ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ
ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು;
ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ
ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು
ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು;
ಚೆಲುವ ಪ್ರಭುವಲ್ಲಿ ಮೇಳೈಸಿರುವ ಸಿರಿಯ ಪ್ರಭೆ
ಬಾಡುತ್ತ ಬಾಡುತ್ತ ನಿಧಾನ ಕ್ಷೀಣಿಸುವುದು ;
ಕಡೆಗೊಮ್ಮೆ ಬೆಳಕು ಕಂತುವುದು ನಿಜ, ಆದರೆ
ತಬ್ಬಿಬ್ಬುಗೊಳಿಸಿ ತುಡುಕುವ ಕಾಲನ ವಿರುದ್ಧ
ಈಗಿನಿಂದಲೆ ಕೋಟೆಯೊಂದನ್ನು ಕಟ್ಟುವೆನು,
ನನ್ನ ಪ್ರೇಮಿಯ ಒಲವು ಸೌಂದರ್ಯ ಎಂದಿಗೂ
ಸ್ಮೃತಿಯಿಂದ ಜಾರದಿರುವಂತೆ ಕಾಪಾಡುವೆನು.
ಈ ಕಪ್ಪು ಗೆರೆಗಳಲಿ ಆ ಚೆಲುವು ಹೊಳೆಯುವುದು
ಅದರೊಡನೆ ಅವನ ಸ್ಮೃತಿ ಎಂದೆಂದೂ ಉಳಿಯುವುದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 63
Against my love shall be as i am now