ಚಿತ್ರ: ಜೋಸ್ ಅಲೆಕ್ಸಿಸ್

ಆಗ ಅವಳಿನ್ನೂ ಚಿಕ್ಕವಳು. ರೂಪದಲ್ಲಿ ರಂಭೆಯಾಗಿದ್ದಳು. ಕಂಠದಲ್ಲಿ ಕೋಗಿಲೆಯಾಗಿದ್ದಳು.

ಒಂದು ದಿವಸ ಅವಳನ್ನು ಅತ್ಯಂತ ಪ್ರೀತಿಯಿಂದ ಆರಾಧಿಸುವ ನೀಲ ಕಂಠರಾಯರು ಅವಳ ‘ಆನಂದವಿಲ್ಲಾ’ದ ಬಂಗ್ಲೆಯಲ್ಲಿಯ ಹೊರಗಿನ ಕೋಣೆ ಯಲ್ಲಿ ಕುಳಿತಿದ್ದಾರೆ. ಹೊರಗಿನ ರಣರಣ ಬಿಸಿಲು ಸಹಿಸಬಾರದಷ್ಟಿದೆ. ನೀಲಕಂಠರಾಯರು ಹೋಳಿಗೆಯ ಊಟವನ್ನು ಹೊಡೆದುದರಿಂದ, ಬಿಸಿಲಿನ ನೀರಡಿಕೆಯ ತಾಪದಿಂದ ಮನಸ್ಸಿಗೆ ಹೇಗೆ ಹೇಗೋ ಆಗುತ್ತಿದೆ. ಯಾವಾಗ್ಗೆ ಬಿಸಿಲು ತಗ್ಗುವುದೊ, ಯಾವಾಗ್ಗೆ ಇಬ್ಬರೂ ಕೂಡಿ ಸಂಜೆಯ ತಂಗಾಳಿಯಲ್ಲಿ ಹೊರಗೆ ತಿರುಗಾಡಲು ಹೋಗುವೆವೊ ಎಂದು ದಾರಿ ಕಾಯುತ್ತಿದ್ದಾರೆ.

ಅಷ್ಟರಲ್ಲಿ ಯಾರೊ ಬಾಗಿಲವನ್ನು ತಟ್ಟಿದ ಸಪ್ಪಳವು ಕೇಳಬಂದಿತು. ಕೋಟು ಶರ್ಟುಗಳನ್ನು ತೆಗೆದು, ಧೋತರದ ಮೇಲೆ ಮಲಗಿದ್ದ ರಾಯರು ಚಟ್ಟನೆ ಎದ್ದು ನಿಂತು ಯಾರಿರಬಹುದೆಂದು ಕೇಳುತ್ತ ಚಂದುವಿನ ಕಡೆಗೆ ನೋಡಿದರು.

“ಅಂಚೆಯವ ಅಥವಾ ನನ್ನ ಗೆಳತಿಯರಾರಾದರೂ ಇರಬೇಕು” ಎಂದಳು ಗಾಯಕಿ.

ಅಂಚೆಯವನಾಗಲಿ ಅಥವಾ ಅವನ ಗೆಳತಿಯರಾಗಲಿ ತಮ್ಮನ್ನು ನೋಡಿದರೆ ನೀಲಕಂಠರಾಯರಿಗೆ ಏನೂ ಭಯವಿರಲಿಲ್ಲ. ಆದರೂ ಆದಷ್ಟು ಜಾಗರೂಕತೆಯಿಂದ ಇರಬೇಕೆಂದು ಮೈ ಮೇಲೆ ಬಟ್ಟೆಗಳನ್ನು ಧರಿಸಿಕೊಂಡು ಬಾಜುವಿನ ಕೋಣೆಗೆ ಹೋದರು.

ಚಂದೂ ಬಾಗಿಲವನ್ನು ತೆರೆಯಹೋದಳು. ನೋಡುತ್ತಾಳೆ ಅವಳಿಗೆ ಬಹಳ ಆಶ್ಚರ್ಯವಾಯಿತು. ಅಲ್ಲಿ ಅಂಚೆಯವನಿರಲಿಲ್ಲ. ಅಥವಾ ತನ್ನ ಗೆಳತಿಯರಿರಲಿಲ್ಲ. ಅಪರಿಚಿತ ಹೆಂಗಸೊಬ್ಬಳು ನಿಂತಿದ್ದಾಳೆ, ಚಿಕ್ಕವಳಿದ್ದಾಳೆ, ಚೆಲುವಾಗಿದ್ದಾಳೆ, ಆರ್‍ಯನಾರಿಯಂತೆ ಉಡುಪನ್ನು ಧರಿಸಿದ್ದಾಳೆ.

ಆ ಹೆಂಗಸು ಕ್ಷೀಣಳಾಗಿದ್ದಳು. ಬಹಳ ಮೆಟ್ಟಿಲುಗಳನ್ನು ಓಡುತ್ತ ಏರಿ ಬಂದವಳಂತೆ ದಮ್ಮುಹತ್ತಿ ಒಂದೇ ಸವನೆ ಜೋರಾಗಿ ಉಸಿರಾಡಿಸುತ್ತಿದ್ದಳು.

“ಏನು ಬೇಕಾಗಿದೆ?” ಎಂದು ಚಂದೂ ಕೇಳಿದಳು.

ಆ ಹೆಂಗಸು ಬೇಗನೆ ಉತ್ತರ ಕೊಡಲಿಲ್ಲ. ಹೊಸತಿಲದ ಬಳಿಗೆ ಕಾಲಿಟ್ಟು ಸಾವಧಾನವಾಗಿ ಕೋಣೆಯನ್ನು ನೋಡಿದಳು. ದಣುವಿನಿಂದಾಗಲಿ ಅಥವಾ ಯಾವುದಾದರೊಂದು ಬೇನೆಯಿಂದಾಗಿ ನಿಲ್ಲಲಾರದೆ ಕೂಡುವಂತೆ ಗೋಡೆಗೆ ಆತುಕೊಂಡು ವಿರಮಿಸಿದಳು. ಆ ಮೇಲೆ ಎಷ್ಟೋ ಹೊತ್ತಿನವರೆಗೆ ಬಲಗುಂದಿದ ಅವಳ ತುಟಿಗಳು ಮಾತನಾಡಬೇಕೆಂದು ವ್ಯರ್‍ಥವಾಗಿ ಪ್ರಯತ್ನಬಟ್ಟವು.

ಕಡೆಗೊಮ್ಮೆ ಕಣ್ಣೀರಿನಿಂದ ತುಂಬಿದ ತನ್ನ ದೊಡ್ಡ ಕೆಂಗಣ್ಣುಗಳನ್ನು ತೆರೆದು ಚಂದ್ರನನ್ನು ನೋಡುತ್ತ “ನಮ್ಮವರು ಇಲ್ಲಿ ಇರುವರೇನು?” ಎಂದು ಕೇಳಿದಳು.

ಅವಳ ಮಾತನ್ನು ಕೇಳುತ್ತಲೆ ಚಂದೂ ಗಾಬರಿಯಾದಳು; ಕೈ ಕಾಲುಗಳು ತಣ್ಣಗಾದವು.

“ನಿಮ್ಮವರೆ?…….ಯಾರು ?” ಎಂದು ನಡಗುತ್ತ ಕೇಳಿದಳು.
“ಅವರು……..ನಮ್ಮ……..”
“ಇಲ್ಲ……..ನನಗೆ…….ಯಾರೂ ಗೊತ್ತಿಲ್ಲ.”

ಒಂದು ಕ್ಷಣ ಮೌನದಲ್ಲಿಯೇ ಹೋಯಿತು. ಆ ಹೆಂಗಸು ತನ್ನ ಸೀರೆಯ ಸೆರಗನ್ನು ಬಾಡಿದ ತುಟಿಗಳ ಮೇಲೆ ಇಟ್ಟು ಹೃದಯದೊಳಗಿನ ನಡುಗನ್ನು ನಿಲ್ಲಿಸಬೇಕೆಂದು ಉಸಿರನ್ನು ಗಟ್ಟಿಯಾಗಿ ಹಿಡಿದಳು. ಚಂದೂ ಕುತೂಹಲದಿಂದ ಹೆದರಿಕೆಯಿಂದ ಅವಳನ್ನು ದಿಟ್ಟಿಸಿ ನೋಡುತ್ತ ಅಲುಗಾಡದೆ ಕಂಬದಂತೆ ನಿಂತುಬಿಟ್ಟಳು.

“ಅಂತೂ ಅವರು ಇಲ್ಲಿ ಇಲ್ಲವೆ?” ಎಂದು ಮತ್ತೆ ಆ ಹೆಂಗಸು ಕೇಳಿದಳು. ಈ ಸಲ ಅವಳ ಧ್ವನಿಯಲ್ಲಿ ಬಿಗುವಿತ್ತು. ಹುಚ್ಚು ನಗೆಯನ್ನು ನಕ್ಕಳು.

“ನನಗೆ……. ನೀವು ಯಾರನ್ನು ಕೇಳುತ್ತೀರೊ ಗೊತ್ತಾಗಲೊಲ್ಲದು.”

“ನೀನು ದುಷ್ಟಿ………ರಾಕ್ಷಸಿ…………” ದೂಷಿಸುವ ನೋಟದಿಂದ ಚಂದ್ರನನ್ನು ದುರುದುರನೆ ನೋಡುತ್ತ, ಆ ಅಪರಿಚಿತ ಹೆಂಗಸು ಎದುರಾಡಿದಳು. “ಹೌದು……… ಹೌದು…….. ಕಡೆಗೊಮ್ಮೆ ಹೇಗೆ ಹೇಳಲು ಧೈರ್ಯ ಬರುತ್ತದೆ.”

ಅವಳ ಮಾತುಗಳು ಚಂದೂನ ಹೃದಯವನ್ನು ನಾಟಿದವು. ಅವಳೆದುರಿಗೆ ತಾನು ಹಾಗೆಯೇ ಇರುವೆನೆಂದೂ ತಿಳಿದುಕೊಂಡಳು. ಆ ಶರೀರವು ಅವಳದು. ಚಂದೂನದು ಹಾಗೆ ಇರಲಿಲ್ಲ. ತನ್ನ ದುಂಡಗಾದ ಕೆಂಪು ಗಲ್ಲಗಳನ್ನು, ಹಣೆಯ ಮೇಲೆಯೂ ಕಿವಿಯ ಮೇಲೆ ಬಿದ್ದಿರುವ ಕೂದಲುಗಳನ್ನು ನೆನೆಸಿಕೊಂಡು ಚಂದೂಗೆ ನಾಚಿಕೆಯಿನಿಸಿತು. ತಾನು ತೆಳ್ಳಗಿದ್ದರೆ, ಮುಖಕ್ಕೆ ಬಣ್ಣವನ್ನು ಹಚ್ಚಿಕೊಳ್ಳದಿದ್ದರೆ, ಹಣೆಯ ಮೇಲೆ ಕೂದಲುಗಳು ಬೀಳುತ್ತಿರದಿದ್ದರೆ ತಾನು ಅನಾರ್‍ಯಳೆಂಬ ತೋರಿಕೆಯನ್ನು ಮುಚ್ಚಬಹುದಾಗಿತೆಂದು ಚಂದೂಗೆ ಅನಿಸಿತು, ಅಪರಿಚಿತಳಾದ ಆ ವಿಚಿತ್ರ ಹೆಂಗಸಿನ ಎದುರಿಗೆ ಏನೂ ನಾಚಿಕೆ ಇಲ್ಲದೆ ಧೈರ್ಯದಿಂದ ನಿಲ್ಲಬಹುದಿತ್ತೆಂದೂ ಭಾವಿಸಿದಳು.

“ಅವರೆಲ್ಲಿ?” ಎಂದು ಆ ಹೆಂಗಸು ಮತ್ತೆ ಕೇಳಿದಳು. “ಅವರೇನು ಇಲ್ಲಿ ಇರಲಿ ಅಥವಾ ಬಿಡಲಿ…….. ಅವರೀಗ ನಮ್ಮವರನ್ನು ಹುಡುಕುತ್ತಿದ್ದಾರೆ. ಅವರನ್ನು ಜೈಲಿಗೆ ಹಾಕಬೇಕೆಂದಿದ್ದಾರೆ. ಇಷ್ಟೆಲ್ಲ ಕಾರಭಾರ ನಿನ್ನದೆ.”

ಆ ಹೆಂಗಸು ಎದ್ದು ನಿಂತು ಉದ್ವಿಗ್ನತೆಯಿಂದ ಕೋಣೆಯ ತುಂಬೆಲ್ಲ ಓಡಾಡಿದಳು. ಚಂದೂ ಅವಳನ್ನು ನೋಡಿದಳು, ಗಾಬರಿಗೊಂಡಳು, ಏನು ಮಾಡಬೇಕೆಂಬುವುದು ತಿಳಿಯದಾಯಿತು.

“ಇವೊತ್ತೆ ಅವರನ್ನು ಜೈಲಿಗೆ ಒಯ್ಯುತ್ತಾರೆ.” ಹೆಂಗಸು ದುಃಖಿಸಿದಳು. ಆ ದುಃಖದಲ್ಲಿ ಕೋಪದಿಂದ ಪೀಡಿತಳಾದ ಆವೇಶವೂ ಕೇಳಬಂದಿತು.

“ಅವರಿಗೆ ಇಂಥ ಭಯಂಕರ ಸ್ಥಿತಿಯುಯಾರಿಂದ ಬಂದಿತೆಂಬುವುದು ಗೊತ್ತು! ಅಯ್ಯೋ…. ರಾಕ್ಷಸಿಯೆ…. ಬಿಕ್ಕೆ ಬೇಡುವವಳೆ….” ನಾಲಗೆಯು ತನ್ನ ಕಾಯಕವನ್ನು ಸಾಗಿಸಿತು. ತುಟಿಗಳು ನಡುಗಿದವು. ಒಂದೇ ಸವನೆ ಅವಳು ಮೂಗು ಮುರಿಯುತ್ತಿದ್ದಳು. “ನನಗೆ ಯಾರು ಸಹಾಯ ಮಾಡುವವರಾರು? ಅಯ್ಯೋ….ನೀನೇ ಹೇಳು? ನನಗಿಂತ ನೀನು ಸಮರ್ಥಳು. ಆದರೂ ಏನು! ನನ್ನನ್ನು ನನ್ನ ಮಕ್ಕಳನ್ನು ನೋಡುವವ ಒಬ್ಬನಿದ್ದಾನೆ! ದೇವರು ಎಲ್ಲರನ್ನು ಕಾಪಾಡುವನು! ನ್ಯಾಯವನ್ನು ಸಮರ್‍ಥಿಸುವನು! ಅತ್ತತ್ತು ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆದಿದ್ದೇನೆ. ನನ್ನ ಕಣ್ಣೀರಿಗೆ ದೇವರು ನಿನ್ನನ್ನು ಶಿಕ್ಷಿಸುವನು. ನನ್ನ ಬಗ್ಗೆ ವಿಚಾರಿಸುವ ಕಾಲವು ಬರುವುದು!….”

ಮತ್ತೆ ಮೌನ. ಆ ಹೆಂಗಸು ಸಿಟ್ಟಿನಿಂದ ಕೋಣೆಯ ತುಂಬ ಓಡಾಡಿದಳು. ಇನ್ನೂ ಏನೋ ಭಯಂಕರವಾದುದು ಅವಳಿಂದ ಆಗುವದೆಂದು ಚಂದೂ ನಿರೀಕ್ಷಿಸಿದಳು. ಬಹಳ ಚಕಿತಳಾಗಿ ಶೂನ್ಯ ದೃಷ್ಟಿಯಿಂದ ಅವಳನ್ನು ನೋಡಿದಳು.

“ಅಲ್ಲ. ನನಗೇನೂ ಗೊತ್ತಿಲ್ಲ” ಎಂದು ಚಂದೂ ಒಮ್ಮೆಲೆ ಅತ್ತು ಬಿಟ್ಟಳು.

“ಸುಳ್ಳು ಹೇಳುವಿ” ಎಂದು ಆ ಹೆಂಗಸು ಚೀರಿದಳು. ಅವಳ ಕಣ್ಣುಗಳಿಂದ ಕೆಂಡದ ಕಿಡಿಗಳು ಹಾರಿದವು. ನನಗೆಲ್ಲವೂ ಗೊತ್ತಿದೆ! ನಿನ್ನನ್ನು ನಾನು ಬಲ್ಲೆ! ಈಗೆರಡು ತಿಂಗಳಾಯಿತು. ಅವರು ಪ್ರತಿಯೊಂದು ದಿನವನ್ನು ನಿನ್ನ ಸಂಗಡ ಕಳೆಯುತ್ತಾರೆ.”

“ಇರಬಹುದು. ಆ ಮೇಲೆ? ನನ್ನ ಕಡೆಗೆ ಎಷ್ಟೋ ಜನರು ಬರುತ್ತಾರೆ. ನಾನೇನು ಅವರಿಗೆ ಇಲ್ಲಿಗೆ ಬರಲು ಜುಲುಮೆ ಮಾಡುವದಿಲ್ಲ. ಅವರ ಸ್ವಾತಂತ್ರ ಅವರಿಗೆ ಇದ್ದೇ ಇದೆ.”

“ಏನೇ ಇರಲಿ, ಇಲ್ಲಿ ಕೇಳು…….. ಆಫೀಸಿನೊಳಗಿನ ಹಣವು ಕಳೆದಿದೆ. ಅವರು ನಿನ್ನಂಥ ಪ್ರಾಣಿಯ ಸಲುವಾಗಿ ಅಪಹರಿಸಿಕೊಂಡು ಬಂದಿದ್ದಾರೆ! ನಿನ್ನ ಸಲುವಾಗಿ ಪಾಪ ಮಾಡಿದ್ದಾರೆ! ಚಂದೂನ ಎದುರಿಗೇ ನಿಂತು ಹೀಗೆ ಮಾತನಾಡಬೇಕಾದರೆ ಅವಳ ಧ್ವನಿಯಲ್ಲಿ ನಿಶ್ಚಲತೆ ಇತ್ತು. “ನೀನು ಯಾವುದೂ ನಿರ್‍ಬಂಧವಿಲ್ಲದೆ ಇರಬಹುದು. ಆದರೂ ಜನರನ್ನು ನೋಯಿಸುವುದಕ್ಕೆ ಜೀವಿಸುವೆ. ಅವರಿಗೆ ಹೆಂಡತಿಯಿದ್ದಾಳೆ, ಮಕ್ಕಳಿದ್ದಾರೆ. ಅವರನ್ನು ಶಿಕ್ಷಿಸಿ ಜೈಲಿಗೆ ಕಳಿಸಿದರೆ ನಾನೂ ನನ್ನ ಹುಡುಗರದೂ ಏನು ಗತಿ? ಉಪವಾಸ ಸಾಯುವೆವು! ಅಯ್ಯೋ…….. ಆದರೂ ಒಂದು ರೀತಿಯಿಂದ ಆವರನ್ನು ಉಳಿಸಿಕೊಳ್ಳಬಹುದು. ೯ಂಂ ರೂಪಾಯಿ ಕೊಟ್ಟರೆ…….!”

“ಅಬ್ಬಾ! ೯೦೦ ರೂಪಾಯಿಗಳೆ?” ಆಶ್ವರ್ಯರಲ್ಲಿಯೂ ಚಂದೂ ಮೆಲ್ಲಗೆ ಕೇಳಿದಳು. “ನನಗೆ…. ನನಗೇನೂ ಗೊತ್ತಿಲ್ಲ……… ನಾನು ಅವುಗಳನ್ನು ತೆಗೆದುಕೊಂಡಿಲ್ಲ.”

೯೦೦ ರೂಪಾಯಿ ನಿನಗೆ ಕೇಳಲಿಲ್ಲ….. ನಿನ್ನ ಹತ್ತಿರ ರೂಪಾಯಿಗಳಿಲ್ಲವೆ? ಇದ್ದರೂ ನಿನ್ನ ರೂಪಾಯಿಗಳು ನನಗೆ ಬೇಕಿಲ್ಲ. ನಾನು ಬೇರೆ ಕೇಳುತ್ತಿದ್ದೇನೆ……. ನಿನ್ನಂಥ ಗಾಯಕಿಯರಿಗೆ ಗಂಡಸರು ಬೆಲೆಯುಳ್ಳ ವಸ್ತು ಒಡವೆಗಳನ್ನು ಕೊಡುತ್ತಾರೆ. ನಮ್ಮವರು ಕೊಟ್ಟಷ್ಟನ್ನು ನನಗೆ ತಿರುಗಿ ಕೊಟ್ಟು ಬಿಡು.”

“ಅಲ್ಲ…. ಅವರು ಯಾವ ಕಾಣಿಕೆಯೂ ನನಗೆ ಕೊಟ್ಟಿಲ್ಲ!” ಚಂದೂ ಏನೂ ತಿಳಿಯದೆ ಅತ್ತಳು.

“ಆ ಮೇಲೆ ಕಣವೆಲ್ಲವೂ ಎಲ್ಲಿದೆ?… ನಿಮ್ಮನ್ನು, ನಮ್ಮನ್ನು, ಎಲ್ಲ ಜನರನ್ನು ಹಾಳುಮಾಡಿದ್ದಾರೆ…….. ಹಣವೆಲ್ಲ ಎಲ್ಲಿ ಹೋಗಿದೆ? ನೀನೆ ಹೇಳು. ಸಿಟ್ಟಿನಿಂದ ಆಡಬಾರದ ಮಾತುಗಳನ್ನು ಆಡಿದ್ದೇನೆ. ನನ್ನ ಮೇಲೆ ನೀನು ಸಿಟ್ಟಾಗಿರಬೇಕು. ಆದರೂ ನನ್ನ ಸ್ಥಿತಿಯೆ ನಿನಗೆ ಬಂದಿದ್ದರೆ…….. ವಿಚಾರಿಸಿ ನೋಡು! ಸುಮ್ಮನೆ ಏಕೆ….? ವಸ್ತುಗಳನ್ನು ತಿರುಗಿ ಕೊಟ್ಟು ಬಿಡು!”

ಚಂದೂ ಭಜವನ್ನು ಹಾರಿಸಿದಳು. “ಒಹೋ! ಆನಂದದಿಂದ ಕೊಡಬಹುದು. ಆದರೆ ದೇವರ ಸಾಕ್ಷಿಯಾಗಿ ಹೇಳುತ್ತೇನೆ, ಆಣೆಮಾಡಿ ಹೇಳುತ್ತೇನೆ, ಆ ನಿನ್ನ ಅವರು ಎಂದಿಗೂ ನನಗೆ ವಸ್ತುಗಳನ್ನು ಕೊಟ್ಟಿಲ್ಲ. ಕೆಲವು ಸಲ……..” ಗಾಯಕಿಯು ತಡವರಿಸುತ್ತ ನುಡಿದಳು. “ಒಂದೆರಡು ಸಣ್ಣ ವಸ್ತುಗಳನ್ನು ತಂದುಕೊಟ್ಟಿದ್ದಾರೆ. ಬೇಕಾದರೆ ಅವುಗಳನ್ನು ತಿರುಗಿ ಕೊಡುವೆನು.”

ಚಂದೂ ತನ್ನ ‘ಟಾಯ್ಲೆಟ್’ ಮೇಜಿನ ಹತ್ತಿರ ಹೋಗಿ ‘ಡ್ರಾವರು’ಗಳನ್ನು ಗಕ್ಕನೆ ಜಗ್ಗಿದಳು. ಅಲ್ಲಿರುವ ಒಂದು ಬಂಗಾರದ ಬಳೆಯನ್ನೂ, ಒಂದು ಹರಳುಗರವನ್ನೂ ಹೊರಗೆ ತೆರೆದು “ಇಗೊ ತೆಗೆದುಕೊಳ್ಳಿ” ಎಂದು ಆ ಹೆಂಗಸಿನ ಕಡೆಗೆ ಕೊಟ್ಟಳು.

ಆ ಹೆಂಗಸಿನ ಮುಖವು ಅರಳಿತು. ಆ ಗಾಯಕಿಯನ್ನು ರೇಗಿಸಿದ ಪಾಪವೂ ಅವಳ ದೇಹವನ್ನು ನಡುಗಿಸಿತು.

ಅವಳು ನುಡಿದಳು. ನನಗೆ ಇದೇನು ಕೊಡುತ್ತಿರುವೆ? ಧರ್ಮಾರ್‍ಥಿಯಾಗಿ ನಿನ್ನ ಕಡೆಗೆ ನಾನು ಬಂದಿಲ್ಲ. ಆದರೆ ನಿನ್ನದೆಲ್ಲವನ್ನು, ಸಮಾಜದ ನಿನ್ನ ಸ್ಥಾನದಿಂದ ನಮ್ಮವರ ಕಡೆಯಿಂದ ಸೆಳೆದುಕೊಂಡ ಆಭರಣಗಳನ್ನು ಕೊಡು…….. ಹೋದ ಗುರುವಾರ ನಮ್ಮವರ ಸಂಗಡ ನೀನು ಹೊರಟಾಗ್ಗೆ ಬೆಲೆಯುಳ್ಳ ಪದಕಗಳನ್ನೂ, ಬಳೆಗಳನ್ನೂ ಮೈ ಮೇಲೆ ಹಾಕಿಕೊಂಡಿದ್ದಿ’. ಸುಳ್ಳೆ ನನ್ನನ್ನು ಹೀಗೆ ಮೋಸಮಾಡುವುದು ಒಳಿತಲ್ಲ. ಕಣ್ಮುಟ್ಟಿ ನೋಡಿದ್ದೇನೆ. ಸುಮ್ಮನೆ ಕೊಟ್ಟು ಬಿಡು……. ಇದೊಂದು ಕಡೆಯಸಲ ಕೇಳುವೆ.”

ಚಂದೂಗೆ ಇದೆಲ್ಲ ವಿಲಕ್ಷಣವಾಗಿ ಕಂಡಿತು. “ಆಣೆ ಮಾಡಿ ಹೇಳುತ್ತೇನೆ. ಈ ಬಳೆಗಳನ್ನು, ಈ ಸಣ್ಣ ಉಂಗುರವನ್ನು ಬಿಟ್ಟರೆ ಅವರು ಮತ್ತೇನನ್ನೂ ತಂದುಕೊಟ್ಟಿಲ್ಲ. ಏನಾದರೂ ಮೆಜವಾನಿಗಳನ್ನು ಮಾತ್ರ ಇಲ್ಲಿ ಮಾಡಿಸುತ್ತಾರೆ.”

“ಮೇಜವಾನಿಯೆ?” ಆ ಹೆಂಗಸು ಒಮ್ಮೆಲೆ ನಕ್ಕಳು. “ಮನೆಯಲ್ಲಿ ಮಕ್ಕಳಿಗೆ ತಿನ್ನಲಿಕ್ಕೆ ಏನೂ ಇಲ್ಲ. ಇಲ್ಲಿ ನಿನಗೆ ಮೇಜವಾನಿ!…….. ಅಂತೂ ವಸ್ತುಗಳನ್ನು ತಿರುಗಿ ಕೊಡಲು ಒಲ್ಲೆನುವಿ?”

ಉತ್ತರವೇನೂ ಬರಲಿಲ್ಲ. ಆ ಹೆಂಗಸು ಕೆಳಗೆ ಕುಳಿತಳು. ಎಲ್ಲ ಸ್ಥಳವನ್ನು ಬಿರಬಿರನೆ ನೋಡಿದಳು.

ಇನ್ನೇನು ಮಾಡಬೇಕು? ೯೦೦ರೂಪಾಯಿ ಸಿಗದಿದ್ದರೆ ನೀಲಕಂಠ ರಾಯರು ಹಾಳಾಗುವರು. ಮಕ್ಕಳು, ಅವಳು ಎಲ್ಲರೂ ಹಾಳಾಗುವರು. ಆ ನೀಚ ಗಾಯಕಿಯನ್ನು ಕೊಲ್ಲಬೇಕೆಂಬ ವಿಚಾರವೂ ಅವಳ ತಲೆಯಲ್ಲಿ ಸುಳಿಯಿತು. ಇಲ್ಲವಾದರೆ ಅವಳಿಗೆ ಸಾಷ್ಟಾಂಗ ನಮಸ್ಕಾರ ಹಾಕಬೇಕು.

ಶೀರೆಯ ಸೆರಗನ್ನು ಮುಖದ ಮೇಲೆ ಸರಿಸಿಕೊಂಡು ಮತ್ತೆ ಬಿಕ್ಕಿಸಲಾರಂಭಿಸಿದಳು.

“ನೀನು ಅವಳ ಗಂಡನ ಜೀವನವನ್ನು ನಾಶಮಾಡಿದೆ. ಅವನ ಬಗ್ಗೆ ಕರುಣೆಯಿಲ್ಲದಿದ್ದರೆ ಅಷ್ಟೆ ಹೋಯಿತು. ಮಕ್ಕಳನ್ನು ಏಕೆ ಉಳಿಸಬಾರದು? ಪಾಪ, ಅವೇನು ಮಾಡಿವೆ?” ಎಂಬ ಮಾತುಗಳನ್ನು ಆ ಹೆಂಗಸಿನ ದುಃಖದ ಉಸಿರುಗಳು ಚಂದೂನ ಕಿವಿಯಲ್ಲಿ ಊದಿದಂತಾಯಿತು.

ಹಸಿವೆಯ ಶೂಲದಿಂದ ದಾರಿಯಲ್ಲಿ ಅಳುತ್ತ ನಿಂತಿರುವ ಚಿಕ್ಕ ಮಕ್ಕಳನ್ನು ಚಂದೂ ನೆನೆದಳು. ಅವಳೂ ಸಹ ಅತ್ತಳು.

“ನಾನೇನು ಮಾಡಬೇಕು ನೀವೆ ಹೇಳಿ? ನಾನು ನೀಚಳೆಂದೂ, ನಿಮ್ಮ ನೀಲಕಂಠರಾಯರನ್ನು ಮುಳುಗಿಸಿದೆನೆಂದೂ ನೀವೆ ಹೇಳುತ್ತಿರುವಿರಿ. ಆದರೆ ದೇವರ ಸಾಕ್ಷಿಯಾಗಿ ಮತ್ತೊಮ್ಮೆ ಹೇಳುತ್ತೇನೆ. ಅಂತಹದಾವುದನ್ನೂ ನಾನು ಮಾಡಿಲ್ಲ……… ನಮ್ಮ ಮೇಳದಲ್ಲಿ ಒಬ್ಬಾಕೆ ಇದ್ದಾಳೆ. ಅವಳೊಬ್ಬಳೆ ಒಬ್ಬ ದೊಡ್ಡ ಸಾವುಕಾರನ ಪ್ರೀತಿಯನ್ನು ಪಡೆದಿದ್ದಾಳೆ. ಉಳಿದವರೆಲ್ಲರೂ ಅಷ್ಟಕ್ಕಷ್ಟೆ ಇದ್ದೇವೆ…. ನೀಲಕಂಠರಾಯರು ಸುಶಿಕ್ಷಿತರು, ಒಳ್ಳೆ ನಾಗರಿಕರು. ಅದರಿಂದ ಅವರನ್ನು ಇಲ್ಲಿ ಬರಮಾಡಿಕೊಂಡಿದ್ದೇವೆ.”

“ಅಯ್ಯೋ, ನನಗೆ ಅಳುವಹಾಗಾಗಿದೆ. ನನ್ನನ್ನೆ ನಾನು ಕೀಳು ಬಗೆಯುತ್ತಿದ್ದೇನೆ. ನನ್ನ ವಸ್ತುಗಳನ್ನು ಕೊಡಬಾರದೆ? ಕೊಟ್ಟು ಬಿಡು. ಬೇಕಾದರೆ ನಿನ್ನ ಕಾಲು ಬೀಳುತ್ತೇನೆ.”

ಚಂದೂ ಗಾಬರಿಯಿಂದ ಚೀರಿದಳು. ಬೇಡವೆಂದು ಬೇಡಿಕೊಂಡಳು; ಚೆನ್ನಾಗಿ ಮಾತನಾಡುವ ಆ ಬಡಕಲಾದ ಸುಂದರಿಯು ಇನ್ನು ಮೇಲೆ ದರ್‍ಪದಿಂದ ವೈಭವದಿಂದ ತಾನು ಮೇಲ್ಗೈಯಾಗಿ ಮೇಳದ ಈ ಹುಡಿಗೆಯನ್ನು ಬೇಕಂತಲೆ ಅವಮಾನಿಸಬೇಕೆಂದು ತನ್ನ ಮುಂದೆ ನಿಜವಾಗಿಯೂ ಸಾಗರ ಬೀಳುವಳೆಂದು ಚಂದೂಗೆ ಮನದಟ್ಟಾಯಿತು.

“ಆಗಲಿ, ನಿನ್ನ ವಸ್ತುಗಳನ್ನು ಕೊಡುವೆ” ಕಣ್ಣುಗಳನ್ನು ಒರೆಸಿ ಕೊಳ್ಳುತ್ತ ಚಂದೂ ಅಂದಳು. “ಆನಂದದಿಂದ ಕೊಡುವೆ. ಆದರಿಷ್ಟೆ ಅವು ನೀಲಕಂಠರಾಯರವಲ್ಲ……. ಹೀಗೆಯೇ ಮತ್ತೊಬ್ಬರಿಂದ ಬಂದಿವೆ.”

ಚಂದೂ ಮೇಲಿನ ಡ್ರಾವರನ್ನು ತೆರೆದು ಒಂದು ಮುತ್ತಿನ ಹಾರವನ್ನು ಕೆಲವು ಬಳೆಗಳನ್ನು, ಕೆಲವು ಉಂಗರಗಳನ್ನು ಅವಳ ಕೈಯಲ್ಲಿ ಕೊಟ್ಟಳು.”

“ನಿಮಗೆ ಬೇಕಾದರೆ ಇವೆಲ್ಲವನ್ನೂ ತೆಗೆದುಕೊಳ್ಳಿ. ನಿಮ್ಮವರ ಕಡೆಯಿಂದ ಮಾತ್ರ ನನಗೇನೂ ಬಂದಿಲ್ಲ. ಇವನ್ನು ತೆಗೆದುಕೊಂಡು ನೀವೆ ಸಾವುಕಾರರಾಗಿರಿ,” ಆ ಹೆಂಗಸಿನ ದೀನ ದೆಶೆಯನ್ನು ನೆನೆದು ಚಂದೂ ಹಾಗೆಯೆ ಮಾತನಾಡಿದಳು. “ನೀವು ಸಾಧ್ವಿಯಾದರೆ ಅವರನ್ನು ಹೊರಗೆ ಬಿಡಬೇಡಿ! ಕಾಪಾಡಿಕೊಳ್ಳಿ! ಅವರಿಗೆ ಇಲ್ಲಿ ಬರಲು ನಾನೇನು ಹೇಳಿರಲಿಲ್ಲ. ತಾವೆ ಬಂದಿದ್ದಾರೆ.”

ಕಂಬನಿಗಳಲ್ಲಿಯೆ ಆ ಹೆಂಗಸು ಎಲ್ಲ ಸಾಮಾನುಗಳನ್ನು ನೋಡಿದಳು. “ಇವೆಲ್ಲ ಕೂಡಿ ೯ಂಂ ರೂಪಾಯಿ ಆದಾವೆ?” ಎಂದು ಉದ್ಗಾರ ತೆಗೆದಳು. ಚಂದೂ ಬೇಕಂತಲೆ ಕಪಾಟನ್ನು ತೆಗೆದು, ಸಿಗರೇಟಿನ ಡಬ್ಬೆಗಳನ್ನು ಹಾಳೆಗಳನ್ನು ಹೊರಗೆ ಬೀಸಿದಳು. ನನ್ನಲ್ಲಿ ಏನಿದೆ? ……..ಬೇಕಾದರೆ ನೋಡಿಕೊಳ್ಳಿ?” ಎಂದು ಬರಿದಾದ ಕೈಗಳನ್ನು ಬೀಸಿದಳು.

ಭೆಟ್ಟಿಗೆಂದು ಬಂದ ಆ ಹೆಂಗಸು ನಿಟ್ಟುಸಿರು ಬಿಡುತ್ತ, ನಡುಗುವ ಕೈಗಳಿಂದ ಆ ಎಲ್ಲ ವಸ್ತುಗಳನ್ನು ಒಂದು ವಸ್ತ್ರದಲ್ಲಿ ಕಟ್ಟಿದಳು. ಪಿಟ್ಟಿಂದು ಮಾತನಾಡದೆ ಸುಮ್ಮನೆ ಆ ಸ್ಥಳವನ್ನು ಬಿಟ್ಟು ಹೊರಗೆ ಹೋದಳು.

ಬಾಜುವಿನ ಕೋಣೆಯ ಬಾಗಿಲನು ತೆರೆಯಿತು. ನೀಲಕಂಠರಾಯರು ಹೊರಗೆ ಬಂದರು. ಬಹಳ ಕ್ಷೀಣರಾಗಿದ್ದರು! ಗಾಬರಿಯಿಂದ ತಲೆಯನ್ನು ನಡುಗಿಸುತ್ತಿದ್ದರು! ಯಾವುದೊ ಒಂದು ಕಹಿಯಾದ ಔಷಧ ನುಂಗಿದವರಂತೆ ಮುಖಚರ್‍ಯೆಯಿತ್ತು. ಕಂಬನಿಗಳು ಕೆಳಗೆ ಬೀಳಬೇಕೆಂದು ಹವಣಿಸುತ್ತಿದ್ದವು.

ಅವರನ್ನು ನೋಡುತ್ತಲೆ ಚಂದೂ ಅವರ ಮೈ ಮೇಲೆ ಏರಿಬಂದ “ನನಗೇನು ಕೊಟ್ಟಿರುವಿರಿ? ನಾನೆಂದಾದರೂ ನಿಮಗೇನಾದರೂ ಕೇಳಿರುವೆನೆ?” ಎಂದು ಕೇಳಿದಳು.

“ನು ಕೊಟ್ಟಿರುವೆನೆ?…. ……. ಕೊಡದಿದ್ದರೆ ಏನಾಯಿತು?” ನೀಲಕಂಠರಾಯರು ದರ್‍ಅದಿಂದ ನುಡಿದರು. “ಯ್ಯೋ, ಅವಳು ನಿನ್ನೆದುರು ಅತ್ತಳೆ? ತನ್ನ ಅಪಾಮಾನವನ್ನು ಮಾಡಿಕೊಂಡಳೆ?”

“ನೀವು ನನಗೇನು ಬಹುಮಾನದ ವಸ್ತುಗಳನ್ನು ಕೊಟ್ಟಿರುವಿರೆಂದು ಕೇಳುತ್ತಿದ್ದೇನೆ. ಕೇಳಿಸಿತೆ?” ಚಂದೂ ಸಂಕಟದಿಂದ ಒದರಿದಳು.

“ಅಯೊ ದೇವರೆ! ಒಳ್ಳೆ ಕುಲದವಳಾದ ಅವಳು…. ಈ ಮೂರ್‍ಖಿಯ ಕಾಲು ಬೀಳಲು ತಯಾರಾಗಬೇಕೆ! ಇದಕ್ಕೆಲ್ಲ ನಾನೆ ಕಾರಣನು! ನಾನೆ ಹೀಗೆ ಮಾಡಿದೆ!”

ತಲೆಯನ್ನು ಎರಡೂ ಕೈಗಳಲ್ಲಿ ಬಿಗಿಯಾಗಿ ಹಿಡಿದುಕೊಂಡು ದುಃಖಿಸಿದರು.

“ನಾನು ಹೀಗೆ ಮಾಡಬೇಕೆ? ಹೀಗೆಂದಿಗೂ ಮಾಡಲಾರೆ! ಇಲ್ಲ ಮಾಡಲಾರೆ! ಮೂರ್‍ಖಳೆ, ದೂರ ಹೋಗು………” ಎಂದು ಬಿರುನುಡಿಗಳ ನಾಡಿದರು. ಅವರ ಹೃದಯವು ಭಯಂಕರ ಬಡಿದುಕೊಂಡಿತು. ಮೈಯೆಲ್ಲ ನಡುಗಿತು. “ಓಹೋ, ಇವಳಿಗೆ ಆಕೆ ಕಾಲುಬೀಳುವವಳಿದ್ದಳು………… ಅಯ್ಯೋ”…………

ಚಂದೂನನನ್ನು ಸಿಟ್ಟಿನಿಂದ ಆಚೆಗೆ ನೂಕಿದರು. ಕೋಟು ಶರ್‍ಟುಗಳನ್ನು ಹಾಕಿಕೊಂಡು ಬಾಗಿಲವನ್ನು ತೆರೆದು ಬಿರ್ರನೆ ಹೊರಗೆ ಹೊರಟು ಹೋದರು.

ಚಂದೂ ನೆಲದ ಮೇಲೆ ದೊಪ್ಪನೆ ಬಿದ್ದಳು. ಗೋಳೋ ಎಂದು ಅತ್ತಳು. ಆವೇಶದಲ್ಲಿ ವಸ್ತುಗಳನ್ನು ಕೊಟ್ಟ ಸಂಗತಿ ಅವಳ ಮನಸ್ಸನ್ನು ಮೊದಲೇ ನೋಯಿಸಿತ್ತು. ಇದೇ ಹೊತ್ತಿನಲ್ಲಿ ಮೂರು ವರ್ಷಗಳ ಹಿಂದೆ ಒಬ್ಬ ವರ್‍ತಕನು ಏನೂ ಕಾರಣವಿಲ್ಲದೆ ಆಕೆಯನ್ನು ಹೊಡೆದದ್ದನ್ನು ನೆನಿಸಿ ಕೊಂಡಳು. ನಿರಾಶಳಾಗಿ ಬಿಕ್ಕಿ ಬಿಕ್ಕಿ ಅತ್ತಳು.
*****