೧
ಬಂದಿರುವೆನಿದೊ ಮಾಯಿ ಧಾರವಾಡದ ತಾಯಿ
ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ;
ಜನುಮ ಜನುಮದ ಬಯಕೆ ತುಂಬಿ ನಿಂದಿಹುದಿಂದು
ಕನಸಿನಲಿ ಕಂಡ ದಿನ ಬಂತು ಕೊನೆಗೆ.
೨
ಕೈಚಾಚಿ ಕರೆದಪ್ಪಿ ಎದೆ ತೆರೆದು ಕುಳಿತಿರಲು
ಜೀವದಲಿ ಜೀವವೇ ಇಳಿಯುತಿಹುದು;
ಎದೆಯ ಬಟ್ಟಲು ತುಂಬಿ ಪ್ರೀತಿ-ಹೊರಸೂಸಿಹುದು
ನಾನು ನೀನೆಂಬುದನೆ ಮರೆಸುತಿಹುದು.
೩
ಬಾಲ್ಯದಿಂದಲೆ ನಿನ್ನ ತೊಡೆಯಲಾಡುವ ಮನಸು
ದಿನದಿನದಿ ಹಂಬಲದಿ ಕಂಡ ಕನಸು
ನಿನ್ನೆದೆಯ ಶ್ರೀಮಂತ ಮೃದುತಲದ ಹಾಸಿನಲಿ
ಮಲಗಿ ನಾ ಹಾಲುಂಡ ದಿನಗಳೇಸು!
೪
ಮರದ ಎಲೆ ಅಲುಗಲೂ ಧೈವ ಕೃಪೆ ಬೇಕಂತೆ
ಇದರಲಂತಹದೇನೊ ಇರಲೆ ಬೇಕು;
ದೈವ ಕರೆದೊಯ್ದತ್ತ ನಾವು ಹೋಗಲೆ ಬೇಕು
ನಂಜಿದ್ದರೂ ಅದನು ಕುಡಿಯಬೇಕು.
೫
ದುಃಖ ಸುಖಗಳ ಎದೆಯ ನೂರು ಹಂಬಲ ತೊರೆದು
ನಿನ್ನ ಉಡಿಯೊಂದನ್ನು ನೆನಿಸಿ ಬಂದೆ;
ನನ್ನ ಕರುಳಿನ ಬಳ್ಳಿಯಲ್ಲಿ ಅರಳಿರುವಂಥ
ಪ್ರೀತಿ ಹೂವೊಂದನ್ನು ಹೊತ್ತು ತಂದೆ.
೬
ನಿನ್ನ ಕಣ್ಣಂಚಿನಲಿ ಮಿಂಚು ಹೊಳೆಯುತಲಿರಲು
ನನ್ನ ಎದೆವನೆಯಲ್ಲಿ ಬೆಳಕ ಬೆಳಕು
ಕರೆದು ಆಶೀರ್ವದಿಸಿ ತಾಯಿ ಬೆಳಗುತಲಿರುವ
ಕಣ್ಣ ಬೆಳಕಿನ ಪುಣ್ಯ ಇಹುದು ಸಾಕು.
*****


















