ನಾಗಪ್ಪಗ್ಹಾಲ ಹೊಯ್ಯೋಣ
ನಾಗರ ಹೆಡಿಯ್ಹಾಂಗ ಆಡೋಣ ಪ
ನಾಗರ ಪಂಚಮಿ ನಾಡ ಹೆಣ್ಣಿಗೆ ಹಬ್ಬ
ನಾಗಪ್ಪಗ್ಹಾಲ ಎರಿಯೋಣ || ನಾ || ನನ ಗೆಣತಿ
ನಾಗರ ಹೆಡಿಯ್ಹಾಂಗ ಆಡೋಣ || ನಾ ೧
ಗುರುದೇವ ನಿಮವಾಲ, ಹರಹರನೆ ನಿಮಪಾಲ
ಶರಣರಿಗೆ ಹಾಲು ಹಿರಿಯರಿಗೆ || ನಾ || ಎರಿಯೋಣ
ಕಿರಿಯರಿಗೆ ಹಾಡಿ ಹರಿಸೋಣ || ನಾ ೨
ಅಳ್ಳಿಟ್ಟು, ತಂಬಿಟ್ಟು, ಮಾಡಿಟ್ಟ ಎಳ್ಳುಂಡಿ
ದಳ್ಳೂರಿ ಕಣ್ಣ ಹಣಿಯವನ | ನಾ || ಕೊರಳಾನ
ನಾಗ ನಿನಗೆಡಿಯೊ ಕೈಮುಗಿದು || ನಾ ೩
ವಾರೀಽಗಿ ಗೆಳತೇರ ಕೇರಿಯ ಕೆಳದೇರ
ಸೇರಿ ಒಂದೆಡೆ ಕೂಡೋಣ || ನಾ || ಜೋಕಾಲಿ
ತೂರಿ ಜೀಕಽವ ಆಡೋಣ || ನಾ ೪
ಚಂದ್ರಕಾಳಿಯ ಸೀರಿ ಚಂದ್ರ ಕುಪ್ಪುಸ ತೊಟ್ಟು
ಬಂದ ಹಬದಾಗ ನಲಿಯೋಣ || ನಾ || ನಕ್ಕಾಡಿ
ಒಂದಾಗಿ ಇದ್ದು ಅಗಲೋಣ || ನಾ ೫
ಸಾಕಾಗುತನ ಕೂಡಿ ಜೋಕಾಲಿ ಜೀಕೂನ
ನಾಗರ ಮಿಡಿಯಾಗಿ ಸುಳಿಯೋಣ || ನಾ || ವರವರುಷ
ನಾಗರಪಂಚಮಿಗೆ ಕೂಡೋಣ || ನಾ ೬
ಗಂಡನ ಮನಿಯಾನ, ಕಂಡ ಬಾಳುವೆ ಹಾಡಿ
ಉಂಡು ಓಡ್ಯಾಡಿ ಆಡೋಣ || ನಾ || ಮನೆ ಮಾತ
ಹಿಂಡಿನಾಗಾಡಿ ಮರೆಯೋಣ || ನಾ ೭
ಪಂಚಮಿ ಬರಲೆವ್ವ, ಮಂಚ ಕಟ್ಟಲಿ ಮನೆಗೆ
ಕೆಂಚೆ ಗೆಳತೇರು ಕೂಡಽಲಿ ||ನಾ || ನಮ ಜೀಕ
ಮಿಂಚಿ ಮುಗಲೀಗೆ ಏರಽಲಿ || ನಾ ೮
ನಾಗರ ಪಂಚಮಿ, ನಾಡ ಹೆಣ್ಣಿಗಿ ಹಬ್ಬ
ನಾಗಪ್ಪಗ್ಹಾಲ ಎರೆಯೋಣ || ನಾ || ನನ ಗೆಣತಿ
ನಾಗರ ಹೆಡಿಯ್ಹಾಂಗ ಆಡೋಣ || ನಾ ೯
*****


















