ಶಬರಿ – ೧೦

ಶಬರಿ – ೧೦

ಮಾರನೇ ದಿನ ಹುಚ್ಚೀರ ಮತ್ತು ಸಣ್ಣೀರ ಸೂರ್ಯನಿಗೆ ಮುಖ ತೋರಿಸದೆ ಓಡಾಡುತ್ತಿದ್ದರು. ಇತ್ತೀಚಿಗೆ ರಾತ್ರಿ ಶಾಲೆಗೆ ಹೋಗುವುದು ಕಡಿಮೆಯಾಗಿದ್ದು, ಈ ಬಗ್ಗೆ ಸೂರ್ಯ ಇತರರೊಂದಿಗೆ ಚರ್ಚಿಸಿದ್ದು. ಈ ವಿಷಯ ಇವರ ಕಿವಿ ಮೇಲೆ ಬಿದ್ದದ್ದು, ಇದಕ್ಕೆ ಕಾರಣವಾಗಿತ್ತು. ಕಂಡರೂ ಕಾಣದಂತೆ ಓಡಾಡುವ ಇವರನ್ನು ಗಮನಿಸಿದ ಸೂರ್ಯ ಒಳಗೇ ನಕ್ಕ. ಅವರಲ್ಲೇ ಅಳುಕು ಮೂಡಿರುವಾಗ ಸರಿದಾರಿಗೆ ಬಂದೇ ಬರುತ್ತಾರೆಂದು ಭಾವಿಸಿದ. “ಸಣ್ಣೀರ ನಿನ್ ಜೊತೆ ಮಾತಾಡ್ ಬೇಕಾಗಿತ್ತು” ಎಂದಾಗ ಆತ “ಈಗ್ ಬಂದೆ ಕಣಣ್ಣ” ಎಂದು ಹೋದವನು ಎಷ್ಟು ಹೊತ್ತಾದರೂ ಬರಲಿಲ್ಲ. ಆದರೆ ಹುಚ್ಚೀರ, ತೋಪಿನ ಬಳಿ ಸಿಕ್ಕಿಯೇಬಿಟ್ಟ.

“ಎನ್ ಹುಚ್ಚೀರ, ನನ್ ಮೇಲೆ ಸಿಟ್ಟು ಬಂದಿದ್ಯಾ ನಿಂಗೆ” ಎಂದು ಸೂರ್ಯ ಕೇಳಿದಾಗ ಹುಚ್ಚೀರ ತಬ್ಬಿಬ್ಬಾದ. ಎಲ್ಲಾದ್ರು ಉಂಟಾ ಎಂಬಂತೆ ಸನ್ನೆ ಮೂಲಕ ತಿಳಿಸಿದ. ಸೂರ್ಯ, ಹುಚ್ಚೀರನ ಕೈ ಹಿಡಿದು ಹೇಳಿದ- “ನೋಡು, ನಿನಗೆ ನನ್ನ ಅಣ್ಣನ ವಯಸ್ಸಾಗಿದೆ. ನಾನಾದ್ರೂ ಹಿಡ್ದಿರೊ ಕೆಲ್ಸ ಬಿಡ್ಬಾರ್‍ದು ಅಂತ ಬಂಧು ಬಳಗ ಎಲ್ಲಾ ಬಿಟ್ ಬಂದಿದ್ದೀನಿ. ನೀನೇ ನನ್ನ ಅಣ್ಣ ಅಂದ್ಕೊಂಡ್ ಕೇಳ್ತಿದ್ದೀನಿ. ದಯವಿಟ್ಟು ಈ ಕುಡಿತ ಗಿಡಿತ ಎಲ್ಲಾ ಬಿಟ್ಟು ಓದು ಬರಹ ಕಲ್ಯೋಕ್ ಬಾ. ನನ್ ಮಾತ್ ನಡಿಸ್ ಕೊಡ್ತೀಯಾ?”

ಹುಚ್ಚೀರ ಗದ್ಗದಿತನಾದ. ಸೂರ್ಯನ ಕೈಯ್ಯನ್ನು ಕಣ್ಣಿಗೊತ್ತಿಕೊಂಡ. ಕಣ್ಣೀರು ಹರಿದು ಸೂರ್ಯನ ಕೈ ತೊಳೆಯಿತು. ಅದೇ ಕೈಹಿಡಿದು ಭಾಷೆ ಕೊಟ್ಟ- “ನಾನ್ ಇನ್ ಮ್ಯಾಕ್ ಕುಡ್ಯಾಕಿಲ್ಲ” ಎಂದು ಆತನ ಮನಸ್ಸು ಮಾತಾಡಿತ್ತು.

ಹುಚ್ಚೀರನನ್ನು ಸಾಂತ್ವನಗೊಳಿಸಿದ ಸೂರ್ಯ, ಅಂದು ರಾತ್ರಿ ದೇವಾಸ್ಥಾನದಲ್ಲಿ ಚಂದ್ರ, ರಕ್ತಕಾರಿ ಸತ್ತ ವಿಷಯವನ್ನು ನನಪಿಸಿದ. ನನಗೆ ಸತ್ಯ ಗೊತ್ತಾಗಬೇಕು- ಎಂದು ಒತ್ತಾಯಪೂರ್ವಕವಾಗಿ ಹೇಳಿದ. ಅಂದಿನ ನೆನಪು ನುಗ್ಗಿದ ಕೂಡಲೇ ಹುಚ್ಚೀರನ ತುಟಿ ಅದುರಿದವು. ಕಣ್ಣು ಚಡಪಡಿಸಿದವು. ನಾಲಗೆ ಏನೋ ಹೇಳಲು ಒದ್ದಾಡಿತು. ಮುಖದ ತುಂಬ ಬೆವರು. ಕಳವಳದ ತವರು. ಆದರೆ ಒಳಗಿನ ಭಾವ ಹೂರಗಿನ ಭಾಷೆಯಾಗಲಿಲ್ಲ. ಆಗುವಂತಿರಲಿಲ್ಲ. ಕಡಗೆ ಸೂರ್ಯ ತನ್ನಲ್ಲಿ ತಾನೇ ಸಮಾಧಾನ ಮಾಡಿಕೂಂಡ. ಹುಚ್ಚೀರನನ್ನೂ ಸಂತೈಸಿದ. ಒಂದಲ್ಲ ಒಂದು ದಿನ ಸತ್ಕ ಹೂರಬರಲೇಬೇಕು- ಎಂಬ ನಿರೀಕ್ಷೆ, ವಿಶ್ವಾಸ ಆತನಲ್ಲಿತ್ತು.

ಸಣ್ಣೀರನಿಗೆ ಸೂರ್ಯನನ್ನು ಮಾತನಾಡಿಸುವ ಧೈರ್ಯವಾಗದೆ ನವಾಬ್ ಬಳಿಗೆ ಬಂದ. “ನವಾಬಣ್ಣ, ಸೂರ್ಯಪ್ಪ ಸಿಟ್ ಮಾಡ್ಕಂಡಿರ್‌ಬೇಕಲ್ವ?” ಎಂದು ಕೇಳಿದ. “ನೀನು ಶಾಲೇಗ್ ಬರೋದ್ ಕಡ್ಮೆ ಆಯ್ತಲ್ಲ ಸಣ್ಣೀರ. ಅದಕ್ಕೆ ಬೇಸರ ಆಗಿದೆ ಅಷ್ಟೆ ಅದೇನ್ ಸಿಟ್ಟಲ್ಲ” ಎಂದು ನವಾಬ್ ಸಮಾಧಾನದಿಂದ ಮಾತಾಡಿದ. ಮತ್ತೆ ಶಾಲೆಗೆ ಸರಿಯಾಗಿ ಬಂದರೆ ಎಲ್ಲವೂ ಸರಿಹೋಗುವುದೆಂದು ಬುದ್ಧಿ ಹೇಳಿದ.

ರಾತ್ರಿ, ಹುಚ್ಚೀರ ಮತ್ತು ಸಣ್ಣೀರ ಇಬ್ಬರೂ ಶಾಲೆಗೆ ಬಂದರು. ಸೂರ್ಯನಿಗೆ ಸಂತೋಷವಾಯಿತು. ಕುಡಿತದ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಅದರ ಬದಲು ಮೂಢನಂಬಿಕೆಯ ಬಗ್ಗೆ ಮಾತನಾಡಿದ. ಬುಡಕಟ್ಟಿನ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಹೋಗಿ ಮದುವೆಯ ಮೊದಲರಾತ್ರಿ ಕಳೆಯುವುದು ಸರಿಯಲ್ಲವೆಂದೂ ಇದರ ಹಿಂದೆ ಏನೋ ರಹಸ್ಯವಿದೆಯಂದೂ ತಿಳಿಸಿದ. ಯಾರೂ ಮಾತಾಡಲಿಲ್ಲ. ಆಗ ಸೂರ್ಯ ಈ ವಿಷಯವನ್ನು ಹೆಚ್ಚು ಲಂಬಿಸುವುದು ಸರಿಯಲ್ಲವೆಂದು ಭಾವಿಸಿ “ನವಾಬ್, ನೀನು ಪಾಠ ಮುಂದುವರ್‍ಸು. ನಾನಿಲ್ಲೆ ಹೊರ್‍ಗಡೆ ಇರ್‍ತೀನಿ” ಎಂದು ಹೇಳಿ ಹೊರಬಂದ. ಸೂರ್ಯನಿಗೆ ಬೇಸರವಾಗಿ ಹೊರಹೋಗಿರಬೇಕೆಂದು ಭಾವಿಸಿದ್ದಳು- ಶಬರಿ. ಆಕೆಯ ಮನಸ್ಸು ಆತನ ಹಿಂದೆಯೇ ಹೋಯಿತು.

ನವಾಬ್ ಜೊತೆ ಜನರು ತುಂಬಾ ಸಲಿಗೆಯಿಂದ ಬೆರೆಯುತ್ತಿದ್ದರು. ಸೂರ್ಯ ಎಷ್ಟೇ ಸಲಿಗೆಯಿಂದ ಸಮೀಪವಾದರೂ ಇವರಿಗೆ ಆತನ ಬಗ್ಗೆ ಭಯಮಿಶ್ರಿತ ಗೌರವವಿತ್ತು. ‘ತುಂಬಾ ತಿಳಿದೋನು. ಆತನೇ ಶಾಲ ಮುಖ್ಯಸ್ಥ’ ಎಂಬಂಥ ಭಾವನೆಯಲ್ಲಿ ಏನೆಂದರೆ ಅದನ್ನು ಆತನ ಬಳಿ ಮಾತನಾಡುತ್ತಿರಲಿಲ್ಲ. ಆದರೆ ನವಾಬನ ವಿಷಯದಲ್ಲಿ ಹಾಗಲ್ಲ. ಸೂರ್ಯನಿಗಿಂತ ಈತ ಕಿರಿಯ; ಆತನಂತೆ ಮುಖ್ಯಸ್ಥನಲ್ಲ- ಎಂಬ ಭಾವನ ಇವರದು. ಹೀಗಾಗಿ ಎಲ್ಲರೂ ‘ನವಾಬಣ್ಣ ನವಾಬಣ್ಣ’ ಎಂದು ಈತನ ಹತ್ತಿರ ಸುಳಿದಾಡುತ್ತಿದ್ದರು. ತಪ್ಪು-ಸರಿಗಳ ಬಗ್ಗೆ ಮಾತಾಡಿ ಅಕ್ಷರ ಮತ್ತು ಪದಗಳನ್ನು ತಿದ್ದಿಸಿಕೊಳ್ಳುತಿದ್ದರು. ಗೌರಿಗಂತೂ ನವಾಬನ ಹತ್ತಿರ ಬರಲು ಸದಾ ತವಕ. ಹೀಗಾಗಿ ಕೆಲವರ ತಮಾಷೆಗೂ ತುತ್ತಾಗಿದ್ದಳು. ಕೆಲವು ಹೆಂಗಸರು “ನವಾಬಣ್ಣೊ ಉಸಾರು ಗೌರಿ ಗಾಳಿ ಬೀಸ್ ಬಿಟ್ಟು ಏನೇನೊ ಆಗ್ಬಿಟ್ಟಾತು” ಎಂದು ಗೌರಿಯ ಎದುರೇ ತಮಾಷೆ ಮಾಡಿದ್ದರು. ಗೌರಿ “ಯೇ ನಗ್ಸಾರಾಟ ಆಡ್ ಬ್ಯಾಡ್ರಿ” ಎಂದು ನಾಚಿಕೊಂಡಿದ್ದಳು. ಒಟ್ಟಾರೆ ಹೆಂಗಸರಿಗಂತೂ ನವಾಬ್ ಅಕ್ಕರೆಯ ‘ಅಣ್ಣ’ ಆಗಿಬಿಟ್ಟಿದ್ದ. ಹಿರಿಯರೂ ಈತನನ್ನು “ನವಾಬಣ್ಣ” ಎಂದೇ ಕರೆಯುತ್ತಿದ್ದರು.

ಹೀಗಾಗಿ, ಸೂರ್ಯ ಸೀರಿಯಸ್ಸಾಗಿ ಮಾತನಾಡಿ ಹೊರಹೋದಮೇಲೆ ನವಾಬನ ಜೊತೆ “ಅದು ಯಂಗೆ ಇದು ಯಂಗೆ” ಎಂದು ಸಲೀಸಾಗಿ ಕೇಳುತ್ತ ಮಾತಾಡತೊಡಗಿದರು. ನವಾಬ ಪ್ರತಿಯೊಬ್ಬರ ಬಳಿಯೂ ಹೋಗಿ ಅವರವರ ಸಮಸ್ಯೆ ತಿಳಿದುಕೊಂಡು ತಿಳಿಹೇಳಿದ. ತಿದ್ದಿದ. ಒಳಗೆ ನವಾಬ ಎಲ್ಲರ ಬಳಿ ಬೆರೆತು ಪಾಠ ಹೇಳುತ್ತಿದ್ದಾಗ ಸೂರ್ಯ ಹೂರಗೆ ಏಕಾಂಗಿಯಾಗಿದ್ದ.

ಕಾಡುವ ನೆನಪುಗಳು; ಕಷ್ಟದ ಹಾದಿಗಳು.

ತಾನು ಮನೆಬಿಟ್ಟು ಬಂದದ್ದು; ಅರೆಬರೆ ಹೂಟ್ಟೆಯಲ್ಲೇ ಓದಿದ್ದು; ಸಮಾಜ ಬದಲಾವಣೆಯ ಬದ್ಧತೆಗೆ ಒಳಗಾದದ್ದು, ಹೋರಾಟಗಳನ್ನು ಕಟ್ಟಿದ್ದು; ಸುಳ್ಳು ಆಪಾದನೆಗೆ ಒಳಗಾಗಿ ಜಾಮೀನು ಸಿಗದೆ ಈ ಕಡೆಗೆ ಬಂದದ್ದು… ಇಲ್ಲಿ ಚಂದ್ರನ ಸಾವು… ಶಬರಿಯ ಸ್ನೇಹ…

ತಲೆ ಚಿಟ್ಟು ಹಿಡಿದಂತಾಯಿತು.

ಹಾಗಾದರೆ ಇಲ್ಲಿ ಇರುವುದು ತಾತ್ಕಾಲಿಕವೆ? ಇದು ಕೇವಲ ನಿಲ್ದಾಣವೆ? ಹಾಗೆ ನೋಡಿದರೆ ಬದುಕಿನ ಎಲ್ಲ ಘಟ್ಟಗಳು ನಿಲ್ದಾಣಗಳೇ. ತನ್ನ ಮೇಲಿರುವ ಕೇಸು ಕೊನೆಯಾದ ಮೇಲೂ ಈ ಜಾಗವನ್ನು ಬಿಡಬಾರದು. ನಡುವೆಯೇ ಕೈಬಿಟ್ಟು ಹೇಗೆ ಹೋಗಲು ಸಾಧ್ಯ? ಆದರೆ, ತಾನೇ ಸದಾ ಪ್ರೇರಕಶಕ್ತಿಯಾಗುವ ಬದಲು ಜನರೇ ಶಕ್ತಿ ಪಡೆದು ನಾಯಕತ್ವಕ್ಕೆ ಸಿದ್ಧರಾಗಬೇಕು. ಹಾಗೆ ಆದಮೇಲೆ ಮುಂದಿನ ಪಯಣ. ಈ ಜನಗಳ ಭಾವಕೋಶದ ಭಾಗವಾಗಿ ಬೆಳೆದುಬಂದ ದೇವಸ್ಥಾನದ ಮೊದಲ ರಾತ್ರಿಯ ರಹಸ್ಯವನ್ನು ಬಯಲು ಮಾಡಿದರೆ ಇವರಿಗೆ ವಿರೋಧಿಗಳು ನಿಚ್ಚಳವಾಗುತ್ತಾರೆ. ಆಗ ಹಾದಿ ಸುಗಮವಾದೀತು. ಭೂಮಿ ನಮ್ಮದೆಂದು ಗಟ್ಟಿಯಾಗಿ ಹೇಳುವ ಮನಸ್ಸು ಮೂಡೀತು.

ಭೂಮಿಗೆ ಆಕಾಶದ ನಂಟು.
ಬೆವರನ್ನು ಕುಡಿದು ಭೂಮಿಗೆ ಆಕಾಶದ ಪ್ರಸಾದ ಬೇಕು.
ಕೊಡುವುದು ಭೂಮಿ; ಆಳುವುದು ಆಕಾಶ!
ಆಳುವ ಆಕಾಶಕ್ಕೆ ಆಳಾಗುವ ಭೂಮಿ! ಎಂಥ ವಿಪರ್ಯಾಸ!
ಆರ್ಥಿಕ ಸಮಸ್ಯೆಗೆ ಆಧ್ಯಾತ್ಮಿಕ ಲೇಪ;
ನಿರುತ್ತರ ನಂಬಿಕೆಗಳ ಕತ್ತಲ ಕೂಪ!

ಸೂರ್ಯ ಚಿಂತಿಸಿದ-ತನಗೆ ಕತ್ತಲ ಕೂಪವೆನ್ನಿಸಿದ್ದು ಅನೇಕರಿಗೆ ಬೆಳಕಿನ ರೂಪ! ಸಮಸ್ಯೆ ಇರುವುದೇ ಇಲ್ಲಿ. ನಂಬಿಕೆ. ಅಪನಂಬಿಕೆ, ಮೂಢನಂಬಿಕೆ- ಇವುಗಳ ವ್ಯತ್ಯಾಸದ ಗೆರೆ ಎಷ್ಟು ಸೂಕ್ಷ್ಮ! ನಮ್ಮ ಸಂದರ್ಭದ ಇಂಥ ಸೂಕ್ಷ್ಮಗಳನ್ನು ತಿಳಿಯದೆ, ಜನರೊಂದಿಗೆ ಬೆರೆಯದೆ ನಕಾರಾತ್ಮಕ ‘ಹೀರೊ’ ಆಗುವುದು ಇಲ್ಲಿ ಬಹು ಸುಲಭ. ಇಲ್ಲಿ ಹೀರೊ ಮತ್ತು ವಿಲನ್ಗಳ ನಡುವಿನ ಕಾದಾಟ ಮುಖ್ಯವೊ? ಜನರು ಮತ್ತು ಜನವಿರೋಧಿಗಳ ನಡುವಿನ ಹೋರಾಟ ಮುಖ್ಯವೊ?- ಸೂರ್ಯ ಸ್ಪಷ್ಟವಾಗುತ್ತ ಹೋದ.

ನಾಯಕತ್ವ ಬೇರೆ. ಹೀರೋಯಿಸಂ ಬೇರೆ.
ನಾಯಕ ಕೆಲವೂಮ್ಮೆ ಹೀರೊ ರೀತಿ ಕಾಣಿಸಬಹುದು. ಅದರೆ ಹೀರೊಗಳೆಲ್ಲ ನಾಯಕರಲ್ಲ. ನಾಯಕರು ಹೀರೊಗಳೇ ಆಗಬೇಕಿಲ್ಲ.

ಈ ಒಳಸಂಘರ್ಷವನ್ನು ಉಳಿಸಿಕೂಂಡರೆ ಉತ್ತಮ ನಾಯಕತ್ವ ಕೊಡಲು ಸಾಧ್ಯವಾದೀತು. ಅದಕ್ಕಾಗಿ ಕ್ಷಣಕ್ಷಣಕ್ಕೂ ಕಣ್ಣಾಗಿ, ಕಿವಿಯಾಗಿ, ಕಡೆಗೆ ಕರುಳಾಗಿ, ಕ್ರಯಾಶೀಲವಾಗುವುದು ಮುಖ್ಯ.

ಸೂರ್ಯ ತನ್ನೊಳಗೆ ತಾನು ಇಳಿಯುತ್ತಲೇ ಹೋದ. ಪಂಚೇಂಂದ್ರಿಯಗಳಲ್ಲಿ ಯಾವುದು ಅತಿರೇಕವಾದರೂ ಸರಿಯಲ್ಲವಲ್ಲವೆ ಎಂದು ಪ್ರಶ್ನಿಸಿಕೊಂಡ. ಕಣ್ಣು ಕಿವಿಗಳನ್ನು ಹಿಂದೆ ಹಾಕಿ ನಾಲಗೆ ಅತಿಯಾದರೆ ಸೂಕ್ಷ್ಮತೆ ಹೇಗೆ ಸಾಧ್ಯ? ನಾಲಗೆ ಮತ್ತು ಕಿವಿಗೆ ಸಂಬಂಧವಿಲ್ಲದಿದ್ದರೆ ಹೇಳುವ ಮತ್ತು ಕೇಳುವ ಕ್ರಿಯೆಯ ಸಮತೋಲನ ಹೇಗೆ ಲಭ್ಯ? ವಾಸನೆ ಹಿಡಿಯುವ ಮೂಗಿಗೆ ಮೌಢ್ಯ ಆವರಿಸಿದರೆ ಮುಗ್ಧತೆ ಎನ್ನುವುದು ಶೂನ್ಯ. ಚರ್ಮ ಕೆಲವರಿಗೆ ಸಮೀಪ, ಅನೇಕರಿಗೆ ದೂರವಾದರೆ ಈ ಅಂತರ ಎಷ್ಟು ಘೋರ!

ಹೋರಾಟ ಆರಂಭವಾಗಬೇಕಾದ್ದು ಇಲ್ಲಿ-ಈ ಪಂಚೇಂದ್ರಿಯಗಳ ಪ್ರತೀಕದಲ್ಲಿ. ಪೂರೆ ಕಟ್ಟಿದ ಪಂಚೇಂದ್ರಿಯಗಳು! ಹುಟ್ಟಿದ ಗಳಿಗೆಯಿಂದಲೇ ಕಟುವ ಪೊರೆ. ಹೀಗೆ ನೋಡಯಬೇಕು, ಹೀಗೆ ನುಡಿಯಬೇಕು, ಹೀಗೆ ಕೇಳಬೇಕು, ಇದು ಸುವಾಸನೆ, ಅದು ದುರ್ವಾಸನ, ಈತ ಸ್ಪರ್ಶಯೋಗ್ಯ, ಆತ ಅಲ್ಲ- ಹೀಗೆ ಸಿದ್ಧ ಮಾದರಿಯ ಪೊರೆ. ಪಂಚೇಂದ್ರಿಯಗಳ ಪೊರೆ ಕಳಚಿಕೊಂಡು ಸ್ವತಂತ್ರವಾಗುವುದೇ ಪ್ರಥಮ ಹೋರಾಟ. ಕಡಗೆ ಅದೇ ಅಂತಿಮ ಹೋರಾಟ. ವಿವಿಧ ಹೋರಾಟಗಳ ಮತ್ತು ವಿವೇಕಗಳ ಮೂಲಕ ಪೂರೆ ಕಳಚಿಕೊಳ್ಳುವ ಕ್ರಿಯೆ- ನಿರಂತರ ಪಕ್ರಿಯ.

ಸೂರ್ಯನ ಒಳಹಾದಿಯಲ್ಲಿ ಚಿಂತನೆಯ ಬಳ್ಳಿರೇಖೆ.
ಹೆಕ್ಕಿತೆಗೆಯುವ ಉತ್ಕಟತೆ.
ಈ ಶಬರಿಯ ಕಾರಣಕ್ಕೆ ಕಾಡುವ ಆ ಶಬರಿ.
ಆ ಶಬರಿ-ಪುರಾಣ, ಈ ಶಬರಿ- ಚರಿತ್ರೆ,
ಚರಿತ್ರಯೊಳಗೊಂದು ಪುರಾಣ ಸೇರುವುದು ಎಂಥ ವಿಚಿತ್ರ!

ಯೋಚಿಸುತ್ತ ಹೋದಂತೆ ಆ ಶಬರಜ್ಜಿ ಸೂರ್ಯನನ್ನು ಆವರಿಸಿಕೊಳ್ಳ ತೊಡಗಿದಳು. ಎಂತ ಅಂತಃಶಕ್ತಿ ಆಕೆಯದು!

ಶ್ರೀರಾಮನ ಕಾಯುವಿಕೆ; ಕಾಯುವುದರಲ್ಲೇ ಬಾಳುವಿಕೆ;
ಸಂಕಲ್ಪವೇ ಶಕ್ತಿಯಾದ ಶಬರಿ.
ಶ್ರೀರಾಮನಿಗೆ ಗುಡಿಕಟ್ಟಲಿಲ್ಲ; ತನಗಾಗಿ ಗುಡಿಸಲು ಕಟ್ಟಿಕೊಂಡಳು.
ಶ್ರೀರಾಮನಿಗೆ ಮಂತ್ರಪೂಜೆ ಮಾಡಲಿಲ್ಲ. ಹೂಬಿಡುವ ಗಿಡಬಳ್ಳಿ ಬೆಳೆದಳು.

ಶ್ರೀರಾಮನಿಗೆ ಭಕ್ಷಭಚೋಜ್ಯದ ಎಡಯಿಡಲಿಲ್ಲ. ಹಣ್ಣುಹಂಪಲು ತಿನ್ನಿಸಿದಳು.

ಶ್ರೀರಾಮನಿಗೆ ಕಣ್ಣು ಮುಚ್ಚಿ ತಪಸ್ಸು ಮಾಡಲಿಲ್ಲ; ಕಣ್ತೆರೆದು ಕಾಯುವ ಮನಸ್ಸಾದಳು.

ಶ್ರೀರಾಮನಿಗೆ ಪೂಜಾರಿಯಾಗಲಿಲ್ಲ; ತಾಯಿಯಾದಳು.
ಶಬರಿ ಸಿದ್ಧಮಾದರಿಗಳನ್ನು ಮೀರಿದಳು.
ಪಂಚೇಂದ್ರಿಯಗಳ ಪೂರೆ ಕಳಚಿದಳು.
ಈ ಶಬರಿ? ಶಬರಿ ಸಮೂಹ?
ಸಿದ್ಧವಾಗಬೇಕು; ಶಬರಜ್ಜಿ ಹೊಸದಾಗಿ ಒಳಗೆ ಹುಟ್ಟಬೇಕು.

ಸೂರ್ಯನಲ್ಲಿ ಉತ್ಸಾಹ ಚಿಮ್ಮಿತು.
ಸೀದಾ ಶಾಲೆಯ ಒಳಗೆ ಬಂದ.

ಪರಸ್ಪರ ಮಾತಾಡುತ್ತ ನವಾಬನೊಂಂದಿಗೆ ನಗುತ್ತ ಅಕ್ಷರ ಕಲಿಯುವ ಸಂತೋಷದಲ್ಲಿದ್ದವರು ಸೂರ್ಯನನ್ನು ನೋಡಿ ಗಪ್‍ಚುಪ್ಪಾದರು.

“ಯಾಕೆ? ಯಾಕ್ ಸುಮ್ನಾದ್ರಿ? ಮಾತಾಡಿ. ಮಾತಾಡ್ತ ಕಲುತ್ರಾಯ್ತು” ಎಂದು ಸೂರ್ಯ ಹುರಿದುಂಬಿಸಿದ. ಯಾರೂ ಮೂದಲಿನಂತೆ ಮಾತಾಡಲಿಲ್ಲ. ಶಬರಿ “ಮಾತಾಡ್ರಿ ಅಂಬ್ತ ಯೇಳಿರ್ ಮಾತಾಡಕೆಲ್ಲಾನ ಆಯ್ತದಾ? ಮಾತು ಅದ್ರಟ್ಕದೇ ಬರ್‍ಬೇಕು” ಎಂದಳು. ಎಷ್ಟು ಒಳ್ಳೆಯ ಮಾತು- ಎನ್ನಿಸಿತು ಸೂರ್ಯನಿಗೆ.

“ಆಯ್ತು. ಈಗ ನಾನೇ ಮಾತಾಡ್ತೀನಿ. ನಿಮ್ ಶಬರಜ್ಜಿ ಕತೆ ಹೇಳ್ತೀನಿ” ಎಂದು ಸೂರ್ಯ ಗಂಟಲು ಸರಿಪಡಿಸಿಕೊಂಡ.

ಕೂತಿದ್ದವರಿಗೆಲ್ಲ ಖುಷಿಯಾಯಿತು. “ಕತೆ ಅಂದ್ರೆ ಬಿಟ್ಟೇವಾ. ಬ್ಯಾಗ್ ಸುರು ಮಾಡಣ್ಣ” ಎಂದರು ಕೆಲವರು.

ಸ್ಲೇಟು, ಬಳಪ, ಪುಸ್ತಕಗಳನ್ನು ಎತ್ತಿಟ್ಟು ಕತೆ ಕೇಳಲು ಸಿದ್ಧರಾದರು.

ಸೂರ್ಯ, ಇಲ್ಲೀವರೆಗಿನ ತನ್ನ ಚಿಂತನೆಗೆ ಕತೆಯ ರೂಪ ಕೊಟ್ಟ. ಶಬರಿ ಗುಡಿಯನ್ನು ಕಟ್ಟದೇ ಕಾದದ್ದು; ಕಾಡಿನಲ್ಲಿ ಒಬ್ಬಳೇ ಇದ್ದರೂ ಎದೆಗುಂದದೆ ಬಾಳು ಸಾಗಿಸಿದ್ದು, ತಪಸ್ಸು ಮಾಡದೆ ತಪಸ್ವಿಯಂತಾದದ್ದು- ಎಲ್ಲವನ್ನೂ ರಂಜಕವಾಗಿ ಕತೆಯಾಗಿಸಿದ. ಕತೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ತಂದು ಅವುಗಳ ಜೊತೆ ಶಬರಿಯ ಸ್ನೇಹ ಹೇಗಿತ್ತು ಎಂಬುದನ್ನು ಉತ್ಸಾಹದಿಂದ ವಿವರಿಸಿದ.

ಕಡೆಗೆ ಶಬರಿಯ ಬಗ್ಗೆ ಒಂದು ಹಾಡು ಕಟ್ಟಿ ಹೇಳಿದ; ಹೇಳಿಸಿದ

“ಗುಡಿಯ ಕಟ್ಟಲಿಲ್ಲ ಮುಡಿಯ ಕಟ್ಟಲಿಲ್ಲ
ಮಡಿ ಮೈಲಿಗೆಯ ಮನಸು ಮೊದಲೇ ಇಲ್ಲ.
ಶಬರಜ್ಜಿ ನಮ್ಮ ಶಬರಜ್ಜಿ
ಸ್ವಾಭಿಮಾನದ ಅಜ್ಜಿ; ಸಾವಿಲ್ಲದ ಅಜ್ಜಿ…”

-ಹೀಗೆ ಸಾಗಿತ್ತು ಹಾಡು. ಎಲ್ಲರೂ ಹಾಡುತ್ತ ಎದ್ದರು; ಕುಣಿತದ ಹಜ್ಜೆ ಹಾಕಿದರು. ಮನಸ್ಸಿಗೆ ತುಂಬಿಕೊಂಂಡರು.

ಸೂರ್ಯ, ಶಬರಜ್ಜಿ- ಇಬರೂ ಸಿಮೀಪವಾಗಿದರು.

ಶಾಲೆ ಮುಗಿಸಿಕೊಂಡು ಹೋಗುವಾಗ ಎಲ್ಲರಿಗೂ ಅದೇ ಗುಂಗು.

‘ಗುಡಿಯ ಕಟ್ಟಲಿಲ್ಲ ಮುಡಿಯ ಕಟ್ಟಲಿಲ್ಲ…..”

ಎಂದು ಗುನುಗುತ್ತಲೇ ಇದ್ದರು.

ನವಾಬ್ ಸೂರ್ಯನನ್ನು ಕೇಳಿದ- “ಶಬರೀನ ನೀನು ಅರ್ಥ ಮಾಡಿಕೊಟ್ಟಿದ್ದು ನಿಜಕ್ಕೂ ಚೆನ್ನಾಗಿತ್ತು. ಅದ್ರೆ ನನಗೊಂದು ಅನುಮಾನ?”

“ಏನ್ ಗೆಳೆಯ ಅಂಥ ಅನ್ಮಾನ?”- ಸಡಗರದ ಭಾವದಲ್ಲಿದ್ದ ಸೂರ್ಯ ಅದೇ ಧಾಟಿಯಲ್ಲಿ ಕೇಳಿದ.

“ಶಬರಜ್ಜಿ ಜೀವನ ನಿಜವಾಗೂ ದೊಡ್ಡದು. ಗುಡಿ, ಮಡಿ, ಮಂತ್ರ, ಮೈಲಿಗೆ ಏನೂ ಇಲ್ದೆ ಶ್ರೀರಾಮನಿಗಾಗಿ ಕಾದದ್ದು, ಅದಕ್ಕೆ ನೀನ್ ಅರ್ಥ ಕೊಟ್ದದ್ದು ಎಲ್ಲಾ ಸರಿ. ಆದ್ರೆ ನಾನೂ-ನೀನೂ ಸಂಘರ್ಷದಲ್ಲಿ, ಅದ್ರಲ್ಲೂ ಸೈದ್ಧಾಂತಿಕ ಸಂಘರ್ಷದಲ್ಲಿ ನಂಬಿಕೆ ಇರೋರು. ಅಂಥಾದ್ರಲ್ಲಿ ಶಬರಿ ನಮ್ ಆದರ್ಶ ಆಗೋದು ಹೇಗ ಸಾಧ್ಯ?”- ನವಾಬ್ ತನ್ನ ಪ್ರಶ್ನೆಯನ್ನು ಮುಂದಿಟ್ಟ.

“ಒಳ್ಳೆ ಪ್ರಶ್ನ ಗೆಳೆಯ”- ಸೂರ್ಯ ವಿವರಿಸಲು ಸಿದ್ಧನಾದ- “ಸಂಘರ್ಷ ಅನ್ನೋದು ಆರಂಭ ಅಲ್ಲ; ಅಂತಿಮವಾದ ಹಂತ. ನನ್ನ ಚಿಂತನೆ ಏನ್ ಗೊತ್ತ? ಸಂಘರ್ಷಕ್ಕೆ ಮೊದಲು ಶಬರಿಯಾಗ್ಬೇಕು. ಶಬರಿಯಾಗದ ಸಂಘರ್ಷ ಸಾಧ್ಯವಿಲ್ಲ.”

ನವಾಬ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಸೂರ್ಯನ ಜೊತೆ ನಡಯುತ್ತಲೇ ಚಿಂತಿಸಿದ. ಸೂರ್ಯನೂ ಸುಮ್ಮನಿದ್ದ. ತಾನಾಗಿ ಒತ್ತಾಯದ ಉತ್ತರ ಪಡೆಯುವುದು ಸರಿಯಲ್ಲವೆಂದು ಭಾವಿಸಿದ.

ಸ್ವಲ್ಪ ಹೊತ್ತಿನ ನಂತರ ನವಾಬ ಸೂರ್ಯನ ಕೈಹಿಡಿದು ಒತ್ತಿ ಹೇಳಿದ- “ಸೂರ್ಯ, ಯೂ ಆರ್ ಗ್ರೇಟ್.”

“ಛೇ! ಹಾಗೆಲ್ಲ ಅನ್ನಬೇಡ. ನನ್ನ-ನಿನ್ನ ನಡುವೆ ಅಂಥ ಮಾತು ಬರಬಾರದು” – ಸೂರ್ಯ ವಿನಯದಿಂದ ಸ್ಪಷ್ಟವಾಗಿ ನುಡಿದ.

“ಹಾಗಲ್ಲ ಸೂರ್ಯ, ನೀನು ಎಷ್ಟು ಆಳವಾಗಿ ಯೋಚಿಸಿದ್ದೀಯ! ಶಬರಿಯಾಗದೆ ಸಂಘರ್‍ಷ ಸಾಧ್ಯವಿಲ್ಲ-ಸತ್ಯ ಸೂರ್ಯ ಸತ್ಯ.” ಸೂರ್ಯ ನವಾಬನ ಮುಖ ನೋಡಿದ.

ಅದರಲ್ಲಿ ಆನಂದವಿತ್ತು; ಕಣ್ಣಲ್ಲಿ ಬೆಳಕಿತ್ತು.

ಜೊತೆಯಲ್ಲಿದ್ದವರು ಹಾಡುತ್ತಿದ್ದರು- “ಸಾವಿಲ್ಲದ ಅಜ್ಜಿ ಸ್ವಾಭಿಮಾನದ ಅಜ್ಜಿ.”

ಸೂರ್ಯ ಅಂದುಕೊಂಡ- ‘ಶಬರಿಗೂ ಸಾವಿಲ್ಲ; ಸಂಘರ್ಷಕ್ಕೂ ಸಾವಿಲ್ಲ’
* * *

ಹೊಲದ ಕೆಲಸ ಮಾಡುವಾಗ ಹೆಂಗಸರು ಶಬರಜ್ಜಿಯ ಹಾಡು ಹೇಳುತ್ತ ಆನಂದಿಸುತ್ತಿದ್ದರು. ರಾತ್ರಿಶಾಲೆಯಿಂದ ಬಂದ ಮೇಲೆ ಸೂರ್ಯನಿಂದ ಮತ್ತೂಮ್ಮೆ ಹಾಡು ಹೇಳಿಸಿಕೊಂಡಿದ್ದರು. ನವಾಬ್ ಹಾಡನ್ನು ಬರೆದುಕೊಂಡು ತಾನೂ ಹೇಳಿಕೊಟ್ಟಿದ್ದ. ಹೀಗಾಗಿ ಸಾಕಷ್ಟು ಬಾಯಿಪಾಠವಾಗಿದ್ದ ಹಾಡನ್ನು ಹೇಳುವುದರಲ್ಲಿ ಹೆಂಗಸರಿಗೆ ಆನಂದ. ಕೂಲಿ ಕೆಲಸದ ಅನಿವಾರ್ಯತೆಯ ನಡುವೆ ಹೊಸ ಆಸೆ ಚಿಗುರಿದಂತೆ ಹಾಡು ಅನುಭವವಾಗುತಿತ್ತು. ಕಲವು ಪದಗಳೊ, ಒಂದೆರಡು ಸಾಲೊ ತಪ್ಪಿದಾಗ ರಾಗಕ್ಕೆ ಹೊಂದುವಂತೆ ತಾವೇ ಸೇರಿಸಿ ಹಾಡುವಷ್ಟರ ಮಟ್ಟಿಗೆ ಅವರ ಉತ್ಸಾಹ ಚಿಮ್ಮುತ್ತಿತ್ತು.

ಒಡೆಯರ ಹೆಂಡತಿ ಸಾವಿತ್ರಮ್ಮ ಹೊಲದ ಕಡೆ ಬಂದಾಗ ಕೂಲಿ ಹೆಂಗಸರ ಹಾಡು ಕೇಳಿ ಅಚ್ಚರಿಯಿಂದ ಆಲಸಿದಳು. “ಏನ್ರೇ ಓದು ಬರಾ ಚಂದಾಗೇ ಕಲ್ತಂಗೈತೆ” ಎಂದು ಕೇಳಿದಳು. ಆಗ ಶಬರಿ “ಇದನ್ ಯೇಳಾಕೆ ಓದು ಬರಾ ಯಾಕವ್ವ; ಅಂಗೇ ಬತ್ತೈತೆ ಸರ್‍ಯಾಗ್ ಕಲ್ತ್‍ಕಂಡ್ರೆ” ಎಂದಳು. ಸಾವಿತ್ರಮ್ಮ “ಅದೂ ಸರಿ ಅನ್ನು. ಆದ್ರೂನೂವೆ ಸ್ಯಾಲೆ ಸುರುವಾಗಿದ್ಕೇ ಅಲ್ವ ಈ ಹಾಡ್ ಬಂದಿರಾದು” ಎಂದು ತನ್ನ ಮಾತಿಗೆ ಸಮರ್ಥನೆ ನೀಡಿದಳು.

“ಬರೀ ಆಡ್ ಬಂದ್ರೇನಾತವ್ವ. ನಮ್ಗೇನ್ ಸ್ಯಬರಜ್ಜಿ ತರಾ ಸ್ವಂತಕ್ ಬೂಮಿ ಐತಾ? ಅಣ್ಣು ಅಂಪ್ಲ ಬೆಳ್ಯಾಕಾಯ್ತದ?” ಎಂದು ಶಬರಿ ಸಹಜವಾಗಿ ಕೇಳಿದಳು.

ಸಾವಿತ್ರಮ್ಮ ಮಾತಾಡಲಿಲ್ಲ.
ಶಬರಿ ಅಲ್ಲಿಗೇ ಬಿಡಲಿಲ್ಲ.

“ಯಾಕ್ರವ್ವ ಸುಮ್ಕೆ ನಿಂತ್ಕಂಡ್ರಿ? ನಾವು ಉಟ್ದಾಗಿಂದ ನಿಮ್ ವೊಲ್ದಾಗ್ ಕೆಲ್ಸ ಮಾಡ್ತಿದ್ದೀವಿ. ಕೂಲಿ ಕೆಲ್ಸಾನೆ ಬೂಮ್ತಾಯಿ ಪೂಜೆ ಅಂದ್ಕಂಡ್ ಬಂದಿದ್ದೀವಿ. ನಮ್ದು ಅಂಬ್ತ ಅಂಗೈಯಗಲ ಬೂಮಿಕಾಣಿ ಏನೂ ಇಲ್ಲ. ಯಾಕ್ರವ್ವ ಇಂಗೆ?”- ಶಬರಿ ಕೇಳಿದಳು.

“ಯಾಕೆ ಅಂದ್ರೆ ಏನೇಳಾನೇ ಸ್ಯಬರಿ. ಈ ಬೂಮೀಗೆ ಮದ್ಲಿಂದ ನಾವೇ ಒಡೇರು”- ಹೀಗೆ ಸಾವಿತ್ರಮ್ಮ ಹೇಳಿದ ಮಾತು ಕೇಳಿ ಶಬರಿ ತಣ್ಣಗಾಗಲಿಲ್ಲ.

“ಈಗದೇನೊ ಬಂದೈತಂತ್ರಲ್ಲವ್ವ ಉಳೋರ್‍ಗೆ ಒಡೆತನ ಕೊಡಾ ಕಾನೂನು…” ಎಂದು ಶಬರಿ ಹೇಳುವ ವೇಳೆಗೆ ನರಸಿಂಹರಾಯಪ್ಪ ಬರುವುದು ಕಾಣಿಸಿ ಸಾವಿತ್ರಮ್ಮ “ಅವ್ರ್ ಬತ್ತಾ ಅವ್ರೆ” ಎಂದಳು. ಆದರೆ ಶಬರಿಯೊಳಗೆ ಹಾಡಿನ ಹುಮ್ಮಸ್ಸು ಬತ್ತಿರಲಿಲ್ಲ. ಹೀಗಾಗಿ ಹಿಂಜರಿಯಲಿಲ್ಲ. “ಒಡೇರ್‍ನ ಕೇಳ್ತೀನಿ. ಎನೋ ನಮ್ದು ಒಸಿ ಬೂಮಿ ಸಿಗಂಗಿದ್ರೆ ಯಾಕ್ ಬ್ಯಾಡ ಅಂತೀರವ್ವ” ಎಂದಳು. ಸಾವಿತ್ರಮ್ಮ “ನಿಂದ್ ಒಳ್ಳೇ ಕತ್ಯಾತಲ್ಲ. ನಾನ್ಯಾಕೆ ಬ್ಯಾಡ ಅಂಬ್ಲಿ. ಎಲ್ಲಾ ಈ ಗಂಡುಸ್ರುದೇ ವ್ಯವಾರ. ಈಟಕ್ಕೂ ನಾನೇನ್ ಕೊಡಾಳ ತಗಂಬಾಳ?” ಎಂದು ಸಮಜಾಯಿಷಿ ನೀಡಿದಳು. ಶಬರಿಗೆ ಅದೇನನ್ನಿಸಿತೊ “ಅಂಗಂಬ್ತ ನೀವೇನ್ ನಮ್ಮಂಗ್ ಕೂಲಿ ಮಾಡಾಕಿಲ್ವಲ್ಲ” ಎಂದುಬಿಟ್ಟಳು. ಸಾವಿತ್ರಮನಿಗೆ ಸಿಟ್ಟು ಬಂತು, “ಯಾಕ ಆಟಂದ್ ಸದ್ರ ತಗಂಡ್ ಮಾತಾಡೀಯ. ಕಾನೂನ್ ಗೀನೂನು ಇದ್ರೆ ಅವ್ರತಾವ್ ಕೇಳು” ಎಂದು ಸಿಡುಕಿದಳು.

ಅಷ್ಟರಲ್ಲಿ ಅಲ್ಲಿಗೆ ಬಂದ ನರಸಿಂಹರಾಯಪ್ಪ “ಯಾತ್ರುದದು-ಕಾನೂನ್ ಗೀನೂನು ಅಂಬ್ತ ಹೊಸಾ ಮಾತ್ ಬರ್‍ತಾ ಐತೆ” ಎಂದು ಕೇಳಿದ. ಸಾವಿತ್ರಮ್ಮ “ಏನೋ ಈ ಸ್ಯಬರಿ ಕೇಳ್ತಾ ಇದ್ದಳು. ಇವ್ರಿಗೇನೊ ಬೂಮಿ ಬೇಕಂತೆ. ಕಾನೂನ್ ಐತಂತೆ” ಎಂದು ರಾಗ ಎಳೆದಳು. ನರಸಿಂಹರಾಯಪ್ಪ ದಿಗ್ಭ್ರಾಂತನಾದ. ಇವರ ಬಾಯಲ್ಲಿ ಕಾನೂನಿನ ಮಾತು! ದಿಗ್ಭ್ರಾಂತಿ ಸಿಟ್ಟಿಗೆ ತಿರುಗಿತು.

“ಏನ್ರೇ, ನೀವೇನ್ ಕೂಲಿ ಮಾಡಾಕ್ ಬಂದಿದ್ದೀರೊ ಕಾನೂನ್ ಕೇಳಾಕ್ ಬಂದಿದ್ದೀರೊ?” ಎಂದು ಅವಡುಗಚ್ಚಿ ಕೇಳಿದ.

ಯಾಕೋ ಆಯತಪ್ಪುತ್ತಿದೆಯೆಂಬ ಅಳುಕು ಕೂಲಿ ಹಂಗಸರಿಗೆ. ಬೆವರುತ್ತ ಶಬರಿಯ ಕಡೆ ನೋಡಿದರು.

“ಯಾರೊ ಅಂಗಂಬ್ತಿದ್ರು ಒಡೇರ, ದಿಟಾನೊ ಸಟೇನೊ ತಿಳ್ಕಮಾನ ಅಂಬ್ತ ಕೇಳ್ದೆ. ಆಟೇಯ”- ಶಬರಿ ಅಳುಕದೆ ಹೇಳಿದಳು.

“ಯಾವ್ ಬೋಳಿಮಗ ಇಂಗೇಳಿದ್ದು?”- ಒಡೆಯ ಕಿರುಚಿದ.

“ಅಂಗೆಲ್ಲ ವೊಲುಸ್ ಮಾತಾಡ್‍ಬ್ಯಾಡ್ರಿ ಒಡೇರ. ಒಳ್ಳೆ ಮನುಸ್ರು ಬಾಯಾಗ್ ಒಳ್ಳೆ ಮಾತ್ ಕೇಳಿದ್ದೀವಿ ನಾವು. ಅಂತೋರ್‍ನ ಬಾಯೋದಂಗ್ ಅನ್ಬ್ಯಾಡ್ರಿ”- ಶಬರಿ ನೇರವಾಗಿ ಹೇಳಿದಳು.

ಆಕೆಯ ದಿಟ್ಟತೆ ನೋಡಿ ಉಳಿದವರಿಗೆ ಅಚ್ಚರಿ; ಅವರಲ್ಲೂ ಆತ್ಮವಿಶ್ವಾಸ ಚಿಗುರತೊಡಗಿತು. ಆದರೆ ಒಡೆಯನಿಗೆ ಉರಿಹತ್ತಿತು.

“ನೀನ್ಯಾವಳೆ ಬೋಸುಡಿ ನನಿಗ್ ಬುದ್ದಿಯೇಳಾಕೆ? ಬಾಯೋದಂಗ್ ಮಾತಾಡಿರೆ ಸೀರೆ ಕಿತ್ತಾಕ್ ಬಿಡ್ತೀನಿ” ಎಂದು ಗರ್‍ಜಿಸಿದ. ತಕ್ಷಣ ಸಾವಿತ್ರಮ್ಮ ಮಧ್ಯ ಪ್ರವೇಶಿಸಿದಳು. “ಕೂಲೇರತ್ರೆಲ್ಲ ಜಗಳಾಡಿದ್ರೆ ನಿಮ್ದೇನುಳೀತೈತೆ, ನಡ್ನಡಿರಿ ಸುಮ್ಕೆ” ಎಂದು ಒತ್ತಾಯಪೂರ್ವಕವಾಗಿ ಕರದೊಯ್ದಳು.

ಒಡೆಯ ನರಸಿಂಹರಾಯಪ್ಪ ಬುಸುಗುಡುತ್ತ ಹೋದ.

ಶಬರಿ, ಉಳಿದ ಹೆಂಗಸರಿಗೆ ಹೊಸದಾಗಿ ಕಂಡಳು.

ರಾತ್ರಿಶಾಲೆಯಲ್ಲಿ ಇದೇ ಮಾತು. ಸೂರ್ಯ ಸಂದರ್ಭಕ್ಕೆ ತಕ್ಕಂತೆ ಮಾತನಾಡಿದ. “ಭೂಮಿಗೆ ಬೆವರು ಹರ್‍ಸೋ ಜನರು ನೀವು. ಆ ಭೂಮಿ ನಿಮಗೇ ಸೇರ್‍ಬೇಕು. ನಿಮ್ ಪಾಲನ್ನ ನೀವ್ ಕೇಳ್ಲೇಬೇಕು. ಶಬರಿ ಒಬ್ಬಳು ಕೇಳಿದ್ರೆ ಸಾಲ್ದು, ಎಲ್ರೂ ಕೇಳ್ಬೇಕು.”

ಆಗ ನವಾಬ ಅತ್ಯುತ್ಸಾಹದಲ್ಲಿ ಕರೆನೀಡಿದ- “ಒಟ್ಟಿಗೇ ಜಗ್ಗಿಸ್ ಕೇಳ್ಬೇಕು. ಏನ್ ಬಂದ್ರೂ ಎದುರಿಸೋದಿಕ್ಕೆ ಸಿದ್ಧ ಆಗ್ಬೇಕು…”

ಸೂರ್ಯ ತಡೆದು ಹೇಳಿದ- “ಅದಕ್ಕೂ ಕಾಲ ಬರ್‍ಬೇಕು ಗೆಳೆಯ. ಕಾಲ ಬರ್‍ಬೇಕು ಅಂದ್ರೆ ಎಲ್ರೂ ಪಕ್ವ ಆಗ್ಬೇಕು ಅಂತ. ಆತುರ ಮಾಡಿ ಹಾಳ್ಮಾಡ್ಕೋಬಾರ್‍ದು.”

ನವಾಬನಿಗೆ ತನ್ನ ಉತ್ಸಾಹದಲ್ಲಿದ್ದ ಆತುರ ಅರ್ಥವಾಯ್ತು. “ನಿಜ. ನೀನ್ ಎಷ್ಟಾದ್ರೂ ನನಗಿಂತ ಅನುಭವ ಇರೋನು. ನನಗೆ ಒಂಥರ ಥ್ರಿಲ್ ಆಯ್ತು. ಅದಕ್ಕೇ ಹಾಗೇಳ್ಬಿಟ್ಟೆ ಸಾರಿ” ಎಂದು ಎಷಾದಿಸಿದ.

“ಅದು ತಪ್ಪೇನಿಲ್ಲ ಬಿಡು. ತುಂಬಾ ಲಕ್ಕಾಚಾರನೂ ಹಾಕ್ಬಾರದು. ಥ್ರಿಲ್ ತಗೊಳ್ಳೊ ಮನೋಭಾವಾನೂ ಇರಬಾರದು. ಬದಲಾವಣೆ ಪರವಾಗಿ ಬದ್ಧತೆ ಇರ್‍ಬೇಕು. ನಿನ್ನ ಬದ್ಧತೇನ ಯಾರೂ ಪ್ರಶ್ನೆ ಮಾಡೋಹಾಗಿಲ್ಲ. ಆದ್ರಿಂದ ನೀನು ಸಾರಿಗೀರಿ ಅಂತ ಹೇಳ್ಬಾರದು ಗೆಳೆಯ” ಎಂದು ಸೂರ್ಯ ಹೇಳಿದಾಗ ನವಾಬನ ಮನಸ್ಸು ತುಂಬಿ ಬಂತು.

ಆದರೂ ಶಬರಿ ಹೇಳಿದಳು- “ನವಾಬಣ್ಣ ಯೇಳಾದ್ರಗೇನೂ ತಪ್ಪಿಲ್ಲ”.

ಸೂರ್ಯ ಹೇಳಿದ-“ತಪ್ಪು ಅಂತ ನಾನೆಲ್ ಹೇಳ್ದೆ. ಯಾರ್‍ಗೂ ಆತುರ ಬೇಡ ಅಂದೆ. ಅಷ್ಟೆ.”

“ಹಂಗಂಬ್ತ ಸುಮ್ಕೆ ಇರಾಕಾಯ್ತದ? ಕಬ್ಬಿಣ ಕಾದಾಗ್ಲೆ ಕುಟ್ಬೇಕು” ಎಂದಳು ಶಬರಿ. ಆಕೆಯ ಮನಸಿನಲ್ಲಿ ಒಡೆಯನ ಬಯ್ಗಳು ಘಾಸಿಮಾಡಿತ್ತು.

ಇಲ್ಲೀವರೆಗೆ ಸುಮನಿದ್ದ ಸಣ್ಣೀರ ಬಾಯಿಬಿಟ್ಟ- “ಕಬ್ಬಿಣ ಕಾದಾಗ್ಲೇ ಕುಟ್ಬೇಕು ಅಂಬಾದೇನೊ ನಿಜ ಕಣವ್ವ, ಆದ್ರೆ ಏಳ್ತಿಂಗಳೀಗ್ ವುಟ್ದೋರ್ ತರ ಆಡ್ಬಾರ್‍ಬು. ಎತ್ತ್ ಏರ್‍ಗೆಳೀತು ಕ್ವಾಣ ನೀರ್‍ಗೆಳೀತು ಅನ್ನಂಗಾದ್ರೆ ಏನ್ ಮಾಡಾದು?” ಎಂದು ಕೇಳಿದ.

“ಅಂಗಂಬ್ತ ಎಲ್ರೆದ್ರಿಗೂ ಬೋಸುಡಿ ಗೀಸುಡಿ ಅಂಬ್ತ ಬಯ್ಯಿಸ್ಕಬೇಕಾ? ಯೆಣ್ ಯೆಂಗುಸ್ರು ಅಂದ್ರೇನ್ ಬಿಟ್ಟಿ ಸಿಕ್ಕವ್ರಾ?” – ಶಬರಿಯ ಪ್ರಶ್ನೆ. ಬೇಸರದಿಂದ ಬಂದ ಪ್ರಶ್ನೆ.

ಆಗ ಕೂತಿದ್ದವರೆಲ್ಲ ಮಾತಾಡತೊಡಗಿದರು. ತಮತಮಗೆ ಅನ್ನಿಸಿದ್ದನ್ನು ಹೇಳತೊಡಗಿದರು. ಒಬ್ಬಾತ ಕೇಳಿದ – “ನಾವು ಕಾನೂನು ಅಂಬ್ತ ವೋದ್ರೆ ಒಡೇರ್ ನಮ್ ವೊಟ್ಟೆ ಮ್ಯಾಲ್ ಬಡೀತಾರೆ. ಕೂಲಿ ಮಾಡಕ್ ಬರ್ ಬ್ಯಾಡ್ರೋ ಬಡ್ಡಿಮಕ್ಕಳ ಅಂಬ್ತಾರೆ. ಆವಾಗ್ ಈ ಸ್ಯಬರಿ ಉಂಬಾಕಿಕ್ತಾಳ ನಮ್ಗೆಲ್ಲ?”

ಇನ್ನೊಬ್ಬ ಹೆಂಗಸು ಹೇಳಿದಳು – “ಇಂಗೆಲ್ಲ ಬಯ್ಯಿಸ್ಕಮಾದು ನಮ್ಗೇನ್ ವೊಸ್ದಾ? ಇವಾಗ್ಯಾಕ್ ಸುಮ್ಕೆ ಇಲ್ಲದ್ ರಗಳೆ?”

ನವಾಬ ತಕ್ಷಣ ಮಧ್ಯೆ ಪ್ರವೇಶಿಸಿದ- “ಶಬರೀನ ಏನೂ ಅನ್ಬೇಡಿ. ನಾಳೆ ನಿಮ್ಗೂ ಶಬರಿ ಥರಾನೇ ಅನ್ಸುತ್ತೆ” ಎಂದು ತಿಳಿಹೇಳಿದ.

ಆಗ ಗೌರಿ, ಶಬರಿಯ ಸಹಾಯಕ್ಕೆ ಬಂದಳು. “ಶಬರಿಗಂದ್ರೇನು, ನಮಗಂದ್ರೇನು ಎಲ್ಲ ಒಂದೇಯ. ಶಬರೀನ್ ಬೋಸುಡಿ ಅಂದ್ರೆ ನಮ್ಮನ್ನೂ ಅಂದಂಗೆ. ಶಬರಿ ಸೀರೇನ್ ಕಿತ್ತಾಕ್ತೀನಿ ಅಂದ್ರೆ ನಮ್ ಸೀರೇಗೂ ಕಯ್ಯಾಕ್ದಂಗೆ. ಇವತ್ತವ್ಳ್‍ಗೆ ನಾಳೆ ನಮ್ಗೆ. ಸುಮ್ಕೆ ಏನೇನೊ ಮಾತಾಡ್‍ಬ್ಯಾಡ್ರಿ” ಎಂದು ಮನಮುಟ್ಟುವಂತೆ ನೇರವಾಗಿ ನುಡಿದಳು.

ಆಗ ಮಾತಿಲ್ಲ, ಕತಯಿಲ್ಲ, ಮೌನ; ಒಳಗೆ ಮಂಥನ.

ನಿಧಾನವಾಗಿ ಒಬ್ಬಾಕೆ ಹೇಳಿದಳು- “ನೀನ್ ಯೇಳಾದು ಸರ್‍ಯಾಗೈತೆ ಕಣವ್ವ, ನಮ್ಗೂ ಮಾನ ಮರ್‍ವಾದೆ ಇರಾಕಿಲ್ಲ? ನಮ್ ಸೀರೆ ಸೆಳೀತೀನಿ ಅಂದಾಗ ಸುಮ್ಕಿದ್ರೆ ಇವ್ರೆಲ್ಲ ಗಂಡುಸ್ರು ಅನ್ನಿಸ್ಕಂಬ್ತಾರ?”

ಶಬರಿಗೆ ಮಾತು ಕಟ್ಟಿತು. ಇನ್ನೊಂದು ನೆಲೆಗೆ ಕರದೊಯ್ದಿತು.

“ದಿಟ ಕಣವ್ವ. ನಂಗೆ ತಾಳಿ ಕಟ್ದೋನ್ ಒಬ್ ಇದ್ದಿದ್ರೆ ಇಂಗ್ ಸುಮ್ಕೆ ಕುಂತಿರ್‍ತಿದ್ನಾ? ದಿಕ್ಕಿಲ್ಲ ದೆಸೆಯಿಲ್ಲ ಅಂಬ್ತ ಯಾರೇನ್ ಬೇಕಾರೂ ಅನ್ಬವ್ದಾ?” ಎಂದು ಹೇಳುತ್ತಾ ಶಬರಿಯ ಕಣ್ಣಲ್ಲಿ ನೀರು ಬಂತು. ಸೆರಗು ಮುಚ್ಚಿಕೊಂಡು ಅಳತೊಡಗಿದಳು.

ಸೂರ್ಯ “ಶಬರಿ…. ಸುಮ್ನಿರು ಶಬರಿ” ಎಂದರೂ ಸುಮ್ಮನಾಗಲಿಲ್ಲ. ಆಗ ನವಾಬ್ “ಶಬರೀಗ್ ಅವ್ಮಾನ ಆದ್ರೆ ಅದು ಎಲ್ರಿಗೂ ಆದಂಗೆ. ಏನ್ರಪ್ಪ ಏನಂತಿರಾ? ಎಲ್ರೂ ಹೌದು ಅಂತೀರ ಅಲ್ವ?” ಎಂದು ಕೇಳಿ ಒಗ್ಗಟ್ಟಿನ ಮಾತು ತರಲು ಯತ್ನಿಸಿದ.

ಹುಚ್ಚೀರ ಕಣ್ಣಲ್ಲಿ ನೀರು ತುಂಬಿಕೊಂಡು ಬೆಪ್ಪಾಗಿ ನೋಡುತ್ತಿದ್ದ. ಸಣ್ಣೀರ “ಎಲ್ಲಾನ ಉಂಟಾ? ನಾವ್ ಸ್ಯಬರೀನ್ ಬಿಟ್ಕೊಡಾಕಾಯ್ತದ? ಒಸಿ ಕಾದ್ ನೋಡಾನ ಅಂದ್ವಪ್ಪ ಆಟೇಯ” ಎಂದಾಗ, ಎಲ್ಲರೂ “ಊಂಕಣಪ್ಪೊ; ಊಂಕಣಪ್ಪೊ” ಎಂದು ಕೂಗಿದರು.

ಇದ್ದಕ್ಕಿದ್ದಂತ ಹೊಸ ವಾತಾವರಣ ಮೂಡಿತು. ಹಾಗೆ ನೋಡಿದರೆ ಸೂರ್ಯನೇ ಶಬರಿಯ ಮಾತುಗಳಿಂದ ಘಾಸಿಗೊಳಗಾಗಿದ್ದ. ಚಂದ್ರನನ್ನು ಕಳೆದುಕೊಂಡ ಶಬರಿಯ ಸಂಕಟ ಸೂರ್ಯನಲ್ಲಿ ಸುಳಿಯಾಗಿತ್ತು.

ನವಾಬ್ ಹೊಸ ವಾತಾವರಣದ ಜಾಡು ಹಿಡಿದ. “ಈಗ ಎಲ್ರೂ ಹಾಡ್‍ಹೇಳೋಣ” ಎಂದು ಶಬರಿಯ ಹಾಡು ಶುರು ಮಾಡಿದ:

‘ಗುಡಿಯ ಕಟ್ಟಲಿಲ್ಲ ಮುಡಿಯ ಕಟಲಿಲ್ಲ
ಮಡಿ ಮೈಲಿಗೆಯ ಮನಸು ಮೊದಲೇ ಇಲ್ಲ.
ಶಬರಜ್ಜಿ ನಮ್ಮ ಶಬರಜ್ಜಿ
ಸಾವಿಲ್ಲದ ಅಜ್ಜಿ; ಸ್ವಾಭಿಮಾನದ ಅಜ್ಜಿ…’
ಎಲ್ಲರೂ ಹೇಳತೂಡಗಿದರು. ನವಾಬ ಮುಂದುವರೆಸಿದ-

“ಭೂಮಿತಾಯಿಯ ಮಗಳು ಶಬರಜ್ಜಿ
ಆಕಾಶದ ನೆರಳು ಶಬರಜ್ಜಿ
ಭೂಮಿಗೆ ಬಾಗಿಲು ಬಾಳಿಗೆ ನೇಗಿಲು
ಸ್ವಾಭಿಮಾನದ ಅಜ್ಜಿ ಶಬರಜ್ಜಿ
ಸಾವಿಲ್ಲದ ಅಜ್ಜಿ ಶಬರಜ್ಜಿ…”

-ನವಾಬನ ಬಾಯಲ್ಲಿ ಅಲೆಯಲೆಯಾಗಿ ಹೊಮ್ಮುವ ಹಾಡು. ಎಲ್ಲರೂ ಹಾಡುತ್ತ ಹಳೆಯದನ್ನು ಹೂತು ಹೊಸದಾಗಿ ಅರಳುತ್ತಿರುವಂತೆ ಕಂಡರು.

ಹಾಡಿನ ಉತ್ಸಾಹದ ನಡುವೆ ಸೂರ್ಯನಲ್ಲಿ ಒಂಟಿವೇದನೆ.
ಚಂದ್ರನ ಬೆಳಕಲ್ಲಿ ಸೂರ್ಯ ಸಂವೇದನ!
* * *

ಎಲ್ಲರೂ ಹಟ್ಟಿ ತಲುಪಿದರು. ಕೆಲವರು ಕಟ್ಟೆ ಮೇಲೆ ಕೂತರು. ಗೌರಿ, ಶಬರಿ ಮುಂತಾದ ಹೆಂಗಸರೆಲ್ಲ ಗುಡಿಸಲು ಸೇರಿದರು. ಸೂರ್ಯ, ನವಾಬ್, ಸಣ್ಣೀರ, ಹುಚ್ಚೀರ ಮುಂತಾದ ಗಂಡಸರು ಕಟ್ಟೆಯಲ್ಲಿ ಅದೂ ಇದೂ ಮಾತಾಡುತ್ತಿರುವಾಗ ಪೂಜಾರಪ್ಪ ಬಂದ.

“ಏನ್ ಎಲ್ರೂ ಬಾಳ ಮಾತಾಡ್ತ ಕುಂತಿದ್ರಿ? ಏನ್ ಸಮಾಸಾರ?” ಎಂದು ಗಡದ್ದಾಗಿ ಕೇಳಿದ.

“ನಮ್ದೇನಿರ್‍ತೈತ ಸಮಾಸಾರ? ಒಡೇರ್ ಸವಾಸ್ದಾಗಿರಾ ನಿಂದಪ್ಪ ಎಲ್ಲ ಸಮಾಸಾರ” ಎಂದ ಒಬ್ಬಾತ.

“ಸರ್‍ಯಾಗೇಳ್ದೆ ಕಣ್ಲ. ಈಟ್ ಬುದ್ಧಿ ಎಲ್ಲಾರ್‍ಗೂ ಇದ್ರೆ ಗಾಳಿಗಂಟ್ಲೆ ಇರಾಕಿಲ್ಲ ನೋಡು. ನೀನೇಳ್ದಲ್ಲ ಒಡೇರ್ ಸವಾಸ ಅಂಬ್ತ. ಯಾಕ್ ನಂಬ್ತಾರೆ ಯೇಳು ಅವ್ರು? ಈ ಅಟ್ಟಿ ಜುಟ್ಟೆಲ್ಲ ನನ್ನ ಕೈಯ್ಯಾಗೈತೆ ಅಂಬ್ತ ಗೊತ್ತು ಅವ್ರ್‌ಗೆ. ಅದ್ಕೇ ನಂಗೆ ಗೋರ್‍ವ ಕೊಡ್ತಾರೆ ಗೋರ್‍ವ. ಈಗ್ ನೋಡು ನಿಂತ್ ನಿಲುವಿಗೇ ಬಾ ಅಂಬ್ತ ಯೇಳ್ಕಳ್ಸವ್ರೆ. ಇಟ್ಟುಂಡ್ ವೋಗಾವ ಅಂಬ್ತ ಬಂದೆ. ಪಾಪ! ಒಡೇರ್‍ಗೇನ್ ಕಷ್ಟ ಬಂತೈತೊ ಏನೋ” ಎಂದು ಪೂಜಾರಪ್ಪ ಯಾರ ಮಾತಿಗೂ ಅವಕಾಶ ಕೊಡದೆ ಒಂದೇ ಸಮ ಒದರಿ ಮನೆಯೊಳಗೆ ಹೋದ.

ಕೂತವರೆಲ್ಲ ಮುಸಿಮುಸಿ ನಕ್ಕರು.
ಮಾತುಕತೆ ಮುಂದುವರೆಯಿತು. ಸೂರ್ಯ ತನ್ನಾರಕ್ಕೆ ತಾನು ಕೂತಿದ್ದ. ನವಾಬನೇ ಅವರೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ್ದ.

ತನ್ನೊಳಗೆ ತಾನು ಕಳೆದುಹೋದಂತಿದ್ದ ಸೂರ್ಯ ಇದ್ದಕ್ಕಿದ್ದಂತೆ ಎದ್ದ. “ನೀನ್ ಮಾತಾಡ್ತ ಇರು ಗೆಳೆಯ?” ಎಂದು ಗುಡಿಸಲು ಕಡಗೆ ಬಂದ.

ಒಳಗೆ ಶಬರಿಯ ಸಂಕಟ. ಆ ಒಡೆಯ ಸೀರೆ ಸೆಳೀತೀನಿ ಅಂದದ್ದು ಅದರ ಬಗ್ಗೆ ಶಾಲೆಯಲ್ಲಿ ಮಾತುಕತೆಯಾದದ್ದು. ತಾನು ಗಂಡ ಅಂತ ಒಬ್ಬ ಇದ್ದಿದ್ದರೆ… ಎಂದೆಲ್ಲ ಮಾತಾಡಿದ್ದು-ನೆನಪುಗಳು ನುಂಗುತ್ತ ಹೋದಂತೆ ಶಬರಿ ಕುಸಿದಳು. ಚಂದ್ರನ ಫೋಟೋವನ್ನು ದಿಟ್ಟಿಸಿದಳು. ಚಂದ್ರನೆ ಇಲ್ಲದ ಮೇಲೆ ಇದು ಯಾಕೆ? ಈ ಚಿತ್ರ ನೆನಪಿನ ಪಾತ್ರ ವಹಿಸುತ್ತೇ; ಒಳಗೆಲ್ಲ ದಹಿಸುತ್ತೆ.

ಬೇಡ, ಬಿಸಿಲು ಬೆಳದಿಂಗಳ ಕುಂಟೆಬಿಲ್ಲೆಯಾಟ ಬೇಡ.
ಕುಂಟೆಬಿಲ್ಲೆಯಾಟದ ಕೂನೆಯ ಮನೆ ಸೇರಲು ತೊಡರುಗಾಲು ಬೇಡ.
ನೆನಪುಗಳ ಕಾಡಲಿ ಕಿಚ್ಚು ಹತ್ತಿ ಹುಚ್ಚಾಗುವುದೆ?
ನೆನಪುಗಳ ಕಿಚ್ಚು ಹಚ್ಚಿ ಕಾಡಲ್ಲಿ ಹಾದಿ ಹುಡುಕುವುದೆ?
ಚಂದ್ರನ ಚಿತ್ರವನ್ನು ಉರಿಯುವ ಒಲೆಗೆ ಹಾಕಿದಳು.
ನೋಡುತ್ತ ನಿಂತಿದ್ದ ಸೂರ್ಯ ಅರಿವಿಲ್ಲದೆ ಆತಂಕದಲ್ಲಿ “ಶಬರಿ” ಎಂದು ಕೂಗಿದ. ಶಬರಿ ತಿರುಗಿ ನೋಡಿದಳು.

ಉರಿಯುವ ಒಲೆ.
ನೇಯುತ್ತಿರುವ ಬಲೆ.
ಕಿತ್ತೆಸೆದು ಬರುವಂತೆ ಎದ್ದಳು. ಸೂರ್ಯನ ಬಳಿಬಂದು ಹಿಡಿದು ಎದೆಮೇಲೆ ತಲೆಯಿಟ್ಟು ಅಳತೊಡಗಿದಳು.

ಸೂರ್ಯ ದಿಗ್ಭ್ರಾಂತನಾಗಿ ನಿಂತಿದ್ದ. ನಿಧಾನವಾಗಿ ಶಬರಿಯ ತಲೆ ನೇವರಿಸಿದ. ಹಾಗೇ ಒತ್ತಿ ಹಿಡಿದ. “ಅಳ್ಬೇಡ ಶಬರಿ ಅಳ್ಬೆಡ” ಎಂದ.

ಅವಳು ಒತ್ತಿ ಬರುವ ಅಳುವನ್ನು ತಡೆಯುತ್ತ “ನಾನ್ ಒಬ್ಬಂಟಿ… ಒಬ್ಬಂಟಿ” ಎಂದು ತಡವರಿಸುತ್ತ ಹೇಳಿದಳು.

ಸೂರ್ಯ ಹೇಳಿದ – “ಇಲ್ಲ ಶಬರಿ. ನಾನ್ ಇದ್ದೀನಿ. ಅಳ್ಬೇಡ” ಎಂದು ಸಮಾಧಾನಿಸಿದ. ಹಾಗೆಯೇ ಅಪ್ಪಿ ಹಿಡಿದ.

ಭಾರ ಇಳಿದಂಥ ಅನುಭವದಲ್ಲಿ ಇಬ್ಬರೂ ಹಗುರವಾದರು.
“ಉಂಬಾಕಿಡ್ಲಾ?” ಎಂದು ಕೇಳಿದಳು. ಶಬರಿ.
“ಬೇಗ ಊಟ ಮಾಡಿ ನಾನ್ ಹೋಗ್ಬೇಕು.?”- ಸೂರ್ಯ ಹೇಳಿದ
ಶಬರಿಗೆ ಅಚ್ಚರಿ, “ಎಲ್ಲಿಗೆ” ಎಂದಳು.
“ಕೆಲ್ಸ ಇದೆ. ನಾಳೆ ಬಿಟ್ಟು ನಾಡಿದ್ ಬರ್‍ತೀನಿ.”
“ಇವಾಗ ಕತ್ತಲೊತ್ನಾಗ್ ವೋಗ್ಬೇಕಾ?”
“ಅಲ್ಲಿ ರಸ್ತೇಗೆ ಇನ್ನೊಬ್ ಗೆಳಯ ಬಂದಿರ್‍ತಾನೆ.”
“ಇದ್ಯಾಕ್ ನೀನು ಕತ್ತಲೊತ್ನಾಗೇ ವೋಗ್ತೀಯ, ಕತ್ತಲೊತ್ನಾಗೇ ಬತ್ತೀಯ?”
“ಕತ್ತಲಾದ್ರೇನು ಹಗಲಾದ್ರೇನು ನಂಗೆರಡೂ ಒಂದೇ.”
“ಎಲ್ಡೂ ಒಂದೇ ಅಂದ್‍ಮ್ಯಾಗೆ ಅಗಲುವೊತ್ನಾಗೇ ವೋದ್ರಾಗಕಿಲ್ವ?”
“ನೀನೂ ಬಹಳ ಜಾಣೆ ಆಗ್ಬಿಟ್ಟೆ!”- ಸೂರ್ಯ ಹಗುರವಾಗಿ ನಕ್ಕ.
“ಎಲ್ಲಾ ನಿನ್ ಸವಾಸ”- ನಾಚಿಕೆಯ ನಸುನಗೆಯಲ್ಲಿ ಹೇಳಿದಳು.
“ಏ ಕಳ್ಳಿ” ಎಂದು ಕೆನ್ನೆ ಚಿವುಟಿದ ಸೂರ್ಯ.
ಈ ವೇಳೆಗೆ ಸರಿಯಾಗಿ ನವಾಬ ಬಂದ.
“ಏನಪ್ಪ, ಹೂರಡಲ್ವ? ರಸ್ತೆವರ್‍ಗೂ ಬಿಟ್ಬರ್ತೀನಿ” ಎಂದ.
“ಊಟಮಾಡು. ಒಟ್ಟಿಗೇ ಹೋಗೋಣ?” ಎಂದು ಸೂರ್ಯ ಹೇಳಿದಾಗ ನವಾಬ ನಗುತ್ತ “ಆ ಪೂಜಾರಪ್ಪ ಹೋಗೋವರ್‍ಗೂ ನಂಗಿವತ್ತು ಊಟ ಇಲ್ಲ” ಎಂದ.
“ಯಾಕೆ?”-ಸೂರ್ಯನ ಪ್ರಶ್ನೆ.
“ಇವತ್ತು ನನಗೆ ಗೌರಿ ಆತಿಥ್ಯ ಪೂಜಾರಪ್ಪ ಜಾಗ ಖಾಲಿ ಮಾಡಿದ್ ಮೇಲೇ ಅವ್ರ್‌ಮನೆಗೆ ನನ್ ಪ್ರವೇಶ. ಇದು ಗೌರಿ ಆದೇಶ.”
ಸೂರ್ಯ ಮೌನವಾದ. ತಾನೆತ್ತ ಸಾಗಿದ್ದೇನೆ. ನವಾಬ ಎತ್ತ ಸಾಗಿದ್ದಾನೆ. ಯಾಕೆ ಹೀಗಾಗುತ್ತಿದೆ- ಎಂಬ ಪ್ರಶ್ನೆ ತಲೆಹೊಕ್ಕು ಕೂರೆಯತೊಡಗಿತು. ಸಮಾಜ ಬದಲಾವಣೆಯ ಆಸೆ ಹೊತ್ತವರು ಪ್ರೀತಿಪ್ರೇಮದಲ್ಲಿ ಮುಳುಗುತಿದ್ದೇವಯೆ? ಇದು ಸರಿಯೇ?…..
ಶಬರಿ ಊಟಕ್ಕೆ ಕರೆದಳು.
ಸೂರ್ಯ ಮೌನವಾಗಿ ಕೂತ. ಊಟ ಮುಗಿಸಿದ. ಬಗಲು ಚೀಲವನ್ನು ಹೆಗಲಿಗೇರಿಸಿದ. “ಬರ್‍ತೀನಿ ಶಬರಿ” ಎಂದು ಹೊರಟ.
ದಾರಿಯಲ್ಲಿ ಸೂರ್ಯ-ನವಾಬ ಇಬ್ಬರೇ. ಉಳಿದವರು ಬರುತ್ತೇವೆಂದರೂ ಸೂರ್ಯ ‘ಬೇಡ’ ಎಂದ. ಬೆಳದಿಂಗಳು ಇರುವುದರಿಂದ ನವಾಬನಿಗೆ ಅಂಜಿಕೆಯಿಲ್ಲ ಎಂದು ಸಮಜಾಯಿಷಿ ನೀಡಿದ. ವಾಸ್ತವವಾಗಿ ತಾವಿಬ್ಬರೇ ಮಾತನಾಡಬೇಕಿತ್ತು. ತನ್ನ ಮೇಲಿರುವ ಕೇಸಿನ ಬಗ್ಗೆ ಮಾತುಕತೆಗಾಗಿ ಹೊರಟಿದ್ದ ಸೂರ್ಯನ ಜೊತೆ ನವಾಬ ಮೌನವಾಗಿ ನಡೆದಿದ್ದ. ಕಡೆಗೆ ಮೌನ ಮುರಿದು ಹೇಳಿದ- “ಸೂರ್ಯ, ಈ ಸಾರಿ ಹೇಗಾದ್ರೂ ಜಾಮೀನ್ ಸಿಗೋ ಹಾಗೆ ಮಾಡ್ಬೇಕು. ನಮ್ ಗೆಳೆಯರಿಗೆ, ವಕೀಲರಿಗೆ ಸರ್‍ಯಾಗ್ ಹೇಳು. ಹೀಗೆ ಎಷ್ಟು ದಿನಾಂತ ಇರೋದು? ಪೂರ್ತಿ ಕಾಡು ಸೇರಿ ಕಾರ್ಯಾಚರಣೆ ಮಾಡ್ಬೇಕಾ, ಊರಲ್ಲಿದ್ದೇ ಹೋರಾಟ ನಡುಸ್ಬೇಕಾ- ನಿನ್ ಕೇಸಲ್ಲಿ ಒಂದ್ ತೀರ್ಮಾನ ಆಗ್ಲಿ.”

“ಅದ್ಸರಿ ಗೆಳೆಯ. ಊರಲ್ಲಿದ್ದು ಹೋರಾಟ ಮಾಡೋಕೆ ಅಧಿಕಾರಶಾಹಿ ಅವ್ಕಾಶ ಕೊಡುತ್ತ? ಹಾಗಿದ್ದಿದ್ರೆ ನನ್ ಮೇಲೆ ಸುಳ್ಳು ಕೇಸ್ ಹಾಕ್ತಾ ಇತ್ತ? ನಾನು ಎಲ್ಲರ ಹಾಗೆ ಮರವಣಿಗೇಲಿ ಘೋಷಣೆ ಕೂಗೋಕ್ ಬಂದೋನು; ಧರಣಿ ಕೂತೋನು. ಸತ್ಯಾಗ್ರಹ ನಡಿಸ್ದೋನು. ಆದ್ರೆ ನನ್ನನ್ನ ನಾನೇ ಮೀರೋ ಹಾಗೆ ಮಾಡಿದ್ದು ಯಾರು? ವ್ಯವಸ್ಥೆ ಗೆಳೆಯ ಈ ವ್ಯವಸ್ಥೆ. ಹೋರಾಟದ ಒಂದೊಂದು ಹಂತಾನೂ ಮೀರಿ ಮುಂದಿನ ಹಾದಿ ಹಿಡ್ಯೋ ಒತ್ತಡ ತಂತು. ಈಗ ನೋಡು ಕೊಲೆ ಕೇಸು. ಇದೆಂಥ ಪ್ರಜಾಪ್ರಭುತ್ವ?” ಸೂರ್ಯನ ಭಾವ ವಲಯ ಬುದ್ಧಿಯೊಡನೆ ಬೆರೆತು ಭಾಷೆಯಾಗತೂಡಗಿತ್ತು. ನವಾಬ ನಡುವೆ ಮಾತನಾಡಲಿಲ್ಲ. ಸೂರ್ಯ ಅಂತರಂಗಕ್ಕೆ ತಡೆಯಾಗದಿರಲೆಂದು ಮೌನವಾಗೇ ಇದ್ದ. ಆದರೆ ವಿಚಿತ್ರವೆಂಬಂತೆ ಸೂರ್ಯನೂ ಮೌನವಾದ. ನವಾಬನಿಂದ ಪ್ರತಿಕ್ರಿಯೆ ನಿರೀಕ್ಷಿಸಿದ.

ಮಾತಿಲ್ಲದ ಹಾದಿ.
ಬಿರುಗಾಳಿಯಿಲ್ಲದ ಬಯಲು.

ಸೂರ್ಯನೇ ಮತ್ತೆ ಮಾತಾಡಿದ. “ಅದಿರ್‍ಲಿ ಬಿಡು. ಈಗ ನನಗೊಂದು ಪ್ರಶ್ನೆ ಕಾಡ್ತಿದೆ. ಹೋರಾಟದ ಹಾದಿ ಹಿಡಿದೋರ್‍ಗೆ, ಪ್ರೀತಿ-ಪ್ರೇಮ ಅಡ್ಡ ಆಗುತ್ತಾ?”

ನವಾಬನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಯಾಕ ಹೀಗೆ ಕೇಳುತ್ತಿದ್ದಾನೆ? ಈ ಪ್ರಶ್ನೆ ಯಾರಿಗೆ ಸಂಬಂಧಿಸಿದ್ದು? ಸ್ವಲ್ಪದರಲ್ಲೇ ಸುಧಾರಿಸಿಕೊಂಡು “ನಿನಗೆ ನನಗಿಂತ ಅನುಭವ ಜಾಸ್ತಿ ನೀನೇ ಹೇಳ್ಬೇಕಪ್ಪ? ಎಂದ.

ಸೂರ್ಯ ಗಂಭೀರವಾಗಿ “ಒಬ್ಬೊಬ್ಬರಿಗೆ ಒಂದೊಂದ್ರಲ್ಲಿ ಅನುಭವ ಜಾಸ್ತಿ” ಎಂದ.

“ನಿನ್ ಮಾತೇ ನಂಗರ್ಥ ಆಗ್ತಿಲ್ಲ?”- ನವಾಬ ಪ್ರಶ್ನಾರ್ಥಕವಾದ.

“ನಿಜವಾಗ್ಲೂ ನನ್ನದು ಮುಗ್ಧಪ್ರಶ್ನೆ. ನಿನಗೇನ್ ಅನ್ಸುತ್ತೊ ಅದನ್ನ ಹೇಳು”- ಸೂರ್ಯ ಒತ್ತಾಯಿಸಿದ.

ಗಾಢವಾದ ನವಾಬ್ ಕಡೆಗೆ ಹೇಳಿದ- “ಪ್ರೀತಿ-ಪ್ರೇಮ ಅನ್ನೋ ಭಾವನೇನ ಕಿತ್ತುಹಾಕಿ ಬದ್ಕೋಕಾಗುತ್ತ? ವಿವೇಕ, ಔಚಿತ್ಯ ಎರಡನ್ನೂ ಉಳಿಸ್ಕೂಂಡಿದ್ರೆ ಪ್ರೀತಿ-ಪ್ರೇಮ ಯಾವತ್ತೂ ಹೋರಾಟಕ್ಕೆ ವಿರೋಧಿ ಆಗೋಲ್ಲ. ಇಷ್ಟಕ್ಕೂ ಹೋರಾಟದ ಬಗ್ಗೇನೂ ಪ್ರೀತಿ ಭಾವ ಇರಬೇಕಲ್ವ?”

ಸೂರ್ಯ ಹಾದಿಯಲ್ಲಿ ಹೆಜ್ಜೆ ಹಾಕಿದ.
ನವಾಬ್ ಪ್ರತಿಕ್ರಿಯೆ ನಿರೀಕ್ಷಿಸುತ್ತ ನಡೆದ.

“ನಿನ್ ಮಾತು ಸರ್‍ಯಾಗಿದೆ ಗೆಳೆಯ” ಸೂರ್ಯ ಮಾತು ಆರಂಭಿಸಿದ- “ಮಿಲಿಟರಿ ಮನೋಧರ್ಮ ಮೇಲುಗೈ ಪಡೀಬಾರ್‍ದು. ನಾವು ಕವಾಯತ್ತುಗಳಲ್ಲಿ ಕಳೆದು ಹೋಗಬಾರದು. ಹೋರಾಟದ ಮನೋಧರ್‍ಮ ಅಂದ್ರೆ ಮಿಲಿಟರಿ ಮನೋಧರ್‍ಮ ಅಲ್ಲ. ಯಾಕೇಂದ್ರೆ ಮಿಲಿಟರಿ ಮನೋಧರ್ಮಕ್ಕೂ ಮೂಲಭೂತವಾದಕ್ಕೂ ಸಂಬಂಧ ಇದೆ. ಅಲ್ವಾ?”

“ನಿಜ ಗೆಳೆಯ. ನಮ್ಮದು ಮಿಲಿಟರಿ ಮನೋಧರ್ಮವೂ ಆಗಬಾರ್‍ದು. ಮಾರುಕಟ್ಟೆ ಮನೋಧರ್ಮವೂ ಆಗ್ಬಾರ್‍ದು. ಇವತ್ತು ಆರ್‍ಥಿಕ ಸುಧಾರಣೆ ಅಂತ ಇಡೀ ಸಮಾಜವನ್ನೇ ಒಂದು ಮಾರುಕಟ್ಟೆ ಮಾಡ್ತಾ ಇದಾರೆ… ಮನಸ್ಸು- ಮೆದುಳು ಮಾರುಕಟ್ಟೆ ಆಗ್ತಾ ಇವೆ. ಅಲ್ಲರಬೇಕಾದ್ದೆಲ್ಲ ಮಾರಾಟ ಮಾಡೋ ಸರಕು ಅನ್ನೋ ಸ್ಥಿತಿ ಬಂದ್ರೆ ಏನ್ಗತಿ?” ಎಂದು ವಿಷಾದದಿಂದ ನುಡಿದ.

“ಇಂಥ ಸಂದರ್ಭದಲ್ಲೂ ನಾವು ನಮ್ಮ ಕ್ರಿಯೆ ಬಿಟ್ಟಿಲ್ಲ. ಸೋಲುಗೆಲುವು ಬೇರೆ, ಪ್ರಮಾಣದ ವಿಷಯ ಬೇರೆ. ಆದ್ರೆ ಕ್ರಿಯೇನ ಜೀವಂತವಾಗ್ ಇಟ್ಟಿದ್ದೀವಲ್ಲ; ನಮ್ ನಮ್ ವ್ಯಾಪ್ತೀಲಿ ನಾವೂ ಜೀವಂತಿಕೆ ಉಳಿಸ್ಕಂಡಿದ್ದೀವಲ್ಲ; ವಿಷಾದ ಯಾಕೆ ಗೆಳೆಯ?… ನಿನ್ನ ಕೂಲೆ ಕೇಸಿನ ವಿಷಯ ಬಂದಾಗೆಲ್ಲ ಹೀಗೆ ವಿಷಾದ ಉಕ್ಕುತ್ತೆ ನಿನಗೆ…” ನವಾಬ್ ಪ್ರೀತಿಯೊತ್ತಾಯದಲ್ಲಿ ನಿಜ ನುಡಿದ.

“ನವಾಬ್, ಶಬರಿ ಇವತ್ತು ಗಂಡನ ಆಸರೆ ಬಗ್ಗೆ ಮಾತಾಡ್ದಾಗ ಚಂದ್ರನ ಸಾವು ನೆನಪಿಗೆ ಬಂತು. ನನಗೀಗ್ಲೂ ಅನ್ಸುತ್ತೆ ಚಂದ್ರ ಕೊಲೆಯಾಗಿದಾನೆ. ಯಾರೊ ಕೊಲೆ ಮಾಡಿದಾರೆ; ಮೂಡನಂಬಿಕೇಲಿ ಮರೆಮಾಡಿದಾರೆ. ಇಲ್ ನೋಡಿದ್ರೆ ನನ್ ಬೆನ್ನ ಹಿಂದೆ ಕೊಲೆ ಕೇಸು ಹಿಂಬಾಲಿಸ್ತ ಇದೆ. ಇದೂ ಒಂಥರಾ ಸಾವು ಬೆನ್ನಟ್ಟಿ ಬಂದಂತೆ ಗೆಳೆಯ. ಸಾವು ಸಮೀಪ ಆಗ್ತಿದೆ ಅನ್ನಿಸಿದ್ರೆ ಮನುಷ್ಯ ತನಗೆ ತಾನೆ ಒಳ್ಗಡೆ ಇಳೀತಾನೆ. ಸತ್ಯಾನಷ್ಟೇ ಹೊರ್‍ಗಡೆ ತಗೀತಾನೆ. ಸಾವಿಗೆ ಸತ್ಯದ ಶಕ್ತಿ ಇದೆ ಗೆಳೆಯ. ಆಗ ನಮ್ಮನ್ನ ಸತ್ಯ ನಡ್ಸುತ್ತೆ; ಸಂಬಂಧ ಕಾಡ್ಸುತ್ತೆ….”

ಮಾತಾಡುತ್ತ ನಿಟ್ಟುಸಿರುಬಿಟ್ಟು ಮೌನದಲ್ಲಿ ನಡೆದ.

“ಇವತ್ತು ಯಾಕೊ ತುಂಬಾ ಅಂತರ್ಮುಖಿಯಾಗ್ತಾ ಇದ್ದೀಯ ಸೂರ್ಯ”- ನವಾಬ್ ನೆಲೆಯನ್ನು ಗುರುತಿಸಿದ.

“ಹಾಗಾದ್ರೆ, ಹೋರಾಟಗಾರರು ಅಂತರ್ಮುಖಿಗಳಲ್ಲ ಅನ್ನೊ ಆರೋಪ ಸುಳ್ಳಾಯ್ತು ಬಿಡು” ಎನ್ನುತ್ತ ಸೂರ್ಯ ನಕ್ಕುಬಿಟ್ಟ.

“ಅದು ಬರೀ ಆರೋಪ. ಅವತ್ತೊಂದು ದಿನ ಬಹಿರ್ಮುಖಿ ಥರಾ ಮಾತಾಡ್ದೆ. ಇವತ್ತು ನೋಡಿದ್ರೆ ಅಂತರ್ಮುಖಿಯಾಗಿದ್ದೀಯ. ಇದ್ರಲ್ಲಿ ಒಂದು ಮಾತ್ರ ನಿಜ ಅಂತ ಹೇಳೋಕಾಗುತ್ತ?”- ನವಾಬ ಪ್ರಶ್ನೆಯಲ್ಲೇ ಉತ್ತರ ಹೇಳಿದ.

“ಅಂತರ್‍ಮುಖ, ಬಹಿರ್‍ಮುಖ ಎರಡೂ ಒಂದಾಗೋದೇ ಒಂದು ಹೋರಾಟ ಅಲ್ವಾ?”- ಸೂರ್ಯನೂ ಅದೇ ಧಾಟಿಯಲ್ಲಿ ಉತ್ತರವುಳ್ಳ ಪ್ರಶ್ನೆ ಹಾಕಿದ.

“ಈಗ ಇಷ್ಟು ಮಾಡು. ಮನಸ್ಸನ್ನ ಭಾರ ಮಾಡ್ಕೂಂಡ್ ಹೋಗ್ಬೇಡ. ಹೋದವನು ಬೇಗ ಒಂದು ತೀರ್ಮಾನ ಮಾಡ್ಬೇಕು ಅಂತ ಹೇಳಿಬಾ”- ನವಾಬ್ ಮಾತು ಬದಲಾಯಿಸಿದ.

ಆ ವೇಳೆಗೆ ಮುಖ್ಯರಸ್ತೆಗೆ ಬಂದಾಗಿತ್ತು. ಗೆಳಯನೊಬ್ಬ ಮೋಟಾರುಬೈಕಿನಲ್ಲಿ ಬಂದು ಕಾದಿದ್ದ. ಸೂರ್ಯ ಆತನೊಂದಿಗೆ ಹೊರಟ.

ನವಾಬ ಹಿಂತಿರುಗುತ್ತಿರುವಾಗ ಸೂರ್ಯನೊಂದಿಗೆ ನಡೆದ ಮಾತುಕತೆ ಕಡೆಗೋಲಾಗಿತ್ತು.

ಕಡೆಗೋಲು ತಡೆಗೋಲಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ
Next post ಮುಗಿಯದ ಕತೆ

ಸಣ್ಣ ಕತೆ