ವ್ಯಕ್ತಮಧ್ಯದ ಸ್ವಾಯತ್ತತೆ

ವ್ಯಕ್ತಮಧ್ಯದ ಸ್ವಾಯತ್ತತೆ

ಕೆಲವು ವರ್ಷಗಳ ಮೊದಲು ನಾನು ಸನಾದಲ್ಲಿದ್ದಾಗ ಯುನಿವರ್ಸಿಟಿಯವರು ನನಗೆ ಅಪಾರ್ಟ್ಮೆಂಟೊಂದರ ನಾಲ್ಕನೆಯ ಮಹಡಿಯಲ್ಲಿ ಫ್ಲಾಟ್ ಕೊಟ್ಟಿದ್ದರು. ಇದೇ ಅತಿ ಮೇಲಿನ ಮಹಡಿ ಕೂಡಾ. ನನ್ನ ಫ್ಲಾಟಿಗೆ ಒಂದು ಸಣ್ಣ ಬಾಲ್ಕನಿಯಿತ್ತು. ಅನತಿ ದೂರದಲ್ಲೊಂದು ಶಾಲೆ; ಅದರ ಹಿಂದೆ ಎಲ್ಲಿಂದಲೋ ಸನಾದ ಕಡೆ ಬರುತ್ತಿದ್ದ ಹೆದ್ದಾರಿ; ಅದರಲ್ಲಿ ಸದಾ ವಾಹನ ಸಂಚಾರ; ಅದಕ್ಕಿಂತಲೂ ಆಚೆ ಸಸ್ಯಾವಳಿಯೇ ಇಲ್ಲದಂಥ ಬೆಟ್ಟ. ಬೆಟ್ಟದಾಚೆಗೆ ಆಕಾಶ. ಇಲ್ಲಿಗೆ ಬಂದ ಆರಂಭದಲ್ಲಿ ನಾನು ಯುನಿವರ್ಸಿಟಿಯ ಪಾಠಪ್ರವಚನ ಮುಗಿಸಿ ಮನೆಗೆ ಬಂದು ನನ್ನದೇ ಕೈಯಡುಗೆಯ ಊಟ ಉಂಡು ಕೆಲವೊಮ್ಮೆ ಈ ಬಾಲ್ಕನಿಯ ಬಳಿ ಸುಮ್ಮನೆ ಕೂತುಕೊಳ್ಳುತ್ತಿದ್ದೆ. ಹೆಂಡತಿ ಮಕ್ಕಳನ್ನು ಬಿಟ್ಟು ದೂರದೂರಿಗೆ ಕೆಲಸಮಾಡುವುದಕ್ಕೆ ಒಬ್ಬನೇ ಬಂದಿದ್ದೆ; ಬಹಳ ಬೇಸರವೆನಿಸುತ್ತಿತ್ತು. ಒಂಟಿತನ ಹಲವರಿಗೆ ಒಂದು ಆಯ್ಕೆಯಾಗಿರಬಹುದು; ಆದರೆ ನನ್ನ ಮಟ್ಟಿಗೆ ಅದೇ ನನ್ನನ್ನು ಆರಿಸಿಕೊಂಡ ಹಾಗೆ. ಯಾಕೆಂದರೆ ನಿಜವಾದ ಒಂಟಿತನವನ್ನು ಜೀವನದಲ್ಲಿ ಹಲವು ಬಾರಿ ಹಲವು ಕಡೆ ಅನುಭವಿಸಿದವನು ನಾನು. ಪ್ರತಿಯೊಂದು ಬಾರಿಯೂ ಅದು ಹೊಸದೆನ್ನುವಂತೆ ಕಾಡುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ನಾನು ಬಾಲ್ಕನಿಗೆ ಬರುತ್ತಿದ್ದ ಒಂದು ಹಿಂಡು ಗುಬ್ಬಿ ಹಕ್ಕಿಗಳನ್ನು ಗಮನಿಸಿದೆ. ನನಗಾದ ಸಂತೋಷ ಅಷ್ಟಿಷ್ಟಲ್ಲ! ಎಲಾ ಗುಬ್ಬಿಗಳೇ, ನನಗೆ ಜತೆಯಾಗುವುದಕ್ಕೆ ನೀವೂ ಊರಿಂದ ಬಂದಿರ ಎನಿಸಿತು. ಕಾರಣ ಮನುಷ್ಯರನ್ನು ನಾವು ಪರರೆಂದು ಅಂದುಕೊಳ್ಳಬಹುದು-ಅವರ ವೇಷಭೂಷಣಗಳು, ಭಾಷೆ, ಆಚಾರವಿಚಾರಗಳು ಬೇರೆಯಿರುತ್ತವೆ. ಆದರೆ ಹಕ್ಕಿಗಳು? ಅವು ಎಲ್ಲಿ ಹೋದರೂ ನಮ್ಮವೇ. ಅದರಲ್ಲೂ ಗುಬ್ಬಿಹಕ್ಕಿಗಳು ಪರವೆನಿಸುವುದುಂಟೇ? ಅವು ನಮ್ಮ ಬಾಲ್ಯಕಾಲದ ಸಂಗಾತಿಗಳು.

ನಮ್ಮ ಮುಳಿಹುಲ್ಲಿನ ಮನೆ ಮಾಡಿನಲ್ಲಿ ಗೂಡುಕಟ್ಟುತ್ತಿದ್ದ ಗುಬ್ಬಿಹಕ್ಕಿಗಳ ನೆನಪಾಯಿತು; ಅವೇ ಈ ಹಕ್ಕಿಗಳು ಎಂದು ಕೂಡಾ ಅನಿಸಿತು. ಜೊತೆಗೇ ನಮ್ಮ ತೋಟದಲ್ಲಿ, ಗುಡ್ಡದಲ್ಲಿ ಕಾಣಿಸುತ್ತಿದ್ದ, ಕಾಣಿಸದೆ ಇದ್ದರೂ ತಮ್ಮ ವಿಶಿಷ್ಟ ಕೂಗುಗಳಿಂದ ಪರಿಚಿತ ಅನಿಸುತ್ತಿದ್ದ ಅನೇಕಾನೇಕ ರೀತಿಯ ಹಕ್ಕಿಗಳ ಹಾಗೂ ಅವು ನಿರ್ಮಿಸುತ್ತಿದ್ದ ಪರಿಸರದ ನೆನಪೂ ಆಯಿತು. ಇದರಿಂದ ನನ್ನ ಬೇಸರ ಕಡಿಮೆಯಾಯಿತೇ ಹೆಚ್ಚಾಯಿತೇ ಎನ್ನುವುದು ನನಗೆ ತಿಳಿಯದು; ಆದರೆ ಈ ಗುಬ್ಬಿಗಳ ನೋಟ ನನಗೆ ಸಂತೋಷವನ್ನು ತಂದಿತೆನ್ನುವುದರಲ್ಲಿ ಸಂಶಯವಿಲ್ಲ. ಅಂದಿನಿಂದ ನಾನವಕ್ಕೆ ಅಕ್ಕಿ ಕಾಳುಗಳನ್ನು ಹಾಕತೊಡಗಿದೆ. ಬೆಳಿಗ್ಗೆ ಕ್ಲಾಸಿಗೆ ಹೋಗುವ ಮೊದಲು ಕಾಳುಗಳನ್ನು ಹಾಕಿದರೆ ಅಪರಾಹ್ನ ನಾನು ಮರಳುವ ವೇಳೆಗೆ ಬಾಲ್ಕನಿಯಲ್ಲಿ ಒಂದು ಚೂರೂ ಉಳಿಯುತ್ತಿರಲಿಲ್ಲ. ಒಮ್ಮೆ ಅಕ್ಕಿಯ ಬದಲಿಗೆ ಬ್ರೆಡ್ಡಿನ ಚೂರುಗಳನ್ನು ಹಾಕಿ ಹೋಗಿದ್ದೆ- ಪಾಪ, ಇವಕ್ಕೆ ಬ್ರೆಡ್ಡು ಎಲ್ಲಿ ಸಿಗುತ್ತೆ, ತಿಂದುಕೊಳ್ಳಲಿ ಎಂದು. ಆದರೆ ನಾನು ಬರುವಾಗ ಎಲ್ಲಾ ಚೂರುಗಳೂ ಹಾಗೆಯೇ ಇದ್ದುವು. ಗುಬ್ಬಿಗಳಿಗೆ ಬೇಕಾದ್ದು ಗಟ್ಟಿಯಾದ ಕಾಳುಗಳು ಎನ್ನುವುದು ಆಗ ನನ್ನ ಮನಸ್ಸಿಗೆ ಹೊಳೆಯಿತು. ಕಾರಣ ಆಕಾಶದಲ್ಲಿ ಹಾರುವುದಕ್ಕೆ ಅವಕ್ಕೆ ಸಾಕಷ್ಟು ಶಕ್ತಿ ವ್ಯಯವಾಗುತ್ತದೆ; ಆದ್ದರಿಂದ ಶಕ್ತಿಯ ಕಣಜಗಳಾದ ಕಾಳುಗಳನ್ನೇ ಅವು ಇಷ್ಪಪಡುವುದು.

ಗುಬ್ಬಿ ಹಕ್ಕಿಗಳು ಮಹಾ ಸಂಶಯಪ್ರವೃತ್ತಿಯ ಪ್ರಾಣಿಗಳು; ತಮಗೆ ಆಹಾರ ನೀಡುವ ವ್ಯಕ್ತಿಯನ್ನು ಕೂಡಾ ಅವು ನಂಬವು. ಆದ್ದರಿಂದ ಅವು ಮನುಷ್ಯರ ಹತ್ತಿರ ಬರುವುದಿಲ್ಲ. ಮಾತ್ರವಲ್ಲ, ಕಾಳುಗಳನ್ನು ತಿನ್ನುವಾಗಲೂ ಅವು ಕೂತು ಸಮಾಧಾನವಾಗಿ ತಿನ್ನುವುದಿಲ್ಲ! ಏನೋ ಅಪಾಯ ಕಾದಿದೆ ಎಂಬ ತುರ್ತಿನಲ್ಲೇ ಆಚೀಚೆ ನೋಡಿಕೊಂಡು ಹತ್ತಿರ ಯಾರೂ ಇರದಿದ್ದರೂ ಒಂದರ್ಧ ನಿಮಿಷದಲ್ಲೇ ಹಾರಿಹೋಗುತ್ತವೆ- ತಿನ್ನುವುದಕ್ಕೆ ಇನ್ನಷ್ಟು ಕಾಳುಗಳು ಉಳಿದಿದ್ದರೂ. ಇವನ್ನು ಹೆಕ್ಕುವುದಕ್ಕೆ ಅವು ಮತ್ತೆ ಅದೇ ರೀತಿ ಬರಬಹುದು. ಹೀಗೆ ನಿಂತಲ್ಲಿ ನಿಲ್ಲದಿರುವುದು ಈ ಹಕ್ಕಿಗಳ ಸಹಜ ರಕ್ಷಣೋಪಾಯವೆಂದು ಕಾಣುತ್ತದೆ. ಇವು ಮನುಷ್ಯರನ್ನು ನಿಜಕ್ಕೂ ಯಾವ ರೀತಿ ಕಾಣುತ್ತವೆ ಎನ್ನುವುದು ತಿಳಿಯದು. ಮನುಷ್ಯರು ಮನುಷ್ಯರನ್ನು ಕಾಣುವುದಕ್ಕೂ ಪ್ರಾಣಿಗಳು ಮನುಷ್ಯರನ್ನು ಕಾಣುವುದಕ್ಕೂ ವ್ಯತ್ಯಾಸವಿದೆ. ಉದಾಹರಣೆಗೆ, ನಾಯಿಯ ದೃಷ್ಟಿಗೆ ಕೆಲವೊಂದು ರೀತಿಯ ಆಕಾರಗಳು ಮತ್ತು ಬಣ್ಣಗಳಷ್ಟೆ ಕಾಣಿಸುತ್ತವೆ. ಕೆಂಪು ಬಟ್ಟೆ ಧರಿಸಿದವರನ್ನು ಕಂಡರೆ ನಾಯಿ ಹೆಚ್ಚಾಗಿ ಬೊಗಳುವುದು ಬಹುಶಃ ಈ ಕಾರಣಕ್ಕೆ ಇರಬಹುದು -ಕೆಂಪು ಅದರ ಕಣ್ಣಿಗೆ ಕುಕ್ಕುವ ಬಣ್ಣ. ಕಪ್ಪೆಗೆ ಚಲಿಸುವ ವಸ್ತುಗಳಷ್ಟೆ ಕಾಣಿಸುತ್ತವೆ ಎಂದು ಕೇಳಿದ್ದೇನೆ. ಬೆಕ್ಕು, ಹುಲಿ, ಗೂಗೆ ಮುಂತಾದ ರಾತ್ರಿಂಚರ ಪ್ರಾಣಿಗಳು ಕತ್ತಲಲ್ಲೂ ನೋಡಬಲ್ಲುವು.

ಇಂಥ ವೈವಿಧ್ಯಮಯ ಲೋಕದಲ್ಲಿ ನಾವು ಈ ಪ್ರಾಣಿಗಳನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ? ಇವೆಲ್ಲವೂ ಇರುವುದು ನಮಗೆ ಬೇಟೆಯಾಡಿ ತಿನ್ನುವುದಕ್ಕೆ, ನಮ್ಮ ಭಾರ ಹೊರುವುದಕ್ಕೆ, ನಮಗೋಸ್ಕರ ದುಡಿಯುವುದಕ್ಕೆ ಎಂದುಕೊಂಡಿದ್ದೇವೆ. ವ್ಯಕ್ತವಾಗಿ ಇದೊಂದರಲ್ಲೂ ಭಾಗವಹಿಸದ ಪ್ರಾಣಿಗಳು ಅನಗತ್ಯ ಎಂಬ ಧೋರಣೆ ತಳೆದಿದ್ದೇವೆ. ಉದಾಹರಣೆಗೆ, ಗುಬ್ಬಚ್ಚಿಯಿಂದ ನಮಗೇನು ಉಪಯೋಗ? ಅಥವಾ ಹುಲಿಯಿಂದ? ಹಕ್ಕಿಗಳಿಗೆ ಕಾಳು ಹಾಕುವುದು, ಹುಲಿ ಸಿಂಹಗಳನ್ನು ಸಹಿಸಿಕೊಳ್ಳುವುದು ಕೇವಲ ಔದಾರ್ಯದಿಂದ ಎಂದುಕೊಳ್ಳುತ್ತೇವೆ. ಆದರೆ ಕಾಳಿನಲ್ಲಿ ಪಾಲು ಕೇಳುವುದು ಹಕ್ಕಿಗಳ ಹಕ್ಕು ಎಂಬುದನ್ನು ಮರೆತುಬಿಟ್ಟಿದ್ದೇವೆ. ಯಾಕೆಂದರೆ ಹಕ್ಕಿ, ಹಾತೆ, ಚಿಟ್ಟೆ ಇನ್ನು ನಮಗೆ ಗುರುತೇ ಇಲ್ಲದ ಅನೇಕಾನೇಕ ಕೀಟಗಳು ಇಲ್ಲದಿದ್ದರೆ ನಾವು ಹೊಲಗಳಲ್ಲಿ ಬೆಳೆ ತೆಗೆಯಲಾರೆವು-ಪರಾಗಸ್ಪರ್‍ಶವೆಂಬ ಮೂಲಭೂತ ಕ್ರಿಯೆಗೆ ಈ ಚಿಕ್ಕ ಪುಟ್ಟ ಅನಾಮಿಕ ಜೀವಿಗಳು ಬೇಕೇ ಬೇಕು. ಹುಲಿ ಸಿಂಹಗಳು ಅರಣ್ಯನಾಶವನ್ನು ತಡೆಯುತ್ತವೆ. ಅರಣ್ಯಗಳಿಲ್ಲದೆ ಮಳೆ ಬರಲಾರದು.

ನಿಜ, ಇವು ಯಾವುವೂ ಮನುಷ್ಯರಿಗೆ ಉಪಕಾರವಾಗಲಿ ಎಂದು ಈ ಕೆಲಸಗಳನ್ನು ಮಾಡುತ್ತಿಲ್ಲ, ತಮ್ಮ ಸ್ವಾರ್ಥಕ್ಕಾಗಿಯೆ ಮಾಡುತ್ತವೆ. ಆದರೆ ಇಲ್ಲಿ ಸ್ವಾರ್ಥ, ಪರೋಪಕಾರ ಮುಂತಾದ ಪದಗಳಿಗೆ ಅರ್ಥವಿಲ್ಲ. ಇಡೀ ಜಗತ್ತು ಒಂದು ಮಹಾಜಾಲವಾಗಿರುತ್ತ, ಇಲ್ಲಿನ ಪ್ರತಿಯೊಂದು ಜೀವಿಯೂ ಪತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇತರ ಜೀವಿಗಳ ಮೇಲೆ ಅವಲಂಬಿಸಿರುತ್ತದೆ. ಇದೊಂದು ರೀತಿಯ ಸಮತೋಲನ: ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ, ಹಾಗೂ ಸಮತೋಲನ ಯಾವತ್ತೂ ಪರಿಪೂರ್ಣ ಎನಿಸುವುದೂ ಇಲ್ಲ; ಹಗ್ಗದ ಮೇಲೆ ನಡೆದಂತೆ, ಸ್ವಲ್ಪ ಆಚೆ ಸ್ವಲ್ಪ ಈಚೆ ವಾಲುತ್ತಲೇ ಇರುತ್ತದೆ. ಈ ಆಚೇಚೆಗಿನ ಅಸಮತೋಲನ ಲೋಕ ಚಲನೆಯ ಅಗತ್ಯವೆಂದು ತಿಳಿಯಬೇಕು.

ಪರಿಸರ ವಿಜ್ಞಾನಿಗಳು ಇದನ್ನು ವಿವರಿಸುವುದಕ್ಕೆ ಕತೆಯೊಂದನ್ನು ಹೇಳುತ್ತಾರೆ: ಒಂದು ಹೊಲದಲ್ಲಿ ಕೆಲವು ಮೊಲಗಳಿರುತ್ತವೆ; ಇದೇ ಹೊಲದಲ್ಲಿ ಹುಲ್ಲೂ ಬೆಳೆಯುತ್ತದೆ. ಮೊಲಗಳು ಈ ಹುಲ್ಲನ್ನು ಮೇದು ಬದುಕುತ್ತಿರುತ್ತವೆ. ಬೆಳೆದ ಹುಲ್ಲನ್ನು ಮೊಲಗಳು ಮೇಯುವುದರಿಂದ ಹೊಸ ಹುಲ್ಲಿನ ಬೆಳೆಗೂ ಅನುಕೂಲ. ಅವು ಪರಸ್ಪರಾವಲಂಬಿಗಳು: ಈ ಮೊಲಗಳಿಗೆ ಈ ಹುಲ್ಲು, ಈ ಹುಲ್ಲಿಗೆ ಈ ಮೊಲಗಳು ಎಂಬ ಸನ್ನಿವೇಶ. ಆದರೆ ಮೊಲಗಳಿಗೆ ಎಷ್ಟು ಬೇಕೋ ಅಷ್ಟು (ಅಷ್ಟೇ) ಹುಲ್ಲು ಬೆಳೆಯಬೇಕು; ಅದೇ ರೀತಿ . ಹುಲ್ಲಿಗೆ ಎಷ್ಟು ಬೇಕೋ ಅಷ್ಟು (ಅಷ್ಟೇ) ಮೊಲಗಳಿರಬೇಕು. ಹೆಚ್ಚುಕಮ್ಮಿಯಾಗಕೂಡದು. ಉದಾಹರಣೆಗೆ, ಮೊಲಗಳ ದೃಷ್ಟಿಯಿಂದ ನೋಡಿದರೆ, ಹುಲ್ಲು ಕಮ್ಮಿ ಬೆಳೆದಾಗ ತಿನಿಸು ಸಾಲದಾಗಿ ಅವುಗಳ ಸಂತಾನೋತ್ಪತ್ತಿ ಸಾಮರ್‍ಥ್ಯ ಇಳಿಯುತ್ತದೆ; ಆದ್ದರಿಂದ ಮೊಲಗಳ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾದಾಗ ಹುಲ್ಲಿನ ಪ್ರಮಾಣ ಹೆಚ್ಚಾಗುತ್ತದೆ; ಯಾಕೆಂದರೆ, ಬೆಳೆದ ಎಲ್ಲಾ ಹುಲ್ಲನ್ನು ತಿನ್ನುವುದಕ್ಕೆ ಸಾಕಷ್ಟು ಮೊಲಗಳಿರುವುದಿಲ್ಲ. ಆದರೆ ಈಗ, ಇರುವ ಮೊಲಗಳಿಗೆ ಹುಲ್ಲು ಬೇಕಾದಷ್ಟು ದೊರೆತು ಅವುಗಳ ಸಂತಾನೋತ್ಪತ್ತಿ ಗುಣ ವರ್ಧಿಸುತ್ತದೆ. ಪರಿಣಾಮವಾಗಿ ಮೊಲಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಈಗ ಈ ಮೊಲ ಮತ್ತು ಹುಲ್ಲಿನ ನಡುವಣ ಸಮೀಕರಣದ ಇನ್ನೊಂದು ಸುತ್ತು ಸುರು! ಈ ಮೊಲಗಳಿಗೆ ಬೇರೆ ಹುಲ್ಲು ಬೆಳೆಯುವ ಸ್ಥಳ ಇಲ್ಲವೇ ಎಂದು ನಾವು ಕೇಳಬಹುದು. ದುರದೃಷ್ಟವಶಾತ್ ಅಂಥ ಬೇರೆ ಸ್ಥಳವಿಲ್ಲ. ಇದೇ ಕತೆಯನ್ನು ಹುಲ್ಲಿನ ದೃಷ್ಟಿಯಿಂದಲೂ ಹೇಳಬಹುದು. ಮೊತ್ತದಲ್ಲಿ ನಮಗೆ ಅರ್ಥವಾಗುವುದು ಮೊಲ ಮತ್ತು ಹುಲ್ಲಿನ ಪರಸ್ಸರ symbiosis ಅರ್ಥಾತ್ ಸಹಜೀವನ. ಈ ಕ್ರಿಯೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗುವುದು ಸಹಜ; ಪಕೃತಿ ಅದನ್ನು ಸರಿಪಡಿಸುತ್ತಲೇ ಇರುತ್ತದೆ-ಸಂಪೂರ್ಣ ಸಮತೋಲನ ಸಾಧ್ಯವಲ್ಲದೆ ಇದ್ದರೂ.

ಈ ಕತೆ ಮನುಷ್ಯರದೂ ಹೌದು ಎಂದೆನಿಸುವುದಿಲ್ಲವೇ? ಮೊಲಗಳು ಹೊಟ್ಟೆಬಾಕಗಳಾದಾಗಲೇ ಅವುಗಳ ಸಂಖ್ಯೆಯೂ ಕಡಿಮೆಯಾಗುವುದು ಗಮನಾರ್ಹ. ಮನುಷ್ಯರಿಗಿಂತ ಹೆಚ್ಚು ಹೊಟ್ಟೆಬಾಕರು ಯಾರಿದ್ದಾರೆ? ಹೊಟ್ಟೆಬಾಕ, ಕೂಳುಬಾಕ, ಕೊಳ್ಳುಬಾಕ, ಖರ್ಚುಬಾಕ-ಈ ಎಲ್ಲ ‘ಬಾಕತನ’ಗಳಲ್ಲೂ ಆಧುನಿಕ ಮನುಷ್ಯರನ್ನು ಮೀರಿಸುವವರು ಯಾರೂ ಇಲ್ಲ. ಅವಶ್ಯಕತೆಗಿಂತ ಹೆಚ್ಚಿನದನ್ನು ದೋಚಿಕೊಳ್ಳುವುದೇ ಬಾಕತನ. ಆದರೆ ಈ ಆಧುನಿಕ ಮನುಷ್ಯನೊಂದಿಗೆ ವಾದಿಸುವವರು ಯಾರು? ಯಾಕೆಂದರೆ, ಆಧುನಿಕತೆಯ ಒಂದು ಸ್ಪರೂಪ ಜಾಗತಿಕ ಸಂಪನ್ಮೂಲಗಳ ಪರಮಾವಧಿ ಉಪಯೋಗ (ಉಪಭೋಗ). ಆಧುನಿಕತೆ ಮನುಷ್ಯನಿಗೆ ಯಾವ ಅಡೆತಡೆಯೂ ಇಲ್ಲದಂಥ ಸಂಪೂರ್ಣ ಸ್ವಾತಂತ್ರ್ಯವನ್ನು ವಾಗ್ದತ್ತಮಾಡಿದೆ. ಮಾತ್ರೆ ಛಂದಸ್ಸುಗಳನ್ನು ಮಾತ್ರವೇ ಅಲ್ಲ, ವ್ಯಾಕರಣಸೂತ್ರಗಳನ್ನೂ, ಭಾಷೆಯ ನಿಯಮಗಳನ್ನೂ ಕೂಡಾ ದಿಕ್ಕರಿಸುವ ಆಧುನಿಕ ಕಾವ್ಯ ಇದಕ್ಕೊಂದು ನಿರುಪದ್ರವಿ ಉದಾಹರಣೆ ಮಾತ್ರ.

ಈ ಜಗತ್ತು ನಶ್ವರ, ಒಂದಲ್ಲ ಒಂದು ದಿನ ಇದೆಲ್ಲವೂ ಕೊನೆಗೊಳ್ಳುತ್ತದೆ; ಆಗ ಮನುಷ್ಯನೂ ಇಲ್ಲ,. ಪ್ರಾಣಿಯೂ ಇಲ್ಲ, ಪಕೃತಿಯೂ ಇಲ್ಲ ಎನ್ನುತ್ತದೆ ಸನಾತನ ಧರ್ಮ. ಪ್ರಳಯದ ಕಲ್ಪನೆ ಎಲ್ಲಾ ಪಮುಖ ಧರ್ಮಗಳಲ್ಲೂ ಇದೆ. ದೇವರೇ ನಾಶಮಾಡುವುದನ್ನು ಮನುಷ್ಯ ಉಳಿಸುವುದೆಂದರೇನು ಎಂಬ ಪ್ರಶ್ನೆಯೇಳುತ್ತದೆ. ಆಧುನಿಕ ವಿಜ್ಞಾನ ಕೂಡಾ ನಾವಿರುವ ಸೌರಮಂಡಲದ ನಾಶವನ್ನು ಪ್ರತಿಪಾದಿಸುತ್ತದೆ: ಭೂಮಿಗೆ ಶಕ್ತಿಯೀಯುವ ಸೂರ್ಯಗ್ರಹವು ತಾನು ಉರಿಯುವ ಮೂಲಕ ಪ್ರಶಿಕ್ಷಣವೂ ಅದೆಷ್ಟೋ ಟನ್ನುಗಟ್ಟಲೆ ಇಂಧನವನ್ನು ಕಳೆದುಕೊಳ್ಳುತ್ತದೆ. ಒಂದಲ್ಲ ಒಂದು ದಿನ ಸೂರ್ಯಗಹ ಬರಿದಾಗಿಯೇ ಆಗುತ್ತದೆ. ಆ ನಂತರ ಸೌರಮಂಡಲದ ಪಾಡೇನು? ಅಷ್ಟಕ್ಕೂ ಈ ಸೂರ್ಯ ಚೆಲ್ಲವ ಶಕ್ತಿಯಲ್ಲಿ ತೀರಾ ಕ್ಷುಲ್ಲಕ ಎನ್ನಬಹುದಾದಂಥ ಒಂದು ಪಾಲು ಮಾತ್ರವೇ ಭೂಮಿಯನ್ನು ತಲಪುವುದು ಕೂಡಾ. (ಸೂರ್ಯನ ಶಕ್ತಿಯೆಲ್ಲಾ ಭೂಮಿಯ ಕಕ್ಷೆಯೊಳಗೆ ಬಿದ್ದರೆ ಭೂಮಿ ಕ್ಷಣಮಾತ್ರದಲ್ಲಿ ನಾಶವಾಗಿಬಿಟ್ಟೀತು!) ಆ ಉಳಿದ ಶಕ್ತಿ ಏನಾಗುತ್ತಿದೆ? ಯಾವುದಕ್ಕೂ ಉಪಯೋಗವಿಲ್ಲದೆ ಅಂತರಿಕ್ಷದಲ್ಲಿ ಸುಮ್ಮನೆ ಸೋರಿಹೋಗುತ್ತದೆ. ಹೀಗೆ ಪ್ರಕೃತಿಗೇ ವೃಥಾ ಪೋಲಾಗುವ ತನ್ನ ಸಂಪತ್ತಿನ ಮೇಲೆ ನಿಗಾ ಇಲ್ಲವೆಂದಮೇಲೆ ಮನುಷ್ಯ ಯಾಕೆ ಕಾತರಿಸಬೇಕು?

ಈ ತರದ ವಾದಕ್ಕೆ ಉತ್ತರವಿಲ್ಲ. ಆದಿ ಅಂತ್ಯಗಳನ್ನು ಚಿಂತಿಸುತ್ತ ಮನುಷ್ಯ ‘ಏನಾದರೂ ಒಂದೇ’ ಎಂಬ ಮೌಲ್ಯರಹಿತ ನಿಲುವಿಗೆ ತಲುಪುತ್ತಾನೆ. ಈ ಕಾರಣಕ್ಕೋ ಏನೋ ಭಗವಾನ್ ಬುದ್ಧನು ಇಂಥ ಮೂಲಭೂತ ಪ್ರಶ್ನೆಗಳನ್ನು ಎತ್ತಿದಾಗಲೆಲ್ಲ ಮೌನ ತಳೆಯುತ್ತಿದ್ದ: ಇದೇ ಬುದ್ಧನ ಮಹಾಮೌನ ಎಂದು ಪ್ರಸಿದ್ಧಿ. ಬುದ್ಧ ಪ್ರತಿಪಾದಿಸುತ್ತಿದ್ದ ಮಾಧ್ಯಮಿಕ ವಾದಕ್ಕೆ ಅನುಗುಣವಾದ ಇನ್ನೊಂದು ಆಯಾಮವನ್ನೂ ನಾವು ಕಾಣಬಹುದು. ಅದೆಂದರೆ ಮನುಷ್ಯನ ವಸ್ತುಮಧ್ಯಸ್ಥಿತಿ. ನಾವೆಲ್ಲರೂ ವಸ್ತುಮಧ್ಯಕ್ಕೇ ಪ್ರವೇಶ ಪಡೆದವರು -in medias res! ಇದು ಆಧುನಿಕ ಸಣ್ಣ ಕತೆಯಂತೆ. ಆರಂಭವೆನ್ನುವುದಿಲ್ಲ, ಅಂತ್ಯವೂ ಇಲ್ಲ. ಕತೆ ನಡೆಯುತ್ತಲೇ ಇರುತ್ತದೆ. ಈ ವಸ್ತುಮಧ್ಯಸ್ಥಿತಿ ವ್ಯಕ್ತಮಧ್ಯಸ್ಥಿತಿಯೂ ಹೌದು; ಮಧ್ಯವೊಂದೇ ವ್ಯಕ್ತವಾದ್ದರಿಂದ. ಈ ವ್ಯಕ್ತಮಧ್ಯದ ಸ್ವಾಯತ್ತತೆಯೊಳಗೆ ಮಾತ್ರವೇ ನಮ್ಮ ಬದುಕಿಗೆ ಅರ್ಥವಿರುವುದು; ಅದರಾಚೆಗೂ ಇಲ್ಲ, ಈಚೆಗೂ ಇಲ್ಲ. ಈ ಸ್ಥಿತಿಯೆಂದರೆ ಅದೊಂದು ಭಾಷೆಯಿದ್ದ ಹಾಗೆ. ಭಾಷೆಗೆ ಅರ್ಥವಿರುವುದು ಅದರ ಸ್ವಾಯತ್ತತೆಯೊಳಗೆ ಮಾತ್ರ. ಹಾಗೂ ಭಾಷೆ ನಮಗೆ ದತ್ತವಾಗಿ ಬಂದುದು, ನಾವು ನಿರ್ಮಿಸಿದುದಲ್ಲ. ನಾವದನ್ನು ಆಗಾಗ ಮೀರಲು ಪ್ರಯತ್ನಿಸಬಹುದು, ಅದೊಂದು ಬಂಧನವೆಂದು ಸಿಡಿಮಿಡಿಗೊಳ್ಳಬಹುದು. ಆದರೆ ಅದರ ವಿನಾ ನಮಗೆ ಬದುಕಿಲ್ಲ. ಒಂದು ಭಾಷೆಯನ್ನು ಬಿಟ್ಟು ಬೇರೊಂದು ಭಾಷೆಯನ್ನು ಕಲಿಯಬಹುದಲ್ಲವೇ ಎನ್ನಬಹುದು. ಹಾಗೆ ಕಲಿತಾಗ ಒಂದು ಸ್ವಾಯತ್ತತೆಯಿಂದ ಇನ್ನೊಂದಕ್ಕೆ ಪ್ರವೇಶಿಸುತ್ತೇವೆಯೇ ವಿನಾ ಭಾಷೆಯ ಸ್ವಾಯತ್ತತೆಯಿಂದ ಬಿಡುಗಡೆಗೊಳ್ಳುವುದಿಲ್ಲ. ನಮ್ಮ ಗುಬ್ಬಚ್ಚಿಗಳನ್ನು ಬಿಟ್ಟು ಬಹಳ ದೂರ ಬಂದೆವು. ಗುಬ್ಬಚ್ಚಿಗಳಿಗಾದರೆ ಇದಾವುದರ ಪರಿವೆಯೂ ಇಲ್ಲ. ಅಂಥ ಹಕ್ಕಿಗಳನ್ನು ನೋಡಿ ಕಲಿಯಿರಿ ಎನ್ನುತ್ತದೆ ಬೈಬಲ್. ಆದರೆ ಯಾರೇನೇ ಹೇಳಿದರೂ ಮನುಷ್ಯರಾದ ನಾವು ಚಿಂತಿಸುವುದಕ್ಕೆ ಬದ್ಧರಾಗಿರುತ್ತೇವೆ. ಜ್ಞಾನವೃಕ್ಷದ ಹಣ್ಣನ್ನು ತಿಂದದ್ದೇ ಬೈಬಲಿನ ಪ್ರಕಾರ ಮನುಷ್ಯನ ಮೊದಲ ಪಾಪ. ಇದಕ್ಕೆ ಸಾಧಾರಣವಾಗಿ ಲೈಂಗಿಕ ಅರ್ಥವನ್ನು ಕೊಡಲಾಗುತ್ತದೆ. ಆದರೆ ಅತಿಯಾದ ಜ್ಞಾನ ಕೂಡಾ ಮನುಷ್ಯನಿಗೊಂದು ಹೊರೆಯಾಗಬಲ್ಲುದು; ಇಷ್ಟೊಂದು ಜ್ಞಾನದ ನಂತರ ಯಾವ ಕ್ಷಮೆ ಎನ್ನುತ್ತದೆ ಎಲಿಯಟ್ನ ಕವಿತೆಯೊಂದರ ಸಾಲು. ಆದರೆ ವಾಸ್ತವದ ಸಂಗತಿಯೆಂದರೆ ಹೆಚ್ಚೆಚ್ಚು ತಿಳಿದಷ್ಟೂ ನಮ್ಮ ಅಜ್ಞಾನದ ಸೀಮೆ ವಿಸ್ತರಿಸುತ್ತಿರುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೯
Next post ಹೊಸ ಬಾಳು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys