
ಕಂಡಿರ ಸುಂದರಿ ಕಮಲೆಯನು?
ಕಂಡಿರ ಕೋಮಲೆ ವಿಮಲೆಯನು?
ಧೀರನವೊಲು ದಿಗ್ವಿಜಯವ ಮಾಡಲು
ಊರಿನ ಗಡಿಯನ್ನು ದಾಟಿದಳು.
ಅವಳನು ಕಂಡರೆ ಒಲಿಯುವುದೇ,
ಅವಳನೆ ಎಂದಿಗು ಒಲಿಯುವುದೇ.
ಅವಳನು ಮಾಡಿದ ಬಿದಿ ತಾ ಮಾಡನು
ಇನ್ನಾ ಚೆಂದದ ಚೆಲುವೆಯನು.
ಕಮಲೇ, ನೀನೇ ರಾಣಿ ಕಣಾ,
ನೇಮಿಸು, ಪ್ರಜೆಗಳು ನಾವುಗಳು,
ಕಮಲೇ, ನೀನೇ ದೇವಿ ಕಣಾ,
ದಾಸರು, ಸೇವಿಸಿ ಬೇಡುವೆವು.
ನಿನ್ನನು ಕಲಿಯೂ ಸೋಕುವನೇ?
ನಿನ್ನವರೆಂದರೆ ತಾಕುವನೇ?
ನಿನ್ನಾ ಮುದ್ದಿನ ಮುಖವನ್ನು ಕಾಣುತ
ನಿನ್ನನು ಕಾಡದೆ ತೊಲಗುವನು.
ದಿವಿಜರು ನಿನ್ನನು ಕಾಯುವರು,
ನೀ ಬಿಸುಸುಯ್ದರೆ ನೋಯುವರು,
ತಮ್ಮನು ಮೆಚ್ಚಿಸಿ ಹೊಳೆಯುವ ಕನ್ನೆಗೆ
ಕೆಡುಕನು ಬಳಿಯೊಳು ಬರಗೊಡರು.
ಬಾರೆಲೆ, ಕಮಲೇ, ಚೆಲುವುಕಣಿ,
ಊರಿಗೆ ಬಾರೆಲೆ, ಹೆಣ್ಣುಮಣಿ!
ತೋರಲಿ ಇಂತಹ ಚೆಲುವೆಯನೆನ್ನುತ
ಊರವರೆಲ್ಲಾ ಮೆರೆಯುವೆವು.
*****
BURNS : Fair Liesley














