ಗುಂಡ ತುಂಬ ಸಾಧು ಹುಡುಗ
ಹಸುವಿನಂತೆ ಸದಾ
ಒಳ್ಳೇ ಮಾತು ಆಡಿದೋರ್‍ಗೆ ಸಾಕಿದ್ನಾಯಿ ಥರಾ!
ಸ್ಕೂಲು ಚೀಲ ಭಾರ ಅಂದ್ರೆ
ತಾನೇ ಅದನ್ನ ತರ್‍ತಾನೆ!
ಸುಸ್ತು ಅಂದ್ರೆ ಹೆಗಲ ಮೇಲೆ ಹೊತ್ತು ತಂದು ಬಿಡ್ತಾನೆ!
ಭಾರೀ ಡಬ್ಬಿ ತುಂಬ ತಂದ
ತನ್ನ ತಿಂಡಿ ತೆಗೆದು
ತಿನ್ರೊ ಅಂತ ಬೊಗಸೆ ಬೊಗಸೆ ಕೊಟ್ಬಿಡ್ತಾನೆ ಕರೆದು
ಆದ್ರೆ ಜೋಕೆ, ತಿಳ್ಕೊಂಡಿರು-
ಗುಂಡ ದಡ್ಡ ಅಂತ
ಹೇಳ್ದಿ ಅಂದ್ರೆ ಕೈಕಾಲೆರಡೂ ಮುರಿದೇ ಹೋಯ್ತು ಅಂತ
ತಾನುಶುದ್ಧ ಪೆದ್ದ ಅಂತ
ಗುಂಡಂಗೂನು ಗೊತ್ತು,
ನಾವು ಹಾಗೆ ಹೇಳಿದ್ವೇಂದ್ರೆ ತಡೀಲಾರದ್ ಸಿಟ್ಟು!
ಇರ್‍ಲಿ ಬಿಡೋ ದಡ್ಡ ಆದ್ರೂ
ಎಷ್ಟೊಂದ್ ಒಳ್ಳೇವ್ನಾಲ್ವಾ?
ಒಳ್ಳೇ ನಡತೆ ಬುದ್ಧಿಗಿಂತ ದೊಡ್ದು ಅಂತಾರಲ್ವ?
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)