ಕಳೆದುಹೋಗಲ್ಲ ಮಗು…

ಕಳೆದುಹೋಗಲ್ಲ ಮಗು…

ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ.. ಎಂದು ಕಥೆ ಹೇಳಲು ಪ್ರಾರಂಭಿಸದೇ ಇದ್ದರೆ ಮಗಳಿಗೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ.. ಗಂಡಾಗಲೀ ಹೆಣ್ಣಾಗಲೀ, ಮಗುವೊಂದಿರಲಿ ಎಂಬ ಮಂತ್ರದ ಆಧಾರದಂತೆ ಮಗಳು ಹುಟ್ಟಿ, ಅವಳಿಗೆ ಅಕ್ಷರ ಸಾಧತೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಸಲುವಾಗಿ ದಿನಾ ಮಲಗುವಾಗ ಪತ್ರಿಕೆ ಮ್ಯಾಗಜಿನ್‌ಗಳಲ್ಲಿ ಬರುತ್ತಿದ್ದ ಜೋಕುಗಳನ್ನೋ ಕಥೆಗಳನ್ನೋ ಹೇಳುತ್ತಾ ಪುಸ್ತಕ ಪ್ರೀತಿಯನ್ನು ಬೆಳೆಸಬೇಕೆಂದು ಪ್ರಯತ್ನಿಸುತ್ತಿದ್ದೆ. ಆದರೆ ಆಕೆಗೆ ಅದು ಎಷ್ಟರಮಟ್ಟಿಗೆ ಸೆಳೆಯಿತೋ ಗೊತ್ತಿಲ್ಲ; ಆದರೆ ನನಗೆ ಮಾತ್ರ ಏಕತಾನತೆಯಿಂದಾಗಿ ಪತ್ರಿಕೆಯ ಮುಖಪುಟದ ಸುದ್ದಿಗಳಿಗೂ ಜೀವವೇ ಇಲ್ಲವೇನೋ ಅನಿಸಲಾರಂಭಿಸಿತ್ತು.

ಕಾಶ್ಮೀರದ ಕಣಿವೆಯಲ್ಲಿ ಗುಂಡಿಟ್ಟು ಹನ್ನೆರಡು ಪಂಡಿತರ ಕಗ್ಗೊಲೆ.. ಬಾಂಬೆಯ ಬಿಗ್‌ಬಜಾರ್‌ನಲ್ಲಿ ಬಾಂಬ್ ಸಿಡಿದು ನಲವತ್ತನಾಲ್ಕು ಜನರ ಮಾರಣ ಹೋಮ.. ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಇಪ್ಪತ್ನಾಲ್ಕು ಜೀವಗಳ ಬಲಿ.. ಸಂಸತ್ ಮೇಲೆ ದಾಳಿ.. ಇರಾಕ್ ಅಧ್ಯಕ್ಷ ಸರ್ವಾಧಿಕಾರಿ ಸದ್ದಾಂ ನೇಣಿಗೆ.. ಹೀಗೆ ಬೆಳಗಾದರೆ ಎದ್ದು ಓದುತ್ತಿದ್ದ ನೂರಾರು ಸುದ್ದಿಗಳು ನಿಜಕ್ಕೂ ನಿರ್ಜೀವವೆನಿಸಲಾರಂಭಿಸಿದ್ದವು. ಹಾಗೂ ಇವೆಲ್ಲಾ ದಿನನಿತ್ಯ ನಡೆಯಲೇಬೇಕಾದ ಕ್ರಿಯೆಗಳೇನೋ ಎನ್ನುವಂತೆ, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇನೋ ಎನ್ನುವಂತೆ.. ಮನೆಯ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಮೇಲೇ ಮಧ್ಯರಾತ್ರಿ ಎರಡು ಲಾರಿಗಳು ಢಿಕ್ಕಿ ಹೊಡೆದು, ಟ್ಯಾಂಕರ್‌ಗೆ ಬೆಂಕಿ ಹತ್ತಿಕೊಂಡು ನಾಲ್ವರು ಸಜೀವ ದಹನವಾದ ಸುದ್ದಿಯನ್ನು ಓದಿದ್ದೂ ಬೆಳಗಿನ ಪೇಪರ್‌ನಲ್ಲೇ.. ಅದೇ ಜಾಗದಲ್ಲೇ ನೂರಾರು ಸಲ ಅಡ್ಡಾಡಿದ್ದರೂ ಅದಕ್ಕೊಂದು ಜೀವಂತಿಕೆ ಇದೆ ಅನಿಸಲಾರದಷ್ಟು ಬದುಕು ನಿಷ್ಕ್ರಿಯವಾಗಿಹೋಗಿತ್ತು ಜೀವನ.

ದಿನಬೆಳಕಾದರೆ ಮನೆ ಬಾಗಿಲಿಗೆ ಬಂದು ಬೀಳುವ ಎರಡು ಮೂರು ದಿನಪತ್ರಿಕೆಗಳು.. ಎಲ್ಲಾ ಪತ್ರಿಕೆಗಳ ಸಾರವೂ ಒಂದೇ, ಆದರೆ ಪದಗಳು ಮಾತ್ರ ಬೇರೆ ಬೇರೆ ಅಷ್ಟೇ.. ಟಿ.ವಿ. ಹಾಕಿದರೂ ಅವೇ ಸುದ್ದಿಗಳು.. ಬೆಳಗ್ಗೆ ಆರಕ್ಕೇ ಶುರುವಾಗುವ ಆಕಾಶವಾಣಿ ಮಾತ್ರ ಎಲ್ಲವನ್ನೂ ಹತ್ತು ಹದಿನೈದು ನಿಮಿಷದಲ್ಲಿ ಅದನ್ನೇ ಬೇರೆ ಬೇರೆ ಭಾಷೆಗಳಲ್ಲಿ ಒದರಿ, ಇದಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ತನ್ನ ಪಾಡಿಗೆ ತಾನು ಹಾಡು, ಭಾಷಣ, ಸಂದರ್ಶನ, ಫೋನ್-ಇನ್ ಅಂತ ಮೈಮರೆತುಬಿಡುತ್ತಿತ್ತು. ಅದೂ ಸರಿ ಬಿಡಿ, ಹೇಳಿದ್ದನ್ನೇ ಪದೇ ಪದೇ ಹೇಳುತ್ತಲೇ ಇದ್ದರೆ ಯಾರಾದರೂ ಯಾಕೆ ಕೇಳುತ್ತಾ ಕುಂತಾರು?
***

ಅವಳು ಮಾತ್ರ ಬೆಳಕು ಹರಿಯುತ್ತಿದ್ದಂತೆಯೇ -ಎಂದೂ ಆಗದಂತಹ ಬೆಳಕು ಇಂದು ಮಾತ್ರ ಆಗಿದೆಯೇನೋ ಎನ್ನುವಂತೆ- ಇದೀಗ ತಾನೆ ಹೊಚ್ಚಹೊಸ ಬೆಳಕು ಬಂದಿದೆಯೇನೋ ಎಂಬ ಖುಷಿಯಲ್ಲಿ ಜಳಕ ಮಾಡಿ ಅರಳೀಮರ ಸುತ್ತಲು ಹೋಗುತ್ತಿದ್ದಳು. ಆ ನೆಪದಲ್ಲಾದರೂ, ಸೋಂಬೇರಿಯಂತೆ ಎಂಟು ಗಂಟೆವರೆಗೆ ಮಲಗುವುದಾದರೂ ತಪ್ಪಿ, ಒಂದಿಷ್ಟು ವಾಕಿಂಗ್ ಮಾಡಿದಂತೆಯೂ, ನಿರ್ಮಲ ಆಮ್ಲಜನಕ ಸೇವಿಸಿದಂತೆಯೂ ಆಗುತ್ತದೆ ಬಿಡು ಎಂದು ನಾನಾದರೂ ತಗಾದೆ ತೆಗೆಯದೆ ಸುಮ್ಮನಿದ್ದೆ.

ನಡುಮನೆಯ ತುಂಬಾ ಹರಡಿಕೊಂಡು, ವಜ್ರಾಸನದಲ್ಲಿ ಕುಂತು ಓದುತ್ತಿದ್ದ ನ್ಯೂಸ್ ಪೇಪರ್‌ಗಳು; ಸತತವಾಗಿ ನ್ಯೂಸ್‌ನ್ನ ಬಿತ್ತರಿಸುತ್ತಿದ್ದ ಆಕಾಶವಾಣಿ ಎಂಬ ಅಶರೀರವಾಣಿ; ಅಲ್ಲಿ ಹಾಗಾಯಿತು, ಇಲ್ಲಿ ಹೀಗಾಯಿತು ಎಂದು ನಿರ್ಜೀವ ಚಿತ್ರಗಳಿಗೆ ಚಲನೆಯ ರೂಪುಕೊಟ್ಟು ಜೀವಂತಿಕೆ ತುಂಬಲು ಯತ್ನಿಸುವ ದೂರದರ್ಶನ – ಎಲ್ಲವನ್ನೂ ಧಿಕ್ಕರಿಸುವಂತೆ ಒಳಗೆ ನುಗ್ಗಿಬಂದ ಹೆಂಡತಿಯ ಬೀಸಿಗೇ ಪತ್ರಿಕೆಗಳು ಹಾರಿ ಮೂಲೆ ಸೇರಿದವು. ಟಿ.ವಿ.ಸ್ವಿಚ್ ಆರಿಸಿ, ರೇಡಿಯೋದ ಕಿವಿಹಿಂಡಿ ಸುಮ್ಮನಾಗಿಸಿ, ‘ಈ ಪೇಪರಿನ ಥರಾ ಇನ್ನೊಂದ್ನಾಲ್ಕು ಟಿ.ವಿ., ರೇಡಿಯೋ ತಂದಿಟ್ಟು ಹಾಕ್ಕೊಳ್ರೀ.. ಒಂದೇ ಟೀವೀಲಿ ಒಂದೇ ಸಲಕ್ಕೆ ಎಲ್ಲಾ ಚಾನೆಲ್‌ಗಳನ್ನ ನೋಡಕ್ಕಾಗಲ್ಲ, ಒಂದೇ ರೇಡಿಯೋದಲ್ಲಿ ಎಲ್ಲಾ ಸ್ಟೇಷನ್‌ನ ಕೇಳಕ್ಕಾಗಲ್ಲ..’ ಎಂದು ವರಾತ ತೆಗೆದಳು. ‘ಬೆಸ್ಟ್ ಐಡಿಯಾ, ಅಂಗೇ ಮಾಡ್ತೀನಿ..’ ಅಂದೆನಾದರೂ ಹಾಗೆ ಮಾಡಲು ಸಾಧ್ಯವಿರಲಿಲ್ಲ ಎಂಬುದು ಬೇರೆ ಮಾತು.

‘ಬೆಳಗ್ಗೆ ಎದ್ದು ಲಕ್ಷಣವಾಗಿ ವಾಕಿಂಗ್ ಹೋಗ್ಬಂದು ಸ್ನಾನ ಮಾಡಿ, ಪೂಜೆ ಮಾಡಿ ಆಫೀಸಿಗೆ ಹೋಗದುನ್ನ ಬಿಟ್ಟು ಸುಮ್ಮನೇ ಎರಡು-ಮೂರು ಗಂಟೆ ಟೈಂ ವೇಸ್ಟ್ ಮಾಡ್ತೀರಲ್ರೀ.. ಈ ಪೇಪರ್ರಿಗೆ, ಆ ಕರೆಂಟಿಗೂ ಸುಮ್ಮನೇ ದುಡ್ಡು ವೇಸ್ಟು. ಅದರ ಬದಲು ಮಗಳನ್ನ ಎಬ್ಬಿಸಿಕೊಂಡು ಪಾಠನಾದ್ರೂ ಹೇಳಿಕೊಡ್ರೀ, ಸಾರ್ಥಕವಾಗುತ್ತೆ..’ ಎನ್ನುತ್ತಾ -ಯಾರಾದರೂ ಕೇಳಿಸಿಕೊಳ್ಳುತ್ತಾರೋ, ಬಿಡುತ್ತಾರೋ ಎಂದೂ ಕೇರು ಮಾಡದೇ- ತನ್ನಷ್ಟಕ್ಕೆ ತಾನು ಒದರುತ್ತಾ, ಆ ಸಿಟ್ಟನ್ನೆಲ್ಲಾ ಮಗುವಿನ ಮೇಲೆ ಹಾಕುವವಳಂತೆ ದಡದಡನೇ ಹೋಗಿ, ಮಲಗಿ ಸುಖನಿದ್ರೆಯಲ್ಲಿ ತೇಲಾಡುತ್ತಿದ್ದ ಮಗಳ ಮೇಲೆ ಆಕ್ರಮಣ ಮಾಡುವವಳಂತೆ ಧಡಕ್ಕನೇ ರಗ್ಗನ್ನ ಕಿತ್ತೆಸೆದು -ಆಕೆಗೆ ದಿನ ಬೆಳಕಾಗುವುದೇ ಹಿಂಗೇ ಏನೋ ಎಂಬ ಅನುಮಾನ ಬರುವಂತೆ- ‘ನಿನಗಾದ್ರೂ ಬುದ್ದಿ ಬೇಡವಾ.. ಎದ್ದು ಮರ್ಯಾದೆಗೆ ಪಾಠ ಹೇಳುಸ್ಕಣಕ್ಕಾಗಲ್ವ..’ ಎಂದು ಏನೂ ಅರಿಯದ ಎಲ್.ಕೆ.ಜಿ. ಓದುವ ಕಂದಮ್ಮನನ್ನ ಗುರಾಯಿಸಿದಳು. ಯಾರಿಗೆ ಬುದ್ದಿ ಇಲ್ಲವೋ ಎಂಬ ಅನುಮಾನ ನನ್ನನ್ನ ಕಾಡಲಾರಂಭಿಸಿತು.
***

ಮಗುವೊಂದರ ಎಲ್ಲಾ ಸುಖಗಳನ್ನು ಅನುಭವಿಸಿದ ನಾಲ್ಕೈದು ವರ್ಷಗಳ ನಂತರ ಒಬ್ಬ ಮಗನೂ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಹೆಂಡತಿಗೆ ಅನಿಸಲಾರಂಭಿಸಿ, ದಿನವೂ ರಾತ್ರಿ ಪೀಡಿಸಲಾರಂಭಿಸಿದ್ದಳು. ಕಂಡ ಕಂಡ ದೇವರುಗಳಿಗೆಲ್ಲಾ ಹರಕೆ ಹೊತ್ತು, ತಿಂಗಳಾಗುವ ಮೊದಲೇ ಇನ್ನೇನು ತನಗೆ ಗಂಡು ಮಗು ಹುಟ್ಟೇ ಬಿಟ್ಟಿತೆನ್ನುವಂತೆ ಸಂಭ್ರಮಿಸುತ್ತಿದ್ದಳು. ಪಕ್ಕದ ಮನೆಯ ಲತಾಗೆ ಎರಡೂ ಹೆಣ್ಣು ಮಕ್ಕಳು ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ ರೀ.. ಅವರಪ್ಪಗೆ ಬಹಳ ದುರಾಸೆ, ಅದಕ್ಕೇ ಎರಡೂ ಹೆಣ್ಣು ಆಗಿದ್ದಾವೆ ಎಂದು ಆಡಿಕೊಳ್ಳುತ್ತಿದ್ದಾರೆ ರೀ.. ಎಂದು ಸುತ್ತಮುತ್ತಲಿನವರ ಪ್ರವರಗಳನ್ನು ವರ್ಣಿಸುತ್ತಾ, ಈಗಾಗಲೇ ಒಬ್ಬ ಹೆಣ್ಣು ಮಗಳ ಅಪ್ಪನಾಗಿರುವ ನನಗೆ ಇನ್ನೊಂದು ಹೆಣ್ಣು ಮಗು ಆಗದಂತಿರಲಿ ಎಂದು ನನಗೇ ಅನಿಸಿಬಿಡಬೇಕೆನ್ನುವಂತೆ ಮಾಡಿಬಿಡುತ್ತಿದ್ದಳು.

ಅವಳ ಯಾವ ಪೂಜೆಗೆ ಆ ಭಗವಂತ ಒಲಿದನೋ ಕಾಣೆ. ಆರು ತಿಂಗಳಾಗುತ್ತಿದ್ದಂತೆ ಅಂತೂ ತನಗೆ ಗಂಡು ಮಗು ಹುಟ್ಟುತ್ತಿದೆಯೆಂಬ ಸತ್ಯವನ್ನು ಯಾವ ಡಾಕ್ಟರರಿಗೋ ಓಲೈಸಿ ತಿಳಿದುಕೊಂಡು ಸಂಭ್ರಮಿಸಲಾರಂಭಿಸಿದ್ದಳು. ಅವಳ ಆತಂಕ, ಉದ್ವೇಗ ಎಷ್ಟಿತ್ತೆಂದರೆ, ಆಕೆಗೆ ಈ ಪ್ರಪಂಚದಲ್ಲಿ ಈ ವಿಷಯ ಬಿಟ್ಟು ಬೇರೆ ಯಾವುದೂ ಮುಖ್ಯವೇ ಅಲ್ಲ ಅನಿಸಿಬಿಟ್ಟಿತ್ತು. ಒಂದು ವೇಳೆ ಡಾಕ್ಟರರ ಭವಿಷ್ಯ ಸುಳ್ಳಾಗಿ ಎಲ್ಲಿ ತನಗೆ ಹೆಣ್ಣು ಮಗು ಆಗಿಬಿಡುತ್ತದೋ ಎಂದು ಚಡಪಡಿಸಲಾರಂಭಿಸಿದ್ದಳು. ಅವಳ ತಳಮಳವನ್ನು ತಾಳಲಾರದೇ ಒಂದು ರಾತ್ರಿ ಮೂರೂವರೆ ಗಂಟೆಗೆ, ಮಲಗಿದ್ದ ನಾಲ್ಕು ವರ್ಷದ ಮಗಳೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಆಸ್ಪತ್ರೆಗೆ ಸೇರಿಸಬೇಕಾಯಿತು!

ಆ ಅಪರಾತ್ರಿಯಲ್ಲಿ ಫೋನು ಮಾಡಿ ಡಾಕ್ಟರರನ್ನು ಎಬ್ಬಿಸಿ ಆಸ್ಪತ್ರೆಗೆ ಕರೆಸಿಕೊಂಡದ್ದಾಯಿತು. ಏಳು ತಿಂಗಳಲ್ಲಿ ಮಗು ಹುಟ್ಟಿದರೆ ಅದರ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆಯಾಗಿರದೇ ಅದರ ಜೀವಕ್ಕೆ ಅಪಾಯವಾದರೂ ಆಗಬಹುದು ಎಂದು ಡಾಕ್ಟರರು ಮಗುವಿನ ಹುಟ್ಟನ್ನೇ ಮುಂದಕ್ಕೆ ಹಾಕಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಲಾರಂಭಿಸಿದ್ದರು. ಎಷ್ಟು ಹೇಳಿದರೂ ಕೇಳದೇ, ತಂದ ತಡೆದುಕೊಳ್ಳಲಾಗುತ್ತಿಲ್ಲ, ದಯವಿಟ್ಟು ಸಿಜೇರಿಯನ್ ಮಾಡಿ ತೆಗೆದುಬಿಡಿ ಡಾಕ್ಟರರೇ ಎಂದು ಬಡಬಡಾಯಿಸಲಾರಂಭಿಸಿದ್ದಳು. ಅವರಾದರೂ ಇನ್ನೇನು ಮಾಡಿಯಾರು? ಇದುವರೆಗೂ ಲೇಬರ್ ಪೇನ್ ಬರದಂತೆ ಕೊಟ್ಟಿದ್ದ ಇಂಜೆಕ್ಷನ ಬದಲಾಗಿ ನೋವು ಬರುವಂತಹ ಇಂಜೆಕ್ಷನ್ ಕೊಟ್ಟರು!

‘ಸುಮ್ಮನೆ ಕೂರಬಾರದು.. ಒಂದಷ್ಟು ಚೆನ್ನಾಗಿ ಓಡಾಡಬೇಕು..’ ಅಂತ ಹೇಳಿ ಹೋದ ಡಾಕ್ಟರರು ಗಂಟೆಯಾದರೂ ತಿರುಗಿ ನೋಡಲೇ ಇಲ್ಲ. ಅದು ಕೆಲಸ ಮಾಡಲು ಇನ್ನೆಷ್ಟು ಹೊತ್ತು ಬೇಕೆಂದು ಅವರಿಗೆ ಗೊತ್ತಿರಬೇಕು. ಆದರೆ ಈಕೆ ಸುಮ್ಮರಬೇಕಲ್ಲ.. ನನ್ನ ಜೀವ ತಿನ್ನಲಾರಂಭಿಸಿದಳು. ‘ಎಂತ ಆಸ್ಪತ್ರೆ ಅಂತ ತಂದು ಸೇಸಿದ್ರೋ.. ನಾನು ಇಂಗಾದ್ರೂ ಸಾಯ್ಲಿ ಅಂತ ಕಾದಿದೀರೇನೋ.. ಹಾಳಾಗೋಗ್ಲಿ, ನನ್ನನ್ನ ಸಾಯ್ಸಾದ್ರೂ ಸಾಯಿಸ್ಬಿಡ್ರೀ.. ನಂಗೆ ತಡೆಯಕ್ಕಾಗ್ತಾಯಿಲ್ಲ..’ ಅನ್ನುವುದರ ಜೊತೆಗೆ ಕೈಯ್ಯಿಂದ ಹೊಟ್ಟೆಯೊಳಗಿರುವ ಮಗುವಿನ ಜುಟ್ಟು ಹಿಡಿದೆಳೆದು ಹೊರಕ್ಕೆಸೆದುಬಿಡುವವಳಂತೆ ಒದ್ದಾಡಲಾರಂಭಿಸಿದಳು.. ನಾನಾದರೋ ಅವಳ ಅವಸ್ಥೆ ನೋಡಲಾರದೇ, ಡಾಕ್ಟರರನ್ನ ಹುಡುಕಿಕೊಂಡು ಹೋಗಿ, ಅವಳ ನೋವನ್ನ ನನ್ನದೇ ನೋವು ಎನ್ನುವಂತೆ ವಿವರಿಸಿ ಏನಾದರೂ ಪರಿಹಾರ ನೀಡಿ ಅಂತ ಕೋರಿಕೊಂಡೆ. ಕ್ಯೂ ನಿಂತಿದ್ದ ಹತ್ತಾರು ಜನ ಗರ್ಭಿಣಿಯರ ನೋವನ್ನೆಲ್ಲಾ ತನ್ನದೇ ಎನ್ನುವಂತೆ ಹಾಗೂ ಇದೆಲ್ಲಾ ಸಹಜ ಎನ್ನುವಂತೆ ಅವರನ್ನೆಲ್ಲಾ ಸಮಾಧಾಸುತ್ತಿದ್ದ ಡಾಕ್ಟರರು, ನನ್ನೆಡೆ ನೋಡಿ ಒಂದು ತಿಳಿನಗೆ ಬೀರಿ ಸುಮ್ಮನಾದರು.

ನನಗೋ ಮತೆ ಮತ್ತೆ ಪೀಡಿಸಲು ಸಂಕೋಚವಾಗಿ ಸುಮ್ಮನೇ ನಿಂತೆ. ಹೆಂಗಸರ ಈ ಲಿಂಗಸಂಬಂಧೀ ಸಮಸ್ಯೆಗಳನ್ನು ಗಂಡಸಾದ ಆ ಡಾಕ್ಟರರು ಹೇಗೆ ನಿಭಾಯಿಸುತ್ತಾರೋ ಎಂದು ಸುಮ್ಮನೇ ನೋಡುತ್ತಾ ನಿಂತಿದ್ದೆ -ಅಲ್ಲಿ ಹೋದರೆ ಅವಳ ಸಂಕಟ ನೋಡಲಾಗುವುದಿಲ್ಲ ಬೇರೆ. ಒಬ್ಬೊಬ್ಬರದೂ ಒಂದೊಂದು ತರಹದ ನೋವು.. ಕೆಲವರನ್ನ ಒಳ ರೂಮಿಗೆ ಕರಕೊಂಡು ಹೋಗಿ ಪರಿಶೀಲಿಸಿ, ಹೊರಬಂದು ಅರ್ಥವಾಗದ ಭಾಷೆಯ ಪದಗಳನ್ನು ಹೇಳಿ ಏನೇನೋ ಬರೆದುಕೊಡುತ್ತಿದ್ದರು.

ನಾನು ಮತ್ತೂ ಸುಮ್ಮನೆ ನಿಂತಿರುವುದನ್ನು ನೋಡಿ -ಮೌನ ಪ್ರತಿಭಟನೆಯ ರೀತಿ ನಾನು ನಿಂತಿರಬಹುದೆಂದು ಭಾವಿಸಿ- ಅಂತೂ ‘ಬಾ ನೋಡೋಣ’ ಎಂದು ಹೊರಟವರನ್ನು ಹಿಂಬಾಲಿಸಿದೆ. ಹೊಟ್ಟೆಯನ್ನೆಲ್ಲಾ ಹಿಚುಕಿ ನೋಡಿದ ಅವರಿಗೆ ಅದೇನು ಅರ್ಥವಾಯಿತೋ ‘ಇನ್ನೂ ಎರಡು-ಎರಡೂವರೆ ಗಂಟೆ ಬೇಕು.. ಕೀಲುಗಳೆಲ್ಲಾ ಸಡಿಲಾಗಬೇಕು.. ಚೆನ್ನಾಗಿ ವಾಕ್ ಮಾಡಿಸಿ ಅಂದರೆ ಸುಮ್ಮನೇ ಇದ್ದೀರಲ್ಲಾ..’ ಎಂದು ನನ್ನನ್ನ -ಮತ್ತೆ ಅಲ್ಲಿಗೆ ಬರಬೇಡ- ಎನ್ನುವಂತೆ ಬೈದು ಹೋದರು.

ನಾನು ಅವಳಿಗೆ ಬೈದು -ಆಗ ತಾನೇ ಕಾಲು ಮುರಿದುಕೊಂಡವರನ್ನು ನಡೆಸುವಂತೆ- ಕೈಹಿಡಿದು ಓಡಾಡಿಸಲಾರಂಭಿಸಿದೆ, ಆಕೆಯ ಹಿಡಿ ಶಾಪದ ಜೊತೆಗೇ. ಅಷ್ಟರಲ್ಲಿ ಊರಿಂದ ಅವರಮ್ಮ ನೇರವಾಗಿ ಆಸ್ಪತ್ರೆಗೆ ಬಂದವರೇ, ಯಾಕೆ ಹೀಗೆ ಹಿಂಸೆ ಕೊಡುತ್ತಿದ್ದೀರಾ ಎನ್ನುವಂತೆ ಮುಖ ಕಿವುಚಿಕೊಂಡು ಅಸಹನೆ ತೋರುತ್ತಾ-ಆಸ್ಪತ್ರೆ ಇರುವುದೇ ಮಲಗಿ ವಿಶ್ರಮಿಸಲಿಕ್ಕೆ ಎನ್ನುವಂತೆ- ‘ಇಂಥ ಎಷ್ಟು ಹೆರಿಗೆ ಮಾಡಿಸಿಲ್ಲ, ಮೊದ್ಲು ಕಕಂಬಂದು ಮಲುಗುಸ್ರೀ.. ಅದೇನೋ ಹೇಳ್ತಾರಲ್ಲ, ಆರು ಹೆತ್ತೋಳ್ಮುಂದೆ ಮೂರು ಹೆತ್ತೋಳು ಏನೋ ಹೇಳುದ್ಲಂತೆ ಹಂಗೆ.. ಆ ಗಂಡಸು ಡಾಕ್ಟ್ರಿಗೇನು ಗೊತ್ತಾಗುತ್ತೆ?.. ಬೇರೆ ಯಾರೂ ಹೆಂಗ್ಸ್ರು ಡಾಕ್ಟ್ರು ಇರ್ಲಿಲ್ವ ಈ ಊರಲ್ಲಿ..’ ಅಂತ ನನ್ನ ಮುಖ ನೋಡದೇ ಮುಖದ ಮೇಲೆ ಹೊಡೆದಂಗೆ ಹೇಳಿ ಮಾತೃ ಪ್ರೀತಿಯಿಂದ ಆಕೆಯನ್ನು ಕರಕೊಂಡು ಹೋಗಿ ಮಲಗಿಸಿ ಯಾವಯಾವುದೋ ಅಂಗಗಳನ್ನ ನೀವಲಾರಂಭಿಸಿದರು.

ಅಂತೂ ಇಂತೂ ಆಮೇಲೆ ಹುಟ್ಟಿದ ರೆಟ್ಟೆ ಗಾತ್ರದ ಮಗು ಗಂಡು ಎಂದು ತಿಳಿದು ನಿರಾಳಳಾದಳು. ನರ್ಸ್‌ಗಳು ಅದನ್ನು ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ನೀಲಿ ಬಣ್ಣದ ಲೈಟ್ ಹಾಕಿ ಸುಮ್ಮನೇ ಕುಂತರು. ಅದಕ್ಕೆ ಏನಾಗಿದೆ ಎಂದು ಹೇಳದೇ, ತನಗೆ ಗೊತ್ತಿರುವ ವಿದ್ಯೆ ಇಷ್ಟೆ, ಮುಂದಿನದನ್ನು ನೋಡಿಕೊಳ್ಳಲು ಮಕ್ಕಳ ಡಾಕ್ಟರರೇ ಬರಬೇಕು ಎಂದುಬಿಟ್ಟರು.
***

ತನ್ನೆಲ್ಲಾ ತೀಟೆಗಳನ್ನು ತೀರಿಸಿಕೊಂಡಂತೆ ಹೊತ್ತು ಮುಳುಗುವ ಹೊತ್ತಿಗೆ ಬಂದ ಮಕ್ಕಳ ಡಾಕ್ಟರರು, ಮಗುವಿನ ಶ್ವಾಸಕೋಶಗಳು ಇನ್ನೂ ಸರಿಯಾಗಿ ಬೆಳೆಯದೇ ಇರುವ ಕಾರಣ ಉಸಿರಾಟಕ್ಕೆ ತುಂಬಾ ತೊಂದರೆಯಾಗಿದೆ, ಈಗಿಂದೀಗಲೇ ದಾವಣಗೆರೆಗೆ ಕರಕೊಂಡು ಹೋಗಬೇಕೆಂದು ಬರೆದು ಕೊಟ್ಟರು. ಅದಕ್ಕೆಲ್ಲಾ ಎಷ್ಟು ಖರ್ಚಾಗುತ್ತೋ ಗೊತ್ತಿಲ್ಲ, ಜೇಬಲ್ಲಿ ನೋಡಿದರೆ ಅಷ್ಟೊಂದು ದುಡ್ಡಿಲ್ಲ.. ಆದಾಗ್ಯೂ, ‘ಯಾಕೆ ಇಷ್ಟೊಂದು ತಡ ಮಾಡುತ್ತಿದ್ದೀರಿ, ನಿಧಾನ ಆದರೆ ಮಗುವಿನ ಜೀವಕ್ಕೇ ಅಪಾಯವಿದೆ, ಇದರ ಮೇಲೆ ನಿಮ್ಮಿಷ್ಟ..’ ಎಂದು ನಮ್ಮ ಮೇಲೆಯೇ ತಪ್ಪನ್ನು ಹೊರಿಸಿ ಹೊರಟುಬಿಟ್ಟರು.

ಆಸ್ಪತ್ರೆಯವರೇ ಆಂಬುಲೆನ್ಸ್ ತರಿಸಿ, ಅದರಲ್ಲಿ ಕೂರಿಸಿ, ಮಗುವಿನ ಮುಖಕ್ಕೆ ಆಕ್ಸಿಜನ್ ಹಾಕಿ ಕಳಿಸಿಕೊಟ್ಟರು. ಗುಟುಕು ಜೀವ ಅನ್ನುತ್ತಾರಲ್ಲ, ಹಾಗೆ ಬಡಿಯುತ್ತಿತ್ತು ಆ ಮಗುವಿನ ಹೃದಯ. ಅಲ್ಲೀವರೆಗೆ ಹೋಗುವವರೆಗಾದರೂ ಉಸಿರು ಉಳಿಯುತ್ತದೆಯೋ ಇಲ್ಲವೋ ಎಂಬ ಆತಂಕ ಒಂದು ಕಡೆ. ಆದರೆ, ಇದು ನಮ್ಮದೇ ಮಗುವೋ ಅಥವಾ ಬೇರೆ ಯಾರದಾದರೂ ಮಗುವನ್ನು ನಮ್ಮದು ಎಂದು ಕೊಟ್ಟುಬಿಟ್ಟರೋ ಎಂಬ ಅನುಮಾನ ಇನ್ನೊಂದು ಕಡೆ..

ಸೈರನ್ ಕೂಗುತ್ತಾ ಮುಂದಿನ ಬಸ್ಸು ಲಾರಿಗಳಿಂದೆಲ್ಲ ದಾರಿ ಬಿಡಿಸಿಕೊಂಡು ಗಂಟೆಯೊಳಗೆ ಮುಂದಿನ ಆಸ್ಪತ್ರೆ ಸೇರಲು ಇನ್ನೇನು ಐದು ಮಿಷ ಬಾಕಿ ಇದೆ ಅನ್ನುವ ಹಾಗೆ ಆಂಬುಲೆನ್ಸ್ ರಸ್ತೆಯ ಯಾವುದೋ ಗುಂಡಿಗೆ ದಬಕ್ಕೆಂದು ಬಿದ್ದು ಮುಂದೆ ಹೋದ ರಭಸಕ್ಕೆ ಆಕ್ಸಿಜನ ಸಿಲಿಂಡರ್ ವಾಲಾಡಿ ಏನೋ ಏರುಪೇರಾಗಿ ಮಗುವಿನ ಮೂಗಿಂದ ಬರುತ್ತಿದ್ದ ಗೂರಲು ಸದ್ದೂ ಇಲ್ಲವಾಗಿ ಮತ್ತಷ್ಟು ಆತಂಕಕ್ಕೊಳಗಾದೆ.

ಯಾರದಾದರೂ ಮಕ್ಕಳು ಸತ್ತಾಗ, ಅದಕ್ಯಾಕೆ ಇಷ್ಟೊಂದು ಅಳಬೇಕು, ಒಂದೆರಡು ವರ್ಷದಲ್ಲೇ ಅಂತಹುದೇ ಇನ್ನೊಂದು ಮಗುವನ್ನು ಪಡೆಯುವುದಕ್ಕಾಗುವುದಿಲ್ಲವೇ? ಅನ್ನುತ್ತಿದ್ದ ನನಗೆ, ಮಗುವೊಂದಕ್ಕೆ ಜೀವ ಕೊಡುವುದೂ ಎಷ್ಟೊಂದು ಕಷ್ಟದ ಕೆಲಸ ಎಂಬ ಸತ್ಯದ ಅರಿವಾಗಿತ್ತು. ನನಗರಿವಿಲ್ಲದೇ ಗಂಟಲ ನರದ ತುಂಬಾ ದುಃಖ ಉಕ್ಕಿಬಂದು ಉಸಿರಾಡಲೂ ಕಷ್ಟವೆಸಿ, ಕಣ್ಣಂಚಿನಲ್ಲೂ ನೀರು ಇಣುಕಿತ್ತು.

ಆ ಆಕ್ಸಿಜನ ಸಿಲಿಂಡರನ್ನು ಅಲ್ಲಾಡಿಸಿ ನೋಡಿದರೂ ಏನೂ ತಿಳಿಯದೇ ಗಾಬರಿಯಿಂದ ಡ್ರೈವರ್‌ಗೆ ಹೇಳಿ ಆಂಬುಲೆನ್ಸ್‌ನ್ನು ನಿಲ್ಲಿಸಿಸಿ ಸಿಲಿಂಡರಿಂದ ಗಾಳಿ ಸರಿಯಾಗಿ ಸರಬರಾಜಾಗುತ್ತಿರುವುದನ್ನು ಖಚಿತಪಡಿಸಿಕೊಂಡೆ. ಅಷ್ಟರಲ್ಲಾಗಲೇ ಅಳಲು ಶುರುಮಾಡಿದ್ದ ನನ್ನ ಅತ್ತೆ, ಬಿಟ್ಟುಬಿಟ್ಟು ಬರುತ್ತಿದ್ದ ಮಗುವಿನ ಗೂರಲು ದನಿ ಕೇಳಿ ಸಮಾಧಾನದ ನಿಟ್ಟುಸಿರು ಬಿಟ್ಟು ಕಣ್ಣೀರೊರೆಸಿಕೊಂಡರು.

ರಾತ್ರಿ ಹತ್ತು ಗಂಟೆಯ ವೇಳೆಗೆ ಮಕ್ಕಳ ಆ ಆಸ್ಪತ್ರೆಗೆ ಸೇರಿಸುತ್ತಿದ್ದಂತೆ ಮಗುವನ್ನು ಒಳಗೆ ಎಳೆದುಕೊಂಡು ಅದಕ್ಕೆ ‘ಬೇಬಿ ಆಫ್…’ ಎಂದು ತಾಯಿಯ ಹೆಸರನ್ನು ಬರೆದ ಒಂದು ಚೀಟಿಯನ್ನು ಅಂಟಿಸಿ ಅದನ್ನು ನಮ್ಮಿಂದ ಬೇರ್ಪಡಿಸಿದರು. ಕಂಡೀಷನ್ ಹೇಗಿದೆ ಡಾಕ್ಟರ್‌ರೇ ಎಂದರೆ, ಮತ್ತೇನೂ ಕೇಳದಂತೆ, ‘ಡೋಂಟ್ ವರಿ, ಇಲ್ಲಿಗೆ ಬರುವವರೆಗೆ ಜೀವ ಇದ್ದರೆ ಸಾಕು, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದುಬಿಟ್ಟರು.

ದಿನ ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಗಾಜಿನ ಕಿಟಕಿಯ ಮೂಲಕ -ಪ್ರಯೋಗ ಶಾಲೆಯಲ್ಲಿ ಸಲ್ಯೂಷನ್ ಟ್ಯೂಬ್‌ನಲ್ಲಿ ಇಟ್ಟಿರುವ ಪಿಂಡಗಳನ್ನು ತೋರಿಸುವಂತೆ- ತೋರಿಸುತ್ತಿದ್ದರು. ಅಗೋ ಆ ನಂಬರಿನ ಮಗು ನಮ್ಮದೇ ಎಂದು ಯಾರಾದರೂ ನೆಂಟರು ಬಂದಿದ್ದವರಿಗೆ ತೋರಿಸಬಹುದಾಗಿತ್ತು. ಆ ಒಂದೂವರೆ ಅಡಿ ಉದ್ದದ ದೇಹಕ್ಕೆ ಎಲ್ಲೆಲ್ಲಿಂದಲೋ ಹರಿದು ಬಂದಿರುವ ಕೆಂಪು ಹಳದಿ ನೀಲಿ ಬಣ್ಣದ ನರಗಳಂತಹ ವಿದ್ಯುತ್ ವೈರುಗಳು ಜೀವ ನೀಡುವ ಮಾಂತ್ರಿಕನ ಪ್ರಯೋಗದಂತೆ ಕಂಡುಬರುತ್ತಿದ್ದವು.
***

ಇಂತಿಪ್ಪ ಪರಿಯಲ್ಲಿ ಬದುಕುಳಿದು ಬಂದ ಮಗನನ್ನು ಯಾರೂ ಮುದ್ದು ಮಾಡುತ್ತಿರಲಿಲ್ಲ -ಮುದ್ದಿಸುವಂತಹ ಲಕ್ಷಣವೂ ಇರಲಿಲ್ಲ. ಮೂಳೆಯ ಮೈ, ತಲೆಯ ಸುತ್ತ ಮಾಂಸವೇ ಇಲ್ಲದ ಬರಿಯ ಚರ್ಮ ಅಂಟಿಸಿದಂತಿರುವ -ಥೇಟ್ ಕೋತಿಯಂತಹ- ಮುಖ.. ಎಲ್ಲರೂ ಮುದ್ದಿಸುತ್ತಿದ್ದ ಮಗಳೂ ಕೂಡ ಇವನನ್ನು ಕಂಡರೆ -ತನ್ನ ಪ್ರೀತಿಯಲ್ಲಿ ಪಾಲು ಕೇಳಲು ಬಂದವನೆಂಬಂತೆ- ದ್ವೇಷಿಸುತ್ತಿದ್ದಳು, ಹೊಡೆಯುತ್ತಿದ್ದಳು. ಹಾಗೆಲ್ಲ ಹೊಡೆಯಬಾರದು ಮಗು ಎಂದು ಬುದ್ದಿ ಹೇಳಿದರೂ, ‘ಇವನು ಹುಟ್ಟಲೇಬಾರದಾಗಿತ್ತಪ್ಪ..’ ಅಂದುಬಿಡುತ್ತಿದ್ದಳು. ತನಗೆ ತೋರಿಸುತ್ತಿದ್ದ ಪ್ರೀತಿಯಲ್ಲಿ ಕಡಿಮೆಯಾಗಿದೆ ಎಂಬ ಭಾವನೆಯೇ ಆಕೆಗೆ ಬರದಂತೆ ನೋಡಿಕೊಂಡರೂ, ಬೆಳೆಯುತ್ತಾ ಬೆಳೆಯುತ್ತ ಅವನೂ ಅಕ್ಕಾ.. ಅಕ್ಕಾ.. ಅಂತ ಅವಳ ಸಂಗ ಬಯಸಿ ಹತ್ತಿರ ಹತ್ತಿರ ಬಂದರೂ, ಅದೇಕೋ ಆಕೆ ಮಾತ್ರ ಅವನನ್ನ ದ್ವೇಷಿಸುವುದನ್ನ ಕಡಿಮೆ ಮಾಡಲಿಲ್ಲ. ಬೇರೆಯವರ ಮಕ್ಕಳನ್ನೂ ಪ್ರೀತಿಸುವ ಈ ಮಗಳು ಹೀಗೇಕೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯ ಮಕ್ಕಳು ಒಡಹುಟ್ಟಿದವರೊಡನೆ ಅನ್ಯೋನ್ಯತೆಯಿಂದ ಆಟವಾಡುವುದನ್ನು ಕಂಡಾಗಲಂತೂ, ನಮ್ಮ ಮಕ್ಕಳೂ ಹೀಗೇ ಒಟ್ಟೊಟ್ಟಿಗೇ ಆಟವಾಡುವಂತಿದ್ದರೇ.. ಎಂಬ ಆಸೆ ಹುಟ್ಟುತ್ತಿತ್ತು. ನಾವು ಎದುರಿಗಿದ್ದಾಗ ಹಾಗೆ ಮಾಡುತ್ತಾಳೆ, ಇಲ್ಲದಿದ್ದಾಗ ಚೆನ್ನಾಗೇ ನೋಡಿಕೊಳ್ಳುತ್ತಾಳೆ ಎಂದು ನಾವೂ ಸಮಾಧಾನ ಮಾಡಿಕೊಂಡು ಸುಮ್ಮನಾದೆವು.
***

ಮಗ ನಾಲ್ಕೈದು ವರ್ಷಕ್ಕೆ ಬರುತ್ತಿದ್ದಂತೆಯೇ ಆಶ್ಚರ್ಯಕರ ಎನ್ನುವಷ್ಟು ಲಕ್ಷಣವಾಗಿ ಕಾಣಲಾರಂಭಿಸಿದ. ಶಾಲೆಯಲ್ಲಿ ಎಲ್ಲರಿಗಿಂತಲೂ ಫಸ್ಟ್ ಬಂದುಬಿಡುತ್ತಿದ್ದ. ಅವರಮ್ಮ ಓದಿಸುವಾಗಲೂ, ಇಂತಹ ಎಷ್ಟು ಮಕ್ಕಳಿದ್ದರೂ ಓದಿಸಿಬಿಡಬಹುದು, ಆದರೆ ಆ ಮಗಳಿಗೆ ಹೇಳಿಕೊಡುವಷ್ಟರಲ್ಲಿ ಹುಚ್ಚು ಹಿಡಿದು ಹೋಗಿರುತ್ತದೆ ಅನ್ನುತ್ತಿದ್ದಳು. ಇನ್ನೂ ಮುಂದುವರೆದು ಈಕೆ ಯಾಕಾದರೂ ಹುಟ್ಟಿಬಿಟ್ಟಳೋ ಎಂದು ಹಲುಬುತ್ತಿದ್ದಳು. ‘ನೀನೇ ತಾನೆ, ಮೊದಲನೆಯದು ಹೆಣ್ಣು ಮಗುವೇ ಆಗಬೇಕು ಅಂತ ಯಾಯಾರ ಹತ್ರಾನೋ ಆಶೀರ್ವಾದ ಮಾಡಿಸಿಕೊಳ್ಳುತ್ತಿದ್ದದ್ದು’ ಎಂದು ರೇಗಿಸುತ್ತಿದ್ದೆ.
***

ಸಣ್ಣ ಪಟ್ಟಣವೊಂದರಲ್ಲಿ ನೆಮ್ಮದಿಯಾಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಇದ್ದಕ್ಕಿದ್ದಂತೆ ಬೆಂಗಳೂರಿಗೆ ಎತ್ತಂಗಡಿ ಮಾಡಿದಾಕ್ಷಣ ಸುಲಭವಾಗಿ ರಾಜಧಾನಿಗೆ ಬಂದುಬಿಟ್ಟೆನಲ್ಲ ಎಂಬ ಖುಷಿ ಒಂದು ಕಡೆಯಾದರೆ, ಮಕ್ಕಳಿಗೆ ಶಾಲೆಯಲ್ಲಿ ಸೀಟು ಗಳಿಸುವುದು ಹೇಗೆಂಬ ಆತಂಕ ಇನ್ನೊಂದು ಕಡೆ..
ಯಾರು ಯಾರನ್ನೋ ಹಿಡಿದು ಶಿಫಾರಸ್ಸು ಮಾಡಿಸಿ, ಸಾವಿರಗಟ್ಟಲೇ ಡೊನೇಷನ್ ಕಕ್ಕಿ, ಪ್ರತಿಷ್ಠಿತ ಶಾಲೆಯೊಂದರಲ್ಲಿ ಇಬ್ಬರು ಮಕ್ಕಳಿಗೂ ಸೀಟು ಗಿಟ್ಟಿಸುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು. ಹೊಸದಾಗಿ ಸರ್ಕಾರಿ ಕೆಲಸ ದಕ್ಕಿಸಿಕೊಳ್ಳುವುದಕ್ಕಿಂತ, ಮಂತ್ರಿ ಮಹೋದಯರನ್ನು ಹಿಡಿದು ಬೇಕೆನಿಸಿದ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಿಂತ ಇದು ಕಷ್ಟ ಎನ್ನುವಂತಾಗಿ ಹೋಯಿತು.

ಬೆಳಗ್ಗೆ ಏಳುಗಂಟೆಗೇ ಮಕ್ಕಳು ಶಾಲೆಯನ್ನು ಬಿಡಬೇಕು. ಅಷ್ಟು ಬೇಗನೇ ಎದ್ದು ಒಂದು ಕಡೆ ಅವಕ್ಕೆ ಸ್ನಾನ ಮಾಡಿಸಬೇಕು, ಇನ್ನೊಂದು ಕಡೆ ತಿಂಡಿ ತಿನಿಸಬೇಕು, ಮತ್ತೊಂದು ಕಡೆ ಯೂಫಾರಂ ಹಾಕಿಸಬೇಕು.. ಅನ್ನುವಷ್ಟರಲ್ಲೇ ಶಾಲೆಯ ವಾಹನ ಮನೆಯ ಮುಂದಕ್ಕೆ ಬಂದು ನಿಂತು ಕೆಟ್ಟದಾಗಿ ಹಾರ್ನ್ ಮಾಡುತ್ತಿದ್ದ. ದಡಬಡಾಯಿಸಿ ಮಕ್ಕಳು ಸರಿಯಾಗಿ ತಿಂಡಿಯನ್ನೂ ತಿನ್ನದೇ, ಶೂ ಒಳಗಿನ ಸಾಕ್ಸ್‌ನ್ನೂ ಹಾಕಲಾರದೇ, ವ್ಯಾನ್‌ನಲ್ಲೇ ಹಾಕಿಕೊಳ್ಳುತ್ತೇವೆಂದು ಕೈಯಲ್ಲೇ ಹಿಡಿದು ಓಡಿ ಹೋಗಿ ಹತ್ತುತ್ತಿದ್ದವು. ಒಂದೊಂದು ಮನೆಯಲ್ಲಿ ಇಷ್ಟೊತ್ತಾದರೆ ಎಲ್ಲರನ್ನೂ ಪಿಕಪ್ ಮಾಡುವುದು ಹೇಗೆಂದು ಅವನು ಅಸಹನೆ ತೋರುತ್ತಿದ್ದ.
ಅಷ್ಟೊತ್ತಿಗಾಗಲೇ ಮಕ್ಕಳ ವಿಷಯಕ್ಕೆ ಮನೆಯಲ್ಲಿ ಗಂಡ ಹೆಂಡತಿ ನಡುವೆ ಒಂದು ದೊಡ್ಡ ರಾದ್ಧಾಂತವೇ ನಡೆದುಹೋಗಿರುತ್ತಿತ್ತು. ಮಕ್ಕಳು ಮನೆಯಿಂದ ಹೊರಟ ತಕ್ಷಣ ಮನೆಯಲ್ಲಿ ಒಂದು ನೀರವ ಮೌನ.. ಮಲೆನಾಡ ಮಳೆಯಂತೆ ದಿಢೀರನೆ ಬಂದು, ರಪರಪನೇ ಬಡಿದು ಬಿಟ್ಟು ಹೋದ ಹಾಗೆ.. ಇಬ್ಬರೂ ಒಬ್ಬರ ಮೇಲೊಬ್ಬರು ಮುನಿಸಿಕೊಂಡು ನನ್ನ ಪಾಡಿಗೆ ನಾನು ಆಫೀಸಿಗೆ ಹೋಗಲು ತಯಾರಿ ನಡೆಸುತ್ತಿದ್ದರೆ ಆಕೆ ತಿಂಡಿ ಮಾಡಲು ತೆರಳುತ್ತಿದ್ದಳು.. ಮಾತಿಲ್ಲ, ಮೌನವೇ ಎಲ್ಲ.. ಎಂಟು ಎಂಟೂವರೆ ಹೊತ್ತಿಗೆ ಮನೆ ಬಿಡುವವರೆಗೆ ಎಲ್ಲವೂ ಯಾಂತ್ರಿಕ.. ದಾರಿಯಲ್ಲಿ ಬೈಕು ಓಡಿಸುವಾಗಲೂ, ರಸ್ತೆ ಮೇಲಿನ ಗಮನಕ್ಕಿಂತಲೂ ಇಡೀ ದಿನದ ನೆಮ್ಮದಿಯನ್ನೇ ಕಿತ್ತುಕೊಂಡ, ಬೆಳಗ್ಗೆ ಎದ್ದ ತಕ್ಷಣದ ಮನೆಯ ರಾದ್ಧಾಂತದ್ದೇ ಯೋಚನೆ..

ಬಿಟ್ಟು ಬಂದ ಊರಿನಲ್ಲಿ ಹೀಗೆಲ್ಲಾ ಇರಲಿಲ್ಲ. ದೊಡ್ಡ ಹಳ್ಳಿಯಷ್ಟಗಲದ ಒಂದು ಸಣ್ಣ ಊರು.. ದಿನದ ಎಲ್ಲ ಕೆಲಸಗಳನ್ನೂ ಕಾಲ್ನಡಿಗೆಯಲ್ಲೇ ಮುಗಿಸಿಬಿಡಬಹುದಾದಷ್ಟು ವಿಸ್ತೀರ್ಣ.. ಹೆಜ್ಜೆ ಹೆಜ್ಜೆಗೂ ಸಿಗುವ ಪರಿಚಯಸ್ಥರು, ಆತ್ಮೀಯರು.. ಅವರನ್ನು ಮಾತಾಡಿಸದೇ ಮುಂದೆ ಹೋದರೆ ಏನೆಂದುಕೊಳ್ಳುತ್ತಾರೋ ಎಂಬಷ್ಟು ಸೂಕ್ಷ್ಮ ವಾತಾವರಣ.. ಅದೇ ಇಲ್ಲಿ, ಕಣ್ಣೆದುರಿಗೆ ಯಾರೇ ಬಂದರೂ ಯಾಕಾದರೂ ಬಂದರೋ, ಮಾತಾಡಿಸಲೂ ಪುರುಸೊತ್ತಿಲ್ಲ ಎನ್ನುವಂತೆ ಕಂಡರೂ ಕಾಣದಂತೆ ತಪ್ಪಿಸಿಕೊಂಡು ಹೋಗಿಬಿಡಬೇಕೆನ್ನುವಂತಹ ತವಕ..

ಹೊಸ ಜಾಗ, ಗೊತ್ತಿಲ್ಲದ ಊರು. ಎಷ್ಟು ಸಲ ನೋಡಿದರೂ ಎತ್ತಲಿಂದ ಹೋದರೆ ಎಲ್ಲಿಗೆ ಸೇರುತ್ತೇವೆ ಎಂದು ಮೊದಲೇ ನಿರ್ಧರಿಸಬೇಕಾಗುತ್ತಿತ್ತು. ಒಂದೊಂದು ದಿನಕ್ಕೆ ಒಂದೊಂದು ರಸ್ತೆಯನ್ನೂ ಒನ್‌ವೇ ಎಂದು ಬದಲಾಯಿಸುತ್ತಿದ್ದುದರಿಂದ ಗೊತ್ತಿದ್ದ ರಸ್ತೆಯಲ್ಲಿ ಹೋಗದಂತಾಗಿಬಿಟ್ಟು, ಇನ್ನೊಂದು ದಾರಿ ಗೊತ್ತಿರದೇ ಪದೇಪದೇ ಯಾರುಯಾರನ್ನೋ ಕೇಳಬೇಕೆನಿಸುವಂತಾಗುತ್ತಿತ್ತು. ಒಮ್ಮೆ ಹಾಗೆ ಕೇಳುತ್ತಾ ಹೋದರೂ ಸಹಜವಾಗಿ ಇನ್ನೊಮ್ಮೆ ಆ -ಸ್ಥಳಗಳೂ ದಿನದಿಂದ ದಿನಕ್ಕೆ ಬದಲಾಗುತ್ತಿವೆಯೇನೋ ಎನ್ನುವಂತೆ- ಹೊಸ ಹೊಸ ಜಾಗಗಳು ನೆನಪಿನಲ್ಲೇ ಉಳಿಯುತ್ತಿರಲಿಲ್ಲ.. ಗೊಂದಲ, ಸಂಕೀರ್ಣ, ಪಲ್ಲಟಗಳೆಲ್ಲ ಒಮ್ಮೆಲೇ ಘಟಿಸುತ್ತಿವೆಯೇನೋ ಅನ್ನುವಂತೆ..

ರಾತ್ರೆ ಮಲಗುವಾಗ, ಅಥವಾ ಮಲಗಿದ ಮೇಲೆ ನಿದ್ರೆ ಬರದೇ, ಬೆಳಗ್ಗೆ ಆಫೀಸಿಗೆ ಹೋದ ತಕ್ಷಣ ಆ ಕೆಲಸ ಮಾಡಬೇಕು, ಈ ಕೆಲಸ ಮಾಡಬೇಕು ಎಂದೆಲ್ಲ ಯೋಚಿಸುತ್ತಾ, ನನಗೇ ಗೊತ್ತಿಲ್ಲದೇ ಯಾವಾಗಲೋ ನಿದ್ರೆಗೆ ಜಾರಿಬಿಟ್ಟಿರುತ್ತಿದ್ದೆ. ಹಾಗೆಯೇ, ಬೆಳಗ್ಗೆ ಕಛೇರಿಗೆ ಕಾಲಿಡುತ್ತಿದ್ದಂತೆಯೇ ನಮ್ಮ ಬಗ್ಗೆಯೇ ನಮಗೆ ಯೋಚಿಸಲು ಪುರುಸೊತ್ತಿಲ್ಲವೆನ್ನುವಂತೆ ಕೆಲಸ.. ಬೆಳಗ್ಗೆ ಏಳುತ್ತಿದ್ದಂತೆಯೆ ಮನೆಯಲ್ಲಿ ಶುರುವಾಗುತ್ತಿದ್ದ ಜಗಳಗಳೆಲ್ಲ ಈ ತವಕ, ತಲ್ಲಣ, ತಳಮಳಗಳಲ್ಲಿ ಮರೆತು ಹೋಗಿ, ಆ ಘಳಿಗೆಗೆ ಆ ಕ್ಷಣಕ್ಕೆ ಸಂಭವಿಸುತ್ತಿದ್ದ ಸಂದರ್ಭಗಳಿಗೆ ಸ್ಪಂದಿಸಬೇಕಾಗುತ್ತಿತ್ತು..

ಅದೊಂದು ದಿನ..

ಕಛೇರಿ ಕೆಲಸ ಆರಂಭವಾಗಿ ಗಂಟೆಯಿನ್ನೂ ಮುಗಿದಿರಲಿಲ್ಲ.. ಭಯಂಕರವಾದ, ಭೀಕರವಾದ ಸದ್ದು.. ನಮ್ಮ ಬುಡದಲ್ಲೇ, ಇಲ್ಲೇ ಎಲ್ಲೋ ಯಾವುದೋ ಸಿಟಿಬಸ್ಸಿನ ಟೈರು ಬರ್ಸ್ಟ್ ಆಗಿರಬಹುದೆನ್ನುವಂತೆ.. ಕ್ಷಣ ಮಾತ್ರದಲ್ಲಿ ಸುತ್ತಮುತ್ತಲೆಲ್ಲಾ ಜನರ ಗದ್ದಲ.. ಅಲ್ಲೆಲೋ ಒಂದು ಕಡೆ ಜನ ಗುಂಪು ಕಟ್ಟುತ್ತಿದ್ದಂತೆಯೇ ಇನ್ನೊಂದು ಕಡೆ ಜನ ಓಡುತ್ತಿದ್ದುದು ನಾವಿದ್ದ ಮಹಡಿ ಮೇಲಿನ ಕಿಟಕಿಯಿಂದ ಕಾಣುತ್ತಿತ್ತು.. ಮತ್ತೊಮ್ಮೆ ಅಂತದೇ ಇನ್ನೊಂದು ಸದ್ದು.. ದೂರದಲ್ಲೆಲ್ಲೋ ಮತ್ತೊಂದು ಸದ್ದು..

ಕ್ಷಣ ಮಾತ್ರದಲ್ಲಿ ಇಡೀ ನಗರದಲ್ಲಿ ಅಲ್ಲೋಲ ಕಲೋಲ.. ಏನಾಯಿತೆಂದು ಯಾರಿಗೂ ಗೊತ್ತಾಗುತ್ತಿಲ್ಲ.. ಅದೇನು ಬಾಂಬಿನ ಸದ್ದೋ, ಪೊಲೀಸರ ಗುಂಡಿನ ಸದ್ದೋ.. ಬಾಸ್, ‘ಇದೆಲ್ಲಾ ಇಲ್ಲಿ ಕಾಮನ್’ ಎನ್ನುತ್ತಾ, ‘ಮೀಟಿಂಗ್ ಪೇಪರ್ ರೆಡಿ ಮಾಡಬೇಕು, ಇಲ್ಲದಿದ್ದರೆ ಸಾಯಂಕಾಲ ಮೀಟಿಂಗ್‌ನಲ್ಲಿ ಮಿನಿಷ್ಟ್ರು ಚೆನ್ನಾಗಿ ಉಗೀತಾನೆ ಬಾ..’ ಎಂದು ತನ್ನ ಛೇಂಬರ್‌ಗೆ ಕರೆದೊಯ್ದು ಬಾಗಿಲು ಹಾಕಿಸಿದ.

ಅಷ್ಟರಲ್ಲಿ ಒಂದು ಪೋನ್ ಕರೆ.. ಯಾವುದೋ ಲ್ಯಾಂಡ್ ಲೈನಿಂದ.. ಅಪರಿಚಿತ ಸಂಖ್ಯೆ.. ಅದರ ಸದ್ದಿಗೇ ನನ್ನ ಮುಖ ನೋಡಿದ ಬಾಸ್ ಅಸಹನೆ ವ್ಯಕ್ತಪಡಿಸಿದ.. ‘ಸ್ವಿಚ್ ಆಫ್ ಮಾಡ್ರೀ..’ ಎಂದು ರೇಗಿದ. ಜತೆಗಿದ್ದ ಇನ್ನೂ ಕೆಲವರು ತಮಗೂ ಇದೇ ಅನ್ವಯವಾಗುತ್ತದೆಯೆನ್ನುವಂತೆ ಅರ್ಥ ಮಾಡಿಕೊಂಡು ಸ್ವಿಚ್ ಆಫ್ ಮಾಡಿದರು. ಆದರೂ ಆಮೇಲೆ ಯಾರು ಫೋನ್ ಮಾಡಿದ್ದರು ಅಂತಾದರೂ ಗೊತ್ತಾಗಲಿ ಎಂದು ನಾನು ಸೈಲೆಂಟ್ ಮೋಡ್‌ಗೆ ಬದಲಾಯಿಸಿದೆ. ಮತ್ತೆ ಅದೇ ನಂಬರಿಂದ ಕರೆ.. ಎರಡು ಮೂರು ಸಲ.. ಪಾಪ ಯಾರಿಗೆ ಏನು ಅರ್ಜೆಂಟ್ ಇತ್ತೋ, ಒಂದೇ ಒಂದು ಸಲ ಕಾಲ್ ರಿಸೀವ್ ಮಾಡಿ ಬಿಡೋಣ ಎಂಬ ತವಕ ನನಗೇನೋ ಇತ್ತು.. ಆದರೆ ಆ ಬಾಸ್.. ಮುಖ ಮುಖ ನೋಡುತ್ತಾನೆ.. ಆತನಿಗೇನೋ ನೂರಾರು ಕಾಲ್ ಬರುತ್ತಿರುತ್ತವೆ. ಅವುಗಳ ಕಾಟ ತಡೆಯಲಾರದೇ ಸ್ವಿಚ್ ಆಫ್ ಮಾಡಿಬಿಡುತ್ತಾನೆ.. ಆದರೆ ನಮಗೆ ಬರುವುದೇ ಕೆಲವು ಕಾಲ್.. ಅವು ಜಿನೈನ್ ಆಗಿರುತ್ತವೆ ಎಂಬ ಅಸಿಕೆ ನನ್ನದಾದರೂ, ಹಾಗೆಂಬುದನ್ನು ಕೇಳಲಾರದಷ್ಟು ನಿಷ್ಕ್ರಿಯನಾಗಿಹೋಗಿದ್ದಾನೆ ಆತ.

ಮಧ್ಯಾಹ್ನದ ಊಟಕ್ಕೆಂದು ಛೇಂಬರ್ಂದ ಹೊರಬಂದ ನಂತರ ಬಹುಪಾಲು ಜನ ಆಗಲೇ ಮನೆಗೆ ಹೊರಟು ಹೋಗಿದ್ದುದು ತಿಳಿಯಿತು.. ನಗರದ ಎಲ್ಲೆಲ್ಲೋ ಏಳೆಂಟು ಕಡೆ ಬಾಂಬ್ ಸಿಡಿದಿದೆಯಂತೆ.. ಎಷ್ಟೋ ಜನ ಸತ್ತು ಹೋಗಿದ್ದಾರಂತೆ.. ಇನ್ನೆಷ್ಟೋ ಜನ ಗಾಯಗೊಂಡಿದ್ದಾರಂತೆ ಎಂಬ ಸುದ್ದಿ.. ಎಲ್ಲಿ, ಎಷ್ಟು ಜನ ಇತ್ಯಾದಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.. ಬಾಂಬನ್ನು ಮುಸ್ಲಿಮರೇ ಸಿಡಿಸಿದ್ದಾರೆಂದು ಹಿಂದೂಗಳು ಗುಂಪುಗೂಡಿ ದಾಂದಲೆ ನಡೆಸಿದ್ದಾರಂತೆ.. ಅದು ಹಿಂದೂ ಮುಸ್ಲಿಂ ಗಲಾಟೆಯಾಗಿ ಪರಿವರ್ತನೆಯಾಗಿದೆಯಂತೆ.

ಏನಾಗಿದೆ ಎಂದು ತಿಳಿಯೋಣವೆಂದರೆ ಅಲ್ಲೆಲ್ಲೂ ಟಿ.ವಿ.ಇಲ್ಲ.. ಮನೆಗೆ ಫೋನ್ ಮಾಡಿ ಟಿ.ವಿ.ಯಲ್ಲಿ ನೋಡಿ ಹೇಳುವಂತೆ ಕೇಳೋಣವೆಂದು ಫೋನ್ ಮಾಡಿದರೆ ನೆಟ್ ವರ್ಕ್ ಬಿಜಿ ಎಂದು ಬರುತ್ತಿದೆ, ಇಲ್ಲವೇ ಕುಯ್ ಕುಯ್ ಎಂದು ಸುಮ್ಮನಾಗುತ್ತಿದೆ. ಅಕ್ಕಪಕ್ಕದವರು, ನ್ಯೂಸ್ ಸ್ಪ್ರೆಡ್ ಆಗಿ ಗಲಾಟೆ ಆಗುತ್ತದೆ ಅಂತ ಸರ್ಕಾರವೇ ನಗರದ ಎಲ್ಲಾ ಮೊಬೈಲ್ ಸರ್ವಿಸನ್ನು ಜಾಮ್ ಮಾಡಿದೆಯಂತೆ ಅಂದರು. ಲ್ಯಾಂಡ್ ಲೈಂದ ನೋಡೋಣ ಎಂದು ಕಛೇರಿ ಫೋಂದ ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. ಔಟ್ ಆಫ್ ರೀಚ್ ಅಂತ ಬಂತು. ಔಟ್ ಆಫ್ ರೀಚ್ ಅಂದರೆ ಲೈನ್ ವರ್ಕ್ ಮಾಡುತ್ತಿದೆ ಅಂತ ಅರ್ಥ ತಾನೇ.. ಕೊನೆಗೆ ನನ್ನ ನಂಬರಿಗೂ ಪ್ರಯತ್ನಿಸಿ ನೋಡಿದೆ. ಕಣ್ಣು ಮುಂದೆಯೇ ಮೊಬೈಲ್ ಇದ್ದರೂ ಮತ್ತದೇ ಔಟ್ ಆಫ್ ರೀಚ್ ಅಂತಲೇ ಬಂತು! ಅಂದರೆ ಔಟ್ ಆಫ್ ರೀಚ್ ಎಂಬ ಪದಕ್ಕಿರುವ ವಿವಿಧ ಅರ್ಥಸಾಧ್ಯತೆಗಳನ್ನು ಪರಿಶೀಲಿಸಬೇಕೆಂದು ಸಹೋದ್ಯೋಗಿಗಳೊಂದಿಗೆ ತಮಾಷೆ ಮಾಡಿ ನಕ್ಕು ಸುಮ್ಮನಾದೆ.

ಗಲಿಬಿಲಿಗೊಂಡಿದ್ದ ಸಹೋದ್ಯೋಗಿಗಳೆಲ್ಲ ಎಲ್ಲಾ ಕಡೆ ಸ್ಕೂಲು, ಕಾಲೇಜು, ಆಫೀಸುಗಳು ರಜೆ ಘೋಷಿಸಿರುವುದಾಗಿಯೂ, ಬಾಸ್ ಬಳಿ ಹೋಗಿ ನಾವೂ ಮನೆಗೆ ಹೋಗಲು ಅನುಮತಿ ನೀಡುವಂತೆ ಕೋರಬೇಕೆಂದು ತೀರ್ಮಾಸಿ, ಒಟ್ಟಿಗೇ ಆತನ ಛೇಂಬರ್ ಒಳಕ್ಕೆ ಹೊರಟರು. ಎಲ್ಲವನ್ನೂ ಕೇಳಿದ ಆತ ಎಲ್ಲರನ್ನೂ ಏಕಾ‌ಏಕಿ ನಿರಾಕರಿಸಿ ಗದರಿಸಿದ. ನಮ್ಮೊಳಗಿದ್ದ ಮಹಿಳೆ ಸಹೋದ್ಯೋಗಿಯೊಬ್ಬರು, ‘ನಿಮಗಂತೂ ಹೆಂಡತಿ, ಮಕ್ಕಳು ನೋಡಕೋಬೇಕು; ಊಟ, ತಿಂಡಿ ತಯಾರಿಸಬೇಕು ಅಂತ ಚಿಂತೆಯಿರಲ್ಲ ಸರ್.. ಅದಕ್ಕೆಲ್ಲಾ ಕೈಗೊಬ್ಬರು ಕಾಲಿಗೊಬ್ಬರು ಅಂತ ಆಳುಕಾಳುಗಳಿದ್ದಾರೆ.. ಮನೆಗೆ ಹೋಗೋಕ್ಕೆ ಕಾರಿದೆ, ಕಾರಿಗೊಬ್ಬ ಡ್ರೈವರ್ ಇದ್ದಾನೆ.. ಆದರೆ ನಮಗೆ?.. ನಮ್ಮದನ್ನ ನಾವೇ ಮಾಡ್ಕೋಬೇಕು. ಮನೆಗೆ ಸಿಟಿ ಬಸ್ ಹಿಡಿದು ಹೋಗಬೇಕು. ಇವತ್ತು ಬಸ್‌ಗಳೂ ಇದ್ದಾವೋ ಇಲ್ಲವೋ ಗೊತ್ತಿಲ್ಲ.. ನಮ್ಮ ಮಕ್ಕಳು ಸ್ಕೂಲಿಗೋಗಿರೋವು ಮನೆಗೆ ಬಂದವೋ ಇಲ್ಲವೋ ಗೊತ್ತಿಲ್ಲ.. ಬದುಕಿದ್ದಾವೋ ಸತ್ತಿದ್ದಾವೋ ಅಂತನೂ ಗೊತ್ತಿಲ್ಲ..’ ಎಂದು ಅಳಲಾರಂಭಿಸಿದಳು. ಆಗಲೇ ನನಗೆ ನಮ್ಮ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗಿದ್ದು ನೆನಪಾದದ್ದು.

‘ಕೆಲಸ ನಿಲ್ಲಿಸಿ ಮನೆಗೆ ಹೋದರೆ, ಯಾರಿಗೂ ರಜೆ ಮಂಜೂರು ಮಾಡದೇ ಎಲ್ಲರಿಗೂ ಎಲ್.ಡಬ್ಲ್ಯು.ಎ. ಮಾಡುತ್ತೇನೆ’ಂಬ ರಾಕ್ಷಸ ಗಾತ್ರದ ಬಾಸ್‌ನ ಮಾತಿಗೆ ಎಲ್ಲರೂ ಹೆದರಿ, ಮನಸ್ಸಿಟ್ಟು ಯಾವುದೇ ಕೆಲಸ ಮಾಡದಿದ್ದರೂ, ಸಂಜೆ ಐದೂವರೆಯಾಗುವುದನ್ನೇ ಕಾಯುತ್ತಾ, ಎಲ್ಲರೂ ಬಾಸ್‌ನ ವರ್ತನೆಯನ್ನು ಖಂಡಿಸುತ್ತ ತಮ್ಮ ತಮ್ಮೊಳಗೆ ತವಕಿಸುತ್ತ ಕುಂತುಬಿಟ್ಟರು.

ಹಿಂದೆ, ಏನಾದರೂ ತೊಂದರೆ ಆದಾಗ ಮಕ್ಕಳು ನನ್ನ ಮೊಬೈಲಿಗೆ ಫೋನ್ ಮಾಡುತ್ತಿದ್ದುದು ನೆನಪಾಗಿ, ಆಗಲೇ ನನ್ನ ಮಕ್ಕಳೇ ಏನಾದರೂ ಫೋನ್ ಮಾಡಿದ್ದರೋ ಏನೋ ಎಂದು ಆತಂಕಗೊಂಡು, ಏಳೆಂಟು ಸಲ ಮಿಸ್ ಕಾಲ್ ಬಂದಿದ್ದ ಆ ನಂಬರಿಗೆ ಪ್ರಯತ್ನಿಸಿದೆ. ಸಿಗಲಿಲ್ಲ. ಮತ್ತದೇ ಔಟ್ ಆಫ್ ರೀಚ್ ಎಂಬ ಡೈಲಾಗು.. ‘ಮೊಬೈಲ್ ಆದರೆ ಔಟ್ ಆಫ್ ರೀಚ್ ಆಗಬಹುದು. ಆದರೆ ಲ್ಯಾಂಡ್ ಫೋನೂ ಇತ್ತೀಚೆಗೆ ಔಟ್ ಆಫ್ ರೀಚ್ ಆಗ್ತಾಯಿದೆ..’ ಅಂತ ಗೆಳೆಯರ ಬಳಿ ತಮಾಷೆ ಮಾಡಿದರೂ ಏನೋ ಅವ್ಯಕ್ತ ಆತಂಕ ಮನಸ್ಸಿನಲ್ಲೇ ಮಡುಗಟ್ಟಲಾರಂಭಿಸಿತು.

ಐದೂವರೆ ಅಗುತ್ತಿದ್ದಂತೆಯೇ ಒಂದು ಸೆಕೆಂಡೂ ಕಾಯದವನಂತೆ ಸೀದಾ ಮನೆಗೆ ನುಗ್ಗಿ ಬಂದೆ. ರಸ್ತೆ ಪೂರ್ತಿ ಕರ್ಫ್ಯೂ ಮೌನ ಆವರಿಸಿತ್ತು. ಅಲ್ಲಲ್ಲಿ ಜನರು ಗುಂಪುಗೂಡಿ ಮಾತನಾಡುತ್ತಿದ್ದರು. ಬಹುಶಃ ಬಹುಪಾಲು ಎಲ್ಲರೂ ಆಗಲೇ ಅವರವರ ಮನೆ ಸೇರಿಕೊಂಡಿರಬೇಕು!

ಮನೆಗೆ ಕಾಲಿಡುತ್ತಿದ್ದಂತೆಯೇ ಹೆಂಡತಿ ಸ್ಫೋಟಗೊಂಡವಳಂತೆ, ‘ಒಂದು ಫೋನ್ ಮಾಡಕ್ಕೂ ನೆನಪಾಗಲಿಲ್ಲವಾ?’ ಅಂತ ಅಳಲು ಶುರುಮಾಡಿದಳು. ಫೋನ್ ಜಾಮ್ ಆಗಿರುವ ವಿಚಾರ ಅವಳಿಗೇನು ಗೊತ್ತು. ಆಕೆಗೆ ನನ್ನ ಫೋನೂ ಸಿಕ್ಕಿರಲಿಲ್ಲ.

ಅಳುತ್ತಿದ್ದ ಐದನೇ ತರಗತಿಯಲ್ಲಿ ಓದುತ್ತಿದ್ದ ಮಗಳು, ಗಲಾಟೆಯಾಗುತ್ತಿದ್ದಂತೆಯೇ ಶಾಲೆ ಬಿಟ್ಟಿತೆಂದೂ, ತಮ್ಮನನ್ನು ಜೊತೆ ಮಾಡಿಕೊಂಡು ಹೊರಗೆ ಬಂದು ಅಂಗಡಿಯವನ ಬಳಿಯೇ, ಅಪ್ಪ ಬಂದ ತಕ್ಷಣ ದುಡ್ಡು ಕೊಡಿಸುವುದಾಗಿ ಹೇಳಿ ಒಂದು ರೂಪಾಯಿ ಪಡೆದು, ಕಾಯಿನ್ ಬೂತಿಂದ ಫೋನು ಮಾಡಿದ್ದಾಗಿಯೂ, ನಾನು ಎತ್ತಲಿಲ್ಲವೆಂತಲೂ, ಸ್ಕೂಲ್‌ಗೆ ಡ್ರಾಪ್ ಕೊಡುತ್ತಿದ್ದ ವ್ಯಾನ್‌ನವಗೆ ಇಷ್ಟು ಬೇಗ ಶಾಲೆ ಬಿಡುವ ವಿಚಾರ ತಿಳಿಯದೇ ಅವನೂ ಬರದೇ ಇದ್ದದ್ದನ್ನು, ಇನ್ನೇನೂ ದಾರಿ ತೋರದೇ ಐದಾರು ಕಿಲೋಮೀಟರ್ ದೂರದಲ್ಲಿದ್ದ ಮನೆಗೆ ಒಂದನೇ ಕ್ಲಾಸ್‌ನಲ್ಲಿ ಓದುತ್ತಿದ್ದ ತಮ್ಮನನ್ನು ಜೊತೆಗಿಟ್ಟುಕೊಂಡು ನಡೆದುಕೊಂಡು ಬರುವಾಗ..
ಒಂದು ಕಡೆ ಜನರು ಗುಂಪೊಂದು ಅವರ ಮೇಲೆ ನುಗ್ಗಿ ಬಂದಾಗ ಇಬ್ಬರೂ ಗಾಬರಿಗೊಂಡು ಚದುರಿ ಹೋದದ್ದಾಗಿಯೂ, ಎಷ್ಟು ಹುಡುಕಿದರೂ ತಮ್ಮ ಕಾಣಲಿಲ್ಲವೆಂತಲೂ, ತನಗೆ ಭಯವಾಗಿ ಮನೆಯಲ್ಲಿ ಹೇಳಲು ಬಂದದ್ದಾಗಿಯೂ ವರದಿ ಒಪ್ಪಿಸಿದಳು. ತನ್ನದು ತಪ್ಪಾಯಿತು ಹೊಡೆಯಬೇಡಿರೆಂದು ಅಸಹಾಯಕತೆಯಿಂದ ಅವಳು ಬೇಡಿಕೊಳ್ಳುತ್ತಿದ್ದುದನ್ನು ನೋಡಿ, ‘ಇಲ್ಲಮ್ಮ, ಹೊಡೆಯಲ್ಲ..’ ಅಂತ ಅವಳನ್ನು ತಬ್ಬಿಕೊಂಡು ಸಮಾಧಾನಿಸಿದೆ. ಅದೊಂದು ಫೋನ್ ಕಾಲನ್ನು ರಿಸೀವ್ ಮಾಡಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲವೇನೋ ಅನಿಸಿತು.. ಯಾಕೋ ಅವಳ ಜೊತೆ ನನಗೂ ಅಳು ಬರುವಂತಾಯಿತು. ಒಂದು ವೇಳೆ ನಾನೇ ಹಾಗೆ ಮಾಡಿದರೆ ಮನೆಯವರೆಲ್ಲ ಎದೆಗುಂದುವರೆಂದು ಭಾವಿಸಿ, ಪೊಲೀಸ್‌ಗೆ ಕಂಪ್ಲೆಂಟ್ ಮಾಡಿ, ಹುಡುಕಿಕೊಂಡು ಕರೆತರುವುದಾಗಿ ಧೈರ್ಯ ಹೇಳಿ ಮನೆಯಿಂದ ಹೊರಟೆ.

ಆಗಲೇ ಕತ್ತಲೆ ಆವರಿಸಿತ್ತು. ಡ್ಯೂಟಿ ಮೇಲಿದ್ದ ಪೊಲೀಸ್, ‘ಬಾಂಬ್ ಗಲಾಟೆಯಲ್ಲಿ ಸತ್ತಿರುವವರ ಬಗ್ಗೆಯೇ ಇನ್ನೂ ಕೇಸ್ ರಿಜಿಸ್ಟರ್ ಮಾಡಕ್ಕಾಗಿಲ್ಲ; ಅಂತಹದರಲ್ಲಿ ಕಳೆದುಹೋಗಿರೋ ಕೇಸು ತಂದಿದ್ದೀರಲ್ರೀ’ ಅಂತ ಅಸಹನೆ ತೋರಿದ. ಇದುವರೆಗೆ ಯಾವುದೇ ಮಕ್ಕಳ ಟ್ರೇಸಿಂಗ್ ಕೇಸು ಬರದುದರಿಂದ ನನ್ನ ಕೇಸನ್ನು ರಿಜಿಸ್ಟರ್ ಮಾಡಿಕೊಂಡು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ, ‘ಸಿಕ್ಕರೆ ವಿಷಯ ತಿಳಿಸಿ’ ಎಂದು ನನಗೇ ಹೇಳಿ ಜಾರಿಕೊಂಡ.

ನನಗೂ ಸರಿಯಾಗಿ ದಾರಿ ಗೊತ್ತಿಲ್ಲದ ಈ ಊರಲ್ಲಿ ಆತನ ಶಾಲೆಯ ದಾರಿ ಹಿಡಿದು, ಆತ ತಪ್ಪಿಸಿಕೊಂಡದ್ದಾಗಿ ಮಗಳು ಹೇಳಿದ ಜಾಗದ ಜಾಡು ಹುಡುಕಿ ಅಕ್ಕಪಕ್ಕದವರನ್ನೆಲ್ಲಾ ವಿಚಾರಿಸುತ್ತಾ ನಡೆದೆ. ನಡೆದೆ.. ನಡೆದೆ… ನಡೆದೆ…. ಹತ್ತಾರು ಕಿಲೋಮೀಟರ್ ದೂರ ಸುತ್ತಿದೆ. ಹಿಂದೂ ಮುಸ್ಲಿಂ ಗಲಭೆ ಆಗಿರುವ ರಾತ್ರಿ ಬೇರೆ.. ಎಲ್ಲಾ ಕಡೆ ನೀರವ ಮೌನ.. ಬಹುಶಃ ಆ ಗಲಭೆಯ ತೀವ್ರತೆ ಕಡಿಮೆಯಿರುವುದರಿಂದ ಕರ್ಫ್ಯೂ ವಿಧಿಸಿರಲಿಲ್ಲ ಎಂದು ಕಾಣುತ್ತದೆ.. ಅಥವಾ ಊರಾಚೆಯ ಈ ಭಾಗದಲ್ಲಿ ಹಾಕಿರಲಿಕ್ಕಿಲ್ಲವೇನೋ..

ಮಗು ಇಲ್ಲೇ ಎಲ್ಲೋ ಯಾರದೋ ಮನೆಯಲ್ಲಿ ಇದ್ದರೂ ನನಗಾದರೂ ಹೇಗೆ ಗೊತ್ತಾಗಬೇಕು. ಆಟೋದಲ್ಲಿ ಮೈಕ್ ಹಾಕಿಸಿಕೊಂಡು ಅನೌನ್ಸ್ ಮಾಡಿಸಬೇಕೆಂದುಕೊಂಡೆ. ಅವಗಾದರೋ ನನ್ನ ಪೋನ್ ನಂಬರ್ ಒಂದನ್ನು ಬಾಯಿಪಾಠ ಮಾಡಿಕೊಂಡಿರುವುದನ್ನು ಬಿಟ್ಟರೆ, ಹೊಸದಾದ ಈ ಊರಿನಲ್ಲಿ ಯಾರಾದರೂ ಕೇಳಿದರೆ ಮನೆಯ ವಿಳಾಸವನ್ನೂ ಹೇಳಲು ಬರುವುದಿಲ್ಲ.

ರಾತ್ರೆ ಹನ್ನೆರಡಾದರೂ ಸುಳಿವಿಲ್ಲ. ನಾನೇ ದಾರಿ ತಪ್ಪಿಸಿಕೊಂಡ ಅನುಭವ. ಮನೆಗೆ ಫೋನ್ ಮಾಡೋಣವೆಂದು ಹತ್ತಾರು ಸಲ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಯಾರಿಗಾದರೂ ಅವನು ಸಿಕ್ಕು, ಹಣಕ್ಕಾಗಿ ಏನಾದರೂ ಬೇಡಿಕೆ ಇಡುವರೇ ಎಂಬ ಆತಂಕ ಒಂದು ಕಡೆ.. ಸಾಲ ಮಾಡಿಯಾದರೂ ಬೇಕಾದರೆ ಬೇಡಿಕೆಯನ್ನು ಈಡೇರಿಸೋಣ, ಆದರೆ ಅವನ ಜೀವಕ್ಕೆ ಏನೂ ಅಪಾಯವಿಲ್ಲದೇ ಬದುಕಿದ್ದರೆ ಸಾಕು.. ಸದ್ಯ, ಮಗಳು ಬಾಂಬ್ ಘಟನೆ ಆದ ನಂತರವೂ ತನ್ನ ಜೊತೆಗಿದ್ದನೆಂದು ಹೇಳಿದ್ದರಿಂದ ಆತನ ಜೀವಕ್ಕೇನೂ ಅಪಾಯವಾಗಿಲ್ಲವೆಂಬುದೊಂದು ಸಮಾಧಾನ. ಇಲ್ಲವಾಗಿದ್ದರೆ ಇನ್ನೇನು ಆತಂಕ ಹೆದರಿಸಬೇಕಾಗುತ್ತಿತ್ತೋ.. ಇನ್ನೆಲ್ಲಿ ಹುಡುಕಬೇಕಾಗುತ್ತಿತ್ತೋ.. ಆದರೂ..

ಹಿಂದಿರುಗಿ ಮನೆಗೆ ಬಂದಾಗ ಅವನಿಲ್ಲದ ಮನೆಯಲ್ಲಿ ಗಾಢಾಂಧಕಾರ ಕವಿದಿತ್ತು. ಅವನ ಅಜ್ಜ, ಅಜ್ಜಿಯ ಜೊತೆ ನನ್ನ ಹೆಂಡತಿಯೂ ಅತ್ತೂ ಅತ್ತೂ ಕಣ್ಣು ಕೆಂಪಗೆ ಮಾಡಿಕೊಂಡು, ಕಣ್ಣಲ್ಲಿನ ನೀರೆಲ್ಲಾ ಹಿಂಗಿಹೋಗಿ, ಊಟ ತಿಂಡಿ ಎಲ್ಲವನ್ನೂ ಬಿಟ್ಟು ಸುಸ್ತಾಗಿ ಕುಸಿದು ಕುಳಿತಿದ್ದರು. ನನ್ನಂತೆಯೇ ಹುಡುಕಲು ಹೋಗಿದ್ದ ಇನ್ನೂ ಮೂರು ನಾಲ್ಕು ಜನ ಸಂಬಂಧಿಕರೂ ಬರಿಗೈಲಿ ಹಿಂದಿರುಗಿದ್ದರು.

ಮಲಗಿದಾಗ ರಾತ್ರೆ ಎರಡಾಗಿತ್ತು. ಮತ್ತೆ ನಾಲ್ಕೂವರೆಗೇ ಎದ್ದು ಮುಖ ತೊಳೆದು ಹುಡುಕಲು ಹೊರಡೋಣವೆಂದು ಹೊರಡಲು ತಯಾರಾಗುತ್ತಿದ್ದೆ. ಬೈಕನ್ನು ಹೊರತೆಗೆದು ಹೆಲ್ಮೆಟ್ ಹಾಕಿಕೊಂಡು ಇನ್ನೇನು ಕಿಕ್ ಹೊಡೆಯಬೇಕೆನ್ನುವಷ್ಟರಲ್ಲಿ ಅಷ್ಟು ದೂರದಲ್ಲಿ ಲೈಟ್ ಹಾಕಿಕೊಂಡ ಒಂದು ಹಳೆಯ ಸ್ಕೂಟರ್ ಇತ್ತಲೇ ಬರುವುದು ಕಂಡಿತು. ಧಾವಿಸಿದೆ..

ಮೈತುಂಬಾ ಸ್ವೆಟರ್ ಹೊದ್ದು, ಸ್ಕೂಟರ್‌ನ ಮುಂದೆ ನಿಂತಿದ್ದ ಮಗುವೊಂದು ಆತಗೆ ಏನನ್ನೋ ಹೇಳಿ ಆತ ಸ್ಕೂಟರ್ ನಿಲ್ಲಿಸಿದ. ನೋಡಿದರೆ ನನ್ನದೇ ಮಗು.. ಖುಷಿಯಿಂದ ನಾನೂ ಬೈಕ್‌ನ್ನು ನಿಲ್ಲಿಸಿ ಕೆಳಗಿಳಿದೆ.. ಸಾವಿನ ಮನೆಯಿಂದ ತಪ್ಪಿಸಿಕೊಂಡು ಬಂದವನಂತೆ ಓಡಿಬಂದ ಮಗ ಛಂಗನೆ ನನ್ನ ಎತ್ತರಕ್ಕೂ ಜಿಗಿದು, ಕಾಲಲ್ಲಿ ಸೊಂಟವನ್ನು ಬಳಸಿ, ಕುತ್ತಿಗೆಯನ್ನು ಬಿಗಿಹಿಡಿದುಕೊಂಡ.

ಬೆಳಗ್ಗೆಯೇ ನಮಾಜ್‌ಗೆ ಹೊರಡುವ ಮುನ್ನ, ಮಗುವನ್ನು ಆತಂಕದಲ್ಲಿರುವ ಪೋಷಕರ ಮನೆಗೆ ತಲುಪಿಸಿಬಿಡಬೇಕೆಂದು ಆತನ ಶಾಲೆಯ ಬಳಿಗೆ ಹೋಗಿ, ಅಲ್ಲಿಂದಲೇ ಅವನು ತೋರುತ್ತಾ ಬಂದ ದಾರಿಯನ್ನು ಅನುಸರಿಸಿ ಬಂದುದಾಗಿ ಆತ ಹೇಳಿದ. ಮನೆಯವರಿಗೆಲ್ಲ ಹೃದಯ ತುಂಬಿ ಬಂದು ಆತನನ್ನು ಆಭಿನಂದಿಸಿದರು. ಆತ ಎಷ್ಟು ಬಲವಂತ ಮಾಡಿದರೂ ನಿಲ್ಲದೇ, ನಮಾಜ್‌ಗೆ ತೆರಳಲು ತಡವಾಗುತ್ತದೆಂದು ನಿಲ್ಲದೇ ಹೊರಟು ಹೋದ. ಕನಿಷ್ಟ ಆತನ ಮನೆಯ ವಿಳಾಸವನ್ನಾದರೂ ಕೇಳಿ ತಿಳಿದುಕೊಂಡಿದ್ದರೆ, ಆನಂತರ ಹೋಗಿ ಮಗುವಿಗೆ ಹಾಕಿದ್ದ ಸ್ವೆಟರ್, ಟೋಪಿಯನ್ನು ಕೊಟ್ಟು ಒಂದು ಥ್ಯಾಂಕ್ಸ್ ಹೇಳಿ ಬರಬಹುದಾಗಿತ್ತಲ್ಲ ಅನಿಸಿತು.

ನಿರಾಳಗೊಂಡ ಮಗು ಸುರಕ್ಷತೆಯ ಭಾವ ಬಂದುದರಿಂದ -ಬಹುಶಃ ರಾತ್ರಿಯೆಲ್ಲಾ ಗಾಬರಿಗೊಂಡು ಮಲಗಿರಲಿಲ್ಲವೆಂದು ಕಾಣುತ್ತದೆ- ತಾಯಿಯ ಮಡಿಲನ್ನು ಸೇರಿದಾಕ್ಷಣ ಸುಖವಾಗಿ ನಿದ್ರಿಸಲಾರಂಭಿಸಿತು. ಹಾಗೇ ಕಣ್ಮುಚ್ಚಿಕೊಂಡ ಮಗುವಿನ ಕೈಹಿಡಿತ ಸಡಿಲಗೊಂಡಾಗ ಕೈಯ್ಯಲ್ಲಿ ಏನೋ ಇರುವುದು ಕಂಡು ಬಿಡಿಸಿ ನೋಡಿದೆ – ಒಂದು ರೂಪಾಯಿಯ ಕಾಯಿನ್! ಫೋನ್ ಮಾಡಲೆಂದು ಕಾಯಿನ್ ಬೂತ್‌ನವನ ಬಳಿ ಅಪ್ಪಗೆ ಹೇಳಿ ಕೊಡಿಸುತ್ತೇನೆಂದು ಕೇಳಿ ಪಡೆದದ್ದು..

ಯಾಕೋ ನನಗರಿಯದೇ ಕಣ್ಣಾಲಿಗಳು ತೇವಗೊಂಡವು..
*****

* (ಸಂಡೇ ಇಂಡಿಯನ್ – ಮಾರ್ಚ್ ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂಪುರ
Next post ಆರಗೊಡವಿನ್ನೇನು ಮಗಳೆ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…