ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅದು ಊರನ್ನು ದಂಗುಬಡಿಸುವ ವಿಷಯವಾಗಿತ್ತು. ಆಶಾ ಮತ್ತು ರಮೇಶ ಮದುವೆ ಮಾಡಿಕೊಂಡರಂತೆ ಎಂಬ ಸುದ್ದಿ ಅದು.

ಅಕ್ಕಪಕ್ಕದ ಮನೆಯ ಆಶಾ ಮತ್ತು ರಮೇಶ ಒಟ್ಟಿಗೆ ಬೆಳೆದವರು. ವೈದಿಕರ ಮನೆಯ ರಮೇಶ ಮಾಂಸ ಮಡ್ಡಿ ತಿನ್ನುವ ಗೀತಾಳ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವಾಗ ಅವನಪ್ಪ ಹೆದರಿದ್ದರು, ಎಲ್ಲಿ ಹುಡುಗ ಮಾಂಸ ಮಡ್ಡಿ ತಿನ್ನುತ್ತಾನೆಂದು ಹೆದರಿಕೆ ಯಲ್ಲಿ. ಆಶಾ ರಮೇಶನ ಮನೆಗೆ ಹೋಗುವಾಗ ಅವಳ ಅಪ್ಪ ಅಮ್ಮ ಕಸಿವಿಸಿ ವ್ಯಕ್ತ ಪಡಿಸುತ್ತಿದ್ದರು. ಅಲ್ಲಿ ಹೋಗಿ ಈ ಹುಡುಗಿ ಎಲ್ಲಿ ಅವರ ಮಡಿ ಕೆಡಿಸುತ್ತಾಳೋ ಎಂದು.

ಆಶಾ ರಮೇಶ ಬೆಳೆದಂತೆ ಅವರ ನಡುವಿನ ಪ್ರೀತಿಯೂ ಬೆಳೆಯತೊಡಗಿತು. ಅವಳು ಎಂಜಿನಿಯರಿಂಗ್ ಗೆ ಸೇರಿದರೆ ಅವನು ಮೆಡಿಕಲ್ ಗೆ ಸೇರಿದ. ಹೋಗಿ ಬರಲು ಒಂದೇ ಬಸ್ಸು. ಅಕ್ಕಪಕ್ಕದಲ್ಲಿ ಕಾಲೇಜುಗಳು. ಇವರ ಮಾತು ಕತೆಯನ್ನು ಗಮನಿಸಿ ಕತೆ ಕಟ್ಟುತ್ತಿದ್ದವರಿಗೆ ರಮೇಶ ನೇರವಾಗಿ ಹೇಳುತ್ತಿದ್ದ. “ನಿಮಗೆ ಅಕ್ಕತಂಗಿಯರು ಇಲ್ಲವೇನ್ರೋ? ನಾವು ಒಟ್ಟಿಗೆ ಬೆಳೆದವರು.” ಗೀತಾಳೂ ಅಷ್ಟೇ. ಅವಳನ್ನು ಪರಿಹಾಸ್ಯ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು.

ಅಂತಹ ಆಶಾ ರಮೇಶರ ಫೋಟೋ ಪತ್ರಿಕೆಯಲ್ಲಿ ಪ್ರೇಮ ವಿವಾಹ ಎಂಬ ಶೀರ್ಷಿಕೆಯಡಿಯಲ್ಲಿ ಕಾಣಿಸಿಕೊಂಡಾಗ ಊರಿಗೆ ಊರೇ ಬೆಚ್ಚಿಬಿತ್ತು. ವೈದಿಕ ಮನೆತನದ ತನ್ನ ಎಲ್ಲಾ ಪಿತೃಗಳನ್ನು ನರಕಕ್ಕೆ ಇಳಿಸಿದನೆಂದು ರಮೇಶನ ತಂದೆ ಕೆಂಡಾಮಂಡಲವಾದರು. ಆಶಾಳ ಮನೆಯವರು ತಮಗೆ ಬ್ರಹ್ಮಶಾಪ ತಗಲುತ್ತದೆಂದು ಚಿಂತಾಕ್ರಾಂತರಾದರು.

ಎರಡೂ ಮನೆಯವರು ಒಟ್ಟಿಗೆ ಸೇರಿ ನವವಿವಾಹಿತರನ್ನು ಹೋಟೇಲೊಂದರಲ್ಲಿ ಪತ್ತೆಹಚ್ಚಿ ಊರಿಗೆ ಕರೆತಂದರು. ಆಶಾಳನ್ನು ಅವಳ ಮನೆಗೆ ಕರೆದೊಯ್ದರೆ ರಮೇಶನನ್ನು ಅವನ ಭಾವನ ಮನೆಗೆ ಕಳುಹಿಸಿಕೊಟ್ಟರು. ಆಶಾಳ ಅಮ್ಮ ಮಗಳನ್ನು ನೋಡಿದವರೇ ತಬ್ಬಿಕೊಂಡು ಗೋಳೋ ಎಂದು ಅತ್ತರು. ನೀನು ಅವನನ್ನೇ ಮದುವೆಯಾದರೆ ನಾನು ಕೆರೆಯೋ ಬಾವಿಯೋ ನೋಡಿಕೊಳ್ಳಬೇಕಾಗುತ್ತದೆಂದು ಹೆದರಿಸಿದರು. ಅದಕ್ಕೆ ಆಶಾ ’ಈಗಾಗಲೇ ಮದುವೆ ಯಾಗಿದೆಯಲ್ಲಮ್ಮ! ಇನ್ನೇನು ಮಾಡಲಾಗುತ್ತದೆ?’ ಎಂದದಕ್ಕೆ “ಏನು ಪೇಪರ್ ನಲ್ಲಿ ಫೋಟೋ ಬಂದ ಮಾತ್ರಕ್ಕೆ ಆಗಿಹೋಯಿತಾ? ಮದುವೆ ಅಂದ್ರೆ ಏನೂಂತ ತಿಳ್ಕೋಂಡಿದ್ದೀಯಾ? ಅಪ್ಪ, ಅಮ್ಮ ಇಲ್ಲದೆ ನಡೆದ ಮದುವೆ, ಅದೆಂತಾ ಮದುವೆ? ನಡೆದುದನ್ನು ಮರೆತುಬಿಡು” ಎಂದರು.

ರಮೇಶನಿಗೆ ದಿನಾ ಭಾವನಿಂದ ಉಪದೇಶ. “ಅಲ್ಲಯ್ಯಾ ಹೋಗಿ ಹೋಗಿ ಆ ಮಾಂಸ ತಿನ್ನುವ ಶೂದ್ರಮುಂಡೇದನ್ನು ಕಟ್ಟಿಕೊಂಡಿದ್ದೀಯಲ್ಲಾ? ನಾಳೆ ನಿನಗೆ ಹುಟ್ಟುವ ಮಕ್ಕಳು ಮನೆಯಲ್ಲೇ ಎಲುಬುತುಂಡನ್ನು ಕಚ್ಚಿ ಎಳೆಯುವದನ್ನು ಹೇಗೆ ಸಹಿಸಿಕೊಳ್ಳುತ್ತೀ?” ಎಂದು ದಬಾಯಿಸಿದರು. ಅದಕ್ಕೆ ರಮೇಶ “ಸುಮ್ಮನಿರಿ ಭಾವ, ನೀವು ಅಕ್ಕನಿಗೆ ಗೊತ್ತಾಗದೆ ಬಾರಿಗೆ ಹೋಗಿ ಏನೇನು ಮಾಡುವುದಿಲ್ಲ? ನನಗೆ ಬುದ್ಧಿ ಹೇಳುತ್ತಿದ್ದೀರಾ?” ಎಂದ.ಭಾವನದಕ್ಕೆ ನಗುತ್ತಾ,”ಅದು ಹೌದಯ್ಯ, ಜಾತಿಯವಳನ್ನೇ ಮದುವೆಯಾಗಿ ನೀನು ಏನು ಮಾಡಿದರೂ ಧಕ್ಕುತ್ತದೆ. ಬೇರೆ ಜಾತಿಯವಳನ್ನು ಮದುವೆ ಯಾಗಿ ಚೆನ್ನಾಗಿದ್ದರೂ ತಪ್ಪಾಗುತ್ತದೆ” ಎಂದರು. ರಮೇಶ ಮಾತಾಡಲಿಲ್ಲ.

ಇದಾಗಿ ಕೆಲವು ತಿಂಗಳುಗಳ ನಂತರ ನನಗೆ ರಮೇಶ ಆಶಾ ಸಿಕ್ಕರು. ಆಶಾ ನನ್ನನ್ನು ಕಂಡವಳೇ”ಏನೇ ಹೇಗಿದ್ದೀಯ? ಕತೆ-ಗಿತೆ ಈಗಲೂ ಬರಿತೀಯಾ?” ಎಂದು ಕೇಳಿದಳು. ನಾನದಕ್ಕೆ ನಿನ್ನದೇ ಕತೆ ಬರೆಯಬೇಕೆಂದಿದ್ದೆ. ಇದು ಹೇಗೆ ನೀವಿಬ್ಬರೂ ಮತ್ತೆ ಒಂದಾಗಲು ಸಾಧ್ಯವಾಯ್ತೆಂದು ಪ್ರಶ್ನಿಸಿದೆ. ಆಶಾ ನಗುತ್ತಾ”ಓ, ಅದಾ ವಿಷಯ? ಹೇಳ್ತೀನಿ ಕೇಳು, ಮದುವೆಯಾಗಿ ಒಂದು ತಿಂಗಳ ಮೇಲಷ್ಟೆ ಉಳಿದವರಿಗೆ ವಿಷ್ಯ ಗೊತ್ತಾದದ್ದು. ಆಗಲೇ ನನ್ನ ಹೊಟ್ಟಿಯಲ್ಲಿ ಹೊಸ ಜೀವವೊಂದು ಉದಯಿಸುತ್ತಿತ್ತು. ಈ ವಿಷಯ ತಿಳಿದಮೇಲೆ ನಮ್ಮ ಮನೆಯವರು ಮೆತ್ತಗಾದರು. ರಮೇಶನ ಅಪ್ಪ ಭ್ರೂಣಹತ್ಯೆ ಮಹಾಪಾಪ ಎಂದರು. ಮತ್ತೆ ಅವರೇ ನಮ್ಮನು ಜತೆ ಗೂಡಿಸಿದರು.” ಎನ್ನುತ್ತಾ ಕಿಲಕಿಲ ನಕ್ಕಳು.ನನಗದು ಸಂಗೀತದಂತೆ ಭಾಸವಾಯಿತು.
*****