ವಿಜಯ ವಿಲಾಸ – ಪಂಚಮ ತರಂಗ

ವಿಜಯ ವಿಲಾಸ – ಪಂಚಮ ತರಂಗ

ಪಕ್ಕೆಯಲ್ಲಿ ಚುಚ್ಚಿಕೊಂಡಿದ್ದ ರತ್ನ ಬಾಣವನ್ನು ತೆಗೆಯಲು ಬಾರದೆ ಬಹಳವಾದ ನೋವಿನಿಂದ ಹಾಸುಗೆ ಹತ್ತಿ ಮಲಗಿದ್ದ ಅಗ್ನಿಶಿಖ ರಾಕ್ಷಸೇಂದ್ರನಿಗೆ ಅರಮನೆಯ ವೈದ್ಯನಾದ ಚರಕಾಚಾರ್‍ಯನು ಚಿಕಿತ್ಸೆ ಮಾಡುತ್ತಿದ್ದನು. ಪುತ್ರಿಯಾದ ಚಂದ್ರಲೇಖೆಯು ಯಾವಾಗಲೂ ತಂದೆಯ ಬಳಿಯಲ್ಲಿಯೇ ಉಪಚರಿಸುತ್ತ ಕುಳಿತಿರುವಳು. ಗುಣಶಾಲಿನಿಯಾದ ಚಂದ್ರಲೇಖೆಯನ್ನು ರಾಕ್ಷಸೇಂದ್ರನೂ ಬಹಳ ಪ್ರೀತಿಯಿಂದ ಕಂಡುಕೊಂಡಿದ್ದನು. ಚರಕಾಚಾರ್‍ಯನು, ದೇಹದಿಂದ ಬಾಣವು ಸಡಿಲಿ ಬೀಳುವಂತೆ ಔಷಧವನ್ನು ಹಾಕಿ, ನಾಳಿನದಿನ ಪ್ರಾತಃಕಾಲ ಬಾಣವನ್ನು ದೇಹದಿಂದ ಹೊರಗೆ ತೆಗೆಯುವುದಾಗಿ ಹೇಳಿದ್ದನು. ಅದರಂತೆ ರಾಕ್ಷಸೇಂದ್ರನು ಬಹಳ ನೋವಿನಿಂದ ರಾತ್ರಿಯನ್ನು ಒಂದು ಯುಗದಂತೆ ಕಳೆಯುತ್ತ, ಎಂದಿಗೆ ಬೆಳಗಾದೀತೆಂಬ ಆತುರದಿಂದ ಸೂರ್‍ಯೋದಯವನ್ನು ನಿರೀಕ್ಷಿಸುತ್ತಿದ್ದನು. ಚಂದ್ರಲೇಖೆಯು ಮಾಲೆಗಾತಿಯ ಮಾತಿನಂತೆ ನೂತನ ರಾಜಕುಮಾರನ ದರ್ಶನ ಕುತೂಹಲದಿಂದ ಆ ರಾತ್ರಿಯನ್ನು ಕಳೆದಳು.

ಬೆಳಗಾಗುತ್ತ ಬಂತು, ಮನೋಹರವಾದ ತಂಗಾಳಿಯು ಮೆಲ್ಲನೆ ಸುಳಿಯಲಾರಂಭಿಸಿತು. ಪೂರ್ವದಿಕ್ಕಿನಲ್ಲಿ ಕೆಂಪು ಮೂಡಿತು. ಚಂದ್ರಲೇಖೆಯು, ಮೋಹಾಲೋಚನೆಗಳಿಂದ ರಾತ್ರಿ ನಿದ್ರೆಯಿಲ್ಲದಿದ್ದರೂ, ಪದ್ಧತಿಯಂತೆ ಉಷಃಕಾಲಕ್ಕೆ ಎದ್ದು, ಮಿಂದು ತಂದೆಯನ್ನುಪಚರಿಸಲು ಸಿದ್ಧಳಾದಳು. ಇಷ್ಟು ಹೊತ್ತಿಗೆ, ರಾಕ್ಷಸೇಂದ್ರನ ತಾಪಾಂಧಕಾರವನ್ನೂ ಚಂದ್ರಲೇಖೆಯ ವಿರಹಾಂಧಕಾರವನ್ನೂ, ವಿಜಯನ ಚಿಂತಾಂಧಕಾರವನ್ನೂ ನಿವಾರಿಸಲೆಂಬಂತೆ ಅರುಣಕಿರಣ ಮನೋಹರನಾದ ಸೂರ್‍ಯದೇವನು ಉದಯಪರ್ವತವನ್ನೇರಿ ತನ್ನ ತೇಜದಿಂದ ಲೋಕಾಂಧಕಾರವನ್ನು ಪರಿಹರಿಸಿ ದಿಕ್ತಟಗಳನ್ನು ಬೆಳಗಿದನು.

ಚರಕಾಚಾರ್‍ಯನು ಹಿಂದಿನ ದಿನ ಹೇಳಿದ್ದ ಮೇರೆಗೆ ಬಂದು, ರಾಕ್ಷಸೇಂದ್ರನ ಸ್ಥಿತಿಯನ್ನು ಪರೀಕ್ಷಿಸಿ, ತಾನು ತಂದಿದ್ದ ದ್ರಾವಕವನ್ನು, ಬಾಣವು ಚುಚ್ಚಿಕೊಂಡಿದ್ದ ಸ್ಥಳದಲ್ಲಿ ಸವರಿ, ಮೆಲ್ಲಮೆಲ್ಲನೆ ಬಾಣವನ್ನು ದೇಹದಿಂದ ಬಿಡಿಸಿ ತೆಗೆಯಲು ಪ್ರಯತ್ನಿಸಿದನು. ಆದರೂ ರಾಕ್ಷಸೇಂದ್ರನಿಗೆ ನೋವು ಮಾತ್ರ ಬಹಳವಾಗಿ, ಬಾಣವು ಹೊರಗೆ ಬರುವ ವೇಳೆಗೆ ಆತನು ಮೂರ್ಛಬಿದ್ದು ಬಿಟ್ಟನು. ಚಂದ್ರಲೇಖೆಯು ಕಾತರಳಾಗಿ ದುಃಖಿಸತೊಡಗಿದಳು. ಆಚಾರ್‍ಯನು, ಆಕೆಗೆ ಬೆದರಬೇಡವೆಂದು ಧೈರ್ಯ ಹೇಳಿ, ಔಷಧೋಪಚಾರಗಳಿಂದಾತನನ್ನೆಬ್ಬಿಸಿ, ಗಾಯಕ್ಕೆ ಮತ್ತೆ ಔಷಧವನ್ನು ಹಾಕಿ ಕಟ್ಟಿ, ಆತನಿಗೆ ಸ್ವಲ್ಪ ಆಹಾರವನ್ನು ಕೊಡಿಸಿದನು. ಆಹಾರವನ್ನು ಸೇವಿಸಿದ ಮೇಲೆ ಅಗ್ನಿಶಿಖನು ಸ್ವಲ್ಪ ಚೈತನ್ಯ ಹೊಂದಿ ಗೆಲುವಾದನು. ಅನಂತರ, ತನ್ನ ಶರೀರದಿಂದ ತೆಗೆದಿದ್ದ, ರಕ್ತಮಯವಾದ ರತ್ನ ಬಾಣವನ್ನು ತೊಳೆಯಿಸಿ ತರಿಸಿ, ಅದನ್ನು ಕೈಗೆ ತೆಗೆದುಕೊಂಡು ನೋಡುತ್ತ, ಈಶ್ವರದತ್ತವಾದ ರತ್ನ ಬಾಣವು ಕಡೆಗೆ ಹೇಗಾದರೂ ತನಗೇ ಲಭಿಸಿತಲ್ಲಾ! ಎಂದು ಸಂತೋಷಪಟ್ಟು, ಅದನ್ನು ಬಹಳ ಎಚ್ಚರಿಕೆಯಿಂದ ಪೆಟ್ಟಿಗೆಯಲ್ಲಿಟ್ಟಿರುವಂತೆ ಚಂದ್ರಲೇಖೆಯ ಕೈಯಲ್ಲಿ ಕೊಟ್ಟನು. ಆಕೆಯು ಅದರಂತೆ ಅದನ್ನು ಪೆಟ್ಟಿಗೆಯಲ್ಲಿ ಬಚ್ಚಿಟ್ಟಳು.

ಇತ್ತಲಾ ವಿಜಯನು ರಾತ್ರಿಯೆಲ್ಲವನ್ನೂ ತನ್ನ ವಿಜಯಾಲೋಚನೆಗಳಿಂದಲೇ ಕಳೆದು, ಚಂದ್ರಲೇಖೆಯ ಮುಖಚಂದ್ರದರ್ಶನ ಕುತೂಹಲದಿಂದ ತಹತಹಪಡುತ್ತ ಕ್ಷಣಗಳನ್ನೆಣಿಸುತ್ತಿದ್ದನು. ಚಂದ್ರಲೇಖೆಯೂ ಸಹ ವಿಜಯನ ಮುಖಚಂದ್ರ ದರ್ಶನಾತುರಳಾಗಿ ಚಕೋರಿಯಂತೆ ತಪಿಸುತ್ತ ಮಧ್ಯಾಹ್ನವನ್ನು ಕಳೆದು ಸಂಧ್ಯಾ ಸಮಯ ನಿರೀಕ್ಷಣೆಯಿಂದಿದ್ದಳು.

ಪರಜೀವನವನ್ನ ಪಹರಿಸುವ ಪ್ರತಾಪಶಾಲಿಯಾದ ರಾಕ್ಷಸೇಂದ್ರನ ತೇಜವೂ ಹೀಗೆಯೇ ಕ್ಷೀಣವಾಗಿ ಅವನೂ ದುಃಖಾಂಬುಧಿಗೆ ಬೀಳುವನೆಂಬಂತೆ, ಪ್ರಭಾಮಯನಾದ ಪ್ರಭಾಕರನು ಅಸ್ತ ಪರ್ವತದೆಡೆಯಲ್ಲಿ, ಕ್ಷೀಣ ತೇಜದಿಂದ ಪಶ್ಚಿಮಸಮುದ್ರದಲ್ಲಿ ಬಿದ್ದು ಹೋಗುತ್ತಿದ್ದನು. ಸಂಕೇತದಂತೆ ಉದ್ಯಾನದ ಲತಾಮಂಟಪದಲ್ಲಿ, ಚಂದ್ರಲೇಖೆಯು ಸರೋಜಿನಿಯನ್ನು ರಾಜಕುಮಾರನೊಡನೆ ಎದುರುನೋಡುತ್ತ ಅತಿಕುತೂಹಲದಿಂದ ಕಾದಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಸರೋಜಿನಿಯು ಪುಷ್ಪಮಾಲಿಕಾಹಸ್ತಳಾಗಿ ವಿಜಯನೊಡನೆ ಅಲ್ಲಿಗೆ ಬಂದಳು. ಚಂದ್ರಲೇಖೆಯು, ನವಮನ್ಮಥನಂತಿದ್ದ ವಿಜಯನ ಸಂದರ್ಶನವಾದೊಡನೆಯೇ ಅವನ ಸೌಂದರ್ಯ ಸೌಭಾಗ್ಯದಿಂದ ಬೆರಗಾಗಿ ದಿಕ್ಕು ತೋರದೆ ಸ್ತಬ್ದಳಾಗಿ ನಿಂತು ಕಣ್ಣಿನಲ್ಲಿ ಆನಂದಬಾಷ್ಪಗಳನ್ನು ತಂದಳು. ವಿಜಯನು ಚಂದ್ರಲೇಖೆಯ ನಿರುಪಮಲಾವಣ್ಯ ವೈಭವದಿಂದ ಆಶ್ಚರ್ಯಾನಂದಭರಿತನಾಗಿ, ಮುಂಬರಿದು ಕೈಹಿಡಿಯಲು ಕುತೂಹಲಿಯಾದರೂ, ಧೀರೋದಾತ್ತನಾದುದರಿಂದ, ಸ್ವಭಾವವಾದ ವಿವೇಕದಿಂದಲೂ ಕರ್ತವ್ಯಲಕ್ಷ್ಯದಿಂದಲೂ ಚಿತ್ತವನ್ನು ಸ್ಥಿರಪಡಿಸಿಕೊಂಡು ನಿಂತಿರಲು, ಕಣ್ಣಿನಿಂದ ಆನಂದಾಶ್ರುಗಳು ತಾವಾಗಿಯೇ ಧಾರೆಗಳಾಗಿ ಸುರಿದವು. ಆಗ ಆ ರಮಣಿಯು ಅರೆಬಿರಿದ ಕಮಲದಂತಿರುವ ಮುಗುಳ್ನಗೆಯಿಂದ ಮನೋಹರವಾದ ಚೆಂದುಟಿಗಳ ನಡುವೆ ಮುತ್ತುಗಳಂತೆ ಬೆಳಗುವ ದಂತಗಳ ಕಾಂತಿಗಳನ್ನು ವಿಸ್ತರಿಸಿ, ಅಂತರಂಗದ ಮೋಹಾತಿಶಯನ್ನು ಬಾಯಿಂದ ಹೇಳಲಾರದೆಯೂ, ಒಳಗೆ ಆಚ್ಛಾದಿಸಲಾರದೆಯೂ ಕರ್ತವ್ಯವನ್ನರಿಯದೆ, ಮುಗ್ಧತೆಯಿಂದ ನಿಂತಳು. ಚಪಲವಾದ ಮೋಹಕರ ಕಟಾಕ್ಷವೀಕ್ಷಣಗಳಿಂದ ಕಂಗೊಳಿಸುತ್ತ, ಮುಖಚಂದ್ರನ ಕಳೆಯಿಂದ ತನ್ನ ಹೃದಯದ ಸಂತೋಷಾಂಬುಧಿಯನ್ನು ಉಕ್ಕಿಸುತ್ತಿರುವ ಆ ರಮಣಿರತ್ನವನ್ನು ನೋಡಿ, ವಿಜಯನೂ ತಾನು ದೇವಲೋಕದ ರಂಭೆಯ ಸನ್ನಿಧಿಯಲ್ಲಿರುನೆಂಬ ಭ್ರಾಂತಿಯಿಂದ ಮುಗ್ಧನಾದನು.

ಮೊಳಕಾಲಿನವರೆಗೂ ದಟ್ಟವಾಗಿಯೂ ನೀಳವಾಗಿಯೂ ಬಿದ್ದಿರುವ ಆ ಸುಂದರಿಯ ಕೇಶಪಾಶಗಳ ಸೌಂದರ್ಯ ಸೌಭಾಗ್ಯವು ವಿಜಯನ ಹೃದಯವನ್ನು ಕಾಮಪಾಶಗಳಿಂದ ಕಟ್ಟಿ ಹಾಕಿತು. ಆಕೆಯ ದೇಹಕಾಂತಿಯೆಂಬ ಮಿಂಚಿನ ಬೆಳಕಿನಲ್ಲಿ ಬೆರಗಾಗಿ ನಿಂದ ಆತನ ಕಣ್ಣಿಗೆ ಆ ದಿವ್ಯಾಕೃತಿಯೊಂದಲ್ಲದೆ ಪ್ರಪಂಚದ ಇತರ ಯಾವ ವಸ್ತುಗಳೂ ಕಾಣದೆ ಹೋದವು. ಒಂದು ರತ್ನ ಬಾಣಕ್ಕಾಗಿ ಬಂದ ಆತನ ಎದೆಗೆ ಒಂದು ಕೋಟಿ ಕಾಮಬಾಣಗಳು ಏಕಕಾಲದಲ್ಲಿ ತಗುಲಿದವು. ಚಂದ್ರಲೇಖೆಯ ಕಣ್ಣಿಗೆ ವಿಜಯನೂ, ವಿಜಯನ ಕಣ್ಣಿಗೆ ಚಂದ್ರಲೇಖೆಯ ಮಾತ್ರವೇ ಕಂಡರಲ್ಲದೆ ಇನ್ನು ಉಳಿದ ಜಗತ್ತೆಲ್ಲವೂ ಅವರ ಭಾಗಕ್ಕೆ ಶೂನ್ಯವಾದಂತೆ ಇತ್ತು. ಚಂದ್ರಲೇಖೆಗೆ ಲಜ್ಜೆಯು ಅಂಕುರಿಸಿ ಬರುತ್ತಿದ್ದರೂ ಮೋಹವು ಆ ಲಜ್ಜೆಯನ್ನು ಬಡಿದು ಹಿಂದಕ್ಕೆ ತಳ್ಳಲಾರಂಭಿಸಿತು. ವಿಜಯನ ಮಿತಿಮೀರಿದ ಕುತೂಹಲವು ಅವನ ವಿವೇಕವನ್ನು ಮುಂಬರಿಯದಂತೆ ನಿರೋಧಿಸುತ್ತಿದ್ದಿತು.

ಇವರಿಬ್ಬರ ರೀತಿಯನ್ನು ನೋಡಿ ಇಂಗಿತಜ್ಞಳಾದ ಸರೋಜಿನಿಯು ಇವರಿಗೆ ರಾಕ್ಷಸರಿಂದ ಅಪಾಯವೊದಗೀತೆಂಬ ಭೀತಿಯಿಂದ ಉಭಯರಿಗೂ ಎಚ್ಚರವನ್ನು ಹೇಳಿ ಚಂದ್ರಲೇಖೆಯನ್ನು ಕುರಿತು, “ತಾಯೀ, ನಿನ್ನ ಇಷ್ಟದಂತೆ ರಾಜಪುತ್ರನ ದರ್ಶನವನ್ನು ಮಾಡಿಸಿರುವೆನು, ಅಪ್ಪಣೆಯಾದರೆ ನಾನಿನ್ನು ಹೊರಡುವೆನು. ರಾಕ್ಷಸರಿಂದ ನಮ್ಮ ರಾಜಕುಮಾರನಿಗೆ ಅಪಾಯಬಾರದಂತೆ ನೋಡಿಕೊಳ್ಳುವ ಭಾರವು ನಿನ್ನದು” ಎಂದು ಹೇಳಿ ಹೊರಟುಹೋದಳು.

ಈವರೆಗೆ ಮೋಹಾವೇಶವು ಚಂದ್ರಲೇಖೆಯ ಲಜ್ಜೆಯನ್ನು ಪೂರ್ಣವಾಗಿ ಓಡಿಸಿಬಿಟ್ಟಿದ್ದ ಕಾರಣ ಆ ಯುವತಿಯು ಓಡಿ ಬಂದು, ವಿಜಯನ ಪಾದಗಳ ಮೇಲೆ ಬಿದ್ದು, “ಮೋಹನಾಂಗಾ! ನಾನು ನಿನ್ನನ್ನು ನನ್ನ ಭಾಗದ ದೈವವೂ ನನ್ನ ಅರ್ಧಪ್ರಾಣವೂ ಎಂದು ಭಾವಿಸಿ ನಿನ್ನ ದಾಸಿಯಾಗಲು ನಿರ್ಧರಿಸಿರುವೆನು. ನನ್ನನ್ನು ಕೈಬಿಡದೆ ಕಾಪಾಡುವ ಭಾರವು ನಿನ್ನದು” ಎಂದು ಹೇಳಿ ಆತನ ಎರಡು ಕೈಗಳನ್ನೂ ಹಿಡಿದು ಕಣ್ಣಿನಲ್ಲಿ ನೀರು ತಂದಳು.

ವಿಜಯನ ಮನಸ್ಸಿನಲ್ಲಿ ಮೋಹಕ್ಕೂ ವಿವೇಕಕ್ಕೂ ಬಹಳವಾಗಿ ಹೊಡೆದಾಟ ನಡೆದು ಕಡೆಗೆ ಮೋಹವೇ ಜಯ ಹೊಂದಿದ್ದ ಕಾರಣ, ಡೋಲಾಯಮಾನವಾಗಿದ್ದ ಅವನ ಮನವು ಚಂದ್ರಲೇಖೆಯ ಪ್ರಾರ್ಥನೆಗೆ ವಶವಾಗಿ ಬಿಟ್ಟಿತು. ಉಭಯರೂ ಸರಸಾಲಾಪಗಳಿಂದ ಸ್ವಲ್ಪ ಹೊತ್ತನ್ನು ಕಳೆದು ಪರಸ್ಪರ ವೃತ್ತಾಂತಗಳನ್ನು ವಿಸ್ತರಿಸಿ ತಿಳಿಸಿದರು. ವಿಜಯನ ಅಪೇಕ್ಷೆಯಂತೆ ಚಂದ್ರಲೇಖೆಯು ತಮ್ಮ ತಂದೆಯ ಬಳಿಯಲ್ಲಿರುವ ರತ್ನ ಬಾಣವನ್ನು ತಾನು ತಂದುಕೊಡುವುದಾಗಿ ಒಪ್ಪಿ, ತನ್ನನ್ನು ಕೈವಿಡಿದು ತನ್ನ ಬಂಧುಗಳ ಬಳಿಗೆ ಕರೆದುಕೊಂಡು ಹೋಗಬೇಕೆಂದು ವಿಜಯನನ್ನು ಪ್ರಾರ್ಥಿಸಿಕೊಂಡಳು. ಈ ಪ್ರಾರ್ಥನೆಯಿಂದ ವಿಜಯನಿಗೆ ವಿಜಯ ಲಕ್ಷ್ಮಿಯೂ ಭಾಗ್ಯಲಕ್ಷ್ಮಿಯೂ ಸಹ ಏಕಕಾಲದಲ್ಲಿ ಭುಜಗಳನ್ನಲಂಕರಿಸಿದಂತಾಯಿತು. ಇದರಿಂದ ಆತನು ಸಂತೋಷದಿಂದ ಸಮ್ಮತಿಸಿದನು.

ರಾತ್ರಿ ಮತ್ತೆ ತಂದೆಯ ಉಪಚಾರಕ್ಕಾಗಿ ಹೋಗಬೇಕಾಗಿದ್ದ ಕರ್ತವ್ಯವು ಚಂದ್ರಲೇಖೆಯನ್ನು ಆಕಡೆಗೆ ಸೆಳೆಯುತ್ತಿತ್ತು. ರಾಕ್ಷಸರಿಂದೇನಾದರೂ ಅಪಾಯವೊದಗಿ ತನ್ನ ಕಾರ್‍ಯಕ್ಕೆ ಭಂಗವುಂಟಾದೀತೆಂಬ ಭಯವು ವಿಜಯನನ್ನು ಚಪಲಗೊಳಿಸಿತ್ತು. ಇದರಿಂದ ಇಬ್ಬರೂ ಅಲ್ಲಿಂದ ಹೊರಡಲುದ್ಯುಕ್ತರಾದರು. ಹೃದಯಗಳು ಒಂದನ್ನೊಂದು ಅಗಲದೆ ಇದ್ದುದರಿಂದ ಶರೀರಗಳು ಆ ಸ್ಥಳದಿಂದ ಚಲಿಸುವುದೇ ಕಷ್ಟವಾಯಿತು. ಕಡೆಗೆ ಬೇರೆ ಉಪಾಯವಿಲ್ಲದೆ ಇಬ್ಬರೂ ಹೊರಡಲೇ ಬೇಕಾಯಿತು. ಮಾರನೆಯ ದಿನ ತಾನು ಒಂದು ವೇಳೆ ಹೇಳಿ ಕಳುಹಿಸಿದರೆ ಅರಮನೆಗೆ ಬರಬೇಕೆಂದು ಕೇಳಿಕೊಂಡ ಚಂದ್ರಲೇಖೆಯ ಪ್ರಾರ್ಥನೆಗೆ ವಿಜಯನು ಒಪ್ಪಿ, ಅಲ್ಲಿಂದ ತನ್ನ ಶರೀರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಸರೋಜಿನಿಯ ಮನೆಗೆ ಬಂದನು. ಚಂದ್ರಲೇಖೆಯೂ ವಿಜಯನ ಮೇಲೆ ನೆಟ್ಟ ದೃಷ್ಟಿಗಳನ್ನು ಕೀಳಲಾರದೆ ಬಹು ಪ್ರಯತ್ನದಿಂದ ಹೊರಟು ಅರಮನೆಗೆ ಬಂದು ತಂದೆಯ ಉಪಚಾರದಲ್ಲಿ ನಿರತಳಾದಳು.

ರಾತ್ರಿಯೆಲ್ಲವೂ ಉಭಯರಿಗೂ, ಆ ದಿನ ತಮಗೊದಗಿದ ಪರಸ್ಪರ ಸ್ನೇಹಾನಂದಗಳ ಸ್ಮರಣೆಯಿಂದಲೂ ಮುಂದಿನ ಆಲೋಚನೆಗಳಿಂದಲೂ, ನಿದ್ರೆಯೇ ಹತ್ತಲಿಲ್ಲ. ಸ್ವಲ್ಪ ಮಂಪರವೇನಾದರೂ ಹತ್ತಿದರೂ ಅದರಲ್ಲಿಯೂ ತಮ್ಮ ವಿಲಾಸ ವಿನೋದಗಳ ವಿಧವಿಧವಾದ ಸ್ವಪ್ನಗಳೇ ಕಾಣುತ್ತಿದ್ದವು.

ರಾಕ್ಷಸೇಂದ್ರನಿಗೆ ಆ ದಿನ ಗಾಯದ ನೋವು ಕಡಿಮೆಯಾಗಿ ಎಂದಿಗಿಂತಲೂ ಚೆನ್ನಾಗಿ ನಿದ್ದೆ ಹತ್ತಿತು. ಬೆಳೆಗಾದ ಮೇಲೆ ಎಂದಿನಂತೆ ತನ್ನನ್ನು ಉಪಚರಿಸಲು ಬಂದ ಮಗಳೊಡನೆ ಆತನು ಸಂತೋಷದಿಂದ ಮಾತನಾಡುತ್ತ, “ಮಗೂ, ನಿನ್ನ ಪ್ರೀತಿಯಿಂದ ನನಗೆ ಬಹಳ ಸಂತೋಷವಾಯಿತು. ನನ್ನ ಕಷ್ಟ ಕಾಲದಲ್ಲಿ ನನಗೆ ನೀನು ಮಾಡಿದ ಉಪಚಾರದಿಂದ ನಾನು ಅತ್ಯಾನಂದಭರಿತನಾಗಿದ್ದೇನೆ. ನಿನ್ನ ಇಷ್ಟಾರ್ಥವೇನು ಹೇಳು. ಅದನ್ನು ನಡೆಯಿಸಿ ಕೊಡುವೆನು” ಎಂದು ಮುಡಿದಡವಿ ಕೇಳಿದನು.

ಸಮಯೋಚಿತವಾಗಿ ತಂದೆಯ ಮುಖದಿಂದ ಹೊರಟ ಈ ಪ್ರಶ್ನೆಯಿಂದ ಆನಂದಭರಿತಳಾದ ಚಂದ್ರಲೇಖೆಯು, ತನ್ನ ಇಷ್ಟಾರ್ಥವನ್ನು ಸಾಧಿಸಿಕೊಳ್ಳಲು ಇದೇ ಸುಸಮಯವೆಂದು ಮನಸ್ಸಿನಲ್ಲಿ ನಲಿದು, ರಾಕ್ಷಸೇಂದ್ರನನ್ನು ನೋಡಿ ವಿನಯದಿಂದ, “ತಂದೆಯೇ, ನೀನು ನನ್ನಲ್ಲಿಟ್ಟಿರುವ ಪ್ರೀತಿಗಾಗಿ ನಾನು ನಿನಗೆ ಎಷ್ಟು ಸೇವೆಯನ್ನು ಮಾಡಿದರೆ ತಾನೆ ಸಾಕಾದೀತು! ನನ್ನ ಕರ್ತವ್ಯದಂತೆ ನಾನು ನಿನಗೆ ಸಾಮಾನ್ಯವಾಗಿ ಉಪಚಾರ ಮಾಡಿದೆನು. ನೀನು ನನ್ನ ದೋಷಗಳನ್ನು ಎಣಿಸದೆ ನನಗೆ ಈ ರೀತಿ ಪ್ರಸನ್ನನಾಗಿ ವರಪ್ರದಾನ ಮಾಡಿದುದರಿಂದ ಬಹಳ ಸಂತೋಷವಾಯಿತು. ಆದರೆ….” ಎಂದು ಅರ್ಧೋಕಿಯಲ್ಲಿ ಸುಮ್ಮನಾಗಿ ಲಜ್ಜೆಯಿಂದ ತಲೆಯನ್ನು ತಗ್ಗಿಸಿ, ನೆಲವನ್ನು ಉಂಗುಟದಿಂದ ಬರೆಯುತ್ತ ನಿಂತಳು. ಆ ಮುದ್ದು ಮೋಹನೆಯು ನಿಂತಿದ್ದ ಅಂದವನ್ನೂ ಅವಳಿಗೆ ತನ್ನಲ್ಲಿರುವ ಗೌರವ ಲಜ್ಜಾ ಭಾವಗಳನ್ನೂ ಸಹ ನೋಡಿ ದಾನವೇಂದ್ರನಿಗೆ ಮತ್ತಷ್ಟು ಪ್ರೀತಿಯು ಉಕ್ಕಿ, “ಮಗೂ, ಸಂದೇಹವೇಕೆ? ನಿನ್ನ ಇಷ್ಟಾರ್ಥವೇನಿದ್ದರೂ ಸಂಕೋಚವಿಲ್ಲದೆ ಹೇಳು. ನಾನು ನಿಸ್ಸಂದೇಹವಾಗಿ ನಡೆಯಿಸಿಕೊಡುವೆನು. ತಂದೆಯಾದ ನನ್ನಲ್ಲಿಯೂ ನೀನು ಲಜ್ಜೆ ಪಡಬೇಕೇ? ಸಾಕು; ಮಾತನಾಡು” ಎಂದನು. ಅದಕ್ಕೆ ಆ ರಮಣಿಯು “ಅಪ್ಪಾ, ಮತ್ತೇನೂ ಇಲ್ಲವು. ಎಲ್ಲ ಹೆಣ್ಣು ಮಕ್ಕಳೂ ಯಾವ ಇಷ್ಟಾರ್ಥವನ್ನು ತಂದೆಗಳಲ್ಲಿ ಹೇಳಲು ನಾಚುವರೋ ಅದನ್ನು ನೀನು ಬಲ್ಲವನಾಗಿಯೇ ಇರುವೆ. ಆ ವಿಷಯದಲ್ಲಿ ನೀನು ಮೊದಲೇ ಆಲೋಚಿಸುತ್ತಿರುವೆಯಷ್ಟೆ!” ಎಂದಳು. ಅದಕ್ಕೆ ರಾಕ್ಷಸೇಂದ್ರನು, “ಮಗೂ, ತಿಳಿಯಿತು, ನಿನ್ನ ಭಾವವು ತಿಳಿಯಿತು. ನಿನ್ನ ವಿವಾಹ ವಿಚಾರವು ತಾನೇ! ಆಗಲಿ ಆ ವಿಷಯವಾಗಿ ನಿನ್ನ ಭಾವವೇನೆಂಬುದನ್ನು ತಿಳಿಸು, ನಡೆಯಿಸುವೆನು; ಲಜ್ಜೆಯೇಕೆ?” ಎಂದು, ಬಳಿಯಲ್ಲಿ ನಿಂತಿದ್ದವಳನ್ನು ಕೈಹಿಡಿದು ತನ್ನ ಸಮೀಪದಲ್ಲಿ ಕುಳ್ಳಿರಿಸಿಕೊಂಡನು. ಚಂದ್ರಲೇಖೆಯ ಮನಸ್ಸಿನಲ್ಲಿ ಧೈರ್ಯ ಸಂತೋಷಗಳು ಹೆಚ್ಚುತ್ತ ಬಂದವು. ಆಗ ತಲೆಯನ್ನು ತಗ್ಗಿಸಿ “ಅಪ್ಪಾ! ನಾನು ಒಪ್ಪುವ ವರನಿಗೇ ನನ್ನನ್ನು ವಿವಾಹ ಮಾಡಿಕೊಡಬೇಕೆಂಬುದೇ ನನ್ನ ಪ್ರಾರ್ಥನೆಯು” ಎಂದು ಸುಮ್ಮನಾದಳು.

ಆಣಿಮುತ್ತುಗಳಂತೆ ಗಂಭೀರವಾಗಿ ಪುತ್ರಿಯ ಮುಖದಿಂದ ಹೊರಟ ನುಡಿಗಳನ್ನು ಕೇಳಿ ರಾಕ್ಷಸೇಂದ್ರನಿಗೆ ಸಂತೋಷವಾಯಿತು. ಆಗ ಮುಡಿ ದಡವಿ, “ಮಗೂ, ಇದು ಯಾವ ಪ್ರಬಲವಾದ ವಿಚಾರವೆಂದು ಇಷ್ಟು ಭಯ ಸಂಕೋಚ ದೈನ್ಯಗಳಿಂದ ಕೇಳಿಕೊಂಡೆ! ನಿನ್ನ ಇಷ್ಟದಂತೆಯೇ ಆಗಲಿ, ನೀನು ಒಪ್ಪುವ ವರನಿಗೇ ನಿನ್ನನ್ನು ಕೊಟ್ಟು ವಿವಾಹ ಮಾಡುವೆನು, ಅಂತಹ ವರನು ಯಾರಾದರೂ ನಿನ್ನ ಮನಸ್ಸಿಗೆ ಬಂದಿರುವನೇ?” ಎಂದು ಕೇಳಿದನು. ಅದಕ್ಕೆ ಸಂತೋಷದಿಂದ ಆ ಮೋಹನೆಯು, “ಅಪ್ಪಾ, ರೂಪದಲ್ಲಿ ಮನ್ಮಥನನ್ನು ತಿರಸ್ಕರಿಸುವ ತರುಣನೊಬ್ಬನು ಮಾರ್ಗವಶದಿಂದ ನಮ್ಮ ಅರಮನೆಯ ಕಡೆಗೆ ಬರುತ್ತಿದ್ದುದನ್ನು, ಉಪ್ಪರಿಗೆಯ ಮೇಲಿದ್ದ ನಾನು ನೋಡಿ ಅವನ ಸೌಂದರ್ಯ ಗಾಂಭೀರ್ಯಗಳಿಂದಾಶ್ಚರ್ಯಪಟ್ಟು, ದಾಸಿಯರ ಮೂಲಕ ಆತನ ವೃತ್ತಾಂತವನ್ನು ವಿಚಾರಿಸುವಲ್ಲಿ ಆತನು ದೇಶಸಂಚಾರಾರ್ಥವಾಗಿ ಬಂದಿರುವ ಯಾವನೋ ರಾಜಪುತ್ರನೆಂದು ತಿಳಿಯಿತು. ಆತನ ರೂಪಗಾಂಭಿರ್ಯಗಳನ್ನು ನೋಡಿದರೆ ಮಹಾ ತೇಜಸ್ವಿಯಾಗಿ ಕಾಣುವನು. ಅಪ್ಪಣೆಯಾದರೆ ದಾಸಿಯರ ಮೂಲಕ ಆತನನ್ನು ನಿನ್ನ ಸನ್ನಿಧಿಗೆ ಕರೆಯಿಸುವೆನು ನೋಡಬಹುದು” ಎಂದಳು.

ರಾಕ್ಷಸೇಂದ್ರನು ಆಗಬಹುದೆಂದು ತನ್ನ ಒಪ್ಪಿಗೆಯನ್ನು ಕೊಡಲು ಚಂದ್ರಲೇಖೆಯು ಸಂತೋಷದಿಂದ, ಆ ಕೂಡಲೇ ರಾಜಕುಮಾರನನ್ನು ಕರೆತರುವಂತೆ ದಾಸಿಯರ ಮೂಲಕ ಸರೋಜಿನಿಗೆ ಹೇಳಿ ಕಳುಹಿಸಿದಳು.

ಇತ್ತಲಾ ಸರೋಜಿನಿಯ ಮನೆಯಲ್ಲಿ, ಚಂದ್ರಲೇಖೆಯ ಲೀಲಾ ವಿಲಾಸಗಳನ್ನೆ ನೆನೆ ನೆನೆದು, ಆಕೆಯು ಯಾವಾಗ ತನಗೆ ಹೇಳಿ ಕಳುಹಿಸುವಳೋ ಎಂಬ ಆತುರದಿಂದಿದ್ದ ವಿಜಯನಿಗೆ ದಾಸಿಯರ ಮೂಲಕ ಬಂದ ಆಹ್ವಾನದಿಂದ ಪರಮಾನಂದವುಂಟಾಯಿತು. ಆ ಕೂಡಲೇ ಸರೋಜಿನಿಯು ಹೇಳಿದ ಮೇರೆಗೆ, ರಾಜಯೋಗ್ಯವಾದ ಉಡುಪನ್ನು ಧರಿಸಿ ಆಕೆಯೊಡನೆ ಅರಮನೆಗೆ ಹೊರಟು ಬಂದನು.

ವಿಜಯನಾಗಮನವನ್ನು ಅತಿ ಕುತೂಹಲದಿಂದ ನಿರೀಕ್ಷಿಸಿಕೊಂಡಿದ್ದ ಚಂದ್ರಲೇಖೆಯು ಆತನನ್ನು ತನ್ನ ತಂದೆ ಇರುವ ಸ್ಥಳಕ್ಕೆ ಬರಮಾಡಿದಳು. ಆತನು ಭಯಂಕರಾಕಾರನಾದ ಅಗ್ನಿಶಿಖನ ಮುಖವನ್ನು ನೋಡಿ ಬೆರಗಾದರೂ, ಸರ್ಪದ ಶಿರಸ್ಸಿನಲ್ಲಿರುವ ಜೀವರತ್ನವನ್ನು ಪಡೆಯಲಾತುರನಾದ ವೀರನು ಆ ಸರ್ಪದ ಘೋರಾಕಾರಕ್ಕೂ ಭೀಕರ ಫೂತ್ಕಾರಕ್ಕೂ ಹೆದರದೆ ಮುಂಬರಿಯುವಂತೆ, ರತ್ನ ಬಾಣವನ್ನೂ ಕನ್ಯಾರತ್ನವನ್ನೂ ಸಾಧಿಸುವ ಕುತೂಹಲದಿಂದಿದ್ದ ವಿಜಯನು ಲೇಶವೂ ಹಿಂದೆಗೆಯದೆ ಧೀರನಾಗಿ ಮುಂದೆ ಬಂದು ರಾಕ್ಷಸೇಂದ್ರನಿಗೆ ನಮಸ್ಕರಿಸಿದನು.

ವಿಜಯನ ಮುಖವನ್ನು ನೋಡಿದ ಕೂಡಲೆ ಅಗ್ನಿಶಿಖನಿಗೆ, ತನ್ನನ್ನು ರತ್ನ ಬಾಣದಿಂದ ಹೊಡೆದ ವ್ಯಕ್ತಿಯು ಬಂದು ಎದುರಿಗೆ ನಿಂತಿತು. ಏತಕ್ಕೆಂದರೆ, ಆ ರಾಕ್ಷಸೇಂದ್ರನು ಮಾಯಾ ಗೃಧ್ರರೂಪದಿಂದ ರತ್ನ ಬಾಣವನ್ನು ಹುಡುಕಲು ಹೋಗಿದ್ದಾಗ, ವೇದವತೀನಗರ ಪ್ರಾಂತದಲ್ಲಿ ಇದೇ ವಿಜಯನು ರತ್ನ ಬಾಣವನ್ನು ತನ್ನ ಕಡೆಗೆ ಹೊಡೆದುದನ್ನು ತನ್ನ ತೀಕ್ಷ್ಣ ದೃಷ್ಟಿಯಿಂದ ಆತನು ಸ್ಪಷ್ಟವಾಗಿ ನೋಡಿದ್ದನು. ಆದಕಾರಣ ಇವನೇ ತನಗೆ ಇಷ್ಟು ಅನರ್ಥವನ್ನುಂಟುಮಾಡಿದ ದ್ರೋಹಿಯೆಂದು ರಾಕ್ಷಸನ ಮನಸ್ಸಿನಲ್ಲಿ ಕ್ರೋಧಾಗ್ನಿಯು ಪ್ರಜ್ವಲಿಸಿತು. ಅನಂತರ ಅವನ ಚರಿತ್ರೆಯನ್ನು ವಿಚಾರಿಸುತ್ತಲೇ, ವಿಜಯನು ವೇದವತೀನಗರದರಸನಾದ ಚಂದ್ರಸೇನರಾಯನ ಮಗನೆಂದೂ ತಿಳಿಯಿತು. ಆ ಚಂದ್ರಸೇನನೇ ತನ್ನನ್ನು ಕೈಲಾಸಪರ್ವತ ಪ್ರಾಂತದಲ್ಲಿ ಮಲ್ಲಯುದ್ಧದಲ್ಲಿ ಸೋಲಿಸಿ ಈಶ್ವರದತ್ತವಾದ ರತ್ನ ಬಾಣವನ್ನು ಹೊತ್ತುಕೊಂಡು ಹೋದವನೆಂಬುದೂ ಅವನ ಮನಸ್ಸಿಗೆ ಬಂದುದರಿಂದ ಅವನ ಆಗ್ರಹವು ಇಮ್ಮಡಿಸಿತು. ಆ ಕೂಡಲೇ ವಿಜಯನನ್ನು ಶೂಲಕ್ಕೇರಿಸಬೇಕೆಂಬ ಸಂಕಲ್ಪವು ಮನಸ್ಸಿನಲ್ಲಿ ಹುಟ್ಟಿದರೂ, ಅವನು ತನ್ನ ಪುತ್ರಿಯು ಒಪ್ಪಿದ ವರನಾದುದರಿಂದ, ಅವಳಿಗೆ ತಾನು ಕೊಟ್ಟ ವಾಗ್ದಾನವನ್ನು ಆ ಕ್ಷಣವೇ ವ್ಯರ್ಥಮಾಡಿದಂತೆ ತೋರ್‍ಪಡಿಸಿಕೊಳ್ಳಬಾರದೆಂದಾಲೋಚಿಸಿ, ಉಕ್ಕಿ ಬಂದ ಮಹಾ ಕ್ರೋಧವನ್ನು ಹಾಗೆಯೇ ನುಂಗಿಕೊಂಡು, ಪುತ್ರಿಯೊಡನೆ ಸಂತೋಷವನ್ನು ನಟಿಸಿ, ವಿಜಯನ ರೂಪಲಕ್ಷಣಗಳನ್ನು ಅವಳ ತೃಪ್ತಿಗಾಗಿ ಹೊಗಳಿ, ಅವರಿಬ್ಬರೂ ಪರಸ್ಪರ ಅನುರೂಪರಾದ ವಧೂವರರೆಂದು ಬೂಟಾಟಕದ ಮೆಚ್ಚಿಕೆಯನ್ನು ತೋರ್ಪಡಿಸಿ ಉಭಯರನ್ನೂ ಬೆರಗುಮಾಡಿದನು. ಚಂದ್ರಲೇಖೆಗೂ
ವಿಜಯನಿಗೂ ತಾವಿಬ್ಬರೂ ಸತಿಪತಿಯರಾದಂತೆಯೇ ಸಂಪೂರ್ಣವಾದ ಭರವಸೆಯುಂಟಾಯಿತು. ರಾಕ್ಷಸೇಂದ್ರನು ತಾನು ರಾಜಕುಮಾರನ ಶಕ್ತಿ ಚಾತುರ್ಯಗಳನ್ನು ನೆಪಮಾತ್ರಕ್ಕೆ ಪರೀಕ್ಷಿಸಿ ಅನಂತರ ಕನ್ಯೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿ, ಮಧ್ಯಾಹ್ನದ ಮೇಲೆ ವರಪರೀಕ್ಷೆಯನ್ನೇರ್ಪಡಿಸಿದನು.

ರಾಕ್ಷಸೇಂದ್ರನ ಮಾಯಾಮಂತ್ರ ತಂತ್ರಕೃತಿಮಾದಿಗಳೆಲ್ಲವನ್ನೂ ಚೆನ್ನಾಗಿ ತಿಳಿದಿದ್ದ ಚಂದ್ರಲೇಖೆಯು, ಪರೀಕ್ಷೆಯಲ್ಲಿ ಒಂದು ವೇಳೆ ತನ್ನ ಮನೋವಲ್ಲಭನು ಸೋತು ವಿಫಲನಾದಾನೆಂಬ ಸಂದೇಹದಿಂದ, ವಿಜಯನನ್ನು ತನ್ನ ಆಪ್ತದಾಸಿಯ ಮೂಲಕ, ಗುಟ್ಟಾಗಿ ಉದ್ಯಾನದ ಲತಾಗೃಹಕ್ಕೆ ಕರೆಯಿಸಿ, ಅಲ್ಲಿ ಆತನಿಗೆ ಕೆಲವು ಮಾಯಾ ಮಂತ್ರ ತಂತ್ರಗಳ ಮರ್ಮಗಳನ್ನು ಸಾಧ್ಯವಾದ ಮಟ್ಟಿಗೆ ತಿಳಿಸಿದುದಲ್ಲದೆ, ತನ್ನ ಬಳಿಯಲ್ಲಿದ್ದ ಆಪ್ತಸಖಿಯಾದ ಮಾಧುರಿಯು ರಾಕ್ಷಸ ಮಾಯಾ ಮಂತ್ರಾದಿಗಳನ್ನು ಚೆನ್ನಾಗಿ ಬಲ್ಲವಳಾದುದರಿಂದ ಅವಳನ್ನು ಕರೆದು, “ಮಾಧುರೀ, ಈ ನನ್ನ ಪ್ರಿಯನಿಗೆ, ನಾನಿಲ್ಲದಿರುವಾಗ ರಾಕ್ಷಸಮಾಯಾ ಮಂತ್ರಾದಿಗಳಿಂದ ಯಾವ ಅಪಾಯವೂ, ಪ್ರತಿಕೂಲವೂ ನಡೆಯದಂತೆ, ನೀನು ಆತನ ಬಳಿಯಲ್ಲಿಯೇ ಗುಟ್ಟಾಗಿದ್ದು, ಸಮಯೋಚಿತವಾದ ಎಚ್ಚರಿಕೆಗಳನ್ನು ರಹಸ್ಯ ಸಂಕೇತಗಳಿಂದ ಸೂಚಿಸುತ್ತ ಜಾಗರೂಕತೆಯಿಂದಿರಬೇಕು” ಎಂದು ಹೇಳಿ ನಿಯಮಿಸಿ ಕಳುಹಿಸಿದಳು.

ರಾಕ್ಷಸರಾಜನು ಹೇಳಿದ್ದ ಮೇರೆಗೆ ಮಧ್ಯಾಹ್ನಾತ್ಪರ ಸುಮಾರು ಮೂರು ಘಂಟೆಯ ಸಮಯಕ್ಕೆ ಆತನು ವಿಜಯನನ್ನು ಕರೆಯಿಸಿ ಅರಮನೆಯ ವಿಲಾಸ ಮಂದಿರದಲ್ಲಿ ನಿಲ್ಲಿಸಿ, ಪುತ್ರಿಯಾದ ಚಂದ್ರಲೇಖೆಯನ್ನು ಬರುವಂತೆ ಕೂಗಿದನು, ಆ ಕೂಡಲೇ ಪರಸ್ಪರ ಲೇಶ ವ್ಯತ್ಯಾಸವೂ ಇಲ್ಲದ ಐದು ಮಂದಿ ಚಂದ್ರಲೇಖೆಯರು ಒಂದೇ ಸಮನಾದ ನಡೆನುಡಿ ದೃಷ್ಟಿ ಚಲನೆಗಳಿಂದ ಬಂದು ವಿಜಯನ ಎದುರಲ್ಲಿ ನಿಂತರು. ಉಡುಪಿನಲ್ಲಿಯಾಗಲಿ, ರೂಪಿನಲ್ಲಿಯಾಗಲಿ, ಧ್ವನಿಯಲ್ಲಿಯಾಗಲಿ, ಅಂಗಚೇಷ್ಟೆಗಳಲ್ಲಿಯಾಗಲಿ, ಸ್ವಲ್ಪವೂ ಭೇದವಿಲ್ಲದೆ ಪರಸ್ಪರ ಛಾಯೆಗಳಂತಿದ್ದ ಸರ್ವಾಲಂಕಾರಭೂಷಿತೆಯರಾದ ಐದು ಮಂದಿ ಮೋಹಿನಿಯರನ್ನು ನೋಡಿ ವಿಜಯನು ವಿಭ್ರಾಂತನಾದನು. ಆಗ ಅಗ್ನಿಶಿಖನು, “ವಿಜಯಕುಮಾರಾ, ಇವರಲ್ಲಿ ನೀನು ಮೆಚ್ಚಿರುವ ಚಂದ್ರಲೇಖೆಯನ್ನು ಆರಿಸಿ ಕರೆದುಕೊ” ಎಂದನು. ರಾಕ್ಷಸನು ತನಗೆ ಮೋಸ ಮಾಡಲು ಈ ರೀತಿಯಾಗಿ ಒಂದೇ ಆಕಾರವುಳ್ಳ ಚಂದ್ರಲೇಖೆಯರನ್ನು ತನ್ನ ಮಾಯಾಶಕ್ತಿಯಿಂದ ಸೃಷ್ಟಿಸಿರುವನೆಂಬುದು ವಿಜಯನ ಮನಸ್ಸಿಗೆ ಗೋಚರವಾಯಿತು. ಆ ಐದು ಮಂದಿಯಲ್ಲಿ ನಿಜವಾದ ಚಂದ್ರಲೇಖೆ ಯಾರೆಂದು ಗುರುತಿಸಲಾರದೆ ಆತನು ಸ್ತಬ್ಧನಾಗಿ ನಿಂತು ನೋಡುತ್ತಿರುವಲ್ಲಿ, ವಿಜಯನ ಎದುರಾಗಿ ದೂರದಲ್ಲಿ ನಿಂತಿದ್ದ ಮಾಧುರಿಯು ಗಟ್ಟಿಯಾಗಿ ಸೀನಿದಳು. ಆ ಸೀನಿನ ಶಬ್ದದಿಂದ ವಿಜಯನ ದೃಷ್ಟಿಯು ಅವಳ ಮೇಲೆ ಬಿತ್ತು. ಆ ಕೂಡಲೆ ಮಾಯಾಮರ್ವಗಳನ್ನು ಬಲ್ಲ ಚತುರೆಯಾದ ಮಾಧುರಿಯು ತನ್ನ ಬಲಗೈಯ ತರ್ಜನಿಯ ಬೆರಳಿನಿಂದ ಹಣೆಯ ಕುಂಕುಮವನ್ನು ಸರಿಮಾಡಿಕೊಳ್ಳುವಂತೆ ನಟಿಸಿ ವಿಜಯನ ಮುಖವನ್ನು ನೋಡಿ ಬಲಗೈ ಬೆರಳುಗಳನ್ನೆತ್ತಿ ತೋರಿಸಿದಳು. ಇದರಿಂದ ಇಂಗಿತಜ್ಞನಾಗಿಯೂ ಚಂದ್ರಲೇಖೆಯಿಂದ ಮಾಯಾಸಂಕೇತಗಳನ್ನು ಬಲ್ಲವನಾಗಿಯೂ ಇದ್ದ ವಿಜಯನು, ಎದುರಿಗಿದ್ದ ಮಾಧುರಿಯ ತರ್ಜನಿಯ ಬೆರಳು ತನ್ನ ಎಡಗಡೆಯಿಂದ ನಾಲ್ಕನೆಯದಾದ ಕಾರಣ, ಅಲ್ಲಿ ನಿಂತಿದ್ದ ಐದು ಮಂದಿ ಚಂದ್ರ ಲೇಖೆಯರಲ್ಲಿ ತನ್ನ ಎಡಭಾಗದಿಂದ ನಾಲ್ಕನೆಯವಳೇ ನಿಜವಾದ ಚಂದ್ರಲೇಖೆಯೆಂದು ನಿರ್ಧರಿಸಿ ರಾಕ್ಷಸೇಂದ್ರನ ಮುಖವನ್ನು ನೋಡಿ, “ರಾಜೇಂದ್ರಾ! ಇದೋ ಇವಳೇ ನಾನು ಮೆಚ್ಚಿರುವ ಚಂದ್ರಲೇಖೆಯು” ಎಂದು ಆಕೆಯನ್ನು ತೋರಿಸಲು ಅವಳೇ ನಿಜವಾದ ಚಂದ್ರಲೇಖೆಯಾಗಿದ್ದಳು. ತನ್ನ ಮೋಸವು ಫಲಿಸಲಿಲ್ಲವೆಂದು ಅಗ್ನಿಶಿಖನ ಮುಖವು ಕಳೆಗೆಟ್ಟಿತು. ವಿಫಲನಾದೆನೆಂಬ ವ್ಯಸನದಿಂದ ವಿಜಯನ ಮೇಲೆ ಕ್ರೋಧವು ಮತ್ತಷ್ಟು ಹೆಚ್ಚಿತು. ಆದರೂ ಮಗಳಿಗೂ ವಿಜಯನಿಗೂ ತನ್ನ ಆಂತರ್ಯವನ್ನು ಬಿಡದೆ ಹೇಗಾದರೂ ಉಪಾಯದಿಂದಲೇ ಇವನನ್ನು ನಿವಾರಿಸಿಕೊಳ್ಳಬೇಕೆಂದಾಲೋಚಿಸಿ, ರಾಕ್ಷಸನು ವಿಜಯನನ್ನು ನೋಡಿ, “ಅಯ್ಯಾ! ವಿಜಯಕುಮಾರಾ, ನಿನ್ನ ಬುದ್ದಿ ಕೌಶಲಕ್ಕೆ ನಾನು ಮೆಚ್ಚಿದೆನು, ನಿನ್ನನ್ನು ವಿನೋದಕ್ಕಾಗಿ ಪರೀಕ್ಷಿಸಲು ಈ ರೀತಿ ಮಾಯಾ ಕನ್ಯೆಯರು ನಾಲ್ವರನ್ನು ನಿರ್ಮಿಸಿ ನಿಲ್ಲಿಸಿದ್ದೆನು. ನೀನು ನಿಜವಾದ ನಮ್ಮ ಚಂದ್ರಲೇಖೆಯನ್ನು ಗುರುತು ಹಿಡಿದ ಕಾರಣ ಆಕೆಯು ನಿನ್ನವಳೇ ಆಗಿರುವಳು. ನಾನು ಈ ನಿಮ್ಮಿಬ್ಬರ ವಿವಾಹ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ನಡೆಯಿಸಬೇಕೆಂದು ಸಂಕಲ್ಪಿಸಿರುವೆನು. ಅದಕ್ಕಾಗಿ ನಮ್ಮ ಬಂಧುವರ್ಗವೆಲ್ಲವನ್ನೂ ಬರಮಾಡ ಬೇಕಾಗಿರುವುದು. ಇಲ್ಲಿಗೆ ದಕ್ಷಿಣ ದಿಕ್ಕಿನಲ್ಲಿ ಒಂದು ಯೋಜನ ದೂರದಲ್ಲಿರುವ ದುರ್ಗಾವತೀ ನಗರದ ಹೊರಗಣ ಪರ್ವತದ ಗವಿಯಲ್ಲಿ ನಮ್ಮ ಅಣ್ಣನಾದ ವೀರಭೈರವನೆಂಬ ರಾಕ್ಷಸೇಂದ್ರನು ಯಜ್ಞವನ್ನು ಮಾಡುತಿರುವನು. ಅದು ನಾಳೆಗೆ ಪೂರಯಿಸುವುದು. ನಾನು ಕೊಡುವ ಲಗ್ನ ಪತ್ರಿಕೆಯನ್ನು ನೀನು ತೆಗೆದುಕೊಂಡು ಹೋಗಿ ಆತನಿಗೆ ಕೊಟ್ಟು ವಿವಾಹಕ್ಕೆ ಪರಿವಾರ ಸಹಿತನಾಗಿ ಒರುವಂತೆ ನಾನು ಪ್ರಾರ್ಥಿಸಿಕೊಂಡೆನೆಂದು ಹೇಳಿ ಪ್ರತ್ಯುತ್ತರವನ್ನು ತರಬೇಕು. ಅವರೆಲ್ಲರೂ ಬಂದ ಮಾರನೆಯ ದಿನವೇ ನಿಮ್ಮ ವಿವಾಹಮಂಗಳವು ನೆರವೇರುವುದು” ಎಂದನು. ಅದಕ್ಕೆ ವಿಜಯನು ಬೇರೆ ಉಪಾಯವನ್ನರಿಯದೆ ಸಮ್ಮತಿಸಲೇ ಬೇಕಾಯಿತು. ಈ ವಿಚಾರವೆಲ್ಲವೂ, ಅಲ್ಲಿದ್ದ ಮಾಧುರಿಯ ಮೂಲಕ ಕ್ಷಣಮಾತ್ರದಲ್ಲಿ, ಚಂದ್ರಲೇಖೆಯ ಕಿವಿಯನ್ನು ಮುಟ್ಟಿತು.

ಅಗ್ನಿಶಿಖನು ಮಾಯಾಚಂದ್ರಕಳೆಯರನ್ನು ನಿರ್ಮಿಸಿ ಮಾಡಿದ ವರ ಪರೀಕ್ಷೆಯಿಂದಲೇ ಚಂದ್ರಕಳೆಗೆ ತನ್ನ ತಂದೆಯ ವಿಷಯದಲ್ಲಿ ಸಂದೇಹವುಂಟಾಗಿ, ಆತನು ತನ್ನ ಪ್ರಿಯನಾದ ವಿಜಯನಿಗೆ ಕೇಡನ್ನು ತರಲು ಪ್ರಯತ್ನಿಸುತ್ತಿರಬಹುದೆಂದು ತೋರಿತ್ತು. ಈ ಎರಡನೆಯ ಆಜ್ಞೆಯನ್ನು ಕೇಳಿದ ಕೂಡಲೆ, ಅವಳ ಮನಸ್ಸಿನಲ್ಲಿ ತಂದೆಯ ಕೃತ್ರಿಮವು ದೃಢಪಟ್ಟಿತು. ಆದುದರಿಂದ ಹೇಗಾದರೂ ವಿಜಯನನ್ನು ರಕ್ಷಿಸಬೇಕೆಂದು ಸಂಕಲ್ಪಿಸಿ, ಮಾಧುರಿಯ ಮೂಲಕ ಅವನನ್ನು ತನ್ನ ಅಂತಃಪುರಕ್ಕೆ ಗುಟ್ಟಾಗಿ ಬರಮಾಡಿಕೊಂಡು, ಅವನಿಗೆ ರಾಕ್ಷಸೇಂದ್ರನ ದುಗ್ಧಭಾವವನ್ನು ಕುರಿತು ಎಚ್ಚರಿಕೆಗಳನ್ನು ಕೊಟ್ಟುದಲ್ಲದೆ, ಇನ್ನೂ ಅನೇಕ ಮಂತ್ರ ಮಾಯಾಮರ್ಮಗಳನ್ನು ಬೋಧಿಸಿ, ಸ್ವಲ್ಪ ಬೂದಿಯನ್ನೂ ಒಂದು ಕಲಶದಲ್ಲಿ ನೀರನ್ನೂ ಕೆಲವು ಕಲ್ಲುಗಳನ್ನೂ ಕ್ರಮವಾಗಿ ಆಗ್ನಿ ಯಾಸ್ತ್ರ ವಾರುಣಾಸ್ತ್ರ ಪರ್ವತಾಸ್ತ್ರ ಮಂತ್ರಗಳಿಂದ ಅಭಿಮಂತ್ರಿಸಿ, ಅವನ ಕೈಗೆ ಕೊಟ್ಟು, “ಪ್ರಿಯಾ ನೀನು, ಆ ವೀರಭೈರವನ ಬಳಿಗೆ ಹೋಗಿ ಬರುವಷ್ಟರಲ್ಲಿ ನಿನಗೇನಾದರೂ ಅಪಾಯವು ಸಂಭವಿಸುವುದಾದರೆ ಇವುಗಳಲ್ಲಿ ಯಾವುದನ್ನಾದರೂ ನಾನು ಹೇಳಿಕೊಟ್ಟಿರುವ ಆಯಾ ಮಂತ್ರಗಳಿಂದ ಅಭಿಮಂತ್ರಿಸಿ ಎರಚು, ಆಗ ಬೂದಿಯನ್ನೆರಚಿದರೆ ಬೆಂಕಿಯೂ, ನೀರನ್ನೆ ರಚಿದರೆ ಸಮುದ್ರವೂ ಕಲ್ಲನ್ನೆಸೆದರೆ ಬೆಟ್ಟಗಳೂ ನಿನ್ನ ಶತ್ರುವಿಗೆ ಅಡ್ಡಲಾಗಿ ನಿಂತು ನಿನ್ನನ್ನು ರಕ್ಷಿಸುವುವು” ಎಂದು ಹೇಳಿ ಮತ್ತೆ ಅನೇಕ ವಿಧವಾದ ಎಚ್ಚರಿಕೆಗಳನ್ನು ಕೊಟ್ಟು ಅವನನ್ನು ಬೀಳ್ಕೊಟ್ಟಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಮ್ಮೊಮ್ಮೆ ಹೀಗೂ ಆಗುವುದು
Next post ಹಳ್ಳಿಯ ದಾರಿ

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…