ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ.
ಗಂಟುಗಂಟಾಗಿ ಸಿಕ್ಕು ಬಿದ್ದು ಅ-
ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ
ಜ್ಞಾನಪಾತ್ರೆಯ ಎದುರು ಹಸಿದ ಕಂಗಳು
ಮೂರ್‍ಚೆಗೊಂಡ ಮನಸ್ಸು
ನಗ್ನವಾಗಿ ನಿಂತುಬಿಟ್ಟವು
ಕಾಲ ಚಲಿಸಲಿಲ್ಲ.
ಆದರೆ ಮಜ್ಜಿಗೆಯೂಡಿದ
ಮರುಗಳಿಗೆ
ಅಮಲು ಇಳಿಯುವುದು
ಕಣ್ಣುಗಳ ಮಂಜು ಮಬ್ಬು ಕರಗುವುದು.
ಒಳದೃಷ್ಟಿ ಬೆಳಗುವುದು
ಹೆಚ್ಚು ಹೆಚ್ಚು ವ್ಯಾಖ್ಯಾನಿಸಿದಷ್ಟು
ಒಳಾರ್ಥದ ಕುದಿ
ಕಂದಿಹೋಗುವುದು ಮಿತಿಯ ಗತಿ
ಸೆಳೆದಷ್ಟು ಮರ್‍ಮ ಬೆಳೆಯುವುದು.
ಭವದ ಬಲೆಯಲ್ಲಿ ತೂಗುತ್ತ
ಹಾಲಾಹಲ ಚೂರು ಚೂರೇ
ಸಂಗಾತಕ್ಕೆ ಸರಿಗಟ್ಟಿತು.
ಜೀವ ನಿಲ್ಲುವುದಿಲ್ಲ
ನೆಲ ನೀರು ಕೂಡಿತೆಂದರೆ
ಬರಡು ಮಲೆಯಾಯಿತು.
ಕಾಷ್ಠದ ತೊಗಲಿಗೂ ಮಿಂಚುಹುಳುಗಳು
ಮುಕುರಿ ಜಗ್ಗನೇ ಹೊಳಪು ಹೊದ್ದ
ಮನ ಮಿರುಗಿತು.
ಶಮನಗೊಂಡಿತು ಉರಿ.
ಹೊಲದ ಅಂಚು ಹೊದ್ದ
ಬೇಲಿಗಂಬವನ್ನು ಬಿಡದೆ
ಅಂಟಿಕೊಂಡರೂ ಗೆದ್ದಲು
ಚಿಗುರುಕ್ಕಿ ನಸುನಕ್ಕಿತು.
*****