ಟೊಳ್ಳುಗಟ್ಟಿ

ಟೊಳ್ಳುಗಟ್ಟಿ

ಚಿತ್ರ: ಪ್ಯಾಟ್ರಿಕ್ ನ್ಯೂಫೆಲ್ಡರ್‍

ಅಥ್ವಾ
ಮಕ್ಕಳ ಸ್ಕೂಲ್ ಮನೇಲಲ್ವೇ ?

ಪಾತ್ರಗಳು
ಹಿರಿಯಣ್ಣಯ್ಯ : ಕಸಬಾ ಹೋಬಳಿ ಹೆಡ್ ಮುನುಷಿ
ರಾಮಾಶಾಸ್ತ್ರಿ : ರೀಡಿಂಗ್ ರೂಮ್ ರೈಟರು
ಪುಟ್ಟು : ಹಿರಿಯಣ್ಣಯ್ಯನ ಹಿರೀಮಗ
ಮಾಧು : ಹಿರಿಯಣ್ಣಯ್ಯನ ಕಿರೀಮಗ
ಭಗೀರಥಮ್ಮ : ಹಿರಿಯಣ್ಣಯ್ಯನ ಪತ್ನಿ
ನಾಗಮ್ಮ : ಹಿರಿಯಣ್ಣಯ್ಯನ ತಂಗಿ (ವಿತಂತು)
ಪಾತು : ಹಿರಿಯಣ್ಣಯ್ಯನ ಹಿರೀ ಸೊಸೆ
ಸಾತು : ಹಿರಿಯಣ್ಣಯ್ಯನ ಕಿರೀ ಸೊಸೆ
ರೀಡಿಂಗ್ ರೂಮ್ ಮೆಂಬರುಗಳು, ನೆರೆಹೊರೆಯವರು, ಕೂಲಿ, ಕೂಸು

ಪೂರ್ವರಂಗ

[ಗ್ರಂಥಕರ್ತನಾದ ಗುಂಡೂರಾಯನು ಹೂಮಾಲೆಯನ್ನು ಕೈಯಲ್ಲಿ ಹಿಡಿದು ರಂಗಸ್ಥಲದ ಮುಂಭಾಗದ ವಾಮ ಭಾಗದಲ್ಲಿ ಒಂದು ಕುರ್ಚಿಯ ಮೇಲಿಟ್ಟಿರುವ ಯುವ
ರಾಜರ ಚಿತ್ರಪಟದೆದುರಿಗೆ ತಲೆಬಾಗಿ ನಿಂತು ಹಾಡುವನು.]

ರಾಗ-ನಾಟಿ; ವೃತ್ತ-ಗುಂಡೂ.
“ಶ್ರೀಮನ್ ಮಹೀಶೂರ ಮಹೀಪ ದಿವಂಗತ ಚಾಮರಾಜೇಂದ್ರಾತ್ಮಜ ರಾಜರಾಜೇಂದ್ರ ಶ್ರೀಕೃಷ್ಣರಾಜೇಂದ್ರ ಸಾರ್ವಭೌಮಾನುಜ ಶ್ರೀಮತ್ಸಕಲಗುಣಶೀಲ ಸೌಂದರ್ಯ ಸಂಪನ್ನ ಯುವರಾಜೇಂದ್ರ ಕಂಠೀರವ ನರಸರಾಜ ನಮೋಸ್ತು ತೇಽ

(ಹಾಡಿದ ಮೇಲೆ ಚಿತ್ರಪಟಕ್ಕೆ ಕೈಲಿರುವ ಮಾಲೆಯನ್ನು ಹಾಕಿ ನಮಸ್ಕರಿಸುವನು. ಅನಂತರ ರಂಗಸ್ಥಲದ ಉತ್ತರ ಭಾಗವನ್ನು ಸೇರಿ ತನ್ನ ಕಿಸೆಯಿಂದ ಪತ್ರಶಾಕಮಾಲೆಯೊಂದನ್ನೂ ಮುರುಕು ಕೈಗನ್ನಡಿಯನ್ನೂ ಹೊರಕ್ಕೆ ತೆಗೆದು, ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಾ ಪ್ರೀತಿರ್ಹಗಳನ್ನು ಸೂಚಿಸುತ್ತಾ, ಪುನಃ ಹಾಡುವನು.)

ರಾಗ: ವೃತ್ತ; ಪೂರ್ವೋಕ್ತ

“ಕಂಠೀರವ ನರಸರಾಜ ನಾಮಾಂಕಿತ ಪಾರಿತೋಷಕ ವಿಜಯೀ! ಗುಂಡೂ! ಗುಂಡೂ! ಗುಂಡೂ! ಕರ್ಣಾಟಕ ಪ್ರಹಸನ ಪ್ರಪಿತಾಮಹ ಪಂಡಿತಮಂಡಲಾಗ್ರೇಸರ! ಚಂಡಪ್ರಚಂಡ ಗುಂಡೂ! ಗುಂಡೂರಾಯ ನಮೊಸ್ತು ಮೇಽ

[ಎಂದು ಹಾಡಿ ಪತ್ರಶಾಕಮಾಲೆಯನ್ನು ಕನ್ನಡಿಗಲಂಕರಿಸುವನು. ಕೂಡಲೇ ಸಭಿಕರ ಪರಿಹಾಸ ಧ್ವನಿಯು ಕೇಳಿಸುವುದು. ಆಗ ಗುಂಡೂರಾಯನು ಕೆಂಪೇರಿದ ಕಣ್ಣುಗಳಿಂದ]

ನಗ್ಬೇಕಾದ್ದೇನೂ ಇಲ್ಲ… ಈ ಕಾಲ್ದಲ್ಲಿ ಅವರವರ್ಯೋಗ್ತೆ ಅವರವರಿಗ್ಗೊತ್ತೇ ಹೊರ್ತು ಇತರ್ರಿಗೇನ್ಗೊತ್ತು? ಆ… English (ಇಂಗ್ಲಿಷಿ) ನಲ್ಲಿ Poet (ಪೊಯಟ್) ಅಂಬೋ ಕವಿ ಹೇಳ್ತಾನಲ್ಲಾ
“To fall in love with one’s own self is the only life-long passion possible.” ಎಂಬಂತೆ [ಮುರುಕು ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಾ] ಕವಿಕೇಸರಿಗಳಲ್ಲಿ ನನಗಿರುವ ಮಮತೆ, ಮರ್ಯಾದೆ, ವಿಶ್ವಾಸ, ವ್ಯಾಮೋಹ, ಭಕ್ತಿ ಶ್ರದ್ಧಾದಿಗಳು ನನ್ನ ಯಾವಜ್ಜೀವವೂ ತೃಮಾತ್ರವೂ ಲೋಪಿಸದಿರುವುದರಲ್ಲಿ ಸಂದೇಹವೇ ಇಲ್ಲ. [ಮುರುಕು ಕನ್ನಡಿಯನ್ನೂ ಪತ್ರಶಾಕಾಮಾಲೆಯನ್ನು ಕಿಸೆಗೆ ಸೇರಿಸಿ] (ಆತ್ಮಗತಂ)

ಪಂಡಿತಮಹಾಶಯರಿಗೆ ಮರ್ಯಾದೆ ಮಾಡಿದ್ದಾಯ್ತು. ಸರ್ವಗುಣಸಂಪನ್ನರಾದ ಸಭಾಸಭಿಕ ಸರ್ವಜ್ಞ ಸರ್ವರೂ ಈ ನಾಟಕಾವಲೋಕನಾತುರರಾಗಿ ಸಂಗ್ರಹಿಸಿದ್ದಾರೆ…[ರಂಗ ಸ್ಥಳವನ್ನು ಸುತ್ತ ಮುತ್ತಲೂ ಚನ್ನಾಗಿ ನೋಡಿ] ರಂಗಸ್ಥಳ… ಜಮ್ಖಾನೆ ಇಲ್ಲಾ…. ಹೊರಳೋರಿಗೆ ತಕ್ಲೀಫು!… [ಮೇಲ್ಭಾಗವನ್ನು ಗಮನಿಸಿ] ಫರದೆ ಬೀಳೋಹಾಗಿಲ್ಲ… ಈಗ… ಇನ್ನೇನು?… Conductor! ಈ ಕಾಲ್ದಲ್ಲಿ ನಾಟ್ಕಬರದ ಕವಿಗ್ಳು ಕಂಡಕ್ಟರನ್ನಂಬೋದಕ್ಕಿಂತ ಕಾಡಿಗ್ಹೋಗೋದು ಮೇಲು… ಓಹೋ! [ಪ್ರವೇಶ… ಸುಬ್ಬಾಚಾರಿ] ಇದೋ ಬಂದ!… ಏನಯ್ಯ ಇದು? ಹುಡ್ಗಾಟಾಂತ ಅಂದ್ಕೊಂಡಿದ್ದೀಯಾ ನಾಟ್ಕಾಂಬೋದು?… ಅವತ್ತೇನೋ ನಾಟ್ಕ ಜರಿಗ್ಸೋದ್ರಲ್ಲಿ ಅದ್ವಿತೀಯ ಪಂಡಿತ ಅಂತ ಜಂಬಾಕೊಚ್ಕೊಂಡು… ಈಗ… ಸಭಿಕ್ರೆಲ್ಲಾ ಕಾದಿರೋಸಮಯಕ್ಕೆ ಸರಿಯಾಗಿ ನಾಟ್ಕದ
ವಿಚಾರನ್ನೇ ಮರತ್ಬಿಟ್ಟು ಧ್ವಜಸ್ತಂಬ್ಹ್ದಾಗೆ ನೆಟ್ಕೊಂಡು ನಕ್ಷತ್ರಗಳನ್ಕೀಳ್ತಿದ್ದೀಯಾ? [ಸುಬ್ಬಾಚಾರಿಯು ಸಮೀಪಕ್ಕೆ ಬರಲು] ಅಲ್ಕಾಣಯ್ಯ! ಎಷ್ಟೋ ಸಹಸ್ರ ಜನ್ಮಗಳು ನಾಯಿ ನರಿ ಕತ್ತೆ ಕಿರುಬನ ಹಾಗೆ ಹುಟ್ಟಿ] ಆಮೇಲೆ ಆ ಜಗದೀಶನ ಅನುಗ್ರಹದಿಂದ ಮನುಷ್ಯಜನ್ಮ ಸಿಕ್ಕೋದು ಎರಡೋ ಮೂರೋ!… ಆ ಎರ್ಡುಮೂರು ಜನ್ಮಗಳಲ್ಲಿ ನಾಟ್ಕ ಬರ್ಯೋ ಯೋಗ್ಯತೆ ಬರಬೇಕೂಂದ್ರೆ ಎಷ್ಟಾಶ್ರಯಿಸ್ಬೇಕೋ ಸರಸ್ವತೀನ… ನನಗೇ ಗೊತ್ತು. ಹಾಗೆ ಬರದ ನಾಟ್ಕಗಳು ಒಂದೋ ಎರಡೋ. ಹಾಗೆ ಬರದ ಒಂದೆರಡು ನಾಟ್ಕಗಳಲ್ಲಿ ರಂಗಸ್ಥಳದಲ್ಲಿ ಅಭಿನಯ್ಸಿ ತೋರ್ಸೋ ಯೋಗ್ಯತೆ ಇರೋದು ಒಂದು ನಾಟಕವೋ ಅರ್ಧನಾಟ್ಕವೋ… ಆವಾಗ್ಲೂನೂ ಇಂಥಾ ಸರ್ವಗುಣಸಂಪನ್ನರಾದ ಸಭಾಸರ್ವಜ್ಞ ಸಭಿಕರು ಸಂಗ್ರಹಿಸೋದು ಬಹು ದುರ್ಲಭ. ಇವನ್ನೆಲ್ಲಾ ಹೊಂದ್ಸಿ ನಾಟ್ಕಾನ ಜರಿಗ್ಸಿ ಕೊಡಪ್ಪಾಂತ ನನ್ನ ಜುಟ್ಟು ನಿನ್ನ ಕೈಲಿ ಕೊಟ್ರೆ… ತಕ್ಸಮಯದಲ್ಲಿ ನಾಚಿಕೆಹೇಸ್ಕೆ ಇಲ್ದೆ ತೆಪ್ನೆ ನಿಂತಿದ್ಧೀಯಲ್ಲಯ್ಯಾ… ಏನು ಮಾಡ್ಬಿಟ್ಟಿದ್ದೀ?… ಅಭಯ ಕೊಡಯ್ಯಾ!… ಆಕಾಶವಾಣಿ!…

ಸುಬ್ಬಾಚಾರ್: ಸ್ವಾಮೀ… ಗುಂಡೂರಾಯ್ರೆ! ನೀವೇನೂ ಹೆದರ್ಬೇಡಿ. ನಾಟ್ಕಕ್ಕೆ ಬೇಕಾದ Arrangements ಎಲ್ಲಾ (Complete ಮಾಡ್ಬಿಟ್ಟಿಧೇನು… ಒಂಭತ್ಘಂಟೆ ಠಾಂತ್ಹೊಡೆಯತ್ಲೂನೂನೆ ಆ ಫರದೆ ಝರ್ ಆಂತ್ಹ್ರತ್ತತ್ತೆ ನೋಡ್ತಿರಿ… ಹೌದು… ಈ ನಾಟ್ಕಕ್ಕೆ ಬೇಕಾದ ಸಾಮಾನುಗಳು, ಉಡ್ಪುಗಳು, ಪಾರ್ಟುಗಳು ತೆಕ್ಕೊಳ್ಳೋ ಜನಗಳು, ಇವನ್ನೆಲ್ಲಾ ಜಮಾಯ್ಸೋದು….Rehersals (ರೀಹರ್ಸಲ್ಸು) ಮಾಡ್ಸೋದು ನಾಟ್ಕಾನ್ನಡಿಸೋದು ಇವನ್ನೆಲ್ಲಾ ನನ್ತಲೆಮೇಲೆ ಚಪ್ಡಿಕಲ್ಹಾಗೆ ಹಾಕ್ಬಿಟ್ರೇ ಹೊರ್ತು…. ಇದೇನಾಟ್ಕಾ!… ಒಂದ್ಕಂದಾ ಇಲ್ಲ… ಒಂದ್ಪದ್ಯಾ ಇಲ್ಲ… ಒಂದ್ಹಾಡಿಲ್ಲ… ಏನೋ ಹೊಸನಮೂನೆಯಾಗಿ ಬರದ್ಹಾಗೆ ಕಾಣುತ್ತಲ್ಲಾ!… ಇದೇನ್ಗುಟ್ಟು ಸ್ವಾಮಿ, ಗುಂಡೂರಾಯ್ರೆ ?

ಗುಂಡೂ: (ಚಮಕಿತನಾಗಿ) ಸುಬ್ಬೂ… ಇದೇನನಾಹುತ! ಸ್ವಾಮಿ!… ಗುಂಡೂರಾಯ್ರೆ!!… ದೇವ್ರೇಗತಿ!!! ಸ್ನೇಹಾ ಅಂದ್ರೇ ಇದೇನೇ ಸುಬ್ಬೂ?… ನಾವೇನು ಹೊಸಬ್ರೇ ಸುಬ್ಬೂ?… ಈಗ್ತಾನೆ ಮೊಖಾಬಿಲೆ ಆದ್ಹಾಗೆ ಮಾತ್ನಾಡ್ತೀಯಲ್ಲಾ!… ಇದ್ನ್ಯಾಯ್ವೇ?… ಸುಬ್ಬೂ! ನಿನಿಜ್ಞ್ಯಾಪಕವಿಲ್ದಿದ್ರೂನೂವೆ ನಾನ್ಮರ್ತೇನೇ?… ಅಲ್ಲಾ… ನಾವಿಬ್ರೂ ಹುಟ್ಟಿದ್ದು ಒಂದೇ ದಿನ! ಒಂದೇ ನಕ್ಷತ್ರ!… ಒಂದೇಲಗ್ನ!… ಎದ್ರುಬದ್ರು ಮನೇಲಿ ಲವಕುಶರ್ಹಾಗೆ ಹುಟ್ಟಿದಿವಿ!… ಶೈಶವ್ಯ… ಬಾಲ್ಯ… ಆಶ್ವಿನೀ
ಕುಮಾರ್ಹಾಗೆ ಕಳೆದ್ವು… ಸ್ಕೂಲಿಗೆ ಸೇರಿದ್ಹೊಂದೇದಿನ!… ಒಂದೇ ಕ್ಲಾಸು!… ಒಂದೇ ಬೆಂಚ್ನಲ್ಲಿ ಕೂತ್ಕೊಂಬೋದು!… ಠೋಕ್ರು ತಿನ್ಲಿ… ಗೋತಾ ಹೊಡೀಲಿ… ಪರೀಕ್ಷೇಲಿ, ಚಕ್ಕರ್‌ಕೊಡ್ಲಿ… ಕ್ಲಾಸ್ಗೆ… ಇಬ್ಬ್ರೂ ಜೊತೇಲೇ!… ಪರೀಕ್ಷೇಲಿ ಹತ್ರತ್ರಲೇ ಕೂತ್ಕೊಳ್ಳೋದು… ಕಾಪೀಯೆಂಬೋಬಾಬ್ತೇ ಇಲ್ಲಾ-(ಆತ್ಮ) ಇಬ್ರಿಗೂ ಆನ್ಸರ್ಸೇ ಗೊತ್ತಿಲ್ಲ! -(ಪ್ರಕಾಶ) ಆ… ಕೊನೆಗೂ ನೋಡು!… ಸುಬ್ಬೂ, ಆ ‘Noble sentiment of friendship’ (ನೋಬಲ್ ಸೆಂಟಿಮೆಂಟ್‌ ಆಫ್‌ ಫ್ರೆಂಡ್‌ಷಿಪ್) ಅನ್ನೋದನ್ನ Whole (ಹೋಲ್) ಸ್ಕೂಲಿಗೆ Prove (ಪ್ರೂವ್) ಮಾಡ್ಬಿಟ್ವು ಜ್ಞಾಪಕ್ವೇ! ಅದ್ಯಾಕೆ…ಸುಬ್ಬೂ?… ಹೂಂ… ಆ ಕನ್ನಡಮುನ್ಷೀಗಳ್ನ… ಸ್ವಲ್ಪ ಲೇವ್ಡಿ ಎಬ್ಬಿಸಿದ್ದಕ್ಕೆ… ಆ ಪಾಷಾಣ ಹೃದಯಿ… ಕ್ರೂರಾತ್ಮ… ಕಠಿಣಮನಸ್ಕ… ಬಾಲವೈರಿ… ಹೆಡ್ಮಾಸ್ಟ್ರೂ… ನಮ್ಮಿಬ್ರನ್ನೂ… ಈ
ಕೈಲೊಬ್ಬನ್ನ… ಆ ಕೈಲೊಬ್ಬನ್ನ… ಹಿಡ್ಕೊಂಡು… ಶ್ರೀಮದ್ರಾಮಾಯಣದಲ್ಲಿ… ಜ್ಞಾಪಕಿವಿದೆಯೇ ಸುಬ್ಬೂ?… ರಾಮ ಲಕ್ಷ್ಮಣರ್ನ… ಎಳ್ಕೊಂಡ್ಹೋಗ್ತಾನೆ ನೋಡು… ಅರಣ್ಯಕ್ಕೆ… ವಿಶ್ವಾಮಿತ್ರ… ಹಾಗೆ ಎಳ್ಕೊಂಡ್ಹೋಗಿ… ರೂಮ್ಗೆ… ಒಂದೇ ಬೆತ್ತದಿಂದ! ಸುಬ್ಬೂ!… Bond of Loveoo!
(ಬಾಂಡ್ ಆಫ್ ಲವ್ವೂ!)… ಚಡಾಯ್ಸಿ…. ಸಿಪ್ಪೆಸುಲ್ದು… ಹುಗ್ಗಿ ಇಟ್ಟು, ಡಿಸ್‌ಮಿಸ್ ಮಾಡಿ, ಉಗ್ದು ಕಳಿಸ್ದಾಗ, Whole school (ಹೋಲ್ಕ್ಸೂಲು) ನೋಡ್ತಾ‌ಇಧೆ ಸುಬ್ಬೂ! sun shiningoo
(ಸನ್‌ಷೈನಿಂಗೂ ) Sublime sightoo! (ಸಬ್ಲೈಂ ಸೈಟೂ!) ಒಬ್ರಹೆಗಲ್ಮೇಲೊಬ್ಬರು ಕೈ ಹಾಕ್ಕೊಂಡು… ಕೃಷ್ಣಕುಚೇಲ್ರಹಾಗೆ… ಆಗೇಟ್ಬಿಟ್ಟು ಹೊರಕ್ಕೆ ಬಂದ್ವಲ್ಲಯ್ಯಾ!! ಇಂಥಾ ಕಬ್ಬಿಣ್ದಂಥಾ ಸ್ನೇಹಾನ ಕರೆಗಿಸಿಬಿಟ್ಯೆಲ್ಲಾ ಸುಬ್ಬೂ! ಕಾಲ್‌ನಿಮಿಷದಲ್ಲಿ!…. ಗುಂಡೂ… ರಾಯ್ರೆ! ಮಹಾಸ್ವಾಮಿ!! ಯೇನೋ ಮಹಾ‌ನಾಟ್ಕಾನ ಬರೆದ್ಬಿಟ್ಟೆನಂತೆ… ನಾನು! ಯಶಸ್ಸು! ಅಂತಸ್ತು…! ಪೋಣಿಸ್ಕೊಂಡು
ಬಂದ್ಬಿಟ್ವಂತೆ… ನನ್ಗೆ!… ಕಾಳಿದಾಸ… ಕೈಲಾಸ… ಕರಿಬಸಪ್ಪ… ಕೃಷ್ಣಮಾಚಾರ್ಲು ಪಂಗಡಕ್ಕೆ ಸೇರಿ ಬಿಟ್ಟಿನಂತೆ… ನಾನು! ನನ್ನ ಪ್ರಾಣಸ್ನೇಹಿತ! ಗುಂಡೂ…ರಾಯರೇ! ಮಹಾಸ್ವಾಮಿ! ಅಂತಾನೆ! ಹಯ್ಯೋ ಸುಬ್ಬೂ! ಇದೆಲ್ಲಾ ನಶ್ವರ… ಸುಬ್ಬೂ! ನಶ್ವರ! ಸ್ನೇಹಕ್ಕಿಂತ ದೊಡ್ಡ ವಸ್ತು ಯಾವ್ದೂ ಇಲ್ಲ… ಪ್ರಪಂಚದಲ್ಲಿ. ಸುಬ್ಬೂ! ಇವನ್ನೆಲ್ಲಾ ಬಿಟ್ಬಿಟ್ಟು… ಮುಂಚೆ ಕೂಗ್ತಿದ್ಯಲ್ಲಾ… ಮುದ್ದಾಗಿ ಗುಂಡೂ… ಗುಂಡೂ… ಗುಂಡೂ ಆಂತ… ಹಾಕ್ಕೂಗ್ಸುಬ್ಬೂ! [ಕೊಂಚ ನಿಧಾನಿಸಿ]

ಸುಬ್ಬೂ! ಇದೇನು ಹೊಸ್ನಾಟ್ಕ? ಹೊಸ್ನಮೂನೆ ಯಾಗಿದೆಯಲ್ಲಾ? ಇದರ ಗುಟ್ಟೇನು? ಅಂತ್ಕೇಳ್ದೆ ನೋಡು… ಅದ್ನ… ಮೊದ್ಲೇ ನಿನೆಗ್ಹೇಳ್ಬಿಟ್ಟಿದ್ರೆ… ಇಷ್ಟು ತಕ್ಲೀಫ್‌ತಕ್ಕೊಂಡು ನಾಟ್ಕ ನಡಿಸ್ತಿಯೋ ಇಲ್ವೋ…. ಅಂತ… ನಂಗೆ… ಶಂಕೆ… ಗುಮಾನಿ! ಈಗ ನಡ್ಯುತ್ತೆ ಅಂತ… ಅಭಯಕೊಟ್ಬಿಟ್ಟೆ ನೋಡು… ಈಗೀನಾಟ್ಕದ ವಿಷಯ… ತಪ್ಸೀಲಾಗಿ ವಿವರಿಸ್ತೇನು… ಲಾಲ್ಸು… ಸುಬ್ಬೂ! ಲಾಲ್ಸು.

ಸುಬ್ಬೂ… ಪ್ರಥಮ್ತಃ…ಇದ್ನಾಟ್ಕವೇ ಅಲ್ಲ! ಇದು ಲೆಕ್ಚ್ರು! ನಿನಿಜ್ಞಾಪ್ಕವಿದೆಯೆ ಸುಬ್ಬೂ! School Day (ಸ್ಕೂಲ್ಡೇ) ನಮ್ಮೇಷ್ಟ್ರುಗ್ಳು ಕೊಟ್ಟ ಲೆಕ್ಚ್ರುಗಳು… ಕೇಳೋದು ಅಂದ್ರೆ ಎಷ್ಟೋ ಅನಿಷ್ಟ… ಜಲಹುತಭುಕನ್ಯಾಯ! [ಹರಿದುಹೋಗಿರುವ ತನ್ನ ಕಿಸೆಯಲ್ಲಿ ಕೈಯನ್ನಿಟ್ಟು ಅದರ ತೂತಿನಲ್ಲಿ ತನ್ನ ಬೆರಳನ್ನು ಇಳೇಬಿಟ್ಟು ಕೈಯಾಡಿಸುತ್ತಾ]… ಅದಕ್ಕೇ ಈಸ್ಥಿತೀಗೆ ಬಂದಿರೋದು… ಅಂತಿಟ್ಕೋ… ಏನ್ Holeso(ಹೋಲ್ಸೋ) ಈ ಹೊಲಸು ಕೋಟು… ಹೊಲಿಸ್ಬೇಕು… ಸುಬ್ಬೂ! ನಿನ್ನ ಷರ್ಟ್ನಲ್ಲಿ ತೂತುಗ್ಳೇನಾದ್ರೂ ಇವೆಯೋ?

ಸುಬ್ಬೂ: ಇಲ್ವಲ್ಲಾ !

ಗುಂಡೂ: ನೆಗದುಬಿದ್ದೆ… ಹಾಗಾದ್ರೆ! ನಿನ್ನಕೈಗಳು ತಲೆ, ಹ್ಯಾಗೆ ಇಳೀಬಿಟ್ಟೆ?… ಸುಬ್ಬೂ! ಚಿಕ್ವಯಸ್ಸಿನಲ್ಲಿ ನಂಗೆ ಲೆಕ್ಚ್ರುಗ್ಳು ಕೇಳೋಕೆ ಅಷ್ಟು ಅನಿಷ್ಟ್ರವಾಗಿದ್ರೂನೂವೆ… ಈಗಿಂದೀಚ್ಗೆ ಲೆಕ್ಚ್ರು ಕೊಡ್ಬೇಕು ಅಂತ ಒಂದು ಚಪ್ಲಹುಟ್ಬಿಡ್ತು! ಏನ್ಮಾಡೋದು ಸುಬ್ಬೂ! ಈಕಾಲ್ದಲ್ಲಿ ಲೆಕ್ಚ್ರುಕೊಡ್ತೇನೆ ಅಂದ್ರೆ ಕೇಳೋಕೆ ಜನಗ್ಳುಸಿಗೋದು… ದುರ್ಲಭ. ಜುಟ್ಹಿಡ್ದು ಯಳ್ಕೊಂಡ್ಬಂದು… ಕುರ್ಚೀಕ್ಕಟ್ಟಿ… ಕೂಡ್ಸಿದ್ರೇನೆ… ಕೇಳೋಕ್ಸಿಗೋದು ನಾಲಕ್ಮಂದಿ… ಹಾಗೂನೂ ಪಹಿಲ್ವಾನ್ರು ಪಟಿಂಗರಿಗೆ… ಪೈಸಾ ಕೊಟ್ಟು… ಕೆಲ್ಸಾ ಜರಿಗಿಸ್ಕೋಳ್ಳೋಣಾಂತನೋಡ್ದೆ… ಅದೂನೂ ಸಾಧ್ಯವಾಗ್ಲಿಲ್ಲ. ಯಾಕೇಂತಂತಿಯೋ… ವಿವರಿಸ್ತೇನೆ ಲಾಲ್ಸು… ಸುಬ್ಬೂ… ಈಕಾಲ್ದಲ್ಲಿ ಸುಬ್ಬೂ… ಸರ್ವರೂವೆ… ಈ Fashion ಅಂತಂತಾರಲ್ಲ, ಆ ಇಲಾಖೆಗೆ ಸೇರ್ಬಿಟ್ಟು ಈ Crop… ಅಂತಂತಾರಲ್ಲ, ಅದ್ಮಾಡ್ಸಿಕೊಂಡ್ಬಿಟ್ಟಿದ್ದಾರೆ… ಆದ್ರಿಂದ… ಹೀಗ್ಜುಟ್ಹಿಡ್ದು… ಜನಗಳನ್ನ… ಜಮಾಯ್ಸೋಕೂ ಆಗಲಿಲ್ಲ. ಮತ್ತಿನ್ನೊಂದು ಹಿಕ್ಮತ್ತು Try ಮಾಡ್ದೆ… ಹಾಲ್ ತೊಕೊಂಡೆ… ಬಾಡ್ಗೆಕೊಟ್ಟೆ… ದೀಪಗಳನ್ನಂಟಿಸ್ದೆ… ಕುರ್ಚಿಗಳ್ಮೇಲೆಲ್ಲಾ ಪುಟ್ಪುಟ್ಟ ದಿಂಬುಗಳ್ನ ಹಾಕ್ದೆ… ಹಾಲ್ತಕೊಂಡೆ… ಒಂದ್ಹಂಡೆ ಕಾಫಿ ಕಾಯ್ಸಿಟ್ಟು… ಧೊಡ್ದೊಂದು ತಟ್ಟೇಲಿ… ಮಲಸೀಮೆ ಅಡಿಕೆ… ಮೈಸೂರೆಲೆ… ಚನ್ಪಟ್ಣದಸುಣ್ಣ… ತಯಾರಾಗಿಟ್ಕೊಂಡೆ… ದಾನಿತುಂಬಾ ಪನ್ನೀರು Otto Dilbahar ತುಂಬ್ಕೊಂಡು… ಈ ಜನೋಪ್ಕಾರೀ ಗೇಟಿದೆಯಲ್ಲಾ ಇದ್ರಹೊರ್‍ಗೆ ನಿಂತ್ಕೊಂಡು… ಗೇಟ್ಹಾಸಿ ಹೋಗೋರ್ಗೆಲ್ಲಾ… ಆ ಪನ್ನೀರು ಎರ್ಡುಚುಮುಕು ಚಿಮುಕ್ಸಿ… ಎಲೆ‌ಅಡ್ಕೆ ಸುಣ್ಣ ಸವರಿ ಕೊಟ್ಟು… ಕೈಮುಗ್ಕೊಂಡು… ಕಣ್ಣೀರ್ಸುರುಸ್ತಾ… ಅಪ್ಪಾ! ಒಂದ್ಲೆಕ್ಚ್ರುಕೊಡ್ತೇನು… ನಿಮ್ಗೇನೂ
ತಸ್ದಿ ಇಲ್ಲಾ… ಅರ್ಧ್ಗಂಟೇಮೇಲ್ಕಿರ್ಲೋದಿಲ್ಲ… ಕುರ್ಚಿಗಳ್ಗೆಲ್ಲಾ ದಿಂಬುಗ್ಳು ಹಾಕಿದೇನು… ಕಾಫೀ ತಯಾರಿದೆ… ನಿಮ್ಮನೆಗಳೆಲ್ಲಾ ಎಷ್ಟ್ದೂರ್ವೋಕಾಣೆ… ಮೋಡಾಮುಚ್ಕೊಂಡು ಮಳೇ ಬರೋ ಹಾಗಿದೆ… ಹಾಲ್ಸೋರೋದಿಲ್ಲ… ದಯವಿಟ್ಟು ನನ್ಲೆಕ್ಚ್ರು ಕಿವೀಲ್ಹಾಕ್ಕೊಂಡು, ನನ್ಜನ್ಮ ಸಾರ್ಥಕಮಾಡ್ರಪ್ಪಾ ಪುಣ್ಯಾತ್ಮರ್ರಾ! ಅಂತ ಕಾಲ್ಮೇಲ್ಬಿದ್ದು ಕೇಳ್ಕೊಂಡ್ರೂನೂವೇ… ಆ ಪನ್ನೀರ್ನ ಚನ್ನಾಗಿ ಚಿಮುಕಿಸ್ಕೊಂಡು… ಸುಬ್ಬೂ! ಆ ಯೆಲೆ‌ಅಡ್ಕೇನ ಚನ್ನಾಗಿ ಅಗ್ದು, ನನ್ಮುಖ್ದಮೇಲೆ ಉಗ್ದು, ಹೋಗೋಪಾಪಿಗ್ಳೇ
ಹೊರ್ತು, ಈ ಲೆಕ್ಚ್ರು ಮಾತು ಕಿವೀಗೆ ಹಾಕ್ಕೊಳ್ಳೋ ಕ್ರಿಮಿಗಳೇ ಇಲ್ಲಾ… ನಾನೇನ್ಮಾಡೋದು ಸುಬ್ಬೂ?… ಈ ಲೆಕ್ಚ್ರು ಕೊಡ್ಬೇಕು ಅಂಬೋ ಈ ನನ್ಚಪ್ಲಾನ ತೀರಿಸ್ಕೊಂಡೇ ಚಟ್ಟಾ ಹತ್ಬೇಕು ಅಂತ ನಾನು!… ಕೆಂಪಾಂಬುದೀಗೆ ಹೋದ್ರೂ ಕೇಳ್ಳೇಕೂಡ್ದು ಇವನ ಲೆಕ್ಚರ್ನ ಅಂತ ಜನಗ್ಳು!… ಹ್ಯಾಗೆ ಹೊಂದ್ಸೋದು ಸುಬ್ಬೂ!… ಕೊರಗಿದೆ!… ಆಮೇಲೆ!!! ಈ ಥಟಕ್ ಅಂತ Perspi… ಅಲ್ಲ… Inspiration ಅಂತಂತಾರಲ್ಲ ಹಾಗೆ ತೋಚಿತು… ಸುಬ್ಬು! ಯೋಚ್ನೆ! ಆಯಸ್ನೆಲ್ಲಾ ಅಕ್ಕೀಪೇಟೇಲಿ ಕುಕ್ಕರ್ಸಿಕೊಂಡು… ಆಗಾಗ್ಗೆ… ಅರಳೇಪೇಟೇಲಿ ಹೊರಳಿ… ಈ ಗ್ರಮಾಫೋನ್… ತಸ್ವೀರ್ಪೆಟ್ಗೆ… ಇವುಗಳ್ನ (ಸುಬ್ಬಾಚಾರಿ ಬೆಪ್ಪಾಗಿ ನೋಡುವನು)… ಗ್ರಾಮಾಫೋನ್ಗೊತ್ತಿಲ್ವೇ ಸುಬ್ಬೂ?… ಹಯ್ಯೋ… ಕರೀಮರ್ದಪೆಟ್ಗೆ … ದೊಡ್ದೊಂದ್ಗಡಿಯಾರ ತಕ್ಕೋಳ್ಳೋದು… ಸಿಪ್ಪೆಸುಲ್ದ್ಹಾಕೋದು….. ಘಡಿಯಾರ್ದ ಹೊಟ್ಟೆಲಿರೋದನ್ನೆಲ್ಲ… ಪೆಟ್ಗೇಲ್ಜೋಡ್ಸೋದು, ಮುಚ್ಚಿ… ಕಬ್ಬಣದ್ದು ಒಂದು ಚಕ್ರ ಸಿಕ್ಸೋದು… ಮೇಲೊಂದು ಕರೀದೋಸೆ Recordಊ, ಹೂಂ!… ಹಾಕೋದು… ಸೂಜಿ ಚುಚ್ಚಿ… ಬೇಕೂಂತ ಬಾಯ್ಬಿಟ್ಕೊಂಡಿರೋ… ಕೊಂಬೊಂದು… ತಗುಲ್ಸಿ ತಿರಿಗಿಸಿದ್ರೆ…. ಸುಬ್ಬೂ! ಬೊಗಳಿದ್ದೆಲ್ಲಾ ತಿರಿಗೀ ಬೊಗಳತ್ತೆ!!… ತಸ್ಪೀರ್‌ ಪೆಟ್ಗೆ ಗೊತ್ತಿಲ್ವೇ ಸುಬ್ಬೂ! camera ಅಂತ ಹೆಸ್ರು ಅದಕ್ಕೆ. ಅದೊಂದು ಜಂತು ಸುಬ್ಬೂ! ಪ್ರಾಣಿ! ಪಂಚಪಾದ ಅದಕ್ಕೆ… ಹಿಂದೆ ನಿಂತ್ಕೊಂಡು ಬುರ್ಕಿಹಾಕ್ಕೊಂಡು ಬೆದರಿಸ್ತಾನಲ್ಲಾ, ಅವನ್ದೆರ್ಡುಕಾಲು… ಪೆಟ್ಗೇದ್ಮೂರು… ಐದು! ಏಕಾಕ್ಷಿ… ಕಣ್ಣೊಂದೇ… ಇದರೆದುರಿಗೆ ಜನಗಳು ನಿಂತ್ಕೊಂಡು…. ಸ್ವರೂಪ ನಾಶ್ನ ಮಾಡ್ಕೊಳ್ಳೋದು!… ಇವೆರಡ್ನೂ ತಯಾರಾಗಿಟ್ಕೊಂಡು ಸುಬ್ಬೂ! ಸುತ್ಮುತ್ಲೂ ನಡಿಯೋ ಜನಗ್ಳೂ… ಅವ್ರ ಭಾಷೆ ಸಂಭಾಷ್ಣೆಗಳೂ… ಅವರ ಕಷ್ಟ ಸುಖಗ್ಳೂ… ಇವುಗಳ್ನೆಲ್ಲ ಪಟ್ಟಾಗ್ಹಿಡ್ಕೊಂಡು… ಯಳ್ಕೊಂಡ್ಬಂದು… ರಂಗಸ್ಥಳಕ್ಕೆ… ಬಹಿರಂಗಸ್ಥಳಾ! ಸುಬ್ಬೂ!… ನಾನು ಲೆಕ್ಚ್ರಲ್ಲಿ ಏನೇನು ಬಗುಳ್ಬೇಕೂ ಅಂತಿದ್ನೋ ಅದನ್ನೆಲ್ಲಾ ಇವರ್ಬಾಯಿಂದ ಬಗುಳಿಸಿಬಿಟ್ಟಿದೇನೆ… ಜನಗಳು! ಇದೇನೋ ನಾಟ್ಕಂತ ಅಂದ್ಕೊಂಡು!… ಕಾಸ್ಕೊಟ್ಟು ಟಕೀಟುಗಳ್ತಕೊಂಡು!… ಒಳಗ್ಬಂದ್ಕೂತ್ಮೇಲೆ… ಇದು ಲೆಕ್ಚ್ರೆಂಬೋಗುಟ್ಟು ತಿಳಿದ್ರೂ ಕೂಡಾ… ಕೊಟ್ಕಾಸ್ಗೇನಾದ್ರೂವೇ… ಕೇಳೇಕೇಳ್ಬೇಕೂಂತ… ಕೊನೇವರ್ಗು ಕುಕ್ಕರ್ಸೇಕುಕ್ಕರ್ಸ್ತಾರೆ!! ನಾನೂ! ನನ್ನ ಲೆಕ್ಚ್ರೂ ಅವರ ಕಿವೀಗೆ ಹತ್ಸೇಹತ್ಸಿ ಬಿಡ್ತೇನೆ!! ಆರ್ಥವೇ? [ಒಳಗಡೆ ಘಂಟೆಯ ಶಬ್ದವಾಗುವುದು] ಆಗೋ…ಘಂಟೆ! ಸುಬ್ಬೂ! ನಿನ್ಕೆಲ್ಸಾ ನೀನೋಡ್ಹೋಗಪ್ಪಾ! [ಸುಬ್ಬಾಚಾರಿಯು ಹೊರಟುಹೋಗುತ್ತಿರಲು ಗುಂಡೂರಾಯನು ಅವನನ್ನು ಕರೆದು] ಸುಬ್ಬೂ! ಈ ನಾಟ್ಕಾ ಮಟ್ಗೆ… ನನ್ಗೆ ಜರಿಗ್ಸಿ ಕೊಟ್ಬಿಟ್ರೆ, ಕೃತಜ್ಞತೇ ಇದೇ ನೋಡು… ಕೃತಜ್ಞತೆ! ಅದ್ನ…ಗಸಿ…ಗಸಿ…ಗಸೀ ಇಳ್ಸಿ ಒಪ್ಪಿಸಿಬಿಡ್ತೇನೂ ನಿನ್ನ ಪಾದಗಳಿಗೆ… ಇನ್ನೇನು?… ವಿಜಯೀಭವ ಮೊಗು! ವಿಜಯೀಭವ!!!

[ಇಬ್ಬರೂ ಒಳಕ್ಕೆ ಹೋಗುವರು]

ಸೀನ್ ೧
ಸ್ಥಳ-ಕಸ್ಬಾ ಹೋಬ್ಳಿ Reading Room
[೪-೫ ಮೆಂಬರುಗಳು ಪತ್ರಗಳನ್ನೋದುತ್ತಿರವರು… ಗುಮಾಸ್ತೆ ರಾಮಾಶಾಸ್ತ್ರಿ Subscription ಬುಕ್ಕನ್ನು ಓದುತ್ತಿರುವನು… ಪ್ರವೇಶ… ಹಿರಿಯಣ್ಣಯ್ಯ… ಬಂದು ಕುಳಿತುಕೊಂಡು, ತನಗೆ ಬೇಕಾದ ಪೇಪರು ಮೇಜಿನ ಮೇಲಿಲ್ಲದ್ದರಿಂದ…]

ಹಿರಿಯಣ್ಣಯ್ಯ : …ಶಾಸ್ತ್ರೀ!…

ರಾಮಾಶಾಸ್ತ್ರಿ : ಸ್ವಾಮೀ!

ಹಿರಿ : ಆ…Mail ಪೇಪರು?…

ರಾಮಾ: ದೊಡ್ಸಾಹೇಬ್ರು… ನಿನ್ನೆ ಸಾಯಂಕಾಲ…

ಹಿರಿ: (ಆತ್ಮ) ಓಹೋ… ನೆಗದುಬಿದ್ಹೋಯ್ತು… (ಪ್ರಕಾಶ) ನಿನ್ನೇ… ಕರ್ನಾಟ್ಕ?…

ರಾಮಾ: …ಚಿಕ್ಸಾಹೇಬ್ರು… ಯೀಗ್ಕಳಿಸಿಬಿಡ್ತಾರೆ…

ಹಿರಿ : ಸರ್ಹೋಯ್ತು!… ಯಾವ್ದಕ್ಕೂ ಸಾಹೇಬ್ರೇ!… ಆಫೀಸ್ನಲ್ಲೋ ಇದ್ದೇ ಇದೆ ಹಣೆಬರ್ಹ… ಇಲ್ಬಂದ್ರೂ ಹೀಗೆ!… ಇರ್ಲಿ… ನಮ್ಪುಟ್ಟು ಪ್ಯಾಸ್ಗೀಸ್ಮಾಡಿ ಮುಂದಕ್ಬಂದ್ರೆ ಆಗ ನನ್ಹೊಟ್ಟೆ ಉರಿ ತಣ್ಣಗಾದೀತು!… ದೇವರು… ನನ್ನೆಷ್ಟುಕಷ್ಟಪಡಿಸಿದ್ರೂನೂ ಒಬ್ಬೊಳ್ಳೆ ಮಗನ್ನಾದ್ರೂ ಕೊಟ್ಟಿದ್ದಾನಲ್ಲ!…

ರಾಮಾ : ಒಬ್ಬೊಳ್ಳೇಮಗನ್ನೆ? ಆದ್ಯಾಕೆ, ನಿಮ್ಕಿರೀಮಗನ್ಗೇನ್ಕಮ್ಮಿ?

ಹಿರಿ: ಏನ್ಕಮ್ಮಿ?… Brains ಕಮ್ಮಿ ಇನ್ನೇನೂ ಇಲ್ಲಾ!!… Brainsoo
ಕಮ್ಮಿ… ಹುಟ್ಟಿದ್ದಕ್ಸಾರ್ಥಕವೂ ಕಮ್ಮಿ!!… ಆಷ್ಟೇ!!…

ರಾಮಾ: ಅದ್ಯಾಕ್ಮಹಾಸ್ವಾಮಿ ಹೀಗ್ಹೇಳ್ತೀರಿ!… ನಿಮ್ಮಾಧೂ ಎಷ್ಟು ಗುಣಾಢ್ಯ!… ಎಷ್ಟು ಧೈರ್ಯಶಾಲಿ!… ಹೋತ್ತಿಂಗ್ಳು ಗುಡೀಭಾವೀಲಿ ಮಗು ಬಿದ್ದಾಗ ಧಾಂಡಿಗರಾದ ಎಂಟ್ಹತ್ತುಜನ ಹಲ್ಹಲ್ಲು ಕಿರ್ಕೊಂಡು… ಬೆಪ್ ಬೆಪ್ಪಾಗಿ ಸುತ್ಮುತ್ನಿಂತ್ಕೊಡಿರ್ವಾಗ ಮಾಧೂ ಹಗ್ಗಾ ಹಿಡ್ಕೊಂಡು ಭಾವಿಗಿಳ್ದು ಆ ಮಗೂನ್ತೆಗೀಲಿಲ್ವೇ?… ಆಮೆಡಲ್ನ ದೊಡ್ಸಾಹೇಬ್ರು… ಪ್ರೆಸೆಂಟ್ಮಾಡಿದಾಗ ಸ್ಪೀಚ್ನಲ್ಲಿ ಹೇಳಿದ್ದು ತಮ್ಗೆ ನೆನಪಿಲ್ವೇ? ‘ಇಂಥಾ ಧೈರ್ಯಶಾಲಿಯಾದ ಪುತ್ರರತ್ನಕ್ಕಿಂತಲೂ ಒಬ್ಬ ತಂದೆಗೆ ಶ್ರೇಷ್ಟತರವಾದ ಆಭರಣವೇ ಇಲ್ಲ’ ಅಂದ್ರಲ್ಲ!… ಹೀಗಿರುವಾಗ ಆವನ್ಮರ್ತೇ ಬಿಟ್ರಲ್ಲಾ!…

(ರಾಮಾಶಾಸ್ತ್ರಿಯು ಹೀಗೆ ಮಾತನಾಡುತ್ತಿರಲು ಹಿರಿಯಣ್ಣಯ್ಯನು ಉದಾಸೀನ ತಿರಸ್ಕಾರ ಪೂರ್ವಕವಾದ ಮುಖಭಾವದಿಂದ ನಿಧಾನದಾಗಿ ತನ್ನ ಜೇಬಿನಲ್ಲಿರುವ ನಶ್ಯದಪಟ್ಟೆಯನ್ನು ಹೊರಕ್ಕೆ ತೆಗೆಯುತ್ತಾ…)

ಹಿರಿ: ಶಾಸ್ತ್ರಿ!… ನೀನು… ಆ Romantic ಅಂತಂತಾರಲ್ಲ ಹಾಗೆ; ನಿನ್ನ
ಸ್ವಭಾವದಲ್ಲಿ ಆ… ಆ… ಆ… Practical outlook of life (ಪ್ರಾಕ್ಟಿಕಲ್ ಔಟ್ಲುಕ್ ಅಫ್
ಲ್ಯೆಫ್) ಅಂತಂತಾರಲ್ಲ… ಅದು ಸುತರಾಂ ಇಲ್ಲ. [ಪಟ್ಟೆಯನ್ನು ತಟ್ಟಿ ಆನಂತರ ಅದರಿಂದ ಒಂದು ಚಿಟಿಕೆ ನಶ್ಯವನ್ನು ತೆಗೆದು ಆದನ್ನು ಮೂಗೇರಿಸಿ ಮೂಗನ್ನು ಒರಸುತ್ತಾ] ಅಲ್ಕಣಯ್ಯಾ?… ಸಾಹೇಬ್ರೇನೋ ಮೀಟಿಂನ್ನಲ್ಲಿ ಸ್ವೀಚ್ಗೀಚ್ ಮಾಡೋವಾಗ ಭೂಷ್ಣ ಗೀಷ್ಣ, ಆಭರ್ಣ ಗೀಭರ್ಣ ಅಂತಂದ್ರು ಸರಿಯೇ… ಈಗ ನನ್ಮಗ ನನ್ಗೊಂದಾಭರ್ಣ ಅಂತ ಗಡ್ಯಾರದ್ಸರಪ್ಣೀಗೆ ತಗಲಸ್ಕೊಂಡು ತಿರಗಾಡ್ಲೇನು?… ಯಾವವಿಧದಲ್ಲೂ ಅವನಿಂದ ಪ್ರಯೋಜನವೂ ಸಹಾಯ್ವೂ ಇಲ್ದಿರೋವಾಗ್ಗೆ
ಅವನಿದ್ರೇನು… ಇಲ್ದಿದ್ರೇನು?

ರಾಮಾ : ಹಾಗ್ಹೇಳ್ಬಹುದೇ ಸ್ವಾಮಿ! ಈಗೋಂದ್ವಾರ್ದಿಂದ ತಂಪತ್ನಿ ಖಾಯ್ಲೇಯಾಗಿರೋದ್ರಿಂದ ನಿಮ್ಮಾಧೂ ಪುಟ್ಬಾಲು ಕ್ರಿಕೆಟ್ಟು ಇವನ್ನೆಲ್ಲಾ ಬಿಟ್ಬಿಟ್ಟು ರಾತ್ರಿ ಹಗಲೂ ಡಾಕ್ಟ್ರಮನೇಗೂ ತಮ್ಮ ಮನೆಗೂ ಓಡಾಡ್ತಿಲ್ವೇ? ಇದಕ್ಕಿಂತ್ಲೂ ಸಹಾಯ್ವೂ ಉಪಯೋಗ್ವೂ ಏನ್ಬೇಕು?

ಹಿರಿ: ಹೌದು… ಮನೇಲ್ಬಿಟ್ಟಿ ಅನ್ನ ಸಿಕ್ಕೋವಾಗ ಅಷ್ಟಾದ್ರೂ ಮಾಡ್ಬೇಕೋ ಇಲ್ವೋ?

ವೆಂಕಟರಾಮು: (ಓದುತ್ತ ಓದುತ್ತ) ಓಹೋ! ಇದ್ಕೇಳಿ ಸಾರ್!… The following are the numbers of the successful candidates in the matriculation examination held…

ಹಿರಿ : ರಿಸಲ್‌ಟ್ಸ್ ಬಂತೇ ?… ೧೬೪ ನೋಡಿ…

ವೆಂಕ : ಫಸ್ಟ್ ಕ್ಲಾಸ್!

ಹಿರಿ : ಭೇಷ್!! (ತೃಪ್ತ್ಯುತ್ಸೇಕಗಳಿಂದ) ನನ್ಗೆ ಮೊದ್ಲೇ ಗೊತ್ತು! ೪೩ ನೋಡಿ (ಆತ್ಮಗತಂ) ರಿಸಲ್ಟ್ಸೇನು ಗೊತ್ತೇ ಇದೆ…

ವೆಂಕ : ನಂಬ್ರೇ ಇಲ್ವಲ್ಲಾ!

ಹಿರಿ : ಸರಿಬಿಡಿ, (ಶಾಸ್ತ್ರಿಯಕಡೆ ತಿರುಗಿ) ಆ ಶುಂಠನ ಹಣೇಬರ ಗೊತ್ತೇ ಇತ್ತು. (ಆತ್ಮಗತಂ)… ಈಗ ನಮ್ಪುಟ್ಟು ಬೊಂಬಾಯ್ಗೇನೋ ಹೋಗ್ಬೇಕಂತಿದ್ದ… ಆದ್ರೆ… ಖರ್ಚಿಗೆ?… ಪರ್ವಾಯಿಲ್ಲ! ಆ ಫಟಿಂಗ್ಮಾಧೂಗೆ ಬಂದ್ವರದಕ್ಷಿಣೆ ದುಡ್ಡು ಉಪಯೋಗಿಸ್ಕೋಭೌದು… (ಆತುರದಿಂದ ಕುರ್ಚಿಯಿಂದ ಎದ್ದು) ನಾನ್ಬರ್ತೇನೆ ಸಾರ್!

ಎಲ್ಲರೂ : Good Night ಸಾರ್ !
[ಪರದೆಯು ಬೀಳುವುದು]

ಸೀನ್ – ೨

[ಹಿರಿಯಣ್ಣಯ್ಯನ ಮನೆ; ಮುಂಭಾಗದ ಒಂದು ಕೋಣೆಯಲ್ಲಿ ಹಿರಿಯಣ್ಣಯ್ಯನ ಹೆಂಡತಿಯಾದ ಭಾಗೀರಥಮ್ಮನು ಖಾಯಿಲೆಯಿಂದ ನರಳುತ್ತಾ ಮಲಗಿರುವಳು. ಹತ್ತಿರದಲ್ಲೇ ಜೋಲಿಯಲ್ಲಿ ಆಕೆಯ ಎಳೆಗೂಸು ಮಲಗಿರುವುದು. ಆ ಕೋಣೆಯ ಮುಂದುಗಡೆ ಹಜಾರದಲ್ಲಿ ಪುಟ್ಟುವು ಪುಸ್ತಕಗಳು ಹರಡಿರುವ ಮೇಜಿನ ಮುಂದೆ ಓದುತ್ತಾ ಕುಳಿತಿರುವನು. ಹಜಾರದಲ್ಲಿ ಪುಸ್ತಕಗಳು, ಚಂಡು… ದಾಂಡುಗಳು ಹರಡಿರುವ ಮಾಧುನಿನ ಮೇಜೂ ಇರುವುದು.]

ಭಾಗೀ: (ಆಯಾಸದಿಂದ ನರಳುತ್ತಾ) ಹಯ್ಯೋ… ದೇವ್ರೇ ! ತಲೆ ಸೀಳ್ತಾ ಇದೆಯಲ್ಲಾ!… ಹಯ್ಯೋ!… ಗಂಟ್ಲು ನಾಲ್ಗೇ ಬತ್ತಿ ಹೋಯ್ತಲ್ಲಾ!… ಯಾರ್ರೇ ಅಲ್ಲಿ?… ಸಾತೂ!… ಪಾತೂ!… ನಿಮ್ಮ ಧರ್ಮಕ್ಕಾದ್ರೂ ಸ್ವಲ್ಪ ನೀರು ತಗೊಂಬರ್ರೇ… ಹಯ್ಯೋ!. ಯಾರೂ ಇಲ್ಲ… ಮಾಧೂ ಕೂಡಾ ಇಲ್ವೇ!…

ಪುಟ್ಟು : …ಸರ್ಹೋಯ್ತು! ಹಗ್ಲೂ ರಾತ್ರಿ ಈ ಕೂಸ್ಕಿರಿಚ್ಕೊಳ್ಳೋ Nuisance ಜೊತೇಲಿ ಈಗೊಂದು ವಾರದಿಂದ ಅಮ್ಮ ಖಾಯಿಲೇಲ್ಕಿರ್ಚಿಕೊಳ್ಳೋದು ಬೇರೆ ಸೇರಿದೆ. ಹೀಗಿರ್ವಾಗ Mind concentrate ಮಾಡಿ Study ಮಾದೋದು… Impossible, Oh! Damn Nuisance!
[ಪ್ರವೇಶ-ಕೈಗಳಲ್ಲಿ ಔಷಧಿ, ಎಣ್ಣೆಯ ಸೀಸೆಗಳನ್ನೂ ಕಂಕುಳಲ್ಲಿ ತರಕಾರಿಯ ಬುಟ್ಟಿಯನ್ನೂ ಇಟ್ಟುಕೊಂಡು ಮಾಧು…]

ಮಾಧು: (ಮಹದಾತುರದಿಂದ, ಪುಟ್ಟುವನ್ನು ಕುರಿತು) ಪುಟ್ಟೂ! ಅಮ್ಮ ಹ್ಯಾಗಿದ್ದಾಳೆ? ಈಗ ಜ್ವರ ಬಿಡ್ತೆ?

ಪುಟ್ಟು : (ಮುಖವನ್ನು ಗಂಟಿಕ್ಕಿ ಮೋರೆಯನ್ನೋರೆ ಮಾಡಿ) ನೀನೇನ್ಕುರುಡೇ?… ಕಿವ್ಡೇ?… ಹೋಗ್ನೋಡು… ಕೇಳು.

ಮಾಧು : [ಸೀಸಗಳನ್ನೂ ಬುಟ್ಟಿಯನ್ನೂ ಥಟ್ಟನೆ ಕೆಳಗಿಟ್ಟು, ಒಳಹೊಕ್ಕು ತಾಯಿಯ ಬಳಿಗೆ ಹೋಗಿ ಆಕೆಯ ಹಣೆಯನ್ನು ಮುಟ್ಟಿನೋಡಿ] ಅಮ್ಮಾ! ಈಗ ಹ್ಯಾಗಿದೆ?… ಅಯ್ಯೋ ಹಣೆ ಸುಡ್ತಾಯಿದೆಯಲ್ಲಾ! ಜ್ವರ ಬಿಡ್ಲೇ ಇಲ್ಲಲ್ಲ! ಡಾಕ್ಟ್ರು ಜ್ವರ ಬಿಟ್ಟಿದ್ರೆ ಈ ಔಷಧ ಕೊಡು ಅಂತ ಕೊಟ್ಟಿದ್ದಾರೆ… ಈಗೇನ್ಮಾಡೋದು?… ತಿರ್ಗೂ ಓಡ್ಹೋಗಿ ಕೇಳ್ಕೊಂಬ್ಬರ್ತೇನೆ. [ಪಕ್ಕಕ್ಕೆ ತಿರುಗಿ ಜೋಲಿಯಲ್ಲಿ ಮಲಗಿದ್ದ ಕೂಸನ್ನು ಗಮನಿಸಿ] ಕೂಸಿಗೆ ಹಾಲ್ಹಾಕಾಯ್ತೆ?

ಭಾಗೀ : ಮಧ್ಯಾನ್ಹ ಹಾಕಿದ್ದು… ನಿಮ್ಮತ್ತೆ ಹಾಲ್ನೋನ್ಮನೆಗೆ ಹೋಗೋಕ್ಯಾರು ಇಲ್ಲಾ ಅಂದ್ಲೂ… ಪುಟ್ಟೂವೋ ಪುಸ್ತ್ಕ ಕೈಲ್ಹಿಡ್ಕೊಂಡು ಕೂತ್ಕೊಂಬಿಟ್ರೆ ಮಾತ್ನಾಡಿಸ್ದೋರ್ಮೇಲೆ ಹೆಬ್ಬುಲಿ ಹಾಗೆ ಬೀಳ್ತಾನೆ.

ಮಾಧು : ಪರವಾಗಿಲ್ಲ. ಡಾಕ್ಟರ್ಮನೆಯಿಂದ ತಿರಿಗಿ ಬರೋವಾಗ ಹಾಲ್ನೂ ತರ್ತೇನೆ.
[ಹೊರಡುವನು]

ಪುಟ್ಟು: ಈ ಮಂಕು Peon ಕೆಲ್ಸಕ್ಕೇ Fittu! Gentlemanly dignity (ಜಂಟಲ್‌ಮ್ಯಾನ್ಲಿ ಡಿಗ್ನಿಟಿ) ಎನೂ‌ಇಲ್ಲ. ಹಾಲ್ತರೋದು; ಆಸ್ಪತ್ರೆಗೋಡೋದು; ತರ್ಕಾರಿ ಕೊಂಡ್ಕೊಂದ್ಬರೋದು; ಹೆಂಗ್ಸರ್ಹಾಗೆ ನೀರ್ಸೇದೋದು; ಎಲೆ ಹಚ್ಚೋದು; ಇದನ್ನೆಲ್ಲಾ ಮಾತ್ತಿದ್ರೆ Examination ಪ್ಯಾಸ್ಮಾಡಿ Future career ಎಲ್ಲಿಂದ್ಬಂದೀತು?… Stupid fool…!
[ಸಂತೋಶಾತಿಶಯದಿಂದ ಮೈಮರೆತು ಹಿರಿಯಣ್ಣಯ್ಯನು ಪ್ರವೇಶಿಸುವನು.]

ಹಿರಿ : (ಉತ್ಸಾಹದಿಂದ) ಪುಟ್ಟೂ! ನಿನ್ಗೆ First class! (ತಾತ್ಸಾರದಿಂದ) ಅದ್ಸರೀ…Rank ಗೀಂಕ್ ಏನಾದ್ರೂ ಗೊತ್ತೇ… ನೀನೇನು ಬೊಂಬಾಯೋ… ಮದರಾಸೋ?

ಪುಟ್ಟು : Expense ಗೇನ್ಮಾಡೋದಪ್ಪಾ?

ಹಿರಿ : ಪುಟ್ಟೂ! ಆ ಯೋಚ್ನೆ ನಿನಗ್ಯಾಕೆ? ನಿನ್ನ First class ನೀನು ಸಿಗೀತಾ ಬಾ. ಹಣದ ಯೋಚ್ನೆ ನನಗ್ಬಿಡು ಆದ್ರೆ ದುಡ್ಡು ನೀನೆಲ್ಲಿಂದ ತರ್ತೀಯಪ್ಪ?

ಹಿರಿ: ಯೋಚ್ನೆಯೇನು? ಮಧೂಗೆ ಅವರ್ಮಾವ ಮದ್ವೇಲಿ ಹಾಕಿದ ಹತ್ಕಡುಕೂ, ಕೊಟ್ವರದಕ್ಷಿಣೆ ನಿನ್ನ ಬಿ.ಎ. ವರ್ಗೂ ಸಾಲುತ್ತೆ. ಹಣದಿಂದೇನ್ಪ್ರಯೋಜ್ನ ಆ ಹೆಣಕ್ಕೆ!
(ಸುತ್ತಮುತ್ತಲು ನೋಡಿ) ಆ ಪೋಲಿ ಮನೆಗೆ ಬಂದಿದ್ದಾನೋ ಇಲ್ಲಾ ಇನ್ನೂ ಬೀದಿ ಬೀದಿ ತಿರಗ್ತಾ ಇದ್ದಾನೋ?

ಪುಟ್ಟು : (ಕೇವಲ ತಾತ್ಸಾರ ಸ್ವರದಿಂದ) ಈಗೇನೋ ಬಂದ್ಹಾಗಿತ್ತು. ತಿರಿಗಿ ಗೊಣಗುಟ್ಕೊಂಟ್ಹೋದ… ಅವನಿಗೇನಾದ್ರೂ ಪ್ಯಾಸ್ಗೀಸ್ ಆಯ್ತೆ?

ಹಿರಿ: (ಕೋಪಾತ್ರೇಕದಿಂದ ಹಲ್ಲುಹಲ್ಲು ಕಡಿಯುತ್ತಾ) ಪಾಪಾಸೂ ಇಲ್ಲ. ಠಪಾಸೂ ಇಲ್ಲ… ಬರ್ಲಿ ತೋರಿಸ್ತೇನೆ…! [ಕೋಣೆಯಲ್ಲಿ ಹಾಸಿಗೆಯ ಮೇಲೆ ನರಳುತ್ತಿರುವ ಹೆಂಡತಿಯನ್ನು ಕಂಡು, ಜುಗುಪ್ಸೆಯಿಂದ] ಏನೇ!… ಇನ್ನೂ ಬಿದ್ಗೊಂಡಿದ್ದೀಯಾ?… ಹಾಳಾಗ್ಹೋಯ್ತು! (ಜೋಳಿಯನ್ನು ನೋಡಿ) ತಲೆಹುಯ್ಸೋ ಕಾಲಕ್ಕೆ ಸರಿಯಾಗಿ ತಲೆಶೂಲೆ ಬಂದ್ಹಾಗೆ ಈ ಕೂಸ್ಬೇರೆ… ಇದೇ ಸಂಸಾರಾನ್ನೋದು (ಪುಟ್ಟು ಕಡೆ ನೋಡಿ) ಪುಟ್ಟೂ! ಈ ಕಷ್ಟಕ್ಕೆಲ್ಲ ನೀನೇ ಮೋಕ್ಷಸಾಧನ. ನೀನ್ಮಟ್ಗೆ ಮುಂದಕ್ಬಂದ್ಬಿಟ್ರೆ
ಇದೆಲ್ಲಾ ಮರತ್ಬಿಡ್ತೇನೆ… [ಒಂದು ಕೈಲಿ ಔಷದದ ಸೀಸೆಯನ್ನು ಮತ್ತೊಂದು ಕೈಯಲ್ಲಿ ಹಾಲಿನ ತಂಬಿಗೆಯನ್ನು ಹಿಡಿದು ಮಾಧುವು ಪ್ರವೇಶಿಸುತ್ತಿರುವುದನ್ನು ಹಿರಿಯಣ್ಣಯ್ಯನು ಕಂಡು] ಇದೋ ಬಂದ!… ಎಲ್ಹೋಗಿದ್ಯೋ? ಎಷ್ಟೊತ್ತಿಗೋ ಮನೆಗೆ ಬರೋದು? ಇದೇನ್ಛತ್ರಾ ಅಂತ ತಿಳ್ಕೊಂಡ್ಯೇನೋ?

ಮಧು: (ಬೆಚ್ಬಿದ್ದು) ಅಮ್ಮನಿಗೆ… ಔಷಧ ತರೋದಕ್ಕೆ ಡಾಕ್ಟರ ಮನೆಗೆ… ಹೋಗಿದ್ದೆ… ಜ್ವರ ಇಳಿದಿದೆಯೇ?… ಹ್ಯಾಗಿದ್ದಾಳೆ?… ಈಗ ಹ್ಯಾಗಿದೆ?

ಹಿರಿ : (ಎದೆಯನ್ನು ಬಡಿದು ಕೊಳ್ಳುತ್ತ) ಹಯ್ಯೋ! ಅಲ್ನಿಂತಾತ… ತಾತ… ನಿನ್ಪ್ಯಾಸಿಗೆ ಪಂಗನಾಮ ಹಾಕಿ… ಕಟ್ಟಿಗೆ ಇಟ್ಟ್ ಬೇಯಿಸಿದ್ದಾಯ್ತು ನಿನ್ಕೆರಿಯರ್‍ನ! ಇಲ್ನೀನ್ ಕಿರಿಚ್ತಿರು… ಅಮ್ಮ… ಆಸ್ಪತ್ರಿ… ಕೂಸು… ಹಾಲು… ಚೊಂಬು… ಚೊಂಬು! ನಾಯಿಗ್ಹಾಕಿದ್ನಿನ್ಜನ್ಮದುಚ್ಚಿಷ್ಠಾನ್ನರೀಗ್ಹಾಕಾ! ಥ್ಛು ಥ್ಛು ತ್!…[ಹೊರಡುವನು.]

ಮಾಧು: ಈಗೇನ್ಮಾಡೋದು? ಮಾಡೋದೇನು? ತಿರಿಗ್ಹೋಗಿ ಕೇಳ್ಕೊಂಡ್ಬರೋದೇ?…
(ತಾಯಿಯು ಅಲುಗಾಡುವುದನ್ನು ಕಂಡು) ಯಾಕಮ್ಮಾ? ಎದ್ದಿದೀಯಾ? ಈಗ್ಹ್ಯಾಗಿದೆ?…

ಭಾಗೀ: ಸ್ವಲ್ಪ ವಾಸಿ… ಮಾಧು… ಈ ತಲೆಶೂಲೆಗಾನ ನಿಂತ್ಬಿಟ್ರೆಲ್ಲಾ ನಿಂತ್ಹಾಗೆ…

ಮಾಧು: (ಜೋಲಿಯ ಕಡೆ ನೋಡಿ) ಓಹೋ! ಕೂಸಿಗ್ಹಾಲು! (ಗಟ್ಟಿಯಾಗಿ) ಅತ್ತೇ! ಹಾಲ್ತಂದಿದೇನೆ… ಕೂಸಿಗ್ಮೊದುಲ್ಕಾಸಿ ಹಾಕು… ಪಾಪ! ಹೊಟ್ಟೇಲೇನೂ ಇಲ್ಲ!

ನಾಗಮ್ಮ: (ಮನೆಯೊಳಗಿನಿಂದ) ಸರ್ಹೋಯ್ತು!… ಹಾಲ್ಕಾಸ್ತಾ ಒಲೇಮುಂದ್ಕೂತಿದ್ರೆ ನೀರ್ಸೇದೋರ್ಯಾರು? ಈ ಸೊಸೆಗ್ಳೋ ಬರೀ ಬಣ್ಣದ ಬೀಸಣಿಗೆಗಳು! ಹಾರ್ಮಣಿ
ಬಾರ್ಸೋ ಕೈ ಹಾಲ್ಕಾಸೀತೇ?…

ಮಾಧು : ಪರ್ವಾ ಇಲ್ವತ್ತೆ… ನಾನೇನು ಈವತ್ತು ಆಟಗ್ಗೀಟಕ್ಕ್ಹೋಗಲ್ಲ. ಹತ್ಬಿಂದ್ಗೆ ನೀರು ಸೇದಿದರಾದ್ರೂ ನಿದ್ಬಂದೀತು. ಮೊದಲು ಹಾಲ್ಕಾಸಿ ಮಗೂಗೆ ಕೊಡು. ಪಾಪ! ಮಧ್ಯಾನ್ಹದಿಂದ ಹೊಟ್ಟೆಲೇನೂ ಇಲ್ಲ.

[ಈ ಸಂಭಾಷಣೆಯಾಗುತ್ತಿರಲು ಹಿರಿಯಣ್ಣಯ್ಯನು ಮತ್ತೆ ಹಜಾರವನ್ನು ಪ್ರವೇಶಿಸುವನು, ಮಾಧೂ ಒಳಕ್ಕೆ ಹೋಗುವನು.]

ಹಿರಿ: (ಹುಬ್ಬು ಗಂಟು ಹಾಕಿಕೊಂಡು) ನಾಗೂ…

ನಾಗಮ್ಮ: (ಒಳಗಿನಿಂದ) ಅಣ್ಣಾ ! (ಪ್ರವೇಶಿಸಿ) ಪ್ಯಾಸ್‌ಗೀಸು ಅಂತ ಕಿವೀಗೆ ಕೇಳಿಸ್ತಲ್ಲಾ… ನಮ್ಹುಡುಗರ ಗತಿಯೇನಾಯ್ತು?

ಹಿರಿ: ಆಗೋದೇನು? ಮೊದಲೇ ನಾನ್ಹೇಳಿದ ಹಾಗೆ… ಪುಟ್ಟು ಫಸ್ಟ್‌ಕ್ಲಾಸು… ಮಾಧು Fail… ಹಾಕೋ ಅನ್ನಕ್ಕೆ ಸ್ವಲ್ಪ ಕೆಲ್ಸವಾದ್ರೂ ಮಾಡ್ತಾನಲ್ಲ. ಇಲ್ದಿದ್ರೆ ಈಗ್ಲೇ ಎಡಗಾಲ್ನಿಂದ ಒದ್ದು ಮನೆಯಿಂದ ಓಡಿಸಿಬಿಡ್ತಾ ಇದ್ದೆ… ನಾಗೂ!… ಇನ್ಮೇಲೆ ಅವನ್ಗೆ ಸಾರು ಅನ್ನಕ್ಕೆ ತುಪ್ಪ… ಮೊಸರು… ಮಲಗೋಕೆ ದಿಂಬು ಧಾವಳಿ ಮಾತಾಡ್ಕೂಡ್ದು ತಿಳೀತೋ?

[ತೆರಯು ಬೀಳುವುದು]

ಸೀನ್ – ೩

ಸ್ಥಾನ – ಹಿರಿಯಣ್ಣಯ್ಯನ ಮನೆ ಹಜಾರ.
[ಮಾಧುವಿನ ಮೇಜಿಗೆ ಒರಗಿಕೊಂಡು ಮಾಧುವಿನ ಟೋಪಿಯನ್ನು ಪ್ರೀತಿಯಿಂದ ಸವರುತ್ತಾ ಸಾತುವು ಕಣ್ಣೀರುಸುರಿಸುತ್ತಾ]

ಸಾತು : ಅಯ್ಯೋ ದೇವ್ರೇ! ಪ್ಯಾಸಂದ್ರೇನು ಸ್ವರ್ಗಸಾಧನವೇ? ಫೇಲಾದ್ರೇನು ನರಕ ಪ್ರಾಪ್ತಿಯೇ? ದುರಾದೃಷ್ಟದಿಂದ ಫೇಲಾದೋರ್‍ನ, ಅನ್ನ ನೀರಿಲ್ದೆ ಹೀಗೆ ಚಿತ್ರಹಿಂಸೆ ಮಾಡೋದೇ?… ನಮ್ಮಪ್ಪ ಯಾವ ಪ್ಯಾಸೂ ಮಾಡ್ಲಿಲ್ವಲ್ಲಾ… ಆದರೂ ನಮ್ಮನೇಲಿ ನಾವೆಲ್ರೂ ಸಂತೋಷವಾಗಿ ಅನ್ಯೋನ್ಯವಾಗಿರಲಿಲ್ಲವೆ?… ಮನುಷ್ಯನಿಗೆ ಗುಣವಲ್ವೇ ಹೆಚ್ಚು. ಈ ಹಾಳು ಹಣ ಅಂತಸ್ತು, ಇವುಗಳ ಬೇಟೇಲಿ ವಿಶ್ವಾಸ ಕನಿಕರ ಇವಗಳೆಲ್ಲಾ ಹಿಂದ್ಬಿಟ್ಬಿಡೋದೆ?

[ಪಾತುವು ‘ಹಾರೆಸಯ್ಯ’ ಎಂಬ ಹಿಂದುಸ್ತಾನಿ ಹಾಡನ್ನು ಹಾಡುತ್ತಾ ಪ್ರವೇಶಿಸಿ ಗೋಡೆಯಲ್ಲಿ ನೆಟ್ಟಿರುವ ಕನ್ನಡಿಯಲ್ಲಿ ಮುಖವನ್ನು ನೋಡಿ ಕೊಳ್ಳುತ್ತಾ…]

ಪಾತು: ಏನ್ಮನೆಯೋ ಹಾಳ್ಮನೆ; ಕೂಡೋಕೊಂದು ಕುರ್ಚಿ ಇಲ್ಲ: Table ಇಲ್ಲ; ನೋಡ್ಕೋಳ್ಳೋಕೊಂದು Decent ಕನ್ನಡಿ ಇಲ್ಲ; ಇಷ್ಟಕ್ಕೂ ಇದರ ಜಂಭವೋ! ನಿರ್ವಾಕವಿಲ್ಲ!

[ಹಿಂತಿರುಗಿ ಸಾತುವನ್ನು ಕಂಡು, ಹತ್ತಿರಕ್ಕೆ ಬಂದು]

ಪಾತು : ಯಾಕ್ಸಾತೂ, ಯಾಕ್ಗೋಳಾಡ್ತಿದ್ದೀ?

[ನಾಗಮ್ಮನು ಒಂದು ಸಾಬೂನಿನ ಬಿಲ್ಲೆಯನ್ನು ಒಂದು ಕೊಳ್ಳಿಯ ಕೊನೆಗೆ ಸಿಕ್ಕಿಸಿಕೊಂಡು ಅದನ್ನು ಕೈಲಿ ಹಿಡಿದುಕೊಂಡು ಕೋಪಾವೇಶದಿಂದ ಹಜಾರವನ್ನು ಪ್ರವೇಶಿಸುವಳು.]

ನಾಗು : (ಉಚ್ಚಸ್ವರದಿಂದ) ಬ್ರಾಹ್ಮಣರ ಮನೇಲಿ ಇದೇನ್ರೇ ಅನ್ಯಾಯ? ಸಾಬೂನ್ಹಾಕಿ ತಿಕ್ಕೊಂಡ್ರೇನೆ ಸುಣ್ಣ ಬಳದ್ಹಾಗೆ ಬೆಳ್ಳಗಾಗತ್ತೆ ಅಂತ ತಿಳುಕೊಂಡಿದ್ದೀರಾ? ಮುತ್ತೈದೇರ್ಗೆ ದೇವರು ಕೊಟ್ಟ ಅರ್ಸಿನವಿಲ್ವೇ? ಹಯ್ಯೋ? ಏನು ಹೊಲ್ಸೋ ಈಕಾಲ್ದ ಹುಡ್ಗೀರು! ಕಣ್ಣಿಗೆ ಕಾಡಿಗೆ ಇಲ್ಲ; ಹಣೆಗೆ ಕುಂಕ್ಮ ಇಲ್ಲ; ಕೆನ್ನೇಗಷ್ಣವಿಲ್ಲ; ಇದಕ್ಕೇ ಹುಡ್ಗೀರ್ನ ಕಳ್ಸ್‌ಕೂಡ್ದು ಸ್ಕೂಲ್ಗೇ ಅನ್ನೋದು ದೊಡ್ಡೋರು. ಇಂಗ್ಲೀಷು, ಸಾಬೂನು, ಸುಡುಗಾಡು. ವಿಲಾಯಿತಿಬೂದಿ ಮುಖಕ್ಹಚ್ಕೋಳ್ಳೋದು; ಸೊಟ್ಟ ಬೈತಲೇ ತಗೋಳೋದು; ಸೊಟ್ಟ ಸೂಜಿ ಚುಚ್ಕೋಳೋದು. ಈ ದುರ್ವಿದ್ಯೆಗ್ಳು ಕಲ್ತ್ಕೋತಾರ್ಯೇ ಹೊರ್ತು ಮುತ್ತೈದೇರ್ಲಕ್ಷ್ಣಗ್ಳೆಷ್ಟೂ ಅಷ್ಟಕ್ಕೂ ಎಳ್ಳೂ! ಯಾರದ್ರೇ ಈ ಸಾಬೂನು?

ಪಾತು : ನಂದೂ ಅಂತ್ಕಾಣುತ್ತೆ.

ನಾಗು : (ಅಣಕಿಸುತ್ತ ) ನಂದೂಂತ್ಕಾಣುತ್ತೆ. ಅರ್ಶ್ನ ಹಚ್ಕೊಳ್ಳೋನ್ಕೇಡೇ ನಿಂಗೆ?

ಪಾತು : (ತಿರಸ್ಕಾರದಿಂದ) ಆವತ್ತೇನೋ ದಿನ್ಸುಗಳೆಲ್ಲಾ ಧಾರಣೆ ಹೆಚ್ಚಾಗಗ್ತಾಬರತ್ತೆ ಅಂದ್ರಲ್ಲಾ, ಮನೆಗೆ ಸ್ವಲ್ಪ ಅರ್ಶವಾದ್ರೂ ಮಿಗ್ಲಿ ಅಂತ ನಮ್ಮನೆಯಿಂದ ತಂದ ಸಾಬೂನು ಉಪಯೋಗಿಸ್ದೆ.

ನಾಗು : ನಿಮ್ಮನೆ ಸಾಬೂನು ಗೊತ್ತು! ಅಧಿಕಪ್ರಸಂಗಿ! ಅರ್ಶ್ನ ಮಿಗ್ಲೀ ಅಂತ್ಲೇ… ಯಾರಿಗೆ ಮಿಗ್ಲೀ ಅಂತ… (ಗದ್ಗದಸ್ವರದಿಂದ) ನನಗ್ಮಿಗ್ಲೀ ಅಂತ್ಲೆ, (ಪಾತುವಿಗೆ ಪ್ರತ್ಯುತ್ತರ ಕೊಡಲು ಕೈಲಾಗದೆ ಸಾತುವಿನಕಡೆ ಕೈತೋರಿಸಿ) ಈ ಮೂದೇವಿ ಹೊಸಲ್ದಾಟಿದ ಮೂರ್ನೇ ತಿಂಗ್ಳಲ್ಲೇ ನನ್ನಿಂದ ಅರ್ಶ್ನಕ್ಕೆ ತಿಲೋದ್ಕ ಬಿಡ್ಸಿಬಿಟ್ಲಲ್ಲಾ. (ಗೋಳಾಡುತ್ತಾ) ಅರ್ಶ್ನಕುಂಕುಮಕ್ಕೂ ನನಗೂ ಋಣವಿಮೋಚ್ನೆ ಮಾಡಿಸಿಬಿಟ್ಲಲ್ಲಾ ! (ರೋಷದಿಂದ ಸಾತುವನ್ನು ನೋಡಿ) ಏನೇ! – ನೀನ್ಮನೇಗೆ ಬಂದ ಸುಲಗ್ನದ್ಫಲ
ಕೇಳಿದ್ಯೇನೇ? ನಿನ್ಗಂಡನ್ಗೆ Failಉ! ಇನ್ನವನ್ಹಣೇಬರಹ-ಪೋಲೀ ತಿರುಗೋದು-ಪರ್ಚಾರ್ಕೆ ಮಾಡೋದು ಅಷ್ಟೆ! (ಹೊರಟು ಹೋಗುತ್ತಾ) ಕುಟುಂಬಾನೇ ಹಾಳಾಗ್ಹೋಯ್ತು. ಈ ಕಷ್ಟಗಳ್ನೆಲ್ಲ ಕಟ್ಕೊಂಡು ಗೊಳಾಡ್ಬೇಕೂಂತ ದೇವ್ರು ನನ್ಹಣೇಲಿ ಯಾಕ್ಬರದ್ನೋಕಾಣೆ-ಮುಖ್ಯ
ಪಾಪಿಜನ್ಮ-ಪಾಪಿಜನ್ಮ ನಮ್ದು [ಹೊರಟು ಹೋಗುವಳು]

ಪಾತು: (ನಾಗಮ್ಮನ ಧ್ವನಿಯನ್ನೇ ಅನುಕರಿಸಿ) ಪಾಪಿಜನ್ಮ-ಪಾಪಿಜನ್ಮ ನನ್ದು. ಇವಳ್ಜನ್ಮ ಪಾಪಿಜನ್ಮಾಂತ ಈಗ್ತಾನೆ ತಿಳೀತೂ ಅಂತ್ಕಾಣುತ್ತೀ ಗೂಬೇಗೆ!

ಸಾತು : ಇವರಿಗೆ ಫೇಲಾದ್ದು ನಂತಪ್ಪೇ? ಈಕೆ ತಾಳಿಘಟ್ಟಿಯಾಗಿಲ್ಲದ್ದು ನನ್ನ ತಪ್ಪೆ? ಅಯ್ಯೋ! (ಕಣ್ಣೀರಿಡುವಳು.)

ಪಾತು: ಅಯ್ಯೋ! ಮಂಕು; ಹೆಂಗ್ಸರ್ಹಾಗೆ ಯಾಕೆ ಗೋಳಾಡ್ತೀಯೇ? ಆ ಗೂಬೆ ಗಂಡನ್ಕಳಕೊಂಡದ್ದು ಅವಳ್ಹಣೆಬರ್ಹ… ಅವಳ್ಬಗುಳೋದ್ಕೇಳಿ ನೀನ್ಯಾಕಳ್ತೀಯೆ?… ಫೇಲಾದ್ರಿಂದೇನು ನಷ್ಟ ನಿಮ್ಮ್ಯಜಮಾನ್ರಿಗೆ… (ಪುಟ್ಟುವಿನ ಮೇಜನ್ನು ತೋರಿಸಿ) ಇದಕ್ಪ್ಯಾಸಾದ್ರಿಂದೇನಂತಸ್ತು ಹೆಚ್ಚಾಯಿತು… ಇದರ್ಗುಣ ಇದಕ್ಕಿದ್ದೇ ಇರುತ್ತೆ. (ಪುಟ್ಟುವಿನ ಧ್ವನಿಯನ್ನು ಅನುಸರಿಸಿ) Oh! Damn nuisance ! ಎಲ್ಲಕ್ಕೂ Damn nuisance! ಏನೋ ನಿನ್ನೆತಾನೇ ವಿಲಾಯಿತಿಯಿಂದ ಧುಮುಕಿದೇ ಅಂತ ತಿಳ್ಕೊಂಡಿದೆ. ಇದಕ್ಕಿಂತಾ ಇಂಗ್ಲೀಷ್ನನಗ್ಗೊತ್ತು… ಗೊತ್ತಾಗಿ ಫಲವೇನು? ಹಾಗ್ನೋಡಿದ್ರೆ ನಮ್ಮಪ್ಪ ನಂಗೆ ಕಲಿಸ್ದ ಇಂಗ್ಲೀಷು, ಪಿಟೀಲು, ಹಾರ್ಮಂನಿಯಮು, ವೀಣೆ ಯಾವದ್ರಿಂದತಾನೇ ಏನ್ಫಲ. ಗಿಣಿ ಹಾಗೆ ಸಾಕಿದ್ದಾಯ್ತು, ಈ ಬೆಕ್ಕಿನ ಬಾಯಿಕ್ಕೊಟ್ಟದ್ದಾಯ್ತು. ಈಗ್ಕಿರ್ಲೇನ್ ಫಲ… ಋಷಿ ಪಂಚ್ಮೀಗಜ್ಜೀ ಉದ್ಯಾಪ್ನೆಗಾದ್ರೂ ಮನೆಗ್ಹೋಗ್ತೇನಲ್ಲಾ ಎಂಬ ಸಂತೋಷ
ವಿಲ್ದಿದ್ರೆ ಈ ಮನೇಲಿ ಇಷ್ಟ್ಹೊತ್ತಿಗೆ ನಂಗೆ ಹುಚ್ಚು ಹಿಡಿದ್ಬಿಡ್ತಿತ್ತು.

ಸಾತು : ಋಷಿಪಂಚ್ಮೀಗೆ ನಿಮ್ಮನೆಗ್ಹೋಗ್ತೀಯಾ? ಆದು ಹ್ಯಾಗ್ಹೊತ್ತು ನಿಂಗೆ?

ಪಾತು : ಹ್ಯಾಗ್ಗೊತ್ತೆ? ನೋಡ್ತಿರು. ಈವತ್ತು, ನಮ್ಮವ್ನಿಂದ ಋಪಿಪಂಚ್ಮಿಗೆ ತಪ್ದೆ ನನ್ನ ಕಳ್ಸಿಕೊಡ್ಬೇಕೂಂತ ಮಾವನವ್ರಿಗೆ ಕಾಗ್ದ ಬರುತ್ತೆ ನೋಡ್ತಿರು.

ಸಾತು : ಅದ್ತಾನೆ ಹ್ಯಾಗ್ಗೊತ್ತು ನಿಂಗೆ?

ಪಾತು : ಹ್ಯಾಗ್ಗೊತ್ತೇ?… ಬರ್ದೇ… ನಮ್ಮಪ್ನಿಗೆ ಕಾಗ್ದ. ಋಷಿಪಂಚ್ಮೀಗೆ ಮನೇಗೆ ನನ್ಕರ್ಸಿಕೊಳ್ದಿದ್ರೆ ಬಾವೀಲ್ಬಿದ್ದು ಸಾಯ್ತೇನೇಂತ!

ಸಾತು: ಇಲ್ಲಿಂದ ಹ್ಯಾಗ್ಬರ್ದೆ? ನಾನು ಬಂದ್ಹೊಸದ್ರಲ್ಲಿ… ಖಾಯಿಲೆಯಾಗಿದ್ದ ನಮ್ಮಪ್ನ ಮೈಹ್ಯಾಗಿದೆ ಅಂತ ನಮ್ಮಣ್ಣನಿಗೆ ಇಲ್ಲಿಂದ ನಾ ಬರ್ದ ಕಾಗ್ದಾನ ಆತ್ತೆ ಚೂರ್ಚೂರಾಗಿ ಹರಿದು “ಈ ಮನೇಲಿ ಹೆಂಗಸ್ರ್ಯಾರಾದ್ರೂ ಬರ್ಯೋದು ಕಣ್ಣಿಗ್ಗಿಣ್ಗೆ ಬಿದ್ರೆ ಕ್ಕೆಮುರಿದು ಒಲೇಲಿಡ್ತೇನೆ” ಅಂತ ನಮ್ಮಿಬ್ಬರ್ನೂ ದುರುಗುಟ್ಕೊಂಡು ನೋಡಿ ಹೆದರಿಸ್ಲಿಲ್ವೇ?… ಆಕೆಗೆ ತಿಳೀದೇ ನೀನ್ಹ್ಯಾಗೆ ನಿಮ್ಮಪ್ನಿಗೆ ಕಾಗದ ಬರೆದೆ?

ಪಾತು: ಅಯ್ಯೋ ಸಾತೂ! ಇಂಥ ಗೂಬೆಗಳ್ಗೆಲ್ಲಾ ಹೆದರ್ತೇನ್ಯೇ ನಾನೂ! ಪಕ್ಕದ್ಮನೇ ಸರಸೂ ಇದಾಳಲ್ಲ ಅವರ್ಮನೇಯಿಂದ ಬರ್ದು ಕಳಿಸ್ದೆ ಕಾಗ್ದ [ಹಿರಿಯಣ್ಣನು ಕೈಲೊಂದು ಪತ್ರವನ್ನು ಹಿಡಿದು ಓದುತ್ತಾ ಬರುವುದನ್ನು ನೋಡಿ, ಮೆಲ್ಲಗೆ] ಅಕೋ ನೋಡು… ಮಾವನವ್ರ ಕೈಲಿ ಕಾಗ್ದವಿದೆ… ನಮ್ಮಪ್ನಿಂದೇ ಇರಬಹ್ದು. ನಾನೂರಿಗ್ಹೋದ್ರೆ ನಿಮ್ಮನೆಗ್ಹೋಗಿ ನಿಮ್ಮಪ್ನಿಂದ ಕಾಗ್ದ ಬರ್ಸ್ಲೇನು?

ಸಾತು: ಏನೂ ಬೇಡ ಪಾತೂ! (ಮಾಧುವಿನ ಮೇಜನ್ನು ಸೂಚಿಸಿ) ಇಲ್ಲೇ ಇದ್ರೆ ಇವರು ಪಡೋ ಕಷ್ಟದಲ್ಲಿ ಅರ್ಧವಾದ್ರೂ ನನ್ತಲೇಮೇಲ್ಬಿದ್ದೀತು.

[ಇಬ್ಬರೂ ಕೈಹಿಡಿದು ಒಳಹೋಗುವರು. ಹಿರಿಯಣ್ಣಯ್ಯನು ಪತ್ರವನ್ನು ಒದುತ್ತಾ ಹಜಾರವನ್ನು ಪ್ರವೇಶಿವನು.]

ಹಿರಿ : ನಾಗೂ!

ನಾಗು : (ಒಳಗಿನಿಂದ) ಇದೋ ಬಂದೇಣ್ಣಾ.

ಹಿರಿ : ಇಷ್ಟ್ಹೊತ್ನಲ್ಲಿ ಏನ್ಮಾಡ್ತೀ ಅಡ್ಗೇಮನೇಲಿ?

ನಾಗು : ಮಾಡೋದ್ಬೇರೆ ಏನಿದೆ ನನ್ಹಣೇಬರ್ಹಕ್ಕೆ-ಅವಲಕ್ಕಿ ಮೊಸರು ಮೆಲ್ಲೋದೇ.

ಹಿರಿ : ಹಾಗಾದ್ರೆ ಮೆಂದ್ಬಿಟ್ಬಾ ಇಲ್ಲಿ (ಮತ್ತೆ ಪತ್ರವನ್ನೋದುವನು. ನಾಗಮ್ಮನು ಪ್ರವೇಶಿಸುವಳು.)

ನಾಗು : ಅದೇನ್ಕಾಗ್ದಾಣ್ಣ? ಯಾರಿಂದ್ಬಂತು? ಏನ್ ಸಮಾಚಾರ? ಯಾರು ಸತ್ರೂ?

ಹಿರಿ : ಸಾಕ್ಸಾಕು ನಿನ್ಮಂಗಳ ಪದ್ಯ. ಯಾರೂ ಸಾಯ್ಲಿಲ್ಲ ನಮ್ಪುಟ್ಟು ಮಾವ ಬರ್ದಿದ್ದಾನೆ, ಋಷಿಪಂಚ್ಮಿಗೆ ಮಗಳ್ನ ಕಳ್ಸಿಕೊಡ್ಬೇಕುಂತ… ಈಗಾ…

ನಾಗು : ಗೊತ್ತು. ಮದ್ವೆ ಆಗೋವಾಗ್ಲೇ ಕಿರಿಚ್ದೆ; ಬಡುಕೊಂಡೆ. ನನ್ಕಿರ್ಲು ಕಿವೀಗ್ಹಾಕ್ಕೊಂಡ ಕ್ರಿಮಿ ಒಂದಾದ್ರೂ ಇದ್ದಿದ್ರೆ ನನ್ನಾಲ್ಗೆ ಸೇದ್ಹೋಗ್ಲಿ. ಈ ದೊಡ್ಡಮನುಷ್ಯರ ಸಹ್ವಾಸ ನಮಗ್ಬೇಡ… ಅವರ್ಮನೇ ಹುಡ್ಗೀರು ನಮ್ಮನೇಲಿಟ್ಪೂಜೆ ಮಾಡೋಕೆ ಯೋಗ್ಯವೇ ಹೊರ್ತು ಗೃಹಕೃತ್ಯ ವಿಷಯಕ್ಕೆ ಏನೂ ಸಹಾಯ್ವಾಗಿರೋದಿಲ್ಲಾಂತ… ಸರಿ ಆದ್ದಾಯ್ತು; ಈಗೇನ್ಮಾದ್ತೀಯಾ?

ಹಿರಿ : ಮಾಡೋದೇನಿದೆ ಬೇರೆ? ಉದ್ಯಾಪ್ನೆ ನಾಡಿದ್ದೂಂತಾನೆ! ಈ ರಾತ್ರೀನೇ ಕಳಿಸ್ಬಿಡ್ಬೇಕು! ಅಲ್ದೆ ನಾಳೆ ಪುಟ್ಟು ಪ್ಯಾಸ್ಗೀಸು ಮಾಡ್ಕೊಂಡು ತಿರಿಗಿ ಬಂದಾಗ ಕೆಲ್ಸವಾಗೋದಕ್ಕೆ ಅವರ್ಮಾವನ ಶಿಫಾರ್ಸು ಬೇಕಾದ್ರೂ ಬೇಕಾದೀತು. ಅವನ್ನೀಗ್ಕೆಣಕಿದ್ರಾದೀತೆ! ಈ ರಾತ್ರಿಯೇ ಅವಳ್ನ ಕರ್ಕೊಂಡ್ಹೋಗಿ ಬಿಟ್ಬಿಟ್ಬಾ.

ನಾಗು : ಹೌದು. ಈಗ್ಮಾಧೂ ಹೆಂಡ್ತೀನ್ಮನೇಲಿಟ್ಟೊಂಡೇನ್ಪ್ರಯೋಜ್ನಾಣ್ಣ? ಆ ಪುಣ್ಯಾತ್ಗಿತ್ತಿ ನಮ್ಹೊಸ್ಲು ದಾಟಿದಾರಭ್ಯ ನಮ್ಮನೇಲಿ ಏನಾದ್ರೂ ಅನಿಷ್ಟ ಸಂಭವಿಸ್ತಾನೇ ಇದೆ…(ರೋದಿಸುತ್ತಾ) ಆ ರಾಣಿ ಮನೆಗ್ಬಂದ ಮೂರ್ತಿಂಗಗ್ಳಲ್ಲೇ ನನ್ಗಂಡನ್ನನ್ನುಂಕೊಂಡ್ಳು… ನನ್ನೋ… ತಲೆಸಾರ್ಸಿ… ಗುಡ್ಸಿ…. ರಂಗೋಲಿಹಾಕಿ… ಕೆಂಮಣ್‌ಸೀರೆ ಉಡ್ಸಿಬಿಟ್ಳು… ಅವಳ್ಗಂಡನ್ನೋ ಪುಟ್ಗೋಳಿಕಿರೀಕಟ್ಗೆಗಳಾಡೋದು… ಪರಿಚಾರಿಕೆ ಮಾಡೋದು… ಈ ಯೋಗ್ಯತ್ಗೆ ತಂದ್ಬಿಟ್ಟಿದ್ದಾಳೆ… ಅತ್ತಿಗ್ಗ್ಯೋ… ನಾನ್ಹೇಳಿದ್ದೊಂದೂ
ಕಿವೀಗ್ಹಾಕ್ಕೊಳ್ಳೋದಿಲ್ಲ… ಪಾಪ! ಚಿಕ್ಹುಡಿಗಿ ಅಂದ್ಬಿಡ್ತಾಳೆ. ಈಗೀಬಣ್ಣದ್ ಬೀಸಣಿಗೇನಿಟ್ಕೊಂಡೇನ್ಮಾಡೋದಣ್ಣಾ!

ಹಿರಿ : ಹೌದ್ನಾಗು… ಆ ಕೆಲ್ಸಕ್ಬಾರ್ದ ಧಡ್ಡನ್ಗೆ ಅನ್ನಾಹಾಕೋದಲ್ದೆ ಅವನ್ಹೆಂಡ್ತೀಗೂ ಯಾಕ್ಹಾಕ್ಬೇಕು! ಇವಳ್ಮನೇಗ್ಬಂದ್ಪ್ರಯೋಜ್ನ ಮಾಧೂ ವರದಕ್ಷ್ಣೆ. ಮಾಧೂ ವರದಕ್ಷ್ಣೆ ಪ್ರಯೋಜ್ನ ಪುಟ್ಟೂ ಕಾಲೇಜು ಫೀಜು. ಇಲ್ಬೀಸೋ ಬೀಸಣಿಗೆ ಅವರ ತೌರ್ಮನೇಲೇ ಬೀಸ್ಕೊಳ್ಳಿ. ಇವಳ್ನೂ ಪಾತೂ ಜೊತೇಲಿ ಕರ್ಕೊಂಡ್ಹೋಗಿ ಬಿಟ್ಬಿಟ್ಬಂದ್ಬಿಡು.

ನಾಗು : ಆಗ್ಲಣ್ಣ… ಈ ರೈಲ್ನಲ್ಲೇ ಹೊರಡ್ತೇನೆ.

[ಹೊರಡುವಳು]

ಹಿರಿ : (ಹಾಸಿಗೆಯ ಮೇಲಿರುವ ಹೆಂಡತಿಯನ್ನು ನೋಡಿ ಜುಗುಪ್ಸೆಯಿಂದ) ಲೇ! ಈಗ್ಹ್ಯಾಗಿದೆ?

ಭಾಗೀ : (ದುರ್ಬಲ ಸ್ವರದಿಂದ) ಸ್ವಲ್ಪ ವಾಸೀಂತ್ಕಾಣತ್ತೆ.

ಹಿರಿ : ಸ್ವಲ್ಪವಾಸಿ, ಸ್ವಲ್ಪವಾಸೀಂತ ಎಂಟ್ಹತ್ತುದಿನ್ದಿಂದ ಕಾಲ್ಚಾಚ್ಕೊಂಡು ಬಿದ್ದಿದ್ದೀಯಲ್ಲೇ!… ಈಗ್ನಿನ್ನ ಸೊಸೇರೂ ಹೊರಟ್ಹೋದ್ರು… ಕೆಲ್ಸಮಾಡೋರಾರು? ಈಗ ನಿನ್ನೀ ಹಾಳ್ ಕೂಸ್ನೋಡ್ಕೋಳ್ಳೋರ್ಯಾರು?… ಏನೇ?… ಕುಟುಂಬಾನೇ ಫಜೀತೀಗ್ತಂದಿಬಿಟ್ಯಲ್ಲೇ!… ಎಲ್ಲಕ್ಕೂ ನಾಗು!… ಬೆಳಿಗ್ಗೇ ಎದ್ದೂ, ನಾಗೂ ಬರೋವರ್ಗಾದ್ರೂ… ತಕ್ಮಟ್ಗೇ … ಕೆಲ್ಸಾ ಮಾಡ್ತಿರು… ಮೈಗೂ ಒಳ್ಳೇದು… ಊಂ?… ಊಂ… ನಾನು ಹಿಂದಿನ್ ಕೋಣೇಲಿ ಮಲಕ್ಕೊಳ್ತೇನೆ… ಅಷ್ಟ್ಹೊತ್ಗೇ ಎಬ್ಬಿಸಿಬಿಡು… (ಬಟ್ಟೆಬರೆಗಳನ್ನು ಬಿಚ್ಚಿಡುತ್ತಾ) ಏನು ಛಳಿಯೋ ಹಾಳು! ಲೇ! ಆ ಕೋಣೇಲ್ಬೆಚ್ಚಗಿದೆಯೇನೆ?

ಭಾಗೀ: ಹುಂ

ಹಿರಿ : ಹಾಗಾದ್ರೇ ಆ ಬೂರ್ನೀಸಿಲ್ಹಾಕು. (ಭಾಗೀರಥಮ್ಮನು ತಾನು ಹೊದ್ದಿದ್ದ ಬುರ್ನೀಸನು ಕೊಡುವಳು, ಹಿರಿಯಣ್ಣಯ್ಯನು ಅದನ್ನು ಹೊದ್ದುಕೊಂಡು ಆಕಳಿಸಿ. ಬಾಯಿಗೆ ಚಿಟಕೆ ಹಾಕುತ್ತಾ… “ರಾಘವಾ!” ಎನ್ನುತ್ತಾ ಒಳಕ್ಕೆ ಹೋಗುವನು)

[ಒಳಬಾಗಿಲಿನಿಂದ ನಾಗೂ, ಸಾತೂ. ಪಾತೂ ಬಂದು ಬೀದಿ ಬಾಗಿಲಬಳಿ ನಿಲ್ಲುವರು. ನಾಗು ಕಂಕುಳಲ್ಲಿ ಕೃಷ್ಣಾಜಿನದ ಮಡಿ ಪೆಟ್ಟಿಗೆಯನ್ನೂ ಕೈಯಲ್ಲೊಂದು ಚಿಕ್ಕಬುಟ್ಟಿಯ ಗಂಟನ್ನೂ ಹಿಡಿದಿರುವಳು. ಸಾತುವಿನ ಕೈಯಲ್ಲೂ ಒಂದು ಚಿಕ್ಕ ಗಂಟಿರುವುದು. ಪಾತುವು ಬರಿಗೈಯಲ್ಲಿರುವಳು. ಸಾತು ಪಾತುವಿಬ್ಬರೂ ಭಾಗೀರಥಮ್ಮನ ಬಳಿಗೆ ಹೋಗಿ ಆಕೆಗೆ ನಮಸಾಮ್ಕಾರಮಾಡಿ…]

ಪಾತು, ಸಾತು: ಅಮ್ಮಾ ನಾವು ಹೋಗ್ಬಿಟ್ಬರ್ತೇವೆ.
ಭಾಗೀ : ಅಯ್ಯೋ ಹಣೇಗೆ ಕುಂಕುಮಾ ಇಟ್ಕಳ್ಸೋದಕ್ಕೆ ಕೂಡಾ ಯಾರೂ ಇಲ್ವಲ್ಲ…

(ನಾಗಮ್ಮ ಕೋಪದಿಂದ ಚಮಕಿತಳಾಗುವಳು. ಭಾಗೀರಥಮ್ಮನು ಪ್ರಯತ್ನಪೂರ್ವಕವಾಗಿ ಎದ್ದು ಕುಳಿತುಕೊಂಡು) ಸಾತೂ! ಭರಣೀತಕ್ಕೊಬಾ ಮಗೂ. (ಸಾತುವು ಕುಂಕುಮದ ಭರಣಿಯನ್ನು ತರಲು ಒಳಕ್ಕೆ ಹೋಗುವಳು.) ಪಾತೂ ! ನಿಮ್ಮಮ್ಮನ್ನ ಕೇಳ್ದೇಂತ ಹೇಳು… ನನ್ನ ಮೈತಕ್ಮಟ್ಟಿಗಿದೇ ಅನ್ನು. ನಾನು ಬಹಳ ಕಾಯ್ಲೇಂತ ಹೇಳಿ ಹೆದರಿಸ್ಬೇಡ. (ಸಾತುವು ಕುಂಕುಮದ ಭರಣಿಯನ್ನು ತರುವಳು.) ಇಬ್ಬರೂ ಈ ಮನೆ ಗೋಳಾಟ ಸ್ವಲ್ಪ ಕಡ್ಮೆಯಾಗೋವರೆಗೂ ಎಂಟ್ಹತ್ತು ದಿನ ಅಲ್ಲೇ ಇದ್ದು ನಿಧಾನನಾಗಿ
ತಿರುಗ್ಬಂದು ಸೇರ್ರಿ. (ಭಾಗೀರಥಮ್ಮನು ಸೊಸೆಯರಿಗೆ ಕುಂಕುಮ ಹಚ್ಚಲು, ಸೊಸೆಯರಿಬ್ಬರೂ ಆಕೆಗೆ ನಮಸ್ಕಾರ ಮಾಡುವರು.) ತಾಳೀಕಟ್ಕೊಂಡು ಸುಖವಾಗಿರ್ರಿ.

ನಾಗು : (ತನ್ನಲ್ಲಿ ತಾನು) ತಾಳೀಕಟ್ಕೊಂಡು ಸುಖವಾಗಿರ್ರಿ. ಅದೇನು ಸುಖವೋ ನಾನ್ಬೇರೇ ಕಾಣೆ.

ಭಾಗೀ : (ನಾಗಮ್ಮನನ್ನು ಉದ್ದೇಶಿಸಿ) ಹೋಗ್ಬರ್ತೀರಾ?

ನಾಗು : ಬರ್ತ್ತೇನೆ ಬರ್ತೇನೆ…(ಆತ್ಮ) ಅದಕ್ಕೇನೂ ಭಯವಿಲ್ಲ. ತಿರುಗ್ಬಂದೇ ಬರ್ತ್ತೇನೆ… (ಪಾತುವನ್ನು ನೋಡಿ) ನಿನ್ಗಂಟೆಲ್ಲೇ?

ಪಾತು : ನನ್ನ ಟ್ರಂಕೂ, ಹಾಸಿಗೆ ಒಳಗಿದೆ.

ನಾಗು : (ಪಾತುವಿನ ಸ್ವರವನ್ನು ಅನುಕರಿಸಿ) ಟ್ರಂಕೂ ಹಾಸ್ಗೇ… ಈ ದೊರೆಸಾನಿ ದಿಗ್ವಿಜಯಕ್ಹೊರಟ್ರೆ ಕೈಯಲ್ಲಿ ಗಂಟಿದ್ರೆ ಅವಮಾನವೇನೋ ! ಈಗ ನಿನ್ನ ಟ್ರಂಕೂ ಹಾಸ್ಗೆ ಹೊತ್ಕೊಂಡ್ಹೋಗೋರ್ಯಾರು? ನಾನೂಂತ ತಿಳ್ಕೊಂಡಿದ್ದೀಯೇನೇ?

ಪಾತು : ಕೂಲಿಗ್ಹೇಳಿಕಳ್ಸಿದೆ.

ನಾಗು : ಓಹೋ! ಕೂಲೀಬೇರೆ ನಿನ್ಯೋಗ್ಯತ್ಗೆ! ಕೂಲೀಗೆ ದುಡ್ಕೊಡೋರ್ಯಾರು?

ಪಾತು : ದುಡ್ಡು ನನ್ಹತ್ರಿದೆ.

ನಾಗು : ರಾಜಲಕ್ಷ್ಮಿ ನೀನು!… ನಿನ್ನತ್ರ ಎಲ್ಲಾ ಇದೆ ಗೊತ್ತು. ಮಾನಮರ್ಯಾದೇಮಟ್ಗಿಲ್ಲಾ. [ಕೂಲಿಯೊಬ್ಬನು ಒಳಕ್ಕೆ ಬಂದು ಪಾತುವಿನ ಟ್ರಂಕನ್ನೂ, ಹಾಸಿಗೆಯನ್ನೂ ಹೊತ್ತುಕೊಂಡು ಹೊರಡುವನು]… ರೈಲ್ಗೆ ಹೋಗೋದಕ್ಕೆ ಜೋಡ್ಕುದ್ರೆ ಸಾರೋಟೇನಾದ್ರೂ ತರ್ಸಿದ್ದೀಯೋ?… ನಡಿ. [ಮೊದಲು ಕೂಲಿಯಾಳೂ, ಅನಂತರ ಸಾತೂ, ಹಿಂದೆ ನಾಗಮ್ಮನೂ ಹೋಗುತ್ತಾ…] ನಡಿ… ನಿನ್ಗಿಟ್ಟಿಧೇನೆ! ತೌರ್ಮನೆಯಿಂದ್ತಿರುಗ್ಬಾ ತೋರಿಸ್ತೇನೆ.

[ಭಾಗೀರಥಮ್ಮ ಆಕಳಿಸುತ್ತಾ ನಿದ್ದೆ ಹೋಗುವಳು. ಪ್ರವೇಶ. ಮಾಧು-ತಾಯಿಯ ಹತ್ತಿರ ಹೋಗಿ ನಿದ್ರಿಸುವುದನ್ನು ಗಮನಿಸಿ ಔಷದ ಶೀಸೆಯನ್ನೂ ಗಾಜಿನ ಬಟ್ಟಲನ್ನೂ ತನ್ನ ಮೇಜಿನ ಬಳಿ ತಂದಿಟ್ಟು, ಹಜಾರದ ದೀಪವನ್ನೂ ಪುಟ್ಟುವಿನ ಮೇಜಿನ ದೀಪವನ್ನೂ ತಗ್ಗಿಸಿ, ಷರ್ಟನ್ನು ತೆಗೆಯುತ್ತಾ ಹರಕಲು ಚಾಪೆಯನ್ನು ಹಾಸಿ… ಧಾವಳಿಯನ್ನು ಕಾಣದೆ…]

ಮಾಧು : ನನ್ಧಾವ್ಳಿ… ಹೋ… ಮರ್ತೆ… Fail ಲಾದದ್ದಕ್ಸಜಾ!… (ಷರ್ಟನ್ನು ತೆಗೆಯುತ್ತಾ ಹರಕಲು ಚಾಪೆಯಮೇಲೆ ಮಲುಗುವಾಗ ದಿಂಬಿಲ್ಲದ್ದರಿಂದ ತಲೆಯು ನೆಲಕ್ಕೆ ಬಡಿಯುತ್ತಲೆ… ಮುಗುಳ್ನಗೆಯೊಡನೆ… ಸಜಾಜ್ಜೊತೇಲಿ ಕಠಿಣ ಸಜಾನೂನೆ?… ಸುಳ್ಹೇಳ್ಬೋದು… ಕದೀಬಹುದು… ಆದ್ರೆ ಪ್ಯಾಸಾಗದ್ಪಾಪಮಟ್ಟಿಟ್ಕೋಬಾರ್ದು! [ಗಾಳಿ ಇಲ್ಲದ ಫುಟ್ ಬಾಲೊಂದನ್ನು ದಿಂಬಾಗಿಟ್ಟುಕೊಂಡು ಮಲಗುವನು… ಪುಟ್ಟುವು ಪ್ರವೇಶಿಸಿ ತನ್ನ ದೀಪವನ್ನು ಹೆಚ್ಚಿಸಿ ತನ್ನ ಹಾಸಿಗೆಯನ್ನು ಹಾಸಿಕೊಂಡು, ಪುಸ್ತಕವೊಂದನ್ನು ತೆಗದು ಗಟ್ಟಿಯಾಗಿ ಓದಲಾರಂಭಿಸುತ್ತಲೇ…)

ಮಾಧು : ಪುಟ್ಟೂ… ಮನಸ್ನಲ್ಲೇ ಓದ್ಕೋ… ಕೂಸು ಅಮ್ಮ ಎಚ್ಚರಗೊಂಡಾರು!

ಪುಟ್ಟು : (ತಾತ್ಸಾರದಿಂದ) ಮಾಧೂ!… ನನ್ವಿದ್ಯೆ ಹೆಚ್ಚೋ? ಕೂಸಿನ ನಿದ್ದೆ ಹೆಚ್ಚೋ?

ಮಾಧು: (ಕೆಣಕಿದ ಸರ್ಪದಂತೆ… ರೋಷದಿಂದ ತಲೆಯನ್ನೆತ್ತಿ) ನಿನ್ವಿದ್ಯೆನೇ!… ನಿದ್ದೆಮಾಡೋ ಕೂಸನ್ನೂ. ಜ್ವರದಿಂದ ನರಳೋ ತಾಯನ್ನೂ ಹಿಂಸಿಸೋ ನಿನ್ವಿದ್ಯೆಗೆ ಬೆಂಕೀಹಾಕು! ನೀನು ಪ್ಯಾಸ್ಮಾಡಿ ಕಡಿದಿಲ್ಯಾರ್ಗೇನಾಗಬೇಕು?

ಪುಟ್ಟು : ಏನಾಗ್ಬೇಕೆ? ನಾನ್ಪ್ಯಾಸ್ಮಾಡಿ High positionಗೆ ಬಂದ್ರೆ ನಮ್ಮ Familyಗೆ ಬರೋ Credit ಸಾಲದೇ?

ಮಾಧು : High… positionಗೆ ಬಂದ್ರೆ! ನಮ್ನಾಗತ್ತೆಗೆ ಮೀಸೆ ಬಂದ್ರೆ!… ಚಿಕ್ಕಪ್ಪಾಂತ ಕೂಗ್ಬಹುದು!… ಅಲ್ಲಾ ಪುಟ್ಟೂ? ನನಗಿಂತ ಫಟ್ಟಿಗಾ… ದೊಡ್ಡೋನು ನೀನು… ಅಪ್ಸತ್ರೂ ಸಾಯ್ಲಿ ತಿಥಿಗೆ ವಡೆ ಸಿಕ್ಕೀತು ಅನ್ನೋಹಾಗೆ ತಂದೆ ತಾಯಿಗಳಿಗೆ ಯಾವವಿಧದಲ್ಲೂ ಸಹಾಯ್ವಾಗಿಲ್ದೆ ನಿನ್ಕೆಲ್ಸಾ ಮಟ್ಟಿಗೆ ನೀನ್ನೋಡ್ಕೋಳ್ತಿಯಲ್ಲಾ!… ಇದೇನೆ ನಿನ್ವಿದ್ಯಾ?… ನಿನಗ್ಕಲ್ಸಿರೋದು!… ಮೊನ್ನೆ ಅಮ್ಮ ಹೇಳಿದ್ದು ಜ್ಞಾಪ್ಕವಿಲ್ವೆ? ಈ ಭೂಮಿಯಲ್ಲಿ ವಾಸಿಸೋಕೆ ನಾವು ದೇವರಿಗೆ ಕೊಡಬೇಕಾದ್ಬಾಡ್ಗೆ ಏನೆಂದರೆ ನಮ್ಮ ಸುತ್ತಮುತ್ತಲೂ ಇರುವ ಜನರಿಗೆ ಉಪಯೋಗ…

ಪುಟ್ಟು : (ಅತ್ಯಂತ ಕೋಪದಿಂದ ತಲೆಯ ಬಳಿ ಇದ್ದ ದೀಪವನ್ನು ಥಟ್ಟನೆ ಆರಿಸಿ) ಸಾಕ್ಸಾಕು ನಿನ್ನ Curtain lecture ನನಗೆ ನಿದ್ದೆಬರುತ್ತೆ. (ಹೊದ್ದುಕೊಂಡು ಮಲಗುವನು.) ಮಾಧುವು ಮೆಲ್ಲನೆ ನಗುವನು. ಈ ಸದ್ದಿನಿಂದ ಭಾಗೀರಥಮ್ಮನು ಎದ್ದು…)

ಭಾಗೀ : ಮಾಧೂ!… ಇನ್ನೂ ಎದ್ದಿದ್ದೀಯಾ ಮಗೂ?… ಯಾಕ್ನಿದ್ದೆ ಬರ್ಲಿಲ್ವೇ?

ಮಾಧು : ಡಾಕ್ಟ್ರು ಹತ್ಹಂನೊಂದ್ಗಂಟೆ ಹೊತ್ಗೆ ಒಂದ್ಡೋಸ್ ಔಷ್ದ ನಿನಗೆ ಕೊಡಬೇಕೂಂತ ಹೇಳಿದ್ದಾರೆ… ಅಗೋ ಕಛೇರೀಲೀಗ್ತಾನೆ ಹತ್ಹೊಡೀತಾ ಇದೆ. [ಎದ್ದು ಸೀಸೆಯಲ್ಲಿ
ಔಷಧವನ್ನು ಗಾಜಿನ ಪಾತ್ರೆಗೆ ಬಗ್ಗಿಸಿ ತಾಯಿಗೆ ಕೊಟ್ಟು…] ಇದ್ಕುಡಿದ್ಬಿಟ್ಟು ಮಲಕ್ಕೋಮ್ಮಾ.

ಭಾಗೀ : [ಮಾಧು ಹೇಳಿದಂತೆ ಔಷಧವನ್ನು ಕುಡಿದು; ಅನಂತರ ಮಾಧುವಿನ ಕೈಯನ್ನು ಹಿಡಿದುಕೊಂಡು…] ಮಗೂ! ನಿನಗೇನಾದ್ರೂ ಪ್ಯಾಸ್ಗೀಸಾಯ್ತೇ?

ಮಾಧು: (ತಾಯಿಯ ಮುಖವನ್ನು ಸವರುತ್ತಾ) ಇಲ್ಲಮ್ಮಾ ಆದರೇನು? ಆಗ್ದಿದ್ರೇನು? ಪುಟ್ಟು ನನಗೂ ಸೇರಿಸಿ ಪ್ಯಾಸ್ಮಾಡ್ಬಿಟ್ಟಿದ್ದಾನೆ… ನಿನ್ಮೈ ಚನ್ನಾಗಿದ್ರೆ ನನಗೆ ಸಾಕಮ್ಮ… ನೀನ್ಯೋಚನೆ ಮಾಡಬೇಡಮ್ಮ… ಫೇಲಾದ್ರೆ ಮನೇಲಿಷ್ಟು ಗಲಭೆ ಗೋಳಾಟ ಆಗುತ್ತೆ ಅಂತ ಮೊದ್ಲೇ ನನಗ್ಗೊತ್ತಿದ್ದಿದ್ರೆ ಸ್ವಲ್ಪ ಚನ್ನಾಗೋದಿ ಪ್ಯಾಸ್ಮಾಡ್ತಿದ್ದೆ. ಭಯಪಡಬೇಡಮ್ಮಾ. ಈ ವರ್ಷ ಹೇಗಾದ್ರೂ ಮಾಡಿ…. ನಿನ್ಸಂತೋಷಕ್ಕಾದ್ರೂ ಪ್ಯಾಸ್ಮಾಡ್ಬಿಡ್ತೇನಮ್ಮ.

ಭಾಗೀ : (ಮಾಧುವಿನ ತಲೆಯನ್ನು ಸವರುತ್ತಾ) ಏನೋಪ್ಪ… ಪ್ಯಾಸೋಗೀಸೋ… ಆಯುಷ್ಪೂರ್ತಿಯಾಗಿ ನೀವೆಲ್ಲಾ ಸುಖ್ವಾಗಿರೋದ್ನ ನನ್ಕಣ್ತುಂಬಾ ನೋಡ್ತಿದ್ರೆ ನನಗದೇ ಸಂತೋಷ. ಹೊಗ್ಮಲಕ್ಕೋ ಕಂದ.

[ಅನಂತರ ಮಾಧುವು ತನ್ನ ಹಾಸಿಗೆಗೆ ಬಂದು ಮಲಗುವನು.]

[ಪರದಯು ಮೆಲ್ಲಗೆ ಬೀಳುವುದು ಅನಂತರ ಏಳುವುದು]

ಪುಟ್ಟು : (ಹಾಸಿಗೇಲೆದ್ದು ಕುಳಿತು… ಘಟ್ಟಿಯಾಗಿ ಮೂಸಿನೋಡಿ) ಇದೇನಿದು… ವಾಸ್ನೇ!
(ಥಟಕ್ಕನೆ-ಅತಿ ಭೀತಿಯನ್ನು ತೋರಿಸುವ ಕಣ್ಣುಗಳನ್ನು ಹಿತ್ತಲಬಾಗಿಲಕಡೆ ತಿರುಗಿಸಿ… ಬೆಚ್ಚಿ ಬಿದ್ದೆದ್ದು) ಬೆಂಕಿ!… ಅಯ್ಯಯ್ಯೋ [ದಿಗ್ಭ್ರಾಂತನಾಗಿ ತನ್ನ ಪುಸ್ತಕಗಳನ್ನು ಬಾಚಿಕೊಂಡು ಬೀದಿ ಬಾಗಿಲಿಂದ ನಿಷ್ಕ್ರಮಣ.!)

ಮಾಧು: (ನಿದ್ರಾಭಂಗಿತನಾಗಿ ಎದ್ದು… ಕಣ್ಣುಗಳನ್ನು ಉಜ್ಜುತ್ತಾ…) ಬೆಂಕಿ? ಯಾರಂದದ್ದು?… ಸ್ವಪ್ನವೇ?… ಬೆಂಕಿ? (ಸುತ್ತಲೂ ಮೂಸುತ್ತಾ ಹಿತ್ತಲಬಾಗಿಲ ಹತ್ತಿರ ಬಂದು ನೋಡಿ) ಅಯ್ಯೋ ಹೌದೇ!!… ಬೆಂಕಿ ಬಿದ್ದಿದೆ. (ಆತುರದಿಂದೆದ್ದು) ಬೆಂಕಿ!… ಅಮ್ಮಾ!… ಕೂಸು!… (ಒಳಹೊಕ್ಕು) ಅಮ್ಮಾ-ಹೆದರ್ಬೇಡಾ… ಮನೆಗೆ ಬೆಂಕಿಬಿದ್ದಿದೆ… ಕೂಸಿನ್ತಕ್ಕೋ ! (ತಾಯಿಯನ್ನೂ, ಕೂಸನ್ನೂ ಕೋಣೆಯಿಂದ ಹೊರಕ್ಕೆ ಕರತಂದು) ಹೆದರ್ಬೇಡಮ್ಮಾ… ಮನೆ ಹಿಂದ್ಗಡೆ ಬೆಂಕಿ ಬಿದ್ದಿರೋದು… ಕೂಕ್ಕೋಬೇಡ… ಧೈರ್ಯವಾಗಿರು… ನಂಜೊತೇಲ್ಬಾ…

ಭಾಗೀ : ಅಯ್ಯೋ… ನಿಮ್ತಂದೆ ಎಲ್ಲಿ ಮಗೂ!…

ಮಾಧು : ಎಲ್ಮಲಗಿದ್ಧಾನಮ್ಮ?

ಭಾಗೀ: ಹಿಂದಿನ ಕೋಣೇಲಿ… ಈಗೇನ್ಗತಿ!…

ಮಾಧು: ಹೆದರ್ಬೇಡಮ್ಮಾ… ನೀನಿಲ್ಲಿಂದ ಕದಲ್ಬೇಡ. (ಒಳಕ್ಕೆ ಹೋಗಿ) ಅಪ್ಪಾ! ಏಳು ಏಳು! ಮನೇಗೆ ಬೆಂಕಿಬಿದ್ದಿದೆ!

ಹಿರಿ: (ಒಳಗಿನಿಂದ) ಅಯ್ಯೋ ದೇವ್ರೇ!…

ಮಾಧು: ಕಿರಿಚ್ಬೇಡಪ್ಪಾ… ನಂಜೊತೇಲಿ ಬಾ…

[ಮಾಧುವು ತಂದೆಯನ್ನು ನಡೆಸಿಕೊಂಡು ಹೊರತರುವನು… ಹೊಗೆಯು ಹಿತ್ತಲಬಾಗಿಲಿಂದ ಹೊರಪಡುವುದು.]

ಭಾಗೀ: (ಚೀತ್ಕಾರಮಾಡುವಳು.)

ಮಾಧು: ಹೆದರ್ಬೇಡಮ್ಮಾ… ಅಪ್ಪಬಂದ…

ಹಿರಿ: ಅಯ್ಯೋ! ಪುಟ್ಟು ಎಲ್ಲಿ? ಪುಟ್ಟೂ! (ಮಾಧುವನ್ನು ನೋಡಿ) ಅಯ್ಯೋ ಪಿಶಾಚಿ! ಪುಟ್ಟು ಒಳಗೆ ಸಿಕ್ಕೊಂಡಿರೋವಾಗ ಕಂಭದ ಹಾಗೆ ನಿಂತ್ಕೊಂಡಿದ್ದೀಯಲ್ಲೋ ಪಾಪಿ!

ಮಾಧು: (ಬೆಂಕಿಯು ಹೆಚ್ಚಾಗಿ ಹರಡಲು. ಕ್ಷಣಮಾತ್ರ ಹಿಂಜರಿದು ತಾಯಿಯನ್ನು ದುರುಗುಟ್ಟಿ ನೋಡಿ…) ಅಮ್ಮ… ಹೊರಗ್ಹೋಗು… ಕೂಸಿಗ್ಹೊಗೆ! (ಒಳಕ್ಕೆ ನುಗ್ಗುವನು)… (ಒಳಗಿನಿಂದ) ಪುಟ್ಟೂ ಪುಟ್ಟೂ! ಮನೇಲಿ ಬೆಂಕಿಕಾಣೋ!… ಎಲ್ಲಿದ್ದೀಯೊಃ!… ಅಯ್ಯೋ!…

ಹಿರಿ: (ಹೆಂಡತಿಯನ್ನು ಹೊರಕ್ಕೆ ನೂಕುತ್ತಾ) ಹೊಗೇನೆ! ಹೋಗೆ ಹೊರಗೆ…

(ಭಾಗೀರಥಮ್ಮ ಹೊರಡುವಳು.)

ಮಾಧು: (ಒಳಗಿಂದ) ಮೈಸುಡ್ತಿಧೆಯಲ್ಲ! (ಕಿಟಕಿಯಿಂದ) ಅಮ್ಮಾ! ಪುಟ್ಟು ಇಲ್ಲಿಲ್ಲಾ!… ಪುಟ್ಟು… (ಧ್ವನಿಯು ಕ್ರಮೇಣ ಕುಂದುತ್ತಾ ಬರುವುದು.)

ಭಾಗೀ : (ಪುನಃ ಆತುರದಿಂದ ಪ್ರವೇಶಿಸಿ) ಜಗ್ಲಿ ಮೇಲೆ ಕೂತಿಧಾನೇಂದ್ರೆ ಪುಟ್ಟು! ಮಧೂನ್ಕರೀರೀಂದ್ರೆ!

ಹಿರಿ : ಪುಟ್ಟು ಇಧಾನ್ಯೇ!? ಹೊರಗೆ?… ಪುಟ್ಟೂ! ಪುಟ್ಟೂ!
[ನಿಷ್ಕ್ರಮಣ – ಬೀದಿಬಾಗಿಲಲ್ಲಿ]

ಭಾಗೀ : ಮಾಧೂ! ತಿರಿಗಿಬಾ! ತಿರಿಗ್ಬಾ!… ಪುಟ್ಟು ಇಲ್ಲೇ ಇದಾನೆ. ಅಯ್ಯೋ ! ಇದೇನ್ಗದ್ದಲಾ?
(ಜನಗಳ ಗದ್ದಲವು ಕೇಳಿಬರುವುದು.)

(ಪ್ರವೇಶ-ರಾಮಾಶಾಸ್ತ್ರಿಯೂ, ನೆರೆಹೊರೆಯವರೂ)

ರಾಮಾ: ಮಿಕೋರೆಲ್ಲಾ… ಭದ್ರವೆ?

ಭಾಗೀ : ಹಯ್ಯೋ!… ಮಾಧೂ!…

ರಾಮಾ : ಹೆದರ್ಬೇಡಿಯಮ್ಮ… ಎತ್ಕೊಂಡ್ಬರ್ತಿಧಾರೆ!

[ಪ್ರವೇಶ-ಮೂರ್ಛಿತನಾದ ಮಾಧುವನ್ನು ಹೊತ್ತು ಕೊಂಡು ನಾಲ್ಕೈದು ಮಂದಿ… ಹಿರಿಯಣ್ಣಯ್ಯನೂ ಪುಟ್ಟುವೂ ಬೀದೀಬಾಗಿಲಿನಿಂದ ಪ್ರವೇಶಿಸುವರು.]

ಎಲ್ಲರೂ: ನಿಮ್ಹುಡಗನ ಧೈರ್ಯ ಎಷ್ಟೂಂತ ಹೇಳೋಣ ಸ್ವಾಮಿ!… ಅವನೊಬ್ಬನಿಲ್ದಿದ್ರೆ ನಿಮ್ಕುಟುಂಬಾನೇ ಪಡ್ಚ ಆಗ್ತಿತ್ತಲ್ಲಾ! [ಮಾಧುವನ್ನು ತಾಯಿಯ ತೊಡೆಯಮೇಲೆ ಮಲಗಿಸುವರು. ಭಾಗೀರಥಮ್ಮ ಸೆರಗಿನಿಂದ ಬೀಸುವಳು.]

ರಾಮಾ: ಸ್ವಾಮೀ… ಹಿರಿಯಣ್ಣಯ್ನೋರೇ… ಈಗ್ಲಾದ್ರೂ ನೋಡಿದ್ರಾ ವ್ಯತ್ಯಾಸ?… ಪ್ಯಾಸಾದ್ರೇನು!… ಆಗ್ದಿದ್ರೇನು!… ಟೊಳ್ಳು ಟೊಳ್ಳೇ!… ಗಟ್ಟಿ ಗಟ್ಟಿಯೇ!

[ಪರದೆಯು ಬೀಳುವುದು.]

ಉತ್ತರ ರಂಗ.

[ಪ್ರವೇಶ: ಗುಂಡೂರಾಯ]

ಗುಂಡೂ : ಸಭಿಕರಿಗೆ ವಿಜ್ಞಾಪ್ನೆ. ತಾಮ್ಗಳೆಲ್ಲಾ ಹೊಸ ನಮೂನೆಯಾಗಿ ಬರ್ದ ಈ ಪ್ರಥಮ ಪ್ರಯತ್ನಾನ… ನಿಮಗಿಷ್ಟವಾಗಿದ್ದಾಗ್ಯೂ… ಕದಲ್ದ್ಹಾಗೆ ಕೂಡ್ಸಿ ಕೇಳ್ಸಿದ್ದಕ್ಕೆ ಕ್ಷಮಾಪ್ಣೆ ಬೇಡಿಕೊಳ್ತೇನು. ಈ ನಾಟಕ್ದಲ್ಲಿ ಚಾತುರ್ಯ ಚಮತ್ಕಾರಗ್ಳು… ರಾಗೀಕಾಳಷ್ಟೂ ಇಲ್ಲಾಂತೊಪ್ಪಿಕೊಳ್ತೇನು. ಆದ್ರೂನೂವೆ, ಒಂದ್ವಿಷ್ಯಮಟ್ಗೆ ಜನಿವಾರ ಹಿಡ್ಕೊಂಡು ಸ್ಥಾಪಿಸ್ಲೇ ಸ್ಥಾಪಿಸ್ತೇನು… ಇದರಲ್ಲಿ ಬರೋ ಜನಗಳು, ಅವರ ಸುಖದುಃಖಗಳು, ಅವರಾಡೋ ಮಾತುಗಳು, ಇವನ್ನೆಲ್ಲ ಎಳ್ಳಷ್ಟೂ ಹೆಚ್ಚು ಕಡ್ಮೆ ಮಾಡ್ದೆ ತದ್ರೂಪಾಗಿ ಪ್ರದರ್ಶಿಸಿದೇನು. ಈ ನಾಟಕ್ದಲ್ಲಿ Exaggeration ಅಂತಂತಾರಲ್ಲ ಅದರ ವಾಸನೆಯೇ ಸುತರಾಂ ಇಲ್ಲ. ವಿವರಿಸ್ತೇನು ಲಾಲಿಸ್ಬೇಕು… ತಮ್ಮಳ್ಗೊಂದ್ವೇಳೆ ಹಿರಯಣ್ಣಯ್ಯ ಫೇಲಾದ್ಮಗನಿಗೆ ಕೊಡೋ ಕಷ್ಟಗಳನ್ನೆಲ್ಲಾ ನೋಡಿ… ಹೆತ್ತ ತಂದೆ ಹೀಗೆಲ್ಲಾ ಹೊಟ್ಟೇಲ್ಹುಟ್ಟಿದ್ಮಗನ್ನ ಹಿಂಸಿಸೋದು ಸಹಜ್ವಲ್ಲಾ ಅಂತ ಒಂದ್ವೇಳೆ ತೋಚ್ಬಹುದು… ಮಗ ಫೇಲಾದ್ದಕ್ಕೆ ಅವನಿಗ್ದಿಂಬು-ಧಾವಳಿ, ಸಾರೂ, ಅನ್ನಕ್ತುಪ್ಪ, ಮೊಸರು ಇವುಗಳ್ನೆಲ್ಲ ತಪ್ಸಿದ್ರೂನೂವೇ ನನಗೆ ತಿಳಿದ್ಬಹುಮಂದಿ ತಂದೆಗ್ಳು ಫೇಲಾದ್ಮಕ್ಕಳಿಗ್ಮಾಡೋ ಪೂಜೇನ ತಮ್ಮಗಳಿಗೆ ವಿವರಿಸ್ದೇ ಅಂದ್ರೆ… ಈ ಹಿರಿಯಣ್ಣಯ್ಯನ್ನ ಪಾಕ ಇಳಿಸಿದ ಪಶ್ಚಾತ್ತಾಪಿಯಂತ್ಲೇ ಕೂಗ್ಬಿಡ್ತೀರಿ; ಸಂದೇಹಪಡಬೇಡಿ. ದೃಷ್ಟಾಂತಕ್ಕೆ ಹೇಳ್ತೇನು… ಲಾಲಿಸ್ಬೇಕು… ಹೆಸರುಗ್ಳು ಹೇಳಿದ್ರೆ ಜಗ್ಳ-ತಂದೆ ಸ್ವಲ್ಪ ಬಲಿಷ್ಟ-ಕೂತ್ಕೊಂಡಿದ್ದೇ ನೋಡಿ ಆಸ್ಪತ್ರೇಲಿ…… ರಿಜಲ್ಟ್ಸು ಬಂದರ್ಧಘಂಟೇ ಕೂಡಾ ಇಲ್ಲ… ಹೊತ್ಕೊಂಬಂದ್ರು ಹುಡಗನ್ನ… ಕೆಳಗಿಳಿಸುತ್ಲೂನೂವೆ… ಆ ಡಾಕ್ಟ್ರು ಅಂಗಿಬಿಚ್ದ… ಬಾತ್ಕೊಂಡಿದ್ವು ನೋಡಿ… ಬಾಸುಂಡೆಗ್ಳು-ವಿನಾಯ್ಕಂಚೌತಿ…ಸಂಕ್ರಾಂತಿ…ಎರ್ಡೂ ವಕ್ರಿಸ್ಕೊಂಡಹಾಗೆ- ಕಡ್ಬು…ಕಬ್ಬು…ಕಬ್ಬು…ಕಡ್ಬು… ಮೈಲೆಲ್ಲಿನೋಡಿದ್ರೂವೆ. ಎರ್ಡುಸೀಸೆ ಕಾರ್ಬಾಲಿಕ್ಕೆಣ್ಣೆ…. ಅರ್ಧಪಿಂಡೆ ಹತ್ತಿ… ಆಸ್ಪತ್ರೆಗೆ ಖರ್ಚು!… ಈ ಷೋಡಶೋಪಚಾರಗೆಳ್ನೆಲ್ಲ… ಆ ಮಗೂಗ್ಯಾಕೇಂತ ಕೇಳ್ತೀರೋ ಅದೆಂಥಾದ್ದು?… ಆ ಲೆಖ್ಖ… ಮ್ಯಾಥಮ್ಯಾಟಿಕ್ಸ್ ಅಂತಂತಾರಲ್ಲ… ಅದರಲ್ಲಿ ಒಂದು ಮಾರ್ಕಿನಲ್ಲಿ ಹೋಯ್ತಂತೆ… ಹಯ್ಯೋ! ಫೇಲು ಅಂತ ತಿಳೀತೂನೂವೇ ಮನೇಲ್ಚಮ್ಡಾ ಎಗ್ರಿಸ್ತಾರಂಬೋ ಭಯದಿಂದ ಭಾವೀಲ್ಬಿದ್ದು ಸತ್ತಿದಾರಂದ್ರೆ…
ಎಷ್ಟೋ ಮಂದಿ ಹುಡುಗ್ರು!… ಹಿರಿಯಣ್ಣಯ್ಯ ಕರುಣಾನಿಧಿ!…

ಈ ನಾಟ್ಕ ಷುರುವಾಗೋಕ್ಮುಂಚೆ… ನಮ್ಕಂಡಕ್ಟ್ರು ಸುಬ್ಬಾಚಾರ್ರಹತ್ರ ಇದ್ನಾಟ್ಕವೇ ಅಲ್ಲ… ಇದು ಲೆಕ್ಚ್ರು‌ಅಂತ ನನ್ಗುಟ್ಟು ನಾನು ಹೇಳ್ತಿದ್ದಾಗ ತಾವುಗಳೆಲ್ಲಾ ಇಲ್ಲಿದ್ದದ್ದು ನಾನು ಗಮನಿಸ್ಲಿಲ್ಲ. ಗುಟ್ಟು ಹೊರ‍ಕ್ಕೆ ಬಿದ್ದಮೇಲೆ ಬಚ್ಚಿಟ್ಕೊಂಡೇನ್ಪ್ರಯೋಜ್ನ? ಇದು ಲೆಕ್ಚ್ರೂಂತ ಒಪ್ಕೊಂಬಿಡ್ತೇನು. ಆದ್ರೆ ಲೆಕ್ಚರಿಗೀವೇಷಹಾಕಿ ನಿಮ್ಮ ಕಿವಿಗಳಲ್ತುರಿಕ್ದುದ್ದೇಶವೇನೂ ಅಂತ್ಕೇಳ್ತೀರೋ?… ತಪ್ಸೀಲಾಗಿ ವಿವರಿಸ್ತೇನೂ… ಕ್ಷಮಿಸಿ ಲಾಲಿಸ್ಬೇಕು. ಈ ಲೆಕ್ಚ್ರು… ವಿದ್ಯಾಭ್ಯಾಸದ್ವಿಷಯದ್ದು; ವಿದ್ಯಾಭ್ಯಾಸಕ್ರಮಗ್ಳು, ಅವುಗಳ ಪ್ರಯೋಜ್ನಗಳು, ಮಹಿಮೆಗಳು, ಇವುಗಳಲ್ಲೆಲ್ಲಾ ನಂಗೆ ಬಹಳ ಪರಿಶ್ರಮವುಂಟು. ಅದ್ರಲ್ಲೂ ಈಗ ನಮ್ದೇಶ್ದಲ್ಲಿ ಇಂಗ್ಲೀಷು ವಿದ್ಯಾಭ್ಯಾಸಕ್ರಮಾಂತ್ಹೆಸರಿಟ್ಟ್ಕೊಂಡು ಜರಿಗಿಸ್ತಾ ಇದ್ದೇವಲ್ಲ… ಆ ಕ್ರಮಾನ ಹೋಳ್ಹೋಳಾಗಿ ಹೆಚ್ಚಿ ಉಪ್ಪಿನಕಾಯ್ಹಾಕಿಟ್ಬಿಟ್ಟಿದ್ದೇನೆ.-ಜಾಡೀ ಪಕ್ದಲ್ಲಿಟ್ಕೊಂಡೇ ಮಾತಾಡ್ತಿಧೇನು! ಈಗಿನ್ಕಾಲ್ದಲ್ಲಿ ನಮ್ಮನೆಗ್ಳಲ್ಲಿ ಗಂಡ್ಮಗೂ ಹುಟ್ಟುತ್ಲೂನೂವೇ ಪಂಚಾಕ್ಷರೀಜಪ ಒಂದು ಪ್ರಾರಂಭಿಸಿಬಿಡ್ತೇವು… ಮುಂ…ದ…ಕ್ಟ…ರ್ಬೇ…ಕು… ಮುಂದಕ್ಬರ್ಬೇಕು ಅಂತ… ಮುಂದಕ್ಬರ್ಬೇಕೂ ಅಂದ್ರೇನೋ ದೇವರ್ಗೇ ಬೆಳ್ಳಂಬೆಳಕು. ಆ ಮಗನ್ನೋ ಎಂಟು ವಯಸ್ಸಾಗೋವರಿಗೂನೂ ಈ ಜಪದಲ್ಲಿ ಅದ್ದೀ ಅದ್ದೀ ನೆನಸಿ, ಓದಿ ಪ್ಯಾಸ್ಮಾಡೋಕೆ ಸ್ಕೂಲಿಗೆ ಸಾಗಿಸಿಬಿಡ್ತೇವು… ಸ್ಕೂಲ್ನಲ್ಲಿ ನಮ್ಹುಡುಗರು ಓದೋದೆನು?… ಪ್ಯಾಸ್ಮಾಡೋದಂದ್ರೇನು?… ಇವುಗಳ್ನೆಲ್ಲಾ ತಪ್ಸೀಲಾಗಿ ವಿವರಿಸ್ತೇನು
ಲಾಲಿಸ್ಬೇಕು… ಸ್ಕೂಲಿನಲ್ಲಿ ಮೇಷ್ಟ್ರುಗಳು- (ಆತ್ಮಗತಂ) ಸರ್ವಜ್ಞರು! ಲೇವಡೀಗೇ ಲಾಯಕ್ಖು!- (ಪ್ರಕಾಶಂ) ಚೀನಾ ದೇಶದ ಚರಿತ್ರೆ! ಜಾರ್ಜಿಯಾದ ಜನಸಂಖ್ಯೆ! ಸೈಬೀರಿಯಾದ ಸಸ್ಯಾದಿಗಳು! ಅಬ್ಸೀನಿಯಾದ ಆಭರಣಗಳು!… ಇವೇ ಮುಂತಾದ, ನಮ್ಜನಗಳಿಗೆ ಖುದ್ದು ಉಪಯೋಗವಾಗುವ ವಿಷಯಗಳ್ನ ವರ್ಷದ ಹನ್ನೆರಡ್ತಿಂಗಳಲ್ಲಿ ಹನ್ನೊಂದುತಿಂಗ್ಳು ಜಜ್ಜೀ, ಜಜ್ಜೀ, ತುರುಕಿ… ಈ ಅಮೋಘವಾದ ವಿಚಾರಗಳು ಮಕ್ಕಳ ಮನಸ್ಸಿಗೆ ನಾಟಿಧೆಯೋ ಇಲ್ವೋ ಎಂಬ ಶಂಕೆಹುಟ್ಟಿ ಅದು
ಪರಿಹಾರ್ವಾಗೋದಕ್ಕೆ ಪರೀಕ್ಷೆ ಅಂತಿಡ್ತಾರೆ ಹನ್ನೆರಡ್ನೇ ತಿಂಗ್ಳಲ್ಲಿ! …ಡಿಸೆಂಬ್ರು …ಇಪ್ಪತ್ತಕ್ಕೋ… ಇಪ್ಪತ್ತೊಂದಕ್ಕೊ ಬೀಳುತ್ತೆ ಪರೀಕ್ಷೆ!… ಪರೀಕ್ಷೆದಿನ ಮನೇಲಿ ಗಲಭೆಯೋ ಗಲಭೆ!… ನೆರೆ ಹೊರೆಯೋರೆಲ್ಲ ಮನೇಲಿ ಉದ್ಯಾಪ್ನೆ ಅಂತ ತಿಳ್ಕೊಳ್ಳೋದು!… ಆವತ್ಪಾರಣೆ ಇರ್ಲಿ ಇಲ್ದಿರಲಿ…
ಎಂಟೂವರೆ ಘಂಟೆಗಾಗ್ಲೇ ಊಟ… ಹುಡ್ಗನಿಗೆ!… ಪುಷ್ಕಳ್ವಾಗ್ತಿಂದ್ಬಿಟ್ಟು… ನಮ್ಹುಡ್ಗ… ದೇವರಿಗೆ ನಮಸ್ಕಾರಮಾಡ್ಬಿಟ್ಟು… ಅಮ್ಮನ ಬಾಯಿಂದ ಹರ್ಸಿಕೊಂಡು… ಅಜ್ಜಿಕೈಯಿಂದ ಹಣೆಗೆ ವೀಭೂತೀ ಇಡ್ಸಿಕೊಂಡು, ಹೊರ್ಡ್ತಾನೆ ನೋಡಿ… ಹುಡ್ಗ… ದಿಗ್ವಿಜಯಕ್ಕೆ!… ಜೋಂತ್ಮಳೆಬೇರೆ! ನೆನ್ಕೊಂಡ್ಬರ್ತಾನ್ಹಾಲ್ಗೆ… ಅಲ್ಲಿ ಅವನಿಗೆ ಸ್ವಾಗತ ಕೊಟ್ಟು…. ಖೈದಿಗಳಿಕ್ಕೊಡೋ ಹಾಗೆ ಒಂದ್ನಂಬರ್ಕೊಟ್ಟು ಮೇಜಿನ್ಮುಂದೆ ಕೂಡಿಸಿ… ಅರ್ಕಂಚಟ್ಟಿ… ತಾಂಬಾಳ… ಇವುಗಳಿಗೆ ಬದಲಾಗಿ ಬರೀ ಕಾಗದಗ್ಳು ಮೇಜಿನ್ಮೇಲೆ ಹರಡಿಟ್ಟು… ಪ್ರಶ್ನೆ ಕಾಗ್ದಾಂತ… ಕೊಡ್ತಾರಿವನ್ಕೈಲಿ!… ಅದನ್ನ… ನಮ್ಹುಡ್ಗ-ಭಕ್ತಶಿರೋಮಣಿ!- ಎದ್ನಿಂತ್ಕೊಂಡು… ಕಣ್ಗೊತ್ಕೊಂಡು… ಶ್ರೀಮನ್ನಾರಾಯಣನ್ಮೇಲೆ ಭಾರಾಹಾಕ್ಬಿಟ್ಟು…ಆ ಪೇನಾನ… ಆ ಮಸೀಲಿ ಅದ್ಕೊಂಡು ಆ ಪರೀಕ್ಷಕನ್ಕಣ್ಣಿಗ್ಕಾಣದ್ಹಾಗೆ… ಸೂಜೀ ಚುಚ್ಚೋಜಾಗ್ದಲ್ಲಿ ಶ್ರೀ ಅಂತ ಬರೆದ್ಬಿಟ್ಟು ಪ್ರಾರಂಭಿಸ್ತಾನ್ನೋಡಿ ಆ ಬರೀ ಕಾಗದಗಳ್ಮೇಲೆ… ವಾಂತೀ ಮಾಡೋದಕ್ಕೆ!… ಆ ಹಿಂದಿನ್ಹನ್ನೊಂದು ತಿಂಗಳೂ… ಜಜ್ಜಿಜಜ್ಜೀ ಕುತ್ಗೇವರೆಗೂ
ತುರಕ್ಕೊಂಡ ಸಮಾಚಾರಗಳ್ನೆಲ್ಲಾ… ಆ ಮೂರು ಘಂಟೆಗಳೊಳಗೆ ಈ ಬರೀ ಕಾಗದಗಳ್ಮೇಲೆ ಬಕಬಕ ಬಕಾಂತ ಬಕಾಸುರನ್ಹಾಗ್ವಾಂತಿ ಮಾಡ್ಬಿಡ್ತಾನೆ! ಎಷ್ಟಕ್ಕಷ್ಟು ವಾಂತಿಮಾಡ್ತಾನೋ ಅಷ್ಟಕ್ಕಷ್ಟು ಗಟ್ಟಿಗಾಂತ್ಹೆಸ್ರು! ಇದೇ ಫಸ್ಟ್‌ಕ್ಲಾಸ್ ಅನ್ನೋದು!… ಈ ಬಕಾಸುರನ ಪ್ಯಾಸೊಂದ್ವೇಳೆ ಮಾಡ್ಬಿಟ್ನೋ… ಇವನ್ತಲೇತಿರ್ಗಿ ಬ್ರಹ್ಮನಿಗಪ್ನಾನೇ… ಸರಸ್ವತೀ ನನ್ಸೊಸೇಂತ ತಿಳ್ಕೊಂಬಿಡ್ತಾನೆ! ಈ ತಲ್ತಿರುಗೋ ರೋಗ… ಈ ಪ್ಲೇಗ್…. ಇನ್ಫ಼್ಲು‍ಯೆಂಜ ಅಂತಂತಾರಲ್ಲ… ಹಾಗೆ ಅಂಟುರೋಗ. ಇವನು ಮನೆಗ್ಬರುತ್ಲೂವೆ ಇವರಪ್ಪನಿಗೂ ಅಮ್ಮನಿಗೂ ಅಂಟ್ಕೊಂಡು… ಅವರ ತಲೇನೂ ತಿರಿಗಿಸ್ಬಿಡುತ್ತೆ. ಈ ಇಲಾಖೆಗೆ ಸೇರಿದೋನೇ ಈ ನಾಟಕದಲ್ಲಿರೋ ಪುಟ್ಟು! ಇದೇ ಈ ಕಾಲ್ದಲ್ಲಿ ನಾವನುಸರಿಸ್ತಿರೋ ವಿದ್ಯಾಭ್ಯಾಸದ ಗುಟ್ಟು! ಹೇಳ್ತೇನೆ. ನಮ್ಹುಡುಗರ ಸ್ವಭಾವಾ ಅಂಬೋ… ಭಾವೀಲಿ, ಮನೇಲಿ ಜನ್ಮಾರಭ್ಯ ಜನಿಸಿದ ಪಂಚಾಕ್ಷರಿ ಫಲದಿಂದ ಗುಣಗಳು ಅಂಬೋ ಬಿಂದಿಗೆ ತಂಬಿಗೆಗಳಿದದ್ದಲ್ದೇ… ಇವರನುಸರಿಸೋ ಇಂಗ್ಲೀಷು ವಿದ್ಯಾಭ್ಯಾಸಕ್ರಮಾ ಅಂಬೋ ಪಾತಾಳಗರಡೀಗೆ ಕೊಂಡಿಗಳೇ ಇಲ್ಲ. ಇಂಥಾ ವಿದ್ಯಾಭ್ಯಾಸ ಕ್ರಮದ ಆನುಸರಣೆಯಿಂದ ನಮ್ಮ ದೇಶಕ್ಕಾಗೋ ಫಲ ಏನೂಂತ್ಕೇಳಿದ್ರೆ… ನಮ್ಮಪಾಠಶಾಲೆಗಳೆಲ್ಲ ಪುಟ್ಟೂಗಳ್ನ ತಯಾರ್ಮಾಡೋ ಕಾರ್ಖಾನೆಗಳಾಗಿ ಹೋಗಿವೆ. ಈ ನಾಟಕದಲ್ಲಿ ಹಿರಿಯಣ್ಣಯ್ಯನಿಂದ ಬೋಧಿಸಲ್ಪಟ್ಟ ಪುಟ್ಟೂವಿಗೂ, ಭಾಗೀರಥಮ್ಮನಿಂದ ಸಾಕಲ್ಪಟ್ಟ ಮಾಧುವಿಗೂ ಸ್ವಭಾವದಲ್ಲಿರೋ ವ್ಯತ್ಯಾಸವನ್ನು ತಾವು ಗಮನಿಸಿರಬಹುದು. ಈಗ ತಮ್ಮಗಳಿಗೆಲ್ಲಾ ವಿನಯವಾಗಿ ಹೇಳ್ಕೊಳ್ಳೋದೇನೆಂದ್ರೆ…. ನಮ್ಮ ಮನೆಗಳಲ್ಲಿ ಭಾಗೀರಥಮ್ಮ ಹೇಳಿದ್ಹಾಗೆ ‘ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ ಸುತ್ತು ಮುತ್ತಲು ಇರೋ ಜನರಿಗೆ ಉಪಯೋಗವಾಗಿರೋದೇ’ ಎಂಬ ಉದ್ದೇಶಾನ ಮುಂದಿಟ್ಕೊಂಡು ನಮ್ಮಕ್ಳನ್ಸಾಕಿ, ಗುಣಗಳನ್ನಿ ಬಿತ್ತಿ, ಬೆಳೆಸಿ, ಸ್ಕೂಲಿಗೆ ಕಳಿಸಿ, ಸ್ಕೂಲುಗಳಲ್ಲಿ ನಾವೀಗನುಸರಿಸುತ್ತಿರುವ ಕೊಂಡಿ ಇಲ್ಲದ ಪಾತಾಳಗರಡಿ ಕ್ರಮಾನ ಬಿಟ್ಬಿಟ್ಟು, ನಮ್ಮಕ್ಕಳ ಸ್ವಭಾವದಲ್ಲಿರುವ ಗುಣಗಳನ್ನು ಹೊರಕ್ಕೆ ಸೆಳೆಯುವ ವಿದ್ಯಾಭ್ಯಾಸಕ್ರಮವೊಂದನ್ನೇರ್ಪಡಿಸಿಕೊಂಡು, ಅದನ್ನನುಸರಿಸಿದ್ರೆನೇ ನಮ್ಮ ದೇಶದೇಳಿಗೆ ಎಂಬೋ ನನ್ನ ಯೋಚ್ನೆ ಕುಂಬಳ್ಕಾಯಷ್ಟಿಲ್ದಿದ್ರೂನೂವೆ ರಾಗೀಕಾಳಷ್ಟಾದರು ತಮ್ಮಗಳ ಮನಸ್ಸಿಗೆ ನಾಟಿದ್ಪಕ್ಷಕ್ಕೆ ನನ್ನೀ ಪ್ರಥಮ ಪ್ರಯತ್ನ ವ್ಯರ್ಥವಲ್ಲ.

[ಸಭಿಕರಿಗೆ ನಮಸ್ಕರಿಸುವನು.]

ಸಾಕೋದನ್ ಅರಿತಾತ-ಸಾವಿರಜನಕ್ ತ್ರಾತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯನಾರಾಯಣ
Next post ಮಿಂಚುಳ್ಳಿ ಬೆಳಕಿಂಡಿ – ೬೦

ಸಣ್ಣ ಕತೆ

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…