ಮೇರಿಯು ಈ ದಿನ ಮನೆಬಿಟ್ಟು ಹೊರಗೇ ಹೋಗಿಲ್ಲ. ಮನೆಯಲ್ಲೂ ತನ್ನ ರೂಮು ಹೊರಗೆ ಹೋಗಿಲ್ಲ. ಮನೆಯ ಮುಂದೆ ಸುತ್ತಲೂ ಒಂದು ಸಣ್ಣ ಬಿಟ್ಟು ಕಾಂಪೌಂಡು, ಅದರ ತುಂಬಾ ಹೂವಿನ ಗಿಡಗಳು. ಮನೆಗೆ ಎರಡು ಗೇಟುಗಳು. ಒಂದು ಸಣ್ಣ ಗೇಟು. ಇನ್ನೊಂದು ಕಾರು ಬರುವುದಕ್ಕೆ ಅನುಕೂಲವಾದ ಭಾರಿಯ ಗೇಟು. ಮನೆಯ ಮುಂದೆ ಒಂದು ಬೋರ್ಡ್ ಮಿಸ್. ಜೆ. ಮೇರಿ, ಕ್ವಾಲಿಫೈಡ್ ಮಿಡ್ ವೈಫ್, ಎಂದು ಅದರಲ್ಲಿ ಒಂದು ಬರೆಹ. ಅದರ ಮಗ್ಗುಲಲ್ಲಿ ಇನ್ನೊಂದು ಬೋರ್ಡ್, ಅದರಲ್ಲಿ ‘ಪೇಯಿಂಗ್ ಗೆಸ್ಟ್ಸ್ ರಿಸೀವ್‌ಡ್’ ಎಂದು ಬರೆಹ, ಮನೆಯ ಮುಂದೆ ಒಂದು ಸಣ್ಣ ಕೆರೆ. ಅಲ್ಲಿ ತಾವರೆಗಿಡ, ಮೀನು, ಬೆಳೆಸಬೇಕು ಎಂದು ಮೇರಿಯ ಆಸೆ. ಆದರೆ ಕಾರ್ಪೊರೇಷನ್ ಅದಕ್ಕೆ ಒಪ್ಪಲಿಲ್ಲ. ಮೇರಿ ಕ್ವಾಲಿಫೈಡ್ ಮಿಡ್ ವೈಫ್ ಆಗಿದ್ದರೂ ಅವಳು ಹೆರಿಗೆಗೆ ಯಾವಾಗಲೂ ಹೋಗಿಲ್ಲ, ಸಂಬಂಧಪಟ್ಟ ಆಫೀಸರ್ ಕೇಳಿದರೆ, ನನ್ನನ್ನು ಯಾರೂ ಕರೆಯಲಿಲ್ಲ ಎನ್ನುವಳು. ಇತರರು ಬಂದರೆ, ನನ್ನ ಹಸಗುಣ ಸರಿಯಿಲ್ಲ ಎನ್ನುವಳು. ಹಾಗೆಯೇ ಪೇಯಿಂಗ್ ಗೆಸ್ಟ್ ಬಂದರೆ, “ಸಾರಿ, ನೋ ವೇಕನ್‌ಸಿ’ ಎನ್ನುವಳು. ಆದರೂ ಅವಳ ಗ್ಯಾರೆಜ್‌ನಲ್ಲಿ ಯಾವುದಾದರೂ ಒಂದು ಕಾರು ಇದ್ದೇ ಇರುವುದು. ಅವಳು ಅಡಿಗೆ ಮಾಡಿಕೊಳ್ಳುತ್ತಿರಲಿಲ್ಲ. ಒಂದು ಫರ್ಲಾಂಗ್ ದೂರದಲ್ಲಿ ಒಂದು ಮನೆ. ಅಲ್ಲಿ ಒಬ್ಬಳು ಮಲೆಯಾಳದ ಕಡೆಯ ಹೆಂಗುಸು. ಅವಳಿಗೆ ಮಕ್ಕಳಿಲ್ಲ ಮರಿಯಿಲ್ಲ. ಅವಳು ಇವಳಿಗೆ ಸ್ಪೂಯರ್ಡ್, ಬಟ್ಲರ್, ದೋಭಿ, ಎಲ್ಲಾ! ಆದರೆ, ಅವಳು ಮನೆಗೆ ಬರುವುದು ದಿನಕ್ಕೆ ಎರಡು ಸಲ. ಬೆಳಿಗ್ಗೆ ಹತ್ತೂವರೆಗೆ ಸರಿಯಾಗಿ ಒಂದು ಊಟ ತಂದಿಡುವಳು. ಸಂಜೆ ಏಳೂವರೆಗೆ ಒಂದು ಊಟ ತಂದಿಡುವಳು.
ಮೇರಿಗೆ ಇನ್ನೇನಾದರೂ ಹೆಚ್ಚಿಗೆ ಊಟ ಬೇಕಾದರೆ, ಅಲ್ಲಿ ಚೀಟಿ ಬರೆದಿಟ್ಟಿರುವಳು. ತಿಂಗಳ ಕೊನೆಯಲ್ಲಿ ಬಿಲ್ ಬರುವುದು. ಅಲ್ಲಿಯೇ ಆ ಸುತ್ತಮುತ್ತಲಿನಲ್ಲಿ ಒಂದು ಕೋ ಆಪರೇಟಿವ್ ಸ್ಟೋರ್ಸ್. ಅಲ್ಲಿ ಮೀನು, ಮೊಟ್ಟೆ ಮೊದಲುಗೊಂಡು ಸಾಸುವೆ, ಕೊತ್ತಂಬರಿವರೆಗೆ, ನ್ಯಾಪ್‌ಕಿನ್ ಇಂದ ಹಿಡಿದು ಜಾರ್ಜೆಟ್ ಸೀರೆವರೆಗೆ ಬೇಕಾದ್ದೆಲ್ಲ ಸಿಕ್ಕುವುದು. ಅಲ್ಲಿ ಆ ಹೆಂಗುಸು ಅವಳನ್ನು ಎಲ್ಲರೂ ಕುಟ್ಟಿ ಎನ್ನುವರು ಮೇರಿಯ ಲೆಕ್ಕದಲ್ಲಿ ೬೦ ರೂ. ವರೆಗೆ ಬೇಕಾದ ಸಾಮಾನು ತೆಗೆದುಕೊಳ್ಳಬಹುದು. ಅಲ್ಲಿಂದಾಚೆಗೆ ಬೇಕಾದರೆ ಮೇರಿಯು ಕ್ಯಾಷ್ ಕೊಡುವಳು. ಇದು ಇಬ್ಬರಿಗೂ ಸುಖವಾಗಿತ್ತು. ಸುಮಾರು ನಾಲ್ಕು ಗಂಟೆ ಆಗಿದೆ. ಇನ್ನೂ ಮೇರಿ ಊಟ ಮಾಡಿಲ್ಲ ಬಾಗಿಲು ಹಾಕಿದೆ. ಮಂಚದ ಮೇಲೆ ಬಿದ್ದುಕೊಂಡಿದ್ದಾಳೆ. ಅತ್ತತ್ತು ಕಣ್ಣು ಕೆಂಪಗಾಗಿ ಊದಿ ಕೊಂಡಿದೆ. ಒಂದು ಸೇಬಿನ ಹಣ್ಣು ತೆಗೆದುಕೊಂಡಿದ್ದಾಳೆ. ಒರೆದು ಸಿಪ್ಪೆ ತೆಗೆದು ಕೊಂಚ ತಿಂದಿದ್ದಾಳೆ. ಉಳಿದದ್ದು ಹಾಗೆಯೇ ಅಲ್ಲಿಯೇ ಮಗ್ಗುಲಿನ ಟೀ ಪಾಯ್ ಮೇಲೆ ಒಂದು ಸಾಸರ್‌ನಲ್ಲಿ ಬಿದ್ದಿದೆ. ಸ್ನಾನವಿಲ್ಲ ; ಮಡಿಯಿಲ್ಲ; ಏನೋ ದುಃಖಕ್ಕೆ ಸಿಕ್ಕಿ ಒದ್ದಾಡುವಳಂತೆ ಬಿದ್ದಿದ್ದಾಳೆ. ಫೋನ್ ಬಂತು. ಅವಳು ಹಾಸುಗೆಯನ್ನು ಬಿಟ್ಟು ಏಳಲಿಲ್ಲ. ಒಂದಷ್ಟು ಹೊತ್ತು ಅದೂ ಕೂಗಿ ಕೂಗಿ ಸುಮ್ಮನಾಯಿತು. ನಡುಮನೆಯಲ್ಲಿದ್ದ ಗಡಿಯಾರ ಒಡತಿಗೆ ಆಯಾಸವಾಯಿತು ಎಂಬ ಭೀತಿ ಯಿಂದಲೋ ಎಂಬಂತೆ ಮೆತ್ತಗೆ ಮೃದುವಾಗಿ ಐದು ಗಂಟೆ ಹೊಡೆಯಿತು. ಅವಳು ಇನ್ನೂ ಎದ್ದಿಲ್ಲ. ಸುಮಾರು ಐದೂವರೆಯಾಯಿತು. ಇನ್ನೊಂದು ಸಲ ಫೋನ್ ಬಂತು. ಎಲ್ಲೋ ಅಡ್ಡಜ್ಞಾನದಲ್ಲಿ ಎದ್ದು ಹೋಗಿ ಫೋನ್ ತೆಗೆದುಕೊಂಡಳು. ಪ್ರಾಣೇಶನ ಫೋನ್. “ಎಲ್ಲಿ ಹೋಗಿದ್ದೆ?’ “ಇಲ್ಲೇ ಬಿದ್ದುಕೊಂಡಿದ್ದೆ’ “ಮತ್ತೆ ಫೋನ್‌ಗೆ ರೆಸ್ಪಾನ್‌ಸೇ ಇರಲಿಲ್ಲ.” “ಹೌದು” “ಇದೇನು ಕೈಯಿಂಗ್?? “ಹೌದು” “ಸೋ ಯು ಮಸ್ಟ್ ಹ್ಯಾವ್ ಕಂಪೆನಿ?” ‘ನಾಟ್ ಅನ್‌ವೆಲ್ ಕಂ “ಹಾಫ್ ಅನವರ್. ಮೇರಿಯು ಅದಕ್ಕೆ ಏನು ಹೇಳದೆ ರಿಸೀವರ್ ಕೆಳಗಿಟ್ಟು ಬಂದು ಕುಳಿತು ಕೊಂಡಳು. ಬರಬೇಡ ಎಂದು ಫೋನ್ ಮಾಡಿ ಬಿಡಲೇ ಎಂದು ಒಂದು ಮನಸ್ಸು ಬಂದು ಹೋಗಲಿ, ಎಂದು ಇನ್ನೊಂದು ಮನಸ್ಸು, ಆ ವೇಳೆಗೆ ನಾಯಿ ಬಂತು. ಎಲ್ಲಿಯೋ ಹೋಗಿ ಚೆನ್ನಾಗಿ ಜಗಳವಾಡಿ ಮೈಯೆಲ್ಲ ಗಾಯಮಾಡಿಕೊಂಡು, ರಕ್ತ ಸುರಿಸಿಕೊಂಡು ಮನೆಗೆ ಬಂದಿದೆ. ಮೊದಲು ಅವಳ ಸ್ಥಿತಿಯಲ್ಲಿ ಅದರ ಸ್ಥಿತಿ ಕಣ್ಣಿಗೆ ಬೀಳಲಿಲ್ಲ. ಮತ್ತೆ ಕೈಗೆ ರಕ್ತ ತಗುಲಿ, ನೋಡಿದರೆ ಅದರ ಭಯಂಕರ ಸ್ಥಿತಿ ಕಾಣಿಸಿತು. “ಥ ಪ್ರಾರಬ್ಧವೇ! ನನ್ನ ಮನಸ್ಸು ಹೀಗಾಗಿದೆ. ನಿನ್ನ ಮೈ ಹೀಗಾಗಿದೆ” ಎಂದು ಬಯ್ದುಕೊಂಡು ಅದನ್ನು ತೆಗೆದುಕೊಂಡು ಹೋಗಿ ತೊಳೆದಳು. ತನಗೂ ಬೆಳಗಿಂದ ಸ್ನಾನವಿಲ್ಲದ್ದು ನೆನಪಾಗಿ ತಾನೂ ಸ್ನಾನ ಮಾಡಿದಳು. ಮೈಯಿನ ಕೊಳೆ ಹೋಗಿ ಮನಸ್ಸಿಗೂ ಕೊಂಚ ಮೋಡ ಕಳೆದಂತಾಯಿತು. ಕೆದರಿದ ತಲೆಯನ್ನು ಹಾಗೆಯೇ ಅಷ್ಟು ರಿಪೇರಿ ಮಾಡಿ, ಊದಿದ್ದ ಕಣ್ಣಿಗೆ ಅಷ್ಟು ತಣ್ಣೀರು ತಳೆದು ಒಂದು ಮಡಿಸೀರೆ ಉಟ್ಟುಕೊಂಡು ಬಂದು ಈಜಿಛೇರ್ ಮೇಲೆ ಬಿದ್ದುಕೊಂಡಳು. ಇನ್ನು ಒಂದು ಗಳಿಗೆಯೊಳಗಾಗಿ ಕಾಂಪೌಂಡಿನೊಳಕ್ಕೆ ಸ್ಕೂಟರ್ ಒಂದು ಬಂದದ್ದು ತಿಳಿಯಿತು. ಇನ್ನೊಂದು ಗಳಿಗೆಯೊಳಗಾಗಿ ಪ್ರಾಣೇಶನು ಬಂದು ಎದುರು ನಿಂತನು. ಅವನು ಆ ಚಿಕ್ಕ ಮನೆಯೊಳಕ್ಕೆ ಬಂದುದು ಅವಳಿಗೆ ಸರಿಬೀಳಲಿಲ್ಲ. “ಇಲ್ಲಿಗೇಕೋ ಬಂದೆ? ನಾನೆ ನಿನ್ನ ರೂಮಿಗೆ ಬರುತ್ತಿದ್ದೆ’ ಎಂದಳು. ಅವಳ ಗದರಿಕೆಗೆ ಹೆದರದೆ ಒಂದು ಕುರ್ಚಿ ಎಳೆದುಕೊಂಡು ಅವಳ ಹತ್ತಿರ ಕೂತುಕೊಂಡು ತಲೆಯನ್ನು ಸವರುತ್ತ “ಯೂ ಲಿಟಲ್ ಫೂಲ್, ನೀನು ಯಾರನ್ನು ಕೇಳಿ ಉಪವಾಸ ಮಾಡಿದೀಯೆ?” ಎಂದು ಕೇಳಿದ. “ನಿನಗೆ ಯಾರು ಹೇಳಿದರು ನಾನು ಉಪವಾಸ ಮಾಡಿದೆ ಅಂತ?” “ಅಲ್ಲಿ ನೋಡು ಹಣ್ಣು ಕೂಡ ಹಾಗೇ ನಿಂತಿದೆ.” “ಅದು ಉಪವಾಸದ ಗುರುತೋ?” “ನಿನ್ನ ಮೊಕ ಕೇಳು. ಗುಳಿ ಬಿದ್ದ ಕಣ್ಣೂ ಕೇಳು. ಒಣಗಿರೋ ತುಟಿ ಕೇಳು. ಅಳೂ ಕೇಳು. ಸಾಕ್ಷಿ ಸಾಕೊ’ ಒಳಗೆ ಕೂತು ಇಣಿಕಿ ನೋಡುತಿರೋ “ಲೋ, ಪನ್ನು, ನಾನು ಬದುಕಿರಲಾರೆ ಕಣೋ’ “ಏನು ಮತ್ತೆ ಸುರುವಾಯಿತೋ?” “ಅಗೋ ನೋಡು’ ಎಂದು ಮಂಚದ ಮೇಲೆ ಇಟ್ಟಿದ್ದ ದೊಡ್ಡ ಫೋಟೋ ಒಂದು ತೋರಿಸಿ ಮೊಕ ಮುಚ್ಚಿಕೊಂಡು ಅತ್ತಳು. ಫೋಟೋ ರಮೇಶನದು. ಅದರ ಮಗ್ಗುಲಲ್ಲಿಯೇ ಒಂದು ಇನ್‌ಸ್ಕೂ ಕವರ್ ಬಿದ್ದಿದೆ. ಅದನ್ನೂ ತೆಗೆದು ನೋಡದೆಯೇ ಅದು ಇನ್‌ಡ್ಯೂರೆನ್ ಆಫೀಸಿ ನಿಂದ ಬಂದಿರುವ ಚೆಕ್ ಎನ್ನುವುದು ಅವನಿಗೆ ತಿಳಿಯಿತು. ಆ ಫೋಟೋ ನೋಡಿ ಅವನಿಗೂ ಕೊಂಚ ಮನಸ್ಸು ಕಲಕಿತು. ಹಾಗೆಯೇ ಅಂದಿನ ಬೆಳಿಗ್ಗೆ ಮೋಹನ ಯೊಡನೆ ಮಾತನಾಡಿದ್ದುದು ನೆನಪಾಗಿ, ಅವಳು ಕೈ ಹಿಡಿದ ಹೆಂಡತಿ, ಇವಳು ಆಗಂತುಕವಾಗಿ ಸಿಕ್ಕಿದ ಸೂಳೆ, ಇಬ್ಬರಿಗೂ ಇಷ್ಟು ವ್ಯತ್ಯಾಸವೇ? ಎನ್ನಿಸಿತು. ಒಬ್ಬಳು ಅತ್ತತ್ತು ಸಾಯುತ್ತಿದ್ದಾಳೆ. ಇನ್ನೊಬ್ಬಳು ಅಳುವನ್ನು ಮುಗಿಸಿ ಹೊಸ ಜೀವನದ ಹೊಸಲ ಬಳಿ ಬಂದಿದ್ದಾಳೆ. ‘ಹೆಣ್ಣಿನ ಮನಸ್ಸು ನಮಗೆ ಗೊತ್ತೇನು? ಏನು ಮಾಡಿದರೆ ಅದನ್ನು ಹಿಡಿಯಬಹುದು ತಿಳಿಯುವುದೇನು?’ ಎಂದು ಯೋಚನೆ ಅಲೆಅಲೆಯಾಗಿ ಬಂತು. ಆದರೆ ಪ್ರಾಣೇಶನೂ ಘಾಟಿ. ಕಳೆದವನ ಹಂಬಲಿನಲ್ಲಿ ಕೊರಗುತ್ತ ಬಂದವನನ್ನು ನೂಕುವುದು ಸುಲಭವಲ್ಲ ಎನ್ನುವುದನ್ನು ಬಲ್ಲ. ಅಲ್ಲದೆ, ಆಟಕ್ಕೆ ಬಂದು ಅಳುವನ್ನು ಕಾಣುವುದು ತನಗೆ ಇಷ್ಟವಿಲ್ಲದಿದ್ದರೂ, ತನ್ನ ಮಿತ್ರನಿಗಾಗಿ ಸುರಿಯುತ್ತಿರುವ ಕಂಬನಿ ಗಳಿಂದ ತಾನೂ ಅವನಿಗೆ ಅಷ್ಟು ಜಲಾಂಜಲಿ ಕೊಟ್ಟು ಋಣ ತೀರಿಸಿಕೊಳ್ಳಬೇಕು ಎಂದಿರುವನಂತೆ, ಅಷ್ಟು ಹೊತ್ತು ಸುಮ್ಮನಿದ್ದ. ಅನಂತರ ಮೆತ್ತಗೆದ್ದು ಹೋಗಿ, ತಣ್ಣೀರಿನಲ್ಲಿ ಅದ್ದಿದ ಟವಲು ತಂದು, ಅವಳ ಕೈ ಬಿಡಿಸಿ, ಮುಖವನ್ನೆಲ್ಲಾ ತೊಳೆದು, ಒಂದು ಸಲ ಸುಖವಾಗಿ ಕೆನ್ನೆಗೆ ಕೆನ್ನೆ ಇಟ್ಟು, “ನಿನ್ನ ರಾಜಾ ಹೋದ, ನಿಜ. ನಿನ್ನ ಲುಚ್ಚಾನೂ ನಿನಗಾಗಿ ಸಾಯಬೇಕೇನು? ಹೋದವನಿಗಾಗಿ ಅಳುತ್ತ ಇದ್ದವನನ್ನೂ ಸಾಯಿಸುತ್ತೀಯೇನು? ನನಗೆ ಗೊತ್ತು ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಇನ್‌ಪ್ಯೂರೆನ್‌ಸ್ ಚೆಕ್ ಬಂತು. ಸರಿ. ಅಳು ಷುರುವಾಯಿತು. ಸಂಜೆಗೆ ಫೋಟೋ ಬಂತು. ಜಡಿ ಮಳೆ ಹೋಗಿ ಕುಂಭದ್ರೋಣ ಕರೆಯಿತು. ಇನ್ನು ಒಂದು ಗಳಿಗೆ ಬೆಳಕು ಕಾಣಲಿ,” ಎಂದು ಇನ್ನೂ ಏನೇನೋ ಮೋಹಕವಾದ ಮಾತುಗಳನ್ನು ಹೇಳಿ, ಅವಳನ್ನು ತಬ್ಬಿಕೊಂಡು, “ನೋಡೋ, ನಿನಗೊಂದು ಒಳ್ಳೆಯ ಸುದ್ದಿ ಹೇಳಬೇಕು ಅಂತ ಬಂದರೆ, ನೀನು ಹೀಗೆ ಪಾಳು ಭಾವಿಯಲ್ಲಿ ಬಿದ್ದುಹೋಗಿದೀಯಲ್ಲೋ?” ಎಂದು ಕಿವಿಯಲ್ಲಿ ಪಿಸುಪಿಸು ನುಡಿದನು. “ಇನ್ನು ಈ ಜನ್ಮದಲ್ಲೇ ಒಳ್ಳೆಯ ಸುದ್ದಿ ಕೇಳುವಂತಿಲ್ಲ.” “ನಿಜವಾಗಿ ಕಣೋ.” “ಏನು?” “ನಿಮ್ಮಮ್ಮನ ಅಡ್ರೆಸ್ಸು ಗೊತ್ತಾಯಿತು.” ಆ ಹೃದಯ ವೇದನೆಯಲ್ಲೂ, ಅಂಗಾಂಗಗಳನ್ನೆಲ್ಲ ತುಂಬಿಹೋಗಿರುವ ಆ ಅಳುವಿನ ಒತ್ತಡದಲ್ಲೂ, ಅವಳ ಮುಖ ಅವನ ಕಡೆ ತಿರುಗಿತು. ಸೊಕ್ಕಿದ್ದರೂ, ಸೊರಗಿದ್ದರೂ, ಕೊಂಚನಾದರೂ ತಿಳಿಯಾದ ದನಿಯಿಂದ “ನಿಜವಾಗಿ?” ಎಂದಳು. “ನಿಜವಾದರೆ ಏನು ಕೊಡುತ್ತೀ?” “ನೀನು ಏನು ಹೇಳಿದರೆ ಅದು ಮಾಡುತ್ತೀನಿ” “ಈ ಅಳು ಬಿಡುತ್ತೀಯೋ?” “ಅದು ಸಾಧ್ಯವಿಲ್ಲ ಅದು ತಾನಾಗಿ ಬಿಟ್ಟರೆ ನಾನು ಹೇಳಲಾರೆ. ನಾನಾಗಿ ಬಿಡುವುದಿಲ್ಲ. ಆ ರಾಜನ್ನ ನೆನಸಿಕೊಂಡು ಅಳುವುದರಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿ ಕೊಳ್ಳುವುದಕ್ಕಿಂತ ಹೆಚ್ಚಿನ ಸುಖವಿದೆ. ಅದು ನಾನು ಬಿಡುವುದಿಲ್ಲ.” “ಹೋಗೋ, ಮಂಕೇ, ಮೂರ್ತಿಗೆ ಮೂರ್ತಿ ಇಟ್ಟು ಮಂಗಳಾರತಿ ಮಾಡಿ ಪ್ರಸಾದ ಹೊಡೆಯೋ ಅಂತ ನೀನೇ ನನಗೆ ಹೇಳಿದ್ದೆ. ನೆನಪಿದೆಯೋ? ಪಚ್ಚೆ ಸತ್ತಾಗ ಏನಂದೆ? ಅವಳು ನಿನಗೆ ಪಂಚಪ್ರಾಣವಾಗಿದ್ದಳು; ನಾನು ನಿನಗೆ ದಶಪ್ರಾಣವಾಗಿರುತೀನಿ ಬಿಡೋ ಅಂತ ನನ್ನ ಸಂತೈಸಿದ್ದು ಮರೆತೆ ಅಲ್ಲವೆ?” “ಲೋ ಚಂಡಿಸಬೇಡ ಕಣೋ! ಆಗ, ಅದು ನಿನ್ನ ದುಃಖ, ಈಗ ಇದು ನನ್ನ ದುಃಖ.” “ಇರಲಿ, ನುಂಗು. ಇಕೋ ಇದೇ ಪ್ರಮಾಣ. ರಮೇಶ್ ನಿನ್ನಲ್ಲಿದ್ದ ಹಾಗೇ, ಅದಕ್ಕಿಂತ ಹೆಚ್ಚಾಗಿ ನಾನು ಇರದಿದ್ದರೆ ಕೇಳು.” “ಆ ಪ್ರಾರಬ್ಧ ಗೌಡನೂ ಅದೇ ಮಾತು ಹೇಳಿ ಹೋದ. ನೀನೂ ಅದೇ ಹೇಳತಿದ್ದೀಯ. ಆದರೂ ಈ ಕಣ್ಣು, ನಿನ್ನ ನೋಡಿದಾಗ ಇವನು ರಮೇಶನಲ್ಲ ಅನ್ನುತ್ತೆ ಈ ಕಿವಿ ನಿನ್ನ ಸದ್ದು ಕೇಳಿದಾಗ ಇದು ರಮೇಶನ ಸದ್ದಲ್ಲ ಅನ್ನುತ್ತೆ ಏನು ಮಾಡಲಿ ಹೇಳು.” “ಇನ್ನೂ ಅಷ್ಟು ದೂರ ಹೇಳು. ಅಲ್ಲಿಗೇ ಏಕೆ ನಿಲ್ಲಿಸುತ್ತೀಯೆ?” “ಇದಕ್ಕೆ ನಿನ್ನ ಲುಚ್ಚಾ ಅನ್ನೋದು, ಹಲ್ಕಾ ಅನ್ನೋದು.” ಇನ್ನೂ ಅಷ್ಟು ಮಾತಾಯಿತು. ಕೊನೆಗೆ ಮೇರಿ ಅವನೊಡನೆ ಅವನ ರೂಮಿಗೆ ಹೋದಳು. ಅವಳ ದೃಷ್ಟಿಯಲ್ಲಿ ಆ ರೂಮು ಇನ್ನು ಮೇಲೆ ದೇವರ ಮನೆ. ಅವಳು ಚರ್ಚಿಗೆ ಹೋಗಿ ಹದಿನೈದು ವರ್ಷವಾಗಿತ್ತು. ಈಗ ಚರ್ಚ್ ಮನೆಗೆ ಬಂದಿದೆ. ಲೋಕದ ಪಾಪಕ್ಕಾಗಿ ಬಲಿಯಾದ ಜೀಸಸ್ ಅವಳಿಗೆ ಅರ್ಥವಾಗಿರಲಿಲ್ಲ. ಈಗ ರಮೇಶನಿಗಾಗಿ ತನ್ನ ಜೀವನದೊಂದು ಭಾಗ ಬಲಿಯಾಗಿ, ಮೀಸಲು ಮಾಡಲು ಮೇರಿ ಸಿದ್ಧಳಾಗಿದ್ದಾಳೆ. ತಾಯಿಯ ಸುದ್ದಿ ಕೇಳಿ ಅವಳಿಗೆ ಸಂತೋಷವಾಯಿತು. ಅವಳಿಗೆ ಸಂತೋಷ ವಾದರೆ, ಸಾಕಿದ ನಾಯಿ ಒಲಿದ ತನ್ನ ಯಜಮಾನನ ಬಳಿ ಆಡುವ ಹಾಗೆ ಆಡಿ ಅವಳು ಗೋಳು ಹುಯ್ದುಕೊಳ್ಳಬೇಕು. ಆದರೆ, ಅವಳ ಸಂತೋಷ ಇಂದು ಬೇಸಗೆಯ ನದಿಯಾಗಿದೆ. ಏನೋ ಅಲ್ಲಲ್ಲಿ ಬೇಕೇಂದವರು ಮರಳು ತೋಡಿ ಹಾಕಿದರೆ ಅದು ಅಷ್ಟು ಅಗಲ ತಿಳಿನೀರು ಸಿಕ್ಕಿ ಸ್ನಾನಾದಿಗಳಿಗೆ ಅನುಕೂಲವಾಗುವಂತೆ ಅವಳ ಯಾಗಿದೆ. ಪ್ರಾಣೇಶನಿಗೆ ಅದು ತಿಳಿಯದೆ ಇಲ್ಲ. ಆದರೆ ಅವನೂ ಅದಕ್ಕೆ ‘a. ಸಿದ್ಧನಾಗಿದ್ದಾನೆ. ಮೇರಿಯ ತಾಯಿಯ ಸುದ್ದಿಯನ್ನು ಕೇಳಿದಳು. ಅವಳು ಅನಂತರ ಇರುವುದನ್ನು ತಿಳಿದು ತಾನೂ ಅಲ್ಲಿಗೆ ಹೋಗಿ ಬರಬೇಕು ಎಂದು Apple Ne “ನಿನ್ನ ಜೊತೆಗೆ?” “ನೀನು ಬಾ.” “ನಾನು ಬರಬಾರದು.” “ಯಾಕೆ?” “ನಿಮ್ಮ ಅಮ್ಮನಿಗೆ ನನ್ನ ಗುರುತು ಇde.
“ಹಾಗಂದರೆ?”
“ನಿಮ್ಮ ಅಮ್ಮ ನನಗೆ ಅಕ್ಕನ ವರಸೆ.” ಮೇರಿಗೆ ಅದನ್ನು ಕೇಳಿ ಆಶ್ಚರ್ಯವಾಗಿಹೋಯಿತು. ಹಿಂದಿನ ಕಥೆಯೆಲ್ಲ ಹೇಳು ಎಂದು ಬಲವಂತಮಾಡಿದಳು. ಅವನೂ ನಾಜೋಕಾಗಿ ನಿಜವೂ ಇರಬೇಕು ಸುಳ್ಳೋ ಆಗಿರಬೇಕು ಅಂತಹದೊಂದು ಕಥೆಯನ್ನು ಸೃಷ್ಟಿಸಿಕೊಂಡು ಅವಳಿಗೆ ಪ್ರಿಯ ವಾಗುವಂತೆ ಹೇಳಿದನು. “ನಿಮ್ಮ ಅಜ್ಜಿ ಮೈಸೂರಲ್ಲಿ ಇದ್ದಳು. ಅವಳೂ ಹೀಗೇ ಸೊಸೈಟಿ ಸೆಕ್ರೆಟರಿ. ಅದರಲ್ಲಿ ಒಬ್ಬ ಸಿಕ್ಕಿ ಅವಳಿಗೆ ಕೈಕೊಟ್ಟ. ಕೊನೆಗೆ ವಿಷವೂ ಕೊಟ್ಟ. ಸಾಯುವ ಕಾಲದಲ್ಲಿ ಅವಳಿಗೆ ನಮ್ಮ ತಂದೆ ಸೇವೆ ಮಾಡಿದರು. ತನ್ನಲ್ಲಿ ಇದ್ದದ್ದು ಅವರ ಕೈಯಲ್ಲಿ ಇಟ್ಟು ನನ್ನ ಮಗಳಿಗೆ ಕೊಡು ಅಂದಳು. ನಿಮ್ಮ ಅಮ್ಮ ನಿಮ್ಮ ಅಮ್ಮ, ಕೇಳಬೇಕೆ? ಒಂದು ದಿನ ಬೆಳಗಾಗ ಮನೆಗೆ ಬೀಗ ಬಿದ್ದಿತ್ತು. ತಿರುಗಿ ಮಂಗಳೂರಿಂದ ಏನೋ ನನಗೆ ಹಣ ಬೇಕು ಅಂತ ಬರೆದಳು. ಕಳುಹಿಸಿದರೋ ಇಲ್ಲವೋ ನಾನು ಕಾಣೆ. ಅಲ್ಲಿಂದ ಮುಂದೆ ಅವಳ ಸುದ್ದಿ ತಿಳಿಯಲಿಲ್ಲ. ಆಮೇಲೆ ಒಂದು ದಿನ ಹಿಂದಿನ ಕಾಗದ ಪತ್ರ ಹುಡುಕುತ್ತಿರುವಾಗ ನಮ್ಮ ತಂದೆ ಬರೆದಿಟ್ಟಿದ್ದ ಒಂದು ದೂರು ಕಾಗದ ಸಿಕ್ಕಿತು. ಅದರಲ್ಲಿ ಇಂಥವಳು ನನ್ನಲ್ಲಿ ಇಟ್ಟಿದ್ದ ಹಣ ಇಷ್ಟು ಬಂದಿತ್ತು. ಈ ಕಥೆ ನಮ್ಮ ತಾಯಿ ಹೇಳುತ್ತಿದ್ದುದೂ ನೆನೆಪಾಯಿತು. ಆ ಸದ್ಯದಲ್ಲಿಯೇ ರಮೇಶನೂ ತೀರಿಕೊಂಡದ್ದು. ಆಗ ನನಗೂ ನನ್ನ ಸರದಿ ಯಾವಾಗಲೋ ಏನೋ ಅನ್ನಿಸಿ, ನಟೇಶನಿಗೆ ಹೇಳಿ ಹುಡುಕಿ ಬಾ ಅಂತ ಕಳುಹಿಸಿದೆ. ಅವನು ಹೋಗಿ ಪತ್ತೆಮಾಡಿಕೊಂಡು ಬಂದ. “ಅವನಿಗೆ ಪ್ರೆಸೆಂಟ್ ಏನು ಕೊಟ್ಟೆ?” “ಒಂದು ನೂರು ರೂಪಾಯಿ ಕೊಟ್ಟೆ’ “ಇನ್ನಷ್ಟು ಕೊಟ್ಟಿದ್ದರೆ ಏನು ನಿಮ್ಮಪ್ಪನ ಗಂಟು ಹೋಗುತ್ತಿದ್ದುದು?” “ಈಗ ತಾನೇ ಏನಾದ್ದು? ಎಷ್ಟು ಕೊಡಬೇಕು ಹೇಳು. ಕೊಡೋಣ.” “ಹೂ, ನೀನು ಬಹಳ ಜಿಪುಣ, ನೀನು ನೂರು ಕೊಟ್ಟಿದ್ದು ಒಂದು ಸಾವಿರ. ಸಾಕು ನಾನು ಬೇರೆ ಕೊಡಿಸ್ತೇನೆ.” “ನಾನು ಜಿಪುಣ. ನೀನು ಬಹು ಧಾರಾಳಿ. ಕೊಡಿಸ್ತೀಯೆ. ಇನ್ನು ಆ ಗೌಡನಿಗೆ ಗಂಟುಬಿದ್ದು ಕಕ್ಕಸೀಯ.” “ಕೊಡಲೇಳೋ, ಆ ಸೂಳೇಮಗನಿಗೆ ಮಕ್ಕಳಿಲ್ಲ ಮರಿಯಿಲ್ಲ. ನಟೇಶನಿಗೆ ಮನೆ ತುಂಬಾ ಮಕ್ಕಳು. ಕೊಡಲಿ, ಒಂದು ಸಾವಿರ ಕೊಡಿಸ್ತೀನಿ ನೋಡು. ಅದಿರಲಿ, ಅವಳು ನಮ್ಮ ಅಮ್ಮ ಅಂತ ತಿಳಿದದ್ದು ಹೇಗೆ?” “ಇದೋ ತಮ್ಮ ಗುಲೇಬಕಾವಲಿ ಮುದ್ರೆ.” “ಅದು ಅವಳಿಗೂ ಗೊತ್ತಿದೆಯೇನು?” “ಅವಳು ನೀನು ಇಲ್ಲಿರುವುದು ಕಾಣಳು. ನಟೇಶನಿಗೂ ತಿಳೀದು. ಹೀಗೆ ಒಂದು ಮಗು ಹೆತ್ತು ಅದನ್ನು ಮಿಷನ್ ಅವರಿಗೆ ಕೊಟ್ಟಳಂತೆ. ಆ ಹಾಳು ಮಗು ಹುಟ್ಟು ಹಾದರಗಿತ್ತಿಯಾಗಿ ಯಾವನೋ ಕಟ್ಟಿಕೊಂಡು ಓಡಿಹೋದಳಂತೆ. ಮಿಷನ್ ಅವರೂ ಪ್ರಾರಬ್ಧ ಕಳೆಯಿತು ಎಂದು ಸುಮ್ಮನಾದರಂತೆ. ಅದು ಈಗ ನನಗೆ ಗಂಟು ಬಿದ್ದಿದೆಯಂತೆ. ನಟೇಶ ಎಡಭುಜದ ಮೇಲೆ ಮಚ್ಚೆ ಅಂದ, ಷಾಕ್ ಹೊಡೆದ ಹಾಗಾಯಿತು.” ಮೇರಿಯು ಏನೋ ಯೋಚನೆ ಮಾಡುತ್ತಿದ್ದಳು: “ಲೋ ಲುಚ್ಛ, ಈ ಸೂಳೇಮಗ ರಮೇಶ್‌ಗೆ ನಾನೇಕೆ ಇಷ್ಟು ಬಡಿದುಕೊಳ್ಳುತ್ತೇನೆ ಗೊತ್ತೇನು?” “ಸರಿ. ಹೆಣ್ಣು ಗಂಡಿಗೆ ಬಡಕೊಳ್ಳೋದು ಇನ್ನಾಕೆ? ಗೊತ್ತೇ ಇದೆ.” “ನಿನ್ನ ಹಲ್ಕಾ ಬುದ್ಧಿ ಬಿಡೋದೇ ಇಲ್ಲವಲ್ಲ. ಅದೆಲ್ಲ ಅಲ್ಲ, ಕೇಳು. ನನ್ನ ಮಿಷನ್‌ನಿಂದ ಹಾರಿಸಿಕೊಂಡು ಹೋದನಲ್ಲ ಅವನ ಹಾಗೇ ಇದ್ದ ರಮೇಶ್, ಅದೇ ಕಣ್ಣು, ಅದೇ ಮೂಗು ಅದೇ ಮೊಕ, ಅದೇ ಮೈಭಾವ, ಅವನ ಮಗ್ಗುಲ್ಲಲ್ಲಿದ್ದರೆ ಆ ಹಿಂದಿನ ಮೋಹವೆಲ್ಲ ಮರುಕಳಿಸುತ್ತಿತ್ತು.” “ಅವನಿಗೂ ಹೇಳಿದ್ದೆಯೋ?”
“ಹೇಳದೆ ಇದ್ದರೆ? ಅದಿರಲಿ. ಒಂದು ನೆಮ್ಮದಿಯಾಯಿತು. ಇನ್ನು ಮುಂದೆ ನಾನು ಕ್ರಿಶ್ಚಿಯನ್ ಆಗಿರಬೇಕಾಗಿಲ್ಲ. ಹಿಂದೂ ಆಗಿ ಹೋಗೇನೆ.’ “ಏನು ಆರಸಮಾಜಕ್ಕೆ ಸೇರುತ್ತೀಯೋ?” “ಅದಲ್ಲವೋ? ಲೋಕದವರು ನನ್ನ ಏನಂತಾರೆ? ಪಾಪಿ, ಸೂಳೆ ಮುಂಡೆ, ಅಂತಾರೆ. ನಿಮ್ಮ ಶಾಸ್ತ್ರದ ಪ್ರಕಾರ ನಮ್ಮ ಕುಲದ ಕಸಬು ನಾನು ಮಾಡಿದ ಹಾಗಾಯಿತು. ನಮ್ಮ ಅಮ್ಮ ಸೂಳೆ, ಅವರಮ್ಮ ಸೂಳೆ. ನಾನೂ ಸೂಳೆ, ಬಿಡು ಇನ್ನು ಪಾಪದ ಭೀತಿಯಿಲ್ಲ.” “ಈಗ ಒಂದು ಗಳಿಗೆ ಮುಂಚೆ ವೈರಾಗ್ಯದಲ್ಲಿ ಮುಳುಗಿಹೋಗಿದ್ದೆ. ನಾನೂ ಅದನ್ನು ನಂಬಿ, ಇನ್ನೇನು ಗತಿ ಅಂತಿದ್ದೆ.’ “ಥ, ನಿಮ್ಮ ಗಂಡುಸರ ಬಾಳಿಗೆ ಬೆಂಕಿಹಾಕ, ನಮ್ಮ ನಾಯಿ ಜಾನ್ ನೀನೂ ಎರಡೂ ಒಂದೆ. ಹೆಣ್ಣು ಸಿಕ್ಕಿತು ಅಂದರೆ, ಅದರ ಜಾತಿ ಕೆಡಿಸುವವರೆಗೂ ಬಿಡಿತೀರೇನೋ? ಪ್ರಾರಬ್ಧಗಳು. ಇವೊತ್ತೇನೋ ಇನ್ನು ಮೇಲೆ ಗಂಡಿನ ಮೈ ಕೂಡ ಮುಟ್ಟೋಲ್ಲ ಅಂತ ದೃಢಮಾಡಿದ್ದೆ.” “ಈಗ ಬಲಿ ಒಪ್ಪಿಸಿಕೊಳ್ಳುತ್ತಿದ್ದೀಯೆ?” “ಯಾರೂ ಇಲ್ಲದಿದ್ದರೆ ನನ್ನಂತಹ ಪತಿವ್ರತೆಯೇ ಇಲ್ಲ.
“ನೀನು ಮಹಾ ಪತಿವ್ರತೆ. ನಾನೂ ಕೂಡ ಸಾಕ್ಷಿ ಹೇಳುತ್ತೇನೆ. ಪ್ರಮಾಣ ಮಾಡುತ್ತೇನೆ. ಆದರೆ, ವಿತ್ ಎ ಮಿನಿಮಮ್ ನಂಬರ್ ಆಫ್ ಹಸ್‌ಬೆಂಡ್ಸ್ “ನೀನು ಅಂತೀಯೆ. ನಿನ್ನೆ ರಾತ್ರಿ ಕೂಡ ಊಟ ಮಾಡಲಿಲ್ಲವೋ?” “ಇದ್ದರೂ ಇರಬಹುದು. ನೀನು ಇವೊತ್ತು ಹೆಣ ಇದ್ದ ಹಾಗೆ ಇದ್ದೀಯೆ. ಏಳು. ಹಣ್ಣು ತೆಗೆದುಕೊಂಡು ಬಾ ಒಂದಿಷ್ಟು ತಿನ್ನಿಸಿ ಹೋಗುತ್ತೇನೆ.” “ನೀನೇ ತಂದರೆ ತಿಂತೀನಪ್ಪ’ ಎದುರಿಗಿದ್ದ ಕಪ್ ಬೋರ್ಡಿನಲ್ಲಿ ಅರ್ಧ ಡಜನ್ ಸೇಬಿನ ಹಣ್ಣು ಇತ್ತು ಪ್ರಾಣೇಶನು ಎಲ್ಲಾ ತಂದ. “ಹೆಚ್ಚಿ ಕೊಡಬೇಕೋ?” “ಇನ್ನು ಹೇಗೆ ಕೊಡತೀಯೆ?” ಒಂದು ಹಣ್ಣು ಕಚ್ಚಿದ. ತುಂಡು ತೆಗೆದು ಅವಳ ಬಾಯಿಗಿಟ್ಟ, ಹೀಗೇ ಇಬ್ಬರೂ ಸೇರಿ ಅಷ್ಟು ಹಣ್ಣು ತಿಂದರು. ಹಣ್ಣಿನ ಜೊತೆಗೆ ಒಂದು ಬಿಸ್ಕೆಟ್ ಡಬ್ಬಾ ಮುಗಿಯಿತು. ಅದರ ಜೊತೆಗೆ ಒಂದಿಷ್ಟು ಛಾಂಪೇಯನ್. ಅದಷ್ಟೂ ಆದಮೇಲೆ ತಾನೇ ಎದ್ದು ಸೊಗಸಾದ ಟೀ ಮಾಡಿ ಅವನ ಜೊತೆಯಲ್ಲಿ ತಾನೂ ಕುಡಿದಳು. “ಲೋ, ಲುಚ್ಛಾ, ಹೀಗೇನೇನೋ ನೀನು ಕೇಸು ಗೆಲ್ಲೋದೂ ಕೂಡ?” “ಹಾಗಂದರೆ?’ “ಪ್ರಾಣಬಿಡೋಕು ಸಿದ್ಧವಾಗಿ ಈ ಲೋಕದಿಂದ ಆಚೆಗೆ ಒಂದು ಹೆಜ್ಜೆ ಇಟ್ಟಿದ್ದವ ಳನ್ನ ನಿನಗೆ ಬೇಕಾದ ಹಾಗೆ ಕುಣಿಸಿಬಿಟ್ಟೆ. “ಯೂ ಫೂಲ್, ನೀನು ಬುದ್ಧಿಯಿಲ್ಲದೆ ಫೂಲ್ ಆಗಿದ್ದೆ. ನಾನು ನಿನ್ನ ಫಲರಿ ತೋರಿಸಿದೆ. ನೀನು ನಾರ್ಮಲ್ ಆದೆ.” “ಇಲ್ಲ ಕಣೋ, ನಾನು ರಮೇಶನ್ನ ಮರೆಯೋಲ್ಲ. ನೋಡುತಿರು.” “ಆಯಿತು. ರಮೇಶ್ ರಮೇಶ್ ಅಂತ ನಿಮ್ಮಮ್ಮನ ವಿಚಾರ ಏನು ಮಾಡುತ್ತೀಯೆ?” “ಹೋಗಿಬರುತ್ತೇನೆ.’ “ಜೊತೆಗೆ?” “ನೀವು ಯಾರೂ ಬರೆದಿದ್ದರೆ ನಟೇಶ್ ಕರೆದುಕೊಂಡು ಹೋಗುತ್ತೇನೆ.’ “ಅವನ ಹೆಂಡತಿ ಬಡಕೊಳ್ಳಿ” “ಯಾಕಪ್ಪಾ, ಅವಳಿಗೆ ಗೊತ್ತಿಲ್ಲವೆ ಬಡವರ ಮೊರಾಲಿಟಿ ಯಾವಾಗಲೂ ಸೇಫ್’ ಅಂತ. “ಅದೆಲ್ಲ ಬೇಡ, ಗೌಡನ್ನ ಕರೆದುಕೊಂಡು ಹೋಗು.” “ಸಾಧ್ಯವಾದರೆ ಅವಳನ್ನ ಕರೆದುಕೊಂಡು ಬಂದು ಬಿಡಲೇನು?” “ಅದೇಕೆ?” “ಅವಳಿಗೂ ಈಗ ನಲವತ್ತೈದು ಐವತ್ತು ವರುಷ ಇರಬೇಕು. ಅವಳು ಅಲ್ಲಿ ಯಾಕೆ ಸಾಯಬೇಕು? ಇಲ್ಲಿ ನನ್ನ ಹತ್ತಿರಲೇ ಇರಲಿ, ಏನೋ ದುಡ್ಡುಕಾಸು ಅಂತ ಯೋಚಿಸಬೇಕಾಗಿಲ್ಲ.” “ಅದಕ್ಕೇನು ಯೋಚನೆ. ಎರಡು ಬ್ಯಾಂಕಿದೆ. ಇನ್ನೂ ಒಂದೋ ಬರುತ್ತೆ?” ಎರಡೋ
“ಅದೆಲ್ಲ ಇಲ್ಲಪ್ಪಾ! ನಾನು ನೂಕಿದರೂ ಗೌಡ ಹೋಗೋಲ್ಲ. ನೀನು ಕಳ್ಳ. ನೀನೇನಾರೂ ಹೈಕೋರ್ಟು ಜಡ್ಡಿ ಆದರೆ, ಬರುತೀಯೋ ಇಲ್ಲವೋ ಹೇಳೋಕಾಗೊಲ್ಲ ಇನ್ನು ಮೇಲೆ ನಾನೂ ಹಿಂದಿನ ಹಾಗೆ ಇರೋಲ್ಲ. ನಾನಿನ್ನ ಮೇಲೆ ಸೋಷಿಯಲ್ ಸರ್ವೀಸ್ ಪುರು ಮಾಡುತೀನಿ.” “ಮಾಡು. ನಾನು ನಿನ್ನ ಜೊತೆಗಿರುತೀನಿ. ಆಯಿತು ಯಾವೊತ್ತು ಹೊರಡುತೀಯೆ?” “ಗೌಡ ನಾಳೆನಾಡಿದ್ದರಲ್ಲಿ ಬರಬೇಕು. ಅವನು ಬರಲಿ. ರಾತ್ರಿ ಒಂಭತ್ತು ಗಂಟೆಯಾಗಿತ್ತು ಪ್ರಾಣೇಶ್ ಹೊರಟ. “”ಏಳು ಪುಣ್ಯಾತ್ಮಗ ಊಟಮಾಡು. ನಾನೂ ಆಮೇಲೆ ಹೋಗುತ್ತೇನೆ ಎಂದು ಅವಳನ್ನು ಎಬ್ಬಿಸಿ, ಊಟಮಾಡಿಸಿ ತಾನು ಮನೆಗೆ ಹೋದ. ಮೇರಿ ಅಂದಿನ ರಾತ್ರಿಯೆಲ್ಲ ಏನೋ ಯೋಚನೆಯಲ್ಲಿದ್ದಳು. ಹಿಂದಿನ ರಾತ್ರಿ ಸತ್ತರಮೇಶನ ಯೋಚನೆ ಇಂದು ಬದುಕಿರುವ ತಾಯಿಯನ್ನು ಕಾಣುವ ಯೋಚನೆ. ಮನುಷ್ಯನ ಮನಸ್ಸನ್ನು ಮಾಡಿದ ದೈವ ಹೀಗಿರಲೆಂದೇ ಈ ಮನಸ್ಸನ್ನು ಇಷ್ಟು ಚಪಲವಾಗಿ ಮಾಡಿಟ್ಟಿದ್ದಾನೋ ಏನೋ? ಅಥವಾ ಈ ಮನಸ್ಸು ಎನ್ನುವುದು ಒಂದು ನೀರಿನ ಮೇಲೆ ಇರುವ ಮೂಗಿಲ್ಲದ ದೋಣಿಯ ಹಾಗೆ ಗಾಳಿ ಹೊಡೆದತ್ತ ಹೋಗುವುದೇ ಸ್ವಭಾವವಾಗಿ ಉಳ್ಳುದೋ? ಅಥವಾ ಈ ಮನಸ್ಸು ಎನ್ನುವ ಚಂಡನ್ನು ಯಾರೋ ಆಡುತ್ತಿದ್ದು ಅವರು ಹೊಡೆದಾಗ ಕೆಳಗೆ ಬಿದ್ದು, ಮತ್ತೆ ಚಿಮ್ಮಿ ಮೇಲಕ್ಕೆ ನೆಗೆದು, ಮತ್ತೆ ಏಟು ತಿಂದು ಕೆಳಕ್ಕೆ ಬೀಳುತ್ತಾ ಒದ್ದಾಡುತ್ತಿರುವುದೋ? ಇರಬೇಕು. ಆದರೆ ಮನಸ್ಸನ್ನು ಪುಟ ಚೆಂಡಾಡುವ ವ್ಯಕ್ತಿ ಯಾರೋ ಅದು ತಿಳಿಯದು ಅಷ್ಟೆ; ಇಲ್ಲದಿದ್ದರೆ, ಕೆಲವು ಗಂಟೆಗಳ ಕಾಲದಲ್ಲಿ ಪಾಪ, ಈ ಹೆಣ್ಣಿನ ಮನಸ್ಸು ಇಷ್ಟೊಂದು ವಿಧವಾಗಿ ಹೋಗಬೇಕೆ? ಅವಳಿಗೂ ಅಶ್ಚರ್ಯ! ದುಃಖಸಾಗರದಲ್ಲಿ ಮುಳುಗಿದ್ದ ತಾನು ಪ್ರಾಣೇಶನು ಬರುತ್ತಲೂ ಬದಲಾಯಿಸಿದ್ದೇನೆ? ಅಥವಾ ತನ್ನ ದುಃಖವನ್ನು ನೋಡಿ ಸಹಿಸಲಾರದೆ ರಮೇಶನ ಆತ್ಮವೇ ಪ್ರಾಣೇಶನ ದೇಹದಲ್ಲಿ ಸೇರಿಕೊಂಡು ಬಂದು ತನ್ನನ್ನು ಸಂತೈಸಿತೋ? ಜೊತೆಗೆ ತಾಯಿಯ ಸುದ್ದಿ ಬಂದಿದೆ. ತನ್ನಂತಹ ಪೆಚ್ಚು ಇನ್ನು ಉಂಟೆ? ಅವಳು ಏನು ಮಾಡುತ್ತಿದ್ದಾಳೆ, ಕೇಳಬೇಡವೆ? ತಾನು ಹೋದರೆ ಅವಳೇನಾದರೂ ಸೇರಿಸದೆ ಹೋದರೆ ಏನು ಮಾಡಬೇಕು? ಆದರೆ ಪ್ರಾಣೇಶನು ಹೇಳಿದ್ದರೆ ಅವಳು ತನ್ನ ನಡತೆಯ ವಿಷಯ ವಾಗಿ ಅಸಮಾಧಾನಪಡುವಂತಿಲ್ಲ. ಇನ್ನು ಐಶ್ವರ್ಯ, ಬಡತನಗಳು, ತಾನೇನೂ ಬಡವಳಲ್ಲ, ಆದರೂ ಸುಮಾರು ಏಳೆಂಟು ಸಾವಿರ ಬಾಳುವ ಮನೆ. ಸುಮಾರು ಐದಾರು ಸೇರು ಚಿನ್ನವಿದೆ. ಒಂದು ಮಣದಷ್ಟು ಬೆಳ್ಳಿ ಇದೆ. ಕಿವಿಯ ಓಲೆ ಸುಮಾರು ಸಾವಿರ. ತನ್ನ ಸೀರೆಕುಪ್ಪಸಗಳು ಏನಿಲ್ಲವೆಂದರೂ ಎರಡು ಸಾವಿರಕ್ಕೆ ಮೋಸವಿಲ್ಲ. ಈಗ ತಾನೇ ರಮೇಶನ ಇನ್‌ಕ್ಯೂರೆನ್‌ಸ್ ಹಣ ಹತ್ತು ಸಾವಿರ ಬಂದಿದೆ. ತಾನು ಬಡವಳು ಹೇಗಾದೆನು? ತಾಯಿ ತನ್ನನ್ನು ಇನ್ನೇಕೆ ತಿರಸ್ಕರಿಸಬೇಕು? ಮತದ ವಿಚಾರ? ಬಹುಶಃ ಅವಳು ಒಳ್ಳೆಯ ಭಕ್ತಳಾಗಿದ್ದಾಳು. ನಾನೀಗ ಸೈತಾನನ ಭಕ್ತಳಾಗಿದ್ದೀನಿ. ಅವಳು ಕ್ರೈಸ್ತನ ಭಕ್ತ ಳಾಗಿದ್ದಾಳೆ. ಸೈತಾನನು ಕ್ರೈಸ್ತನಿಗೆ ಸೋತನಂತೆ. ಅದರಿಂದ ಅವಳ ಕ್ರಿಸ್ತನನ್ನ ಸೈತಾನನ್ನು ಸೋಲಿಸಿ ತನ್ನ ಭಕ್ತನನ್ನಾಗಿ ಮಾಡಿಕೊಂಡರೆ ನಾನೇನು ಬೇಡ ಅನ್ನುವುದಿಲ್ಲ ಅಂದರೆ, ಆಯಿತು. ಆಯಿತು. ಅವಳೂ ಹೆಂಗುಸು. ಯಾರ ಅಧೀನದಲ್ಲಿರುವಳೋ? ಅವರೆಂಥವರೋ? ಆದರೂ ತಾಯಿ, ಹೆತ್ತ ಕರುಳು. ಹೋಗಲೇಬೇಕು. ನನ್ನವರು ತನ್ನವರು ಎನ್ನುವರಿದ್ದರೆ ಎಷ್ಟು ಚೆನ್ನಾಗಿತ್ತು. ಈಗ ನನ್ನ ಜೊತೆಯಲ್ಲಿ ಯಾರು ಬಂದರೆ ತಾನೇ ಏನು? ಇವನಾಗಲಿ, ಅವನಾಗಲಿ, ನನ್ನವನು ಎಂದು ಹೇಳಿಕೊಳ್ಳುದಕ್ಕೆ ಉಂಟೆ? ಅಥವಾ ನೋಡುತ್ತಿದ್ದ ಹಾಗೆಯೇ ಸಂಬಂಧ ತಿಳಿದುಹೋಗುವುದೇನೋ? ಇವೆಲ್ಲ ಸಾಮಾನ್ಯ ವಿಷಯಗಳು. ಮುಖ್ಯ ತಾಯಿಯನ್ನು ನೋಡಬೇಕು. ನೋಡುವುದು. ಇನ್ನೂ ಅನುಮಾನವಾದರೆ ಮೊದಲು ಒಂದು ಟೆಲಿಗ್ರಾಂ ಕಳುಹಿಸುವುದು. ಕಾಯುವುದು. ಉತ್ತರ ನೋಡಿಕೊಂಡು ಹೊರಡುವುದು. ಹೀಗೆಯೇ ತಾಯಿಯ ಯೋಚನೆಯಲ್ಲಿಯೇ ಇರುವಾಗ ಅವಳಿಗೆ ತಿಳಿಯದೆಯೇ ನಿದ್ದೆ ಬಂತು. ಅವಳು ಏಳುವ ವೇಳೆಗೆ ಒಂಭತ್ತು ಗಂಟೆಯಾಗಿತ್ತು. ಅವಳದೆಲ್ಲ ಹೊಸ ಸಿಸ್ಟಂ. ಹಾಲಿನವನು ಬಂದು ಬಾಗಿಲಲ್ಲಿ ಕೂಗಕೂಡದು. ಹಾಲಿಗಾಗಿ ಒಂದು ಗೂಡು. ಅದಕ್ಕೆ ಎರಡು ಬಾಗಿಲು, ಹೊರಗಿನ ಬಾಗಿಲ ಬೀಗದ ಕೈ ಹಾಲಿನವನ ಹತ್ತಿರ. ಅವನು ಬಂದ ಸೀಲಾದ ಶೀಷೆಯ ಹಾಲನ್ನು ಅದರಲ್ಲಿಟ್ಟು ಬಾಗಿಲು ಹಾಕಿಕೊಂಡು ಹೋಗುವನು. ಅವಳು ತನಗೆ ಬೇಕಾದಾಗ ಆ ಹಾಲು ತೆಗೆದುಕೊಂಡು ಹೋಗುವಳು. ಅವಳು ತನ್ನ ಕಾಫಿ, ಟೀ, ತಾನೇ ಮಾಡಿಕೊಳ್ಳುವಳು. ಬ್ರೆಡ್, ಬಿಸ್ಕಟ್, ಹಣ್ಣು, ಯಾವಾಗಲೂ ಇದ್ದೇ ಇರುವುದು. ಎಲೆಕ್ಟಿಕ್ ಸ್ಟೋವ್‌ನಲ್ಲಿ ಕಾಫಿ ಮಾಡಿ ಕುಡಿಯುವ ವೇಳೆಗೆ ನೀರು ಕಾದು ಸ್ನಾನಕ್ಕೆ ಸಿದ್ಧವಾಯಿತು. ತನಗೆ ತೋರಿದಷ್ಟು ಹೊತ್ತು ಆ ಬಿಸಿನೀರಿನ ಟಬ್‌ನಲ್ಲಿ ಕುಳಿತಿದ್ದು ಎದ್ದು ಬರುವಳು. ಗೌಳಿಗನ ಮನೆ ಎಮ್ಮೆಗಳ ಹಾಗೆ ಮೇರಿ ಬದುಕಿದ್ದುದು ಕೇವಲ ಕಾಮದೇವನ ಪೂಜೆಗೆ ಮಾತ್ರ. ಅವಳ ಭಾರಿಯ ಕೆಲಸ ಎಂದರೆ ನ್ಯೂಸ್ ಪೇಪರ್ ಓದುವುದು. ಆಗೊಂದು ಈಗೊಂದು ಕಥೆ ಓದುವಳು. ಬೇಸರವಾದರೆ ಒಂಟಿಯಾಗಿ ತೋರಿದಷ್ಟು ದೂರ ವಾಕಿಂಗ್ ಹೋಗುವಳು. ಅದೂ ಅಷ್ಟು ಹೊತ್ತಿನಲ್ಲಿ ಇಷ್ಟು ಹೊತ್ತಿನಲ್ಲಿ ಎಂಬ ನಿಯಮವಿಲ್ಲ. ಅವಳ ಮನೆಯಲ್ಲಿ ಕ್ಲಾಕ್ ಇದ್ದುದು ಜಗತ್ತಿನಲ್ಲಿ ಸೂರ್ಯೋದಯವಾಗಿ ಇಷ್ಟು ಹೊತ್ತಾಯಿತು; ಈ ದೇಶದಲ್ಲಿ ಈಗ ಇಷ್ಟು ಹೊತ್ತು ಎಂದು ತೋರಿಸುವುದಕ್ಕೆ ಮಾತ್ರವಲ್ಲದೆ, ಈ ಕೆಲಸವು ಈ ಮನೆಯಲ್ಲಿ, ಈ ಮನೆಯವರಿಂದ ನಡೆಯಬೇಕಾದ ಕಾಲವಿದು ಎಂದು ಗೊತ್ತುಮಾಡುವುದಕ್ಕಲ್ಲ
ಸುಮಾರು ಹತ್ತು ಗಂಟೆಯಿರಬಹುದು. ಫೋನ್ ಮಾಡಿ ಪ್ರಾಣೇಶನಿಂದ ತಾಯಿಯ ಅಡ್ರೆಸ್ ತಿಳಿದುಕೊಂಡಳು. ತಾನು ಹೋಗುವುದಕ್ಕೆ ಮುಂಚೆ ಆಕೆಯ ಅಭಿಪ್ರಾಯ ತಿಳಿದುಕೊಳ್ಳದೆ ಹೋಗಬಾರದು ಎನ್ನಿಸಿತು. ಒಂದು ರಿಪ್ಲೆ ಪೇಯಡ್ ಟೆಲಿಗ್ರಾಂ ಕಳುಹಿಸಿದಳು. “ಅಮ್ಮ, ನೋಡಬೇಕೆಂದು ಆಸೆ ಬಹಳವಾಗಿದೆ. ಯಾವಾಗ ಬರಲಿ? -ಮಗಳು ಮೇರಿ.” ತಾನು ತಾಯಿಗೆ ಟೆಲಿಗ್ರಾಂ ಕಳುಹಿಸಿರುವುದು ಯಾರಿಗೂ ತಿಳಿಯಬಾರದು ಎಂದು ತಾನೇ ತಂತಿ ಕಚೇರಿಗೆ ಹೋಗಿ ಬಂದಳು. ಬರುವಾಗ ಹಾಗೆಯೇ ಪಟಗಳ ಅಂಗಡಿಗೆ ಹೋಗಿ ಕ್ರಿಸ್ತನ ಒಂದು ಪಟ ಕೊಂಡುಕೊಂಡಳು. ದಾರಿಯಲ್ಲಿ ಮಾರ್ಕೆಟ್ಟಿಗೆ ಹೋಗಿ ಎರಡು ಶಾಮಂತಿಗೆಯ ಹೂವಿನ ಹಾರಗಳನ್ನು ತೆಗೆದುಕೊಂಡಳು. ಮನೆಗೆ ಬರುವ ವೇಳೆಗೆ ಹನ್ನೆರಡು ಗಂಟೆಯಾಗಿತ್ತು. ಊಟ ಮಾಡಿ ಮತ್ತೆ ಮಲಗಿಕೊಂಡಳು. ನಾಯಿ ಕೂಡ ತಿರುಗಿ ತಿರುಗಿ ಆಯಾಸಪಟ್ಟಿತ್ತು. ಅದೂ ಊಟ ಮಾಡಿ ಬಂದು ಅವಳ ಮಗ್ಗುಲಲ್ಲಿ ಮಲಗಿಕೊಂಡಿತು. ಅವಳು ಎದ್ದಾಗ ಸುಮಾರು ನಾಲ್ಕು ಗಂಟೆ. ಎದ್ದು ಉಪಚಾರಗಳನ್ನೆಲ್ಲ ಪೂರೈಸಿಕೊಂಡು ಮತ್ತೆ ಬರುವ ವೇಳೆಗೆ ಐದು ಗಂಟೆಯಾಗಿದೆ. ರಮೇಶನ ರೂಮಿನಲ್ಲಿ ತಾನು ತಂದಿದ್ದ ಕ್ರಿಸ್ತನ ಫೋಟೋವನ್ನು ಗೋಡೆಗೆ ಹಾಕಿ ಅದರ ಮಗ್ಗುಲಲ್ಲಿ ರಮೇಶನ ಫೋಟೋ ಕಟ್ಟಿದ್ದಳು. ಎರಡಕ್ಕೂ ಎರಡು ಹಾರ ಹಾಕಿದಳು. ಇನ್ನೂ ಆಸೆಯಾಯಿತು. ಎದ್ದುಹೋಗಿ ತನ್ನ ಕಾಂಪೌಂಡಿನಲ್ಲಿ ಬೆಳೆದಿದ್ದ ಜಾಜಿಯನ್ನು ಕೊಯ್ದು ತಂದು ಅದನ್ನು ತೆಗೆದು ಆ ಎರಡು ಫೋಟೋಗಳಿಗೆ ಅಲಂಕಾರ ಮಾಡಿ ಅವುಗಳನ್ನು ನೋಡುತ್ತಾ ಎದುರಿಗೆ ಒಂದು ಕುರ್ಚಿಯ ಮೇಲೆ ಕೂತುಕೊಂಡಳು. ಅದು ಎಷ್ಟೋ ಹೊತ್ತು ಹಾಗೆಯೇ ಅವೆರಡನ್ನೂ ನೋಡುತ್ತಿದ್ದಳು. ಏನೇನೋ ಭಾವನೆಗಳು, ಅವಳಿಗೆ ಹಿಂದೆ ಮಿಷನ್‌ನಲ್ಲಿ ಹುಡುಗಿಯಾಗಿದ್ದಾಗ ಓದಿದ ಬೈಬಲ್ಲಿನ ಕಥೆಯೆಲ್ಲ ನೆನಪಾಯಿತು. ಬಹುಶಃ ಮಿಷನ್‌ನವರು “ನಾನು ಪವಿತ್ರ ಮೇರಿಯಾಗಲೆಂದು ಈ ಹೆಸರನ್ನಿಟ್ಟರೇನೋ? ನಾನು ಇನ್ನೊಬ್ಬ ಮೇರಿಯಾದೆ, ಆಗಲಿ. ನನ್ನ ಕ್ರಿಸ್ತನು ಬಂದ. ನಾನು ಉದ್ದಾರವಾದೆ. ಇಷ್ಟಕ್ಕೂ ನಾನೇನೂ ಪಾಪ ಮಾಡಿಲ್ಲ. ಹಾಗೆ ನಾನು ಗಂಡಿನೊಡನೆ ಆಟವಾಡಿರುವುದೆಲ್ಲ ಪಾಪವಾದರೆ, ತಿಂದದ್ದು ಕುಡಿದದ್ದು ಪಾಪವಲ್ಲವೇನು? ಬಂದುದನ್ನೆಲ್ಲ ಕೂಡಿಟ್ಟು ಕೊಂಡಿದ್ದೇನೆ. ಮಿಷನ್‌ನವರ ಹಾಗೆ ಇತರರಿಗೆ ಕೊಡುವುದಿಲ್ಲ. ಅದೇ ಪಾಪ ಎಂದರೆ ಆ ಪಾಪ, ನಾನು ಒಬ್ಬಳಲ್ಲ, ಲೋಕಕ್ಕೆ ಲೋಕವೇ ಅದನ್ನು ಮಾಡುತ್ತಿದೆ. ಹುಳುಹುಪ್ಪಟೆ ಕೂಡ ಈ ಪಾಪ ಮಾಡುತ್ತಿದೆ. ಇದೆಲ್ಲ ಪಾಪ ಎಂದರೆ ಬದುಕಿರುವುದೇ ಪಾಪ! ಸಾಯುವುದಕ್ಕೆ ನನಗೆ ದಿಗಿಲು. ನಾನು ಸಾಯಲಾರೆ. ನನಗೆ ಇದೆಲ್ಲ ಏಕೆ? ಹೊಟ್ಟೆ ಹಸೀತು. ತಿಂದೆ, ಗಂಡಿನೊಡನೆ ಆಟ ಬೇಕು, ಆಡಿದೆ. ಹೂವು ಮುಡಿಯಬೇಕು ಅನ್ನಿಸಿತು, ಮುಡುಕೊಂಡೆ. ಬಟ್ಟೆ ಬೇಕು ಅನ್ನಿಸಿತು. ಹಾಕಿಕೊಂಡೆ. ಹಾಗೆ ನನ್ನ ಜೀವನ. ಬೇಕು ಅಂದದ್ದು ಹಿಡಿದು ಬೇಡ ಅಂದದ್ದು ಬಿಟ್ಟು ಸುಖವಾಗಿರೋದು.
ಈ ದಿನ ಈ ಕ್ರಿಸ್ತನ ಪಟ ತರಬೇಕು ಅನ್ನಿಸಿತು. ತಂದಿದ್ದೇನೆ. ಮೊದಲೇ ಅನ್ನಿಸಿದ್ದರೆ ಮೊದಲೇ ತರುತ್ತಿದ್ದೆ. ಇರುವವರೆಗೂ ಹೀಗೇ ಇದ್ದು ಹೋದರೆ ಏನು ನಷ್ಟ? ರಮೇಶ್ ಇದ್ದ. ಸಂಪಾದಿಸಿದ, ಧಾಂಧೂಂ ಮಾಡಿದ, ಸತ್ತ ಈಗ ಅವನೆಲ್ಲಿ ಹೋದನೋ ಯಾರಿಗೆ ಗೊತ್ತು. ಈ ಪುಣ್ಯಾತ್ಮ ಕ್ರಿಸ್ತ ಇದ್ದ ದೇವರು ದೇವರು, ಪಾಪ, ಪುಣ್ಯ, ಅಂತ ತನಗೆ ತೋರಿದ್ದನ್ನೆಲ್ಲ ಹೇಳಿ ಸತ್ತ ಅವನು ಇದಾನೆ ಅಂತಾರೆ. ಅವನಿದ್ದರೆ ರಮೇಶನೂ ಇರಬೇಕು. ಭಾವನೆಗಳು ಅರಳಿ, ಹೊರಳಿ, ಇನ್ನು ಎತ್ತ ಕಡೆಯೋ ಹೊರಟವು : “ಕ್ರಿಸ್ತನ್ನ ಕುರಿತು ಇಷ್ಟು ಕೋಟಿ ಜನ ಪೂಜೆ ಮಾಡುತ್ತಾರೆ: ಪ್ರಾರ್ಥನೆ ಮಾಡುತ್ತಾರೆ; ಕಾಪಾಡು ಎನ್ನುತ್ತಾರೆ. ಜಗತ್ತಿನಲ್ಲಿ ಇರುವ ದೇಶ ದೇಶಗಳಲ್ಲೂ ಕ್ರಿಶ್ಚಿಯನ್‌ರು ಇದ್ದಾರೆ. ಎಷ್ಟೋ ಜನ ಪಾಪಿಗಳು ಈ ಪುಣ್ಯಾತ್ಮನನ್ನು ನಂಬಿ ಬದುಕಿಕೊಂಡಿದ್ದಾರೆ. ಹೀಗಿರುವಾಗ, ಇಷ್ಟು ಕೋಟಿ ಜನರನ್ನು ಕಾಪಾಡುವ ಕ್ರಿಸ್ತನು ಇಲ್ಲದೆ ಇದ್ದರೆ ಅವರು ಉದ್ಧಾರವಾಗುವುದು ಹೇಗೆ? ಅಲ್ಲದೆ, ಕ್ರಿಸ್ತನನ್ನು ಕಣ್ಣಾರೆ ಕಂಡೆವೆಂದು ಹೇಳಿಕೊಳ್ಳುವವರೂ ಇದ್ದಾರಲ್ಲ! ಅದರಿಂದ ಕ್ರಿಸ್ತ ಇರಬೇಕು. ಹಾಗೆಯೇ ನನ್ನ ರಮೇಶನೂ ಇರಬೇಕು. ಕ್ರಿಸ್ತನು ಇದ್ದಾಗ ಯಹೂದ್ಯರ ಕ್ರಿಸ್ತನಾಗಿದ್ದ; ಅವನು ಶಿಲುಬೆಗೇರಿ ಜಗತ್ತಿನ ಕ್ರಿಸ್ತನಾದ. ಹಾಗೆ, ನನ್ನ ರಮೇಶ ಬದುಕಿದ್ದಾಗ ಅವನ ಪ್ರೇಮಕ್ಕೆ ಪಾಲುದಾರರಿದ್ದರು. ನನ್ನವರು, ನನ್ನವನು, ಎನ್ನುವುದಕ್ಕೆ ಎಷ್ಟೋ ಜನರಿದ್ದರು. ಈಗ ನನ್ನ ರಮೇಶ ಇನ್ನು ಯಾರಿಗೂ ಸೇರಿದವನಲ್ಲ ಸಂಪೂರ್ಣವಾಗಿ ನನ್ನ ಸ್ವತ್ತು ನಾನೂ ಒಂದು ಲಾಕೆಟ್ ಮಾಡಿಸಬೇಕು. ಅದರಲ್ಲಿ ಒಂದು ಮುದ್ದಾದ ಫೋಟೋ ಮಾಡಿಸಿ ಇಡಬೇಕು. ತಾಯಿ ಸಿಕ್ಕಿದ್ದಾಳೆ, ಒಂದು ಕಡೆ, ಇನ್ನೊಂದು ಕಡೆ ರಮೇಶ್‌ದು. ಅವಳದು ರಮೇಶ್ ನನ್ನ ಗಂಡನಾಗಿದ್ದರೆ? ಆಗಿದ್ದರೇನು? ಹಾದರಗಿತ್ತಿಯೆಂದು ನನ್ನ ಒದ್ದೋಡಿಸುತ್ತಿದ್ದ. ನಾನೂ ಅವನ ಕೈಯಲ್ಲಿ ಜಗಳವಾಡಿ ಮುನಿಸಿಕೊಂಡು ಬಯ್ಯುತ್ತಿದ್ದೆ. ಈಗ ನಾನು ಹೀಗೆ ಕಂಡಕಂಡವರ ಪಾಲಾಗುವ ಸ್ವಾತಂತ್ರ್ಯ ಇರುವ ವೇಳೆಗೆ, ಹತ್ತಾರು ಮರ ಹುಡುಕಿ ನೋಡಿ ಗೂಡು ಕಟ್ಟುವ ಹಕ್ಕಿಯ ಹಾಗೆ, ಹತ್ತಾರು ಜನರನ್ನು ಪರೀಕ್ಷಿಸಿ, ಅವರನ್ನೆಲ್ಲ ನೂಕಿ ರಮೇಶನನ್ನು ಆರಿಸಿಕೊಂಡೆ. ಹೂ ಮದುವೆ ಅನ್ನೋದು ಲಾಟರಿ ಟಿಕೆಟ್ ಹಾಗೆ, ಅದೃಷ್ಟ ಇದ್ದರೆ ಒಳ್ಳೇದು ಸಿಕ್ಕಿತು. ಇಲ್ಲದಿದ್ದರೆ ಬದುಕಿರೋವರೆಗೂ ಲಾಟರಿಯೇ! “ಆದರೆ ನಮ್ಮ ಬಾಳು ? ಏನು ಬಾಳೋ ? ಚಿಟ್ಟೆಯ ಬಾಳು -ಹುಳುವಾಗಿ ಹರಿದದ್ದು ಅಷ್ಟು ದಿವಸ. ಗೂಡಿನಲ್ಲಿ ಬಿದ್ದಿದ್ದದ್ದು ಅಷ್ಟು ದಿವಸ. ಚಿಟ್ಟೆಯಾಗಿ ಹಾರಾಡಿದ್ದು ಮೂರು ದಿವಸ, ಕೊನೆಗೆ ಹಕ್ಕಿಗೋ ಹುಳುವಿಗೋ ಸಿಕ್ಕಿ ಗೋವಿಂದೋ ಗೋವಿಂದ….” ಹೀಗೇ ಭಾವನೆಯಲ್ಲಿ ಮುಳುಗಿಹೋಗಿರುವಾಗ ಬಾಗಿಲಲ್ಲಿ ಯಾರೋ ಕೂಗಿದ ಹಾಗಾಯಿತು. ಏನು ಕೂಗಿದರೋ ತಿಳಿಯಲಿಲ್ಲ. ಕಿವಿಯಂತೂ ಅತ್ತ ಕಡೆ ಹೋಯಿತು.
ಅದರ ಜೊತೆಯಲ್ಲಿ ಮನಸೂ ಹೋಯಿತು. ಇನ್ನೊಮ್ಮೆ ಕೂಗು ಕೇಳಿಸಿತು: “ಟೆಲಿಗ್ರಾಂ
ಮೇರಿ ಎದ್ದು ಓಡಿಹೋದಳು. ಮಿಸ್ ಮೇರಿ ತಾನೇ ಎಂದು ಟೆಲಿಗ್ರಾಂ ತೆಗೆದುಕೊಂಡು ಸೈನ್ ಮಾಡಿಕೊಟ್ಟು ಒಳಕ್ಕೆ ಬಂದು ಒಡೆದು ನೋಡಿದಳು. ತಾಯಿಯ ಟೆಲಿಗ್ರಾಂ. ‘ದೇವರ ಕೃಪೆ, ನೀನು ಸಿಕ್ಕಿದೆ. ಫೋಟೋ ಕಳುಹಿಸು. ಕಾಗದ ಬರುತ್ತೆ ದೇವರು ನಿನ್ನನ್ನು ಕಾಪಾಡಲಿ. ತಾಯಿ ಜೋನಮ್ಮ” ಅವಳಿಗೆ ಪರಮ ಸಂತೋಷವಾಯಿತು. ಟೆಲಿಗ್ರಾಂ ತಂದವನು, ಇನ್ನೂ ಅಲ್ಲಿಯೇ ನಿಂತಿದ್ದ ಅವನನ್ನು ಕರೆದು ಅವನಿಗೆ ಒಂದು ರೂಪಾಯಿ ಕೊಟ್ಟಳು. ಅವಳ ಸಂತೋಷ ಅಲ್ಲಿಗೆ ನಿಲ್ಲಲಿಲ್ಲ. ಥ್ಯಾಂಕ್ಸ್, ಮೆನಿ ಥ್ಯಾಂಕ್ಸ್, ಗುಡ್ ನ್ಯೂಸ್, ಎಂದು ಹಿಡಿದು ಕುಲಿಕಿದಳು. ಅವನಿಗೆ ಈ ಸಂತೋಷ ಇನ್ನೂ ಮುಂದೆ ಹೋಗಿ ಅನರ್ಥವಾಗಬಹುದು ಅನ್ನಿಸಿತೇನೋ? ಅಲ್ಲಿಂದ ಕೆಟ್ಟೆನೋ ಬಿದ್ದೆನೋ ಎಂದು ಓಡಿದ. ನಾಯಿ ಜಾನ್ ಅವನ ಹಿಂದೆ ಓಡಬೇಕು ಅಂದು ಹೋಯಿತು. ಅದನ್ನು ಅವನ ಹಿಂತಿರುಗಿ ಕರೆದಳು. ಆ ಸಂತೋಷದಲ್ಲಿ ಏನು ಮಾಡಬೇಕೋ ಅವಳಿಗೆ ತಿಳಿಯದು. ಕುಣಿದಳು. ನಾಯಿಯನ್ನು ಮುದ್ದಾಡಿದಳು. “ಜಾನ್, ಸೂಳೇಮಗನೇ, ಗೊತ್ತೇನು. ನಮ್ಮ ತಾಯಿ, ನಿಮ್ಮ ಅಜ್ಜಿ, ಬರುತ್ತಾಳೆ” ಎಂದಳು. ಅದೂ ಏನೋ ಬಹಳ ಅರ್ಥವಾದಂತೆ ಮೂತಿ ನೆಕ್ಕಿತು. “ಥ ಮುಂಡೇದೆ’ ಎಂದು ಅದನ್ನು ನೂಕಿ ರೂಮಿನೊಳಗೆ ಹೋದಳು. ಅಲ್ಲಿ ರಮೇಶ್ ಫೋಟೋ ಮುಂದೆ, “ರಮೇಶ್, ಅಮ್ಮ ಸಿಕ್ಕಿದಳು ಕಣೋ, ನೀನು ಹೇಳುತ್ತಿದ್ದೆ: ‘ನಾನು ಹುಡುಕಿ ಬರುತ್ತೇನೆ.’ ನಿಜವಾಗಿ ನೀನೇ ಹೋಗಿ ಹುಡುಕಿರಬೇಕು” ಎಂದು ಕಣ್ಣಲ್ಲಿ ನೀರು ಹೊಳೆಯಾಗಿ ಸುರಿಯುತ್ತಿರುವುದೂ ಲಕ್ಷಿಸದೆ ಹೋಗಿ ಆ ಫೋಟೋಗೆ ಮುತ್ತು ಕೊಟ್ಟಳು. ಮಗ್ಗುಲಲ್ಲಿ ಕ್ರಿಸ್ತನ ಫೋಟೋ ಕಾಣಿಸಿತು. ಮೊಳಕಾಲೂರಿ ಕೈಮುಗಿದು, “ಹೌದು, ದೇವ, ಇದು ನಿನ್ನ ಕೃಪೆ’ ಎಂದಳು.
ಅವಳು ಮೊಳಕಾಲೂರಿ ಕುಳಿತು ಬಹಳ ದಿನವಾಗಿತ್ತು; ಎಷ್ಟು ವರ್ಷಗಳಾ ಗಿತ್ತೋ? ದೇವರು ತನ್ನನ್ನು ಎಲ್ಲ ಭಾಗ್ಯದಿಂದ ವಂಚಿಸಿದ್ದಾನೆ ಎಂದು ದೇವರನ್ನು ಹೊರನೂಕಿದ್ದವಳು ಅವಳು. ತನ್ನ ಎದುರಿಗೆ ಯಾರಾದರೂ ದೇವರು ಎಂದರೆ ಅವರಿಗೆ ಗ್ರಹಚಾರ ಬಿಡಿಸುತ್ತಿದ್ದ ಗಂಡುಬೀರಿ ಅವಳು. ಇಂದು ತನ್ನ ಸಂತೋಷದಲ್ಲಿ ಕ್ರಿಸ್ತನ ಪಟದ ಮುಂದೆ ಮೊಳಕಾಲೂರಿ ಕುಳಿತಿದ್ದಳು. ಪ್ರಾರ್ಥನೆ ಮಾಡಬೇಕು ಎನ್ನಿಸಿತು. ಮಾಡಲೇ ಎಂದುಕೊಂಡಳು. ಅಷ್ಟಕ್ಕೆ ಪುರಸತ್ತಿಲ್ಲ ಎಂದುಬಿಟ್ಟಳು. ಎದ್ದು ಪ್ರಾಣೇಶನಿಗೆ ಫೋನ್ ಮಾಡಿದಳು. “ಮೈ ಲಾರ್ಡ್! ಪ್ರಾಣೇಶ್! ಅಮ್ಮಾ ಸಿಕ್ಕಿದಳು’ ಅನ್ನುವುದರೊಳಗಾಗಿ ವಿಶ್ವ ಪ್ರಯತ್ನವಾಯಿತು. ‘ಥ್ಯಾಂಕ್ಸ್ ಎನ್ನುವುದಕ್ಕೂ ಗಂಟಲು ಅವಕಾಶ ಕೊಡಲಿಲ್ಲ. ಪ್ರಾಣೇಶನಿಗೋ ಏನೋ ಕೆಲಸದ ಅವಸರ. ಅವನೂ ‘ಸರಿ’ ಬರುತ್ತೇನೆ ಎಂದು ರಿಸೀವರ್ ಕೆಳಗಿಟ್ಟನು.
*****
ಮುಂದುವರೆಯುವುದು
















