ಅದು ಶುಕ್ರವಾರ, ಜೂನ ೧೨, ನಾನು ಬೆಳಿಗ್ಗೆ ಆರಕ್ಕೆಲ್ಲಾ ಎದ್ದೆ. ಅಂದು ನನ್ನ ಹುಟ್ಟಿದ ದಿನ. ಆದರೆ ನಾನು ಅಷ್ಟು ಬೇಗನೇ ಏಳುವಂತಿರಲಿಲ್ಲ. ನನ್ನ ಆತುರವನ್ನು ಆರು ಮುಕ್ಕಾಲು ಗಂಟೆಯವರೆಗೂ ಅದು ಹೇಗೋ ತಡೆದುಕೊಳ್ಳಬೇಕಿತ್ತು. ಆನಂತರ ಎದ್ದು ಡೈನಿಂಗ್ ಕೋಣೆಗೆ ಹೋದೆ. ಅಲ್ಲಿ ನಮ್ಮ ಬೆಕ್ಕು ಮೂರ್ಜೆ ನನ್ನನ್ನು ಪ್ರೀತಿಯಿಂದ ಇದಿರುಗೊಂಡಿತು.
ಏಳು ಹೊಡೆಯುತ್ತಿದ್ದಂತೆ ಅಪ್ಪ ಅಮ್ಮನಿದ್ದಲ್ಲಿಗೆ ಹೋದೆ. ನಂತರ ಹೊರ ಜಗಲಿಯ ಮೇಲೆ ಬಂದು ನನಗೆ ಬಂದ ಕಾಣಿಕೆಗಳನ್ನು ಬಿಚ್ಚತೊಡಗಿದೆ. ಅದರಲ್ಲಿ ಮೊದಲ ಶುಭಾಶಯ ನಿನ್ನದಾಗಿತ್ತು. ಅದೇ ಎಲ್ಲಕ್ಕಿಂತಲೂ ಚೆಂದದ್ದಾಗಿತ್ತು. ಮೇಜಿನ ಮೇಲೆ ಹೂ ಗೊಂಚಲು, ಒಂದು ಸಸಿ, ಹಾಗೂ ಪಿಯೋನಿ ಗಿಡಗಳು [ಒಂದೇ ಸಲಕ್ಕೆ ಎರಡು ಹೂ ಬಿಡುವ ದೊಡ್ಡ ಸಸ್ಯ.] ಹಾಗೂ ಇನ್ನಿತರ ಅನೇಕ ವಸ್ತುಗಳಿದ್ದವು.
ಅಪ್ಪ ಅಮ್ಮ ನನಗೆ ಎಷ್ಟೊಂದು ವಸ್ತುಗಳನ್ನು ತಂದಿದ್ದರು. ಆ ದಿನ ಗೆಳೆಯರೆಲ್ಲ ನನ್ನನ್ನು ಸಾಕಷ್ಟು ಸತಾಯಿಸಿದರು. ಉಳಿದೆಲ್ಲ ವಸ್ತುಗಳ ಜೊತೆ ಜೊತೆಗೆ ನನಗೊಂದು ಒಬ್ಸ್ಕುರಾ ಕ್ಯಾಮರಾ, ಒಂದು ಪಾರ್ಟಿ ಗೇಮ್, ಸಾಕಷ್ಟು ಸಿಹಿತಿನಿಸುಗಳು, ಚಾಕಲೇಟುಗಳು, ಜೋಸೆಫ್ ಕೋಹೆನ್‌ನ “Tales and Legends of the Netherland”, “Daisy’s Mountain Holiday” ಮತ್ತು ಸ್ವಲ್ಪ ಹಣವೂ ಕಾಣಿಕೆ ರೂಪದಲ್ಲಿ ಸಿಕ್ಕಿತು. ಅದರಿಂದ “The Myths of Greece and Rome-Grand” ಖರೀದಿಸಬಹುದು.
ಅಷ್ಟೊತ್ತಿಗೆ ಲೀಸ್ ನನ್ನನ್ನು ಕರೆಯಲು ಬಂದಳು ಮತ್ತು ನಾವು ಶಾಲೆಗೆ ಹೋದೆವು. ವಿರಾಮದ ವೇಳೆಯಲ್ಲಿ ಎಲ್ಲರಿಗೂ ಸಿಹಿ ಬಿಸ್ಕೀಟುಗಳನ್ನು ನೀಡಿದೆ. ನಂತರ ನಾವು ಪಾಠಗಳಗೆ ಹಿಂದಿರುಗಬೇಕಿತ್ತು.
ಇವತ್ತು ಇಲ್ಲಿಗೆ ಸಾಕು- ಬೈ ಬೈ – ನಾವೀಗ ಒಳ್ಳೆಯ ಸ್ನೇಹಿತರಾಗುತ್ತಿದ್ದೇವೆ.
*****

















