ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡಿಕೆ ಹಿಡಿದೀತು. ಆದುದರಿಂದ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ. ಊರುಕೇರಿಯ ಪ್ರತಿಯೊಂದು ದೇಗುಲಕ್ಕೂ ಹೊಳೆ ಕೆರೆಕುಂಟೆಗೂ ತಿರುಳರಿಯದ ಮರುಳರಿಂದಾಚರಿಸ್ಪಡುವ ವ್ರತಕ್ಕೂ ಮಹಾತ್ಮ್ಯೆಯು ವಿರಚಿತವಾದಂತೆ ಇದೂ! ಎಂದ ಮೇಲೆ, ಹೇಳುವಂಥಾದಾವ ಲಿಂಬಾಫಲ ಮಾಹಾತ್ಮ್ಯೆಯಿದೆಯೋ ಅದನ್ನು ಶ್ರದ್ಧಾ ಭಕ್ತಿಗಳಿಂದ ಕೇಳುವಂಥಾವರಾಗಬೇಕು, ಏನೆಂದರೇ:
ವಿಧಾತನೆಂದೆನಿಸಿಕೊಂಡಿರುವ ದಾವ ಶ್ರೀಮನ್ನಾರಾಯಣನ ನಾಭಿ ಕಮಲಸಂಜಾತನಾದ ಬ್ರಹ್ಮನಿದ್ದಾನೆಯೋ ಆತನು ಸೃಷ್ಟಿಯ ಅಂತ್ಯ ಭಾಗದ ಪೂರ್ವಾರ್ಧದಲ್ಲಿ ಉತ್ಕೃಷ್ಟ ಫಲವೊಂದನ್ನು ಸೃಷ್ಟಿಸಬೇಕೆಂದು ಸಂಕಲ್ಪಿಸುವಂಥವನಾದ. ಆಕಾರದಿಂದ ವರ್ಣದಿಂದ, ಸುವಾಸನೆಯಿಂದ ಸ್ಪರ್ಶದಿಂದ ಜಗತ್ತಿಗೆ ಅತುಲಾನಂದವನ್ನೀಯುವಂಥಾದ್ದಾಗಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿ, ಬಾಳಲೆಂದು ನಿಂಬಾಫಲವನ್ನು ಸೃಷ್ಟಿಸಿ ಭೂಲೋಕದಲ್ಲಿ ಹರಡಿಬಿಡುವಂಥವನಾಗಲು, ಜನರದನ್ನು ಕಂಡು ಮೋಹಿತರಾಗುವಂಥವರಾದರು. ಹೀಗೆ ಸಕಲ ಗುಣ ಸಂಪನ್ನವಾಗಿ ಬಂದಿರುವ ಅದಾವ ಲಿಂಬೆ ಹಣ್ಣಿದೆಯೋ ಅದನ್ನು ವೈದ್ಯರು ‘ಬಾ ಬಾ’ ಎಂದರು. ಆಡಿಗೆ ಭಟ್ಟರು ‘ಬಾರಯ್ಯಾ’ ಎಂದು ಕೂಗಿ ಕರೆದರು. ‘ಥಂಡಾಪಾನ’ ಗೃಹಗಳೆಲ್ಲ ‘ಬಾ! ಬಾ, ಬಾ!’ ಎಂದು ಎದ್ದೋಡಿ ಹಸ್ತ ಲಾಘವಕೊಟ್ಟು ಸ್ವಾಗತೀಕರಿಸಿಕೊಂಡವು. ಕಂಡವರು ಆದರದಿಂದ ಆಘ್ರಾಣಿಸಿ ಕಣ್ಣಿಗೆ ಒತ್ತಿಕೊಳ್ಳುವಂಥವರಾದರು. ಅಲ್ಲದೆ ಅದು ಕಲೆಕ್ಟ್ರು, ಥಾಶೀಲ್ದಾರರು, ಇನ್ಸ್ ಪೆಕ್ಟ್ರು, ಪ್ರೆಸಿಡೆಂಟರು, ಚೇರ್‍ಮಾನರು, ಇತ್ಯಾದಿ ದೊಡ್ಡ ಮುಂಡಾಸಿನವರ ಮೇಜುಗಳನ್ನೆಲ್ಲ ಹತ್ತಿ ‘Thanks! Thanks! (ಥೇಂಕ್ಸ್! ಥೇಂಕ್ಸ್!) ಎಂದು ಕೇಳಲ್ಪಡುವಂಥದ್ದಾಯಿತು ಈ ನಿಂಬಾ ಫಲ!
ಹೀಗೆ ನಡೆಯುತ್ತಾ ಶತಮಾನ ಶತಮಾನಗಳೇ ಕಾಲಚಕ್ರವೆಂಬಂಥಾದ್ದಾವದಿದೆಯೋ ಅದರ ಗತಿಯಲ್ಲಿ ಉರುಳುತ್ತಾ ಹೋಗುವಂಥಾದ್ದಾದವು. ಆಗ ನಮ್ಮಂಥಾ ಶ್ರೋತ್ರಿಯರಿಗೂ ಸದಾ ಪರಮಾನ್ನವೇ ದೊರೆಯುತ್ತಾ ಹೋದರೆ (ದೇವರು ಹಾಗೇ ನಡೆಯಿಸಲಿ!) ಅದರಲ್ಲೂ ಹೇಗೆ ಜುಗುಪ್ಸೆಯುಂಟಾಗಬಹುದೋ ಯಥಾ ತಥಾ ಪ್ರಕಾರವಾಗಿ ದಾವ ನಿಂಬಾಫಲವಿದೆಯೋ ಅದಕ್ಕೂ ಸದಾ ಸಾರ್‍ವದಾ ಏಕಪ್ರಕಾರವಾಗಿ ನಿರಂತರ ದೊರೆಯತ್ತಿದ್ದಂಥಾ ಆ ಆದರದಲ್ಲಿ ಅಭಿರುಚಿಯಿಲ್ಲದಂತಾಗುತ್ತಾ ಬಂತು! ಆಗ ಅದು ‘ಅಯ್ಯೋ! ಎಲ್ಲಿ ಹೋದರೂ ಈ ‘ಬಾಬಾ’ ಕೇಳಿ ಬೇಸತ್ತೆನಲ್ಲಾ. ಒಬ್ಬರಾದರೂ ಇದೇಕೆ ಬಂತಪ್ಪಾ ಎನ್ನುವವರಿಲ್ಲವಲ್ಲಾ! ಹಿಡಿಯದೆ ಬಿಡುವವನೊಬ್ಬನೂ ಇಲ್ಲವಲ್ಲಾ! ಮಾನವನ ತಿರಸ್ಕಾರ ದೃಷ್ಟಿಯನ್ನು ನಾನೆಂದು ನೋಡುವುದು! ಗಂಟುಮೋರೆ ಹಾಕಿದರೆ ಮನುಷ್ಯನು ಹೇಗೆ ತೋರುತ್ತಾನೆಂಬುದನ್ನು ನಾನು ಕಾಣುವುದು ಬೇಡವೇ?’ ಎಂದು ಯೋಚಿಸಿ ಯೋಚಿಸಿ ಯಾವ ಉಪಾಯವೂ ಹೊಳೆಯದಿರಲು, ತನ್ನನ್ನು ಸೃಷ್ಟಿಸಿದ ದಾವ ಬ್ರಹ್ಮನಿದ್ದಾನೆಯೋ ಆತನ ಬಳಿಗೇ ಹೋಗಿ ತನ್ನ ಸಂಕಷ್ಟಗಳನ್ನೆಲ್ಲ ನಿವೇದಿಸಿಕೊಳ್ಳಬೇಕೆಂದು ನಿರ್ಧರಿಸಿ ಕ್ಷೀರಸಾಗರದ ತಡಿಗೆ ಉರುಳುರುಳುತ್ತಾ ಹೋಗಿ ಅಲ್ಲಿಂದ ಶರಧಿಗೆ ಹೊರಳಿ ಕ್ಷೀರ ತರಂಗಗಳಲ್ಲಿ ಏಳುತ್ತ ಬೀಳುತ್ತ ತೇಲುತ್ತ ಮಾಲುತ್ತ ಸಾಗರ ಮಧ್ಯದಲ್ಲಿ ಶ್ರೀ ಮಹಾವಿಷ್ಣುವಿನ ಹಾಸಿಗೆಯಾಗಿರುವ ಅದಾವ ಮಹಾಶೇಷನಿರುವನೋ ಅವನ ಬಳಿಸಾಗಿ ಧಕ್ಕೆ ಹೊಡೆಯಲು, ಆ ಫಣೀಂದ್ರನು ಅದನ್ನು ತನ್ನ ಬಾಲದಿಂದೆತ್ತಿ ಬಿಸುಡಲಾಗಿ ಅದು ವಿಷ್ಣುವಿನ ನಾಭೀಕಮಲದಲ್ಲಿ ಕುಳಿತಿದ್ದ ಬ್ರಹ್ಮನ ಮೂಗಿಗೆ ತಾಗಿ ಆತನು ಬರೆಯುತ್ತಿದ್ದ ಪುಸ್ತಕದ ಮೇಲೆ ಬೀಳು ವಂಥಾದ್ದಾಯಿತು! ಆಗ ಆ ನಿಂಬಾಫಲವು ಬ್ರಹ್ಮ ಸ್ತೋತ್ರವನ್ನು ಮಾಡ ತೊಡಗಿ, ‘ಹೇ ಸೃಷ್ಟಿಕರ್ತನೇ! ವಿಧಿಯೇ! ಬ್ರಹ್ಮನೆ ……’ ಎನ್ನುವಷ್ಟರಲ್ಲೇ ಬ್ರಹ್ಮನು ತಲೆಯೆತ್ತಿ, “ಎಲೆ ನಿಂಬಾಫಲವೇ! ನಿನ್ನ ಸ್ತೋತ್ರಗಳನ್ನು ಕೇಳಲು ಇದೀಗ ಕಾಲವಲ್ಲ. ರಾವಣ, ಹಿರಣ್ಯಕಶ್ಯಪು, ಮುಂತಾದವರ ಕಾಲದಲ್ಲಿ ನನಗೇನೋ ತುಂಬ ವಿರಾಮವಿತ್ತು. ಅವರ ವರ್ಷ ಗಟ್ಟಳೆಯ ಸ್ತೋತ್ರಗಾನವನ್ನು ಪಾನಮಾಡುತ್ತ ಕುಳಿತು ಸಂತುಷ್ಟನಾಗಿ ವರಗಳನ್ನಿತ್ತಿದ್ದೆ. ಈಗಲಾದರೋ ಅದಕ್ಕೆಲ್ಲ ಬಿಡುವಿಲ್ಲ; ನೋಡು, ಇಟೇಲಿ, ಅಬಿಸೀನಿಯಾ, ಸ್ಪೇನ್, ಜರ್ಮನಿ, ರಸ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ನಾನೀಗ ಸೃಷ್ಟಿಸಬೇಕಾಗಿರುವ ಜನರ ಆಯುಷ್ಯ ಪ್ರಮಾಣವನ್ನು ಅಲ್ಲಿ ಈ ಮೊದಲು ಸೃಷ್ಟಿಸಿರುವವರ ಆಯುಷ್ಯಾಂತ್ಯಕ್ಕೆ ಅಂತ್ಯವಾಗುವಂತೆ ತರಾಂತರದಲ್ಲಿ ಕಿರಿದು ಮಾಡಬೇಕಾಗಿದೆ. ಆದುದರಿಂದ ಹಿಂದಿನ ೫೦ ವರ್ಷಗಳ ಜನನ ಲೇಖನಗಳನ್ನೆಲ್ಲ ತೆಗೆದು ಅಲ್ಲಿ ಲಿಖಿತವಾದ ಆಯುಷ್ಯ ಸಂಖ್ಯೆಗಳಿಗೆ ಇನ್ನು ಮುಂದಿನವೂ ತಾಳಿಬಿದ್ದು ಒಂದೊಂದು ದಿನದಲ್ಲಿ ಸಾವಿರಗಟ್ಟಲೆ ಜನರು ತೀರಿಕೊಳ್ಳುವಂತ ಮರಣದ ದಿನ, ವಾರ, ಗಳಿಗೆ ವಿಗಳಿಗೆಗಳನ್ನೆಲ್ಲ ಲೆಕ್ಕಮಾಡಿ ಹಾಕಬೇಕಾಗಿದೆ. ಈ ಕ್ಷೀರ ಸಾಗರದ ತಂಪಾದ ವಾತಾವರಣದಲ್ಲಿ ಕುಳಿತಿರುವೆನಾದ ಕಾರಣ ನನ್ನ ತಲೆಗಳಿನ್ನೂ ಬಿಸಿಯೇರದೆ ಸಿಡಿಯದೆ ಉಳಿದಿವೆ. ಆದುದರಿಂದ ನಿನ್ನ ಸ್ತೋತ್ರಪೀಠಿಕೆಯಿಂದಲೇ ನಾನು ಸಂತುಷ್ಟನಾಗಿದ್ದೇನೆ. ಬಂದಂಥಾ ಕಾರ್ಯವೇನೆಂಬುದನ್ನು ಸಂಕ್ಷೇಪವಾಗಿ ಹೇಳುವಂಥವನಾಗು” ಎಂದು ಬ್ರಹ್ಮನು ಹಣೆಗಳ ಮೇಲಿನ ಬೆವರು ಹನಿಗಳನ್ನು ಒರಸೊರಸುತ್ತ ಹೇಳುವಂಥವನಾಗಲು, ನಿಂಬಾಫಲವು ಬಿನ್ನಹಮಾಡುವಂಥಾದ್ದಾಯಿತು. ಅದೆಂತಂದರೇ – “ಬ್ರಹ್ಮನೇ, ನಿನ್ನ ಪರಮಾನುಗ್ರಹದಿಂದ ಭೂಲೋಕದಲ್ಲಿ ನನಗೆ ಸದಾ ಸಾರ್ವದಾ ಸ್ವಾಗತವೇ ಎಲ್ಲೆಲ್ಲಿಯೂ! ಆದರೆ ದೊಡ್ಡ ದೊಡ್ಡ ಅಧಿಕಾರಿಗಳು ಊರು ಸಂಚಾರಕ್ಕೆ ಹೊರಟು ನಿಂತಲ್ಲಿ ಕೂತು ಎದ್ದಲ್ಲಿ ಹೊಕ್ಕಲ್ಲಿ ಹೊರಬಂದಲ್ಲಿ ಬಾಲಿಕೆಯರ ಸ್ವಾಗತ ಹಾಡುಗಳನ್ನು ಕೇಳಿ ಕೇಳಿ ಅವರಿಗೆ ಜುಗುಪ್ಸೆ ಬಂದಂತೆ ನನಗೂ ಅಂಥಾ ದೊಡ್ಡ ದೊಡ್ಡ ಜಂಟೀಲ್ ಮ್ಯಾನರ ಮೇಜಿಯ ಮೇಲೆ ಚಿಕ್ಕ ಮನುಷ್ಯರು ನನ್ನನ್ನು ಇರಿಸಿದಾಗ ಅವರು ಹೇಳುವ Thanks ಥೇಂಕ್ಸ್ ಥೇಂಕ್ಸ್ ಕೇಳಿ ಕೇಳಿ ಬೇಸರವಾಗುತ್ತ ಬಂದದೆ. ಆದುದರಿಂದ ದೊಡ್ಡವರೆಂಬವರೆಲ್ಲ ಕೆಲವು ದಿವಸಗಳ ಮಟ್ಟಿಗಾದರೂ ನನ್ನನ್ನು ಕಂಡಾಗ ‘ಇದೇಕೆ ಬಂತಪ್ಪಾ ಶನಿ!’ ಎಂದು ಮೋರೆ ಗಂಟಿಕ್ಕುವ ಚಂದ ನನಗೆ ನೋಡಬೇಕಾಗಿದೆ. ನಾನವರ ಮೇಜಿನ ಮೇಲೆ ಏರಿ ಕುಳಿತರೂ ಅವರೆನ್ನನ್ನು ಮುಟ್ಟದೆ ಹಿಂದೆ ಕಳುಹು ವಂಥವರಾಗಬೇಕು. ನಾನು ಬರುವ ಸಂಚು ಮುಂಚಿತವಾಗಿ ಗೊತ್ತಾದರೆ ನನಗೆ ಭೇಟಿಕೊಡದೇ ತಲೆಮರೆಸಿಕೊಳ್ಳಬೇಕು…. ಎಂದು ಹೇಳುತ್ತಿರುವಷ್ಟರಲ್ಲೇ ಬ್ರಹ್ಮನು (ಸಾಕು! ಸಾಕು! ಹೆಚ್ಚಿಗೆ ಹೇಳಲೂ ಕೇಳಲೂ ಇದು ಸಮಯವಲ್ಲ. ಆದರೆ ನಿನ್ನ ಬಯಕೆಯೇನೆಂದು ಗೊತ್ತಾಯಿತು. ಅದನ್ನು ನೆರವೇರಿಸಿಕೊಡುತ್ತೇನೆ. ಮುಂದೆ ಧಾತೃ ಸಂವತ್ಸರದಲ್ಲಿ ವ್ಯಾಪಾರದ ಮುಗ್ಗಟ್ಟಿನಿಂದ ಸಾಹುಕಾರರು ಹಾಕಳಿಸುತ್ತ ಅಂಗಡಿಯಲ್ಲಿ ಕುಳಿತು ಕೊಳ್ಳುತ್ತಲೂ, ರೋಗಿಗಳು ಕೈಯಲ್ಲಿ ಕಾಸಿಲ್ಲದೆ ಹಾಸಿಗೆಯಲ್ಲಿ ನರಳುತಿದ್ದು ಡಾಕ್ಟರರು ಚಿಕಿತ್ಸಾಲಯದಲ್ಲಿ ವಾಯುಸೇವನೆ ಗೈಯ್ಯುತ್ತಲೂ, ಕುಕ್ಷಿಗಿಲ್ಲದೆ ವಕೀಲರು ಕಕ್ಷಿಗಾರರ ಹಾದಿ ನೋಡುತ್ತಲೂ, ನೌಕರರು ಸಂಬಳದ ಪಾರ್ಸೀಬಡ್ಡಿಯ ಹೊಡೆತಕ್ಕೋ ‘ಕಟ್ಟಿನ’ ಪೆಟ್ಟಿಗೋ ಚಟ್ಟಾಗಿ ಕೊರಗುತ್ತಲೂ, ಧನಿಗಳು ಹುಟ್ಟುವಳಿಯಿಂದ ಕಂದಾಯ ತೆರುವುದೇ ಕಷ್ಟವಾಗಿ ಸಾಲದ ಬಡ್ಡಿ ಬೆಳೆಯಿಸುತ್ತಲೂ, ಮನೆಮನೆಗಳಲ್ಲಿ ಮುನ್ಸಿಪಾಲಿಟಿಯ ತೆರಿಗೆ ತೆರಲಿಕ್ಕೆ ಚೆರಿಗೆ ಮಾರೋಣವೇ ಎಂದು ಯೋಚಿಸುತ್ತಲೂ ಇರುವಾಗ ದಸರಾ ಬರುತ್ತದೆ! ಆಗ ನೀನು ತಾಲೂಕು ಪೇದೆಗಳ ಮುನ್ಸಿಫ್ ಕೋರ್ಟು ಜವಾನರ, ಟಪ್ಪಾಲ್ ಬಟವಾಡೆಯವರ ಇತ್ಯಾದಿ ವರ್ಗಕ್ಕೆ ಸೇರಿದವರೆಲ್ಲರ ಜೇಬಿನಲ್ಲಿ ಮೂಗೊರಸಿದ ಕರವಸ್ತ್ರದಡಿಯಲ್ಲಿ ಅಡಗಿದ್ದು ಪೂರ್ವೋಕ್ತ ಮಹಾಶಯರ ಮೇಜುಗಳ ಮೇಲೆ ಹಾರಿ ಕುಳಿತುಕೊಳ್ಳುವಂಥವನಾಗು. ಆಗ ನಿನ್ನ ಮನೋಭಿಷ್ಟವು ನೆರವೇರುತ್ತದೆ” ಎಂದು ಬ್ರಹ್ಮನು ಅಭಯವಚನವನ್ನು ದಯಪಾಲಿಸಿ ನಿಂಬಾಫಲವನ್ನು ಕಳುಹಿಸಿ ಕೊಡುವಂಥವನಾದ. ಇತಿ ಉತ್ತರ ಭವಿಷ್ಯತ್ಪುರಾಣೇ ನಭೂತೋನ ಭವಿಷ್ಯತ್ಖಂಡೇ ಮಧ್ಯಾಂತ್ಯೆ ನಿಂಬಾಫಲ ಮಾಹಾತ್ಮ ಪರಿಪೂರ್‍ಣಮಸ್ತು! ವಾಚಕಹೃದಯಾಮೋದಮಸ್ತು! ಸರ್‍ವೇ ಜನಾಸ್ಸುಖಿನೋಭವಂತು! ಓಂ! ಶಾಂತಿ ಶಾಂತಿಶ್ಯಾಂತಿಃ!
*****


















