ಹಿಂದೂಮುಸಲ್ಮಾನರ ಐಕ್ಯ – ೧

ಹಿಂದೂಮುಸಲ್ಮಾನರ ಐಕ್ಯ – ೧

(ಒಂದು ಐತಿಹಾಸಿಕ ಪ್ರಸಂಗ)

ಇಳಿ ಹೊತ್ತಿನ ಸಮಯ. ಶಿವದಾಸನು ಚಂಡಿನಂಟಪದ ಮುಮ್ಮಗಲಿನ ಛಾವಣೆಯಲ್ಲಿ ಕುಳಿತು ಎಂಥದೋ ವೇದಾಂತ ಗ್ರಂಥವನ್ನು ಏಕಾಗ್ರ ಚಿತ್ರದಿಂದ ಪಠಣಮಾಡುತಲಿದ್ದನು. ದೇವಾಲಯದ ಸಭಾಂಗಣದಲ್ಲಿ ಪ್ರೌಢ ವಯಸ್ಸಿನ ಓರ್‍ವ ಮುಸಲ್ಮಾನನು ನಿಂತುಕೊಂಡು ಶಿವದಾಸನ ಕಡೆಗೆ ಟಕಮಕವೆಂದು ನೋಡುತ್ತ ಮುಗುಳು ನಗೆ ನಗುತ್ತಿದ್ದ. ಆ ಯವನನ ಸೌಮ್ಯ ಶಾಂತ, ಸರಲ ಮತ್ತು ಪ್ರಫುಲ್ಲತ ನಗುಮೊಗವನ್ನು ನೋಡಿದರೆ, ಆತನು ನಿಷ್ಕಪಟ ಹೃದಯದ, ಧೀರೋದಾತ್ತ ಪ್ರಕೃತಿಯ್ ಪುರುಷಶ್ರೇಷ್ಠನೆಂದು ಪ್ರತಿಯೊಬ್ಬರೂ ತಟ್ಟನೆ ಭಾವಿಸಬಹುದಾಗಿತ್ತು. ಅವನನ್ನು ಕಂಡ ಯಾವನೊಬ್ಬ ಅಪರಿಚಿತನ ಅಂತರಂಗದಲ್ಲಿಯೂ ಕೂಡ ಅವನ ವಿಷಯಕ ಶ್ರದ್ದೆಯುಂಟಾಗಿ, ಅದರಿಂದ ಅವನು ಆ ಮಹಾ ಪುರುಷನನ್ನು ಸನ್ಮಾನಿಸಬಹುದಿತ್ತು. ಆ ಯವಕನ ವೇಷ ಭೂಷಣಗಳಲ್ಲಿ ಐಶ್ವರ್ಯಾಧಿಕಾರಗಳ ಆಡಂಬರವೇನೂ ಕಂಡು ಬರುತ್ತಿರಲಿಲ್ಲ; ಆದರೆ ಆತನ ಸುಂದರ ಹಾಗು ಅಚ್ಚು ಕಟ್ಟಾದ ಉಡಿಗೆ-ತೊಡಿಗೆಗಳಿಂದ ಅವನು ಯಾವನೊಬ್ಬ ಮಾನನೀಯ ಪುರುಷನೆಂಬದು ಮಾತ್ರ ಸಹಜವಾಗಿ ತೋರಿಬರುತ್ತಿತ್ತು. ಲೋಕದೊಳಗಿನ ಕೆಲವು ಜನ ಲೋಕಮಾನ್ಯರ ಮಾನ್ಯವಂತಿಕೆಯನ್ನು ಯಾವ ಶಬ್ದಾಡಂಬರದಿಂದಲೂ ಸಿದ್ದಪಡಿಸಹೋಗುವ ಕಾರಣ ಬೀಳುವದಿಲ್ಲ. ಅವರ ಆಕೃತಿ, ಮುಖ ಭಾವ, ಉಡಿಗೆ ತೊಡಿಗೆ ಧರಿಸುವ ರೀತಿ ಇವೆಲ್ಲವುಗಳಿಂದ ಅವರಲ್ಲಿಯ ಮಹಾಪುರುಷ ಲಕ್ಷಣವು ನೋಡುವವರ ಕಣ್ಣೆದುರಿಗೆ ಒಮ್ಮೆಲೆ ‘ಮೊತ್ತೆ’ಂದು ಬಂದು ನಿಲ್ಲುತ್ತದೆ. ಸರ್‍ವಶ್ರೇಷ್ಠನಾದ ಸೂರ್ಯನನ್ನು ಜಗತ್ತಿನಲ್ಲಿಯ ಬೇರೆ ಬೇರೆ ವ್ಯಕ್ತಿಗಳು ಆಧರ-ಅನಾದರ, ಪ್ರೇಮ-ತಿರಸ್ಕಾರ ಮೊದಲಾದ ಆಂತರಿಕ ವಿಕಾರಗಳಿಂದ ಹೇಗಾದರೂ ಮನ್ನಿಸಿಯೇ ತೀರಬೇಕಾಗುತ್ತದೆ; ಆದರೆ ಲೋಕಮಾನ್ಯ ವ್ಯಕ್ತಿಯನ್ನು ಮಾತ್ರ ಲೋಕದವರೆಲ್ಲರೂ ನಿಜವಾದ ಅಂತಃಕರಣದಿಂದ ಸಹಜವಾಗಿ ಪ್ರೀತಿಸಿ, ಮನ್ನಿಸುತ್ತಿರುತ್ತಾರೆ. ಅಧ್ಯಯನನಿರತನಾದ ಆ ಬ್ರಾಹ್ಮಣನ ಸಮ್ಮುಖದಲ್ಲಿ ಮಧುರಸ್ಮಿತವದನದಿಂದ ಶಬ್ದವಾಗಿ ನಿಂತುಕೊಂಡಿದ್ದ ಆ ನಮ್ಮ ಪ್ರೌಢವಯಸ್ಸಿನವನಾದರೂ ಅಂಥ ಶ್ರೇಷ್ಠ ಕೋಟಿಯೊಳಗಿನವನೇ ಆಗಿದ್ದನು!

ಆ ಲೋಕಮಾನ್ಯ ಯವನನು ಹಾಗೆಯೇ ಎಷ್ಟೋ ಹೊತ್ತಿನವರೆಗೆ ಸುಮ್ಮನೆ ನಿಂತುಕೊಂಡಿದ್ದನು. ನಂತರ ಅವನು ಆ ಬ್ರಾಹ್ಮಣನನ್ನು ಕುರಿತು ‘ಬ್ರಾಹ್ಮಣೋತ್ತಮರೇ, ಗ್ರಂಥಪಠಣವಿನ್ನೂ ಪೂರೈಸಲಿಲ್ಲೇನು? ವ್ಯಾಸ ಕೃತ ಅಷ್ಟಾದಶ ಪುರಾಣಗಳೊಳಗಿನ ಯಾವ ಮಹತ್ವದ ಭಾಗವನ್ನು ಮನನ ಮಾಡುವದರಲ್ಲಿ ನೀವಿಷ್ಟು ತಲ್ಲೀನರಾಗುತ್ತೀರಿ?’ ಎಂದು ಪ್ರಶ್ನೆ ಮಾಡಿದನು.

‘ಬನ್ನಿರಿ; ಜಹಗೀರದಾರರೇ, ಇತ್ತ ಬಂದು ಬಿಡಿರಿ. ಅಯ್ಯೋ! ತಾವು ಬಂದು ಎಷ್ಟೊತ್ತಾಗಿದೆಯೋ ದೇವರೇ ಬಲ್ಲ! ತಾವು ಬಂದೊಡನೆಯೇ ನನ್ನನ್ನೇಕೆ ಕೂಗಲಿಲ್ಲ?…….’ ಎಂದಂದು, ಆಸನ ಬಿಟ್ಟು ಎದ್ದು ನಿಂತ ಶಿವದಾಸನು ತನ್ನ ಶಿಷ್ಯನನ್ನು ಕುರಿತು:- ‘ಎಲೋ ನಾರಾಯಣ ದಿಕ್ಷಿತಾ, ಎಲೋ ನಾರಾಯಣ,’ ಎಂದು ಎರಡು-ಮೂರು ಸಾರೆ ಕೂಗಿಕೊಂಡರೂ, ಎದುರಿಗೆ ಟೋಣಪನ ಹಾಗೆ ನಿಂತುಕೊಂಡಿದ್ದ ಅವರ ಆ ಪ್ರಿಯ ಶಿಷ್ಯನು ‘ಓ’ ಕೂಡ ಅನ್ನದ್ದರಿಂದ, ಶಿವದಾಸನು ಪರಕ್ಷಣದಲ್ಲಿ ಏನೋ ಜ್ಞಾಪಿಸಿಕೊಂಡು, ಪುನಃ- ‘ಏ ನಾರ್‍ಯಾ, ಎಲೋ ಟೊಣಪ ನಾರ್‍ಯಾ’ ಎಂದು ಕೂಗಲು, ಸ್ಮಿತ ವದನನಾದ ನಾರಾಯಣದೀಕ್ಷಿತನು ನಿದ್ರಾಸಕ್ತವಾದ ಜಾತೀ ನಾಯಿಯು ಒಡೆಯನ ಶಿಳ್ಳಿನ ದನಿಯನ್ನು ಗೇನಿಸಿ ಎದ್ದು ಚಟಪಟನೆ ಕಿವಿಜಾಡಿಸಿ ಕೊಳ್ಳುತ್ತ ಪಾಲಕನನ್ನು ಬಂದು ಸೇರುವಂತೆ ನಾರಾಯಣನ ಕಿವಿ ಜಾಡಿಸಿ ಕೊಳ್ಳುತ್ತ ತ್ವರಿತಗತಿಯಿಂದ ಬಂದು ಗುರುಗಳ ಬಳಿಯಲ್ಲಿ ನಿಂತನು.

ನಾರಾಯಣ ದೀಕ್ಷಿತನು ಹುಟ್ಟಾ ಬಂಡೆಗಲ್ಲು! ವಿದ್ಯೆಯಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ; ಆದರೆ ತಾಯಿ-ತಂದೆಗಳ, ಅವರ ಪಶ್ಚಾತ್ ಕಠೋರನಾದ ಅಣ್ಣನ ಕಾಟಕ್ಕಾಗಿ ಅವನು ಶಿವದಾಸರ ಬಳಿಯಲ್ಲಿ ಓದಲಿಕ್ಕೆಂದು ಬಂದಿದ್ದನು. ಶಿವದಾಸರಿಗಾದರೂ ನಾರಾಯಣನ ತೈಲಬುದ್ಧಿಯ ಮಟ್ಟು ತಿಳಿದಿದ್ದಿಲ್ಲೆಂತಲ್ಲ; ಆದರೆ ಮನಮುಟ್ಟ ಬಂದ ಕಾಡಕೋಣನಂತಹ ಕೊಬ್ಬಿದ ಶಿಷ್ಯನನ್ನು ಪಾಠ ಪ್ರವಚನಗಳಲ್ಲಿ ನಿರತನನ್ನಾಗಿ ಮಾಡಬರದಿದ್ದರೂ, ಮನೆಯ ತರ-ಬರುವ ಕೆಲಸಗಳಿಗಾದರೂ ಉಪಯೋಗಿಸಿಕೊಳ್ಳಬಹುದೆಂದು ಯೋಚಿಸಿ ಶಿವದಾಸರು ಅವನಿಗೆ ತಮ್ಮ ಬಿಡಾರದಲ್ಲಿ ಆಶ್ರಯ ಕೊಟ್ಟಿದ್ದರು. ನಾರಾಯಣನ ಹಿಂದಿನ ಎಷ್ಟೋ ತಲೆಯು ಪೂರ್ವಜರು ಯಾವದೊಂದು ಯಾಗ ಮಾಡಬೇಕೆಂದು ಭಾವಿಕರಾದ ಜನರಿಂದ ದುಡ್ಡನ್ನೆತ್ತಿದ್ದರು; ಆದರೆ ಆ ಮಹಾಪುರುಷರು ಸುಲಭವಾಗಿ ದೊರೆತ ಆ ಹಣದಿಂದ ಯಾಗವನ್ನಂತೂ ಮಾಡಲೇ ಇಲ್ಲ; ಅದರಿಂದ ಅನೇಕ ಹೊಲ್ಲದ ಕೃತಿಗಳನ್ನು ಮಾತ್ರ ಮಾಡಿದ್ದರು. ಆದರೂ ಜನರು ಯಾಗಕ್ಕಾಗಿ ದೇಶಾವರಿ ಕೇಳಬಂದಿದ್ದ ಆ ಧೂರ್ತ ಮನುಷ್ಯನಿಗೆ ಯಾಗ ಮಾಡುವ ಮೊದಲೇ ‘ದೀಕ್ಷಿತ’ ಎಂಬ ಅನ್ವರ್ಥಕ ನಾಮದಿಂದ ಸಂಬೋಧಿಸಹತ್ತಿದ್ದರು! ಆ ಅಡ್ಡ ಹೆಸರು ಎಷ್ಟೋ ತಲೆಗಳಾದರೂ ಕೊಂಚವೂ ಚ್ಯುತಿಯಿಲ್ಲದ ನಾರಾಯಣದಿಕ್ಷೀತನ ಮನೆಯವರಿಗೆ ನಡೆಯುತ್ತ ಬಂದಿತ್ತು.

ನಾರಾಯಣನು ಸ್ವಭಾವತಃ ಒಳ್ಳೆ ಹುಡುಗ; ಆದರೆ ಸೂಕ್ಷ್ಮತನವೆಂಬುದನ್ನು ಮಾತ್ರ ಅವನು ಅರಿಯನೇ ಅರಿಯ! ಸದಾ ಮುಠ್ಠಾಳ ಕೃತಿಗಳನ್ನು ಮಾಡುವದೇ ಅವನ ದೇಹಸ್ಥಿತ ಲಕ್ಷಣವಾಗಿತ್ತು. ಅವನ ಈ ಎಲ್ಲ ನಿತ್ಯ ವ್ಯವಹಾರದ ಸಲುವಾಗಿಯೇ ಅವನನ್ನು ಎಲ್ಲರೂ ತಿರಸ್ಕರಿಸುತ್ತಿದ್ದರು. ತನ್ನನ್ನು ಪ್ರೀತಿಸುವವರಿಗಿಂತ ಸದಾ ತಿರಸ್ಕರಿಸುವವರೇ ತನ್ನ ನಿಜವಾದ ಹಿತಕರ್ತೃಗಳೆಂದು ಆ ಅಭಿನವ ಹುಡುಗನ ತಿಳುವಳಿಕೆಯಾಗಿತ್ತು. ‘ನಾರಾಯಣ ದೀಕ್ಷಿತ, ನಾರಾಯಣ’ ಎಂದು ಹುಟ್ಟಿದಂದಿನಿಂದ ಅವನನ್ನು ಯಾರೂ ಸಂಬೋಧಿಸಿದ್ದಿಲ್ಲ. ಅದರಿಂದ ಶಿವದಾಸರು ಇಂದು ಆ ಹೆಸರುಗಳಿಂದ ಕರೆಯುತ್ತಿರಲು, ಆ ಹೆಸರಿನವರು ಬೇರೆ ಯಾರಾದರೂ ಇರಬಹುದೆಂದು ತಿಳಿದು ಆ ಟೊಣಪನು ಗುರುಗಳ ಹತ್ತರವೇ ಇದ್ದರೂ ಓ ಕೊಟ್ಟಿದ್ದಿಲ್ಲ.

ಶಿವದಾಸರಿಗೆ ನಾರಾಯಣನ ದೇಹಸ್ಥಿತಿಯು ಚೆನ್ನಾಗಿತ್ತಾಗಿತ್ತು; ಆದರೆ ಅತಿಥಿಯಾಗಿ ಬಂದ ಒಬ್ಬ ಸನ್ಮಾನ್ಯ ಗೃಹಸ್ಥನೆದುರಿಗೆ ತನ್ನ ಪ್ರಿಯ ಶಿಷ್ಯನನ್ನಾದರೂ ಸನ್ಮಾನಪೂರ್ವಕವಾಗಿಯೇ ಬರಮಾಡಿಕೊಳ್ಳಬೇಕೆಂಬ ಇಚ್ಛೆಯಿಂದ ಅವರು ನಾರ್‍ಯಾನನ್ನು ‘ನಾರಾಯಣದಿಕ್ಷೀತ’ ‘ನಾರಾಯಣ’ ಎಂದು ಸಂಬೋಧಿಸಿ ಕೂಗಿದರೂ, ತಮ್ಮ ಪ್ರಯತ್ನದ ದುರುಪಯೋಗವಾಗುವ ಚಿಹ್ನಗಳು ತೋರಿಬರಲು, ಸ್ವಕಾರ್ಯ ಸಾಧನೆಗಾಗಿ ಕಡೆಗೆ ಅವರು ತಮ್ಮ ಶಿಷ್ಯನ ನಿಜಸ್ಥಿತಿಯನ್ನು ಬೈಲಿಗಿಡುವದಕ್ಕಾಗಿ ಅವನ ರೂಢ ನಾಮವಾಗಿದ್ದ ‘ನಾರ್‍ಯಾ’ ಎಂಬ ಹೆಸರಿನಿಂದಲೇ ಆತನನ್ನು ಕರೆದರು.

‘ಓ’ ಅನ್ನುತ್ತಲೆ ಶಿವದಾಸರು ತಮ್ಮ ಸಮ್ಮುಖದಲ್ಲಿಯೇ ಗುಲಾಮ ಆಲಿ ಸಾಹೇಬರಿಗಾಗಿ ನಾರ್‍ಯಾನಿಗೆ ಬೇರೊಂದ ಆಸನವನ್ನು ಮಂಡಿಸ ಹೇಳಿದರು, ನಾರಾಯಣನು ಚಟುವಟಿಕೆಯಿಂದ ಆಸನ ತರಹೋದನು.

‘ಬೇಡ-ಬೇಡ, ಬ್ರಾಹ್ಮಣೋತ್ತಮರೆ, ಆಸನ-ಗೀಸನಗಳ ಅವಶ್ಯಕತೆ ಯೇತಕೆ? ನೀವು ಕುಳಿತುಕೊಳ್ಳಿರಿ. ನಾನು ತುಸ ಹೊತ್ತು ನಿಂತುಕೊಂಡರೆ ತಪ್ಪೇನು? ಇದರಿಂದ ನನಗೆ ಶ್ರಮವಾಗುವದೆಂದು ತಮ್ಮ ತಿಳುವಳಿಕೆಯಾಗಿದೆಯೇ? ಹೀಗೆ ಎಷ್ಟೋ ಪ್ರಹರಗಳ ವರೆಗೆ ಸತತ ನಿಂತುಕೊಂಡಿರುವ ಅಭ್ಯಾಸ ನನಗೆ ಚನ್ನಾಗಿ ಆಗಿರುತ್ತದೆ; ಯಾಕಂದರೆ, ನಾನು ದಂಡಿನಲ್ಲಿ ನುರಿತವನೆಂಬದು ನಿಮಗೆ ತಿಳಿಯದೇ? ನಬಾಬನ ಹುಕುಮಾದರೆ, ಆಗಿಂದಾಗಲೆ ಯೋಜನಗಟ್ಲೆ ಒಂದೇಸವನ ಓಡುತ್ತ ಹೋಗಬೇಕಾಗುತ್ತದೆ, ಹಾಗೆ ಓಡುವಾಗ ರಾತ್ರಿಯ ದಟ್ಟವಾದ ಅಂಧಃಕಾರವಿದ್ದರೂ, ನಡುವೆ ನದಿ. ಹಳ್ಳಗಳಿದ್ದರೂ, ಕಾಲ ಕೆಳಗೆ ಎಷ್ಟೋ ಮುಳ್ಳ ಕೊಂಪೆಗಳಿದ್ದರೂ ಅವನ್ನು ನೋಡಿ ಮುಂದೇನು ಮಾಡಬೇಕೆಂಬ ಬಗ್ಗೆ ಮನದಲ್ಲಿ ವಿಚಾರ ಮಾಡಲು ಕೂಡ ಅವಕಾಶವಿರುವದಿಲ್ಲ. ಸತ್ತು ಕೆಟ್ಟಾದರೂ ದಂಡಿನ ಮುಖ್ಯಸ್ಥನ ಆಜ್ಞೆ ಪಾಲಿಸಲೇ ಬೇಕಾಗುತ್ತದೆ. ಆದ್ದರಿಂದ ಈಗೊಂದು ಗಳಿಗೆ ನಿಂತಮಾತ್ರಕ್ಕೆ ನನಗೆ ಕೊಂಚವೂ ಶ್ರಮವಾಗಲಾರದು. ಶಿವದಾಸರೆ, ನಿಮ್ಮ ಗ್ರಂಥಪಠಣವಿನ್ನೂ ಪೂರೈಸದಿದ್ದರೆ, ಸಾಗಲಿ; ನೀವು ನನ್ನತ್ತ ಲಕ್ಷ ಕೊಡಬೇಡಿರಿ’

ಇಷ್ಟರಲ್ಲಿ ನಾರ್‍ಯಾನಿಂದ ಬೇರೊಂದು ಆಸನ ಸಿದ್ದವಾಯ್ತು. ಗುಲಾಂ ಆಲಿ ದೇವರಿಗೆ ನಮಸ್ಕರಿಸಿ ತನ್ನ ಆಸನದಲ್ಲಿ ವಿಶ್ರಮಿಸಿದ. ಶಿವದಾಸನು ತನ್ನ ಪಠಣಕಾರ್ಯವನ್ನು ಅಲ್ಲಿಗೇ ನಿಲ್ಲಿಸಿ, ‘ಶಿಷ್ಟಾಗಮನೇ ಅನಧ್ಯಾಯಃ’ ಎಂದಂದು, ಅಂದಿನ ಪಠಣವನ್ನು ಮುಗಿಸಿಬಿಟ್ಟನು.

ಬಳಿಕ ತುಸ ಹೊತ್ತು ಅವರು ಸುಮ್ಮನೆ ಕುಳಿತುಕೊಂಡರು. ನಂತರ ಆ ಯವನನು ಶಿವದಾಸನನ್ನು ಕುರಿತು:-ಶಿವದಾಸರೇ, ನಮ್ಮ ಮಾಯೆಯೆಲ್ಲಿ?-ಕಾಣಲೊಲ್ಲಳಲ್ಲ! ಇಲ್ಲಿಗೆ ಬಂದು ಅವಳ ಸ್ಮಿತ ವದನ ನೋಡದೆ ಹೋದರೆ, ಮನಸ್ಸಿಗೆ ಹಿಡಿದುಬಿಟ್ಟಂತಾಗುತ್ತದೆ. ನಾವೀರ್ವರೂ ಸದ್ಯಕ್ಕೆ ದೇವಾಲಯದಲ್ಲಿ ಕುಳಿತಿದ್ದರೂ, ಈ ದೇಗುಲದ ಅಧಿದೇವತೆಯಾದ ಮಾಯೆಯನ್ನೇ ಇಲ್ಲಿ ಕಾಣದ ಬಳಿಕ, ಇದಕ್ಕೆ ಹಾಳು ಗುಡಿಯೆಂದು ಬೇರೆ ಹೇಳ ಬೇಕೇ?

‘ಎಲೋ ನಾರ್‍ಯಾ, ಮಾಯೆಯನ್ನು ಕರೆದುಕೊಂಡು ಬಾ ನೋಡುವ’, ಎಂದು ಶಿವದಾಸನು ನಾರಾಯಣದೀಕ್ಷಿತನಿಗೆ ಹೇಳಿ ಕಳಿಸಿದ. ಬಳಿಕ ಸ್ಮಿತ ವದನದಿಂದ: – ಜಹಗೀರದಾರರೇ, ತಾವು ಮುಸಲ್ಮಾನ ಜಾತಿಯವರಾಗಿದ್ದರೂ ಹಿಂದೂ ಜನರ ದೇವತೆಗಳಿಗೆ ನಮಸ್ಕಾರ ಮಾಡುವದು, ಹಿಂದುಗಳ ದೇವಾಲಯಗಳನ್ನು ಮನ್ನಿಸುವದೇ ಮುಂತಾದ ನಿಮ್ಮ ಕೃತಿಗಳು ನಮ್ಮ ಹಿಂದೂಮತದವರಿಗೆ ಶ್ಲಾಘನೀಯಗಳಾಗಿ ತೋರಿದರೂ, ಇವೇ ಕೃತಿಗಳಿಗೆ ನಿಮ್ಮ ಯಾವ ಧರ್ಮದ ಪ್ರಕಾರ ನೀವು ನರಕಕ್ಕೆ ಹೋಗಬೇಕಾಗುವದಲ್ಲವೇ?

ಭಾವನಾಪೂರ್ವಕವಾಗಿ ಯಾವ ದೇವರಿಗೆ ನಮಸ್ಕಾರ ಮಾಡಿದರೂ ತಪ್ಪಲ್ಲ; ಹಾಗೆ ಮಾಡುವದರಿಂದ ನಮ್ಮ ಧರ್ಮದ ಪ್ರಕಾರ ನರಕಕ್ಕೆ ಗುರಿಯಾಬೇಕಾಗುತ್ತದೆಂಬದು
ತಿಳುವಳಿಕೆ.

ಜಹಗೀರದಾರರೆ, ಎಲ್ಲರೂ ನಿಮ್ಮಂತ ತಿಳುವಳಿಕೆಯವರಿರುವದಿಲ್ಲ. ನಿಮ್ಮ ಮತದವರೂ ನಮ್ಮ ಮತದವರೂ ಎಲ್ಲರೂ ನಿಮ್ಮಂತ ಉಚ್ಚ ಭಾವನೆಯಿಂದ ನಡೆದರೆ, ಹಿಂದೂ ಮುಸಲ್ಮಾನರಲ್ಲಿ ಇಷ್ಟು ವೈಷಮ್ಯವುಂಟಾಗಲಿಕ್ಕೆ ಕಾರಣವೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಮತಗಳ ಪ್ರಕಾರ ನಡೆದರೆ, ತತ್ವತಃ ಎಲ್ಲರೂ ಸಮಾನರೆಂದು ಭಾವಿಸಿದರೆ, ಈ ನಮ್ಮ ಹಿಂದುಸ್ಥಾನದಲ್ಲಿ ಇಷ್ಟು ಅನರ್ಥಗಳೆಲ್ಲುಂಟಾಗುತ್ತಿದ್ದವು? ಎಲ್ಲವೂ ಸರಾಗವಾಗಿ ಸಾಗಿ, ಪ್ರತಿಯೊಬ್ಬರ ಆತ್ಮೋನ್ನತಿಗೆ ಸೌಲಭ್ಯವಾಗುತ್ತಿತ್ತು.

ಬ್ರಾಹ್ಮಣೋತ್ತಮಾ, ಈ ಜಗತ್ತಿನಲ್ಲಿ ದೇವರು ಒಬ್ಬನೇ ಇದ್ದು, ಅವನನ್ನು ಕಂಡುಕೊಳ್ಳುವದಕ್ಕಾಗಿಯೇ ಅನೇಕ ಧರ್ಮಗಳೂ, ಅನೇಕ ಮತಗಳೂ, ನಾನಾ ಪಂಥಗಳೂ ಉಂಟಾಗಿರುತ್ತವೆ. ಆಯಾ ಧರ್ಮಗಳಂತೆ ಅದರ ಅನುಯಾಯಿಗಳು ನಡೆದು, ತಮ್ಮ ಉನ್ನತಿ ಮಾಡಿಕೊಳ್ಳುವದು ವಿಹಿತವೇ ಆಗಿರುತ್ತದೆ; ಆದರೆ ಒಂದು ಧರ್ಮದವರು ಮತ್ತೊಂದು ಧರ್‍ಮವನ್ನು ತಿರಸ್ಕರಿಸಬೇಕೆಂಬದೂ, ತಾವು ಬಲಿಷ್ಠರಾದ ಮಾತ್ರಕ್ಕೆ ಉಳಿದವರಿಗೆ ತೊಂದರೆಯಿತ್ತು, ಅವರನ್ನು ಅವರ ಧರ್ಮದಿಂದ ಪರಾಙ್ಮುಖಪಡಿಸ ಲೆತ್ನಿಸಬೇಕೆಂಬದೂ ಎಲ್ಲಿಯ ನ್ಯಾಯ? ಈ ಪ್ರಕಾರದ ಬಲುಮೆಯಿಂದ ಸ್ವಧರ್ಮವನ್ನು ಬಲಿಸಲೆತ್ನಿಸುವದು ತೀರ ಮೂರ್ಖತನವಾಗಿರುತ್ತದೆ. ಯಾಕಂದರೆ, ಹಾಗೆ ಜುಲುಮೆಯಿಂದ ಹಿಡಿದು ತಂದ ಜನರು ಮೂಲ ಧರ್ಮ ಕರ್ತನ ನಿಜವಾದ ಅನುಯಾಯಿಗಳು ಎಂದಾದರೂ ಆಗಬಲ್ಲರೆ? ಪ್ರಸ್ತುತ ನಮ್ಮ ಮುಸಲ್ಮಾನ ಜನರು ಪರಧರ್ಮಿಗಳ ಮೇಲೆ ಈ ವಿಷಯವಾಗಿ ಒತ್ತಾಯಮಾಡುವದು ನನಗೆ ಕೊಂಚವೂ ಸಮ್ಮತವಾಗಿರುವದಿಲ್ಲ. ಯಾವದೊಂದು ಊರಿಗೆ ಹೋಗಲಿಕ್ಕೆ ಅನೇಕ ದಾರಿಗಳಿರುವಂತೆ, ಜಗದೀಶನನ್ನು ಕಾಣಲಿಕ್ಕಾದರೂ ಅನೇಕ ಧರ್ಮ ಮಾರ್ಗಗಳಿರುತ್ತವೆ. ಒಬ್ಬನು ಒಂದು ಮಾರ್ಗವ ಹಿಡಿದು ತನ್ನ ಇಷ್ಟ ಪೂರ್ತಿಮಾಡಿಕೊಂಡರೆ, ಮತ್ತೊಬ್ಬನು ಮತ್ತೊಂದು ಮಾರ್ಗದಿಂದ ಅದೇ ಕಾರ್ಯಕ್ಕೆ ತೊಡಗಿರುವನು. ಅವನನ್ನು ಆ ಮಾರ್ಗದಿಂದ ಹಿಡಿದೆಳೆದು, ಚ್ಯುತಿಗೊಳಿಸುವದು ಎಂದಿಗೂ ಯಾರಿಗೂ ಶ್ರೇಯಸ್ಕರವಾಗಿರುವದಿಲ್ಲ. ಧರ್ಮಾಧರ್ಮಗಳಲ್ಲಿಯ ಈ ಬಡಿದಾಟವು ನಿರಂತರವಾಗಿ ತಪ್ಪಬೇಕಾದರೆ, ಒಬ್ಬನು ಒಂದು ಮಾರ್ಗ ಹಿಡಿದು ದೇವರ ದರ್ಶನಹೊಂದಿದ್ದರೂ, ಅವನೇ ಬೇರೆ ಹಲಕೆಲವು ಮಾರ್ಗಗಳಿಂದ ಹೋಗಿ ಅದೇ ದೇವರನ್ನು ಕಂಡು ಬರುವ ಯತ್ನ ಮಾಡಬೇಕು; ಅಂದರೆ ಅವನಿಗೆ ಆ ಎಲ್ಲ ಮಾರ್ಗಗಳ ರಹಸ್ಯವು ತಿಳಿದುಬರುವದಲ್ಲದೆ ಎಲ್ಲರ ಇಷ್ಟ ಸಾಧನೆಯೂ ಒಂದೇ ಎಂಬದು ಮನಗಾಣುವದರಿಂದ ಅವನು ಯಾವ ಧರ್ಮವನ್ನೂ ಜರೆಯಲಿಕ್ಕೆ ಮನಸ್ಸು ಮಾಡುವದಿಲ್ಲ. ನನ್ನ ಸ್ಥಿತಿಯಾದರೂ ಇದರಂತೆಯೇ ಆಗಿರುತ್ತದೆ’

‘ಜಗತ್ತಿನೊಳಗಿನ ಈ ಬಡಿದಾಟಕ್ಕೆ ಜಗತ್ಕರ್ತೃವಿನ ಅಂಗಸಂಭೂತಳಾದ ಮಹಾ ಮಾಯೆಯೇ ಕಾರಣಳಾಗಿರುವದರಿಂದ, ಆ ದೋಷ ಬೇರೆ ಯಾರನ್ನೂ ತಟ್ಟ ಕೊಳ್ಳುವದಿಲ್ಲ. ಆಕೆಯ ಪ್ರೇರಣೆಯಿಂದಲೇ ಜಗತ್ತು ಇಷ್ಟು ಅನರ್ಥಕ್ಕೆ ಗುರಿಯಾಗಿರುತ್ತದೆ. ಈ ಬಗ್ಗೆ ಜಗದೀಶನಿಗೇ ದಯೆಯುಂಟಾಗ ಬೇಕು. ಅವನು ತನ್ನ ಮಾಯೆಯನ್ನು ತಾನೇ ಆವರಿಸಿ ಜಗ್ಗಿ ಕೊಂಡರೆ, ಎಲ್ಲ ಧರ್ಮಗಳೂ ಅವನನ್ನು ಏಕಸಮಯಾವಚ್ಛೇದದಿಂದ ಕಾಣುವರು. ಎಲ್ಲಿಯವರೆಗೆ ಜನರ ಕಣ್ಣಿಗೆ ಜಗದೀಶನ ಬದಲು ಮಾಯೆಯೇ ಕಾಣಿಸಿ ಕೊಳ್ಳುವಳೋ, ಅಲ್ಲಿಯವರೆಗೆ ಎಂಥ ಸದುಪದೇಶದಿಂದಲೂ ಈ ಜಗದ್ವಾಸಿಗಳಿಲ್ಲರ ಕಲ್ಯಾಣವು ಒಮ್ಮೆಲೆ ಆಗಲಾರದು.

ಅವರಿಬ್ಬರೂ ಈ ಪ್ರಕಾರ ಪಾರಮಾರ್ಥಿಕ ವಿಚಾರದಲ್ಲಿ ತೊಡಗಿರಲು, ಮಾಯೆಯು ಸಮ್ಮುಖಸ್ಥಳಾಗಿ ಬಂದು ನಿಂತಳು. ಆಗ ಗುಲಾಮ ಅಲಿಯು “ಈ ನಮ್ಮ ಮಾಯೆಯನ್ನು ಕಂಡ ಕೂಡಲೆ ಆ ಜಗನ್ಮಾತೆಯ ವಿಸ್ಮರಣವೇ ಆಗಿ ಬಿಡುವದು” ಎಂದಂದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಮಲ ಹುಟ್ಟಬೇಕು
Next post ಬವಣೆ

ಸಣ್ಣ ಕತೆ

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…