“ಶೂನ್ಯವನ್ನು ತಲುಪುದು ಹೇಗೆ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ.
ಗುರು ಹೇಳಿದರು- “ಅದು ತಲುಪುವುದಲ್ಲ, ಪಡೆಯುವುದು”
“ಹಾಗೆಂದರೆ ಏನು?” ಶಿಷ್ಯ ಕೇಳಿದ.
ನಮ್ಮ ಹಾವಭಾವ, ಬಾಳು ಬದುಕು, ಸೀಮ ಅಸ್ಸೀಮ, ನೇಹಗೇಹ, ಗೆರೆಗೋಡೆ, ಅಡ್ಡದಿಡ್ಡೆ, ರಾಗವಿರಾಗ, ಬೆಳಕುನೆಳಲು, ಪ್ರಜ್ಞೆ ಪ್ರಾಣ, ಅಂಗ ಅಭಂಗ, ನಾನಲ್ಲಿ-ಬಾನು, ಬಾನಲ್ಲಿ ನಾನು, ಪವನದಲ್ಲಿ ಪ್ರಾಣ, ಪ್ರಾಣದಲಿ ವಿಶ್ವ ಎಂಬ ಸ್ಥಿತಿಯಲ್ಲಿ ನಡೆವುದೇ ಶೂನ್ಯದ ಹಾದಿ ಎಲ್ಲ ಬಿಡುವುದಲ್ಲ. ಎಲ್ಲ ಸೇರಿಸಿ ಒಂದಾಗುವುದು. ಸೀಮೆಗಳ ಸೀಮೋಲ್ಲಂಘನ, ಗೆರೆ ಗೋಡೆಗಳ ವಿಚ್ಛೇದನ, ಅಡ್ಡದಿಡ್ಡೆಯ ಆಚೆ, ಬೆಳಕುನೆರಳಲಿನ ವಿಸ್ತಾರದಲ್ಲಿ, ಭಿನ್ನತೆಯಿಂದ ಬಿಡುಗಡೆ, ಬಿಡುಗಡೆಯಿಂದ ಎಲ್ಲೆಡೆ ಬದುಕು ಬಾಳಿನ ಬಯಲ ಸೀಮೆಯಲ್ಲಿ ಅನಂತತೆಯ ಹೆಜ್ಜೆಯಲ್ಲಿ ಎಲ್ಲಡೆ ಇಲ್ಲದ್ದು ಏನಿಲ್ಲ, ಏನಿಲ್ಲ, ಹೇಳು? ಅದೇ ನೇತಿ ನೇತಿ ಅಲ್ಲವೇ?” ಎಂದಾಗ ಗುರುಗಳು, ಶಿಷ್ಯ ಸೃಷ್ಟಿಯಲ್ಲಿ ಒಂದಾಗಿ ಶೂನ್ಯವಾಗಿದ್ದ. ತನ್ನ ಪ್ರಶ್ನೆಗೆ ತಾನೇ ಉತ್ತರವಾಗಿ, ಗುರುಗಳನ್ನು ನಮಿಸುತ್ತ ನಡೆದಿದ್ದ.
*****

















