ಕಲ್ಪನಾ

ಕಲ್ಪನಾ

ಚಿತ್ರ: ಟಾಮ್ ಬಿ

ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಕಾಲವದು! ಸ್ವರ್ಗಲೋಕದಲ್ಲಿಯ ಸ್ತ್ರೀ ಪುರುಷರೆಂದೇ ಎಲ್ಲರೂ ಅವರನ್ನು ಭಾವಿಸುತ್ತಿದರು!

ಒಂದು ದಿನ ಬೆಳಗಿನಲ್ಲಿ ನಮ್ಮ ಓಣಿಯಲ್ಲಿಯ ಆ ದೊಡ್ಡ ಮನೆಯಲ್ಲಿ ಒಮ್ಮೆಲೆ ಜನಜಂಗುಳಿಯು ಕಂಡಿತು. ನಾಲ್ಕೈದು ಮೋಟಾರುಗಳು ನಿಂತಿದ್ದವು. ಅನೇಕ ಜನರ ಹರ್ಷೋದ್ಗಾರ, ಕೇಕೆಗಳು ಕೇಳಬರುತ್ತಿದ್ದವು. ಕವಿಗೆ ಒಮ್ಮೆಲೆ ಸ್ಫೂರ್ತಿ ಬಂದಂತೆ ಬೇರೆ ಬೇರೆ ರಾಗಗಳನ್ನು ತೆಗೆಯುತ್ತಿದ್ದರು. ನಮ್ಮ ಓಣಿಯಲ್ಲಿಯ ಎಲ್ಲ ಜನರೂ ಆದಿನ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಯೇ ನೋಡಿದರು.

ಮನೆಯು ಮುಂದೆ ನಿಂತಿರುವ ಮೋಟಾರುಗಳನ್ನು ನೋಡಿ ನನ್ನ ಐದು ವರುಷದ “ಪುಟ್ಟು” ಓಡಿಹೋಗುತ್ತಿದ್ದಳು. ಆ ಜನರಲ್ಲಿರುವ ಒಬ್ಬ ರೂಪವತಿ ಹೆಂಗಸು ಆ ಪುಟ್ಟುವನ್ನು ಎತ್ತಿಕೊಂಡು, ಮುತ್ತಿಟ್ಟು ಕೈಯಲ್ಲಿ ಚಾಕಲೇಟ, ಬಿಸ್ಕೀಟ ಡಬ್ಬಿ ಮುಂತಾದವುಗಳನ್ನು ಕೊಟ್ಟುಕಳಿಸಿದಳು.

ನನ್ನ ಪುಟ್ಟುವಿನಿಂದಲೆ ಆ ಜನರ ಪರಿಚಯ ನನಗಾಗುವ ಪ್ರಸಂಗ ಬಂದಿತು. ನನ್ನ ಮಗಳನ್ನು ಎತ್ತಿಕೊಂಡ ಸ್ತ್ರೀಯು ನನ್ನನ್ನು ಒಂದು ದಿನ ಕರೆಯಿಸಿಕೊಂಡಳು. ಅವಳೆ ನನಗೆ ಎಲ್ಲ ಸಂಗತಿ ಹೇಳಿದಳು.

ಅದೊಂದು ಸಿನೆಮಾ ಕಂಪೆನಿ. ಕೃಷ್ಣಾ ನದಿ ತೀರದಲ್ಲಿರುವ ಸಂದರ ವಾದ ಪ್ರಕೃತಿಯ ಮಡಿಲಲ್ಲಿ ಹಲವು ದೃಶ್ಯಗಳನ್ನು ತೆಗೆದುಕೊಳ್ಳಲು ಅವರು ನಮ್ಮೂರಿಗೆ ಬಂದಿದ್ದರು. ಸುಮಾರು ಐದಾರು ತಿಂಗಳಾದರೂ ತಾವು ಅಲ್ಲಿ ಇರಬಹುದಾಗಿ ಅವಳು ಹೇಳಿದಳು.

ಮಹಡಿಯ ಮೇಲೆ ಹೆಂಗಸರು ಮತ್ತು ಅವರ ಪರಿವಾರದವರು! ಕೆಳಗಡೆಗೆ ಗಂಡಸರು, ವಾದ್ಯಗಳ ಮೇಳದವರು, ವ್ಯವಸ್ಥಾಪಕರು ಇರುತ್ತಿದ್ದರು. ಬಾಗಿಲಲ್ಲಿ ಒಬ್ಬ ಪಠಾಣ ಹೆಬ್ಬುಲಿಯಂತೆ ನಿಂತಿರುತ್ತಿದ್ದನು! ದುಃಖದ ಗಾಳಿಯೆ ಅಲ್ಲಿ ಬೀಸುತ್ತಿರಲಿಲ್ಲ. ಯಾವಾಗಲೂ ಆನಂದ! ಯಾವಾಗಲೂ ಸಂಗೀತ! ಯಾವಾಗಲೂ ನಗೆ!!

ದಿನಗಳೆದಂತೆ ಆ ನಟಿಯ ಮೈತ್ರಿಯು ಮರವಾಗಿ ಹಬ್ಬತೊಡಗಿತು ಇದರಿಂದ ನನ್ನ ಉಳಿದ ಗೆಳತಿಯರು ನನ್ನ ಮೇಲೆ ಜುಗುಪ್ಸೆ ತಾಳಿದರು! ಆ ನಟಿಯ ಹೆಸರು ಕಲ್ಪನಾ ಎಂದು ಇದ್ದಿತು. ಗಂಧರ್ವ ಕನ್ನಿಕೆಯರ ಹಾಗೆ ಅವಳ ಮೈಮಾಟ. ಅವಳಾಡುವ ಮಾತುಗಳೂ ಅಮೃತದ ಹನಿಗಳಾಗಿದ್ದವು. ಅವಳ ಜೊತೆಗೆ ಓಡಾಡುವದೆಂದರೆ, ಮಾತನಾಡುವದೆಂದರೆ ನನಗೊಂದು ಹೆಮ್ಮೆ! ಅಪೂರ್ವ ಸಂತೋಷ!

ಒಂದು ದಿನ ಅವಳು ನನ್ನನ್ನು ತಮ್ಮ ಸಿನಿಮಾ ಕೆಲಸ ನಡೆದಿರುವ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿಕಳುಹಿದಳು. ನನ್ನವರನ್ನು ಪುಟ್ಟಳನ್ನು ಮರೆಯದೆ ಕರೆತರಲು ತಿಳಿಸಿದಳು. ಆದರೆ ನನ್ನವರಿಗೆ ಬರಲು ಅನುಕೂಲವಿಲ್ಲದ್ದರಿಂದ ನಾನು ಪುಟ್ಟಳನ್ನು ಕರೆದುಕೊಂಡು ಹೊರಟೆ.

ರಾಜನು ಪಟ್ಟದ ರಾಣಿಯನ್ನು ಮರೆತು ಪರಸ್ತ್ರೀಯಾದ ಸಾಗರಿಕೆಯನ್ನು ಮೋಹಿಸುವ ದೃಶ್ಯ! ಅವನು ಅವಳ ಸಂಗಡ ನಲಿದಾಡುತ್ತಿದ್ದಾನೆ! ತೋಟದಲ್ಲಿ ತಿರುಗಾಡುತ್ತಿದ್ದಾನೆ! ತನ್ನ ಜೀವನದ ಅಮೃತ ಗಳಿಗೆಗಳನ್ನು ಅನುಭವಿಸುತ್ತಾನೆ! ಕಲ್ಪನಾ ಸಾಗರಿಕೆಯ ಪಾತ್ರವಹಿಸಿದ್ದಳು. ಸಿನಿಮಾ ಶೂಟಿಂಗ ಎಂದೂ ನೋಡದ ನಾನು ಅಲ್ಲಿಯ ರೀತಿ ನೀತಿಗಳನ್ನು ಅಗಾಧತೆಯಿಂದ ಬೊಟ್ಟುಕಚ್ಚಿ ನೋಡುತ್ತಿದ್ದೆ.

ನದೀ ತೀರದಿಂದ ತಿರುಗಿ ಬಂದ ಮೇಲೆ ಕಲ್ಪನಾಳ ಕೋಣೆಯಲ್ಲಿ ಹಲವು ನಿಮಿಷ ಕುಳಿತಿದ್ದೆ. ಅವಳು ಉತ್ತಮ ಕಾಫಿ ಮಾಡಿಸುತ್ತೇನೆಂದು ಹೇಳಿ ನನ್ನನ್ನು ನಿಲ್ಲಿಸಿಕೊಂಡಿದ್ದಳು. ನಾನು ಆ ಮಾತು ಈ ಮಾತು ಆಡುತ್ತ ಅವಳಿಗೆ ಕೇಳಿದೆ. “ನಿಮ್ಮ ಮದುವೆಯಾಗಿದೆಯೇ?” ಎಂದು.

ಸ್ನಿಗ್ಧ ನೇತ್ರಗಳನ್ನು ಎತ್ತಿ “ಒಹೋ…” ಎಂದು ಹೇಳಿದಳು. ನನ್ನ ಮುಖವನ್ನು ನೋಡಿ “ಏಕೆ? ನಿಮಗೇನು ಸಂಶಯ?” ಎಂದು ಪ್ರಶ್ನಿಸಿದಳು.

ನನಗೆ ನಾಚಿಕೆ ಬಂದಿತು. ಕಲ್ಪನಾ ಮತ್ತೆ ಕೇಳಿದಳು. “ನೀವು ರಾಜನನ್ನು ಪ್ರೀತಿಸುತ್ತಿದ್ದಿರಿ. ಅವರೇ ನಿಮ್ಮ….?” ಎಂದು ಮೆಲ್ಲಗೆ ಕೇಳಿದೆ.

“ಹೂಂ! ಹೂಂ! ಅಲ್ಲ…. ಕಲ್ಪನಾ ನಕ್ಕಳು.

“ಹಾಗಾದರೆ ನಿಮಗೆ ಬೇರೆಯಯವರನ್ನು ಪ್ರೀತಿಸಲು ಹೇಗಾಗುತ್ತದೆ?” ಆ ದಿನದ ದೃಶ್ಯವನ್ನೆಲ್ಲ ಸ್ಮರಿಸಿಕೊಂಡು ನಾನು ತುಸು ಧೈರ್ಯದಿಂದಲೇ ಮಾತನಾಡಿದೆ.

ಕಲ್ಪನಾ ನನ್ನ ಮಾತಿನ ಅರ್ಥವನ್ನು ಬಹು ಬೇಗ ತಿಳಿದುಕೊಂಡಳು. “ಇದು ನಾಟಕ! ಸಿನಿಮಾ!” ಎಂದು ಹೇಳಿ ಮುಗುಳುನಗೆ ಬೀರಿದಳು. “ನಿಮಗೆ ನಿಜವಾಗಿಯೂ ನಾನು ಅವರನ್ನು ಪ್ರೀತಿಸುವೆನೆಂದು ಅನಿಸಿತೆ? ಆ!!”

“ಹೂಂ! ನನಗೆ ಹಾಗೆಯೇ ಅನಿಸಿತು?”

“ನನ್ನ ಕಲ್ಪನಾ ರಾಜ್ಯ ನಿಮಗೆ ಸತ್ಯವಾಯಿತು! ಅಲ್ಲವೆ? ನಟನೆಯಲ್ಲಿ ಎಷ್ಟು ಮಹತ್ವವಿದೆ! …ನೋಡಿ ……?”

“ನಿಜವಾದ ಪ್ರೇಮವಿರದ ಹೊರತು ನಿಮಗೆ ಹಾಗೆ ನಟನೆ ಮಾಡಲು ಸಾಧ್ಯವೆ?”

“ಅದರಲ್ಲೇನು? ಅದೊಂದು ಕಲೆ! ಅದ್ಭುತ ಕಲೆ!! ನನಗೂ ಗೊತ್ತಿದೆ. ಜನರು ನಮ್ಮ ಬಗ್ಗೆ ಏನಾದರೂ ತಪ್ಪು ಕಲ್ಪನೆ ಮಾಡಿಕೊಳ್ಳುತ್ತಾರೆ. ಏನಾದರೂ ಹೆಸರು ಇಡುತ್ತಾರೆ. ಆದರೆ ನಮ್ಮ ಮನಸ್ಸು ಶುದ್ಧವಿದ್ದರೆ ಏನೂ ಆಗುವುದು ಸಾಧ್ಯವಿಲ್ಲ. ನೋಡಿ, ನಾನು ಕಾಲೇಜಿನಲ್ಲಿ ಎರಡು ವರ್ಷ ಕಲಿತಿದ್ದೇನೆ. ನನ್ನವರಿಗೆ ದೊಡ್ಡ ನೌಕರಿ ಮುಂಬೈಯಲ್ಲಿ. ಆದರೂ ಕಲೆಯ ಅಭಿರುಚಿಗಾಗಿ ಈ ವ್ಯವಸಾಯದಲ್ಲಿರುವೆ!”

ಕಲ್ಪನಾ ನನ್ನೆದುರಿಗೆ ತನ್ನ ಜೀವನದ ಧ್ಯೇಯಗಳನ್ನೆಲ್ಲ ಹೇಳಿದಳು. ಕುಲೀನ ಸ್ತ್ರೀಯರಿಗೆ ಸಿನಿಮಾ ಪ್ರಪಂಚದಲ್ಲಿ ಕೀರ್ತಿಯಿಲ್ಲವೆಂಬ ಮಾತನ್ನು ದೂರ ಸರಿಸಿ ನಾವಿಬ್ಬರೂ ಆ ದಿನ ಕಾಫಿಯನ್ನು ಕುಡಿದೆವು.

ಹಲವು ದಿನಗಳ ನಂತರ–! ಕಲ್ಪನಾ ತನ್ನ ಆಲ್ಬಮ್ ತೆರೆದು ಹಲವು ಫೋಟೋಗಳನ್ನು ತೋರಿಸುತ್ತಿದ್ದಳು ಅವಳು ಹಿಂದೆ ಅನೇಕ ಚಿತ್ರಗಳಲ್ಲಿ ಪಾತ್ರವಹಿಸಿದ ಸುಂದರ ಭಾವಚಿತ್ರಗಳು ಅಲ್ಲಿದ್ದುವು.

“ಹಾಗಾದರೆ ನೀವು ಮೊದಲಿನಿಂದಲೂ ನಟಿಯಾಗಿರುವಿರಿ?” ಎಂದು ನಾನು ಚಿತ್ರಗಳನ್ನು ನೋಡುತ್ತ ಕೇಳಿದೆ.

“ಅಹುದು. ಈಗ ದಿಗ್ಧರ್ಶಕರಾಗಿರುವ ಶ್ಯಾಮಸುಂದರ ಅವರೇ ನನ್ನನ್ನು ಮುಂದೆ ತಂದರು. ನಾನು ಹದಿನೈದು ವರ್ಷದವಳಿದ್ದಾಗಿನಿಂದಲೇ ಈ ಕ್ಷೇತ್ರದಲ್ಲಿ ಕಾಲಿಟ್ಟಿರುವೆ. ಈ ಕೆಲಸ ಮಾಡುತ್ತಲೇ ನಾನು ಕಾಲೇಜ ಶಿಕ್ಷಣ ಪಡೆದೆ “

“ಈ ಚಿತ್ರದಲ್ಲಿ ನಿಮ್ಮ ದಿಗ್ಧರ್ಶಕರ ಸಂಗಡ ಬೇರೆಯವರು ಇದ್ದಂತೆ ಕಾಣುವುದು?”

“ಇವಳೇ! ರೂಪಾ!! ಮೊನ್ನೆ ನೀವು ನೋಡಿದಿರಲ್ಲ? ಪಟ್ಟದರಾಣಿ ಆದವಳು ಇವಳೆ!”

ನನಗೆ ಅತ್ಯಾಶ್ಚರ್ಯವಾಯಿತು. “ಅವಳು ಕಪ್ಪಾಗಿ, ಗಿಡ್ಡಾಗಿ ಇರುವಳಲ್ಲ! ಇಲ್ಲಿ ಎಷ್ಟು ಸುಂದರ ಕಾಣುತ್ತಾಳೆ!”

“ಇದೆಲ್ಲ ಫೋಟೋಗ್ರಾಫರರ ಜಾಣತನ !! ನಿಮ್ಮನ್ನು ಮೇನಕೆಯಂತೆ ಚಿತ್ರಿಸಬೇಕಾಗಿದ್ದರೆ ಹೇಳಿ, ಚಿತ್ರಿಸಿ ತೋರಿಸುತ್ತಾರೆ!…. ಸಿನಿಮಾ ನೋಡಿದ ಜನರ ಕಲ್ಪನೆ ರೂಪಾದೇವಿಯ ರೂಪ ಬಹಳ ಅಪರೂಪವೆಂದು!… ಮೊನ್ನೆ ಅವಳು ಹೈದರಾಬಾದಿಗೆ ಹೋದಾಗ ಒಂದು ಅಂಗಡಿಯಲ್ಲಿದ್ದಳು…. ಜನ ಜಂಗುಳಿ ಜಾತ್ರೆಯಂತೆ ನೆರೆಯಿತು ಅವಳನ್ನು ನೋಡಲು… ತಾವು ಹುಚ್ಚರೆಂಬುದು ಜನರಿಗೆ ಹಿಂದುಗಡೆ ಗೊತ್ತಾಯಿತು!”

ನಾವಿಬ್ಬರೂ ಕೂಡಿ ಗಹಗಹಿಸಿ ನಕ್ಕೆವು. ಕಲ್ಪನಾ ಹೇಳಿದಳು. “ನೋಡಿ, ರೂಪಾದೇವಿಗೆ ನನ್ನ ಮೇಲೆ ಬಹಳ ಸಿಟ್ಟು! ಹಲವು ದಿನವಾಯಿತು! ಮುಖ್ಯ ರಾಣಿ ಪಾತ್ರ ಮಾಡುವದಿಲ್ಲವೆನ್ನುತ್ತಾಳೆ.”

“ಅದೇಕೆ?…. ಒಮ್ಮೆಲೆ ಏನಾಯಿತು?”

“ಒಮ್ಮೆಲೆ ಅಲ್ಲ. ಬಹಳ ವರ್ಷಗಳಾದವು! ಶ್ಯಾಮಸುಂದರರು ನನ್ನನ್ನು ಹೆಚ್ಚು ಮೆಚ್ಚುತ್ತಾರೆಂದು ಭ್ರಮೆ!”

“ಮುಖ್ಯ ನಾಯಕರು, ದಿಗ್ಧರ್ಶಕರು ನಿಮ್ಮನ್ನು ಮೆಚ್ಚಲೇಬೇಕಲ್ಲವೇ?” ನಗುತ್ತ ನಾನು ಕೇಳಿದೆ.

“ಅವರೇನೋ ಮೆಚ್ಚಬಹುದು! ಆದರೆ….?”

“ಸಂಶಯವೇಕೆ?”

“ಕಲಾಮಂದಿರದಲ್ಲಿ ಅವರನ್ನು ಪೂಜಿಸುವೆ! ನೀತಿಯ ಮಂದಿರ ದಲ್ಲಿ?”

“ಅವರದು ಮದುವೆಯಾಗಿಲ್ಲವೆ?”

ಬಾಗಿಲಲ್ಲಿ ಸಪ್ಪಳವಾಯಿತು, ಮುಂದೆ ಮಾಡಿದ ಬಾಗಿಲ ತೆರೆಯಿತು.

ಶ್ಯಾಮಸುಂದರರು ಬಂದು ಕಲ್ಪನಾಳ ತೀರ ಹತ್ತಿರವೇ ಕುಳಿತರು. ನಾನು ಎದ್ದು ಹೋಗಲು ಹವಣಿಸಿದೆ. ಆದರೆ ಕಲ್ಪನಾ ನನ್ನನ್ನು ಹೊರಗೆ ಬಿಡಲಿಲ್ಲ. ನನಗೇಕೋ ಅಲ್ಲಿ ಕೂಡುವುದು ಉಚಿತವೆನಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ಒಂದು ಕೆಲಸದ ನೆಪ ಮಾಡಿಕೊಂಡು ಹೊರಗೆ ಬಂದೆ. “ಪುಟ್ಟಳನ್ನು ಇಲ್ಲಿಗೆ ಕಳಿಸಿ” ಎಂದು ಕಲ್ಪನಾ ಪುನಃ ಪುನಃ ಹೇಳಿದಳು.

ಪುಟ್ಟಳಿಗೆ ನಾನು ಹೇಳಲು ಕಾರಣವೇ ಇರಲಿಲ್ಲ. ಕಲ್ಪನ ಅಂದರೆ ಅವಳಿಗೆ ಜೀವ. ತಾನಾಗಿಯೆ ಓಡಿ ಓಡಿ ಹೋಗುತ್ತಿದ್ದಳು. ತಿರುಗಿ ಮನೆಗೆ ಬರುವಾಗ ಅವಳು ಬರಿಗೈಯಿಂದ ಬರುತ್ತಲೇ ಇರಲಿಲ್ಲ. ಅವಳ ಕೈತುಂಬ ಏನಾದರೂ ತಿನ್ನುವ ಪದಾರ್ಥಗಳು ಇರುತ್ತಿದ್ದವು.

ಪುಟ್ಟಳ ಮೇಲಿನ ಅವಳ ಮಮತೆ ನೋಡಿ ನಾನು ಪುಟ್ಟಳ ಹುಟ್ಟು ಹಬ್ಬಕ್ಕೆ ಆಮಂತ್ರಣವನ್ನು ಕೊಟ್ಟೆ. ಆದಿನ ಸಮೀಚೀನವಾದ ಊಟವನ್ನು ತಯಾರಿಸಿದೆ. ಉಡುಗೊರೆಯಾಗಿ ಅನೇಕ ಬಟ್ಟೆಗಳು, ಆಟಿಗೆಗಳು ಬಂದವು. ಆದರೆ ಕಲ್ಪನಾ ಮಾತ್ರ ಬರಲಿಲ್ಲ. ಕೆಲಸದ ಮೂಲಕ ಬರುವದಾಗುವದಿಲ್ಲ ವೆಂದು ತಿಳಿಸಿದ್ದಳು.

ಆ ದಿನ ಸಂಜೆ ನಾನೇ ಕಲ್ಪನಾಳನ್ನು ಭೆಟ್ಟಿಯಾಗಲು ಹೋದೆ. ಅವಳು ಅಟ್ಟದ ಮೇಲೆ ಹೊರಬದಿಯಲ್ಲಿ ಹಲವು ಗುಲಾಬಿ ಹೂಗಳನ್ನು ಹಿಡಿದುಕೊಂಡು ನಿಂತಿದ್ದಳು. ನನ್ನನ್ನು ನೋಡಿದ ಕೂಡಲೇ ಕೈಮಾಡಿ ಕೂಗಿದಳು.

ನಾನು ಅಟ್ಟವನ್ನು ಏರಿ ಅವಳ ಕೋಣೆಗೆ ಹೋದೆ. ಎದುರಿಗಿರುವ ಸಂಗೀತ ಕಚೇರಿ ಜೋರಾಗಿ ಸಾಗಿತ್ತು. ಜನರೂ ಗುಂಪಾಗಿ ಕುಳಿತಿದ್ದರು. ನಾನು ಅತ್ತಕಡೆಗೆ ವಿಶೇಷ ಲಕ್ಷ್ಯಗೊಡದೆ ಕಲ್ಪನಾಳ ಜೊತೆಗೆ ಮಾತನಾಡುತ್ತ ಒಳಗೆ ಹೋದೆ.

ಕಲ್ಪನಾ ನಮ್ಮ ಮನೆಗೆ ಬರದೆ ಇದ್ದುದಕ್ಕೆ ಸಬಲ ಕಾರಣಗಳನ್ನು ಕೊಟ್ಟಳು. “ನಿಮಗೆ ಕೆಲಸದ ಭಾರ ಬಹಳವಾಗಿವೆಯೆಂದು ನನಗೆ ಗೊತ್ತು. ತೊಗೊಳ್ಳಿ, ಅದಕ್ಕೇ ಇಲ್ಲಿಗೇ ಎಲ್ಲ ತಂದಿರುವೆ” ಹೀಗೆಂದು ನಾನು ತಂದಿದ್ದ ಫಲಾಹಾರದ ಡಬ್ಬಿಯನ್ನು ಅವಳೆದುರಿಗೆ ಇಟ್ಟೆ. ಕಲ್ಪನಾ ಅತಿ ಸಂತೋಷದಿಂದ ಅವನ್ನೆಲ್ಲ ಸ್ವೀಕರಿಸಿದಳು.

“ನಿಮ್ಮ ಸಂಸಾರ ನೋಡಿ ನನಗೆ ಆನಂದವಾಗುತ್ತಿದೆ.” ಎಂದಳು ಕಲ್ಪನಾ. “ನಿಮ್ಮ ತಂದೆತಾಯಿಗಳು ಎಲ್ಲಿ ಇರುವರು?”

“ಇದ್ದಾರೆ! ತೌರುಮನೆಯಲ್ಲಿ… ಯಾವಾಗಾದರೊಮ್ಮೆ ಹೋಗಿ ಭೆಟ್ಟಿ ಯಾಗಿ ಬರುವೆ!”

“ನೋಡಿರಿ “ನನಗೆ ತಂದೆತಾಯಿಗಳ ಭೆಟ್ಟಿಯೇ ಇಲ್ಲ” “ಅಂದರೆ.?”

“ಸಂಶಯ ಪಟ್ಟುಕೊಳ್ಳಬೇಡಿರಿ, ತೀರಿಕೊಂಡಿಲ್ಲ. ಇದ್ದಾರೆ! ಆದರೆ ಅವರು ನನ್ನನ್ನು ಹೊರಗೆ ಹಾಕಿಬಿಟ್ಟಿದ್ದಾರೆ?”

“ಇದೇನು ಹೇಳುವಿರಿ”

“ಅಹುದು ನನ್ನ ನಾಟಕ ನೋಡಿ ಬೇಸತ್ತಿದ್ದಾರೆ.”

“ನಿಮಗೆ ಹೇಗೆ ಇನ್ನೂ ಬೇಸರಿಕೆ ಬಂದಿಲ್ಲ”

“ನಾನು ನಾಚು, ನಾಟಕ ಎಂದು ಹುಚ್ಚಳಂತೆ ಓಡಾಡಿದೆ. ಸಿನಿಮಾದಲ್ಲಿ ಸೇರಿದಾಗಿನಿಂದ ಮತ್ತಿಷ್ಟು ಕೋಪಗೊಂಡರು. ಮದುವೆ ಮಾಡಿದರೆ ಈ ಹುಚ್ಚು ಬಿಡುತ್ತದೇನೋ ಎಂದು ನೋಡಿದರು. ಯಾವುದೂ ಸಾಧ್ಯವಾಗಲಿಲ್ಲ. ಈಗ ನನ್ನ ಕೈಬಿಟ್ಟಿದ್ದಾರೆ. ಮನೆಗೆ ಬಂದರೆ ತಮ್ಮ ಹೆಸರು ಕೆಡುವದೆಂದು ಮನೆಗೆ ಬರಬೇಡವೆಂದು ಹೇಳಿದ್ದಾರೆ, ಅಲ್ಲ ನಿಮ್ಮ ಹೆಸರೂ ಈಗ ಊರಲ್ಲಿ ಕೆಟ್ಟಿಲ್ಲವೆ? ನನ್ನ ಜೊತೆಗೆ ಬರುವಿರಿ ಅಂದಮೇಲೆ?”

ಕಲ್ಪನಾ ಕೇಳಿದ ಪ್ರಶ್ನೆಯ ಬಗ್ಗೆ ವಿಚಾರಿಸಬೇಕಾಯಿತು. ಆಗ ವೇಶ್ಯಾಸ್ತ್ರೀಯರಷ್ಟೆ ಇಂಥ ವ್ಯಯಸಾಯದಲ್ಲಿ ಇರಬೇಕೆಂದು ಸಮಾಜದ ಮತ. ಕುಲೀನ ಸ್ತ್ರೀಯಳಾದ ಕಲ್ಪನಾ ಹೇಗೆ ಆ ಜಗತ್ತಿನಲ್ಲಿ ಇರಬಲ್ಲಳು?

ನಾನು ಸುಮ್ಮನೇ ಇದ್ದೆ.

“ನನ್ನ ಪ್ರಶ್ನೆ ನಿಮಗೆ ವಿಚಿತ್ರವಾಗಿ ಕಂಡಿರಬೇಕು. ನಮ್ಮ ನೀತಿ ಕೆಡಿಸಿ ಕೊಳ್ಳದ ಹೊರತು ಸ್ವಚ್ಛವಾಗಿ ಇರಲು ನಮಗೆ ಬರುವಂತಿಲ್ಲ….”

“ಹಲವು ದಿನಗಳ ಹಿಂದೆ ನೀವೇ ಹೇಳಿದ್ದಿರಿ. ಮನಸ್ಸು ಶುದ್ಧವಿದ್ದರೆ ಏನೂ ಹೆದೆರಿಕೆಯಿಲ್ಲವೆಂದು?”

“ಅಹುದು, ನನಗೆ ಹಾಗೆ ಅನಿಸಿದೆ. ಆ ದೃಷ್ಟಿಯಿಂದಲೆ ನಾನು ಇಷ್ಟು ವರ್ಷ ಕೆಲಸ ಮಾಡಿದ್ದೇನೆ. ಮೊನ್ನೆ ರಾಜರಾದ ಶ್ಯಾಮಸುಂದರ ಅವರನ್ನು ಅತ್ಯಂತ ಪ್ರೀತಿಸುನ ದೃಶ್ಯವಿತ್ತು. ನನ್ನ ಕಲ್ಪನೆ ಮೀರಿ ನಾನು ಕೆಲಸಮಾಡಿದೆ ಆದರೆ….?” ” ಆದರೆ…??”

“ಆದರೆ ಏನು? ಶ್ಯಾಮಸುಂದರ ಅವರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾರೆ. ನಿನ್ನನ್ನು ಬಿಟ್ಟಿರಲು ಅವರಿಗೆ ಮನವಿಲ್ಲ”

ಹೊರಗೆ ಖೊಳ್ಳನೆ ನಕ್ಕ ಧ್ವನಿ ಕೇಳಿಸಿತು. ಮತ್ತು ವಾದ್ಯಗಳು ಹಾಡುಗಳು ಆರಂಭವಾದವು.

ಕಲ್ಪನಾ ಹೇಳಿದಳು “ರೂಪಳ ಧ್ವನಿ ಎಷ್ಟು ಮಧುರವಾಗಿದೆ ಕೇಳಿ. ಈ ಧ್ವನಿಗಾಗಿ ಶ್ಯಾಮಸುಂದರ ನಾಗರಹಾವು ಆಗಿದ್ದಾರೆ. ಧ್ವನಿಗಾಗಿ ಅವಳು…”

“ರೂಪಕ್ಕಾಗಿ ನೀವು!” ಎಂದು ನಾನು ವಾಕ್ಯವನ್ನು ಪೂರ್ತಿಗೊಳಿಸಿದೆ.

ಕಲ್ಪನಾ ವಿಚಿತ್ರ ನಗೆ ನಕ್ಕಳು! ಅದರ ಸಂಗಡ ನಿಟ್ಟುಸಿರನ್ನು ಬಿಟ್ಟಳು!

“ನೋಡಿರಿ ನೀವೂ ಕಲಿತವರಿರುವಿರಿ. ಈ ಗುಲಾಬಿ ಹೂವಿನ ಸುತ್ತ ಎಷ್ಟು ಮುಳ್ಳುಗಳಿವೆ. ಏಕೆ ಹೇಳಿರಿ ನೋಡೋಣ.”

ನಾನು ಶಾಲೆಬಿಟ್ಟಮೇಲೆ ಶಿಕ್ಷಕರು ಕೇಳುವ ಇಂಥ ಪ್ರಶ್ನೆಗಳು ನನ್ನ ಕಿವಿಯ ಮೇಲೆ ಬಿದ್ಧಿರಲಿಲ್ಲ. ನಾನು ಮುಗುಳುನಗೆ ನಗುತ್ತಲೆ ಹೇಳಿದೆ. “ನೀವು ಗುಲಾಬಿ ಹೂ! ನಿಮ್ಮ ಹತ್ತಿರ ಯಾರೂ ಬರಬಾರದೆಂದು ಆ ಮುಳ್ಳುಗಳು !”

ಉತ್ತರ ಹೇಳಿ ಮತ್ತೊಮ್ಮೆ ನಕ್ಕೆ.

“ನಗುವ ಕಾರಣವಿಲ್ಲ. ಇದೇನು ಕಲ್ಪನೆಯ ಉತ್ತರವಲ್ಲ!” ಕಲ್ಪನಾ ಒಮ್ಮೆ ನಿಡಿದಾದ ಉಸಿರುಬಿಟ್ಟಳು. ಮತ್ತೊಮ್ಮೆ ಗಂಭೀರವಾಗಿ ಈ ಮಾತು ಹೇಳಿದಳು. ಇದರಿಂದ ಯಾವುದೋ ಗೂಢಾರ್ಥವಿದೆಯೆಂದು ಮಾತ್ರ ನನಗೆ ಅನಿಸಿತು.

“ಹೂವಿದ್ದಲ್ಲಿ ಗುಂಗಿಗಳು ಬರುವವೆ! ಶ್ಯಾಮಸುಂದರರು ಅದ್ಭುತ ಕಲಾ ಪ್ರೇಮಿಗಳು. ಅವರು ಹೀಗಾಗುವರೆಂದು ನನಗೆ ಅನಿಸಿರಲಿಲ್ಲ. ಏನು ಮಾಡ ಬೇಕು?”

ಸುಂದರವಾದ ಚಂದ್ರಕಳೆಯ ಮೇಲೆ ಕಪ್ಪು ಮೋಡಗಳು ಓಡಾಡಿದಂತೆ ಕಲ್ಪನಾಳ ಮುಖ ಮುದ್ರೆ ನೋಡಿದ ಕೂಡಲೆ ಅನಿಸಿತು!

ನಾವಿಬ್ಬರೂ ಕೂಡಿ ಕೆಳಗಿಳಿದು ಬರುವಾಗ ಇನ್ನೂ ರೂಪಾದೇವಿಯ ಸಂಗೀತದ ಧ್ವನಿ ಕೇಳಿಸುತ್ತಿತ್ತು. “ರೂಪಾಳ ನಿರ್ಧಾರ ಏನಾಯಿತು?” ಎಂದು ಕೇಳಿದೆ.

“ನಾನು ಏನು ಹೇಳಲಿ? ಅಡಕೊತ್ತಿನಲ್ಲಿ ಸಿಕ್ಕಿರುವೆ. ಹಲವು ವರ್ಷಗಳ ಹಿಂದೆ ಅವಳ ಸಂಗೀತಕ್ಕೆ ಮರುಳಾಗಿ ಶ್ಯಾಮಸುಂದರರು ಅವಳಿಗೆ ನಟಿಯ ಕಾರ್ಯವನ್ನು ಕೊಟ್ಟರು. ಈ ಕಲೆಯಲ್ಲಿ ಪ್ರವೀಣಳನ್ನಾಗಿ ಮಾಡಿದರು. ಮುಂದೆ ಪ್ರಣಯ ಹೆಮ್ಮರನಾಗಿ ಬೆಳೆಯಿತು. ಆಗ ರೂಪಳು…”

“ರೂಪಳ ಮದುವೆಯಾಗಿದೆ ಏನು?….”

“ಅವಳು ಯಾರು ಎಂದು ಮಾಡಿರುವಿರಿ?” ಕಲ್ಪನಾ ಅಚ್ಚರಿಯನ್ನು ವ್ಯಕ್ತಪಡಿಸಿ ಕೇಳಿದಳು. “ಲಗ್ನವಾದಂತೆಯೇ ಇದ್ದಾಳೆ!”

“ಅಂತೂ ನೀವೀಗ ಶೂಟಿಂಗ ನಡೆಸಿರುವ ಸಿನಿಮಾ ನಿಜ ಜೀವನದ್ದೇ ಆಗಿದೆ!”

“ಅಹುದು! ನಿಜವಾಗಿಯೂ…”

ನಾವು ಮೆಟ್ಟಿಲುಗಳನ್ನು ಇಳಿದು ಗೇಟಿನ ಬಳಿ ಬಂದೆವು. “ನಿಮ್ಮನ್ನೂ ಪುಟ್ಟಳನ್ನು ನೋಡಿದಾಗಿನಿಂದ ನನಗೇಕೋ ಸಂಕಟವಾಗುತ್ತಿದೆ. ಬಹಳ ಸಂಕಟವಾಗುತ್ತಿದೆ! ಏನು ಮಾಡಲಿ?” ಎಂದು ಕಲ್ಪನಾ ಕೇಳಿದಳು.

“ಹೀಗೇಕೆ ನೀವು ಈ ದಿನ ಏನು ಮಾಡಲಿ? ಏನು ಮಾಡಲಿ? ಎಂದು ಕೇಳುವಿರಿ? ಅಂಥ ಪ್ರಸಂಗ ಏನು ಬಂದಿದೆ?”

“ಇದೆ! ನಾವೇನು ಇಲ್ಲಿ ಬಹಳ ದಿನ ನಿಲ್ಲುವುದಿಲ್ಲ. ಹೋಗುವ ಮುಂದೆ ಭೆಟ್ಟಿಯಾಗಿಯೆ ಹೋಗುತ್ತೇನೆ”

ನಾನು ಕಲ್ಪನಾಳನ್ನು ಅಗಲುವ ಹೊತ್ತಿಗೆ ಅವಳ ಈ ಮಾತುಗಳನ್ನು ಹೇಳಿದ್ದಳು. ಸಿನಿಮಾದಲ್ಲಿರುವ ನಟನಟಿಯರಿಗೆ ಯಾವಾಗಲೂ ಸಂತೋಷ, ಸುಖ ಇರುವುದೆಂದು ತಿಳಿದಿದ್ದೆ. ಆದರೆ ಆ ದಿನ ಕಲ್ಪನಾಳ ಸಂಗಡ ಮಾತನಾಡಿದಂದಿನಿಂದ ಅವರಿಗೂ ದುಃಖವಿದೆ, ಅವರಿಗೂ ಧ್ಯೇಯವಿದೆ, ಅವರಿಗೂ ಸಂಸಾರವಿದೆ ಎಂಬುದು ನನಗೆ ಮನವರಿಕೆಯಾಯಿತು.

ಇದಾದ ಹಲವು ದಿನಗಳಲ್ಲಿಯೆ ಒಂದು ದಿನ ಮಧ್ಯಾಹ್ನ ನಮ್ಮ ಮನೆ ಯೆದುರಿಗೆ ಮೋಟಾರು ನಿಂತ ಸಪ್ಪಳವಾಯಿತು. ಬಿಸಿಲು ದಿನಗಳಿದ್ದುದರಿಂದ ನನ್ನ ಮನೆಗೆಲಸ ಮುಗಿಸಿ ನಾನು ಅದೇ ಆಗ ಅಡ್ಡಾಗಿದ್ದೆ. ಮೋಟಾರ ಸಪ್ಪಳ ಕೇಳಿ ಎದ್ದು ಕುಳಿತೆ. ಕೂಡಲೇ ಬಾಗಿಲು ಬಡದ ಸಪ್ಪಳವಾಯಿತು. ಬಾಗಿಲು ತೆರೆದು ನೋಡುತ್ತೇನೆ, ಕಲ್ಪನಾ!

“ಇದೇನು ಈ ಹೊತ್ತಿನಲ್ಲಿ?”

ಕಲ್ಪನಾ ಲಗುಬಗೆಯಿಂದ ಒಳಗೆ ಬಂದಳು. “ಪುಟ್ಟು ಎಲ್ಲಿ?” ಎಂದು ಕೇಳಿದಳು.

ಪುಟ್ಟು ಅದೇ ಆಗ ಮಲಗಿದ್ದಳು. ಕಲ್ಪನಾ ಅಲ್ಲಿಗೇ ಹೋಗಿ ಲಟ ಲಟನೆ ಮುದ್ದು ಕೊಟ್ಟಳು. “ನಾನು ಬರುತ್ತೇನೆ ನನ್ನ ನೆನಪಿರಲಿ” ಎಂದು ಹೇಳಿ ತನ್ನ ಬೂಟು ಹಾಕತೊಡಗಿದಳು.

ಅವಳ ವರ್ತನೆ ವಿಚಿತ್ರವೆನಿಸಿತು. “ಇದೇನು ಇಷ್ಟು ಗಡಿಬಿಡಿ; ನಿಲ್ಲಿರಿ. ಚಹ ಮಾಡಿಕೊಡುತ್ತೇನೆ.”

“ಇಲ್ಲ ಈಗ ವೇಳೆಯಿಲ್ಲ.”

ಮೋಟಾರ ಹಾರ್‍ನ ಬಾರಿಸಿತು!

“ಬರುತ್ತೇನೆ ನಮಸ್ಕಾರ!” ಕಲ್ಪನಾ ಹೇಳಿದಳು.

ನಾನು ಎಷ್ಟು ಜುಲುಮೆ ಮಾಡಿದರೂ ಕೇಳಲಿಲ್ಲ. “ನಾನು ಊರಿಗೆ ಹೋಗಬೇಕಾಗಿದೆ ನೋಡಿರಿ. ನಿಮ್ಮ ಮುಂದೆ ಇಷ್ಟೇ ಹೇಳುವೆ. ಶ್ಯಾಮ ಸುಂದರರನ್ನೂ ರೂಪಳನ್ನೂ ಅವರವರ ಪಾಲಿಗೆ ಬಿಟ್ಟುಬಿಟ್ಟಿದ್ದೇನೆ”

“ಅಂದರೆ ಕೊನೆಗೆ ಅವರ ಸಂಗಡ ಜಗಳವಾಡಿದಿರಾ?”

“ಮನೆಯಲ್ಲಿ ನಮ್ಮವರಿಗೆ ಜ್ವರವೆಂದು ಹೇಳಿ ಹೊರಟಿರುವೆ.”

ಮೋಟಾರ ಹಾರ್‍ನ ಮತ್ತೆ ಕೇಳಿಸಿತು.

ನಗುತ್ತ, ನಮಸ್ಕಾರ ಮಾಡುತ್ತಾ ಕಲ್ಪನಾ ಮೋಟಾರಿನಲ್ಲಿ ಕುಳಿತಳು. ಮೋಟಾರು ಓಡಿತು! ಅದರ ಹಿಂದಿನ ಧೂಳಿ ಅವಳ ಆಕೃತಿಯನ್ನು ಮುಸುಗಿ ಬಿಟ್ಟಿತು!

ಅವಳು ನನ್ನ ಸುಖದ ಭಾಗವನ್ನು ಕಿತ್ತುಕೊಂಡು ಮೋಟಾರಿನಲ್ಲಿಟ್ಟುಕೊಂಡು ಹೋದಂತೆ ನನಗೆ ಬಹಳ ದಿನ ಅನಿಸಿತು.

  • * * * *

ಎಷ್ಟೋ ತಿಂಗಳುಗಳ ನಂತರ! ನಾನು ಪತ್ರಿಕೆಯನ್ನು ಓದುತ್ತಿದ್ದೆ! ಅದರಲ್ಲಿ ಒಂದು ವಿಶೇಷ ಸುದ್ದಿ ನನ್ನನ್ನು ಆಕರ್ಷಿಸಿತು. “ಸುಪ್ರಸಿದ್ಧ ಸಿನಿಮಾ ನಟಿ ಕಲ್ಪನಾದೇವಿಯ ಖಟ್ಲೆ ! ಬಾಂಡು ತಪ್ಪಿಸಿದ್ದಕ್ಕಾಗಿ ಹತ್ತು ಸಾವಿರ ರೂಪಾಯಿಗಳನ್ನು ದಿಗ್ದರ್ಶಕರಾದ ಶ್ಯಾಮಸುಂದರ ಅವರಿಗೆ ಕೊಡ ಬೇಕಾಯಿತು……”

ಅದೇ ದಿನ ನನ್ನ ಟೇಬಲ್ಲಿನ ಮೇಲೆ ಕಲ್ಪನಾಳ ಪತ್ರವೊಂದು ಇತ್ತು. ತನಗೆ ಒಂದು ಮಗು ಹುಟ್ಟಿರುವುದಾಗಿಯೂ ಅದಕ್ಕೆ ಪುಟ್ಟಾ ಎಂದು ಕರೆಯುತ್ತಿರುವುದಾಗಿಯೂ ಬರೆದಿದ್ದಳು!


Previous post ಚಂದ್ರ
Next post ಹನಿಗಳು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…