ಪ್ರಕರಣ ೫
ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠಶಾಲೆಗಳಿಗೆ ಕಟ್ಟಡಗಳಿಲ್ಲ. ಮಾರಿಗುಡಿ, ಆಂಜನೇಯನ ದೇವಸ್ಥಾನ, ಚಾವಡಿ, ಹಳೆಯ ಮರುಕಲು ಮನೆ- ಇವುಗಳಲ್ಲೇ ಬಹುಮಟ್ಟಿಗೆ ಪಾಠಶಾಲೆಗಳು ನಡೆಯುತ್ತಿದ್ದುವು. ಸರ್ಕಾರದ ಕಟ್ಟಡಗಳು ಕೆಲವು ಹಳ್ಳಿಗಳಲ್ಲಿ ಮಾತ್ರ ಇದ್ದುವು. ಅವುಗಳಲ್ಲಿ ಹಲವುದರ ನೆಲ ಕಿತ್ತು ಹೋಗಿ ಗೋಡೆಗಳು ಕೆತ್ತಿ ಹೋಗಿ, ಹಂಚುಗಳು ಹಲವು ಮುರಿದು ಹೋಗಿ ಆ ಕಟ್ಟಡಗಳೂ ಬಹಳ ಹೀನಸ್ಥಿತಿಯಲ್ಲಿದ್ದುವು ಸಾಕಾದಷ್ಟು ಬೆಂಚುಗಳಿರಲಿಲ್ಲ, ಹಲಗೆಗಳಿರಲಿಲ್ಲ. ಕೆಲವು ಪಾಠ ಶಾಲೆಗಲ್ಲಿ ಬೋರ್ಡು ಸಹ ಇರಲಿಲ್ಲ. ಸಾಮಾನ್ಯವಾಗಿ ಒಬ್ಬರೇ ಮೇಷ್ಟರು ಇರುವ ಪಾಠಶಾಲೆಗಳ ಸಂಖ್ಯೆ ಹೆಚ್ಚು ; ಶೇಕಡಾ ಎಪ್ಪತ್ತರವರೆಗೆ ಎಂದು ಹೇಳಬಹುದಾಗಿತ್ತು. ಅಲ್ಲೆಲ್ಲ ಸರಾಸರಿ ಹುಡುಗರ ಸಂಖ್ಯೆ ಹದಿನೈದು, ಕೆಲವು ಪಾಠಶಾಲೆಗಳಲ್ಲಿ ಆರು-ಏಳು ಮಕ್ಕಳು ಮಾತ್ರ. ಎಲ್ಲೋ ಅಪರೂಪವಾಗಿ ಒಂದೊಂದು ಕಡೆ ಮುವ್ವತ್ತೆದು ನಲವತ್ತು ಹುಡುಗರು. ಮೊದಲನೆಯ ತರಗತಿಯಲ್ಲಿ ನಾಲ್ಲೂ ಐದೂ ವರ್ಷ ಹಿಂದೆ ಬಿದ್ದಿದ್ದ ಹುಡುಗರು ಇರುತ್ತಿದ್ದರು. ಗ್ರಾಮಸ್ಥರಿಗೆ ಪಾಠಶಾಲೆಯ ವಿಷಯದಲ್ಲಿ ಅಕ್ಕರೆ ಕಡಮೆ. ಇವುಗಳನ್ನೆಲ್ಲ ನೋಡಿ ರಂಗಣ್ಣನಿಗೆ ಬಹಳ ವ್ಯಸನವಾಯಿತು.

ಒಂದು ದಿನ ಸಾಯಂಕಾಲ ಕೆಂಪಾಪುರದ ಬಂಗಲೆಯಲ್ಲಿ ರಂಗಣ್ಣ ಮೊಕ್ಕಾಂ ಮಾಡಿದ್ದಾನೆ. ಸಾಹೇಬರಿಗೆ ಗೋಪಾಲ ಕಾಫಿ ಮತ್ತು ಬೋಂಡ ತಯಾರುಮಾಡುತ್ತಾ ಅಡಿಗೆಯ ಮನೆಯಲ್ಲಿದ್ದಾನೆ. ಗುಮಾಸ್ತ ಶಂಕರಪ್ಪ ಒಳಗಿನ ಕೊಟಡಿಯಲ್ಲಿ ಹಳೆಯ ದಾಖಲೆಗಳನ್ನು ವಿಂಗಡಿಸುತ್ತಾ ಉತ್ತರಗಳು ಹೋಗಬೇಕಾದುವನ್ನು ಎತ್ತಿಡುತ್ತಿದ್ದಾನೆ. ರಂಗಣ್ಣ ಮುಂಭಾಗದ ಒಪ್ಪಾರದಲ್ಲಿ ಮೇಜಿನ ಮೇಲೆ ಕಚೇರಿಯ ಕಾಗದಗಳನ್ನಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತಿದ್ದಾನೆ. ಸಾಮಾನ್ಯವಾದೊಂದು ಸೂಟು, ತಲೆಗೆ ಸರಿಗೆ ರುಮಾಲು ಹಾಕಿಕೊಂಡಿದ್ದಾನೆ. ಆಗ ಸಮೀಪದ ಒಂದು ಹಳ್ಳಿಯಿಂದ ನಾಲ್ಕು ಜನ ಗೌಡರು ಒಂದು ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ಪದ್ಧತಿಯಂತೆ ಎರಡೆರಡು ನಿಂಬೆಯ ಹಣ್ಣುಗಳನ್ನು ಒಪ್ಪಿಸಿ ಕೈ ಕಟ್ಟಿ ಕೊಂಡು ನಿಂತರು.

‘ಯಾರಪ್ಪಾ ನೀವು ? ಯಾವ ಹಳ್ಳಿಯಿಂದ ಬಂದಿದ್ದೀರಿ ? ನಿಮಗೇನು ಬೇಕಾಗಿದೆ?’ ಎಂದು ರಂಗಣ್ಣ ಕೇಳಿದನು. ಗೌಡನೊಬ್ಬನು ಅರ್ಜಿಯನ್ನು ಕೈಗೆ ಕೊಟ್ಟು, ನಮ್ಮಳ್ಳೀಗೊಂದು ಇನ್‌ಫೆಂಟ್ರಿ ಇಸ್ಕೊಲ್ ಕೊಡಬೇಕು ಮಾಸ್ವಾಮಿ!’ ಎಂದನು. ರಂಗಣ್ಣನು ಅರ್ಜಿಯನ್ನು ಓದಿ ಕೊಂಡರೆ ಅದರಲ್ಲಿ ಗೌಡನು ಹೇಳಿದಂತೆಯೆ ಇನ್‌ಫೆಂಟ್ರೆ ಸ್ಕೂಲಿಗೆ ಅರಿಕೆ ಇತ್ತು. ಇದೇನು ! ಹಳ್ಳಿಯವರು ಇನ್‌ಫೆಂಟ್ರಿ (Infantry) ಸ್ಕೂಲಿಗೆ ಅರ್ಜಿ ಕೊಡುತ್ತಾರೆ ! ಪರವಾ ಇಲ್ಲ. ನಮ್ಮ ಜನರೂ ಸಹ ಸಿಪಾಯಿಗಳಾಗ ಬಯಸುತ್ತಾರೆ’ ಎಂದು ರಂಗಣ್ಣನು ಸಂತೋಷ ಪಟ್ಟು ಕೊಂಡು, ‘ಇನ್‍ಫೆಂಟ್ರಿ ಸ್ಕೂಲ್ ! ಇನ್‍ಫೆಂಟ್ರಿ ಸ್ಕೂಲು ಬೇಕೇ?’ ಎಂದನು.

‘ಹೌದು ಸೋಮಿ!’
‘ಇನ್‍ಫೆಂಟ್ರಿ ಸ್ಕೂಲಿಗೆ ಬೇರೇ ಕಡೆ ಅರ್ಜಿ ಕೊಡಬೇಕು ಗೌಡರೆ. ನಾವು ಅದನ್ನು ಕೊಡುವುದಕ್ಕಾಗುವುದಿಲ್ಲ.’

‘ಅಂಗೆಲ್ಲಾ ಹೇಳಬೇಡ್ರಿ ಬುದ್ದಿ ! ನೀವು ಕೊಡಾಕಿಲ್ಲ ಅಂದ್ರೆ ಮತ್ಯಾರ್ ಕೊಟ್ಟಾರು ? ಖಂಡಿತ ಇನ್‍ಫೆಂಟ್ರೆ ಇಸ್ಕೊಲ್ ಕೊಟ್ಟೆ ತೀರಬೇಕು ತಮ್ಮ ಕಾಲ್ದಾಗೆ.’

‘ಪ್ರೈಮರಿ ಸ್ಕೂಲು ಕೊಡುವ ವಿಚಾರ ಆಲೋಚನೆ ಮಾಡುತ್ತೇವೆ. ಇನ್‍ಫೆಂಟ್ರಿ ಸ್ಕೂಲನ್ನು ನಾವು ಕೊಡೋದಕ್ಕಾಗೋದಿಲ್ಲ.’

‘ನಮ್ಕೆ ಪರ್‌ಮರಿ ಗಿ‌ರ್‍ಮರಿ ಇಸ್ಕೊಲ್ ಖಂಡಿತ ಬ್ಯಾಡ್ ಬುದ್ದಿ! ಅದೆಂತದೋ ಏನೋ, ನಮ್ಮ ಸರ್ಕಾರಿ ಇನ್‍ಫೆಂಟ್ರೆ ಇಸ್ಕೊಲೇ ಆಗ್ಬೇಕು. ಎಂಗಾನ ಮಾಡ್ರಲಾ.’

‘ಇನ್‍ಫಂಟ್ರಿ ಸ್ಕೂಲಿಗೆ ಸೈನ್ಯದ ಇಲಾಖೆಗೆ ಅರ್ಜಿ ಕೊಡಬೇಕು. ನಾವು ಈ ಅರ್ಜಿ ತೆಗೆದುಕೊಳ್ಳೋದಿಲ್ಲ.’

‘ಅದ್ಯಾಕ್ಸಾಮಿ ನಮ್ಮಳ್ಳಿಗೆ ಮಾತ್ರ ಕೊಡಾಕಿಲ್ಲ? ಎಲ್ಲಾ ಹಳ್ಳಿಗೂ ಇನ್‍ಫೆಂಟ್ರಿ ಇಸ್ಕೊಲ್ ಕೊಟ್ಟವ್ರಿ, ನಾವೇನ್ ಸೋಮಿ ಪಾಪ ಮಾಡಿದ್ದು ? ಕಂದಾಯ ನಾವೂನು ಕೊಡಾಕಿಲ್ವಾ?’

ರಂಗಣ್ಣನಿಗೆ ಆಗ ಜ್ಞಾನೋದಯವಾಯಿತು. ಗೌಡರು ಕೇಳುತ್ತಿರುವುದು ಇನ್ಫೆಂಟ್ ಸ್ಕೂಲು (Infant School) ಇನ್‌ಫೆಂಟ್ರಿ ಸ್ಕೂಲ್ (Infantry School) ಅಲ್ಲ ಎಂದು ಅರ್ಥವಾಯಿತು. ಹಳ್ಳಿಯವರ ಉಚ್ಚಾರಣೆ ಹಾಗೆ ; ಉಚ್ಛಾರಣೆಯಂತೆ ಬರೆದಿದ್ದಾರೆ – ಎಂಬುದೆಲ್ಲ ಬುದ್ಧಿಗೆ ಹೊಳೆಯುತ್ತಲೂ ರಂಗಣ್ಣನಿಗೆ ಫಕ್ಕನೆ ನಗು ಬಂದು ಬಿಟ್ಟಿತು. ‘ನಾನೊಬ್ಬ ಮಡೆಯ’ ಎಂದುಕೊಂಡನು.

‘ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ?’

‘ಇಲ್ಲೇ ಸೋಮಿ ! ಆಚೆಯ ಕೆರೆ ದಾಟಿದರೆ ಒಂದು ಮೈಲಿ ಆಗುತ್ತೋ ಏನೋ?’

ರಂಗಣ್ಣ ಶಂಕರಪ್ಪನನ್ನು ಕರೆದು ವಿಚಾರಿಸಿದನು. ಕೆಂಪಾಪುರಕ್ಕೆ ಐದು ಮೈಲಿ ದೂರ ಆಗಬಹುದು ; ನಾಳೆ ಅದರ ಹತ್ತಿರದ ಗುಂಡನ ಹಳ್ಳಿಯ ಸ್ಕೂಲ್ ತನಿಖೆ ಇದೆ ; ಅಲ್ಲಿಂದ ಹಾಗೆಯೇ ಹೋಗಿ ನೋಡಿ ಕೊಂಡು ಬರಬಹುದು ಎಂದು ಶಂಕರಪ್ಪ ಹೇಳಿದನು. ರಂಗಣ್ಣನು ಅರ್ಜಿದಾರರನ್ನು ನೋಡಿ, ’ಒಳ್ಳೆಯದು, ನಾಳೆ ಬೆಳಗ್ಗೆ ಹತ್ತೂವರೆ ಗಂಟೆಗೆ ಬರುತ್ತೇವೆ. ಕಟ್ಟಡ ವಗೈರೆ ಏನು ಅನುಕೂಲವಿದೆಯೋ ನೋಡಿ, ಆಮೇಲೆ ನಿಷ್ಕರ್ಷೆ ಮಾಡುತ್ತೇವೆ’ ಎಂದು ಹೇಳಿದನು.

‘ಎಲ್ಲಾ ಅನ್ಕೂಲಾನು ಮೊಸ್ತೈತೆ ಸೋಮಿ, ಎಂಗನಾ ಮಾಡಿ ನಮ್ಮಳ್ಳಿಗೆ ಒಂದು ಇನ್‍ಪೆಂಟ್ರಿ ಇಸ್ಕೊಲ್ ತಮ್ಮ ಕಾಲ್ದಾಗೆ ಕೊಡಬೇಕು’ ಎಂದು ಅವರು ಹೇಳಿ ಕೈ ಮುಗಿದು ಹೊರಟು ಹೋದರು.

ಕೆಲವು ನಿಮಿಷಗಳ ನಂತರ ಗೋಪಾಲ ಕಾಫಿ ಮತ್ತು ಬೋಂಡಾಗಳನ್ನು ತಂದು ಮೇಜಿನ ಮೇಲಿಟ್ಟನು. ‘ಶಂಕರಪ್ಪನವರಿಗೆ ಕೊಟ್ಟೆಯೋ ಇಲ್ಲವೋ?’ ಎಂದು ರಂಗಣ್ಣ ಕೇಳಿದನು.

‘ಅವರು ಅಡಿಗೆಯ ಮನೆಗೇನೆ ಬಂದು ತಗೋತಾರೆ. ಅಲ್ಲಿಯೇ ಅವರಿಗೆ ಇಟ್ಟಿದ್ದೇನೆ.’

‘ಮೇಷ್ಟರು ಯಾರಾದರೂ ಬಂದರೆ ನಾಲ್ಕು ಬೋಂಡ ಇಟ್ಟಿದ್ದೀಯೇನು?’

‘ಇಟ್ಟಿದ್ದೇನೆ.’

‘ಸರಿ, ಹೋಗು’ ಎಂದು ಹೇಳಿ ರಂಗಣ್ಣನು ಉಪಾಹಾರ ಸ್ವೀಕಾರಕ್ಕೆ ತೊಡಗಿದನು.

ಉಪಹಾರ ಮುಗಿಯುವ ಹೊತ್ತಿಗೆ ದೊಡ್ಡ ಸರಿಗೆ ರುಮಾಲು, ಭಾರಿ ಸರಿಗೆ ಪಂಚೆ, ಒಳ್ಳೆಯ ಕೋಟು ಧರಿಸಿದ್ದ ಮನುಷ್ಯರೊಬ್ಬರು ಸ್ವಲ್ಪ ದೂರದಲ್ಲಿ ಬಂದು ನಿಂತರು. ರಂಗಣ್ಣ ಥಟ್ಟನೆ ಎದ್ದು ನಿಂತು ಕೊಂಡು ನಮಸ್ಕಾರ ಮಾಡಿದನು. ಡಿಸ್ಟ್ರಿಕ್ಟು ಬೋರ್ಡ್ ಮೆಂಬರೋ, ಪ್ರಜಾಪ್ರತಿನಿಧಿ ಸಭೆಯ ಮೆಂಬರೋ ಇರಬಹುದೆಂದು ನಿರ್ಧರಿಸಿದನು. ಹೊಸದಾಗಿ ಬಂದ ಇನ್ಸ್‍ಪೆಕ್ಟರ್ ಸಾಹೇಬರನ್ನು ನೋಡಲು ಬಂದಿರುವರೆಂದು ತಿಳಿದು ಕೊಂಡು, ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದೆಂದು, ‘ದಯಮಾಡಬೇಕು’ ಎಂದು ಎದುರಿಗಿದ್ದ ಕುರ್ಚಿಯನ್ನು ತೋರಿಸಿದನು.

‘ಪರವಾ ಇಲ್ಲ, ಬನ್ನಿ, ಕುರ್ಚಿಯ ಮೇಲೆ ಕುಳಿತುಕೊಳ್ಳಿ’ ಎಂದು ಒತ್ತಾಯ ಮಾಡಿದ ಮೇಲೆ ಆತನು ಕುರ್ಚಿಯ ಮೇಲೆ ಕುಳಿತು ಕೊಂಡನು. ಆದರೆ ಆ ಮನುಷ್ಯ ಏನೋ ಮುಜಗರ ಪಡುತ್ತಿದ್ದಂತೆ ಅವನ ಚರ್ಯೆಯಲ್ಲಿ ಕಂಡು ಬಂದಿತು. ಅಷ್ಟು ಹೊತ್ತಿಗೆ ತಟ್ಟೆಯಲ್ಲಿ ಬೋಂಡ ಮತ್ತು ಲೋಟದಲ್ಲಿ ಕಾಫಿಯನ್ನು ಗೋಪಾಲ ತಂದಿಟ್ಟನು. ’ತೆಗೆದು ಕೊಳ್ಳಿ, ಸಂಕೋಚ ಪಟ್ಟು ಕೊಳ್ಳಬೇಡಿ’ ಎಂದು ರಂಗಣ್ಣನು ಒತ್ತಾಯ ಮಾಡಿದನು. ಸರಿಗೆ ರುಮಾಲಿನ ಮನುಷ್ಯ ಅವುಗಳನ್ನು ಸೇವಿಸುತ್ತಾ ‘ನೀವು ಇದೇ ಊರಿನ ವಾಸಸ್ಥರೋ ಹೇಗೆ?’ ಎಂದು ರಂಗಣ್ಣ ಕೇಳಿದನು.

‘ಇಲ್ಲ ಸ್ವಾಮಿ ! ಇಲ್ಲಿಗೆ ಮೂರು ಮೈಲಿ ನಾನಿರುವ ಹಳ್ಳಿ. ಗುಂಡೇನಹಳ್ಳಿಯಲ್ಲಿ ನಾನಿರುವುದು.’

‘ಬಹಳ ಸಂತೋಷ ! ನಿಮ್ಮ ಪರಿಚಯವಾದದ್ದು ನನಗೊಂದು ಲಾಭ, ನಿಮ್ಮಂಥ ಮುಖಂಡರ ಸಹಕಾರ ಸಹಾಯ ನನಗೆ ಆವಶ್ಯಕವಾಗಿ ಬೇಕಾಗಿದೆ. ಆ ಹಳ್ಳಿಯಲ್ಲಿ ಒಂದು ಸ್ಕೂಲಿದೆ. ನೀವು ನೋಡಿರಬಹುದು. ಅದರ ವಿಚಾರದಲ್ಲಿ ಆಸಕ್ತಿಯನ್ನೂ ತೋರಿಸುತ್ತಿರಬಹುದು. ಆ ಸ್ಕೂಲು ಚೆನ್ನಾಗಿ ನಡೆಯುತ್ತಿದೆಯೆ ? ಮೇಷ್ಟ್ರು ಸರಿಯಾಗಿ ಪಾಠ ಶಾಲೆಗೆ ಬರುತ್ತಿದ್ದಾರೆಯೆ?’

‘ನಾನೇ ಸ್ವಾಮಿ ಆ ಸ್ಕೂಲಿನ ಮೇಷ್ಟ್ರು ರಂಗಪ್ಪ!’

ಆಗ ರಂಗಣ್ಣನ ಮುಖವನ್ನು ಯಾರಾದರೂ ಫೋಟೋ ತೆಗೆಯ ಬೇಕಾಗಿತ್ತು! ರಂಗಣ್ಣನು ಕಷ್ಟದಿಂದ ತನ್ನ ವಿಷಾದವನ್ನು ಅಡಗಿಸಿ ಕೊಂಡನು. ಇನ್ನೊಂದು ವಿಧದಲ್ಲಿಯೂ ಅವನಿಗೆ ಮುಖಭಂಗವಾಯಿತು. ತನ್ನ ಕೈ ಕೆಳಗಿನ ಉಪಾಧ್ಯಾಯರಲ್ಲಿ ಸಹ ನೆಮ್ಮದಿ ಕುಳ ಇದ್ದಾರೆ ; ಭಾರಿ ಸರಿಗೆ ಪಂಚೆ, ಭಾರಿ ಸರಿಗೆ ರುಮಾಲು ಧರಿಸಿಕೊಳ್ಳುವವರು ಇದ್ದಾರೆ. ಈ ಕಾದ ಉಡುಪನ್ನು ಧರಿಸುವವನು ತಾನೊಬ್ಬನೇ ಅಲ್ಲ – ಎಂದು ತಿಳಿವಳಿಕೆ ಬಂದು ಹೆಮ್ಮೆ ಮುರಿಯಿತು. ಈ ಮೇಷ್ಟ್ರು ತನ್ನನ್ನು ಹಂಗಿಸುವುದಕ್ಕಾಗಿಯೇ ಹೀಗೆ ಉಡುಪು ಧರಿಸಿ ಬಂದಿರುವನೋ ಏನೋ – ಎಂದು ಅಸಮಾಧಾನವೂ ತಲೆದೋರಿತು. ಆದರೆ ಅವುಗಳಾವುದನ್ನೂ ತೋರ್ಪಡಿಸಿಕೊಳ್ಳದೆ, ’ಒಳ್ಳೆಯದು ಮೇಷ್ಟ್ರೆ! ನಾಳೆ ನಿಮ್ಮ ಸ್ಕೂಲಿನ ತನಿಖೆಗೆ ಬರುತ್ತೇವೆ. ನಿಮಗೆ ಗೊತ್ತಿದೆಯೋ?’ ಎಂದು ಕೇಳಿದನು.

‘ಗೊತ್ತಿದೆ ಸಾರ್! ಅದಕ್ಕೋಸ್ಕರವೇ ತಮ್ಮನ್ನು ಕಂಡು ಹೋಗೋಣ ಎಂದು ಬಂದಿದ್ದೇನೆ. ನಾಳೆ ಸ್ವಾಮಿಯವರು ಅಲ್ಲೇ ಮೊಕ್ಕಾಂ ಮಾಡಬೇಕೆಂದು ಗ್ರಾಮಸ್ಥರೆಲ್ಲಾ ಆಶೆ ಪಡುತ್ತಾರೆ.’

‘ಮೇಷ್ಟ್ರೇ! ಅಲ್ಲಿ ಮೊಕ್ಕಾಂ ಮಾಡುವುದಕ್ಕಾಗುವುದಿಲ್ಲ. ಮುಂದೆ
ಬೀರನಹಳ್ಳಿಗೆ ಬೇರೆ ನಾವು ಹೋಗಬೇಕು. ಆ ಗ್ರಾಮಸ್ಥರು ಒಂದು ಸ್ಕೂಲ್ ಬೇಕು ಎಂದು ಕೇಳುತ್ತಿದಾರೆ.’

‘ಸ್ವಾಮಿಯವರು ಇನ್‍ಸ್ಪೆಕ್ಷನ್ ಮುಗಿಸಿಕೊಂಡು ಕೆಂಪಾಪುರಕ್ಕೆ ವಾಪಸ್ ಬರಬೇಕಾದರೆ ಮಧ್ಯಾಹ್ನ ಬಹಳ ಹೊತ್ತಾಗುತ್ತೆ. ಗುಂಡೇನಹಳ್ಳಿಯಲ್ಲಿ ಮೊಕ್ಕಾಂ ಮಾಡುವುದಕ್ಕೆ ಶಾನೆ ವಸತಿ ಇದೆ. ತಮ್ಮ ಪ್ರಯಾಣಕ್ಕೆ ಗ್ರಾಮಸ್ಥರು ಗಾಡಿಯನ್ನು ಕೂಡ ಕಳಿಸಿಕೊಟ್ಟಿದ್ದಾರೆ.’

ರಂಗಣ್ಣ ಸ್ವಲ್ಪ ಆಲೋಚನೆ ಮಾಡಿದನು : ಈ ಮೇಷ್ಟ್ರು ಭಾರಿ ಒಕ್ಕಲ ಕುಳವಾಗಿ ಕಾಣುತ್ತಾನೆ ; ಮಧ್ಯಾಹ್ನದ ಹೊತ್ತಿನಲ್ಲಿ ಐದು ಮೈಲಿ ವಾಪಸ್ ಬರುವುದಕ್ಕೆ ಬದಲು ಮಧ್ಯಾಹ್ನ ಅಲ್ಲೇ ವಿಶ್ರಾಂತಿ ತೆಗೆದುಕೊಂಡು ಸಾಯಂಕಾಲಕ್ಕೆ ತಂಪು ಹೊತ್ತಿನಲ್ಲಿ ಹಿಂದಿರುಗಬಹುದಲ್ಲ, ಮೇಷ್ಟರ ಸಲಹೆ ಚೆನ್ನಾಗಿದೆ. ಹೀಗೆ ಆಲೋಚನೆ ಮಾಡಿಕೊಂಡು, ‘ಒಳ್ಳೆಯದು ಮೇಷ್ಟ್ರೆ! ನೀವು ಹೇಳಿದ ಹಾಗೆಯೇ ಆಗಲಿ’ ಎಂದು ಒಪ್ಪಿ ಕೊಂಡನು. ಮೇಷ್ಟ್ರು ರಂಗಪ್ಪ ಕೈ ಮುಗಿದು, ರಾತ್ರಿ ಗಾಡಿ ಇಲ್ಲೇ ಇರತ್ತೆ ಸಾರ್, ಬೆಳಗ್ಗೆ ದಯಮಾಡಬೇಕು’ ಎಂದು ಹೇಳಿ ಹೊರಟು ಹೋದನು.

ಶಂಕರಪ್ಪ ಉಪಾಹಾರವನ್ನು ಮುಗಿಸಿಕೊಂಡು ಬರುತ್ತಲೂ ರಂಗಣ್ಣ ನಾಳೆಯ ದಿನದ ಏರ್ಪಾಟನ್ನು ಅವನಿಗೆ ವಿವರಿಸಿದನು, ಏರ್ಪಾಟು ಚೆನ್ನಾಗಿದೆ ಸ್ವಾಮಿ. ಗುಂಡೇನಹಳ್ಳಿಯಲ್ಲಿ ನೆಮ್ಮದಿ ಕುಳ ಬಹಳ ಜನ ಇದ್ದಾರೆ’ ಎಂದು ಅವನು ಸಹ ಒಪ್ಪಿಗೆ ಕೊಟ್ಟನು. ಮಾರನೆಯ ದಿನ ಬೆಳಗ್ಗೆ ಎಂಟು ಗಂಟೆಗೆ ಗುಂಡೇನಹಳ್ಳಿಯಲ್ಲಿ ಇನ್‌ಸ್ಪೆಕ್ಟರ್ ಸಾಹೇಬರ ಮೊಕ್ಕಾಂ ಪ್ರಾರಂಭವಾಯಿತು. ಇಳಿದುಕೊಳ್ಳುವುದಕ್ಕೆ ಅಲ್ಲಿ ಒಂದು ಮನೆಯನ್ನು ಖಾಲಿ ಮಾಡಿ ಕೊಟ್ಟಿದ್ದರು. ಅದು ತಾರಸಿನ ಮನೆ ; ಬತ್ತ ಮೊದಲಾದ ದವಸಗಳನ್ನು ಶೇಖರಿಸಿಡುವ ಮನೆ, ಬಲಗಡೆ ಕೋಣೆ ಯಲ್ಲಿ ಒಂದು ಮಂಚ ಒಂದು ಕುರ್ಚಿ ಮತ್ತು ಒಂದು ಮೇಜ ಅಣಿಯಾಗಿದ್ದುವು. ನೆಲಕ್ಕೆ ಜಮಖಾನವನ್ನೂ ಹಾಸಿತ್ತು. ಅಡಿಗೆಯ ಮನೆ ಮತ್ತು ನೀರ ಮನೆಗಳು ಚೆನ್ನಾಗಿದ್ದುವು. ಬೆಳಗಿನ ಉಪಾಹಾರವನ್ನೆ ಮುಗಿಸಿಕೊಂಡು ರಂಗಣ್ಣ ಪಾಠಶಾಲೆಗೆ ತನಿಖೆಯ ಬಗ್ಗೆ ಹೊರಟನು. ಆ ದಿನ ಇನ್ಸ್‍ಪೆಕ್ಟರು ಬರುತ್ತಾರೆಂದು ಮಾವಿನೆಲೆಗಳ ತೋರಣವನ್ನೂ ಬಾಳೆಯ ಕಂಬಗಳನ್ನೂ ಕಟ್ಟಡಕ್ಕೆ ಕಟ್ಟಿ ಅಲಂಕಾರ ಮಾಡಿದ್ದರು. ಕಟ್ಟಡದೊಳಕ್ಕೆ ಇನ್ಸ್‍ಪೆಕ್ಟರು ಪ್ರವೇಶಿಸುತ್ತಲೂ ಗಗನವನ್ನು ಭೇದಿಸುವಂತೆ ‘ನಮಸ್ಕಾರಾ ಸಾರ್’ ಎಂಬುದಾಗಿ ಹುಡುಗರು ಕಿರಿಚಿಕೊಂಡರು. ರಂಗಣ್ಣ ಪ್ರತಿ ನಮಸ್ಕಾರ ಮಾಡಿ, ‘ಹಾಗೆಲ್ಲಾ ಗಟ್ಟಿಯಾಗಿ ಕಿರಿಚ ಬಾರದು. ಎದ್ದು ನಿಂತುಕೊಂಡು ಮೌನವಾಗಿ ನಮಸ್ಕಾರ ಮಾಡಬೇಕು’ ಎಂದು ತಿಳಿಸಿ, ‘ಮೇಷ್ಟ್ರೆ! ಈ ವಿಚಾರದಲ್ಲಿ ನಾವು ಸರ್ಕ್ಯುಲರ್ ಕೊಟ್ಟಿದ್ದೆವು. ನೀವು ಹುಡುಗರಿಗೆ ಸರಿಯಾದ ತಿಳಿವಳಿಕೆ ಕೊಡಬೇಕು’ ಎಂದು ಹೇಳಿದನು. ಮೇಷ್ಟ್ರು ರಂಗಪ್ಪ ಹಿಂದಿನ ದಿನದಂತೆಯೇ ದೊಡ್ಡ ಸರಿಗೆ ರುಮಾಲು ಭಾರಿ ಸರಿಗೆ ಪಂಚೆ ಮತ್ತು ಒಳ್ಳೆಯ ಕೋಟನ್ನು ಧರಿಸಿದ್ದನು. ರಂಗಣ್ಣನಿಗೆ ಆ ಮೇಷ್ಟ್ರ ವಿಚಾರದಲ್ಲಿ ಬಹಳ ಗೌರವ ಸ್ವಲ್ಪ ಭಯ ಹುಟ್ಟಿದುವು. ಆ ಪಾಠಶಾಲೆಯಲ್ಲಿ ಮೂರು ತರಗತಿಗಳು ಮಾತ್ರ ಇದ್ದುವು. ಮೊದಲನೆಯ ತರಗತಿಯಲ್ಲಿ ಇಪ್ಪತ್ತು ಮಕ್ಕಳು, ಎರಡನೆಯ ತರಗತಿಯಲ್ಲಿ ನಾಲ್ಕು ಮಕ್ಕಳು ಮತ್ತು ಮೂರನೆಯ ತರಗತಿಯಲ್ಲಿ ಇಬ್ಬರು ಹುಡುಗರು ಇದ್ದರು. ಮೂರನೆಯ ತರಗತಿಯವರಿಗೂ ಎರಡನೆಯ ತರಗತಿಯವರಿಗೂ ಕಪ್ಪು ಹಲಗೆಯ ಮೇಲೆ ಲೆಕ್ಕಗಳನ್ನು ಹಾಕಿ ರಂಗಣ್ಣನು ಮೊದಲನೆಯ ತರಗತಿಯ ಮಕ್ಕಳ ತನಿಖೆಗೆ ಪ್ರಾರಂಭಿಸಿದನು. ಆ ಮಕ್ಕಳಲ್ಲಿ ಹನ್ನೆರಡು ಜನ ಆ, ಆ ಮೊದಲುಗೊಂಡು ಪ ಫ ಬ ಭ ಮ ವರೆಗೆ ಅಕ್ಷರಗಳನ್ನು ಕಲಿತಿದ್ದರು. ಉಳಿದವರಲ್ಲಿ ನಾಲ್ಕು ಮಂದಿ ‘ಅಗೋ ಕೋತಿ, ದೋಸೆ ಕೊಡು’ ಮುಂತಾದ ಕಾಗುಣಿತದ ಪಾಠ ಗಳನ್ನು ಮಾಡಿದ್ದರು. ಉಳಿದ ನಾಲ್ಕು ಮಂದಿ ಒತ್ತಕ್ಷರದ ಪಾಠಗಳನ್ನು ಸುಮಾರಾಗಿ ಓದುವವರಾಗಿದ್ದರು. ಈ ನಾಲ್ಕು ಮಂದಿ ಮೂರು ವರ್ಷ ಆ ತರಗತಿಯಲ್ಲೇ ಇದ್ದವರು ; ಕಾಗುಣಿತದವರು ಎರಡು ವರ್ಷ ಹಿಂದೆ ಬಿದ್ದಿದ್ದವರು. ಆ ಮಕ್ಕಳಿಂದ ಸ್ವಲ್ಪ ಓದಿಸಿ, ಬರೆಯಿಸಿ ಆಯಿತು. ಕೊಂಚ ಲೆಕ್ಕಗಳನ್ನು ಕೇಳಿ ಆಯಿತು. ಅಕ್ಷರ ಜ್ಞಾನ ತಕ್ಕ ಮಟ್ಟಿಗಿತ್ತು. ಲೆಕ್ಕಗಳಲ್ಲಿ ಹಿಂದೆ ಬಿದ್ದಿದ್ದರು. ಆ ಹುಡುಗರ ಪರೀಕ್ಷೆ ಮುಗಿದ ಮೇಲೆ ಅವರನ್ನು ಆಟಕ್ಕೆ ಬಿಟ್ಟು ಮೇಲಿನ ತರಗತಿಗಳ ತನಿಖೆಯನ್ನು ರಂಗಣ್ಣನು ಪ್ರಾರಂಭಿಸಿದನು. ಲೆಕ್ಕಗಳಲ್ಲಿ ತಿಳಿವಳಿಕೆ ಚೆನ್ನಾಗಿತ್ತು. ಎರಡನೆಯ ತರಗತಿಯಲ್ಲಿ ಓದುಗಾರಿಕೆ ಸುಮಾರಾಗಿತ್ತು. ತರುವಾಯ ಮೂರನೆಯ ತರಗತಿಯಲ್ಲಿ ಪದ್ಯ ಪಾಠವನ್ನು ಸ್ವಲ್ಪ ಮಾಡುವಂತೆ ಇನ್ಸ್‍ಪೆಕ್ಟರ್ ಸಾಹೇಬರು ಮೇಷ್ಟರಿಗೆ ಹೇಳಿದರು. ಹೀಗೆ ಕೇಳುತ್ತಾರೆಂದು ಆ ಮೇಷ್ಟರಿಗೆ ಮೊದಲೇ ವರ್ತಮಾನ ಬಂದಿದ್ದುದರಿಂದ ಅವನು ತಯಾರಾಗಿದ್ದನು. ಬೋರ್ಡನ್ನು ಒರಸಿ ಚೊಕ್ಕಟ ಮಾಡಿಟ್ಟು ‘ಬಿಡುವು’ ಎಂಬ ಪದ್ಯ ಪಾಠವನ್ನು ಪ್ರಾರಂಭಿಸಿದನು. ಪಾಠಶಾಲೆಗಳಿಗೆ ರಜ ಬರುವ ಕಾಲ ಯಾವುದು ? ಹುಡುಗರು ಆಗ ಏನು ಮಾಡುತ್ತಾರೆ ? ಆಗ ಪ್ರಕೃತಿ ಹೇಗೆ ಕಾಣುತ್ತದೆ ? ಎಂತೆಲ್ಲ ಪ್ರಶ್ನೆಗಳನ್ನು ಕೇಳಿದನು. ಹುಡುಗರು ಚೆನ್ನಾಗಿ ಉತ್ತರ ಹೇಳಿದರು. ಆ ಉಪಾಧ್ಯಾಯನ ವಿಚಾರದಲ್ಲಿ ರಂಗಣ್ಣನಿಗೆ ಒಳ್ಳೆಯ ಅಭಿಪ್ರಾಯ ಬಂತು. ಪಾಠಕ್ಕೆ ಪೀಠಿಕೆ ಮುಗಿದ ನಂತರ ಹುಡುಗರು ಪದ್ಯವನ್ನು ಓದಲಾರಂಭಿಸಿದರು.

ಹೂಗಿಡದಲಿ ಹೂವರಳಿಹುದು
ಅಗಸಾ ತೊಳೆದಂತೆಸೆದಿಹುದು
ಕೂಗುವುವೆತ್ತಲು ಹಕ್ಕಿಗಳು
ಸಾಗುವೆವಾ ಬೆಟ್ಟದ ಬಳಿಗೆ.

ಎಂದು ಒಬ್ಬ ಹುಡುಗನು ಓದಿದನು. ರಂಗಣ್ಣನು ‘ಸರಿಯಾಗಿ ಓದು, ತಪ್ಪಿಲ್ಲದೆ ಓದಬೇಕು’ ಎಂದು ಸೂಚನೆ ಕೊಟ್ಟನು. ಆದರೂ ಪುನಃ ಹುಡುಗನು ಮೊದಲಿನಂತೆಯೇ ಓದಿದನು.

‘ಮೇಷ್ಟ್ರೆ ! ನೀವು ಸರಿಯಾಗಿ ಓದಿ ತಿಳಿಸಿರಿ.’

ರಂಗಪ್ಪನು ಕೈಗೆ ಪುಸ್ತಕವನ್ನು ತೆಗೆದುಕೊಂಡು ವಿಕಾರ ರಾಗದಿಂದ ‘ಹೂಗಿಡದಲಿ ಹೂವರಳಿಹುದು ; ಅಗಸ ತೊಳೆದಂತೆಸೆದಿಹುದು; ಕೂಗುವುವೆಕ್ಕಲು …….’ ಎಂದು ಹುಡುಗನಂತೆಯೇ ಓದಿದನು.

‘ಮೇಷ್ಟೆ ! ಅಗಸಾ ಎಂದು ಓದಬೇಡಿ, ಆಗಸ ಎಂದು ಓದಬೇಕು. ಪುಸ್ತಕ ಇಲ್ಲಿ ಕೊಡಿ ನೋಡೋಣ.’

‘ಇದರಲ್ಲಿ ತಪ್ಪು ಬಿದ್ದಿದೆ ಸಾರ್! ಇಲಾಖೆಯ ಪುಸ್ತಕಗಳ ತುಂಬ ಬರೀ ತಪ್ಪುಗಳೇ ಇವೆ!’

ಹೀಗೆ ರಂಗಪ್ಪ ಉತ್ತರ ಕೊಟ್ಟು ಮುಂದಕ್ಕೆ ಪಾಠ ಮಾಡ ತೊಡಗಿದನು.
‘ಗಿಡಗಳಲ್ಲಿ ಎಷ್ಟು ವಿಧ’
‘ನಾನಾವಿಧ ಸಾರ್.’
‘ಯಾವ್ಯಾವು ? ನೀನು ಹೇಳು.’
‘ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಸೊಪ್ಪಿನ ಗಿಡಗಳು, ಬೇಲಿಯ ಗಿಡಗಳು ಸಾರ್.’
‘ಹೂವಿನ ಗಿಡಗಳು ಎಂದರೇನು’
‘ಬರಿಯ ಹೂವು ಬಿಡುವ ಗಿಡಗಳು ಸಾರ್.’
‘ಎರಡು ಉದಾಹರಣೆ ಕೊಡು.’
‘ಜಾಜಿ ಮತ್ತು ಮಲ್ಲಿಗೆ ಸಾರ್’
‘ಆ ಹೂವುಗಳು ಅರಳಿದಾಗ ಹೇಗೆ ಕಾಣುತ್ತವೆ’
‘ಬೆಳ್ಳಗೆ ಕಾಣುತ್ತೆ ಸಾರ್, ಆಗಸರು ಬಟ್ಟೆ ತೊಳೆದು ಮಡಿ ಮಾಡಿಟ್ಟ ಹಾಗೆ ಸಾರ್’
‘ಸರಿ, ಕುಳಿತುಕೊಳ್ಳಿ.’

ರಂಗಪ್ಪನು ತಾನು ಜಯಸಾಧನೆ ಮಾಡಿದೆನೆಂಬ ತೃಪ್ತಿ ಮತ್ತು ಸಂತೋಷಗಳಿಂದ ಇನ್ಸ್‍ಪೆಕ್ಟರ್ ಸಾಹೇಬರ ಕಡೆಗೆ ತಿರುಗಿಕೊಂಡು ಕೈ ಮುಗಿದನು.

‘ಮೇಷ್ಟ್ರೇ ! ಮಕ್ಕಳನ್ನು ಆಟಕ್ಕೆ ಬಿಡಿ’ ಎಂದು ರಂಗಣ್ಣ ಹೇಳಿದನು.
ಅದರಂತೆ ಮಕ್ಕಳು ಹೊರಕ್ಕೆ ಹೊರಟು ಹೋದರು.

‘ಮೇಷ್ಟ್ರೆ ! ಪುಸ್ತಕದಲ್ಲಿ ಆಗಸ ತೊಳೆದಂತೆಸೆದಿಹುದು- ಎಂದು ಸರಿಯಾಗಿ ಮುದ್ರಣವಾಗಿದೆ. ನೀವು ತಪ್ಪು ತಪ್ಪಾಗಿ ಓದಿಕೊಂಡು ತಪ್ಪು ತಪ್ಪಾಗಿ ಮಕ್ಕಳಿಗೆ ಹೇಳಿ ಕೊಟ್ಟಿದ್ದೀರಿ. ನೀವು ತಿದ್ದಿ ಕೊಳ್ಳಬೇಕು.

‘ಇಲ್ಲ ಸಾರ್! ಪುಸ್ತಕದಲ್ಲಿ ತಪ್ಪು ಬಿದ್ದಿದೆ ಸಾರ್!’
‘ಅದು ಹೇಗೆ ತಪ್ಪು?’
‘ನಾವು ಅಗಸರು ಸಾರ್! ಮಡಿ ಮಾಡೋವ್ರು! ತೊಳೆಯೋದು ಎಂದರೆ ಬಟ್ಟೆ ಒಗೆಯೋದು ಎಂದು ಅರ್ಥ! ನಾನು ಕಸಬಿನವನು ಸಾರ್!’

ರಂಗಣ್ಣ ಆ ಮೇಷ್ಟರನ್ನು ನಖಶಿಖಾಂತವಾಗಿ ನಾಲ್ಕು ಬಾರಿ ನೋಡಿದನು! ಆ ಭಾರಿ ಸರಿಗೆ ರುಮಾಲನ್ನೂ ಆ ಭಾರಿ ಸರಿಗೆ ಪಂಚೆಯನ್ನು ಬಾರಿಬಾರಿಗೂ ನೋಡಿದನು! ತನ್ನ ಮನಸ್ಸಿನಲ್ಲಿ ನಗು ಉಕ್ಕಿ ಬರುತ್ತಿತ್ತು. ‘ನಾನೆಂತಹ ವೆಚ್ಚು ! ಭಾರಿ ಒಕ್ಕಲ ಕುಳ ಎಂದು ತಿಳಿದು ಕೊಂಡೆನಲ್ಲ!’ – ಎಂದು ಕೈ ವಸ್ತ್ರದಿಂದ ತನ್ನ ಬಾಯನ್ನು ಮರೆಮಾಡಿ ಕೊಂಡನು. ಎರಡು ನಿಮಿಷ ಸುಧಾರಿಸಿಕೊಂಡು, ಆ ಮೇಷ್ಟ್ರೆ! ಈ ಸ್ಟೂಲಿನ ಮೇಲೆ ಕುಳಿತುಕೊಳ್ಳಿ’ ಎಂದು ಹೇಳುತ್ತ ಕೈ ಹಿಡಿದು ರಂಗಪ್ಪನನ್ನು ಕುಳ್ಳಿರಿಸಿದನು.

‘ಈ ಪದ್ಯದಲ್ಲಿ ಹೂಗಿಡಗಳ ವಿಚಾರ ಮತ್ತೂ ಆಕಾಶದ ವಿಚಾರ ಹೇಳಿದೆ. ಹೂವಿನ ಗಿಡಗಳಲ್ಲಿ ಹೂವುಗಳೆಲ್ಲ ಅರಳಿವೆ ; ನೋಡುವುದಕ್ಕೆ ಚೆನ್ನಾಗಿ ಕಾಣುತ್ತವೆ ಎನ್ನುವುದು ಮೊದಲನೆಯ ಪಂಕ್ತಿಯ ಅಭಿಪ್ರಾಯ. ಆಕಾಶದಲ್ಲಿ ಮೋಡಗಳೇನೂ ಇಲ್ಲ ; ನಿರ್ಮಲವಾಗಿ ಕಾಣುತ್ತಿದೆ ಎನ್ನುವುದು ಎರಡನೆಯ ಪಂಕ್ತಿಯ ಅಭಿಪ್ರಾಯ. ಆಕಾಶ ಎನ್ನುವುದು ಸಂಸ್ಕೃತದ ಮಾತು. ಅದಕ್ಕೆ ಆಗಸ ಎನ್ನುವುದು ತದ್ಭವ, ಪುಸ್ತಕದಲ್ಲಿ ಸರಿಯಾಗಿದೆ. ನೀವು ಅಗಸರು, ಆದ್ದರಿಂದ ಪುಸ್ತಕದಲ್ಲಿಯೂ ಅಗಸ ಇರಬೇಕು ಎಂದು ತಪ್ಪು ತಿಳಿದುಕೊಂಡಿರಿ. ಈಗ ಅರ್ಥವಾಯಿತೋ?’

‘ಆಯಿತು ಸಾರ್ ! ನಮಗೆ ಯಾರೂ ಇದನ್ನು ತಿಳಿಸಲೇ ಇಲ್ಲ ಸಾರ್!’

‘ಒಳ್ಳೆಯದು. ಈಗ ನಾನು ತಿಳಿಸಿದ್ದೆನಲ್ಲ. ಮುಂದೆ ಹೀಗೆ ತಪ್ಪು ಮಾಡಬೇಡಿ. ನೀವು ಹಾಕಿಕೊಂಡಿರುವ ಈ ಜರ್ಬಿನ ಉಡುಪು ತೊಳೆಯುವುದಕ್ಕೋಸ್ಕರ ಬಂದಿದೆಯೋ?’

‘ಹೌದು ಸಾರ್, ನಾಲ್ಕು ವಾರದ ಹಿಂದೆ ದೊಡ್ಡ ಗೌಡರ ಮಗನಿಗೆ ಮದುವೆ ಆಯಿತು. ಇವೆಲ್ಲ ಆಗ ವರನಿಗೆ ಕೊಟ್ಟಿದ್ದ ಬಟ್ಟೆಗಳು! ತೊಳೆಯುವುದಕ್ಕೆ ನಮ್ಮ ಮನೆಗೆ ತಂದು ಹಾಕಿದ್ದರು. ಬಟ್ಟೆಗಳು ಇನ್ನೂ ಮಾಸಿರಲಿಲ್ಲ. ಹೊಸ ಬಟ್ಟೆಗಳು ಚೆನ್ನಾಗಿ ಮಾಸಿದ ಮೇಲೆ ತೊಳೆದರೆ ಬೆಳ್ಳಗಾಗುತ್ತವೆ. ಸ್ವಾಮಿಯವರ ಸವಾರಿ ಬರುತ್ತೆ ಎಂದು ವರ್ತಮಾನ ಬಂದ ಮೇಲೆ……..?

‘ಠೀಕಾಗಿ ಇನ್ಸ್‍ಪೆಕ್ಟರ್ ಸಾಹೇಬರ ಮುಂದೆ ಕಾಣೋಣ ಎಂದು ಹಾಕಿಕೊಂಡರೋ?’

‘ಹೌದು ಸಾರ್’

ರಂಗಪ್ಪ ಅರ್ಧ ನಾಚಿಕೆಯಿಂದ ಮುಖವನ್ನು ತಗ್ಗಿಸಿಕೊಂಡನು.

‘ನೀವು ಚೆನ್ನಾಗಿ ಪಾಠ ಮಾಡುತ್ತೀರಿ ಮೇಷ್ಟ್ರೆ, ನೋಡಿ ಸಂತೋಷವಾಯಿತು.’

ಈ ಪ್ರೋತ್ಸಾಹದ ಮಾತುಗಳಿಂದ ರಂಗಪ್ಪ ಮುಖವನ್ನು ಎತ್ತಿ,
‘ಟ್ರೈನಿಂಗ್ ಆಗಿದೆ ಸಾರ್’ ಎಂದನು.

ಈ ಪ್ರಕರಣ ಇಲ್ಲಿಗೆ ಮುಗಿಯಿತು. ಶಂಕರಪ್ಪ ಸ್ಕೂಲಿನ ದಾಖಲೆಗಳನ್ನು ನೋಡಬಂದವನು ಬೀರನಹಳ್ಳಿಗೆ ಹೋಗಿ ಬರುವ ಕಾರ್ಯಕ್ರಮ ಇದೆಯೆಂದು ಜ್ಞಾಪಕ ಕೊಟ್ಟನು. ‘ಹಾಗಾದರೆ ಉಳಿದ ತನಿಖೆ ಮಧ್ಯಾಹ್ನ ಮಾಡೋಣ’ ಎಂದು ಹೇಳಿ ರಂಗಣ್ಣ ತನ್ನ ಬಿಡಾರಕ್ಕೆ ಹೊರಟನು. ಮೇಷ್ಟರು ರಂಗಪ್ಪನೂ ಜೊತೆಯಲ್ಲಿ ಬರುತ್ತ ತನಗೇನಾದರೂ ಪ್ರಮೋಷನ್ ಕೊಡಿಸಬೇಕೆಂದು ಅರಿಕೆ ಮಾಡಿಕೊಂಡನು. ಬೀಡಾರದ ಬಳಿ ಆ ಹಳ್ಳಿಯ ಮುಖಂಡರು ಮತ್ತು ಬಿಡದಿಯ ಮನೆಯ ಯಜಮಾನ- ಎಲ್ಲ ಐದಾರು ಜನ ಸೇರಿದ್ದರು. ಅವರು ಇನ್‍ಸ್ಪೆಕ್ಟರಿಗೆ ನಮಸ್ಕಾರ ಮಾಡಿ ನಿಂಬೇಹಣ್ಣುಗಳನ್ನು ಸಮರ್ಪಿಸಿದರು. ಒಳಗೆ ಹಜಾರದಲ್ಲಿ ಜಮಖಾನ ಹಾಸಿತ್ತು. ಕುರ್ಚಿ ಮೇಜು ಹಾಕಿತ್ತು. ಸಾಹೇಬರು ಕುರ್ಚಿಯ ಮೇಲೆ ಕುಳಿತು ಕೊಂಡರು. ಉಳಿದವರು ಜಂಖಾನದ ಮೇಲೆ ಕುಳಿತುಕೊಂಡರು. ಮನೆಯ ಯಜಮಾನನು ಒಳಗಿನಿಂದ ಕಿತ್ತಳೆಹಣ್ಣು, ಬಾಳೆಯಹಣ್ಣು, ಖರ್ಜೂರ, ಬಾದಾಮಿ, ದ್ರಾಕ್ಷೆ ತುಂಬಿದ್ದ ಬೆಳ್ಳಿಯ ತಟ್ಟೆಯನ್ನು ತಂದಿಟ್ಟನು. ಸ್ವಲ್ಪ ಹೊತ್ತಿನೊಳಗಾಗಿ ಗೋಪಾಲ ದೊಡ್ಡ ಲೋಟದ ತುಂಬ ಹದವಾದ ಹಾಲನ್ನು ತಂದು ಮೇಜಿನ ಮೇಲಿಟ್ಟನು. ಯಜಮಾನನು, ‘ತೆಗೋಬೇಕು ಸ್ವಾಮಿಯವರು, ಈ ದಿನ ಇಲ್ಲಿ ಮೊಕ್ಕಾಂ ಮಾಡಿದ್ದು ನಮಗೆಲ್ಲ ಬಹಳ ಸಂತೋಷ ಸ್ವಾಮಿ, ತಮ್ಮ ಕಾಲದಾಗೆ ವಿದ್ಯೆ ಚೆನ್ನಾಗಿ ಹರಡಿದೆ ಸ್ವಾಮಿ’ – ಎಂದು ಉಪಚಾರೋಕ್ತಿಯನ್ನಾಡಿದನು. ರಂಗಣ್ಣನು ಸಮಯೋಚಿತವಾಗಿ ಉತ್ತರ ಕೊಟ್ಟನು. ಮಾತನಾಡುತ್ತ ಹಾಲನ್ನು ಮುಗಿಸಿ ನಾಲ್ಕು ಬಾಳೆಯಹಣ್ಣು ಎರಡು ಕಿತ್ತಳೆ ಹಣ್ಣುಗಳನ್ನು ಹೊಟ್ಟೆಗೆ ಸೇರಿಸಿದನು. ಆ ಹೊತ್ತಿಗೆ ಎರಡು ಎಳನೀರು ಕೆತ್ತಿ ಸಿದ್ದವಾಗಿ ಬಂದುವು. ಅವುಗಳಲ್ಲಿ ಒಂದನ್ನು ಖಾಲಿ ಮಾಡಿದನು. ಇಷ್ಟೆಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಗಾಡಿಯಲ್ಲಿ ಕುಳಿತು ಬೀರನಹಳ್ಳಿಗೆ ಹೊರಟನು. ಜೊತೆಯಲ್ಲಿ ಶಂಕರಪ್ಪ ಮತ್ತು ಮೇಷ್ಟ್ರು ರಂಗಪ್ಪ ಇದ್ದರು. ಅಲ್ಲಿಗೆ ಹೋಗಿ ವಿದ್ಯಮಾನಗಳನ್ನು ನೋಡಿಕೊಂಡು ಹಿಂದಿರುಗಬೇಕಾದರೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಯಾಯಿತು. ಊಟ ಮಾಡಿದ ನಂತರ ಸ್ವಲ್ಪ ವಿಶ್ರಮಿಸಿಕೊಂಡು ಗುಂಡೇನಹಳ್ಳಿಯ ಸ್ಕೂಲಿನ ತನಿಖೆ ಮುಗಿಸಿಕೊಂಡು ರಾತ್ರಿ ಎಂಟು ಗಂಟೆಗೆ ಪುನಃ ಕೆಂಪಾಪುರವನ್ನು ಇನ್‌ಸ್ಪೆಕ್ಟರು ತಲುಪಿದ್ದಾಯಿತು.
*****