ಬಾಲಚಂದ್ರನು ಮೂಡಿ ನಗುತಿರಲು ಗಗನದಲಿ
ಕರಿಮುಗಿಲ ತೆರೆಯವನ ಮರೆಗೊಳಿಪುದು.
ಕೋಗಿಲೆಯು ಬನದಲ್ಲಿ ಉಲಿಯುತಿರೆ ನಲಿಯುತಿರೆ
ಗ್ರೀಷ್ಮರಾಜನು ಅಂದು ಕಾಲಿಡುವನು. ೧
ಯೌವನದ ಹೊನಲು ಹೊರಹೊಮ್ಮುತಿರೆಮುಖದಲ್ಲಿ
ಜೀವನದ ಸಂಪದವು ಹೆಚ್ಚುತಿರಲು
ನಿಜಪತಿಯ ಸೇರುತ್ತ ನಿತ್ಯಸುಖದಲಿ ಬೆರೆತ
ಚೆಲುವೆಯನು ನುಂಗುವುದು ಮುಪ್ಪು ಕೊನೆಗೆ. ೨
ಹಚ್ಚನೆಯ ಹುಲ್ಲಿನಲಿ ಮಂಜು ಮಣಿಗಳು ಹೊಳೆದು
ಭೂರಮೆಯು ನಗುವಂತೆ ತೋರುತಿರಲು
ಎಳೆಬಿಸಿಲು ನಗಿಸುತ್ತ ನಗಿಸುತ್ತ ಅಂತ್ಯದಲಿ
ಹೀರುವುದು ಮೆರೆಯುವಾ ಸೌಂದರವನು. ೩
ಚಿಗುರಿ ನಲಿಯುವ ಬನದ ಸಿರಿಯೆಲ್ಲ; ನೆರೆತುಂಬಿ
ಹರಿಯುತಿಹ ಹೊನಲೆಲ್ಲ ಕುಗ್ಗುತ್ತ
ತಗ್ಗುತ್ತ ಸಾರುವುವು ಜಗವು ಅಸ್ಥಿರವೆಂದು-
ಯಾರು ಕೇಳುವರು ಈ ವೇದಾಂತವ? ೪
ಜಗವು ಅಸ್ಥಿರ! ನಾವು ಅಸ್ಥಿರವು! ಬಿಡುವೆವೇ
ಜೀವನದ ಹೋರಾಟ, ಬರಿಬಾಳಿನ
ಬಯಲಾಟಗಳನು! ಇದು ಬಿಡಿಸಲಾರದ ತೊಡಕು
ಮಾಯವೋ ಮೋಹವೋ ಯಾರು ಬಲ್ಲರು! ೫
*****

















