ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು.

ಡಾ. ಶ್ಯಾಮರಾಯರ ಮೊದಲ ಪತ್ನಿ ವಿಧಿವಶರಾಗಿ ೩೦ ವರ್ಷವಾಗಿತ್ತು, ಅವರಿಗೆ ಒಂಟಿ ಜೀವನ ಅತ್ಯಂತ ಬೇಸರವನ್ನುಂಟುಮಾಡಿತು.

ಮಗ ರವಿ ಮದುವೆಯಾಗಿ ೧೦ ವರ್ಷದಿಂದ ಹೆಂಡತಿಯೊಡನೆ ಬೇರೆ ಸಂಸಾರ ಹೂಡಿದ್ದ.

ಶ್ಯಾಮರಾಯರನ್ನು ನೋಡಿಕೊಳ್ಳುವವರು ಮನೆಯಲ್ಲಿ ಯಾರೂ ಇರಲಿಲ್ಲ, ಅವರಿಗೆ ವಯಸಾದವರಿಗೆ ಇರುವ ಎಲ್ಲಾ ಕಾಯಿಲೆಗಳು ಇದ್ದವು. ಅವರಿಗೆ ಸಕ್ಕರೆ ರೋಗ, ರಕ್ತದ ಒತ್ತಡ, ಕೋಲೆಸ್ಟ್ರಾಲ್, ಹೃದಯದ ತೊಂದರೆಗಳು ಮೇಲೆ ಆಸ್ತಮ ಬೇರೆ ಇದ್ದಿತು.

ಒಂಟಿತನವನ್ನು ಸಹಿಸಲಾರದೆ ಶ್ಯಾಮರಾಯರು ಕ್ಲಬ್‌ಗಳಿಗೆ, ಸ್ನೇಹಿತರ ಮನೆಗೆ ಬಂಧುಬಾಂಧವರ ಮನೆಗೆ ಹೋಗುತ್ತಿದ್ದರು. ಮಗ ಸೊಸೆಯ ಸಂಸಾರದೊಂದಿಗೆ ಅವರಿಗೆ ಬೆರೆಯಲು ಇಷ್ಟವಾಗುತ್ತಿರಲಿಲ್ಲ. ಅವರಿಗೆ ತಿಂಗಳಿಗೆ ೮೦೦೦/- ಪೆನ್‌ಷನ್ ಬರುತ್ತಿತ್ತು, ಅವರಿಗೆ ಸ್ವಂತ ಮನೆ, ಹೊಲ ಆಸ್ತಿ ಪಾಸ್ತಿಯೂ ಇತ್ತು.

ಆಗಾಗ ಅವರು, ಹೊಲಗದ್ದೆಗಳಿದ್ದ ಆಲಿಪುರಕ್ಕೆ ಹೋಗಿ ಬರುತ್ತಿದ್ದರು. ಹೊಲದಲ್ಲಿ ೩೮ ವರ್ಷದ ಗೌರಮ್ಮ ಗಂಡನನ್ನು ಕಳಕೊಂಡು ಒಂಟಿ ಜೀವವಾಗಿ ಕೆಲಸ ಮಾಡಿಕೊಂಡಿದ್ದಳು, ಅವಳು ಒಂದು ಪುಟ್ಟ ಗುಡಿಸಿಲಿನಲ್ಲಿ ವಾಸಿಸುತ್ತಾ ಸರಳ ಜೀವನ ನಡೆಸುತ್ತಿದ್ದಳು.

ಒಮ್ಮೆ ಶ್ಯಾಮರಾಯರು ಹೊಲಕ್ಕೆ ಹೋಗಿ ಕೆಲಸ ಹೇಗೆ ನಡೆದಿದೆ ಎಂದು ವಿಚಾರಿಸುತ್ತಿದ್ದರು. ಗಂಡಾಳುಗಳು, ಹೆಣ್ಣಾಳುಗಳು ಎಲ್ಲರು ತಮ್ಮ ತಮ್ಮ ಕೆಲಸವನ್ನು ಮಾಡಿ ರಾಯರು ಬಂದಾಗ ಜೀತವನ್ನು ಹೆಚ್ಚಿಸುವುದಕ್ಕೆ ಕೇಳಿಕೊಂಡರು. ಶ್ಯಾಮರಾಯರು ಒಬ್ಬೊಬ್ಬರನ್ನು ಕರೆದು ಅವರ ಕಷ್ಟ ಸುಖಗಳ ಬಗ್ಗೆ ವಿಚಾರಿಸಿ ಅವರಿಗೆ ನೆರವಾಗುವ ಹಾಗೆ ಜೀತವನ್ನು ಹೆಚ್ಚಿಸಿದ್ದರು. ೩೮ ವರ್ಷದ ಗೌರಮ್ಮ ಅಳುತ್ತಾ ಬಂದು ತನ್ನ ಕಷ್ಟ ಸುಖಗಳನ್ನು ಹೇಳಿಕೊಂಡಳು. ರಾಯರಿಗೆ ಗೌರಮ್ಮನ ಮೇಲೆ ಅಪಾರ ಕರುಣೆ ಉಂಟಾಯಿತು. ಆಕೆಯನ್ನು ಹೇಗಾದರೂ ಉದ್ದಾರ ಮಾಡಬೇಕೆಂಬ ಮನಸು ಅವರಿಗಾಯಿತು.

ಆಲಿಪುರದಲ್ಲಿ ಒಂದು ವಾರ ತಂಗಿರುವಾಗ ಅವರಿಗೆ ಒಂದು ದಿನ ಹೊಲದಲ್ಲಿ ಓಡಾಡುವಾಗ ಕಾಲಿಗೆ ದೊಡ್ಡ ಮುಳ್ಳೊಂದು ಚುಚ್ಚಿ ಕಾಲಿನ ಹಿಮ್ಮಡಿ ರಣವಾಗಿ ಕೀವು ಕಟ್ಟಿಕೊಂಡು ನಡೆಯದಾಗದೆ ಹಾಸಿಗೆ ಹಿಡಿದರು.

ಗೌರಮ್ಮ ರಾಯರ ಶುಶ್ರೂಷೆ ಹಗಲು ರಾತ್ರಿ ಎಡಬಿಡದೆ ಮಾಡಿ ಅವರ ಮನವನ್ನು ಗೆದ್ದಳು. ಅವರಿಗೆ ಎರಡು ಹೊತ್ತು ಊಟತಿಂಡಿಗಳನ್ನು ಕೊಟ್ಟು ನೋಡಿಕೊಂಡಳು. ಅವರು ಹೇಳಿದ ಮುಲಾಮು, ಮಾತ್ರೆ ಔಷಧಿಗಳನ್ನು ಹೊತ್ತು ಹೊತ್ತಿಗೆ ಕೊಟ್ಟಳು. ಅವರ ಕೈಕಾಲನ್ನು ಒತ್ತಿ ಅವರಿಗೆ ಸೇವೆ ಮಾಡಿದಳು. ಗೌರಮ್ಮ ಎಲ್ಲವನ್ನೂ ಮಾನವೀಯತೆಯಿಂದ ನಿಸ್ವಾರ್ಥವಾಗಿ ಮಾಡುತ್ತಿದ್ದಳು.

ಒಂಟಿ ಜೀವವಾಗಿದ್ದ ಶ್ಯಾಮರಾಯರಲ್ಲಿ ಇದು ಒಂದು ಆಶಾ ಅಂಕುರವನ್ನು ಬೆಳಸಿತು. ಗೌರಮ್ಮ ಕೂಡ ಒಂಟಿ ಜೀವನದಿಂದ ಬೇಸತ್ತಿದ್ದರು.

ಆಕೆಗೆ ಕೈಕಾಲು ಗಟ್ಟಿಯಾಗಿದ್ದು, ಹೊಲದಲ್ಲಿ ದುಡಿದು ಸಾಕಷ್ಟು ದೇಹಧಾರಡ್ಯವಿದ್ದಿತ್ತು. ಆಕೆ ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳದಿದ್ದಳು. ಆಕೆಗೆ ಸಣ್ಣತನದಲ್ಲಿ ಮದುವೆಯಾಗಿ ಇಪ್ಪತ್ತು ವಯಸ್ಸು ಬರುವ ಹೊತ್ತಿಗೆ ಗಂಡನನ್ನು ಕಳೆದುಕೊಂಡು ನಿರ್ಗತಿಕಳಾಗಿದ್ದಳು. ಮಕ್ಕಳು ಮರಿ ಇಲ್ಲದ ಆಕೆಯ ಬಾಳಿನಲ್ಲಿ ಶೂನ್ಯತೆ ಆವರಿಸಿತ್ತು. ಅಷ್ಟೇನೂ ವ್ಯವಹಾರಿಕತೆಯನ್ನು ತಿಳಿಯದ ಗೌರಮ್ಮ ತನ್ನ ಕಾಲ ಮೇಲೆ ತಾನು ನಿಂತು ಬಾಳುವುದನ್ನು ಕಲಿತಿದ್ದರು. ಹೊಲದಲ್ಲಿ ಕೆಲಸ ಕೊಟ್ಟು ವಾಸಿಸಲು ಪುಟ್ಟ ಗುಡಿಸಲನ್ನು ಕೂಟ್ಟ ಶ್ಯಾಮರಾಯರ ಮೇಲೆ ಅವಳಿಗೆ ಅಪಾರ ಅಭಿಮಾನ, ಗೌರವವಿದ್ದಿತು.

೮೪ ವರ್ಷದ ಶ್ಯಾಮರಾಯರು ಸ್ಕೂಲಕಾಯರಾಗಿದ್ದರು. ಈಗ ೮೦ ದಾಟಿದ ಮೇಲೆ ಕಾಯಿಲೆಗಳಿಂದ ದೇಹ ಝರ್ಜರಿತವಾಗಿ ಸ್ವಲ್ಪ ತಗ್ಗಿದ್ದರು. ಅವರು ಈಗಲೂ ತಪ್ಪದೇ ಕೂದಲಿಗೆ ಬಣ್ಣ ಹಾಕಿಕೊಂಡು ತಮ್ಮ ನಿಜವಯೋಮಾನ ತಿಳಿಯದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಕಣ್ಣಿನ ದೃಷ್ಟಿ ಅಷ್ಟೇನೂ ಕೆಟ್ಟಿರಲಿಲ್ಲ ಕನ್ನಡಕವನ್ನು ಮೂಗಿಗೇರಿಸಿಕೊಂಡು ಓದುವುದು, ಬರೆಯುವುದು ಮಾಡಿ ಎಲ್ಲಾ ಕಡೆಗೂ ಹೋಗಿ ಬರುತ್ತಿದ್ದರು. ಹಲ್ಲುಗಳು ಇನ್ನು ಗಟ್ಟಿಯಾಗಿದ್ದು ಎಲ್ಲ ರೀತಿಯ ಆಹಾರವನ್ನು ರಸಿಕರಂತೆ ಸವೆಯುತ್ತಿದ್ದರು. ಕೆಲವೊಮ್ಮೆ ಅಪಥ್ಯ ಮಾಡಿ ಬಾಧೆಯನ್ನು ಪಡುತ್ತಿದ್ದರು. ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದ ಕಾರಣ ತಮ್ಮ ಇಚ್ಛೆಯಂತೆ ಜೀವನ ಸಾಗಿಸುತ್ತಿದ್ದರು. ಅವರಿಗೆ ಜೀವನೋತ್ಸಾವಿನ್ನು ಕುಗ್ಗಿರಲಿಲ್ಲ. ಅವರು ವೈದ್ಯ ಹುದ್ದೆಯಲ್ಲಿದ್ದು ಒಳ್ಳೆಯ ಬಟ್ಟೆ ಬರೆ ಧರಿಸಿ ಜನರ ಜೊತೆ ಸ್ನೇಹಪೂರ್ಣ ಸಂಬಂಧವನ್ನು ಇಟ್ಟು ಕೊಂಡಿದ್ದರು. ಅವರು ವೃತ್ತಿಯಲ್ಲಿದ್ದಾಗ ಹಳ್ಳಿಗಳಲ್ಲಿ ಕೂಡ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಅವರು ನಗರ, ಹಳ್ಳಿಯ ಎಲ್ಲಾ ಜನರ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದರು. ಅವರ ಆತ್ಮೀಯತೆಗೆ ಯಾರಾದರೂ ಮಾರುಹೋಗುತ್ತಿದ್ದರು. ಅವರ ಚರ್ಮ, ಮುಖದಲ್ಲಿ ಎದ್ದು ತೋರುತ್ತಿದ್ದ ಸುಕ್ಕುಗಳು ಮಾತ್ರ ಅವರ ವಯಸ್ಸನ್ನು ಸಾರಿಹೇಳುತ್ತಿದ್ದವು.

ಮುಳ್ಳು ಚುಚ್ಚಿದ ಗಾಯವನ್ನು ಅವರು ಅತಿ ಜಾಗರೂಕತೆಯಿಂದ ಆರೈಕೆ ಮಾಡಿಕೊಳ್ಳುತ್ತಿದ್ದರು. ಅವರಿಗೆ ಸಕ್ಕರೆ ಕಾಯಿಲೆ ಇದ್ದುದರಿಂದ ಬೇಗ ಅದು ಆರುವ ಹಾಗೇ ತಾವೇ ಔಷಧೋಪಚಾರವನ್ನು ಮಾಡಿಕೊಂಡಿದ್ದರು. ಅವರು ಬೆಳಿಗ್ಗೆ ಎದ್ದು ತಮ್ಮ ಕಾಲಿನ ಬ್ಯಾಂಡೇಜನ್ನು ತೆಗೆದು ಗಾಯ ತೀರ ಒಣಗಿದೆ ಎಂದು ಹರ್ಷಪಡುತ್ತಿರುವಾಗ ಗೌರಮ್ಮ ಶ್ಯಾಮರಾಯರನ್ನು ವಿಚಾರಿಸಲು ಬಂದರು.

“ಬಾ ಗೌರಮ್ಮ! ಕುಳಿತುಕೋ. ನೀನು ನನ್ನ ಚೆನ್ನಾಗಿ ನೋಡಿಕೊಂಡೆ ನೋಡು. ಕಾಲಿನ ಗಾಯವು ಕೂಡ ಆರಿಬಿಟ್ಟಿದೆ” ಎಂದು ಕೃತಜ್ಞತೆಯ ಭಾವದಿಂದ ತೋರಿಸಿದರು.

ಬಿಡಿ ರಾಯರೇ! ನಾನೇನು ಮಾಡಿದೆ. ನೀವು ಇಷ್ಟು ವಯಸ್ಸಾದರೂ ಇನ್ನು ದೇಹಾರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬರುತ್ತಿದ್ದೀರಿ. ನೀವೇ ವೈದರಲ್ಲವೇ? ಅದೂ ಕಾರಣ ಇರಬಹುದು.

“ನಿಮ್ಮ ಹೆಂಡತಿ ತೀರಿ ಇಷ್ಟು ವರ್ಷವಾದರೂ ನಿಮ್ಮ ಒಂಟಿತನದಲ್ಲೂ ನಿಮ್ಮ ಆರೋಗ್ಯ ಕಾಪಾಡಿಕೊಂಡು ಬಂದಿರುವುದು ಬಹಳ ಆಶ್ಚರ್ಯ” ಎಂದು ಗೌರಮ್ಮ ಮನಬಿಚ್ಚಿ ಮಾತನಾಡುತ್ತಿದ್ದರು.

ರಾಯರಿಗೆ ಗೌರಮ್ಮನ ಸಹಾನುಭೂತಿ, ಅನುಕಂಪ, ನೊಂದ ಹೃದಯವನ್ನು ಅರ್ಥೈಸುವ ಚಾತುರ್ಯ ಹಿಡಿಸಿತು.

“ಅಲ್ಲ ಗೌರಿ, ನೀನು ಹೆಣ್ಣು ಹೆಂಗಸು, ಗಂಡನನ್ನು ಕಳಕೊಂಡು ಒಬ್ಬಂಟಿಗಳಾಗಿ ಧೈರ್ಯದಿಂದ ಬಾಳು ನಡೆಸುತ್ತಿದ್ದೀಯಲ್ಲಾ? ನಿನಗೆ ಯಾವತ್ತೂ ಒಂದು ಆಶ್ರಯ, ಇನ್ನೊಂದು ಜೀವದ ಸ್ನೇಹ, ಪ್ರೀತಿ ಬೇಕೆನಿಸಿಲ್ಲವೇ ? ನೀನು ಎಂದೂ ನಿನ್ನ ಬಾಳಿನ ಹಾದಿಯಲ್ಲಿ ಒಬ್ಬ ಜೊತೆಗಾರನನ್ನು ಸಂಧಿಸಲಿಲ್ಲವೇ? ನಿನ್ನ ಭುಜಕ್ಕೆ ಭುಜ ಇಡುವ ನಿನ್ನ ಹೃದಯಕ್ಕೆ ಸ್ಪಂದಿಸುವವರು ಯಾರೂ ನಿನಗೆ ಸಿಕ್ಕಲಿಲ್ಲವೇ?” ಎಂದು ಹಲವು ಪ್ರಶ್ನೆಗಳ ಸುರಿಮಳೆಯನ್ನು ಕರೆದರು ರಾಯರು.

ಗೌರಮ್ಮಗೆ ರಾಯರ ಮನೋಗತವಿನ್ನೂ ಅರ್ಥವಾಗಲಿಲ್ಲ, ಅವರಿಗೆ ತನ್ನ ಮೇಲೆ ಅನುಕಂಪವೆಂದೇ ಅವರು ಬಗೆದಿದ್ದರು. ಅಂತಲೇ ಅವರ ಸಂಕೋಚವಿಲ್ಲದೇ ತಮ್ಮ ಮನಗಳನ್ನು ತೋಡಿಕೊಂಡು ತಮಗೆ ಯಾವ ಹುಲ್ಲುಕಡ್ಡಿಯ ಆಶ್ರಯವೂ ದೊರೆಯಲಿಲ್ಲವೆಂದರು. ನಾನು “ಈಸಬೇಕು, ಇದ್ದು ಜಯಿಸಬೇಕು” ಎಂದಿಷ್ಟೇ ಅರಿತು ಬಾಳುತ್ತಿದ್ದೇನೆ. ನಾನು ಯಾವ ಆಶೆಯನ್ನು ಆಕಾಂಕ್ಷೆಯನ್ನು ಬೆಳಿಸಿಕೊಳ್ಳಲಿಲ್ಲ. ನನ್ನ ಬರಿದಾದ ಬಾಳಿಗೆ ಹೊಲದ ಹಸಿರೇ ಉಸಿರಾಗಿ, ನನ್ನ ಕತ್ತಲ ಬಾಳಿಗೆ ಬೆಳಗಿನ ಅರುಣೋದಯವೇ ಬೆಳಕಾಗಿ, ನನ್ನ ಮೌನ ಹೃದಯಕ್ಕೆ ಹಕ್ಕಿಯ ಹಾಡೇ ಗಾನವಾಗಿ ನಾನು ಈ ಹಳ್ಳಿಯ ಪ್ರಕೃತಿಯೊಂದಿಗೆ ಒಂದಾಗಿ ಬಾಳುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ತನ್ನ ಹೃದಯವನ್ನು ತೆರೆದಿಟ್ಟಳು.

“ಗೌರಿ ನೀನಷ್ಟೇಕೆ ನಿರಾಶಳಾಗಿರುವೆ? ನಿನಗಿನ್ನೂ ನಲವತ್ತು ವರ್ಷ ಕೂಡ ಇಲ್ಲ ನಿನ್ನ ಈ ಮಧ್ಯ ವಯಸ್ಸನ್ನು ಬಾಳಿನ ಕೊನೆಯ ತನಕ ಒಂಟಿಯಾಗಿ ಏಕೆ ಕಳೆಯುವೆ? ನನಗೂ ಒಂಟಿ ಬಾಳು ಅಸಹನೀಯವಾಗಿದೆ. ನಾನೊಂದು ಮಾತನ್ನು ನನ್ನ ಮನಬಿಚ್ಚಿ ಕೇಳಿದರೆ ನೀನು ಅಪಾರ್ಥ ಕಲ್ಪಿಸುವುದಿಲ್ಲ ಅಲ್ಲವೇ”? ಎಂದರು ರಾಯರು

ಎದುರಿಗೆ ತಲೆತಗ್ಗಿಸಿ ಕುಳಿತಿದ್ದ ಗೌರಮ್ಮಗೆ ಎದೆ ಝಗ್ ಎಂದಿತು. ರಾಯರ ಮನಸ್ಸಿನಲ್ಲಿ ಏನಿದೆಯೇ? ಏನು ಕೇಳುತ್ತಾರೋ ಎಂದು ಹೆದರುತ್ತಾ “ಕೇಳಿ ರಾಯರೇ, ಸಂಕೋಚ ಏಕೆ ನನ್ನ ಹತ್ತಿರ” ಎಂದು ತೊದಲುತ್ತಾ ಹೇಳಿದಳು.

“ನನ್ನ ಈ ಇಳಿ ವಯಸ್ಸಿನ ಒಂಟಿ ಬಾಳಿನಲ್ಲಿ ನನ್ನ ಬಾಳ ಜೊತೆಗಾತಿಯಾಗಿ ಬರಲು ನಿನಗೆ ಅಡ್ಡಿಯಿಲ್ಲವೇ? ನಿನಗೂ ಒಂದು ನೆಲೆ ಸಿಕ್ಕುತ್ತದೆ. ನನ್ನ ಇಳಿಬಾಳಿನಲ್ಲಿ ನನಗೊಬ್ಬ ಗೆಳತಿ ಆತ್ಮೀಯಳು ಆಪ್ತಳು ಸಿಕ್ಕಿದಂತೆ ಆಗುತ್ತದೆ. ನನ್ನ ವಯಸ್ಸು ಎಂಭತ್ತು ಮೀರಿದೆ. ಈ ಮುಪ್ಪಿನ ಮುದುಕನಿಗೆ ಮದುವೆಯೊಂದು ಕೇಡು ಎಂದು ತಿಳಿಯುವಿಯಾ? ಹುಟ್ಟಿದಾಗ ಒಬ್ಬರೇ, ಸಾಯುವಾಗ ಒಬ್ಬರೇ ಆದರೂ ಬಾಳಿ ಬದುಕುವಾಗ ಅದು ಇಳಿ ವಯಸ್ಸಿನಲ್ಲಿ ಜೊತೆ ಎನ್ನುವುದು ಮನಸ್ಸಿಗದೆಷ್ಟು ನೆಮ್ಮದಿ ತರುವುದಲ್ಲವೆ? ಇಲ್ಲಿ ನನ್ನ ಸ್ವಾರ್ಥವಿದೆ ಎಂದು ತಿಳಿಯುವಿಯಾ? ನಾನು ನಿನ್ನ ಬಗ್ಗೆಯೂ ಯೋಚಿಸಿ ಈ ಮಾತುಗಳನ್ನು ಹೇಳುತ್ತಿರುವೆ. ನಿನಗೆ ಇನ್ನು ಸಾಕಷ್ಟು ದೀರ್ಘ ಬಾಳುವ ಸಮಯವಿದೆ. ನಾನು ಸಾಯುವ ತನಕ ನನಗೆ ನೀ ಜೊತೆಯಾದರೆ ನೀನು ನಂತರ ಈ ಹೊಲಗದ್ದೆ, ನನ್ನ ತರುವಾಯ ಬರುವ ಅರ್ಧ ಪೆನ್‌ಷನ್ ಎಲ್ಲದಕ್ಕೂ ನೀನು ಅರ್ಹಳಾಗುವೆ. ನಿನ್ನ ಬಾಳು ನಂತರ ಕೊನೆಯವರೆಗೂ ಸುಗಮವಾಗುತ್ತದೆ. ನಿನಗೇನು ಆನಿಸುತ್ತದೆ? ನನ್ನ ಸಲಹೆ ನಿನಗೆ ಒಪ್ಪಿಗೆಯೇ? ನೀನು ಜನಕ್ಕೆ, ಸಮಾಜಕ್ಕೆ ಹೆದರುವೆಯಾ? ಹೆದರಿ ನಿನ್ನ ಬಾಳನ್ನು ಹೀಗೆ ಚಿತೆಗೇರಿಸುವೆಯಾ? ಮನುಷ್ಯ ಕಷ್ಟಗಳನ್ನು ಪಾರು ಮಾಡುವುದು ತಪ್ಪಲ್ಲ ಅಲ್ಲವೇ? ಸಮಯೋಚಿತವಾಗಿ ಪರಿಹಾರ ದೊರೆತಾಗ ನೇಣಿಗೆ ಜೋತು ಬೀಳುವುದು ಯಾವ ಧರ್ಮ? ಹಾಗೆ ನೋಡಿದರೆ ನನಗೂ ಬೆಳೆದ ಮಗ ಸೊಸೆಯಿದ್ದಾರೆ. ನಾನು ದೊಡ್ಡ ವೈದ್ಯನಾಗಿ ನಿವೃತ್ತಿ ಹೊಂದಿದ್ದೇನೆ. ನಾನು ಗೌರವವಾಗಿ ಸಮಾಜದಲ್ಲಿ ಬಾಳಿದ್ದೇನೆ. ನಾನು ಸಮಾಜಕ್ಕಾಗಿ ಸೇವೆ ಮಾಡಿ ದುಡಿದಿದ್ದೇನೆ. ಈಗ ಸಮಾಜ ನನ್ನ ನೆರವಿಗೆ ಬರುವುದಿಲ್ಲ ನನ್ನ ಮಗನೂ ಅಷ್ಟೇ, ಅವನನ್ನು ಬೆಳಸಿ ಓದಿಸಿ ದೊಡ್ಡವನನ್ನಾಗಿ ಮಾಡಿದೆ. ಮದುವೆ ಕೂಡ ಮಾಡಿರುವೆ. ಅವನೂ ನನ್ನಿಂದ ಎಲ್ಲ ವಿಧದ ಪ್ರಗತಿ ಪಡೆದು ಈಗ ತನ್ನ ಬಾಧ್ಯತೆ ತಿಳಿಯದೇ, ನನ್ನ ವಯಸ್ಸಿನ ಅಸಹಾಯಕತೆ ಅರಿಯದೇ ತನ್ನದೇ ಸ್ವಾರ್ಥದ ಬಾಳನ್ನು ಬಾಳುತ್ತಿದ್ದಾನೆ. ನಾನು ಅವನಿಗೆ ಹೆದರುವುದಿಲ್ಲ ಅವನಿಂದ ಏನೂ ಅಪೇಕ್ಷಿಸುವುದಿಲ್ಲ.”

“ನನ್ನ ತಂದೆಗೆ ಮುಪ್ಪಿನಲ್ಲಿ ಮದುವೆಯಂತೆ ಎಂದು ಹಾರಾಡಿ ಚೀರಾಡುತ್ತಾನೆ” ಎಂಬುದು ನನಗೆ ಗೊತ್ತು. ಅವನು ನನ್ನ ಮನೆಯಿಂದ ಓಡಿಸಿ ಪೋಲಿಸರಿಗೆ ನನ್ನ ನಡತೆ ಬಗ್ಗೆ ಕಂಪ್ಲೆಂಟ್ ಕೂಡ ಮಾಡಬಹುದು. ಆದರೆ ಯಾವುದಕ್ಕೂ ನಾನು ಹೆದರುವುದಿಲ್ಲ, ಆದರೆ ನಾನು ನಿನ್ನ ಭಾವನೆಗಳಿಗೆ ಗೌರವ ಕೊಡುತ್ತೇನೆ, ಆದರಿಸುತ್ತೇನೆ. ನಿನ್ನ ಮನದಲ್ಲಿ ನನ್ನ ಈ ಪ್ರಪೋಸಲ್‌ಗೆ ಸಮ್ಮತಿ ಇದೆಯೇ?” ಎಂದು ಅತ್ಯಂತ ವಿನಯವಾಗಿ ಶ್ಯಾಮರಾಯರು ಗೌರಮ್ಮನನ್ನು ಕೇಳಿದರು.

“ರಾಯರೇ ! ಇದೊಂದು ಮಿಂಚಿನಂತೆ ನನ್ನ ಬಾಳಲ್ಲಿ ಬಂದಿರುವ ಬೆಳಕು. ಅದು ಎಷ್ಟು ನನಗೆ ಬೆಳಕು ಕೊಟ್ಟಿತು ಎಂಬುದನ್ನು ನಾನು ಯೋಚಿಸಬೇಕು” ಎಂದಳು.

“ಗೌರಿ ! ಮಿಂಚು, ಬೆಳಕು ಎಂದೂ ನಿಲ್ಲುವುದಿಲ್ಲ, ಕತ್ತಲು ಬೆಳಕು ಎಲ್ಲವೂ ಒಂದರ ಹಿಂದೆ ಒಂದು ಸತತವಾಗಿ ಬರುತ್ತಿರುತ್ತವೆ. ಬರಿ ಬೆಳಕಿಗಾಗಿ ನಾವು ಎದುರು ನೋಡಲು ಸಾಧ್ಯವಿಲ್ಲ. ಕತ್ತಲು ಬೆಳಕು ಎರಡೂ ಬಾಳಿನ ಹಗಲು ರಾತ್ರಿ. ಇದು ಜೀವನ ಸತ್ಯ. ಇದರ ಮೇಲೆ ನೀನು ಯೋಚಿಸಿ ಹೇಳು” ಎಂದರು.

ಒಂದು ವಾರ ಗೌರಿಯ ದರ್ಶನ ರಾಯರಿಗಾಗಲಿಲ್ಲ. ಒಂದು ಸುಂದರ ಬೆಳಿಗ್ಗೆ ರಾಯರು ಇನ್ನೂ ಹಳ್ಳಿಯಲ್ಲೇ ತಂಗಿದ್ದರು. ಹಳ್ಳಿಯ ಮನೋಹರ ಪ್ರಕೃತಿ ಸೌಂದರ್ಯ, ತಂಗಾಳಿ ಮನಕ್ಕೆ ಚೇತೋಹಾರಿಯಾಗಿತ್ತು ಅವರು ಅಂದಿನ ವೃತ್ತಪತ್ರಿಕೆ ಹಿಡಿದು ಓದುತ್ತಾ ಕುಳಿತಿದ್ದರು. ಗೌರಿ, ಕಾಫಿಯ ಲೋಟ ಹಿಡಿದು ರಾಯರಿಗೆ ಕಾಫಿಯಿತ್ತು ಅಲ್ಲೇ ತಲೆ ಬಗ್ಗಿಸಿ ನಿಂತಳು. ತಲೆ ಎತ್ತಿ ನೋಡಿದ ರಾಯರಿಗೆ ಗೌರಿಯಲ್ಲಿ ಮಾರ್‍ಪಾಡು ಕಾಣಿಸಿತು.

ತಿಳಿ ಹಸಿರು ರೇಷ್ಮೆ ಸೀರೆ ಉಟ್ಟು ಕೂದಲನ್ನು ಗಂಟು ಕಟ್ಟಿ, ಹಣೆಗೆ ಸಣ್ಣ ಬೊಟ್ಟು ಇಟ್ಟುಕೊಂಡು ವಿಧವೆ ಪಟ್ಟದಿಂದ ಜೊತೆಗಾತಿ ಪಟ್ಟಕ್ಕೆ ಬಂದಿದ್ದಳು. ರಾಯರಿಗೆ ಗೌರಮ್ಮನ ಮನದ ಇಂಗಿತ ತಿಳಿಯಿತು.

ಅವರು ಸಮಯವನ್ನು ತಡೆಮಾಡದೆ ಆಲಿಪುರದ ದೇವಸ್ಥಾನದಲ್ಲಿ ಪುರೋಹಿತರ ಮಂತ್ರೋಚ್ಚಾರಣೆಯಲ್ಲಿ ಗೌರಿಗೆ ತಾಳಿ ಕಟ್ಟಿದರು.

ಮಗನಿಗೆ ವಿಷಯ ತಿಳಿದು ಅವನು ಕೆಂಡಾಮಂಡವಾದ. ಕನ್ನಡ, ಆಂಗ್ಲ ಪತ್ರಿಕೆಗಳಲ್ಲಿ ವಿಧವಿಧವಾದ ವಿಮರ್ಶೆ ಕುಹಕಗಳು ಬಂದವು. ಇಂಗ್ಲೆಂಡು, ಅಮೆರಿಕಾ ದೇಶಗಳಲ್ಲಿ ೮೦ ಕ್ಕೆ ಕೂಡ ವಿಚ್ಛೇದನ, ಮರುಮದುವೆ ಎಂಬ ಮಾತುಗಳು, ಸನ್ನಿವೇಶಗಳು ಸರ್ವೇಸಾಧಾರಣ, ಅದಕ್ಕೆ ಸಮಾಜದಲ್ಲಿ ಯಾವ ರೀತಿಯ ದೂಷಣೆಯಿಲ್ಲ ಸಾಯುವವರೆಗೂ ಜೀವನವನ್ನು ಸುಧಾರಿಸಿಕೊಳ್ಳುವುದು, ಹದನಗೊಳಿಸಿಕೊಳ್ಳುವುದು, ರಿಪೇರಿ ಮಾಡಿಕೊಳ್ಳುವುದು, ಮತ್ತೆ ಮತ್ತೆ ಮುರಿದ ಸೇತುವೆಗಳನ್ನು ಕಟ್ಟಿ ಸ್ನೇಹ ಪ್ರೀತಿ ನೆಲೆಮಾಡಿಕೊಳ್ಳುವ ಅವರ ಸಂಸ್ಕೃತಿಯನ್ನು ಧಿಕ್ಕರಿಸುವ ನಮ್ಮ ಸಂಸ್ಕೃತಿ ಶ್ಯಾಮರಾಯರ ಮತ್ತು ಗೌರಿಯ ಮುಪ್ಪಿನ ಮದುವೆ ಅವರ ಮಟ್ಟಿಗೆ ಅನುಕೂಲವಾಗಿದ್ದರೆ ಅವರ ಬಾಳನ್ನು ರೂಪಿಸಿದ್ದರೆ ನಾವು ತರ್ಕಿಸಿ, ತೀರ್ಪು ಹೇಳುವವರು ನಾವಾರು? ಯಾರು ಯಾವಾಗ ಯಾವ ದೋಣಿಯಲ್ಲಿ ಹೋಗಬೇಕೋ ಆಗ ಮಾತುಗಳು ಮನಸುಗಳು ಯೋಚನೆಗಳೂ ಯಾಕೆ ಸಂಸ್ಕೃತಿಯೇ ಬದಲಾಗುತ್ತದೆ. ಇದು ಅಲ್ಲವೇ ಮಾನವ ಜೀವನ?
*****