Home / ಕಥೆ / ಕಾದಂಬರಿ / ಒಡೆದ ಮುತ್ತು – ೬

ಒಡೆದ ಮುತ್ತು – ೬

ಪ್ರಾಣೇಶನಿಗೆ ದೊಡ್ಡ ಯೋಚನೆಯಾಗಿದೆ: “ರಮೇಶನು ಬುದ್ಧಿವಂತ, ವಿದ್ಯಾವಂತ, ಚೆನ್ನಾಗಿ ಸಂಪಾದಿಸಿದ ಶ್ರೀಮಂತ, ಯಾರಿಗೂ ಕೆಟ್ಟುದು ಮಾಡಿದವ ನಲ್ಲ ಮಾಡಬೇಕೆಂದುಕೊಂಡವನೂ ಅಲ್ಲ. ಆದರೂ ಅವನಿಗೇಕೆ ಇಷ್ಟು ಭಯಂಕರ ವಾದ ಸಾವು ಬಂತು? “ಜೀವನವೆನ್ನುವುದು ಇಷ್ಟೇ ಏನು? ಎಲ್ಲಿಂದಲೋ ಬರುವುದು, ಬಂದ ಕೆಲವು ವರುಷ ಅಸಹಾಯವಾಗಿ, ಕೇವಲ ಇನ್ನೊಬ್ಬರ ದಯೆಯಿಂದ ಬದುಕಿರುವುದು. ಅನಂತರ ತಾನು ಸ್ವತಂತ್ರನೆಂದುಕೊಂಡಾಗಲೂ ರೈಲ್ವೆ ವ್ಯಾಗನ್ನುಗಳಂತೆ ಅಲ್ಲಿಂದ ಇಲ್ಲಿಗೆ ಇಲ್ಲಿಂದಲ್ಲಿಗೆ ಹಾರಾಡಿ, ಕೊನೆಗೆ ಯಾವೊತ್ತೋ ಒಂದು ದಿನ ಕೆಳಗೆ ಬಿದ್ದು ಪುಡಿಪುಡಿಯಾಗುವುದು. ಇಷ್ಟೇನೇನು ಜೀವನವೆನ್ನುವುದು? “ಹಾಗಾದರೆ ಜೀವನಕ್ಕೆ ಒಂದು ಗುರಿಯಿಲ್ಲವೆ? ಸುಮ್ಮನೆ ತಿಂದು ಕುಡಿದು ಉರುಳುವುದು ಅಷ್ಟೇ ಏನು ಜೀವನ? ಹಾಗೆ ಜೀವನವಿದೆಯೆನ್ನುವುದಾದರೆ, ಈಗ ರಮೇಶನು ಬದುಕಿದ್ದ ಮೂವತ್ತೆರಡು ವರ್ಷದಲ್ಲಿ ಅವನು ಏನು ಸಾಧಿಸಿದಂತಾಯಿತು? ಅಷ್ಟು ಹಣ ಸಂಪಾದಿಸಿದ; ಅದು ಬ್ಯಾಂಕಿನಲ್ಲಿ ಹೋಯಿತು. ಕೀರ್ತಿ ಸಂಪಾದಿಸಿದ ಅದು ಅಷ್ಟು ದಿನವಿದ್ದು ಎಲ್ಲಿಯೋ ಯಾವಾಗಲೂ ಮಂಜಿನಂತೆ ಕರಗಿ ಹೋಗುವುದು. ಇಲ್ಲವೆನ್ನದೆ, ಮೋಹನೆಯೊಬ್ಬಳು ಅವನಿಗಾಗಿ ಅಳುತ್ತಾಳೆ. ಮೇರಿಯೂ ಅಷ್ಟು ದಿನ ಅತ್ತಾಳು. ಅವನ ಸ್ನೇಹಿತರೂ ಅಷ್ಟಷ್ಟು ದಿನ ಅಳುತ್ತಾರೆ. ಇಷ್ಟೇ ಏನು?

ನಾವು ಹೋದಮೇಲೆ ಇತರರು ಅಳುವುದಕ್ಕಾಗಿ, ಅವರು ಅಳಲಿ ಎಂದು ನಾವು ನಾವು ಇಷ್ಟು ಒದ್ದಾಡಬೇಕೇ? “ನಿಜವಾಗಿ ಜೀವನಕ್ಕೆ ಒಂದು ಗುರಿಯಿಲ್ಲವೇ? ಜೀವನದ ಗುರಿ ಎನ್ನುವುದು ಕೇವಲ ಕಲ್ಪಿತವೇ? ಮಾಡುವುದಕ್ಕೆ ಕೆಲಸವಿಲ್ಲದವರು ಕಲ್ಪಿಸಿಟ್ಟಿರುವ ಒಂದು ಕಥೆಯೇ ಈ ಗುರಿ ಎನ್ನುವುದು? “ಹಾಗೆ ಗುರಿಯಿಲ್ಲದ ಕುರುಡು ಜೀವನವಾದರೆ ಪ್ರತಿಯೊಬ್ಬರೂ ಬದುಕಬೇಕು, ಬದುಕಬೇಕು, ಎಂದೇಕೆ ಒದ್ದಾಡಬೇಕು? ಅಷ್ಟೇ ಅಲ್ಲ, ಬರಿಯ ಬದುಕುವುದು ಮಾತ್ರವೇನು? ಬದುಕಿದಷ್ಟು ದಿನವೂ ಸಂಪಾದಿಸಬೇಕು, ಸಂಪಾದಿಸಬೇಕು, ಎನ್ನುತ್ತಾ ನಲ್ಲ! ಅದೇಕೆ ಸಂಪಾದನೆ? ಈಗ ರಮೇಶನದು ಭಾರಿಯ ಸಂಪಾದನೆಯಿತ್ತು. ಈಗಲೂ ಅವನ ಇನ್‌ಕ್ಯೂರೆನ್ಸ್ ಒಂದು ಲಕ್ಷ ಬರುತ್ತದೆ. ಅವನು ಹೋದನಲ್ಲ, ಅವನ ಸುದ್ದಿ ಇರಲಿ. ಈಗ ಅವನ ಹೆಂಡತಿಮಕ್ಕಳಿಗೆ ಅಲ್ಲೊಂದು ಲಕ್ಷ ಹೋಯಿತು; ಇಲ್ಲೊಂದು ಲಕ್ಷ ಬಂತು. ಹಾಗೆಂದು ಅವನಿಲ್ಲದಿದ್ದರೆ ಹೋಗಲಿ ಎಂದಿದ್ದಾರೆ? ಅವರೇಕೆ ಅವನಿಗಾಗಿ ಬಡಿದುಕೊಳ್ಳಬೇಕು? “ಆಯಿತು ಅವನೇನಾದ? ಆ ಯೋಚನೆ ನಮಗೇನಾದರೂ ಇದೆಯೆ? ಸತ್ತವನು ಎತ್ತ ಹೋದನೆಂಬ ಯೋಚನೆಯೇ ನಮಗೆ ಬರುವುದಿಲ್ಲ. ಅಥವಾ ಬಂದು ತಾನೇ ಏನು ಮಾಡುವುದು? ಜೀವ, ಲೋಕಗಳು, ಪಾಪ, ಪುಣ್ಯ, ಎಲ್ಲಾ ಕೇಳಿದ್ದೇವೆ. ನಮಗೆ ಅರ್ಥವಾಗಿದೆಯೇ? ಏನೋ ಕನಸಿನ ಅನುಭವದಂತೆ ಮಸಕು ಮಸಕಾದ ಈ ಮಾತುಗಳ ಮೇಲೆ ನಮ್ಮ ಈಗಿನ ಬುದ್ಧಿ ನಂಬಿಕೆಯಿಟ್ಟುಕೊಂಡಿದೆಯೆ? ನಮ್ಮ ಜೀವನದಲ್ಲಿ ಈ ಮಾತುಗಳೂ ಈಗ ಬರುವಂತಿಲ್ಲವಲ್ಲ? ನಮ್ಮ ನಿತ್ಯ ಜೀವನದಲ್ಲಿ ಇವಕ್ಕೆ ಸ್ಥಾನ ಕೊಟ್ಟಿದ್ದೇವೇನು? ಉಹುಂ, ಇದ್ದಂತಿಲ್ಲ. ನಮ್ಮ ಕಣ್ಣು ಕಾಣುವುದು ಈ ಲೋಕವನ್ನು, ನಮ್ಮ ಮನಸ್ಸು ಚಿಂತಿಸುವುದು ಈ ಲೋಕವನ್ನು, ಇಲ್ಲಿಂದಾಚೆಗೆ ನಮಗೆ ಬೇಕಿಲ್ಲ; ನಮ್ಮ ಮನಸ್ಸು ಹೋಗುವುದಿಲ್ಲ. ಹೋಗುವುದಿಲ್ಲ ಏನು ಹೋಗಲಾರದು. “ಹಾಗೆಂದು ಬಿಟ್ಟಿರುವುದೇನು? ನೋಡಿದೆಯೋ ಇಲ್ಲವೋ? ಕಾಫಿ ತೋಟದ ಅನುಭವ ಇಷ್ಟು ಬೇಗ ಮರೆತುಹೋಯಿತೆ? ನಮ್ಮ ತಂದೆಯ ಪಾಪ ನನಗೂ ವಕ್ರಿ ಸಿತ್ತು; ನನ್ನನ್ನು ಬಲಿ ತೆಗೆದುಕೊಳ್ಳುವುದರಲ್ಲಿತ್ತು; ಅಷ್ಟರಲ್ಲಿ ನಮ್ಮ ತಾಯಿಯ ಪುಣ್ಯ ಕಾಪಾಡಿತು ಎಂದು ಕಣ್ಣಾರ ಕಾಣಲಿಲ್ಲವೇ? ಹಾಗಾದರೆ ಈಗ ರಮೇಶನನ್ನು ಕೊಂದ ಪಾಪ ಯಾವುದು? ಮೋಹನೆ, ವೀಣೆಯರನ್ನು ಉಳಿಸಿದ ಪುಣ್ಯ ಯಾವುದು?” ಹೀಗೆ ಅಗೋಚರವಾದ ಭಾವಗಳು ಬಂದು ಪ್ರಾಣೇಶನನ್ನು ಬೆಲ್ಲಕ್ಕೆ ಮುತ್ತುವ ಇರುವೆಗಳಂತೆ ಮುತ್ತಿಬಿಡುವುವು. ಆ ಯೋಚನೆಯಲ್ಲಿ ಅವನು ಮುಳುಗುವನು. ‘ಇನ್ನು ಒಂದು ಸಲ ಆ ಸನ್ಯಾಸಿಗಳನ್ನು ಕಂಡರೆ, ಅವರ ಬಳಿ ಇದೆಲ್ಲ ಕೇಳಬೇಕು ಎಂದುಕೊಳ್ಳುವನು. ಗೊತ್ತಿಲ್ಲದೆಯೇ ಮನಸ್ಸು ಮೋಹನೆಯ ಕಡೆಗೆ ಹೊರಳುವುದು. “ಮೋಹನೆಗೆ ಒಳ್ಳೆಯ ವಯಸ್ಸು. ಪಾಪ, ಹೀಗಾದಳು. ಅವಳು ಹಿಂದಿನವರಂತೆ ಸನ್ಯಾಸಿಯ ಹಾಗೆ ಇರುವುದು ಸಾಧ್ಯವೆ? ಭೋಗಪರಾಯಣನಾದ ಗಂಡನಿಗೆ ಮೋಹದ ಮಡದಿಯಾಗಿ ಸೂಳೆಗಿಂತ ಹೆಚ್ಚಾಗಿದ್ದಳು. ಇಂದು ಥಟ್ಟನೆ ಎಲ್ಲವನ್ನೂ ಬಿಟ್ಟು ವೈರಾಗ್ಯಸಂಪನ್ನಳಾಗಿ ಮೂಲೆಯಲ್ಲಿ ಕುಳಿತಿರಲು ಸಾಧ್ಯವೆ? ರೂಪವಿದೆ; ಯೌವನವಿದೆ; ಹಣವಿದೆ. ಇಂತಹ ಹೆಣ್ಣು ಸುಮ್ಮನಿರುವುದು ಎಂದರೆ ಒಪ್ಪುವ ಮಾತೆ? ಬೀದಿಯಲ್ಲಿ ಹೋಗುವ ಹೆಣ್ಣು ನಾಯಿಯನ್ನಾದರೂ ನಾಯಿಗಳು ಬಿಟ್ಟಾವು, ರಕ್ಷಣವಿಲ್ಲದೆ, ನೀನೇ ಎನ್ನುವರಿಲ್ಲದೆ, ಒಂಟಿಯಾಗಿ ಇರುವ ರೂಪ ಐಶ್ವರ್ಯಸಂಪನ್ನೆಯನ್ನು ಲೋಕವು ಬಿಟ್ಟಿತೆ? ಯಾವನಾದರೊಬ್ಬ ಹಾರಿಸಲು ಬಂದೇ ಬರುವನು. ಹಾಗೇನಾದರೂ ಆದರೆ? ಮೋಹನೆಯು ತಿಪ್ಪೆಗೆ ಬಿದ್ದ ಹಣ್ಣಿನಂತೆ ಭಿಕಾರಿಗಳ ಪಾಲಾಗುವಳು. ಆಗ ತಾನು ಅದನ್ನು ಸಹಿಸುವುದೆಂತು?

“ಹಾಗಾದರೆ ಏನು ಮಾಡಬೇಕು? ತಾನೂ ರಮೇಶನೂ ಏಕಜೀವವನ್ನು ವಂತೆ ಇದ್ದುದು ನಿಜ, ಹಾಗೆಂದು ಈಗ ತಾನೇ ಬೇಲಿಯಾಗಿ ನಿಲ್ಲುವುದೇ? ಲೋಕವೇನೆಂದೀತು? ಲೋಕಕ್ಕೆ ಹೆದರಿದರೆ ಮೋಹನೆಯ ಗತಿಯೇನು? ಒಂದು ವೇಳೆ ತಾನೇ ಕೈಗೆ ಹಾಕಿಕೊಂಡರೆ? ಅವಳನ್ನು ಕದ್ದಹಾಗೆ ಆಗುವುದು. ಈಗಿರುವ ಹೆಂಡತಿಯ ಜೊತೆಗೆ ಇನ್ನೊಬ್ಬಳನ್ನು ಮಾಡಿಕೊಳ್ಳುವ ಹಾಗಿಲ್ಲ. ಸರಕಾರ ತಾನು ಸೆಕ್ಯುಲರ್ ಅಂತು. ಯಾರಿಗೋಸ್ಕರ ಬೈಗಮಿ ಆಕ್ಟ್ ತಂತು. ಆದರೆ ಮಹಮ್ಮದೀಯರಿಗೆ ಮಾತ್ರ ಇದು ಅನ್ವಯಿಸುವುದಿಲ್ಲ ಅಂತು. ಅಲ್ಲಿಗೇನು ಹಿಂದೂ ಆಗಿದ್ದರೆ ಕೂಡದು; ಮಹಮ್ಮದೀಯನಾದರೆ ಆಗಬಹುದು ಅಂತಲೋ? ನಾನೇ ಏಕೆ ಎರಡನೆಯ ಮದುವೆ ಮಾಡಿಕೊಂಡು ಹೊಡೆದಾಡಬಾರದು? “ಉಹುಂ. ನಾನು ಅಷ್ಟು ಧೀರನಲ್ಲ ಒಂದು ವೇಳೆ ರಮೇಶ ಮಾಡಿದ್ದರೂ ಮಾಡಬಹುದಾಗಿತ್ತು. ನನ್ನಿಂದ ಸಾಧ್ಯವಿಲ್ಲ. ಹಾಗೆಂದು ಸುಮ್ಮನಿರುವುದು ತಾನೇ ಹೇಗೆ? ನನ್ನ ಸ್ನೇಹಿತ, ನನ್ನ ಪ್ರಾಣಕ್ಕೆ ಪ್ರಾಣವಾಗಿದ್ದವನ ಹೆಂಡತಿ ನಾಯಿ ಮುಟ್ಟಿದ ಮಡಿಕೆಯಾಗುವುದನ್ನು ನೋಡಿಕೊಂಡಿರಲೆ? ವೀಣಾ ಕಾಡುಪಾಲಾಗಲು ಅವಕಾಶ ಕೊಡಲೆ? ಕೂಡದು. ಆಗದು; ಆಗುವುದಿಲ್ಲ. ವೀಣಾ “ಹಾಗಾದರೆ ಮಾಡಬೇಕು? ಮಾಡುವುದೇನು? ಗೊತ್ತೇ ಇದೆ. ಯೋಗಕ್ಷೇಮಕ್ಕೋಸ್ಕರ ತಾನು ಮೋಹನೆಯ ಯೋಗಕ್ಷೇಮವನ್ನು ವಹಿಸಲೇಬೇಕು. “ಅನರ್ಥವಾದರೆ? “ಈಗಲಿಂದ ಅದೇ ಯೋಚನೆಯೇ ಯಾಕೆ? ಮದುವೆಗೆ ಬಂದವರು – ಅನರ್ಥವಾದರೆ ಅವಲಕ್ಕಿ ಮೊಸರಿಗಾದರೂ ಅನುಕೂಲವಿರಲಿ ಎಂದ ಹಾಗೆ ಈಗಿನಿಂದ ಅನರ್ಥ ಅನರ್ಥ ಎಂದು ಹೆದರಿ ಒದ್ದಾಡಲೇಕೆ? ನಾನು ಲಾಯ‌, ಸಮಯಕ್ಕೆ ಸರಿಯಾಗಿ ಏನೋ ಒಂದು ಮಾಡಿ ಅಭ್ಯಾಸವಿಲ್ಲವೆ? ನೋಡಿಕೊಳ್ಳೋಣ.’ * * * * ತಂದೆಯನ್ನು ಕಳೆದುಕೊಂಡು ವೀಣಾ ಪ್ರಾಣೇಶನಿಗೆ ಬಹಳ ಒಗ್ಗಿಹೋದಳು. ಮಾವ, ಮಾವ ಎಂದು ಅವಕಾಶವಿದ್ದಾಗಲೆಲ್ಲ ಸಾಕಿದ ನಾಯಿಮರಿಯಂತೆ ಅವನ ಹಿಂದೆ ಓಡಾಡುವಳು. ಮೊದಲಿನಿಂದ ಗಂಡುಸರ ಜೊತೆಯಲ್ಲಿ ಬೆಳೆದ ಮಗು, ತಾತ ಇಲ್ಲದಿದ್ದರೆ ತಂದೆ. ಅವಳಿಗೆ ತಾಯಿಯ ಹತ್ತಿರ ಬಹಳ ಹೊತ್ತು ಇರುವುದು ಸಾಧ್ಯವಿಲ್ಲ. ಏನು ಮಾಡಬೇಕು? ಅಂತೂ ವೀಣಾ, ಮಾವ ಮಾವ ಎನ್ನುತ್ತಿದ್ದ ಹಾಗೆಲ್ಲ ಪ್ರಾಣೇಶನಿಗೆ “ಅದು ನಿಜವೇ ಆಗಬಾರದೇಕೆ?” ಎನ್ನಿಸುವುದು. “ಏನಾದರೂ ಮಾಡಿ ಈ ಹೆಣ್ಣು ಮಾಡಿ ಕೊಂಡರೆ ಒಂದೂವರೆ ಎರಡು ಲಕ್ಷ ರೂಪಾಯಿನ ಆಸ್ತಿ ಸಿಕ್ಕುವುದು. ಬಿಡುವು ದಿಲ್ಲ, ಮಾಡಿಕೊಳ್ಳಬೇಕು” ಎಂದು ಒಂದು ಮನಸ್ಸು “ಆದರೆ ವೀಣಾ ಕೊಂಚ ಗಂಡುಬೀರಿಯ ಜಾತಿಯವಳು. ಗಂಡನೇನಾದರೂ “ಪ್ಯಾಲಪಿಂಡಿ’ಯಾದರೆ, ಗೂಡೆಯಲ್ಲಿಟ್ಟು ಮಾರುವವಳು. ಮಗ ಮೆತ್ತನೆಯ ಜಾತಿಯೇ ಹೊರತು, ‘ಗಂಡು’ ಅನ್ನಿಸಿಕೊಳ್ಳುವ ದಿಟ್ಟ ಜಾತಿಯಲ್ಲ ಏನು ಮಾಡುವುದು?” ಆಗಲೂ ಪ್ರಾಣೇಶನಿಗೆ ಆ ಸಮಯ ಬರಲಿ. ಅದುವರೆಗೇನು ಅವಸರ?” ಎಂಬುದು ಶರಣು. ಆಗಲಿ, ನೋಡಿಕೊಳ್ಳೋಣ” ಅವನಿಗೆ ಅಭ್ಯಾಸವಾಗಿ ಹೋಗಿತ್ತು. * ರಮೇಶನ ಸಂಸಾರ ಯತ್ನವಿಲ್ಲದೆ ಪ್ರಾಣೇಶನಿಗೆ ಗಂಟು ಬಿತ್ತು. ಅವನ ಆಫೀಸೂ ತಾನೇ ವಹಿಸಿಕೊಂಡಂತೆ, ಅವನ ಸಂಸಾರದ ಯೋಗಕ್ಷೇಮವನ್ನು ನೋಡಿಕೊಳ್ಳುವ ಭಾರವನ್ನೂ ವಹಿಸಿಕೊಳ್ಳಬೇಕಾಗಿ ಬಂತು. ಸರ್ವವಿಧದಲ್ಲೂ ಸಂಸಾರ ಭಾರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳದಿದ್ದರೆ ಆಗುವುದಿಲ್ಲ, ಅದೂ ಒಂದು ದಿನ ಆಗಬೇಕಾಗುತ್ತೆ ಎಂದು ಅವನಿಗೆ ಗೊತ್ತು. ಅದನ್ನು ಅವನು ಬೇಡವೆನ್ನುವುದಕ್ಕೂ ಸಿದ್ಧನಾಗಿರಲಿಲ್ಲ; ಒಪ್ಪಿಕೊಳ್ಳುವುದಕ್ಕೂ ಸಿದ್ಧನಾಗಿರಲಿಲ್ಲ. * * * * ಕನ್ಯಾಮಂದಿರದ ವಿಚಾರ ಇತ್ಯರ್ಥವಾಗಬೇಕಾಯಿತು. ಸರ್ಕಾರದಲ್ಲಿ ಐವತ್ತು ಸಾವಿರ ರೂಪಾಯಿ ಕಟ್ಟಿಯಾಗಿದೆ; ಬಸವನಗುಡಿಯಲ್ಲಿ ಒಂದು ಮನೆಯನ್ನೂ ಅದಕ್ಕಾಗಿ ಬಿಟ್ಟುಕೊಡಲಾಗಿದೆ. ಆದರಿನ್ನೂ ಆರಂಭವಾಗಿಲ್ಲ. ಪ್ರಾಣೇಶನು ಆ ವಿಚಾರವಾಗಿ ಮೊದಲು ಮೋಹನೆಯ ಬಳಿ ಮಾತನಾಡಿ ಅವಳ ಮನಸ್ಸು ತಿಳಿದುಕೊಂಡು ಅನಂತರ ಇತರ ಮೆಂಬರುಗಳ ಬಳಿ ಮಾತನಾಡುವುದು ಎಂದುಕೊಂಡನು. ರಮೇಶನಿಗಾದ ದುರಂತ ಮರಣ ಎಲ್ಲರ ಮನಸ್ಸನ್ನೂ ಕಲಕಿಬಿಟ್ಟಿತ್ತು. ಯಾರಿಗೂ ಕನ್ಯಾಮಂದಿರದ ವಿಚಾರ ಎತ್ತುವುದಕ್ಕೆ ಮನಸ್ಸಿಲ್ಲ ಕೊನೆಗೆ ಪ್ರಾಣೇಶನೇ ಒಂದು ದಿನ ಆ ವಿಚಾರ ಪ್ರಸ್ತಾಪ ಮಾಡಿದನು.

ಮೋಹನೆಯು “ಮಾವನವರ ಹೆಸರು ಉಳಿಯಲೆಂದು ಯಜಮಾನರು ಮಾಡಿದ ಧರ್ಮ, ಅದಕ್ಕೆ ನಾನು ಅಡ್ಡಿ ಬರುವುದಿಲ್ಲ, ಇನ್‌ಪ್ಯೂರೆನ್‌ಸ್ ಹಣ, ಬಂಗಲೆ ಬಾಡಿಗೆಗಳಿಂದ ಹೇಗೋ ನಮ್ಮ ಜೀವನವಾಗುತ್ತದೆ. ಇಷ್ಟಕ್ಕೂ ಎಷ್ಟು ಜನ? ನಾನು ವೀಣಾ, ಇಬ್ಬರು ತಾನೇ? ನಾನೇ ಅಡಿಗೆ ಮಾಡಿಕೊಂಡರೆ ಆಯಿತು. ನನಗೆ ಒಬ್ಬ ಹೆಣ್ಣಾಳು ಇದ್ದರೆ ಸಾಕು. ನೀವು ದೊಡ್ಡ ಮನಸ್ಸು ಮಾಡಿ ಆಗಾಗ ವಿಚಾರಿಸಿಕೊಳ್ಳುತ್ತಿರಿ. ನಮ್ಮ ವೀಣಾಗೆ ಆಗಲೆ ಆರು ವರ್ಷವಾಯಿತು. ಇನ್ನೊಂದು ಎಂಟು ಹತ್ತು ವರುಷ ಅವಳನ್ನು ಒಬ್ಬ ಒಳ್ಳೆಯವನ ಕೈಯಲ್ಲಿಟ್ಟು ಮನೆಯನ್ನೂ ವಹಿಸಿಕೊಟ್ಟರೆ ನನ್ನ ಕಾರ ಮುಗಿಯಿತು. ಇದಕ್ಕಾಗಿ ಕನ್ಯಾಮಂದಿರ ನಿಲ್ಲುವುದೇಕೆ? ಏನೂ ಬೇಡ. ನಿಲ್ಲಿಸಬೇಡಿ’ ಎಂದಳು. ಮೋಹನೆಯು ಸಮಾಜದ ಮೇಲಿನ ಅಂತಸ್ತಿನಲ್ಲಿ ಓಡಾಡಿದ ಹೆಣ್ಣು, ವಿದ್ಯಾವಂತಳಲ್ಲದಿದ್ದರೂ ವ್ಯವಹಾರದಿಂದ ವಿನಯವನ್ನು ಕಲಿತಿದ್ದವಳು. ಸಾಣೆ ಪಡೆದ ವಜ್ರದಂತೆ ತನ್ನ ಒಳಗಿದ್ದ ಪ್ರಕಾಶವನ್ನು ಹರಡಿ ಕಣ್ಣು ಕೋರೈಸುವ ಜಾತಿಯಲ್ಲಿ ಅವಳು. ಆದರೂ ನೀರಿನಲ್ಲಿ ಬಹು ದಿನದಿಂದ ಇದ್ದು ಪ್ರವಾಹದ ಬಲದಿಂದ ನುಣ್ಣಗಾಗಿರುವ ಬೆಣಚುಕಲ್ಲಿನಂತೆ ಒಂದಿಷ್ಟು ವ್ಯವಹಾರ ಚಾತುರ್ಯವನ್ನು ಸಂಪಾದಿಸಿಕೊಂಡು ಹತ್ತು ಜನರಲ್ಲಿ ಮಾತನಾಡಬಲ್ಲವಳಾಗಿದ್ದಳು. ಮಹಿಳಾ ಸಮಾಜ ಮೆಂಬರು. ಅದೂ ದುಡಿಯುವ ಮೆಂಬರಾಗಿದ್ದವಳು. ಅವಳು ಹೀಗೆ ಹೇಳಿದ್ದರಲ್ಲಿ ಪ್ರಾಣೇಶನಿಗೆ ವಿಚಿತ್ರ ವೆನಿಸಲಿಲ್ಲ. ಆ ಮಾತುಕತೆ ನಡೆದು ಇತ್ಯರ್ಥವಾಗುವುದಕ್ಕೆ ಸುಮಾರು ಒಂದು ಗಂಟೆ ಯಾಯಿತು. ಅಷ್ಟು ಹೊತ್ತೂ ಪ್ರಾಣೇಶನು ಎದುರಿಗೆ ಕುಳಿತು ಅವಳ ಮೊಕ ನೋಡಿ, ಅವಳೊಡನೆ ಮಾತಿಗೆ ಮಾತು ಆಡುತ್ತ ಕುಳಿತಿದ್ದನು. ಅವನಿಗೆ ಒಂದು ಸಂದೇಹ. ಗಂಡನು ಹೋಗಿ ಇನ್ನೂ ಒಂದೂವರೆ ತಿಂಗಳು. ಈಗಾಗಲೇ ಇವಳು ಆ ದುಃಖವನ್ನು ಮರೆತುಬಿಟ್ಟಳೆ? ತನಗೆ ಬಂದಿರುವ ಮುಂಡೆತನದ ಭಾರ, ದುಃಖ ಇವಳಿಗೆ ಅರಿವಾಗಿದೆಯೆ? ಅರಿವಾಗಿದ್ದರೆ ಇವಳು ಇಷ್ಟು ಹಗುರವಾಗಿ, ದುಗುಡವಿಲ್ಲದೆ, ಮಾತನಾಡಲು ಸಾಧ್ಯವೆ? ಅವಳು ಎಂದಿನಂತೆ ಮಾತನಾಡುತ್ತಿದ್ದಾಳಲ್ಲ? ಏನೂ ಆಗದಿರುವಂತೆ ಮಾತನಾಡುತ್ತಿದ್ದಾಳಲ್ಲ? ಹಾಗಾದರೆ ಇವಳಿಗೆ ಗಂಡನ ಮೇಲೆ ವಿಶ್ವಾಸವಿರಲಿಲ್ಲವೆ? ಅಥವಾ ಹೊಸ ಬಾಳಿಗೆ ಇಷ್ಟು ಬೇಗ ಒಗ್ಗಿಕೊಂಡಿದ್ದಾಳೆಯೇ?” ಎಂದು ಏನೇನೋ ಯೋಚನೆ. ಮೋಹನೆಗೆ ತನ್ನ ಮೋಹಕ ಸೌಂದರ್ಯವನ್ನು ಮೆರೆದು ಮೆರೆದು ಅಭ್ಯಾಸ. ಇಂದು ಸಾಮಾನ್ಯವಾದ ಒಂದು ಸಿಲ್ಕ್ ಸೀರೆಯನ್ನು ಉಟ್ಟಿದ್ದಾಳೆ. ತೊಟ್ಟಿರುವ ಆ ಜಂಪರ್ ರವಕೆ ಒಳಗಿರುವ ಬಾಡಿಯು ಎದೆಯನ್ನು ಮುಂದಕ್ಕೆ ಚಾಚಿ ಒಂದು ವಿಚಿತ್ರವಾದ ರಮ್ಯತೆಯನ್ನು ಕೊಟ್ಟಿದೆ. ಕುಂಕುಮವಿಲ್ಲದಿರುವುದೂ ಆ ಬಿಳಿಯ ಮುಖದ ಬಿಳುಪನ್ನು ಇನ್ನು ಅಷ್ಟು ಹೆಚ್ಚು ಮಾಡಿ ಒಪ್ಪವಿಕ್ಕಿದ ಬೆಳ್ಳಿಯಂತೆ ಮಾಡಿದೆ. ಏನೋ ತಿರಸ್ಕಾರದಿಂದ ಅಷ್ಟಾಗಿ ಬಾಚಿಕೊಳ್ಳದೆ ಇರುವುದರಿಂದ ಕೊಂಚ ಕೊಂಚ ಕೆದರಿರುವ ಕೂದಲು ನೋಡುವವನ ಮನಸ್ಸನ್ನೂ ಕೆದರುವಂತಿದೆ. ಆ ಕಣ್ಣ ನೋಟದಲ್ಲಿ ಏನೋ ಒಂದು ಮಾಧುರ್ಯವಿದ್ದು, ಪಕ್ವವಾಗಿ ರಸಪೂರ್ಣವಾದ ಹಣ್ಣು ಮನೋಹರವಾಗಿರುವಂತೆ ಇದೆ. ನುಡಿಯುವಾಗ ನುಡಿಗನುಗುಣವಾಗಿ ವ್ಯಾಪಾರ ಮಾಡುವ ಕೈಗಳೂ ದುಂಡುದುಂಡಾಗಿ, ಆ ರತ್ನದ ಬಳೆಗಳ ಕಾಂತಿಯನ್ನೂ ಒಳಗೈಯ ಹೊಳಪನ್ನೂ ತೋರುತ್ತ ಕಣ್ಣ ಕೋರೈಸುತ್ತವೆ. ಆ ಎತ್ತರವಾಗಿ ದುಂಡಾದ ಕತ್ತು ತಲೆಯ ಭಾರಕ್ಕೆ ಬಳುಕುತ್ತ ಏನೋ ವೈಯಾರವಾಡುವಂತಿದೆ. ಮಗ್ಗುಲಲ್ಲಿ ಇರುವ ಮಗಳನ್ನು ತಬ್ಬಿಕೊಳ್ಳುವಾಗ, ಅವಳ ತಲೆಯನ್ನು ಸವರುವಾಗ, ತಾನೂ ಅಂತಹ ಉಪಚಾರಗಳನ್ನು ಬಯಸುತ್ತಿರುವಳೋ ಎಂಬಂತಿದೆ. ರಮೇಶನು ಇದ್ದಾಗ ಪ್ರಾಣೇಶನು ಈ ರಮಣೀಮಣಿಯನ್ನು ನೋಡದೆ ಇರಲಿಲ್ಲ, ಆಗಲೂ ಅವನಿಗೆ ಅವಳ ರಮಣೀಯಕತೆ ಮನಸ್ಸಿಗೆ ಹಿಡಿಯದೆ ಇರಲಿಲ್ಲ. ಆದರೂ ಆಗ ಅವನ ಮನಸ್ಸು ತಿಳಿಯಾಗಿತ್ತು ಮಾರ್ಗಶಿರ ಮಾಸದ ನದಿಯ ಜಲದಂತೆ ಪ್ರಸನ್ನವಾಗಿ, ಆ ಗಂಡಹೆಂಡಿರ ಆನಂದದಲ್ಲಿ ತಾನೂ ಭಾಗಿಯಾಗುತ್ತಿತ್ತು. ಆದರೆ ಆ ತಿಳಿತನವಿಂದು ಇದ್ದಂತಿಲ್ಲ. ಅಂದು ಮದರಾಸಿನಲ್ಲಿ ರಮೇಶನು ಮರಣಶಯ್ಕೆಯಲ್ಲಿ ಮಲಗಿದ್ದಾಗ ಬಹು ದುಃಖದಿಂದ ಸೊರಗಿ ಮೋಹನೆಯು ಬಿದ್ದುಹೋಗುವುದರಲ್ಲಿದ್ದಳು. ಆಗ ಹಠಾತ್ತಾಗಿ ಮುಂದೆ ಹೋಗಿ ಅವಳನ್ನು ಹಿಡಿದುಕೊಂಡು ಸೋಫಾದ ಮೇಲೆ ಕೂರಿಸಿದ್ದನು. ಆಗ ಅವನಿಗೆ ವಿದ್ಯುತ್ತಿನ ಛಾರ್ಜು ಇರುವ ಬ್ಯಾಟರಿಯನ್ನು ಮುಟ್ಟಿದಂತೆ, ದೇಹಾದ್ಯಂತವೂ ಒಂದು ಝೇಕು ಹೊಡೆದಿತ್ತು ಅದನ್ನು ಅವನು ಮರೆಯುವುದಕ್ಕೆ ಬಹಳ ಪ್ರಯತ್ನಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ. ಈಗಂತೂ ಅಡ್ಡಿಯಿಲ್ಲದಿರುವಾಗ, ತನ್ನ ದೇಹವನ್ನು ಹಿಡಿದು ಅಲ್ಲಾಡಿಸಿದ ಆ ವಿದ್ಯುತ್ತನ್ನು ಇನ್ನೊಮ್ಮೆ ಅನುಭವಿಸಬೇಕೆಂದು ಮನಸ್ಸು ಹಂಬಲಿಸಿದರೆ, ಆ ಹಂಬಲವನ್ನು ತುಳಿಯ ಬೇಕು ತುಳಿಯಬೇಕು ಎನ್ನುತ್ತ ಎನ್ನುತ್ತಲೇ ಪ್ರಾಣೇಶನು ಅದಕ್ಕೆ ಒಂದೊಂದು ಡಿಗ್ರಿಯಾಗಿ ಸೋಲುತಿದ್ದರೆ ವಿಶೇಷವೇನು? ಮೋಹನೆಯೂ ಅವನನ್ನು ಆದಷ್ಟು ಬೇಗ ಕಳುಹಿಸೋಣ ಎನ್ನುವ ಭಾವದಲ್ಲಿ ಇದ್ದಂತೆ ಇರಲಿಲ್ಲ. ಹರಟೆ ಹೊಡೆದು ಅಭ್ಯಾಸವಾಗಿಹೋಗಿದೆ. ತನ್ನ ಅಭಾವದ ದುಃಖವನ್ನು, ನಿವಾರಿಸಿಕೊಳ್ಳಲು ಒಂದು ಅವಲಂಬನವನ್ನು ಅಪೇಕ್ಷಿಸುವವಳಂತೆ, ವೈಧವ್ಯದ ಭಾರವನ್ನು ಇಳುಹಲು ಪರಸಹಾಯವನ್ನು ಬಯಸುವಳಂತೆ, ಆದಷ್ಟು ಮಾತು ವಿಲಂಬ ಮಾಡಲು ಪ್ರಯತ್ನ ಮಾಡುತ್ತಿರುವಂತೆ ಪ್ರಾಣೇಶನಿಗೆ ತೋರುತ್ತಿದೆ. ಪ್ರಾಣೇಶನಿಗೆ ಮೋಹನೆಯ ಜೊತೆಯಲ್ಲಿ ಕುಳಿತು ಹರಟೆ ಹೊಡೆಯುವುದು. ಹೊಸದಲ್ಲವಾದರೂ ಇವೊತ್ತು ಏಕೋ ಸಂಕೋಚ. ಪ್ರಯತ್ನಪಟ್ಟು ಆ ಸಂಕೋಚವನ್ನು ತುಳಿದು ಇನ್ನೂ ಅಷ್ಟು ಹೊತ್ತು ಹರಟೆ ಹೊಡೆಯಲು ಕುಳಿತಿರಬೇಕು ಎನ್ನಿಸುತ್ತಿದೆ. “ಸಮಾಜಕ್ಕೆ ಹೋಗಿದ್ದಿರಾ?” “ಯಾವ ಮೊಕ ಇಟ್ಟುಕೊಂಡು ಹೋಗಲಿ? ನಮ್ಮ ಪ್ರಸಿಡೆಂಟರೂ ಸೆಕ್ರೆಟರಿ ಬಂದಿದ್ದರು. ನೀವು ಬರದಿದ್ದರೆ ಸಮಾಜದಲ್ಲಿ ಲೈಫೇ ಇಲ್ಲ, ಬನ್ನಿ, ಎಷ್ಟು ದಿವಸ ಹೀಗೆ ಇರುತ್ತೀರಿ! ಹತ್ತು ಜನದಲ್ಲಿ ಸೇರಿ ದುಃಖ ಮರೆಯಬೇಕು ಎಂದರು. ನನಗೂ ಹಾಗೇ ಎನ್ನಿಸುತ್ತದೆ. ನುಂಗಿದ ತುತ್ತು ರುಚಿ ಹಂಬಲಿಸುತ್ತಾ ಕುಳಿತೇನು ಮಾಡುವುದು? ಬದುಕಿರುವವರೆಗೂ, ಇನ್ನು ಎಷ್ಟು ದಿನ ಬದುಕಬೇಕೋ, ಏನೂ ಮಾಡದೆ ಸುಮ್ಮನೆ ಕುಳಿತಿರುವುದು ಯಾವ ನ್ಯಾಯ? ಎನ್ನಿಸುತ್ತದೆ. ಆದರೂ ಜನರ ಬಾಯಿಗೆ ಅಂಜ ಬೇಕಲ್ಲ? ನಮ್ಮ ಅನ್ನ ತಿಂದು, ನಮ್ಮ ಬಟ್ಟೆ ಉಟ್ಟರೂ ನೋಡೋರ ಕಣ್ಣಿಗೆ ನಾಣ್ಯವಾಗಿರ ಬೇಕಲ್ಲ? ಅದರಿಂದ ಸುಮ್ಮನೆ ಇರಬೇಕು. ಇನ್ನು ಒಂದು ತಿಂಗಳು ಎಲ್ಲೂ ಹೋಗೋಲ್ಲ ಅಂತಿದ್ದೀನಿ. ಅಲ್ಲದೆ, ಸಮಾಜದವರಿಗೂ ಮೋಹನೆ ಎಷ್ಟು ದುಡೀತಾಳೆ, ಅವಳು ಇಲ್ಲದಿದ್ದರೆ ತಮ್ಮ ಸಮಾಜಕ್ಕೆ ಗತಿಯಿಲ್ಲ ಎನ್ನುವುದು ಗೊತ್ತಾಗಲಿ ಅಂತ ಈ ಸಮಯದಲ್ಲಿ ಒಳಗೇ ಸೇರಿಕೊಂಡಿದ್ದೇನೆ. “ನೀವು ಅಷ್ಟು ಬಿಜಿಯಾಗಿದ್ದೋರು ಈಗ ಹೀಗೆ ಐಡಲ್ ಆಗಿ ಕುಳಿತಿರೋದು ನನಗೆ ಆಶ್ಚರ್ಯವಾಗಿದೆ.” “ಅಯ್ಯೋ, ಆ ಬೇಜಾರು ಏಕೆ ಹೇಳುತ್ತೀರಿ? ಅವರು ಇದ್ದಾಗ ಒಂದು ಗಳಿಗೆ ರೆಸ್ಟ್ ಸಿಕ್ಕುವುದು ಕಷ್ಟವಾಗಿತ್ತು. ಮನೆಗೆ ಬಂದರು ಅಂದರೆ, ಗಳಿಗೆಗೊಂದು ಸಲವಾದರೂ ಮೋಹನ, ಮೋಹನ, ಅಂತಿರಬೇಕು. ಯಾವುದಾದರೂ ಒಂದು ನೆಪಮಾಡಿಕೊಂಡು ಮಾತನಾಡಿಸುತ್ತಿರಬೇಕು. ಈಗ ಹೇಗಿದೆ ಗೊತ್ತೆ? ನಾನು ಕೂತಿದ್ದರೆ, ಆಗಾಗ ಅವರು ಕೂಗಿದ ಹಾಗಾಗಿ ತಲೆ ತಿರುಗಿನೋಡುತ್ತೆ ಅವರು ಬಂದರು ಅನ್ನುವ ಹಾಗಾಗಿ ತಟ್ಟನೆ ಏಳುವ ಹಾಗಾಗುತ್ತೆ ಕಣ್ಣು ಮುಚ್ಚಿದರೆ ಆ ರೂಪವೇ? ಅವರು ಮಾತನಾಡಿದ ದನಿ ಇನ್ನೂ ಕಿವಿ ಕೇಳುತ್ತಲೇ ಇದೆ. ಏಕೆ? ಕಾಣಿರಾ? ನನ್ನ ದೇಹ ಎಷ್ಟು ಸೊರಗುತ್ತಿದೆ?” “ಏನೋ ನಿಮಗೆ ಬರಬಾರದ ಕಷ್ಟ ಬಂತು.” “ನಿಜ. ಕಷ್ಟವೇನೋ ಬಂದಿದೆ. ಆದರೆ ಇನ್ನೊಂದು ಮಾತು. ಅದೇನೋ? ಗಂಡ ಕಳೆದುಕೊಂಡವರನ್ನು ಕಂಡಕಂಡಾಗಲೆಲ್ಲ, ನನಗೂ ಹೀಗಾದರೋ ಅನ್ನಿಸುತ್ತಿತ್ತು ಆಗ ಏನೇನೋ ಅಂದುಕೊಳ್ಳುತ್ತಿದ್ದೆ. ಕೊನೆಗೆ ಆಗಿಯೂ ಹೋಯಿತು. ಈಗ ಅದೆಲ್ಲ ನೆನಸಿಕೊಂಡರೆ ಮೈ ಜುಮ್ಮೆನ್ನುತ್ತೆ?” “ಅದೇನು ಅಂದುಕೊಳ್ಳುತ್ತಿದ್ದಿರಿ ಹಾಗಾದರೆ?” “ಈಗ ಬೇಡಿ. ಇನ್ನು ಯಾವಾಗಲಾದರೂ ಹೇಳುತ್ತೇನೆ. ಒಂದು ಮಾತು. ನೀವು ನಮ್ಮ ಯಜಮಾನರ ಆಪ್ತ ಸ್ನೇಹಿತರು, ಅವರನ್ನು ಬಾ, ಹೋಗು, ಎನ್ನುತ್ತಿದ್ದವರು. ನನ್ನನ್ನೂ ಇನ್ನು ಮೇಲೆ ಬಾ ಹೋಗು ಎಂದೇ ಮಾತನಾಡಿಸಿ.” ಪ್ರಾಣೇಶನಿಗೆ ಆ ಮಾತು ಕೇಳಿ ಸಂತೋಷವೂ ಆಯಿತು: ನಾಚಿಕೆಯೂ ಆಯಿತು. “ಇವಳೇನಾದರೂ ತನ್ನ ಮನಸ್ಸು ಅರಿತು ಹೀಗೆ ಹೇಳುತ್ತಿದ್ದಾಳೋ?” ಎಂದು ಸಂಶಯವೂ ಬಂತು. ಏನು ಮಾತನಾಡಬೇಕೋ ತಿಳಿಯದೆ ಅವನು ಸಂಕೋಚಪಡುತ್ತಿದ್ದ ಹಾಗೆಯೇ ವೀಣಾ ಥಟ್ಟನೆ ಮಾತನಾಡಿ ಅವನಿಗೆ ನೆರವಾದಳು: “ಹಾಗೆಂದರೆ, ಏನಮ್ಮಾ, ನಿನ್ನ ಮಾವ ಮೋಹನಾ ಎನ್ನಬೇಕೋ ಮೋಹನಬಾಯಿ ಅನ್ನಬೇಕೊ?” ಎಂದು ಕೇಳಿದಳು.

ಮೋಹನೆಯ ನಕ್ಕು “ಬಾಯಿ ಅಂದರೆ ಕೊಂಬು ಬಂದದ್ದೇನು?” ಎಂದಳು. ಎಲ್ಲರೂ ನಕ್ಕಳು. * * * * ಪ್ರಾಣೇಶನು ಸಾಮಾನ್ಯವಾಗಿ ಭಾನುವಾರ ಮನೆಗೆ ಅಷ್ಟು ಬೇಗ ಬರುವ ವಾಡಿಕೆಯಿಲ್ಲ. ಅದರಿಂದ ಅವನ ಹೆಂಡತಿ ಇನ್ನೂ ದೇವರ ಮನೆಯಲ್ಲಿಯೇ ಇದ್ದಳು. ಪ್ರಾಣೇಶನು ಮನೆಗೆ ಬರುತ್ತಿದ್ದ ಹಾಗೇ ಹೆಂಡತಿಯ ದರ್ಶನವಾಗಬೇಕು. ಅವಳು ಬಂದು ಒಂದು ಸಲ ಮೊಕ ತೋರಿಸಬೇಕು. ಇಲ್ಲದಿದ್ದರೆ ಅವನಿಗೆ ಏನೋ ಗಂಟು ಹೋದಂತೆ ಭಾಸವಾಗುವುದು. ಹೆಂಡತಿಗೂ ಅದು ಇಷ್ಟವಿಲ್ಲದ ಕೆಲಸವಲ್ಲ. ಏನೇ ಕೆಲಸವಿರಲಿ ಬಿಟ್ಟು ಬಂದು ಗಂಡನ ಮೊಕವನ್ನು ನೋಡಿಕೊಂಡು ಹೋಗದಿದ್ದರೆ ಅವಳಿಗೂ ಆಗುತ್ತಿರಲಿಲ್ಲ.

ಈ ದಿನ ದೇವರ ಮನೆಯಲ್ಲಿದ್ದ ಯಜಮಾನಿತಿ ಬರುವುದು ಕೊಂಚ ತಡ ವಾಯಿತು. ಅವನು ಅಂಗಿಗಿಂಗಿ ಬಿಚ್ಚಿ ಹಾಗೆಯೇ ಈಜಿ ಛೇರ್ ಮೇಲೆ ಹಾಗೆ ಬಿದ್ದುಕೊಂಡಿದ್ದಾನೆ. ಮೋಹನೆಯ ಮಾತು ಕಿವಿಯಲ್ಲಿ ಇನ್ನೂ ಗುಂಯ್‌ಗುಟ್ಟುತ್ತಾ ಇದೆ. ಅವಳೇ ಬಂದು ಮಗ್ಗುಲಲ್ಲಿ ಕುಳಿತಿದ್ದಾಳೆ ಎನ್ನುವಂತಿದೆ. ಆ ಸುಖಸ್ವಪ್ನ ಮನಸ್ಸಿಗಲ್ಲದೆ ದೇಹಕ್ಕೂ ಅಷ್ಟು ಸುಖವನ್ನು ಕೊಟ್ಟಿದೆ. ಮುಖವು ಕೊಂಚ ಅಡಕೆಲೆ ಮೇದಾಗ ಆಗುವ ಹಾಗೆ ಸಣ್ಣ ಕೆಂಪೇರಿದೆ. ಧ್ಯಾನದಲ್ಲಿ ಕಣ್ಣುಮುಚ್ಚಿದೆ. ಅವನು ಅಷ್ಟು ಹೊತ್ತು ಹಾಗಿರುವಾಗ ಯಜಮಾನಿಯು ತೀರ್ಥ ಪ್ರಸಾದ ತಂದಳು. ಗಂಡನು ಕಣ್ಣುಮುಚ್ಚಿರುವುದೂ ಮುಖವು ಕೆಂಪಗಿರುವುದೂ ನೋಡಿ ಅವಳಿಗೆ ಏನೇನೋ ಅನ್ನಿಸಿತು. ಆದರೂ ಮನಸ್ಸು ನುಡಿಯಬೇಕೆಂದುಕೊಂಡುದನ್ನು ಬಾಯಿ ನುಡಿಯಲು ಅವಕಾಶ ಕೊಡದೆ ಹಾಗೆಯೇ ತಡೆದುಕೊಂಡು, ಸಣ್ಣಗೆ, “ನಿದ್ದೆಯೇನು?” ಎಂದಳು.

ಅವನ ಮನಸ್ಸು ನಿದ್ದೆಯ ಹಾದಿ ಹಿಡಿದಿತ್ತು; ಮಾತಿನ ಸದ್ದು ಕೇಳಿ ಕಣ್ಣು ಹಠಾತ್ತಾಗಿ ತೆರೆಯಿತು. ಯಾವುದೋ ಹೆಣ್ಣಿನ ಧ್ಯಾನದಲ್ಲಿದ್ದು ಮನಸ್ಸು ಈಗ ಕಣ್ಣೆದುರಿಗೆ ಇನ್ನೊಂದು ಹೆಣ್ಣು ಬಂದು ನಿಂತಿರುವುದನ್ನು ಕಂಡರೂ ಅದರಿಂದ ಅಸಂತುಷ್ಟವಾಗದೆ ಅವಳ ಸೊಬಗನ್ನು ನೋಡಿತು. ಆ ಸೊಬಗನ್ನು ಸವಿಯಲು ಸಿದ್ಧವಾಯಿತು. ಮುಖ ನಕ್ಕು ಮನಸ್ಸಿನ ಭಾವವನ್ನು ಸೂಚಿಸಿತು. ಕಣ್ಣು ಬಾಗಿಲು ಹಾಕು ಎಂದು ಸೂಚಿಸಿತು. ಅವಳಿಗೂ ಅದು ಬೇಡ ಎನ್ನುವಂತಿರಲಿಲ್ಲವಾದರೂ “ತೀರ್ಥ ಪ್ರಸಾದ ತಂದಿದ್ದೀನಿ” ಎಂದಳು.

“ನೀನು ಭಕ್ತಿಯಿಂದ ಪೂಜೆಮಾಡಿಸಿ, ಮಾಡಿ, ತಂದಿರುವ ತೀರ್ಥ ಪ್ರಸಾದ. ನನಗೆ ಅದೂ ಬೇಕು. ತಂದವರೂ ಬೇಕು. ಅದರಿಂದ ಬಾಗಿಲು ಹಾಕು, ಅಂದೆ. ತೀರ್ಥಪ್ರಸಾದದ ತಟ್ಟೆ ಸಣ್ಣ ಮೇಜಿನ ಮೇಲೆ ಕುಳಿತಿತು. ಬಾಗಿಲು ಮುಚ್ಚಿತು. ಗಂಡು ಥಟ್ಟನೆದ್ದು ಹೆಣ್ಣನ್ನು ಬಾಚಿ ತಬ್ಬಿಕೊಂಡು ದೃಢವಾಗಿ ಚುಂಬಿಸಿತು. ಹೆಣ್ಣು

ಆ ಉಪಚಾರವನ್ನು ಒಪ್ಪಿಸಿಕೊಂಡು ಕಪಟ ಕೋಪವನ್ನು ಬೀರುತ್ತ, “ನಾನು ಮಡಿ ಯಲ್ಲಿದೆ” ಎಂದು ಏನೋ ಗಂಟು ಕಳೆದುಕೊಂಡಂತೆ ಗೊಣಗಿತು.

“ಇವೊತ್ತು ನಾವೂ ಏನೋ ಮೈಲಿಗೆಯಾಗೋ ಕೆಲಸ ಮಾಡಿಲ್ಲ. ಅದರಿಂದಲೇ ತಮಗೆ ಈ ಉಪಚಾರ.” ಹೆಣ್ಣು ನಾಚಿ ಗಂಡಿನ ತೆಕ್ಕೆಯಲ್ಲಿ ಅಡಗಿತು. “ನಾನು ಹಾಗೇ ಹೊರಟುಹೋಗಬೇಕಾಗಿತ್ತು, ಏನೋ ತೀರ್ಥಪ್ರಸಾದ ಕೊಡೋಣ ಅಂದುಕೊಂಡರೆ, ಹೀಗೆ ಮಾಡಿದಿರಿ?” “ಈಗೇನು ಗಂಟು ಹೋದ್ದು?” “ಸಮಯ ಸಂದರ್ಭ ಬೇಡವೆ?” “ಸರಕಾರ ಇನ್ನೂ ಲೈಸೆನ್‌ಸ್ ತಕ್ಕೊಳ್ಳಿ ಅಂದಿಲ್ಲ; ವರ್ಕಿಂಗ್ ಅವರ್ ಗೊತ್ತು ಮಾಡಿಲ್ಲ. ಇರಲಿ. ಇವೊತ್ತು ಅದೇನು ವಿಶೇಷ ಪ್ರಸಾದದಲ್ಲಿ?” “ನೀವು ಏನೂ ಅಂದುಕೊಳ್ಳೋಲ್ಲ ಅಂದರೆ ಹೇಳುತ್ತೀನಿ.” “ಅಂದುಕೊಳ್ಳುತೀನಿ. ಹೇಳು.’ “ಅಲ್ಲಿಗೆ ನೀವೂ ನಮ್ಮ ಗ್ರೇಡಿಗೇ ಬಂದಹಾಗಾಯ್ತು” “ಹಾಗಂದರೆ?” “ನೀವು ಮಾಡೋ ಎಷ್ಟೋ ಕೆಲಸ ನೋಡಿ ನಮಗೆ ಹೇಗೆ ಹೇಗೋ ಆಗುತ್ತೆ ಮನಸ್ಸಿನಲ್ಲಿ ಏನೇನೋ ಅಂದುಕೊಳ್ಳುತೀವಿ. ಆದರೂ ನಿಮ್ಮ ತಾಳಕ್ಕೆ ಕುಣೀಲೇ ಕುಣೀತೀವಿ, ಹಾಗೇ ನೀವೂ ಮಾಡತೀರೇನು?” “ಏನೋ ಪಾಪ! ನಿನಗೆ ಕಡಿಮೆಯಾಗಿರೋದು? ನೀನು ನನ್ನ ಬಯ್ಯೋಂಥಾದ್ದು ಏನು ಮಹಾ ಮಾಡಿರೋದು?” “ಅಯ್ಯೋ ಏನಾದರೂ ಮಾಡಿದ್ದೀರಾ?” “ಏನು ನೀನು ಹಾರಾಡೋದು ಆ ಮೇರಿದೊಂದಕ್ಕೆ ಅದರಿಂದ ನಿನಗಾಗಿರೋ ನಷ್ಟವಾದರೂ ಏನು? ಹೋಟಲ್ ತಿಂಡಿ ತಿಂದೇ ಬರುತೀನಿ ನಿಜ. ಹಾಗಂತ ಮನೆ ಊಟ ಏನೂ ಬಿಟ್ಟಿಲ್ಲವಲ್ಲ?” “ಅದಕ್ಕೇ ಇವೊತ್ತು ವಿಶೇಷ ಪೂಜೆ ಮಾಡಿಸಿದ್ದು ಮಾಡಿದ್ದು?’ “ಏನು ಮೇರಿ ಜೊತೆಗೆ ನನ್ನ ಗಂಡನಿಗೆ ಇನ್ನೊಂದು ಮಾರಿ ಗಂಟು ಬೀಳಲಿ ಅಂತಲೇನು?” “ಇನ್ನೊಂದು ಬರೋ ಯೋಗಯಿದ್ದರೆ ತಪ್ಪಿಸೋರು ಯಾರು? ಆದರೆ ಅದು ಮಾರಿ ಆಗದೇ ಇರಲಿ, ಅಂತ.” ಗಂಡು ತನ್ನ ಹಿಡಿತವನ್ನು ಇನ್ನೂ ಅಷ್ಟು ದೃಢ ಮಾಡಿ ಮುತ್ತು ಕೊಟ್ಟು ಇನ್ನೊಮ್ಮೆ ಆರಾಧಿಸಿ, “ನೀನು ಯಾವಾಗಲೂ ಒಗಟು ಬಿಟ್ಟು ಮಾತೇ ಆಡುವುದಿಲ್ಲ ವಲ್ಲ?” ಎಂದಿತು. “ಕಾಫಿ ತೋಟದ ವಿಚಾರವೇ ಮರೆತಿರೇನು?”

“ಅದಕ್ಕೂ ಇದಕ್ಕೂ ಏನು ಸಂಬಂಧ?”

“ನಿಮ್ಮಿಬ್ಬರಿಗೂ ಅವರು ದೇವರ ಪೂಜೆ ಮಾಡಿಸಿ ಅಂತ ಹೇಳಿದ್ದರು ಎಂದಿರಿ ಅಲ್ಲವೆ?” “ಹೌದು?” “ನೀವು ಮಾಡುತ್ತಾ ಇದ್ದೀರಲ್ಲಾ?” “ಮಂಜುನಾಥನಿಗೆ ಪೂಜೆ ಒಪ್ಪಿಸಿದ ರಮೇಶನ ಗತಿ ಏನಾಯ್ತು?” “ಏನೋ ನಿಮ್ಮ ಗಂಡುಸರ ಸೊಟ್ಟ ಬುದ್ದಿ ನಮಗೆ ಅರ್ಥವಾಗೋಲ್ಲ, ಅವರ ಮನೆಯಲ್ಲಿ ಆದಹಾಗೆ ನಮ್ಮ ಮನೆಯಲ್ಲೂ ಆಗದಿರಲಿ ಅಂತ ದೇವರಿಗಷ್ಟು ವಿಶೇಷ ಪೂಜೆ ಮಾಡಿಸಿದೆ, ಮಾಡಿದೆ, ಅದು ಇವೊತ್ತಿಗೆ ಮುಗಿಯಿತು.” “ನನಗೆ ಹೇಳಲೇ ಇಲ್ಲ?” “ನನ್ನ ಹತ್ತಿರ ದುಡ್ಡು ಕಾಸೂ ಇರದಿದ್ದರೆ, ನಿಮ್ಮನ್ನು ಕೇಳಬೇಕಾಗಿದ್ದರೆ, ಹೇಳಬೇಕಾಗಿತ್ತು. ಅಲ್ಲದೆ, ಇದೆಲ್ಲ ನನ್ನ ಸ್ವಂತ ತಾನೇ?” “ಹಾಗಂದರೆ?” “ಏನೋ ಅಲ್ಲಿಗೇ ಬಿಡಿ.” ‘ಇಲ್ಲ. ಹೇಳಲೇಬೇಕು. “ನೀವು ಸಾವಿರ ಹೇಳಿ ನನಗೆ ದಿಗಿಲು, ನಿಮಗೇನಾದರೂ ಕೆಟ್ಟದ್ದಾದರೆ ನಾನು ಮೋಹನಾಬಾಯಿ ಹಾಗೆ ಬದುಕಿರೊಲ್ಲ. ಅದಕ್ಕಾಗಿ, ಏನಾದರೂ ಕೆಟ್ಟದ್ದು ಆಗುವುದಿದ್ದರೆ ಅದು ನನಗಾಗಲಿ, ಅವರಿಗೆ ಏನೂ ಆಗಕೂಡದು ಅಂತ ಹರಕೆ ಹೊತ್ತೆ! ಆ ಹರಕೆ ದೇವರು ಒಪ್ಪಿಕೊಂಡಿದೆ ಅನ್ನುವುದೂ ಮನಸ್ಸಿಗೆ ಬಂತು.” “ಅದು ಹೇಗೆ?” “ತೀರ್ಥ ಪ್ರಸಾದ ತಂದರೆ ಈ ದೇವರೂ ತನ್ನ ಅನುಗ್ರಹ ತೋರಿಸಿತಲ್ಲ. ಅದರರ್ಥ ಏನು?’ “ನೀನೇನು ಏಸುಕ್ರಿಸ್ತನಾಗಿಬಿಟ್ಟಿಯೋ? ಹಾಗಾದರೆ ನಿನ್ನ ಮಗನ ಬುದ್ದಿ ಅಷ್ಟು ತೀವ್ರವಾಗೋ ಹಾಗೆ ಏನಾದರೂ ಮಾಡು.” “ಮಗನ ಮಾತು ಬೇರೆ. ಗಂಡನ ಮಾತು ಬೇರೆ. ನನ್ನ ತಾಳೀಭಾಗ್ಯ ಉಳಿಸಿಕೊಳ್ಳೋ ಯತ್ನ ನಂದು.” “ಹಾಗಾದರೆ ಯಾವ ಕಂಪೆನೀಲಿ ಇನ್‌ಪ್ಯೂರ್ ಮಾಡಿದೆ?” “ನಿಮ್ಮ ತಮಾಷೆ ಬಿಡಿ. ಬಾಬರ್ ಮಾತ್ರ ಮಗನ್ನ ಉಳಿಸಿಕೊಳ್ಳೋಕೆ ಆಯ್ತು ನನಗೆ ನನ್ನ ಗಂಡನ್ನ ಉಳಿಸಿಕೊಳ್ಳೋಕೆ ಆಗೋದಿಲ್ಲೋ?” “ಹಾಗಾದರೆ ನನಗೂ ಏನಾದರೂ ಆಪತ್ತು ಬಂದಿತ್ತೇನು?” “ಬರುತ್ತೆ ಅನ್ನೋ ಭಯ ಬಂದಿತ್ತು ಅದರ ನಿವಾರಣೆಗೆ ಯತ್ನ ಮಾಡಿದೆ.” “ಏನು ಮಾಡಿದೆ?” ಹೆಣ್ಣು ಜಪ್ಪಯ್ಯ ಅಂದರೂ ಹೇಳಲೊಲ್ಲದು; ಗಂಡು ಬಿಡಲೊಲ್ಲದು. ಕೊನೆಗೆ

ಗಂಡು ಹೇಳಿಸಿತು : “ನಿಮಗೆ ಏನಾದರೂ ಕೆಟ್ಟುದು ಆಗುವುದಿದ್ದರೆ ಅದು ನನಗಾಗ ಬೇಕು. ನಾನು ಇರುವವರೆಗೂ ನನ್ನ ಕಣ್ಣು ಮುಂದೆ ನಿಮಗೆ ತಲೆ ಕೂದಲು ಚುಳ್ಳನ್ನಬಾರದು.” ಆ ಮಾತನ್ನು ಕೇಳಿ ಅವನು ಅವಾಕ್ಕಾಗಿ ಹೋದನು. ತಾನು ಅವಳ ವಿಷಯದಲ್ಲಿ ತಪ್ಪಿ ನಡೆದಿರುವುದು ಅವಳಿಗೂ ಗೊತ್ತು. ಆದರೂ ಅವಳ ಅಭಿಮಾನ ಇಷ್ಟೆ? ಅದಕ್ಕೆ ತಾನು ಯೋಗ್ಯನೇ? ಎನ್ನಿಸಿ ಕಣ್ಣು ಒದ್ದೆಯಾಯಿತು. ಶಿಥಿಲವಾಗಿದ್ದ ಬಂಧನವನ್ನು ಬಿಗಿಯುತ್ತ “ಏನು ಮಾಡಲೇ? ಎಷ್ಟು ಒದ್ದಾಡಿದರೂ ನನ್ನ ಎಂಜಲು ಬುದ್ಧಿ ಬಿಡೊಲ್ಲದಲ್ಲೇ?” ಎಂದು ಬಲವಾಗಿ ಕಚ್ಚಿದನು. * “ಇಕೋ! ಇದಕ್ಕೆ ಪ್ರಾರಬ್ಧ ಅನ್ನೋದು. ಹೀಗೆ ಕೆನ್ನೆ ಮೇಲೆ ಮುದ್ರೆ ಒತ್ತಿಬಿಟ್ಟಿರಿ. ನಾನು ಹೊರಗೆ ಹೋಗೋದು ಹೇಗೆ? ಎಲ್ಲರೂ ನೋಡಿ ನಗೋಲ್ಲವೆ?” “ಆನೆ ನೀರಾಟದೊಳು ಮೀನ ಕಂಡಜುವುದೇ? ಅಂದ ಸರ್ವಜ್ಞ. ಹೋಗಲಿ, ಬೇಡ ಅನ್ನು : ಬಿಟ್ಟುಬಿಡುತ್ತೇನೆ.” “ಹೂ, ಅಂತಾರೆ ! ಕಾಯಿಕೊಂಡಿರಿ.” “ಇದು ಡೈವೋರ್ಸ್ ಕಾಲ ! ದೇವರು !” “ಅದು ನಮಗೆ ಅಪ್ಪೆ ಆಗೊಲ್ಲ ಸಾರ್ !” me ಇಬ್ಬರೂ ಊಟಕ್ಕೆದ್ದಾಗ ಸುಮಾರು ಮೂರು ಗಂಟೆಯಾಗಿತ್ತು. ಅಡುಗೆಯವಳು ಚಿಕ್ಕ ಯಜಮಾನರಿಗೆ ಬಡಿಸಿ ತಾನೂ ಊಟ ಮಾಡಿ ಅಡುಗೆಯೆಲ್ಲಾ ಮುಚ್ಚಿಟ್ಟು ಹೊರಟುಹೋಗಿದ್ದಳು. ಗಂಡ ಊಟ ಮಾಡುತ್ತಾ “ನಿನ್ನ ಮೊಕ ನೋಡಿಕೊಂಡೆಯೇನು?” ಎಂದು ನಗುನಗುತ್ತಾ ಕೇಳಿದನು. ಮಡದಿಯೂ ಗೊಣಗಿಕೊಂಡಳು. “ಇವೊತ್ತೇ ಮೊದಲಾಗಿ ದ್ದರೆ ಏನೋ ಅಂದುಕೋಬೇಕಾಗಿತ್ತು ಮುಖ್ಯ ನಿಮ್ಮಕೈಗೆ ಸಿಕ್ಕಿದರೆ ಅವೊತ್ತು ಹೊರಗೆ ಎಲ್ಲೂ ಹೋಗುವಹಾಗಿಲ್ಲ. ಇವೊತ್ತು ಸಮಾಜಕ್ಕೆ ಹೋಗಬೇಕಾಗಿತ್ತು. ಅಲ್ಲೊಂದು ಲೆಕ್ಟರ್, ಇನ್ನೇನು ಸಮಾಜಗಮಾಜ ಎಲ್ಲಾ ಮನೆಯೇ ಅನ್ನೋ ಹಾಗಿವೆ. ಹೋಗಲಿ ಬಿಡಿ. ಪೂಜೆ ಮಾಡಿಕೊಂಡು, ಮಾಡಿಸಿಕೊಂಡು, ಸುಖವಾಗಿರೋದು ಅಂತಲೋ?” “ಏನು ಮಾಡಲಿ? ನೀವು ಮಾಡಿದ ಹಾಗೆ ನಾನೂ ಮಾಡಿ ಒಂದು ಉಂಡಿಗೆ ಹಾಕಿದರೆ ಅವೊತ್ತು ರಾಯರಿಗೆ ತಿಳಿದೀತು ಆ ಸೌಖ್ಯ! ಮುಖ್ಯ ನನ್ನ ಕೈಯಲ್ಲಾಗೋಲ್ಲ. ಆ ಮೇರಿಗಾದರೂ ಹೇಳಿಕಳುಹಿಸುತ್ತೇನೆ. ತಡೆಯಿರಿ.” “ಏಕೆ?” “ಒಂದು ಮುಂಡಿಗೆ ಒತ್ತು ಮಹರಾಯಿತಿ ಅಂತ, ಆ ಗಂಡು ಬೀರಿನಿಂದ ಅದಾದರೂ ಒಂದು ಉಪಕಾರ ಆಗಲಿ.” “ಅವಳನ್ನು ಬಿಟ್ಟರೆ ನಿನಗೆ ಸಂತೋಷವಾಗುವ ಹಾಗಿದ್ದರೆ ಹೇಳು ಬಿಟ್ಟುಬಿಡುತ್ತೇನೆ.”

“ಅವಳನ್ನು ಬಿಟ್ಟಿರಿ. ಆದರೆ ಆ ಬುದ್ಧಿ ಬಿಟ್ಟಿರಾ? ಅದು ಹೋದರೆ ಇನ್ನೊಂದು ವಕ್ರಿಸುತ್ತೆ. ಅದೆಲ್ಲಾ ನನಗೇಕೆ? ಎಲೆ ಎತ್ತೋ ಗುಂಡಾ ಅಂದ್ರೆ ಉಂಡೋರೆಷ್ಟು ಮಂದಿ ಅಂದಹಾಗೆ ! ನಾವು ತೂಬಿನೋರು! ಕೋಡಿ ಯೋಚನೆ ನಮಗಿಲ್ಲಾ!” “ನೀನು ಲಾಯರಾಗಿದ್ದರೆ, ನಾನು ನಿಜವಾಗಿ ಪಲ್ಟಿ ಹೊಡೀತಿದ್ದೆ ಕಾಣೆ.’ “ನೀವು ಲಾಯರಾಗಿರೋಲ್ಲ ಅಂತ ಅವರು ಹೇಳಿದ್ದಾರಲ್ಲ. ಅದರಿಂದ ನೀವೇನೂ ಪಲ್ಟಿ ಹೊಡೆಯೋಹಾಗಿಲ್ಲ.” ಅಂದು ಅಷ್ಟರಲ್ಲಿ ಮಗ ಬಂದು “ನರಸಿಂಹಯ್ಯನೋರು ಬಂದಿದ್ದಾರೆ ಹೋದ. “ಕೂತುಕೊಳ್ಳಿ ಅನ್ನು’ ಎಂದು ಪ್ರಾಣೇಶನೂ ಎದ್ದುಹೋದ. ಇನ್ನೊಂದು ಗಳಿಗೆ ಹೆಂಡತಿ ಜೊತೆಯಲ್ಲಿ ಹರಟೆ ನಡೆಯಬಾರದಾಗಿತ್ತೇ ಎಂದು ಮನಸ್ಸು ಎಲ್ಲೋ ಕೊಂಚ ನೊಂದಿತ್ತು. ನರಸಿಂಹಯ್ಯ ಸೋಫಾದ ಮೇಲೆ ಕುಳಿತಿದ್ದ ಪ್ರಾಣೇಶನಿಗೆ ಅವನ ಮೇಲೆ ಅಭಿಮಾನ. ಅವನೂ ಮನೆಯ ಜನದಲ್ಲಿ ಒಂದು ಅನ್ನುವ ಭಾವನೆಯೇ ಹೊರತು ಅವನು ಗುಮಾಸ್ತೆ ತಾನು ಲಾಯರು ಎನ್ನುವ ಭಾವ ಕಿಂಚಿತ್ತೂ ಇಲ್ಲ, ಅದರಲ್ಲೂ ರಮೇಶನಿಗೆ ಆತ ಸೇವೆ ಮಾಡಿದ್ದು ನೋಡಿ ಆತನ ಮೇಲಿನ ಗೌರವ ಬೇಕಾದ ಹಾಗೆ ಬೆಳೆದು ಹೋಗಿತ್ತು. “ಕಾರ್ ತಕೊಳ್ಳೋಕೆ ಬಂದಿದ್ದಾರೆ. ಅಮ್ಮಾ ಅವರು ತಮಗೆ ತಿಳಿಸಿಬಿಟ್ಟು ಬನ್ನಿ ಅಂದರು. “ಎಷ್ಟೂಂತ?” “ಹದಿನಾಲ್ಕೂವರೆ” “ನಾವು ಕೊಟ್ಟದ್ದು ಹದಿನೆಂಟಲ್ವೆ?” “ಹೌದು” “ನಟೇಶ್ ಬಂದುಬಿಡಲಿ, ಇವೊತ್ತೋ ನಾಳೆಯೋ ಬರುತ್ತಾನೆ.” ಆಗಬಹುದು. ಹಾಗಂತ ಅವರಿಗೆ ಹೇಳೇನೆ.’ “ಯಾರು ಕೊನೆಗೆ?” “ಜೀವಣ್ಣನವರೇ ತೆಗೆದುಕೊಳ್ಳುತ್ತಾರೆ. ಇನ್ನೊಂದು ಸಮಾಚಾರ ಕೇಳಿದೆ.” ಅವರ ಕಂಪೆನಿಗೆ ನೀವೇ ಅಂತೆ ಛೇರ್‌ಮನ್‌.” “ನೋಡಿ. ನರಸಿಂಹಯ್ಯ, ಅದನ್ನು ಒಪ್ಪಿಕೊಂಡರೆ ಪ್ರಾಕ್ಟಿಸ್ ಮಾಡುವುದಕ್ಕೆ ಆಗುತ್ತದೆಯೋ ಇಲ್ಲವೋ ಅಂತ ಸಂದೇಹ. ಅಷ್ಟೆ!” ಅದರಿಂದ ಹಿಂತೆಗೀತಾ ಇದೇನೆ “ಕೈತುಂಬಾ ರೆಮ್ಯೂನರೇಷನ್ ಬಂದರೆ ಏಕೆ ಒಪ್ಪಿಕೋಬಾರದು?” “ರೆಮ್ಯುನರೇಷನ್ ಚೆನ್ನಾಗಿದೆ. ತಿಂಗಳಿಗೆ ೧೨೦೦ ರೂ. ೨೦೦ ಕಾರ್ ಅಲೋಯನ್‌ಸ್‌, ೧೦೦ ಪರ್ಸನಲ್ ಅಲೋಯನ್‌ಸ್. ಇದರ ಮೇಲೆ ಎಲ್ಲರಿಗೂ ಬರುವಂತೆ ನಮಗೂ ಬೋನಸ್, ಎಲ್ಲಾ ಉಂಟು. ಆದರೂ

“ನನ್ನ ಮಾತು ಕೇಳಿ ಸ್ವಾಮಿ, ಅಕ್ಸೆಪ್ಟ್ ಮಾಡಿಕೊಳ್ಳಿ.” “ನೀವು ನನ್ನ ಅಸಿಸ್ಟೆಂಟ್ ಆಗಿ ಬರುತ್ತೀರೋ?” “ನಿಮಗೆ ಗ್ರಾಜುಯೇಟ್ ಬೇಕೇನೋ?” “ಬರೆಯೋಕೆ ಬರದಿದ್ದ ಗ್ರಾಜುಯೇಟ್‌ ಗಿಂತ ಕೆಲಸ ತಿಳಿದಿರೋ ನಾನ್ ಗ್ರಾಜುಯೇಟ್ ಉತ್ತಮ ಅಲ್ಲವೆ?” “ನಾನೂ ಯೋಚನೆಮಾಡಿ ಹೇಳ್ತನೆ ಸ್ವಾಮಿ” “ತಿಂಗಳಿಗೆ ೨೫೦ ಸಂಬಳ, ೭೫ ಅಲೊಯನ್‌ಸ್, ಬೋನಸ್. ಏಕರೀ ಒಪ್ಪಬಾರದು.” “ನಮ್ಮ ಶ್ರೀನಿವಾಸ ಈಗ ವಿಚಿತ್ರವಾಗಿದ್ದಾನೆ. ಅವನ್ನ ಒಂದು ಮಾತು ಕೇಳಿ ಹೇಳುತ್ತೇನೆ.” “ವಿಚಿತ್ರ ಅಂದರೆ ಹೇಗೆ??” ಆಗಾಗ ಅವನಿಗೆ ಮೈಮೇಲೆ ಜ್ಞಾನ ತಪ್ಪಿ ಹೋಗುತ್ತೆ. ಆಗ ಆ ಸ್ವಾಮಿಗಳು ಮಾತಾಡಿದ ಹಾಗೇ ಮಾತನಾಡುತ್ತಾನೆ. ಮೊನ್ನೆ ಪ್ರೊಫೆಸರಿಗೆ ತಗಲಿಬಿಟ್ಟಿದ್ದ ಇನ್ನೊಂದು ದಿನ ನಾನು ರುದ್ರ ಹೇಳಿ ಅಭಿಷೇಕ ಮಾಡುತ್ತಿದ್ದರೆ, ಏನು ನರಸಿಂಹಯ್ಯ ನೀನೂ ಹೀಗೆ ಮಾಡುತ್ತಿದ್ದೀಯಾ? ಮಂತ್ರ ಹೇಳುವಾಗ ಭಾವ ಇರಬೇಡವೆ? ಎಂದ. ನಾನು ಹಿಂತಿರುಗಿ ನೋಡಿದರೆ, ಪದ್ಮಾಸನ ಹಾಕಿಕೊಂಡು ಕೂತಿದ್ದಾನೆ. ಆ ಸ್ವಾಮಿಗಳ ಹಾಗೇ ! ನನಗೆ ವಿಚಿತ್ರ ಅನ್ನಿಸಿ, ಹೇಗೆ ಅಪ್ಪಣೆಯಾಗಲಿ ಎಂದೆ. ನೋಡಿ, ದೊಡ್ಡವರು ಯಾರಾದರೂ ಬಂದರೆ ಮೈಕೈಯೆಲ್ಲ ಕಣ್ಣಾಗಿರುತ್ತೀರೋ ಇಲ್ಲವೋ? ಅದೇ ಭಾವ ಮಹಾದೇವನ ಸನ್ನಿಧಿಯಲ್ಲಿ ಇರಬೇಡವೇ? ಎಂದ. ತಿರುಗಿನೋಡಿದೆ. ನನಗೆ ಅರ್ಥವಾಗಲಿಲ್ಲ. ಆ ಎದುರಿಗೆ ಇರುವದು ಏನು ಅಂತ ಭಾವಿಸಿದ್ದೀರಿ?’ ಅಂದ. “ಶಿವಲಿಂಗ’ ಅಂದೆ. “ಶಿವನಸ್ವರೂಪವೇನು? ನೋಡಿ, ಶಿವ ಎಂದರೆ ಮಂಗಳ ನಲ್ಲವೇ? ಮಂಗಳವೇ ಮೂರ್ತಿಯಾಗಿ ಬಂದರೆ ನೀವು ಎಲ್ಲೋ ಏನೋ ನೋಡಿಕೊಂಡು ಇರುತ್ತೀರಾ? “ನಾ ರುದ್ರೋ ರುದ್ರಪೂಜಕ’ ನೀವೂ ಶಿವನಾಗಿ ಎದುರಿಗೆ ಲಿಂಗವನ್ನೂ ಶಿವಮಯವಾಗಿ ನೋಡುತ್ತ ಪೂಜೆಮಾಡಿ ಎಂದು ಎದ್ದು ಹೊರಟುಹೋದ. ಈಗ ಅದನ್ನು ನಾನು ಅಭ್ಯಾಸಮಾಡುತ್ತಿದ್ದೇನೆ. “ಮೊನ್ನೆಯ ದಿವಸ ಅವಳು ಕೈತುತ್ತು ಹಾಕುತ್ತಿದ್ದರೆ, ‘ತಿಂದನ್ನವೆಲ್ಲ ಅಮೃತವಾಗಬೇಕಮ್ಮಾ! ಅದು ಹೇಗೆ ಹೇಳಕೊಡುತೀಯಾ?’ ಅಂದ. ಹೀಗೇ ಅವನೇಕೋ ವಿಚಿತ್ರವಾಗುತ್ತಿದ್ದಾನೆ.” “ಪ್ರೊಫೆಸರ್‌ಗೇನೋ ಚಕ್ಕರ್ ಕೊಟ್ಟ ಅಂದರಲ್ಲ! ಅದೇನು?” “ಈ ಸಲ ಅವನಿಗೆ ಎಸ್.ಎಸ್.ಎಲ್.ಸಿ. ಫಸ್ಟ್ ಕ್ಲಾಸ್‌ನಲ್ಲಿ ಆಗತ್ತೆ ಅನ್ನೋ ನಂಬಿಕೆ ಇದೆ. ಮುಂದೆ ಕಾಲೇಜು ಸೇರುವಾಗ ಹೋಗಿ ಹೇಳೋಕಿಂತ ಈಗಲೇ ಹೋಗಿ ನೋಡಿರೋಣ ಅಂತ ಅವನ್ನೂ ಕರೆದುಕೊಂಡು ಹೋದೆ. ಶತಾನಂದಂ ಬಲ್ಲರಲ್ಲ! ಅವರು ಅದೂ ಇದೂ ಮಾತನಾಡುತ್ತ ಫಿಲಾಸಫಿ ತೆಗೆದರು. ಇವನು

ತಾನೇನೋ ಮಹಾ ಬಲ್ಲವನ ಹಾಗೆ ಏನು ಪ್ರೊಫೆಸಿ! ಮಾತು ಎಲ್ಲಿಂದ ಬರುತ್ತೆ ಏಕೆ ಬರುತ್ತೆ ಕೊಂಚ ಹೇಳುತ್ತೀರಾ? ಅಂದ. ಅವರಿದ್ದವರು ಒಂದು ದೊಡ್ಡ ಪುಸ್ತಕ ತೋರಿಸಿ, ನೀನು ಕೇಳೋ ಪ್ರಶ್ನೆಗೆ ಅದರಲ್ಲಿ ಉತ್ತರ ಅಂದರು. ಅದನ್ನು ನನಗೆ ಕೊಡಿ ಓದಿಕೊಂಡು ಬರುತ್ತೇನೆ ಅಂತ ತಂದಿದ್ದಾನೆ. ನಾನು ಗದರಿಸಿಕೊಳ್ಳೋಕೆ ಹೋದೆ. ಶತಾನಂದಂ, ನೋನೋ, ಬೇಡಿ. ಅವನ ಯೋಗ್ಯತೆ ಏನಿದೆಯೋ? ಇರಲಿ ಬಿಡಿ. ಅಂತ ತಡೆದುಬಿಟ್ಟರು.” “ಈಗ ಅವನಿಗೆ ಎಷ್ಟು ವರುಷ ವಯಸ್ಸು?” “ಹದಿನಾರಾಯಿತು.’ “ಇಷ್ಟಕ್ಕೂ ಸ್ವಾಮಿಗಳಿಗೆ ಕೊಟ್ಟುಬಿಟ್ಟಿದ್ದೀರಂತಲ್ಲ,” “ಹೌದು. ನಮಗೆ ಇನ್ನು ಮೂರು ಮಕ್ಕಳಾದ ಮೇಲೆ ಅವನು ಅವರ ಸ್ವತ್ತು” “ಏನು ಮಹಾ! ಆಗತ್ತೆ. ನಿಮಗೇನು ಮಕ್ಕಳಾಗದ ವಯಸ್ಸಾಗಿರೋದು? ಆಯಿತು. ಈ ವಿಷಯ ಅವನನ್ನೇನು ಕೇಳುವುದು?” “ಅವನೇ ಈಗ ಮನೆಯ ಯಜಮಾನ ಸ್ವಾಮಿ?” “ದಟ್ ಈಸ್ ಟೂ ಮಚ್. ನರಸಿಂಹಯ್ಯ ನನಗೆ ಅರ್ಥವಾಯಿತು. ನಿಮ್ಮ ಕುಟುಂಬ ಕೇಳುತ್ತೀನಿ ಅನ್ನಿ.” “ಏನಾದರೂ ಆಗಲಿ, ನಾಳೆನಾಡಿದ್ದರಲ್ಲಿ ಹೇಳಬಹುದಲ್ಲ?” “ಓ, ಟೇಕ್ ಯುವರ್ ಓನ್ ಟೈಂ. ಅವಸರವೇನೂ ಇಲ್ಲ.” ಆ ವೇಳೆಗೆ ಫೋನ್ ಬಂತು. ನಟೇಶ್ ಬಂದಿದ್ದಾನೆ. ಸಮಾಚಾರವೆಲ್ಲ ಮೂರು ಮುಕ್ಕಾಲು ಪಾಲು ಸಿಕ್ಕಿದೆ. ಯಾವಾಗ ಬರಬೇಕು?’ ಉತ್ತರವೂ ಹೋಯಿತು: “ಯಾವಾಗಲೇನು? ಈಗಲೇ ಬಂದುಬಿಡು.” ಇಬ್ಬರಿಗೂ ಕಾಫಿ ಬಂತು. ಕಾಫಿ ಕುಡಿಯುತ್ತಾ ಪ್ರಾಣೇಶ್ ಕೇಳಿದ: “ಮೋಹನಾಬಾಯಿ ನೋಡಿದ್ದಿರಾ?” “ನಿನ್ನೆ ನೋಡಿದ್ದೆ.” “ಏನು ಹೇಳಿದರು?’ * “ಏನು ಹೇಳೋದು? ಆ ಹೆಣ್ಣು ಮಗಳು ಕಣ್ಣೀರಲ್ಲಿ ಕೈತೊಳೆದುಬಿಟ್ಟಳು. ನನಗೇನೋ ತಿಳಿಯೋಲ್ಲ ನರಸಿಂಹಯ್ಯನವರೇ? ಚಿಕ್ಕರಾಯರನ್ನು ಕೇಳಿ. ಇರೋವರೆಗೂ ನನ್ನ ಮಾನವಾಗಿ ಕಾಪಾಡಿ ಈ ಮಗೂನ ಒಂದು ಗತಿಕಾಣಿಸಿ ಅಂದು ಮೊಕದ ಮೇಲೆ ಬಟ್ಟೆ ಹಾಕಿಕೊಂಡು ಅತ್ತುಬಿಟ್ಟರು. ನನಗಂತೂ ಹೊಟ್ಟೆಯಲ್ಲಿ ಕೈಯಿಟ್ಟು ಕಿವಿಚಿದ ಹಾಗಾಯಿತು.’ ಪ್ರಾಣೇಶನು ಅವಾಕ್ಕಾದನು. “ನಿನ್ನೆ ಇಷ್ಟು ಹೇಳಿಕೊಂಡು ಅತ್ತವಳು ಇವೊತ್ತು ಬೆಳಿಗ್ಗೆಗೆ ಬದಲಾಯಿಸಿದ್ದಾಳೆ. ಅಥವಾ ಹೆಣ್ಣೆ ಬಲೆ ಬೀಸುತ್ತಿದೆಯೋ?’ ಇನ್ನೂ ಏನೇನೋ ಯೋಚನೆ ಬಂತು. ಅವೆಲ್ಲ ಅತ್ತಕಡೆ ಇಟ್ಟು, ಆಕೆ ಹೇಳೋದೂ ನಿಜ.

ನೀವೇ ನಿಂತುಕೊಂಡು ಆ ಸಂಸಾರ ಒಂದು ಘಟ್ಟ ಹತ್ತಿಸಬೇಕು, ಆಯಿತು. ಅದೇನು ಸಮಾಚಾರ? ವೀಣಾ ಆಗಲೇ ಸ್ವಯಂವರ ಮಾಡಿಕೊಂಡಿದ್ದಾಳಂತೆ?” “ಸರಿ, ಆರೇಳು ವರ್ಷದ ಮಗು. ಅದರ ಮಾತೇನು ಬಿಡಿ, ರಾಯರೆ?” “ವೀಣಾ ಎಲ್ಲರ ಹಾಗಲ್ಲರೀ! ಒಂದೊಂದು ಸಮಯ ಅವಳಿಗೆ ಹೊಳೆಯೋ ಬುದ್ಧಿದೊಡ್ಡವರಿಗೂ ಹೊಳೆಯೋದಿಲ್ಲ. ಮುಂದೆ ಕನ್ಯಾ ಮಂದಿರದಿಂದ ಮೀಟಿಂಗಿನಲ್ಲಿ ಅವಳನ್ನು ಇಟ್ಟುಕೊಳ್ಳೋಣ ಅಂತೀನಿ. ನಿಮ್ಮ ಇಷ್ಟ ಏನು?” “ಮಾತಿನಲ್ಲಿ ಮರೆತೇಬಿಟ್ಟಿದ್ದ. ಜೀವಣ್ಣನವರು ಕೇಳಿದರು ಮಂದಿರದ ಮೀಟಿಂಗ್ ಯಾವೊತ್ತು ಅಂತ.?” ~ “” “ಗೌಡರ ಉತ್ತರ ಬರುತ್ತಲೂ ಫಿಕ್ಸ್ ಮಾಡೋಣ. ಅದೊಂದು ನಮ್ಮ ತಲೆಮೇಲಿರೋ ಭಾರ. ಅದನ್ನು ಇಳಿಸಿಕೊಳ್ಳಬೇಕು. “ನಾನಿನ್ನು ಹೋಗಿಬರಲೇ?” “ಒಳ್ಳೇದು. ಮರೆಯಬೇಡಿ. ನೀವು ಒಪ್ಪಿದರೆ, ಇನ್ನು ಒಂದು ಇಪ್ಪತ್ತೈದು ಮುಂದಕ್ಕೆ ತಳ್ಳೋಣ.” “ಹತ್ತು ಜನದ ಹಣ ಮುನ್ನೂರು ಕೊಡಿಸಿಬಿಡಿ. ರಾಯರೇ!” ನರಸಿಂಹಯ್ಯನು ಹೊರಡುತ್ತಿದ್ದ ಹಾಗೆಯೇ ನಟೇಶ್ ಬಂದನು. ಪ್ರಾಣೇಶನು ಗೌರವವಾಗಿ ಕರೆದು, “ಕಾಫಿ ಆಯಿತೋ?” ಎಂದು ಕೇಳಿದನು. ಅವನು ಆಯಿತು ಅಂದರೂ ಬಿಡದೆ ಒಂದು ಕಪ್ಪು ಕಾಫಿ ತರಿಸಿಕೊಟ್ಟನು. “ನೀನು ಹೋಗಿದ್ದ ಕೆಲಸ ಏನಾಯಿತು?” “ಬಹಳ ಕೆಲಸ ಹಿಡೀತು ಸಾರ್ ! ಮೈಸೂರಿನಲ್ಲಿ ನಾಲೈದು ದಿವಸ. ಅಲ್ಲಿಂದ ಮಂಗಳೂರು ಅಲ್ಲಿಂದ ಟ್ರಾವನ್‌ಕೂರ್, ಅಲ್ಲಿಂದ ರಿಟರ್ನ್.” “ಅದೇನು ಅಷ್ಟು ಹಿಡಿದಿದ್ದು !” “ನೀವು ಹೇಳಿದ ನಂಜಮ್ಮ ಹೋಗಿ ಮೂವತ್ತು ವರ್ಷ ಆಗಿದೆ. ಅವಳ ಮಗಳು ಕೆಂಪಮ್ಮ ಮೈಸೂರು ಬಿಟ್ಟು ಯಾವೋನ ಜೊತೆಯಲ್ಲಿಯೇ ಹೊರಟು ಹೋದಳು. ಅವನೊಬ್ಬ ನಾಟಕದವನು. ಅವನು ಅಲ್ಲಿಂದ ಮಂಗಳೂರಿಗೆ ಅವಳನ್ನು ಹೊತ್ತುಕೊಂಡು ಹೋದ. ಅವನೂ ಒಂದೆರಡು ವರ್ಷ ಇದ್ದು ಹೇಳದೆ ಕೇಳದೆ ಪರಾರಿಯಾದ. ಆಗ ಅವಳಿಗೆ ಆರು ತಿಂಗಳು. ಅವಳು ದಿಕ್ಕು ದಿವಾಣ ಇಲ್ಲದೆ ಹೋಗಿ ಒದ್ದಾಡುವಾಗ ಒಬ್ಬ ಪಾದರಿ ಸಿಕ್ಕಿ, ಅವಳನ್ನು ಮಿಷನ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವಳು ಒಂದು ಮಗು ಹೆತ್ತಳು. ಅಲ್ಲಿ ತಾಯಿ ಮಕ್ಕಳು ಇಬ್ಬರೂ ಕ್ರಿಶ್ಚಿಯನ್ ಆದರು. ಆ ಮಗಳು ಹುಟ್ಟು ಹಾದರಗಿತ್ತಿ. ಇನ್ನೂ ಸಣ್ಣ ಹುಡುಗಿ ಯಾಗಿದ್ದಾಗಲೇ ಅದರ ಬುದ್ಧಿ ನೇರವಾಗಿರಲಿಲ್ಲ. ತಾಯಿ ಹತೋಟಿ ತಪ್ಪಿತು. ಮಿಷನ್‌ನವರಿಗೂ ಈ ಪ್ರಾರಬ್ದ ಕಳೆದುಹೋದರೆ ಸಾಕು ಎನ್ನಿಸಿತು. ಅವಳ ಹನ್ನೆರಡನೆಯ ವರ್ಷದಲ್ಲಿಯೇ ಯಾರನ್ನೂ ಕಟ್ಟಿಕೊಂಡು ಎಲ್ಲಿಯೋ ಓಡಿಹೋಯಿತು. ಎಲ್ಲೋ ಯಾವುದೋ ಕಾಫಿ ತೋಟದಲ್ಲಿ ಇರಬಹುದು ಎಂದು ತಾಯಿ ಹಂಬಲ, ನೀಲಗಿರಿಯಲ್ಲಿ ಇದ್ದಳಂತೆ! ಅದು ಐದಾರು ವರ್ಷದ ಮಾತು. ಆ ಕೆಂಪಮ್ಮ ಈಗ ಜೋನಮ್ಮ ನಾಗಿದ್ದಾಳೆ. ಟ್ರಾವನ್‌ಕೂರಿನಲ್ಲಿ ಒಂದು ಸಣ್ಣ ಆಸ್ಪತ್ರೆ ಇಟ್ಟುಕೊಂಡು ದುಡೀತಿದ್ದಾಳೆ. ಅವಳಿಗೂ ಮಗಳನ್ನ ನೋಡಬೇಕು ಅಂತ ಆಸೆ ಇದೆ.” “ಗುರುತು ಏನಾದರೂ ಇದೆಯಂತೋ?” “ಈ ಎಡದ ಭುಜದ ಮೇಲೆ ಒಂದು ದೊಡ್ಡ ಕೆಂಪು ಮಚ್ಚೆ ಇದೆಯಂತೆ?” “ಹೆಸರೇನಂತೆ?” “Bed.” “ಏನು ಹತ್ತಿರಕ್ಕೆ ಬಂತೋ?” “ನನಗೂ ಹಾಗೇ ಅನ್ನಿಸಿತು. ಆದರೆ ಮಚ್ಚೆ?” “ಇವಳಿಗೊಂದು ಮಚ್ಚೆ ಇದೆ.” “200” “ಹೌದು” “ಸರಿ ಮತ್ತೆ!” “ಜೋನಮ್ಮನ ಅಡ್ರೆಸ್ ಏನು?” ಗುರ್ತುಹಾಕಿಕೊಂಡು ಬಂದಿದ್ದೀನಿ. ತಂದುಕೊಡುತ್ತೀನಿ.” ಪ್ರಾಣೇಶನು ಅವನ ಮಾತು ಕೇಳಿ ಸಬ್ಬನಾದನು. ಕೆಂಪಿ ಇದ್ದಾಳೆ. ಅವಳ ಮಗಳು ಮೇರಿ. ಅವಳು ಈಗ ಇಲ್ಲಿ ತನ್ನ ನಟೇಶನ ಮುಂದೆ ತನ್ನ ಮನಸ್ಸಿನಲ್ಲಿದ್ದುದನ್ನೆಲ್ಲಾ ಹೇಳುವದಿರಲಿ, ಯೋಚಿಸುವು ದಕ್ಕೂ ತನ್ನ ಮುಖದ ಮೇಲೆ ಕೂಡ ತನ್ನ ಮನೋಭಾವದ ನೆರಳು ಕಾಣುವುದೂ ಅವನಿಗೆ ಇಷ್ಟವಿಲ್ಲ. ಅದರಿಂದ, ನಕ್ಕು ನಟೇಶ್, ನೀನು ಮಾಡಿಕೊಂಡು ಬಂದ ಕೆಲಸದಿಂದ ಎರಡು ಲಾಭವಾಯಿತು. ಒಂದನೆಯದು ಈ ಜೋನಮ್ಮನ ತಾಯಿ ನಮ್ಮ ತಂದೆಯ ಬಳಿ ಒಂದಷ್ಟು ಹಣ ಇಟ್ಟಿದ್ದರು. ಅದನ್ನು ರಿಟರ್ನ್ ಮಾಡುವುದಕ್ಕೆ ಅವಕಾಶವಾಯಿತು. ಇವಳು ತನ್ನ ತಾಯಿ ಎಲ್ಲೋ ಇದ್ದಾಳೆಯಂತೆ. ಅವಳನ್ನು ಹುಡುಕಿಸಬೇಕು ಎಂದು ಹೇಳುತ್ತಿದ್ದಳು. ಅದೂ ಆಯಿತು. ನಿನಗೆ ಈಗ ಡಬ್ಬಲ್ ರಿವಾರ್ಡ್ ಬರಬೇಕು” ಎಂದನು. ನಟೇಶನು ಸಂತೋಷದ ಮೂರ್ತಿಯಾಗಿ ಹಲ್ಲು ಕಿಸಿಯುತ್ತಾ ನಿಂತು ಕೊಂಡನು. “ಅದಿರಲಿ, ಈಗ ಇನ್ನೊಂದು ಮಾತು. ದೊಡ್ಡ ರಾಯರು ಕಾರು ಖರೀದಿಗೆ ಬಂದಿದೆ. ಹದಿನಾಲ್ಕೂವರೆ ಸಾವಿರಕ್ಕೆ ಕೇಳುತ್ತಿದ್ದಾರೆ. ನಿನ್ನ ಕೇಳುವವರೆಗೂ ಏನೂ ಹೇಳುವುದಿಲ್ಲ ಅಂದೆ. ನೀನು ಏನು ಅನ್ನುತ್ತೀಯೆ?” ‘ಇನ್ನು ಎರಡು ದಿನ ಕಾದರೆ ಹದಿನೈದು ಬಂದೀತು. ಆದರೆ ಅಮ್ಮಾವರು ಏನೆನ್ನುತ್ತಾರೋ?”

“ಅಮ್ಮಾವರು ಆ ಕಾರು ಕಂಡರೆ ಗೊಳೋ ಅಂತ ಅಳುತ್ತಾರೆ. ನೀನೇ ಹೇಳಿದೆಯಲ್ಲ; ಅವರು ಆ ಕಾರು ಹತ್ತಿರವೂ ಸುಳಿಯುವುದಿಲ್ಲ ಅಂತ. ಅದಕ್ಕೇ ಅದನ್ನು ಕೊಟ್ಟು ಆ ಸಣ್ಣ ಕಾರು ಮಾತ್ರ ಇಟ್ಟುಕೊಳ್ಳುವುದು ಅಂತ.” ನಟೇಶನಿಗೆ ಇದುವರೆಗೆ ಒಂದು ಕಡೆ ಸುಖವಾಗಿ ಜೀವನ ನಡೆಯುವ ಅವಕಾಶ ವಿತ್ತು. ಈಗ ಅದು ಇಲ್ಲವಾಗುವುದು ಎಂದು ನಂಬಿಕೆಯಾಗಿ ಗಾಬರಿಯಾಯಿತು. ಆದರೂ ಕಷ್ಟಪಡುವುದಕ್ಕೆ ಸಿದ್ಧವಾಗಿರುವವರ ಧೈರ್ಯದಿಂದ ಆ ಗಾಬರಿಯನ್ನು ನುಂಗಿಕೊಂಡು ಹೇಳಿದನು: “ಕೊಟ್ಟುಬಿಡಬಹುದು. ಕೇಳಿದವರು ಯಾರು?” “ನಮ್ಮ ಜವಳಿ ಅಂಗಡಿಯವರು. ಅವರು ಒಂದು ಕಂಪನಿ ಮಾಡುವುದರಲ್ಲಿ ಇದ್ದಾರೆ. ಆ ಕಂಪನಿಗೆ ಒಂದು ದೊಡ್ಡ ಕಾರು ಬೇಕು. ಅವರು ನೀನೂ ಬೇಕು ಎನ್ನುತ್ತಾರೆ.” “ಅವರು ಬಹಳ ಜಿಪುಣರು ಸಾರ್. ತಮ್ಮ ಹತ್ತಿರ ಇದ್ದು ಅಲ್ಲಿಗೆ ಹೋಗುವುದು ಸರಿಯಲ್ಲ.” “ಒಂದು ವೇಳೆ ಕಾರು ನಮ್ಮದೇ ಆಗಿ, ನೀನು ನಮ್ಮ ಸರ್ವಿಸ್ಸಿಗೇ ಬರುವು ದಾದರೆ?” “ಹಾಗಂದರೆ?” “ನಾನೇ ಛೇರ್‌ಮನ್ ಆಗಬಹುದು.” “ಪೇ ಸಾರ್?” “ಭರ್ತಿ ಕೊಟ್ಟು ೨೫ ಡಿಯರ್‌ನೆಸ್‌ ಅಲೋಯನ್ಸ್ ಕೊಟ್ಟರೆ?” “ಬೋನಸ್, ಪ್ರಾವಿಡೆಂಟ್ ಫಂಡ್ ಉಂಟಲ್ಲ ಸಾರ್?” “ಬೋನಸ್ ಉಂಟು, ಫಂಡು ಎರಡು ದಿವಸ ಆದಮೇಲೆ.” “ತಾವೇ ಇದ್ದರೆ ಆಗಬಹುದು ಸಾರ್. ಆದರೂ ಈಗ ಪ್ರಾವಿಡೆಂಟ್ ಫಂಡ್ ಇಲ್ಲದಿದ್ದರೆ ಎಲ್ಲರೂ ಬೈತಾರೆ.” “ಇರಲಿ, ಡಿವಿಡೆಂಟ್ ಕೊಟ್ಟಮೇಲೆ ಕೊಡಿಸೋಣ. “ಸರಿ ಸಾರ್.” ಪ್ರಾಣೇಶ್ ನೂರು ರೂಪಾಯಿ ನೋಟು ಒಂದು ತರಿಸಿ ಕೊಟ್ಟು ನಟೇಶನನ್ನು ಕಳುಹಿಸಿಕೊಟ್ಟನು. ಅವನೂ ಸಂತೋಷವಾಗಿ ಹೋದನು. ದಾರಿಯಲ್ಲಿ ಅವನಿಗೆ ಹೊಂಗನಸು, “ತಾನು ಕಂಪೆನಿ ಛೇರ್‌ಮನ್ ಡ್ರೈವರ್ ಆದರೆ, ಅಲ್ಲಿ ಸಣ್ಣಗೆ ಒಂದು ಲೇಬರ್ ಯೂನಿಯನ್ ಹುಟ್ಟಿಹಾಕುವುದು. ಸೆಕ್ರೆಟರಿ, ವೈಸ್-ಪ್ರೆಸಿಡೆಂಟ್, ಪ್ರೆಸಿಡೆಂಟ್ ಆಗುವುದು. ಅಲ್ಲಿಂದ ಮುಂದೆ ಸ್ಟೇಟ್ ಲೇಬರ್ ಯೂನಿಯನ್ ಪ್ರೆಸಿಡೆಂಟ್, ಎಲೆಕ್ಷನ್, ಪಾರ್ಲಿಮೆಂಟ್, ಮಿನಿಸ್ಟಿ, ಈಗಿನ ಕಾಲದಲ್ಲೇನು, ಯಾರು ಬೇಕಾದರೂ ಮಿನಿಸ್ಟ‌ ಆಗಬಹುದು. ತನ್ನ ಮಾತು ಕೇಳೋರು ಹತ್ತು ಜನ, ಆ ಹತ್ತು ಜನ ಎಲೆಕ್ಷನ್‌ನಲ್ಲಿ ಗೆಲ್ಲೋರು ಆಗಬೇಕು. ಇರಲಿ, ಇರಲಿ. ಪ್ರೆಸಿಡೆಂಟ್

ನಟೇಶ್ ಆದಮೇಲೆ ಮಿನಿಸ್ಟ್ರಿ ಛಾನ್ಸ್-ಇರಲಿ, ಇರಲಿ’ ಎಂದುಕೊಳ್ಳುತ್ತಾ ದಾರಿಯಲ್ಲಿ ಒಂದು ಸೀರೆ, ರವಕೆ ಹಣ ತೆಗೆದುಕೊಂಡು ಮನೆಗೆ ಹೋದನು. ಅವನಿಗೆ ತನ್ನ ಮುಂದಿನ ಕನಸು ಕಾಣುವಾಗ ಪಕ್ಕದಿಂದ ಇನ್ನೊಂದು ಯೋಚನೆ ಅಡ್ಡಬರುತ್ತಿತ್ತು. “ದೊಡ್ಡರಾಯರು ಬದುಕಿದ್ದರೆ ಆಗಲೂ ಆಗಬೇಕಾದ್ದೆಲ್ಲ ಆಗುತ್ತಲೇ ಇತ್ತು, ಚಿಕ್ಕರಾಯರ ಬದಲು ದೊಡ್ಡರಾಯರೇ ಛೇರ್‌ಮನ್‌ ಆಗುತ್ತಿದ್ದರು. ಆಗ, ಅಯ್ಯೋ, ಆ ರೀತಿಯೇ ಬೇರೆ ! ಆ ಮಹಾರಾಯ ಇದ್ದಿದ್ದರೆ, ನಟೇಶ್ ಬೇಕು ಎಂದದ್ದು ಯಾವುದು ಇಲ್ಲದೆ ಹೋಗುತ್ತಿತ್ತು? ಈ ಸೂಟ್ ತಾನೇ ನಾನು ಹೊಲಿಸುವುದಾಗುತ್ತಿತ್ತೆ? ಪುಣ್ಯಾತ್ಮ ತಾನು ಸೂಟು ಹೊಲಿಸುವಾಗ, ಯೂನಿಫಾರಂ ಕೇಳಿದರೆ, ಸೂಟೇ ಹೊಲಿಸಿಕೊಟ್ಟ!’ ಎಂದು ಅಳಿದ ಯಜಮಾನನ ಚಿಂತೆ ಬಂದು ಕಣ್ಣು ಒಂದೆರಡು ಸಲ ಒದ್ದೆಯಾಗಿತ್ತು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್