ಸ್ವಾಮಿ ಯಾಕೆ ಮಾತಾಡಲಿಲ್ಲ?

ಸ್ವಾಮಿ ಯಾಕೆ ಮಾತಾಡಲಿಲ್ಲ?

ನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ರಂಗಸ್ವಾಮಿ ಮರಳಿ ಬಂದಿದ್ದಾನೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಂಗಸ್ವಾಮಿ, ಸೋಮಯ್ಯ, ಗೋಪಾಲಕೃಷ್ಣ ಕಾರಂತ, ರಾಮ ರೈ ಮತ್ತು ನಾನು ಒಂದೇ ಸ್ಕೂಲಿನಲ್ಲಿ ಓದುತ್ತ ಒಟ್ಟಿಗೆ ಬೆಳೆದವರು. ನಾವೆಲ್ಲ ಸ್ಕೂಲು ಫ಼ೈನಲಿನಲ್ಲಿ ಓದು ನಿಲ್ಲಿಸಿ ಊರಲ್ಲಿ ಉಳಿದೆವು. ರಂಗಸ್ವಾಮಿ ಮಾತ್ರ ಸಮೀಪದ ಪಟ್ಟಣದಲ್ಲಿ ಕಾಲೇಜು ಓದಲೆಂದು ಹೋದ. ಕಾಲೇಜಿನಲ್ಲಿ ಓದುತ್ತಿದ್ದಾಗಲೂ ಊರಿಗೆ ಬಂದಾಗಲೆಲ್ಲ ಅವನು ತಪ್ಪದೆ ನಮ್ಮನ್ನು ಕಂಡು ಮಾತಾಡಿಸುತ್ತಿದ್ದ. ಹೆಚ್ಚು ಓದುತ್ತಿದ್ದೇನೆಂಬ ಅಹಂ ಇರಲೇ ಇಲ್ಲ ಅವನಲ್ಲಿ. ನಮ್ಮಲ್ಲೆಲ್ಲ ಅತ್ಯಂತ ಚುರುಕಾದ ಹುಡುಗ ಅವನು. ಆದರೆ ಒಮ್ಮೆ ಕೂಡ ನಮಗೆ ಮುಖ ಭಂಗ ಮಾಡಲು ಪ್ರಯತ್ನಿಸಿದವನಲ್ಲ ರಂಗಸ್ವಾಮಿ. ಅದು ಮಾತ್ರವಲ್ಲ, ಕ್ಲಾಸಿನಲ್ಲಿ ಅಧ್ಯಾಪಕರ ಪ್ರಶ್ನೆಯನ್ನು ಇತರರು ಉತ್ತರಿಸಲಾಗಿದಿದ್ದರೆ ಅದಕ್ಕೆ ಉತ್ತರ ಗೊತ್ತಿದ್ದರೂ ಅವನು ಗೊತ್ತಿಲ್ಲವೆಂದೇ ನಟಿಸುತ್ತಿದ್ದ. ಕ್ಲಾಸಿನ ಹೊರಗೆ ಕೇಳಿದರೆ ತಟ್ಟನೆ ಯಾರಿಗೆ ಬೇಕಾದರೂ ಸಹಾಯಕ್ಕೆ ಧಾವಿಸುವವನು ಆತ. ಇದೆಲ್ಲ ಕಾರಣಗಳಿಂದಾಗಿ ರಂಗಸ್ವಾಮಿ ನಮಗೆಲ್ಲ ಹತ್ತಿರದವನಾಗಿದ್ದ.

ಕಾಲೇಜಿಗೆ ಸೇರಿ ಎರಡು ವರ್ಷಗಳಾಗಿರಬೇಕು. ಒಂದು ದಿನ ರಂಗಸ್ವಾಮಿ ಇದ್ದಕ್ಕಿದ್ದಂತೆ ಮಾಯವಾದ. ಎಲ್ಲಿಗೆ ಹೋದ, ಯಾಕೆ ಹೋದ ಎಂಬ ಬಗ್ಗೆ ಯಾರಿಗೆ ಏನೂ ಗೊತ್ತಿರಲಿಲ್ಲ. ಅವನ ಮನೆತನ ದೊಡ್ಡದು. ಮನೆಯಲ್ಲಿ ಜನರೂ ತುಂಬ. ತಂದೆ, ಚಿಕ್ಕಪ್ಪ, ದೊಡ್ಡಪ್ಪ, ಅವರ ಮಕ್ಕಳು ಹೀಗೆ ದೊಡ್ಡ ಸಂಸಾರ. ಅದೇ ರೀತಿ ಆಸ್ತಿ ಕೂಡ ಹೇರಳವಾಗಿತ್ತು. ಕೃಷಿ ಪ್ರಧಾನವಾಗಿದ್ದವರು ಅವರು.

ರಂಗಸ್ವಾಮಿಗೆ ಓದಿನಲ್ಲಿ ಆಸಕ್ತಿ. ಅದು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದರೂ ಯಾರೂ ಅವನ ಇಚ್ಚಿಗೆ ಎದುರು ಬರಲಿಲ್ಲ. ದಿನಾ ಮನೆಗೆ ಬಂದು ಹೋಗುವುದು ತೊಂದರೆಯಾಗುತ್ತದೆಂದು ಸ್ವಾಮಿ ಹಾಸ್ಟೆಲಿನಲ್ಲಿ ಇರುತ್ತಿದ್ದ. ಇದಕ್ಕೆಲ್ಲಾ ಮನೆಯವರು ಹಣ ಒದಗಿಸುತ್ತಿದ್ದರು. ಇಷ್ಟೆಲ್ಲಾ ಇದ್ದೂ ಆತ ಯಾಕೆ ಹೇಳದೆ ಕೇಳದೆ ಓಡಿಹೋದನೆಂದು ಯಾರಿಗೂ ಅರ್ಥವಾಗಲಿಲ್ಲ.

ಒಮ್ಮೆ ಆತ ನನಗೆ ಅನುಭವದ ಅನ್ವೇಷಣೆಯ ಬಗ್ಗೆ ಹೇಳಿದ್ದ. ಅದು ನನಗೆ ಪೂರ್ತಿ ಅರ್ಥವಾಗಿದ್ದರೂ ಅದರಲ್ಲೇನೋ ಇದೆಯೆಂದು ಅನಿಸಿತ್ತು. ಸ್ಕೂಲಿನಲ್ಲೆದ್ದಾಗ ಬೀಡಿ ಸಿಗರೇಟು ಸೇದದವನು ಕಾಲೇಜಿಗೆ ಹೋದಮೇಲೆ ಇದನ್ನೆಲ್ಲ ಸುರು ಮಾಡಿದ್ದನ್ನು ನಾನು ಗಮನಿಸಿದ್ದೆ. ಸ್ವಾಮಿಗೆ ಬರೆಯುವ ಹವ್ಯಾಸವಿತ್ತು. ಆಗಾಗ ಚಿಕ್ಕ ಪುಟ್ಟ ಕತೆ ಕವಿತೆಗಳನ್ನು ಬರೆದು ನಮಗೆ ಓದಲು ಕೊಡುತ್ತಿದ್ದ. ಅವನು ಹೀಗೆ ಊರು ಬಿಟ್ಟಿದ್ದಕ್ಕೂಅವನ ಈ ಹವ್ಯಾಸಕ್ಕೂ ಏನಾದರೂ ಸಂಬಂಧವಿರಬಹುದೇ ಎಂದು ಕೆಲವೊಮ್ಮೆ ನನಗೆ ಅನಿಸುತ್ತಿತ್ತು.

ಇಷ್ಟು ವರ್ಷಗಳ ನಂತರ ಅವನು ಮರಳಿ ಬಂದಿದ್ದನೆಂದ ಮೇಲೆ ಅವನ ಭೇಟಿಯಾಗುವ ಕುತೂಹಲ ನಮಗೆ ಸಹಜವಾಗಿಯೆ ಉಂಟಾಯಿತು. ನಾವು ಹಳೆಯ ಗೆಳೆಯರೆಲ್ಲ ಸೇರಿ ಅವನ ಮನೆಗೆ ಹೋಗಿ ನೋಡಲು ನಿರ್ಧರಿಸಿದೆವು. ಆದರೆ ಸ್ವಾಮಿ ಬಂದ ಸುದ್ದಿ ತೆಗೆದುಕೊಂಡು ಬಂದ ಸೋಮಯ್ಯ ಇನ್ನೊಂದು ಸುದ್ದಿಯನ್ನು ತಂದಿದ್ದ – ಸ್ವಾಮಿ ಯಾರೊಂದಿಗೂ ಮಾತಾಡುವುದಿಲ್ಲ ಎಂದು. ಇದನ್ನು ಪರೀಕ್ಷಿಸುವ ಕುತೂಹಲವೂ ನಮಗಿತ್ತು. ಎಂಥ ಮೌನ ವ್ರತ ಧರಿಸಿದವನೂ ಹಳೆಯ ಚಡ್ಡಿ ಗೆಳೆಯರನ್ನು ಕಂಡರೆ ಬಾಯಿಬಿಡದೆ ಇರುತ್ತಾನೆಯೇ ಎಂದುಕೊಂಡೆವು.

ಸ್ವಾಮಿಯ ಮನೆಯ ಹೆಸರು ಮೇಲಿನ ಮನೆ ಎಂದು. ಹೆಸರಿಗೆ ತಕ್ಕಂತೆ ಅದು ಸ್ವಲ್ಪ ಎತ್ತರದ ಜಾಗದಲ್ಲೆ ಇದ್ದು ಎದುರಿನ ಪಶ್ಚಿಮ ಘಟ್ಟಗಳ ಪ್ರಶಸ್ತವಾದ ದೃಶ್ಯ ಅಲ್ಲಿಂದ ಕಾಣಿಸುವುದು. ನಾವು ಹೋದಾಗ ಸ್ವಾಮಿ ಹಜಾರದಲ್ಲಿ ಕುಳಿತು ಈ ಘಟ್ಟಗಳ ಸೊಬಗನ್ನು ಸವಿಯುತ್ತಿದ್ದನೆಂದು ತೋರುತ್ತದೆ. ನಮ್ಮನ್ನು ಕಂಡು ಅವನು ಎದ್ದು ಬಂದ. ಮುಖದಲ್ಲಿ ಮುಗುಳುನಗೆ ಮಿಂಚಿತು. ಕರೆದುಕೊಂಡು ಹೋಗಿ ಕುಳ್ಳರಿಸಿದ. ನಂತರ ತಾನೂ ಕುಳಿತುಕೊಂಡ. ನಾಲ್ಕು ವರ್ಷಗಳ ಹಿಂದೆ ನಾವು ತಿಳಿದಿದ್ದ ಸ್ವಾಮಿ ಈಗ ಬದಲಾಗಿದ್ದಂತೆ ತೋರಿತು – ಬಣ್ಣ , ಚಹರೆ, ನಡೆತದ ಗತಿ ಎಲ್ಲದರಲ್ಲೂ. ಮೇಲೆ ಬಿದ್ದು ಮಾತಾಡಿಸಿ ಅವನ ಬಾಯಿ ತೆರೆಸುತ್ತೇವೆ ಎಂದುಕೊಂಡು ಬಂದ ನಾವು ಮೂಕ ವಿಸ್ಮಯದಿಂದ ಅವನ ಕಡೆ ನೋಡುತ್ತ ಕುಳಿತೆವು. ನಂತರ ಹಾಗೆ ನೋಡಲಾರದೆ ದೃಷ್ಟಿಯನ್ನು ಬೇರೆ ಕಡೆ ಬದಲಿಸಿದವು. ನಮ್ಮಲ್ಲೆಲ್ಲ ಅತ್ಯಂತ ವಾಚಾಳಿಯಾಗಿದ್ದ ಕಾರಂತ ಕೂಡ ತುಟಿ ಎರಡು ಮಾಡಲಿಲ್ಲ. ಎಲ್ಲರನ್ನೂ ಒಮ್ಮೆಲೆ ಪಶ್ಚಿಮ ಘಟ್ಟಗಳು ಆಕರ್ಷಿಸಿದಂತೆ ತೋರಿತು.

ಸ್ವಲ್ಪ ಹೊತ್ತಿನಲ್ಲಿ ಸ್ವಾಮಿಯ ತಾಯಿ ನಮ್ಮ ಮುಂದೆ ಕಾಫ಼ಿ ತಂದಿರಿಸಿದರು. ನಾಲ್ಕು ವರ್ಷಗಳ ಕೆಳಗೂ ಹೀಗೆ ಅವರು ತಂದಿಡುತ್ತಿದ್ದರು. ಈಗ ಮಾತ್ರ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಕಾಫ಼ಿ ಮುಗಿಸಿ ಹೊರಡಲು ತಯಾರಾದ ನಮ್ಮನ್ನು ಸ್ವಾಮಿ ಗೇಟಿನ ತನಕ ಬಂದು ಕಳಿಸಿಕೊಟ್ಟ. ಮುಖದಲ್ಲಿ ಅದೇ ಮಂದಹಾಸ, ಅದೇ ಮೌನ.

ಇದಾದ ಒಂದು ದಿನ ನಾನು ಊರ ವಾಚನಾಲಯದಲ್ಲಿ ಹಳೆಯ ಪತ್ರಿಕೆಗಳನು ತಿರುವಿ ಹಾಕುತ್ತಿದ್ದಾಗ ಎಂ. ಆರ್ . ಸ್ವಾಮಿ ಎಂಬ ಲೇಖಕ ಬರೆದ ಕತೆಯೊಂದು ಕಣ್ಣಿಗೆ ಬಿತ್ತು. ಕತೆಯ ಹೆಸರು “ಮುಷ್ಟಿ” ಎಂದು. ನನ್ನ ಗಮನ ಸೆಳೆದುದು ಲೇಖಕನ ಹೆಸರು. ಎಂ. ಆರ್ ಸ್ವಾಮಿ ಯೆಂದರೆ ಮೇಲಿನ ಮನೆ ರಂಗಸ್ವಾಮಿ ಇರಬಹುದಲ್ಲವೇ ಎನಿಸಿ ಕತೆಯನ್ನು ಆಸಕ್ತಿ ಯಿಂದ ಓದಿದೆ.

ಅದೊಂದು ವಿಚಿತ್ರವಾದ ಕತೆ. ಕತೆ ನಡೆಯುವ ಸ್ಥಳ ಉತ್ತರ ಭಾರತದಲ್ಲೆಲ್ಲೊ. ಕಾಡು ಗುಡ್ಡಗಳ ತಪ್ಪಲಲ್ಲಿ. ಆ ಪ್ರದೇಶವನ್ನೆಲ್ಲ ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿತ್ತು ಕತೆ ಒಬ್ಬ ಹಳ್ಳಿಗಾಡಿನ ಯುವಕನಿಗೆ ಸಂಬಂಧಿಸಿ, ಅದರ ಸಾರಾಂಶ ಈ ರೀತಿ : ಆ ಪ್ರದೇಶ ಗುಪ್ತ ಪಂಥಗಳಿಂದ ಬಾಧಿತವಾಗಿತ್ತು. ಅವುಗಳಲ್ಲಿ ಒಂದು ಪಂಥಕ್ಕೆ ಸೇರಿದ ಜನರು ತಮ್ಮ ಬಲಗೈಯ ತೋರು ಬೆರಳನ್ನು ತುಂಡರಿಸಿಕೊಳ್ಳುತ್ತಿದ್ದರು. ಹಿಂದೊಮ್ಮೆ ಈ ಪಂಥಕ್ಕೆ ಸೇರಿದವನೊಬ್ಬ ಇಡಿಯ ಪಂಗಡಕ್ಕೆ ದ್ರೋಹ ಬಗೆದನಂತೆ. ಅದ್ದರಿಂದ ಮುಂದೆ ಯಾರೂ ಪಂಥದ ಪತ್ತೆಯನ್ನು ಹೊರಗಿನವರಿಗೆ ಬಿಟ್ಟುಕೊಡದಿರಲಿ ಎಂದು ಈ ಪದ್ಧತಿ ಜಾರಿಗೆ ಬಂತು. ಇವರು ಆಗಾಗ ದಾರಿ ಹೋಕರನ್ನೋ ಹಳ್ಳಿಗರನ್ನೋ ಆಕ್ರಮಿಸಿ ಹಣ, ಆಹಾರ ಧಾನ್ಯಗಳನ್ನು ದೋಚುತ್ತಿದ್ದುದು ಮಾತ್ರವಲ್ಲ. ಹೆಂಗಸರು ಮಕ್ಕಳನ್ನೂ ತಮಗೆ ಬೇಕೆನಿಸಿದಾಗೆ ಕೊಂಡೊಯ್ಯುತ್ತಿದ್ದರು.

ಹೀಗಿರುತ್ತ ಆ ಪ್ರದೇಶದ ಗ್ರಾಮವೊಂದಕ್ಕೆ ದೂರದ ಬರಗಾಲ ಪೀಡಿತ ರಾಜ್ಯದಿಂಡ ಯುವಕನೊಬ್ಬ ಕೆಲಸ ಹುಡುಕುತ್ತ ಬರುತ್ತಾನೆ. ಅವನ ಬಲಗೈಯ ತೋರು ಬೆರಳು ಅಪಘಾತವೊಂದರಲ್ಲಿ ತುಂಡಾಗಿರುತ್ತದೆ. ತೋರು ಬೆರಳಿಲ್ಲದ ಈತನನ್ನು ಕಂಡು ಊರವರು ಇವನು ಗುಪ್ತ ಪಂಥಕ್ಕೆ ಸೇರಿದವನೆಂದು ಭ್ರಮಿಸುತ್ತಾರೆ. ಯುವಕ ಆ ಗ್ರಾಮದಿಂದ ಓಡಿ ಹೋಗಿ ಪಕ್ಕದ ಗ್ರಾಮ ಸೇರುತ್ತಾನೆ.
ಅಲ್ಲಿ ಮಾತ್ರ ತನ್ನ ಊನಯಾರಿಗೂ ತಿಳಿಯದಿರಲೆಂದು ಮುಷ್ಟಿ ಬಿಗಿಯುಕಂಡೆ ಇರುತ್ತಾನೆ. ಒಮ್ಮೆ ಹೋಟಲೊಂದರಲ್ಲಿ ತಿಂಡಿ ತಿನ್ನುವ ಸಂದರ್ಭದಲ್ಲಿ ಎಲ್ಲರಿಗೆ ಈತನಿಗೆ ತೋರು ಬೆರಳಿಲ್ಲದ ಸಂಗತಿ ಗೊತ್ತಾಗುತ್ತದೆ.

ಅವರು ಯುವಕನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುತ್ತಾರೆ. ಪೋಲೀಸರು ಗುಪ್ತ ಪಂಥದ ಪತ್ತೆ ತಿಳಿಸುವಂತೆ ಅವನನ್ನು ಹಲವು ರೀತಿಯಿಂದ ಪೀಡಿಸುತ್ತಾರೆ. ತಾನು ಅದಕ್ಕೆ ಸೇರಿದವನಲ್ಲವೆಂದು ಎಷ್ಟು ಹೇಳಿದರೂ ಉಪಯೋಗವಾಗುವುದಿಲ್ಲ. ಕೊನೆಗೊಂದು ದಿನ ಅವನು ಪೋಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಹೋಗಿ ಅವನು ಮೊದಲು ಮಾಡುವ ಕೆಲಸವೆಂದರೆ ತನ್ನ ಇತರ ಬೆರಳುಗಳನ್ನು ತುಂಡರಿಸಿಕೊಳ್ಳುವುದು.

ಕತೆ ಓದಿದನಂತರ ಅದನ್ನು ಬರೆದವನು ರಂಗಸ್ವಾಮಿಯೇ ಎಂಬುದರಲ್ಲಿ ನನಗೆ ಸಂದೇಹವುಳಿಯಲಿಲ್ಲ. ಈ ಕತೆ-ಇದರಲ್ಲಿ ಅವನ ಸ್ವಾನುಭವೇನಾದರೂ ಸೇರಿದೆಯೇ ಎಂದುಕೊಂಡೆ. ಅದೇ ಪತ್ರಿಕೆಯ ಹಿಂದು ಮುಂದಿನ ಸಂಚಿಕೆಗಳನ್ನು ಅವನ ಬೇರೆ ಬರಹಗಳಿಗೋಸ್ಕರ ಹುಡುಕಿದೆ, ಸಿಗಲಿಲ್ಲ. ಅಂದು ಸಂಜೆ ನಾನು ಸೋಮಯ್ಯನನ್ನು ಕಾಣಲು ಹೋದೆ. ಸೋಮಯ್ಯನದೊಂದು ಅಂಗಡಿಯಿತ್ತು. ನನ್ನನ್ನು ನೋಡಿ ಒಂದು ಸಿಗರೇಟು ಕೊಟ್ಟು ಕೂಡಲು ಹೇಳಿದ. ನಾನೊಂದು ಕುರ್ಚಿ ಎಳೆದುಕೊಂಡು ಕೂತೆ. ಗಿರಾಕಿಗಳು ಕರಗಿದ ನಂತರ ಕೇಳಿದೆ –

“ಸ್ವಾಮಿಯ ಬಲಗೈಯನ್ನು ನೋಡಿದ ನೆನಪಿದೆಯೆ ನಿನಗೆ?”

“ಇಲ್ಲ; ಯಾಕೆ?” ಎಂದ ಸೋಮಯ್ಯ ಅಚ್ಚರಿಯಿಂದ.

“ನಾನವನಿಗೆ ವಾಚನಾಲಯದಲ್ಲಿ ಓದಿದ ಕತೆಯ ಬಗ್ಗೆ ಹೇಳಿದೆ. ಸೋಮಯ್ಯನಿಗೆ ಕತೆಯ ವಸ್ತುವಿಗೂ ಸ್ವಾಮಿಯ ಮೌನಕ್ಕೂ ಸಂಬಂಧವಿದೆಯೆಂದು ಅನಿಸಲಿಲ್ಲ. ಸ್ವಾಮಿಯ ಮೌನ ಏನಾದರೂ ಮಾನಸಿಕ ರೋಗವಿರಬಹುದೆಂದು ಅವನ ಮಾತವಾಗಿತ್ತು. ನಾನು ಆ ಬಗ್ಗೆ ಅವನಲ್ಲಿ ಚರ್ಚಿಸಲಿಲ್ಲ. ಸ್ವಾಮಿ ಒಬ್ಬ ಮಾನಸಿಕ ರೋಗಿಯೆಂದು ನಾನು ನಂಬಿರಲಿಲ್ಲ.

ಕೆಲವು ದಿನಗಳ ನಂತರ ನಾನು ಗುಡ್ಡದ ಅಡ್ಡಹಾದಿಯೊಂದರಲ್ಲಿ ನಡೆದು ಬರುತ್ತಿದ್ದೆ. ತುಸು ಮುಂದೆ ಸ್ವಾಮಿ ಹೋಗುತ್ತಿರುವುದು ಕಾಣಿಸಿ, ಬೇಗ ಬೇಗ ನಡೆದು ಅವನನ್ನು ಸಮೀಪಿಸಿದೆ. “ಸ್ವಾಮಿ!” ಎಂದು ಕರೆದೆ. ಅವನು ನನ್ನನ್ನು ನೋಡಿನಿಂತ. ಸ್ನೇಹದ ಮುಗುಳ್ನಗೆ ತುಟಿಗಳಲ್ಲಿ ಕಾಣಿಸಿಕೊಂಡಿತು. ನನ್ನದು ಅವನನ್ನು ಏಕಾಂತದಲ್ಲಿ ಮಾತಾಡಿಸುವ ಭಂಡ ಧೈರ್ಯ.

“ನಿನ್ನ ಕತೆ ’ಮುಷ್ಟಿ’ ಓದಿದೆ” ಎಂದೆ. ಸ್ವಾಮಿ ತುಟಿ ಎರಡು ಮಾಡಲಿಲ್ಲ.

“ನನಗದು ಹಿಡಿಸಿತು. ಮುಖ್ಯವಾಗಿ ಕಥಾವಸ್ತು ; ಹಾಗೂ ಕತೆ ನಡೆಯುವ ಪರಿಸರದ ವಿವರಗಳು. ಆದರೆ ನನಗೊಂದು ಸಂದೇಹ…..” ಎಂದೆ.

ಅವನು ನನ್ನ ಕಡೆ ನಿರೀಕ್ಷೆಯಿಂದ ನೋಡಿದ, ಹೇಳು ನಿನ್ನ ಸಂದೇಹವನ್ನು ಎನ್ನುವಂತೆ. ನಾನಂದೆ-

“ಅಂಥದೊಂದು ಘಟನೆ ನಿಜಕ್ಕೂ ನಡೆಯೊದು ಸಾಧ್ಯವೆ? ಅಥವಾ ಅದೆಲ್ಲ ನಿನ್ನ ಕಲ್ಪನೆಯೆ?”

ಸ್ವಾಮಿ ಮೌನ ಮುರಿಯದೆ ಹೆಜ್ಜೆ ಹಾಕುತ್ತಿದ್ದ. ನನ್ನ ಪ್ರಶ್ನೆಗಳು ಉತ್ತರ ಪಡೆಯದೆ ನನಗೇ ಮರಳಿದ್ದುವು. ನಾವು ನಡೆಯುತ್ತಿದ್ದ ಅಡ್ಡ ಹಾದಿಯ ಆಚೀಚೆ ಎದೆಯೆತ್ತರ ಹುಲ್ಲು ಬೆಳೆದಿತ್ತು. ನನಗೆ ತಟ್ಟನೆ ಅವನ ಕೈಬೆರಳುಗಳ ಬಗ್ಗೆ ನೆನಪಾಗಿ ನೋಡಿದೆ. ಇಲ್ಲ, ಕೈಬೆರಳುಗಳಿಗೇನೂ ಆಗಿರಲಿಲ್ಲ. ನನ್ನ ಮನಸ್ಸಿಗೆ ನಿರಾಸೆಯಾಯಿತೆಂದೇ ಹೇಳಬೇಕು.

ನಂತರ ಮಾತಿಲ್ಲದೆ ನಡೆಯುತ್ತ ನಾವು ಬೇರಾಗುವ ಕವಲು ಹಾದಿಗೆ ಬಂದೆವು. ತಟ್ಟನೆ ಸ್ವಾಮಿ ನನ್ನ ಕೈ ಹಿಡಿದ. ಬಾಯಿ ತೆರೆದು, ನೋಡು ಎನ್ನುವಂತೆ ಸಂಜ್ಞೆ ಮಾಡಿದ. ನೋಡಿದೆ. ನೋಡಿ ತಲೆ ಸುತ್ತು ಬರುವಂತಾಯಿತು. ನನ್ನ ಹಿಡಿದ ಕೈಯನ್ನು ಮೆತ್ತಗೆ ಅಮುಕಿ ಸ್ವಾಮಿ ತನ್ನ ಹಾದಿಯಲ್ಲಿ ನಡೆದು ಹೋದ ಅದೇ ಗತಿಯಲ್ಲಿ. ಅವನು ಮರೆಯಾಗುವ ತನಕವೂ ನಾನಲ್ಲಿ ನಿಂತಿದ್ದು ನಂತರ ನನ್ನ ಹಾದಿ ಹಿಡಿದೆ.

ಕೆಲವು ದಿನಗಳು ಕಳೆದವು. ನಂತರದ ಒಂದು ದಿನ ರಂಗಸ್ವಾಮಿ ಮತ್ತೆ ಕಾಣದಾಗಿದ್ದಾನೆ ಎಂಬ ಸುದ್ದಿ ಬಂತು. ನನಗೆ ಸುದ್ದಿ ತಲುಪಿಸಿದವನು ಸೋಮಯ್ಯನೇ. ಅಂಗಡಿ ಮಾಲಿಕನಾದ ಅವನಿಗೆ ಸುದ್ದಿಗಳು ಬೇಗನೆ ಗೊತ್ತಾಗುತ್ತವೆ.

“ಸ್ವಾಮಿ ಎಂದಿನಂತೆ ಬರೇ ಪೈಜಾಮ ಜುಬ್ಬಾ ಹಾಕಿಕೊಂಡು ವಾಕಿಂಗ್ ಹೋಗಿದ್ದನಂತೆ. ಸಂಜೆ ಹಿಂತಿರುಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವನ ಸುಳಿವಿಲ್ಲ ಎನ್ನುತ್ತಾರೆ. ” ಎಂದ ಸೋಮಯ್ಯ. ನನಗಿದರಿಂದ ಆಶ್ಚರ್ಯವಾಗಲಿಲ್ಲ. ಇಂಥ ಘಟನೆಯನ್ನು ನಿಜಕ್ಕೂ ನಾನು ಊಹಿಸಿದಂತಿತ್ತು.

“ಅವನು ಇನ್ನು ಬರುತ್ತಾನೆ ಅಂತ ನನಗನಿಸುವುದಿಲ್ಲ.” ಎಂದ ಸೋಮಯ್ಯ. ನಾನದಕ್ಕೆ ಏನೂ ಹೇಳಲಿಲ್ಲ.
*****
ಕೀಲಿಕರಣ ಮಾಡಿದವರು: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿಯೆ ನೀ ಸಿರಿಯೆ
Next post ದೀಕ್ಷಾ ಗೀತೆ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…