ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ

ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ

ಭಾಸಕವಿಯ ‘ಪ್ರತಿಮಾ ನಾಟಕ’ದಲ್ಲಿ ಒಂದು ಅಪೂರ್ವ ಸನ್ನಿವೇಶವಿದೆ. ಭರತನು ‘ಪ್ರತಿಮಾ ಗೃಹ’ವನ್ನು ಪ್ರವೇಶ ಮಾಡುತ್ತಾನೆ. ಆ ಗೃಹದಲ್ಲಿರುವ ಒಂದೊಂದೇ ಪ್ರತಿಮೆಗಳನ್ನು ನೋಡುತ್ತಿರುವಾಗ ದಶರಥನ ಪ್ರತಿಮೆ ಕಾಣಿಸುತ್ತದೆ; ನಿಂತು ನೋಡುತ್ತಾನೆ. ಪ್ರತಿಮೆಗಳನ್ನು ತೋರಿಸುತ್ತಿದ್ದ ದೇಗುಲಿಗನನ್ನು ಕೇಳುತ್ತಾನೆ: “ಇಲ್ಲಿ ಬದುಕಿರುವವರ ಪ್ರತಿಮೆಗಳನ್ನು ನಿಲ್ಲಿಸುತ್ತಾರೆಯೇ?” ದೇಗುಲಿಗೆ “ಇಲ್ಲ” ಎಂದು ಚುಟುಕಾಗಿ ಉತ್ತರಿಸುತ್ತಾನೆ.

ಭರತನಿಗೆ ತನ್ನ ತಂದೆ ದಶರಥನ ನಿಧನದ ವಿಷಯ ಗೊತ್ತಾಗುವುದು ಹೀಗೆ. ನೇರವಾಗಿ ನಿಧನದ ಸುದ್ದಿಯನ್ನು ಮುಟ್ಟಿಸಲಾಗದ ಸನ್ನಿವೇಶವನ್ನು ಭಾಸಕವಿ ನಿರ್ವಹಿಸಿರುವ ರೀತಿ ಅನನ್ಯವಾದದು. ಇಲ್ಲಿರುವ ದಶರಥನ ಪ್ರತಿಮೆ ಭರತನಿಗೆ ತಂದುಕೊಡುವ ಅನುಭವದ ಸಂದರ್ಭವನ್ನು ಭಾಸಕವಿಯು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಿದ್ದಾನೆ. ಸತ್ತವರ ನೆನಪಿನಲ್ಲಿ ನಿಲ್ಲಿಸಿದ ಪ್ರತಿಮೆಗಳಿಗೆ ಇಲ್ಲಿ ಪ್ರತ್ಯೇಕ ‘ಗೃಹ’ವಿದೆ. ಈ ಪ್ರತಿಮೆಗಳು ಬೀದಿಗೆ ಬಂದು ಭಾವನೆಗಳನ್ನು ಕೆರಳಿಸುವ ಸಾಧನವಾಗುವುದಿಲ್ಲ; ಕೆರಳಿಸಿ ಕೈತೊಳೆದುಕೊಂಡ ಮೇಲೆ ಮರುಗುತ್ತ, ಮೌನವಾಗಿ ನಿಂತು ನಿರ್ಲಕ್ಷದ ನಲೆಗೆ ತಳ್ಳಲ್ಪಡುವ ತಳಮಳವೂ ಇಲ್ಲಿಲ್ಲ. ಮಳೆ, ಗಾಳಿ, ಧೂಳು ದುಮ್ಮಾನಗಳಿಗೆ ಸಿಕ್ಕಿ ಸೊರಗುವ ಸ್ಥಿತಿಯೂ ಇಲ್ಲ. ಯಾಕೆಂದರೆ ಇದು ‘ಪ್ರತಿಮಾ ಗೃಹ’; ಪ್ರತಿಮೆಗಳ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ವ್ಯವಸ್ಥೆಯುಳ್ಳ ಗೌರವ ಗೃಹ. ಇಲ್ಲಿ ಭರತನಿಗೆ ತನ್ನ ತಂದೆಯ ಸಾವಿನ ಸುದ್ದಿಯನ್ನು ಸೂಕ್ಷ್ಮವಾಗಿ ಮುಟ್ಟಿಸುವ ಸನ್ನಿವೇಶವನ್ನು ತಾಂತ್ರಿಕ ಕುಶಲತೆಯಲ್ಲಿ ಕಟ್ಟಿಕೊಡಲಾಗಿದೆ. ಇಂಥ ಸೂಕ್ಷ್ಮತೆ ನಮ್ಮ ಸಂದರ್ಭದ ಪ್ರತಿಮೆಗಳಲ್ಲಿ ಉಳಿದಿದೆಯೆ? ನಮ್ಮ ಬೀದಿಗಳ ಬದಿಯಲ್ಲಿ, ವೃತ್ತಗಳ ಹುತ್ತದಲ್ಲಿ ಎದ್ದು ನಿಲ್ಲುವ ಪ್ರತಿಮೆಗಳು ಜನರ ಚಿತ್ತವನ್ನೇ ಹುತ್ತ ಮಾಡುತ್ತಿವೆಯೊ? ಸೂಕ್ಷ್ಮಾನುಭವದ ಸಾಧನ ವಾಗಿವಯೊ? ಭಾವನೆಗಳ ಬಿಂಬವಾಗಿವೆಯೊ? ಹೀಗೆ ಪ್ರಶ್ನೆಗಳು ಕಾಡಿಸುವಾಗ ‘ಪ್ರತಿಮಾಗೃಹ’ದ ಸೂಕ್ಷ್ಮಾನುಭವವಂತೂ ಈ ಪ್ರತಿಮೆಗಳಿಗೆ ಖಂಡಿತ ಇಲ್ಲ ಎಂದು ಹೇಳಬೇಕಾಗುತ್ತದೆ.

ಇಂದಿನ ದಿನಗಳಲ್ಲಿ ಪ್ರತಿಮೆ ಮತ್ತು ಪ್ರತಿಷ್ಠೆ-ಸಮಾನಾರ್ಥಕ ಪದ ಮತ್ತು ಪರಿಕಲ್ಪನೆಗಳೇ ಆಗುತ್ತಿರುವುದು ಸಂಕಟದ ಸಂಗತಿ. ಪ್ರತಿಮೆಗಳನ್ನು ಪ್ರತಿಷ್ಠಾಪಿಸುವುದು ಪ್ರತಿಷ್ಠೆಯ ವಿಷಯವಾದಂತೆ, ಆದನ್ನು ಅನುಸರಿಸಿದ ಪ್ರತಿಭಟನೆಯೂ ಪ್ರತಿಷ್ಠೆಯ ಪ್ರಶ್ನೆಯಾಗುತ್ತಿದೆ.

ಕರ್ನಾಟಕದಲ್ಲಿ ಪ್ರತಿಮೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರತಿಷ್ಟಾ ಪ್ರಕರಣಗಳನ್ನು ಕಂಡಿದ್ದೇವೆ. ತಿರುವಳ್ಳುವರ್ ಪ್ರತಿಮೆಯ ಮೊದಲ ಪ್ರಕರಣ ಮರೆವಿನ ಅಂಚಿಗೆ ಸರಿಯುತ್ತಿರುವಂತೆಯೇ ಶಿವಾಜಿ ಪ್ರತಿಮೆಯ ಎರಡನೇ ಪ್ರಕರಣ ಕಾಣಿಸಿಕೊಂಡಿದೆ. ಎರಡೂ ಪ್ರಕರಣಗಳಲ್ಲಿ ಅಭಿಮಾನದ ನಕಾರಾತ್ಮಕ ನೆಲೆಗಳು ಕೆಲಸ ಮಾಡಿವೆ; ಪ್ರಜಾಪ್ರಭುತ್ವದ ಅಂತಿಮ ಗುರಿಯಾಗಬೇಕಾದ ಸಂವಾದ, ಸಾಮರಸ್ಯ ಮತ್ತು ಸಮಾನತೆಗಳನ್ನು ಅಣಕಿಸುವಂತೆ ಬೆಳೆದ, ಈ ಪ್ರಕರಣಗಳು ಕೊಳ್ಳಿ ದೆವ್ವದಂತೆ ಕಾಡುತ್ತಿವೆ. ಪ್ರತಿಮೆಗಳು ದೇವರು ಅಥವಾ ದೆವ್ವ ಎರಡೂ ಆಗದಿರಲಿ ಎಂಬುದು ನನ್ನಂಥವರ ಅಪೇಕ್ಷೆ. ಪ್ರತಿಮೆಗಳನ್ನು ದೇವರನ್ನಾಗಿ ಮಾಡುವ ಜನರು ಅವುಗಳನ್ನು ದೇವರಂತೆಯೇ ದೂರವಿಟ್ಟು ಯಾಂತ್ರಿಕ ಭಕ್ತಿಯ ಪ್ರದರ್ಶನದಲ್ಲಿ ಕೈ ತೊಳೆದುಕೊಳ್ಳುವ ಅಪಾಯವಿರುತ್ತದೆ. ಇಲ್ಲದಿದ್ದರೆ ದೇವರು ಮೈಮೇಲೆ ಬಂದಂತೆ ಆಡುತ್ತ ಮೈಮರೆಯುವ ಸಂದರ್ಭ ಎದುರಾಗುತ್ತದೆ. ಹೀಗಾಗಿ ಪ್ರತಿಮೆಗಳು ‘ಬಯಲಿಗೆಳೆದ ಭಕ್ತಿ ಪ್ರದರ್ಶನ’ಗಳಾಗಿಬಿಡುತ್ತವೆ. ‘ಭಕ್ತಿ ಎಂಬುದು ತೋರಿ ಉಂಬ ಲಾಭ’ ಎಂಬ ಅಲ್ಲಮ ಪ್ರಭುವಿನ ಮಾತು ಸಮಕಾಲೀನ ಸಂದರ್ಭದಲ್ಲಿ ಶ್ರೀರಾಮನಿಂದ ಹಿಡಿದು ಎಲ್ಲ ಪ್ರತಿಮೆಗಳ ಪ್ರತಿಷ್ಠೆಗೆ ಸಲ್ಲುವ ವ್ಯಾಖ್ಯಾನವಾಗಿಬಿಡುತ್ತದೆ. ಇನ್ನು ನಿರ್ದಿಷ್ಟ ಪ್ರತಿಮೆಯ ಎರೋಧಿಗಳಿಗೆ ಆಯಾ ಪ್ರತಿಮೆ ದೇವರಾಗಿ ಕಾಣಲು ಸಾಧ್ಯವಿಲ್ಲ.

ಸತ್ಯ ಸಂಗತಿಯಂದರೆ, ಯಾವ ಪ್ರತಿಮೆಯೂ ತನಗೆ ತಾನೇ ದೇವರಾಗಿ ಇರುವುದಿಲ್ಲ; ದೆವ್ವವೂ ಆಗಿರುವುದಿಲ್ಲ. ಸಂಬಂಧಪಟ್ಟವರು ‘ಸೃಷ್ಟಿಸುವ’ ಸಂದರ್ಭಗಳು ಬಡಪಾಯಿ ಪ್ರತಿಮೆಗಳನ್ನು ದೇವರಾಗಿ, ದೆವ್ವವಾಗಿ, ಪರಿವರ್ತಿಸುತ್ತವೆ.

ಸರಿಯೋ ತಪ್ಪೋ, ಕರ್ನಾಟಕದ ಮುಂಚೂಣಿ ಕನ್ನಡಿಗರಲ್ಲಿ ಅನ್ಯಭಾಷಿಕರ ‘ಪ್ರಾಬಲ್ಯ’ದ ಬಗ್ಗೆ ಅಸಹನೆ ಬೆಳೆಯುತ್ತಿರುವ ಸಂದರ್ಭದಲ್ಲಿ ರಾಷ್ಟ್ರಪ್ರೇಮದ ಹೆಸರಿನಲ್ಲಿ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸುವ ಅಗತ್ಯವಿರಲಿಲ್ಲ. ಅದರಲ್ಲೂ ಹಿಂದೆ ತಿರುವಳ್ಳುವರ್ ಪ್ರತಿಮೆಯ ಪ್ರಕರಣ ಉಂಟುಮಾಡಿದ ವಿವಾದವನ್ನು ನೆನೆದಾದರೂ ಪ್ರತಿಮೆ ಮತ್ತು ಪ್ರತಿಷ್ಠೆಗೆ ನಂಟು ಬೆಳಸ ಬೇಕಾಗಿರಲಿಲ್ಲ. ಕನ್ನಡ ಪರವಾಗಿ ಹೋರಾಟ ಮಾಡುತ್ತಿರುವವರಿಗೆ ಪ್ರತಿಮೆಗಳು ಮಾತ್ರವೇ ಪ್ರತಿಷ್ಠೆಯ ಪ್ರಶ್ನೆಯಾಗಬಾರದೆಂಬ ಖಚಿತ ಅಭಿಪ್ರಾಯವನ್ನು ಹೊಂದಿರುವ ನಾನು, ದೇಶದಲ್ಲಿ ಬೆಳೆಯುತ್ತಿರುವ ಪ್ರಾದೇಶಿಕ ಅಸಮತೋಲನ ಮತ್ತು ಅಸಹನೆಗಳ ಹಿನ್ನಲೆಯಲ್ಲಿ ಇಂಥ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ತಿರುವಳ್ಳುವರ್ ಮತ್ತು ಶಿವಾಜಿ ಪ್ರತಿಮೆಯ ವಿರೋಧವೊಂದೇ ಕನ್ನಡಾಭಿಮಾನವನ್ನು ಪ್ರಕಟಿಸುವ ಸಾಧನವಲ್ಲವೆಂಬುದು ನಿಜ. ಆದರೆ ಪ್ರತಿಮೆಗಳ ಪ್ರತಿಷ್ಟಾಪಕರು ಭಾಷೆ ಮತ್ತು ಸಂಸ್ಕೃತಿ ಪ್ರಜ್ಞೆಯನ್ನು ಪ್ರದರ್ಶನದ ಮಟ್ಟಕ್ಕೆ, ಸ್ಥೂಲ ಸಂಕೇತದ ಮಟ್ಟಕ್ಕೆ ಇಳಿಸುತ್ತಿದ್ದಾರೆ. ಇದಕ್ಕನುಗುಣವಾಗಿ ಪ್ರತಿಭಟನೆಯ ಸ್ವರೂಪವೂ ಸ್ಥೂಲ ಸಂಕೇತದ ನೆಲೆ ಪಡೆಯುತ್ತದೆ. ಆದ್ದರಿಂದ ಕನ್ನಡಿಗರ ಪ್ರತಿಭಟನೆಗೆ ಇರುವ ಮಿತಿಗಳನ್ನು ಮಾತ್ರ ತಿಳಿಸಿ ಪ್ರತಿಮೆ ಸ್ಥಾಪನೆಯ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ನೆಲೆಗಳನ್ನು ಬಯಲಿಗೆಳೆಯದೆ ಇರುವುದು ತಪ್ಪಾಗುತ್ತದೆ.

ಇನ್ನೊಂದು ವಿಷಯ : ಬೆಂಗಳೂರು ನಗರದಲ್ಲಿ ಗಾಂಧೀಜಿ, ಅಂಬೇಡ್ಕರ್, ನೆಹರೂ ಮುಂತಾದ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದಾಗ ಕನ್ನಡಿಗರು ವಿವಾದವುಂಟುಮಾಡಿಲ್ಲ ಎಂಬುದನ್ನೂ ಇಲ್ಲಿ ಸ್ಮರಿಸಬೇಕು. ಈಗಲೂ ಸಾಮಾನ್ಯ ಕನ್ನಡಿಗನಿಗೆ ಶಿವಾಜಿ ಪ್ರತಿಮೆಯ ವಿವಾದ ತಟ್ಟುವುದು ಕಡಿಮೆ. ಈ ಅರ್ಥದಲ್ಲಿ ಸಾಮಾನ್ಯ ಕನ್ನಡಿಗರಿಗೆ ಇರುವ ಬದುಕಿನ ಹೋರಾಟ ಮತ್ತು ಜೀವನ ಪ್ರೀತಿಯ ಎದುರು ಈ ಪ್ರತಿಮೆಗಳು ಗೌಣವಾಗಿಬಿಡುತ್ತವೆ. ಕೋಟ್ಯಾಂತರ ಕನ್ನಡಿಗರ ಮೂಲಭೂತ ಸಮಸ್ಯೆಗಳು, ಕಚ್ಚಿ ತಿನ್ನುವ ಕರಾಳ ಹುತ್ತಗಳು ಬೇರೆಯೇ ಇರುವಾಗ ವೃತ್ತ, ಹುತ್ತದಲ್ಲಿ ಹುಟ್ಟುವ ಕೃತಕ ಪ್ರತಿಮಾ ಪ್ರಕರಣಗಳು ಅಂತರಂಗವನ್ನು ಕಾಡಿಸುವುದಿಲ್ಲ. ರಾಷ್ಟ್ರಪ್ರೇಮದ ಹೆಸರಿನಲ್ಲಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪಿಸಿದಾಗ ರಾಷ್ಟ್ರ ಪ್ರೇಮ ಬೆಳೆಯುವುದಕ್ಕೆ ಬದಲಾಗಿ ಬರಡಾಗುವುದೇ ಹೆಚ್ಚು. ಅಂತೆಯೇ ಪ್ರತಿಮೆಗಳು ಕನ್ನಡ ಹೋರಾಟದ ಪ್ರಮುಖ ಅಸ್ತ್ರವಾಗುತ್ತ ಹೋದರೆ ನಿಜವಾದ ಕನ್ನಡ ಕಾಳಜಿಯನ್ನು ಹಿನ್ನಲೆಗೆ ಸರಿಸಿಬಿಡುವುದು ಸಾಧ್ಯ. ಅಂದರೆ ಪ್ರತಿಷ್ಟೆಗಳ ಪ್ರತಿಷ್ಠಾಪನೆ ಮಾಡುವವರು ಏಕಕಾಲಕ್ಕೆ ರಾಷ್ಟ್ರಪ್ರೇಮ ಮತ್ತು ಕನ್ನಡ ಪ್ರೇಮಗಳಲ್ಲಿ ಬಿರುಕುಂಟು ಮಾಡುತ್ತಾರೆ. ಜೊತೆಗೆ ಪರಸ್ಪರ ವಿರೋಧಿಯನ್ನಾಗಿಸುತ್ತಾರೆ, ಫೆಡರಲ್ ಪದ್ಧತಿಯನ್ನು ಒಪ್ಪಿಕೊಂಡ ನಮ್ಮ ದೇಶದ ರಾಜಕೀಯ ಸಂರಚನೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ರಾಷ್ಟ್ರ ಪ್ರೇಮದ ಪರಿಕಲ್ಪನೆ ಉಳಿಯಬೇಕು. ಪ್ರಾದೇಶಿಕತೆಯ ಮೂಲಕ ರಾಷ್ಟ್ರೀಯತೆಯನ್ನು ರಾಷ್ಟ್ರೀಯತೆಯ ಮೂಲಕ ಪ್ರಾದೇಶಿಕತೆಯನ್ನು ನೋಡುವ ಪ್ರಜ್ಞೆ ಬೆಳೆಯ ಬೇಕು. ಆದರೆ ಈ ಪ್ರತಿಮೆಗಳು ರಾಷ್ಟ್ರೀಯಪ್ರಜ್ಞೆ ಮತ್ತು ಪ್ರಾದೇಶಿಕ ಪ್ರಜ್ಞೆಗಳನ್ನು ಎದುರುಬದರಾಗಿ ನಿಲ್ಲಿಸಿ ಕದನ ಕುತೂಹಲಿಗಳಾಗುತ್ತಿವೆ. ಇಂಥ ಸನ್ನಿವೇಶ ನಿರ್ಮಾಣದಿಂದ ಫ್ಯಾಸಿಸ್ಟ್ ಪ್ರವೃತ್ತಿಗೆ ಹೆಚ್ಚು ಅನುಕೂಲವಾಗುತ್ತದೆ; ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಗುರಿಗಳಿಗೆ ವಿರುದ್ಧವಾದ ಮನಸ್ಸನ್ನು ಹುರಿಗೊಳಿಸುತ್ತದೆ. ಯಾಕೆಂದರೆ ರಾಷ್ಟ್ರ ಪ್ರೇಮ ಮತ್ತು ಕನ್ನಡ ಪ್ರೇಮಗಳು ಪ್ರತಿಮೆಗಳ ಸುತ್ತ ಗಿರಕಿ ಹೊಡೆಯುವ ಸುಳ್ಳು ಸಂಕೇತಗಳಾಗುತ್ತವೆ

ಆದ್ದರಿಂದ ನಿಜವಾದ ರಾಷ್ಟ್ರಪ್ರೇಮಿಗಳು ಪ್ರತಿಮೆಗಳ ಪ್ರತಿಷ್ಠಾಪನೆಯನ್ನಾಗಲಿ, ಮಂದಿರ-ಮಸೀದಿಗಳನ್ನಾಗಲಿ ಪ್ರಮುಖ ಪ್ರಶ್ನೆಗಳೆಂದು ಭಾವಿಸುವುದಿಲ್ಲ. ಇದನ್ನು ಮೀರಿದ ಹತ್ತಾರು ಸಮಸ್ಯೆಗಳು ಜನಸಾಮಾನ್ಯರನ್ನು ಸಂಕಟದಲ್ಲಿ ಬೇಯಿಸುತ್ತಿರುವಾಗ ಬಯಲು ಪ್ರತಿಮಗಾಗಿ ಬೆತ್ತಲಾಗುವುದು ಗೌರವವೂ ಅಲ್ಲ; ಮುತ್ಸದ್ದಿತನವೂ ಅಲ್ಲ.

ಮತ್ತೊಂದು ಅಂಶವನ್ನೂ ಇಲ್ಲಿ ಗಮನಿಸಬೇಕು. ಪ್ರತಿಮೆಗಳನ್ನು ಖಾಸಗಿಯವರು ಸ್ಥಾಪಿಸಹೊರಟಾಗ ಅಪಾರ ಹಣದ ಕೈವಾಡ ಇದ್ದೆ ಇರುತ್ತದೆ. ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸುವ ಶಕ್ತಿ ಇದ್ದವರೆಲ್ಲ ತಮಗೆ ಬೇಕಾದ ಪ್ರತಿಮೆಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಬಹುದಾಗಿದೆ. ಹಣದ ಬಲವುಳ್ಳವರು ಅಧಿಕಾರದ ಬೆಂಬಲ ಗಳಿಸುವುದು ಸುಲಭವಾಗಿರುವ ಇಂದಿನ ಸಂದರ್ಭದಲ್ಲಿ ಪ್ರತಿಮೆಗಳ ಸಾಲಲ್ಲಿ ಸ್ಥಾಪನೆಯ ಹಿಂದೆ ಖಾಸಗಿ ಬಂಡವಾಳದ ಬಲವೂ ಇದೆಯೆಂಬುದನ್ನು ನಾವು ಮರೆಯಬಾರದು. ‘ಉಳ್ಳವರು ಶಿವಾಲಯವ ಮಾಡುವರು. ಬಡವ, ನಾನೇನ ಮಾಡುವೆನಯ್ಯ’ ಎಂದ ಬಸವಣ್ಣನವರ ಮಾತನ್ನು ಪ್ರತಿಮೆಗಳ ವಿಷಯಕ್ಕೂ ಅನ್ವಯಿಸಬಹುದು. ಆದ್ದರಿಂದ ಪ್ರತಿಮೆಗಳ ವಿರೋಧ, ಉಳ್ಳವರ ಹುಸಿ ಸಂಸ್ಕೃತಿಯು ವಿರೋಧವೂ ಆಗಬೇಕು. ಆಗ ಪ್ರತಿಭಟನೆಗೆ ಫ್ಯಾಸಿಸ್ಟ್ ಪ್ರವೃತ್ತಿಯನ್ನು ಮೀರಿದ ಪ್ರಬುದ್ಧತೆ ಬರುತ್ತದೆ. ಜನಸಂಸ್ಕೃತಿಯನ್ನು ಬೆಳೆಸುತ್ತದೆ. ನೋವಿನ ಸಂಗತಿಯೆಂದರೆ ನಮ್ಮ ಸಂದರ್ಭದ ಪ್ರತಿಮೆಗಳು ಹುಸಿ ಸಂಸ್ಕೃತಿಯ ವಕ್ತಾರರಾಗುತ್ತಿವೆ. ಹೋರಾಟಗಲನ್ನು ಹಾದಿ ತಪ್ಪಿಸುತ್ತಿವೆ; ಉಳ್ಳವರ ಸಂಕುಚಿತ ಸಂಕೇತಗಳಾಗುತ್ತಿವೆ.

ಹೌದು, ಪ್ರತಿಮೆಗಳು ಸಂಕೇತ ಮಾತ್ರವಾಗುತ್ತಿವೆ. ವಾಸ್ತವವಾಗಿ ಸಂಕೇತಗಳು ಸಂಯೋಜಿತಗೊಂಡು ಪ್ರತಿಮಾರೂಪವಾಗಬೇಕು. ಇದು ಸಾಹಿತ್ಯದ ಸಂದರ್ಭದಲ್ಲಷ್ಟೇ ಒಂದು ಗುರುತರ ಗುರುತು. ಇಂಥ ಸಂಕೇತಗಳು ಬೆಳೆಯುತ್ತ ಪ್ರತೀಕವಾಗುತ್ತ ಪ್ರತಿಮಾರೂಪ ಪಡೆಯುವ ಪ್ರಕ್ರಿಯೆಯನ್ನು ಗಮನಿಸಿದಾಗ, ಯಾವುದೇ ಪ್ರತಿಮೆ ಕೇವಲ ಒಗ್ಗೂಡಿಸಿದ ಪ್ರತೀಕಪ್ರಾಯವಾದ ಪ್ರಬುದ್ಧ ಬೆಳವಣಿಗೆಯಾಗಿರುತ್ತದೆ; ಸಮೂಹ ಸಂಬಂಧವನ್ನು ಅಂತರ್ಗತ ಮಾಡಿಕೊಂಡಿರುತ್ತದೆ.

ಆದರೆ ಸರ್ಕಾರವಾಗಲಿ, ಸರ್ಕಾರದ ಒಪ್ಪಿಗೆಯಿಂದ ಖಾಸಗಿ ಶಕ್ತಿಗಳಾಗಲಿ ಸ್ಥಾಪಿಸುವ ಪ್ರತಿಮೆಗಳು ಈಗ ನಿರ್ದಿಷ್ಟ ಸಮೂಹದ ತಾತ್ಕಾಲಿಕ ತಮಣೆಗಾಗಿ ಬಳಸುವ ಸಾಧನ ಸಂಕೇತಗಳಾಗುತ್ತಿವೆ. ದಲಿತರ ಹೋರಾಟಕ್ಕೆ ಓಗೊಟ್ಟು ಸಾಮಾಜಿಕ ಪಿಡುಗುಗಳನ್ನು ಸಂಪೂರ್ಣ ತೊಡೆಯಲು ಸಾಧ್ಯವಾಗದಿದ್ದರೂ ಅಂಬೇಡ್ಕರ್ ಪ್ರತಿಮೆ ಹಾಕಿ ರಾಜಕೀಯವಾಗಿ ತಮಣೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಹಿಂದುಳಿದ ವರ್ಗಗಳು ಒತ್ತಾಯ ಹೇರುತ್ತಾ ಬಂದಾಗ ದೇವರಾಜ ಅರಸರ ಪ್ರತಿಮೆಯೂ ಸ್ಥಾಪನೆಗೊಂಡು ಸರ್ಕಾರಿ ಸಂತೋಷ ಕೊಡಬಹುದು. ಒತ್ತಾಯ ಉರಿಯಿದ್ದರೆ ಕಿತ್ತೂರು ಚೆನ್ನಮ್ಮನೂ ನಗರದ ಪ್ರತಿಮೆಯಾಗಬಹುದು. ಹೀಗೆ ಉದಾಹರಣೆಗಳನ್ನು ಕೊಡುತ್ತಾ, ಹೋಗಬಹುದು. ಆದರೆ ಸರ್ಕಾರದ ನಿಜವಾದ ಸಾಧನೆಯಿರುವುದು ದಲಿತರನ್ನು, ಹಿಂದುಳಿದ ವರ್ಗಗಳನ್ನು, ಇವರೆಲ್ಲರನ್ನೂ ಒಳಗೊಂಡ ಕನ್ನಡಿಗರನ್ನು ಸಾಮಾಜಿಕ-ಆರ್ಥಿಕ ಸಮಾನತೆಯತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಕ್ರಿಯೆಯಲ್ಲಿ ಎಂಬುದನ್ನು ಮರೆಸಿ ಪ್ರತಿಮೆಗಳ ನೆರಳಲ್ಲಿ ನಿಟ್ಟುಸಿರು ಬಿಡಲು ಅವಕಾಶ ಕಲ್ಪಿಸುವುದರಿಂದ, ಇಂಥ ಪ್ರತಿಮೆಗಳು ಸಾಧನೆಗಳಲ್ಲ: ಕೇವಲ ಸಂಕೇತಗಳು.

ಅಂದರೆ ನಾವೀಗ ಕೇವಲ ಸಂಕೇತಗಳಿಗೆ ಕಿತ್ತಾಡುತ್ತಿದ್ದೇವೆ; ಸಾಧನೆಗಾಳಿಗಲ್ಲ. ಆಳುವವರ್‍ಗಕ್ಕಾಗಲಿ, ಬಂಡವಾಳಶಾಹಿಗಾಗಲಿ, ಪುರೋಹಿತ ಶಾಹಿಗಾಗಲಿ ಬೇಕಾಗಿರುವುದು ಇದೆ. ಆದ್ದರಿಂದಲೇ ಬಂಡವಾಳಗಾರರು ತಂತಮ್ಮ ಜಾತಿಯ, ಅಥವಾ ಪ್ರದೇಶದ ಪ್ರತಿಮೆಗಳಿಗೆ ಬಂಡವಾಳ ತೊಡಗಿಸುತ್ತಾರೆ. ಪುರೋಹಿತಶಾಹಿಯು ಹುಸಿ ಭಕ್ತಿ ವಲಯಕ್ಕೆ ಒತ್ತಾಸೆಯಾಗುತ್ತದೆ. ಆಳುವ ವರ್ಗ ಆಶೀರ್ವಾದ ಮಾಡುತ್ತ, ಆರಾಮವಾಗಿ ಕಾಲ ವಂಚನೆ ಮಾಡುತ್ತದೆ.

ಜನ ಸಂಸ್ಕೃತಿಯನ್ನು ಸಂಕೇತದ ಮಟ್ಟಕ್ಕೆ ಇಳಿಸಿರುವ ಪ್ರತಿಮಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿ, ಸಮಾನತೆ, ಸಾಮರಸ್ಯ, ಸಂವಾದಗಳ ಮನುಷ್ಯ ಪ್ರೀತಿಯ ಮಾತನ್ನು ಯಾರಿಗೆ ಹೇಳಲಿ? ಸಾಕ್ಷಿಯಂತೆ ನಿಂತಿರುವ ಪ್ರತಿಮೆಗಳಿಗೇ ಹೇಳಬೇಕೆನ್ನಿಸುತ್ತದೆ: “ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ;” ಇದು ಆಗದಿದ್ದರೆ ಜನಸಾಮಾನ್ಯರಿಗೆ ಹೇಳಬೇಕೆನ್ನಿಸುತ್ತದೆ: “ಈ ಪ್ರತಿಮೆಗಳನ್ನು ಪ್ರತಿಮಾಗ್ರಹಕ್ಕೆ ಸೇರಿಸಿ.”

ಆಗ ಪ್ರತಿಮೆಗಳು ಪ್ರೀತಿಯನ್ನಷ್ಟೇ ಕಲಿಸುತ್ತವೆ.
*****
೨೦-೨-೧೯೯೪

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಅಕ್ಷಯ
Next post ಬೃಂದಾವನ

ಸಣ್ಣ ಕತೆ

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys