ಬನ್ನಿ ಮುಡಿಯುನ ಬಾರ ಕೋಲು ಕೋಲ
ಚಿನ್ನ ತರವುನ ಬಾರ ಕೋಲು ಕೋಲ ಪ
ಊರ ಸೀಮೆಯ ದಾಟಿ, ಕಾಡ ಗಡಿಯನು ಸೇರಿ
ಕಾಡ ಸಂಪತ್ತ ತರ ಬನ್ನಿ || ಕೋಲು ಕೋಲ ೧
ಬೆಳದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ
ನಾಡ ಸಂಪತ್ತ ಬೆರಿ ಬನ್ನಿ || ಕೋಲು ಕೋಲ ೨
ಅರಸನಽ ಅಂಗಳಕ, ಸರಸ ರಂಗಽ ಹೊಯ್ದು
ಹೊರಸಿ ತಂದಾರ ಸಿರಿ ಬನ್ನಿ || ಕೋಲು ಕೋಲ ೩
ದೇವ ದೇವರ ಬನ್ನಿ, ದೇವ ದೈವದ ಬನ್ನಿ
ನಾವು ಮುಡಿವೂದು ನಮ ಬನ್ನಿ || ಕೋಲು ಕೋಲ ೪
ಹಡೆದ ತಾಯಿಗೆ ಬನ್ನಿ, ಹಡೆದ ತಂದಿಗೆ ಬನ್ನಿ
ಪಡೆದ ಗಂಡನಿಗೆ ನಮ ಬನ್ನಿ || ಕೋಲು ಕೋಲ ೫
ಚಿನ್ನದ ಕೈಗಡಗ, ಚನ್ನೇರು ಇಟಗೊಂಡು
ಚಿನ್ನದಾಭರಣಽ ನಡ ಬಾಗಿ || ಕೋಲು ಕೋಲ ೬
ಗೆಜ್ಜೆ ಹೆಜ್ಜೀಹಾಕಿ, ಗುಜೇರು ಕುಣಿದಾರ
ವಜ್ಜರ ವಡ್ಯಾಣ ಘಿಲ ಘಿಲ || ಕೋಲು ಕೋಲ ೭
ನಾವು ಕುಣೆಯುಣ ಬನ್ನಿ, ಹ್ಯಾಂವ ಮರೆಯುಣ ಬನ್ನಿ
ಜೀವ ಒಂದಾಗಿ ಇರ ಬನ್ನಿ || ಕೋಲು ಕೋಲ ೮
ಇಂದ ಮುಡಿಯುವ ಬನ್ನಿ, ಮುಂದೆಮಗ ಹೊನ್ನಾಗಿ
ಕುಂದಣದಾರೂತಿ ಬೆಳಗುದಕ || ಕೋಲು ಕೋಲ ೯
*****














