ಜಡ

ಜಡ

ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ ಸಂದರ್ಭಗಳು ಬರುತ್ತಿದ್ದದ್ದು ತೀರಾ ಅಪರೂಪ. ಹೆಸರಿನ ಮಹತ್ವವೇನು ಎಂದು ಚಿಂತಿಸುವ ಗೋಜಿಗೆಂದೂ ಅವನು ಹೋದವನಲ್ಲ. ಅದರ ಅವಶ್ಯಕತೆಯೂ ಅವನಿಗೆ ಕಂಡಿರಲಿಲ್ಲ.

ತಲತಲಾಂತರಗಳಿಂದ ಅವನ ವಂಶಜರೆಲ್ಲರ ಬದುಕು ಸಾಗಿಹೋಗಿದ್ದಂತೆ ಅವನ ಬದುಕೂ ಸಾಗಿತ್ತು. ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೆ ಹೆಚ್ಚು ಕಡಿಮೆ ನಿರ್ವಿರಾಮ ಕೆಲಸ ಸಿಕ್ಕಿದ್ದು ತಿಂದು ಮಲಗಿದರೆ ಕನಸುಗಳಿಗೂ ಅವಕಾಶವಿಲ್ಲ. ದಣಿವಿನ ಕಾರಣ ಅಷ್ಟು ಗಾಡನಿದ್ರೆ, ಹೊಲದಲ್ಲಿ ಕೆಲಸ ಮಾಡುವಾಗ, ಎಮ್ಮೆ, ಆಕಳುಗಳ ಚಾಕರಿ ಮಾಡುತ್ತಿದ್ದಾಗ ಅವನು ಹಗಲು ಕನಸುಗಳನ್ನು ಕಾಣುತ್ತಿದ್ದ. ಅವು ಬಹು ಸೀಮಿತ.

ಮಳೆಗಾಲದವರೆಗೆ ಗುಡಿಸಲು ಸೋರದಂತೆ, ಒಳಗಿನ ನೆಲ ನೆನಯದಂತೆ ಎಲ್ಲ ವ್ಯವಸ್ಥೆ ಮಾಡಿಸುತ್ತೇನೆಂದು ಹೇಳಿದ್ದರು ಒಡೆಯರು. ಹಾಗವರು ಪ್ರತಿ ಮಳೆಗಾಲ ಸಮೀಪಿಸಿದಾಗಲೂ ಹೇಳುತ್ತಾ ಬಂದಿದ್ದಾರೆ. ಈ ಸಲ ಅದನ್ನವರು ಸರಿಪಡಿಸಲೇಬೇಕು. ಹಾಗಾಗದಿದ್ದರೆ, ಅಮ್ಮ ಈ ಮಳೆಗಾಲ ಮುಗಿಯುವವರೆಗೆ ಬದುಕಲಾರಳೇನೋ! ಅವಳಿಗೆ ಉಬ್ಬಸದ ರೋಗ. ಅದು ಉಲ್ಬಣವಾದಾಗ ಯಾವಾಗ ಉಸಿರಾಟ ನಿಂತು ಹೋಗುತ್ತದೆಯೋ ಎಂಬಂತ ಸಾಗಿರುತ್ತಿತ್ತವಳ ಉಸಿರಾಟ. ಅಪ್ಪ, ತಾನು ಸೇರಿ ಸಿಕ್ಕ ಸಿಕ್ಕ ದೇವರುಗಳಿಗೆಲ್ಲ ಹರಕೆ ಹೊತ್ತಾಗಿದೆ. ಹತ್ತಿರದ ಬೇರೆ ಹಳ್ಳಿಗಳಿಗೂ ಹೋಗಿ ವೈದ್ಯರು ಹೇಳಿದ ಗಿಡಮೂಲಿಕೆಗಳ ಔಷಧಗಳನ್ನು ತಂದು ಅವಳಿಗೆ ಹಾಕಿಯಾಗಿದೆ. ಹೋದ ಮಳೆಗಾಲ ಆರಂಭವಾಗುವ ಮುನ್ನ ಪೀರ್‌ಬಾಬನಿಂದ ತಾಯಿತವೊಂದನ್ನು ಮಂತ್ರಿಸಿ, ಕಟ್ಟಿಸಿಯೂ ಆಗಿತ್ತು. ಅದರಿಂದ ಯಾವ ವಿಶೇಷ ಪರಿಣಾಮವೂ ಆಗಿರಲಿಲ್ಲ. ಛಳಿಗಾಲದಲ್ಲಂತೂ ಆಕೆ ನಿರ್ವಿರಾಮವಾಗಿ ಭಯ ಹುಟ್ಟಿಸುವಂತೆ ಕಮ್ಮುತ್ತಾ ಕಂಬಳಿ ಹೊದ್ದು ಒಲೆಯ ಮುಂದೆಯೇ ಕುಳಿತು ಬಿಡುತ್ತಿದ್ದಳು. ಹೊಗೆಯಿಂದ ಉಬ್ಬಸ ಇನ್ನೂ ಹೆಚ್ಚಾಗುತ್ತದೆ ಎಂದು ಯಾರೋ ಹೇಳಿದಾಗಿನಿಂದ ತಂಗಿಯೇ ಕಟ್ಟಿಗೆಗಳನ್ನು ಉರಿಸಿ ಕೆಂಡ ಮಾಡುತ್ತಿದ್ದಳು. ಹೊಗೆಯನ್ನು ಉಗಿದು ಕಟ್ಟಿಗೆ ಕೆಂಡವಾಗಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಕೆಂಡವಾದ ಮೇಲೂ ಮಿಕ್ಕ ಚಿಕ್ಕ ಪುಟ್ಟ ಕಟ್ಟಿಗೆಯ ತುಂಡುಗಳು ಹೊಗೆಯನ್ನು ಉಗುಳುತ್ತಿದ್ದವು. ಅದರಿಂದಲಂತೂ ಮುಕ್ತಿಯಿಲ್ಲ. ತಾಯಿ ಅನುಭವಿಸುತ್ತಿದ್ದ ಹಿಂಸೆಯನ್ನು ಎಷ್ಟೋಸಲ ನೋಡಿದ ಮಾರಯ್ಯ ಅವಳು ಸತ್ತಾದರೂ ಹೋದರೆ ಈ ಅಸಹನೀಯಹಿಂಸೆಯಿಂದ ಮುಕ್ತಿ ದೊರೆಯಬಹುದೇನೋ ಎಂದುಕೊಳ್ಳುತ್ತಿದ್ದ. ಇಷ್ಟಾದರೂ ಆಕೆ ಕೆಮ್ಮುತ್ತಲೇ, ಏದುಸಿರು ಬಿಡುತ್ತಲೇ ಮನೆಯ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಳು. ತಾಯಿಯ ಈ ಹಿಂಸೆಯಿಂದ ಸ್ವಲ್ಪವಾದರೂ ಮುಕ್ತಿ ದೊರೆಯಲೆಂದು ಅವನು ಮಳೆ ಬಂದರೆ ಸೋರದಿರುವಂತಹ ಗುಡಿಸಲಿನ ಕನಸು ಕಾಣುತ್ತಿದ್ದ.

ಮಾರಯ್ಯನ ಎರಡನೆಯ ಕನಸು ತಂಗಿಯ ಮದುವೆಯದು. ಅದನ್ನು ಆದಷ್ಟು ಬೇಗ ಮಾಡಿಬಿಡಬೇಕೆಂಬುದವನ ಆಸೆ. ಹದಿನಾರು ವರುಷಗಳು ಅವಳ ದೇಹವನ್ನು ಎಲ್ಲ ಕಡೆಯಿಂದಲೂ ತುಂಬಿಬಿಟ್ಟಿದ್ದವು. ಆಗಲೇ ಹಲವಾರು ಜನರ ಕೆಟ್ಟ ನೋಟಗಳು ಅವಳ ದೇಹದ ಮೇಲೆಲ್ಲ ಹರಿದಾಡುತ್ತಿದ್ದವು. ಮದುವೆಗೂ ಒಡೆಯನೇ ಸಹಾಯ ಮಾಡುವನೆಂದವನ ನಂಬಿಕೆ. ಆ ನಂಬಿಕೆಯ ಆಧಾರದ ಮೇಲೆ ಕನಸುಗಳು. ಗಂಡನ ಆಸರೆಯಾದರೆ ಅವಳ ದೇಹದ ಮೇಲೆಲ್ಲ ಕೆಟ್ಟ ನೋಟಗಳು ಹರಿದಾಡುವುದು ನಿಲ್ಲಬಹುದು.

ಒಡೆಯನ ಮನೆ ಹೊಲಗಳಲ್ಲಿ ಮಾರಯ್ಯ, ಅವನ ತಂದೆ ಮತ್ತು ತಂಗಿಯಂದಿರು ದುಡಿಯುತ್ತಿದ್ದರು. ಸೆಕೆಗಾಲದಲ್ಲಿ ತಾಯಿಯ ಆರೋಗ್ಯ ಸ್ವಲ್ಪ ಸುಧಾರಿಸುತ್ತಿತ್ತು. ಆಗ ಅವಳು ಒಡೆಯನ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ಬರುತ್ತಿದ್ದಳು. ಇಷ್ಟು ಮಾಡಿದರೂ ಆ ನಾಲ್ವರ ಸಂಸಾರ ಹೊಟ್ಟೆ ತುಂಬ ಉಂಡು, ತೇಗಿದ ದಿನಗಳು ಅಪರೂಪ. ಅದಕ್ಕೆ ಮಾರಯ್ಯನ ಅಪ್ಪ ಒಡೆಯನ ಬಳಿ ಮಾಡಿದ ಸಾಲ, ಅದು ಎಷ್ಟು, ಯಾವಾಗ ಪೂರ್ತಿ ತೀರುತ್ತದೆಂಬುದನ್ನು ಅವನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಮಾರಯ್ಯ ಅದನ್ನು ಕೇಳಲು ಒಂದೆರಡು ಸಲ ಯತ್ನಿಸಿದಾಗ ಒರಟಾಗಿ ಬೈದುಬಿಟ್ಟಿದ್ದ. ಆ ವಿಷಯ ಒಡೆಯ ಮತ್ತು ಅಪ್ಪನ ನಡುವಿನದು, ತಾನು ಇಲ್ಲದ ಪಂಚಾಯಿತಿ ಮಾಡಬಾರದೆಂದು ಆ ಮಾತು ತೆಗೆಯುವುದನ್ನು ಬಿಟ್ಟುಬಿಟ್ಟ. ಒಂದೊಂದು ಸಲ ತಂದೆ ವಿಪರೀತವಾಗಿ ಕುಡಿದು ಮನೆಗೆ ಬಂದಾಗ ಬಾಯಿಗೆ ಬಂದಹಾಗೆ ಒದರಾಡುತ್ತಿದ್ದ. ಮನೆಯಲ್ಲಿನ ಯಾರಿಗೂ ಅವನ ಸಿಟ್ಟು, ಯಾರ ಮೇಲೆಂಬುವದು ಅರ್ಥವಾಗುತ್ತಿರಲಿಲ್ಲ. ಒದರಾಡಿ ಒದರಾಡಿ ದಣಿದ ಅವನು ಆ ದಿನ ಊಟವಿಲ್ಲದೆ ಮಲಗಿಬಿಡುತ್ತಿದ್ದ.

ಕಾಲಾನುಕಾಲದಿಂದ ಹರಿದುಬಂದ ದೈನ್ಯತೆ ಮಾರಯ್ಯನ ರಕ್ತದಲ್ಲೂ ತುಂಬಿತ್ತು. ಈವರೆಗೂ ಅವನು ಯಾವ ಮೇಲ್ಪಾತಿಯವರ ಕಣ್ಣಲ್ಲಿ, ಕಣ್ಣಿಟ್ಟು ಮಾತಾಡಿರಲಿಲ್ಲ. ಅದು ಮಾರಯ್ಯನಿಗೆ ಧೈರ್ಯ, ಅಧೈರ್ಯದ ಅಥವಾ ಮೇಲು ಕೀಳಿನ ಪ್ರಶ್ನೆಯೇ ಆಗಿರಲಿಲ್ಲ. ಅದು ಹಾಗೇ ನಡೆಯುತ್ತಾ ಬಂದಿದೆ. ಹಾಗೇ ನಡೆಯುತ್ತಿರಬೇಕೆಂಬುವುದು ಅವನ ನಿರ್ಣಯ. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಮಾರಯ್ಯ ಬಹು ಸೌಮ್ಯ ವ್ಯಕ್ತಿ.

‘ಪ್ರೀತಿ, ಕಾಮ, ಪ್ರೇಮ, ಅನುರಾಗ, ಅನುಕಂಪ, ಅವಮಾನದಂತಹ ಶಬ್ದಗಳು ಅವನಿಗೆ ಗೊತ್ತಿರಲಿಲ್ಲ. ಅವುಗಳ ಅರ್ಥದ ಮಾತೂ ಬಹುದೂರ ಉಳಿಯಿತು. ಕೆಲ ಸಿನಿಮಾಗಳನ್ನು, ಹಲವಾರು ಸಲ ಟೀವಿಯನ್ನು ನೋಡಿದ್ದರಿಂದ ಪ್ರೇಮ, ಪ್ರೀತಿಸುವದೆಂದರೆ ಹೆಣ್ಣು, ಗಂಡುಗಳುದೇಹಕ್ಕೆ ದೇಹ ತಾಗಿಸುತ್ತಾ ಮಾತಾಡುವುದು, ಕುಣಿದಾಡುವುದೆಂದೇ ಅವನು ಅರ್ಥೈಸಿಕೊಂಡಿದ್ದ. ಆ ಮಾಧ್ಯಮಗಳಿಂದಲೇ ಲವ್ ಎಂಬ ಇಂಗ್ಲೀಷ್ ಪದವನ್ನು ಅರಿತುಕೊಂಡಿದ್ದ ಮಾರಯ್ಯ.

ದಿನಾಗಲೂ ಮನೆಯಲ್ಲಿ ಅಪ್ಪ, ಅಮ್ಮಂದಿರ ಊಟವಾದ ನಂತರವೇ ಅಣ್ಣ, ತಂಗಿಯಂದಿರು ಊಟ ಮಾಡುತ್ತಿದ್ದರು. ಯಾರಿಗೆ ಎಲ್ಲಿ ಕಡಿಮೆ ಬೀಳುವುದೋ ಎಂಬ ಭಯ ಅವರಿಗೆ. ತನಗೆ ಕಡಿಮೆಯಾದರೂ ಚಿಂತೆಯಿಲ್ಲ. ತಂಗಿ ಹೊಟ್ಟೆ ತುಂಬ ಉಣ್ಣಬೇಕೆಂದು ಅವನ ಆಸೆ. ತಂಗಿಯೂ ಅಷ್ಟೇ ಯಾವಾಗಲೂ ಅಣ್ಣನನ್ನು ತೃಪ್ತಿಪಡಿಸಲು ಯತ್ನಿಸುತ್ತಿದ್ದಳು. ಅವನಿಗೇನಾದರೂ ಆದರೆ ಅವಳ ಮನ ಅವನಿಗಿಂತ ಹೆಚ್ಚು ತಲ್ಲಣಗೊಳ್ಳುತ್ತಿತ್ತು. ತಾಯಿಯ ಉಬ್ಬಸ ಹೆಚ್ಚಾದಾಗ ಅವರಿಬ್ಬರೂ ಅವಳಿಗಿಂತ ಹೆಚ್ಚು ಹಿಂಸೆ ಅನುಭವಿಸುತ್ತಿದ್ದರು. ಅದೇ ಕಾರಣಕ್ಕೆ ಎಷ್ಟೋ ರಾತ್ರಿಗಳು ಜಾಗರಣೆಯೂ ಮಾಡಬೇಕಾಗಿ ಬರುತ್ತಿತ್ತು. ಇಂತಹ ತಮ್ಮ ಅನುಬಂಧ ಕೂಡ ಒಬ್ಬರ ಪ್ರೀತಿ ಒಬ್ಬರಿಗಿರುವ ಪ್ರೇಮ, ಪ್ರೀತಿ, ಲವ್ ಎಂಬುವುದು ಮಾರಯ್ಯನ ತಲೆಯಲ್ಲಿ ಸುಳಿದೇ ಇರಲಿಲ್ಲ.

ಕಾಲಾನುಕಾಲದಿಂದ ದಿನಗಳು ಉರುಳುತ್ತಾ ಬಂದಂತೆ ಈಗಲೂ ದಿನಗಳು ಉರುಳಿಹೋಗುತ್ತಿದ್ದವು. ಕಾಲಾನುಕಾಲದಿಂದ ಒಡೆಯನ ಮನೆಯಲ್ಲಿ ಮಾರಯ್ಯನ ಪೂರ್ವಜರು ಕೆಲಸ ಮಾಡುತ್ತಾ ಬಂದಂತೆ ಈಗಲೂ ಮಾಡುತ್ತಿದ್ದರು. ಜೀವನಗತಿಯಲ್ಲಿ ಯಾವ ತರಹದ ಬದಲಾವಣೆ, ಲವಲವಿಕೆ ಇರಲಿಲ್ಲ. ಅಂತಹದನ್ನು ಅವರು ಅಪೇಕ್ಷಿಸಿಯೂ ಇರಲಿಲ್ಲ.

ಮಳೆಗಾಲ ಆರಂಭವಾಗಲಿರುವ ಸೂಚನೆಗಳು ಕಂಡುಬರತೊಡಗಿದಾಗ ಮಾರಯ್ಯ ಒಡೆಯನೆದುರು ಬಹು ವಿಧೇಯತೆಯಿಂದ ತನ್ನ ಗುಡಿಸಲನ್ನು ಸರಿಪಡಿಸುವ ಮಾತು ಎತ್ತಿದ್ದ. ಯಾವುದೋ ಲೆಕ್ಕ ಪತ್ರದಲ್ಲಿ ನಿರತರಾದ ಅವರು ಸಿಡುಕಿನ ಮುಖ ಮಾಡಿ ಈಗ ಆಗುವುದಿಲ್ಲ ಮುಂದಿನ ವರ್ಷ ಅದನ್ನು ನೋಡುವ ಎಂಬ ಅಪ್ಪಣೆ ಹೊರಡಿಸಿ ಮತ್ತೆ ತಮ್ಮ ಲೆಕ್ಕಪತ್ರಗಳಲ್ಲಿ ಲೀನರಾಗಿ ಬಿಟ್ಟಿದ್ದರು. ಎಲ್ಲ ದೇವರ ಇಚ್ಛೆಯೆಂದುಕೊಳ್ಳುತ್ತಾ, ಒಡೆಯರಿಗೆ ಬೆನ್ನು ತೋರಿಸದೆ ಹಿಂದಕ್ಕೆ ನಡೆಯುತ್ತಾ ಆ ಕೋಣೆಯಿಂದ ಹೊರಬಿದ್ದಿದ್ದ ಮಾರಯ್ಯ.

ಪ್ರತಿ ವರ್ಷದ ಮಳೆಗಿಂತ ಆ ವರ್ಷದ ಮಳೆ ಬಹಳ ಹೆಚ್ಚೇ ಆಯಿತು. ಮಾರಯ್ಯ ಅಂದುಕೊಂಡದ್ದು ನಿಜ ಕೂಡ ಆಯಿತು. ಉಬಸ ಉಲ್ಬಣವಾಗಿ ಇನ್ನೂ ಉಸಿರಾಡಲು ಶಕ್ತಿ ಇಲ್ಲದಂತೆ ಉಸಿರು ಕಟ್ಟಿ ಸತ್ತಿದ್ದಳವನ ಅಮ್ಮ, ಮಳೆ ನೀರಿನಲ್ಲಿ ನೆನೆಯುತ್ತಲೇ ಅವಳ ದೇಹದ ಮೇಲೆ ಬಿದ್ದು ರೋದಿಸಿದ್ದರು ಅಣ್ಣ ತಂಗಿ. ಯೋಗಿಯಂತೆ ಒಂದು ಮೂಲೆಗೆ ಮುದುಡಿ ಕುಳಿತ ಅವರ ಅಪ್ಪ ಆ ಮೂವರನ್ನೂ ಏಕಾಗ್ರಚಿತ್ತದಿಂದ ನೋಡುತ್ತಿದ್ದ, ಬೆಳಿಗ್ಗೆ ಶವಸಂಸ್ಕಾರಕ್ಕೆ ಒಡೆಯನ ಬಳಿಯೇ ಹಣ ಕೇಳಲು ಹೋಗಬೇಕಾಯಿತು. ಉಬ್ಬಸದ ಮುದುಕಿ ಸತ್ತದ್ದೇ ಒಳ್ಳೆಯದಾಯಿತನ್ನುತ್ತಾ ಹಣ ಕೊಟ್ಟು ಲೆಕ್ಕ ಬರೆದುಕೊಂಡನಾತ. ತಾಯಿಯನ್ನು ಮಣ್ಣು ಮಾಡಿ ಬಂದ ಮೇಲೆ ಮಂಕು ಬಡಿದವರಂತೆ ಒಂದೊಂದು ಮೂಲಗೆ ಕುಳಿತಿದ್ದರು ಅಣ್ಣ ತಂಗಿ, ರಾತ್ರಿಯಾಗುತ್ತಿದ್ದಂತೇ ಕುಡಿದು ಬಂದ ಅಪ್ಪ ಗುಡಿಸಲಲ್ಲಿ ಕುಸಿದು ಬೀಳುವುದೋ ಎಂಬಂತೆ ಅಳತೊಡಗಿದ. ಅದು ಗುಡಿಸಲಿನವರಿಗೆ ಮಾತ್ರ ಗೊತ್ತಾಗುವಂತಹ ನೋವು, ತಮ್ಮ ಬರಡುತನವನ್ನು ಹಂಚಿಕೊಳ್ಳಲೆಂಬಂತೆ ಆ ಇಬ್ಬರೂ ಅಪ್ಪನ ಹತ್ತಿರ ಸರಿದು ಬಂದರು.

ಗುಡಿಸಲಿನಲ್ಲಿ ಈಗ ಸಾವಿನ ಭಯ ಹುಟ್ಟಿಸುವಂತಹ ಏದುಸಿರಿನ ಸದ್ದಿಲ್ಲ. ಒಂದು ಅಸಹನೀಯ ಮೌನ. ಕೆಲ ದಿನಗಳು ಅದು ಬಹು ಅಸಹಜವೆನಿಸಿತು, ಮಿಕ್ಕ ಮೂವರಿಗೆ ಸಮಯದೊಡನೆ ಅದೂ ಅವರಿಗೆ ಅಭ್ಯಾಸವಾಯ್ತು.

ಆ ದಿನ ಮಾರಯ್ಯ ಹೊಲದ ಕೆಲಸ ಮುಗಿಸಿ ಕೊಟ್ಟಿಗೆಗೆ ಬಂದಾಗ ವಿಚಿತ್ರ ಕೂಗುಗಳು ಕೇಳಿ ಬಂದವು. ಅದು ತನ್ನ ತಂಗಿಯದೇ ದನಿಯೆಂದು ಗುರುತಿಸಿದ ಅವನು ಆ ದಿಕ್ಕಿಗೆ ಓಡಿದ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಒಂದು ಕೋಣೆಯಿಂದ ಕೇಳಿ ಬರುತ್ತಿದ್ದವು. ಕೂಗುಗಳು, ಗಾಭರಿಯಲ್ಲಿ ಕೋಣೆಯ ಬಳಿ ಬಂದಾಗ ಒಳಗಿನಿಂದ ಬಾಗಿಲು ಹಾಕಲ್ಪಟ್ಟಿತ್ತು. ತೆರೆದ ಕಿಟಕಿಯಿಂದ ನೋಡಿದ. ತನ್ನ ತಂಗಿಯ ಸೀರೆ ಅರ್ಧ ಬಿಚ್ಚಲ್ಪಟ್ಟು, ಕುಪ್ಪಸ ಪೂರ್ತಿ ಹರಿದಿತ್ತು. ಒಡೆಯ ಅವಳ ಮೇಲೆರಗುವ ಯತ್ನ ನಡೆಸಿದ್ದ. ಕೂಗಾಡುತ್ತಲೇ ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು ತಂಗಿ, ಏನು ಮಾಡಬೇಕೆಂದು ತೋಚದ ಮಾರಯ್ಯ ಹುಚ್ಚನಂತೆ ಕೋಣೆಯ ಬಾಗಿಲು ಬಡಿಯುತ್ತಾ ನಿಸ್ಸಹಾಯ ಚೀತ್ಕಾರಗಳನ್ನು ಹೊರಡಿಸ ತೊಡಗಿದ. ತನ್ನ ತಂದೆಯ ವಯಸ್ಸಿನ ಒಡೆಯ ಇಂತಹದನ್ನು ಮಾಡಬಹುದು ಎಂದು ನಿರೀಕ್ಷಿಸಿರದ ಮಾರಯ್ಯ ದಿಗ್ಮೂಢ ಸ್ಥಿತಿಯಲ್ಲಿ ಬಾಗಿಲು ಬಡಿಯುತ್ತ ತನ್ನ ಎಲ್ಲ ಶಕ್ತಿಯಿಂದ ಅದನ್ನು ಮುರಿಯುವ ಯತ್ನದಲ್ಲಿ ತೊಡಗಿದ. ಅವನಲ್ಲಿ ವಿಚಿತ್ರ ಆವೇಶ ಹೊಕ್ಕಿತ್ತು.

ಮಾರಯ್ಯನ ಶಕ್ತಿಯಿಂದ ಬಾಗಿಲು ಮುರಿಯಲ್ಲಿಲ್ಲ. ಸ್ವಲ್ಪ ಸಮಯದ ಬಳಿಕ ಅದು ಒಳಗಿನಿಂದ ತಾನಾಗೇ ತೆಗೆದುಕೊಂಡಿತು. ಪಂಚೆ ಸರಿಪಡಿಸಿಕೊಳ್ಳುತ್ತಾ ಒಡೆಯ ಆಡಿದ ಮಾತು ಅವನಿಗೆ ಕೇಳಿಸಲಿಲ್ಲ. ನೋಡಬೇಕೋ ಬೇಡವೋ ಎಂಬಂತೆ ಅವನು ಒಳಗೆ ನೋಟ ಹಾಯಿಸಿದಾಗ ಒಂದು ಮೂಲೆಗೆ ಮುದ್ದೆಯಾಗಿ ಕುಳಿತ ಅವನ ತಂಗಿ ಅಮ್ಮ ಸತ್ತಾಗಿನಕಿಂತ ಹೆಚ್ಚು ಹೃದಯವಿದಾರಕವಾಗಿ ಅಳುತ್ತಿದ್ದಳು. ಹಾಗೇ ಸ್ವಲ್ಪ ಹೊತ್ತು ಕಳೆದ ಮೇಲೆ ಬಹು ಕಷ್ಟಪಟ್ಟು ಹೇಳಿದ ಮಾರಯ್ಯ,

“ಏಳು ಬಟ್ಟೆ ಉಡು… ಮನೆಗೆ ಹೋಗೋಣ ಎಲ್ಲ ಸರಿಯಾಗುತ್ತೆ… ಅಳಬೇಡ”

ಅವನ ಮಾತು ಅಳುವಿನಂತೆಯೇ ಧ್ವನಿಸಿತು. ತನ್ನ ನೋಟವನ್ನು ಬೇರೆಡೆ ತಿರುಗಿಸಿದ್ದಂತೆಯೇ ಅವನ ತಂಗಿ ಲಗುಬಗೆಯಿಂದ ಸೀರೆ ಸುತ್ತಿಕೊಂಡು ತಲೆಯ ಮೇಲಿನಿಂದ ಸೆರಗನ್ನು ಹೊದ್ದು ಹೊರಬಂದಳು. ತಾವೇ ಯಾವುದೋ ಅಪರಾಧ ಮಾಡಿದವರಂತೆ ಇಬ್ಬರೂ ತಲೆ ಕೆಳಹಾಕಿಕೊಂಡು ಮೌನವಾಗಿ ಗುಡಿಸಲಿಗೆ ಬಂದರು.

ಆಗತಾನೇ ಒಡೆಯನ ಹೊಲದ ಕೆಲಸದಿಂದ ಬಂದಿದ್ದ ಅಪ್ಪನನ್ನು ನೋಡುತ್ತಲೇ ಅವಳ ದುಃಖವಲ್ಲ ಒಮ್ಮೆಲೇ ಉಮ್ಮಳಿಸಿ ಬಂದಿತ್ತು. ಅವನನ್ನು ಬಿಗಿದಪ್ಪಿ ಬಿಕ್ಕಿಬಿಕ್ಕಿ ಅಳತೊಡಗಿದಳು. ಮಾರಯ್ಯ ಏನು ಹೇಗೆ ಮಾತಾಡಬೇಕೆಂದು ತೋರದ ನಿಸ್ಸಹಾಯಕನಂತೆ ಎರಡೂ ಕೈಗಳಿಂದ ತಲೆ ಹಿಡಿದು ಗುಡಿಸಲಿನ ಒಂದು ಮೂಲೆಗೆ ಕುಳಿತ. ಬಿಕ್ಕುವಿಕೆಯ ನಡುವೆಯೇ ತನಗಾದ ಹಿಂಸೆಯ ಸಾರಾಂಶ ಹೇಳಿದಳವಳು. ಬಹು ಸಾಮಾನ್ಯ ಘಟನೆಯೊಂದು ನಡೆದಂತೆ ಅವಳ ಬೆನ್ನು ತಟ್ಟುತ್ತಾ ಹೇಳಿದ ಅವಳ ಅಪ್ಪ.

“ಅದದ್ದು ಆಗಿ ಹೋಯಿತು. ಅವರು ಒಡೆಯರು, ದೊಡ್ಡವರು, ನಾವೇನೂ ಮಾಡುವ ಹಾಗಿಲ್ಲ. ಆದಷ್ಟು ಬೇಗ ನಿನ್ನ ಮದುವೆ ಮಾಡಿಸಿಬಿಡಿರೆಂದು ನಾಳೆ ನಾನೇ ಅವರನ್ನು ಕೇಳಿಕೊಳ್ಳುತ್ತೇನೆ! ಅಳಬೇಡ… ಅಳಬೇಡ. ನಮ್ಮ ಬದುಕಿನಲ್ಲಿ ಇದೆಲ್ಲಾ ಮಾಮೂಲು, ಅಳಬೇಡ”

ಅಪ್ಪ ಹೇಳುತ್ತಿರುವುದು ಸರಿಯೆನಿಸಿತು ಮಾರಯ್ಯನಿಗೆ ಆದರೂ ಆ ರಾತ್ರಿ ಅವನಿಗೆ ನಿದ್ದ ಸರಿಯಾಗಿ ಬರಲಿಲ್ಲ. ಏನೇನೋ ಇಲ್ಲಸಲ್ಲದ ಯೋಚನೆಗಳು, ಇಂತಹದು ಆಗುವ ಮುನ್ನ ಅಮ್ಮ ಹೋದದ್ದೇ ಒಳ್ಳೆಯದಾಯಿತೆಂದುಕೊಳ್ಳುತ್ತಾ ನಿದ್ದೆಯಲ್ಲಿ ಜಾರಿದ ದಣಿದ ದೇಹಕ್ಕೆ ಅದೇ ಬೇಕಾಗಿತ್ತು.

ಮಾರಯ್ಯ ಏಳುವ ಹೊತ್ತಿಗೆ ಅವನ ತಂಗಿ ಎದ್ದು ಮನೆಯ ಕೆಲಸ ಆರಂಭಿಸಿಬಿಡುತ್ತಿದ್ದಳು. ಆದಿನ ಅವನು ಎದ್ದಾಗ ಇನ್ನೂ ಗುಡಿಸಲಿನಲ್ಲಿ ಕತ್ತಲಿರುವುದು ಆಶ್ಚರ್ಯ ಹುಟ್ಟಿಸಿತ್ತು. ಅವಳು ಮಲಗುವ ಕಡೆ ಹೋದಾಗ ಚಾಪೆ ಬರಿದಾಗಿತ್ತು. ಗಾಬರಿಯಲ್ಲಿ ಅಪ್ಪನನ್ನು ಎಬ್ಬಿಸಿದ. ಇಬ್ಬರೂ ಅವಳ ಹುಡುಕಾಟ ಆರಂಭಿಸಿದರು.

ಒಡೆಯರ ಕೊಟ್ಟಿಗೆಯ ನಡುವೆ ಉರುಳು ಹಾಕಿಕೊಂಡು ಮರಣಿಸಿದ್ದಳು ತಂಗಿ. ಅವಳ ದೇಹವನ್ನು, ದನಗಳ ದೇಹದಿಂದ ಬರುತ್ತಿದ್ದಂತಹ ದುರ್ನಾತ ಆಗಲೇ ಆಕ್ರಮಿಸಿಬಿಟ್ಟಿತ್ತು. ತಂಗಿಯನ್ನು ಅಪ್ಪಿ ಅಳುತ್ತಿದ್ದ ಮಾರಯ್ಯನನ್ನು ಅವನ ಅಪ್ಪನೇ ಸಮಾಧಾನ ಪಡಿಸಿದ್ದ. ಅವನ ಮುಖ ನಿರ್ಭಾವವಾಗಿತ್ತು. ತೂಗಾಡುತ್ತಿದ್ದ ಮಗಳ ದೇಹವನ್ನೇ ನೋಡುತ್ತಿದ್ದ.

ಒಡೆಯರ ಆಜ್ಞೆಗಳ ಮೇರೆಗೆ ಮಾರಯ್ಯನ ತಂಗಿಯ ಶವ ಸಂಸ್ಕಾರವಾಯಿತು. ಆ ಹಳ್ಳಿಯಲ್ಲಿ ಅವರ ಮಾತಿಗೆ ಎದುರಾಡುವವರು ಯಾರೂ ಇಲ್ಲ. ಪೊಲೀಸಿನವರ ಪ್ರಮೇಯವಿಲ್ಲ. ಯಾಕೆ? ಏನು? ಎಂದು ಕೇಳುವವರೂ ಇಲ್ಲ. ಕಾಲಾನುಕಾಲದಿಂದ ಆ ಹಳ್ಳಿಯಲ್ಲಿ ಹೀಗೇ ನಡೆಯುತ್ತ ಬಂದಿದೆ. ಈಗಲೂ ಯಾವ ತರಹದ ಬದಲಾವಣೆಯೂ ಇಲ್ಲ.

ಆ ಒಂದು ದಿನ ಮಾರಯ್ಯ ಮತ್ತವನ ತಂದೆಗೆ ಕೆಲಸದಿಂದ ಬಿಡುವು. ಗುಡಿಸಲಿನಲ್ಲೇ ಕುಳಿತ ಅವನ ಯೋಚನೆ ದಿಕ್ಕು ದಿಸಯಿಲ್ಲದಂತೆ ಓಡುತ್ತಿತ್ತು. ಕಾಲಾನುಕಾಲದಿಂದ ಅವನ ಮನೆಯವರು ಎಂದೂ ನಾಲ್ವರೆದುರು ಅಂದರೆ ಸಮಾಜದ ಮುಂದೆ ತಮ್ಮ ಸಿಟ್ಟನ್ನು ಕಾರಿದವರಲ್ಲ, ಸಿಟ್ಟನ್ನೇನಾದರೂ ಕಾರುವದಿದ್ದರೆ ಅದು ತಮ್ಮ ಗುಡಿಸಲಿನಲ್ಲಿ ಮಾತ್ರ. ಅದೂ ಬೇರಾರಿಗೂ ಕೇಳಿಸದಂತೆ. ಇಂತಹ ಕಟ್ಟುಪಾಡುಗಳನ್ನು ಮುರಿಯಬೇಕೆಂಬ ಯೋಚನೆ ಮಾರಯ್ಯನ ತಲೆಯಲ್ಲಿ ಸುಳಿಯುವ ಹಾಗೂ ಇರಲಿಲ್ಲ. ಅಮ್ಮನ ಉಬ್ಬಸದ ತೀವ್ರಗತಿಯ ಉಸಿರಾಟ ಮೊದಲೇ ಕಳೆದುಕೊಂಡಿದ್ದ ಗುಡಿಸಲು ಈಗ ತಂಗಿಯ ಓಡಾಟದಿಂದ ಕೂಡ ಮುಕ್ತವಾಗಿಬಿಟ್ಟಿತ್ತು. ತಮ್ಮ ಗುಡಿಸಲೇ ಸತ್ತು ಹೋಗಿದೆಯೇನೋ ಎನಿಸತೊಡಗಿತವನಿಗೆ. ಶಿಲಾಪ್ರತಿಮೆಯಂತೆ ಕುಳಿತಿದ್ದ ಮಾರಯ್ಯನ ಕುಳಿತ ಕಡೆಯಿಂದ ಕದಲಲಿಲ್ಲ. ಹಾಗೇ ಕತ್ತಲು ಆವರಿಸತೊಡಗಿತು.

ಕುಡಿದೇ ಮನೆಗೆ ಬಂದ ಅಪ್ಪ ಮಗನ ಹತ್ತಿರ ಬಂದು ಕೂಡುತ್ತಾ ಹೇಳಿದ.

“ಇಬ್ಬರೂ ಹೋದರು. ನಾವಿದ್ದು ಮಾಡುವುದೇನು, ನಾವೂ ಹೋಗಿಬಿಡುವ.”

ಕುಡಿದಾಗ ಎಂದೂ ಅಪ್ಪ ಅಷ್ಟು ಮೆಲ್ಲನೆ ಮಾತಾಡಿರಲಿಲ್ಲ. ಅವನ ಕಣ್ಣಲ್ಲಿ ನೀರು ತುಂಬಿ ಬಂದಿದ್ದವು. ಒಮ್ಮೆಲೇ ತಂದೆಯ ಅಂತಹ ಸ್ಥಿತಿ ಮಾರಯ್ಯನನ್ನು ಅಸ್ತವ್ಯಸ್ತ ಮಾಡಿಬಿಟ್ಟಿತ್ತು. ಅಪ್ಪನನ್ನು ಅಪ್ಪಿ ಹೆಣ್ಣಿನಂತೆ ಅಳತೊಡಗಿದ.

ಆ ದಿನ ಮನೆಯಲ್ಲಿ ತಿನ್ನಲು ಏನೂ ಇಲ್ಲ, ಹಾಗೇ ತಂದೆ ಮಗ ಚಾಪೆಯ ಮೇಲೆ ಬಿದ್ದುಕೊಂಡಿದ್ದರು. ಸಮಯ ಸರಿಯುತ್ತಿತ್ತು. ನಿದ್ದೆಯಿಲ್ಲ. ಒಂದೊಂದುಸಲ ಅಮ್ಮನ ಏದುಸಿರಿನ ಸದ್ದು ಕೇಳಿಸುತ್ತಿರುವಂತೆ ಭಾಸವಾಗುತ್ತಿತ್ತು ಮಾರಯ್ಯನಿಗೆ ಮತ್ತೊಂದು ಸಲ ತಂಗಿಯ ರೋಧನ ಕಣ್ಣಿಗೆ ಕಟ್ಟಿದಂತೆ ಕಂಡುಬರುತ್ತಿತ್ತು. ಅಂತಹ ಭ್ರಮೆಗಳು ಅವನನ್ನು ಚಾಪೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೊರಳಾಡುವಂತೆ ಮಾಡುತ್ತಿತ್ತು. ತಲೆಯ ಹಿಂದೆ ಎರಡೂ ಕೈಗಳನ್ನಿಟ್ಟುಕೊಂಡ ಅಪ್ಪ ಛಾವಣಿಯನ್ನೇ ನೋಡುತ್ತಿದ್ದ. ಕುಡಿದಿದ್ದರೂ ಅವನು ನಿದ್ರೆ ಹೋಗದ್ದು ಇದು ಮೊದಲ ಸಲ.

ಗಾಢಾಂಧಕಾರ. ಅದರಂತೆಯೇ ಕವಿದ ಮೌನದಲ್ಲಿ ಹೆಜ್ಜೆಯ ಸದ್ದುಗಳು ಕೇಳಬರತೊಡಗಿದಾಗ ಭಯವಾಯಿತು. ಮಾರಯ್ಯನಿಗೆ ಪೊಲೀಸಿನವರೆಂದರೆ ಅವನಿಗೆ ಎಲ್ಲಿಲ್ಲದ ಭಯ. ಆ ಸದ್ದು ಕೇಳಿದ ಅಪ್ಪ ಚಾಪೆಯಲ್ಲಿ ಎದ್ದು ಕುಳಿತ. ಎರಡು ಆಕಾರಗಳು ತಮ್ಮ ಕಡೆಯೇ ಬರುತ್ತಿರುವುದು ಅಸ್ಪಷ್ಟವಾಗಿ ಕಂಡುಬರುತ್ತಿತ್ತು. ಏನು ಮಾಡಬೇಕೆಂಬುದು ತೋಚದವನಂತೆ ಕುಳಿತಿದ್ದರವರು. ಕ್ಷಣಕ್ಷಣಕ್ಕೂ ಅವರಲ್ಲಿ ಭಯ ಹೆಚ್ಚಾಗುತ್ತಿತ್ತು. ಸಾಕಷ್ಟು ಹತ್ತಿರ ಬಂದಾಗ ಹೇಳಿದ ಇಬ್ಬರಲ್ಲಿ ಒಬ್ಬ.

“ಭಯ ಬೇಡ! ನಾವು ನಿಮ್ಮವರೇ!”

ಆಗ ಅವರ ತೋಳುಗಳಿಗೆ ಏರಿದ ಆಯುಧವನ್ನು ಗಮನಿಸಿದ ಮಾರಯ್ಯ, ಅವರ ಮಾತು ಕೇಳಿ ಅದನ್ನು ನೋಡಿದ ಅವರಿಗೆ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಅರ್ಥವಾಯಿತು.

ಬಡವರಿಗೆ ಸಹಾಯ ಮಾಡಲು, ಅವರಿಗೆ ನ್ಯಾಯ ದೊರಕಿಸಿಕೊಡಲು ಗುಂಪೊಂದು ಹುಟ್ಟಿಕೊಂಡಿದೆಯೆಂಬ ಮಾತನ್ನು ಕೇಳಿದ್ದ ಮಾರಯ್ಯ, ಅವರನ್ನು ಕ್ರಾಂತಿಕಾರಿಗಳೆಂದು ಕರೆಯುತ್ತಾರೆಂಬುವುದನ್ನೂ ತಿಳಿದುಕೊಂಡಿದ್ದ. ಈ ನಡುವೆ ಅವರುಗಳು ಅಕ್ಕಪಕ್ಕದ ಹಳ್ಳಿಗಳಿಗೆ ಬಂದು ಹೋಗುತ್ತಿದ್ದಾರೆಂಬ ವಿಷಯ ಕೂಡ ಅವನಿಗೆ ತಿಳಿದಿತ್ತು. ಅವರೊಡನೆ ಸಂಪರ್ಕ ಇಟ್ಟುಕೊಂಡವರನ್ನು ಪೊಲೀಸಿನವರು ಯಾವ ಮುಲಾಜೂ ಇಲ್ಲದೆ ಮುಗಿಸಿಬಿಡುತ್ತಾರೆಂಬ ಗುಸುಗುಸು ಕೂಡ ಅವನ ಕಿವಿಗೆ ಬಿದ್ದಿತ್ತು. ಇವರು ಅವರೇ ಇರಬಹುದೇ ಎಂದುಕೊಳ್ಳುತ್ತಿದ್ದಾಗ, ಕೇಳಿದ ಅಪ್ಪ.

“ನೀವ್ಯಾರು?”

“ಕ್ರಾಂತಿಕಾರಿಗಳು. ನಿಮ್ಮನ್ನು ರಕ್ಷಿಸಲು ಬಂದಿದ್ದೇವೆ” ಹೇಳಿದ ಒಬ್ಬ. ಇಬ್ಬರೂ ಅವರಬದಿಗೆ ಕುಳಿತರು.

“ನಮ್ಮ ಪಾಡಿಗೆ ನಾವು ಬದುಕುತ್ತೇವೆ. ನಮಗ್ಯಾರ ರಕ್ಷಣೆಯೂ ಬೇಡ” ಎಂದ ಮಾರಯ್ಯನ ಅಪ್ಪ.

‘ಬೆಳಗಾಗುವುದರಲ್ಲಿ ನಿಮ್ಮ ಒಡೆಯ ನಿಮ್ಮಿಬ್ಬರನ್ನೂ ಮುಗಿಸಿಬಿಡುತ್ತಾನೆ. ನಡೆಯಿರಿ ನಮ್ಮೊಡನೆ’ ಹೇಳಿದ ಮತ್ತೊಬ್ಬ. ತಮ್ಮ ಒಡೆಯ ತಮ್ಮನ್ನು ಯಾಕೆ ಮುಗಿಸಿ ಬಿಡುತ್ತಾನೆ ಎನ್ನುವುದು ಮಾರಯ್ಯನಿಗೆ ಗೊತ್ತಾಗಲಿಲ್ಲ. ಅಪ್ಪ ಅದಕ್ಕೆ ಏನೂ ಹೇಳಲಿಲ್ಲ. ಮತ್ತೆ ಮೊದಲು ಮಾತಾಡಿದವನೇ ಮಾತಾಡಿದ.

“ನಮ್ಮ ಮಾತು ಕೇಳಿ, ಅನ್ಯಾಯಗಳನ್ನು ಸಹಿಸುತ್ತಾ ಹುಳುಗಳ ಹಾಗೆ ಸಾಯಬೇಡಿ, ನಡೆಯಿರಿ ನಮ್ಮೊಡನೆ!”

ಯಾವುದೋ ಯೋಚನೆಯ ಆಳದಿಂದ ಬರುತ್ತಿರುವಂತೆ ಬಂತು ಅಪ್ಪನ ಮಾತು.

“ಮಗ ನೀ ಹೋಗು! ಒಡೆಯ, ಅವರ ತಮ್ಮಂದಿರು ಏನು ಬೇಕಾದರೂ ಮಾಡಬಹುದು. ನೀನಿವರೊಡನೆ ಹೋಗು.”

“ನೀನು?” ಕೂಡಲೇ ಆತಂಕದ ದನಿಯಲ್ಲಿ ಕೇಳಿದ ಮಾರ.

“ನನಗೆ ವಯಸ್ಸಾಗಿದೆ! ಕಾಡಿನಲ್ಲಿ ಓಡಾಡುವ ತ್ರಾಣ ನನಗಿಲ್ಲ. ನೀ ಹೋಗು. ಇಲ್ಲಿಂದ ದೂರ ಎಲ್ಲಾದರೂ ಹೋಗಿ ಸುಖವಾಗಿರು. ಇಲ್ಲಿ ಇನ್ನೂ ನನಗೆ ನಿನ್ನಮ್ಮನ ಉಸಿರಾಟದ ಸದ್ದು ಕೇಳಿಸುತ್ತಲೇ ಇದೆ. ಅವಳನ್ನು ಬಿಟ್ಟು ಬರುವುದಿಲ್ಲ. ನೀ ಹೋಗು”

ಮುಂದೆ ಹೆಚ್ಚು ಮಾತಿಗೆ, ವಾದ ವಿವಾದಕ್ಕೆ ಆಸ್ಪದವೇ ಇರಲಿಲ್ಲ. ಆದರೂ ಅಪ್ಪನನ್ನು ಬಲವಂತಪಡಿಸುವ ಮಾರಯ್ಯನ ಯತ್ನ ವಿಫಲವಾಯಿತು. ಅವನಿಗೆ ಜಾಗ್ರತೆಯಾಗಿ ಇರುವಂತೆ ಮತ್ತೆ ಮತ್ತೆ ಹೇಳಿ ಬಂದ ಇಬ್ಬರು ಕ್ರಾಂತಿಕಾರಿಯರೊಡನೆ ಗಾಢಾಂಧಕಾರದಲ್ಲಿ ಕಣ್ಮರೆಯಾದ ಮಾರಯ್ಯ.

ಬೆಳಗಾಗುತ್ತಿದ್ದಂತೆ ಒಡೆಯರನ್ನು ಕ್ರಾಂತಿಕಾರಿಗಳು ಕೊಲೆ ಮಾಡಿದ್ದಾರೆಂಬ ಸುದ್ದಿ ಹಳ್ಳಿಯಲ್ಲೆಲ್ಲಾ ಹಬ್ಬಿತು. ಪೊಲೀಸಿನವರು ಬರುವ ಮುನ್ನ ಒಡೆಯನ ತಮ್ಮಂದಿರು ಮಾರಯ್ಯನ ಅಪ್ಪನನ್ನು, ತಮ್ಮ ಮನೆಗೆ ಕರೆಸಿಕೊಂಡರು. ಅವನೊಡನೆ ಇನ್ನಿಬ್ಬರನ್ನೂ ಕೂಡ ಅಲ್ಲಿ ಕೂಡಿಹಾಕಲಾಗಿತ್ತು. ಆ ಇಬ್ಬರೂ ಇನ್ನೂ ಯೌವ್ವನಾವಸ್ಥೆಯಲ್ಲಿ ಅಡಿಯಿಡುತ್ತಾ ಇರುವವರು. ಪೊಲೀಸಿನವರು ಬಂದು ಆ ಮೂವರನ್ನು ದೂರದ ಪೊಲೀಸ್‌ಠಾಣೆಗೆ ಕರೆದೊಯ್ದರು. ಎಷ್ಟು ಹಿಂಸೆಕೊಟ್ಟರೂ ಮಾರಯ್ಯನ ವಿಷಯ ಬಾಯಿಬಿಡಲಿಲ್ಲ. ಅವನ ಅಪ್ಪ, ಆ ಇಬ್ಬರು ಯುವಕರೂ ತಮಗೂ ಕ್ರಾಂತಿಕಾರಿಗಳಿಗೂ ಯಾವ ಸಂಬಂಧವೂ ಇಲ್ಲವೆಂದು ಅಳುತ್ತಾಗೋಗರೆಯುವ ದನಿಯಲ್ಲಿ ಹೇಳುತ್ತಿದ್ದರೂ ಹಿಂಸೆ ಕೊಡುವುದನ್ನು ನಿಲ್ಲಿಸಲಿಲ್ಲ. ಪೊಲೀಸಿನವರು, ಅನ್ನ, ನೀರುಗಳಿಲ್ಲದೆ ಹಾಗೇ ರಾತ್ರಿಯವರೆಗೆ ಸಾಗಿತು ಹಿಂಸಿಸುವ ಕಾರ್ಯಕ್ರಮ, ಸಾಕಷ್ಟು ಕತ್ತಲಾದ ಮೇಲೆ ಅವರನ್ನು ಜೀಪಿನಲ್ಲಿ ಕಾಡಿಗೆ ಕರೆದೊಯ್ದು ಬಿಟ್ಟು, ನೀವೀಗ ಸ್ವತಂತ್ರರೆಂದರು. ಅವರು ಓಡುತ್ತಿರುವಾಗ ಗುಂಡಿನ ಸುರಿಮಳೆ ಆರಂಭವಾಯಿತು. ಹಲವು ಹೆಜ್ಜೆಗಳು ಕ್ರಮಿಸುವುದರೊಳಗೆ ಮೂವರೂ ಶವವಾಗಿ ನೆಲಕ್ಕೆ ಕುಸಿದರು. ಮರುದಿನದ ಪತ್ರಿಕೆಯಲ್ಲಿ ಮೂವರು ಕ್ರಾಂತಿಕಾರಿಗಳು ಪೊಲೀಸಿನವರೊಡನೆ ನಡೆದ ಘರ್ಷಣೆಯಲ್ಲಿ ಮರಣಿಸಿದ ಸುದ್ದಿ ಪ್ರಕಟವಾಗಿತ್ತು.

ದಟ್ಟ ಕಾಡಿನಲ್ಲಿ ಕ್ರಾಂತಿಕಾರಿಯರೊಡನೆ ಕುಳಿತಿದ್ದ ಮಾರಯ್ಯನಿಗೂ ಈ ಸುದ್ದಿ ತಿಳಿಯಿತು. ತಾನು ಇವರೊಡನೆ ಬರದಿದ್ದರೆ ತನ್ನದೂ ಅದೇ ಗತಿಯಾಗುತ್ತಿತ್ತು ಎಂದುಕೊಂಡ. ಈಗ ಬರಿದಾದ ಗುಡಿಸಲು ಅವನಲ್ಲಿ ಒಂದು ಬಗೆಯ ನಿರಾಳತೆಯನ್ನು ಹುಟ್ಟಿಸಿತ್ತು.

ಕಾಡಿನಲ್ಲಿ ನಿರ್ಮಿರಾಮ ನಡುಗೆ, ಬೆಳಗಾಗಲಿರುವಾಗ ವಿಶ್ರಾಂತಿ, ನಂತರ ನಾಯಕನ ಭಾಷಣ, ನಿಧಾನವಾಗಿ ಇದೆಲ್ಲದಕ್ಕೂ ಒಗ್ಗಿಕೊಳ್ಳುತ್ತಾ ಬಂದ ಮಾರಯ್ಯ, ನಾಯಕ ಹೇಳುತ್ತಿದ್ದ ಎಷ್ಟೋ ವಿಷಯಗಳು ಅವನಿಗೆ ಅರ್ಥ ಆಗುತ್ತಿರಲಿಲ್ಲ. ಇಂದಲ್ಲ ನಾಳೆ ತಾವು ಜಯ ಹೊಂದುವೆವು. ಆಗ ತಾವು ಎಲ್ಲರಂತೆ ಬದುಕಬಹುದು. ಯಾರೂ ಯಾರ ಮೇಲೂ ಅನ್ಯಾಯಗಳನ್ನು ಎಸಗುವ ಹಾಗಿಲ್ಲ ಎಂಬುದು ಮಾತ್ರ ಅವನಿಗೆ ಗೊತ್ತಾಗಿತ್ತು.

ದಿನಗಳು ಉರುಳುತಿದ್ದವು. ಈಗ ಮಾರಯ್ಯನ ಜೀವನಗತಿ ಪೂರ್ತಿ ಬದಲಾಗಿತ್ತು. ಅವನಿಗೆ ವಿವಿಧ ಆಯುಧಗಳನ್ನು, ಸ್ಫೋಟಕಗಳನ್ನು ಹೇಗೆ ಉಪಯೋಗಿಸಬೇಕೆಂಬ ತರಬೇತಿ ಕೊಡಲಾಯಿತು. ಅದನ್ನವನು ಹೆಚ್ಚು ಕಷ್ಟ ಇಲ್ಲದೆ ಕಲಿತ. ಬೇರೆ ಬೇರೆ ಊರುಗಳಿಗೆ ಹೋಗಿ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕೆಂಬ ಬಗ್ಗೆಯೂ ಶಿಕ್ಷಣ ಕೊಡಲಾಯಿತು.

ಈಗವನು ತನಗೆ ತಾನೇ ಎಷ್ಟೋ ಹೆಸರುಗಳನ್ನು ಹುಟ್ಟಿಸಿಕೊಂಡಿದ್ದ. ಒಂದು ಊರಿನಲ್ಲಿ ಅನಿಲ್ ಆದರೆ ಮತ್ತೊಂದು ಕಡೆ ಸುಧೀರ್, ಕೆಲಸ ಹೆಚ್ಚಾದಂತೆಯಲ್ಲಾ ಅವನ ಹೆಸರುಗಳೂ ಅವನಿಗೂ ನೆನಪಿರದಷ್ಟು ಹೆಚ್ಚಾದವು ಕ್ರಾಂತಿಕಾರಿಯರ ಹೆಸರಿನಿಂದ ಪೊಲೀಸಿನವರೂ, ಧನವಂತರೂ ಎಷ್ಟು ಭಯ ಪಡುತ್ತಾರೆ ಎಂಬುವುದು ಅವನಿಗೆ ಗೊತ್ತಾದಾಗ ತನಗೆ ಮೊದಲಿಲ್ಲದ ಅಸ್ಥಿತ್ವ ಈಗ ದೊರಕಿದೆ ಎನಿಸತೊಡಗಿತು.

ಕ್ರಾಂತಿಕಾರಿ ದಳದಲ್ಲಿ ಅವನು ಎರಡು ವರ್ಷ ಕೆಲಸ ಮಾಡಿದ. ಆ ಅವಧಿಯಲ್ಲಿ ಅವನು ಮೂರು ಸಲ ಪೊಲೀಸಿನವನ ಬಲೆಗೆ ಬಿದ್ದಿದ್ದ. ಆ ಮೂರು ಸಲವೂ ಅವನು ಎರಡು ದಿನಕ್ಕಿಂತ ಹೆಚ್ಚು ಬಂಧಿಯಾಗಿ ಪೊಲೀಸ್ ಠಾಣೆಯಲ್ಲಿ ಇರಲಿಲ್ಲ. ಯಾವುದೋ ಮಾಯಾಜಾಲದ ಪ್ರಭಾವದಂತೆ ಪೊಲೀಸಿನವರೇ ಅವನನ್ನು ಬಿಟ್ಟುಬಿಟ್ಟಿದ್ದರು. ಇನ್ನೊಮ್ಮೆ ಅವನು ಬೇರೆಲ್ಲಾದರೂ ಸಿಕ್ಕಿಬಿದ್ದರೆ ಬಿಡಿಸುವುದು ಕಷ್ಟವೆಂದು ಹೇಳಿದ ಕ್ರಾಂತಿಕಾರಿ ನಾಯಕ.

ಮಾರಯ್ಯನಿಗೆ ತನ್ನ ಜೀವನವೆಲ್ಲಾ ಕಾಡಿನಲ್ಲೇ ಕಳೆದು ಹೋಗುವುದೇನೋ ಎನಿಸಲಾರಂಭಿಸಿತು. ತಾವು ಗುರಿ ಮುಟ್ಟುವುದು ಅಸಂಭವವೇನೋ ಎಂದು ಕೂಡ ಎನಿಸಲಾರಂಭಿಸಿತು. ಈ ಅನಿಸಿಕೆಗಳು ಅವನಲ್ಲಿ ಭಯವನ್ನು ಬೇಸರವನ್ನೂ ಹುಟ್ಟಿಸಿದವು. ಅದೂ ಅಲ್ಲದೆ ಅವರ ನಾಯಕ ಮುಂದಿನ ದಿನಗಳಿಗಾಗಿ ಭಯಂಕರ ಯೋಜನೆಗಳನ್ನು ಹಾಕುತ್ತಿದ್ದ. ತನಗೆ ಸ್ವಾತಂತ್ರ್ಯ ಬೇಕು. ಈ ಕಾಡಿನ ಹಿಂಸೆಯ ಬದುಕಿನಿಂದ ಮುಕ್ತಿಬೇಕು ಎನಿಸತೊಡಗಿತು. ಅಂತಹ ಯೋಚನೆ ಅವನಲ್ಲಿ ಅಂಕಿರಿಸಿದಾಗಿನಿಂದ ಅದು ದಿನೇ ದಿನೇ ಬಲವಾಗತೊಡಗಿತು. ಆದರವನು ತನ್ನ ಮನಸ್ಸಿನಲ್ಲಿದ್ದದ್ದನ್ನು ಯಾರಿಗೂ ಹೇಳಿಕೊಳ್ಳಲಾರ.

ಒಮ್ಮೆ ಕ್ರಾಂತಿಕಾರಿಗಳ ಸಂಘ ಸೇರಿದರೆ ಅದನ್ನು ಬಿಡುವ ಹಾಗಿಲ್ಲ. ಬಿಟ್ಟರೆ ತಮ್ಮವರೇ ತಮ್ಮನ್ನು ಮುಗಿಸಿ ಬಿಡುತ್ತಾರೆ. ಇಂತಹ ಸ್ಥಿತಿಯಲ್ಲಿ ಪೊಲೀಸಿನವರು, ಕ್ರಾಂತಿಕಾರಿಗಳು ಇಬ್ಬರೂ ತನ್ನ ಶತ್ರುಗಳಾಗುತ್ತಾರೆಂಬುದು ಅವನಿಗೆ ಗೊತ್ತಿತ್ತು. ತನ್ನ ಹಳ್ಳಿ ಬಿಟ್ಟಾಗಿನಿಂದ ಮಾರಯ್ಯನ ಬುದ್ಧಿ ಚುರುಕುಗೊಂಡಿತ್ತು. ಪ್ರತಿಕ್ಷಣ ಅವನು ತನ್ನ ಬಿಡುಗಡೆಯ ವಿಷಯವನ್ನೇ ಚಿಂತಿಸಲಾರಂಭಿಸಿದ.

ಮಾರಯ್ಯ ಕ್ರಾಂತಿಕಾರಿಯಾಗಿ ಮೂರನೆಯ ವರ್ಷ ಸನ್ನಿಹಿತವಾಗುತ್ತಿದ್ದಾಗ ಅವನಿಗೆ ತನ್ನ ಬಿಡುಗಡೆಯ ಒಂದು ಒಳ್ಳೆಯ ಅವಕಾಶ ಒದಗಿಬಂತು. ಆವರೆಗೆ ಅವನು ನಾಯಕನ ನಂಬಿಕೆಗೆ ಪಾತ್ರನಾಗಿದ್ದುದರಿಂದ ದೂರದ ಕೆಲಸಗಳನ್ನು ಮಾಡಲು ಅವನೊಬ್ಬನೇ ಹೋಗುತ್ತಿದ್ದ. ಅಂತಹ ಸಮಯಗಳಲ್ಲಿ ಅವನ ಮೇಲೆ ನಿಗಾ ಇಡುವವರು ಯಾರೂ ಇರುತ್ತಿರಲಿಲ್ಲ. ಅಂತಹದೇ ಒಂದು ಕೆಲಸ. ಅದನ್ನೇ ಅವರು ತನ್ನ ಬಿಡುಗಡೆಯ ಅವಕಾಶವಾಗಿ ಪರಿವರ್ತಿಸಿಕೊಂಡು ದೂರದ ಒಂದು ಕುಗ್ರಾಮಕ್ಕೆ ಹೋಗಬೇಕು. ಕೆಲವು ಘಂಟೆಗಳ ರೈಲಿನ ಪ್ರಯಾಣ. ನಂತರ ಅಡ್ಡದಾರಿಯ ಕಾಡಿನ ನಡುಗೆ, ಮಾರಯ್ಯ, ಪ್ಯಾಸೆಂಜರ್‌ ಟ್ರೈನ್ ಹತ್ತುವ ಬದಲು ಎಕ್ಸ್‌ಪ್ರೆಸ್ ಹತ್ತಿದ. ಎಂಟು ಗಂಟೆಯ ಪಯಣದ ಬಳಿಕ ಒಂದು ಸ್ಟೇಷನ್‌ನಲ್ಲಿ ಇಳಿದು ತನ್ನ ಬೆಳೆದ ಗಡ್ಡ ಮೀಸೆಗಳನ್ನು ಬೋಳಿಸಿದ. ಪಂಚೆಯ ಬದಲು ಪ್ಯಾಂಟ್, ಶರ್‍ಟ್ ಅವನ ದೇಹವನ್ನು ಅಲಂಕರಿಸಿತು. ನಿಲುವುಗನ್ನಡಿಯಲ್ಲಿ ನೋಡಿಕೊಂಡಾಗ ತನ್ನ ತಾನು ಗುರ್ತಿಸುವುದು ಕಷ್ಟವೆನಿಸಿತವನಿಗೆ.

ಅಲ್ಲಿಂದ ಅವನು ಬಸ್ಸಿನಲ್ಲಿ ಪಯಣಿಸಿ ಬೇರೆ ರಾಜ್ಯದ ಒಂದು ಊರು ಸೇರಿದ. ಪಟ್ಟಣವೂ ಅಲ್ಲದ, ಹಳ್ಳಿಯೂ ಅಲ್ಲದಂತಹ ಸ್ಥಳವದು. ಅಲ್ಲಿಯ ಭಾಷೆ ಬೇರೆ. ಸಾಕಷ್ಟು ಜನ ಸಂಖ್ಯೆಯಿರುವ ಆ ಚಿಕ್ಕ ಪಟ್ಟಣದಲ್ಲಿ ತನ್ನನ್ಯಾರೂ ಗುರ್ತಿಸಲಾರರೆಂಬ ನಂಬಿಕೆ ಅವನಿಗೆ. ಅಲ್ಲಿ ಅವನಿಗೊಂದು ಹೋಟೆಲಿನಲ್ಲಿ ಕೆಲಸ ಸಿಗುವುದು ಕಷ್ಟವಾಗಲಿಲ್ಲ.

ಹೆಚ್ಚು ಜನಸಂಖ್ಯೆಯಿರುವ ಚಿಕ್ಕ ಪಟ್ಟಣವಾದರೂ, ಬೇರೆ ರಾಜ್ಯ, ಭಾಷೆ, ಬೇರೆಯದೇ ಆದರೂ ಅವನನ್ನು ಕ್ರಾಂತಿಕಾರಿಗಳ, ಪೊಲೀಸಿನವರ ಭಯ ಕಾಡುವುದು ಬಿಡಲಿಲ್ಲ. ಮೊದಮೊದಲು ಎಲ್ಲರೂ ತನ್ನ ಅನುಮಾನದ ನೋಟದಿಂದಲೇ ನೋಡುತ್ತಿದ್ದಾರೇನೋ ಎನಿಸುತ್ತಿತ್ತು. ಮೂರು ತಿಂಗಳು ಕಳೆಯುವುದರಲ್ಲಿ ಅವನು ಭಯ ಮುಕ್ತನಾದ.

ಅಲ್ಲಿಯ ಭಾಷೆಯನ್ನು ಸಲೀಸಾಗಿ ಆಡುವುದನ್ನು ಕಲಿತ. ಸೌಮ್ಯ ಸ್ವಭಾವದವನಾದ ಅವನು ಹೋಟೆಲಿನ ಒಡೆಯನಿಂದ ಹಿಡಿದು ಎಲ್ಲರಿಗೂ ಬೇಕಾದವನಾದ. ಇಲ್ಲಿ ಅವನ ಹೆಸರು ನಾಗರಾಜ್, ಹೋಟೆಲಿನಲ್ಲೇ ಅವನು ಊಟ ತಿಂಡಿಗಳು ಕಳೆಯುತ್ತಿದ್ದವು. ಮಲಗುವುದೂ ಅಲ್ಲೇ. ಯಾವುದಕ್ಕೂ ಹಣಕೊಡಬೇಕಾಗಿಲ್ಲ. ಅದಲ್ಲದೆ ತಿಂಗಳಿಗೆ ಸಂಬಳ. ಯಾವ ದುಶ್ಚಟವೂ ಇಲ್ಲದ ನಾಗರಾಜ್ ಪ್ರತಿತಿಂಗಳೂ ಅರ್ಧದಷ್ಟು ಹಣ ಉಳಿತಾಯ ಮಾಡುತ್ತಾ ಬಂದ, ಮಿಕ್ಕರ್ಧ ಸಿನಿಮಾ, ತನ್ನ ಇನ್ನಿತರ ಚಿಕ್ಕಪುಟ್ಟ ಮೋಜುಗಳಿಗೆ ಇರಿಸಿಕೊಳ್ಳುತ್ತಿದ್ದ. ತಿಂಗಳ ಕೊನೆಯಲ್ಲಿ ಅದರಲ್ಲೂ ಸಾಕಷ್ಟು ಮಿಗುತ್ತಿತ್ತು. ಈ ಜೀವನದಲ್ಲಿ ಅವನಿಗೆ ಎಲ್ಲಿಲ್ಲದ ಲವಲವಿಕೆ ಕಾಣತೊಡಗಿತು.

ಹಾಗೆ ಒಂದು ವರ್ಷ ಉರುಳುವುದರಲ್ಲಿ ನಾಗರಾಜ್ ಬಹು ಪ್ರಾಮಾಣಿಕ ನಂಬುದರಲ್ಲಿ ಹೋಟೆಲಿನ ಒಡೆಯನಿಗೆ ಯಾವ ಸಂದೇಹವೂ ಉಳಿಯಲಿಲ್ಲ. ಅದರಿಂದ ನಾಗರಾಜ್ ಸಪ್ಲೆಯರ್‌ನಿಂದ ಕ್ಯಾಶ್ ಕೌಂಟರಿನ ಮೇಲೆ ಕೂಡುವ ಬಡ್ತಿ ಪಡೆದ. ಒಡೆಯನಿಲ್ಲದಾಗ ಅವನೇ ಹೋಟೆಲಿನ ಒಡೆಯ. ಒಡೆಯ ಕೌಂಟರಿನಲ್ಲಿ ಕುಳಿತಾಗ ನಾಗರಾಜ್ ಹೋಟೆಲಿಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಕೊಳ್ಳುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಅದೂ ಅಲ್ಲದೆ ನಾಗರಾಜ್ ತನ್ನ ಹೋಟೆಲ್ ಸೇರಿದಾಗಿನಿಂದ ಆದಾಯ ಹೆಚ್ಚಾಗತೊಡಗಿದೆ ಅನಿಸತೊಡಗಿತ್ತು ಒಡೆಯನಿಗೆ.

ಈಗ ನಾಗರಾಜನಿಗೆ ಹೋಟೆಲಿನಲ್ಲಿ ಒಂದು ಪ್ರತ್ಯೇಕ ಕೋಣೆ, ಮೊದಲವನು ಹೋಟೆಲಿನ ಬೇರೆ ಕೆಲಸಗಾರರೊಡನೆ ಮಲಗುತ್ತಿದ್ದ. ಈಗಿನ ಪ್ರತ್ಯೇಕ ಕೋಣೆ ಅವನ ಬದಲಾಗಿರುವ ಮಾನ, ಮರ್ಯಾದೆಗಳ ಸಂಕೇತ, ಈಗವನಿಗೆ ಬದುಕು ಅರ್ಥಪೂರ್ಣವಾಗಿ ಕಾಣತೊಡಗಿತ್ತು.

ಅವನ ಅಂಗಸೌಷ್ಟದಲ್ಲೂ ಗಣನೀಯ ಮಾರ್ಪಾಟಾಗಿತ್ತು. ಬಡುಕಲು ದೇಹದಲ್ಲಿ ಮಾಂಸಖಂಡಗಳು ತುಂಬಿಕೊಂಡಿದ್ದವು. ಕಪೋಲಗಳು ತುಂಬ ಮುಖಕ್ಕೆ ಮೊದಲಿಲ್ಲದ ಕಳೆಯನ್ನು ಒದಗಿಸಿದ್ದವು. ದೇಹವನ್ನು ಅತ್ಯಾಧುನಿಕ ಬೆಲೆ ಬಾಳುವ ಉಡುಪು ಅಲಂಕರಿಸಿತ್ತು. ಒಂದು ಸಲ ಅವನಡೆ ನೋಡಿದ ಯುವತಿಯರು ಇನ್ನೊಮ್ಮೆ ನೋಡುವ ತಮ್ಮ ಹಂಬಲವನ್ನು ಹತ್ತಿಕ್ಕುವುದರಲ್ಲಿ ಅಸಮರ್ಥರಾಗುತ್ತಿದ್ದರು. ಅದನ್ನು ಗಮನಿಸಿದ ಹೋಟೆಲಿನ ಒಡೆಯ ಅವನು ಮದುವೆ ಯಾಕಾಗಬಾರದೆಂದು ಕೇಳಿದ. ಅದರಿಂದ ನಾಗರಾಜ್ ಆವರೆಗೆ ತಾನು ಹತ್ತಿಕ್ಕಿದ್ದ ಆಸೆ ಒಮ್ಮೆಲೇ ಪುಟಿದೆದ್ದಿತು.

ಈಗವನು ಯೋಜನೆಗಳಿಗೆ ಕನಸುಗಳಿಗೆ ಲೆಕ್ಕವಿಲ್ಲ. ಪ್ರಯತ್ನ ಪಟ್ಟರೆ ತಾನೂ ಒಂದು ಹೋಟೆಲ್ ಆರಂಭಿಸಬಹುದೆನ್ನಿಸಿತು. ಆ ವಿಷಯ ತನ್ನ ಆಪ್ತ ಮಿತ್ರರಲ್ಲಿ ಚರ್ಚಿಸುತ್ತಿದ್ದ. ಸುಂದರ ಸಿನಿಮಾ ತಾರೆಯಂತಹ ಹುಡುಗಿಯೊಡನೆ ಮದುವೆಯಾಗುವ ಕನಸುಗಳನ್ನು ಕಾಣುತ್ತಿದ್ದ. ಹಾಗವನ್ನು ಹಾಕುತ್ತಿದ್ದ ಯೋಜನೆಗಳಿಗೆ ಕನಸುಗಳಿಗೆ ಮಿತಿಯೆಂಬುದಿರಲಿಲ್ಲ.

ಆ ದಿನ ಅವನು ಹೋಟೆಲಿನೆದುರು ರೋಡಿನ ಮೇಲೆ ನಿಂತಾಗ ಒಬ್ಬ ವ್ಯಕ್ತಿ ಅವನನ್ನೇ ಪರೀಕ್ಷಾತ್ಮಕವಾಗಿ ನೋಡುತ್ತಾ ಎದುರು ಬಂದು ನಿಂತ. ‘ಏನು ಬೇಕು?’ ಎಂಬಂತಹ ನೋಟದಿಂದ ನಾಗರಾಜ್ ಅವನ ನೋಟಕ್ಕೆ ಉತ್ತರಿಸಿದಾಗ ಹೇಳಿದನಾ ವ್ಯಕ್ತಿ.

“ನಿಮ್ಮೊಡನೆ ಸ್ವಲ್ಪ ಕೆಲಸವಿದೆ ಬನ್ನಿ, ಎಲ್ಲಾದರೂ ಕುಳಿತು ಮಾತಾಡುವ”

“ಏನು ಹೇಳಿ?” ವ್ಯರ್ಥ ಮಾತುಗಳಿಗೆ ತನ್ನಲ್ಲಿ ಸಮಯವಿಲ್ಲವೆಂಬಂತಹ ದನಿಯಲ್ಲಿ ಹೇಳಿದ ನಾಗರಾಜ್.

“ಇಲ್ಲಿ ಬೇಡ! ನಿಮ್ಮ ಹೋಟೆಲಿನಲ್ಲೂ ಬೇಡ, ಬೇರೆಲ್ಲಾದರೂ ಕುಳಿತು ಆರಾಮವಾಗಿ ಮಾತಾಡುವ” ಎಂದನಾ ವ್ಯಕ್ತಿ. ಈತ ತಾನು ಆರಂಭಿಸುವ ಹೋಟೆಲಿನ ಬಗ್ಗೆ ಏನಾದರೂ ಮಾತಾಡ ಬಯಸಿರಬಹುದೇ ಎನ್ನಿಸಿತು ನಾಗರಾಜನಿಗೆ, ಆಗವನಿಗೆ ಯಾವ ಕೆಲಸವೂ ಇರಲಿಲ್ಲ. ಮುಂದೆ ಹೆಜ್ಜೆ ಹಾಕುತ್ತಾ ಹೇಳಿದ.

“ನಡೆಯಿರಿ! ಎಲ್ಲಿ ಕೂಡುವ”

ಆ ವ್ಯಕ್ತಿಯೂ ಅವನ ಹೆಜ್ಜೆಯಲ್ಲಿ ಹೆಜ್ಜೆ ಕಲಸಿದ. ಇಬ್ಬರೂ ಹೆಚ್ಚು ಗದ್ದಲವಿರದ ಹೋಟೆಲಿಗೆ ಬಂದು ಕುಳಿತರು.

“ಈ ಊರಿಗೆ ಬಂದು ಎಷ್ಟು ದಿನವಾಯಿತು ಮಾರಯ್ಯಾ?” ಆ ವ್ಯಕ್ತಿಯ ಕಂಠ ಪೂರ್ತಿ ಬದಲಾಗಿತ್ತು. ಒಮ್ಮೆಲೇ ನಾಗರಾಜ್‌ನಲ್ಲಿ ಎಲ್ಲಿಲ್ಲದ ಭಯ ತುಂಬಿ ಬಂತು. ತನ್ನ ತಾ ಸಂಭಾಳಿಸಿಕೊಂಡು ಹೇಳಿದ.

“ನಾನು ಮಾರಯ್ಯನಲ್ಲ, ನಾಗರಾಜ್, ನೀವು ಯಾರನ್ನೋ ನೋಡಿ ಯಾರೋ ಅಂದುಕೊಳ್ಳುತ್ತಿದ್ದ ಹಾಗಿದೆ”

ವ್ಯಂಗ್ಯನಗೆ ಹಾಯಿತಾ ವ್ಯಕ್ತಿಯ ಮುಖದಲ್ಲಿ. ದೃಢವಾದ ದನಿಯಲ್ಲಿ ಹೇಳಿದ.

“ನೀನು ಬಂಡೇರಹಳ್ಳಿಯ ಮಾರಯ್ಯ, ಬಹುಕಾಲದಿಂದ ನಾವು ನಿನಗಾಗಿ ಹುಡುಕಾಟ ನಡೆಸಿದ್ದೇವೆ. ಪೊಲೀಸಿನವರ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ”

ಕ್ರಾಂತಿಕಾರಿ ಮಾರಯ್ಯನ ಮೆದುಳು ತೀವ್ರಗತಿಯಿಂದ ಕೆಲಸ ಮಾಡತೊಡಗಿತು. ಸಪ್ಲೆಯರ್ ಇಬ್ಬರೆದುರೂ ಕಾಫಿ ತಂದಿಟ್ಟು ಹೋದ ಮೇಲೆ ಮಾತಾಡಿದ ಪೊಲೀಸಿನವ.

“ಭಯ ಬೇಡ! ನಾ ಹೇಳಿದ ಹಾಗೆ ಕೇಳು, ನಾನಿನ್ನ ಮರೆತು ಬಿಡುತ್ತೇನೆ”

“ಏನು ಹೇಳು?” ತನ್ನ ಚಿಂತನೆ ನಿಲ್ಲಿಸದೇ ಕೇಳಿದ ಮಾರಯ್ಯ,

“ಇಪ್ಪತ್ತು ಸಾವಿರ ತಂದು ಕೊಡು. ನಾನಿನ್ನ ಮರೆತು ಬಿಡುತ್ತೇನೆ” ಬಹು ಸಹಜ ದನಿಯಲ್ಲಿ ಹೇಳಿದ ಪೊಲೀಸಿನವ. ಮಾರಯ್ಯನ ಮೆದುಳು ಚಿಂತನೆಯನ್ನು ನಿಲ್ಲಿಸಿರಲಿಲ್ಲ. ಅದನ್ನು ಮುಂದುವರೆಸುತ್ತಲೇ ಮಾತನಾಡಿದ.

“ಒಮ್ಮೆಲೇ ಅಷ್ಟು ಹಣ ಎಲ್ಲಿಂದ ತರಲಿ”

“ತಕ್ಷಣ ಅಲ್ಲ, ನಾಳೆ ರಾತ್ರಿ ಎಂಟರವರೆಗೆ, ನಾನು ಹತ್ತರ ಬಸ್ಸಿಗೆ ಊರಿಗೆ ಹೋಗಬೇಕು” ಬಹು ಸಾಮಾನ್ಯ ವಿಷಯ ಹೇಳುತ್ತಿರುವಂತಹ ದನಿಯಲ್ಲಿ ಹೇಳಿದ ಪೊಲೀಸಿನವ.

“ಒಂದು ದಿನದಲ್ಲಿ ಅಷ್ಟು ಹಣ…”

“ನೀನು ಮನಸ್ಸು ಮಾಡಿದರೆ ಅದು ಕಷ್ಟದ ಕೆಲಸವಲ್ಲ. ಯೋಚಿಸು ಇದು ನಿನ್ನ ಭವಿಷ್ಯದ ಪ್ರಶ್ನೆ.”

ತನ್ನದೇ ಯೋಚನೆಯಲ್ಲಿದ್ದ ಮಾರಯ್ಯ, ಪೊಲೀಸಿನವ ಅವನು ತನ್ನ ಸಲಹೆಯ ಬಗ್ಗೆ ಯೋಚಿಸುತ್ತಿದ್ದಾನೆ ಅಂದುಕೊಂಡ. ಹಲವು ಕ್ಷಣಗಳು ಉರುಳಿದ ಬಳಿಕ ಕೇಳಿದ ಮಾರಯ್ಯ.

“ನೀನು ನನ್ನ ಮತ್ತೆ ಸುಲಿಯುವುದಿಲ್ಲ ಎಂದೇನು ನಂಬಿಕೆ?”

“ನಾನು ಆ ಜಾತಿಗೆ ಸೇರಿದವನಲ್ಲ. ನನ್ನ ಮಾತನ್ನು ನೀ ನಂಬಬೇಕು” ಈ ಸಲ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತಾಡಿದ ಮಾರಯ್ಯ.

“ಸರಿ! ನಂಬುತ್ತೇನೆ. ಆದರೆ ನನ್ನ ನಂಬಿಕೆಗೆ ದ್ರೋಹ ಬಗೆಯಲು ಯತ್ನಿಸಿದರೆ ನೀನುಳಿಯುವುದಿಲ್ಲ.”

ಹಾರ್ದಿಕ ನಗೆ ನಕ್ಕು ಮಾತಾಡಿದ ಪೊಲೀಸಿನವ “ನಂಬಿಕೆಗೆ ದ್ರೋಹ ಬಗೆಯುವವನು ನಾನಲ್ಲ. ಎಲ್ಲಿ…”

“ನಾಳ ಸರಿಯಾಗಿ ಎಂಟು ಎಂಟೂವರೆಯ ನಡುವೆ ಬಸ್‌ಸ್ಟಾಂಡಿನ ಬಳಿಯಿರುವ ಗಾರ್ಡನಿಗೆ ಬರುತ್ತೇನೆ. ಅಲ್ಲಿ ನನಗಾಗಿ ಕಾದಿರು. ಅದೇ ಕೊನೆ, ನೀ ನನಗೆ ಮತ್ತೆಂದೂ ಕಾಣಿಸಬಾರದು” ಅವನ ಮಾತನ್ನು ನಡುವೆಯೇ ತಡೆದು ದೃಢವಾದ ದನಿಯಲ್ಲಿ ಹೇಳಿದ ಮಾರಯ್ಯ.

“ಹೋಟೆಲ್…”

“ಬೇಡ ಅಲ್ಲಿ ಬೇಡ. ನಾನು ನಿನ್ನೊಡನೆ ಕಾಣುವುದು ಬೇಡ. ಅದರಿಂದ ಯಾರಿಗಾದರೂ ಅನುಮಾನ ಬರಬಹುದು. ಹೇಳಿದ ಹಾಗೆ ಕೇಳು” ಅವನು ಮಾತು ಆರಂಭಿಸುತ್ತಿದ್ದಂತೆಯೇ ಮತ್ತೆ ಮಾತಾಡಿದ ಮಾರಯ್ಯ, ಬಲವಂತದ ನಗೆ ನಕ್ಕು ಹೇಳಿದ ಪೊಲೀಸಿನವ.

“ಸರಿ! ನೀನು ಹೇಳಿದ ಹಾಗೇ ಆಗಲಿ, ಬರೀ ನೂರರ ನೋಟುಗಳನ್ನು ತಾ.”

ಅದಕ್ಕೇನೂ ಹೇಳಲಿಲ್ಲ ಮಾರಯ್ಯ, ಹೋಟೆಲಿನಿಂದ ಹೊರಬಿದ್ದ ಮೇಲೆ ಇಬ್ಬರ ದಾರಿಗಳೂ ಬೇರೆಯಾದವು. ಪೊಲೀಸಿನವ ಮಾತು ಆರಂಭಿಸುತ್ತಿದ್ದಂತೇ ತಾನು ಮುಂದೇನು ಮಾಡಬೇಕೆಂಬುವುದು ನಿರ್ಣಯಿಸಿಬಿಟ್ಟಿದ್ದ ಮಾರಯ್ಯ, ಕ್ರಾಂತಿಕಾರಿಯಾದ ಮೇಲೆ ಪೊಲೀಸಿನವರನ್ನು ನಂಬಬಾರದೆಂಬುವುದು ಅವನಿಗೆ ಚೆನ್ನಾಗಿ ಗೊತ್ತಾಗಿತ್ತು.

ರಾತ್ರಿ ಎಂಟಾಗಿ ಹತ್ತು ನಿಮಿಷ ಬಸ್‌ಸ್ಟಾಂಡಿನ ಬಳಿ ಇದ್ದ ಚಿಕ್ಕ ಪಾರ್ಕಿನಲ್ಲಿ ಒಬ್ಬಿಬ್ಬರು ಮಾತ್ರಾ ಇದ್ದರು. ಬೀದಿ ದೀಪಗಳು ಸರಿಯಾಗಿ ಹೊತ್ತಿಕೊಂಡಿರದ ಕಾರಣ ಅಲ್ಲಿಯ ಮಸುಕು ಕತ್ತಲೆ. ಮಾರಯ್ಯ ಪಾರ್ಕನ್ನು ಪ್ರವೇಶಿಸುತ್ತಲೇ ಅವನ ಹತ್ತಿರ ಬರುತ್ತಾ ಅಸಹನೆಯಿಂದ ಹೇಳಿದ ಪೊಲೀಸಿನವ

“ಬಹಳ ತಡ ಮಾಡಿಬಿಟ್ಟೆ”

“ನಿಧಾನವಾಗಿ ಮಾತಾಡು. ಇಲ್ಲಿ ಎಲ್ಲರೂ ನನ್ನ ಗುರ್ತಿಸುತ್ತಾರೆ.”

“ಬೇಗ ಕೊಡು, ನಾ ಹೋಗಬೇಕು” ಅವಸರದ ದನಿಯಲ್ಲಿ ಹೇಳಿದ ಪೊಲೀಸಿನವ.

“ಇಪ್ಪತ್ತು ಸಾವಿರ ಕೊಡುತ್ತಿದ್ದೇನೆ. ನೀನು ಮತ್ತೆ ನನ್ನ ತಂಟೆಗೆ ಬರುವುದಿಲ್ಲವೆಂಬುವುದು ಖಚಿತವಾಗಬೇಕು. ಬಾ ಒಂದೆರಡು ಮಾತಾಡುವ” ಅವನ ಮಾತನ್ನು ಲಕ್ಷಿಸದವನಂತೆ ಕತ್ತಲಿರುವ ಕಡೆ ಹೆಜ್ಜೆ ಹಾಕುತ್ತಾ ಹೇಳಿದ ಮಾರಯ್ಯ..

“ಮೊದಲೇ ಎಲ್ಲ ಮಾತಾಗಿದೆ ಈಗೆಂತಹ ಮಾತು” ಪೊಲೀಸಿನವನ ದನಿಯಲ್ಲಿ ಅಸಹನೆ ಇನ್ನೂ ಹೆಚ್ಚಾಗಿತ್ತು.

“ನನ್ನ ಮಾತು ಕೇಳುತ್ತೀಯಾ, ನಾ ಹೊರಟು…”

“ಅದೇನೋ ಬೇಗ ಹೇಳು.”

ಮಾರಯ್ಯನ ಕಿಸೆಯಿಂದ ಹೊರ ಬರುತ್ತಿದ್ದ ನೋಟಿನ ಕಂತೆ ನೋಡಿ ಪೊಲೀಸಿನವನ ಅಸಹನೆ ಕಡಿಮೆಯಾಯಿತು. ಅವನ ಮಾತನ್ನು ಪೂರ್ತಿ ಮಾಡುತ್ತಿದ್ದಂತೆ ಹತ್ತಿರ ಬಂದ. ಅಲ್ಲಿ ಸಾಕಷ್ಟು ಕತ್ತಲಿತ್ತು. ಮಿಂಚಿನ ಗತಿಯಿಂದ ಮಾರಯ್ಯನ ಎಡಗೈ ಅವನ ಬಾಯಿಯನ್ನು ಒತ್ತಿ ಹಿಡಿದು ದೇಹವನ್ನು ಇನ್ನೂ ಹತ್ತಿರ ಎಳೆದುಕೊಂಡಿತು. ನೋಟಿನ ಕಂತೆ ಮತ್ತೆ ಕಿಸೆಯಲ್ಲಿ ಹೋಗಿ ಬಲಗೈಯಲ್ಲಿ ಹರಿತವಾದ ಚೂರಿ ಬಂತು, ಒಂದೇ ಹೊಡೆತದಿಂದ ಶತ್ರುವನ್ನು ಹೇಗೆ ಕೊಲ್ಲಬೇಕೆಂಬುವುದನ್ನು ಕ್ರಾಂತಿಕಾರಿಗಳು ಅವನಿಗೆ ಚೆನ್ನಾಗಿ ಕಲಿಸಿದ್ದರು. ಮತ್ಯಾರ ತಂಟೆಗೂ ಬರದಂತೆ ಪೊಲೀಸಿನವ ನೆಲಕ್ಕೆ ಕುಸಿದ. ಅವನ ದೇಹವನ್ನು ಯಾರಿಗೂ ಕಾಣದ ಹಾಗೆ ಎಳೆದು ರಕ್ತಸಿಕ್ತ ಚೂರಿಯನ್ನು ಸರಿಯಾಗಿ ಒರೆಸಿ ಕಿಸೆಯಲ್ಲಿಟ್ಟು ಏನೂ ಆಗದವನ ಹಾಗೆ ನಿಧಾನವಾಗಿ ಪಾರ್ಕಿನಿಂದ ಹೊರಬಿದ್ದ ಮಾರಯ್ಯ.

ಮತ್ತೆ ಕಾಡು ಅವನನ್ನು ಕೈಬೀಸಿ ಕರೆಯುತ್ತಿತ್ತು. ಹೆಸರುಗಳ ಬದಲಾವಣೆ ಆರಂಭವಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರಾಮತಿ
Next post ಮದುವೆಯ ಆಟವೆ ತಿಳಿಯದ ಮಗುವಿಗೆ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…