೧
ಆಗೊಮ್ಮೆ ಈಗೊಮ್ಮೆ ಬಿರಿದರಳಿ ಸೊಗಯಿಸಿದ
ಸೌಸವದ ಸುಮಗಳನ್ನೊಲಿದಾಯ್ದು, ಸರಿ ನೆಯ್ದು,
ಸಾಹಿತ್ಯ ಶಾರದೆಯ ಕೊರಳಿಂಗೆ ಕಲೆಗೊಳಿಸಿ
ತೊಡಿಸಿರುವೆ ಚೆಲುವಿಲ್ಲದಲರುಗಳನುಳಿದ ಸರ
೨
ಹೃದಯಾಂತರಾಳದಲಿ ಭಾವಗಳ ಘರ್ಷಣೆಯು
ಸಂಸ್ಫೂರ್ತಿವಡೆದಾಗ ಚೆಲ್ಲಿ ಹರಿದೊಗೆದಿರುವ
ನಲ್ಗವಿತೆಯೋಳಿಗಳು ವಿವಿಧ ವಿಧ ರಾಗದಲಿ
ರಸಿಕರಿಗೆ ಕಿವಿದೆರೆಗೆ ಕೇಳಿಸಲಿ ಇನಿದು ಸರ
೩
ಬಗೆ ಬಗೆಯ ಭಾವಗಳ ಬತ್ತಳಿಕೆಯಿಂದೊಗೆದು,
ಅಲರಂಬನುರುತರದ ಸುಮಬಾಣಸಾಮ್ಯವ-
ನ್ನಾಂತು ಸಂತತ ಹೃದ್ಯರೆದೆಯ ನಿರ್ಕುಳಿಗೊಂಡು,
ಸಮ್ಮೋಹಕತೆಯನೊಳಗೊಳ್ಳಲೀ ಕೂರ್ ಸರಂ
೪
ಮಿತ್ರನುದಯಾವಸರ ಪರಿಸರಂಗೊಂಡಿರಲ್
ಅರವಿಂದ ವೃಂದದೊಳಗುತ್ಕ್ರಾಂತಿ ಮಸಗಿಹುದು
ಕೆಲವು ಅರೆವಿರಿದಿರಲ್, ಕೆಲವು ಬಿರಿದರಳಿರಲ್
ಬಹುದು. ಮೌಗ್ಧ್ಯವನೊಪ್ಪುಗೊಂಡಿರ್ಪುದೀ ಸರಂ
*****
೧೯೪೦

















