ಉತ್ತರಣ – ೯

ಉತ್ತರಣ – ೯

ಬಿಚ್ಚಿಕೊಂಡ ಹಳೆಯ ನೆನಪುಗಳು

ಅನುರಾಧ ಮದುವೆಯಾಗಿ ಹೋಗುವ ಮೊದಲು ಈ ಮನೆಯ ವಾತಾವರಣವೇ ಬೇರೆಯಿತ್ತು. ನಗು, ಗಲಾಟೆಗಳಿಗೆಂದೂ ಬರವಿರಲಿಲ್ಲ. ಮೌನಿಯೆಂದರೆ ಆನಂದನೊಬ್ಬನೇ. ಅನುರಾಧಳ ಮುಖದಲ್ಲಿ ನಗು ಮಾಸಿದ್ದೆಂಬುದೇ ಇರಲಿಲ್ಲ. ಅವರಿವರು ಮನೆಗೆ ಬಂದು ಹೋಗುವುದೂ ಜಾಸ್ತಿ, ಚಿಕ್ಕಮ್ಮನ ಮಗಳು ಸರಿತಾ ಇದ್ದುದೇ ಇಲ್ಲಿ. ಅವಳೋ, ತೆನಾಲಿ ರಾಮಕೃಷ್ಣನ ಸ್ತ್ರೀ ರೂಪು. ಒಳ್ಳೇ ತಮಾಷೆಗಾರ್‍ತಿ, ಅನುರಾಧಳಿಗೆ ಒಳ್ಳೇ ಜತೆ, ಎಲ್ಲರನ್ನೂ ನಗಿಸುವುದು ಅವಳ ಕೆಲಸ.

ಪೂರ್ಣಿಮಾ ಚಿಕ್ಕಂದಿನಿಂದಲೂ ಮಹಾ ಸಿಡುಕಿ. ಕೂತರೆ ನಿಂತರೆ ಸಿಟ್ಟು ಅವಳಿಗೆ, ಆ ಸಿಟ್ಟಿನಿಂದಾಗಿ ತಂದೆಯ ಕೈಯಿಂದ ಬೇಕಷ್ಟು ಏಟು ತಿಂದಿದ್ದಾಳೆ. ಬೆಳೆದಂತೆ ಸಿಡುಕುತನ ಮರೆಯಾಗಿದ್ದರೂ, ಸಿಟ್ಟಿಗೇನೂ ತೊಂದರೆಯಿರಲಿಲ್ಲ. ಆದರೆ ಈ ರೀತಿ ಮನೆಯ ಭಾರವನ್ನೆಲ್ಲಾ ವಹಿಸಿಕೊಂಡ ಮೇಲೆ ಮೌನವಾಗಿದ್ದಾಳೆ. ದೇಹವನ್ನೆಲ್ಲಾ ಚಿಪ್ಪಿನೊಳಗೆ ಎಳೆದುಕೊಂಡ ಆಮೆಯಂತೆ, ಭಾವನೆಗಳನ್ನೆಲ್ಲಾ ಒಳಗೆಳೆದುಕೊಂಡು ಮುಚ್ಚಿಟ್ಟಿದ್ದಾಳೆಂದು ಅನಿಸುತ್ತದೆ. ಅವಳ ನೋವು, ನಲಿವು ಪ್ರಕಟವಾಗುವುದೇ ಅಪರೂಪ.

ಆಗ ಅಚಲ, ನಿರುಪಮಾ ಚಿಕ್ಕವರು. ಅವರ ಜಗಳ ಗಲಾಟೆಗಳಿಗೆ ಮಿತಿಯಿರಲಿಲ್ಲ. ಅವರಿಗೆ ಯಾವಾಗಲೂ ಅನುರಾಧಳ ರಕ್ಷೆ, ಅನುರಾಧ ಅವರ ಪರವಾಗಿ ಮಾತಾಡಿದಾಗಲೆಲ್ಲಾ ತಂದೆ ಸುಮ್ಮನೇ ಹೋಗುತ್ತಿದ್ದರು. ಅಮ್ಮನ ಗದರಿಕೆ, ಅವರಿಬ್ಬರಿಗೂ ಬೋರ್‍ಗಲ್ಲ ಮೇಲೆ ನೀರು ಸುರಿದಂತೆ, ಏನೂ ಅನಿಸುತ್ತಿರಲಿಲ್ಲವೇನೋ? ಇಬ್ಬರೂ ಗೋಸುಮಾರಿಗಳು. ಆದರೆ ಈಗ ಅಚಲ ಮಾನಸಿಕವಾಗಿಯೂ ದೈಹಿಕವಾಗಿಯೂ ಬಹಳ ಬೆಳೆದುಬಿಟ್ಟಿದ್ದಾನೆ. ಬೇರೆಯವರಿಗೆ ಅರಿವು ಕೊಡದೇ ಅವನ ಭಾವನೆಗಳು ಅನಿಸಿಕೆಗಳು ಬೆಳೆದುಬಿಟ್ಟಿವೆ. ತನ್ನ ಮನದ ಆಳ ಯಾರಿಗೂ ತಿಳಿಯಬಾರದು ಎನ್ನುವ ರೀತಿಯಲ್ಲಿ ಅವನ ನಡವಳಿಕೆಯೂ ರೂಪಿತವಾಗಿದೆ. ಆದರೆ ನಿರುಪಮಾ ಇನ್ನೂ ಚೆಲ್ಲು ಹುಡುಗಿಯೇ.

ಆನಂದ ಮೊದಲಿನಿಂದಲೂ ಅರಿವಿಗೆ ಸಿಗದ ವ್ಯಕ್ತಿ! ಸದಾ ಮೌನಿ. ಸಿಟ್ಟಿನಲ್ಲಿ ಪೂರ್ಣಿಮಾಗಿಂತಲೂ ಒಂದು ಕೈ ಮೇಲೆ, ಏನೋ ದೊಡ್ಡಸ್ತಿಕೆ ನಡೆವಳಿಕೆಯಲ್ಲಿ, ಅನುರಾಧಳೆಂದರೆ ಅಷ್ಟಕ್ಕಷ್ಟೇ. ಅವಳನ್ನು ಪ್ರತಿಸ್ಪರ್ಧಿಯೊಬ್ಬಳನ್ನು ನೋಡಿದಂತೇ ನೋಡುತ್ತಿದ್ದ. ಚಿಕ್ಕದಿರುವಾಗ ಇಬ್ಬರೂ ತುಂಬಾ ಜಗಳಾಡುತ್ತಿದ್ದರು. ಅನುರಾಧ ಅಳುತ್ತಾ ಬಂದು ತಂದೆಯೊಡನೆ ದೂರಿಡುತ್ತಿದ್ದಳು. ಅಂಥಾ ಸಂದರ್ಭಗಳಲ್ಲಿ ಆನಂದ ತಂದೆಯ ಕೈಯಿಂದ ಪೆಟ್ಟು ತಿನ್ನುತ್ತಿದ್ದ, ಚಿಕ್ಕವಳೊಡನೆ ಏನು ಜಗಳವೆಂಬ ಬೈಗಳು ತಪ್ಪಿದ್ದಿಲ್ಲ. ಬೆಳೆದಂತೆಲ್ಲಾ ಈ ಅಂತರವೂ ಬೆಳೆಯುತ್ತಲೇ ಹೋಯಿತು. ಅನುರಾಧ ಬುದ್ದಿ ತಿಳಿದ ಮೇಲೆ ಅಣ್ಣನೆಂದು ಹತ್ತಿರ ಸರಿಯಲು ಪ್ರಯತ್ನಿಸಿದಷ್ಟೂ ಅವನು ದೂರ ಸಿಡಿಯುತ್ತಿದ್ದ. ಮತ್ತೆ ಕೆಲಸಕ್ಕೆ ಸೇರಿದ ಮೇಲೆ ತಿರುಗಾಟವೂ ಜಾಸ್ತಿ. ಮನೆಯಲ್ಲಿ ಅವನು ಇರುವುದೇ ಅಪರೂಪ. ಅಪರೂಪಕ್ಕೊಮ್ಮೆ ಮನೆಯಲ್ಲಿರುವಾಗಲೂ ಅಷ್ಟೇ. ಅತಿ ಪ್ರೀತಿಯ ನಡೆವಳಿಕೆಯಿಲ್ಲ. ಒಂದು ರೀತಿಯ ದೂರೀಕರಣ. ಯಾಕೀರೀತಿಯ ನಡವಳಿಕೆಯೆಂದೇ ಯಾರಿಗೂ ಗೊತ್ತಿಲ್ಲ.

ರಾಮಕೃಷ್ಣಯ್ಯನವರಿಗೆ ಮೊದಲಿನಿಂದಲೂ ಅನುರಾಧಾಳ ಮೇಲೆಯೇ ಆಸ್ತೆ ಜಾಸ್ತಿ. ಎಲ್ಲಾ ಕೆಲಸಕ್ಕೂ ಅನುರಾಧಳೇ ಬೇಕು. ಅನುರಾಧಳಿಲ್ಲದಿದ್ದರೆ ಈ ಮನೆಯಲ್ಲಿ ಏನೂ ನಡೆಯದು, ಎನ್ನುವ ಯೋಚನೆ ಅವರದ್ದು. ಇದು ಆನಂದನಿಗೆಂದೂ ಇಷ್ಟವಾಗುತ್ತಿರಲಿಲ್ಲ. ಸುಶೀಲಮ್ಮನಿಗೂ ಇದು ಸರಿ ಕಾಣುತ್ತಿರಲಿಲ್ಲ. ಅವರಿಗೆ ಮಗಳ ಮೇಲೆ ಪ್ರೀತಿ ಕಡಿಮೆಯೇನೂ ಅಲ್ಲ. ಅನುರಾಧಳೆಂದರೆ ಸಾಕಷ್ಟು ಅಭಿಮಾನವಿದೆ. ಆದರೆ ಮಗನನ್ನು ಚಿಕ್ಕದು ಮಾಡುವುದು ಅವರಿಗೆ ಸುತರಾಂ ಇಷ್ಟವಿರಲಿಲ್ಲ. ಮಗಳೆಂದಾದರೂ ಪರರ ಮನೆಯ ಸ್ವತ್ತು ಎಂದು ಅವರ ವಾದ. ಎಂದಿದ್ದರೂ ತಮಗೆ ಮಗನೇ ಊರುಗೋಲು ಎಂದು ಅವರ ಭಾವನೆ.

ಸುಶೀಲಮ್ಮನಂಥಾ ಅಮ್ಮ ಎಲ್ಲರಿಗೂ ಇರಲಿಕ್ಕಿಲ್ಲ. ಅಪರೂಪದ ವ್ಯಕ್ತಿತ್ವ ಅವರದ್ದು. ಎಲ್ಲಾ ಹೆಂಗಸರಿಗಿಂತಲೂ ಪ್ರತ್ಯೇಕವಾದ ವ್ಯಕ್ತಿ ಅವರು, ಸದಾ ನಗುಮುಖ ತುಂಬಿದ ಕೊಡ. ಹೆಂಗಸರಿಗೆ ವಿದ್ಯೆ ಬೇಡವೆನ್ನುವ ಕಾಲದಲ್ಲೂ ಇಂಟರ್ ಮೀಡಿಯೇಟ್ ಮುಗಿಸಿದ ಹೆಂಗಸು. ಇಂಗ್ಲೀಷ್‌ನಲ್ಲಿ ಸುಮಾರಷ್ಟು ಪಾಂಡಿತ್ಯವಿತ್ತು. ಧರ್ಮಗ್ರಂಥಗಳನ್ನೆಲ್ಲಾ ಓದಿ ತಿಳಿದುಕೊಂಡಿದ್ದರು. ಯಾವ ರೀತಿಯ ಚರ್ಚೆಯಲ್ಲೂ ಅವರು ಸೋಲುತ್ತಿರಲಿಲ್ಲ. ಸರಕು ಬಹಳಷ್ಟಿತ್ತು. ಅನುರಾಧ ಯಾವಾಗಲಾದರೂ ಒಂದು ವಿಷಯದಲ್ಲಿ ಅವರ ಹತ್ತಿರ ಚರ್ಚೆಗಿಳಿದರೆ ಗೆಲ್ಲುವುದು ಸಾಧ್ಯವಾಗಿರಲಿಲ್ಲ. ಎಲ್ಲೆಲ್ಲಿಂದ ಉದಾಹರಣೆ ತೋರಿಸಿ ಅವರ ವಾದವನ್ನು ಎಲ್ಲರೂ ಒಪ್ಪುವಂತೆ ಮಾಡುವ ಚಾಕಚಕ್ಯತೆ ಅವರಿಗಿತ್ತು. ಕಾಲೇಜಿಗೆ ಪ್ರೊಫೆಸರ್ ಆಗಿದ್ದ ಅಪ್ಪನೂ ಕೆಲವೊಮ್ಮೆ ಅವರೊಡನೆ ಚರ್ಚಿಸಿ ಸೋಲುವುದಿತ್ತು. ಮದುವೆಯಾದ ಪ್ರಾರಂಭದಲ್ಲಿ ಅವರಿಗೆ ಮುಂದೆ ಕಲಿಯುವ ಹಂಬಲ ಬಹಳವಿತ್ತಂತೆ. ಆದರೆ ಅದಕ್ಕೆ ಪ್ರೋತ್ಸಾಹಸಿಗಲಿಲ್ಲ. ರಾಮಕೃಷ್ಣಯ್ಯನವರಿಗೆ ಇಷ್ಟವಿದ್ದರೂ ಅವರ ತಾಯಿಗದು ಸರಿಯಾಗಿರಲಿಲ್ಲ. ಮನೆ, ಮಠ, ಮಕ್ಕಳು ಎಂದು ಅವರಿಗೆ ಬಿಡುವೇಳೆಯೂ ಕಡಿಮೆಯಾಗಿತ್ತು. ಕ್ರಮೇಣ ಕಲಿಯುವ ಉತ್ಸಾಹ ಇಳಿದರೂ, ಓದುವುದರಲ್ಲಿ ವಿಪರೀತ ಆಸಕ್ತಿ ಬೆಳೆಯಿತು. ಕೈಗೆ ಪುಸ್ತಕ ಸಿಕ್ಕಿದಾಗ ರಾತ್ರಿಯ ನಿದ್ದೆ ಮರೆತೂ ಓದುತ್ತಿದ್ದರು.

ಸುಶೀಲಮ್ಮನಿಗೆ ಗಂಡನೆಂದರೆ ವಿಪರೀತ ಭಯ. ರಾಮಕೃಷ್ಣಯ್ಯನವರು ಮೊದಲು ಮಹಾಸಿಡುಕರಂತೆ. ಎರಡೆರೆಡು ದಿನ ಮಾತು ಊಟ ಬಿಟ್ಟು ಕೂತದ್ದೂ ಇತ್ತು. ಅಂಥಾ ಸಂದರ್ಭಗಳಲ್ಲಿ ಸುಶೀಲಮ್ಮ ಸೋತು ಕಂಗಾಲಾಗುತ್ತಿದ್ದರು. ಆಗ ಬೆಳೆದ ಭಯ ಇಂದಿಗೂ ಸುಶೀಲಮ್ಮನನ್ನು ಬಿಟ್ಟು ಹೋಗಿಲ್ಲ. ಈಗ ರಾಮಕೃಷ್ಣಯ್ಯನವರಿಗೆ ಹಿಂದಿನ ರೀತಿಯ ಕೋಪವಿಲ್ಲ. ಸುಶೀಲಮ್ಮನ ವ್ಯಕ್ತಿತ್ವಕ್ಕೆ ಅವರು ತುಂಬಾ ಮನ್ನಣೆ ಕೊಡುತ್ತಿದ್ದರು. ಸುಶೀಲಮ್ಮನಂಥಾ ಹೆಂಗಸಾದುದಕ್ಕೆ ತಮ್ಮ ಇಚ್ಛೆಗೆ ವಿರುದ್ಧವಾದ ಮಗನ ಮದುವೆಯನ್ನು ಯಾವ ಗಲಾಟೆಯೂ ಇಲ್ಲದೆ ನಡೆಯಗೊಟ್ಟುದುದು. ಬೇರಾರಾದರೂ ಆಗುತ್ತಿದ್ದರೆ ಈ ಮದುವೆ ಅಷ್ಟು ಸುಲಭದಲ್ಲಾಗುತ್ತಿರಲಿಲ್ಲ. ಆದರೆ ಅದನ್ನು ಆನಂದ, ನಿರ್ಮಲಾ ಇಬ್ಬರೂ ಅರಿತುಕೊಳ್ಳಲಿಲ್ಲ. ಇದರಿಂದಾಗಿಯೇ ಅವರ ಉತ್ಸಾಹ ಕುಂದಿದ್ದು, ಬಹಳ ಆಸೆಯಿಂದ ರೂಪಿಸಿಕೊಂಡ ಜೀವನ ಈಗ ನಡೆಯುತ್ತಿರುವುದೇ ಬೇರೆ ರೀತಿ, ಎಲ್ಲಾ ಕಾಣದ ಕೈಯ ಕೈವಾಡ! ಜೀವನದ ದಿಕ್ಕೇ ಬದಲಾಗುತ್ತದೆ. ನಮಗೆದುರಾಗಿ ತಿರುಗಿ ನಿಲ್ಲುತ್ತದೆ! ಹೋರಾಟಕ್ಕೆ ಎಳೆಯುತ್ತದೆ.

ಸುಶೀಲಮ್ಮನಿಗೆ ಗೊತ್ತಿಲ್ಲದ ವಿದ್ಯೆಯೇ ಇಲ್ಲವೆನ್ನಬೇಕು. ಯಾವ ಕೈಕೆಲಸವಾದರೂ ಸರಿ. ಎತ್ತಿದ ಕೈ. ಮಕ್ಕಳಲ್ಲಿ ಯಾರಿಗೂ ಅವರ ಕೈ ಚಳಕ, ಪರಿಣತಿ ಬಂದಿಲ್ಲ. ಅವರು ಅಡಿಗೆ ಮಾಡಿದರೂ ಅಷ್ಟೇ. ಅದರ ರುಚಿಯೇ ಬೇರೆ. ಆ ಕೈಯಲ್ಲಿ ಏನು ಪವಾಡವಿದೆಯೋ ಎನ್ನುವಂತೆ, ರಾಮಕೃಷ್ಣಯ್ಯನವರಿಗೆ ಅವರ ಅಡಿಗೆ ಬಿಟ್ಟರೆ ಬೇರೆ ಊಟವೇ ಸೇರುತ್ತಿರಲಿಲ್ಲ. ಅವರು ಹೊರಗೆ ಊಟ ಮಾಡುವ ಅಭ್ಯಾಸವನ್ನೇ ಇಟ್ಟು ಕೊಂಡಿಲ್ಲ ಮಕ್ಕಳೂ ಅಷ್ಟೇ. ಅಮ್ಮನ ರುಚಿಕಟ್ಟಾದ ಅಡುಗೆ ತಿಂದು ಕೊಬ್ಬಿದ್ದಾರೆ.

ಅನುರಾಧಳಿಗೆ ಮೂರು ವರುಷದಿಂದ ಆ ರುಚಿಕಟ್ಟಿನ ಊಟ ತಪ್ಪಿ ಈಗ ತುಂಬಾ ತೃಪ್ತಿಯಾಗುವಂತೆ ಊಟ ಮಾಡುತ್ತಿದ್ದಾಳೆ. ಅವರ ಅಡುಗೆಯ ರುಚಿ ತನ್ನ ಪಾಕದಲ್ಲಿ ತರಿಸಬೇಕೆಂಬ ಪ್ರಯತ್ನದಲ್ಲಿ ಅವಳು ಸೋತಿದ್ದಳು. ಶಂಕರ ಯಾವಾಗಲೂ ಅವಳನ್ನು ಕೆಣಕುತ್ತಿದ್ದ “ಅಂಥಾ ನಳಪಾಕದ ಅಮ್ಮನಿಂದ ನೀನು ಇಷ್ಟೇ ಕಲಿತದ್ದೇ ಎಂದು. ಆದರೆ ಅದೆಲ್ಲಾ ಪ್ರಯತ್ನದಿಂದ ಬರೋದಲ್ಲ. ವರವೆಂದೇ ಹೇಳಬೇಕು.

ಮಕ್ಕಳು ದೊಡ್ಡವರಾಗಿ, ಬುದ್ಧಿ ಬರುವಾಗ ರಾಮಕೃಷ್ಣಯ್ಯನವರ ಸಿಟ್ಟು ಕೋಪ ಮಾಯವಾಗಿತ್ತು. ಇಬ್ಬರೂ ತುಂಬಾ ಹೊಂದಿಕೊಂಡೇ ಜೀವನ ನಡೆಸುತ್ತಿದ್ದರು. ರಾಮಕೃಷ್ಣಯ್ಯನವರಿಗೆ ಮಕ್ಕಳಲ್ಲಿ ವಿಪರೀತ ಸಲುಗೆಯಿಲ್ಲದಿದ್ದರೂ ಮಕ್ಕಳಿಗೆ ಸಾಕಷ್ಟು ಸ್ವಾತಂತ್ರ್ಯವಿತ್ತು. ಹೀಗಾಗಿ ಮಕ್ಕಳ ಜೀವನ ಸುಖವಾಗಿಯೇ ಕಳೆದಿತ್ತು. ಆ ಮನೆಯಲ್ಲಿ ನಗುವಿಗೆಂದೂ ಕೊರತೆಯಿರಲಿಲ್ಲ.

ಆದರೆ ಈಗ ಆ ನಗು ಮಾಯವಾಗಿದೆ! ಯಾರಲ್ಲೂ ನಗುವ ಉಮೇದಿಲ್ಲ. ರಾಮಕೃಷ್ಣಯ್ಯನವರು ಜೀವನದ ನೊಗಕ್ಕೆ ಹೆಗಲು ಕೊಟ್ಟು ಸೋತು ಹಣ್ಣಾಗಿದ್ದಾರೆ. ಸುಶೀಲಮ್ಮ ಎಲ್ಲಾ ಕಳೆದುಕೊಂಡಂಥವರಾಗಿದ್ದಾರೆ. ಪೂರ್ಣಿಮಾಳ ಮುಖದಲ್ಲಿ ಯಾವ ರಸಗಳಿಗೂ ಎಡೆಯಿಲ್ಲ. ಅಚಲ ಪ್ರೌಢನಾಗಿದ್ದಾನೆ. ಎಲ್ಲರ ನೋವನ್ನು ಅರಿತು ಮನಕ್ಕೆ ತಂದುಕೊಂಡಿದ್ದಾನೆ. ಯಾವ ರಗಳೆಯನ್ನೂ ಹಚ್ಚಿಕೊಳ್ಳದವಳು ನಿರುಪಮಾಳೊಬ್ಬಳೇ.

ಅನುರಾಧ ಭಾರ ಹೊತ್ತು ಬಂದಿರುವಳಾದರೂ, ಆ ಮನೆಯಲ್ಲಿ ಕಡಿದು ಹೋದ ತಂತಿಗಳನ್ನು ಜೋಡಿಸಿ ಸರಿಪಡಿಸುವ ಯತ್ನಕ್ಕೆ ಕೈ ಹಾಕಿದ್ದಾಳೆ. ಒಂದು ತಂತಿ ಸರಿಯಾಗುತ್ತಾ ಬರುವಾಗ ಇನ್ನೊಂದು ತಂತಿ ಕಡಿಯುವುದೇನೋ ಎನ್ನೋ ಭಯ ಅವಳಿಗೆ.

ಶಂಕರನಿಗೆ ಹೆಂಡತಿಯಲ್ಲಿ ವಿಪರೀತ ಅಕ್ಕರೆ, ಅವನು ಎಂದೂ ಅವಳ ಮನಸ್ಸಿಗೆ ನೋವು ತಂದಿಲ್ಲ. ಹಾಗಾಗಿ ಅವಳಿಗೆ ಬೇಸರಕ್ಕೆಡೆಯಿಲ್ಲ. ಇಲ್ಲಿಗೆ ಬಂದ ಮೇಲೆ ಇಲ್ಲಿಯ ನಿಜವಾದ ರೂಪ ತಿಳಿದು ಅವಳ ಮನ ನೊಂದಿತ್ತು. ಕುಗ್ಗಿತ್ತು. ನಗುಚೆಲ್ಲುವ ತವರು ಅವಳಿಗೆ ಬೇಕು. ನೋವು ತುಂಬಿದ ಮುಖಗಳು ಅವಳನ್ನು ನಡುಗಿಸುತ್ತಿದ್ದುವು.

ರಾಮಕೃಷ್ಣಯ್ಯನವರು ಈಗ ಮೊದಲಿನಂತೆ ಎಲ್ಲದಕ್ಕೂ ಅನುರಾಧಾಳನ್ನು ಕರೆಯುತ್ತಿರಲಿಲ್ಲ. ಮೂರು ವರುಷದಿಂದ ನಿಂತ ಅಭ್ಯಾಸದಿಂದಲೋ, ಭಾರಹೊತ್ತಿರುವ ಮಗಳನ್ನು ಹೆಚ್ಚಿಗೆ ಓಡಿಯಾಡಿಸುವ ಇಚ್ಛೆ ಇಲ್ಲದೆಯೋ, ಯಾವಾಗಲೂ ನಿರುಪಮಾಳನ್ನೇ ಕರೆಯುತ್ತಿದ್ದರು. ಹಲವಾರು ಬಾರಿ ‘ನಿರುಪಮಾ’ ಅಂದಾಗ ಅನುರಾಧಳೇ ತಂದೆಯ ಬಳಿಗೋಡುತ್ತಿದ್ದಳು.

“ಅಪ್ಪಾ, ಯಾಕೆ ಅನುರಾಧಾ ಎಂದು ಕರೆಯೋದನ್ನೇ ಮರೆತುಬಿಟ್ಟಿದ್ದೀರಿ? ಮೊದಲಿನ ಹಾಗೆ ಒಮ್ಮೆಯೂ ಕರೆದಿಲ್ಲ ಈಗ”

ಮಗಳ ಮಾತು ಕೇಳಿದಾಗ ರಾಮಕೃಷ್ಣಯ್ಯನವರಿಗೆ ಮಗಳ ಮೇಲಿನ ಪ್ರೀತಿ ಉಕ್ಕುತ್ತಿತ್ತು. ಇವಳು ಹುಡುಗನಾಗುತ್ತಿದ್ದರೆ ತನಗೆ ಇಷ್ಟೆಲ್ಲಾ ಒದ್ದಾಟ ಇರುತ್ತಿರಲಿಲ್ಲವೇನೋ ಎಂದು ಯೋಚಿಸುತ್ತಾ ಹೇಳುತ್ತಿದ್ದರು, “ನೀನು ಎತ್ತಿಕೊಂಡಿರುವ ಭಾರವೇ ಜಾಸ್ತಿ. ಮತ್ತೆ ಹೀಗೆಲ್ಲಾ ಓಡಿ ಬರಬೇಡ, ಈಗ ನೀನು ಮೊದಲಿನ ಹಾಗಿಲ್ಲವಲ್ಲ?”

“ಮೊದಲಿನ ಹಾಗೇ ಇದ್ದೇನೆ. ನಾನಿಲ್ಲಿರುವಾಗ ನೀವು ಮೊದಲಿನಂತೆ ನನ್ನನ್ನು ಕರೆದರೇ ನನಗೆ ಇಷ್ಟ ಈ ಭಾರದ ನೆನಪೇ ಬರೋದಿಲ್ಲ.”

“ಹಾಗೇ ಆಗಲಿ, ಮೊದಲು ನಿನ್ನ ಹೆರಿಗೆಯಾಗಲಿ.”

“ಆಮೇಲೆ ಅಮ್ಮನ ನಿರ್‍ಬಂಧಗಳು ಮೊದಲಾಗುತ್ತವೆ.”

“ಅದೊಂದು ಹತ್ತು ದಿನ. ಆಮೇಲೆ ನಿನಗೆಲ್ಲಿ ಪುರುಸೋತ್ತಾಗುತ್ತದೆ. ಮಗನ ಆರೈಕೆಯಲ್ಲಿ?”

ತಟ್ಟನೇ ಅನುರಾಧ ಪ್ರಶ್ನಿಸುತ್ತಾಳೆ.

“ಅಪ್ಪಾ, ನಿಮಗೂ ಮೊಮ್ಮಗನದ್ದೇ ಆಸೆಯೇ?”

ಯೋಚಿಸುತ್ತಾ ರಾಮಕೃಷ್ಣಯ್ಯನವರು ನುಡಿಯುತ್ತಾರೆ.

“ಆಸೆಯೆಂದೇನೂ ಇಲ್ಲಮ್ಮಾ, ಯಾವುದಾದರೇನು ನಿನ್ನಂತೆ ಮೊಮ್ಮಗಳೇ ಆಗಲಿ.”

“ನನಗೂ ಮಗಳೇ ಬೇಕಂತ ಆಸೆ. ಆದರೆ ನಿಮ್ಮ ಅಳಿಯ ಮಗನನ್ನೇ ಕಾಯ್ತಿದ್ದಾರೆ. ಅಮ್ಮನ ಹಾಗೇ.”

ತಂದೆ ಮಗಳಲ್ಲಿ ಮೊದಲಿನಿಂದಲೂ ಸಲುಗೆ, ಈ ಸಲುಗೆ ರಾಮಕೃಷ್ಣಯ್ಯನವರಿಗೆ ಬೇರೆ ಮಕ್ಕಳಲ್ಲಿ ಇಲ್ಲ. ಅನುರಾಧಳ ಮದುವೆಯಲ್ಲೂ ಹುಡುಗ ಬಂದು ನೋಡಿದ ಮೇಲೆ ರಾಮಕೃಷ್ಣಯ್ಯನವರೇ ಮಗಳ ಹತ್ತಿರ ಕೇಳಿದ್ದು, ‘ಅನು, ನಿನಗೆ ಹುಡುಗ ಒಪ್ಪಿಗೆಯೇ?’ ಎಂದು. ಅನುರಾಧ ತಂದೆಯ ಪ್ರಶ್ನೆಗೆ ನಾಚಿದ್ದರೂ ಸ್ಪಸ್ಟವಾಗಿ ನುಡಿದಿದ್ದಳು.- “ಅಪ್ಪಾ, ನನಗೆ ಅದೆಲ್ಲಾ ಏನೂ ಗೊತ್ತಾಗೋದಿಲ್ಲ. ನೀವು ಆರಿಸಿದ ಹುಡುಗ ಎಲ್ಲಾ ರೀತಿಯಿಂದಲೂ ನನಗೆ ಸರಿಯಿರಬಹುದೆಂಬ ಧೈರ್ಯ ನನಗಿದೆ. ಅವರು ನನಗೆ ಗಂಡನಾದರೆ ಸಾಲದು. ನಿಮಗೆ ಅಳಿಯನೂ ಆಗಬೇಕು ಎಂಬ ಆಸೆ ನನ್ನದು.”

ಆವಾಗಲೂ ರಾಮಕೃಷ್ಣಯ್ಯನವರಿಗೆ ಮಗಳ ಮೇಲಿನ ಅಭಿಮಾನ ಇಮ್ಮಡಿಸಿತ್ತು. ಎರಡು ಡಿಗ್ರಿಗಳನ್ನು ಪಡೆದ ಹುಡುಗಿ, ಹೊಸ ಅಲೆಯಲ್ಲೇ ಬೆಳೆದವಳಾದರೂ ಎಲ್ಲರಂತೆ ಸತ್ವವಿಲ್ಲದ ಹೊಸತನಕ್ಕೆ ಮಾರುಹೋಗಿಲ್ಲ. ತಂದೆ ತಾಯಿಯ ಮೇಲಿನ ಅಭಿಮಾನ, ಪ್ರೀತಿ ಅವಳಿಗೆಂದೂ ಕಡಿಮೆಯಾಗಲಿಕ್ಕಿಲ್ಲ, ಎನ್ನೊ ಧೈರ್ಯ ಅವರಿಗಿದೆ! ಹೆಣ್ಣು ಮಕ್ಕಳೇ ಹಾಗೇ ಏನೋ ಎನ್ನುವ ನಿರ್ಧಾರಕ್ಕೂ ಅವರು ಕೆಲವೊಮ್ಮೆ ಬರುತ್ತಿದ್ದರು.

ಪೂರ್ಣಿಮಾ ತನ್ನ ಜೀವನವನ್ನು ಎಲ್ಲರಿಗಾಗಿ ತೇಯುತ್ತಿದ್ದಾಳೆ. ಆದರೆ ಅದು ಕರ್ತವ್ಯದಂತೆ. ಆ ಮುಖದಲ್ಲಿ ತೃಪ್ತಿ, ಸಂತಸದ ಕಳೆಯಿಲ್ಲ. ಇದರಿಂದಾಗಿ ರಾಮಕೃಷ್ಣಯ್ಯನವರ ಮನಸ್ಸಿಗೆ ಹಿಂಸೆಯಾಗುತ್ತಿತ್ತು. ಅವಳ ಮದುವೆ ಮಾಡಲಾಗದೇ ಅವಳನ್ನು ಸ್ವಾರ್ಥಕ್ಕಾಗಿ ದುಡಿಸುತ್ತಿದ್ದೇನೆಂಬ ತಪ್ಪಿತಸ್ಥ ಭಾವನೆಗೊಳಗಾಗುತ್ತಿದ್ದರು. ಬೆಟ್ಟದಷ್ಟೂ ಆಸೆಯಿದ್ದರೂ, ಕೈಯಲ್ಲಿ ಏನೂ ಇಲ್ಲದುದರಿಂದ ಅವಳಿಗೆ ಹುಡುಗ ನೋಡಲೇ ಭಯ ಪಡುತ್ತಿದ್ದರು. ವರದಕ್ಷಿಣೆ ಕೇಳಿದರೆ ಎಲ್ಲಿಂದ ಕೊಡಲಿ ಎನ್ನುವ ಹೆದರಿಕೆ ಅವರನ್ನು ಜರ್‍ಜರಿತ ಮಾಡಿತ್ತು. ಇದಕ್ಕೆ ಪರಿಹಾರ ಕಾಣದೇ ಒದ್ದಾಡುತ್ತಿದ್ದರು. ಯಾರೊಡನೆಯೂ ಹೇಳಲಾರರು. ಅದು ಮನದೊಳಗಿನ ಕೊರಗು!

ಅನುರಾಧ ತಂದೆಯೊಡನೆ ಶ್ರೀಕಾಂತನ ವಿಚಾರ ಪ್ರಸ್ತಾಪಿಸಬೇಕೆಂದು ಸಂದರ್ಭಕ್ಕೆ ಕಾಯುತ್ತಿದ್ದಳು. ಪೂರ್ಣಿಮಾಳಿಗೊಂದು ಮದುವೆಯಾದರೆ ತಂದೆಯ ಬಹುದೊಡ್ಡ ಭಾರವೊಂದು ಜರಗಿದಂತೆ ಎಂದು ಅವಳಿಗೆ ಗೊತ್ತು. ಕೆಲಸ ಮಾಡೋ ಹುಡುಗಿ. ಹಾಗಾಗಿ ವರದಕ್ಷಿಣೆ ಕೇಳಲಿಕ್ಕಿಲ್ಲವೆಂಬ ಧೈರ್ಯ, ವರದಕ್ಷಿಣೆಯಿಲ್ಲದಿದ್ದರೆ ಹೇಗಾದರೂ ಒಟ್ಟು ಗೂಡಿಸಿ ಮದುವೆಯ ಖರ್ಚನ್ನು ತೂಗಿಸಬಹುದು ಎಂದು ಅವಳಿಗೆ ಅನಿಸಿತ್ತು.

ರಾಮಕೃಷ್ಣಯ್ಯನವರೊಡನೆ ಸಮಯ ಸಾಧಿಸಿ ಈ ಪ್ರಸ್ತಾಪ ತೆಗೆದಾಗ ಅವರು ನಿರಾಸೆಯಿಂದ, “ಅನು, ನನಗೆ ಕೈ ಹಾಕಲೇ ಹೆದರಿಕೆಯಾಗಿದೆ. ವರದಕ್ಷಿಣೆ ಕೇಳಿದರೆ ಕೊಡುವುದೆಲ್ಲಿಂದ? ಈಗ ಇರುವುದು ಇದೊಂದು ಮನೆ, ಅದರ ಮೇಲೆ ಸ್ವಲ್ಪ ಸಾಲ ಹುಟ್ಟಬಹುದು. ಆದರೆ ಅದನ್ನು ತೀರಿಸುವ ಬಗೆ? ಯಾರು ತೀರಿಸುತ್ತಾರೆ? ಒಂದು ವೇಳೆ ಮಾರಿದರೆ, ಆಮೇಲಿನ ಗತಿ?”

“ಅಪ್ಪಾ, ಹೀಗೆಲ್ಲಾ ಯೋಚಿಸಬೇಡಿ. ಅವನು ವರದಕ್ಷಿಣೆ ಕೇಳಲಿಕ್ಕಿಲ್ಲ. ಒಬ್ಬನೇ ಮಗ. ಆದರ್ಶವಾದಿ ಬೇರೆ. ಹುಡುಗಿಯೂ ಕೆಲಸದಲ್ಲಿದ್ದಾಳೆ. ಮದುವೆಯ ಖರ್ಚಿಗೆ ಹತ್ತು, ಇಪ್ಪತ್ತು ಸಾವಿರ ಹೇಗಾದರೂ ಹೊಂದಿಸಬಹುದು. ಮನೆಯ ಮೇಲೆ ಸಾಲ ತೆಗೆದರೆ ಆನಂದನಾಗಲೀ ಅಚಲನಾಗಲೀ ತೀರಿಸಬಹುದು, ಐದು ಸಾವಿರ ನಾವು ಕೊಡುತ್ತೇವೆ, ಶ್ರೀಕಾಂತನನ್ನು ಬರಲು ಬರೆಯಲೇ? ಹುಡುಗಿ ನೋಡಲಿ, ಮತ್ತೆ ಬೇರೆ ವಿಚಾರ, ಪೂರ್ಣಿಮಾಗೂ ಇಪ್ಪತ್ತಾರು ವರುಷ ಕಳೆಯಿತು. ಚಿಕ್ಕ ಮಗುವಲ್ಲ. ಅವಳ ಜವಾಬ್ದಾರಿ ಕಳೆದರೆ ಮತ್ತೆ ಚಿಂತಿಲ್ಲ. ನಿರುಪಮಾ ಒಬ್ಬಳೇ. ಅಚಲ ಅವನ ದಾರಿ ನಿರ್ಧರಿಸಿದ್ದಾನೆ. ಅವನು ವಾಯುದಳಕ್ಕೆ ಸೇರುತ್ತಾನಂತೆ.”

ರಾಮಕೃಷ್ಣಯ್ಯನವರು ಅರೆಕ್ಷಣ ದಂಗಾಗುತ್ತಾರೆ. “ಏನು ಅವನು ವಾಯುದಳಕ್ಕೆ ಸೇರುತ್ತಾನೆಯೇ? ನನ್ನ ಹತ್ತಿರ ಕೇಳಿಯೇ ಇಲ್ಲ. ಮತ್ತೆ ಹೇಗೆ ನಿರ್ಧರಿಸಿದ? ಇಲ್ಲೇ ಅವನಿಗೆ ಬೇರೆ ಕೆಲಸ ಸಿಗುತ್ತಿರಲಿಲ್ಲವೇ?” ಗಂಟಲಲ್ಲಿ ಏನೋ ಸಿಕ್ಕಿಕೊಂಡ ಅನುಭವ!

ಹೇಗೂ ಮಾತು ಬಂದಾಯಿತು. ಪೂರ್ತಿ ಹೇಳುವುದೇ ಒಳ್ಳೆಯದೆಂದು ಅನುರಾಧ ಬಿಡಿಸಿ ಹೇಳುತ್ತಾಳೆ.

“ಏನೋ ಅವನ ಇಚ್ಛೆ ಕೇಳಿದರೆ ನೀವ್ಯಾರೂ ಒಪ್ಪೋದಿಲ್ಲವೆಂದು ಅವನಿಗೆ ಗೊತ್ತು. ಹಾಗೆ ಹೇಳಲಿಲ್ಲವಂತೆ. ಮೊನ್ನೆ ನನ್ನ ಹತ್ತಿರ ಹೇಳಿದ. ನಾನೇ ನಿಮಗೂ ತಿಳಿಸಬೇಕೆಂದು ಕೂಡಾ ಹೇಳಿದ್ದಾನೆ. ವಾಯುದಳಕ್ಕೆ ಆಯ್ಕೆಯಾಗಿ ನಾಳದು ಆಗೋಸ್ಟ್ ಒಂದರಿಂದ ಅವನಿಗೆ ಡುಂಡಿಗಲ್‌ನಲ್ಲಿ ತರಬೇತಿ ಮೊದಲಂತೆ. ಒಂದೂವರೆ ವರುಷದ ತರಬೇತಿ ಮುಗಿದ ಮೇಲೆ ಕೆಲಸವಂತೆ.”

“ಮಕ್ಕಳು ದೊಡ್ಡವರಾದಂತೆ ತಂದೆ ತಾಯಿಯರನ್ನು ಎಲ್ಲಿ ಕೇಳ್ತಾರೆ?” ಎಂದು ನುಡಿದಾಗ ಅವರ ಹೃದಯದ ನೋವು ನಿರಾಸೆಯೆಲ್ಲಾ ಹೊರಗೆ ಬೋರ್‍ಗರೆದು ನುಗ್ಗಿದಂತೆ ಭಾಸವಾಗುತ್ತದೆ ಅನುರಾಧಳಿಗೆ.

ಅಷ್ಟರಲ್ಲಿ ಅಲ್ಲಿಗೆ ಬಂದ ಸುಶೀಲಮ್ಮ ತಂದೆ ಮಗಳ ಮಾತು ಕೇಳಿಸಿಕೊಂಡು, “ಒಬ್ಬ ಹಾಗೆ ದೂರ ಹೋದ. ಇವನು ಕಣ್ಣಿಗೂ ಕಾಣಿಸದಷ್ಟು ದೂರ ಹೋಗುವ ಯೋಚನೆಯಲ್ಲಿದ್ದಾನೆಯೇ? ಯಾವ ಪಾಪಕ್ಕೆ ಈ ಶಿಕ್ಷೆ?” ಎಂದು ದಿಕ್ಕೆಟ್ಟು ನುಡಿಯುತ್ತಾರೆ.

ಅನುರಾಧಳಿಗೆ ಅವರಿಬ್ಬರಿಗೂ ಸಮಾಧಾನ ಮಾಡುವುದು ಹೇಗೆಂದೇ ತಿಳಿಯೋದಿಲ್ಲ. ಅಚಲನಾದರೂ ನಿರ್ಧರಿಸಿ ಕುಳಿತಿದ್ದಾನೆ. ಅವನ ನಿರ್ಧಾರ ಬದಲಾಗುವಂತಿಲ್ಲ. ಇವರು ಒಪ್ಪುವಂತಿಲ್ಲ. ಈ ಪ್ರಾಯದ ಕಾಲದಲ್ಲಿ ಇವರಿಗೆ ಈ ರೀತಿಯ ನಿರಾಸೆಗಳೇಕೆ? ಎಣಿಸದ ರೀತಿಯಲ್ಲಿ ಮಕ್ಕಳ ಭವಿಷ್ಯ ನಿರ್ಣಯವಾಗ್ತಿದೆ.

ಯಾರ ಯೋಚನೆ ಸರಿ, ಯಾರ ಯೋಚನೆ ತಪ್ಪು ಎಂದು ಹೇಳುವುದು ತನಗಂತೂ ಆಗುತ್ತಿಲ್ಲ ಎಂದು ಅನುರಾಧ ಒದ್ದಾಡುತ್ತಾಳೆ. ಅಮ್ಮನ ನಿರಾಸೆಗೂ ಕಾರಣವಿದೆ. ಅಪ್ಪನ ಮಾತೂ ಸುಳ್ಳಲ್ಲ. ಪ್ರಾಯಕ್ಕೆ ಬಂದ ಮೇಲೆ ಯಾವ ಮಕ್ಕಳು ತಂದೆ ತಾಯಿ ಹೇಳಿದಂತೆ ಕುಣಿಯುತ್ತಾರೆ? ಹಾಗಿರುವವರು ಸಾವಿರಕ್ಕೆ ಒಬ್ಬರಿರಬಹುದೇನೋ? ಈಗ ಯಾರ ಕಡೆಹಿಡಿದು ಮಾತನಾಡಲಿ ತಾನು? ಅಚಲ ನನ್ನೊಡನೆ ಹೇಳಿದ ಮೇಲೆ ಆರಾಮವಾಗಿದ್ದಾನೆ. ಅಚಲವಾದ ನಿರ್ಧಾರ ಅವನದ್ದು ಎಂದು ತನಗೆ ಮನದಟ್ಟಾಗಿದೆ. ಅವನು ಅವನ ಯೋಚನೆ ಖಂಡಿತಾ ಬದಲಾಯಿಸಲಾರ. ಅವನೊಡನೆ ವಾದವೂ ಪ್ರಯೋಜನವಿಲ್ಲದ್ದು! ಈಗ ಏನಿದ್ದರೂ ತಂದೆ ತಾಯಿಯರೇ ನಗುನಗುತ್ತಾ ಅವನನ್ನು ಕಳುಹಿಸಿಕೊಡುವ ಹಾಗೆ ಮಾಡಬೇಕು. ಇವರು ಒಪ್ಪದಿದ್ದರೂ ಅವನು ಹೋಗುವವನೇ, ಬದಲಿಸುವ ನಿರ್ಧಾರವಲ್ಲ ಅವನದ್ದು, ಹಾಗಾಗಿ ಅವನು ಮುಖ ಚಿಕ್ಕದು ಮಾಡಿಕೊಂಡೇಕೆ ಹೋಗಬೇಕು. ನಗುತ್ತಲೇ ಹೋಗಲಿ. ಎಂದು ಯೋಚಿಸುತ್ತಾಳೆ.

“ಅಮ್ಮ, ಕೆಲಸಕ್ಕೆಂದು ಗಂಡು ಮಕ್ಕಳು ದೂರ ಹೋಗಲೇಬೇಕಲ್ಲ? ಭಾರತದ ಗಡಿಗೆ ಹೋಗಬೇಕು. ಜೀವಕ್ಕೆ ಅಪಾಯದ ಸಮೀಪವೇ ಇರಬೇಕು ಎನ್ನುವುದರಿಂದ ನಮಗೆ ಬೇಸರ ನಿಜ. ನಾಳೆ ಅವನು ಕೆಲಸದ ಮೇಲೆ ಬೊಂಬಾಯಿಗೋ, ಕಲ್ಕತ್ತಕ್ಕೋ, ಹೈದರಾಬಾದಿಗೋ ಎಲ್ಲಿಗಾದರೂ ಹೋಗಬೇಕಾದರೆ ಕಳುಹಿಸಿ ಕೊಡೋದಿಲ್ಲವೇ? ಅಲ್ಲೇನು ಗ್ಯಾರಂಟಿಯಿದೆ ಜೀವಕ್ಕೆ? ಸಾವಿರಾರು ಜನರು ಎಣಿಸದ ರೀತಿಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೊರಗೆ ಹೋದವರು ಹಿಂತಿರುಗಿ ಬಂದ ಮೇಲಷ್ಟೇ ಧೈರ್‍ಯ, ಹಾಗಿರುವಾಗ ವಾಯುದಳವಾದರೇನು? ನಮ್ಮೆಲ್ಲರ ಆಯುಷ್ಯವನ್ನು ದೇವರು ಅವನಿಗೆ ಕೊಡಲಿ, ದೂರ ಎಷ್ಟಾದರೇನು? ರಜೆ ಸಿಕ್ಕಿದಾಗಲೆಲ್ಲಾ ಹಾರಿಯೇ ಬರುತ್ತಾನೆ. ದೂರವಿದ್ದರೂ ಮನಸ್ಸಿನ ಸಾಮೀಪ್ಯ ಒಂದು ಉಳಿಸಿಕೊಂಡಿದ್ದರೆ. ಮಕ್ಕಳು ಎಷ್ಟು ದೂರ ಹೋದರೂ ಬೇಕೆಂದಾಗ ತಂದೆ ತಾಯಿಯ ಬಳಿಗೋಡಿ ಬರುತ್ತಾರೆ. ಮಕ್ಕಳು ದೊಡ್ಡದಾದ ಮೇಲೆಯೂ ನಾವು ಹೇಳಿದ ಹಾಗಿರಬೇಕು ಎಂದು ನಾವು ಆಶಿಸೋದೂ ಸರಿಯಲ್ಲ. ಅವರವರಿಗೆ ಮೆಚ್ಚಿಕೆಯಾದ ಕೆಲಸಕ್ಕೆ ಸೇರಿದರೆ ಅದರಿಂದ ಅವರಿಗೆ ತೃಪ್ತಿಯಾದರೂ ಸಿಗುವುದಲ್ಲ? ಅಚಲ ಯಾರು ತಡೆದರೂ ಈ ಕೆಲಸಕ್ಕೆ ಸೇರುವುದನ್ನು ನಿಲ್ಲಿಸುವುದಿಲ್ಲ. ಹೇಳಿನೋಡಿ ಆಯ್ತು. ಅವನು ಸಿಟ್ಟುಗೊಂಡು ಹೋಗುವುದಕ್ಕಿಂತ ನಾವೆಲ್ಲಾ ನಗುನಗುತ್ತಲೇ ಕಳುಹಿಸಿಕೊಟ್ಟರೆ ತಪ್ಪೇನಮ್ಮಾ? ಹೋದಲ್ಲಿ ಅವನ ಮನವಾದರೂ ಗೆಲುವಾಗಿರುತ್ತದೆ. ನಾವು ಕೋಪಿಸಿಕೊಂಡರೆ, ಬಲತ್ಕಾರವಾಗಿ ತಡೆದರೆ ಅವನೇನೂ ನಿಲ್ಲುವವನಲ್ಲ.”

“ಇದೆಲ್ಲಾ ಹೌದು ಅನುರಾಧ. ಆದರೆ ಇದೆಲ್ಲಾ ಉಪದೇಶಕ್ಕೆ ಸರಿಯಾದ ಮಾತು. ನಮ್ಮ ನಮ್ಮ ಮಕ್ಕಳು ಇಂಥಾ ಕೆಲಸಕ್ಕೆ ಸೇರುವುದೆನ್ನುವಾಗ ನಮಗೆ ಬೇಡವೆನ್ನಿಸುತ್ತದೆ. ಸಾವಿನೊಡನೆ ಸೆಣಸಾಡಲು ಯಾರಿಗೆ ಮನಸ್ಸಿರುತ್ತದೆ?” ಹೀಗೆನ್ನುವಾಗ ಅವರ ಗಂಟಲು ಕಟ್ಟಿ ಕಟ್ಟಿ ಸ್ವರ ಹೊರಡುತ್ತದೆ.

ರಾಮಕೃಷ್ಣಯ್ಯನವರು ಅನುರಾಧಳ ಸಹಾಯಕ್ಕೆ ಬರುತ್ತಾರೆ.

“ಏನಿದು ಸುಶೀ? ನೀನು ಎಲ್ಲರಿಗಿಂತಲೂ ಭಿನ್ನಳಾದ, ತಿಳುವಳಿಕೆಯ ಹೆಂಗಸೆಂದು ನಾನೀವರೆಗೂ ತಿಳಿದಿದ್ದೆ. ನಿನ್ನ ಆಚರಣೆಯಲ್ಲೂ, ಉಪದೇಶದ ಮಾತುಗಳಲ್ಲಿಯೂ ಎಂದೂ ವ್ಯತ್ಯಾಸ ಕಂಡಿರಲಿಲ್ಲ. ಈಗ ಯಾಕೆ ಹೀಗೆ? ಜೀವನದಲ್ಲಿ ಈ ತನಕ ಅನುಭವಿಸಿದ್ದು ಬಹಳವಿದೆ. ಹಾಗಿದ್ದೂ ಈಗ ನೀನು ನಿನ್ನ ಆದರ್ಶಗಳಿಂದ ಹಿಂದೆ ಬರಲು ನೋಡುತ್ತೀಯಾ? ಈ ರೀತಿಯ ಸೋಲು ನೀನು ತೋರಿಸಬಾರದು. ನೀನು ಧೈರ್ಯವಂತೆ! ಆ ಧೈರ್ಯದಲ್ಲೇ ಮುನ್ನಡೆ! ನಿಶ್ಯಕ್ತಿ ಬೇಡ. ಅವನು ನಿರ್ಧರಿಸಿಯಾದ ಮೇಲೆ ಈಗ ಬೇಡವೆಂದು ಅವನ ಮನಸ್ಸಿಗೆ ನೋವು ತಂದರೆ ನಮ್ಮ ಸ್ವಾರ್ಥ ತೋರಿಸಿದಂತಾದೀತು. ಆನಂದ ಬೇಕೆಂದ ಹುಡುಗಿಯೊಡನೆ ಎಲ್ಲಾ ಸಂಪ್ರದಾಯ ಮುರಿದು ನಾವೇ ನಿಂತು ಮದುವೆ ಮಾಡಿಲ್ಲವೇ, ಈಗ ಇವನು ಇಚ್ಛಿಸಿದ ಕೆಲಸಕ್ಕೆ ಸೇರಲು ನಾವು ಅಡ್ಡಿಯಾದರೆ, ಇಬ್ಬರು ಮಕ್ಕಳಲ್ಲಿ ಭೇದ ಮಾಡಿದ ಹಾಗಾಗೋದಿಲ್ಲವೇ? ನಮ್ಮ ಕಣ್ಣೆದುರಿಗೆ ಮಕ್ಕಳನ್ನು ಇಟ್ಟುಕೊಳ್ಳಬೇಕೆಂಬ ಇಚ್ಛೆಯಿಂದ ನಾವು ಅವರನ್ನು ಸಾಕಿದ್ದರೆ ಅದು ನಮ್ಮದೇ ತಪ್ಪು. ಅವರದ್ದಲ್ಲ. ನೀನು ಈಗ ಕಣ್ಣೀರು ಹಾಕಬಾರದು, ಇಂಥಾ ಧೈರ್ಯವಂತ ಮಗನ ತಾಯಿಯಾದುದಕ್ಕೆ ಹೆಮ್ಮೆ ಪಡಬೇಕು.”

ತಂದೆಯ ಮಾತು ಕೇಳಿ ಅನುರಾಧಳ ಕಣ್ಣಿನಿಂದ ನೀರಿಳಿಯುತ್ತದೆ. ಎಂಥಾ ದೊಡ್ಡ ವ್ಯಕ್ತಿ ತನ್ನ ತಂದೆಯೆಂದು ತಲೆಬಾಗುತ್ತಾಳೆ. ಇಂಥಾ ತಂದೆಯ ಹೊಟ್ಟೆಯಲ್ಲಿ ಹುಟ್ಟಿದ ನಮ್ಮ ಐದು ಜನರ ಬುದ್ಧಿ ಐದು ರೀತಿಯದ್ದು, ಒಬ್ಬರಾದರೂ ಈ ತಂದೆ ತಾಯಿಯ ಹಾಗಿರುವರೇ?

ಸುಶೀಲಮ್ಮ ಕಣ್ಣೀರು ಒರೆಸಿಕೊಂಡು ಮೌನವಾಗಿ ಒಳಗೆ ಹೋಗುತ್ತಾರೆ.

ರಾಮಕೃಷ್ಣಯ್ಯನವರು ಅನುರಾಧಳ ತಲೆ ನೇವರಿಸುತ್ತಾ, “ಅನು, ಎಲ್ಲಾ ಆ ದೇವರ ಇಚ್ಛೆ! ನಮ್ಮ ಕೈಯಲ್ಲಿ ಏನಿದೆ?” ಎಂದು ನುಡಿದು ಅಲ್ಲೇ ತಡೆದು ಅವರ ಕೋಣೆಗೆ ಹೋಗುತ್ತಾರೆ. ತಂದೆಯ ನೋವು ಅನುರಾಧಳ ಹೃದಯ ತಟ್ಟುತ್ತದೆ.

ಅಚಲನ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. ತನ್ನನ್ನು ಎಂಥಾ ಸಂದಿಗ್ಧಕ್ಕೆ ಸಿಕ್ಕಿಸಿ ಆರಾಮವಾಗಿ ತಿರುಗಾಡುತ್ತಿದ್ದಾನೆ ಭೂಪ, ಎಂದು ಮನದಲ್ಲಿ ಬೈಯುತ್ತಾಳೆ.

ಅಚಲ ಸಂಜೆಯ ತಿರುಗಾಟ ಮುಗಿಸಿ ಬರುವಾಗ ಮನೆಯ ವಾತಾವರಣವೇ ಬದಲಾಗಿರುತ್ತದೆ. ತುಂಬಿರುವ ಮೌನ ನೋಡಿ ಅವನೂ ಮೌನದ ಮೊರೆ ಹೋಗುತ್ತಾನೆ. ಬಹಳ ಹೊತ್ತು ಯಾರೂ ಮಾತನಾಡದಿದ್ದುದನ್ನು ನೋಡಿ ಸೀದಾ ತಾಯಿಯ ಹತ್ತಿರ ಹೋಗಿ, “ಅಮ್ಮ, ನನಗೆ ಜೋರು ಹಸಿವೆ, ಊಟ ಮಾಡೋಣ” ಎಂದಾಗ ಸುಶೀಲಮ್ಮ ಏನೂ ಮಾತನಾಡದೇ ಮೇಲೆ ಏಳುತ್ತಾರೆ. “ಇಂದಿಗೂ ಚಿಕ್ಕ ಹುಡುಗನ ಥರಾನೇ ಇರುವ ಈತ ವಾಯುದಳಕ್ಕೆ ಸೇರುವುದೆಂದರೆ ನಗುವ ಮಾತೇ ಸರಿ. ಏನೋ ತಮಾಷೆಗೆ ಈ ಗಲಾಟೆ ಎಬ್ಬಿಸಿರಬೇಕು. ಎಲ್ಲರನ್ನೂ ದಿಗಿಲುಗೊಳಿಸಿ ತಮಾಷೆ ನೋಡುವ ಆಟ ಅವನಿಗೇನೂ ಹೊಸತಲ್ಲ” ಎಂದು ಯೋಚಿಸುತ್ತಾ ಊಟಕ್ಕೆ ಅಣಿ ಮಾಡುತ್ತಾರೆ. ಮನದೊಳಗೆ, ಇದು ತಮಾಷೆಯಾಗಿಯೇ ಕಳೆಯಲಿ, ಸತ್ಯವಾಗದಿರಲಿ ಎಂದು ಹಾರೈಸುತ್ತಾ ಎಲ್ಲರಿಗೂ ಬಡಿಸುತ್ತಾರೆ.

ಊಟದ ಸಮಯದಲ್ಲೂ ಯಾರೂ ಮಾತನಾಡೋದಿಲ್ಲ. ರಾಮಕೃಷ್ಣಯ್ಯನವರು ತಲೆತಗ್ಗಿಸಿ ಊಟ ಮುಗಿಸಿ ಎದ್ದ ಮೇಲೆ ಅಚಲನೇ ಮೌನ ಮುರಿಯುತ್ತಾನೆ.

“ಯಾಕೆ ಎಲ್ಲರೂ ಒಂದು ರೀತಿ ಇದ್ದೀರಿ? ಏನಾಗಿದೆ? ಒಬ್ಬರೂ ಮಾತನಾಡೋದಿಲ್ಲ.”

ಪೂರ್ಣಿಮಾ ಭುಸುಗುಟ್ಟುತ್ತಾಳೆ, “ಎಲ್ಲಾ ನಿನ್ನ ಕಾರುಭಾರು, ದೊಡ್ಡ ಕೆಲಸಕ್ಕೆ ಹೊರಟ್ಟಿದ್ವಿ, ದೊಡ್ಡ ಮನುಷ್ಯ ನಾವೆಲ್ಲಾ ಮತ್ತೆ ಹೇಗಿರಬೇಕು?” ಅಚಲನಿಗೆ ಈಗ ಮೌನದ ಕಾರಣ ತಿಳಿಯುತ್ತದೆ. ಅಕ್ಕನ ಮುಖ ನೋಡಿದಾಗ ಅವಳು ಗಂಭೀರವಾಗಿರುತ್ತಾಳೆ. ವಾತಾವರಣ ತಿಳಿಯಾಗಿಸುವ ಪ್ರಯತ್ನದಲ್ಲಿ ಹೇಳುತ್ತಾನೆ.

“ಅಷ್ಟೇನೇ, ನಾನೇನೋ ಅಂತಿದ್ದೆ. ಇದರಲ್ಲಿ ಇಷ್ಟು ಯೋಚನೆ ಮಾಡಲಿಕ್ಕೇನಿದೆ? ಒಟ್ಟು, ಕೆಲಸಕ್ಕೆ ಹೋಗುತ್ತಿದ್ದೇನೆ. ನನ್ನ ಆಯ್ಕೆಯಲ್ಲಿ ತಪ್ಪೇನಿದೆ ಅಮ್ಮಾ?” ಸುಶೀಲಮ್ಮ ತಮ್ಮೆಲ್ಲಾ ಆಸೆಗಳು ಕಳಚಿ ಬಿದ್ದಂತೆ ಎದ್ದು ನಿಲ್ಲುತ್ತಾರೆ. ಈ ಹುಡುಗ ತಮಾಷೆ ಮಾಡುತ್ತಿಲ್ಲ. ನಮ್ಮ ಸಹನೆಯ ಪರೀಕ್ಷೆ ಮಾಡ್ತಿದ್ದಾನೆ. ಮೊದಲೇ ಕದಡಿರುವ ನೀರಿಗೆ ಬಂಡೆಕಲ್ಲನ್ನೆ ಉರುಳಿಸುತ್ತಿದ್ದಾನೆ. ನಾವೆಲ್ಲಾ ಅದರಡಿ ಸಿಕ್ಕಿ ಒದ್ದಾಡಲೇ ಬೇಕು.

“ತಪ್ಪು ಒಪ್ಪು ನಿರ್ಧರಿಸೋ ಹಕ್ಕು ನಮ್ಮಗೆಲ್ಲಿ ಕೊಟ್ಟಿದ್ದೀಯಾ ಅಚ್ಚೂ? ನೀನೇ ಯೋಚಿಸಿ ನೀನೇ ನಿರ್ಧರಿಸಿಯಾಗಿದೆಯಲ್ಲ? ಈ ನಿರ್ಧಾರ ತೆಗೆದುಕೊಳ್ಳುವಾಗ ನಿನಗೆ ನಮ್ಮ ನೆನಪೇ ಬರಲಿಲ್ಲವೇ ಮಗು?”

ತಾಯಿಯ ಸ್ವರದಲ್ಲಿನ ನೋವು ಅಚಲನ ಹೃದಯವನ್ನು ಒಂದು ಕ್ಷಣ ತಟ್ಟುತ್ತದೆ. ಕೂಡಲೇ ಕಲ್ಲು ಮನಸ್ಸು ಮೂಡಿ ಹೃದಯದ ಸುತ್ತಲೂ ನಿರ್ಧಾರದ ಬಲವಾದ ಕೋಟೆ ಕಟ್ಟುತ್ತದೆ. ತಾನೆಂದೂ ದುರ್ಬಲನಾಗಬಾರದು. ತಾನಾಯ್ದುಕೊಂಡ ದಾರಿಗೆ ತಾಯಿಯ ಕಣ್ಣೀರು ಅಡ್ಡ ಬರಬಾರದು. ಅದಕ್ಕೆ ತಡೆ ಹಾಕಲೇ ಬೇಕು. ತಾನೇನೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿಲ್ಲ. ಉತ್ತಮ ಬದುಕು ಬಾಳಲು ಆಸೆಯಿಂದ ಹೋಗುತ್ತಿರುವ ಆತ್ಮ ವಿಶ್ವಾಸ ಅಚಲನ ಮಾತಲ್ಲಿ ಎದ್ದು ಕಾಣುತ್ತದೆ “ಅಮ್ಮಾ, ನೀವು ಬೇಸರಿಸಬಾರದು. ಅಣ್ಣನಂತೆ ನಾನೇನೂ ಕರ್ತವ್ಯ ಮರೆತು ದೂರ ಹೋಗುತ್ತಿಲ್ಲ. ನನ್ನ ಕರ್ತವ್ಯಗಳನ್ನು ಯೋಗ್ಯ ರೀತಿಯಲ್ಲಿ ಪಾಲಿಸಬೇಕೆಂದೇ ಆಸೆ ಹೊತ್ತು ಹೋಗುತ್ತಿರುವೆ. ನನ್ನ ಮುಂದಿರೋ ದೊಡ್ಡದಾದ ಬಾಳಿಗೆ ಒಳ್ಳೆ ರೂಪುಕೊಡಲಷ್ಟೇ ಹೋಗುತ್ತಿರುವೆ. ನಾನೆಷ್ಟು ದೂರ ಹೋದರೂ ನನ್ನ ಮನಸ್ಸನ್ನು ನಿಮ್ಮ ಮಡಿಲಲ್ಲೇ ಬಿಟ್ಟು ಹೋಗುವೆನಮ್ಮಾ ನಗುನಗುತ್ತಾ ನನ್ನನ್ನು ಕಳುಹಿಸಿ ಕೊಟ್ಟರೆ ನನಗೂ ಸಮಾಧಾನ. I want to live a perfect life, long life ಇದಕ್ಕೆ ನಿಮ್ಮೆಲ್ಲರ ಮನಪೂರ್ವಕ ಆಶೀರ್ವಾದ ಬೇಕು. ನೀವು ಮನಶ್ಯಾಂತಿಯಿಂದ ಯೋಚನೆ ಮಾಡಿ. ಇನ್ನೂ ಕೆಲವು ದಿನವಿದೆ.”

ಅಚಲನ ದೃಢವಾದ ಮಾತಿಗೆದುರಾಗಿ ಯಾರಿಗೂ ಮಾತಾಡಲೇ ಆಗೋದಿಲ್ಲ. ಆತ್ಮವಿಶ್ವಾಸವಿದ್ದರೆ ಯಾವ ಪರಿಸ್ಥಿತಿಯಲ್ಲೂ ವಿಜೇತನಾಗಬಹುದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂ ಬುಟ್ಟಿ
Next post ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys