ಮರನಲ್ಲ ನಾನು- ನಾನು ಅಮರ.
ಸುಮ- ನಲ್ಲನಾಗಿ, ಆದೆ ಭ್ರಮರ.
ಮುಚ್ಚಿಲ್ಲ ನನಗೆ, ನಾನು ತೆರವು
ಬಿಚ್ಚು ಮಲಗಂಟು, ಅದುವೆ ಒಳನಂಟು.
ಅಂಟು ಇದ್ದರು ಅಲ್ಲ ಎಣ್ಣೆ ಜಿಗಟು.
ಇದು ಸ್ನೇಹದೊಗಟು.
ತುಂತುರು ತುಷಾರ
ಅದು ಹೃದಯ ಹಾರ
ಜಿನುಗು ಕಿವಿ ಮಾತು
ಜೀವ ರುಜುವಾತು
ಏನೊ ಎಚ್ಚರಿಸಿದೊಲು
ಏನೊ ಪಲಕು
ಹಾಕು ಮೆಲಕು
ಮೈಮರೆವಿನಲ್ಲಿರುವ ಅರಿವೆ ತೇವ
ಅಲ್ಲಿ ಅಂಕುರಿಸುವದು ಜೀವಭಾವ
ಆ ಕ್ಷಿತಿಜದುದಯವೇ ಬೆಳಗು ಜಾವ
ಅದನರಿಯದವ ಯಾವ?
ಓಹೋ ನನ್ನಾಕೆ
ಜೋಕೆ, ಜೋಕೆ!
ನಾನು ನಿನ್ನಾತ
ನಾ ಮಲಯವಾತ.
*****

















