ಮಂಡಲ

ಮಂಡಲ

“ಅಬ್ಬಬ್ಬಬ್ಬಬ್ಬ” ಶಿವರುದ್ರಪ್ಪನವರು ಮುಖವನ್ನು ಟವಲಿನಿಂದ ಒರೆಸಿಕೊಂಡು ಗಾಳಿ ಬೀಸಿಕೊಳ್ಳುತ್ತಾ ಹೇಳಿದರು: “ಅದೇನ್ ಸೆಕೆ ಮಾರಾಯ, ಈ ಹಾಳು ಬಿಸ್ಲು … ಛೆ …. ಛೆ
… ಛೆ…”

“ನೋಡ್ರಿ ಶಿವರುದ್ರಪ್ಪನೋರೇ…. ನಿಮ್ಮುನ್ನ ಪ್ರಧಾನರನ್ನಾಗಿ ಆಯ್ಕೆ ಮಾಡಿದ್ದುಕ್ಕೆ ಈ ಆಫೀಸಿಗೆ ಒಂದು ಫ್ಯಾನ್ ಕೂಡಾ ಹಾಕ್ಸಕ್ಕಾಗಿಲ್ಲ. ಇನ್ ಊರಿನ ಯಾವಾರನೆಲ್ಲ ಮಾಡ್ತೀರಾ? ಅಯ್ಯೋ…. ಅದೇನ್ ಮಾಡ್ತಿರೋ ಏನೋ” ನಂಜುಂಡಪ್ಪನವರನ್ನು ಅನುಸರಿಸಿ ಮಂಜಪ್ಪನವರೂ, “ಹೂ… ಮಾಡ್ತಾರೆ ಮಾಡ್ತಾರೆ” ಎಂದು ವ್ಯಂಗ್ಯವಾಡಿದರು.

ಬಿಸಿಲಿನಿಂದ ಮಂಡಲ ಪಂಚಾಯಿತಿ ಕಾರ್‍ಯಾಲಯಕ್ಕೆ ಕಾಲಿರಿಸಿದ್ದ ಶಿವರುದ್ರಪ್ಪನವರಿಗೆ ಈ ವಿರೋಧ ಪಕ್ಷದವರ ಮಾತು ಪಿತ್ತವನ್ನು ಕೆದಕಿತ್ತು. ಬೇರೆ ಯಾರಾದರೂ ಆಗಿದ್ದರೆ ಹಿಂದಿರುಗಿ ಹೊಡೆದು ಬಿಡುತ್ತಿದ್ದರೋ ಏನೋ. ಆದರೆ ವಿರೋಧ ಪಕ್ಷದವರು ಅವರು. ಅದರಲ್ಲೂ ಪ್ರಬಲರಾಗಿದ್ದವರು. ಅವರೇನಾದರೂ ಮನಸ್ಸು ಮಾಡಿದರೆ ತನ್ನ ಸ್ಥಾನ ಕಳಚಿ ಬೀಳುವುದೆಂಬ ಭೀತಿಯೂ ಇತ್ತು.

ತಮ್ಮನ್ನು ಸಮರ್‍ಥಿಸಿಕೊಳ್ಳಲು ಹೇಳಿದರು: “ನಮ್ಮ ಸ್ವಾರ್‍ಥಕ್ಕಾಗಿ ಇರುವ ದುಡ್ಡನ್ನೆಲ್ಲಾ ಪೋಲು ಮಾಡಿದರೆ ಹಳ್ಳಿಗಳ ಏಳಿಗೆಗೆ ಏನು ಮಾಡುವುದು? ಅದರಲ್ಲೂ ಈ ವರ್‍ಷ ಬರ ಬಂದಿರೋದ್ರಿಂದ ಜನರಿಗೆ ಕುಡಿಯುವ ನೀರಿಗಾದರೂ ನಾವು ಒಂದಷ್ಟು ಹಣ ಖರ್‍ಚು ಮಾಡಬೇಕಾಗುತ್ತದೆ… ಗೊತ್ತಾಯ್ತ? ಸರ್‍ಕಾರದ ಆದೇಶದಂತೆ ಗೋಶಾಲೆಗಳನ್ನು ತೆರೆದು ಅವುಗಳ ಮೇವು ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ… ಗೊತ್ತಾಯ್ತ?” ಶಿವರುದ್ರಪ್ಪನವರು ಮಾತು ಮುಗಿಸುವ ಮೊದಲೇ ಅವರ ಪಕ್ಷದ ಸದಸ್ಯರೊಬ್ಬರು ತಮ್ಮ ಪಕ್ಷದ ವರಿಷ್ಟರ ಮಾತಿಗೆ ಬೆಂಬಲವನ್ನು ಸೂಚಿಸುವವರಂತೆ, “ಹೊರಗಡೆ ಜನ ದನ ಸಾಯ್ತಾ ಇರೋವಾಗ ನಾವು ಫ್ಯಾನ್ಗೀನ್ ಅಂತ ದುಡ್ಡು ಖರ್‍ಚು ಮಾಡಿ ಮಜಾ ಮಾಡೋದು ಸರಿ ಅನ್ನುಸ್ತೈತೇನ್ರಿ… ಅದೂ ಅಲ್ಲದೇ ನಮಗೆ ಬರಾ ವರಮಾನ ಅಷ್ಟರಲ್ಲೇ ಐತೆ” ಎಂದರು.

ವಿರೋಧ ಪಕ್ಷದವರು ಹೇಳಿದರು: “ಕುಡಿಯೋ ನೀರಿಗೇ ಅಂತ ಬಾವಿ ತಗಿಸಕ್ಕೆ, ಕಿರು ನೀರು ಸರಬರಾಜು ಯೋಜನೆಗಳನ್ನು ಮಾಡಕ್ಕೆ ಅಂತ ಟ್ಯಾಂಕ್, ನಲ್ಲಿ ಹಾಕ್ಸಕ್ಕೆ ಪಿ.ಹೆಚ್.ಯಿ ಡಿಪಾಲ್ಟ್‌ಮೆಂಟ್‌ನಿಂದ ಸರ್‍ಕಾರದವರೇ ದುಡ್ಡು ಕೊಟ್ಟು ಕೆಲಸ ಮಾಡುಸ್ತಾರೆ…. ಗೋಶಾಲೆಗೂ ಸರ್‍ಕಾರದವರೇ ದುಡ್ಡು ಕೊಡ್ತಾರೆ….”

“ಸರ್‍ಕಾರ ಅಂದರೇನು? ಅದುನ್ನೇನು ಮಶಿನ್ನು ಅಂದ್ಕಂಡ್ರ?” ಶಿವರುದ್ರಪ್ಪನವರು ಸ್ವಲ್ಪ ವ್ಯಂಗ್ಯವಾಗಿಯೇ ಮರು ಪ್ರಶ್ನಿಸಿದರು. ಆ ವ್ಯಂಗ್ಯವನ್ನು ಗುರುತಿಸುವುದಿರಲಿ, ತಮಗೆ ಯಾವ ಯಾವ ವಿಷಯಗಳ ಪರಿಮಿತಿಯಿದೆ ಎಂದೇ ತಿಳಿದಿರಲಿಲ್ಲ-ಅಲ್ಲಿದ್ದ ಸದಸ್ಯರಾರಿಗೂ.

ತಮ್ಮ ಸಮಸ್ಯೆಗಳಿಗೆಲ್ಲಾ ಮಳೆ ಬಾರದಿರುವುದೇ ಕಾರಣ ಎಂಬಲ್ಲಿಗೆ ಚರ್‍ಚೆ ಬಂದಾಗ, “ಅದ್ಯಲ್ಲ ಆಗುದ್, ಹೋಗುದ್ ಮಾತು, ಬಿಡಿ ಅದುನ್ನ, ಈಗ ಮಳೆ ಬರಲಿಲ್ಲ ಅಂತ ಅನ್ನಕ್ಕಿಂತ, ಮಳೆ ಯಾಕ್ ಬರಲಿಲ್ಲ, ಅದ್ರೆ ಏನ್ ಮಾಡುದ್ರೆ ಮಳೆ ಬತೈತೆ ಅಂತ ಯೋಚ್ನೆ ಮಾಡೋದು ಮುಖ್ಯ. ನಮ್ಮ ಮುಖ್ಯ ಮಂತ್ರಿಗಳು ಹೇಳವ್ರೆ: “ಊರಿಗೊಂದು ದೇವರ ಕಾಡು ಬೆಳೆಸಬೇಕು” ಅಂತ. ದಿನಾ ರೇಡಿಯೋದಾಗೆ ನಾವು ಕೇಳಿರಲ್ವಾ: “ಕಾಡಿದ್ರೆ ನಾಡು, ನಾಡಿದ್ರೆ ನಾವು” ಅಂತ.

ನಾಗಪ್ಪನ ಮಾತನ್ನು ಕೇಳಿ ನಗುತ್ತಾ ಕೆಂಚಪ್ಪ ಹೇಳಿದ: “ರೇಡಿಯಾದವ್ರು ಹೇಳಾದು ಅಂಗಲ್ಲಪ್ಪ ‘ಕಾಡಿದ್ರೆ ಮಳೆ, ಮಳೆಯಿದ್ರೆ ಬೆಳೆ’ ಅಂತ”. ಅದನ್ನು ಕೇಳಿ ಕೆಲವರು ಮಂದ ಮತಿಗಳು ನಕ್ಕರು. ಅದನ್ನೆಲ್ಲಾ ಅಷ್ಟಾಗಿ ಗಮನಿಸದೇ ನಾಗಪ್ಪ ಮುಂದುವರಿಸಿದ: “ಈಗ ನಮ್ಮೂರಲ್ಲಿ ಒಂದು ಕಾಡು ಬೆಳೆಸಕ್ಕೆ ಅಂತ ಪಳಾನು ಮಾಡಬೇಕು. ಒಂದಿಷ್ಟು ದುಡ್ಡ ಸ್ಯಾಂಕ್ಷನ್ ಮಾಡ್ಬೇಕು”.

“ಕಾಡು ಬೆಳೆಸಕ್ಕೂ ನೀರು ಬ್ಯಾಡ್ವೇನಯ್ಯ…., ಇವತ್ತು ಸಸಿ ಊಣುದ್ರೆ ನಾಳಿಕೇನೇ ಕಾಡು ಆಗ್ಬುಡ್ತೈತಾ? ಮಳೆ ಬಂದ್ಬುಡ್ತೈತಾ?”…. ಹೀಗೇ ತಲಾಗೊಂದೊಂದು ಮಾತನಾಡುತ್ತಿದ್ದರು. ಯಾರ ಮಾತೂ ಯಾರಿಗೂ ಸರಿಯಾಗಿ ಕೇಳಿಸುತ್ತಿರಲಿಲ್ಲ.

ವಾಸ್ತವ ವಾದಿಯೊಬ್ಬ ಹೇಳಿದ: “ಇಲ್ಲಿಂದ ಪ್ಯಾಟೀಗ ಎಲ್ಡೇ ಎಲ್ಡು ಮೈಲಿ, ಅಲ್ಲಿ ನೆನ್ನೆ ನೋಡ್ರಿ, ಸಿಕ್ಕಾಪಟ್ಟೆ ಮಳೆ ಹುಯ್ದದಂತೆ, ಇಲ್ಲಿ ನೋಡುದ್ರೆ ಒಂದೇ ಒಂದು ಹನಿ ಕೂಡಾ ಇಲ್ಲ” ಇನ್ನೊಬ್ಬ ಪೂರಕವಾಗಿ ಲೊಚಗುಟ್ಟುತ್ತಾ, “ಆ ಮಳೆ ಇಲ್ಲಿ ಏನಾದ್ರೂ ಹುಯ್ದಿದ್ರೆ ಪೈರು ಒಂದದಿನೈದು ದಿನಾನಾದ್ರೂ ಉಸಿರು ಹಿಡಕಂಡಿರೋದ. ಎಲ್ಲಾ ವಡೆಗೆ ಬಂದು ತೆನೆಯೆಲ್ಲಾ ಗಂಟಲಲ್ಲಿ ಸಿಗಾಕಂಡದೆ” ಅಂದ.

ಹೀಗೆ ಒಬ್ಬೊಬ್ಬರು ತಮ್ಮ ತಮ್ಮ ಪಕ್ಕದವರೊಂದಿಗೆ ತಮ್ಮ ಹೊಲಗದ್ದೆಗಳ ವಿಚಾರ, ಅದರಿಂದಾಗುತ್ತಿರುವ ನಷ್ಟ ಇತ್ಯಾದಿಗಳ ಕುರಿತು ಮಾತನಾಡತೊಡಗಿದ್ದರು. ಅವರಲ್ಲಿ ಹೆಚ್ಚು ಜನರು ಮಳೆಯ ತಾರತಮ್ಯದ ಬಗ್ಗೆಯೇ ಆಡಿಕೊಳ್ಳುತ್ತಿದ್ದರು. ‘ಅಲ್ಲೊಂದು ಬಟ್ಟೆ ತ್ಯಾವ ಆಗದೆ’, ‘ಇಲ್ಲೊಂದು ಕಂಬಳಿ ಹದ ಆಗದೆ’… ಹೀಗೆ, ಅವರೆಲ್ಲರ ಮುಖ್ಯ ಪ್ರಶ್ನೆ: “ನಮ್ಮೂರಗ್ಯಾಕೆ ಮಳೆ ಬರಲ್ಲ?” ಅನ್ನದು.

ಒಬ್ಬ ಹೇಳಿದ: “ಕಾಡಿಲ್ಲುದ್ಕೆ”

“ಅಂಗಾಲೇ ಪ್ಯಾಟೇಗೇನು ಕಾಡೈತಾ?” ಮತ್ತೊಬ್ಬನ ಪ್ರಶ್ನೆ.

“ಪ್ಯಾಟೇಲಿ ಕಾಡಿಲ್ಲದಿದ್ರೂ ನಮ್ಮೂರಿಗಿಂತೂ ಹೆಚ್ಚಿಗೆ ಎತ್ತರವಾದ ಮರಗಳು ಅವೆ. ಅವು ಮೋಡನ ಎಳಕಂಡು ಮಳೆ ಬರುಸ್ಕಂತಾವಂತೆ”.

“ಬರುಸ್ಕಂತೈತೆ, ಬರುಸ್ಕಂತೈತೆ, ನಮ್ಮಪ್ಪ ನಮ್ಮ ತಾತನ ಕಾಲದಾಗೂ ಹಿಂಗೇ ಬರ ಬತ್ತಿತ್ತಂತೆ. ಅವಾಗೇನು ಕಾಡಿಗೇನು ಬರಾ ಇತ್ತಾ?”

“ಅದೆಲ್ಲಾ ಪುರಾಣ ಯಾಕ್ರಪ್ಪ, ಬಸಣ್ಣನ್ನ ಹೊಲ್ಡುಸಿ ಕೇಳಿದ್ರಾಯ್ತು”

ಯಾರೋ ಒಬ್ಬರ ಮಾತು ಸದ್ಯಕ್ಕೆ ಪರಿಹಾರವಾಗಿ ಕಂಡಿತು.

ಅಂದು ಸಂಜೆಯೇ ಬಸವಣ್ಣನನ್ನು ನಾಲ್ಕು ಜನ ಹೊತ್ತು, ಪಕ್ಕದಲ್ಲಿ ಒಂದು ಪಂಜನ್ನು ಹಿಡಿದು ಕೇಳಿಯೂ ಆಯಿತು.

ದೇವರ ಪರವಾಗಿ ಪೂಜಾರಿಯ ಮೇಲೆ ದೇವರು ಬಂದು ಪೂಜಾರು ಬಸಯ್ಯ ಹೇಳಿದ:

“ಈ ವರ್‍ಷ ಬ್ಯಾಸಗೇಲಿ ಸತ್ತಿರೋ ಯಾರಿಗೋ ತೊನ್ನು ಇತ್ತಂತೆ. ಈಗ ಅದುನ್ನ ಕಿತ್ತು ಸುಟ್ಟು ಹಾಕುದ್ರೆ ಮಳೆ ಬತೈತಂತೆ”.

ಈ ಮಾತಿಗೆ ಮುದುಕರು, ತಾವು ಕೇಳಿ ತಿಳಿದುಕೊಂಡಿದ್ದಂತೆ ಮಳೆ ಮಾಡ ಹತ್ತಿದಾಗ ಈ ತೊನ್ನಿದ್ದೋರ ಹೆಣ ಐತಲ್ಲ, ಕೈ ಕಾಲ್ನ ಚಾಚುತ್ತಂತೆ. ಆಗ ಬರಾ ಮಳೆನೂ ಸರ್‍ಕಂಡೋಗಿ ಪಕ್ಕದೂರಿನ್ಮೇಲೆ ಉಯ್ತಿತಂತೆ. ಯಾಕೆ ನೀವೇ ನೋಡಿಲ್ವಾ? ಪ್ಯಾಟೆ ಮೇಲೆ ಅತ್ತ, ಹಾಳೂರ್ ಕಡೆ ಇತ್ತ, ಎತ್ತೆತ್ತೋ ಉಯ್ತಿತೆ. ಆದ್ರೆ ನಮ್ಮೂರ್‍ಮೇಲೆ ಮಾತ್ರ ಇಲ್ಲ” ಎಂದು ವ್ಯಾಖ್ಯಾನಿಸಲಾರದ ಸಮಸ್ಯೆಯನ್ನೇ ಪುನಃ ಕೆದಕಿದರು.

ದೇವರ ಚಿತ್ತದಂತೆ ಮಾರನೇ ದಿನವೇ ಆ ವರ್‍ಷ ಸತ್ತ ಆ ಊರಿನವರ ಗುಂಡಿಗಳನ್ನೆಲ್ಲಾ ಕೀಳುವುದೆಂದು ನಿಗದಿಯಾಯಿತು. ಮನೆಗೊಬ್ಬರಂತೆ ಸನಿಕೆ ಹಾರ ತಗಂಡು ನಾಳೆ ಮದ್ಯಾನ ಮೂರು ಗಂಟೆಗೆ ಸರ್‍ಯಾಗಿ ಬಸವಣ್ಣನ ದೇವುಸ್ಥಾನದ್ ತಾಕ ಬರೇಕಂತೆ…. ಬರ್‍ದೇ ಇದ್ರೆ ಹದ್ನೈದು ರುಪಾಯಿ ದಂಡ ಆಕ್ತಾರಂತಪ್ಪೋ….” ಎಂದು ಊರ ತಳವಾರ ಕೇರಿ ಕೇರಿಗೂ ಸಾರಿಕೊಂಡು ಬಂದ. ಅದರ ಜೊತೆಯಲ್ಲೇ ಬರ ಪರಿಶೀಲಿಸಲು ಸರ್‍ಕಾರದ ಅಧ್ಯಯನ ತಂಡವೊಂದು ನಾಳೆಯೇ ತಮ್ಮೂರಿಗೆ ಬರುವುದೆಂದು ತನ್ನದೇ ಭಾಷೆ ಮತ್ತು ಶೈಲಿಯಲ್ಲಿ ಹೇಳಿಕೊಂಡು ಬಂದ.

ಈ ಒಂದು ವರ್‍ಷದಲ್ಲಿ ಸತ್ತವರ ವಿವರ ಸಿದ್ಧವಾಯಿತು. ಹದಿನೈದು ಜನರು ಒಟ್ಟು ಸತ್ತರು. ಅವರಲ್ಲಿ ನಾಲ್ಕು ಜನರು ಬೇರೆ ಬೇರೆ ಜಾತಿಗೆ ಸೇರಿದವರಾದ್ದರಿಂದ ತಮ್ಮ ಸಂಪ್ರದಾಯದಂತೆ ಸುಟಿದ್ದರೆ, ಉಳಿದ ಹನ್ನೊಂದು ಜನರನ್ನು ಅವರ ಜಾತಿಯ ಸಂಸ್ಕಾರ ಪದ್ಧತಿಗನುಗುಣವಾಗಿ ಹೂಳಲಾಗಿತ್ತು. ಆ ಹನ್ನೊಂದು ಜನರಲ್ಲಿ ಯಾರಿಗೆ ತೊನ್ನಿತ್ತು ಎಂದು ಯಾರಿಗೂ ತಿಳಿದಿರಲಿಲ್ಲವಾದ್ದರಿಂದ ಎಲ್ಲಾ ಹೆಣಗಳನ್ನು ಕೀಳುವುದೆಂದು ನಿರ್‍ಧಾರವಾಯಿತು.

ಆ ಹನ್ನೊಂದು ಹೆಣಗಳಲ್ಲಿ ಶಿವರುದ್ರಪ್ಪ ಪ್ರಧಾನರ ತಂದೆಯವರದೂ ಒಂದು. ವಿಷಯ ತಿಳಿದ ಶಿವರುದ್ರಪ್ಪ ತಮ್ಮ ತಂದೆಯ ಹಣ ಕೀಳುವುದಕ್ಕೆ ನಿರಾಕರಿಸಿದರು.

“ನಮ್ಮ ತಂದೆಯ ಹೆಣ ಕೊಳೆತು ಹೋಗಿದ್ದರೆ ಅವರ ಗೋರಿಯನ್ನು ಪುನಃ ತಮ್ಮ ಹಣದಲ್ಲಿಯೇ ಕಟ್ಟಿಸಿಕೊಡಬೇಕು ಮತ್ತು ಮಾನ ನಷ್ಟಕ್ಕಾಗಿ ಐನೂರ ಒಂದ್ರುಪಾಯಿ ದಂಡ ಕೊಡಬೇಕು. ಗೊತ್ತಾಯ್ತ…. ಅಥವಾ ಕೊಳೆಯದೇ ಹಾಗೇ ಇದ್ದರೆ ಅದರ ಪುನಃ ಸಂಸ್ಕಾರದ ಖರ್‍ಚನ್ನು ನಾನೇ ಹಾಕಿಕೊಳ್ಳುತ್ತೇನೆ. ಗೊತ್ತಾಯ್ತ?” ಎಂದು ಶರತ್ತನ್ನು ಹಾಕಿದರು.

ಹೆಣ ಕೊಳೆಯದಿದ್ದರೆ ಅದನ್ನು ಸುಡುವ ಖರ್‍ಚು ಉಳಿಯುತ್ತದೆ ಎಂದು ಯೋಚಿಸಿದರೂ, ಅಕಸ್ಮಾತ್ ಕೊಳೆತುಬಿಟ್ಟಿದ್ದರೇ…? ಎಂಬ ಹೆದರಿಕೆಯೂ ಇತ್ತು. ಶಿವರುದ್ರಪ್ಪನ ತಂದೆಯವರು ಕೆಲವು ವರ್‍ಷ ಕಾಲ ಗೌಡಿಕೆ ಮಾಡಿಕೊಂಡಿದ್ದು, ಊರಿಗೆ ಹಿರಿಯರಾಗಿದ್ದವರು ಎಂಬ ಕಾರಣಕ್ಕಾಗಿ ಈ ಶರತ್ತಿಗೆ ಜನರು ತಲೆಬಾಗಬೇಕಾಗಿತ್ತು. ಅಲ್ಲದೇ ಅವರು ಊರಿನಲ್ಲಿ ಇದ್ದುದರಲ್ಲೇ ಸ್ವಲ್ಪ ಸಿರಿವಂತರು ಎಂಬ ಕಾರಣವೂ ಇತ್ತು. ಬೇರೆ ಯಾವ ಹೆಣದ ವಾರಸುದಾರರೂ ಚಕಾರವೆತ್ತಲಿಲ್ಲ.

ನಿಗದಿಯಾಗಿದ್ದಂತೆ ಮೂರು ಗಂಟೆಗೆ ಸರಿಯಾಗಿ ಬಸವಣ್ಣನ ದೇವಸ್ಥಾನದ ಮುಂದೆ ಮನೆಗೊಬ್ಬರಂತೆ ಬಂದು ಸೇರಿದರು. ಗುದ್ದಲಿ, ಹಾರ, ಪಿಕಾಸಿಗಳೂ ಬಂದವು.

ಶಿವರುದ್ರಪ್ಪನವರ ಮನೆಯಿಂದ ಯಾರೂ ಬರಲಿಲ್ಲ. ಗುಂಪು ಸೇರಿದ್ದ ಊರಿನವರು ತಳವಾರನನ್ನು ಅವರ ಮನೆಗೆ ನೆನಪು ಮಾಡಿ ಬರಲು ಕಳುಹಿಸಿದ್ದಕ್ಕೆ, “ಹದ್ನೈದು ರೂಪಾಯಲ್ವೇನೋ? ಬಿಸಾಕ್ತೀನಿ ತಗಾಳೋ” ಎಂದು ಗದರಿಸಿ ಕಳುಹಿಸಿದರು. ಅವರ ತಂದೆಯ ಹೆಣವನ್ನು ಕೀಳಬೇಕೋ ಬೇಡವೋ ಎಂಬ ಬಗ್ಗೆ ಯಾರೂ ನಿರ್‍ಧರಿಸಲಿಲ್ಲ.

ಬರ ಅಧ್ಯಯನ ತಂಡ ಸಂಜೆ ವೇಳೆಗೆ ‘ಮಂಡಲಿ’ಗೆ ಬರುವುದೆಂದು ಯಾರೋ ಹೇಳಿದರು. ತಳವಾರನ ಸಹಾಯದಿಂದ ಸ್ಮಶಾನದಲ್ಲಿ ಗುಂಡಿಗಳನ್ನು ಹುಡುಕಿ ಅಗೆಯಲಾರಂಭಿಸಿದರು. ತಳವಾರನಿಗೆ ಸಾಮಾನ್ಯವಾಗಿ ಯಾವ ಹಣ ಎಲ್ಲೆಲ್ಲಿ ಹೂಣಿದ ಎಂಬ ಬಗ್ಗೆ ಚೆನ್ನಾಗಿ ಪರಿಚಯವಿತ್ತು. ಕಾರಣ, ಆತನೇ ಗುಣಿಗಳನ್ನು ತೆಗೆಯಲು ಸ್ಥಳ ಸೂಚಿಸುತ್ತಿದ್ದ. ಅದು ಆತನ ಅನುಭವೀ ಕೆಲಸವೂ ಹೌದು.

ಆಕಾಶದಲ್ಲಿ ಭಾರಿ ಗಾತ್ರದ ಕರಿಮೋಡಗಳು ಓಡಾಡುತ್ತಿದ್ದವು.

ಒಂದು ಹೆಣವನ್ನು ಕಿತ್ತಾಗ ಅಲ್ಲಿದ್ದವರಿಗೆ ಮೊದಲ ಬಾರಿಗೆ ಹೆದರಿಕೆಯಾಯಿತು. ಕಾರಣ ಅದು ವಿಕಾರವಾಗಿತ್ತು. ಕಣ್ಣು ಮೂಗಿನ ಭಾಗದಲ್ಲಿ ಆಳವಾದ ಗುಂಡಿಗಳಾಗಿದ್ದವು. ಉಳಿದ ಭಾಗದಲ್ಲಿ ಅಸ್ಥಿಪಂಜರದ ಮೇಲೆ ಅಲ್ಲಲ್ಲಿ ಚರ್‍ಮದ್ದೋ ಅಥವಾ ಮಾಂಸದ ವಸ್ತುವೋ ಎಂದು ತಿಳಿಯಲಾರದ್ದು ಅಂಟಿಕೊಂಡಿತ್ತು.

ಇನ್ನೊಂದು ಹೆಣ ತನ್ನ ಗಾತ್ರಕ್ಕಿಂತ ಹಿರಿದಾಗಿದ್ದು, ಅದರ ದೇಹ ತುಂಬಾ ಮೃದುವಾಗಿತ್ತು. ಒಂದು ರೀತಿಯ ವಾಸನೆಯೂ ಮೂಗಿಗೆ ಬಡಿಯಿತು. ಅದರ ದೇಹದ ಮೇಲಿನ ಮಣ್ಣನ್ನು ತೆಗೆಯುವಾಗ ಉಂಟಾಗುತ್ತಿದ್ದ ಒತ್ತಡದಿಂದ ಆ ಹೆಣದ ದೇಹದಿಂದ, ಪಿಚಕಾರಿಯಿಂದ ದ್ರವವಸ್ತು ಹೊರಚಿಮ್ಮುವಂತೆ ಕೀವಿನಂತಹ ದ್ರವವು ಮೇಲೆ ಹಾರುತ್ತಿತ್ತು. ಇಲ್ಲವೇ ಚರ್‍ಮದಲ್ಲಿ ಉಂಟಾದ ರಂದ್ರ ಅಥವಾ ಬಿರಿಯಿಂದ ಸೋರಿ ಮಣ್ಣೆಲ್ಲಾ ನೆನೆಯುತ್ತಿತ್ತು. ಇದು ಮೊದಲನೆಯ ಹಣಕ್ಕಿಂತ ವಿಕಾರವಾಗಿದ್ದರೂ, ಅವರ ಹೆದರಿಕೆ ಸ್ವಲ್ಪ ಕಡಿಮೆಯಾಗಿತ್ತು.

ತಳವಾರ, “ಈ ಹಣಕ್ಕೆ ತೊನ್ನಿತ್ತು. ಆದ್ರೆ ನಾನೇ ಹೇಳಿ ಉಪ್ಪು ಹಾಕಿಸಿ, ಮುಚ್ಚಿಸಿದೆ. ಆದ್ದರಿಂದಲೇ ಅದು ಕೊಳಿತಾಯಿದೆ” ಎಂದು ತನ್ನನ್ನು ಹೊಗಳಿಸಿಕೊಳ್ಳಬೇಕೆಂಬ ಇಚ್ಚೆಯಿಂದ ಹೇಳಿದ. ಒಂದಿಬ್ಬರು ಆ ಮಾತನ್ನೂ ಆಡಿದ್ದರಿಂದ ಪ್ರಶಂಸೆಯ ಸಂತಸದಿಂದ ಉಬ್ಬಿಹೋದ.

ಹತ್ತು ಹೆಣಗಳನ್ನು ಕೀಳಲಾಯಿತು. ಆದರೆ ಯಾವ ಹೆಣವೂ ಕೊಳೆಯದೇ ಇರಲಿಲ್ಲವಾದ್ದರಿಂದ ಪುನಃ ಎಲ್ಲವನ್ನೂ ಹಾಗೆಯೇ ಮುಚ್ಚಿದರು.

ಕೊನೆಗೆ ಶಿವರುದ್ರಪ್ಪನ ಅಪ್ಪನ ಹೆಣವೇ ಈಗ ಕೊಳೆಯದೇ ಉಳಿದಿರುವುದು ಎಂಬ ನಿರ್‍ಧಾರಕ್ಕೆ ಎಲ್ಲರೂ ಬಂದರು. ಆದರೆ ಯಾರಿಗೂ ಅದನ್ನು ಮುಟ್ಟುವ ಧೈರ್‍ಯ ಬರಲಿಲ್ಲ. ಆದರೂ ಅವರಲ್ಲೊಬ್ಬ, “ಪ್ರಧಾನ ಆದ್ರೆ ಈ ಮಂಡಲಕ್ಕೆ ಮಾತ್ರ ದೇಸುಕ್ಕೇನಲ್ಲ. ನಮಗೇ ಬ್ಯಾರೆ ಕಾನೂನು ಅವನಿಗೇ ಬ್ಯಾರೆ ಕಾನೂನೇನು? ಕೀಳನ ಬರ್ರೋ, ಅದೇನ್ ಆಗ್ತದೋ ಆಗೇ ಬುಡ್ಲಿ’- ಎಂದರೂ, ಇನ್ನೊಬ್ಬ, “ಒಳ್ಳೆ ಕೊಳಕಮಂಡಳ ಆಡ್ಡಂಗೆ ಆಡ್ತಿಯಲ್ಲಲೇ ಸ್ವಲ್ಪ ತಡಿಯಲೇ” ಎಂದು ತಡೆದ.

ಪುನಃ ಚರ್‍ಚೆಯಾಯಿತು- ಆ ಹೆಣವನ್ನು ಕೀಳುವ ಅಥವಾ ಬಿಡುವ ಬಗ್ಗೆ. ಅವರೊಳಗೇ ನಾಲ್ಕೈದು ಜನ ಪಕ್ಕಕ್ಕೆ ಹೋಗಿ ಗುಟ್ಟಾಗಿ ಏನೋ ಮಾತಾಡಿಕೊಂಡು, “ಆ ಹೆಣ ಕೀಳಾದು ಬ್ಯಾಡ; ದಂಡ ಆಕುದ್ರೆ ನಾವೆಲ್ಲಿಂದ ತಂದು ಕೊಡಾನ” ಎನ್ನುತ್ತಾ ಊರ ಕಡೆ ಹೊರಟರು. ಉಳಿದವರೂ ಅವರನ್ನೇ ಅನುಸರಿಸಿದರು- ನಿರಾಸೆಯ ಮುಖ ಹೊತ್ತು.

ಆಗಲೇ ಸಂಜೆ ಆರು ಗಂಟೆಯಾಗಿತ್ತು.

ಶಿವರುದ್ರಪ್ಪ, ‘ತನ್ನ ತಂದೆಯ ಹಣ ಕೀಳದೇ ತನ್ನ ಮಾತಿಗೆ ಬೆಲೆ ಕೊಟ್ಟರು, ಅಥವಾ ಬೆದರಿಕೆಗೆ ಹೆದರಿಕೊಂಡರು’ ಎಂದುಕೊಂಡರು. ವಾಸ್ತವವಾಗಿ ಅವರು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹಾಗೆ ಹೇಳಿದ್ದರು. ಆಗಲೇ ಆಳುಮಗ ಮಂಡ ಅವರ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದ್ದು.

ಬರ ಅಧ್ಯಯನ ತಂಡ ಮಂಡಲಿಗೆ ಬಂದಾಗ ಆಗಲೇ ಸಂಜೆಯಾಗಿದ್ದರಿಂದ ಪ್ರಧಾನರ ಮನೆಯಲ್ಲೇ ಉಳಿದುಕೊಂಡರು.

ರಾತ್ರಿ ಹನ್ನೊಂದು ಗಂಟೆಯಾಗುತ್ತಲಿತ್ತು.

ಪಶ್ಚಿಮದ ತುದಿಯಲ್ಲಿದ್ದ ಅಂಗೈಯಗಲದ ಮೋಡ ಬಿಟ್ಟರೆ ಉಳಿದಂತೆ ಇಡೀ ಆಕಾಶ ಶುಭ್ರವಾಗಿ ಚುಕ್ಕೆಗಳು ಕಾಯುತ್ತಿದ್ದವು.

ಗುಟ್ಟಾಗಿ ಮಾತನಾಡಿಕೊಂಡಿದ್ದ ನಾಲ್ಕೈದು ಜನ ಪರಸ್ಪರ ಮಿಸುಕಾಡಿಕೊಂಡು ಎದ್ದರು.

ಸ್ಮಶಾನಕ್ಕೆ ಊರಿನಿಂದ ಇರುವ ದಾರಿಯಲ್ಲಿ ಕಾಯಲೆಂದು ಒಬ್ಬನನ್ನು ನೇಮಿಸಿ ಉಳಿದ ನಾಲ್ವರು ಹಾರೆ ಗುದ್ದಲಿಯೊಂದಿಗೆ ಹೊರಟರು. ಕಾಯಲು ನಿಂತಿದ್ದವನಿಗೆ, ಯಾರಾದರೂ ಸ್ಮಶಾನದತ್ತ ಹೋಗಲು ಬಂದರೆ ತನ್ನದೇ ಸನ್ನೆಯಲ್ಲಿ ತಿಳಿಸಲು ಸೂಚಿಸಲಾಗಿತ್ತು.

ನಾಲ್ವರು, ಗೋರಿಯನ್ನು ಹಾರೆ ಹಾಕಿ ಮೀಟಿದರು. ಲಘು ಬಗೆಯಿಂದ ಹೆಣವನ್ನು ಅಗೆದು ಹೊರತೆಗೆದರು. ಪಶ್ಚಿಮದಲ್ಲಿದ್ದ ಮೋಡ ನೆತ್ತಿಯ ಮೇಲೆ ಬಂದು ದೊಡ್ಡದಾಗಿ, ಚಂದ್ರನನ್ನು ಮರೆಮಾಡಿದ್ದರಿಂದ ಭೂಮಿ ಕತ್ತಲಾಯಿತು. ಹೆಣವನ್ನು ನೋಡುತ್ತಿದ್ದ ಅವರಿಗೆ ಈ ದಿಢೀರ್‌ ಕತ್ತಲೆಯಿಂದ ದಿಗ್ಭ್ರಮೆ, ಸಹಜ ಮಮ್ಮಿಯಾಗಿ ಹೆಣ ಕೊಳೆತಿರಲಿಲ್ಲವಾದ್ದರಿಂದ, ಕೂದಲು ಉಗುರು ಬೆಳೆದಂತೆ ಭಾಸವಾಗಿದ್ದುದು ಕತ್ತಲೆಯಲ್ಲಿ ಹೆದರಿಸುವ ವಸ್ತುವಾಗಿ ಮಾರ್‍ಪಾಡಾಯಿತು.

ಜೋರಾದ ಒಂದು ಸಿಡಿಲು ಬಡಿದು ಮಳೆ ಕಂಡರಿಯದಷ್ಟು ಭೀಕರವಾಗಿ ಸುರಿಯಲಾರಂಭಿಸಿತು.

ಬರ ಅಧ್ಯಯನ ತಂಡದವರಿಗೆ ಏನೆಂದು ವರದಿ ಮಾಡಬೇಕೆಂದೇ ತಿಳಿಯಲಿಲ್ಲ.

ಬೆಳಿಗ್ಗೆ ಎದ್ದ ಊರ ಜನ ಹುಡುಕಾಡಿದಾಗ ಸ್ಮಶಾನದಲ್ಲಿ ನಾಲ್ವರ ಹೆಣಗಳು ಬಿದ್ದಿದ್ದವು. ಮೊದಲಿನ ಹಳೇ ಹಣದ ಜೊತೆ.

ಧನಾತ್ಮಕ ಋಣಾತ್ಮಕವಾಗಿ ಕಥೆಗಳು ಮೂಡಿ ಬರಲಾರಂಭಿಸಿದವು….

‘ಕಾಕತಾಳೀಯ’ ಎಂಬ ಪದದ ಅರ್‍ಥ ಖಂಡಿತ ಆ ಊರಿನ ಯಾರಿಗೂ ಗೊತ್ತಿರಲೇ ಇಲ್ಲ.
*****
(ಸೆಪ್ಟೆಂಬರ್ ’ ೮೭)

ಮಂಡಲ (ಳ) :

(ನಾ) ವರ್‍ತುಲಾಕಾರವಾದುದು, ದುಂಡಾಗಿರುವುದು, ೨. ನಾಡಿನ ಒಂದು ಭಾಗ. ೩. ಗುಂಪು; ಸಮೂಹ. ೪. ನಲವತ್ತೆಂಟು ದಿನಗಳ ಅವಧಿ. ೫. ಋಗ್ವೇದದ ಒಂದು ಭಾಗ. ೬. ನೈವೇದ್ಯ ಮೊದಲಾದವುಗಳನ್ನು ಇಡುವುದಕ್ಕಾಗಿ ನೆಲದ ಮೇಲೆ ಹಾಕುವ ರೇಖಾ ವಿನ್ಯಾಸ ೭. ಮಂತ್ರಗಾರನು ಹಾಕುವ ಗೆರೆ. ೮. ಒಂದು ಜಾತಿಯ ವಿಷದ ಹಾವು; ಕೊಳ್ಳೆಹಾವು, ೯. ಗದಾಯುದ್ಧ, ಮಲ್ಲಯುದ್ಧ ಮುಂತಾದವುಗಳಲ್ಲಿ ಪ್ರಯೋಗಿಸುವ ಒಂದು ಪಟ್ಟು (ಸಂಕ್ಷಿಪ್ತ ಕನ್ನಡ ನಿಘಂಟು- ಕ. ಸಾ. ಪ., ಬೆಂ.)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೦
Next post ಕನ್ನಡ ವಿರೋಧಿ ಸಮರಕ್ಕೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…