ನೀರಿನ ಋಣ

ನೀರಿನ ಋಣ

ಇಲ್ಲಿ ಎಲ್ಲರೂ ಕ್ಷೇಮ ಎಂದು ಪತ್ರ ಪ್ರಾರಂಭಿಸಿದೆ. ನಾನು ಕ್ಷೇಮ ಎಂದು ಮೊದಲಾಗಬೇಕಿತ್ತು. ಆ ಮೇಲೆ ನಿಮ್ಮ ಕ್ಷೇಮಕ್ಕೆ ಎಂದು ಮುಂದುವರಿಸಿದ್ದರೆ ನನ್ನತನವನ್ನು ಢಾಳಾಗಿ ಕಾಣಿಸಬಹುದಿತ್ತೇನೋ! ನನ್ನತನ ಏನು ಬಂತು. ಮನುಷ್ಯತನವನ್ನೇ ಶಬ್ದಗಳಲ್ಲಿ ಬಿಂಬಿಸಿದಂತಲ್ಲವೇ? ಆದರೆ ನಾನು ಕ್ಷೇಮವಾಗಿರುವೆ ಎಂದು ಯಾವ ಬಾಯಲ್ಲಿ ಹೇಳಲಿ? ನನ್ನ ದಂಧೆಯು ಹೇಳಿ ಕೇಳಿ ಯಾವಾಗಲೂ ಸಮಸ್ಯೆಗಳನ್ನು ಸಲಹುವುದೇ ಆಗಿದೆ. ಒಂದು ಮುಳ್ಳನ್ನು ಕಿತ್ತರೆ ಇನ್ನೊಂದು ಮುಳ್ಳು ಚುಚ್ಚಿಕೊಂಡಂತೆ ಸಮಸ್ಯೆಗಳು ಧುತ್ತೆಂದು ತಲೆಯೆತ್ತಿ ನಿಲ್ಲುತ್ತಿದ್ದವು.

ಯಾವುದೇ ಪತ್ರ ಬರೆದಾಗಲೂ ನಿಮ್ಮ ಕುಶಲದ ಬಗ್ಗೆ ಬರೆಯುವುದೇ ಇಲ್ಲ ಎಂಬ ತಗಾದೆ. ಮಾಡೋದು ಮಾಡಿ ಹೀಗೆ ಪತ್ರ ಬರೆದರೆ ನನಗೆ ಸಿಟ್ಟು ಬರುವುದಿಲ್ಲವೇ? ಅಷ್ಟಕ್ಕೂ ನಿಜದಲ್ಲಿ ನಾನು ಮೂತಿ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿರುವಾಗ ಕುಶಲ ಎಲ್ಲಿಂದ ಬರಬೇಕು?

ಈಗೀಗ ಇವೆಲ್ಲ ಮಾಮೂಲೆನಿಸಿ ಬಿಟ್ಟಿತ್ತು. ಕ್ಷೇಮ ಇರಲಿ ಇಲ್ಲದಿರಲಿ, ‘ನಾನು ಕ್ಷೇಮ ಎಂದು ಬರೆದು, ಬದಲೀ ವ್ಯವಸ್ಥೆ ಮಾಡಿರುವೆ. ಬಂದ ಮೇಲೆ ತಿಳಿಸುತ್ತೇನೆ. ಮುಂದಿನ ಸೋಮವಾರ ಕರೆದುಕೊಂಡು ಬನ್ನಿ ಎಂದು ಮರೆಯದೇ ಸೇರಿಸಿ ಪತ್ರ ಡಬ್ಬಿಗೆ ಹಾಕಿ ಬಂದೆ. ಇದೇನು ಈ ಪತ್ರ ಒಗಟಾಗಿದೆ ಅನ್ಕೋಬೇಡ್ರಿ.

ಹುಲುಸಾಗಿ ಬೆಳೆದ ಗರಿಕೆ ಹುಲ್ಲಿನಲ್ಲಿ ಯಾವುದೋ ಹುಳ ಸೇರಿಕೊಂಡು ಅದು ಅಂತರ್‍ಗಾಮಿಯಾಗಿ ಮುಂದೆ ಚಲಿಸಿದಂತೆಲ್ಲಾ ಹುಲ್ಲೂ ಮುಂದೆ ಚಲಿಸಿದಂತೆ ಅನಿಸುವುದು ಭ್ರಮೆ. ಆದರೆ ನನ್ನ ಮಂಡೆಯಲ್ಲಿ ಹೊಕ್ಕ ಹುಳು ಕೊರೆದಂತೆಲ್ಲ ಹಿಂದೆ ಚಲಿಸಿ, ನೆನಪು ಮೂಡಿಸುತ್ತಾ ಹೋಗಿದ್ದು ನನ್ನ ಪತ್ರದ ಒಕ್ಕಣೆಯ ಹಿನ್ನೆಲೆಯಲ್ಲಿ ವಾಸ್ತವವು.

ದೂರದ ಮಲೆನಾಡಿನಲ್ಲಿ ಹುಟ್ಟಿದವ ನಾನು, ಅತಿಯಾದ ವ್ಯವಸ್ಥೆ ಅವ್ಯವಸ್ಥೆಗೆ ದಾರಿ ಅಂತಾರಲ್ಲ ಅದಕ್ಕೆ ಜೋತು ಬಿದ್ದಿರಬಹುದು. ಎಲ್ಲೆಲ್ಲೂ ಸುಖ ಸಮೃದ್ಧಿ ಇದ್ದ ನಾಡನ್ನು ಬಿಟ್ಟು, ಬಯಲು ಸೀಮೆಯ ಮಿಡ್ನಾಪುರಕ್ಕೆ ಹೆಚ್ಚಿನ ಸುಖ ಅರಸಿ ಬಂದಿದ್ದೆ.

ನೀರಿನ ಋಣ ಇದ್ದಲ್ಲಿ ಹುಡುಕಿ ಹೋಗುವುದು ಮನುಷ್ಯ ಸ್ವಭಾವ. ಹಾಗೆ ಗಂಟು ಮೂಟೆ ಕಟ್ಟಿ ವಲಸೆ ಬಂದವ ಅಂದರೆ ಬರೀ ಒಂದು ಚಂಬು-ಬಟ್ಟಲು ಹಿಡಿದು ಬಂದವನಲ್ಲ. ಸಾಕಷ್ಟು ಇಡುಗಂಟನ್ನು ವ್ಯಾಪಾರ ಮಾಡಲು ಹೊತ್ತು ತಂದವ. ನಾನಿದ್ದ ಕಡೆಯೇ ಬದುಕನ್ನು ಹಮ್ಮಿಕೊಂಡಿದ್ದರಿಂದ ಒಂದ್ರೀತೀಲಿ ಊರಿಗೆ ಒಗ್ಗಿಕೊಳ್ಳಲೇ ಬೇಕಾದ ಅನಿವಾರ್ಯತೆ, ಹತ್ತರ ಕೂಟಾಗ ಹನ್ನೊಂದು ಆಗಿದ್ದೆ.

ಹೊಟ್ಟೆ ಪಾಡಿಗೆ ಏನೋ ಒಂದು ವ್ಯಾಪಾರ ಹಾಗೂ ಹೀಗೂ ನಡೀತಿತ್ತು. ಗುತ್ತಿಗೆ ಹಿಡಿದ ವಾಸದ ಮನೆಗೆ ಬಾಡಿಗೆ ಇಲ್ಲ; ಕೊಟ್ಟ ಹಣಕ್ಕೆ ಬಡ್ಡಿ ಇಲ್ಲ. ಬಾಡಿಗೆಗೆ ಕೊಟ್ಟ ಮನೆ ಮಾಲೀಕ ಮಾಡುವ ಗಿಂಜಿಗೆ ಅವನನ್ನು ‘ಕಂಡಾಪಟ್ಟೆ ಸಾಹುಕಾರ’ ಎಂದು ಊರೆಲ್ಲ ಕರೀತಿತ್ತು. ಅವನು ಯಾವಾಗಲೂ ತಾನು ‘ಶ್ರೀಮಂತನಿದ್ದೇ ಸಾಯಬೇಕು’ ಎಂಬ ಹಂಬಲ ಇಟ್ಟುಕೊಂಡು ಅದಕ್ಕಾಗಿ ಬಡತನದಲ್ಲಿ ದಿನದೂಡುತ್ತಿದ್ದದ್ದು ಹಾಗೆ ಕರೆಯಲು ಕಾರಣವಾಗಿತ್ತು. ಅದಕ್ಕೆ ತದ್ವಿರುದ್ಧ ನಾನು ಮಾಡಲೇಬೇಕಾದ ಖರ್ಚಿಗೆ ಎಂದೂ ಹಿಂದು ಮುಂದು ನೋಡಬಾರದು ಎನ್ನುವವ.

ನಾನು ಮಿಡ್ನಾಪುರಕ್ಕೆ ಬರುವಾಗ ಜಲಸಮೃದ್ಧಿ ಇದ್ದ ಕಾಲ, ಸಿಹಿ ನೀರಿನ ಕೆರೆಬಾವಿಗಳು ಎಲ್ಲೆಲ್ಲೂ ತುಂಬಿ ತುಳುಕುತ್ತಿದ್ದವು. ಸುತ್ತಲೂ ಕಾಪಿಡುವ ಅವಶ್ಯಕತೆ ಇರದ ಕಾಡು ಕಂಗೊಳಿಸುತ್ತಿತ್ತು. ಹೊಲಗದ್ದೆಗಳಲ್ಲಿ ಹಸಿರೇ ಹಸಿರು ತುಂಬಿ ತೊನೆಯುತ್ತಿದ್ದವು. ಬೇಸಾಯವನ್ನೇ ನೆಚ್ಚಿ ಬದುಕುತಿದ್ದ ಸಕಲೊಂಭತ್ತು ಜನಾಂಗಗಳ ನಾಗರೀಕತೆ ಬೆಳೆದಂತೆಲ್ಲ ಕಾಡು ಅಳಿದು ನಾಶವಾಗುತ್ತಾ ಹೋಯಿತು. ಸೀಮೆ ಬಟ್ಟ ಬಯಲಾಯಿತು. ಬರಬರುತ್ತಾ ಮಳೆ ಬೀಳುವುದು ಕಡಿಮೆಯಾಯಿತು. ಮಳೆ ಬಂದಾಗ ಅಂತರ್‍ಜಲ ಮಟ್ಟ ಏರಿ, ಮತ್ತೆ ಬೇಸಿಗೆಯಲ್ಲಿ ಕಡಿಮೆಯಾಗುತ್ತಿತ್ತು. ತೆರೆದ ಬಾವಿಗಳು ಹಾಳು ಬಿದ್ದವು. ಕೆರೆಕಟ್ಟೆಗಳು ಹೂಳು ತುಂಬಿ, ದಾಹಕ್ಕೆ ಬಿರುಕು ಬಿಟ್ಟು ಆಕಾಶಕ್ಕೆ ಬಾಯಿ ತೆರೆದುಕೊಂಡವು. ಆಗ ಜನ ಕೊಳವೆ ಬಾವಿಗಳಿಗೆ ಮುಗಿಬಿದ್ದರು.

ಇಂಥ ಊರಲ್ಲಿ ತಳ ಊರಿ ಇಲ್ಲೇ ಬೇರು ಇಳಿಸಿಕೊಂಡಿದ್ದವ ನಾನು. ಜನರ ಒಳಭಾವನೆ ಏನೇ ಇದ್ದರೂ, ನನ್ನಲ್ಲಿ ಹೃದಯ ಬಿಚ್ಚಿಡುವ ಗೆಳೆಯರ ನಡುವೆ ಕಣ್ಣು ಪಸೆಗೂಡುವುದು ಇದೆ. ಆ ಸ್ಪಂದನಕ್ಕೆ ಎದೆ ಉಬ್ಬುವುದೂ ಇದೆ.

ಎಲ್ಲೋ ಹುಟ್ಟಿ ಎಲ್ಲೋ ಹರಿವ ನದಿಯು ಜನರ ಜೀವನಕ್ಕೆ ದಾರಿಯಾದಂತೆ ನನ್ನ ಬದುಕೂ ಆಗಬೇಕು ಎಂದು ನಿಸ್ವಾರ್ಥದಿಂದ ದಿನ ದೂಡುತ್ತಿದ್ದೆ. ಇದೇ ವೇಳೆಗೆ ಮದುವೆ ಮಾಡಿಕೋ ಬೇಕು ಎಂಬ ಇರಾದೆಯಿಂದ ಊರೂರು ತಿರುಗ ತೊಡಗಿದೆ. ಅದಾಗಲೇ ಈ ಊರಿನ ಘನಂದಾರಿಕೆ ನನ್ನ ಅರಿವಿಗೆ ಬರತೊಡಗಿದ್ದು.

ನೋಡಿದ ಹುಡಿಗೆಯರಲ್ಲಿ ಒಬ್ಬಳು ಉದ್ದೋಟಿ ಇದ್ದರೆ, ಒಂದು ಕುಳ್ಳಿ, ಇನ್ನೊಂದು ಡುಮ್ಮಿ, ಮತ್ತೊಂದು ಹಲ್ಲುಬ್ಬಿ. ಅತ್ತ ಇಂಥ ಹೆಣ್ಣುಗಳು ನನ್ನನ್ನು ಒಪ್ಪಿದರೆ, ನಾನು ಒಪ್ಪುತ್ತಿರಲಿಲ್ಲ. ಅಪ್ಪಿತಪ್ಪಿ ನಾನು ಒಪ್ಪಿದರೆ ಹೆಣ್ಣಿನ ಕಡೆಯವರು ಒಪ್ಪುತ್ತಿರಲಿಲ್ಲ. ಒಟ್ಟಾರೆ ಹೆಣ್ಣು ನೋಡುವ ಶಾಸ್ತ್ರ ನನಗೊಂದು ಗೀಳಾಗಿ ಬಿಟ್ಟಿತು. ಎಲ್ಲೇ ಮದುವೆಗೆ ಹೆಣ್ಣಿದೆ ಅಂದ್ರೂ, ಹಿಂದೆ ಮುಂದಿನ ಯೋಚನೆ ಇಲ್ಲದೇ ಹೊರಟು ಬಿಡುತ್ತಿದ್ದೆ. ಅಂತೂ ನನಗೆ ಮದುವೆ ಹುಚ್ಚು ಹಿಡಿದಿದೆ ಅನ್ನುವಷ್ಟರ ಮಟ್ಟಿಗೆ ಬೆಳೆಯಿತು. ‘ಹುಚ್ಚು ಬಿಡದೆ ಮದುವೆಯಾಗೋಲ್ಲ. ಮದುವೆಯಾಗದೇ ಹುಚ್ಚು ಬಿಡೋಲ್ಲ’ ಅನ್ನೋತನಕ ಬಂದು ನಿಂತಿತು.

ಅದೊಮ್ಮೆ ನಾನು ನೋಡಿದ ಒಬ್ಬಳನ್ನು ಒಪ್ಪಿದ್ದೆ. ಹುಡುಗಿ ಯಾವ ಐಬೂ ಇಲ್ಲದೇ ಚೆನ್ನಾಗಿದ್ಲು. ಅವಳ ಮನೆಯವರು ನನ್ನ ಊರು ವಾಸ ನೋಡಬೇಕೆಂದರು. ಅವರಿಗೆ ವಿಳಾಸ ಕೊಟ್ಟು ಬರಲು ಆಹ್ವಾನಿಸಿದೆ. ಆದರೆ ಪಕ್ಕದ ತಾಲ್ಲೂಕು ಕೇಂದ್ರಕ್ಕೆ ಬಂದವರು ಅಲ್ಲಿಂದ ಮಿಡ್ನಾಪುರಕ್ಕೆ ಬರಲು ಬಸ್ಸುಗಳಿಲ್ಲದೇ ಊರನ್ನೂ, ನನ್ನನ್ನೂ ಶಪಿಸುತ್ತಾ ವಾಪಾಸು ಹೋಗಿದ್ದರು. ಒಂದು ವಾರದಲ್ಲೇ ಮಗಳನ್ನು ಹಾಳು ಬಾವಿಗಾದರೂ ದೂಡೇವು, ನಿಮಗೆ ಕೊಡೊಲ್ಲ ಎಂಬ ಒಕ್ಕಣೆ ತಲುಪಿತು.

ಅಪ್ಪಿತಪ್ಪಿ ಮಿಡ್ನಾಪುರಕ್ಕೆ ಬಂದ ಇನ್ನೊಬ್ಬ ವಧುವಿನ ಕಡೆಯವರು ಇಲ್ಲಿನ ನೀರಿನ ಬವಣೆ ನೋಡಿ, ತಮ್ಮ ಮಗಳು ಪರದಾಡಬೇಕಾದ ಸ್ಥಿತಿ ನೆನೆದು ನನ್ನೆದುರಿಗೇ ಸಂಬಂಧ ಬೇಡ ಎಂದು ತಾರಮ್ಮಯ್ಯ ಆಡಿಸಿ ಹಿಂದಿರುಗಿದ್ದರು. ನನ್ನ ದೇಹ ಹಿಡಿಯಾಗಿತ್ತು.

ಹಂಗಂತ, ಇದು ನನ್ನೊಬ್ಬನ ಅನುಭವ ಮಾತ್ರ ಆಗಿರಲಿಲ್ಲ. ಇಡೀ ಮಿಡ್ನಾಪುರದವರ ಹಣೇಬರಹ ಹೀಗೇ ಬರೆದಿರಬೇಕು. ಮಿಡ್ನಾಪುರಕ್ಕೆ ಸಾರಿಗೆ ಸಂಪರ್ಕದ ಕೊರತೆಯು ಊರನ್ನೊಂದು ನೀರಿಲ್ಲದ ದ್ವೀಪದಂತೆ ಮಾಡಿದೆ. ಜೊತೆಗೆ ನೀರಿಲ್ಲದ ಪಡಿಪಾಟಲು ಸೇರಿ, ಇಲ್ಲಿನ ಹರೆಯದವರಿಗೆ ಕಂಕಣಬಲ ಕೂಡಿ ಬರದೇ ಹಾಗೆ ಉಳಿಯುತ್ತಿದ್ದಾರೆ. ಈ ವಿಚಾರದಲ್ಲಿ ಗಂಡು ಹೆಣ್ಣು ಸರಿಸಮಾನರು. ೩೦ ವರ್ಷ ದಾಟಿದ ವಧುವರರು ಈಗ ಮದುವೆಯಾಗದೇ ಉಳಿದು, ಊರಲ್ಲಿ ಅವರದೇ ಆದ ಸಂಘಗಳು ತಲೆ‌ಎತ್ತಿವೆ.

ಇಷ್ಟೆಲ್ಲಾ ಕತೆಯ ಬೆಳವಣಿಗೆಯ ನಡುವೆಯೇ ಅಧಿಕಮಾಸ ಪ್ರಾರಂಭವಾಗಬೇಕೆ! ಅಂತೂ ಒಂದಲ್ಲ ಒಂದು ಕಾರಣಕ್ಕೆ ಮದುವೆ ಮುಂದೆ ಹೋಗುತ್ತಲೇ ಇತ್ತು. ಗಂಡು ಹೆಣ್ಣು ನೋಡುವುದು ಮುಂದೆ ಬಿತ್ತು.

ಅದಾಗಲೇ ಬೇಸಿಗೆ ಕಾಲಿರಿಸಿ ನೀರಿಗಾಗಿ ವರಾತ ಪ್ರಾರಂಭವಾಗಿತ್ತು. ನೀರಿಲ್ಲದ ಬದುಕು ಬದುಕೇ ಅಲ್ಲ ಅಂತ ಕಂಡುಕೊಂಡ ಜನ ನೀರಿಗೆ ಅಡಚಣೆ ಶುರುವಾದ ಕೂಡಲೇ ಹಾಹಾಕಾರಕ್ಕೆ ಮೊದಲಾಯಿತು. ಊರ ನಡುವೆ ಕೊಳವೆ ಬಾವಿ ತೋಡಲು ಒತ್ತಾಯಿಸಿದರು. ಸರ್‍ಕಾರ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸತೊಡಗಿತು. ಜನ ಒಗ್ಗೂಡಿದರು. ನೀರಿಗಾಗಿ ಪ್ರತಿಭಟಿಸತೊಡಗಿದರು. ನನಗೂ ಉಮೇದು ಚಿಗುರಿತು. ನಮ್ಮ ಮನೆಯ ಮುಂದೆ ಬಾವಿಯಾದರೆ ನನ್ನೆಲ್ಲಾ ಬವಣೆ ಸುರಳೀತ ಆದೀತು ಎಂದುಕೊಂಡು ಅದರ ಮುಖಂಡತ್ವವನ್ನು ನಾನೇ ವಹಿಸಿದೆ. ಅಲ್ಲಿಂದಲೇ ನನ್ನನ್ನು ಜನ ನೀರಿನಿಂದ ಅಳೆಯತೊಡಗಿದ್ದೂ ವಿಚಿತ್ರ ‘ಏಳು ಕೆರೆಯ ನೀರು ಕುಡಿದವ’, ‘ನೂರು ಊರು ತಿರುವ್ಯಾಡಿ ನೀರು ಕುಡಿದವ’ ಎನ್ನುವ ವಿಶೇಷಣಗಳು ಸೇರಿಕೊಂಡವು. ಈಗಂತೂ ಕುಡಿಯಲು ಕುಡಿಸಲು ಒಳ್ಳೆಯ ನೀರಿಲ್ಲದಿದ್ದರೂ, ಹಿಂದೊಮ್ಮೆ ನಾನು ಜನರಿಗೆ ಸಾಕಷ್ಟು ನೀರು ಕುಡಿಸುವ ಕಾಯಕ ಮಾಡಿದವನಿದ್ದೇನೆ.

ಕೊನೆಗೂ ಸರ್‍ಕಾರ ಧರಣಿಗೆ ಮಣಿದು, ಕೊಳವೆ ಬಾವಿ ಮಂಜೂರು ಮಾಡಿತು. ಅಲ್ಲಿಂದಲೇ ಹೊತ್ತಿಕೊಂಡಿತು ರಾಜಕೀಯ, ಬಾವಿ ನಮ್ಮ ಮನೆ ಮುಂದೆ ಬರಲಿ ಎಂದರೆ, ಊರ ಗೌಡ ಗೌಡರ ಓಣಿಯಾಗ ಆಗಲಿ ಎಂದ ಕೆಲವರು ದಲಿತರ ಕೇರೀಲಿ ಇರಲಿ ಎಂದರೆ, ಕೆಳಗೇರಿಯವರು ನಮ್ಮಲ್ಲಿ ಆಗಲಿ ಎಂದರು. ಕೆಳಗೇರಿ ಅಂದರೆ ಕೊಳಚೆಗೆ ನಾವು ಬರೋಕಾಗಲ್ಲ ಅಂದರು ಮೇಲಿನ ಕೇರಿಯವರು. ಬ್ರಾಂಬ್ರ ಓಣಿಯಾದ್ರೆ ಸ್ವಚ್ಛ ಇರುತ್ತೆ ಎಲ್ಲರೂ ಬರಬಹುದು, ಯಾವ ಸಮಸ್ಯೆಯೂ ಇರೊಲ್ಲ. ಹೀಗೆ ವಾದ ವಿವಾದ ಊರಿಡೀ ತೂರಾಡುತ್ತಿರುವಾಗಲೇ ಅಕಾಲಿಕ ಮಳೆ ಬಿತ್ತು. ಆದಾಗಲೇ ಮಂಜೂರಾದ ಹಣವನ್ನು ಬೇರೆ ಬಾಬತ್ತಿಗೆ ವರ್‍ಗಾಯಿಸಲಾಯಿತು.

ಒಂದೇ ವರ್ಷದಲ್ಲಿ ಎರಡು ಬಾರಿ ಮೂರು-ಮೂರು ಬಾವಿಗಳಿಗೆ ಮಂಜೂರಾತಿ ದೊರೆತರೂ ಬಾವಿ ತೋಡಲಾಗಿರಲಿಲ್ಲ. ಇಲ್ಲಿ ಕೆಳಗೇರಿಯವರಿಗೆ ಕೊಟ್ಟರೆ ಮೇಗೇರಿಯವರು ಸಹಿಸುತ್ತಿರಲಿಲ್ಲ. ಬ್ರಾಂಬು ವಿರೋಧ ಪಕ್ಷಕ್ಕೆ ಓಟು ಕೊಟ್ಟು ಗೆಲ್ಲಿಸಿದ್ದಾರೆ. ಅವರಿಗೆ ಹೇಗೆ ಕೊಡಲಾದೀತು – ಹೀಗೆ ಒಳಹಿಕಮತ್ತು ಯಾರಿಗೂ ಗೊತ್ತಾಗಲಿಲ್ಲ. ಎಲ್ಲೆಲ್ಲೂ ರಾಜಕೀಯವೇ ತುಂಬಿಕೊಂಡು ಮಿಡ್ನಾಪುರವೆಂಬ ಹೋಬಳಿ ತೆರೆದಿಟ್ಟ ಪುಸ್ತಕ ಅನ್ನೋದು ಸುಳ್ಳಾಯಿತು. ಆದರೂ ರಹಸ್ಯಕ್ಕೆ ಬಯಲಾಗಬೇಕೆಂಬ ತವಕ ಇರೋದು ಸಹಜ. ಹಾಗೆ ಬಯಲಾದ ರಾಜಕೀಯ ಅಡ್ಡಿಗಾಲು ಸರಿಪಡಿಸಲಾಗಿ, ಒಳ್ಳೇ ಮಳೆಗಾಲದಲ್ಲೇ ನಮ್ಮ ಮನೆಯ ಮುಂದೆ ಕೊಳವೆಬಾವಿ ಕೊರೆಸಲಾಯಿತು. ಸಾಕಷ್ಟು ನೀರು ಬಿದ್ದು ಕೊರತೆ ನೀಗಿದ್ದು ನನಗಂತೂ ಖುಷಿ ಕೊಟ್ಟಿತ್ತು. ಅದರ ಹಿಂದೆ ಮದುವೆ ಸಲೀಸಾಗಿ ಸಾಗೀತು ಅನ್ನೋ ಇರಾದೆಯೂ ಸೇರಿಕೊಂಡಿತ್ತು.

ಮೊದಮೊದಲಿಗೆ ಊರಿಗೆ ಸರಿಯಾದ ಬಸ್ ಸೌಕರ್‍ಯಗಳಿಲ್ಲದೇ ನನಗೆ ಮದುವೆ ಕೂಡಿ ಬಂದಿರಲಿಲ್ಲ. ನಂತರ ನೀರಿಲ್ಲದ ಊರು ತೊಡಕಾಗಿ ಕಾಡಿತ್ತು.

ಈಗ ಬಾವಿ ರಾಜಕೀಯಕ್ಕೆ ಇಳಿದದ್ದು ‘ಮರಿಪುಡಾರಿ’ ಅಂತ ಕರೆಸಿಕೊಳ್ಳಲು ಸಂಬಂಧ ಇಟ್ಟುಕೊಂಡವರೆಲ್ಲ ಊರೊಳಗಿನ ಗಾಳಿಯಲ್ಲಿ ಹಾಗೆ ತೂರಿಸಿದ್ದೂ ಕಾರಣವಾಯಿತು. ನೋಡಿದ ನೆಂಟಸ್ತಿಕೆಗಳೆಲ್ಲ ಕೈತಪ್ಪಿ ಮದುವೆ ಮುಂದೂಡುತ್ತಲೇ ಹೋಯಿತು.

ಈ ನಡುವೆ ನೋಡಿದ ಒಬ್ಬ ಹುಡುಗಿ ಬಡವರಾಗಿದ್ದು, ಸಾಧಾರಣ ಇದ್ದರೂ ಒಪ್ಪಿಗೆ ಆಯಿತು. ಒಪ್ಪಿಗೆ ಏನು ಬಂತು? ಮದುವೆ ಅಂತಹ ಆಗಿದ್ರೆ ಸಾಕಿತ್ತು. ಪಾಲಕರು ಬಂದು ಮನೆ ವಾತಾವರಣ ನೋಡಿ ಹೋದರು. ಬಯಲು ಸೀಮೆಯಾದರೂ ಮನೆ ಮುಂದೆ ಬಾವಿ ಇದೆ. ಉಣ್ಣಲು ಉಡಲು ತಕ್ಕ ಆದಾಯವಿದೆ. ಮಳೆಗಾಲವಾದ್ದರಿಂದ ನಲ್ಲೀಲೂ ನೀರು ಗದಗುಟ್ಟುತ್ತಿತ್ತು. ಕಂಕಣಬಲವೂ ಕೂಡಿ ಬಂದಿತ್ತೇನೋ! ಯಾಮಾರಿಸಿ ಮದುವೆಗೆ ಒಪ್ಪಿದವರು ಹುಡಿ ಹಾರಿಸಿಬಿಟ್ಟರು.

-ಹೀಗೆ ಮನೆಯನ್ನು ತುಂಬಿದವಳು ಮನವನ್ನು ತುಂಬಿದಳು. ಒಂದೆರಡು ಯಾತ್ರಾ ಸ್ಥಳಗಳಿಗೆ ಕರೆದುಕೊಂಡು ವಿಹರಿಸಿದೆ. ಖುಷಿ ಪಟ್ಟಳು. ಆದರೆ ಆ ಖುಷಿಯು ಅಲ್ಪಾಯುಷಿ ಅನ್ನೋದು ಸ್ವಲ್ಪ ದಿನಗಳಲ್ಲಿ ಗೊತ್ತಾಯಿತು.

ಮೊದಲಿಗೆ ನಲ್ಲಿಯ ಕಿವಿಯನ್ನು ಎಡಕ್ಕೂ ಬಲಕ್ಕೂ ಹಿಂಡಿ ‘ಕುಲ್ ಜಾ ಸಿಂದ್‌ಸಿಂದ್‌’ ಅನ್ನದಿದ್ದರೂ ನೀರು ಸುರೀತಿತ್ತು. ಬರಬರುತ್ತಾ ಏದುಸಿರು ಬಿಟ್ಟು ನೀರು ಹೊರಹಾಕ ತೊಡಗಿದಾಗ ನಲ್ಲೀಲಿ ಒಂದೊತ್ತು ನೀರು ಕಾಣೋದು ವಜ್ಜೀ ಆಯಿತು. ನೀರಿಲ್ಲದ ಬದುಕಿಗೆ ನನ್ನವಳು ಹೊಂದಿಕೊಳ್ಳಲೇ ಇಲ್ಲ. ಮಲೆನಾಡಿನ ಕೆರೆಯೊಳಗೆ ದಿನಾ ಮುಳುಗಿ ಏಳುತ್ತಿದ್ದವಳಿಗೆ ಬೊಗಸೆಯಿಂದ ಮೈ ಹಸಿಮಾಡಿಕೊಂಡು ಒರೆಸಿಕೋ ಎಂದರೆ ಹ್ಯಾಗಾಗಿರಬೇಡ? ಆಕೆಗೆ ಒಗ್ಗದ ಪಡಿಪಾಟಲು ಹೇಳತೀರದು. ನಾನಂತೂ ಎರಡು ದಿನಗಳಿಗೊಮ್ಮೆ ನೀರು ಬಿಟ್ಟರೂ, ನೀರು ಬಂದ ದಿನ ಲೆಕ್ಕಕ್ಕೊಂದು ಜಳಕ ಮಾಡೋದನ್ನ ಮೈಗೂಡಿಸಿಕೊಂಡಿದ್ದೆ. ಆದರೆ ಆಕೆಯ ಕಿರಿಕಿರಿ ಅಂಟುಜಾಡ್ಯವಾಗಿ ನನಗೂ ನಿಧಾನ ಇರಲಿಲ್ಲ.

ದಿನಗಳದಂತೆ ಕುಡಿಯಾಕೂ ನೀರಿಲ್ಲದಾದಾಗ ನಲ್ಲೀಲಿ ಅಪ್ಪಿತಪ್ಪಿ ನೀರು ಬಂದರೆ ‘ಲಾಟರಿ ಹೊಡದಾಂಗ’ ಅನ್ನಾಕ ಹತ್ತಿದರು ಜನ. ಇಷ್ಟಾದರೂ ಮಿಡ್ನಾಪುರದ ಜನಕ್ಕೆ ನೀರಿನ ಬೆಲೆ ಗೊತ್ತಾಗಿದೆ ಅಂದುಕೊಂಡರೆ ನಾವು ನೀವು ತಪ್ಪು ತಿಳಿದುಕೊಂಡ ಹಾಗೆ. ಯಾಕಂದರೆ ತಮ್ಮ ಮನೆಗೆ ಸಾಕಾದ ಮೇಲೂ ತಿರುಪುಗಳಿಲ್ಲದ ನಲ್ಲಿಯನ್ನು ಬಂದು ಮಾಡುವ ಗೋಜಿಗೂ ಹೋಗುವುದಿಲ್ಲ. ಚರಂಡಿಗೋ, ರಸ್ತೆಗೋ ಹರಿಸುವ ಈ ಅನಾಗರಿಕರಿಗೆ ಇನ್ನೊಬ್ಬರ ಗೊಡವೆ ಬೇಕಿಲ್ಲ. ಹಾಗೆ ಯೋಚಿಸಿದವರೂ ಅವರಲ್ಲ!

ನಾನು ಮಿಡ್ನಾಪುರಕ್ಕೆ ಬಂದ ಹೊಸದರಲ್ಲಿ ಕಲ್ಲಿನ ತೇರು ಎಳೆದೀತಲೇ, ಕಲ್ಲಿನ ಕೋಳಿ ಕೂಗೀತಲೇ, ನೀರನ್ನ ರೊಕ್ಕಕ್ಕ ಮಾರಾರಲೇ’ ಎಂದು ಕಾಲಜ್ಞಾನದವನು ಬೀದಿ ಬೀದಿ ಸುತ್ತುತ್ತಾ ಹೇಳುತ್ತಿದ್ದ. ಜನರು ‘ಅವಗ ಹುಚ್ಚು ಹಿಡದುತಿ’ ಎಂದು ಲೇವಡಿ ಮಾಡುತ್ತಿದ್ದರು. ಕಲ್ಲಿನ ಕೋಳಿ ಕೂಗುತ್ತೋ ಇಲ್ಲೋ ಗೊತ್ತಿಲ್ಲ, ಆದರ ಒಂದಂತೂ ನಿಜವಾಯಿತು. ಒಂದು ಬಾಟ್ಲಿ ನೀರಿಗೆ ೧೪ ರೂ. ಬಂಡಿಗೆ ೨೫ ರೂ. ಹಾಗೆಯೇ ಪುರಸಭೆಯ ನೀರು ಬಿಡೋನಿಗೂ ಬೇಸಿಗೆಯೊಳಗೆ ಪ್ರತಿ ಓಣಿಯಿಂದ ೫೦೦ ಕಲೆಸಿ ಕೊಟ್ಟರಷ್ಟೇ ಅಷ್ಟೋ ಇಷ್ಟೋ ನೀರು ಕಾಣಬಹುದು. ಇಲ್ಲದಿದ್ದರೆ ಅದೂ ಇಲ್ಲ. ನೀರು ಈಗ ಪುಕ್ಕಟೆ ಸಿಗೋ ವಸ್ತುವಾಗಿ ಉಳಿದಿಲ್ಲ.

ಮಿಡ್ನಾಪುರಕ್ಕೆ ಯಾವುದೇ ನದಿ ಅಂಟಿಕೊಂಡಿಲ್ಲ. ಮಾನವ ತನ್ನ ಹುಟ್ಟಿನೊಂದಿಗೆ ನೀರಿನ ಅನಿವಾರ್‍ಯತೆಯನ್ನು ಕಂಡುಕೊಂಡನು. ಹಾಗಾಗಿ ನಾಗರಿಕತೆ ನದೀ ತೀರದಲ್ಲಿ ಉಗಮವಾಯಿತು. ಒಂದೆಡೆ ನೆಲೆನಿಂತ ಮಾನವ ಸಂಸ್ಕೃತಿಗಳ ಹುಟ್ಟಿಗೆ ನಾಂದಿ ಹಾಡಿದ. ನೀರಿನ ಆಸರೆಗಾಗಿ ಅದನ್ನು ಪವಿತ್ರ ಎಂದು ತಿಳಿದು ಪೂಜಿಸತೊಡಗಿದ. ಕ್ರಮೇಣ ನಾಡು ಬಯಲಾದದ್ದು ಇತಿಹಾಸಗಳಿಂದ ತಿಳಿಯುತ್ತದೆ. ಇಷ್ಟಾದರೂ ಮನುಷ್ಯ ಪಾಠ ಕಲಿಯಲಿಲ್ಲ. ನಾವಂತೂ ಹೋಗಿ ಹೋಗಿ ನೀರಿಲ್ಲದ ಈ ಒಣ ನೆಲದಲ್ಲಿ ನೆಲೆನಿಂತಿದ್ದು ನಮ್ಮ ಜಾಣತನವನ್ನು ಒರೆಗೆ ಹಚ್ಚಿದಂತಾಗಿತ್ತು.

ಮನೆ ಮುಂದೆ ಕೊಳವೆ ಬಾವಿ ತೆಗೆಸಿದರು ಎಂದು ಹಿಂದೆ ಹೇಳಿದ್ದೆನಲ್ಲ. ಇನ್ನೂರು ಅಡಿ ಆಳ ತೋಡಿಸಿದ್ದರು. ನೀರಿನ ಸೆಲೆ ಸಾಕಷ್ಟಿತ್ತು. ಕೈಪಂಪು ಕೂರಿಸುತ್ತಿದ್ದಂತೆಯೇ ಮುಕರಿದ್ದ ಜನ ‘ನಾಳೆಯಿಂದ ಇಡೀ ಸಮಾಜವೇ ವ್ಯತ್ಯಾಸವೊಂದಕ್ಕೆ ತೆರೆದುಕೊಳ್ಳಲಿದೆ’ ಎಂಬ ಸಂಭ್ರಮದೊಂದಿಗೆ ಮನೆಗಳಿಗೆ ತೆರಳಿದ್ದರು. ಅದು ಮಳೆಗಾಲವಾದ್ದರಿಂದ ಮೊದಲಿಗೆ ಬದಲಾದುದೇನು ಅನ್ನೋದೇ ಅಸಲಿಗೆ ಗೊತ್ತಾಗಿರಲಿಲ್ಲ. ದಿನ ಕಳೆದಂತೆ ವಾತಾವರಣ ಯಾಕೋ ವಿಪರೀತಕ್ಕಿಟ್ಟುಕೊಳ್ಳುತ್ತಿದೆ ಅನಿಸಿ, ಬರಬರುತ್ತ ಊರಿನ ಜನರನ್ನು ಅಪರಿಚಿತ ಅನುಭವಗಳು ಕೊಂಡೊಯ್ಯತೊಡಗಿತು.

ಕೈ ಪಂಪಿನ ಸುತ್ತಲೂ ಸವಳು ನೀರು ನಿಂತು ಹಡಕು ನಾತ ಹೊಡೆಯತೊಡಗಿತ್ತು. ಇನ್ನು ಮೋಟಾರು ಹಚ್ಚಿದ್ದರೆ ವೈತರಣಿಯೇ ಹರಿದು ಅಲ್ಲಿನ ವಾಸ ನರಕವಾಗುತ್ತಿತ್ತೇನೋ! ಗಡಗಡ ಹಿಡಿ ಒತ್ತುವ ಶಬ್ದಮಾಲಿನ್ಯ ನಮ್ಮನೆಗೆ ಅನುಭವವಾಗಿ ತಲೆ ಚಿಟ್ಟು ಹಿಡೀತಿತ್ತು. ದಿನದ ಇಪ್ಪತ್ತನಾಲ್ಕು ಗಂಟೆನೂ ತಮ್ಮ ಮನೆವಾರ್‍ತೆ ನಡುವೆಯೇ ನಾ ಮೊದಲು ನೀ ಮೊದಲು ಎಂದು ಗಡಸು ನೀರಿಗಾಗಿ ಜಗಳ ಕಾಯುವುದು; ಅಲ್ಲಿಯೇ ಸ್ನಾನ; ಬಟ್ಟೆ ಒಗೆಯುವುದು, ಮೊದಮೊದಲಿಗೆ ಮುದಕೊಟ್ಟರೂ, ಕ್ರಮೇಣ ನನ್ನ ನಿರಾಸೆಗೆ ನಾಂದಿಯಾದಂತೆ ಭಾಸವಾಯಿತು.

‘ಕತ್ತೆ ಸತ್ತರೆ ಹಾಳುಗೋಡೆ’ ಎಂಬಂತೆ ಜನರಿಗೂ ದಿನಕೊಮ್ಮೆ ಬಾವಿ ಇರೋ ಚೌಕಕ್ಕೆ ಭೇಟಿ ಕೊಡದಿದ್ದರೆ ಏನೋ ಕಳಕೊಂಡಂತೆ ಚಡಪಡಿಕೆ ಇರುತ್ತಿತ್ತು. ಅದೊಂದು ವಿಹಾರಿ ಸ್ಥಳ ಅಂದುಕೊಂಡವರಿಗೆ ಕಾಲುತುರಿಸಿ ಎಳೆದೊಯ್ಯುತ್ತಿತ್ತು. ಊರಿನ ಎಲ್ಲಾ ವಿಷಯಗಳೂ ಇಲ್ಲಿ ಬಿಚ್ಚಿಕೊಳ್ಳತೊಡಗಿದವು. ಗಂಡಹೆಂಡಿರ ವೈಮನಸ್ಸು ಬೀದಿಗೆ ಬರುತ್ತಿದ್ದದ್ದು ಇಲ್ಲಿಯೇ. ಗವುಳಿ ಚನ್ನಪ್ಪನಿಗೆ ಮದ್ದಿಲ್ಲದ ಕಾಯಿಲೆ ಅಂಟಿದ್ದು ಇಲ್ಲಿಂದಲೇ ಮಂದಿ ಕಿವಿಗೆ ಹರಡಿತ್ತು. ಹೆಣವನ್ನು ಮಣ್ಣು ಮಾಡಿ ಬಂದವರಿಗೂ ಇಲ್ಲಿಯೇ ನೀರಾಗಬೇಕು. ಛೇ! ಎಷ್ಟೊಂದು ಹೇಸಿಗೆ ಜನ ಅನಿಸುತ್ತಿತ್ತು. ನನ್ನವಳಿಗಂತೂ ನೋಡಿದಾಗೆಲ್ಲ ಸೂತಕದ ಸ್ನಾನವಾದಂತೆ ಅನಿಸುತ್ತಿದ್ದದ್ದು ಆಕೆಯ ಮುಖ ಚಹರೆ ತೋರಿಸುತ್ತಿತ್ತು.

ಅತ್ತ ಕೊಳವೆ ಬಾವಿಗೆ ಕೈಪಂಪು ಕೂಡ್ರಿಸಿದ ದಿನದಿಂದಲೇ ಈ ಭಾಗದ ಮನೆ ಬಾಡಿಗೆ ಒಂದಕ್ಕೆರಡು ಏರತೊಡಗಿತ್ತು. ಏಕೆಂದರೆ ಬೇರೆಡೆ ಹಾಕಿದ ಬೋರವೆಲ್ಲುಗಳು ಯಶಸ್ವಿಯಾಗದೇ ಇದು ‘ಊರಿಗೊಬ್ಬ ಹನುಮಪ್ಪ ಚಂದ’ ಎಂಬಂತೆ ಆಗಿತ್ತು. ಅಲ್ಲದೇ ಅದು ಕೆಳಗೇರಿಗೂ ಮ್ಯಾಗೇರಿಗೂ ಸಮನ್ವಯದ ಕೊಂಡಿಯಾಯಿತು. ಯಾವ್ಯಾವುದೋ ಕೇರಿಯ ಜನ ಬಂದು ಬಾವಿಗೆ ಮುಕರಿದಾಗೆಲ್ಲ, ಕೋಟೆಯ ಜನ ತಮ್ಮಿಂದಲೇ ಊರಿನ ನೀರಿನ ದಾಹ ತೀರುತ್ತಿದೆ ಎಂಬಂತೆ ಭ್ರಮಿಸತೊಡಗಿದರು. ನೀರನ್ನು ತುಂಬಿ ಹೊತ್ತೊಯ್ಯುವವರು ತಮ್ಮನ್ನು ಧನ್ಯತೆ ದೃಷ್ಟಿಯಿಂದ ನೋಡಲಿ ಎಂದೂ ಆಶಿಸುತ್ತಿದ್ದರು. ಆದರೆ ಪುರಜನ ಯಾವುದೇ ಉಪಕಾರ ಸ್ಮರಿಸದೇ ನೀರು ಹೊತ್ತೊಯ್ಯುತ್ತಿದ್ದದ್ದು ಬೇಸರದ ಪರಮಾವಧಿಗೆ ಒಯ್ಯುತ್ತಿತ್ತು.

ನೀರಿನ ಇಷ್ಟೆಲ್ಲಾ ಒಣ ಕತೆಯನ್ನು ಓದುತ್ತಿರುವಂತೆಯೇ ಮೈಗೆ ಕಾವೇರುವ ಪ್ರಸಂಗವೂ ನಡೆದದ್ದು ಅಷ್ಟೇ ಸತ್ಯ.

ನನ್ನನ್ನು ಒಮ್ಮುಖ ಪ್ರೀತಿಸುತ್ತಿದ್ದ ಮಮತಾ ಎಂಬ ಹುಡುಗಿಯೊಬ್ಬಳಿಗೆ ‘ಮೊಗೆದಷ್ಟೂ ದಾಹ ಹೆಚ್ಚಾದಂತೆ’ ಕೈಪಂಪಿನ ಹಿಡಿಕೆ ಮೀಟಬೇಕೆಂಬ ಬಯಕ ಮೂಡುತ್ತಿದ್ದದ್ದು ಸಹಜವಾಗಿತ್ತು. ಮನೆಯ ಬಾಗಿಲು ತೆರೆದರೆ ಮೊದಲು ಕಾಣುವುದು ಕೊಳವೆಬಾವಿ, ಆ ಕ್ಷಣಕ್ಕಾಗಿ ಸದಾ ಕಾದಿದ್ದು, ಸೊಂಟಕ್ಕೆ ಪ್ಲಾಸ್ಟಿಕ್ ಕೊಡ ಏರಿಸಿ ನೀರಿಗೆ ಬರುತ್ತಿದ್ದಳು. ಇಷ್ಟೇ ಅಲ್ಲದೇ ಕೊಡಗಟ್ಟಲೆ ನೀರು ಹೊತ್ತೊಯ್ಯುವಲ್ಲಿ ಆಕೆ ಲೆಕ್ಕ ತಪ್ಪುತ್ತಿದ್ದದ್ದೂ ದಿಟ.

ಇಲ್ಲಿ ನನ್ನದು ಯಾವ ತಪ್ಪು ಇರದಿದ್ದರೂ, ನನ್ನವಳಿಗೆ ಸಂಶಯ ಹೊಗೆಯಾಡಿದ್ದು ಆಕಸ್ಮಿಕ. ಮಮತಾ ನೀರಿಗೆ ಬಂದಾಗೆಲ್ಲಾ ಮುಖ ಸಿಂಡರಿಸಿ ತುಟಿ ಮಿಣಿಮಿಣಿಸುತ್ತಿದ್ದದ್ದು ನನ್ನವಳ ದುಗುಡ ಹೊರಹಾಕುವ ಚಿನ್ಹೆಯಾಯಿತು.

ಒಂದು ದಿನ ಅದೇ ಆಗ ಕತ್ತಲಾಗಿತ್ತು. ಆ ಹುಡುಗಿಯು ನೀರಿಗೆ ಬಂದಿರಬೇಕು. ಹೆಣ್ಣು ಧ್ವನಿಯೊಂದು ‘ನಾನು ಗಂಡುಳ್ಳ ಗರತಿ, ನಿನ್ನಂಗ ಊರ ಬಸವಿ ಅಲ್ಲ ತಿಳಕೊ’ ಎಂದು ‘ಮರ್‍ವಾದೇನ ಕಾಸಿಗೆ ಪಂಚೇರು’ ಮಾಡುತ್ತಿರುವುದು ಬಾವಿ ಕಡೆಯಿಂದ ಕೇಳಿಬರುತ್ತಿತ್ತು. ಅಂದ್ಹಾಂಗ ಅದು ನನ್ನವಳ ದನಿಯೇ ಎಂಬ ಅನುಮಾನ ಕಾಡಿಸಿತು. ಆದರೆ ನಾನು ಕುಂತಲ್ಲಿಂದ ಹಣುಕಿರಲಿಲ್ಲ. ಇಲ್ಲಿ ನಿಜ ಹೇಳಬೇಕೆಂದರೆ ನಾನಾಗಲೀ, ನನ್ನವಳಾಗಲೀ ಹೇಳದೇ ಇರುವಂಥ ಕೆಲಸ ಎಂದೂ ಮಾಡಿದವರಲ್ಲ ಎಂಬುದು ಇಬ್ಬರಿಗೂ ಗೊತ್ತು.

ಹೀಗಿರುವಾಗಲೇ ಫ್ಲೋರೈಡ್ ಅಂಶ ಹೆಚ್ಚು ಇದೆ. ಈ ಬಾವಿ ನೀರನ್ನು ಬಳಸಬಾರದು ಎಂಬ ಎಚ್ಚರಿಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಛೇರಿಯಿಂದ ಬಂದಿತು. ಸಾರ್ವಜನಿಕರಿಗೆ ಊರಿಡೀ ಇರೋದು ಇದೊಂದೇ ಆಸರೆ, ಶುದ್ದೀಕರಿಸದ, ಸವುಳು ನೀರೆ ಆದರೂ ಏಕಾ‌ಏಕಿ ಬಳಕೆಗೆ ಅಯೋಗ್ಯ ಎಂದು ಬಾವಿ ಮುಚ್ಚಿಸಿದರೆ ಜನ ರೊಚ್ಚಿಗೆದ್ದಾರು ಎಂಬ ಮುಂದಾಲೋಚನೆ ಮಾಡಿದರು.

ರಿಪೇರಿ ನೆಪದಲ್ಲಿ ಆಗಾಗ ಬಾವಿಯನ್ನು ತಮ್ಮ ಉಪವೃತ್ತಿಗೆ ದಾರಿಮಾಡಿಕೊಂಡ ಪುರಸಭೆಯವರು ಈಗ ಕೊನೆಯ ಬಾರಿಗೆ ಎಂಬಂತೆ ಕೈಪಂಪು ಬಿಚ್ಚಿಸಿದರು. ಈ ಮೊದಲು ಬಾವಿ ತೆಗೆಸಿದ್ದು ೨೦೦ ಅಡಿ. ಬಿಲ್‌ ಮಾಡಿದ್ದು ೩೦೦ ಅಡಿಗೆ, ೨೦೦ ಅಡಿ ಆಳದ ಬೋರಿನಲ್ಲಿ ೧೯೦ ಅಡಿ ವರೆಗೆ ಮುಳುಗಿಸಿದ್ದ ಪೈಪನ್ನು ರಿಪೇರಿ ಮಾಡಿ ಇಳಿಸುವಾಗ ಅದನ್ನು ೧೦೦ ಅಡಿಗೆ ಇರುವಂತೆ ನೋಡಿಕೊಂಡರು.

ಕಾರ್ತೀಕ ಮಾಸ ಕಳೆಯುವುದರೊಳಗೆ ನೀರಿನ ಪಾತಳಿ ಕೆಳಹೋಗಿ ಪೈಪ ನೀರನ್ನು ತಾಕದೇ ನೀರು ಏರಲಿಲ್ಲ. ನೀರು ಬತ್ತಿದೆ’ ಎಂಬ ಘೋಷಣೆ, ಅಲ್ಲಿಂದ ಶೇಕಡಾವಾರಿನ ಮೇಲೆ ಮತ್ತೊಂದೆಡೆ ಬಾವಿ ತೆಗೆಸಿದರು. ಬರೀ ಗಾಳಿ ಬಂದಿತೇ ಹೊರ್‍ತು ನೀರು ಬರಲಿಲ್ಲ.

ನಲ್ಲೀಲಿ ಬರೋ ನೀರೂ ಕಡಿಮೆಯಾಯಿತು. ದಿನಕ್ಕೊಮ್ಮೆ ಬರುವ ನೀರಿನ ಟ್ಯಾಂಕರಿಗೆ ನೊಣಗಳಂತೆ ಮುತ್ತುತ್ತಿದ್ದರು. ಅವಸರದಲ್ಲಿ ‘ಸಿಕ್ಕವರಿಗೆ ಶಿವಾ’ ಎನ್ನುವವರು ನುಗ್ಗಿದ ನುಗ್ಗಾಟಕ್ಕೆ ನೀರು ತುಂಬಿಕೊಂಡದ್ದಕ್ಕಿಂತ ಚೆಲ್ಲಿದ್ದೇ ಹೆಚ್ಚು!

ಯಾವಾಗ ಮಾರ್ಚಿ ದಾಟಿತೋ ಮೂರು ನಾಲ್ಕು ದಿನಗಳಿಗೊಮ್ಮೆ ನಲ್ಲೀಲಿ ನೀರು ಕಾಣುತ್ತಿತ್ತು. ಅದೂ ಸೌಳು ನೀರು. ತಲೆ ಸ್ನಾನ ಮಾಡಿದರೆ ಅಂಟು ಅಂಟು. ಕುಡಿದರೆ ದಾಹ ಮತ್ತಷ್ಟು ಹೆಚ್ಚುತ್ತಿತ್ತು. ಊರ ಸುತ್ತಮುತ್ತ ಕುಡಿಯಲು ಸಿಹಿ ನೀರ ಸಿಗುತ್ತಿರಲಿಲ್ಲ. ಬಿಸಿಲ ಧಗೆ ಬೇರೆ. ಎಲ್ಲಾ ಒಟ್ಟಾಗಿ ನನ್ನವಳನ್ನು ಕೆರಳಿಸತೊಡಗಿತು. ನನ್ನ ಪಕ್ಕದಲ್ಲಿದ್ದಾಗಲೆಲ್ಲ ಮತ್ತೆ ಮತ್ತೆ ನೀರಿನ ಬವಣೆ ಹೇಳಿ ನನಗೆ ಸಿಟ್ಟು ಬರಿಸುತ್ತಿದ್ದಳು. ಪಾಪದವಳು ಎಂದೂ ಅನಿಸುತ್ತಿತ್ತು. ಹಾಗೂ ಹೀಗೂ ಒಂದೊರ್ಷ ದಿನ ದೂಡಿ ತವರಿಗೆ ಹೋಗಿ ಬರ್‍ತೇನೆ ಎಂದವಳು. ‘ಆ ನೀರಿನ ಬವಣೆ ನಮಗೆ ಬೇಡ. ನಿಮಗೇನು ಅದು ಹುಟ್ಟಿದೂರಲ್ಲ. ನೀರಿರೋ ಊರಿಗೆ ವಲಸೆ ಹೋಗೋಣ. ಅದಾಗದಿದ್ದರೆ ಬೋರ್ ಹಾಕಿಸಿ ಸ್ವಂತ ಮನೆ ಮಾಡಿದರೆ ಬರುವೆ’ ಎಂಬ ಸಂದೇಶವನ್ನು ತಲುಪಿಸಿದಳು. ತಿಂದುಡಲು ಅಡಿಯಿಲ್ಲದಿದ್ದರೂ ಸ್ವಂತ ಮನೆ ನಾನೆಲ್ಲಿಂದ ಮಾಡಲಿ?

ಬೋರ್ ಹಾಕಿಸಿದರೂ ಈ ಕಾಲದಲ್ಲಿ ನೀರಿಗೆ ಯಾವ ಗ್ಯಾರಂಟಿ? ಬಂಗಾರದ ಆಭರಣ ಬಿಟ್ಟರೆ ಅಡಿಗೆಮನೆ ಸುತ್ತ ಸುತ್ತುವ ಆಕೆಗೆ ಈ ವ್ಯವಹಾರ ಹೇಗೆ ಗೊತ್ತಾಗಬೇಕು?

ಅಂತೂ ನನ್ನಿಂದ ದೂರಾದ ಹೆಂಡತಿ ಮತ್ತೆ ಮಿಡ್ನಾಪುರಕ್ಕೆ ಬರಲೇ ಇಲ್ಲ. ನಾನಂತೂ ತಳ‌ಊರಿದ ಊರನ್ನು ಬಿಡಲಾಗದ, ಅತ್ತ ಬಿಟ್ಟು ಬಂದ ಊರನ್ನೂ ನೆಚ್ಚಿಕೊಳ್ಳದೇ ತಳಮಳದಲ್ಲಿ ಡೀಲೆಮ್ಮೆಯ ಕೋಡುಗಳಲ್ಲಿ ಒದ್ದಾಡತೊಡಗಿದೆ.

ಯಾವುದರಲ್ಲೂ ಮನಸ್ಸು ಕೊಟ್ಟು ಇರಲಾಗುತ್ತಿರಲಿಲ್ಲ. ಆಕೆಯ ಬದುಕಿನ ಮುನ್ನುಡಿ ಬರೆದ ನನಗೆ, ನನ್ನವಳು ನನ್ನ ಅಂತ್ಯ ಹಾಡಲು ನೋಡುತ್ತಿದ್ದಾಳೆಯೇ ಅನಿಸತೊಡಗಿತು. ನಾಲ್ಕಾರು ಸಂದೇಶಗಳ ರವಾನೆಯಾದರೂ ಸ್ವಾರಸ್ಯವೇ ಇರಲಿಲ್ಲ. ಮನಸ್ಸು ಹಿಡಿಯಾಗಿ ಸಿಟ್ಟಿಗೆದ್ದೆ. ನಾನು ಇಂದೇ ಅವಳ ಕೊನೆಯ ಕತೆ ಬರೆಯಬೇಕು ಅಂದುಕೊಳ್ಳುತ್ತಾ ಮನೆಗೆ ಬಂದ ಹೊಸ್ತಿಲು ದಾಟಿ ಒಳ ಬಂದರೆ ಸುಣ್ಣ ಬಣ್ಣ ಬಳಿಯುತ್ತಿದ್ದಾರೆಯೇ ಅನ್ನುವಷ್ಟು ಅವ್ಯವಸ್ಥೆ, ಸೂತಕದ ಮನೆಯಂತೆ ದಿನಾ ಅನ್ನಾಸಾರು ಉಂಡು ಉಂಡು ಬಾಯಿಯೂ ಹೀಕರಿಸಿ ಹೋಗಿತ್ತು. ರೋಸಿಟ್ಟು ಹೋದಾಗ, ಈಗಾದರೂ ಬುದ್ಧಿ ಬಂತೇ ಎಂದು ನನ್ನವಳು ಕೂಗಿಕೂಗಿ ಹೇಳಿದಂತೆ ಭ್ರಮಿಸಿದೆ. ನನ್ನದು ಒಂಥರ ವ್ಯಥೆಯಾದರೆ ಅವಳದು ಇನ್ನೊಂದು ರೀತಿಯಾಗಿ, ಇಬ್ಬರೂ ದೂರ ದೂರ ಇರೋವಾಗ ಯಾರಲ್ಲಿ ಹೇಳಿಕೊಳ್ಳುವುದು? ಹೇಳಿ ಪ್ರಯೋಜನವಿಲ್ಲ ಅನಿಸಿ ಮೌನದಲ್ಲಿ ನನ್ನೊಳಗೆ ನಾನು ಅರಸತೊಡಗಿದೆ.

ಯಾವುದನ್ನಾದರೂ ಬಿಡಬಹುದು. ಆರಸಿ ಅರಸಿ ಸಿಕ್ಕ ಹೆಂಡತಿಯನ್ನು ಬಿಟ್ಟು ಬಾಳಲಾದೀತೇ?

ಕೊನೆಗೊಂದು ದಿನ ನನ್ನ ಈ ಊರಿನ ನೀರಿನ ಋಣವನ್ನು ಕಳಚಿಕೊಳ್ಳಲು ದೃಢ ನಿರ್‍ಧಾರ ತಗೊಂಡೆ. ಮನಸ್ಸಿಲ್ಲದ ಮನಸ್ಸಿನಿಂದ ಇಷ್ಟು ವರ್‍ಷ ಬಾಳಿ ಬದುಕಿದ ನೆಲದ ಭಾವನಾತ್ಮಕ ಬಂಧವನ್ನು ದೂರ ಮಾಡಹೊರಟೆ.

ನಾನು ನಡೆದಾಡಿದೆಡೆ ಎಂದೂ ದಾರಿಯಾದದ್ದೂ ಇಲ್ಲಾಂತ ದಾರಿ ತೆರೆದೆಡ ಕಾಲು ಹಾಕಲಾದೀತೇ? ಅಂತರ್‍ಜಲ ಇಲ್ಲದ ನಾಡಿನಲ್ಲಿ ಎಲ್ಲಿಗಂತ ನಾ ಕಾಲು ಹಾಕಲಿ? ಹಾಗೆಲ್ಲಾ ಯೋಚಿಸಿ ನಿಂತ ನೀರಾದ ಬದುಕನ್ನು ಬಗ್ಗಡ ಮಾಡಿಕೊಳ್ಳಲೂ ತಯಾರಿರಲಿಲ್ಲ. ಹರಿವ ನೀರಿನ ಆಸರೆ ಸಿಕ್ಕಾಗಲೇ ನನ್ನ ಬದುಕೂ ಹರಿವ ನೀರಿನಂತಾದೀತು ಎನ್ನುವ ಆಸೆ ಚಿಗುರೊಡೆದಾಗಲೇ ನನ್ನವಳ ಅಪ್ಪನಿಗೆ ಆ ಪತ್ರ ಬರೆದದ್ದು. ನೀರಿನ ಋಣ ಇದ್ದಲ್ಲಿ ಬದುಕು ಅರಳಿಸಬಯಸಿ ಪತ್ರ ಬರೆದವನೇ ಅರಸಿ ಹೊರಟೆ ಸಮೃದ್ಧ ನೀರಿನ ಆಸರೆಯತ್ತ…?
*****
(೧೪.೦೮.೨೦೦೪)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ಹಾಡು ಹಾಡಲೇ….?
Next post ಷೇರು ಪೇಟೆ ಕುಸಿಯುತಿದೆ…

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys