ಎಂತು ಬಿದ್ದೇಳುತಿಹುದು ನೋಡು ಬಿತ್ತರದ ವಾರಿಧಿಯು!
ಎಲ್ಲಿಹರೀ ಮಂಥನವ ಗೆಯ್ವ ದೇವತೆಗಳು?
ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ:
ಕಾಣುವದು ಮಂಥನವೊಂದು; ಅಲ್ಲುದಿಸಿದ ಚಂದ್ರಮನೊಂದು,-
ಕಡಲಾಳವನುಗಿದು ಒಂದ ತುಂಬುವೆರೆ ತಾನು!
ಮುಗಿಲು ಕದ್ದ ರತ್ನೇ೦ದುವ ಕಂಡು ಮತ್ತಂತರಾಳದಿ ಬಚ್ಚಿಡುವ
ಹುಮ್ಮಸದಿ ಬಿಮ್ಮನೆ ಬಿಗಿಯುತಿದೆ ನೋಡು ಸಾಗರವು,
ಮುಗಿಲನಗಲವನೆಲ್ಲ ಮುಚ್ಚಿಬಿಡಲೆಂಬಂತೆ.
ಸೆರೆಸಿಕ್ಕ ನಾಯಕನ ಬಡಿಸಿಕೊಳಲೆಳಸುವ ಸೈನ್ಯದಂತೆ,
ಶತ್ರುಗಳ ಚದರಿಸಿ ಚಕ್ರವರ್ತಿಯ ಪಡೆವ ಸಾಮ್ರಾಜ್ಯದಂತೆ,
ಬಂಧನದಲಿದ್ದ ಲೋಕನಾಯಕನ ಬಿಡುಗಡೆಗೆದ್ದ ನಾಡವರಂತೆ:
ರೇಗುತಿದೆ, ಕಾಡುತಿದೆ, ಗದ್ದರಿಸಿ ಬೇಡುತಿದೆ ನೋಡು, ಸಾಗರವು!
ಅಲ್ಲ, ಸಾಗರವಲ್ಲವಿದು: ಶೂನ್ಯದ ತವರುಮನೆ, ನಶ್ವರತೆಯಾಗರವು;
ವಿಶ್ವವ ರಚಿಸಿದ ಪಂಚಭೂತಗಳ ಮೂಲಭೂತವಿದು,
ರಸವಾಗದ ಕಸ, ಅವಿದ್ಯೆ, ಅಂಧಂತಮಸ್ಸು.
ತನ್ನೆದೆಯುಗಿದು ಮುಗಿಲೆತ್ತಿದ ಚಂದ್ರನನ್ನು ಮುಳುಗಿಸಲೆನೆ
ಮತ್ತೆ ತೆರೆಗಳ ಜಾಲವ ಬೀಸಿದವ್ಯಕ್ತವಿದು.
ಪೆಡಂಭೂತಗಳು ಕುಣಿಯುವವು,-ತೆರೆಗಳ ಹೆಡೆಗಳ ಮೇಲೆ.
ಕೊಳ್ಳಿದೆವ್ವಗಳು ಬಳ್ಳಿಗಟ್ಟುವವು,-ಕರಿನೀರ ಕಂದರದಲ್ಲಿ.
ಪ್ರಳಯಕೌತಣವೀಯುವದು ಬ್ರಹ್ಮರಾಕ್ಷಸರ ಶಂಖನಾದ.
ಅಲ್ಲ, ಸಾಗರವಲ್ಲವಿದು : ಭಯಾನಕದಾಗರ!
ಮುಗಿಲೆಣಿಕೆಯನ್ನಳೆದವರಾರು?
ಹೃದಯಮಂಡಪದಿ ಮಂಡಿಸಿದ ಚಂದ್ರನನು ರಕ್ಷಿಸಲೆನೆ,-
ಮುಗಿಲಿಟ್ಟಿಹುದು ನೋಡು, ನಕ್ಷತ್ರಗಳ ಕಾವಲನ್ನು!
ಮುತ್ತುವೆದೆಗಾರಿಕೆಯಿರದೆ ಮೆತ್ತಗಾಗೆರಗಿಹುದು
ಚಂದ್ರನಡಿಗಂಗಲಾಚಿ,-ಮುನ್ನೀರಿದು ಬಡವನಂತೆ.
ಮುಗಿಲೆಣಿಕೆಯನ್ನಳೆದವರಾರು?
ಪರಿಧಾನದಿ ಸುರಿಯುತಿರೆ ಶುಂಬುವೆರೆಯ ಕಿರಣರಾಶಿ,
ಬೆಳಕ ಹೊಳೆಯೊಂದು ಹರಿದು ಭೇದಿಸಿದೆ ನೀಲೋದಧಿಯ.
ತುದಿಮೊದಲಿಗೆ ಕತ್ತಲೆ,-ನಡುವಷ್ಟೆ ಬೆಳಕು!
ತಾನೊಸೆದ ಚಂದ್ರಮನು ದೊರೆಯದಿರೆ, ದೊರೆಶ ಪಡಿನೆಳಲನ್ನು,-
ಮಣಿಸುತ ಕೋಟಿ ವಿಧಾನಗಳಿಂದ
ಎದೆಗವಚಿ ಕಳೆಯೇರಿ ಸಂತವಿಸಿಕೊಳುವದು ನೋಡಾ ಸಾಗರವು!
*****

















