ಸುಮಾರು ಐದು ಗಂಟೆಯಿರಬಹುದು. ಮೋಹನೆಯು ಕಸೂತಿಯ ಕೆಲಸ ವನ್ನು ಮಾಡುತ್ತ ಕುಳಿತಿದ್ದಾಳೆ. ಮನಸ್ಸೆಲ್ಲ ಎಲ್ಲೋ ಹೋಗಿದೆ. ಯಾವ ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಯಾವುದಕ್ಕೂ ಬೇಸರ, ಮನೆಯಲ್ಲಿ ವೀಣಾ ಇಲ್ಲದಿದ್ದರೆ ನೀನೇ ಎನ್ನುವವರಿಲ್ಲ. ತಲೆ ಒಡೆದರೂ ಕೇಳುವರಿಲ್ಲ. “ಇನ್ನೆಷ್ಟು ದಿನ ಹೀಗೆ ಏನೂ ಮಾಡದೆ ಕೂತಿರುವುದು ?’ ಎಂದು ಯೋಚನೆ. ಯೋಚನೆ ಬಲವಾಯಿತು. ಕಸೂತಿಯ ಕೆಲಸ ನಿಂತುಹೋಯಿತು. ಅದನ್ನು ತೆಗೆದು ಮಗ್ಗುಲಲ್ಲಿದ್ದ ಟೇಬಲ್ ಮೇಲೆ ಇಟ್ಟು ಹಾಗೇ ಯೋಚನೆ ಮಾಡುತ್ತ ಕುಳಿತಳು; “ಹಾಳು ಹೆಣ್ಣು ಜನ್ಮ. ಇದಕ್ಕೆ ತನ್ನ ಯೋಚನೆಗಿಂತಲೂ ಇತರರ ಯೋಚನೆಯೇ ಹೆಚ್ಚ? ನನಗೇನು ಕಡಿಮೆಯಾಗಿದೆ ಈಗ? ಮಹರಾಯ ಬೇಕಾದ್ದೆಲ್ಲ ಇಟ್ಟು ಹೋಗಿದ್ದಾನೆ. ಬಡವರ ಮನೆಯ ಹಾಗೆ ರಾತ್ರಿಗೆ ಹೊಟ್ಟೆಗೆ ಏನು ಯೋಚನೆ, ಬಟ್ಟೆಗೆ ಏನು ಗತಿ, ಎಂದು ಒದ್ದಾಡುವಂತಿಲ್ಲ. ಆದರೇನು? ಸುಖವಾಗಿರುವುದಕ್ಕೆ ಉಂಟೇನು? ಮಾಡುವುದಕ್ಕೆ ಒಬ್ಬರಿರಬೇಕು ಹಾಗಿಲ್ಲದಿದ್ದರೆ ಈ ಜೀವನ ಯಾಕೆ? ಈಗ ನಾನು ಯಾರಿಗಾಗಿ ಬದುಕಬೇಕು? ಯಾವ ಕೆಲಸ ಮಾಡಿ ಯಾರನ್ನು ಮೆಚ್ಚಿಸಬೇಕು?” ಕಣ್ಣಲ್ಲಿ ಒಂದು ತೊಟ್ಟು ನೀರು ಬಂತು; ಕೂತಿರಲು ಸಾಧ್ಯವಾಗಲಿಲ್ಲ. ಎದ್ದಳು. ಅಲ್ಲಿಯೇ ಓಡಾಡಿದಳು. ನಡೆಯುತ್ತಿದ್ದರೆ ಹೆಜ್ಜೆ ಹೆಜ್ಜೆಗೂ ಅದೇ ಯೋಚನೆ. ಏನೋ ಬರಿದು, ಏನೋ ಖಾಲಿ, ಏನೋ ಸರ್ವನಾಶವಾದ ಭಾವ. ತನ್ನ ಮೇಲೆ ಆಕಾಶವೆ ಕಳಚಿಬೀಳುತ್ತಿರುವಂತೆ ದಿಗಿಲು; ತಾನು ನಿಂತಿರುವ ನೆಲ ಕುಸಿದು ಭೂಮಿಯು ತನ್ನನ್ನು ನುಂಗುತ್ತಿದೆ ಎಂಬ ಅಂಜಿಕೆ.
ಎಲ್ಲೋ ಹೋಗಿದ್ದ ವೀಣಾ ಓಡಿ ಬಂದಳು. ಅವಳು ಒಂದು ಕುರುಕುಪದ ಹಾಡಿಕೊಂಡು ಬರುತ್ತಿದ್ದರೆ, ಮೋಹನೆಗೆ ಏನೋ ಆನಂದ. ಇಂಥದು ಇನ್ನೆರಡು ಮಕ್ಕಳಾದರೂ ಇದ್ದಿದ್ದರೆ? ಅವರ ಆಟಪಾಟ ನೋಡಿಕೊಂಡು, ಅವರಿಗೆ ಊಟಬಟ್ಟೆ ನೋಡಿಕೊಳ್ಳುತ್ತ ಕಾಲ ಕಳೆಯಬಹುದಾಗಿತ್ತು. ಹಾಳು ದೇವರು ನನಗೆ ಆ ಭಾಗ್ಯವೂ ಕೊಡಲಿಲ್ಲ. ಈಗ ಮಕ್ಕಳಾದರೆ, ನಾನು ಮಕ್ಕಳ ಹೊತ್ತು ನನ್ನ ಸುಖ ಬೆಳೆಸಿಕೊಳ್ಳೋಣ ಅಂದರೆ ಊರವರ ಬಾಯಿಗೆ ಅಂಜಬೇಕು. ಇಲ್ಲಿ ನಾನು ಒಬ್ಬಳೇ ಕೊಳೆತರೆ, ಒಬ್ಬಂಟಿಗಳಾಗಿರಲಾರದೆ ನನಗೆ ಹುಚ್ಚು ಹಿಡಿದ ಹಾಗಾದರೆ ಅದು ಹತ್ತು ಜನರ ದೃಷ್ಟಿಯಲ್ಲಿ ಧರ್ಮ ! ಇದು ನನ್ನಿಂದ ಸಾಧ್ಯವೇನು? ನಾನು ಒಬ್ಬಳೇ ಇರಬಲ್ಲೆನೇನು? ಸಾಯುವವರೆಗೂ ಕಾಸ್ ಬಂಗಲೆ ಹುಲಿಯ ಹಾಗೆ ಇರಬೇಕಲ್ಲ? ಇದು ಯಾವ ನ್ಯಾಯ? ಅದಕ್ಕೂ ನೆಕ್ಕೋಕಾದರೂ ಎರಡು ಮರಿ ಇರಬೇಕಲ್ಲ?’ ಎಂದುಕೊಳ್ಳುತ್ತಾ ಅವಳಿಗಿನ್ನೊಂದು ಸಲ ಕಣ್ಣೀರು ಬಂತು. ಅಷ್ಟರೊಳಗಾಗಿ ವೀಣಾ ಓಡಿ ಬಂದಳು. ತಾಯಿಯ ನೀರು ತುಂಬಿದ ಕಣ್ಣನ್ನು ಕಂಡು ಅವಳ ಹಾಡು ಅಲ್ಲಿಯೇ ನಿಂತುಹೋಯಿತು. ಮಾತನಾಡದೆ ಮೌನವಾಗಿ
ಬಂದು ತಾಯಿಯನ್ನು ತಬ್ಬಿಕೊಂಡು ನಿಂತಳು. ತನ್ನ ಕಣ್ಣೀರು ಮಗಳ ಹಾಡನ್ನು ನಿಲ್ಲಿಸಿತು ಎಂಬುದು ತಾಯಿಗೂ ತಿಳಿಯಿತು. ತಟ್ಟನೆ ಕಣ್ಣೀರು ಒರೆಸಿಕೊಂಡು, ಮಗಳನ್ನು ತಬ್ಬಿಕೊಂಡು ತಾನಾಗಿ ಬರದಿದ್ದ ನಗುವನ್ನು ಬರೆಸಿಕೊಂಡು “ಏನಮ್ಮ, ಸ್ಕೂಲ್ ಆಯಿತೆ?” ಎಂದಳು. ವೀಣೆಯು ಏನೋ ಪೆಚ್ಚುಮೊಕ ಹಾಕಿಕೊಂಡು ತಾಯಿಯ ಸೆರಗನ್ನು ಹಿಡಿದು ಅದರ ಕರೆಯ ಗಂಟುಗಳನ್ನು ಬೆರಳಲ್ಲಿ ತಿರುಹುತ್ತಾ “ಅಮ್ಮಾ, ನಾನು ಇನ್ನು ಮೇಲೆ ಸ್ಕೂಲಿಗೆ ಹೋಗುವುದಿಲ್ಲ” ಎಂದಳು. “ಯಾಕೆ, ಮಗು ?” “ನೋಡು, ಇವೊತ್ತು ನಮ್ಮ ಕ್ಲಾಸಿನಲ್ಲಿ ಮೇಡಂ ಒಂದು ಹುಡುಗಿಯನ್ನು ಬಯ್ದುಬಿಟ್ಟರು. ಅವರಪ್ಪ ಅಮ್ಮ ಸ್ಟೇಟುಪುಸ್ತಕ ತೆಗೆದುಕೊಡದಿದ್ದರೆ, ಅವಳದೇನು ತಪ್ಪು? ಪಾಪ, ಅವರು ಬಡವರು. ಅವಳಿಗೆ ಮೈತುಂಬ ಹಾಕಿಕೊಳ್ಳೋಕೆ ಬಟ್ಟೆ ಕೂಡ ಇಲ್ಲಕಣೇ ! ಪಾಪ, ನಾಚಿಕೆಯಿಲ್ಲದೆ ಆ ಹರಕಲು ಬಟ್ಟೆನೆ ಹಾಕಿಕೊಂಡು ಬಂದಿದ್ದಳು. ಅವರಮ್ಮ ಬಂದು ಹೇಳಿಬಿಟ್ಟು ಹೋದಳು ನಾಳೆ ಕೊಡಿಸ್ತೀನಿ ಅಂತ ಪಾಪ ! ಏನಾಯಿತೊ? ಕೊಡಿಸಲಿಲ್ಲ. ಅದಕ್ಕೆ ಮೇಡಂ ಆ ಹುಡುಗೀನ ಬಯ್ಯೋದೇನಮ್ಮ? ಹೊಡೀತೀನಿ ನೋಡು ಅಂದುಬಿಟ್ಟರು.
ಅದಕ್ಕೆ ನೀನೇನು ಮಾಡಿದೆಯಮ್ಮ?” “ನೀನೂ ಏನಾದರೂ ಅಂತೀಯೇನೋ?” “ಇಲ್ಲಮ್ಮ! ಹೇಳು.” ತಾಯಿಯ ಮಡಿಲಲ್ಲಿ ಸೇರಿಕೊಂಡು ವೀಣಾ ತಲೆಬಗ್ಗಿಸಿಕೊಂಡು ಹೇಳಿದಳು. “ನನ್ನ ಸ್ಟೇಟ ಬುಕ್ಕು ಬ್ಯಾಗೂ ಎಲ್ಲಾ ಕೊಟ್ಟು ಬಂದುಬಿಟ್ಟೆ ಅಮ್ಮ!” ತಾಯಿಯ ಮಗಳನ್ನು ತಬ್ಬಿಕೊಂಡಳು; ಮುತ್ತಿಟ್ಟಳು; “ಅವಳನ್ನ ಕರೆಕೊಂಡು ಬಾ ಹೋಗು. ಅವಳಿಗೆ ಕಾಫಿ ತಿಂಡೀನೂ ಕೊಡೋವೆಯಂತೆ !” “ಅವನ್ನೂ ಕರಕೊಂಡು ಬಂದಿದ್ದೀನಮ್ಮ!” ಕರೀ ಮತ್ತೆ!” “ಕರೀತೀನಿ. ಅಮ್ಮ ಒಂದು ಮಾತು ಕೇಳಲೆ?” “ಕೇಳಮ್ಮ.” “ನಮ್ಮ ಕನ್ಯಾಮಂದಿರಕ್ಕೆ ಈ ಹುಡುಗೀನ ಸೇರಿಸಿಕೋತೀಯ ಅಮ್ಮ?” “ಆಗಲಮ್ಮಾ! ಮೊದಲು ಅದು ಆಗಲಿ, ಆಮೇಲೆ ತಾನೇ?” “ಹಾಗಾದರೆ ಆ ಹುಡುಗೀನ ಕರೆಕೊಂಡು ಬರಲೇನಮ್ಮ?” “ಹೂಂ” ವೀಣೆಯು ತನ್ನ ಸ್ನೇಹಿತೆಯನ್ನು ಕರೆದುತಂದಳು. ಮೋಹನೆಗೂ ಅವಳನ್ನು ನೋಡಿ “ಅಯ್ಯೋ” ಎನ್ನಿಸಿತು. “ಈ ಹಾಳು ಮಗು ಆ ಬಡವರ ಮನೇಲಿ ಹುಟ್ಟಿ ಅವರನ್ನು ಗೋಳುಗುಟ್ಟಿಸುವ ಬದಲು ನಮ್ಮ ಮನೆಯಲ್ಲಿ ಹುಟ್ಟಬಾರದಾಗಿತ್ತೆ?” ಎಂದು ತಾನೂ ನೊಂದುಕೊಂಡು ಮಗಳಿಗೆ ಇಟ್ಟಿದ್ದ ತಿಂಡಿಯ ಜೊತೆಗೆ ಹಣ್ಣೂ ಬಿಸ್ಕಟ್ನ ಸೇರಿಸಿ ಇಬ್ಬರಿಗೂ ಕೊಟ್ಟಳು. ಆ ಮಗು ಬಿಸ್ಕಟ್ ಕಂಡೇ ಅರಿಯದು. ಅದನ್ನು ಕಂಡು ಅವಳಿಗೆ ದಿಗಿಲು, ಬಲವಂತವಾಡಿ, ತಾಯಿಮಗಳಿಬ್ಬರೂ ಸೇರಿ, ಆ ಮಗುವಿಗೆ ತಿನ್ನಿಸಿದರು. ಆ ಮಗುವಿನ ಚಿಂದಿ ಬಟ್ಟೆಯನ್ನು ಮಗಳು ತಾಯಿಗೆ ತೋರಿಸಿದಳು. “ತಾನು ತನ್ನದು ಒಂದು ಲಂಗ ಕೊಡಲೇ?” ಎಂದು ಸನ್ನೆಮಾಡಿ ಕೇಳಿದಳು. ಮಗುವಿಗೆ ಒಂದು ಲಂಗ ಬಂತು. ಇಲ್ಲಿ ಹೀಗೆ ಲಂಗಾ ದಾನಮಾಡುತ್ತಿರುವಾಗ ಮೋಟಾರಿನ ಸದ್ದಾಯಿತು. ಮೋಹನೆಯು ಬಂದು ನೋಡಿದಳು. ಸಮಾಜದ ಪ್ರೆಸಿಡೆಂಟ್ ಸೀತಮ್ಮನವರು. ಮೋಹನೆಗೆ ಸಂತೋಷವಾಯಿತು. ಒಬ್ಬಳೇ ಕೂತಿದ್ದರೆ ಅವಳಿಗೆ ಏನೋ ದಿಗಿಲು. ಮನುಷ್ಯಜಾತಿಯಲ್ಲವೆ? ಒಂಟಿಯಾಗಿರುವುದಕ್ಕೆ ಹುಟ್ಟಿಲ್ಲ ಈ ಜಾತಿ. ಜೊತೆಯಿಲ್ಲದಿದ್ದರೆ ಭೀತಿಪಟ್ಟು ಒದ್ದಾಡುವ ಜಾತಿ. ಒಮ್ಮೆ ಸಜಾತೀಯ ಸಂಗ, ಇನ್ನೊಮ್ಮೆ ವಿಜಾತೀಯ ಸಂಗ, ಅಂತೂ ಸಂಗವಿಲ್ಲದಿದ್ದರೆ ಬದುಕುವಂತಿಲ್ಲ. ಸೇರಿ ಸ್ನೇಹವಾಗಿಲ್ಲದಿದ್ದರೆ ಹೋಗಲಿ, ಒಡೆದು ವಿರಸವಾಗಿ ದ್ವೇಷವಾಗಿ ಜಗಳವಾಡಿದರೂ ಸರಿಯೆ; ಅಂತೂ ಸಂಗ ಬೇಕು ಎನ್ನುವ ಜಾತಿ ಈ ಮನುಷ್ಯ ಪ್ರಾಣಿ. ಸೀತಮ್ಮನಿಗೆ ತೃಪ್ತಿಯಾಗುವಷ್ಟು ಉಪಚಾರ ಮಾಡಿ ಮೋಹನೆಯ ಆಕೆಯನ್ನು ಬರಮಾಡಿಕೊಂಡಳು. ಸೀತಮ್ಮನು ಬಂದು ಮೋಹನೆಯನ್ನು ಜೊತೆಯಲ್ಲಿ ಕೂರಿಸಿಕೊಂಡು ಕುಳಿತಳು. “ಮೋಹನಬಾಯಿ, ಇವೊತ್ತು ನನಗೆ ಸಮಾಧಾನವಾಯಿತು ಕಳೇ! ಆ ದಿನ ಅದೇನು ಅಳು, ಅದೇನು ಗೋಳು, ಅದೇನು ದುಃಖ, ಅವೊತ್ತು ನಮ್ಮ ಯಜಮಾನರು ಹೋದ ದಿನ ನೆನೆಪಾಗಿ ನಾನೂ ಅತ್ತು ಬಿಟ್ಟೆ ಕಣೋ!” ಎಂದು ಸಮಾಧಾನದ ಸಂತೈಸುವಿಕೆಯ ನುಡಿಗಳನ್ನು ಆಡಿದಳು. ಮೋಹನೆಯು ಏನೋ ಪೆಚ್ಚಾಗಿ ತಲೆ ಬಗ್ಗಿಸಿಕೊಂಡಳು. ಸೀತಮ್ಮನ ಮಾತಿಗೆ ಏನು ಉತ್ತರ ಕೊಡಬೇಕು? ಗಂಡನ ದುಃಖ ಮರೆತುಹೋಯಿತು ಎಂದು ಒಪ್ಪಿಕೊಳ್ಳಬೇಕೇ? ಅಥವಾ ಇಲ್ಲ, ಇನ್ನೂ ಬೇಕಾದಹಾಗೆ ಇದೆ ಎಂದು ಮತ್ತೆ ಅಳುವಿನ ಆರ್ಭಟವೆತ್ತಬೇಕೆ? ಸೀತಮ್ಮನೇ ಮುಂದೆ ಮಾತನಾಡಿದಳು. “ಇವೊತ್ತು ನಾವು ಸಮಾಜದವರು ನಿಮಗೆ ಥ್ಯಾಂಕ್ಸ್ ಕೊಡೋ ಸಂದರ್ಭ ಬಂದಿದೆ. ನಿಮಗೆ ಗೊತ್ತೇನು?” “ಹಾಗೆಂದರೆ?” ~ “ನಿಮ್ಮ ಚಿಕ್ಕರಾಯರು ಇದ್ದಾರಲ್ಲ…..” ಸೀತಮ್ಮನು ಹೇಳುತ್ತಿರುವುದು ಕೇಳಿ ಮೋಹನೆಗೆ ಗಾಬರಿಯಾಯಿತು. ಚಿಕ್ಕ ರಾಯರು ಎಂದು ಪ್ರಾಣೇಶನನ್ನು ಎಲ್ಲರೂ ಸಂಬೋಧಿಸುವುದು ಅವಳಿಗೂ ಗೊತ್ತು ಆದರೂ ಸೀತಮ್ಮನಂತಹ ಗಂಡುಬೀರಿ ಆ ಮಾತು ಆಡುವುದರಲ್ಲಿ ಬೇಕೆಂದು ಇವಳು ತನಗೂ ಅವನಿಗೂ ಸಂಬಂಧ ಕಲ್ಪಿಸುತ್ತಿರುವಳೋ ಎನ್ನಿಸಿ ದಿಗಿಲಾಯಿತು. ಆ ಗಾಬರಿ ಮನಸ್ಸಿನಲ್ಲಿ ಹುಟ್ಟಿ ಮೊಕಕ್ಕೂ ಕವಿಯಿತು. ಸೀತಮ್ಮನಿಗೂ ಅರ್ಥವಾಯಿತು: ನಕ್ಕು, “ಆ ಮಾತಿರಲಿ, ಇವಳು ಯಾರು ಈ ಮಗು ?’ ಎಂದು ಕೇಳಿದಳು. “ನಮ್ಮ ವೀಣಾ ಫ್ರೆಂಡ್’ “ಮನೆಗೆ ಹೇಳಿ ಬಂದಿದ್ದೀಯೇನಮ್ಮಾ?” ಮಗು ಸೀತಮ್ಮನ ಜೋರು ನೋಡಿ ಇವಳು ಹೆಡ್ ಮೇಡಂ ಇರಬೇಕು ಎಂದುಕೊಂಡು ಇಲ್ಲ ಮೇಡಂ ಎಂದಿತು. ಅದಕ್ಕೆ ದಿಗಿಲೋ ದಿಗಿಲೋ ಸೀತಮ್ಮನ ಅದನ್ನು ಹತ್ತಿರ ಕರೆದು ‘ನಾನು ಮೇಡಂ ಅಲ್ಲ ಕಣಮ್ಮ, ನೋಡಿ ಮೋಹನಬಾಯಿ, ಈ ಮೇಡಂಗಳು ಮಕ್ಕಳನ್ನು ಎಷ್ಟು ಹೆದರಿಸಿಬಿಡ್ತಾರೆ ಅಂತೀರಿ. ಇದರ ಕಣ್ಣಿಗೆ ನಾವೆಲ್ಲ ಮೇಡಂಗಳೇ!’ ಎಂದು ಅದನ್ನು ಆದರಿಸಿ, ವೀಣಾ! ಸ್ಕೂಲ್ ಬಿಟ್ಟು ಒಂದು ಗಂಟೆಯಾಯಿತು. ಇವರಮ್ಮ ಎಷ್ಟು ಒದ್ದಾಡುತ್ತಾಳೋ ಹೋಗಿ ಅವಳನ್ನು ಬಿಟ್ಟು ಬಾ, ಬೇಕಾದರೆ, ಅವರಮ್ಮನಿಗೆ ಹೇಳಿ ಇಬ್ಬರೂ ಕಬ್ಬನ್‌ಪಾರ್ಕ್ ಕಡೆ ಹೋಗಿ ತಿರುಗಿಕೊಂಡು ಬನ್ನಿ, ನಮ್ಮ ಡ್ರೈವರ್ ಕರಿ, ಹೇಳೀನೆ” ಎಂದಳು. ವೀಣಾ ಡ್ರೈವರನ್ನು ಕರೆದಳು. ಸೀತಮ್ಮನ ಅಪ್ಪಣೆಯಾಯಿತು: “ಡ್ರೈವರ್, ವೀಣಾನೂ ಈ ಮಗೂನೂ ಕರೆದುಕೊಂಡು ಹೋಗಿ, ಈ ಮಗುವಿನ ಮನೆಯಲ್ಲಿ ಹೇಳಿ, ಈ ಇಬ್ಬರನ್ನೂ ಕರೆದುಕೊಂಡು ಕಬ್ಬನ್‌ಪಾರ್ಕ್ ಎಲ್ಲಾ ಸುತ್ತಿಸಿಕೊಂಡು ಇಲ್ಲಿಗೆ ಏಳು ಗಂಟೆಗೆ ಸರಿಯಾಗಿ ಬಂದುಬಿಡು. ಈಗ ೫-೩೫. ಸಮಾಜಕ್ಕೆ ನಾನು ಏಳು ಗಂಟೆಗೆ ಹೋಗಬೇಕು. ಏನು?” ಎಂದಳು. ಡ್ರೈವರ್ ಸರಿಯೆಂದು ಹೊರಟನು. ಮೋಹನೆಯು “ನಮ್ಮ ಕಾರೇ ಇದೆಯಲ್ಲ?” “ನಿಮ್ಮ ಡ್ರೈವರ್ ಇದ್ದಾನೋ ಇಲ್ಲವೋ, ಇರಲಿ, ವೀಣಾ! ನಮ್ಮ ಕಾರ್ ಚೆನ್ನಾಗಿಲ್ಲವೇನೆ?” “ಸೊಗಸಾಗಿದೆ.’
“ಸರಿ, ಹೋಗಿ ಸುತ್ತಿಕೊಂಡು ಬಾ. ಆದರೆ, ನೋಡು ವೀಣಾ, ನಿನ್ನ ಫ್ರೆಂಡ್ ತಾಯಿಗೆ ಹೇಳಿ ಹೋಗಬೇಕು.” “ಇವಳ ಅಕ್ಕ ತಮ್ಮ ಬರಿತೀನಿ ಅಂದರೆ ಕರೆದುಕೊಂಡು ಹೋಗಲೇ?” “ನೋಡಮ್ಮ! ನಾವು ಬಡವರು. ಒಂದೇ ಕಾರು ಇರುವುದು. ಅದು ಗಲೀಜು ಆಗದ ಹಾಗೆ ನೋಡಿಕೊ. “” “ಇರಲಿ, ಸೀತಮ್ಮನೋರೆ. ನಾನು ಅದನ್ನ ನೋಡಿಕೊಳ್ಳುತ್ತೇನೆ.” * ಸ್ನೇಹಿತಳ ಕೈ ಹಿಡಿದುಕೊಂಡು ಹೋಗುತ್ತಿರುವ ವೀಣೆಯನ್ನು ನೋಡುತ್ತ ಸೀತಮ್ಮ ಹೇಳಿದಳು: “ಜನಾ ನನ್ನ ಗಂಡುಬೀರಿ ಅಂತಾರೆ ಮೋಹನಬಾಯಿ, ನಿಮ್ಮ ಮಗಳು ಇದ್ದಾಳಲ್ಲ, ನನಗಿಂತ ಗಂಡುಬೀರಿ! ಅಬ್ಬಾ, ಅದೇನು ಧೈರ್ಯ! ಅದೇನು ಬುದ್ಧಿ! ಜೊತೆಗೆ ಚೆನ್ನಾಗಿ ಬೆಳೆದೂ ಇದ್ದಾಳೆ. ಥಟ್ಟನೆ ನೋಡಿದರೆ, ಇವಳಿಗೀಗ ಹತ್ತು ವರ್ಷ ಅನ್ನಬಹುದು!”
ಮೋಹನೆಗೆ ತಮ್ಮ ಪ್ರೆಸಿಡೆಂಟರು ತನ್ನ ಮಗಳನ್ನು ಮೆಚ್ಚಿಕೊಂಡು ಆಡಿದ ಮಾತು ಮನಸ್ಸಿಗೆ ಪ್ರಿಯವಾಯಿತು. “ಏನೋ ಅವರ ತಂದೆ ಇದ್ದಿದ್ದರೆ ಚೆನ್ನಾಗಿತ್ತು!” ಎಂದಳು. ಸೀತಮ್ಮನ್ನು ಹಿಂತಿರುಗಿ ಗುಟ್ಟಾಗಿ ಹೇಳುವಳಂತೆ ಸಣ್ಣಗೆ ಮಾತನಾಡುತ್ತ ಹೇಳಿದಳು: “ನಾನು ಆ ಮಾತು ಆಡಬೇಕು ಅಂತಲೇ ವೀಣಾನ ಕಳುಹಿಸಿದ್ದು, ಆ ಹುಡುಗಿ ಸಾಮಾನ್ಯಳಲ್ಲ: ನಾವು ಆಡಿದ ಮಾತು ಅವಳಿಗೆ ಅರ್ಥವಾಗುತ್ತೆ. ಆದ್ದರಿಂದ ನಾವಿಬ್ಬರೇ ಪ್ರೈವೆಟ್ಟಾಗಿ ಮಾತನಾಡಬೇಕು ಅಂತ ಕಳುಹಿಸಿಬಿಟ್ಟೆ. ಇನ್ನೂ ಯಾರಾದರೂ ಮನೆಯಲ್ಲಿ ಇದ್ದಾರೋ?” “ಇನ್ನು ಯಾರು? ಆ ಅಡುಗೆಯವನು ಇದ್ದಾನೆ. “ಬರಹೇಳಿ, ಅವನಿಗೆ ಏನಾದರೂ ಹೇಳಿ ಕಳುಹಿಸಿ, ನಾವಿಬ್ಬರೇ ಮಾತನಾಡುವ ಭಾಗ ಬಹಳ ಇದೆ. ಆಳುಕಾಳು ಎಲ್ಲರನ್ನೂ ಕಳುಹಿಸಿಬಿಡಿ !” “ನನಗೋಸ್ಕರ ಯಾಕೆ ಅಷ್ಟು ದುಬಾರಿ ಖರ್ಚು ಎಂದು ಎಲ್ಲರನ್ನೂ ಕಳುಹಿಸಿ ಬಿಟ್ಟೆ! ಈ ಮನೆಯನ್ನೂ ಬಿಟ್ಟುಬಿಟ್ಟು ಒಂದು ಸಣ್ಣ ಮನೆ ತೆಗೆದುಕೊಂಡು ಇದ್ದು ಬಿಡೋಣ ಅಂತ ಇದ್ದೇನೆ. ಒಬ್ಬ ಹೆಣ್ಣಾಳು ಒಬ್ಬ ತೋಟದ ಮಾಲಿ ಇದ್ದರೆ ಸಾಕು. ಒಂದೊಂದು ಸಲ ನಾನೇ ಅಡುಗೆ ಮಾಡಿಕೊಳ್ಳೋಣ ಅಂತ ಕೂಡ ಅನ್ನಿಸತ್ತೆ!” “ಮೊದಲು ಅಡುಗೆಯವನನ್ನು ಕಳುಹಿಸಿ, ಏನೂ ತೋರದಿದ್ದರೆ ಕರೆಯಿರಿ. ನಾನು ನಮ್ಮ ಮನೆಗೆ ಹೋಗಿ ನನ್ನ ಪ್ಯಾಸ್ ಬುಕ್ಕು ತಕೊಂಡು ಬಾ ಅಂತ ಹೇಳೀನಿ.” ಅಡುಗೆಯವನು ಬಂದನು. ಸೀತಮ್ಮನು ನಾರಣಪ್ಪ ಒಂದು ಅವಿವೇಕವಾಗಿ ಹೋಗಿದೆಯಲ್ಲ!” ಎಂದಳು. ಆ ದನಿಯಲ್ಲಿ ನಿನ್ನಿಂದ ಅದು ಸರಿಹೋಗಬೇಕು ಎಂಬ ಅರ್ಥ ಒಡೆದು ಕಾಣಿಸುತ್ತಿತ್ತು, ನಾರಣಪ್ಪನು ಸೀತಮ್ಮನನ್ನು ಅರಿಯದವನಲ್ಲ; ಅವಳ ಕೀರ್ತಿಯನ್ನೂ ರೂಪಾಯಿಗೆ ಹದಿನಾರಾಣೆಯಷ್ಟು ಅಲ್ಲದಿದ್ದರೆ ಹೋಗಲಿ, ಹನ್ನೆರಡಾಣೆಯಷ್ಟಾದರೂ ಬಲ್ಲ ತಾನು ಕೇಳಿದ್ದಷ್ಟೂ ಪೂರ್ತಿಯಾಗಿ ನಂಬಿಯೂ ಇದ್ದ ನಗುನಗುತ್ತ ಹೇಳಿ ತಾಯಿ, ಆದರೆ ಸರಿಮಾಡೋಣ” ಎಂದ. “ಇನ್ನೇನೂ ಇಲ್ಲ. ನಮ್ಮ ಮನೆಯಲ್ಲಿ ಪ್ಯಾಸ್-ಬುಕ್ ಬಿಟ್ಟು ಬಂದಿದ್ದೇನೆ; ಹೋಗಿ ತರಬೇಕು; ಮಗು ಹೋಗಬೇಕು ಅಂದಳು. ಅವಳಿಗೆ ಕಾರು ಕೊಟ್ಟು ಕಳುಹಿಸಿದೆ, ಏಳು ಗಂಟೆಗೆ ಕಾರು ಬರುತ್ತೆ. ಅಷ್ಟರೊಳಗಾಗಿ ನೀನು ಹೋಗಿ ಪ್ಯಾಸ್-ಬುಕ್ ತಂದುಬಿಡಬೇಕಲ್ಲ. ಇಕೋ, ಬಸ್ ಛಾರ್ಜು; ಒಂದು ರೂಪಾಯಿ ಸಾಕಲ್ಲ!” “ಅಡುಗೆಗೆ ಹೊತ್ತಾಗುತ್ತೆ !” “ಇವೊತ್ತು ನಿಮ್ಮ ಅಮ್ಮ ಅವರು ನಮ್ಮ ಮನೆಗೆ ಊಟಕ್ಕೆ ಬರುತ್ತಾರೆ. ಅದೂ ನಮ್ಮ ಮನೆಯಲ್ಲಿ ಹೇಳಿ ಬಂದುಬಿಡಿ.” ನಾರಣಪ್ಪ ಅರ್ಥಮಾಡಿಕೊಂಡ. ಮಾರಿ ಕಣ್ಣು ಹೋತನ ಮೇಲೆ. ಈ ಮಹಾಮಾರಿ ಬಂದಿದ್ದಾಳೆ. ಇನ್ನು ಏನು ಸಂಧಾನ ಹೂಡಿದ್ದಾಳೋ? ಅದಕ್ಕೇ ನನ್ನನ್ನು ಇಲ್ಲಿಂದ ಸಾಗಿಸುತ್ತಿದ್ದಾಳೆ ಎನ್ನಿಸಿತು. ತನಗೇಕೆ? ಇದ್ದರೆ ಈ ಊರು, ಹೋದರೆ ಮುಂದಣ ಊರು, ರಾಯರ ಇನ್‌ಕ್ಯೂರೆನ್ಸ್ ಹಣ ಬಂದಿದೆ. ಮಾಡಿದರೆ ಇನ್ನೇನು ಮಾಡಿಯಾಳು? ಅದರಲ್ಲಿ ಅಷ್ಟು ಸಮಾಜಕ್ಕೆ ತೆಗೆದುಕೊಂಡು ಹೋದಾಳು. ಹಾಗೆ ಆದರೆ ತಾನೇ ಏನು? ಹಾವು ಕೊಂದು ಹದ್ದಿಗೆ ಹಾಕುತ್ತಾಳೆ. ಏನು ನಷ್ಟ!” ಎಂದು ಏನೇನೋ ಯೋಚಿಸಿಕೊಂಡು ಪ್ಯಾಸ್‌ಬುಕ್ ತರಲು ಹೋದನು. ಸೀತಮ್ಮನು ಮಾತಿಗೆ ಆರಂಭಿಸಿದಳು. ಮೋಹನೆಗೆ ಗೊತ್ತು ಅವಳು ಮೊದಲುಮಾಡಿದರೆ ಎದುರುಗಡೆಯವರು ಒಪ್ಪುವವರೆಗೂ ಬಿಡುವುದಿಲ್ಲ ಎಂದು. ಇನ್ನು ಏನು ಹೇಳುತ್ತಾಳೋ? ಒಪ್ಪದಿದ್ದರೆ ಏನೆನ್ನುತ್ತಾಳೋ ಎಂದು ಅವಳಿಗೂ ದಿಗಿಲು. ಆದರೂ ಯತ್ನವಿಲ್ಲದೆ ಮನುಷ್ಯನು ಹಿಡಿದುಕೊಂಡ ಹಕ್ಕಿಯ ಹಾಗೆ, ಅವಳ ಮಾತು ಕೇಳಲು ಸಿದ್ದವಾಗಿ ಕುಳಿತಳು. “ಇವೊತ್ತು ಬೆಳಿಗ್ಗೆ ನಿಮ್ಮ ಚಿಕ್ಕರಾಯರು ಬಂದಿದ್ದರು. ಏನೂ ಗಾಬರಿ ಬೀಳಬೇಡಿ. ನಿಮಗೂ ಅವರಿಗೂ ನಾನು ಗಂಟುಕಟ್ಟಿಲ್ಲ. ಆದರೂ ಅದು ಆಗೇ ಆಗುತ್ತೆ ಎಂದು ನನಗೂ ಗೊತ್ತಿದೆ. ಅದಿರಲಿ, ನನ್ನ ಮಾತು ಪೂರ್ತಿ ಕೇಳಿ, ನನಗೀಗ ನಲವತ್ತೈದು ವರ್ಷ. ನಾನು ಈ ಸಮಾಜಕ್ಕೆ ಇಪ್ಪತ್ತು ವರ್ಷ ಮೆಂಬರಾಗಿದ್ದೀನಿ. ಹತ್ತು ವರ್ಷದಿಂದ ಪ್ರೆಸಿಡೆಂಟ್ ಆಗಿದ್ದೀನಿ. ಈ ಊರಿನಲ್ಲಿ ಹೆಂಗುಸರಿಗೆ ನನಗಿಂತ ದುಡಿದವರು ಇನ್ನಿಲ್ಲ. ನಾಲ್ಕು ಮೆಟರ್ನಿಟಿ ಹೋಂ, ಮೂರು ನರ್ಸಿಂಗ್ ಹೋಂ, ಎರಡು ನರ್ಸರಿ ಸ್ಕೂಲು ಇಷ್ಟು ಆಗುವುದಕ್ಕೆ ನಾನು ಡೈರೆಕ್ಟ್ ಆಗಿ ಕಾರಣಳು. ಇಷ್ಟು ದಿವಸ ಆಗಿದೆಯಲ್ಲ ನೀವೂ ಐದಾರು ವರ್ಷದಿಂದ ಮೆಂಬರಾಗಿದ್ದೀರಲ್ಲ; ನನ್ನ ವಿಚಾರವಾಗಿ ಯಾರಾದರೂ ಮಾತಾಡುವ ಹಾಗೆ ಇದೆಯೇನು? ನಿಮಗೆ ಅನ್ನಿಸಬಹುದು: “ಸೀತಮ್ಮನ್ನ ಎಲ್ಲರೂ ಹಾಗೆನ್ನುತ್ತಾರೆ, ಹೀಗೆನ್ನುತ್ತಾರೆ’ ಅಂತ. ಅದೆಲ್ಲ ನಿಜ. ಆಯಿತು. ಯಾರಿಗೇನು ನಷ್ಟ? ನನ್ನ ಮಾತು ನನ್ನದು ಅಂತ ನಾನು ದಿಟ್ಟವಾಗಿರೋ ವೇಳೆಗೆ ಎಲ್ಲರೂ ನನ್ನನ್ನು ಗೌರವಿಸುತ್ತಿರುವುದು. ಅದಿರಲಿ, ಆಮೇಲೆ ಹೇಳುತ್ತೇನೆ. ಈಗ ಇವೊತ್ತಿನ ಮಾತು ಕೇಳಿ, ಚಿಕ್ಕರಾಯ ನಮ್ಮ ಮನೆಗೆ ಬಂದು ಗೊಳೋ ಅಂತ ಅತ್ತೆ, ನೀವು ಯಾವಾಗಲೂ ಅಳುತ್ತಲೇ ಇರುತ್ತೀರಂತೆ, ಹೀಗೇ ಇನ್ನೂ ಎರಡು ತಿಂಗಳು ಆದರೆ ಆಕೆ ಕೂಡ ಉಳೀತಾರೋ ಇಲ್ಲವೋ? ನೀವು ಹೋಗಿ ಏನಾದರೂ ಮಾಡಿ ಆಕೆಯನ್ನು ಆ ದುಃಖದ ಗುಹೆಯಿಂದ ಈಚೆಗೆ ಕರೆದುಕೊಂಡುಬರಬೇಕು. ಇದು ನಿಮ್ಮಿಂದ ಸಾಧ್ಯ! ಇತರರಿಂದ ಇಲ್ಲ, ಈ ಉಪಕಾರ ಮಾಡಿ ಅಂತ ಈಗ ಐನೂರು ನಿಮ್ಮ ಸಮಾಜಕ್ಕೆ ಕೊಟ್ಟಿದ್ದೇನೆ ; ಇನ್ನು ಐನೂರು ಕೊಡುತ್ತೇನೆ, ಅಂತ ಹೇಳಿ ಒಂದು ಚೆಕ್ ಕೊಟ್ಟು ಹೋಗಿದ್ದಾರೆ. ನೀವು ದೊಡ್ಡ ಮನಸ್ಸು ಮಾಡಿ ಈ ದುಃಖ ಬಿಟ್ಟು ಮೊದಲಿನ ಹಾಗಾದರೆ ಸಮಾಜಕ್ಕೆ ಇನ್ನೂ ಐನೂರು ರೂಪಾಯಿ ಬರುತ್ತೆ ಏನು ಹೇಳುತ್ತೀರಿ? ನಿಮ್ಮನ್ನು ತಾನೇ ನಾನು ಥ್ಯಾಂಕ್ ಮಾಡಬೇಕಾದ್ದು ಈ ಸಾವಿರ ರೂಪಾಯಿಗೆ?” ಮೋಹನೆಯು ಸೀತಮ್ಮನ ಮಾತು ಕೇಳಿದಳು: “ನಾನು ಗಂಟು ಕಟ್ಟಿಲ್ಲ; ಆದರೂ ಆಗೇ ಆಗುತ್ತೆ” ಎಂಬ ಅವಳ ಮಾತು ಕೇಳಿ ಅವಳಿಗೆ ಗಾಬರಿಯಾಯಿತು. ಪ್ರಾಣೇಶನ ಎದುರಿಗೆ ತಾನು ಹೆಚ್ಚಾಗಿ ಅತ್ತಿಲ್ಲ; ಆದರೂ ಇವಳ ಹತ್ತಿರ ಹಾಗೆ ಹೇಳಿ ಇವಳನ್ನು ಕಳುಹಿಸಬೇಕಾದರೆ, ಅವನು ತನ್ನ ಲಾಯರಿ ಬುದ್ಧಿಯನ್ನು ತೋರಿಸಬೇಕು. ಅಂದು ತಾನು ಮದರಾಸಿನಲ್ಲಿ ಬಿದ್ದುಹೋಗುತ್ತಿದ್ದಾಗ ಅವನು ಹಿಡಿದುಕೊಂಡದ್ದು ಸಜ್ಜನನ ರೀತಿಯಲ್ಲ; ಅದೇ ಭಾವ ಮುಂದುವರಿದೆಯೋ, ಅದೇ ಸಂಧಾನದಲ್ಲಿ ಇದ್ದಾನೋ ? ಹಾಗಾದರೆ ಅವನೇ ಬಲೆ ಬೀಸುತ್ತಿದ್ದಾನೋ? ಅಥವಾ ತನ್ನ ಮನಸ್ಸಿನಲ್ಲಿ ಇದ್ದುದ್ದು ತಾನೇ ಯಾವಾಗಲಾದರೂ ತೋರಿಸಿಬಿಟ್ಟಿದ್ದೆನೋ? ಎಂದು ಏನೇನೋ ಯೋಚನೆಗಳು ತಲೆತುಂಬ ತುಂಬಿ ಅವಳಿಗೆ ಹುಚ್ಚು ಹಿಡಿದಂತಾಯಿತು. ಸೀತಮ್ಮನ ತನ್ನ ಮಾತಿಗೆ ಉತ್ತರ ಬರದಿದ್ದುದನ್ನು ಕಂಡು ಮತ್ತೆ ಹೇಳಿದಳು: “ನೋಡಿ, ಮೋಹನಬಾಯಿ, ಇದು ಹೊಸ ಯುಗ, ಹಿಂದಲ ಯುಗದಲ್ಲಿ ಹೆಣ್ಣಿಗೆ ಜೀವನದ ಗುರಿ ಪಾತಿವ್ರತ್ಯ, ಸೀತಾ, ಸಾವಿತ್ರಿ, ದಮಯಂತಿ, ಇವರು ಆಗಿನ ಕಾಲದ ಹೆಣ್ಣಿನ ಗುರಿ. ಆಗ ಹೆಣ್ಣಿಗಿಂತ ಗಂಡು ಹೆಚ್ಚು ಎಂಬ ಭಾವ. ಎಲ್ಲರಿಗಿಂತ ಬ್ರಾಹ್ಮಣ ಹೆಚ್ಚು ಅನ್ನುವ ಹುಚ್ಚು ಹಿಡಿದಿದ್ದಾಗ, ಸಮಾಜವೆಲ್ಲ ಮೆಟ್ಟಿಲು ಮೆಟ್ಟಲಾಗಿತ್ತು ಮೆಟ್ಟಲು ಮೆಟ್ಟಲಿನಲ್ಲೂ ಎರಡು ಅಂತಸ್ತು ಗಂಡು ಅಂದರೆ ಹೆಚ್ಚು; ಹೆಣ್ಣು ಅಂದರೆ ಕಡಿಮೆ. ಈಗ ಡೆಮೊಕ್ರಸಿ ಬಂದಿದೇರಿ. ನಾವೆಲ್ಲ ಈಗ ಇಪ್ಪತ್ತು ವರ್ಷದ ಹಿಂದೆ ಕಂಡ ಕನಸು ಇವೊತ್ತು ದಿಟವಾಗಿದೆ. ಲಾ ಎದುರಿಗೆ ಹೆಣ್ಣು ಗಂಡು ಹಾರವ ಹೊಲೆಯ ಎಲ್ಲಾ ಒಂದೇ ಎಂದು ಆಗಿದೆ. ನಿಮ್ಮ ಗಂಡ ಹೋದರು. ಅದಕ್ಕಾಗಿ ನೀವೂ ಇಷ್ಟು ದಿವಸ ಅತ್ತಿರಿ. ಹಾಗಂತ ಸತ್ತ ಗಂಡನ್ನ ನೆನೆದು ಅಳುತ್ತ ಅಳುತ್ತ ದಿನವೂ ಗಳಿಗೆ ಗಳಿಗೆಗೂ ನೀವೂ ಸಾಯಬೇಕೇನು? ಹಾಗೆ ಸಾಯಬೇಕು ಅನ್ನುವುದಾದರೆ ಒಂದೇ ಸಲ ಸತ್ತುಹೋಗಿ, ನಮ್ಮ ಅಬ್ಬಕ್ಷನ್ ಏನೂ ಇಲ್ಲ, ಆದರೆ, ಬದುಕಿದ್ದು ಸತ್ತವರ ಹಾಗಾದರೆ, ನಾನೊಬ್ಬಳಲ್ಲ. ಸಮಾಜಕ್ಕೆ ಸಮಾಜವೇ ನಿಮ್ಮನ್ನು ಶಪಿಸುತ್ತೇ? ಈಗ ಹಿಂದಿನ ಹಾಗೆ ಫ್ರೆಂಡ್ ಫೆಯಿತ್ ಅಲ್ಲರಿ ; ಈಗ ನಾವು ಸಿವಿಲೈಸ್ ; ನಾಗರಿಕರು ಅಂದರೆ, ಅದಕ್ಕೆ ತಕ್ಕ ಹಾಗೆ ಇರಬೇಕು. ನೀವು ಸಾವಿರ ಹೇಳಿ ನಿಮ್ಮ ದುಃಖ ಬೆಟ್ಟದಷ್ಟಿರಲಿ, ನೀವು ಅದನ್ನೆಲ್ಲ ನುಂಗಲೇಬೇಕು. ನೀವು ಸಮಾಜಕ್ಕೆ ದುಡಿಯಲೇಬೇಕು. ಹೊರಗೆ ಬರಲೇ ಬೇಕು. ಗಂಡ ಇದ್ದಾಗ ನೀವು ನಗತಾ ಇದ್ದ ಹಾಗೇ ಈಗಲೂ ಇರಬೇಕು. ಅಷ್ಟೇ ? ಅಂದುಕೊಳ್ಳಬಾರದು.” ದುಡುಕಿದಳು ಅಂದುಕೊಂಡರೂ ಅಂದುಕೊಳ್ಳಿ. ನೀವು ಯಾವುದರಲ್ಲೂ ಇಲ್ಲ “ಹಾಗಂದರೆ?” “ಹಾಗಂದರೆ, ಕೇಳಿ, ನೀವು ಗಂಡುಸರಾಗಿದ್ದು, ನಿಮ್ಮ ಮೆಚ್ಚಿನ ಹೆಂಡತಿಯೇ ಹೋಗಿದ್ದರೆ ಏನು ಮಾಡುತ್ತಿದ್ದಿರಿ?” “ಕೆಲವು ದಿನವಾದ ಮೇಲೆ ಇನ್ನೊಂದು ಮದುವೆ ಮಾಡಿಕೊಳ್ಳುತ್ತಿದ್ದೆ.” “ಈಗಲೂ ಅದೇ ಮಾಡಿ. “ಅದು ಹೇಗೆ ಸಾಧ್ಯ?” “ಇದಕ್ಕೆ ನಿಮಗೆ ಬುದ್ಧಿ ಇಲ್ಲ ಎನ್ನೋದು. ಹಿಂದಿನ ಹಿರಿಯರು ಹೇಳಿದ್ದು ಏನು ಸರಿಯೋ ಏನು ತಪ್ಪೋ ಒಂದು ಮಾತ್ರ ನಿಜ. ಮನುಷ್ಯ ಬದುಕೋದು ಇಲ್ಲಿ ಸುಖವಾಗಿರಬೇಕು; ಇಲ್ಲಿಂದ ಮುಂದೆಯೂ ಸುಖವಾಗಿರಬೇಕು; ಅದಕ್ಕೆ ಬೇಕಾದ್ದು ಮಾಡಿಕೋಬೇಕು ಅಂದರು ಬರುಬರುತ್ತ ಈ ಇಹ, ಆ ಪರ, ಎರಡೂ ಒಂದೇ ತೂಕ ಅನ್ನೋದು ಮರೆತು ಇದಕ್ಕಿಂತ ಅದು ಹೆಚ್ಚು ಅನ್ನುವ ಭ್ರಾಂತಿ ಬಂತು ಜನಕ್ಕೆ. ಸರಿ, ಎಲ್ಲರೂ ಪರಲೋಕಕ್ಕೆ ಬುತ್ತಿ ಕಟ್ಟಿದ್ದೂ ಕಟ್ಟಿದ್ದೇ. ಕುಂತಿ ಮಕ್ಕಳು ಸ್ವರ್ಗ ಭೂಮಿಗೆ ತಂದರು ಅನ್ನೋದನ್ನ ಮರೆತು ಎಲ್ಲರೂ ಸ್ವರ್ಗಕ್ಕೇ ಹೊರಟುಬಿಟ್ಟರು. ದಾರಿಯಲ್ಲಿ ರೈಲು ಕುಸಿದುಬಿತ್ತು, ಎಲ್ಲರೂ ನರಕದ ಪಾಲಾದರು. ನೀವೂ ಹಾಗೆ ಮಾಡಬೇಡಿ, ನನ್ನ ಮಾತು ಕೇಳಿ, ನಿಮ್ಮ ಜೀವನ ಗಿಡ ಬೆಳೆದ ಹಾಗೆ ಬೆಳೆಯಲಿ. ಎಲೆಯ ಕಾಲದಲ್ಲಿ ಎಲೆ, ಹೂವಿನ ಕಾಲದಲ್ಲಿ ಹೂ, ಹಣ್ಣಿನ ಕಾಲದಲ್ಲಿ ಹಣ್ಣು ಎಲ್ಲವೂ ಇದ್ದರೆ ಕ ಗಿಡ. ಅದು ಬಿಟ್ಟು ಒಂದೇ ಒಂದು ಆಗಿದ್ದರೆ ಪ್ರಯೋಜನ ಏನು? ಈಗ ನಿಮಗೆ ಆಗಬೇಕಾದ ಹೊಸ ಮದುವೆ ಇದು. ನೀವು ಧೈರವಾಗಿ ಸಮಾಜ ಸೇವೆಗೆ ನಿಲ್ಲಿ, ಈಗ ಹೊಸ ಯುಗ ಬಂದಿದೆ. ಈ ಯುಗದಲ್ಲಿ ಹೆಣ್ಣು ಗಂಡಿಗೆ ಸಮ. ಹೆಣ್ಣು ಹೆಚ್ಚ ಅಲ್ಲ, ಕಡಿಮೆಯೂ ಅಲ್ಲ, ಹೆಣ್ಣು ಹೋದರೆ ಗಂಡು ಇನ್ನೊಂದು ಹೆಣ್ಣು ಹುಡುಕಿಕೊಳ್ಳುವಂತೆ, ಹೆಣ್ಣೂ ಒಂದು ಗಂಡು ಕಳೆದುಕೊಂಡಾಗ ಇನ್ನೊಂದು ಗಂಡು ಹುಡುಕಿಕೊಂಡರೆ ತಪ್ಪೇನು? ನೀವು ರಮೇಶನ ಹೆಂಡತಿಯಾಗಿದ್ದಾಗ ಹೆಣ್ಣಾಗಿ ಹೆಣ್ಣು ಹೆಂಗುಸಾಗಿ ಸಂಸಾರ ಮಾಡಿದಿರಿ, ಆ ಜನ್ಮಮುಗಿಯಿತು. ಇನ್ನೊಂದು ಜನ್ಮ ಬಂದಿದೆ. ಗಂಡನ ಆಟದ ಬೊಂಬೆಯಾಗಿ ಬಾಳಿದ ಪುಣ್ಯ ನಿಮಗೆ ಇಂದು ಮನೆ ಮಠ ಹಣಕಾಸು ಎಲ್ಲ ಕೊಟ್ಟಿದೆ. ನೀವು ಜೀವನಕ್ಕಾಗಿ ಅಳಬೇಕಾಗಿಲ್ಲ. ಅಳುವಿನ ಆಳ ಕಂಡ ನೀವು, ಇನ್ನೂ ಎಷ್ಟೋ ಕಾರಣದಿಂದ ಅಳುತ್ತಿರುವವರ ಕಣ್ಣೀರು ಅಳಿಸುವ ದೊಡ್ಡ ಕೆಲಸ ಕೈಗೊಳ್ಳಿ. ಅದಕ್ಕಿಂತ ಪುಣ್ಯವಿಲ್ಲ. ಇನ್ನೂ ಪುಣ್ಯ ಮಾಡಬೇಕು ಎಂದರೆ, ನಿಮಗೆ ತೋರಿದ ದಿವಸ ದೇವಸ್ಥಾನದಲ್ಲಿ ಪೂಜೆ ಮಾಡಿಸಿ : ಇನ್ನೂ ಬೇಕು ಅಂದರೆ ನಿಮ್ಮ ಮನೆಯಲ್ಲಿಯೇ ಪೂಜೆ ಮಾಡಿಸಿ. ಅದೆಲ್ಲ ಹಳೆಯ ತರಹ. ಆದರೂ, ಒಂದು ಮಾತು. ಜನಕ್ಕೆ ಈ ಹಳೆಯ ತರಹ ಹಿಡಿಸುವ ಹಾಗೆ ಹೊಸ ತರಹ ಹಿಡಿಯೊಲ್ಲ. ನೀವು ಬೆಳಗಿಂದ ಸಂಜೆವರೆಗೂ ಮಾಡಬಾರದ ಕೆಲಸ ಮಾಡಿ, ಸಾವಿನ ಖನಿ ಮಾಡಿ, ದರೋಡೆ ಮಾಡಿ, ಹಾದರ ಮಾಡಿ, ಕಳ್ಳತನ ಮಾಡಿ; ಪೂಜೆ ಮಾಡಿಸುತ್ತಿದ್ದರೆ, ಜನ ನಿಮ್ಮನ್ನು ಹೊಗಳುತ್ತೆ ನಾನು ಈ ಮಾತು ಒತ್ತಿಒತ್ತಿ ಹೇಳುತ್ತೀನಿ. ನೀವು ಒಳ್ಳೆಯವರು ಅನ್ನಿಸಿಕೊಳ್ಳುವ ದಾರಿ ಇದು. ತಿಂಗಳಿಗೆ ಒಂದು ಇಪ್ಪತ್ತು ಮೂವತ್ತು ರೂಪಾಯಿ ಅದಕ್ಕಾಗಿ ಖರ್ಚು, ಅಬ್ಬಾ! ಅಂದರೆ ಐವತ್ತು ಅದು ಬೊಗಳುವ ನಾಯಿಯ ಬಾಯಿಗೆ ಹಾಕುವ ಬ್ರೆಡ್ ಚೂರು. ಇನ್ನು ಗಂಡಿಗಿಂತ ಗಂಡಾಗಿ, ವಿಶಾಲ ಜೀವನವನ್ನು ಅಂಗೀಕರಿಸಿ ಸಮಾಜ ಸೇವೆ ಮಾಡಿ, ಅದರಲ್ಲಿಯೂ ಈಗಂತೂ ನೀವು ಕನ್ಯಾಮಂದಿರ ಸ್ಥಾಪಿಸಬೇಕು ಅಂತಿದ್ದೀರಿ. ಅದನ್ನು ದೊಡ್ಡದು ಮಾಡಿ, ಅಲ್ಲಿ ಬೆಳೆದ ಹುಡುಗಿಯರು ಅನ್ನಕ್ಕಾಗಿ ಗಂಡಿನ ದಾಸ್ಯವನ್ನೊಪ್ಪಿಕೊಳ್ಳುವ ಹೆಣ್ಣು ಹೆಂಗುಸರಾಗದೆ ಜೀವನದ ರಥಕ್ಕೆ ಹೂಡಿರುವ ಕುದುರೆಗಳು ನಾವು ಎಂದು ಹೇಳುವ ದಿಟ್ಟತನದ ಗಂಡು ಹೆಂಗುಸರಾಗಲಿ;
ಮೊದಮೊದಲು ಇವರನ್ನು ಲೋಕ ಗಂಡುಬೀರಿಯರೆನ್ನುವುದು. ಹೆದರಬೇಡಿ, ಧೈರವಾಗಿ ನುಗ್ಗಿ “ನಾನೂ ಅದೇ ಮನಸ್ಸಿನಲ್ಲಿದ್ದೇನೆ. ಕನ್ಯಾಮಂದಿರ ನಡೆಸಲೇಬೇಕು ಎಂದು ಗೊತ್ತು ಮಾಡಿಕೊಂಡಿದ್ದೇನೆ.” “ಗೊತ್ತುಮಾಡಿಕೊಳ್ಳುವುದೇ ಬೇರೆ! ಅದನ್ನು ನಡೆಸುವುದೇ ಬೇರೆ! ದೊಡ್ಡ ರಾಯರ ಜಾಗದಲ್ಲಿ ನೀವೇ ಪ್ರೆಸಿಡೆಂಟರಾಗಿ ನಿಲ್ಲಿ ನಿಮ್ಮ ಜೊತೆಗೆ ಇನ್ನಿಬ್ಬರು ಹೆಂಗುಸರನ್ನು ಬೇಕಾದರೆ ತೆಗೆದುಕೊಳ್ಳಿ. ಲೌಕಿಕವಾಗಿ ನಿಮ್ಮ ಚಿಕ್ಕರಾಯರಿಂದ ಸಹಾಯ ಪಡೆದು ಕೊಳ್ಳಿ.’ “ಹೂ, ಆಗಲಮ್ಮ.” “ಸೋತು, ಉತ್ತರ ಹೇಳುವುದಕ್ಕೆ ಯತ್ನವಿಲ್ಲದಾಗ ಹೇಳುವ ಹಾಗೆ, ‘ಹೂ, ಆಗಲಮ್ಮ!’ ಅನ್ನ ಬೇಡಿ, ಯಾವೊತ್ತು ಸುರುಮಾಡು ತೀರಿ ಅದನ್ನು ಹೇಳಿ.” “ಚಿಕ್ಕರಾಯರನ್ನು ಕೇಳಿ ಹೇಳುತ್ತೇನೆ, ಆಯಿತು. ಸೀತಮ್ಮ! ಅದೇನು ಹಾಗಂದರಲ್ಲ. ಗಂಟುಬೀಳುತ್ತೆ ಅಂದರಲ್ಲ ಅದೇಕೆ?” “ಅದೇ, ನೀವೂ ಅವರೂ ಪದೇಪದೇ ಸಂಧಿಸಬೇಕು. ನೀವು ರೂಪವಂತರು. ಅವರು ಬುದ್ಧಿವಂತರು. ಚಿಕ್ಕರಾಯರ ಸ್ವಭಾವ ಹಣಕ್ಕಾಗಿ ಏನು ಬೇಕಾದರೂ ಮಾಡಿಬಿಡುವಂತವರು. ಹೆಣ್ಣು ಹೊನ್ನು ಎರಡರಲ್ಲಿ ಒಂದೊಂದೇ ಸಾಕು, ಈ ಗಂಡುಸರು ಅನ್ನುವ ಮೃಗಗಳನ್ನು ಹಿಡಿಯುವುದಕ್ಕೆ ಎರಡೂ ನಿಮ್ಮಲ್ಲಿ ಇದೆ. ಸಾಲದೆ ನಿಮಗೆ ಒಪ್ಪಿದೆ. ಅದರಿಂದ ಹಾಗೆಂದೆ.” ಯಾರೂ ದಿಕ್ಕಿಲ್ಲ. ಈಗಲೂ ಕೂಡ ಡೈವೋರ್ಸ್, ವಿಡೋ ಮ್ಯಾರೇಜ್, ಎಲ್ಲಾ “ನಾನು ಅಂಥವಳೇ?” “ಮೋಹನಬಾಯಿ, ನೀವು ಕೋಪಮಾಡಿಕೊಳ್ಳಬೇಡಿ. ನಾನು ನಿಮಗಿಂತ ಗಟ್ಟಿಗಳು. ನಿಮ್ಮ ಹಾಗೆ ಕಾಫಿಯಲ್ಲಿ ಅದ್ದಿದ ಬ್ರೆಡ್ ಅಲ್ಲ. ನನ್ನಂಥಾವಳನ್ನು ದಾರಿದಾರಿ ಹಿಡಿಸಿಬಿಟ್ಟರು. ನನಗೆ ಬುದ್ದಿ ಇತ್ತು; ಕಡಲೇ ತಿಂದು ಕೈತೊಳೆದ ಹಾಗೆ ಮಾಡಿಕೊಂಡೆ. ಇದರ ಮೇಲೆ, ನಾನು ಈ ಮಾತು ನಿಮಗೆ ಹೇಳಬೇಕು ಅಂತಲೇ ಬಂದದ್ದು, ಈ ಭೋಗ ಎನ್ನೋದೂ ಹಸಿವು ಬಾಯಾರಿಕೆ ಹಾಗೆ ಆರೋಗ್ಯವಾಗಿರುವ ದೇಹದ ಒಂದು ಲಕ್ಷಣ. ಅದು ತಡೆದರೆ ಅದೇ ಒಂದು ಕೆಲಸ. ಅದರಲ್ಲಿ ಗೆಲ್ಲುವುದು ಎಂದರೆ ಮಿಕ್ಕ ಕಡೆಗಳಲ್ಲೆಲ್ಲಾ ಸೋಲು. ಅನ್ನ ಇದೆ ಅಂತ ತಿಂದವ ಕೆಟ್ಟ ಅನ್ನುವ ಹಾಗೆ, ಅದೇ ಪ್ರಾಧಾನ್ಯಮಾಡಬಾರದು. ಮನೆಯಲ್ಲಿ ಮಲಗುವ ಮನೆ ಇದ್ದಹಾಗೆ ಅದೂ ಒಂದು ಅಂದುಕೊಂಡರೆ ತಪ್ಪಿಲ್ಲ.”
“ಎಲ್ಲರೂ ಈ ಮಾತೂ ಒಪ್ಪುತ್ತಾರೆಯೇ?” ಸೀತಮ್ಮ ನಕ್ಕಳು: “ನಿಜ, ಎಲ್ಲರೂ ಒಪ್ಪಲಿ, ಬಿಡಲಿ, ನೀವು ಒಪ್ಪಿದ್ದೀರಿ ಅಂತ ಆಯಿತು. ಅದು ನಿಮ್ಮ ಸ್ವಂತ ವಿಷಯ. ಅದು ತಪ್ಪು ಎಂದರೆ, ಹಾಗೆಂದವರ ಬಾಯಿ ಮುಚ್ಚುವ ದಾರಿಯೂ ಹೇಳಿದ್ದೀನಿ. ನಮ್ಮ ಕಾರು ಬರುವುದಕ್ಕೆ ಮುಂಚೆ ಕುದುರೆಗಾಡಿ ಇತ್ತು ನಮ್ಮ ಮನೆಯಲ್ಲಿ ಕುದುರೆಗೆ ಮಾಲೀಸ್ ಇಲ್ಲದಿದ್ದರೆ ಅದರಿಂದ ಏನಾದರೂ ಕೆಲಸ ನಡೆಯುತ್ತಿತ್ತು ಅಂತಿದ್ದಿರಾ? ಉಹುಂ, ಹಾಗೆ, ಗಂಡಿಗೆ ಹೆಣ್ಣು. ಹೆಣ್ಣಿಗೆ ಗಂಡು ಸಲ್ಲಿಸುವ ಮಾಲೀಸ್ ಉಪಚಾರ ಈ ಸೇವೆ. ಈ ಜನ್ಮದಲ್ಲಿ ಅದೇ ಮುಖ್ಯವಲ್ಲ; ಹಾಗೆಂದು ಅದನ್ನು ತಳ್ಳುವಂತೆಯೂ ಇಲ್ಲ, ಇದರ ಮೇಲೆ, ನಿಮಗೆ ಕೆಲವು ದಿನವಾದರೂ ರಕ್ಷಣೆ ಬೇಕು. ಆ ರಕ್ಷಣೆ ಗುರುತು ಕಂಡಕಡೆಯಿಂದ ಬಂದರೆ ಬೇಡ ಎನ್ನುವರಾರು? ಅದರಿಂದ ನಾನು ಹಾಗಂದೆ. ಕೋಪ ಇಲ್ಲವಷ್ಟೇ?” “ನೀವು ಇಷ್ಟು ಹೇಳಿದಮೇಲೆ, ನಾನು ಸುಮ್ಮನಿರುವುದು ಸಾಧ್ಯವಿಲ್ಲ. ನಾನೂ ಎರಡು ಮಾತು ಹೇಳೀನಿ ಕೇಳಿ.” “Bee.” “ನಮ್ಮ ಯಜಮಾನರು ಕ್ಷಯದಲ್ಲಿ ಸತ್ತುಹೋದದ್ದು, ನಿಮಗೆ ಗೊತ್ತಿರಬೇಕು.” “ಹೌದು.”
“ಅವರಿಗೆ ಕ್ಷಯ ಬಲವಾಗುವುದಕ್ಕೆ ಮುಂಚೆ ಜ್ಞಾನ ಚೆನ್ನಾಗಿತ್ತು, ಒಂದು ದಿನ ವೀಣಾ ಹೊರಗೆ ಹೋಗಿರುವಾಗ ನನ್ನನ್ನು ಕರೆದು ಕೈಹಿಡಿದುಕೊಂಡು ಒಂದು ಮಾತು ಹೇಳಿದ್ದರು: ‘ನೋಡು, ಮೋಹನ, ಜೀವನದಲ್ಲಿ ತನಗೆ ತೋರಿದಂತೆ ಇರುವುದರಲ್ಲಿ ಒಂದು ಸುಖವಿದೆ. ನೀನು ಮುಂದೆ ಒಂಟಿಯಾಗುವ ಕಾಲ ಬರಬಹುದು. ಆಗ ಬುದ್ದಿ ಹತೋಟಿಯಲ್ಲಿ ಇಟ್ಟುಕೊಂಡು, ತೋರಿದಹಾಗೆ ಇರುವ ಸುಖವನ್ನು ಅನುಭವಿಸಿಕೊ, ಇಲ್ಲದ ಪ್ರಾರಬ್ದಗಳಿಗೆ ಅಳಬೇಡ’ ಅಂದರು. ಆಗ ನನಗೆ ಅದು ಅರ್ಥವಾಗಲಿಲ್ಲ. ಈಗ ನೀವು ಹೇಳಿದ ಮೇಲೆ ಅದಷ್ಟೂ ಏನೋ ರೀತಿಯಾಗಿ ಅರ್ಥವಾಗುತ್ತಿದೆ.” ಸೀತಮ್ಮ ಗಂಭೀರಳಾದಳು; ಏನೋ ದೂರದಲ್ಲಿ ಏನೋ ಕಂಡ ಪ್ರವಾದಿಯಂತೆ ಅನ್ಯಮನಸ್ಕಳಾಗಿ ಹೇಳಿದಳು: ಮೋಹನಬಾಯಿ, ನಾನೂ ಬಲ್ಲೆ. ಈಗ ಬರುಬರುತ್ತಾ ಹಿಂದಿನವರು ಸೀತಾಸಾವಿತ್ರಿಯರನ್ನು ಪೂಜೆಮಾಡುತ್ತಿದ್ದಂತೆ ನಾವು ಸಿನಿಮಾ ಸ್ಟಾರ್ ಗಳನ್ನು ಪೂಜಿಸುತ್ತೇವೋ ಏನೋ? ಇದೇ ಜೀವನದ ಲಕ್ಷ್ಯವೇ ? ಎಂದು ಕೂಡ ನನಗೆ ಎಷ್ಟೋ ದಿನ ಯೋಚನೆ ಬಂದಿದೆ. ಆದರೆ, ನಾವು ಪಾಶ್ಚಿಮಾತ್ಯರನ್ನ ಅಣಕಿಸುವುದರಲ್ಲಿ ಬಹಳ ದೂರ ಹೋಗಿದ್ದೇವೆ. ನಮ್ಮ ವಿದ್ಯಾಬುದ್ಧಿಗಳಲ್ಲಿ ಆ ಸಮಾಜದ ಗುರಿಯನ್ನೇ ಇಟ್ಟುಕೊಂಡಿದ್ದೇವೆ. ಅದರಿಂದ ನಾವೂ ಅವರಂತೆಯೇ ಆದರೆ ವಿಶೇಷವಿಲ್ಲ. ಅದು ಅವರಿಗೆ ಒಗ್ಗಿದೆ. ನಮಗೆ ಒಗ್ಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಗಂಡುಮಕ್ಕಳು ತಮ್ಮ ಹೆಂಡತಿಯರು ಸಿನಿಮಾ ತಾರೆಗಳಾಗಬೇಕು ಎನ್ನುತ್ತಿದ್ದಾರೆ. ಹೆಣ್ಣಿಗೆ ಮದುವೆಯನ್ನು ಬಿಟ್ಟು ಗಂಡನ್ನು ಸೇರಿ ತಾಯಾಗುವುದನ್ನು ಬಿಟ್ಟು ಇದನ್ನು ಯಾವುದೂ ಗುರಿ ಸಿಕ್ಕಿಲ್ಲ, ಅವಳ ದೇಹ, ಅವಳ ಬುದ್ದಿ ಅವಳ ಮನಸ್ಸು ಸಮಾಜದ ಪರಿಸ್ಥಿತಿ, ಇವೆಲ್ಲ ಅವಳನ್ನ ದಾಸಿಯನ್ನಾಗಿ ಮಾಡಿ ಗೌರವವಾಗಿ ಆ ದಾಸ್ಯಕ್ಕೆ ತಾಯಿತನದ ಮುದ್ರೆಯೊತ್ತಿದೆ. ನಾನು ಸಮಾಜ ಮಾಡಿಕೊಂಡು ಹೆಣ್ಣಿನ ಬಾಳಿಗೆ ಹೊಸಜೀವ ತುಂಬಬೇಕು ಎಂದು ಮಾಡಿದ ಕೆಲಸದಲ್ಲಿ ನೂರಕ್ಕೆ ಒಂದು ಗೆದ್ದಿದೆಯೇ ಹೊರತು ಮಿಕ್ಕವೆಲ್ಲ ಸೋತಿವೆ. ಆ ಒಂದಕ್ಕಾಗಿ ಉಳಿದ ತೊಂಬತ್ತೊಂಭತ್ತು ಸೋತರೂ ಚಿಂತೆಯಿಲ್ಲ ಅಲ್ಲವೇ ಎಂದುಕೊಂಡರೂ, ಸೋಲು ಎಷ್ಟು ಭಾರಿ ಎಂದು ನನಗೂ ನೋವಿದೆ. ಆದರೂ, ಮೋಹನ ಬಾಯಿ, ನೀವು ನನ್ನ ಸೋದರಿ, ನನ್ನ ಹಿರಿಯ ಮಗಳು, ಅನ್ನುವ ಭಾವದಿಂದ ಹೇಳುತ್ತಿದ್ದೇನೆ ನಿಜ, ನಂಬಿ. ಬದಲಾಗಬೇಕು: ಬದಲಾಗಬೇಕು. ಅಯ್ಯೋ, ಗಂಡುಬೀರಿಯಾಗದ ಹೆಣನವನ್ನು ಬಿಡದೆ ಗಂಡಿನಮೇಲೆ ಸವಾರಿ ಮಾಡಬಲ್ಲ ಹೆಣ್ಣು ಬಂದಲ್ಲದೆ ನಮ್ಮ ಸಮಾಜ ಉದ್ಧಾರವಾಗೋಲ್ಲ. ಇದು ನಿಮ್ಮ ಕನ್ಯಾಮಂದಿರದ ಗುರಿಯಾಗಲಿ, ಆದರೇನು ಮಾಡುವುದು? ನಮ್ಮ ಸಮಾಜವೇನು? ಯಾವ ಸಮಾಜವೂ ನಾಯಿಬಾಲ. ಆದಷ್ಟು ಬೇಗ ಪೂರ್ವಸ್ಥಿತಿಯ ಕೈಗೊಂಡನಾಪಾರ್ಥ, ಸಮಾಜದಲ್ಲಿ ಗುರಿಯನ್ನು ಆರಿಸಿಕೊಂಡು ಅದಕ್ಕಾಗಿ ಹೆಣಗುವ ಧೀರರಿಲ್ಲ. ಅದಾಗುವವರಿಗೆ ನಮ್ಮ ಸಮಾಜ ಬದುಕುವುದೆಂತು? ಅಂತಹ ಧೀರರನ್ನು ಹೆರಬಲ್ಲ ಧೀರೆ ಯಾರಾಗಬೇಕು ಮೋಹನಬಾಯಿ. ನಮ್ಮ ಈ ಹೆಣ್ಣು ಬೊಂಬೆಗಳು. ಈಗ ಹೆಣ್ಣುದಾಸಿಯಾಗಿದ್ದಾಳೆ; ಗುಲಾಮಳಾಗಿದ್ದಾಳೆ; ಗಂಡನ ಹಿಡಿಯನ್ನ, ಮೊಳಬಟ್ಟೆಗೆ ದೇಹವನ್ನು ಮಾರುವ, ಮಾರಿಕೊಂಡ ದಾದಿಯಾಗಿದ್ದಾಳೆ. ಇವಳ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ದಾಸರು, ಗುಲಾಮರು, ಆಗದೆ ಇನ್ನೇನು ಆದಾರು! ಸಮಾಜ ಸರಿಯಾಗಬೇಕಾದರೆ, ಗಂಡು ಸರಿಯಾಗಬೇಕೋ ಹೆಣ್ಣು ಸರಿಯಾಗಬೇಕೋ? ಎರಡೂ ಸೇರುವುದಕ್ಕೆ ಮುಂಚೆ ಸರಿಮಾಡಬೇಕೋ? ಸೇರಿದಮೇಲೆ ಸರಿಮಾಡಬೇಕೋ? ಹೇಳುವವರಿಲ್ಲ.. ಸೀತಮ್ಮನಿಗೆ ಮುಂದೆ ಮಾತನಾಡಲಾಗಲಿಲ್ಲ. ಕತ್ತು ಕಟ್ಟಬಂತು. ಅಳು ತಾನೇ ತಾನಾಗಿ ಅತ್ತುಬಿಟ್ಟಳು. ಮೋಹನೆಯು ಆಕೆಯನ್ನು ಸಮಾಧಾನ ಮಾಡುತ್ತ, “ಏನಮ್ಮ, ಅಳಬೇಡ ಅಂತ ಹೇಳಲು ಬಂದಿರಿ. ನೀವೇ ಅಳುತ್ತಿದ್ದೀರಲ್ಲ” ಎಂದಳು. ಸೀತಮ್ಮನು ಕಣ್ಣು ಮೂಗು ಒರೆಸಿಕೊಂಡು ಹೇಳಿದಳು: ಮೋಹನ ಬಾಯಿ. ನಿಮ್ಮ ಅಳು ಮಗ್ಗುಲ ಗಂಡ ಹೋದ ಅಂತ. ನನ್ನ ಅಳು ನನ್ನ ದೇಶ ಹೋಗುತ್ತಲ್ಲಾ ಅಂತ. ನಮ್ಮ ಹಿಂದಿನವರು ದೇವರು ದೇವರು ಅಂತ ನೂರೆಂಟು ದೇವರು ಗಳನ್ನು, ದಿನಕ್ಕೊಂದು, ವಾರಕ್ಕೊಂದು, ದೇವರನ್ನು ಪೂಜೆ ಮಾಡುತ್ತಿದ್ದರಲ್ಲಾ! ಆ ದೇವರುಗಳೆಲ್ಲ ಇಂದು ಎಲ್ಲಿ ಹೋದವು ಅಂತ ನಾನು ಕೇಳುತಿರೋದು. ಎಲ್ಲೆಲ್ಲೂ ಎತ್ತು ಏರೀಗಳೀತು; ಕೋಣ ನೀರಿಗೆಳೀತು ಅನ್ನೋ ಹಾಗಾಗಿದೆಯಲ್ಲೆ ತಾಯಿ! ನಾನು ಹೇಗೆ ತಡೀಲೆ? ಇದು ನನ್ನ ಅಳು. ನಿನ್ನ ಅಳು ನೀನು ಧೈರ್ಯ ಮಾಡಿಯೇ ಸೋತು ಇನ್ನೊಬ್ಬರನ್ನು ಗಂಟು ಹಾಕಿಕೊಂಡರೆ ತೀರಿತು. ನನ್ನ ದುಃಖ ತೀರುವುದು ಅಂದು ಕೊಂಡಿದ್ದೀಯಾ? ಹೆಣ್ಣಿನ ಬೊಂಬೆ ಮಾಡಿಕೊಂಡು ಕುಣಿಸುವ ಗಂಡನ್ನು ನೋಡಿದರೆ, ಗಂಡಿನ ಕೈಗೆ ಸಿಕ್ಕಿ ನರಳುವ ಹೆಣ್ಣನ್ನು ಕಂಡರೆ, ನನ್ನ ದುಃಖ ಮರುಕಳಿಸಿ ಬರುತ್ತದೆ. ನನಗೇಕೆ ಈ ದುಃಖ? ಯಾವುದೆಲ್ಲಾದರೂ ಹಾಳಾಗಲಿ, ಅಂದುಕೊಳ್ಳುತ್ತೇನೆ. ಆದರೆ ಬಹಳ ದಿನದ ಹುಚ್ಚು ಬಿಡಲಾರೆ. ಹುಂ, ಬಿಡು. ಇದೆಲ್ಲ ಮನಸ್ಸಿನಲ್ಲಿರಲಿ.”
ಸೀತಮ್ಮನು ಇನ್ನೂ ಏನು ಹೇಳಬೇಕು ಎಂದಿದ್ದಳೋ ಅಷ್ಟರೊಳಗೆ ವೀಣಾ ಧ್ವನಿ ಕೇಳಿಸಿತು. ಇಬ್ಬರೂ ಥಟ್ಟನೆ ಹೋಗಿ ಮುಕ ತೊಳೆದುಕೊಂಡು ಬಂದು ಏನೋ ಲೋಕಾಭಿರಾಮವಾಗಿ ಮಾತನಾಡುತ್ತ ಕುಳಿತುಕೊಂಡರು. ವೀಣಾ ಬರುತ್ತಿದ್ದ ಹಾಗೆ, “ಏನಮ್ಮಾ! ಸೀತಮ್ಮನವರ ಮನೆಯಲ್ಲಿ ಇವೊತ್ತು ಊಟ ಹೌದೇನಮ್ಮಾ!” ಎಂದಳು. “ಸೀತಮ್ಮನವರು ಅನ್ನಬೇಡ; ಇನ್ನು ಮೇಲೆ ದೊಡ್ಡಮ್ಮ ಅನ್ನು.” “ಓಹೋ, ಹಾಗಾದರೆ ಸೀತಮ್ಮನವರು ಅಕ್ಕ ಮೋಹನಬಾಯಿ ತಂಗಿ ಆದರು. ಆಗಬಹುದು. ನಮಗೂ ಒಬ್ಬರು ದೊಡ್ಡಮ್ಮ ಸಿಕ್ಕಿದರು. ಅದಕ್ಕೇನಮ್ಮ ಇವೊತ್ತು ಅಲ್ಲಿ ಊಟ?’ “ಹೌದು. ನಿನಗೆ ಯಾರು ಹೇಳಿದರು?” ~ “ಇನ್ನು ಯಾರು ಹೇಳಬೇಕು? ನಮ್ಮ ಲಾಲ್ ಬಾಗೂ ತೋರಿಸೋಣ ಅಂತ ಕರೆದುಕೊಂಡು ಹೋದೆ. ಅಲ್ಲಿಂದ ಬರೋ ದಾರೀಲಿ ನಾರಣಪ್ಪ ಸಿಕ್ಕಿದರು. ಅವರು ಹೇಳಿದರು. ಅಮ್ಮ ದೊಡ್ಡಮ್ಮ, ಇನ್ನೊಂದು ಸುದ್ದಿ ಗೊತ್ತೇನು? ನಮ್ಮ ಫ್ರೆಂಡ್ಸ್ ಬೆಂಗಳೂರಲ್ಲೇ ಇದ್ದಾರಲ್ಲಮ್ಮ! ಅವರು ಲಾಲ್‌ಬಾಗ್ ನೋಡಿಯೇ ಇಲ್ಲವಮ್ಮ!” “ಹೌದು ಮಗು. ಅಂಥಾವರು ಈ ಊರಲ್ಲಿ ಎಷ್ಟೋ ಜನರಿದ್ದಾರೆ.” “ಅವರೆಲ್ಲ ನಮ್ಮ ದೊಡ್ಡ ಗಾಡೀಲಿ ತುಂಬಿಕೊಂಡು ತುಂಬಿಕೊಂಡು ಹೋಗಿ ಯಾಕಮ್ಮಾ ಲಾಲ್‌ಬಾಗ್ ತೋರಿಸಬಾರದು?’ ಆ ಮಾತು ಕೇಳಿ ಹಿರಿಯರಿಬ್ಬರಿಗೂ ನಗು ಬಂತು. ಸೀತಮ್ಮನವರು ವೀಣೆ ಯನ್ನು ಕರೆದು ತಬ್ಬಿಕೊಂಡು ಮಾತನಾಡುತ್ತ “ನಾನೂ ನಿಮ್ಮಮ್ಮ ಅದೇ ಮಾತನಾಡು ತಿದ್ದೆವು ಕಣಮ್ಮ ಈ ಪ್ರಾರಬ್ಧಗಳು ಲಾಲ್ ಬಾಗೂ ನೋಡಿಲ್ಲವಲ್ಲ ಅಂತ ಸಂಕಟಪಡುತ್ತಿದ್ದೆವು. ಆಗಲೇ ಏಳೂವರೆ ಆಗುತ್ತಾ ಬಂತು. ಏಳಿ, ಇನ್ನು ಹೋಗೋಣ. ಬರೋ ವೇಳೆಗೆ ಒಂಬತ್ತು ಗಂಟೆ ಆಗುತ್ತೆ” ಆ ತಾಯಿ ಮಕ್ಕಳು ಸೀತಮ್ಮನ ಜೊತೆಯಲ್ಲಿ ಊಟಕ್ಕೆ ಹೊರಟರು. ಆ ವೇಳೆಗೆ ವಾಚ್‌ಮನ್ ಬಂದನು. ಅವನಿಗೆ ಹುಷಾರಾಗಿ ಇರುವ ಹಾಗೆ ಹೇಳಿ ಬಾಗಿಲು ಬೀಗ ಹಾಕಿಕೊಂಡು ಹೋದರು. ದಾರಿಯಲ್ಲಿ ಹೋಗುವಾಗ ಕಾರಿನಲ್ಲಿ ಯಾರೂ ಮಾತನಾಡಲಿಲ್ಲ, ವೀಣಾ ಏನೇನೋ ತನ್ನ ಗೆಳೆಯರ ವಿಚಾರ ಹೇಳುತ್ತಿದ್ದಳು. ಸೀತಮ್ಮನಿಗೂ ಏನೋ ಯೋಚನೆ. ಮೋಹನೆಗೂ ಏನೋ ಯೋಚನೆ. ಮೋಹನೆಯು ಸೀತಮ್ಮನು ಹೇಳಿದುದನ್ನೆಲ್ಲ ಯೋಚಿಸುತ್ತಿದ್ದಾಳೆ. ಎಲ್ಲದಕ್ಕಿಂತ ಪೂಜೆ ಮಾಡಿಸಿ ಎಲ್ಲರ ಬಾಯಿ ಮುಚ್ಚಿಸುವ ವಿಚಾರ ಬಹಳ ಹಿಡಿದಿದೆ. “ನೀವೇ ಪ್ರೆಸಿಡೆಂಟರಾಗಿ’ ಎಂಬ ಮಾತು ಕಿವಿಯಲ್ಲಿ ಮೊಳಗುತ್ತಿದೆ. ಪ್ರೆಸಿಡೆಂಟಾದರೆ.. …ಮುಂದಿನ ಕೆಲಸ.. ಅದಕ್ಕೆ ಮಾಡೋಣ.” ಎಂದು ಏನೇನೋ ಯೋಚನೆಗಳು. ಸಹಾಯ.. ಇರಲಿ. ಎಲ್ಲ
ಅಂತೂ ಹಿಂದಿನ ದುಗುಡ ಮುಂದಿನ ಕನಸಿಗೆ ಹಾದಿ ಕೊಟ್ಟಿತು ಎನ್ನುವುದರಲ್ಲಿ ಅನುಮಾನವಿರಲಿಲ್ಲ.
*****
ಮುಂದುವರೆಯುವುದು















