ಕಾಣದ ಹುಣ್ಣಿಮೆಯ ಚಂದ್ರಮನ ಕಾಣಲೆಳಸಿ
ಮೇರೆವರಿಯುತಿದೆ ಸಾಗರವು.
ಸೂರ್ಯಕಿರಣಕೆ ಸೋತ ಶ್ಯಾಮನೀಲ ಸಲಿಲವೆಲ್ಲ
ತೆರೆತೆರೆಯಾಗಿ ಹೊಳೆವ ಬೆಳ್ಳಿಯಾಗುತಿದೆ, ತಿಳಿಹಸಿರಾಗುತಿಹುದು.
ಅಪರಂಪಾರವಾದ ಆಕಾರವೆ!
ಇಂತೇಕೆ ಅಬ್ಬರಿಸಿ ಎದ್ದು ನಿಂತೆ?
ನೀನೆತ್ತಿದ ಬೆರಳಿಗೆ ಕಂಪಿಸಿತು ನೀರುಗುದುರೆ.
ಅಸ್ತವ್ಯಸ್ತವಾದ ನಿನ್ನ ರೂಹಿಗೆ
ತೇಲುಗಣ್ಣನಾದ ಮಾನವನು.
ಸುತ್ತಣ ಗಿರಿಕಂದರಗಳೆಲ್ಲ ಚೇತನೆಗೊಂಡೆದ್ದು
ತಾಂಡವಭೈರವನ ತಾಳಕ್ಕೆ ನರ್ತಿಸಲೆಸಗಿದಂತೆ
ಆಕಾಶಪರ್ಯಂತವಾಗಿದ್ದ ನೀನು
ಅವಕಾಶವಿಲ್ಲದೆ ಮೇಲೆ ಕೆಳಗಾಗುತಿರಲು,-
ನಮಗೆಲ್ಲಿಯ ನಿದಾನ? ನಮಗೆಲ್ಲಿಯ ಸಮಾಧಾನ?
ಬೇಡ! ಬೇಡ! ಹೂಡದಿರು ನಿನ್ನ ರುದ್ರನಾಟ್ಯವನು.
*****


















