ನಟಿ

ನಟಿ

ಪಕ್ಕದ ಮನೆ ಹುಡುಗ ಬಂದು ನಿಮಗೆ ಫೋನ್ ಬಂದಿದೇರಿ ಎಂದು ಹೇಳಿ ಓಡುತ್ತಾನೆ. ಅವನ ಹಿಂದೆಯೇ ಓಡುತ್ತೇನೆ. ಫೋನ್‌ಕಾಲ್ ಬಂತೆಂದರೆ ಮೈಯ ನರನಾಡಿಗಳು ಕಾರಂಜಿಯಾಗುತ್ತವೆ. ಜಿಂಕೆಯಂತೆ ಓಡುತ್ತೇನೆ. ಪಕ್ಕದ ಮನೆಯಾತ ಇಂಜಿನಿಯರ್, ಒಂದಿಷ್ಟು ಸಭ್ಯನೆ. ‘ನಿಮಗೆ ಫೋನ್ ಇದೆ ಕಣ್ರಿ’ ಅನ್ನುತ್ತಾನೆ. ಪಕ್ಕದ ಮನೆಯಾಕೆ ಮುಖ ಊದಿಸಿಕೊಂಡಿರುವುದನ್ನು ಗಮನಿಸುತ್ತೇನೆ. ಆದರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ರಿಸೀವರ್ ಎತ್ತುತ್ತೇನೆ. ಆ ಕಡಿಯಿಂದ ಅಸಿಸ್ಟೆಂಟ್ ಡೈರಕ್ಟರ್ ಮಣಿ ಮಾತನಾಡುತ್ತಾನೆ. ಈಗಲೇ ಬಂದು ಡೈರಕ್ಟರನ್ನ ನೋಡಬೇಕಂತೆ ಎಂದು ಆತುರಪಡಿಸುತ್ತಾನೆ. ನಮ್ಮ ಬಳಿ ಏನು ಕಾರಿದೆಯೆ? ಆಟೋ ಹಿಡ್ಕೊಂಡು ಒರಡ್ಬೇಕು. ದುಡ್ಡು ಬೇಕು ತಲೆ ನರಗಳು ಸಿಡಿಯುತ್ತವೆ. ನನ್ನ ಮೌನ ಅವನಿಗೆ ಅರ್ಥವಾಗದಂತದ್ದು.

“ಏನ್ ಯೋಚ್ನೆ ಮಾಡ್ತಿದ್ದೀರಿ…… ಹೊರಡಿ, ಡೈರಕ್ಟರ್‍ಗೆ ಏನ್ ಹೇಳ್ಳಿ?” ಒಂದೇ ಸಮನೆ ಧಾವಂತ, ಅವಕಾಶ ಕಳೆದುಕೊಳ್ಳುವಂತಿಲ್ಲ. ಯೋಚಿಸಲೂ ಸಮಯವಿಲ್ಲ. “ರಾತ್ರಿ ಏಳಾಗಿದೆ. ಮತ್ತೆ ಹಿಂದಿರುಗಿ ಬರೋಕೆ…..” ರಾಗ ಎಳೆಯುತ್ತೇನೆ. “ಅಯ್ಯೋ ಕಾರಲ್ಲಿ ಕಳಿಸಿಕೊಡ್ತೀನಿ ಬನ್ನಿ, ಸೆಕೆಂಡ್ ಹಿರೋಯಿನ್ ರೋಲ್ ಕಣ್ರಿ, ಬರ್‍ತಿರೋ ಇಲ್ವೋ” ಅಂತಾ ಬೇಸರಿಸುತ್ತಾನೆ. ಮತ್ತೆ ಗುಂಜಾಡದೆ “ಆಯ್ತು ಸಾರ್” ಅನ್ನುತ್ತೇನೆ. ಆ ಕಡೆ ರಿಸೀವರ್ ಇಟ್ಟ ಶಬ್ಧ. ನಿಧಾನವಾಗಿ ರಿಸೀವರ್ ಇಡುತ್ತೇನೆ. “ಯಾರ್‍ದೂರೀ ಫೋನು?” ಇಂಜನಿಯರ್‌ಗೆ ಕುತೂಹಲ. “ಸಿನಿಮಾದವರ್‍ದು” ಅನ್ನುತ್ತೇನೆ. “ಅದು ಗೊತ್ತೇ ಇದೆ…. ಡೈರಕ್ಟರ್ ಯಾರು?” ಆತನದು ಕುತೂಹಲ. ನನಗೋ ಕಿರಿಕಿರಿ.

“ಡೈರಕ್ಟರ್ ವಾಸು ಅಂತ.”

“ಒಳ್ಳೆ ಫೇಮಸ್ ಡೈರಕ್ಟರ್ ಬಿಡ್ರಿ…. ಹೊಡೆದ್ರಿ ಚಾನ್ಸು” ನನ್ನನ್ನೇ ನೆಕ್ಕುವಂತೆ ನೋಡುತ್ತಾ ಕಿವಿಯವರೆಗೂ ಹಲ್ಲು ಗಿಂಜುತ್ತಾನೆ.

“ಅಯ್ಯೋ ಫೋನು ಮಾಡಿದವರೆಲ್ಲಾ ಪಾತ್ರ ಕೊಟ್ಟಿದ್ದರೆ ಈಕೆ ಮನೆಗೇ ಫೋನ್ ಹಾಕಿಸೋಳು…… ಪಾಪ, ಒಂದೆರಡು ನಿಮಿಷ ಬಂದು ಹೋಗೋ ಪಾತ್ರಕ್ಕೆ ಏನ್‌ತಾನೆ ಸಿಗುತ್ತೆ. ಈಕೆ ತನ್ನ ಮೇಕಪ್‌ಗೆ ಸಾಲ ಮಾಡ್ಬೇಕಾಗುತ್ತೆ” ಇಂಜಿನಿಯರ್ ಹೆಂಡತಿ ಮಾತಿನಲ್ಲಿರುವುದು ಅನುಕಂಪವೋ, ಅಸೂಯೆಯೋ, ಅಸಹನೆಯೋ, ಅರ್ಥವಾಗುವುದಿಲ್ಲ. ನನಗದು ಬೇಕೂ ಇಲ್ಲ. ಜನರ ಇಂತಹ ಮಾತುಗಳಿಗೆ ಸ್ಪಂದಿಸುವುದನ್ನೇ ಕಳೆದುಕೊಂಡುಬಿಟ್ಟಿದ್ದೇನೆ.

“ಅದೇನೇ ಹೀಗಂತಿ, ಈಗ ಈಕೆ ಹೀರೋ ತಂಗಿ ಪಾತ್ರಕ್ಕೆ ಬಡ್ತಿ ಪಡೆದಿಲ್ವೇ…… ನಾಳೆ ಹಿರೋಯಿನ್ನೂ ಆಗಬಹುದು” ಇಂಜಿನಿಯರ್ ಗಂಡಲ್ಲವೆ? ಹೆಣ್ಣಿನ ಬಗ್ಗೆ ಕರುಣೆ ಸಹಜ. ಸುಂದರಿ, ಸಿನಿಮಾ ನಟಿ ಬೇರೆ.

“ಕನ್ನಡದ ಹುಡಿಗೀರ್‍ಗೆ ಹಿರೋಯಿನ್‌ಗಳಾಗೋ ಮುಖ ಇದ್ದಿದ್ದರೆ ಹಿಂದಿಯವು ಇಲ್ಲಿಗ್ಯಾಕೆ ಬಂದು ಕುಣಿತಿದ್ವು ….. ಪಾಪ ನಮ್ಮ ಜನಕ್ಕೆ ನಮ್ದು ಅನ್ನೋ ಅಭಿಮಾನ ಎಲ್ಲಿದೆ?” ಆಕೆ ಕಟುವಾಗಿ ಆಡಿದರೂ ಆ ಮಾತಿನಲ್ಲಿನ ಸತ್ಯ ನನ್ನ ಉತ್ಸಾಹ ಬತ್ತಿಸುತ್ತದೆ. ‘ಬರ್‍ತೀನ್ರಿ’ ಎಂದಂದು ಹೊರ ಬರುತ್ತೇನೆ. ಆಕೆ ಗಂಡನ ಮೇಲೆ ಹರಿಹಾಯುತ್ತಿರುವುದು ಕೇಳುತ್ತದೆ.

ನಿರ್‍ಮಾಪಕರಿಗೆ ನಿರ್‍ದೇಶಕರಿಗೆ ಅನಿವಾರ್ಯವಾಗಿ ಪಕ್ಕದ ಮನೆ ಫೋನ್ ನಂಬರ್ ಕೊಟ್ಟುಬಿಟ್ಟಿದ್ದೇನೆ. ಬೆಂಗಳೂರಲ್ಲೇ ಇರೋ ನಿಮಗೆ ಟೆಲಿಗ್ರಾಂ ಕೊಟ್ಟರೆ ಇನ್‌ಟೈಂಗೆ ತಲುಪಲ್ಲ ಕಣ್ರಿ. ಫೋನ್ ಹಾಕಿಸ್ರಿ ಮನೆಗೆ ಎಂಬ ಸಿನಿಮಾದವರ ಆಗ್ರಹವನ್ನು ತಾಳಲಾರದೆ ಪಕ್ಕದ ಮನೆ ಫೋನ್ ನಂಬರ್ ಕೊಟ್ಟೆ. ಪಕ್ಕದ ಮನೆಯಾತನಿಗೆ ಸಿನಿಮಾ ಬಗ್ಗೆ ಕ್ರೇಜ್ ಇದೆ. ಮನೆಯಾಕೆಗೂ ಇರಬಹುದು. ಆದರೂ ನಮ್ಮಂತವರು ಆಕೆಯ ಮನೆಗೆ ಹೋಗುವುದು ಹಿಡಿಸಿದಂತೆ ಕಾಣದು. ಇದಕ್ಕೆ ಗಂಡನ ಬಗ್ಗೆ ಇರುವ ಅಪನಂಬಿಕೆಯೂ ಕಾರಣವಿದ್ದೀತು. ಇಂತಹ ಅನಿವಾರ್ಯಗಳ ಮಧ್ಯೆಯೇ ನಾಲ್ಕು ವರ್ಷಗಳಿಂದ ಬದುಕುತ್ತಿದ್ದೇನೆ.

ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸುತ್ತೇನೆ. ಆಕೆ ಎದುರುಮನೆಗೆ ಹೋಗಿ ಇಪ್ಪತ್ತು ರೂಪಾಯಿ ಹೊಂದಿಸಿಕೊಂಡು ಬರುತ್ತಾಳೆ, “ಸಿಟಿಬಸ್ ಹಿಡಿಯೋಣ” ಎನ್ನುತ್ತೇನೆ. ಬೇಡ ಕಣೆ ಲೇಟಾಗುತ್ತೆ ಅನ್ನುವ ಅಮ್ಮ ಆಟೋ ಹಿಡಿಯುತ್ತಾಳೆ, ಆಟೋ ಓಡುತ್ತದೆ. ಮನಸ್ಸಿನದು ಅದಕ್ಕಿಂತ ವೇಗ, ಈ ಅಮ್ಮನ ಸಾಂತ್ವನ ಸಹಕಾರ ಪ್ರೀತಿ ಎದೆಗಾರಿಕೆ ನನ್ನ ಪಾಲಿಗಿಲ್ಲದೆ ಹೋಗಿದ್ದರೆ, ನಾನೆಂದೋ ಈ ಜನಗಳ ಮಧ್ಯೆ ಶವವಾಗಿ ಬಿಡುತ್ತಿದ್ದೆ. ಆದರೆ ಅಮ್ಮ ದಿಟ್ಟೆ. ಅಂಜುಬುರುಕಿಯಲ್ಲ. ನಾಟಕ ಕಂಪನಿಗಳಲ್ಲಿ ಮೆರೆದ ಹೆಂಗಸು. ರಂಗದ ವಾತಾವರಣದಲ್ಲೇ ಹುಟ್ಟಿ ಬೆಳೆದ ನನಗೆ ಅಮ್ಮನಂತೆ ನಟಿಯಾಗಬೇಕೆಂಬ ಆಶೆ ಚಿಗುರೊಡಿದದ್ದು ಆಕಸ್ಮಿಕವೇನಲ್ಲ. ಆಕೆಯ ‘ಸದಾರಮೆ’, ‘ಮಣಿ ಮಂಜರಿ’, ‘ದ್ರೌಪದಿ’, ‘ಮಂಡೋದರಿ’, ‘ಕಿತ್ತೂರು ಚೆನ್ನಮ್ಮ’ ಪಾತ್ರಗಳು ನನಗೆ ಅಚ್ಚುಮೆಚ್ಚು. ನಾನೂ ವಯಸ್ಸಿಗೆ ಬರುತ್ತಲೆ ಬಣ್ಣ ಹಚ್ಚಿದೆ. ತಾಯಿಯ ತಕರಾರೇನೂ ಇರಲಿಲ್ಲ. ಇನ್ನು ಆಗ ನಮ್ಮ ಜೊತೆಗಿದ್ದ ಹಾರ್‍ಮೋನಿಯಂ ಮೇಷ್ಟ್ರು ಗಿರಿರಾಜುವೇ ನನ್ನ ಅಪ್ಪ ಎಂದು ತಿಳಿದಿದ್ದೆ. ಅಪ್ಪ ಎನ್ನುತ್ತಿದ್ದೆ. ಅವನೂ ಅಮ್ಮನು ಗಂಡಹೆಂಡಿರ ಹಾಗೇ ಇದ್ದರು. ಅವನಿಗೆ ಹೆಂಡತಿ ಮಕ್ಕಳು ಇರುವುದೂ ಗೊತ್ತಿತ್ತು. ಕ್ಯಾಂಪ್ ಕ್ಲೋಸ್‌ನಲ್ಲಿ ಹೋಗಿ ಬರುತ್ತಿದ್ದ. ಅವನಿಗೆ ಅಮ್ಮನಷ್ಟೇ ಅಲ್ಲ ಕಂಪನಿ ಮನೆಯ ಮುಸುರೆ ತಿಕ್ಕುವ ಹೆಂಗಸರ ಸ್ನೇಹವೂ ಇತ್ತು. ಆದರೂ ಅಂವಾ ಒಳ್ಳೆ ಕಲಾವಿದ. ನನಗೆ ಸಂಗೀತ ನೃತ್ಯ ಅಭಿನಯ ಏನೆಲ್ಲಾ ಹೇಳಿಕೊಟ್ಟವ ಅವನೇ. ಹೀಗಾಗಿ ನಾನವನನ್ನು ಗೌರವಿಸುತ್ತಿದ್ದೆ. ಅಮ್ಮ ಅವನೊಂದಿಗೆ ಸದಾ ಜಗಳ ಕಾಯುತ್ತಲೇ ಇದ್ದಳು. ಅವನ ಖರ್ಚುಗಳಿಗೆಲ್ಲಾ ಇವಳೇ ಹಣ ಕೊಡುತ್ತಿದ್ದಳು. ಇದೊಂದು ಧರ್ಮ ಕರ್ಮ ಸಂಯೋಗ ಕಣೆ ಅಂತ ಬಿಕ್ಕುತ್ತಿದ್ದಳು. ಅಮ್ಮನಿಗೆ ನಾನು ಕಂಪನಿ ನಟಿಯಾಗುವುದು ಇಷ್ಟವಿರಲಿಲ್ಲ. ನಾಟಕಗಳ ನೂರನೇ ದಿನದ ಸಮಾರಂಭಕ್ಕೆ ಆಗಮಿಸುತ್ತಿದ್ದ ನಟರು, ನಿರ್‍ದೇಶಕರುಗಳಿಗೆ ನನ್ನನ್ನು ತೋರಿಸಿ ಅಮ್ಮ, “ನನ್ನ ಮಗಳಿಗೊಂದು ಛಾನ್ಸ್ ಕೊಡಿ ಸಾ” ಅಂತ ದುಂಬಾಲು ಬೀಳುತ್ತಿದ್ದಳು. ಅವರು ಭರವಸೆ ಕೊಡುತ್ತಿದ್ದರು. ವಿಳಾಸ ತೆಗೆದುಕೊಳ್ಳುತ್ತಿದ್ದರು. ಎಂದೂ ಕರೆ ಬರುತ್ತಿರಲಿಲ್ಲ. “ಬೆಂಗಳೂರಲ್ಲೇ ಬಂದು ಇರಬೇಕ್ರಮ್ಮ ಡೈರಕ್ಟರ್‍ನ, ಪ್ರಡ್ಯೂಸರ್‍ಸ್‍ನ ಆಗಾಗ ನೋಡ್ತಾ ಇರ್‍ಬೇಕು” ಎಂದು ಕೆಲವರು ತಿಳಿಹೇಳಿದರು. ನನಗೇನೋ ನಾಟಕದಲ್ಲಿ ಹಿರೋಯಿನ್ ಪಾತ್ರಗಳು ಸಿಕ್ಕವು. ಒಳ್ಳೆ ಸಂಬಳ, ನನ್ನ ಮತ್ತು ಜಯಣ್ಣನ ಜೋಡಿ ‘ಕ್ಲಿಕ್’ ಆಗಿತ್ತು. ಅವನೂ ಒಳ್ಳೆ ಸುಂದರಾಂಗ, ಒಳಗೇ ನನ್ನನ್ನು ಪ್ರೀತಿಸುತ್ತಾನೆಂಬ ಗುಮಾನಿ. ಅಭಿನಯದಲ್ಲೂ ಓಕೆ. ಆದರೆ ಅವನಿಗೆ ಸಿನಿಮಾ ಗೀಳಿರಲಿಲ್ಲ. ಗೌರವ ಇರೋ ಜಾಗದಲ್ಲೇ ಮರ್ಯಾದೆಯಾಗಿದ್ದು ಬಿಡಬೇಕು ಎಂದು ನನಗೆ ತಿಳಿಸಿ ಹೇಳುತ್ತಿದ್ದ. ಅವನಿಂದ ನಾನೆಲ್ಲಿ ದೂರವಾಗಿಬಿಡುತ್ತೇನೋ ಎಂಬ ಸ್ವಾರ್ಥವೂ ಇದ್ದೀತು. ಅವನ ಮಾತೆಂದೂ ನನಗೆ ಪ್ರಿಯವಾಗಲಿಲ್ಲ. ಸಿನಿಮಾ ನಾಯಕಿಯಾಗುವ ಎಲ್ಲಾ ಅರ್ಹತೆಗಳಿರುವ ನಾನೇಕೆ ಅವಕಾಶ ವಂಚಿತಳಾಗಲಿ ಎಂಬ ಆತುರವಿತ್ತು. ಕೊನೆಗೆ ಅಮ್ಮ ಕಷ್ಟವೋ ಸುಖವೋ ಎಂದು ಗಟ್ಟಿ ನಿರ್ಧಾರ ಮಾಡಿ ಕೂಡಿಟ್ಟ ಪುಟ್ಟ ಗಂಟಿನೊಂದಿಗೆ ಬೆಂಗಳೂರಿಗೆ ಕರೆತಂದು ಪುಟ್ಟ ಮನೆಯೊಂದನ್ನು ಹಿಡಿದಳು. ಅಂದಿನಿಂದ ಈತಕನ ಸಿನಿಮಾ ನಿರ್ದೆಶಕರ ಮನೆಗಳಿಗೆ, ಸ್ಟುಡಿಯೋಗಳಿಗೆ ಅಲೆಯುವುದೇ ದಿನಚರಿಯಾಗಿ ಹೋಗಿದೆ.

ಬಂದ ಹೊಸತರಲ್ಲಿ ಬರೀ ಭರವಸೆಗಳೇ ಉಂಡೆವು. ಹೊದ್ದು ಮಲಗಿದೆವು. ಆಲ್ಬಂನಲ್ಲಿ ನನ್ನ ಫೋಟೋಗಳನ್ನು ನೋಡಿದ ಹಲವರು “ಒಳ್ಳೆ ಫೋಟೋಜೆನಿಕ್ ಫೇಸ್ ಇದೆ. ನಮ್ಮ ಮುಂದಿನ ಪಿಕ್ಚರ್‍ಗೆ ನೋಡೋಣ. ಈಗ ತೆಗಿತಿರೋ ಸಿನಿಮಾ ಅರ್ಧ ಆಗಿದೆ. ಸಣ್ಣ ಪುಟ್ಟ ಪಾತ್ರ ಮಾಡಿಸ್ಬೇಡಿ ಅಮ್ಮಾ, ಹಿರೋಯಿನ್ ಆಗೇ ಇಂಟ್ರಡ್ಯೂಸ್ ಮಾಡೋಣ” ಅಂತ ರೀಲ್ ಬಿಟ್ಟು ಆಕಾಶದಲ್ಲಿ ತೇಲಿಬಿಟ್ಟರು. ಇದರಿಂದ ಏನಾಯಿತೆಂದರೆ ನನಗೆ ಹಿರೋಯಿನ್ ಚಾನ್ಸೂ ಸಿಗಲಿಲ್ಲ. ಸಣ್ಣಪುಟ್ಟ ಪಾತ್ರಗಳೂ ದಕ್ಕಲಿಲ್ಲ. ಒಂದು ವರ್ಷ ಪರದಾಡುವುದರಲ್ಲೇ ಕಳೆಯಿತು. ಪುಟ್ಟ ಗಂಟೂ ಕರಗಿತು. ನೆರೆಯವರಲ್ಲಿ ಅನುಕಂಪದ ಆಧಾರದ ಮೇಲೆ ಸಾಲ ದೊರೆತರೂ ಹಿಂದಿರುಗಿಸುವ ಬಗೆ ಹೇಗೆ? ಭಯದಿಂದ ನಡುಗುವಂತಾಗುತ್ತಿತ್ತು. ನಾನು ಮುಖ ಇಳಿಸಿದರೆ ಅಮ್ಮ ಗದರುತ್ತಿದ್ದಳು, “ದೇವರಿದ್ದಾನೆ. ಈವತ್ತಲ್ಲ ನಾಳೆ ನೀನ್ ಹಿರೋಯಿನ್ ಆಗೇ ಆಗ್ತಿಯಾ…. ಚಿಂತೆ ಮಾಡ್ನೆಡ್ವೆ, ಮುಖದಲ್ಲಿ ಒಂದು ಸುಕ್ಕು ಬಂದ್ರೂ ಹಿರೋಯಿನ್ ತಾಯಿ ಮಾಡಿಬಿಡ್ತಾರೆ ಈ ಜನ” ಎಂದು ಹೆದರಿಸುತ್ತಿದ್ದಳು. ರಿಲೀಸ್ ಆದ ಎಲ್ಲಾ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದಳು. ಕಾಸ್ಮೆಟಿಕ್ಸ್‌ಗಳನ್ನು ಎಂದೂ ಕೊಳ್ಳದಿರುತ್ತಿರಲಿಲ್ಲ. “ಈ ಡೈರಕ್ಟ್ರು ಹೊಸಬರಿಗೆ ಅವಕಾಶ ಕೊಡೋಕೆ ಹುಟ್ಟಿದಾನೆ ಕಣೆ. ಗಲೀಜು ನಾಲಿಗೆ ಅಷ್ಟೆ. ಮುದಿ ಚಪಲ. ನನ್ನ ಮುಂದಿನ ಸಿನಿಮಾದಲ್ಲಿ ನಿನ್ನ ಮಗಳೇ ಹಿರೋಯಿನ್ ಅಂದಿದಾನೆ. ಅವನೇನು ಅವಾರ್‍ಡ್ ಡೈರಕ್ಟರಾಗೆ, ತಗಡು ಪಾರ್‍ಟಿಯಲ್ಲ! ಪಕ್ಕಾ ಕಮರ್ಷಿಯಲ್ ಮನುಷ್ಯ” ಎಂದು ದೇಹ ಮುಖ ಒಣಗದಂತೆ ಆಸೆಯ ಸಿಂಚನ ಮಾಡುತ್ತಿದ್ದಳು. ಕೊನೆಗೆ ಆದದ್ದೇ ಬೇರೆ.

ಹೊಟ್ಟೆಪಾಡಿಗಾದರೂ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ದಾರಿದ್ರ ಸ್ಥಿತಿಯೂ ಬಂತು. ಅಮ್ಮನೇ ರಾಜಿಯಾದ ಮೇಲೆ ನನ್ನದೇನಿದೆ? ಬಂದದ್ದಾಗಿದೆ ಗೆದ್ದರೂ ಬಿದ್ದರೂ ಸತ್ತರೂ ಇಲ್ಲೆ ಎಂದು ನಿರ್ಧರಿಸಿ ಸಣ್ಣಪುಟ್ಟ ಪಾತ್ರಗಳನ್ನೇ ಬಾಚಿತಬ್ಬಿಕೊಂಡೆ. ಆಗಾಗ ಜಯಣ್ಣ ಬರುತ್ತಿದ್ದ. ಯಾವುದೋ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದೆ ಅನ್ನುತ್ತಿದ್ದ. ನನ್ನನ್ನು ನೋಡಲೆಂದೇ ಬರುತ್ತಾನೆಂಬ ಖಾತರಿ ನನಗಿತ್ತು. ಅವನೀಗ ಕಂಪನಿಯಲ್ಲಿ ದೊಡ್ಡ ಹಿರೋನಂತೆ. ಸ್ವಂತ ಕಂಪನಿ ಮಾಡುತ್ತಾನೆಂಬ ಸುದ್ದಿಯೂ ಹಬ್ಬಿತ್ತು. ಅವನೆಲ್ಲಿ ಮಗಳ ತಲೆ ಕೆಡಿಸಿಬಿಡುತ್ತಾನೆ ಎಂದು ಅಮ್ಮನಿಗೆ ಸಿಟ್ಟು, ಅವನು ಬಂದರೆ ಸಿಡಿಮಿಡಿಗೊಳ್ಳುತ್ತಿದ್ದಳು. ಅವನ ಬಳಿ ಸರಿಯಾಗಿ ಮಾತನಾಡಲೂ ಬಿಡದೆ ಎದುರಿಗೇ ಕೂರುತ್ತಿದ್ದಳು. ನಾನು ಮಾಡುವ ಸಣ್ಣಪುಟ್ಟ ಪಾತ್ರಗಳನ್ನೇ ಹಾಡಿ ಹೊಗಳುತ್ತಿದ್ದ. ಸಿನಿಮಾದಲ್ಲಿ ನೀನ್ ಇದಿಯಾ ಅಂದ್ರೆ ಎರಡೆರಡು ಸಲ ನೋಡ್ತಿನಿ ಅಂತ ಅಭಿಮಾನಿಸುತ್ತಿದ್ದ. ನಾನು ಮಾಡುತ್ತಿದ್ದ ಪಾತ್ರವೋ ದೇವರಿಗೇ ಪ್ರೀತಿ.

ಮದುವೆ ಮಂಟಪದಲ್ಲಿ ಮೊದಲ ಸಾಲಿನಲ್ಲಿ ಕೂರುವುದು, ಕ್ಲಬ್ ಸೀನ್‌ಗಳಲ್ಲಿ ಫಾಂಟಾ ಬಾಟಲಿ ಹಿಡಿದು ಹೀರುವುದು. ಕಾಲೇಜ್ ಹುಡುಗಿಯರ ಗುಂಪಿನಲ್ಲಿ ಕಾಣಿಸಿಕೊಳ್ಳುವುದು, ಒಟ್ಟಿನಲ್ಲಿ ಥಿಯೇಟರ್‌ನಲ್ಲಿ ಕೂತು ನನ್ನ ಮುಖ ಎಲ್ಲಿ ಯಾವಾಗ ಕಾಣುತ್ತದೆಂದು ಚಾತಕದಂತೆ ನಿರೀಕ್ಷಿಸುವುದು. “ಅಗೋ! ಬಂತು ನೋಡೇ…..” ಎಂದು ಅಮ್ಮ ಬೆರಳು ತೋರಿಸಿ ಹಿಗ್ಗುತ್ತಿದ್ದಳು. ಲಾಂಗ್‌ಶಾಟ್‌ನಲ್ಲಿ ನನಗೆ ನಾನೇ ಕಾಣಿಸುತ್ತಿರಲಿಲ್ಲ. ಅಮ್ಮನ ಕನ್ನಡಕ ಹಾಕಿಕೊಂಡು ನೋಡಿದ್ದೂ ಉಂಟು. ಇಂತಹ ದಿನಗಳಲ್ಲಿ ಹೆಳವಳಂತೆ ಕಾಲ ದೂಡುತ್ತಿರುವಾಗ ಸಿನಿಮಾ ಜನರಲ್ಲಿ ಕೀಳು ಅಭಿರುಚಿಯವರಿರುವುದೂ ಅನುಭವಕ್ಕೆ ಬಂತು. ಒಬ್ಬ ನಿರ್‍ದೇಶಕ, ಆತ ಬರೀ ಕಾದಂಬರಿ ಆಧಾರಿತ ಚಿತ್ರಗಳನ್ನು ತೆಗೆದು ದುಡ್ಡು ಮಾಡಿದವ. ಲೇಖಕರಿಗೆ ಮಾತ್ರ ನೆಟ್ಟಗೆ ದುಡ್ಡು ಬಿಚ್ಚಿದವನಲ್ಲ. “ಹೀರೋ ತಂಗಿಯ ಪಾತ್ರ ಕೊಡುತ್ತಿದ್ದೇನೆ ಹೆಚ್ಚು ಹಣ ನಿರೀಕ್ಷಿಸಬೇಡಿ. ಟಾಪ್ ಹೀರೋ ಜೊತೆ ಅಭಿನಯಿಸೋಕೆ ಭಾಗ್ಯವಿರಬೇಕು” ಎಂದು ಮೂಗಿಗೆ ತುಪ್ಪ ಸವರಿದ. ಸ್ನಾನದ ದೃಶ್ಯಗಳಿವೆ ಅಂದ. ಅಮ್ಮ ಮೂಗು ಮುರಿದಳು, “ರೇಪ್ ದೃಶ್ಯವೆಂದರೆ ಹೆದರಬೇಕ್ರಮ್ಮ, ಸ್ನಾನದ ದೃಶ್ಯವನ್ನು ರಾಜ್‌ಕಪೂರನಂತೆ ಕಲಾತ್ಮಕವಾಗಿ ಚಿತ್ರಿಸ್ತೇನೆ” ಅಂದ.

“ಕಥೆಯೇನು? ನನ್ನ ಪಾತ್ರವೇನು ಸಾರ್?” ಅಂದೆ ಒಪ್ಪಿಗೆಗೆ ಮುನ್ನ “ಇಂಡಸ್ಟ್ರೀಸ್‌ನಲ್ಲಿ ಬಚ್ಚಾ ನೀನು. ಅದೆಲ್ಲಾ ಕೇಳಬಾರ್‍ದು. ಇಷ್ಟವಿದ್ದರೆ ಮಾಡು” ಎಂದು ಗದರಿದ. ತಲೆ ಆಡಿಸಿದೆ. ಅಮ್ಮ ಆಡಿಸಲಿಲ್ಲ.

“ನೋಡಿ ಸ್ವಾಮಿ, ಹಿರೋಯಿನ್ ಆಗಿ ಬೆತ್ತಲಾದ್ರೆ ಬೆಲೆ ಇರುತ್ತೆ. ಮುಂದೆ ಅವಕಾಶಾನೂ ಸಿಗಬಹುದು. ಇಲ್ಲಿ ಇನ್ನು ಹೀರೋ ತಂಗಿಯಲ್ವೆ” ಅಮ್ಮ ಗೊಣಗಿದಳು.

“ನೋಡ್ರಮ್ಮ, ನಿಮ್ಮ ಮಗಳಿಗೆ ಒಳ್ಳೆ ಸ್ಟ್ರಕ್ಚರ್ ಇದೆ. ನಿಮ್ಮ ಮಗಳ ಶವರ್‌ಬಾತ್ ಸೀನ್ ಗಾಂಧಿನಗರಿಗರನ್ನು ಮೋಡಿ ಮಾಡಿಬಿಡಬಹುದು. ಅದೃಷ್ಟ ಯಾರ್ ಕಂಡವ್ರೆ ಹೇಳಿ” ಅಂತ ಅಂತಃಕರಣ ಸೂಸಿದ. ಅಮ್ಮನಿಂದಲೂ ‘ಹೂಂ’ ಅನ್ನಿಸಿಬಿಟ್ಟ. “ಈ ಸೀನ್ ತೆಗೆವಾಗ ಭಾಳ ಜನ ಇರಬಾರ್‍ದು ಸ್ವಾಮಿ” ಅಂದಳು ಅಮ್ಮ. ಅವನೂ ‘ಹೂಂ’ ಅಂದ.

ಶವರ್‌ಬಾತ್‌ಗೆ ನಿಂತಿದ್ದಾಯಿತು. ತೆಳ್ಳನೆ ಸೀರೆ, ರವಿಕೆಯಿಲ್ಲ. “ರವಿಕೆ ಇರಲಿ” ಎಂದು ಭೀತಳಾದೆ.

“ಮಂದಾಕಿನಿ, ಹಿಂದಿ ಪಿಚ್ಟರ್‌ನಲ್ಲಿ ರವಿಕೆ ಹಾಕದಿದ್ದುದಕ್ಕೆ ಜನ ರೊಕ್ಕ ಚೆಲ್ಲಿದ್ದು” ಮುದಿ ನಿರ್‍ಮಾಪಕ ದುರುಗುಟ್ಟಿದ. ನೀರಲ್ಲಿ ನೆನೆದಂತೆ ಮೊಲೆಗಳ ಆಕಾರ ತೆಳು ಸೀರೆಯೆನ್ನಿರಿದು ಈಚೆ ಬಂದವು.

“ಟಾಪ್‌ಲೆಸ್ ತೆಗೀರಿ ಸಾ” ನಿರ್ಮಾಪಕನ ಕಿರಕಿರಿ. “ಉಷಾ, ಸ್ವಲ್ಪ ಸೆರಗು ಜಾರ್‍ಸಿ” ನಿರ್ದೇಶಕನ ಆಣತಿ.

“ಅದೆಲ್ಲಾ ಯಾಕ್ ಸ್ವಾಮಿ! ಸೆನ್ಸಾರ್ ಬಿಡುತ್ತಾ?” ಅಮ್ಮನ ಗುಂಜಾಟ.

“ಸೆನ್ಸಾರ್ ವಿಷಯ ನಮಗೆ ಬಿಡಿ. ತಾಯಿ ನೀವ್ ಸುಮ್ಗಿರ್‍ತಿರಾ” ಗದರಿದರು. ಸೊಂಟದ ಮೇಲಿಂದ ಎಲ್ಲಾ ತೋರಿಸಿದರು. “ತಾವರೆ ಮೊಗ್ಗಿನಂತಹ ಮೊಲೆಗಳು, ಬಾದಾಮಿ ಹೊಕ್ಕುಳ” ನಿರ್‍ದೇಶಕ ಕವಿಯಾದ, ಗಂಟೆಗಟ್ಟಲೆ ನೀರಲ್ಲಿ ನೆನೆಸಿ ಬಕೆಟ್‌ನಲ್ಲಿ ನೀರೆರಚಿ ವಿವಿಧ ಭಂಗಿಗಳಲ್ಲಿ ಸೆರೆ ಹಿಡಿದರು. ನಾನು ಹೆಣ್ಣು ಅನ್ನೋದನ್ನೇ ಮರೆತ ದಿನವದು. ಕೈಗೆ ಐದು ಸಾವಿರ ಬಿದ್ದಾಗ ನಿಟ್ಟುಸಿರು ಬಂತೇ ವಿನಾ ನಗೆಯೇ ನುಸುಳಲಿಲ್ಲ. ಆಮೇಲೆ ಒಂದೆರಡು ಸೀನ್‌ಗಳಲ್ಲಿ ಹೀರೋ ಜೊತೆ ನಿಲ್ಲಿಸಿದರು. ಅದೂ ಹೊಟ್ಟೆಗಿಲ್ಲದ ಅವನ ನಾಲ್ಕು ತಂಗಿಯರಲ್ಲಿ ನಾನೂ ಒಬ್ಬಳು. ಒಂದು ಡೈಲಾಗ್ ಬೇಡಿದರೂ ಕೊಡಲಿಲ್ಲ. “ನೆಸಸಿಟಿ ಇಲ್ಲ, ಭಾವಾಭಿನಯವೇ ಸಾಕು” ಎಂದ ನಿರ್ದೆಶಕ ಇಂಟರ್‌ವೆಲ್ ಬರೋ ಹೊತ್ತಿಗೆ ತಂಗಿಯರನ್ನೆಲ್ಲಾ ಒಂದು ಮನೆಯಲ್ಲಿ ಕೂಡಿ ವಿಲನ್‌ಗಳು ಬೆಂಕಿ ಹಚ್ಚುತ್ತಾರಂತೆ ಹಿರೋ ಒಮ್ಮೆಲೆ ರೆಬೆಲ್ ಆಗುತ್ತಾನಂತೆ. ಅಸಿಸ್ಟೆಂಟ್ ಒಬ್ಬ ಕಥೆ ಹೇಳಿದ. ನೀರಲ್ಲಿ ನೆನೆದ ನಾನು ಬೆಂಕಿಯಲ್ಲೂ ಬೆಂದೆ. ಚೀರಾಡಿದೆ. ಪ್ರೀಮಿಯರ್ ಷೋಗೆ ಕರೆಯುತ್ತೇನೆಂದವರು ಮರೆತರು – ಎಲ್ಲರೂ ಹೀಗೆ. ಸಿನಿಮಾ ರಿಲೀಸ್ ಆಯಿತು. ಥಿಯೇಟರ್‌ನಲ್ಲಿ ಬ್ಲಾಕ್ ಟಿಕೆಟ್ ಕೊಂಡು ನಾನು ಅಮ್ಮ ನುಗ್ಗಿದೆವು. ಎದೆ ಬಡಿತ, ಚಿತ್ರ ಮುಗಿದೇ ಹೋಯಿತು. ಸ್ನಾನ ದೃಶ್ಯ ಬರಲೇ ಇಲ್ಲ. ಬೆಂಕಿ ಹತ್ತಿಸಿದಾಗ ಚೀರಾಡಿದ್ದಷ್ಟೇ ಬಂದ ಭಾಗ್ಯ. ನಾನು ಅಮ್ಮ ಮುಖ ಮುಖ ನೋಡಿಕೊಂಡೆವು. ಯಾರಲ್ಲಿ ಹೇಳೋದು? ಯಾರನ್ನ ಕೇಳೋದು! ಆಮೇಲೆ ತಿಳೀತು ಆ ಶಾಟ್‌ಗಳನ್ನ ಬ್ಲೂಫಿಲಂ ತರಾ ಉಪಯೋಗಿಸಿ ಎನ್-ಜಾಯ್ ಮಾಡ್ತಾರೆ ಅಂತ. ಯಾರಲ್ಲಿ ದೂರುವುದು?

ಆಮೇಲೆ ಒಂದೆರಡು ಸಣ್ಣ ಅವಕಾಶಗಳು ಬಂದವು. ಹಿರೋಯಿನ್ ಗೆಳತಿಯಾಗಿಯೂ ಮುಂಬಡ್ತಿ ಪಡೆದೆ. ತೆರೆಯ ಮೇಲೆ ಮುಖ ಕಾಣುವ ಪಾತ್ರ. ಒಂದೆರಡು ಕ್ಲೋಸ್‌ಅಪ್‌ಗಳು. ಹಿರೋಯಿನ್‌ಗಿಂತ ಚೆನ್ನಾಗಿದ್ದೇನೆ ಅಂತ ಗೊಣಗುವ ನಿರ್ದೆಶಕರು. “ಹಿಂದುಗಡೆ ನಿಂತ್ಕೋ…… ಗೋ ಬ್ಯಾಕ್ ಸೈಡ್” ಅಂದದ್ದೂ ಉಂಟು. ಆಗೆಲ್ಲಾ ಅಮ್ಮನ ಮಡಿಲಲ್ಲಿ ಅಳುವುದೊಂದೇ ದಾರಿ. ತಾಳಿದವನು ಬಾಳಿಯಾನು ಕಣೆ ಅನ್ನುವ ಉಪದೇಶಾಮೃತ ಅಮ್ಮನಿಂದ ದೊಡ್ಡ ನಿರ್ದೆಶಕರು ನಮ್ಮಂತವರೊಂದಿಗೆ ಮಾತೇ ಆಡರು. ಏನಿದ್ದರೂ ಅಸಿಸ್ಟೆಂಟ್‌ಗಳದ್ದೇ ಕಾರುಬಾರು. ಇವರಿಗೂ ನಾವೆಂದರೆ ಅಷ್ಟಕ್ಕಷ್ಟೆ. ಪರಭಾಷಾ ನಟಿಯರನ್ನು ವಿಮಾನದಲ್ಲಿ ಕರೆಸಿಕೊಂಡು ಪಂಚತಾರಾ ಹೋಟೆಲ್‌ಗಳಲ್ಲಿ ಇರಿಸುವ ಈ ಜನ ನಮಗೆ ಮಾತ್ರ ಎರಡು ಸಾವಿರ ಎಣಿಸಲೂ ಏದುಸುರಿ ಬಿಡುತ್ತಾರೆ. ಕನ್ನಡ ಬಾರದ ನಟಿಯರಿಗೆ ರಾತ್ರಿ ಎಲ್ಲಾ ಗಿಳಿಪಾಠ ಹೇಳುವ ಈ ಜನ ನಾವು ಒಂದು ಟೇಕ್ ಜಾಸ್ತಿ ತಗೊಂಡ್ರೆ ರೇಗುತ್ತಾರೆ. ನಾವಾಡುವ ತಿಳಿಗನ್ನಡದಲ್ಲಿ ಸ್ಟೈಲ್ ಇಲ್ಲ ಎಂದು ಹಂಗಿಸುತ್ತಾರೆ. ಅಡಿಗೆಯವ ಬಡಿಸುವಾಗಲೂ ತಾರತಮ್ಯ ತೋರುತ್ತಾನೆ. ಪರಭಾಷಾ ನಟಿಯರಿಗೆ ಮಟನ್ ಚಿಕನ್ ತರಿಸಿಕೊಡುವ ಇವರು ನಮಗೆ ತಿಳಿಸಾರು ಅನ್ನ ಕೊಡಲೂ ಗೊಣಗಾಡುತ್ತಾರೆ. “ಈ ಹುಡ್ಗೀದು ಏನಾದ್ರೂ ಶಾಟ್ಸ್ ತೆಗೆದಿರಾ ಸಾ” ಅಂತ ಡೈರಕ್ಟರ ವಿಚಾರ ಮಾಡುತ್ತಾರೆ.

ಪ್ರಖ್ಯಾತ ನಿರ್ದೇಶಕರ ಚಿತ್ರದಲ್ಲಂತೂ ದುಡ್ಡೇ ಕೇಳುವಂತಿಲ್ಲ. ಇಂಥ ನಿರ್ದೆಶಕನ ಚಿತ್ರದಲ್ಲಿ ಚಾನ್ಸ್ ಸಿಕ್ಕಿದ್ದೇ ನಿಮ್ಮ ಪುಣ್ಯ ಹೋಗಿ ಅಂತ ಅಸಿಸ್ಟೆಂಟ್‌ಗಳೇ ಕೈಗೆ ಐನೂರರ ನೋಟು ತುರುಕಿ ನೂಕಿಬಿಡುತ್ತಾರೆ. ನಿರ್ದೇಶಕನ ಸ್ವಂತ ಚಿತ್ರ ಆದರಂತೂ ಅದೂ ಇಲ್ಲ. “ಮುಂದಿನ ಪಿಕ್ಟರಲ್ಲಿ ಒಳ್ಳೆ ಸ್ಕೋಪು ಇರೋ ಕ್ಯಾರೆಕ್ಟರ್ ಕೊಡೋಣ” ಅಂದಾತ ಆಶೀರ್ವಾದ ಮಾಡಿಬಿಡುತ್ತಾನೆ. ಇದೆಲ್ಲಾ ಹಸಿ ಸುಳ್ಳು ಎಂಬ ಅನುಭವವಾಗಿದೆ. ಬಿಸಿತುಪ್ಪ ಉಗುಳುವಂತೂ ಇಲ್ಲ. ನುಂಗುವುದೂ ಕಷ್ಟ. ಇನ್ನು ನಮ್ಮ ಹಿರೋಯಿನ್‌ಗಳು ಸಹ ನಮ್ಮನ್ನು ಕ್ಯಾರೆ ಅನ್ನುವುದಿಲ್ಲ. ನಮ್ಮತ್ತ ನೋಡಲೂ ಅವರಿಗೆ ಅಸೂಯೆಯೋ, ಅಸಹ್ಯವೋ ಗೊತ್ತಾಗುವುದಿಲ್ಲ. ಇದೆಲ್ಲಾ ಏನೇ ಇರಲಿ ಎರಡು ಹೊತ್ತಿನ ಕೂಳಿಗೆ ಸಾಕಾಗುವಷ್ಟು ದುಡಿಮೆ ಕುದುರಿತು. ಸೆಲ್ವಾರ್ ಕಮೀಜ್, ನಿಟೆಡ್ ಬನಿಯನ್ ಟೀ ಶರ್ಟ್‌ಗಳು ಜೀನ್ಸ್ ಅಂತ ಅಮ್ಮ ನನ್ನನ್ನು ಅಲಂಕರಿಸುತ್ತಿದ್ದಳು. ತಾನು ಅರೆಹೊಟ್ಟೆ ತಿಂದರೂ, ನನಗೆ ಮಾತ್ರ ಫುಲ್ ಊಟ, ಹಣ್ಣುಗಳನ್ನು ತಂದು ಸುಲಿದು ತಿನ್ನಿಸುತ್ತಿದ್ದಳು. ಖ್ಯಾತ ಹಿರೋಯಿನ್ ಅಮ್ಮನಾಗಿ ನಿರ್‍ದೇಶಕ ಪಕ್ಕದ ಕುರ್ಚಿಯಲ್ಲೇ ಕೂತು ತಾಂಬೂಲ ಜಗಿಯುತ್ತ ಎಲ್ಲರಿಂದ ‘ಸಲಾಂ’ ಹೊಡಿಸಿಕೊಳ್ಳುವ ಕನಸೂ ಕಾಣಲಾರಂಭಿಸಿದ್ದಳು. ಇನ್ನು ಹೀರೋಯಿನ್ ಆಗುವ ಕಾಲ ದೂರವಿಲ್ಲ ಅನ್ನುತ್ತಿದ್ದಳು. ಆ ಮಾತು ನಿಜವಾಗಬಹುದೇನೋ ಎಂಬ ಆಸೆ ನನ್ನ ಮನದಾಳದಲ್ಲೂ ಮೊಳಕೆಯೊಡೆದಿತ್ತು. ಅದಕ್ಕೆ ಕಾರಣವೂ ಇತ್ತು. ನಾನೀಗ ನಿಜಕ್ಕೂ ಹಿರೋಯಿನ್ ತಂಗಿಯಾಗಿ ಬಡ್ತಿ ಪಡೆದಿದ್ದೆ. ಹತ್ತಾರು ಡೈಲಾಗ್‌ಗಳು ನಾಲ್ಕಾರು ಸೀನ್‌ಗಳು, ಅಂತ್ಯಕ್ಕೆ ರೇಪ್ ಸೀನ್, ನಂತರ ಆತ್ಮಹತ್ಯೆ, ಇಲ್ಲವೆ ವಿಲನ್‌ನಿಂದ ಶೂಟ್. ಒಟ್ಟಿನಲ್ಲಿ ಅರ್ಧ ಸಿನೆಮಾಕ್ಕೆ ನನ್ನ ಕ್ಯಾರೆಕ್ಟರ್ ಪರಿಸಮಾಪ್ತಿ.

“ನೀನೇ ಕಣ್ಣು, ನಿನಗಾಗಿ ಪ್ರಾಣ ಕೊಡ್ತೀನಿ ಕಣಮ್ಮ” ಎಂದು ಪ್ರೀತಿಸುವ ಅಣ್ಣನಾದ ಹೀರೋಗೆ ಶೂಟಿಂಗ್ ನಂತರ, ನಮ್ಮಂತಹ ತಂಗಿಯರತ್ತ ತಿರುಗಿ ನೋಡಲೂ ವ್ಯವಧಾನವಿಲ್ಲ. ಬಾಂಬೆ ನಟಿಯೊಡನೆ ಇಂಗ್ಲಿಷ್‌ನಲ್ಲಿ ಲಲ್ಲೆ ಹೊಡೆದದ್ದೂ ಹೊಡೆದದ್ದೆ. ಹಿರೋಯಿನ್‌ಗೆ ಕರೆದೊಯ್ಯಲು ಕಂಟೆಸ್ಸಾ ಕಾರು ಬಂದರೆ ನಮಗೆ ಒಮ್ಮೊಮ್ಮೆ ಯೂನಿಟ್ ವ್ಯಾನೂ ಅಲಭ್ಯ. ಆಟೋಕ್ಕೆ ದುಡ್ಡು ಕೇಳಲೂ ಅಭಿಮಾನ ಅಡ್ಡ ಬರುತ್ತಿತ್ತು. ಅಮ್ಮ ಎಷ್ಟೋ ಸಲ ಗಟ್ಟಿಸಿ ಕೇಳಿದಾಗ, “ಪಾರ್ಟಿಗೆ ತಗೊಂಡಿಲ್ವೇನ್ರಿ ಕಾಸು? ಮತ್ತೆ ಆಟೋಗೆ ಸಿಟಿ ಬಸ್ಸಿಗೆ ಬೇರೇನಾ?” ಪ್ರೊಡಕ್ಷನ್ ಮೇನೇಜರ್ ದಬಾವಣೆ, ನಮ್ಮಲ್ಲಿ ಆಟೋಗೂ ಕಾಸಿಲ್ಲಾಂತ ಅವನಿಗೇನು ಗೊತ್ತು? ಹಿರೋಯಿನ್‌ಗೆಂದು ಲಕ್ಷಗಟ್ಟಲೆ ಕಾಸ್ಟ್ಯೂಮ್ ಕೊಳ್ಳುವ ನಿರ್ಮಾಪಕ ತಂಗಿಯ ಪಾತ್ರಧಾರಿಗಳಾದ ನಮಗೆ, “ಒಳ್ಳೆ ಡ್ರೆಸ್ ಇದ್ದರೆ ಹಾಕ್ಕೊಂಡು ಬಂದುಬಿಡಿ” ಎಂದೂ ಆದೇಶಿಸುವುದುಂಟು. ಎಲ್ಲಾ ಸ್ಮರಿಸಿಕೊಳ್ಳಬೇಕು.

ಇಂಥ ದಿವಸಗಳಲ್ಲೇ ಅಮ್ಮನ ಬಗ್ಗೆ ತಕರಾರು ಬಂತು. “ಯಾವಾಗೂ ನಿಮ್ಮಮ್ಮ ನಿಮ್ಮ ಹಿಂದೇನೇ ಇರ್ತಾರೆ. ಭಾಳ ಕಿರಿಕಿರಿ.” “ನೀವು ಕನ್ನಡದ ಹುಡ್ಗೀರು ಫ್ರೀಯಾಗಿರಬೇಕು.” “ರೇಪ್ ಸೀನ್ ತೆಗೆವಾಗ ನಿಮ್ಮಮ್ಮ ಮೊಲೆ ತೋರಿಸಬೇಡಿ ತೊಡೆ ತೋರಿಸಬೇಡಿ ಅಂದ್ರೆ ಹೇಗೆ?” “ನಿಮ್ಮಂತವರೆಲ್ಲಾ ಸಿನಿಮಾಲ್ಯಾಂಡ್‌ಗೆ ಯಾಕೆ ಬರ್‍ತಿರಾ?” “ನಿಮ್ಮಮ್ಮನಿಗಿಲ್ಲೇನ್ ಕೆಲ್ಸ? ಬಂದರೂ ತೆಪ್ಪಗೆ ಇರ್‍ಬೇಕು” – ಮಾತುಗಳು ಕೇಳಿಬರತೊಡಗಿದವು. ಪತ್ರಿಕೆಯವರೂ ಅಮ್ಮನನ್ನು ಟೀಕಿಸಿ ಬರೆದರು. ಇದೂ ಒಂದು ರೀತಿ ಪ್ರಚಾರ ಬಿಡೆ ಅಂತ ಅಮ್ಮ ಖುಷಿಗೊಂಡಳೇ ವಿನಾ ಖಿನ್ನಳಾಗಲಿಲ್ಲ. ನನ್ನ ಮಗಳನ್ನು ಬೇಗ ಹಿರೋಯಿನ್ ಮಾಡಪ್ಪಾ ಅಂತ ಸಿನಿಮಾದವರ ದೇವರುಗಳಾದ ರಾಘವೇಂದ್ರ, ಅಯ್ಯಪ್ಪಸ್ವಾಮಿ ಮುಂದೆ ಹರಕೆ ಹೊತ್ತಳು. ಆ ಅವಕಾಶವೂ ಬಂತು.

ಒಬ್ಬ ಹೊಸ ನಿರ್ದೆಶಕ ಹಳೆ ನಿರ್ಮಾಪಕನೊಡನೆ ಮನೆಗೇ ಬಂದು ಸಾವಿರದಾ ಒಂದು ಅಡ್ವಾನ್ಸ್ ಮಡಗಿದ. “ನಮ್ಮ ಚಿತ್ರದ ಹಿರೋಯಿನ್ ನೀನೇ” ಅಂದ. “ರಮ್ಯುನಿರೇಶನ್ ಎಷ್ಟು” ಅಂದಳು ಅಮ್ಮ.

“ಇದು ಲೊ ಬಜೆಟ್ ಚಿತ್ರ….. ಕೊಡೋಣ. ನಾವೇನ್ ನಿಮ್ಗೆ ಅನ್ಯಾಯ ಮಾಡೋರಲ್ಲ” ಅಂತ ಕೈ ಮುಗಿದು ಗೌರವ ತೋರಿದರು. ಅಮ್ಮ ಉಬ್ಬಿಹೋದಳು. “ನಮ್ಮದು ಇಪ್ಪತೈದು ರೂಪಾಯಿಯಲ್ಲಿ ಚಿತ್ರ ಮುಗಿದುಹೋಗುತ್ತೆ” ಅಂದರು ನಿರ್ಮಾಪಕ. ಇವರೆಲ್ಲಾ ಲಕ್ಷಗಳನ್ನು ರೂಪಾಯಿ ಲೆಕ್ಕಾಚಾರದಲ್ಲೇ ಮಾತನಾಡೋದು. ಪತ್ರಿಕೆಯಲ್ಲಿ ಫುಲ್ ಪೇಜ್ ಜಾಹೀರಾತು ಬಂತು. ಅದರ ತುಂಬಾ ನನ್ನ ಭಾವಚಿತ್ರ, ಹಿರೋ ಹೊಸಬ. ಆದ್ದರಿಂದ ನನಗೇ ಪ್ರಾಮಿನೆನ್ಸ್, ನಾನಂತೂ ಆ ದಿನ ಹೊಟ್ಟೆತುಂಬಾ ಊಟಮಾಡಿದೆ. ಅಮ್ಮ ಸಿಹಿ ಮಾಡಿದಳು. “ಶೂಟಿಂಗ್‌ನಲ್ಲಿ ನೀನು ಯಾವುದಕ್ಕೂ ಅಡ್ಡಿ ಮಾಡ್ಬೇಡ” ಅಂದೆ. ಗೋಣು ಆಡಿಸಿದಳು. ಚಿತ್ರದ ಮುಹೂರ್ತ ಕಂಠೀರವದಲ್ಲಿ ಅದ್ದೂರಿಯಾಗಿ ಜರುಗಿತು. “ಸೌಂಡ್, ಕ್ಯಾಮರಾ, ಕ್ಲಾಪ್, ಆಕ್ಷನ್” ಎಂದೆಲ್ಲಾ ನಿರ್ದೆಶಕ ಕೂಗಿಯಾದ ಮೇಲೆ “ನಿನ್ನನ್ನೇ ನಂಬಿದ್ದೇನೆ, ಕೈ ಬಿಡಬೇಡ” ಅಂತ ಡೈಲಾಗ್ ಹೇಳಿದೆ. “ಕಟ್” ಎಂದು ಅರಚಿದ್ದು ಕೇಳಿ ಪುಳಕಗೊಂಡೆ. ಮರುದಿನ ಚಿಕ್ಕಮಗಳೂರಲ್ಲಿ ಔಟ್‌ಡೋರ್, ಐ.ಬಿ. ನಲ್ಲಿ ಕೂರಿಸಿಕೊಂಡು ನಿರ್ದೇಶಕ ನನ್ನನ್ನು ದೊಡ್ಡ ಹಿರೋಯಿನ್ ಮಾಡುವುದಾಗಿ ಹೇಳಿದ. “ಮುಂದಿನ ನಮ್ಮ ಚಿತ್ರಗಳಿಗೆ ನೀನೇ ಖಾಯಂ ಹೀರೋಯಿನ್” ಅಂದ. “ನಾನು ಪುಟ್ಟಣ್ಣನೋರ ತರಾ ಡಿಫರೆಂಟ್” ಅಂದ. ರಾತ್ರಿ ನನ್ನ ಕೋಣೆಗೆ ಹೋಗಲು ಬಿಡಲಿಲ್ಲ. ಕುಡಿದ ಕುಡಿಸಲು ಯತ್ನಿಸಿದ. ನಾನೊಪ್ಪಲಿಲ್ಲ. ಹಿರೋಯಿನ್ ಆಗುವ ಮುಲಾಜಿಗೆ ಮುಟ್ಟಬಾರದ ಕಡೆಯಲ್ಲೆಲ್ಲಾ ಮುಟ್ಟಿದರೂ ಮೌನವಾಗುಳಿದೆ. ಆಮೇಲೆ ನನ್ನ ಕನ್ಯತ್ವವನ್ನೂ ಕೊಳ್ಳೆ ಹೊಡೆದ. ಒಂದು ದಿನದ ನಂತರ ಹಿಂದಿರುಗಿದೆವು. “ಇನ್ನು ಹದಿನೈದು ದಿನಬಿಟ್ಟು ಒಂದೇ ಶೆಡ್ಯೂಲ್‌ನಲ್ಲಿ ಪಿಕ್ಟರ್‌ ಫಿನಿಶ್ ಮಾಡ್ತೀನಿ” ಅಂತೇಳಿ ಕಾರು ಹತ್ತಿದ ಆ ಕಂತ್ರಿ ನಾಯಿನಾ ಈವರೆಗೂ ಕಂಡಿಲ್ಲ. ಆಮೇಲೆ ಪತ್ರಿಕೆಗಳಿಂದ ತಿಳಿಯಿತು. ಕ್ಯಾಮರಾದಲ್ಲಿ ರೀಲೇ ಇಲ್ಲದೆ ಮೂರು ದಿನ ಶೂಟಿಂಗ್ ನಡೆಸಿದ ನಿರ್ದೇಶಕ ಎಂದು ಪತ್ರಿಕೆಯವರು ಉಗಿದು ಉಪ್ಪುಹಾಕಿದ್ದರು. ಎಂತಹ ಸಿನೆಮಾ ಪ್ರಪಂಚ ಅಂತ ಹೌಹಾರಿದೆ. ಅಮ್ಮನ ಬಳಿ ಉಸಿರೆತ್ತಲಿಲ್ಲ. ಅಮ್ಮನೂ ಸಪ್ಪಗಾಗಿದ್ದಳು.

ಮತ್ತೆ ಸ್ಟುಡಿಯೋಗಳಿಗೆ ಅಲೆದಾಟ. ಈಗೀಗ ಜನ ಗುರುತಿಸುತ್ತಿದ್ದರು. ಶಾಪಿಂಗ್‌ಗೆ ಮೊದಲಿನಂತೆ ಹೋಗಲಾಗುತ್ತಿರಲಿಲ್ಲ. ಇದೇನು ಕಡಿಮೆ ಸಂತೋಷವೆ. ಅಮ್ಮ ನನಗಿಂತಲೂ ಹೆಚ್ಚು ಬೀಗುತ್ತಿದ್ದಳು. ಒಂದೆರಡು ಸಿನಿಮಾಗಳು ನೂರು ದಿನ ಓಡಿ ಫಲಕಗಳೂ ಬಂದವು. ಸಮಾರಂಭದಲ್ಲಿ ಕನ್ನಡದ ಹುಡ್ಗರನ್ನ ಕೇಳುವವರೇ ಇಲ್ಲ. ತಾಜ್ ರೆಸಿಡೆನ್ಸಿ ಅಂತ ಹೋಟೆಲ್‌ಗಳಲ್ಲಿ ಪ್ರವೇಶವೇ ಕಷ್ಟ, ನಾವೇ ಜಾಗ ಹಿಡಿದು ಕೂರಬೇಕು. ನಾವೇ ಬಫೆಗೂ ಕ್ಯೂನಿಲ್ಲಬೇಕು. ಆಟೋ ಹಿಡಿದು ಹಿಂದಿರುಗಬೇಕು. ಪರಭಾಷೆ ನಟಿಯರಿಗೆ ಇದ್ದಲ್ಲೇ ಸಪ್ಲೈ. ದೊಡ್ಡ ಫಲಕಗಳು. ಅಭಿನಂದನೆಗಳ ಸುರಿಮಳೆ, ಹಿರೋನೇ ಕಾರ್‌ವರೆಗೂ ಹೋಗಿ ಟಾಟಾ ಹೇಳಿಬರುತ್ತಿದ್ದ. ಕೋಟಿಗಟ್ಟಲೆ ಹಣ ಸುರಿವ ನಿರ್ಮಾಪಕ ಇವರೆದುರು ನಾಯಿಯಂತೆ ಬಾಲ ಆಡಿಸುತ್ತಿದ್ದ. ಕನ್ನಡದ ಹುಡ್ಗರಾದ ನಮ್ಮನ್ನು ಸಮಾರಂಭದಲ್ಲಿ ಹಿಂದೆ ಕೂತ್ಕಳ್ಳಿ ಎಂದು ಗದರುತ್ತಿದ್ದದ್ದೂ ಇದೆ. ಕಣ್ಣೀರಿಡುವಂತಿಲ್ಲ ಅಪಮಾನವೂ ಅಭ್ಯಾಸವಾಗಿ ಹೋಗಿದೆ. ಇಲ್ಲಿ ಕಣ್ಣೀರು ಸುರಿಸಿಯೇ ಕೋಟಿ ಬಾಚುತ್ತಾರೆ. ನಿಜಜೀವನದಲ್ಲಿ ಸುರಿಸುವ ಕಣ್ಣೀರಿಗೆ ಯಾರೂ ಕಾಸು ಕೊಡುವುದಿಲ್ಲ. ಕರಗುವುದೂ ಇಲ್ಲ. ನಾನಂತೂ ಇತ್ತೀಚೆಗೆ ತುಂಬಾ ದುರ್ಬಲಳಾಗಿದ್ದೇನೆ. ಸುಸ್ತಾಗಿ ಮಲಗಿದ್ದಾಗಲೆ ನಾಟಕದ ಕಂಪನಿ ಜಯಣ್ಣ ಬರುತ್ತಾನೆ. ಹೊಸ ಕಂಪನಿ ಮಾಡಿದ್ದಾನಂತೆ. “ತಿಂಗಳಿಗೆ ಐದುಸಾವಿರ ಕೊಡ್ತೀನಿ ಬಾ” ಅಂತ ಕರೆಯುತ್ತಾನೆ. ಅಮ್ಮ ಸುತ್ರಾಂ ಒಪ್ಪುವುದಿಲ್ಲ. “ಈ ಕಾಲದಲ್ಲಿ ನಿನ್ನ ನಾಟಕ ಯಾರ್ ನೋಡ್ತಾರಯ್ಯ” ಎಂದು ದಬಾಯಿಸಿ ಕಳಿಸಿಬಿಡುತ್ತಾಳೆ. ಅವನ ಅಭಿಮಾನ ಅಂತಃಕರಣ ಅವಳನ್ನು ತಟ್ಟುವುದೇ ಇಲ್ಲ. ನಾನು ಪರಿಸ್ಥಿತಿಯ ಶಿಶು, ಪ್ರೀತಿ ಪ್ರೇಮದ ಬಗ್ಗೆ ಗಾಢವಾದ ಸಿನಿಮಾ ಮಾಡುವ ಈ ಜನಕ್ಕೆ ನಿಜವಾದ ಪ್ರೀತಿ ಪ್ರೇಮದ ಗಾಢ ಅನುಭವವೇ ಇಲ್ಲ! ಎಲ್ಲಾ ಕೃತಕತೆ!

ತಂಗಿಯ ಪಾತ್ರದಿಂದ ನನಗೀಗ ತಾಯಿಯ ಪಾತ್ರಕ್ಕೆ ಬಡ್ತಿ ಕೊಡುವ ಔದಾರ್ಯ ತೋರಲಾರಂಭಿಸಿದ್ದರು. ಅಮ್ಮ ಈ ಸಲ ರಾಜಿಯಾಗಲು ತಯಾರಿರಲಿಲ್ಲ. ಕನಸುಗಳು ಛಿದ್ರವಾದರೂ ಸರಿ “ನಿನ್ನನ್ನು ತಾಯಿಯ ಪಾತ್ರದಲ್ಲಿ ನೋಡಲಾರೆ ಕಣಮ್ಮ” ಎಂದು ಗಳಗಳ ಅತ್ತಿದ್ದಳು. “ನೀನು ಎಲ್ಲರ ಹತ್ತಿರ ಫ್ರೀಯಾಗಿರ್‍ಬೇಕು ಕಣೆ” ಅಂತ ಹೇಳುವಷ್ಟು ಫಾರ್‌ವರ್ಡ್ ಆದಳು. ಹಿರೋನ ತೊಡೆ ಮೇಲೆ ಕೂತು ಲಲ್ಲೆ ಹೊಡೆವ ಪಂಜಾಬಿ ಹುಡುಗಿಯರನ್ನು ನೋಡಿ ದಂಗುಬಡಿದಿದ್ದು, ತುಂಬಿದ ಸಿನೆಮಾ ಜಾತ್ರೆಯಲ್ಲಿ ನಾನು ಅಮ್ಮ ಅನಾಥರಾದೆವು ಅನ್ನಿಸಿಬಿಟ್ಟಿತ್ತು. ಮಾನವೀಯ ಸಂಬಂಧಗಳ ಬಗ್ಗೆ ಚಿತ್ರಿಸಿ ಅವಾರ್ಡ್ ಗಿಟ್ಟಿಸುವ ಈ ಜನರಲ್ಲಿ ಮಾನವೀಯ ಗುಣಗಳನ್ನು ದುರ್ಬಿನ್ ಹಾಕಿ ಹುಡಕಬೇಕಷ್ಟೆ. ಕೆಲಸವಿದ್ದಾಗ ಮಾತ್ರ ಮಾತನಾಡಿಸುವ ಸಿನಿಮಾಮಂದಿ ಉಳಿದಂತೆ ರಸ್ತೆಯಲ್ಲಿ ಸಿಕ್ಕರೆ ಕನಿಷ್ಠ ಮುಗುಳ್ನಗೆ ಬೀರದಷ್ಟು ಕಂಜೂಸ್‌ಗಳು. ಇಲ್ಲಿ ಯಶಸ್ವಿಯಾದಾಗ ಒಬ್ಬರನ್ನೊಬ್ಬರು ದಾದಾ, ಅಪ್ಪಾಜಿ, ಗುರು, ಮಾಮ, ನಾನಗಾರು, ಅಣ್ಣಾ ಎಂದೆಲ್ಲಾ ಸಂಬಂಧ ಹಚ್ಚಿ ಕರೆದುಕೊಳ್ಳುತ್ತಾರೆ. ಯಶಸ್ಸು ಗೋತಾ ಹೊಡೆದರೆ ಮೂಲೆಗೆ ತಳ್ಳಿಬಿಡುತ್ತಾರೆ. ನನಗಂತೂ ಬ್ರೇಕ್ ಸಿಗಲೇ ಇಲ್ಲ. ನಮ್ಮಂತವರು ಅನಾಮಧೇಯರಾಗೇ ಸಾಯುತ್ತೇವೆಂಬ ಕಟು ಸತ್ಯವನ್ನೀಗ ಜೀರ್ಣಿಸಿಕೊಳ್ಳುವುದನ್ನು ಕಲಿಯುತ್ತಿದ್ದೇನೆ. ನಮ್ಮ ಸ್ಟಿಲ್‌ಗಳನ್ನು ಯಾವ ಪತ್ರಿಕೆಯವರೂ ಹಾಕರು, ಸಂದರ್ಶನ ಪ್ರಕಟಿಸರು. ಅವರಿಗೂ ಪರಭಾಷಾ ನಟಿಯರ ಸ್ವಿಮಿಂಗ್ ಸೂಟ್ ಫೋಟೋಗಳೇ ಬೇಕು. ಕನ್ನಡಿಗಳಾಗಿ ಹುಟ್ಟಿದ್ದೇ ಪ್ರಾಯಶಃ ಅಪರಾಧವಾಗಿರಬೇಕು. ನಿರಾಶೆಯಿಂದ ಅತ್ತು ಅತ್ತು ಕಣ್ಣೀರು ಬತ್ತಿ ಹೋಗಿವೆ. ಅಳಬೇಕೆಂದರೆ ಗ್ಲಿಸರಿನೇ ಹಚ್ಚಬೇಕು.
* * * *

ಕಾನಿಷ್ಕಾ ಹೋಟೆಲ್ ಬಳಿ ಆಟೋ ಗಕ್ಕನೆ ನಿಲ್ಲುತ್ತದೆ. ದಡಬಡನೆ ಅಮ್ಮ ನಾನು ಇಳಿಯುತ್ತೇವೆ. ಕೌಂಟರಲ್ಲಿ ವಿಚಾರಿಸುತ್ತೇವೆ. “ನಿರ್ದೆಶಕರು ಆಗಲೆ ಹೊರಟು ಹೋದರು.” ಅನ್ನುತ್ತಾನೆ ರಿಸೆಪ್ಯೂನಿಸ್ಟ್.

“ಮತ್ತೆ ಯಾರಿದ್ದಾರೆ?” ಅಮ್ಮ ತಡಬಡಿಸುತ್ತಾಳೆ. “ಯಾರೂ ಇಲ್ಲ…… ಹಿರೋಯಿನ್ ಡೇಟ್ಸ್ಗೆ ಅಂತ ಅವರ ಮನೆಗೆ ಹೋಗಿದ್ದಾರೆ.”

“ಅಂದ್ಮೆಲೆ ಬರ್ತಾರೆ ಕೂತ್ಕಳ್ಳೆ.” ಅಮ್ಮ ನಾನು ಹಾಲ್‌ನ ಕುರ್ಚಿಗಳಲ್ಲಿ ‘ಉಸ್’ ಅಂತ ಕೂತುಬಿಡುತ್ತೇವೆ. ವಿಪರೀತ ಸೆಖೆ. ಮಳೆ ಬರಬಹುದು ಅನಿಸುತ್ತದೆ. ಹನ್ನೊಂದು ಗಂಟೆಯಾದರೂ ಒಬ್ಬರೂ ಪತ್ತೆ ಇಲ್ಲ. ಮಳೆ ಶುರು.

“ಹೋಗೋಣ್ವಾ” ಅನ್ನುತ್ತೇನೆ. “ಸೆಕೆಂಡ್ ಹಿರೋಯಿನ್ ಚಾನ್ಸು ಅಂತಾರೆ. ಕಾಯೋಣ ಸುಮ್ಗಿರು” ಗದರುತ್ತಾಳೆ. ಹನ್ನೊಂದೂವರೆ ಆಗುತ್ತದೆ.

ಕಾರ್ ಬಂದು ನಿಲ್ಲುತ್ತದೆ. ನಿರ್ಮಾಪಕ ಮತ್ತು ಇತರರು ಜೋರಾಗಿ ನಗುತ್ತಾ, ಮಾತನಾಡುತ್ತಾ ಇಳಿದು ಬರುತ್ತಾರೆ.

“ಹಿಂದಿಯಲ್ಲಿ ಆಕೆ ಭಾರಿ ಬಿಜಿ. ಒಪ್ಪಿಕೊಂಡಿದ್ದೇ ಪುಣ್ಯ, ಅಡ್ವಾನ್ಸೇ ಎರಡು ಲಕ್ಷ ಕೇಳ್ತಾಳೆ. ಹೀರೋಗೆ ಅವಳೇ ಬೇಕಂತಪ್ಪ, ಮಾಡೋದೇನು? ಶಿವ ಅಂತ ಜಮಾಯಿಸೋದು.”

ಕನ್ನಡವೇ ಉಸಿರು ಬಸಿರು ಅನ್ನುವ ಹೀರೋ ಸಿನಿಮಾದಲ್ಲೂ ಪರಭಾಷಾ ನಟಿಯರಿಗೇ ಮಣೆ. ಒಬ್ಬೊಬ್ಬರನ್ನು ಸೀಳಿಬಿಡಬೇಕೆನಿಸುತ್ತದೆ. ಅಮ್ಮನೇ ಅಡ್ಡ ನಿಂತು ಅಸಿಸ್ಟೆಂಟ್ ಗಮನ ಸೆಳೆಯುತ್ತಾಳೆ.

“ಈಗೇನ್ರಿ ಬರೋದು? ಆ ಪಾತ್ರ ಆಗ್ಲೆ ಬೇರೆಯವರಿಗೆ ಕೊಟ್ಟಾಯ್ತು. ರೀ…. ಟೈಂ ಸೆನ್ಸ್ ಬ್ಯಾಡ್ವ ನಿಮ್ಗೆ ….. ಹೋಗಿ ಹೋಗಿ” ಗುರುಗುಟ್ಟುತ್ತಾನೆ.

“ಹಾಗಲ್ಲ ಸಾ. ನಾವು ಆವಾಗ್ಲೆ ಬಂದ್ವಿ” ಅಮ್ಮ ಅಂಗಲಾಚುತ್ತಾಳೆ. ಅವನಿಗೋ ಪೇಶನ್ಸೇ ಇಲ್ಲ. “ಡೈರೆಕ್ಟ್ರು ಆಗ್ಲೆ ಮನೀಗ್ ಹೋಗಿ ಆಯ್ತುರೀ.”

“ದಯವಿಟ್ಟು ಕ್ಷಮಿಸಪ್ಪಾ. ಆಟೋ ಹಿಡಿದು ಬರೋದು ಕೊಂಚ ಲೇಟಾಯ್ತು…. ಅದೂ ಸೆಕೆಂಡ್ ಹೀರೋಯಿನ್ ಅಂತಿ. ಹಂಗ್ ಮಾಡ್ಬೇಡಪ್ಪಾ” ಅಳುತ್ತಾಳೆ ಅಮ್ಮ.

“ನೋ. ನೋ. ಇಟ್ ಈಸ್ ಟೂ ಲೇಟ್. ಆಗ್ಲೆ ಅದಕ್ಕೂ ತಮಿಳು ನಟಿ ಹಾಕಾಯ್ತು. ನಾಳೇ ಬೆಳಿಗ್ಗೆ ಆರು ಗಂಟೆಗೇನೆ ಬಂದ್ರೆ ಡೈರೆಕ್ಟರ್‍ ಸಿಗ್ತಾರೆ. ಯಾವುದಾದ್ರೂ ರೋಲ್ ಕೊಡೋಣ…. ಓಕೆ” ಉಬ್ಬು ಹಾರಿಸುತ್ತಾನೆ.

“ಪ್ಲೀಸ್ ಸಾರ್‍” ನಾನು ಹಿಡಿಯಷ್ಟಾಗುತ್ತೇನೆ. ಅವನು ನನ್ನತ್ತ ತಿರಸ್ಕಾರದಿಂದ ನೋಡಿ ಲಿಫ್ಟ್ ಒಳಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಾನೆ. ಅಳು ಬರುತ್ತದೆ. ಕಣ್ಣೀರೇ ಬಾರದು. ಎದೆ ಭಾರವಾಗಿ ಉಸಿರುಗಟ್ಟಿದ ಹಿಂಸೆ. ಇಷ್ಟು ಹೊತ್ತಿನಲ್ಲಿ ಸಿಟಿ ಬಸ್ ಬರೋಲ್ಲ. ರಾಜಾಜಿನಗರದಾಚೆಗಿರುವ ಮನೆಗೆ ಮಳೆಯಲ್ಲಿ ನಡೆದು ಹೋಗಲು ತ್ರಾಣವಿಲ್ಲ. “ಇವರು ಹೇಗೂ ಪಾರ್‍ಟು ಕೊಟ್ಟು ಅಡ್ವಾನ್ಸ್ ಕೊಡ್ತಾರೇ ಅಂತ್ಲೆ ಧೈರ್‍ಯವಾಗಿ ಬಂದೆ ಕಣೆ ಆಟೋಕ್ಕೂ ದುಡ್ಡು ಸಾಲ್ದು. ಈಗೇನೇ ಮಾಡೋದು” ಅಮ್ಮ ಅಧೀರಳಾಗುತ್ತಾಳೆ. ಬಿಕ್ಕುತ್ತಾಳೆ, ಅವಳ ಮುಖದಲ್ಲಿ ಮೊದಲಬಾರಿಗೆ ಭಯ ಹೆಪ್ಪುಗಟ್ಟುತ್ತದೆ. ಮಧ್ಯರಾತ್ರಿ ಇಬ್ಬರೇ ಹೆಂಗಸರು ಹೋಟೆಲ್‌ನಿಂದ ಈಚೆ ಬರುತ್ತೇವೆ. ಹೋಟೆಲ್‌ನವನು ಗಾಜಿನ ಬಾಗಿಲುಗಳನ್ನು ನಿರ್‍ದಾಕ್ಷಿಣ್ಯವಾಗಿ ದೂಡುತ್ತಾನೆ. ಮಳೆಯಲ್ಲಿ ನೆನೆಯುತ್ತಾ ನಿಲ್ಲುತ್ತೇವೆ. ಅಮ್ಮ ವಿಲಿವಿಲಿಗುಟ್ಟುತ್ತಾಳೆ. ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಜಯಣ್ಣನ ನಾಟಕದ ಕಂಪನಿ ನಡೀತಿದೆ. ಅಲ್ಲಿಗೆ ನಡೆದು ಹೋಗಬಹುದು. ಅವನ ಹತ್ತಿರ ದುಡ್ಡು ಈಸ್ಕೊಂಡು ಹೋಗೋಣ. ಇಲ್ಲ ಕಾರಲ್ಲಿ ಅವನೇ ಕಳಿಸಿಕೊಡುತ್ತಾನೆ ಅನ್ನುತ್ತೇನೆ. ಅಮ್ಮ ಮಾತನಾಡುವುದಿಲ್ಲ. ಬಾಗಿಲು ಬಡಿದು ತೆಗೆಸಿ ಲಾಡ್ಜ್‌ನವನ ಬಳಿ ಇಪ್ಪತ್ತು ರೂಪಾಯಿ ಸಾಲ ಕೇಳುತ್ತಾಳೆ. ಅವನು ಇವಳ ಗೋಗರೆತಕ್ಕೆ ಕರಗುವುದಿಲ್ಲ. ಸಿನಿಮಾದವರನ್ನು ಲಾಡ್ಜ್‌ನವರು ಎಂದೂ ನಂಬುವುದಿಲ್ಲ. ನಿರ್‍ಮಾಪಕ ಇರುವ ಕೋಣೆಗೆ ಹೋಗಿ ಬಾಗಿಲು ತಟ್ಟುವ ಎದೆಗಾರಿಕೆಯಿಲ್ಲ. ಲಾಡ್ಜ್‌ನವರು ನಮ್ಮನ್ನಿಗ ಹೊರತಳ್ಳುತ್ತಾನೆ. ನಾನೀಗ ಅಮ್ಮನ ಕೈನ ಗಟ್ಟಿಯಾಗಿ ಹಿಡಿದು ಮಳೆಗೆ ಒಪ್ಪಿಸಿಕೊಳ್ಳುತ್ತೇನೆ. ಗಟ್ಟಿಯಾಗುತ್ತೇನೆ. “ಬಂದದ್ದಾಗಿದೆ. ನಿಂತರೆ ಹೇಗಮ್ಮ… ನಡಿ” ಎಂದು ಸರಸರನೆ ಹೆಜ್ಜೆ ಹಾಕುತ್ತೇನೆ. ಗಾಂಧಿನಗರ ಕತ್ತಲಲ್ಲಿ ಒದ್ದೆಯಾಗುತ್ತಿರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಅಂತರ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys