ಆತ್ಮರತಿ ರೋಗ

ಆತ್ಮರತಿ ರೋಗ

ಆತ್ಮರತಿ ಅಪಾಯಕಾರಿಯಾದದ್ದು. ನಮ್ಮಲ್ಲಿ ಆತ್ಮರತಿ ಮತ್ತು ಆತ್ಮ ವಿಶ್ವಾಸಗಳನ್ನು ಒಂದೇ ಎಂಬಂತೆ ನಂಬಿಸುವ ಆತ್ಮರತಿ ರೋಗಿಗಳು ಇದ್ದಾರೆ. ಆತ್ಮವಿಶ್ವಾಸವು ಮನುಷ್ಯನ ಮಾನಸಿಕ ವಿಕಾಸಕ್ಕೆ ಬೇಕಾದ ಸ್ಥೈರ್‍ಯವನ್ನು ತಂದುಕೊಟ್ಟರೆ, ಆತ್ಮರತಿ ಸ್ವಪ್ರಶಂಸೆ ಗೀಳಿನಲ್ಲಿ ಮಾನಸಿಕ ವಿಕಾಸವನ್ನು ನಾಶಮಾಡುತ್ತದೆ.

ಆತ್ಮರತಿಯು ನಾನಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಇದು ವೈಯಕ್ತಿಕವಾಗಿರಬಹುದು; ಧಾರ್ಮಿಕವಾಗಿರಬಹುದು; ಸಾಹಿತ್ಯಕವಾಗಿರಬಹುದು. ಯಾವುದೇ ನೆಲೆಯಲ್ಲಿ ತಾನು ತನ್ನದನ್ನು ಬಿಟ್ಟರೆ ಬೇರೆ ಸರಿಸಾಟಿಯಿಲ್ಲವೆಂಬ ಅಹಂಕಾರದಲ್ಲಿ ಹುಟ್ಟುವ ಆತ್ಮರತಿಯು ಅಂತಿಮವಾಗಿ ಆತ್ಮಶಕ್ತಿಯ ನಾಶಕ್ಕೆ ಕಾರಣವಾಗುತ್ತದೆ. ಆತ್ಮವಂಚನೆ ಆಗುತ್ತದೆ.

ಫಿಲಿಪ್ ಸ್ಟ್ರಾಟ್ ಎಂಬ ತತ್ವಜ್ಞಾನಿಯೊಬ್ಬ ನಮ್ಮ ದೇಶದ ಹಿಂದೂ ಧರ್ಮ ಪ್ರತಿಪಾದಕರನ್ನು ಕುರಿತು ಒಂದು ಮಾತನ್ನು ಹೇಳುತ್ತಾನೆ. ಆತನ ಅಭಿಪ್ರಾಯದ ಪ್ರಕಾರ ಹಿಂದೂ ಧರ್ಮದ ವಕ್ತಾರರಿಗೆ ಎಷ್ಟು ಆತ್ಮರತಿಯಿದೆ ಎಂದರೆ ಅವರು ಇನ್ನೊಂದು ಧರ್ಮದ ಶ್ರೇಷ್ಠತೆಯನ್ನು ಗುರುತಿಸುವಷ್ಟು ಸಹನೆಯನ್ನು ಪಡೆದಿಲ್ಲ. ತಮ್ಮ ಧರ್ಮಕ್ಕೆ ಸಮಾನವಾದದ್ದು ವಿಶ್ವದಲ್ಲಿ ಎಲ್ಲೂ ಇಲ್ಲವೆಂಬ ಭಾವನೆ ಇವರದು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರು ಒಂದು ಕಡೆ ಹಿಂದೂ ಧರ್ಮವನ್ನು-ಸಂಸ್ಕೃತಿಯನ್ನು ಕುರಿತು ಬರೆಯುತ್ತಾ, ಈಜಿಪ್ಶಿಯನ್ ಮತ್ತು ಮೆಸಪಟೋಮಿಯಾನ್ ಸಂಸ್ಕೃತಿಗಳು ನಾಶವಾದರೂ ನಮ್ಮ ಹಿಂದೂ ಸಂಸ್ಕೃತಿ ನಾಶವಾಗಿಲ್ಲವೆಂದು ಆತ್ಮರತಿಯಿಂದ ಹಿಗ್ಗಿ ಬರೆದದ್ದು ನೆನಪಿಗೆ ಬರುತ್ತದೆ. ವಾಸ್ತವವಾಗಿ ಸಂಸ್ಕೃತಿ ಬದಲಾವಣೆ ಅಥವಾ ಪರಿವರ್ತನೆ ಎಂಬುದಿದೆಯೇ ಹೊರತು ನಾಶವೆಂಬುದು ಇಲ್ಲ. ಸಂಸ್ಕೃತಿಯ ಹಿಂದಿನ ರೂಪದಲ್ಲಿ ಅಲ್ಲದಿದ್ದರೂ ಬದಲಾದ ಹೊಸ ರೂಪಗಳಲ್ಲಾದರೂ ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಹಿಂದೂ ಸಂಸ್ಕೃತಿ ಮಾತ್ರ ನಾಶವಾಗುವುದಿಲ್ಲ. ಉಳಿದ ಸಂಸ್ಕೃತಿಗಳು ನಾಶವಾಗಬಲ್ಲವು ಎಂಬ ಭಾವನೆಯೇ ವೈಜ್ಞಾನಿಕ ನೆಲೆಯಿಂದ ರೂಪುಗೊಂಡಿದೆ. ಹೀಗೆ ಆಗುವುದಕ್ಕೆ ಆತ್ಮರತಿಯೇ ಕಾರಣ.

ಫಿಲಿಪ್‌ಸ್ಟ್ರಾಟ್ ಹೇಳಿದ ಮಾತನ್ನು ಎಲ್ಲ ಹಿಂದೂಗಳಿಗೂ ಅನ್ವಯಿಸಲಾಗದು. ಎಲ್ಲ ಹಿಂದೂಗಳೂ ಆತ್ಮರತಿಗಳಲ್ಲ. ಆತ್ಮರತಿ ಎಂಬುದು ಹಿಂದೂ ಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಮುಸ್ಲಿಮರು ಕ್ರಿಶ್ಚಿಯನ್ನರು ಸಿಖ್ಖರೂ ಅಥವಾ ಯಾವುದೇ ಧರ್ಮದವರು ಆತ್ಮರತಿಗಳಾಗಿರಬಹುದು. ಆದರೆ ಒಂದು ಮಾತು ನಿಜ. ಇತ್ತೀಚಿನ ದಿನಗಳಲ್ಲಿ ಹಿಂದೂ ಮೂಲಭೂತವಾದಿತನ ಹೆಚ್ಚಾಗಿದೆ ಇದರೊಂದಿಗೆ ಆತ್ಮರತಿಯ ಗಬ್ಬುನಾತ ಹಬ್ಬುತ್ತಿದೆ. ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿ ತನ್ನ ಧರ್ಮವನ್ನು ಬಿಟ್ಟರೆ ಬೇರೆ ಯಾವುದೂ ಶ್ರೇಷ್ಠವಲ್ಲವೆಂಬ ಭಾವೋದ್ರೇಕವನ್ನು ಬೆಳೆಯಲಾಗುತ್ತಿದೆ. ಜನರನ್ನು ಧಾರ್ಮಿಕಗೊಳಿಸುವುದಕ್ಕೆ ಬದಲಾಗಿ ಧರ್ಮವನ್ನು ಅಧಾರ್ಮಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ದೇಶದ ಕೆಲವು ಮಹಾನ್ ವ್ಯಕ್ತಿಗಳ ಗುತ್ತಿಗೆ ಹಿಡಿದು ಅವರ ವಿಚಾರಗಳನ್ನು ವಿಕೃತಗೊಳಿಸಿ ಪ್ರಚಾರ ಮಾಡಲಾಗುತ್ತಿದೆ. ಉದಾಹರಣೆಗೆ ವಿವೇಕಾನಂದರ ವಿಚಾರವನ್ನೇ ತೆಗೆದುಕೊಳ್ಳೋಣ. ವಿವೇಕಾನಂದರ ಹಿಂದೂ ಧರ್ಮದ ಪ್ರಮುಖ ಪ್ರತಿಪಾದಕರೆಂಬಂತೆ ಪ್ರಚುರ ಪಡಿಸಲು ಮಾತ್ರ ಅವರ ಬಳಕೆಯಾಗುತ್ತಿದೆ ಹೊರತು ಅನೇಕ ನಿಜ ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಅವರ ಕೆಲವು ಅಭಿಪ್ರಾಯಗಳನ್ನು ಧಾರ್ಮಿಕ ಆತ್ಮರತಿ ರೋಗಿಗಳು ಮುಚ್ಚಿಡುತ್ತಿದ್ದಾರೆ. ಒಂದು ಘಟ್ಟದಲ್ಲಿ ನಮ್ಮ ದೇಶದ ಅಸ್ಪೃಶ್ಯತೆ ಮತ್ತು ಅಸಮಾನತೆಗಳನ್ನು ಟೀಕಿಸುತ್ತ, ವಿವೇಕಾನಂದರು “ಹಿಂದೂ ಧರ್ಮದ ರೀತಿಯಲ್ಲಿ ಬಡವರ ಮತ್ತು ಕೆಳಸ್ತರದವರ ಕತ್ತಿನ ಮೇಲೆ ಸವಾರಿ ಮಾಡಿದ ಧರ್ಮ ಬೇರೊಂದಿಲ್ಲ” ಎಂದು ಹೇಳಿದರು. “ಇಂಡಿಯಾದಲ್ಲಿ ನಾವು ಬಡವರು ಎಂಬ ಕೂಗು ತೀವ್ರವಾಗಿದೆ. ಆದರೆ ಬಡವರ ಒಳಿತಿಗಾಗಿ ಎಷ್ಟು ಸಂಘ ಸಂಸ್ಥೆಗಳಿವೆ? ಇಂಡಿಯಾ ಕೋಟ್ಯಾಂತರ ಜನರ ಸಂಕಷ್ಟಗಳಿಗೆ ಅವರ ನೋವಿಗಾಗಿ ನಿಜಕ್ಕೂ ಎಷ್ಟು ಜನ ದುಃಖಿಸುತ್ತಾರೆ? ನಾವು ಮನುಷ್ಯರೆ? ಅವರ ಜೀವನಕ್ಕೆ ಅಭಿವೃದ್ಧಿಗೆ ನಾವೇನು ಮಾಡುತ್ತಿದ್ದೇವೆ? ನಾವು ಅವರನ್ನು ಮುಟ್ಟುವುದಿಲ್ಲ. ಅವರ ಜೊತೆಯನ್ನು ಬಯಸುವುದಿಲ್ಲ. ನೀವು ಮನುಷ್ಯರೆ?” ಹೀಗೆ ವಿವೇಕಾನಂದರು ಪ್ರಶ್ನಿಸಿದ್ದರು. ಹಿಂದೂ ಧರ್ಮದ ಬಗ್ಗೆ ನಂಬಿಕೆಯಿದ್ದರೂ ಆತ್ಮರತಿ ಇಲ್ಲದೆ ಇದ್ದುದರಿಂದ ವಿವೇಕಾನಂದರಿಗೆ ಸ್ವವಿಮರ್ಶೆ ಸಾಧ್ಯವಾಯಿತು. ತಾವು ನಂಬಿದ ಧರ್ಮದ ಹುಳುಕುಗಳನ್ನು ಹೊರಗೆಡಹುವ ಧೈರ್ಯ ಮತ್ತು ಪ್ರಾಮಾಣಿಕತೆ ಬಂದಿತು. ಇದೇ ವಿವೇಕಾನಂದರು ಜಾತಿ ಪದ್ಧತಿಯನ್ನು ಟೀಕಿಸಿದರು. ವೈದಿಕ ಸಂಸ್ಕೃತಿಯ ಹುನ್ನಾರಗಳನ್ನು ಬಯಲು ಮಾಡಿದರು. ಆದರೆ ಇದ್ಯಾವುದನ್ನು ಜನರಿಗೆ ತಿಳಿಸದೆ ಮುಚ್ಚಿಟ್ಟು, ಅವರ ಕೆಲವು ಘೋಷಣೆಗಳನ್ನು ಮಾತ್ರ ಪ್ರಚುರಪಡಿಸುವವರು ಏಕಕಾಲಕ್ಕೆ ವಿವೇಕಾನಂದರು ಮತ್ತು ಜನರಿಗೆ ವಂಚನೆ ಮಾಡುತ್ತಿದ್ದಾರೆ.

ಧಾರ್ಮಿಕ ಆತ್ಮರತಿಯು ಅಸಹನೆಯನ್ನು ಬೆಳೆಸುತ್ತ ಮೂಲಭೂತವಾದಿ ವಿಚಾರಗಳನ್ನು ವಿಸ್ತರಿಸುತ್ತದೆ. ಇದರಿಂದ ಅದು ಪ್ರಗತಿಪರ ಪರಂಪರೆಯನ್ನು ಮೂಲೆಗುಂಪು ಮಾಡುತ್ತದೆ. ಅಂತಿಮವಾಗಿ ಅಮಾನವೀಯವಾಗುತ್ತದೆ.

ಆತ್ಮರತಿಯು ಅಹಂಕಾರ, ಅಸಹನೆ ಮತ್ತು ಆತ್ಮ ಪ್ರಶಂಸೆಗಳನ್ನು ಅಂತರ್ಗತ ಮಾಡಿಕೊಂಡು ಬೆಳೆಯುವ ನೆಲೆಯಾದ್ದರಿಂದ ಅನ್ಯರ ಅವಹೇಳನಕ್ಕೆ ಕಾರಣವಾಗುತ್ತದೆ. ಅವಹೇಳನವೇ ಆನಂದವಾಗುತ್ತದೆ. ಆತ್ಮವಂಚನೆಯೇ ಹಾದಿಯಾಗುತ್ತದೆ. ಸ್ವಪ್ರಶಂಸೆ ಸಾಧನೆಯಾಗುತ್ತದೆ. ಧರ್ಮ, ಭಾಷೆ, ಸಾಹಿತ್ಯ-ಹೀಗೆ ಎಲ್ಲ ಕ್ಷೇತ್ರಗಳಿಗೂ ಇದು ಅನ್ವಯಿಸುತ್ತದೆ.

ಈಗ ಭಾಷೆಯ ವಿಷಯಕ್ಕೆ ಬರೋಣ. ನಮ್ಮ ಭಾಷೆಯ ಬಗ್ಗೆ ನಮಗೆ ಪ್ರೀತಿಯಿರಬೇಕು; ಅಭಿಮಾನವಿರಬೇಕು. ಆದರೆ ಅಹಂಕಾರ ಇರಬಾರದು. ನಮ್ಮ ಭಾಷೆಯನ್ನು ಬಿಟ್ಟರೆ ಬೇರೆ ಭಾಷೆಗೆ ಬೆಲೆಯೇ ಇಲ್ಲ ಎಂಬ ವಿಚಾರ ವಿಜೃಂಭಿಸಬಾರದು. ಭಾಷೆಯನ್ನು ಭಾವೋದ್ರೇಕದ ಬಂದೂಕವಾಗಿಸುವ ಕೆಲವು ಶಕ್ತಿಗಳು ಭಾಷೆಗೂ ಒಳ್ಳೆಯದನ್ನು ಮಾಡುವುದಿಲ್ಲ; ಬದುಕಿಗೂ ಒಳ್ಳೆಯದು ಮಾಡುವುದಿಲ್ಲ.

ಭಾಷೆಯ ವಿಷಯದಲ್ಲಿ ಆತ್ಮರತಿ ಬೆಳೆದರೆ ಆಗುವ ಅನಾಹುತವಾದರೆ ಅನ್ಯ ಭಾಷೆ ಹಾಗೂ ಭಾಷಿಕರ ನೆಲೆಯಿಂದಲೇ ಎಲ್ಲವನ್ನೂ ಯೋಚಿಸುವ ಆತ್ಮವಂಚನೆ. ನೀವು ನಿಮ್ಮ ಭಾಷೆಯನ್ನು ಆತ್ಮವಿಶ್ವಾಸದ ಮಾಧ್ಯಮವಾಗಿ ಬೆಳೆಸಬೇಕೇ ಹೊರತು ಅನ್ಯರ ಮೇಲಿನ ಹಲ್ಲೆಗೆ ಅಸ್ತ್ರವಾಗಿ ಬಳಸತೊಡಗಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಭಾಷಾ ಚಳುವಳಿಗಳು ಆತ್ಮರತಿಯ ಅಸ್ತ್ರಗಳಾಗಿ ಜನರ ವಿಕಾಸಕ್ಕೆ ವಂಚನೆ ಮಾಡುತ್ತಿವೆ. ಭಾವೋದ್ರೇಕಸಿ ಹಾದಿ ತಪ್ಪಿಸುತ್ತಿವೆ. ನಮ್ಮ ಭಾಷೆಯಷ್ಟೇ ಸಮೃದ್ಧವಾದದ್ದು ಬೇರೆಯದು ಇರಬಹುದೆಂಬ ನೆಲೆಯನ್ನು ಉಳಿಸಿಕೊಂಡು ನಮ್ಮ ಭಾಷೆ ಮತ್ತು ಭಾಷಿಕರನ್ನು ಬೆಳೆಸುವ, ಉಳಿಸುವ ಪ್ರಯತ್ನವನ್ನು ಮಾಡಬೇಕೆಂಬ ವಿವೇಕವನ್ನು ನಾವು ನಾಶಮಾಡಬಾರದು. ಭಾಷಿಕ ಆತ್ಮರತಿಯು ಸಮಚಿತ್ತದ ಸಂಶೋಧನೆ. ಸಾಮಾಜಿಕ ವಿವೇಚನೆ ಮತ್ತು ಸಮಗ್ರ ಚಿಂತನೆಗಳನ್ನು ಹಾಳುಮಾಡುತ್ತದೆ. ಯಾವುದೇ ಭಾಷೆಗೆ ಸಂಬಂಧಿಸಿದವರು ಅವರವರ ಭಾಷೆಯ ಬಗ್ಗೆ ಅಭಿಮಾನವನ್ನು ಇಟ್ಟುಕೊಂಡೇ ಸುತ್ತಮುತ್ತಲ ಪರಿಸರವನ್ನು ಪ್ರೀತಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ತಮ್ಮ ಭಾಷೆಯೇ ಜಗತ್ತಿನ ಪ್ರಾಚೀನ ಭಾಷೆಯೆಂದು ತಮಿಳಿನ ಕೆಲವರು ಪ್ರಚುರಪಡಿಸುತ್ತಾರೆಂದು ಕನ್ನಡಿಗರಾದ ನಾವು ಅದೇ ರೀತಿ ಮಾಡಲಾಗುವುದಿಲ್ಲ. ಆತ್ಮರತಿಯಿಂದ ಸುಳ್ಳುಗಳನ್ನೇ ಸಾಧಿಸುವುದು ಸರಿಯಲ್ಲ.

ಕನ್ನಡ ಚಳುವಳಿಗೆ ಆತ್ಮರತಿ ರೋಗ ಬಡಿದರೆ ಅದು ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಮಾಡುವ ವಂಚನೆಯಾಗುತ್ತದೆ. ಜನಸಂಸ್ಕೃತಿಗೆ ಮಾಡುವ ಅನ್ಯಾಯವಾಗುತ್ತದೆ. ಆತ್ಮವಿಶ್ವಾಸ ಮತ್ತು ಆಶಯವೇ ಹೊರತು ಆತ್ಮರತಿಯಲ್ಲ. ಈ ಅಂಶ ಕನ್ನಡಕ್ಕೆ ಮಾತ್ರವಲ್ಲ, ಎಲ್ಲ ಭಾಷಾ ಚಳುವಳಿಗಳಿಗೂ ಅನ್ವಯವಾಗುತ್ತದೆ.

ಅಹಂಕಾರ ಮೂಲವಾದ ಆತ್ಮರತಿಯಲ್ಲಿರುವ ಅಸಹನೆಯು ನಮ್ಮ ಸಾಂಸ್ಕೃತಿಕ ಕ್ಷೇತ್ರದ ಆರೋಗ್ಯವನ್ನೇ ಹಾಳು ಮಾಡುತ್ತಿದೆ. ತಾನು ಹೇಳಿದ್ದೇ ವೇದವಾಕ್ಯ, ನಾನು ಬರೆದದ್ದೇ ಅಂತಿಮ ಭಾಷ್ಯ ಎಂದು ಭ್ರಮಿಸಿದ ಕೆಲವರು ಮಾಧ್ಯಮಗಳ ಮುದ್ದಿನ ಮನುಷ್ಯರಾಗಿ ವಿಜೃಂಭಿಸುತ್ತಲೇ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಅನ್ಯರ ಅವಹೇಳನ ಮತ್ತು ಆತ್ಮ ಪ್ರಶಂಸೆಗಳೇ ಮುಖ್ಯವಾದಾಗ ಉಂಟಾಗುವ ದೂರಗಾಮಿ ಪರಿಣಾಮವನ್ನು ನೀವು ಮನವರಿಕೆ ಮಾಡಿಕೊಳ್ಳದಿದ್ದರೆ ಸಾಂಸ್ಕೃತಿಕ ಲೋಕಕ್ಕೆ ತಗುಲಿರುವ ಈ ಆತ್ಮರತಿ ರೋಗ ಸಾಂಕ್ರಮಿಕವಾಗುವ ಅಪಾಯವಿದೆ.

ಸಾಂಸ್ಕೃತಿಕ ಲೋಕದ ಆತ್ಮರತಿ ರೋಗವು ಬೇರೆಯವರ ಸೃಷ್ಟಿಶೀಲತೆಯನ್ನು ಹತ್ತಿಕ್ಕುವ ಹಲ್ಲೆಯಾಗುತ್ತದೆ. ಹೊಸ ಪೀಳಿಗೆಯ ಆತ್ಮವಿಶ್ವಾಸವನ್ನು ಅಲುಗಾಡಿಸುವುದು ಮಾತ್ರವಲ್ಲ ಸುಳ್ಳುಗಳನ್ನು ಸತ್ಯವಾಗಿಸಿ ಕಣ್ಣುಗಳನ್ನು ಕಳೆಯುತ್ತದೆ; ಕಿವಿಗಳನ್ನು ಕೊಳಕು ಮಾಡುತ್ತದೆ; ನಾಲಗೆಯಲ್ಲಿ ನಾತ ಹುಟ್ಟಿ ಸಾಗುತ್ತದೆ. ಆದರೆ ವಿಚಿತ್ರವೆಂದರೆ, ನಮ್ಮ ಎಲೈಟ್ ಸಂಸ್ಕೃತಿ ಜನರಿಗೆ ಆತ್ಮರತಿಯೇ ಮೋಕ್ಷಾನಂದ ಮಾದಕತೆಯನ್ನುಂಟುಮಾಡುವಂತೆ ಕಾಣುತ್ತಿದೆ.

ತಾನೊಬ್ಬನೇ ಸುಸಂಸ್ಕೃತ ಎಂದು ಭಾವಿಸುವ ಆತ್ಮರತಿ ಜನ ಸಂಸ್ಕೃತಿ ಬೇರುಗಳಿಗೆ ಬೆಂಕಿಯಿಡುವಂತೆ ತಾನೊಬ್ಬನೆ ಶ್ರೇಷ್ಠ ಲೇಖಕ, ವಿಮರ್ಶಕನೆಂಬ ಅಹಂಕಾರವು ಜನಮುಖತೆಯನ್ನೇ ಮಣ್ಣು ಮುಕ್ಕಿಸುತ್ತದೆ. ಸಾಹಿತ್ಯ ವಿಮರ್ಶೆಗೆ ಆತ್ಮರತಿ ರೋಗ ಬಡಿದರೆ ಅಥವಾ ಬುದ್ಧಿಪೂರ್ವಕವಾಗಿ ಬಿಡಿಸಿಕೊಂಡರೆ ಅದು ಇಡೀ ಸಾಹಿತ್ಯಕ ಪರಂಪರೆಯನ್ನು ಸುಡುತ್ತಾ ಹೋಗುತ್ತದೆ. ಆತ್ಮರತಿಯಿಂದ ಆವೃತಗೊಂಡ ಸಾಹಿತ್ಯ ವಿಮರ್ಶೆ ಮುಖವಾಡದಲ್ಲಿ ಮೂಲಭೂತಿಯಾಗುತ್ತದೆ.

ಸಾಹಿತ್ಯ ಕ್ಷೇತ್ರದಲ್ಲಿ ವಿಜೃಂಭಿಸ ಹೊರಡುವ ವಿಮರ್ಶೆಯ ಮೂಲಭೂತವಾದಿತನವನ್ನು ಬಯಲಿಗೆಳೆಯದೆ ನಮ್ಮ ಸಾಹಿತ್ಯಕ ವಾತಾವರಣದಲ್ಲಿ ಸೃಜನ ಶೀಲತೆಯ ನೈಜ ನೆಲೆಗಳು ಬದುಕುವುದಿಲ್ಲ; ಬೆಳೆಯುವುದಿಲ್ಲ; ಅಸಹನೆ ಮತ್ತು ಅಹಂಕಾರದಿಂದ ಶ್ರೇಷ್ಟತೆ ಹುಟ್ಟುವುದಿಲ್ಲ. ಶ್ರೇಷ್ಠವಾದದ್ದು ಯಾವತ್ತೂ ಆತ್ಮರತಿ ದೂರವಾಗಿರುತ್ತದೆ; ಸೌಜನ್ಯಶೀಲವಾಗಿರುತ್ತದೆ; ಸೌಜನ್ಯಶೀಲವಲ್ಲದ ಸೃಜನಶೀಲತೆ ಶ್ರೇಷ್ಟವಾಗುವುದು ಸಾಧ್ಯವಿಲ್ಲ. ಆದರೆ ನಮ್ಮ ಸಂದರ್ಭದ ಒಂದು ವಿಪರ್ಯಾಸವೆಂದರೆ ಆತ್ಮರತಿ ಯನ್ನು ಆತ್ಮವಿಶ್ವಾಸವೆಂದು, ವಿಕಾರವನ್ನು ವಿಚಾರವೆಂದು ವಿಜೃಂಭಿಸುವ ವಿಕೃತಿಗಳಿಗೆ ಶ್ರೇಷ್ಠತೆಯ ಪಟ್ಟ ಲಭಿಸುತ್ತಿದೆ! ಆಗದವರ ವಿಷಯದಲ್ಲಿ ಅಸಹನೆ ಅಟ್ಟ ಹತ್ತಿ ಕನಿಷ್ಟ ಮಾಡುತ್ತಿದೆ! ಆದ್ದರಿಂದ ಶ್ರೇಷ್ಠತೆಯು ಆತ್ಮರತಿ ದೂರವಾದ ಒಂದು ಪರಿಕಲ್ಪನೆಯಾದಾಗ ಮಾತ್ರ ಅದಕ್ಕೆ ವಿವೇಕ ಮತ್ತು ವಿಮರ್ಶೆಯ ಮೌಲ್ಯವಿರುತ್ತದೆ. ಇಲ್ಲದಿದ್ದರೆ ಶ್ರೇಷ್ಟತೆಯು ಹಲ್ಲೆಯ ಒಂದು ಅಸ್ತ್ರವಾಗುತ್ತದೆ.

ವಿಮರ್ಶೆಗೆ ಆತ್ಮವಿಮರ್ಶೆಯ ಸ್ಪರ್ಶವಿದ್ದಾಗ ಅದು ಆತ್ಮರತಿಯಿಂದ ದೂರವಾಗುತ್ತದೆ. ವಿಮರ್ಶೆಗೆ ಒಳಪಡುವ ವಲಯಕ್ಕೂ ಒಳ್ಳೆಯದನ್ನು ಮಾಡುತ್ತದೆ. ಇದು ಬದುಕಿನ ಎಲ್ಲಾ ವಲಯಗಳ ವಿಮರ್ಶೆಗೂ ಅನ್ವಯವಾಗುವ ವಿಷಯ.

ಆದ್ದರಿಂದ ನಿಮ್ಮ ಬದುಕಿನ ಎಲ್ಲಾ ವಲಯಗಳು ಆತ್ಮರತಿಯಿಂದ ಮುಕ್ತವಾಗಬೇಕೆಂಬುದು ವಿವೇಕಿಗಳ ಒತ್ತಾಸೆಯಾಗಬೇಕು; ಅಂತಃಕರಣಿಗಳ ಆಶಯವಾಗಬೇಕು. ನಾವೆಲ್ಲರೂ ಹಳಿತಪ್ಪಿ ಆತ್ಮರತಿಗಳಾಗುವ ಅಪಾಯವಿರುವುದರಿಂದ ನಮ್ಮೊಳಗೆ ಆತ್ಮವಿಮರ್ಶೆಯ ಸೂಕ್ಷ್ಮವನ್ನು ಸದಾ ಕಾಯ್ದುಕೊಳ್ಳಬೇಕು.
*****
೧೯-೦೩-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳ್ಳ ಮತ್ತು ಸೇವಕ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೯

ಸಣ್ಣ ಕತೆ

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys