ಅಪರಾಧಿ ಯಾರು?

ಅಪರಾಧಿ ಯಾರು?

-೧-

ಅಣ್ಣ,
ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು.

ನಮ್ಮ ಮನೆಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳೆಲ್ಲಾ ಗೊತ್ತಿರಲಾರದು, ಈ ಮನಗೆ ನಾವು ಮೊದಲು ಬಂದ ಸುರುವಿನಲ್ಲಿ ಅವರನ್ನು ನೋಡಿ ‘ಕ್ರೂರಿಯ ಕಣ್ಣುಗಳಂತಿವೆ ರಾಯರ ಕಣ್ಣುಗಳು’ ಎಂದು ಹೇಳಿಕೊಂಡು ನಗುತ್ತಿದ್ದುದು ನಿನಗೆ ಮರೆತುಹೋಗಿರಲಾರದು. ಚಿಕ್ಕತನದ ತಂಟೆಯಲ್ಲಿ ತಮಾಷೆಯಾಗಿ ನಾವಾಡಿದ ಮಾತುಗಳು ಈಗ ನಿಜವಾಗಿ ಪರಿಣಮಿಸಿವೆ. ನಾವು ಊಹಿಸಿದುದಕ್ಕಿಂತಲೂ ಹೆಚ್ಚಿನ ನೀಚರವರು, ನಾನೇಕೆ ಅವರ ಗುಣ ವರ್ಣನೆ ಮಾಡುತ್ತಿರುವೆನೆಂದು ನೀನು ಹುಬ್ಬುಗಂಟಿಕ್ಕಬಹುದು. ಸ್ವಲ್ಪ ಸಮಾಧಾನ ತಾಳಿಕೋ; ನಾನೀ ಕಾಗದ ಬರೆಯುತ್ತಿರುವುದೇ ಅವರ ನೀಚತನಕ್ಕೆ ಬಲಿಯಾಗಿ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವ ಪಾರ್ವತಿಗಾಗಿ. ಪಾರ್ವತಿ ಯಾರೆಂದು ಗೊತ್ತೇ? ನಮಗೆ ಕನ್ನಡವನ್ನು ಕಲಿಸುತ್ತಿದ್ದರಲ್ಲ ಆ ಪಂಡಿತರ ಮಗಳು, ಪಂಡಿತರು ಪಾರ್ವತಿಯನ್ನು ಮದುವೆ ಮಾಡಿದ ವರ್ಷವೇ ಸತ್ತುಹೋದದ್ದು ನಿನಗೆ ತಿಳಿದಿದೆ. ಕಳೆದ ವರ್ಷ ಅವಳ ಪತಿಯೂ ಬೇಕಾದಷ್ಟು ಸಾಲ ಮಾಡಿಟ್ಟು ಅವರ ದಾರಿ ಹಿಡಿದೆ. ಅಂದಿನಿಂದ ಅನಾಥ ಪಾರ್ವತಿ ಅವಳ ಚಿಕ್ಕ ಮಗುವನ್ನು ಸಾಕುವುದಕ್ಕೆ ಬೇರೇನೂ ಉಪಾಯ ತೋರದೆ ನಾಗೇಶರಾಯರ ಮನೆಯಲ್ಲಿ ಅಡಿಗೆಯ ಕೆಲಸಕ್ಕೆ ನಿಂತಳು. ಇದು ಒಂದು ವರ್ಷದ ಹಿಂದಿನ ಮಾತು.

ಮಗುವಿಗೋಸ್ಕರವಾಗಿ ರಾಯರ ಅತ್ಯಾಚಾರವನ್ನು ಸಹಿಸಿಕೊಂಡಿದ್ದ ಪಾರ್ವತಿಯನ್ನು ರಾಯರು ಅಪವಾದದ ಹೊರೆಯೊಡನೆ ಬಹಿಷ್ಕಾರವನ್ನೂ ಹಾಕಿಸಿ ಮೊನ್ನೆ ಮನೆಯಿಂದ ಹೊರದೂಡಿರುವರು, ನಿನ್ನೆ ರಾತ್ರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ದೇಶದಿಂದ ಮಗುವಿನೊಂದಿಗೆ ಬಾವಿಯ ಹತ್ತಿರ ನಿಂತಿದ್ದಳಂತೆ. ಗೈಬಿ ರಾತ್ರಿ ತಪ್ಪಿಸಿಕೊಂಡು ಹೋದ ದನವನ್ನು ಹಿಡಿದುಕೊಂಡು ಬರುವುದಕ್ಕೆ ಹೋಗಿದ್ದಾಗ ಅವಳನ್ನು ಕಂಡು ಬಲಾತ್ಕಾರದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ. ಬಲಾತ್ಕಾರದಿಂದ ಗೈಬಿ ಅವಳನ್ನು ಕರೆದು ಕೊಂಡು ಬಾರದಿದ್ದರೆ ಈ ದಿನ ತಾಯಿ-ಮಗುವಿನ ಶವಗಳನ್ನು ಬಾವಿಯಿಂದ ತೆಗೆಯಬೇಕಾಗುತ್ತಿತ್ತು. ನೋಡಿದೊಡನೆಯೇ ನನಗವಳ ಗುರುತು ಸಿಕ್ಕಿತು.

ನನ್ನನ್ನು ನೋಡಿ ಪಾಪ-ಮುಖವನ್ನು ಮುಚ್ಚಿಕೊಂಡು ಅಳತೊಳಗಿದಳು, ರಾತ್ರಿ ನಿದ್ದೆಯೇ ಮಾಡಲಿಲ್ಲ. ಹಸಿದಿದ್ದ ಮಗುವಿಗೆ ಸ್ವಲ್ಪ ಹಾಲು ಕುಡಿಸಿದ್ದಾಳೆ. ಎಷ್ಟು ಹೇಳಿದರೂ ತಾನೇನೂ ಮುಟ್ಟುವುದಿಲ್ಲ. ನಿನ್ನೆಯಿಂದಲೂ ಉಪವಾಸ. ನಿನಗಿದೆಲ್ಲಾ ಏಕೆ ಬರೆಯುತ್ತಿರುವನೆಂದರೆ ಈ ವಿಷಯದಲ್ಲಿ ನಿನ್ನ ಸಹಾಯವು ಅತ್ಯಗತ್ಯವಾದುದರಿಂದ. ಎಲ್ಲಿ ಹೋಗುವದು, ಏನು ಮಾಡುವುದು ಎಂದು ಅವಳಿಗೆ ತಿಳಿಯದಾಗಿದೆ. ಜಾತಿಯವರು ಸೇರಿಸುವಂತಿಲ್ಲ. ಇಲ್ಲಿಂದ ನಾವು ಹೊರಗೆ ಕಳುಹಿಸಿದರೆ ಬಾವಿಯೇ ಅವಳಿಗೆ ಗತಿಯಾಗುವುದು. ಏನು ಮಾಡುವೆ ಎಂದು ಕೇಳಿದರೆ ‘ಇಲ್ಲೇ ಇದ್ದು ಬಿಡುತ್ತೇನೆ; ಈ ಮಗುವಿನ ಸಲುವಾಗಿ ನೀವಾದರೂ ಆಶ್ರಯ ಕೊಡಿ’ ಎಂದು ಅಳುತ್ತಾಳೆ. ಆದುದರಿಂದ ನೀನು ಇಲ್ಲಿಗೆ ಬಂದರೆ ಅವಳನ್ನು ಶಾಸ್ತ್ರೋಕ್ತವಾಗಿ ನಮ್ಮ ಜಾತಿಗೆ ಸೇರಿಸಿ ಅವಳ ಮುಂದಿನ ಜೀವನಕ್ಕೆ ದಾರಿ ಮಾಡಬಹುದು.

ಅಣ್ಣ, ಅವಳ ತಂದೆ ಪಂಡಿತರು ತಮ್ಮ ಜಾತಿಯನ್ನು ಹೊಗಳಿಕೊಳ್ಳುತ್ತಿದ್ದುದು ನಿನಗೆ ಜ್ಞಾಪಕವಿರಬಹುದು. ಅನಾಥ ಅಬಲೆಯರು ಅತ್ಯಾಚಾರಿಯ ಅತ್ಯಾಚಾರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದೇ ಅವರ ಜಾತಿಯ ನೀತಿಯಾದರೆ ನಮಗಾ ಜಾತಿಯಲ್ಲಿ ಜನ್ಮಕೊಡದಿದುದಕ್ಕಾಗಿ ದೇವರನ್ನು ಎಷ್ಟು ವಂದಿಸಿದರೂ ಸ್ವಲ್ಪವೇ. ಇದನ್ನು ನೋಡುವುದಕ್ಕೆ ಪಂಡಿತರು ಇದ್ದಿದ್ದರೆ ತಮ್ಮ ಜಾತಿಯ ವಿಷಯದಲ್ಲಿದ್ದ ಭಾವನೆಯನ್ನವರು ಬದಲು ಮಾಡಬೇಕಾಗಿ ಬರುತ್ತಿತ್ತು. ಇರಲಿ; ಈ ಕಾಗದವನ್ನು ನೋಡಿದೊಡನೆಯೇ ನೀನು ಬರುವಿಯಾಗಿ ಆಶಿಸುವ,

ನಿನ್ನ ಪ್ರೀತಿಯ ತಂಗಿ,
ಉನ್ನೀಸಾ

-೨-

ಸೀತಮ್ಮನವರೇ,
ಬಹಳ ದಿನಗಳಿಂದಲೂ ನಿಮಗೆ ಕಾಗದ ಬರೆಯಬೇಕೆಂದು ಆಲೋಚಿಸಿಕೊಂಡಿದ್ದೇನೆ. ಬರೆಯುವುದಕ್ಕೆ ಮಾತ್ರ ಸ್ವಲ್ಪವೂ ಸಮಯವಾಗುವುದಿಲ್ಲ ನೋಡಿ; ಈಗಲಾದರೂ ಸಮಯ ಸಿಕ್ಕಿತೇ ಎಂದು ನೀವು ಕೇಳಬಹುದು. ನಿಜವನ್ನು ಹೇಳುವುದಾದರೆ ಈಗಲೂ ಇಲ್ಲ. ಕಮಲೆಗೆ ಜ್ವರ; ಅವಳಿಗೆ ಔಷಧಿ ಕುಡಿಸಿಲ್ಲ. ರಘುವನ್ನೂ ಇನ್ನೂ ಸ್ನಾನಮಾಡಿಸಿಲ್ಲ. ಅಡಿಗೆಯೂ ಆಗಿಲ್ಲ. ಆದರೂ ನಿಮಗೊಂದು ವಿಶೇಷದ ಸುದ್ದಿ ತಿಳಿಸಿಬಿಡಬೇಕೆಂದು ಕೆಲಸಗಳನ್ನೆಲ್ಲಾ ಬಿಟ್ಟು ಬರೆಯುವುದಕ್ಕೆ ಕೂತಿದ್ದೇನೆ

ಆ ಪಾರ್ವತಿ ನೋಡಿ – ಬೊಂಬೆಯ ಹಾಗೆ ಅಲಂಕಾರಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಳಲ್ಲ – ಆ ಪಂಡಿತರ ಮಗಳು ಅವಳು ಜಾತಿಕೆಟ್ಟು ತುರುಕರ ಜಾತಿಗೆ ಸೇರಿದ್ದಾಳೆ ನೋಡಿ! ಅವಳನ್ನು ಅವಳಪ್ಪ ಮುದ್ದು ಮುದ್ದು ಎಂತ ಶಾಲೆಗೆ ಕಳುಹಿಸುವಾಗಲೇ ನನಗೆ ಗೊತ್ತಿತ್ತು – ಅವಳು ಹೀಗಾಗುವಳೆಂದು! ಇದು ಬೇರ ತಮಾಷೆ ನೋಡಿ ಪಕ್ಕದ ಮನೆ ಲಕ್ಷ್ಮಿ ಇದ್ದಾಳಲ್ಲ – ಈ ಜಾತಿಗೇಡಿಯ ಜೊತೆಯಲ್ಲೇ ಶಾಲೆಗೆ ಹೋಗುತ್ತಿದ್ದವಳು- ಅವಳನ್ನುತ್ತಾಳೆ ಕೇಳಿ : – ‘ಸೇರದೆ ಅವಳೇನು ಮಾಡುವುದು? ಸೇರದಂತೆ ಪ್ರಯತ್ನ ಮಾಡುವುದರ ಬದಲು ಬಹಿಷ್ಕರಿಸಿ ಅವಳ ಮುಖಕ್ಕೆ ಬಾಗಿಲನ್ನು ಹಾಕಿ ಬಾವಿಯ ದಾರಿ ತೋರಿಸಿದ ನಿಮಗೆ ಅವಳೇನೆಂದರೇನು?’ ಎಂತ. ಬಹಿಷ್ಕಾರ ಹಾಕಿದ್ದು ತಪ್ಪಂತೆ! ಜಾತಿ ಕೆಟ್ಟವಳನ್ನು ಮನೆಯಲ್ಲಿರಿಸಿ ಕೊಳ್ಳಬೇಕಾಗಿತ್ತಂತೆ! ನೋಡಿದಿರಾ ಹೇಗಿದೆ ಎಂತ!!

ಹೊತ್ತಾಗಿ ಹೋಯಿತು; ಅಡಿಗೆ ಮಾಡಬೇಕು ಇನ್ನೊಮ್ಮೆ ಬಿಡುವಿದ್ದಾಗ ಬರೆಯುತ್ತೇನೆ.
ನಿಮ್ಮ
…….

-೩-
ನಲಿನಿ,
ಬಹಳ ದಿನಗಳಾದವು ನಿಮ್ಮ ಕಾಗದಗಳೊಂದೂ ಬಾರದೆ, ಏಕೆ ಬರೆಯುವುದಿಲ್ಲ? ಕಣ್ಮರೆಯಾದೊಡನೆಯೇ ಮರೆತುಹೋಯಿತೇನು? ಸಹಜ; ಬೇಕಾದಷ್ಟು ಹೊಸ ಗೆಳತಿಯರು ಸಿಕ್ಕಿರುವಾಗ ಹಳೆಯ ಹಳ್ಳಿಯ ಸ್ನೇಹಿತೆಯೊಬ್ಬಳನ್ನು ಜ್ಞಾಪಿಸಿಕೊಳ್ಳುವುದು ಕಷ್ಟ. ಆದರೆ ನೀನೆಷ್ಟು ನನ್ನನ್ನು ಮರೆಯುವುದಕ್ಕೆ ಯತ್ನಿಸಿದರೂ ಯತ್ನದಲ್ಲಿ ಸಫಲತೆಯನ್ನು ಪಡೆದರೂ ನಾನು ಮಾತ್ರ ಆಗಾಗ ಕಾಗದಗಳನ್ನು ಬರೆದು ‘ಈ ಪ್ರಪಂಚದಲ್ಲಿ ನಾನೊಬ್ಬಳಿದ್ದೆನೆ’ ಎಂಬುದನ್ನು ನಿನಗೆ ಜ್ಞಾಪಿಸದೆ ಬಿಡುವುದಿಲ್ಲ. ನನ್ನ ಹತ್ತು ಕಾಗದಗಳಿಗೆ ನೀನು ಒಂದೇ ಒಂದು ಕಾಗದವನ್ನಾದರೂ ಬರೆಯದಿದ್ದರೆ ನಾನೇ ಅಲ್ಲಿಗೆ ಬಂದು ನಿನ್ನ ಅತ್ಯಮೂಲ್ಯವಾದ ಸಮಯವನ್ನು ನನ್ನೊಡನೆ ಮಾತಿಗಾಗಿ ಉಪಯೋಗಿಸಿಕೊಳ್ಳುತ್ತೇನೆ. ಈ ಬೆದರಿಕೆಗೆ ನೀನು ಹೆದರದಿರಲಾರೆ. ಏಕೆಂದರೆ ಚಿಕ್ಕವರಾಗಿರುವಾಗ ನಾನು ಕೀಟಲೆ ಮಾಡತೊಡಗಿದರೆ ನೀನೂ ಪಾರ್ವತಿಯೂ ಹೆದರಿ ಕೇಳಿದುದನ್ನು ಕೊಡುತ್ತಿದ್ದಿರಿ.

ನೆನಪಿದೆಯೇ ನಲಿನಿ! – ಆಗಿನ ಆಟ, ತಮಾಷ, ಜಗಳ, ನಗು ಎಲ್ಲಾ! ಆಗ ನಾವು ಶಾಲೆಯ ಹಿಂದಿನ ದಿನ್ನೆಯ ಮೇಲೆ ಕುಳಿತು ನಮ್ಮ ಮುಂದಿನ ಜೀವನವನ್ನು ಚಿತ್ರಿಸಿಕೊಳ್ಳುತ್ತಿದ್ದುದು! ನಾವು ಕಲ್ಪಿಸಿ, ನೋಡಿ ನಲಿಯುತ್ತಿದ್ದ ಹಗಲು ಕನಸುಗಳ ಸ್ಮೃತಿ! ಆಗ ನಾವು ಜೀವನವು ಸುಖ-ಸಂತೋಷಮಯ ಎಂದು ತಿಳಿದಿದ್ದೆವಲ್ಲ ನಲಿನಾ! ಈಗ ನಮ್ಮಲ್ಲೆಷ್ಟು ಜನರು ಆ ಭಾವನೆಯನ್ನು ಬದಲಾಯಿಸಬೇಕಾಗಿ ಬಂದಿದೆ ನೋಡು. ನಮ್ಮ ಗೆಳತಿ ಸೀತೆಯನ್ನು ನೋಡು- ಅವಳು ಬಯಸುತ್ತಿದ್ದ ಬಯಕೆಗಳೆಲ್ಲಿ? ಈಗವಳನುಭವಿಸುತ್ತಿರುವ ಯಾತನೆಗಳಲ್ಲಿ! ನಾವೆಂದಾದರೂ ಅವಳ ಗತಿ ಹೀಗಾಗಬಹುದೆಂದು ಎಣಿಸಿದ್ದೆವೇ? ಕ್ಲಾಸಿನಲ್ಲಿ ಹುಚ್ಚಿ ಎಂದು ನಾವು ಹಾಸ್ಯ ಮಾಡುತ್ತಿದ್ದ ಉಮಾ ಈಗ ನೋಡು ದೊಡ್ಡ ಸಮಾಜ ಸುಧಾರಕಳಾಗಿ ಬಿಟ್ಟಿದ್ದಾಳೆ. ಅವಳ ಮಾತುಗಳನ್ನು ಕೇಳಲು ಜನರು ಹಾತೊರೆಯುವುದನ್ನು ನೋಡಿದರೆ ‘ಅಂದಿನ ಉಮಾ ಇವಳೇನು?’ ಎನ್ನಿಸುತ್ತದೆ. ‘ಮದುವೆಯಾಗುವುದೇ ಇಲ್ಲ’ ಎನ್ನುತ್ತಿದ್ದ ಶಾಂತೆಗೆ ಈಗ ಇಬ್ಬರು ಮಕ್ಕಳಿದ್ದಾರೆ. ಕ್ಲಾಸಿನಲ್ಲಿ ಮೊದಲನೆಯವಳಾಗಿ ಬುದ್ಧಿವಂತೆ ಎನ್ನಿಸಿಕೊಳ್ಳುತ್ತಿದ್ದ ಕಮಲೆಗೆ ಅತ್ತೆಯ ಮನೆಯಲ್ಲಿ ದಡ್ಡೆ, ಮೂದೇವಿ ಎಂದು ಬಿರುದುಗಳು ಬಂದಿವೆ.

ಇವುಗಳೆಲ್ಲವುಗಳಿಗಿಂತಲೂ ವಿಷಾದಕರವಾದ ಇನ್ನೊಂದು ಸುದ್ದಿ ಇದೆ ನಲಿನಾ- ಆದೂ ನಮ್ಮ ಪ್ರೀತಿಯ ಪಾರ್ವತಿಯ ವಿಷಯ – ಹೇಗದನ್ನು ಬರೆಯಲಿ ಹೇಳು?

ಸೌಂದರ್ಯ, ಗುಣ ನಡತೆಗಳಲ್ಲಿ ನಮ್ಮೆಲ್ಲರ ಮೆಚ್ಚಿಕೆಯನ್ನು ಪಡೆದಿದ್ದ ಪಾರ್ವತಿ ವಿಧವೆಯಾದರೂ, ನಾಗೇಶರಾಯರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದುದೂ ನಿನಗೆ ಗೊತ್ತಿದೆ. ಅವಳ ಭವಿಷ್ಯವನ್ನು ನಾವು ಚಿತ್ರಿಸಿದಂತೆ ಇನ್ನಾರದನ್ನು ಚಿತ್ರಿಸಿದ್ದೆವು. ನಲಿನಾ! ‘ನಮ್ಮ ಸುಂದರಿ, ರಾಜನ ರಾಣಿ ಕಿರೀಟ ಧಾರಣಿ’ಯಾಗುವಳೆಂದು ಹೇಳಿಕೊಂಡು ನಾವು ನಲಿಯುತ್ತಿದ್ದೆವಲ್ಲ! ಅವಳೀಗ ಜಾತಿಯಿಂದ ಬಹಿಷ್ಕರಿಸಲ್ಪಟ್ಟಿರುವಳು ನಲಿನಾ – ರಾಯರ ಪಾಪದ ಪ್ರತಿಫಲವಾಗಿ. ಇದೇ ನೋಡು-ನಮ್ಮ ಸಮಾಜದ ನ್ಯಾಯ! ನಮ್ಮ ಜಾತಿ, ನೀತಿ, ಸಮಾಜ ಉತ್ತಮವೆಂದು ಹೇಳಿಕೊಂಡು ನಾವೆಷ್ಟು ಸಲ ಉನ್ನೀಸಳೊಡನೆ ಜಗಳವಾಡಿಲ್ಲ! ಮುಸಲ್ಮಾನ ಜಾತಿಯವಳೆಂದು ಎಷ್ಟು ಸಾರಿ ಉನ್ನೀಸಳನ್ನು ತಿರಸ್ಕರಿಸಿಲ್ಲ! ಊರು ತುಂಬ ನಮ್ಮವರ ಮನೆಗಳಿದ್ದೂ ಪಾರ್ವತಿಗೆ ಬಾಗಿಲನ್ನು ತೆರೆಯುವವರಿರಲಿಲ್ಲ. ನಮ್ಮವರ ಹೃದಯದಲ್ಲಿ ಜಾತಿಗಲ್ಲದೆ ದಯೆಗೆ ಎಡೆಯಿಲ್ಲ. ಅದೂ ಜಾತಿ ನಿಯಮಗಳು ಹೆಂಗಸರಿಗೆ ಮಾತ್ರ. ಗಂಡಸರು ಆ ನಿಯಮಕ್ಕೆ ಒಳಪಡಬೇಕಾಗಿಲ್ಲ. ಇದೇ ನೋಡು, ನಮ್ಮ ಜಾತಿಯ ದೊಡ್ಡತನದ ಕುರುಹು.

ಉತ್ತಮ, ಅತ್ಯುತ್ತಮ ಜಾತಿಯ ನಮ್ಮವರು ಪಾರ್ವತಿಗೆ ಅವಳ ಮುದ್ದು ಮಗುವಿನೊಡನೆ ಬಾವಿಯ ದಾರಿಯನ್ನು ತೋರಿಸಿಕೊಟ್ಟಾಗ ಕೈಹಿಡಿದು ಆದರದಿಂದ ಆಶಯವಿತ್ತವಳು ಯಾರು ಗೊತ್ತೇ? ಉನ್ನೀಸ! ಮ್ಲೇಂಛಳೆಂದು ನಾವು ನಕ್ಕು ತಿರಸ್ಕರಿಸುತ್ತಿದ್ದ ಉನ್ನೀಸ! ಈಗ ಹೇಳು ನಲಿನಾ, ಉತ್ತಮರು ಯಾರೆಂದು?

ಊರವರೆಲ್ಲರೂ ಪಾರ್ವತಿಯನ್ನು ಮುಸಲ್ಮಾನ ಜಾತಿಗೆ ಸೇರಿದವಳೆಂದು ತಿರಸ್ಕರಿಸುತ್ತಿರುವರು. ಮೊದಲೇ ನಮಗೆ ಅವಳು ಹಾಗಾಗುವಳೆಂದು ಗೊತ್ತಿತ್ತು ಎನ್ನುವರು. ಇಷ್ಟೆಲ್ಲಾ ತಿಳಿದವರು ಅವಳು ಹಾಗಾಗದಿರುವಂತೆ ಮಾಡಲು ಯಾವ ಯತ್ನವನ್ನೂ ಮಾಡಲಿಲ್ಲವೇಕೆ? ಎಂದು ನಾನು ಕೇಳಿದೆ. ಅದಕ್ಕಾಗಿ ಪಾರ್ವತಿಯ ಪಕ್ಷವೆಂದು ನೀರಿಗೆ ಹೋದಲ್ಲಿ ಎಂದಿನಂತೆ ನೆರೆಕರೆಯವರು ನನ್ನೊಡನೆ ಮಾತಾಡುವುದಿಲ್ಲ.

ಆಪರಾಧಿ ಯಾರು ನಲಿನಾ? ಪಾರ್ವತಿ ರಜಿಯಾ ಆಗುವುದಕ್ಕೆ ಹೊಣೆ ಯಾರು? ಅವಳೇ? ರಾಯರೆ? ಅಥವಾ ನಮ್ಮ ಕ್ರೂರ ಕಠೋರ ಸಮಾಜವೇ?

ಯಾರದರೇನು? ಆದುದಾಗಿಬಿಟ್ಟಿತು. ಪಾರ್ವತಿಯಾಗಿ ಅವಳು ಸುಖದಲ್ಲಿರಲಿಲ್ಲ. ರಜಿಯಾ ಆಗಿಯಾದರೂ ಅವಳ ಜೀವನವು ಸುಖಮಯವಾಗಲೆಂದು ದೇವರಲ್ಲಿ ನನ್ನ ಬೇಡಿಕೆ.

ಸಾಕು; ಇನ್ನೇನು ಬರೆಯಲಿ …….

ನಿನ್ನ,
ಲಕ್ಷ್ಮಿ

-೪-
ತಾರೀಖು ೮ರ ಸ್ಥಳಿಕ ಪತ್ರಿಕೆಯೊಂದರಲ್ಲಿ ಹೀಗಿತ್ತು :-

ಮೊನ್ನೆ ದಿನ ಹಿಂದೂ-ರಮಣಿಯೊಬ್ಬಳು ಮುಸಲ್ಮಾನ ಧರ್ಮ ಸ್ವೀಕರಿಸಿದುದು ಊರಿನ ಹಿಂದೂಗಳಿಗೆಲ್ಲಾ ಬಹಳ ವಿಷಾದವನ್ನುಂಟು ಮಾಡಿದೆ. ಇನ್ನು ಮುಂದೆ ಈ ರೀತಿ ಸಂಭವಿಸದಂತೆ ನೋಡಿಕೊಳ್ಳುವುದಕ್ಕಾಗಿ ಊರಿನ ಪ್ರಮುಖ ಹಿಂದೂಗಳ ಸಭೆಯೊಂದು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸರ್ವಾನುಮತದಿಂದ ಹಿಂದೂ ಧರ್ಮರಕ್ಷಣೆ ಮಾಡಬೇಕೆಂದು ತೀರ್ಮಾನವಾಯಿತು.
*****
ನವೆಂಬರ್ ೧೯೩೪

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚದುರಂಗ
Next post ಪಶ್ಚಾತ್ತಾಪ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys