ಚಿಕ್ಕಂದಿನಿಂದಲೂ ನನಗೆ ಮುಖವಾಡಗಳೆಂದರೆ ಕುತೂಹಲ, ಭಯ ಮತ್ತು ಆಶ್ಚರ್ಯಕರ ಸಂಗತಿಗಳಾಗಿದ್ದುವು. ನನ್ನ ಮೊದಲ ಕವನ ಸಂಕಲನದ ಹೆಸರು ‘ಮುಖವಾಡಗಳು’ ಎಂದೇ. ಈ ಸಂಕಲನದಲ್ಲಿ ಅದೇ ಹೆಸರಿನದೊಂದು ಕವಿತೆಯಿದೆ. ಮಣ್ಣಿನ ಮುಖಗಳಿವೆ ಕಬ್ಬಿಣದ ಮುಖಗಳಿವೆ-ಹೀಗೆಂದೇನೋ ಕವಿತೆ ಸುರುವಾಗುತ್ತದೆ. ನಾನು ಹುಟ್ಟಿ ಬೆಳೆದ ನಮ್ಮ ಗೇಣಿ ಭೂಮಿಯಲ್ಲಿ ಮನೆಯ ಬಲಬದಿಯಲ್ಲಿ ತುಸು ಎತ್ತರದಲ್ಲಿ ಒಂದು ಭೂತಸ್ಥಾನ (ಭೂತದ ಗುಡಿ) ಇತ್ತು. ಇಲ್ಲಿ ಪಂಜುರ್‍ಲಿ, ದೂಮಾವತಿ ಮುಂತಾದ ಭೂತಗಳಿದ್ದುವೆಂದು ನನ್ನ ನೆನಪು. ಒಂದು ಭೂತಸ್ಥಾನದಲ್ಲಿ ಒಂದೇ ಭೂತವೆಂದೇನೂ ಇಲ್ಲ; ಆದರೂ ಯಾವುದಾದರೂ ಒಂದು ಭೂತ ಮುಖ್ಯ ದೈವವಾಗಿರುತ್ತಿತ್ತು. ನಮ್ಮ ಭೂತಸ್ಥಾನದಲ್ಲಿ ಬಹುಶಃ ದೂಮಾವತಿ ಮುಖ್ಯ ದೈವವಿತ್ತೆಂದು ನನ್ನ ನೆನಪು. ಈ ಭೂತಸ್ಥಾನವನ್ನು ಪ್ರತಿ ಸಂಕ್ರಾಂತಿಯ ಇರುಳು ಜಗುಲಿ ಸಾರಿಸಿ ಅದರ ಬೀಗ ತೆಗೆದು, ಹಳೆಯದಾದ ಬಾಗಿಲುಗಳನ್ನು ಕಿರ್ರನೆ ತೆರೆದು ಓಳಗೆ ದೀಪವಿರಿಸಬೇಕಿತ್ತು. ನಂತರ ತುಸು ಮೇಲ್ಗಡೆಯಿದ್ದ ದೊಡ್ಡ ದೊಡ್ಡ ಕಾಡುಬನದ ಮರಗಳ ಬುಡಕ್ಕೆ ಹೋಗಿ ಅಲ್ಲೂ ಒಂದು ನೆಣೆ ಹೊತ್ತಿಸಿ ಇರಿಸುವುದು. ಇದು ಗುಳಿಗನೆಂಬ ಭೂತಕ್ಕೆ. ಅಲ್ಲಿಂದ ಕೆಳಗಿಳಿದು ಪುನಃ ಭೂತಸ್ಥಾನದ ದೀಪ ಆರಿಸಿ ಬಾಗಿಲು ಮುಚ್ಚಿ ಬೀಗ ಹಾಕಿ ಮನೆಗೆ ಮರಳಬೇಕಿತ್ತು. ಇದನ್ನೆಲ್ಲ ನನ್ನ ಅಣ್ಣ ಚಾಚೂ ತಪ್ಪದೆ ಪ್ರತಿ ಸಂಕ್ರಮಣದ ರಾತ್ರಿ ಮಾಡುತ್ತಿದ್ದರು. ನನ್ನ ಅಣ್ಣ ನನಗಿಂತ ಇಪ್ಪತ್ತು ವರ್ಷ ದೊಡ್ಡವರು. ಚಿಕ್ಕವನಾಗಿದ್ದ ನಾನು ಕೆಲವು ಸಲ ಅಣ್ಣನ ಜತೆ ಈ ಪೂಜಾರಿ ಕೆಲಸಕ್ಕೆ ಹೋಗುತ್ತಿದ್ದೆ. ಅಣ್ಣನಿಲ್ಲದಿದ್ದಾಗ ನಮ್ಮಲ್ಲಿನ ಕೆಲಸದವರು ಯಾರಾದರೂ ಇದನ್ನು ನಿರ್ವಹಿಸುತ್ತಿದ್ದರು. ಆದರೆ ಕೆಲಸದವರೂ ಇಲ್ಲದಿದ್ದಾಗ ಇದನ್ನು ನಾನೇ ಮಾಡಬೇಕಾಗಿತ್ತು. (ಹೆಂಗಸರಿಗೆ ಭೂತಸ್ಥಾನದ ಹತ್ತಿರ ಬರುವುದೂ ನಿಷಿದ್ಧವಾಗಿತ್ತು.) ಈ ಭೂತಸ್ಥಾನದಲ್ಲೇ ನನಗೆ ಮುಖವಾಡಗಳ ಮೊದಲ ಪರಿಚಯವಾದ್ದು, ಇವು ಕಂಚಿನದೋ ಹಿತ್ತಾಳೆಯದೋ ಆಗಿದ್ದುವೆಂದು ನನ್ನ ನೆನಪು. ಯಾರೂ ಇವನ್ನು ಉಜ್ಜುವ ಕೆಲಸಕ್ಕೆ ಹೋಗದ ಕಾರಣ ಕಾಲಾಂತರದ ಕಲ್ಮಷ ಇವುಗಳಿಗೆ ಅಂಟಿಕೊಂಡಿತ್ತು. ಇವನ್ನು ನೋಡಿದಾಗಲೇ ಮೈ ನಡುಕ ಬರುತ್ತಿತ್ತು. ಕಣ್ಣು ಬಾಯಿಗಳಿರುವಲ್ಲಿ ಅವುಗಳ ಸೂಚನೆಗಳು ಮಾತ್ರ ಇರುವಂಥ ತೂತುಗಳು, ಆದರೆ ಕೆಲವಕ್ಕೆ ಬಾಯಿಯಲ್ಲಿ ಹೊರಚಾಚಿದ ನಾಲಿಗೆಗಳು ಕೂಡಾ ಇದ್ದುವು. ಹಣೆಯ ಮೇಲಿಂದ ಕಿರೀಟದಂತೆ ಕಾಣಿಸುತ್ತಿದ್ದುವು. ಭೂತಗಳಿಗೆ ಹೆದರಬಾರದೆಂದೂ, ಹೆದರಿದರೆ ಇವು ಹಿಡಕೊಳ್ಳುತ್ತವೆಂದೂ ನನಗೆ ಗೊತ್ತಿತ್ತು. ಇನ್ನು ಈ ಭೂತಗಳಿಗೆ ದೀಪವಿರಿಸಿ ಗುಳಿಗನಲ್ಲಿಗೆ ಹೋಗಲು ನನಗೆ ಮತ್ತಷ್ಟು ಭಯ. ಯಾಕೆಂದರೆ ಇಲ್ಲಿ ಕಾಡುಮರಗಳಿದ್ದುವು ಎಂದು ಮಾತ್ರವೇ ಅಲ್ಲ, ಗುಳಿಗ ಮಹಾ ನೀಚ ದೈವವೆಂದು ಖ್ಯಾತಿ. ಅದು ಯಾವಾಗ ಬೇಕಾದರೂ ಮನುಷ್ಯರಿಗೆ ‘ಉಪದ್ರ’ (ಸಂಕಷ್ಣ) ಕೊಡಬಲ್ಲುದು. ಆದ್ದರಿಂದ ಅದರ ತರ್ಕ ನಮಗೆ ಅರ್ಥವಾಗುವಂಥದಲ್ಲ. ಗುಳಿಗನಿರುವ ಸ್ಥಳದಲ್ಲಿ ಯಾವ ಮುಖವಾಡವೂ ಇರಲಿಲ್ಲ, ಕೆಲವೊಂದು ಕಲ್ಲುಗಳು ಮಾತ್ರ ಇದ್ದುವು. ಈ ಕಲ್ಲುಮರಗಳೇ ಗುಳಿಗನ ಆವಾಸಸ್ಥಾನ. ಈ ಜಾಗಕ್ಕೆ ಗುಳಿಗನ ವನ ಎಂದೇ ನಾವು ಕರೆಯುತ್ತಿದ್ದುದು. ಗುಳಿಗನಿಗೆ ದೀಪವಿರಿಸಿ ನಂತರ ಮತ್ತೆ ಭೂತಸ್ಥಾನಕ್ಕೆ ಬಂದು ದೀಪವಾರಿಸಿ ಬಾಗಿಲು ಭದ್ರಪಡಿಸಿ ಮನೆಗೆ ಮರಳಬೇಕಿತ್ತು. ಹಾಗೆ ಮರಳಿದಾಗಲೇ ಬದುಕಿದೆಯಾ ಬಡಜೀವವೇ ಎನಿಸುವುದು.
ಸಾಮಾನ್ಯವಾಗಿ ಭೂತಗಳಿಗೆ ಕೋಲ ಕೊಡುವುದೆಂಬ ಪರಿಪಾಠಿಯಿದೆ. ಕೋಲವೆಂದರೆ ಅದೊಂದು ಹರಕೆಯ ಅಥವಾ ವಾರ್ಷಿಕ ಭೂತೋತ್ಸವ. ಭೂತಸ್ಥಾನದ ಮುಂದೆ ಅಥವಾ ಹರಕೆ ಹೊತ್ತವರ ಮನೆಯಂಗಳದಲ್ಲಿ ಅಥವಾ ಗದ್ದೆಬಯಲುಗಳಲ್ಲಿ ಇದು ನಡೆಯುವುದು. ಆಗ ಈ ಭೂತಗಳನ್ನು ತರುವುದು (‘ಹೊರಡಿಸುವುದು’) ಇವುಗಳ ಗುಡಿಗಳಿಂದಲೇ. ಕಿರೀಟಧಾರಿಗಳಾಗಿ, ಮುಖವರ್‍ಣಿಕೆಗಳನ್ನು ಬರೆದುಕೊಂಡು (ಸಾಧಾರಣವಾಗಿ ಯಕ್ಷಗಾನ ವೇಷಧಾರಿಗಳಂತೆಯೇ), ತೆಂಗಿನ ಗರಿಗಳಿಂದ ಅದಕ್ಕೆಂದೇ ನೇಯ್ದ ಲಂಗಗಳನ್ನು ಧರಿಸಿಕೊಂಡ ಭೂತದ ವೇಷದವರು ಭೂತನೃತ್ಯ ಮಾಡುತ್ತಿದ್ದರು. ಈ ನೃತ್ಯದಲ್ಲಿ ಒಂದಷ್ಟು ಕಾಲ ಅವರು ಗುಡಿಗಳಿಂದ ತಂದಂಥ ಮುಖವಾಡಗಳನ್ನೂ ಧರಿಸುತ್ತಿದ್ದರು. ಮುಖ್ಯ ದೈವಗಳು ಲೋಹದ ಮುಖವಾಡಗಳನ್ನು ಧರಿಸಿದರೆ, ಕಿಂಕರ ದೈವಗಳು (ಉದಾಹರಣೆಗೆ, ಗುಳಿಗ) ತತ್ಕಾಲಕ್ಕೆ ಮಾಡಿದ ಅಡಿಕೆ ಹಾಳೆಯ ಮುಖವಾಡಗಳನ್ನು ತೊಟ್ಟುಕೊಂಡು ವಿದೂಷಕರಂತೆ ನಟಿಸುತ್ತಲೂ ಬೆದರಿಸುತ್ತಲೂ ಇರುತ್ತಿದ್ದುವು. ಇವೆಲ್ಲವೂ ಈಗ ಸಂಶೋಧನೆಗೆ ವಸ್ತುಗಳಾಗಿವೆ!
ಇಂಥ ಅನೇಕ ಕೋಲಗಳನ್ನು ನಾನು ನೋಡಿದ್ದೇನೆ. ಅಲ್ಲದೆ ಮುಂದೆ ಮಾವನ ಮನೆಯಲ್ಲಿ ವಿದ್ಯಾಭಾಸಕ್ಕೆಂದು ವಸತಿ ಹೂಡಿದಾಗ ಆ ಊರಿನಲ್ಲೂ ಇಂಥ ಮುಖವಾಡಗಳನ್ನು ಅವಲೋಕಿಸುವ ಅವಕಾಶ ನನಗೆ ಒದಗಿತು. ಹಾಗೂ ಆರಂಭದಲ್ಲಿ ನನ್ನದೇ ಊರಿನ ಮನೆಯಿಂದ ಮಾವನ ಮನೆಗೆ ನಡೆದುಕೊಂಡೇ ಸುಮಾರು ಮೈಲಿಗಳನ್ನು ಕ್ರಮಿಸುತ್ತಿದ್ದಾಗಲೂ ದಾರಿಯಲ್ಲಿ ಒಂದೆರಡು ಸ್ಥಾನಗಳು ಬರುತ್ತಿದ್ದುವು. ಒಂದರಲ್ಲಿ ಮಣ್ಣಿನಿಂದ ಮಾಡಿದ ವಿವಿಧ ಪ್ರಾಣಿಗಳ ಬೊಂಬೆಗಳು ಮಾತ್ರವಲ್ಲದೆ ಮಣ್ಣಿನ ಮುಖವಾಡಗಳು ಕೂಡಾ ಇದ್ದುವು. ದಕ್ಷಿಣ ಕನ್ನಡದ ಯಕ್ಷಗಾನ ರಂಗಭೂಮಿಯಲ್ಲೂ ಕೇರಳದ ಕಥಕ್ಕಳಿಯಲ್ಲೂ ಕೆಲವು ಸಲ ಮುಖವಾಡಗಳನ್ನು ಉಪಯೋಗಿಸುವುದಿದೆ. ಹೀಗೆ ಈ ಮುಖವಾಡದ ಪರಿಕಲ್ಪನೆಯ ವಾಸ್ತವಿಕ ರೂಪಗಳು ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ನಾಟಿನಿಂತುವು.
ಮುಖವಾಡಗಳ ಅಗತ್ಯದ ಬಗ್ಗೆ ನಾನು ಈಗ ಯೋಚಿಸಿದಾಗ, ಉತ್ತರ ಬಹಳ ಸುಲಭವಾಗಿ ತೋರುತ್ತದೆ: ಮುಖವನ್ನು ಅಡಗಿಸುವುದಕ್ಕೆ! ಆದರೆ ಇದು ಸರಳವಾದ ಉತ್ತರವಾಯಿತು. ಸ್ವಂತ ಮುಖವನ್ನು ಮರೆಮಾಡಿ ಬೇರೆ ಮುಖಚಹರೆಯನ್ನು ತೋರಿಸುವುದಕ್ಕೇ ಮುಖವಾಡಗಳ ಉಪಯೋಗವಾಗುತ್ತದೆ, ನಿಜ. ಹೆಚ್ಚಾಗಿ, ಕೆಟ್ಟ ಚಹರೆಯನ್ನು ಮರೆಸಿ ಒಳ್ಳೆಯ ಚಹರೆಯನ್ನು ತೋರಿಸುವುದಕ್ಕೆ. ಗೋಮುಖವ್ಯಾಘ್ರ ಎಂಬ ಪರಿಕಲ್ಪನೆ ಇಂಥದೇ: ಒಳಗೆ ವ್ಯಾಘ್ರದಂತೆ ಕ್ರೂರಿ, ಹೊರಗೆ ಗೋವಿನಂತೆ ಸಾಧು ಎಂಬುದಾಗಿ. ಎಂದರೆ ವಂಚಕ ಎಂದು ಅರ್ಥ. ಆದರೂ, ಪ್ರಾಚ್ಯ ಕಾಲದಲ್ಲಿ ಬಹುಶಃ ಮುಖವಾಡಗಳನ್ನು ಅತಿಮಾನುಷತೆಯ ಸಂಕೇತವಾಗಿ ಉಪಯೋಗಿಸುತ್ತಿದ್ದಿರಬೇಕು. ಭೂತದ ಮುಖಗಳಿಗೆ ‘ಮುಖ’ವೆಂದೇ ಕರೆಯುವುದು, ಮುಖವಾಡವೆಂದಲ್ಲ. ಯಾಕೆಂದರೆ, ಭೂತದ ಮುಖ ಮನುಷ್ಯರ ಮುಖಕ್ಕಿಂತ ಮಿಗಿಲಾಗಿರಬೇಕು! ವಿಶ್ವದ ಎಲ್ಲ ಪ್ರಾಚ್ಯ ಸಂಸ್ಕೃತಿಗಳಲ್ಲೂ ಇಂಥ ಅತಿಮಾನುಷ ‘ಮುಖ’ಗಳ ಕಲ್ಪನೆಯಿತ್ತು. ನಮ್ಮದೇ ಭೂತಗಳ ಕ್ಷೇತ್ರಗಳಲ್ಲಿ ಮಾತ್ರವೇ ಅಲ್ಲದೆ, ಪುರಾತನ ಗ್ರೀಕ್ ನಾಟಕಗಳಲ್ಲಿ, ಜಪಾನೀ ನೋ (Noh) ನಾಟಕಗಳಲ್ಲಿ, ಮಾಯನ್ ಪಳೆಯುಳಿಕೆಗಳಲ್ಲಿ ಇದಕ್ಕೆ ಕುರುಹುಗಳು ದೊರಕುತ್ತವೆ. ಪುರಾತನ ಈಜಿಪ್ಟಿನ ಫೇರೋ ಅರಸರು ದೇವರುಗಳು ಎಂಬ ನಂಬಿಕೆಯಿತ್ತು. ಸತ್ತಾಗ ಅವರ ಮೃತ್ಯುಮುಖವಾಡ (ಡೆತ್ ಮಾಸ್ಕ್)ಗಳನ್ನು ಚಿನ್ನದಿಂದ ತಯಾರಿಸುವ ಪದ್ಧತಿಯಿತ್ತು. ಇಪ್ಪತ್ತನೆಯ ಶತಮಾನದಲ್ಲಿ ತುತಂಖಮನ್ ಮಮ್ಮಿ ಇಂಥ ಮುಖವಾಡಸಮೇತವಾಗಿ ದೊರಕಿದ್ದು. ಮೃತ್ಯುಮುಖವಾಡವೆಂದರೆ, ವ್ಯಕ್ತಿ ಸತ್ತಾಗಿನ ಸಮಯ ಆತನ ಮುಖ ಹೇಗಿತ್ತು ಎಂದು ತೋರಿಸುವಂಥದು. ಮುಂದೆ ಮುಖವಾಡಗಳು ಮುಖ ಮರೆಸುವುದಕ್ಕೆ ಉಪಯೋಗಕ್ಕೆ ಬಂದವೆಂದು ಕಾಣುತ್ತದೆ. ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ‘ಮಾಸ್ಕ್’ ಎಂಬ ಹೆಸರಿನ ನರ್ತನರೀತಿಯೊಂದು ಬಳಕೆಗೆ ಬಂತು. ಇದರಲ್ಲಿ ನರ್ತನಕಾರರು ಮುಖವಾಡ ತೊಟ್ಟುಕೊಂಡೇ ನರ್ತಿಸಬೇಕು. ತಾವು ಯಾರೆನ್ನುವುದು ತಮ್ಮೊಂದಿಗೆ ನರ್ತಿಸುವವರಿಗೆ ಗೊತ್ತಾಗಬಾರದು. ಶೇಕ್ಸ್‌ಪಿಯರನ ‘ರೋಮಿಯೋ ಎಂಡ್ ಜೂಲಿಯೆಟ್’ ನಾಟಕದಲ್ಲಿ ರೋಮಿಯೋ ಮತ್ತು ಜೂಲಿಯೆಟ್ ಪರಸ್ಪರ ದ್ವೇಷಿಸುವ ಎರಡು ಬೇರೆ ಬೇರೆ ಮನೆತನಗಳಿಗೆ ಸೇರಿದವರಾಗಿರುತ್ತಾರೆ. ಜೂಲಿಯೆಟ್‌ಳ ತಂದೆಯ ಮನೆಯಲ್ಲಿ ನಡೆಯುವ ನರ್ತನಕ್ಕೆ ರೋಮಿಯೋಗೆ ಆಮಂತ್ರಣವಿಲ್ಲದಿದ್ದರೂ, ರೋಮಿಯೋ ಮುಖವಾಡ ಧರಿಸಿ ಅಲ್ಲಿಗೆ ಪವೇಶ ಪಡೆಯುತ್ತಾನೆ, ಮಾತ್ರವಲ್ಲ; ಜೂಲಿಯೆಟಳೊಂದಿಗೆ ನರ್ತನ ಕೂಡಾ ಮಾಡುತ್ತಾನೆ. ಕೊನೆಗೂ ಅವನು ಪತ್ತೆಯಾಗುತ್ತಾನೆಂಬುದು ಬೇರೆ ಮಾತು. ಇಂಥ ಮುಖವಾಡ ನರ್ತನಗಳ ಹೇರಳ ಉಪಯೋಗವನ್ನು ನಾವಿಂದು ಸಿನಿಮಾಗಳಲ್ಲಿ ಕಾಣುತ್ತೇವೆ. ಈ ನರ್ತನದ ಕ್ಷೇತ್ರವನ್ನು ಬಿಟ್ಟರೆ ಮತ್ತೆ ಮುಖವಾಡಗಳು ಕಾಣಿಸಿಕೊಳ್ಳುವುದು ನಾಟಕ, ಸರ್ಕಸ್ ಮುಂತಾದ ಕಡೆ ಬಫೂನ ವೇಷಕ್ಕೆ. ಇಂಗ್ಲಿಷ್‌ನ ‘ಮಾಸ್ಕ್’ ಪದವೇ ಬಂದುದು ಅರೆಬಿಕ್‌ನ ‘ಮಸ್ಕರಾ’ ಎಂಬ ಪದದಿಂದ; ಅರೆಬಿಕ್‌ನಲ್ಲಿ ಅದರ ಅರ್ಥ ಬಫೂನ ಎಂದು!
ಕೇವಲ ಸರ್ಕಸ್ ಬಫೂನನ ಮುಖವಾಡಗಳಷ್ಟೇ ಅಲ್ಲ, ಎಲ್ಲ ಮುಖವಾಡಗಳೂ ನಿಜಕ್ಕೂ ನಮಗೆ ತಮಾಷೆಯಾಗಿ ಅನಿಸಬೇಕು. ಒಬ್ಬ ಮನುಷ್ಯ ತನ್ನ ಮುಖದ ಮೇಲೆ ಇಂಥ ಯಾವುದೇ ಮರೆಯನ್ನು ಇರಿಸಿಕೊಳ್ಳುವುದೆಂದರೇನು! ಆದರೆ ವಾಸ್ತವದಲ್ಲಿ ಇವು ನಮ್ಮ ಮೂಲಭೂತ ಭಯಗಳನ್ನು ಎಬ್ಬಿಸುತ್ತವೆ. ಯಾಕೆಂದರೆ, ಅತಿಮಾನುಷಿಕವಾದ್ದು ಅಮಾನುಷಿಕವೂ ಹೌದು. ಮುಖ ಭಾವನೆಗಳ ಕನ್ನಡಿ ಎನ್ನುತ್ತಾರೆ. ನಮ್ಮ ನಮ್ಮ ಭಾವನೆಗಳಿಗನುಗುಣವಾಗಿ ನಮ್ಮ ಮುಖ ಸೂಕ್ಷ್ಮ ವ್ಯತ್ಯಾಸಗಳನ್ನು ಹೊಂದುತ್ತಲೇ ಇರುತ್ತದೆ: ಸಂತೋಷ, ದುಃಖ, ಅನುಕಂಪ, ದ್ವೇಷ, ಭಯ, ಖಿನ್ನತೆ, ನಿರಾಸಕ್ತಿ ಇತ್ಯಾದಿ. ಇದನ್ನೇ ಮುಖಭಾವ ಎನ್ನುತ್ತೇವೆ. ಹಾಗೂ ಇವು ಆಗಿಂದಾಗ್ಗೆ ಬದಲಾಗುತ್ತ ಇರುವ ಸಂಚಾರಿ ಭಾವಗಳು -ಯಾಕೆಂದರೆ ಮನುಷ್ಕರ ಪರಿಸ್ಥಿತಿ ಯಾವಾಗಲೂ ಒಂದೇ ತರ ಇರುವುದಿಲ್ಲ. ಮುಖವಾಡಕ್ಕಾದರೆ, ಸ್ಥಿರವಾದ ಒಂದು ರೂಪ ಮತ್ತು ಭಾವ ಇರುತ್ತದೆ. ಒಮ್ಮೆ ತೊಟ್ಟರೆ ತೆಗೆಯುವವರೆಗೆ ಅದು ಹಾಗೆಯೇ ಉಳಿಯುತ್ತದೆ. ಈ ಮುಖ ಬದಲಾಗದ ಸ್ಥಾಯೀ ಸ್ಥಿತಿಯೇ ನಮ್ಮ ಭಯಕ್ಕೆ ಮುಖ್ಯವಾದ ಕಾರಣ. ಮುಖವಾಡ ಧರಿಸಿದ ವ್ಯಕ್ತಿ ಜೀವಂತವಿದ್ದೂ ಸತ್ತಂತೆಯೇ ಸರಿ. ಸತ್ತ ವ್ಯಕ್ತಿ ಎದ್ದು ಓಡಾಡುತ್ತಿರುವ ಹಾಗೆ! ಆದ್ದರಿಂದಲೇ ಭೂತಗಳ ಮುಖಗಳು ಮುಖವಾಡಗಳಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಭಾವಪ್ರಕಟಣೆಯನ್ನು ಮಾತಿನ ಮೂಲಕವೂ ಮಾಡಬಹುದು. ಆದ್ದರಿಂದ ಮುಖವಾಡ ತೊಟ್ಟ ವ್ಯಕ್ತಿಯ ಮುಖಭಾವ ಸ್ಥಿರವಾಗಿದ್ದು, ಮಾತಿನ ಭಾವ ವ್ಯತ್ಯಾಸವಾದಾಗ ಕೂಡಾ ನಮ್ಮಲ್ಲಿ ‘ಅಮಾನುಷತೆ’ಯ ಭೀತಿ ಉಂಟಾಗುವುದು ಸಾಧ್ಯ. ಇದೆಲ್ಲವನ್ನೂ ಆಧುನಿಕ ರಂಗಭೂಮಿ ಬಹಳ ಸೃಜನಶೀಲವಾಗಿ ಉಪಯೋಗಿಸುವುದನ್ನು ಕಾಣಬಹುದಾಗಿದೆ.
ಈ ಮುಖವಾಡಗಳ ಕಲ್ಪನೆ ನನಗೆ ಎಷ್ಟು ಮೂಲಭೂತ (ಇದು ಇಲ್ಲಿ ಅರ್ಥಗರ್ಭಿತವಾದ ಪದ!) ಎಂದರೆ, ‘ಸುಧಾ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನನ್ನದೊಂದು ಕಾದಂಬರಿಯಲ್ಲಿ ಒಬ್ಬಳು ಗ್ರಾಮದೇವತೆಯ ಮುಂದೆ ಭಕ್ತರು ಮುಖವಾಡ ಧರಿಸಿ ಕುಣಿಯುವ ಸನ್ನಿವೇಶ ಬರುತ್ತದೆ. ಈ ದೇವತೆಯನ್ನು ಬರಿಮುಖದಲ್ಲಿ ನೋಡುವಂತೆಯೇ ಇಲ್ಲ! ಕಾದಂಬರಿಗೆ ಶೀರ್ಷಿಕೆಯೇನೆಂದು ಕೊಡುವುದು ಎಂಬ ಸಮಸ್ಯೆ ನನಗೆ ಬಂತು. ‘ಮುಖವಾಡಗಳು’ ಈಗಾಗಲೇ ಕವನ ಸಂಕಲನಕ್ಕೆ ಖರ್ಚಾಯಿತು. ಆದ್ದರಿಂದ ಅದಕ್ಕೆ ಹತ್ತಿರವಾದ ‘ಮುಸುಗು’ ಎಂಬ ಹೆಸರನ್ನಿರಿಸಿದೆ.
‘ಮುಖವಾಡಗಳು’ ಎಂಬ ಈ ಹಿಂದೆ ಸೂಚಿಸಿದ ನನ್ನ ಕವಿತೆಗೆ ಬಂದರೆ, ಇದರಲ್ಲಿ ಕಾಣುವುದು ಭಾವಶೂನ್ಯವಾಗಿದ್ದು, ಯಾವ ಯಾವುದೋ ತೋರಿಕೆಗಳಿಗೋಸ್ಕರ ಭಾವನೆಗಳನ್ನು ಪ್ರಕಟಿಸಲು ಬದ್ಧವಾದ ಸಮಾಜವೊಂದರ ಚಿತ್ರಣ. ಇಂಥ ಸಮಾಜದಲ್ಲಿ ಮನುಷ್ಯರು ಒಂದೊಂದು ಭಾವಕ್ಕೆ ಒಂದೊಂದು ಮುಖವಾಡವನ್ನು ಕೊಂಡುಕೊಳ್ಳಬೇಕಾಗುತ್ತದೆ. ಅವರಿಗೆ ಮುಖವೇ ಮುಖವಾಡವಾಗಿಬಿಟ್ಟಿದೆಯೆನ್ನುವುದು ಮುಖ್ಯವಾದ ಸಂಗತಿ. ಯಾಕೆಂದರೆ ಭಾವಶೂನ್ಯಕನಾದ ವ್ಯಕ್ತಿಯಿರುವುದು ಹೀಗೆ. ಆತ ಒಂದು ರೀತಿಯಲ್ಲಿ ನಗ್ನನಾದಂತೆಯೇ ಸರಿ. ಈ ನಗ್ನತೆಯನ್ನು ಮುಚ್ಚಿಕೊಳ್ಳುವುದೂ ಅಗತ್ಯವಾಗುತ್ತದೆ. ಆದ್ದರಿಂದ ಮುಖವಾಡವೆಂದರೆ, ಕಾಚವಿದ್ದ ಹಾಗೆ ಎಂಬ ಸಾದೃಶ್ಯ ಕವಿತೆಯಲ್ಲಿ ಬರುತ್ತದೆ. ಇಂಥ ಮುಖವಾಡಗಳನ್ನು ತಯಾರಿಸಿ ಬಿಕರಿಗಿಟ್ಟವರೂ ಕವಿತೆಯಲ್ಲಿ ಬರುತ್ತಾರೆ. ಅಂತೂ ಭಾವಶೂನ್ಯವಾದ ಸಮಾಜಕ್ಕೆ ಮುಖವಾಡಗಳಿಂದ ಬಿಡುಗಡೆಯಿಲ್ಲ! ಆದರೆ, ಮನಸ್ಸಿನಲ್ಲೊಂದು ಭಾವವಿದ್ದು ಮುಖದಲ್ಲಿ ಬೇರೊಂದು ಭಾವ ತೋರಿಸಬಲ್ಲವರಿಗೆ ಮಾತ್ರ ಯಾವ ಮುಖವಾಡಗಳ ಅಗತ್ಯವೂ ಇಲ್ಲ. ಈ ವಂಚನೆಯೂ ಬಹುಶಃ ಮುಖವಾಡಗಳಷ್ಟೇ ಹಳೆಯದಿರಬಹುದು.
ಟಿಪ್ಪಣಿ: ಇಂಗ್ಲಿಷ್ ಭಾಷೆಯಲ್ಲಿರುವ Person ‘ಮನುಷ್ಯ’ ಎಂಬ ಪದ ಲ್ಯಾಟಿನ್ ಮೂಲದಲ್ಲಿ persona ಆಗಿದ್ದು ಲ್ಯಾಟಿನ್ನಲ್ಲಿ ಅದಕ್ಕೆ ನಟರು ಉಪಯೋಗಿಸುವ ಮುಖವಾಡ ಎನ್ನುವುದು ಒಂದು ಅರ್ಥವಾಗಿತ್ತು. ಸಾಹಿತ್ಯದಲ್ಲಿ, ಮುಖ್ಯವಾಗಿ ಕವಿತೆಯಲ್ಲಿ, ಯಾವುದಾದರೊಂದು ಇಡೀ ಕವಿತೆ ಯಾವುದಾದರೂ ಒಂದು ಪಾತ್ರ ಹೇಳುವಂತಿದ್ದರೆ ಆ ಪಾತ್ರ ಕವಿತೆಯ ಪರ್ಸೊನಾ (persona) ಆಗುತ್ತದೆ; ಇಂಗ್ಲಿಷ್‌ನಲ್ಲಿ ವಿಕ್ಟೋರಿಯನ್ ಕವಿ ರಾಬರ್ಟ್ ಬ್ರೌನಿಂಗ್ ಹೆಚ್ಚಾಗಿ ಈ ರೀತಿಯ ಪರ್ಸೊನಾ ಮೂಲಕ ಕವಿತೆ ಹೇಳಿಸುತ್ತಾನೆ; ಇಪ್ಪತ್ತನೆಯ ಶತಮಾನದಲ್ಲಿ ಈ ಶೈಲಿ ಉಪಯೋಗಿಸಿದವರಲ್ಲಿ ಎಝ್ರಾ ಪೌಂಡ್ ಮುಖ್ಯ. ಪೌಂಡ್‌ನ ಆರಂಭದ ಒಂದು ಕವನ ಸಂಕಲನದ ಹೆಸರೇ Personae ಎಂದು.
*****