಹುಟ್ಟಿಸಿದರು.

ಮದುವೆಯಾಗಿ ಅವರ ಸುಖ ಸಂಸಾರ ಮುಂದುವರಿಯಿತು. ಎರಡೇ ವರ್ಷಗಳಲ್ಲಿ ವಿದ್ಯಾನಂದ ಅಂಧೇರಿಯಲ್ಲಿ ದೊಡ್ಡಮನೆ ಮಾಡಿದ. ನಾನು ಬಾಂದ್ರದ ಬಾಡಿಗೆ ಮನೆ ಬಿಟ್ಟು ಇದ್ದ ಗೃಹಸ್ಥಿಯ ಸಾಮಾನುಗಳನ್ನೆಲ್ಲಾ ಅವರಿಗೆ ಕೊಟ್ಟು ಕಾಲೇಜಿನ ಹಾಸ್ಟೆಲಿನಲ್ಲಿ ಜಾಗ ಪಡೆದೆ.

ಚಿತ್ರಗುಪ್ತರು ಕಣ್ಣೂರಸಿಕೊಂಡರು. ನುಸಿನುಗ್ಗಿ ನೀರು ಬಂತೋ, ಲೋಕದ ಜೀವಿಗಳ ದಂದುಗಗಳ ಕತೆ ಕೇಳೆ ಸುಃಖ ಬಂತೋ… ತಿಳಿಯಲಿಲ್ಲ….

‘ಚಿತ್ರಗುಪ್ತರೆ, ಇಲ್ಲಿ ನೋಡಿ, ಅವಳು ಕೂತಲ್ಲಿಂದ ನಿಧಾನ ಎದ್ದು, ನನ್ನ ಹೆಂಡತಿ ಕುಳಿತಿರುವ ನನ್ನ ತಲೆಯ ಭಾಗಕ್ಕೆ ಬಂದಳು. ನಿಶ್ಯಬ್ದವಾಗಿ ಕಂಬನಿಗರೆಯುತ್ತ ಕುಳಿತಿರುವ ಅವಳನ್ನು ಹೆಗಲ ಹಿಂದಕ್ಕೆ ಕೈಹಾಕಿ ಅಪ್ಪಿಕೊಂಡಳು. ಈಗ ಕಣ್ಣೀರು ಕೋಡಿ ಹರಿಯುತ್ತ ಏನನ್ನೂ ಹೇಳುವುದಿದೆ ಎನ್ನುವಂತೆ ಕಂಡಿತು.

‘ನನಗಾಗಿ ಮಿಡಿಯುವ, ಚಡಪಡಿಸುವ ನನ್ನ ಪ್ರಿಯ ಭಂದು ಹೀಗೇ ಹೋಗಿ ಬಿಟ್ಟ, ನಿನಗೆ ಮುಂಬಯಿ ತೋರಿಸುವೆ, ದೊಡ್ಡ ಮನುಷ್ಯಳನ್ನಾಗಿ ಮಾಡುವೆ ನಾನೇ ಮದುವೆ ಮಾಡುವೆ… ನಿನಗೊಪ್ಪಿದ ಒಬ್ಬ ಯೋಗ್ಯ ಯುವಕನನ್ನು ಹುಡುಕಿ’ ಎಂದು ಬಾಲ್ಯದಲ್ಲಿ ಕನಸು ತೋರಿಸುತ್ತಿದ್ದ ಅವನ ಇಚ್ಛೆಯಂತೆ ನನ್ನ ಆಶೆಯಂತೆ ಎಲ್ಲವೂ ಆದವು. ಅಂದು ನನಗೆ ಯಾವ ದೈವ ಬಡಿಯಿತೋ ಏನೊ… ಮಕ್ಕಳ ಸಮೃದ್ಧಿ, ಸುಖದ ಸೊಕ್ಕುಗಳಿಂದ ಮತಿ ಕೆಟ್ಟಿತು. ನೀವು ತೊಂದರೆಯಲ್ಲಿರುವಾಗ ಅಂಥ ಮಾತುಗಳು, ಅಯೋ, ಯಾವ ದೇವರೂ ಕ್ಷಮಿಸುವಂತಿಲ್ಲ’ ಎಂದು ಬಿಕ್ಕಿದಳು. ನನ್ನ ಹೆಂಡತಿ ಯಾಗಲೂ ಅವಳನ್ನು ಪ್ರೀತಿಯಿಂದ, ತಂಗಿಯಂತೆ ನೋಡುತ್ತಿದ್ದವಳು ಅವಳ ಮುಖನೋಡಿದಳು.

‘ಇಂಥವನ ಮುಖವನ್ನು ೧೦ ವರ್ಷಗಳಿಂದ ನೋಡಿಲ್ಲ, ಮಾತಾಡಲಿಲ್ಲ, ಮನೆಗೆ – ಬರಲಿಲ್ಲ. ಕಳೆದ ಸಾರಿ ವಿದ್ಯಾನಂದ ವಿಷಮ ಜ್ವರದಿಂದ ಅಕಸ್ಮಾತ್ ತೀರಿಕೊಂಡಾಗಲೂ ಹೆಚ್ಚು ಕಣ್ಣೀರಿಳಿಸಿದವನು ಇವನೆ. ಎಷ್ಟು ಕಠೋರವಾಗಿತ್ತು ನನ್ನ ಹೃದಯ’. ತನ್ನನ್ನು ಶಪಿಸುತ್ತ ಅವಳು ನನ್ನ ಹೆಂಡತಿಯ ಹೆಗಲಿನಲ್ಲಿ ತಲೆಯಿಟ್ಟು ನೊಂದುಕೊಂಡಳು. ಅಂಧೇರಿಯಲ್ಲಿ ಮನೆ ಮಾಡುವುದಕ್ಕಾಗಿ ನನ್ನ ಬೋರಿವಲಿಯ ಮನೆಯನ್ನು ಮಾರಿದ್ದು ತುಂಬಾ ಅಚಾತುರ್ಯವಾಯಿತು. ಆ ಮನೆ ಇಂದಿಗೂ ತಯ್ಯಾರಾಗಲಿಲ್ಲ ಇದ್ದ ಮನೆ ಮಾರಿ ಕೊಟ್ಟ ಕೆಲವು ಲಕ್ಷ ಹಣ ಗುಳುಂ ಆಯಿತು. ಮನೆ ಇಲ್ಲದೆ ಚಡಪಡಿಸುತ್ತಿದ್ದಾಗ ಮಗಳ ಮನೆಯಲ್ಲಿ ಒಂದು ವರ್ಷ ಕಳೆಯ ಬೇಕಾದ ಅಸಹಾಯಕತೆಗೆ ಒಳಗಾಯಿತು ನನ್ನ ಸಂಸಾರ. ಆಗ ಒಮ್ಮೆ ಸಿಕ್ಕಿದ ಇವಳು’ ಅಣ್ಣ, ಮಲಾಡಿನಲ್ಲಿ ನನ್ನ ಮಗಳದೊಂದು ಮನೆಯಿದೆ ೫ ಸಾವಿರ ಬಾಡಿಗೆ ಕೊಟ್ಟು ನೀವು ಇದ್ದುಕೊಳ್ಳಿ’ ಎಂದಿದ್ದಳು. ನಾಲ್ಕು ವರ್ಷ ಈ ಮನೆಯಲ್ಲಿ ಕಳೆದರು ಸ್ವಂತ ಮನೆಯ ವ್ಯವಸ್ಥೆಯಾಗದೆ ಭಯಂಕರ ತೊಂದರೆಯಾಯಿತು. ಇವಳ ಮಗಳ ಕೊನೆಗೆ ಅಳಿಯನ ಒತ್ತಡ ಹೆಚ್ಚುತ್ತಿದ್ದಂತೆ ನಮ್ಮ ಟೆಂಶನು ಹೆಚ್ಚುತ್ತಿತ್ತು. ಬಾಡಿಗೆ ಹೆಚ್ಚು ಮಾಡಿದರು. ಕೊನೆಗೆ ಸಾಲ ಮಾಡಬೇಕೆಂದು, ಅಳಿಯ ದುಬಾಯಿಯಿಂದ ಬರುತ್ತಾನೆ ಎಂದು ಕಿರಿಕಿರಿ ಹೆಚ್ಚಿತು. ಮನಸ್ಸನ್ನು ನೋಯಿಸುವ ನಾಲ್ಕು ಮಾತಾಡಿದಳು ನಾವು ಖಾಲಿಮಾಡಿದೆವು. ಯಾವ ಹಣವನ್ನೂ ವಾಪಸ್ ತೆಗೆದುಕೊಳ್ಳಲಿಲ್ಲ.

‘ಇಷ್ಟೆಯ ಸಂಬಂಧದ ಕೊರತೆ’ ಎಂದು ಆಶ್ಚರ್ಯ ಪಡುವಂತಾಯಿತು. ಅವಳು ಅತ್ತಿಗೆಯನ್ನು ಬಿಟ್ಟು ಎದ್ದಳು. ನನ್ನ ಕಾಲ ಬುಡಕ್ಕೆ ಬಂದು ಹಣೆ ಮುಟ್ಟಿಸಿ, ಪಾದ ಸವರಿದಳು. ಮತ್ತೆ ಏಕಾಂಗಿಯಾಗಿ ಎಲ್ಲರಿಗಿಂತ ದೂರಹೋಗಿ ಕುಳಿತಳು. ಒಂದು ಅಮೂಲ್ಯವಸ್ತು ಕಳಕೊಂಡ ಚಿಂತೆ ಅವಳನ್ನು ಆವರಿಸಿ ನಿಂತಿತು.

‘ಚಿತ್ರಗುಪ್ತರೆ, ಈ ಘಟನೆಗಳು, ಪಾತ್ರಗಳು ನಿಮ್ಮ ಡೈರಿಯಲ್ಲಿ ಇವೆಯೆ? ನನ್ನ ತಂಗಿಯ ಮಾಂಗಲ್ಯವನ್ನು ಕಿತ್ತುಕೊಂಡ ನಿಮ್ಮ ವ್ಯವಹಾರದ ಅರ್ಥವೇನು? ಹೇಳಿರಿ’

ಮನುಷ್ಯ, ಇವೆಲ್ಲ ಮರ್ತ್ಯಲೋಕದಲ್ಲಿ ಮನುಷ್ಯನ ದೈನಂದಿನ ಬದುಕಿನಲ್ಲಿ ನಡೆಯುವಂಥವು. ಇವಕ್ಕೆ ನಾವು ಹೊಣೆಯಲ್ಲ, ಕಾರಣವೂ ಅಲ್ಲ. ನೀನು ಹೇಳುವ ಸಂಗತಿ, ಪಾತ್ರಗಳು ನನ್ನ ಡೈರಿಗಂತೂ ಇನ್ನೂ ಬಂದಿಲ್ಲ.’

‘ಅದೇಕೆ? ನಿಮಗೆ ಸುದ್ದಿಗಾರ ಯಾರು, ಅವನು ಸರಿಯಾಗಿ ರಿಪೋರ್ಟು ಮಾಡುತ್ತಾ ಇಲ್ಲವೆ? ಅಥವಾ ಇಂಥ ಲಕ್ಷಾಂತರ ಸಂಗತಿಗಳು ನಿಮ್ಮ ಲೆಕ್ಕಕ್ಕೆ ಸಿಗುವುದೇ ಇಲ್ಲವೆ?’ ಚಿತ್ರಗುಪ್ತ ಮೌನ.

‘ನಿಮ್ಮಲ್ಲಿ ಉತ್ಸರವಿಲ್ಲ, ನನಗೆ ಗೊತ್ತಿದೆ ಈ ಲೋಕದಲ್ಲಿ, ಮನುಷ್ಯನ ಜೀವನದಲ್ಲಿ ನಡೆಯುವುದೆಲ್ಲ ನೈಸರ್ಗಿಕವಾದವುಗಳು. ಮನುಷ್ಯನ ವರ್ತನೆ, ವ್ಯವಹಾರಗಳೂ ನೈಸರ್ಗಿಕವಾಗಿ ಅವನಲ್ಲಿ ಸಹಜವಾಗಿ ಇರುವಂಥವುಗಳು…..’ ಎಂದು ಇನ್ನೂ ಏನೇನೋ ಹೇಳುತ್ತಿರುವಾಗ ಯಮದೂತ, ಚಿತ್ರಗುಪ್ತರು ನನ್ನ ಕಣ್ಣಂಚಿನಿಂದ ದೂರವಾದಂತೆ, ಸನ್ನಿವೇಶವೆಲ್ಲವೂ ತೇಲಿಹೋದಂತೆ, ಬರೇ ಒಂದು ದೊಡ್ಡ ಶೂನ್ಯ ಕಣ್ಣು ಕುಕ್ಕಿಸುವಂತೆ ನಿರಾಳವಾಯಿತು.

ಬೆಳಗಾಯಿತು. ಎಬ್ಬಿಸಲು ಆರು ವರ್ಷದ ಮೊಮ್ಮಗ ‘ನಾನೂ’ ಉಠೊ, ಏಳು ಎನ್ನುತ್ತ ಮೈಕುಕ್ಕುತ್ತಿದ್ದ. ರಾತ್ರಿ ಮಲಗುವಾಗ ಎದೆನೋವು ಎನ್ನುತ್ತಿದ್ದರು. ‘ಕೊಯ್ಯ’ – ಹಿಡಿರ ಬಂದಿದೆ, ಹೋಗುತ್ತದೆ ಎಂದು ಮಲಗಿದ್ದರು’, ಎನ್ನುತ್ತ ಸೊಸೆ ರೂಮಿಗೆ ಬಂದಳು. ಕನಸಿನಲ್ಲಿ ಸತ್ತವನು ಮತ್ತೆ ಏಳಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐಲು
Next post ವಿಪರ್‍ಯಾಸ

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…