ರವಿವಾರ ಮಧ್ಯಾಹ್ನ ನನ್ನ ಹುಟ್ಟುಹಬ್ಬದ ಪಾರ್ಟಿ ಮಾಡಿದೆವು. ನನ್ನ ಸ್ನೇಹಿತರಿಗೆಲ್ಲ “Lighthouse Keeper with Rin-Tin-Tin” ಸಿನೇಮಾ ತೋರಿಸಿದೆವು. ಅವರೆಲ್ಲ ತುಂಬಾ ಖುಷಿಪಟ್ಟರು. ಅದೊಂದು ಸುಂದರ ಕ್ಷಣ. ಅಲ್ಲಿ ಬಹಳಷ್ಟು ಹುಡುಗ ಹುಡುಗಿಯರಿದ್ದರು. ನಾನು ಯಾರನ್ನು ಮದುವೆಯಾಗಲಿರುವೆ ಎಂಬುದನ್ನು ತಿಳಿಯಲು ಅಮ್ಮ ಯಾವಾಗಲೂ ಬಯಸುತ್ತಿದ್ದಳು. ಆಕೆಯ ಸಣ್ಣ ಊಹೆ ಎಂದರೆ ಅವನು ಪೀಟರ್ ವೆಸಲ್ ಇರಬಹುದೆಂದಾಗಿತ್ತು. ಅದಕ್ಕೆ ನಾಚಿಕೊಳ್ಳದೇ, ಕಣ್ಣೆವೆ ಮಿಣುಕಿಸದೇ ಒಂದು ದಿನ ಆ ವಿಚಾರವನ್ನು ಅಮ್ಮನ ತಲೆಯಿಂದ ತೊಡೆದುಹಾಕುವಲ್ಲಿ ನಾನು ಯಶಸ್ವಿಯಾದೆ.
ವರ್ಷಗಳವರೆಗೆ ಲೀಸ್ ಗೂಸೆನ್ಸ್, ಸ್ಯಾನ್ ಹೌಟ್‌ಮ್ಯಾನ್ ನನ್ನ ಬೆಸ್ಟ್ ಪ್ರೆಂಡ್ಸ್ ಆಗಿದ್ದರು .ತದನಂತರ ಜೇವಿಸ್ ಸೆಕೆಂಡರಿ ಸ್ಕೂಲಿನಲ್ಲಿರುವಾಗ ನನಗೆ ಜೋಪೀ-ಡಿ-ವಾಲ್‌ಳ ಪರಿಚಯವಾಯಿತು. ನಾವಿಬ್ಬರೂ ಜೊತೆಯಾಗಿರುತ್ತೇವೆ. ಈಗಾಕೆ ನನ್ನ ಆಪ್ತ ಗೆಳತಿ. ಲೀಸ್ ಬೇರೊಬ್ಬ ಹುಡುಗಿಯೊಂದಿಗೆ ಬಹಳ ಸ್ನೇಹದಿಂದಿದ್ದಾಳೆ. ಸ್ಯಾನ್ ಬೇರೆ ಶಾಲೆಗೆ ಹೋಗುತ್ತಾಳೆ. ಆಕೆಯೂ ಬೇರೆ ಸ್ನೇಹಿತರನ್ನು ಮಾಡಿಕೊಂಡಿದ್ದಾಳೆ.
*****
















