ನೀರ ಮೇಲಣ ಗುಳ್ಳೆ

ನೀರ ಮೇಲಣ ಗುಳ್ಳೆ

ಗುಲ್ಬರ್ಗದಿಂದ ಹೊರಟಾಗ ಕೂರಲು ಸೀಟೇನು ಸಿಗಲಿಲ್ಲ. ನಿಂತೇ ಹೊರಟಿದ್ದಾಯಿತು. ಅಷ್ಟೊಂದು ಚಾರ್ಜ್ ಕೊಟ್ಟು ಲಕ್ಷುರಿ ಬಸ್‌ನಲ್ಲಿ ನಿಂತು ಪ್ರಯಾಣಿಸುವುದೆಂದರೆ ಮನಸ್ಸಿಗೆ ಅಸಾಧ್ಯ ಕಿರಿಕಿರಿ. ಆದರೆ ಅನಿವಾರ್ಯ, ಆದಷ್ಟು ಬೇಗ ಊರು ಸೇರಬೇಕು ನೂರಾರು ಗಾವುದ ದೂರ, ಪ್ರಾಣಮಿತ್ರ ಜಯಣ್ಣನ ಮರಣದ ಸುದ್ದಿ ಫೋನ್‌ನಲ್ಲಿ ಕೇಳಿದಾಗಿನಿಂದ ತಡೆಯಲಾರದ ಹೊಟ್ಟೆಯುರಿ, ಬೇರೆ ಬಸ್ಸಿಗಾಗಿ ಕಾಯುವಷ್ಟು ವ್ಯವಧಾನವಿಲ್ಲ. ನಿಂತು ತೂಗಾಡುತ್ತಿರುವ ಹಿಂಸೆ ಬೇರೆ. ಜಯಣ್ಣನಿಗೆ ಸಾಯುವಷ್ಟು ವಯಸ್ಸಾಗಿರಲಿಲ್ಲ ನಿಜ. ಆದರೆ ಸಾಯಲು ವಯಸ್ಸೇ ಆಗಬೇಕಂತೇನಿಲ್ಲವಲ್ಲ. ಹುಟ್ಟಿದಾಗಿನಿಂದಲೂ ನಮ್ಮ ಜೊತೆಗೇ ಬಚ್ಚಿಟ್ಟುಕೊಂಡಿರುವ ಸಾವನ್ನು ಮಿತ್ರನೆನ್ನಬೇಕೋ ಶತ್ರುವೆನ್ನಬೇಕೋ ಅರ್ಥವಾಗುತ್ತಿಲ್ಲ. ಯಾವಾಗ ಬೇಕಾದರೂ ಬಂದೆರಗಬಹುದೆಂದು ನಾವು ಭಾವಿಸಿರುವ ಸಾವು ಬೇಕೆಂದಾಗ ಬರುವುದು ಬೇಡವೆಂದಾಗ ಬಿಡುವುದೂ ಅಲ್ಲ.

ಯಾವನೋ ಮಾಡಬೇಕಾದ ಸಾಧನೆ ಅರ್ಧಂಬರ್ಧವಾಗಿದೆ. ಕಟ್ಟಿಸಲು ಹತ್ತಿದ ಮನೆ ಮುಗಿದಿಲ್ಲ. ಮಗಳ ಮದುವೆ ಮುಂದಿನ ವಾರವಿದೆ. ಮಗನ ನೌಕರಿಗೆ ಲಂಚ ಕೊಟ್ಟಾಗಿದೆ, ಸೀಟಿನ ಮೇಲೆ ಕುಳಿತುಕೊಳ್ಳುವುದನ್ನು ನೋಡಬೇಕಿದೆ. ಮೊಮ್ಮಗ ಹುಟ್ಟುವವರೆಗಾದರೂ ಬದುಕಬೇಕಿದೆ. ಮನೆ ಕೂಂಡಿದ್ದರಿಂದ ಲಕ್ಷಗಟ್ಟಲೆ ಆದ ಸಾಲ ತೀರಿಸಬೇಕಿದೆ. ಪ್ರಮೋಷನ್‌ಗಾಗಿ ಹೋರಾಡಿ ಜಯಿಸಿದ್ದು, ಆರ್ಡರ್ ಕಾಪಿ ಕೈ ಸೇರುವುದೊಂದು ಬಾಕಿ. ಉಹುಂ…. ನಮ್ಮಲ್ಲೆ ಕಾದು ಕೂತ ಸಾವು ಇವೆಲ್ಲಾ ಬಗ್ಗೆ ಸಮಜಾಯಿಷಿಯನ್ನು ಕೇಳುವುದೇ ಇಲ್ಲ. ಅದು ‘ಬಾ’ ಎಂದಾಗ ಎಲ್ಲವನ್ನು ಎಲ್ಲರನ್ನೂ ಬಿಟ್ಟು ಹೇಳದೇ ಕೇಳದೇ ಹೋಗಲೇಬೇಕಲ್ಲ! ಪ್ರೀತಿಯ ಮಡದಿ ಮುದ್ದಿನ ಮಕ್ಕಳು ಮೊಮ್ಮಕ್ಕಳು ಭಾರಿ ಬಂಗಲೆ ತುಂಬಿದ ತಿಜೋರಿ ಐಷಾರಾಮದ ಜೀವನ ಯಾವುದೂ ನನ್ನದಲ್ಲ, ಸಾವೇ ಸಂಗಾತಿ ಅದರ ಮುಂದೆ ಎಲ್ಲವೂ ತೃಣ, ಕಡೆಗೆ ಈವರೆಗೆ ತಾನು ಪ್ರೀತಿಸಿದ ಅಲಂಕರಿಸಿಕೊಂಡ ಶುಚಿಯಾಗಿಟ್ಟುಕೊಂಡು ಅದರಿಂದಲೇ ಸರ್ವ ಸುಖ ಉಂಡ ಇಡೀ ದೇಹವನ್ನು ಕಳಚಿ ಬಿಸಾಡಿ ಸಾವಿನ ಕೈಹಿಡಿದು ಓಡುವವರನ್ನು ನೋಡುವಾಗ ಎಲ್ಲವೂ ಮಿಥ್ಯ, ಸಾವೊಂದೇ ಸತ್ಯ ಸಖ ಸುಖ ಅನಿಸುತ್ತದೆ. ಜಯಣ್ಣನ ಹೃದಯಾಘಾತವಾಗಿ ತಟ್ಟನೆ ಹೋದನಂತೆ ನಂಬಲಿಕ್ಕೆ ಆಗೋದಿಲ್ಲ. ಅಂವಾ ಅಳ್ಳೆದೆಯವನಲ್ಲ ಗಟ್ಟಿ, ಗುಂಡಿಗೆಯವ ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದ ಶ್ರಮಜೀವಿ. ಅವನನ್ನು ಕುರಿತು ಯೋಚಿಸುವಾಗ ಅಭಿಮಾನವೆನಿಸುತ್ತದೆ.

ಅವನು ನನಗಿಂತ ಹತ್ತಾರುವರ್ಷ ಹಿರಿಯನಾದರೂ ನಾಟಕದ ಖಯಾಲಿಯ ನಾವಿಬ್ಬರು ಪರಿಚಯವಾಗಲೂ ಸಹ ನಾಟಕವೇ ಕಾರಣ. ನವಭಾರತ ತರುಣ ಕಲಾವಿದರ ಸಂಘದ ನಾಟಕಗಳಲ್ಲಿ ನಮಗೆ ಪಾತ್ರ ಗ್ಯಾರಂಟಿ. ನಿರ್ದೇಶಕ ಸಿದ್ದನಾಯ್ಕರಿಗೆ ಅದೇನೋ ನಾವೆಂದರೆ ಅಕ್ಕರೆ. ಅಲ್ಲಿ ಆದ ಪರಿಚಯ ನಮ್ಮಿಬ್ಬರನ್ನು ಸ್ನೇಹದಲ್ಲಿ ಬೆಸೆದಿತ್ತು. ನಾನು ದರಿದ್ರದವ, ನಿರುದ್ಯೋಗಿ, ಕೆಲಸಕ್ಕಾಗಿ ನನ್ನ ಬೇಟೆ ನಡೆದೇಯಿತ್ತು. ಜಯಣ್ಣ ಸರ್ಕಾರಿ ನೌಕರಿ ಆಶೆ ಬಿಟ್ಟು ಚೀಟಿ ನಡೆಸುತ್ತಿದ್ದ ಕುಳ್ಳಪ್ಪ ಸ್ಪಿನಿಂಗ್ ಮಿಲ್‌ಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ತಂಗಿಯರು, ತಮ್ಮಂದಿರು ದೊಡ್ಡ ಕುಟುಂಬ. ಅವರ ಹೊಟ್ಟೆ ತುಂಬಿಸಬೇಕಿತ್ತು. ದಿನವೂ ತುಂಬಲೇಬೇಕೆಂಬ ನಿಯಮವೇನಿರಲಿಲ್ಲ. ನನ್ನದೂ ಅದೇ ಸ್ಥಿತಿ, ತಾಯಿ ಕಂಡವರ ಮನೆಯಲ್ಲಿ ದುಡಿದು ತರಬೇಕು ತಿನ್ನಬೇಕು. ಬಿ.ಎ. ಫಸ್ಟ್ ಕ್ಲಾಸ್‌ನಲ್ಲಿ ಮುಗಿಸಿದ ನನ್ನದು ಫೋರ್ತ್‌ಕ್ಲಾಸ್ ಕೆಲಸ ಸಿಗುವ ಗ್ಯಾರಂಟಿ ಇಲ್ಲದ ಜೀವನ. ನಮ್ಮ ನೋವನ್ನು ಮರೆಸುತ್ತಿದ್ದುದು ನಾಟಕ ಒಂದೆ. ಜಯಣ್ಣ ಮಿಲ್ಲಿಗೆ ಹೋದರೆ ಸೈಕಲ್ ಮೇಲೆ ಊಟ ಒಯ್ದು ಕೊಡುವುದು ನನ್ನ ಪ್ರೀತಿಯ ಕಾಯಕ. ಆ ಬಿಡುವಿನಲ್ಲಿ ಮುಂದಿನ ನಾಟಕದ ಬಗ್ಗೆ ಮಾತು ಮಾತು ಮಾತು. ಸಂಜೆ ಸೇರಿದೆವೆಂದರೆ ಅರ್ಧರಾತ್ರಿವರೆಗೂ ಮಿಡ್ಲ್ ಸ್ಕೂಲ್ ಫೀಲ್ಡ್ ನಲ್ಲಿ ಕೂತು ಹರಟೆ, ನಾಟಕದ ಪ್ರಾಕ್ಟಿಸ್ ಭವಿಷ್ಯದ ಬಗ್ಗೆ ಕನಸು ಕಾಣೋದು. ಅನೇಕ ಸಲ ಬೀಟ್ ಪೋಲೀಸಿನವ ನಮ್ಮನ್ನು ಬೈದು ಮನೆಗೆ ಕಳಿಸಿದ್ದನ್ನು ಈಗ ನೆನೆಸಿಕೊಂಡರೆ ನಗು ಬರುತ್ತೆ. ಅಂತಹ ದಿನಗಳಲ್ಲೂ ಜಯಣ್ಣನಿಗೆ ಸುಖವಾಗಿ ಬಾಳಬೇಕು ಡನಲಪ್ ಬೆಡ್ ಮೇಲೆ ಮಲಗಬೇಕು. ದೊಡ್ಡ ಬಂಗಲೆ ಕೊಳ್ಳಬೇಕು, ಕಾರು ಇಡಬೇಕು, ಡ್ರಿಂಕ್ಸ್ ಸಿಗರೇಟು ಎಲ್ಲಾ ಮಜ ಉಡಾಯಿಸಬೇಕೆಂಬ ತರಾವರಿ ಆಶೆಗಳಿದ್ದವು. ಇಂಥದ್ದೆಲ್ಲಾ ನಮ್ಮಂತವರ ಜೀವದಲ್ಲಿ ಈ ಜನ್ಮದಲ್ಲಂತೂ ಈಡೇರದ ಆಶೆಗಳು. ನನಸಾಗದ ಕನಸುಗಳೆಂದು ವಾಸ್ತವದ ಅರಿವಿದ್ದ ನಾನು, ಇವೆಲ್ಲಾ ಕೇವಲ ಅಮಿತಾಬನ ಸಿನಿಮಾದಲ್ಲಷ್ಟೇ ಸಾಧ್ಯ ಎಂದವನನ್ನು ರೇಗಿಸುತ್ತಿದ್ದೆ. ಎಚ್ಚರಿಸುತ್ತಿದ್ದೆ. ಅವನು ಭಾರಿ ನಟನಾಗಿ ಸಿನಿಮಾ ಸೇರುತ್ತಾನೆಂಬ ಭರವಸೆಯೂ ನನಗಿರಲಿಲ್ಲ. ಧಡಿಯನಂತಿದ್ದ ಅವನು ಮೊದಲ ನೋಟಕ್ಕೆ ಪೆದ್ದನಂತೆ ಕಂಗೊಳಿಸುತ್ತಿದ್ದ. ಡೈಲಾಗ್ ನೆಟ್ಟಗೆ ಹೇಳದೆ ಮರೆಯುವ ಈ ಪುಣ್ಯಾತ್ಮನಿಗೊಬ್ಬ ಪ್ರಾಂಪ್ಟ್ ಮಾಡಲು ಇರಲೇಬೇಕು. ಯಾವಾಗಲೂ ತಂದೆಯ ಪಾತ್ರವೇ ಖಾಯಂ. ಇಂಥವರು ಅದು ಹೇಗೆ ಸುಖದ ಸುಪ್ಪತ್ತಿಗೆ ಹಿಡಿಯಬಲ್ಲ ಎಂದು ಒಳಗೇ ಖಿನ್ನನಾಗುವ ನಾನು, ಅವನ ಆಶೆಗಳನ್ನೆಲ್ಲಾ ಈಡೇರಿಸಪ್ಪಾ ದೇವರೆ ಎಂದು ಹಲುಬುತ್ತಿದ್ದೆ. ನನ್ನ ಪ್ರಾರ್ಥನೆಯ ಫಲವಲ್ಲದಿದ್ದರೂ ಅವನ ಧೈರ್ಯ ಸಾಹಸ ಪರಿಶ್ರಮದಿಂದಾಗಿ ಕೇವಲ ನಾಲ್ಕು ಐದು ವರ್ಷಗಳಲ್ಲಿ ದುರ್ಗವೆಂಬೋ ದುರ್ಗದಲ್ಲಿ ಅವನೂ ಒಬ್ಬ ಗಟ್ಟಿಕುಳವಾಗಿಬಿಟ್ಟಿದ್ದು ಮಾತ್ರ ನನ್ನ ಪಾಲಿನ ವಿಸ್ಮಯ.

ಬಸ್ಸು ಗಕ್ಕನೆ ನಿಂತಾಗ ತೂಗಾಡುವ ನನಗೆ ಸೀಟುಗಳ ಮೇಲೆ ಕಣ್ಣು. ಒಂದಿಬ್ಬರು ಇಳಿದರೆ ಹತ್ತುವವರೇ ಅಧಿಕ. ಅಂತ ಶಹಪೂರದಲ್ಲಿ ಸೀಟು ಸಿಕ್ಕಾಗ ಎಂತದೋ ಖುಷಿ. ಸಾವಿನ ಸುದ್ದಿ ಕೇಳಿದವನೆ ಆಫೀಸಿಗೆ ರಜಾ ಗೀಚಿ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿ ಆಫೀಸಿನಿಂದಲೇ ನೇರವಾಗಿ ಬಸ್‌ಸ್ಟಾಂಡಿಗೆ ಬಂದು ಬಸ್ ಏರಿದ್ದೆ. ಹೊಟ್ಟೆಯಲ್ಲಿ ಹಸಿವಿನ ಭೂತ ಉರುಳಾಡುತ್ತಿತ್ತು. ಸಾವಿನ ವಾರ್ತೆ ಕೇಳಿದ ಮೇಲೆ ಉಣ್ಣಲು ಮನಸ್ಸಾಗಿರಲಿಲ್ಲ. ಜಯಣ್ಣ ಸತ್ತು ಮಲಗಿರುವ ದೃಶ್ಯವನ್ನು ಕಲ್ಪಿಸಿಕೊಳ್ಳುವಾಗ ದುಃಖ ಉಮ್ಮಳಿಸುತ್ತಿತ್ತು. ಈಗಲೂ ಸುಪ್ಪತ್ತಿಗೆಯಲ್ಲೇ ಮಲಗಿರುತ್ತಾನೆ. ಬಡ್ಡಿಮಗ ಅಂದುಕೊಂಡೆ ಅಮಿತಾಬನ ಸಿನಿಮಾ ರೀತಿಯೇ ಅವನ ಜೀವನದಲ್ಲೂ ಘಟನೆಗಳು ನಡೆದಿದ್ದವು. ಮಿಲ್‌ನ ಕೂಲಿ ಕೆಲಸಕ್ಕೆ ಸಲಾಂ ಹೊಡೆದು ದುರ್ಗದ ಸರ್ಕಲ್‌ನಲ್ಲಿ ಬೀಡಾ ಅಂಗಡಿ ತೆರೆಯುವ ಮೊದಲ ಸಾಹಸ ಮಾಡಿದ್ದ. ಸಿಗರೇಟು ಬಾಳೆಹಣ್ಣು ಬೀಡ ಅದರಲ್ಲೂ ತರಾವರಿ ನಮೂನೆ ಬೀಡಗಳನ್ನು ಪ್ರಪ್ರಥಮವಾಗಿ ದುರ್ಗದವರ ನಾಲಿಗೆಗೆ ಪರಿಚಯಿಸಿದವನೆ ಈ ಮಹಾಶಯ. ಇವನ ನಾಟಕದ ಮಾತಿಗೆ ಬೀಡದ ರುಚಿಗೆ ಮಂದಿ ಮುಗಿಬಿತ್ತು. ಸಂಜೆ ನಾನವನ ಅಂಗಡಿಗೆ ಹೋದರೆ ಅವನಿಗೆ ಮಾತನಾಡಿಸಲೂ ಪುರುಸೊತ್ತಿಲ್ಲ. ದಿನವೂ ಐದಾರು ನೂರರಷ್ಟು ವ್ಯಾಪಾರವಾಗಿ ಜೊತೆಗೆ ಬಡ್ಡಿ ಬಾಚಿ ಕೊಡಹತ್ತಿದ್ದ. ಚೀಟಿ ಮಾಡುತ್ತಿದ್ದ ಅಂವ, ನಾಟಕವನ್ನು ಮರೆತರೂ ನನ್ನನ್ನು ಮರೆಯಲಿಲ್ಲ. ಆಗ ಇಂದಿರಮ್ಮನ ತುರ್ತು ಪರಿಸ್ಥಿತಿ ಕಾಲ, ವಾಚು ಟೇಪ್ ರೆಕಾರ್ಡರ್ ಇತ್ಯಾದಿಗಳ ಕಳ್ಳ ಮಾರಾಟದ ಸುಗ್ಗಿ. ಜಯಣ್ಣ ಅಲ್ಲೂ ಹೆಜ್ಜೆಯೂರಿದ. ಬೀಡ ಬಾಳೆಹಣ್ಣಿನ ಪೊಟ್ಟಣಗಳೊಂದಿಗೆ ವಾಚು ಟೇಪ್‌ರೆಕಾರ್ಡರಗಳೂ ಹೊರಹೋದವು. ನನ್ನ ಕೈಗೂ ಒಂದು ವಾಚ್ ಕಟ್ಟಿಸಬೇಕೆಂಬ ಆಶೆ ಅವನದು. ಟೇಪ್‌ರೆಕಾರ್ಡ್ ಗಿಫ್ಟ್ ಕೊಡುವ ಹಂಬಲ. ನಾನೋ ಪುಕ್ಕಲ, ನಿರಾಕರಿಸಿದ್ದಲ್ಲದೆ ಅತ್ತ ಹಾಯುವುದನ್ನೇ ನಿಲ್ಲಿಸಿದೆ. ತುರ್ತು ಪರಿಸ್ಥಿತಿ ಮುಗಿಯುವುದರಲ್ಲಿ ಜಯಣ್ಣನ ಸ್ಥಿತಿಗತಿಗಳೇ ಬದಲಾಗಿ ಹೋಗಿದ್ದವು. ಒಳ್ಳೆ ಬಂಗಲೆಯಂತಹ ಮನೆಯನ್ನೇ ಭೋಗ್ಯಕ್ಕೆ ಹಿಡಿದಿದ್ದ. ಕೈಗೆ ವಾಚು, ಕೊರಳಲ್ಲಿ ದಪ್ಪ ಎಳೆಯ ಚಿನ್ನದ ಸರ, ಕೈಗೆ ಬ್ರಾಸ್‌ಲೆಟ್ ಮೈಗೆ ಸಫಾರಿ. ಇದೆಲ್ಲಾ ಅಲಂಕಾರದಲ್ಲಿದ್ದ ಜೀವ ಬೀಡ ಅಂಗಡಿಯಲ್ಲಿ ನಿಂತೀತ, ಕಬ್ಬಿಣದ ಅಂಗಡಿಯೊಂದನ್ನು ದೊಡ್ಡ ಪ್ರಮಾಣದಲ್ಲೇ ಆರಂಭಿಸಿದ. ರೈತರಿಗೆ ಬೇಕಾದ ಉಪಕರಣಗಳು ಮನೆಗೆ ಬೇಕಾದ ಸರ್ವಬೋಲ್ಟು ನಟ್ಟುಗಳು ಪೈಪು ಪೇಂಟ್‌ಗಳು ಎಲ್ಲಾ ತಂದಿರಿಸಿದ. ಲಕ್ಷ್ಮಿ ಬೆನ್ನು ಹತ್ತಿದರೆ ಹಾಗೆ ಭರ್ಜರಿ ದಂಧೆ.

ವರ್ಷೋತ್ಪತ್ತಿನಲ್ಲಿ ತಮ್ಮಂದಿರಿಗೆ ಗೊಬ್ಬರದ ಅಂಗಡಿಯನ್ನೂ ಇಟ್ಟುಕೊಟ್ಟ. ಮುಟ್ಟಿದ್ದೆಲ್ಲಾ ಚಿನ್ನವಾಯಿತು. ತಂಗಿಯರಿಬ್ಬರ ಮದುವೆಯನ್ನು ವಾಸವಿ ಮಹಲ್‌ನಲ್ಲೇ ಮಾಡಿದ ಭೂಪ. ಸಂಜೆ ಆರತಕ್ಷತೆಗೆ ಬೆಂಗಳೂರಿನಿಂದ ಮಂಜುಳ ಗುರುರಾಜ್ ಆರ್ಕೆಸ್ಟ್ರಾ ತಂಡವನ್ನೇ ಕರೆಸಿದ್ದ. ಸ್ವಲ್ಪ ಕಾಲದಲ್ಲೇ ಭೋಗ್ಯಕ್ಕೆ ಹಿಡಿದಿದ್ದ ಬಂಗಲೆಯನ್ನೇ ಕೊಂಡುಕೊಂಡ, ತೋಟ ಮಾಡಿದ. ವರ್ಷ ವರ್ಷಕ್ಕೂ ಬೆಳೆದು ಅವನು ಶ್ರೀಮಂತನಾದಂತೆ ನಾನು ದೂರವೇ ಉಳಿದೆ. ನೌಕರಿಯ ತಲಾಷ್‌ಗೆ ತೊಡಗಿದೆ. ತಾಯಿಯನ್ನು ಸುಖವಾಗಿಟ್ಟುಕೊಳ್ಳುವ ಏಕೈಕ ಹಂಬಲ ನನಗೆ. ಒಂದಿಷ್ಟು ನಿಡುದಾಗಿ ಕಾಲು ಚಾಚುವಂತಹ ಮನೆಯಲ್ಲಿ ವಾಸಿಸಬೇಕೆಂಬ ಕನಿಷ್ಠ ಗುರಿ. ಉಹುಂ ನನಗಂತೂ ಎಲ್ಲವೂ ಕನಸೆ. ಇಷ್ಟಾದರೂ ಜಯಣ್ಣ ತಾನಾಗಿಯೇ ನನ್ನನ್ನರಸಿ ಬರುತ್ತಿದ್ದ. ನೆಲದ ಮೇಲೆ ಕೂರಲೂ ಅವನಿಗೀಗ ಮುಜುಗರ. ನಾವೋ ಚಾಪೆಯ ಕ್ಲಾಸಿನ ಜನ. ಆದರೆ ನನ್ನ ತಾಯಿ ಮಾಡಿಕೊಡುವ ಬೆಲ್ಲದ ಕಾಫಿಯನ್ನು ಅವನದೆಷ್ಟು ಪ್ರೀತಿಯಿಂದ ಆಸ್ವಾದಿಸುತ್ತಿದ್ದನೆಂದರೆ ನಾಟಕವಾಡುತ್ತಿದ್ದಾನೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿತ್ತು. ತಮ್ಮಂದಿರಿಗೆ ಒಳ್ಳೆ ಕಡೆ ಹೆಣ್ಣುಗಳನ್ನು ತಂದ. ಅವನ ಲೆವಲ್ಲಿನ ಸಿರಿವಂತರೆ ಬಂದರೂ ಯಾರಿಂದಲೂ ಚಿಕ್ಕಾಸೂ ವರದಕ್ಷಿಣೆ ಬೇಡದೆ ಮದುವೆ ಮಾಡಿದ. ತಾನೂ ಬಡವರ ಮನೆಯಲ್ಲೆ ಹುಡುಗಿಯನ್ನು ಮದುವೆಯಾಗಿ ಆದರ್ಶದ ಭಾಷಣ ಹೊಡೆದವರಿಗಿಂತ ವಾಸಿ ಎನಿಸಿದ. ಒಮ್ಮೆ ನಾನವನ ಬೆಡ್‌ರೂಮು ನೋಡಿಯೇ ದಂಗಾಗಿದ್ದೆ. ಸುಪ್ಪತ್ತಿಗೆ ಎಂಬ ಮಾತಿಗೆ ಅನ್ವರ್ಥವಾದ ಹಾಸಿಗೆ ಹೊದ್ದಿಕೆ ಎಲ್ಲಾ ರೇಷ್ಮೆಯ ಹಾಸು, ರೂಮ್‌ನ ಒಂದು ಭಾಗ ಫುಲ್ ಕನ್ನಡಿ. ಇನ್‌ಡೋರ್ ಪ್ಲಾಟ್‌ಗಳ ಏರ್ ಕಂಡೀಷನ್ಸ್ ರೂಮದು, ಸಾವಿರಾರು ರೂಪಾಯಿಗಳಾದರೂ ಆಗಿರಬಹುದು. ಜಯಣ್ಣನನ್ನು ನೋಡಬೇಕೆಂದರೆ ಮೊದಲಿನಷ್ಟು ಸುಲಭವಾಗುತ್ತಿರಲಿಲ್ಲ. ಪೋನಿಗೂ ಅವಾ ಸಿಗುತ್ತಿರಲಿಲ್ಲ. ಬಾಗಿಲಲ್ಲೇ ತೋಳದಂತಹ ನಾಯಿ. ಅದೇ ಮಾದರಿಯ ಗೂರ್ಖ. ಯಾರೋ ಫೋನ್ ಎತ್ತಿ ಅವರಿಲ್ಲ ಬಾತ್‌ರೂಮಲ್ಲಿದ್ದಾರೆ. ಈಗ ಹೊರಹೋದ್ರು ಅನ್ನೋದು ಜಾಸ್ತಿಯಾದಾಗ ಅವನನ್ನು ಭೇಟಿ ಮಾಡುವ ಆಶೆಯನ್ನೇ ಕೈಬಿಟ್ಟೆ.

ಆದರೆ ಅವನನ್ನು ಹುಡುಕಿಕೊಂಡು ಹೋಗುವಂತಹ ಸಂದಿಗ್ಧ ಒಂದು ನನಗೆ ಎದುರಾಗಬೇಕೆ. ರೆವಿನ್ಯೂ ಇಲಾಖೆಯಿಂದ ಇಂಟರ್‌ವ್ಯೂ ಅಟೆಂಡ್ ಮಾಡಿದ್ದೆ. ಆ ಕಾಲಕ್ಕೆ ಗುಮಾಸ್ತನ ನೋಕರಿಗೆ ಒಂದು ಸಾವಿರ ಫೀಜು ಅರ್ಥಾತ್ ಲಂಚ, ಒಂದು ಪೈಸೆಯೂ ಇಲ್ಲದವ ನಾನು ಅವರಿವರಲ್ಲಿ ಕಾಡಿದೆ ಬೇಡಿದೆ. ತಿಂಗಳ ಸಂಬಳ ಬಂದೊಡನೆ ತೀರಿಸಿಬಿಡುತ್ತೇನೆಂದೆಲ್ಲಾ ಅಲವತ್ತುಕೊಂಡೆ. ನಂಬೋರು ಯಾರು? ಜಯಣ್ಣನನ್ನು ಕೇಳಲು ಮನಸ್ಸಿಲ್ಲ. ಬಿಟ್ಟರೆ ಕೈಗೆ ಬಂದ ತುತ್ತು ಬಾಯಿಗಿಲ್ಲ. ರಾತ್ರಿ ಅಂಗಡಿ ಮುಚ್ಚುವ ವೇಳೆ ಮುಚ್ಚಿ ರೊಕ್ಕ ಎಣಿಸುವ ಸಮಯಕ್ಕೆ ಸರಿಯಾಗಿ ಹೋಗಿ ನಿಂತೆ. ತಲೆ‌ಎತ್ತಿ ಕೂಡ ನೋಡದೆ ಕಂತೆಗಟ್ಟಲೆ ಹಣವನ್ನು ಅಣ್ಣ ತಮ್ಮಂದಿರು ಎಣಿಸಿ ಬಂಡಲ್ ಕಟ್ಟುತ್ತಿದ್ದರು. ಹಸಿದ ನಾಯಿ ಬ್ರೆಡ್ ನೋಡುವ ಪರಿ ನೋಡುತ್ತ ತಾಳ್ಮೆಯಿಂದ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದು ನಿಂತೆ. ತಮ್ಮಂದಿರು ಸರಸರನೆ ಷಟರ್ ಎಳೆದರು. ಕಾರು ಏರಿದ ಜಯಣ್ಣ, ‘ಏನೋ ಬಂದೆ?’ ಅಂದವನೆ ‘ಸುಸ್ತಾಗಿದೀನಮ್ಮ ಏನಿದ್ದರೂ ಬೆಳಿಗ್ಗೆ ಮಾತಾಡೋಣ, ಫೋನ್ ಮಾಡಿ ಬಾ’ ಅಂದುಬಿಟ್ಟ. ‘ನನ್ನ ಹತ್ತಿರ ಫೋನ್ ಎಲ್ಲಿದೆಯೋ?’ ಗದ್ಗದಿತನಾದೆ. ‘ಫೋನ್ ಬೇಕಾದ್ರೆ ಹಾಕಿಸಿ ಕೊಡ್ತೀನಿ. ಮಂಥ್ಲಿ ಚಾರ್ಜ್ ಕಟ್ಟೋಕೆ ನಿನ್ನ ಕೈಲಿ ಆಗಬೇಕಲ್ಲಮ್ಮ’ ಅಂತ ನಕ್ಕ. ಕಾರು ಸ್ಟಾರ್ಟ್ ಮಾಡಿದ. ‘ಮೀಟ್ ಯು ಟುಮಾರೋ’ ಎಂದು ಬುರ್ರನೆ ಹೋಗೇಬಿಟ್ಟ. ಇವನಿಗೆ ಸಿರಿಯಗರ ಬಡಿದಿದೆ ಅಂದುಕೊಂಡೆ. ಅಲ್ಲಿ ಎಷ್ಟು ಬೇಗ ಒಂದೇ ತಟ್ಟೆಯಲ್ಲಿ ತಂಗಳನ್ನು ಹಂಚಿಕೊಂಡು ಉಂಡಿದ್ದನ್ನು ಮರೆತುಬಿಟ್ಟ. ಇವನಿಗೆ ಮಿಲ್‌ನ ಕ್ಯಾಂಟೀನಿನಲ್ಲೂ ತಿನ್ನಲು ಕಾಸಿಲ್ಲದ ಕಾಲದಲ್ಲಿ ನಾಲ್ಕು ಮೈಲು ಸೈಕಲ್ ತುಳಿದು ಬುತ್ತಿ ಕೊಟ್ಟು ಬರುತ್ತಿದ್ದೆನಲ್ಲ ಅಂತ ನಿಡುಸುಯ್ದೆ.

‘ಜಯಣ್ಣ ಸಿಕ್ಕಿದ್ದೆನೋ?’ ಅಮ್ಮ ಕೇಳಿದಾಗ ಉತ್ತರಿಸದ ಹರಿದ ರಗ್ ಮುಖದ ಮೇಲೆಳೆದುಕೊಂಡೆ. ಮರುದಿನ ಎದ್ದು ಅವನನ್ನು ಕಾಣಬೇಕು. ಅವನು ಇಲ್ಲ ಎಂದರೂ ಹಣ ಕೇಳಲೇಬೇಕು. ಇಲ್ಲ ಅನ್ನಿಸಿಕೊಂಡು ಅವನ ಸ್ನೇಹಕ್ಕೆ ಗುಡ್ ಬಾಯ್ ಹೇಳಬೇಕೆಂದೆಲ್ಲಾ ಒಳಗೆ ಕುದಿದೆ.

ಬೆಳಗ್ಗೆ ಎದ್ದು ಕಾಫಿ ಕುಡಿಯುವಾಗಲೆ ಮನೆಯ ಮುಂದೆ ಕಾರು ಬಂದು ನಿಂತಿತು. ‘ನನಗೆಲ್ಲಮಾ ಕಾಫಿ?’ ಅನ್ನುತ್ತಲೇ ಜಯಣ್ಣ ಒಳಬಂದು ಕೂತ. ನಾನು ಮುಖ ಊದಿಸಿಕೊಂಡಿದ್ದೆ. ಅವನು ಲೊಟ್ಟೆ ಹೊಡೆದು ಕಾಫಿ ಹೀರುತ್ತ ಅಮ್ಮನ ಕೈನ ರುಚಿಯನ್ನು ಪ್ರಶಂಸಿಸುತ್ತಿದ್ದ. ಸಿರಿವಂತರು ಹೇಗೆ ಬೇಕಾದರೂ ನಡೆದುಕೊಳ್ಳಬಹುದು. ಮಾತಾಡಿಸಿದರೂ ಮಾತನಾಡದೆ ಹೋಗಬಹುದು. ಅವರಿಗೆ ಬೇಕಾದಾಗ ಬಂದು ಮಾತನಾಡಿಸಿದಾಗ ನಾವು ಮಾತ್ರ ಅವರಂತೆ ನಡೆದುಕೊಳ್ಳುವಂತಿಲ್ಲ. ವಿಚಿತ್ರ ಜಿಗುಪ್ಸೆ ಕಾಡಿತು. ‘ಯಾಕ್ಲೆ ತೆಪರೆ ಡಲ್ ಆಗಿದಿ? ಇಂಟ್ರೂ ಏನಾತೋ’ ಅಂತ ತೊಡೆಗೆ ಗುದ್ದಿದ. ‘ಅಯ್ಯೋ ಮುಂಡೆ ಮಕ್ಳು ಲಂಚ ಕೇಳ್ತಿದಾರಪಾ’ ಅಂತ ತಾಯಿ ಗೋಳೋ ಎಂದರು. ಯಾರಮ್ಮ ಈ ಪ್ರಪಂಚದಾಗೆ ಸಾಚಾ ಇದಾರೆ ನಿನ್ನ ಮಗನ್ನ ಬಿಟ್ಟು ಎಂದು ತಮಾಷೆ ಮಾಡಿದ. ಹೊಡೆದು ಹೊರದಬ್ಬಬೇಕೆಂಬಷ್ಟು ಬಂದ ರೋಷವನ್ನು ತಡೆದು ಕ್ರಿಮಿಯನ್ನು ನೋಡುವಂತೆ ನೋಡಿದೆ. ಪುಸಕ್ಕನೆ ನಕ್ಕು, ‘ನನಗೆಲ್ಲಾ ವಿಷಯ ಗೊತ್ತಮ್ಮ, ಹಕ್ಕಿ ಹಿಡೀಬೇಕು ಅಂದ್ರೆ ಕಾಳು ಹಾಕು’ ನಾಟಕದ ಡೈಲಾಗ್ ಹೊಡೆದ. ‘ಸರಿ ಈಗೇನಯ್ಯ ಮಾಡ್ತಿ?’ ಎಂದು ಹುಬ್ಬೇರಿಸಿದ. ಸತ್ತರೂ ಇವನ ಬಳಿ ಕೈ ಚಾಚಬಾರದೆಂದುಕೊಂಡೆ. ‘ಇದಲ್ಲದಿದ್ದರೆ ಇನ್ನೊಂದು ಬಿಡೋ’ ಅಂತ ಮೂಗು ಮುರಿದೆ. ಅದಕ್ಕೆ ನಿನ್ನ ತಪರೇಶಿ ಅನ್ನೋದು. ಎಣ್ಣೆ ಬಂದಾಗ ಕಣ್ಣು ಮುಕ್ಕೋತಾರೇನೋ. ಇನ್ನೂ ಒಂದು ಸಾವಿರ ಹೆಚ್ಚು ಬಿಸಾಕಿ ನೋಕರಿ ಹಿಡಿಬೇಕಲೆ, ಸರ್ಕಾರಿ ನೋಕರಿ ಅಂದ್ರೆ ಮಳೆ ಇಲ್ಲದ ಬೆಳೆ, ನೆಳ್ಳಲಿ ಕುಂತು ತಿಂಗಳಾಗುತ್ತು ರೊಕ್ಕ ಎಣಿಸ್ಬೋದು ಗಿಂಬ್ಳಾನೂ ಸಿಗೋ ನಿನ್ನ ಹಿಡಿಯೋನು ಯಾರಯ್ಯ?’ ಗೊಳ್ಳನೆ ನಕ್ಕ. ಉಗಿಯಬೇಕೆನಿಸಿತು. ‘ನಾನು ಲಂಚ ತಿನ್ನೋ ಹಂದಿ ಆಗೋಲ್ಲ ಕಣಯ್ಯ’ ಅಂದೆ ಕೋಪದಿಂದ, ‘ಕೆಲಸ ಸಿಕ್ಕ ಮೇಲೆ ಅಲ್ವೆ ಮಾತು’ ಮತ್ತೆ ಗೊಳ್ ಎಂದ. ‘ನಾವೂ ಎಲ್ಲಾ ಕಡೆ ಕೈ ಚಾಚಿದ್ವಿ, ಕಣಪ್ಪ. ನಮ್ಮನ್ನ ನಂಬ್ಕಂಡು ನಮಗಷ್ಟು ದುಡ್ಡು ಯಾರ್ ಕೊಡ್ತಾರೇಳು. ನೀನೇನಾರ ಕೊಟ್ಟಿಯಾ ಜಯಣ್ಣ’ ಅಮ್ಮನೇ ಅಂಗಲಾಚಿದಳು. ಸುಮ್ಮನಿದ್ದ – ಮೌನದಿಂದಲೇ ನಮ್ಮನ್ನು ಹಿಂಸಿಸಿ ಹಿಗ್ಗುವವನ ಮಾದರಿ, ‘ಯಾವನೂ ಕೊಡೋದ್ ಬ್ಯಾಡ, ಅದೃಷ್ಟ ಇದ್ದರೆ ಸಿಗ್ಲಿ. ಇಲ್ಲದಿದ್ದರೆ ಯಾವುದಾದ್ರೂ ಹೋಟೆಲಲ್ಲಿ ಸಪ್ಲೈ ಮಾಡ್ತೀನಿ’ – ರೇಗಿಕೊಂಡೆ. ‘ಏನ್ ಈ ನನ್ಮಗ ಬ್ರಾಂಬ್ರ ಕೂಸು ಸಪ್ಲೈ ಕೆಲ್ಸ ಕೊಟ್ಟು ಬಿಡ್ತಾರೆ’ ಕೆಣಕಿದ, ‘ಹೊಟೇಲ್ ಅಲ್ಲದಿದ್ದರೇನಾತು ಬಾರ್‌ನಲ್ಲಿ ಸಪ್ಲೈ ಮಾಡ್ತೀನಿ ಕಣೋ’ ಅಂದೆ ಮೂಗೇರಿಸುತ್ತಾ, ‘ನಿನ್ನ ಸ್ವಾಭಿಮಾನ ನನಗೆ ಗೊತ್ತಮ್ಮ. ನೀನ್ ನನ್ನನ್ನು ದುಡ್ಡು ಕೇಳೋನಲ್ಲ ಅಂತ ನಂಗೊತ್ತಮ್ಮ. ಅದಕ್ಕೆ ವಿಷಯ ತಿಳಿದ ನಾನೇ ದುಡ್ಡು ಎಲ್ಲಿ ಮುಟ್ಟಿಸ್ಬೇಕೋ ಅಲ್ಲಿಗೆ ಮುಟ್ಟಿಸಿದೀನಿ. ನಿನ್ಗೆ ಗುಮಾಸ್ತಗಿರಿ ಗ್ಯಾರಂಟಿ ಮಗ್ನೆ’ ಎಂದ. ಸ್ತಂಭೀಭೂತನಾದರೂ ತೋರಗೊಡದೆ, ‘ನಿನ್ಗೆ ಯಾವನೋ ಕೊಡೋಕೆ ಹೇಳಿದ್ದ’ ಅಂತ ಕೂಗಾಡಿದೆ. ‘ಸಾಲ ಕೊಟ್ಟಿದೀನೋ ಸಾಲ, ಬಡ್ಡಿ ಸಮೇತ ವಸೂಲಿ ಮಾಡ್ತೀನಿ…..’ ಎಂದ ಜಯಣ್ಣ ತಾಯಿಯತ್ತ ತಿರುಗಿ, ‘ನಿನ್ನ ಮಗಂದು ಸ್ವಾಭಿಮಾನ ಅಲ್ಲಮ್ಮ ಅಹಂಕಾರ’ ಎಂದ. ನನಗೂ ಪಿಚ್ಚೆನಿಸಿತು.

ಅಂತೂ ನೌಕರಿ ಹಿಡಿದಿದ್ದಾಯಿತು. ಸಾಲ ತೀರಿಸಿದ್ದೂ ಆಯಿತು. ನನ್ನ ಮದುವೆಯಲ್ಲಿ ಅವನದೇ ದರ್ಬಾರು. ಅಣ್ಣನಂತೆ ಮುಂದೆ ನಿಂತು ಕಾರ್ಯ ಮಾಡಿದ್ದನ್ನು ನೆನೆವಾಗ ಕಣ್ಣಾಲೆಗಳಲ್ಲಿ ನೀರು ಚಿಮ್ಮುತ್ತವೆ. ನೌಕರಿ ಸಿಕ್ಕ ಮೇಲೆ ಊರೂರು ಅಲೆಯುವುದೇ ಆಗಿತ್ತು. ಈಗಂತೂ ಗುಲ್ಬರ್ಗಾ ಸೇರಿದ್ದೆ. ದಕ್ಷಿಣ ಭಾರತದ ಟೂರ್ ಹೊರಟಿದ್ದ ಅವನ ಹೆಂಡತಿ, ಮಗನೊಡನೆ ಒಮ್ಮೆ ಗುಲ್ಬರ್ಗಕ್ಕೆ ಬಂದಿದ್ದ. ಬಂದೇನವಾಜ್, ಶರಣಬಸಪ್ಪ ಟೆಂಪಲ್, ಹಳೆ ಫೋರ್‍ಟ್ ಎಲ್ಲಾ ರೌಂಡ್ ಹೊಡೆಸಿದ್ದೆ. ಅವನ ಮಗನ ಮದುವೆಗೊಮ್ಮೆ ದುರ್ಗಕ್ಕೆ ಬಂದಿದ್ದೆ. ಭರ್ಜರಿ ಮದುವೆ ಸಿರಿವಂತಿಕೆಯ ಅಮೋಘ ಪ್ರದರ್ಶನ ಅಥವಾ ಅಟ್ಟಹಾಸ ನೋಡಿ ಖುಷಿಯೇನಾಗಲಿಲ್ಲ. ಅಂದರೆ ಅಸೂಯೆಪಟ್ಟೆನೆಂಬ ಅರ್ಥವೂ ಅಲ್ಲ. ನಮಗಿಂತಲೂ ಬಡವರ ಬಗ್ಗೆ ಯೋಚಿಸುವಾಗ ಅಪರಾಧಿ ಭಾವ ಕಾಡಿತ್ತು. ಭಾರಿ ಗಾತ್ರದ ಉಡುಗೊರೆ ಕೊಡುವವರ ಮಧ್ಯೆ ಅನಾಥನಾಗಿದ್ದೆ. ನೂರರ ನೋಟೊಂದನ್ನು ಕವರಲ್ಲಿರಿಸಿ ಹೆಸರು ಬರೆಯಲು ಹೋದೆ. ‘ಬೇಡ್ರಿ ಹೆಸರು ಬರೆಯೋದೇನು ಬೇಡ’ ಅಂದಿದ್ದಳು ನಾಗು. ಕವರಿನ ಮೇಲೆ ಹೆಸರು ಬರೆವ ಧೈರ್ಯ ನನ್ನಲ್ಲೂ ಇರಲಿಲ್ಲ.

ಇಷ್ಟೊಂದು ಸುಖದ ಸುಪ್ಪತ್ತಿಗೆಯ ಮೇಲೆ ತೇಲಾಡುತ್ತಿದ್ದ ಜಯಣ್ಣ ಜೀವ ಹೇಗೆ ಬಿಟ್ಟನಪ್ಪಾ ಎಂದು ತರ್ಕಿಸುವಾಗಲೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಂದು ನಿಂತಿತು. ಟೀ ಕುಡಿಯುವ ಮನಸ್ಸಾದರೂ ತಡೆಹಿಡಿದೆ. ಅವನನ್ನು ನೋಡುವ ತನಕ ಹನಿ ನೀರನ್ನೂ ಮುಟ್ಟಬಾರದೆಂಬ ಹಠಕ್ಕೆ ಬಿದ್ದೆ. ಬೆಳಗಿನ ಚಳಿಗೆ ಜೀವ ಬೆಚ್ಚಗಾಗಲು ಹಾತೊರೆದಿತ್ತು. ಕಿಟಕಿ ಗ್ಲಾಸ್ ಸರಿಸಿದೆ. ಹೇಗಾದರೂ ಆಗಲಿ ಎಂದು ಇಳಿದು ಬೂತ್‌ನಿಂದ ಫೋನ್ ಮಾಡಿದೆ. ‘ಬರೋರಿದ್ದಾರೆ ಅಂಕಲ್. ನಾಳೆ ಹತ್ತು ಗಂಟೆನಾದ್ರೂ ಆದೀತು….. ಬನ್ನಿ’ ಅಂದ ಜಯಣ್ಣನ ಮಗ ಉತ್ತರಿಸಿದ. ಒಂದಿಷ್ಟು ದಾವಂತ ತಪ್ಪಿತು.

ಬೆಳಗ್ಗೆ ಏಳಕ್ಕೆಲ್ಲಾ ಜಯಣ್ಣನ ಸಾನಿಧ್ಯದಲ್ಲಿದ್ದೆ. ನೆಲದ ಮೇಲೆ ಚಾಪೆ ಹಾಸಿ ಮಲಗಿಸಿದ್ದಾರೆ.- ಅದು ಜಗಲಿಯ ಮೇಲೆ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದನಂತೆ. ಇತ್ತೀಚೆಗೆ ತುಂಬಾ ಕುಡಿಯುತ್ತಿದ್ದನಂತೆ. ಎಂತಹ ನಕ್ಷತ್ರದಲ್ಲಿ ಸತ್ತಿದ್ದಾನೋ, ಸ್ವಂತಮನೆ ಅಂತಂದು ಒಳಗೆ ಹೊಯ್ಯಲಿಲ್ಲವಂತೆ. ಚಾಪೆ ಮೇಲೆ ಅಂಗಳದಲ್ಲಿ ಮಲಗಿರುವ ಅವನನ್ನು ಕಂಡು ದುಃಖ ತಡೆಯಲಾಗಲಿಲ್ಲ. ಮೈ ಮೇಲಾಗಲೇ ಒಂದೂ ಒಡವೆ ಇಲ್ಲ. ಅಲ್ಲೂ ಶ್ರೀಮಂತರ ಫ್ಯಾಷನ್ ಷೋ ವಾಹನಗಳ ಅವುಗಳ ಗದ್ದಲ ಬಿಟ್ಟರೆ ಅಳುವಿನ ದನಿ ಕೇಳಿದ್ದು ಕಡಿಮೆಯೆ. ಇಂತಹ ಸೊಫೆಸ್ಟಿಕೇಟೆಡ್ ಜನರ ಮಧ್ಯೆ ಬಿಕ್ಕಿ ಬಿಕ್ಕಿ ಅಳುವುದು ನಗೆಪಾಟಲಾದೀತೆಂದು ಅಂಜಿದೆ. ಅನಾಥ ಪ್ರಜ್ಞೆ ಇರಿಯಿತು. ಹತ್ತೂವರೆಗೆಲ್ಲಾ ಜಯಣ್ಣ ಮುಕ್ತಿಧಾಮದತ್ತ ಹೊರಟ. ಎಷ್ಟೊಂದು ಕಷ್ಟಪಟ್ಟು ಹಗಲುರಾತ್ರಿ ದುಡಿದು ಹೈರಾಣವಾಗಿ ಬಂಗಲೆ ಬಂಗಾರ ಶಾಪು ಮಳಿಗೆಗಳು ಕಾರು ವ್ಯಾನು ಏನೆಲ್ಲಾ ಮಾಡಿದ. ದುಡಿಯುವ ಭರದಲ್ಲಿ ಸರಿಯಾಗಿ ಊಟ ಮಾಡಲು ಪುರುಸೊತ್ತಿರಲಿಲ್ಲವಂತೆ. ಒಮ್ಮೆ ಅವನೇ ನಿಟ್ಟುಸಿರುಬಿಟ್ಟಿದ್ದ. ಆದರೀಗ ಸುಖವಾಗಿ ಕೂತುಣ್ಣುವ ಕಾಲ. ಮಕ್ಕಳು ದುಡಿವ ದಿನಗಳಲ್ಲಿ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೊರಟಿದ್ದ. ಜೀವವಿದ್ದಾಗ ನಾನು ದುರ್ಗಕ್ಕೆ ಬಂದಿದ್ದರೆ ಸುಮ್ಮನೆ ಮಲಗಿಯಾನ ಅದೆಷ್ಟು ಸಡಗರ ಪಡುತ್ತಿದ್ದನೋ ಅದೆಷ್ಟು ನೆನಪಿನಾಳದಿಂದ ಹಳೆ ನೆನಪುಗಳನ್ನು ತೆಗೆದು ಸುಖಿಸುತ್ತಿದ್ದನೋ ಎಂದುಕೊಳ್ಳುವಾಗ ಮತ್ತೆ ಅಳು ನುಗ್ಗಿತು. ಅಳಲೂ ಸಂಕೋಚ, ಹೆಂಡತಿ ಮಕ್ಕಳೇ ಗಾಂಭೀರ್ಯದ ಮುಸುಕು ಹೊದ್ದಾಗ ನನ್ನದು ನಾಟಕವಾದೀತೆಂಬ ಭಯ. ಅದೇನೋ ದೇಶದ ಉನ್ನತ ಶಾಸಕರು ಸತ್ತಾಗ ಮೆರವಣಿಗೆಯಲ್ಲಿ ಊರಿನ ಯಾರಾರೋ ಜನ ಬಿಕ್ಕುವುದು ಅಳುವುದನ್ನು ಟಿ.ವಿ.ಯಲ್ಲಿ ನೋಡುವ ನಾವು, ನಾಯಕನ ಮಡದಿ ಮಕ್ಕಳು ಮಾತ್ರ ವಿಚಿತ್ರ ಗಂಭೀರ ತೋರುವುದನ್ನು ನೆನಪಿಸಿಕೊಳ್ಳುವಾಗ ಬಡವರಿಗೆ ಸೆಂಟಿಮೆಂಟ್ಸ್ ಜಾಸ್ತಿ ಅಥವಾ ಅಭದ್ರತೆ ಅಳುವಾಗುತ್ತೇನೋ ಅನಿಸಿತು.

ಜಯಣ್ಣ ಚಿತೆ ಏರಿ ಬೆತ್ತಲಾದ. ಬೆಂಕಿಯಲ್ಲಿ ಲೀನವಾಗಹತ್ತಿದ. ದೂರ ಹೋಗಿ ನಿಂತು ಒಂದಿಷ್ಟು ಹೊತ್ತು ಬಿಕ್ಕಿ ಬಿಕ್ಕಿ ಅತ್ತೆ, ಎಲ್ಲ ಬಾಯಲ್ಲೂ ಈಗ ಫಿಲಾಸಫಿಯ ಮಾತುಗಳ ತುಂತುರು, ‘ನೋಡಿ ಮನುಷ್ಯ ಬಂದ ಹಾಗೆ ಬೆತ್ತಲೇ ಹೋಗಬೇಕು’ ಎಂದನೊಬ್ಬ ದೊಡ್ಡ ಹೊಟ್ಟೆಯವ. ‘ಎಂಥ ಬಂಗ್ಲೆ ಕಟ್ಟಿಸಿದ್ನಪ್ಪ, ಹೋಗುವಾಗ ಬಂಗ್ಲೆ ಇರ್‍ಲಿ ಒಂದು ಇಟ್ಟಿಗೆ ತುಂಡಾರ ತಗೊಂಡು ಹೋಗೋಕೆ ಸಾಧ್ಯವೇ?’ ಚಟ್ಟಿನವ ಲೊಚಗುಟ್ಟಿದ, ‘ಹೆಂಡ್ತಿ ಮಕ್ಳು ಅಂತ ಬಡ್ಕೊತಿದ್ದ ಎಲ್ಲಾ ಬಿಟ್ಟು ಹೊರಟುಹೋದ್ರೆ! ಯಾವುದೂ ‘ಹಿಂದೆ ಬರೋಲ್ಲ. ಪಾಪ ಪುಣ್ಯ ಎರಡೇ ಕಣಪ್ಪ ಬರೋದು’ ನಿಟ್ಟುಸಿರು ಬಿಟ್ಟ ಕಂಟೆಸ್ಸಾ ಕಾರಿನ ಭೂಪತಿ. ‘ಅದಕ್ಕೇನಯ್ಯ ಮೋಸ ದಗಾ ವಂಚನೆ ಮಾಡಬಾರ್‍ದು ಮಾಡಿದ್ರೂ ಲಿಮಿಟ್ ಇರ್‍ಬೇಕ್ರಪಾ’ ಸೇಠ್ ಒಬ್ಬ ತರ್ಕ ಹೂಡಿದ, ‘ವ್ಯಾಪಾರ ಅಂದ್ಮೇಲೆ ಮೋಸ ಮಾಡ್ದೆ ವ್ಯಾಪಾರ ಹೆಂಗೆ ಮಾಡ್ತಿ ಸೇಠ್, ವ್ಯಾಪಾರಂ ದ್ರೋಹ ಚಿಂತನಂ’ ನಕ್ಕುಬಿಟ್ಟ ಶೆಟ್ಟಿ, ‘ಸತ್ತಾಗ ಯಾರೂ ಹೊಡ್ಕೊಂಡು ಹೋಗಾಕಿಲ್ಲ ಬಿಡ್ರಿ. ಅದಕ್ಕೆ ನಾನೀಗ ಕಲಬೆರ್‍ಕೆ ಯಾಪಾರ ನಿಲ್ಲಿಸಿ ಬಿಟ್ಟಿವ್ನಿ’ ಎಂದನೊಬ್ಬ ಮರಿ‌ಆನೆ. ‘ಅಣ್ಣಾ ನಿಲ್ಲಿಸಿದೀರೋ ನಿಲ್ಲಿಸ್ತೀರೋ?’ ಅಂತ ಬಾರ್‌ನ ಮಾಲೀಕನೊಬ್ಬ ಸಂಶಯಿಸಿದ. ಗವ್ವನೆ ನಕ್ಕಾಗ ಅವನ ಬಾಯಿಂದ ಗಬ್ಬು ನಾತ ಹೊರಬಂತು. ಪಾಪ! ದುಃಖ ತಡೆಯಲಾರದೆ ಕುಡಿದಿರಬಹುದೇನೋ ಅಂತ ನನಗೆ ನಾನೇ ಸಂತೈಸಿಕೊಂಡೆ. ಜಯಣ್ಣನ ತಲೆಬುರುಡೆ ‘ಡಬ್’ ಎಂದಿತು. ಕುಳಿತಿದ್ದವರು ಕೊಡವಿಕೊಂಡದ್ದು ಬಿಟ್ಟರು. ‘ಇನ್ನು ಹೊರಡೋ?’ ಎಲ್ಲರಿಗೂ ಆತುರ. ‘ಅಂಗ್ಡಿ ಬಾಗಿಲು ತೆಗಿ ಬೇಕ್ರಿ’ ಅಂತ ಒಬ್ಬ ದಾಪುಗಾಲು ಹಾಕಿದ. ‘ಇವತ್ತು ಮಾಲು ಬರೋದಿದೆ ಲೆಕ್ಕ ತಗೋಬೇಕು’ ಎಂದೊಬ್ಬ ದಢಿಯ ಕಾರ್ ಹತ್ತಿದ. ‘ಈವತ್ತು ನಾನು ತಾರಸಿ ಹಾಕಿಸೋದಿದೆ. ಮಳೆ ಬಂದ್ರೆ ಕಷ್ಟ’ ಮುಚ್ಚಟಿದ ಮುಗಿಲು ನೋಡುತ್ತಾ ಬೈಕ್ ಏರಿ ಬರನೆ ಹೋದನೊಬ್ಬ, ‘ಬಾರ್‌ನಲ್ಲಿ ನನ್ನ ತಮ್ಮ ಕೂತವ್ನೆ. ಬೆಳಗ್ಗೆನೂ ಗಿರಾಕಿಗಳು ಬರ್ತಾರೇರಿ….. ನನ್ನ ತಮ್ಮನ ಕೈ ಸರಿಗಿಲ್ಲ’ ಸಿಲ್ಕ್ ಜುಬ್ಬದವ ಕಾರ್ ಸ್ಟಾರ್ಟ್ ಮಾಡಿದ. ‘ಎರಡು ದಿನದಿಂದ ಅಂಗ್ಡೀನೇ ತೆಗೆಯೋಕೆ ಆಗಲಿಲ್ಲ. ಇವತ್ತು ಮಧ್ಯಾಹ್ನ ಅಂಗಡಿ ತೆಗೆದುಬಿಡಬೇಕ್ರಯ್ಯ’ ಜಯಣ್ಣನ ತಮ್ಮಂದಿರ ಪೇಚಾಟ! ‘ಅಪ್ಪನ ಲೆಕ್ಕದ ಪುಸ್ತಕ ನೋಡಬೇಕಮ್ಮ – ಯಾರ್‍ಯಾರಿಂದ ಎಷ್ಟು ಬಾಕಿ ಬರೋದೈತೋ ಪಟ್ಟಿ ಮಾಡಬೇಕು. ನಾಳೆಯಿಂದ್ಲೆ ವಸೂಲಿಗೆ ನಿಲ್ಲಬೇಕು’ ಎಂದು ಜಯಣ್ಣನ ಮಗ ಆತುರಪಟ್ಟ. ‘ಹೌದು ಕಣೋ ಈ ಕಾಲದಲ್ಲಿ ಯಾರನ್ನೂ ನಂಬೋಕಾಗಲ್ಲ’ ಎಂದು ಜಯಣ್ಣನ ಹೆಂಡತಿ ಪಿಸುಗುಟ್ಟಿದ್ದು ಕೇಳಿತು. ಅವರು ದಡಬಡನೆ ಕಾರಿನಲ್ಲಿ ಹೊರಟುಹೋದರು. ಕೆಲವೇ ಕೆಲವು ನಿಮಿಷಗಳಲ್ಲಿ ಮುಕ್ತಿಧಾಮ ಖಾಲಿ. ನಾನು ಜಯಣ್ಣ ಇಬ್ಬರೇ ಉಳಿದೆವು. ಈಗ ಎಷ್ಟು ಬೇಕಾದರೂ ಜೋರಾಗಿ ಅಳುವ ಸ್ವಾತಂತ್ರ್ಯ ನನಗಿತ್ತು. ಪ್ರಯತ್ನಪಟ್ಟರೂ ಒಂದು ಹನಿ ಕಣ್ಣೀರೂ ಬರಲಿಲ್ಲ. ಮೊದಲು ಮನೆಗೆ ಹೋಗಿ ದೀಪ ನೋಡಿ ಗುಲ್ಬರ್ಗಾದ ಬಸ್ ಹಿಡಿಯಬೇಕು. ಸ್ನಾನ ಮಾಡೋದೆಲ್ಲಿ? ಬದಲಿ ಬಟ್ಟೆಯನ್ನೂ ತಂದಿಲ್ಲ. ಹಿಂಸೆಯಾಯಿತು. ಅಲ್ಲಿಂದ ಹೊರಟೆ. ಚಿತೆಯ ಬಳಿ ಕೂತಿದ್ದ ತೋಳದಂತಹ ನಾಯಿ ಕಂಡಿತು. ದಾಪುಗಾಲು ಹಾಕಿದೆ. ವರ್ಷದ ಕೊನೆ ಸಿ.ಎಲ್.ಗಳು ಬೇರೆ ಇಲ್ಲ. ನಾಳೆ ಕಂಟ್ರಾಕ್ಟರ್ ಒಬ್ಬ ಆಫೀಸಿಗೆ ಬಂದು ಕಾಣುತ್ತೇನೆ ಎಂದಿದ್ದ. ಅವನ ಫೈಲ್‌ಗೆ ಸಾಹೇಬನಿಂದ ಸಹಿ ಮಾಡಿಸಿಯಾಗಿದೆ. ಕಡಿಮೆ ಎಂದರೂ ಒಂದು ಸಾವಿರ ಕೊಟ್ಟಾನು ಎಂಬುದು ನೆನಪಾದಾಗ ಹೇಗಾದರೂ ಮಾಡಿ ಬಸ್ ಹಿಡಿಯಬೇಕೆಂಬ ತಹತಹ. ವೇಗ ಹೆಚ್ಚಿಸಿದೆ.
*****

ಕೀಲಿಕರಣ : ಎಮ್ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೂರಕ್ಕೆ ನೂರು
Next post ಕವಿ(ಪಿ)ಗಳು

ಸಣ್ಣ ಕತೆ

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಮೇಷ್ಟ್ರು ಮುನಿಸಾಮಿ

  ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…