ನಂಗೊತ್ತಿಲ್ಲ ಸ್ವಾಮೀ

ನಂಗೊತ್ತಿಲ್ಲ ಸ್ವಾಮೀ

ಜೀವನವೆಂದರೆ ಅನುಭವಗಳ ಮಹಾ ಸಂಗ್ರಹ. ಹಲವು ನೈಜ ಘಟನೆಗಳು ನಮ್ಮ ಮೇಲೆ ಅಗಾಧ ಪರಿಣಾಮ ಬೀರಿ ಮರೆಯದ ನೆನಪುಗಳಾಗಿ ಅನುಭವದ ಖಜಾನೆಗೆ ಸೇರಿ ಹೋಗುತ್ತವೆ. ಆ ಖಜಾನೆ ತೆರೆದಾಗ ಇಂಥಾ ನೆನಪುಗಳು ಸ್ವಾರಸ್ಯಕರವಾದ ಕಥೆಗಳಾಗಿ ಮೂಡುತ್ತವೆ. ಕಥೆಗಾರನ ಖಜಾನೆ ತುಂಬ ತುಂಬಿರುವುದು ಇಂತಹ ನೆನಪುಗಳೇ.

ಬ್ಯಾಂಕಿನ ಮಾಮೂಲು ಕೆಲಸಗಳು ಕೆಲವೊಮ್ಮೆ ಬೇಸರ ತರಿಸುವುದಾದರೂ ವಿವಿಧ ರೀತಿಯ ಗ್ರಾಹಕರೊಡನೆ ವ್ಯವಹರಿಸುವಾಗ ಆಗುವ ಅನುಭವಗಳು ಸ್ವಾರಸ್ಯಕರವಾಗಿಯೇ ಇರುತ್ತವೆ.

ಬ್ಯಾಂಕು ಅಂದರೆ ಹಣದ ವ್ಯವಹಾರ- ಯಾವುದೇ ಗ್ರಾಹಕನ ಆರ್ಥಿಕ ಪರಿಸ್ಥಿತಿಯ ಸಂಪೂರ್‍ಣ ಜಾತಕ ಬ್ಯಾಂಕಿನವರಿಗೆ ತಿಳಿದಿರುತ್ತದೆ. ಗ್ರಾಹಕನ ಪ್ರಾಮಾಣಿಕತೆ, ಸತ್ಯ ಸಂಧತೆ, ನಿಯತ್ತು, ಆರ್ಥಿಕ ಅವ್ಯವಸ್ಥೆ, ಸಾಮಾಜಿಕ ಪ್ರತಿಷ್ಠೆಗಾಗಿ ಪರದಾಟ, ಮೋಸ ಮಾಡುವ ಗುಣ, ದೊಡ್ಡವರ ವ್ಯವಹಾರ, ಸಣ್ಣವರ ಪರದಾಟ ಎಲ್ಲ ವಿಚಾರಗಳು ಬ್ಯಾಂಕಿನವರಿಗೆ ಗೊತ್ತಿದ್ದಷ್ಟು ಕೆಲವೊಮ್ಮೆ ಕಟ್ಟಿಕೊಂಡ ಹೆಂಡತಿಗೂ ಗೊತ್ತಿರುವುದಿಲ್ಲ. ಬ್ಯಾಂಕರ್ ಗ್ರಾಹಕನ ಒಳ ಹೊರಗನ್ನು ಅವನ ಖಾತೆಯ ಮೂಲಕವೇ ತಿಳಿದುಕೊಳ್ಳಬಲ್ಲವನಾಗುತ್ತಾನೆ. ದೊಡ್ಡತನದ ಮುಖವಾಡ ಹಾಕಿ ಸಮಾಜವನ್ನು ಮೋಸಮಾಡಬಹುದು. ಆದರೆ ಆ ವ್ಯಕ್ತಿ ಗ್ರಾಹಕನಾಗಿರುವ ಬ್ಯಾಂಕಿನವರಿಂದ ಅವನ ನಿಜ ಪರಿಸ್ಥಿತಿ ಅಡಗಿಸಿಡುವುದು ಸಾಧ್ಯವಿಲ್ಲ. ಅದಕ್ಕಾಗಿ ಬ್ಯಾಂಕಿನವರು ತಮ್ಮ ಗ್ರಾಹಕರ ಖಾತೆಯ ಬಗ್ಗೆ ಸಂಪೂರ್‍ಣ ಗೌಪ್ಯತೆಯನ್ನು ರಕ್ಷಿಸಿಕೊಂಡು ಬರುವ ದೀಕ್ಷೆ ತೆಗೆದುಕೊಳ್ಳುತ್ತಾರೆ. ಅನಿವಾರ್‍ಯ ಕಾರಣಗಳಿಲ್ಲದೇ ಗ್ರಾಹಕನ ಬಗ್ಗೆ ಅವರು ಬೇರೆಯವರೊಡನೆ ಬಾಯಿ ಬಿಡುವುದಿಲ್ಲ.

ನಮ್ಮ ದೇಶದ ಆರ್ಥಿಕ, ರಾಜಕೀಯ ಪರಿಸ್ಥಿತಿಯೇ ವಿಚಿತ್ರ ರೀತಿಯದ್ದು. ಒಂದನ್ನು ಬಿಟ್ಟು ಒಂದಿಲ್ಲ. ಒಂದನ್ನು ನುಂಗಲು ಇನ್ನೊಂದು ಪೈಪೋಟಿ ನಡೆಸುತ್ತಲೇ ಇರುತ್ತದೆ. ಇದಕ್ಕೆ ಕಾರಣ ತಮ್ಮ ಸ್ವಾರ್ಥಕ್ಕಾಗಿ ದೇಶದ ಆರ್ಥಿಕರಂಗವನ್ನು ಉಪಯೋಗಿಸಿಕೊಳ್ಳುವ ರಾಜಕಾರಣಿಗಳು.

ಕೆಲವು ವಿತ್ತ ಮಂತ್ರಿಗಳು ತಮ್ಮ ಅಧಿಕಾರದ ಅವಧಿಯ ಕಾಲದಲ್ಲಿ ಬ್ಯಾಂಕುಗಳನ್ನು ತಮ್ಮ ವಜ್ರ ಮುಷ್ಠಿಯಲ್ಲಿ ಹಿಡಿದುಕೊಂಡು ಮುಂದೆ ಚುನಾವಣೆಯಲ್ಲಿ ಹೆಚ್ಚಿನ ಓಟುಗಿಟ್ಟಿಸುವ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡುವುದು ಎಲ್ಲರಿಗೂ ತಿಳಿದಿರುವುದೇ. ಯಾರದ್ದೋ ಹಣ ಯಾರಿಗೋ ಕೊಟ್ಟು ಜನಪ್ರಿಯತೆಯನ್ನು ಗಳಿಸುವುದು ಸಾಧ್ಯವಾಗುವುದಾದರೆ ಅವರಿಗೇನು ನಷ್ಟ?

ಕೆಲವು ವರುಷಗಳ ಹಿಂದೆ ವಿತ್ತಮಂತ್ರಿಯೊಬ್ಬರು ನಡೆಸಿದ ಸಾಲಮೇಳಗಳ ಗದ್ದಲದಿಂದ ತತ್ತರಿಸಿದ ಬ್ಯಾಂಕುಗಳು ಇಂದಿಗೂ ಚೇತರಿಸಿಕೊಳ್ಳಲು ಕಷ್ಟವಾಗಿದೆ. ಆಗ ಬರಿದಾದ ಬೊಕ್ಕಸ ತುಂಬಿಸಿಕೊಳ್ಳಲು ಬ್ಯಾಂಕಿನವರು ಈಗಲೂ ಒದ್ದಾಡುತ್ತಿದ್ದಾರೆ.

ಕೋಟಿಗಟ್ಟಲೆ ಸಾಲ ಕೊಟ್ಟು ಮತ್ತೆ ವಸೂಲಿಗಾಗಿ ಒದ್ದಾಡುವುದು ಬ್ಯಾಂಕುಗಳ ಹಣೇ ಬರಹವೇ. ಅದರ ಮಧ್ಯೆ ಈ ಚಿಕ್ಕ ಸಾಲಗಾರರು ತೆಗೆದುಕೊಂಡ ಹಣ ವಾಪಸ್ಸು ಕಟ್ಟದಾಗ ಅದರ ವಸೂಲಿಗಾಗಿ ಓಡಾಡುವುದು ದೊಡ್ಡ ತಲೆಬಿಸಿಯ ಕೆಲಸ. ಸಾಲಮೇಳದ ಕಾಲದಲ್ಲಿ ಮೇಲಿನವರ ಒತ್ತಡಕ್ಕೆ ಮಣಿದು ಸಾಲ ಕೊಟ್ಟಿದ್ದರೂ, ಕೊಟ್ಟ ಹಣ ಹಿಂದೆ ಬರುವುದೆಂಬ ನಂಬಿಕೆಯಿಂದಲೇ ಕೊಟ್ಟಿದ್ದರು. ಆದರೆ ಮಧ್ಯವರ್ತಿಗಳು ಈ ಹಣ ಹಿಂದೆ ಕೊಡಬೇಕಿಲ್ಲವೆಂದು ಹಬ್ಬಿಸಿದ ಪುಕಾರಿನಿಂದ ಸಾಲಗಾರರು ನಿಶ್ಚಿಂತರಾಗಿ ನಿದ್ದೆ ಮಾಡಿದ್ದಂತೂ ನಿಜ. ದೊಡ್ಡ ದೊಡ್ಡವರು ದೊಡ್ಡ ದೊಡ್ಡ ಮೊತ್ತ ನುಂಗಿ ಹಾಕುವಾಗ ತಮ್ಮ ಈ ಚಿಕ್ಕ ಮೊತ್ತ ಬ್ಯಾಂಕಿಗೆ ಯಾವ ಲೆಕ್ಕವೆಂದು ಯೋಚಿಸಿರಲೂಬಹುದು.

ಸ್ವಲ್ಪ ದಿನ ಸುಮ್ಮನೆ ಕುಳಿತರೂ, ಬ್ಯಾಂಕಿನವರು ವಸೂಲಿ ಮಾಡದೇ ಬಿಡುವರೇ? ಸಾಲಕೊಟ್ಟಮೇಲೆ ಅದರ ವಸೂಲಿ ಮಾಡುವುದೂ ಅವರ ಕರ್ತವ್ಯ ಮಾಡದಿದ್ದರೆ ಅವರ ಉಳಿವಿಗೇ ಸಂಚಕಾರ. ಅದನ್ನೆಲ್ಲಾ ಅನುಭವಿಸಿದವರಿಗೇ ಗೊತ್ತು.

“ಸಾಲವನ್ನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಕೇಳುವಾಗ ಕಿಬ್ಬದಿಯ ಕೀಲು ಮುರಿದಂತೆ” ಎಂಬ ಸರ್ವಜ್ಞ ಹೇಳಿದ ಮಾತು ಎಂದೆಂದಿಗೂ ಸತ್ಯ. ಬ್ಯಾಂಕಿನವರು ಎಷ್ಟೋ ಜನರ ಕಿಬ್ಬದಿಯ ಕೀಲು ಮುರಿದಂತಹ ನೋವನ್ನು ನೋಡುತ್ತಲೇ ಇರುತ್ತಾರೆ.

ಅಂದು ಸಾಲ ಮೇಳದ ಕಾಲದಲ್ಲಿ ಆಗಿನ ವಿತ್ತಮಂತ್ರಿಗಳ ಕೃಪಾಕಟಾಕ್ಷಕ್ಕೆ ಒಳಗಾಗಲು ಆರ್‍ಥಿಕವಾಗಿ ಕೆಳಮಟ್ಟದಲ್ಲಿದ್ದ ಜನರನ್ನು ಮಧ್ಯವರ್ತಿಗಳ ಮೂಲಕ ಸಂಪರ್‍ಕಿಸಿ, ಅದರ ಕೊನೆ ಉಪಯೋಗದ (End use)ಕಡೆಗೆ ಗಮನಕೊಡದೆ ಸಾಲ ಕೊಡಲು ಮುಂದಾದ ಅನೇಕರು ಬ್ಯಾಂಕಿನಲ್ಲಿ ಬಡ್ತಿಪಡೆದದ್ದೂ ಸತ್ಯ. ಜತೆಗೆ ಮಧ್ಯವರ್‍ತಿಗಳೂ ಸಾಲದ ಅರ್‍ಧಾಂಶ ತಾವು ಪಡೆದು ಅರ್‍ಧ ಸಾಲಗಾರರಿಗೆ ಕೊಟ್ಟು ತಮ್ಮ ಬೊಕ್ಕಸಗಳನ್ನು ತುಂಬಿಕೊಂಡದ್ದೂ ಸತ್ಯ.

ಪಾಪದ ಜನರೂ ಅಷ್ಟೇ, ಸುಲಭದಲ್ಲಿ ಬ್ಯಾಂಕಿನಿಂದ ಹಣಸಿಗುವುದೆಂದು ಕ್ಯೂನಲ್ಲಿ ನಿಂತು ಅಕ್ಷರ ಗೊತ್ತಿದ್ದರೆ ಸಹಿಹಾಕಿ, ಇಲ್ಲದಿದ್ದರೆ ಹೆಬ್ಬೆಟ್ಟು ಒತ್ತಿ ಸಿಕ್ಕಿದಷ್ಟು ಸಾಲ ಪಡೆದು ನಾಲ್ಕು ದಿನ ತಿಂದೋ ಕುಡಿದೋ ಉಡಾಯಿಸಿದವರೇ ಹೆಚ್ಚು. ಹಲವರಿಗೆ ಅದು ಸಾಲದ ಹಣ ಹಿಂದೆ ಕಟ್ಟಬೇಕು ಎನ್ನುವ ಸಂಗತಿಯೂ ಗೊತ್ತಿಲ್ಲ. ಹಾಗಾಗಿ ಮಧ್ಯದಲ್ಲಿ ಗುಳುಂ ಆದ ಮೊತ್ತದ ಬಗ್ಗೆ ಅವರಿಗೆ ಕಳವಳವಿರಲಿಲ್ಲ. ಸಿಕ್ಕಿದ್ದೇ ಪಂಚಾಮೃತವೆಂದು ತಮಗೆ ಬೇಕಾದಂತೆ ಖರ್‍ಚುಮಾಡಿದ್ದರು.

ಆ ರೀತಿಯಲ್ಲಿ ಕೊಟ್ಟ ಸಾಲದ ಶೇಕಡಾ ಹತ್ತರಷ್ಟು ಸರಿಯಾಗಿ ಉಪಯೋಗವಾಗಿದ್ದರೆ ಹೆಚ್ಚು ಸರಿಯಾಗಿ ಉಪಯೋಗಿಸಿ ತಮ್ಮ ಆರ್‍ಥಿಕ ಮಟ್ಟವನ್ನು ಮೇಲೇರಿಸಿಕೊಂಡ ನಿದರ್‍ಶನಗಳೂ ಇಲ್ಲದಿಲ್ಲ. ಅವರು ಸಾಲವನ್ನು ಸಕಾಲದಲ್ಲಿ ಮರುಪಾವತಿಮಾಡಿ ಬ್ಯಾಂಕಿನವರ ನಂಬಿಕೆಗೆ ಪಾತ್ರರಾಗಿ ಇನ್ನೂ ಹೆಚ್ಚಿನ ಸಾಲ ಪಡೆದು ಅಭಿವೃದ್ಧಿಯಾದದ್ದೂ ಇದೆ.

ಸಾಲಕೊಟ್ಟಕೂಡಲೇ ಬ್ಯಾಂಕಿನವರು ವಸೂಲಿಗಾಗಿ ಸಾಲಗಾರರ ಹಿಂದೆ ಅಲೆಯುವುದಿಲ್ಲ. ಸ್ವಲ್ಪ ಸಮಯಾವಕಾಶ ಕೊಟ್ಟು ಅವರಾಗಿ ಕಟ್ಟದಿದ್ದರೆ ಮತ್ತೆ ವಸೂಲಿಕಾರ್ಯಕ್ರಮಕ್ಕೆ ಕೈಹಾಕುತ್ತಾರೆ. ಇಲ್ಲೇ ಬಂದದ್ದು ಕಷ್ಟ.

ಕೆಲವು ವರುಷ ಬಿಟ್ಟು ಇನ್ನೊಬ್ಬ ಮೆನೇಜರು, ಸಾಲವಸೂಲಿಗಾಗಿ ಸಾಲಗಾರರು ಕೊಟ್ಟಿದ್ದ ವಿಳಾಸ ಹುಡುಕಿಕೊಂಡು ಹೋದರೆ ಅಲ್ಲಿ ಆ ಜನರೇ ನಾಪತ್ತೆಯಾಗಿರುತ್ತಾರೆ. ಮಧ್ಯವರ್ತಿಗಳಂತೂ ಊರು ಬಿಟ್ಟೇ ಹೋಗಿರುತ್ತಾರೆ. ಸಾಲಕೊಟ್ಟವರು ಒಬ್ಬರು; ವಸೂಲಿಗಾಗಿ ಹೋಗುವವರು ಇನ್ನೊಬ್ಬರು. ಮುಖ ಪರಿಚಯವಿಲ್ಲ. ಸಾಲಗಾರನೇ ಎದುರು ನಿಂತು ಅವನಿಲ್ಲಿ ಇಲ್ಲವೆಂದರೆ ನಂಬಲೇಬೇಕು. ಕೆಲವು ವರುಷಗಳ ಹಿಂದೆ ಅವರಿತ್ತ, ಫೋಟೋದಲ್ಲಿ ಇದ್ದ ಅವರ ರೂಪಿಗೂ ಇಂದಿಗೂ ರೂಪಿಗೂ ವ್ಯತ್ಯಾಸ ಬಹಳ ಇದ್ದು ಗುರುತಿಸುವುದೂ ಕಷ್ಟ.

ಅದರ ಮಧ್ಯೆ ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಸಾಲಮೇಳದಲ್ಲಿ ತೆಗೆದುಕೊಂಡ ಹಣ ಹಿಂದೆ ಕೊಡಬೇಕಾಗಿಲ್ಲ ಎನ್ನುವ ಭಾವನೆ ಬರುವಂತೆ ಭಾಷಣ ಬಿಗಿದಾಗ ಕೊಡಬೇಕೆಂದು ಎಣಿಸುವ ನಿಯತ್ತಿದ್ದವರೂ ಸುಮ್ಮನಾದದ್ದು ಸಹಜ. ಹೀಗೆ ನಷ್ಟವಾದದ್ದು ಬ್ಯಾಂಕುಗಳಿಗೆ, ತಲೆಬಿಸಿಯಾದದ್ದು ಸಾಲಕೊಟ್ಟ ಮೇನೇಜರಿಗೆ.

ಸಾಲಗಾರರನ್ನು ಹುಡುಕಿಕೊಂಡು ಹೋದಾಗ ಕೆಲವರು ಸಿಕ್ಕಿದರೂ ಅವರಿಗೆ ಬ್ಯಾಂಕಿನಿಂದ ತೆಗೆದುಕೊಂಡ ಸಾಲವನ್ನು ಹಿಂದೆ ಕೊಡುವ ಮನಸ್ಸಾಗಲೀ ತಾಕತ್ತಾಗಲೀ ಇರುವುದೇ ಇಲ್ಲ. ಅದರ ಬಡ್ಡಿ ಸೇರಿ ಬೆಳೆದ ಮೊತ್ತ ಹೇಳಿದಾಗ ತಾವು ಅಷ್ಟು ಹಣ ತೆಗೆದುಕೊಳ್ಳಲೇ ಇಲ್ಲವೆಂದು ಪಟ್ಟು ಹಿಡಿದವರು ಬಹಳ ಜನ. ಸರಕಾರದಿಂದ ದೊರೆತ ಸಹಾಯಧನ (Subsidy) ಅಷ್ಟೇ ಬ್ಯಾಂಕಿಗೆ ದೊರೆತ ಲಾಭ. ಬಡ್ಡಿಯ ಜತೆಗೆ ಅಸಲೇ ಇಲ್ಲ. ಇದು ಬ್ಯಾಂಕುಗಳಿಗೆ ತಾಗಿದ ಗ್ರಹಚಾರ.

ಈ ಸಾಲಮೇಳಗಳಿಂದ ಬ್ಯಾಂಕುಗಳ ಪರಿಸ್ಥಿತಿ ಕೆಟ್ಟಂತೆ, ಕೆಲವು ಮೇನೇಜರುಗಳ ತಲೆಯೂ ಕೆಟ್ಟುಹೋಗಿತ್ತು ಅಂದರೆ ಅತಿಶಯೋಕ್ತಿಯಲ್ಲ. ಸಾಲಮೇಳದ ಕಾಲದಲ್ಲಿ ಮೇಲಿನವರು ಕೊಡು ಕೊಡು ಎನ್ನುವ ಒತ್ತಡ ಹೇರಿದ್ದರು. ಈಗ ವಸೂಲಿಯಾಗದೇ ಬ್ಯಾಂಕು ನಷ್ಟ ಅನುಭವಿಸುವಾಗ ವಸೂಲಿ ಮಾಡಿ ಎಂದು ಮೇನೇಜರುಗಳ ತಲೆಯ ಮೇಲೆ ಕುಳಿತಾಗ ಸಾಲ ಕೊಡುವಷ್ಟು ವಸೂಲಿ ಮಾಡುವುದು ಸುಲಭವಲ್ಲ ಎನ್ನುವ ಕಠೋರ ಸತ್ಯದಿಂದ ಅವರು ತತ್ತರಿಸುವಂತಾಗಿತ್ತು. ಕೆಲವು ಮೇನೇಜರ್‌ಗಳು ಕೆಂಪು ಚೀಟಿ (Chargesheet) ಪಡೆದರೆ, ಕೆಲವರ ಕೆಲಸವೂ ಹೋಗಿತ್ತು. ಕೆಲವರು ಮಧ್ಯವರ್ತಿಗಳ ಜತೆಗೂಡಿ ಹಣಮಾಡಿದರೆಂಬ ಅಪವಾದಕ್ಕೂ ಒಳಗಾಗಿದ್ದರು. ಹೀಗಾದಾಗ ತಲೆ ಹಾಳಾಗದಿರಲು ಸಾಧ್ಯವಿಲ್ಲ. ಸಾಲಮೇಳಗಳನ್ನು ಮಾಡಲು ಒತ್ತಾಯಿಸಿದವರಾರೂ ಸಾಲಕೊಟ್ಟವರ ಸಹಾಯಕ್ಕೆ ಬರಲಿಲ್ಲ. ಬರಲಾರರು ಕೂಡಾ. ಅವರವರ ತಲೆಗೆ ಅವರವರ ಕೈ.

ಸ್ವಲ್ಪ ಆಸ್ತಿಪಾಸ್ತಿ ಇದ್ದವರಿಗೆ ಸಾಲಕೊಟ್ಟರೆ ಅವರು ತಪ್ಪಿಸಿಕೊಳ್ಳುವ ಹಾಗಿಲ್ಲ. ಸಾಲಕಟ್ಟದಿದ್ದರೆ ಬ್ಯಾಂಕಿನವರು ಕೋರ್ಟಿನ ಮೊರೆಹೋಗುತ್ತಾರೆ. ತಡವಾದರೂ ಸಾಲ ವಸೂಲಿಯಾಗಿಯೇ ಆಗುತ್ತದೆ, ಆದರೆ ಬಡವರ ಉದ್ಧಾರಕ್ಕೆಂದೇ ರೂಪಿಸಿದ ಸಾಲಮೇಳದಲ್ಲಿ ಸಾಲಪಡೆದವರಿಂದ ವಸೂಲಿ ಮಾಡಲು ಏನೂ ಇರುವುದಿಲ್ಲ. ಅವರ ಪರಿಸ್ಥಿತಿ ಮೊದಲಿಗಿಂತ ಕೆಟ್ಟಿರುವುದೇ ಜಾಸ್ತಿ.

ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಮಂಡ್ಯದ ಸಮೀಪದ ಹಳ್ಳಿಯೊಂದರ ಕಾಳೇಗೌಡರು ತೆಗೆದುಕೊಂಡ ಸಾಲವಸೂಲಿಯ ಕಥೆ ಹೇಳಲು.

ಕಾಳೇಗೌಡರು ಸಾಲಮೇಳದ ಗಿರಾಕಿಯಲ್ಲವಾದರೂ ಅದೇ ಸಮಯದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರಿಂದ ಹದಿನೈದು ಸಾವಿರ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಸುಮಾರು ಐವತ್ತು ಸಾವಿರ ಬೆಲೆಬಾಳುವ ತನ್ನ ಆಸ್ತಿಯನ್ನು ಅಡವಿಟ್ಟು ಸಾಲ ಪಡೆದಿದ್ದರು.

ಅವರ ಹಳ್ಳಿಯಲ್ಲಿ ಸಾಲಮೇಳದಲ್ಲಿ ಸಾಲ ಪಡೆದವರಾರೂ ಹಣ ಹಿಂದೆ ಕಟ್ಟಿರಲಿಲ್ಲ. ತಾವೂ ಕಟ್ಟಬೇಕೆಂದಿಲ್ಲ ಎನ್ನುವ ಹುಚ್ಚು ಧೈರ್ಯದಿಂದ ಮೂರು ವರುಷದ ತನಕ ಬ್ಯಾಂಕಿಗೆ ಏನೂ ಹಣ ಕಟ್ಟಿರಲಿಲ್ಲ. ಸಾಲ ತೆಗೆದುಕೊಂಡದ್ದನ್ನು ಮರೆತೇ ಬಿಟ್ಟಿದ್ದರು.

ಬ್ಯಾಂಕಿನವರು ಅವರಿಗೆ ನೋಟೀಸು ಕಳುಹಿಸುತ್ತಲೇ ಇದ್ದರು. ಹಲವಾರು ಬಾರಿ ಮನೆಗೆ ಬಂದು ಹಣಕಟ್ಟುವಂತೆ ಒತ್ತಾಯಿಸಿದ್ದರು ಕೂಡಾ. ಸಾಲ ಸ್ವೀಕೃತಿ ಪತ್ರದ ವಾಯಿದೆ ಮುಗಿಯುವುದೆಂದಾಗ ಇನ್ನೊಂದು ಸಾಲ ಸ್ವೀಕೃತಿ ಪತ್ರಕ್ಕೆ ಸಹಿತೆಗೆದುಕೊಂಡೂ ಹೋಗಿದ್ದರೂ, ಸ್ವೀಕೃತಿ ಪತ್ರದ ಕಾಲಾವಧಿ ಮುಗಿಯುವ ಒಳಗೆ ಸಾಲವಸೂಲಿ ಆಗಬೇಕು. ಆದರೆ ಗೌಡರಿಗೆ ಹಣಕಟ್ಟುವ ಮನಸ್ಸಿಲ್ಲ.

ಸಾಲಮೇಳದವರಿಗೆ ರಿಯಾಯಿತಿ ಸಿಗುವ ಸಂಭವವಿದೆಯೆಂದು ಅವರಿವರು ಮಾತಾಡುವುದನ್ನು ಗೌಡರು ಕೇಳಿಸಿಕೊಂಡಿದ್ದರು. ಹಾಗಿರುವಾಗ ತಾನು ಹದಿನೈದು ಸಾವಿರದ ಮೇಲೆ ಏಳೆಂಟು ಸಾವಿರ ಬಡ್ಡಿ ಸಮೇತ ಯಾಕೆ ಹಿಂದೆ ಕೊಡಬೇಕು ಎನ್ನುವ ಹುಚ್ಚು ಹಟ ಅವರಿಗೆ ಬಂದಿತ್ತು. ಹೀಗಾಗಿ ಸಾಲದ ಹಣ ವಾಪಾಸು ಕಟ್ಟುವ ಯೋಚನೆಗೇ ಅವರು ಹೋಗಿರಲಿಲ್ಲ.

ಪ್ರತೀ ಸಾರಿ ಬ್ಯಾಂಕಿನ ಕಾಗದ ಬಂದಾಗ ಹರಿದು ಬಿಸಾಕಿ ಯಾರಪ್ಪನ ಮನೆಗಂಟು ಹೋಯ್ತಂದು ಈ ಬ್ಯಾಂಕಿನವರು ಈ ಪಾಟಿ ಕಾಗ್ದ ಕಳಿಸೋದು. ಸರಕಾರದ ಹಣ. ಸರಕಾರವೇ ಕೇಳುವುದಿಲ್ಲ. ಇವರದ್ದೇನು ಉಡಾಫೆ? ಎಂದು ಮೀಸೆ ಮೇಲೆ ಕೈಹಾಕಿ ಹಳ್ಳಿಗರ ಮುಂದೆ ಕೊಚ್ಚಿಕೊಳ್ಳುತ್ತಿದ್ದರು. ಯಾರಾದರೂ ಬ್ಯಾಂಕ್ ಅಧಿಕಾರಿಗಳು ಭೇಟಿಯಾಗಲು ಬಂದರೆ, ಮನೆಯಲ್ಲಿದ್ದರೂ ಮನೇಲಿಲ್ಲ ಎಂದು ಹೇಳಲು ಮನೆಯವರಿಗೆಲ್ಲಾ ತಾಕೀತು ಮಾಡಿದ್ದರು.

ಬ್ಯಾಂಕಿನವರು ಕುರುಡರು. ಮನೆಯೊಳಗೆ ನುಗ್ಗಿ ನೋಡುವ ತಾಕತ್ತು ಅವರಿಗಿಲ್ಲ. ಅವರದ್ದೇ ದನ ತೋರಿಸಿ ಒಕ್ಕಲು ಹುಡುಗ ದಾಮು ದನದ ಮೇಲೆ ಸಾಲ ತೆಗೆದುಕೊಂಡದ್ದು ಅವರಿಗೆ ಗೊತ್ತಿದೆ. ಒಂದೇ ದನ ತೋರಿಸಿ ಮೂರುಜನ ಸಾಲ ತೆಗೆದುಕೊಂಡದ್ದೂ ಅವರಿಗೆ ಗೊತ್ತಿದೆ. ಮತ್ತೇಕೆ ಭಯ? ಎನ್ನುವ ಧೈರ್ಯ ಅವರದ್ದು.

ಅವರು ಸಾಲ ತೆಗೆದುಕೊಳ್ಳುವಾಗ ಆಸ್ತಿ ಅಡವಿಟ್ಟ ಪತ್ರಕ್ಕೆ ಸಹಿಹಾಕಿ ಸಾಲ ಪತ್ರಕ್ಕೆ ಸಹಿಹಾಕಿದ್ದು, ಸಾಲ ಸ್ವೀಕೃತಿಪತ್ರಕ್ಕೆ ಸಹಿಹಾಕಿದ್ದು ಎಲ್ಲವನ್ನು ಅವರು ಮರೆತೇ ಬಿಟ್ಟಿದ್ದರು.

ಬ್ಯಾಂಕಿನವರೂ ನೋಡಿದರು, ನೋಡಿದರು, ರಿಜಿಸ್ಟರ್ಡ್ ನೋಟೀಸ್, ವಕೀಲರಿಂದ ನೋಟೀಸು ಎಲ್ಲ ಕಳುಹಿಸಿದರು. ಯಾವುದಕ್ಕೂ ಗೌಡರು ಜಗ್ಗಲಿಲ್ಲ ಅವರು ಸಹಿಹಾಕಿದ ಸ್ವೀಕೃತಿ ಪತ್ರದ ಗಡುವು ಮೀರುವ ಮುನ್ನ ಬ್ಯಾಂಕಿನವರು ಕೋರ್ಟಲ್ಲಿ ಕೇಸು ದಾಖಲು ಮಾಡಿದರು.

ಆಗ ಗೌಡರು ವಕೀಲರನ್ನು ಹುಡುಕಬೇಕಾಯಿತು. ದನಂಜಯ ಅವರ ಲಾಯರಾದರು. ಗೌಡರು ವಕಾಲತಿ ಪತ್ರಕ್ಕೂ ಸಹಿ ಹಾಕಿಕೊಟ್ಟರು. ಮತ್ತೆ ಸುರುವಾಯಿತು ಕೋರ್ಟಿಗೆ ಓಡಾಟ.

ಗೌಡರ ವಕೀಲರು ಎಲ್ಲ ವಕೀಲರಂತೆ ಸುಳ್ಳು ಹೇಳಿಸುವುದರಲ್ಲಿ ನಿಸ್ಸಿಮರು. ಗೌಡರಿಗೆ ಹೇಳಿಕೊಟ್ಟರು. “ಗೌಡರೇ ಇದು ನಿಮ್ಮ ಸಹಿ ಹಿಂದೆ ಸಾಲ ತೆಗೆದುಕೊಳ್ಳುವಾಗ ಬ್ಯಾಂಕಿನಲ್ಲೂ ನೀವು ಕೆಲವು ಸಹಿ ಹಾಕಿರಬೇಕು. ಆರು ವರುಷದ ಹಿಂದೆ ಹಾಕಿದ ಸಹಿ ಹೀಗೇ ಇರುವುದು ಸಾಧ್ಯವಿಲ್ಲ. ತುಂಬಾ ಬದಲಾಗಿರುತ್ತದೆ. ಬ್ಯಾಂಕಿನ ಲಾಯರು ಏನು ಪ್ರಶ್ನೆ ಕೇಳಿದರೂ ನಾನು ಸಾಲವೇ ತಗೊಂಡಿಲ್ಲ ಅನ್ನಿ. ಅವರೇನಾದರೂ ನಿಮ್ಮ ಸಹಿ ತೋರಿಸಿ ಇದು ನಿಮ್ಮ ಸಹಿ ಹೌದೇ ಅಲ್ಲವೇ ಅಂದಾಗ ಖಂಡಿತವಾಗಿ ನಂದಲ್ಲ ಸ್ವಾಮಿ, ನಂಗೊತ್ತಿಲ್ಲ ಸ್ವಾಮಿ ಎಂದು ಮಾತ್ರ ಹೇಳಿ. ಹೆಚ್ಚಿಗೇನೂ ಮಾತಾಡಲೂ ಹೋಗಬೇಡಿ.”

ಗೌಡರಿಗೆ ಖುಷಿಯೋ ಖುಷಿ ಇಷ್ಟು ಹೇಳಲು ಏನು ಕಷ್ಟವಿದೆ. ಸಣ್ಣ ಸುಳ್ಳು ಹೇಳಿ ನನ್ನ ಹಣ ಉಳಿಸುವುದಾದರೆ ಹಾಗೇ ಹೇಳಿದರಾಯಿತು. ನಾನೇ ನನ್ನ ಸಹಿ ಅಲ್ಲವೆಂದ ಮೇಲೆ ಯಾರಾದರೂ ಹೌದೆಂದು ಹೇಗೆ ಹೇಳುತ್ತಾರೆ ಗೌಡರಿಗೆ ಹುಚ್ಚು ಧೈರ್‍ಯ.

ಮೊದಲದಿನ ಕಟಕಟೆಹತ್ತಿ ನಿಂತಾಗ ಗೌಡರಿಗೆ ಬಹಳ ಕಸಿವಿಸಿಯಾಯಿತು. ಛಿ ಹದಿನೈದು ಸಾವಿರ ಬಿಸಾಕಿ ಬಿಡಬಹುದಿತ್ತು. ಕೋರ್ಟು ಕಚೇರಿಗೆ ಇಷ್ಟು ವರುಷ ನಮ್ಮ ಹಿರಿಯರಾರೂ ಹತ್ತಿಲ್ಲ. ನನಗೇಕೆ ಬೇಕಿತ್ತು. ಈ ಅವಸ್ಥೆ ಎಂದು ಅನಿಸದಿರಲಿಲ್ಲ.

ಗೀತೆಯ ಮೇಲೆ ಕೈಯಿಟ್ಟು ನಾನು ಸತ್ಯವನ್ನೇ ನುಡಿಯುತ್ತೇನೆ. ಸತ್ಯವಲ್ಲದೆ ಬೇರೇನೂ ನುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದಾಗ ಗೌಡರಿಗೆ ತನ್ನ ಕಾಲಿನ ಬಲವೇ ಕುಸಿಯುತ್ತಿದೆ ಎಂದೆನಿಸಿತ್ತು. ಆದರೆ ಇಷ್ಟು ಆದಮೇಲೆ ಹಿಂದೆ ಹೋಗುವಂತಿಲ್ಲ.

ಬ್ಯಾಂಕಿನ ವಕೀಲರು ಕೇಳುತ್ತಿದ್ದರು.

“ನಿಮ್ಮ ಹೆಸರೇನು ಸ್ವಾಮಿ?”

“ಕಾಳೇಗೌಡ ಸ್ವಾಮಿ”

“ನಿಮ್ಮೂರು ಎಲ್ಲಾಯ್ತು ಗೌಡರೇ?”

“ಮದ್ದೂರು ಪಕ್ಕದ ಸೌದೇನಹಳ್ಳಿ ಸ್ವಾಮೀ”

“ಏನಲ್ಲಿ ಸೌದೆ ಜಾಸ್ತಿ ಮಾರ್‍ತಾರಾ?”

“ನಂಗೊತ್ತಿಲ್ಲ ಸ್ವಾಮೀ”

“ನೀವು ನಿಮ್ಮ ಗದ್ದೆಗೆ ಗೊಬ್ಬರ ಹಾಕಲು ಬ್ಯಾಂಕಿನಿಂದ ಸಾಲ ತಗೊಂಡಿದ್ದೀರಾ?”

“ಇಲ್ಲ ಸ್ವಾಮಿ”

“ಸರಿಯಾಗಿ ನೆನಪು ಮಾಡಿ ಹೇಳಿ ಗೌಡರೇ, ನಿಮ್ಮ ಹೊಲಕ್ಕೆ ದನಗಳು ನುಗ್ಗಿ ಹಾಳು ಮಾಡುತ್ತಿದ್ದಾಗ ಬೇಲಿ ಹಾಕಲೇಬೇಕೆಂದು ನಿಶ್ಚಯಿಸಿದ್ದು ಸರಿತಾನೇ?”

“ಹೌದು ಆದರೆ ನನ್ನದೇ ಹಣದಲ್ಲಿ ಬೇಲಿಹಾಕಿದೆ. ಬ್ಯಾಂಕಿನಿಂದ ಸಾಲ ತಗೊಂಡಿಲ್ಲ.”

“ಸರಿಯಾಗಿ ಯೋಚಿಸಿ ಹೇಳಿ ಗೌಡರೇ. ನೀವು ಆರು ವರುಷಗಳ ಹಿಂದೆ ಬ್ಯಾಂಕಿನಿಂದ ಸಾಲ ಪಡೆದಿದ್ದೀರಿ. ತಾವೇ ಕೊಟ್ಟೆವೆಂದು ಆಗ ಇಲ್ಲಿದ್ದ ಮೇನೇಜರು ಹೇಳಿದ್ದಾರೆ.”

“ಏನು ಹೇಳ್ತಾರೋ ನಂಗೊತ್ತಿಲ್ಲ ಸ್ವಾಮಿ. ನಾನು ಸಾಲ ತಗೊಂಡಿಲ್ಲ”

“ಬ್ಯಾಂಕಿನವರು ಸುಳ್ಳು ಹೇಳ್ತಾರೆಯೇ?”

“ನಂಗೊತ್ತಿಲ್ಲ ಸ್ವಾಮಿ”

“ನೀವು ಸಾಲ ತಗೊಂಡಿಲ್ಲವೇ?”

“ಇಲ್ಲ ಸ್ವಾಮಿ”

ಗೌಡರು ಸಹಿಹಾಕಿದ್ದ ಸಾಲದ ಪತ್ರಗಳನ್ನೆಲ್ಲಾ ತೋರಿಸಿ,

“ಇದಕ್ಕೆಲ್ಲಾ ಸಹಿ ಹಾಕಿದ್ದೀರಲ್ಲ ಗೌಡರೇ?”

“ನಾನು ಹಾಕಿಲ್ಲ ಸ್ವಾಮಿ”

“ಸರಿಯಾಗಿ ನೋಡಿ ಹೇಳಿ ಗೌಡರೇ, ಇದೆಲ್ಲ ನಿಮ್ಮ ಸಹಿಯಲ್ಲವೇ?”

“ನನ್ನದಲ್ಲ ಸ್ವಾಮಿ”

“ಮತ್ತೆ ಇಲ್ಲೆಲ್ಲ ನಿಮ್ಮ ಹಾಗೆ ಯಾರು ಸಹಿಮಾಡಿದ್ದಾರೆ ಗೌಡರೇ?”

“ನಂಗೊತ್ತಿಲ್ಲ ಸ್ವಾಮಿ”

ಗೌಡರು ಒಂದೇ ಸಮ ಪಟ್ಟು ಹಿಡಿದ ಹಾಗೆ ಕೇಳಿದ್ದಕ್ಕೆಲ್ಲ “ನಂಗೊತ್ತಿಲ್ಲ ಸ್ವಾಮಿ” ಎಂದು ಹೇಳುತ್ತಿದ್ದರು. ಬ್ಯಾಂಕಿನ ವಕೀಲರಿಗೆ ಕೇಳಿ ಕೇಳಿ ಸುತ್ತಾಗಿ ತಲೆ ಚಿಟ್ಟು ಹಿಡಿದಿತ್ತು.

ಸಾಲಕೊಡುವಾಗ ಆ ಶಾಖೆಯಲ್ಲಿದ್ದ ಮೇನೇಜರನ್ನು ಕಟಕಟೆಗೆ ಕರೆಯಲಾಯಿತು. ಗೌಡರ ಕಡೆಯ ವಕೀಲರು ಮೇನೇಜರರನ್ನು ಪ್ರಶ್ನಿಸಲು ಮೊದಲು ಮಾಡಿದರು.

“ಮೇನೇಜರೇ ನಿಮ್ಮ ಹೆಸರೇನು?”

“ಜಯರಾಮ”

“ನೀವು ಐದಾರು ವರುಷದ ಹಿಂದೆ ಮಂಡ್ಯ ಶಾಖೆಯ ಮೇನೇಜರಾಗಿದ್ದಿರಲ್ಲ.”

“ಹೌದು”

ಅದರ ಮೊದಲು ನೀವೆಲ್ಲಿದ್ದಿರಿ?”

“ಅಹಮದಾಬಾದಿನಲ್ಲಿ”

“ಅದರ ನಂತರ”

“ಬೊಂಬಾಯಿಯಲ್ಲಿ”
ಈಗ
“ಬೆಂಗಳೂರಿನಲ್ಲಿ”

“ಮಧ್ಯೆ ಸ್ವಲ್ಪ ಸಮಯಕ್ಕೆ ಮಂಡ್ಯಾಕ್ಕೆ ಬಂದಿರಿ, ಮಂಡ್ಯ ಕೃಷಿಕರ ಊರು. ನೀವು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡಿದವರು. ಕೃಷಿಕರ ಬಗ್ಗೆ ನಿಮಗೆ ಹೆಚ್ಚು ತಿಳುವಳಿಕೆ ಇರಲಿಕ್ಕಿಲ್ಲ.”

“ನಾನು ಕೃಷಿಕನ ಮಗ, ಹಾಗಾಗಿ ಕೃಷಿ ಮತ್ತು ಕೃಷಿಕನ ಬಗ್ಗೆ ತಿಳಿದಿದ್ದೇನೆ.”

ಗೌಡರ ವಕೀಲರಿಗೆ ಸ್ವಲ್ಪ ಪೆಚ್ಚಾಯಿತು. ಸುಧಾರಿಸಿಕೊಂಡು.

“ಹಾಗಾದರೆ ನೀವು ಕೃಷಿಕರಿಗೆ ಸಾಲಕೊಡಲು ಉಮೇದು ತೋರಿಸಿರಬೇಕು. ಯಾರು ಯಾರಿಗೆ ಕೊಟ್ಟಿದ್ದೀರಿ ಎಂದು ಹೇಳಬಹುದೇ?”

“ಕೊಟ್ಟಿರುವುದಕ್ಕೆ ಪುರಾವೆಗಳು ಬ್ಯಾಂಕಿನಲ್ಲಿದೆ. ಅದನ್ನು ನೋಡಿ ಹೆಸರುಗಳನ್ನು ಹೇಳಬಲ್ಲೆ.”

“ನಿಮಗೆ ಎಲ್ಲಾ ಸಾಲಗಾರರ ಮುಖ ಪರಿಚಯ ಇದೆಯೋ?”

“ಎದುರಿಗೆ ಬಂದರೆ ಗುರುತು ಹಿಡಿಯಬಹುದು”

“ಮೈಲಾರ್‍ಡ್. ಈ ವಿಚಾರವನ್ನು ಗಮನಿಸಿ. ಎದುರಿಗೆ ಬಂದರೆ ಮುಖ ಪರಿಚಯವಾಗಬಹುದು ಎನ್ನುತ್ತಾರೆ. ಇಲ್ಲವಾದರೆ ಇವರಿಗೆ ಯಾರ ಪರಿಚಯವೂ ಇಲ್ಲ. ಮೇನೇಜರ್ ಸಾಹೇಬರೇ ನಿಮ್ಮ ಮಂಡ್ಯ ಬ್ರಾಂಚು ತುಂಬಾ ಬಿಸಿ ಇರಬೇಕಲ್ಲ? ಬಂದವರನ್ನೆಲ್ಲಾ ನೋಡುವುದೂ ಕಷ್ಟ.”

“ಹಾಗೇನಿಲ್ಲ ಸಾಲಕ್ಕಾಗಿ ಬಂದವರನ್ನು ನೋಡಲೇ ಬೇಕಲ್ಲ?”

“ಹಾಗಾದರೆ ನೀವು ಎಲ್ಲ ಗ್ರಾಹಕರನ್ನು ನೋಡುತ್ತಿದ್ದಿರಿ”

“…….”

“ಹೇಳಿ ಮೇನೇಜರೇ, ನೀವು ಎಲ್ಲ ಗ್ರಾಹಕರನ್ನೂ ನೋಡುತ್ತಿದ್ದಿರಿ. ಕ್ಯೂಗಟ್ಟಲೆಯಲ್ಲಿ ಜನರು ಬಂದಾಗಲೂ ನೋಡುತ್ತಿದ್ದೀರಾ?”

“ಹೌದು”

“ಅದು ಹೇಗೆ ಸಾಧ್ಯ? ದಿನಕ್ಕೆ ನೀವು ಎಷ್ಟು ಜನರಿಗೆ ಸಾಲಕೊಡುತ್ತಿದ್ದಿರಿ?”

“ಲೆಕ್ಕವಿಟ್ಟಿಲ್ಲ.”

“ಸಾಲ ಮೇಳದ ಕಾಲದಲ್ಲಿ ಎಲ್ಲರನ್ನೂ ನೋಡುವುದು ಹೇಗೆ ಸಾಧ್ಯ?”

“ಸಾಲಗಾರರು ನನ್ನ ಮುಂದೇನೇ ಸಾಲಪತ್ರಕ್ಕೆ ಸಹಿಹಾಕಬೇಕಿತ್ತು. ಹಾಗೆ ಎಲ್ಲ ಸಾಲಗಾರರೂ ನನ್ನ ಮುಂದೆ ಬರಲೇ ಬೇಕಿತ್ತು”

“ಅಷ್ಟು ಜನರಿಗೆ ಸಾಲಕೊಡುವಾಗ ಅದು ಹೇಗೆ ಸಾಧ್ಯ?”

“ಸಾಧ್ಯ ಮಾಡಿಕೊಳ್ಳುತ್ತಿದ್ದೆ”

“ಕಾಳೇಗೌಡರು ನಿಮ್ಮ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದಾರೆಂದು ನೀವು ಹೇಳುತ್ತೀರಿ. ಅವರಿಂದ ಸಾಲ ವಸೂಲಿ ಮಾಡಲು ಕೋರ್ಟಿಗೆ ಬಂದಿದ್ದೀರಿ”

“ಹೌದು”

“ಅವರು ನಿಮ್ಮ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿಲ್ಲವೆಂದು ಹೇಳಿದ್ದಾರೆ”

“ಸುಳ್ಳು ಹೇಳಿದ್ದಾರೆ.”

“ಕಾಳೇಗೌಡರು ಆ ಕಾಗದ ಪತ್ರಗಳಲ್ಲಿ ಇರುವ ಸಹಿ ತನ್ನದಲ್ಲವೆಂದು ಏಳುತ್ತಿದ್ದಾರಲ್ಲ?”

“ಅವರದ್ದೇ ಸಹಿ. ನನ್ನ ಎದುರಿಗೇ ಸಹಿ ಹಾಕಿದ್ದಾರೆ”

“ಇವರೇ ಕಾಳೇಗೌಡರೆಂದು ನೀವು ಹೇಗೆ ಹೇಳುತ್ತೀರಿ?”

“ಇವರೇ ಕಾಳೇಗೌಡರೆಂದು ಈಗಲೂ ಹೇಳುತ್ತೇನೆ”

ಅಲ್ಲಿಗೆ ಗೌಡರ ವಕೀಲರು ಸುಮ್ಮನಾದರು.

ಬ್ಯಾಂಕಿನ ಪರವಾಗಿ ಬಂದ ವಕೀಲರು ಎದ್ದು ನಿಂತು.

“ಮೇನೇಜರೇ, ಕಾಳೇಗೌಡರು ನಿಮ್ಮ ಮುಂದೇನೇ ಸಹಿಹಾಕಿದ್ದಾರಾ?”

“ಹೌದು”

“ಈ ಪತ್ರದಲ್ಲಿರುವ ಸಹಿ ಅವರದ್ದೇ ಎಂದು ಖಂಡಿತವಾಗಿ ಹೇಳುತ್ತೀರ”

“ಹೌದು”

“ಆಯಿತು. ಹೆಚ್ಚಿಗೇನು ಪ್ರಶ್ನೆಯಿಲ್ಲ ಮೈಲಾರ್ಡ್. ನನಗೆ ಸ್ವಲ್ಪ ಸಮಯಾವಕಾಶ ಬೇಕು.”
ಎಂದು ಮುಗಿಸಿದಾಗ ಒಂದು ತಿಂಗಳಿಗೆ ಕೇಸು ಮುಂದೂಡಲಾಯಿತು.

ಬ್ಯಾಂಕಿನ ವಕೀಲರಿಗೆ ಈ ಕೇಸನ್ನು ಹೇಗೆ ಗೆಲ್ಲುವುದೆಂಬ ತಲೆ ಬಿಸಿಕಾಡಲು ಸುರುವಾಯಿತು. ಅವರಿಗೆ ಇದು ಬ್ಯಾಂಕಿನಿಂದ ಸಿಕ್ಕಿದ ಮೊದಲ ಕೇಸು. ಇದರಲ್ಲಿ ಸೋತರೆ, ಮುಂದೆ ತನಗೆ ಕೇಸುಗಳು ಸಿಗಲಾರವು. ಈ ಕೇಸನ್ನು ಹೇಗಾದರು ಗೆಲ್ಲಬೇಕು, ಕಾಳೇಗೌಡರಿಂದ ಈ ಸಹಿಗಳೆಲ್ಲ ತನ್ನದೇ ಎಂದು ಹೇಳಿಸಲೇಬೇಕು ಇಲ್ಲವಾದರೆ ಅವರಿಗೇ ಸಾಲಕೊಟ್ಟಿದ್ದೆಂದು ಪ್ರೂವ್ ಮಾಡಲೇಬೇಕು.

ಆದರೆ ಮುಂದಿನ ಬಾರಿಯೂ ಹಾಗೇ ಆಯ್ತು, ಗೌಡರು ಒಪ್ಪಿಕೊಳ್ಳಲೇ ಇಲ್ಲ “ನಂದಲ್ಲ ಸ್ವಾಮಿ” “ನಂಗೊತ್ತಿಲ್ಲ ಸ್ವಾಮಿ” ಎಂದು ಪಟ್ಟು ಬಿಡದೆ ಹೇಳುತ್ತಿದ್ದರು. ಆಗಲೂ ಬ್ಯಾಂಕಿನ ವಕೀಲರು ಸುಮಯ ಕೇಳಬೇಕಾಯಿತು.

ಇದೇ ಕೊನೆಯ ಮುಂದೂಡುವಿಕೆಯೆಂದು ಮುನ್ಸೀಫರು ಹದಿನೈದು ದಿನ ಕೇಸನ್ನು ಮುಂದೆ ಹಾಕಿದರು.

ಈ ಕೇಸಿನಿಂದಾಗಿ ಜಯರಾಮ್‌ರವರಿಗೆ ಆಗಾಗ ಮಂಡ್ಯಕ್ಕೆ ಬರುವ ಕೆಲಸವಾಯಿತು. ಬ್ಯಾಂಕಿನ ಖರ್ಚಿನಲ್ಲಿ ಬಂದು ಹೋಗುವುದಾದರೂ ಕೋರ್ಟಿಗೆ ಹೋಗಿ ಆ ಎಲ್ಲ ಕ್ರಿಮಿನಲ್‌ಗಳ ಜತೆಗೆ ಕುಳಿತು ಕಾಯುವ ಕೆಲಸ ಬೇಸರ ಹಿಡಿಸಿತ್ತು. ಎಲ್ಲ ಕಡೆ ಅವರಿಗೆ ಕಾಳೇಗೌಡರ ಸಹಿಯೇ ಕಾಣಿಸುತ್ತಿತ್ತು. ಅದನ್ನೇ ತನ್ನದಲ್ಲ ಎನ್ನುತ್ತಿದ್ದಾರಲ್ಲ ಆಸಾಮಿ, ಇವರಿಗೆ ಆತ್ಮಸಾಕ್ಷಿಯೇ ಇಲ್ಲವೇ? ಬೇಡ, ದೇವರ ಹೆದರಿಕೆಯೂ ಬೇಡವೇ? ಗೀತೆಯ ಮೇಲೆ ಕೈ ಇಟ್ಟು ಸತ್ಯ ಹೇಳುವೆನೆಂದು ಪ್ರಮಾಣಮಾಡಿ ಸುಳ್ಳು ಹೇಳುವಾಗ ಮನಸ್ಸಿಗೆ ಅಳುಕೂ ಉಂಟಾಗುವುದಿಲ್ಲವೇ? ಇದಾವುದೂ ಕಾಳೇಗೌಡರಿಗೆ ಇದ್ದ ಹಾಗಿರಲಿಲ್ಲ.

ಬ್ಯಾಂಕಿನ ವಕೀಲರಿಗಂತೂ ಯೋಚಿಸಿ ಯೋಚಿಸಿ ತಲೆಯೇ ಓಡದಂತಾಗಿ ಹದಿನೈದು ದಿನದಲ್ಲಿ ನೂರು ಬಾರಿಯಾದರೂ ಅವರು ಪೇಪರುಗಳನ್ನು ಮಗುಚಿ ಹಾಕಿದ್ದರು. ಕಾಳೇಗೌಡರ ಸಹಿ ನೋಡಿ ನೋಡಿ ಅವು ಭೂತಾಕಾರವಾಗಿ ಬೆಳೆಯುತ್ತಿದೆಯೆನ್ನುವ ಭ್ರಮೆಗೂ ಒಳಗಾಗಿದ್ದರು. ಕಾಳೇಗೌಡರನ್ನು ಹಿಡಿಯಲೇ ಬೇಕು. ಅವರು ಒಪ್ಪದಿದ್ದರೆ ಫಿಂಗರ್ ಪ್ರಿಂಟ್ ಎಕ್ಸ್‌ಪರ್ಟ್ ಅಥವಾ ಕೈ ಬರಹದ ಎಕ್ಸ್‌ಪರ್ಟ್‌ನ್ನು ಮೊರೆ ಹೋಗಬೇಕು. ಅದೂ ಇನ್ನೂ ರಗಳೆ ಕೆಲಸ.

ಬ್ಯಾಂಕಿನ ಲಾಯರು ಮತ್ತು ಮೇನೇಜರ್ ಬರುವಾಗ ಕೋರ್ಟಿನಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಕಾಳೇಗೌಡರು ಬ್ಯಾಂಕಿನಿಂದ ಸಾಲ ತೆಗೆದುಕೊಂಡೂ ತೆಗೆದುಕೊಂಡಿಲ್ಲವೆಂದು ಸಾಧಿಸುವುದನ್ನು ಕೇಳಿದ ಸುತ್ತಮುತ್ತಲಹಳ್ಳಿಯವರಿಗೆ ಏನಾಗುವುದೆನ್ನುವ ಕುತೂಹಲ ಸಹಜವಾಗಿಯೇ ಉದ್ಭವಿಸಿತ್ತು. ಅವರೇನಾದರೂ ಗೆದ್ದರೆ ತಾವೂ ಹಾಗೇ ಮಾಡಬಹುದು, ಸಾಲ ತೆಗೆದುಕೊಂಡದ್ದನ್ನು ತೀರಿಸಬೇಕಾಗಿಯೇ ಇಲ್ಲ ಎಂದವರ ಎಣಿಕೆಯಾಗಿತ್ತು.

ಮುನ್ಸೀಫರು ಬರುವ ಎರಡು ನಿಮಿಷ ಮುಂದೆಯಷ್ಟೇ ಕಾಳೇಗೌಡರು ನಮ್ಮ ವಕೀಲರ ಜತೆಗೆ ಕೋರ್ಟಿಗೆ ಆಗಮಿಸಿದ್ದರು.

ಮುನ್ಸೀಫರು ಬಂದವರೇ ಕೆಲವು ಸಣ್ಣ ಸಣ್ಣ ಕೇಸುಗಳನ್ನು ಕೈಗೆತ್ತಿಕೊಂಡು ಅದರ ವಿಚಾರಣೆಯನ್ನು ಮುಗಿಸಿದ ಮೇಲೆ ಕಾಳೇಗೌಡರ ಕೇಸನ್ನು ಕೈಗೆತ್ತಿಕೊಂಡರು.

ಬ್ಯಾಂಕಿನ ವಕೀಲರು ಹಿಂದೆ ಕೇಳಿದ್ದ ಪ್ರಶ್ನೆಗಳನ್ನೇ ಮನರಾವರ್‍ತಿಸಿದರು. ಈಗ ಕಾಳೇಗೌಡರಿಗೆ ಸುಳ್ಳು ಹೇಳಲು ಕಷ್ಟವಾಗುತ್ತಿರಲಿಲ್ಲ. ಗೀತೆಯ ಮೇಲೆ ಕೈಯಿಟ್ಟು ಸತ್ಯವನ್ನೇ ಹೇಳುವುದಾಗಿ ಪ್ರಮಾಣ ಮಾಡಿ ಸಲೀಸಾಗಿ ಸುಳ್ಳು ಹೇಳವಷ್ಟು ಎಕ್ಸ್‌ಪರ್ಟ್ ಆಗಿದ್ದರು. “ನಂದಲ್ಲಸ್ವಾಮೀ” “ನಂಗೊತ್ತಿಲ್ಲ ಸ್ವಾಮಿ” ಎಂದಲ್ಲದೆ ಬೇರೇನೂ ಹೇಳುತ್ತಿರಲಿಲ್ಲ.

ಇನ್ನೊಮ್ಮೆ ಬ್ಯಾಂಕಿನ ಕಾಗದ ಪತ್ರಗಳನ್ನೆಲ್ಲಾ ತೋರಿಸಿ “ಗೌಡರೇ ಸರಿಯಾಗಿ ನೋಡಿ ಹೇಳಿ. ಇದು ನಿಮ್ಮ ಸಹಿ ಹೌದೇ ಅಲ್ಲವೇ? ಸುಳ್ಳು ಹೇಳಿದರೆ ಹೇಗಾದರೂ ಸಿಕ್ಕಿ ಬೀಳುತ್ತೀರಿ.”

“ನಂದಲ್ಲ ಸ್ವಾಮಿ. ಖಂಡಿತಾ ಈ ಸಹಿಗಳು ನನ್ನದಲ್ಲ.”

ಬ್ಯಾಂಕಿನ ವಕೀಲರಿಗೆ ಒಂದೇ ಸಲ ಏನೋ ಹೊಳೆಯಿತು. ಕೂಡಲೆ ಗೌಡರ ವಕೀಲರ ಎದುರಿಗಿದ್ದ ಫೈಲನ್ನೇ ಎತ್ತಿಕೊಂಡು ಏನಾಗುತ್ತಿದೆಯೆಂದು ಬೇರೆಯವರು ಊಹಿಸುವ ಮೊದಲೇ ಗೌಡರ ಮುಂದೆ ಹೋಗಿ ಅವರೇ ಸಹಿಹಾಕಿದ್ದ ವಕಾಲತ್ತು ಪತ್ರದಲ್ಲಿ ಹಾಕಿದ್ದ ಸಹಿಯನ್ನು ತೋರಿಸಿ

“ಗೌಡರೇ ಇನ್ನೊಮ್ಮೆ ಕೇಳ್ತಿದ್ದೇನೆ ಇದು ಕೊನೆಯ ಬಾರಿ, ಸರಿಯಾಗಿ ನೋಡಿ ಹೇಳಿ, ಇದು ಯಾರ ಸಹಿ? ನಿಮ್ಮದೇ ಅಲ್ಲವೇ? ಯೋಚಿಸಿ ಹೇಳಿ ಮುಂದೆ ತೊಂದರೆಯಾದೀತು ಇದು ಯಾರ ಸಹಿ?”

“ನಂಗೊತ್ತಿಲ್ಲ ಸ್ವಾಮಿ”

“ಸರಿಯಾಗಿ ಕಣ್ಣುಬಿಟ್ಟು ನೋಡಿ ಹೇಳಿ ಗೌಡರೇ”

“ನಂದಲ್ಲ ಸ್ವಾಮಿ”

“ಇದು ನಿಮ್ಮ ಸಹಿ ಅಲ್ಲದಿದ್ದರೆ ಮತ್ಯಾರ ಸಹಿ ಗೌಡರೇ?”

“ನಂದಂತೂ ಅಲ್ಲ ಸ್ವಾಮಿ”

ಗೌಡರು ತಲೆಯೆತ್ತದೇ ದೃಢವಾಗಿ ನುಡಿದರು.

“ನಿಜ ಹೇಳುತ್ತೀರಾ ಗೌಡರೇ?”

“ಎಷ್ಟು ಸಾರಿ ಹೇಳೋದು? ಈ ಸಹಿ ಖಂಡಿತಾ ನಂದಲ್ಲ”

ಕಾಳೇಗೌಡರ ವಕೀಲರಿಗೆ ವಿಷಯ ಅರಿವಾಗಿ ಒಮ್ಮೆಲೇ ಮುಖ ಕಳೆಗುಂದಿತು. ಈಗ ಏನೂ ಮಾಡುವಂತಿಲ್ಲ ಗೌಡರು ಸರಿಯಾಗಿ ನೋಡದೇ, ಯೋಚಿಸದೇ ಹಾಡುತ್ತಾ ಬಂದ ರಾಗವನ್ನೇ ಪುನರುಚ್ಚರಿಸಿದ್ದರು, ಏನಾಗುತ್ತಿದೆಯೆನ್ನುವ ಅರಿವು ಅವರಿಗಿರಲಿಲ್ಲ.

ಬ್ಯಾಂಕಿನ ವಕೀಲರ ಮುಖದಲ್ಲಿ ಗೆಲುವಿನ ನಗೆ ಮೂಡಿತ್ತು. ಮುನ್ಸಿಫರ ಮುಂದೆ ಹೋಗಿ ಅವರಿಗೆ ಆ ವಕಾಲತ್ತು ಪತ್ರವನ್ನು ತೋರಿಸುತ್ತಾ,

“ಮೈಲಾರ್ಡ್, ಇದು ನೋಡಿ ಗೌಡರು ಲಾಯರ್ ದನಂಜಯನವರಿಗೆ ಕೇಸು ತೆಗೆದುಕೊಳ್ಳಲು ಸಹಿ ಮಾಡಿತ್ತವಕಾಲತ್ತು ಪತ್ರ ಈ ಸಹಿಯೂ ತನ್ನದಲ್ಲ ಎಂದು ಹೇಳುತ್ತಿದ್ದಾರೆ. ಇದರಲ್ಲೇ ತಿಳಿಯುತ್ತದೆ ಅವರು ಈ ತನಕ ಹೇಳಿದ್ದೆಲ್ಲ ಸುಳ್ಳೆಂದು. ಈ ಸಹಿಯೂ ಬ್ಯಾಂಕಿನ ಸಾಲಪತ್ರಗಳಲ್ಲಿ ಇರುವ ಸಹಿಯೂ ಒಬ್ಬರದ್ದೇ. ಬ್ಯಾಂಕಿನಿಂದ ಸಾಲ ತಗೊಂಡು ತಾನು ಸಾಲ ತಗೊಂಡಿಲ್ಲವೆಂದು ಹೇಳಿ ಬ್ಯಾಂಕಿಗೆ ಮೋಸ ಮಾಡಲು ನೋಡಿದ್ದಾರೆ. ಈ ತನಕ ಅವರು ಸ್ವಲ್ಪವೂ ಹಣ ಪಾವತಿ ಮಾಡಿಲ್ಲ. ಬ್ಯಾಂಕಿಗೆ ನಷ್ಟವುಂಟು ಮಾಡಲು ನೋಡಿದ್ದೇ ಅಲ್ಲದೇ ತಮ್ಮ ಮಾತನ್ನೂ ಮುರಿದಿದ್ದಾರೆ. ಬ್ಯಾಂಕ್‌ನಿಂದ ಅವರು ತೆಗೆದುಕೊಂಡ ಸಾಲವನ್ನು ಬಡ್ಡಿ ಸಮೇತ ಪಾವತಿ ಮಾಡುವಂತೆ ಅಪ್ಪಣೆ ಕೊಡಬೇಕು. ಲಾಯರ ಖರ್ಚನ್ನೂ ಅವರೇ ಭರಿಸುವಂತಾಗಬೇಕು. ಬ್ಯಾಂಕಿಗೆ ಮೋಸಮಾಡಲು ನೋಡಿದ್ದಕ್ಕೆ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.”

ಏನಾಗುತ್ತಿದೆಯೆಂದು ಗೌಡರಿಗೆ ಅರ್ಥ ಆಗುವಾಗ ಸಮಯ ಮಿಂಚಿತ್ತು. ವಕೀಲರು ಎಲ್ಲದಕ್ಕೂ “ನಂಗೊತ್ತಿಲ್ಲ ಸ್ವಾಮಿ” ಎಂದು ಹೇಳಲು ಹೇಳಿದ್ದರು. ಗೌಡರು ಹಾಗೇ ಹೇಳುತ್ತಾ ಬಂದಿದ್ದರು. ಅತಿ ಆಸೆ ಗತಿಗೇಡು ಆದಂತಾಯಿತು. ಸುಳ್ಳು ಹೇಳಿದ್ದಕ್ಕೆ ಅದರಲ್ಲೂ ಗೀತೆಯನ್ನು ಮುಟ್ಟಿ ಪ್ರಮಾಣ ಮಾಡಿದ್ದಕ್ಕೆ ಒಳ್ಳೆಯ ಶಿಕ್ಷೆಯಾಯಿತು.

ಗೌಡರ ಮುಖ ಬೆವರಿನಿಂದ ಒದ್ದೆಯಾಯಿತು. ಎದೆಬಡಿತ ಜೋರಾಯಿತು. ಕೈಕಾಲಲ್ಲಿ ನಡಕ ಬಂತು. ಸುಳ್ಳು ಹೇಳಿ ಮುಖಕ್ಕೆ ಮಸಿ ಬಳಿದುಕೊಂಡಂತಾಯಿತು. ಗೌಡರು ಅವಮಾನದಿಂದ ತಲೆಕೆಳಗೆ ಹಾಕಿ ನಿಂತರು.

ಮುನ್ಸೀಫರು ತೀರ್‍ಪು ಬರೆದರು. ಬ್ಯಾಂಕಿನ ಪರವಾಗಿ ಸಾಲ ಡಿಕ್ರಿಯಾಯಿತು. ಗೌಡರು ಮುಂದಿನ ಎರಡು ವರುಷದ ಒಳಗೆ ಅಸಲು ಮತ್ತು ಬಡ್ಡಿ ಸಮೇತ ರೂ ೩೬,೮೬೩ ಕಟ್ಟಬೇಕು. ಮಾತ್ರವಲ್ಲದೇ ಕೋರ್ಟಿನ ಖರ್ಚನ್ನೂ ಭರಿಸಬೇಕು. ಇಲ್ಲವಾದಲ್ಲಿ ಎರಡು ವರುಷದ ಕಠಿಣ ಸಜೆಯನ್ನು ಅನುಭವಿಸಬೇಕು.

ಗೌಡರು ಸೋತು ಹೋದರು. ಎಲ್ಲರೆದುರು ತಲೆತಗ್ಗಿಸುವ ಹಾಗೆ ಸೋತು ಕಟಕಟೆಯಿಂದ ಇಳಿದು ಹೋಗುವಾಗ ಅವರಿಗೆ ಸುತ್ತು ಮುತ್ತು ಯಾರೂ ಕಾಣಿಸುತ್ತಿರಲಿಲ್ಲ. ಅವರ ಕಣ್ಣಮುಂದೆ, ಮನದ ಒಳಗೆ ಕುಣಿಯುತ್ತಿದ್ದುದು ಕೆಂಪು ಹೊದಿಕೆ ಹೊದಿಸಿದ್ದ ಗೀತೆ ಮಾತ್ರ. ಹೃದಯದಲ್ಲಿ ಉಳಿದದ್ದು ಅದನ್ನು ಮುಟ್ಟುವ ಶಕ್ತಿಯನ್ನೇ ಕಳಕೊಂಡೆನಲ್ಲ ಎನ್ನುವ ಅಳಲು; ಆದಷ್ಟು ಬೇಗನೇ ಬ್ಯಾಂಕಿನ ಹಣ ಕಟ್ಟಿ ಪ್ರಾಯಶ್ಚಿತ ಮಾಡಿಕೊಳ್ಳಬೇಕೆನ್ನುವ ನಿಶ್ಚಯ.

ಮೊದಲೇ ಕ್ರಮದಲ್ಲಿ ಹಣ ಕಟ್ಟುತ್ತಿದ್ದರೆ ಯಾವಾಗಲೋ ಸಾಲ ಮುಗಿದಿರುತ್ತಿತ್ತು. ಹೀಗೆ ಅವಮಾನವಾಗಿರಲಿಲ್ಲ. ಹೋದ ಮಾನ ಹಿಂದೆ ಸಿಗುವುದಿಲ್ಲ.

ಆ ಕೇಸಿನ ನಂತರ ಆ ಹಳ್ಳಿಯಿಂದ ಸಾಲ ವಸೂಲು ಮಾಡಲು ಬ್ಯಾಂಕಿನವರಿಗೆ ಕಷ್ಟವೇ ಆಗಲಿಲ್ಲ. ಸಾಲಮೇಳದಲ್ಲಿ ಸಾಲ ಪಡೆದವರು ಕೂಡಾ ಬ್ಯಾಂಕಿಗೆ ಬಂದು ಬಡ್ಡಿ ಮನ್ನಾ ಮಾಡಿದರೆ ಸಾಲ ಕಟ್ಟುವುದಾಗಿ ಮುಂದಾದಾಗ ಬ್ಯಾಂಕಿನವರಿಗೆ ಹಳೆಯ ಸಾಲ ವಸೂಲಿಗಾಗಿಯೇ ಒಂದು ಚಿಕ್ಕ ಕೌಂಟರನ್ನು ತೆರೆಯಬೇಕಾಯ್ತು.

ಈಗ ಗೌಡರು ಬ್ಯಾಂಕಿನವರನ್ನು ಬೈಯ್ಯುವುದಿಲ್ಲ. ತನ್ನನ್ನು ತಪ್ಪು ಆಶ್ವಾಸನೆಯಿಂದ ದಾರಿ ತಪ್ಪಿಸಿದ ವಕೀಲರನ್ನು ಬೈಯ್ಯುತ್ತಾರೆ. ಈಗ ಅವರು ಸುಳ್ಳು ಹೇಳುವುದೇ ಇಲ್ಲ. ಗೀತೆಯೊಂದನ್ನು ಖರೀದಿಸಿ ತಮ್ಮ ಮನೆಯ ದೇವರ ಮಂಟಪದಲ್ಲಿರಿಸಿ ಪೂಜಿಸುತ್ತಾರೆ. ಸಮಯ ಸಿಕ್ಕಿದಾಗಲೆಲ್ಲಾ ಅದನ್ನು ಬಿಡಿಸಿ ಓದುತ್ತಾರೆ.

ಮಗನನ್ನು ಗುಟ್ಟಾಗಿ ಕರೆದು ಹೇಳುತ್ತಾರೆ, “ಮಗಾ ಏನಾದರೂ ಸುಳ್ಳು ಹೇಳಲೇ ಬೇಡ, ಬ್ಯಾಂಕಿನವರ ಹತ್ತಿರವಂತೂ ತಮಾಷೆಗೂ ಸುಳ್ಳು ಹೇಳಬೇಡ. ಬ್ಯಾಂಕಿನ ಸಾಲ ತೆಗೆದುಕೊಳ್ಳಲೇ ಬೇಡ, ತೆಗೆದುಕೊಂಡರೆ ತಿಂಗಳು ತಿಂಗಳು ಕಟ್ಟಿ ಸಮಯದಲ್ಲಿ ಮುಗಿಸಿಬಿಡು. ಕೊಡುವಾಗ ಕೊಡುತ್ತಾರೆ ವಸೂಲಿ ಮಾಡುವಾಗ ರಕ್ತವನ್ನೂ ಹೀರಿ ವಸೂಲು ಮಾಡ್ತಾರೆ.”
*****
(೧೯೯೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡದಾ ಬಾವುಟ
Next post ಮಲೆನಾಡಿನ ಕೋಗಿಲೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…