ಮೈತುಂಬಾ ಮಸಿ ಮೆತ್ತಿದರೂ
ತೊಳೆದು ಬರಬಲ್ಲರು ಅವರು
ಕೇಳಲುಬಾರದು
ಮಸಿಯ ಮೂಲಕ್ಕೆ ಕಾರಣ
ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು.

ಬಿಳಿಮೈಯ ಮಾತಿಗೆ ಬಸವನ ಗೋಣು
ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು.
ಕರಿಮೈಯ ಮಾರನ ಮನೆಯ
ದೀಪದ ಬೆಳಕಿಗೆ ಯಾವ ಬಣ್ಣ

ಕೇಳಲೇ ಇಲ್ಲ, ಬಲ್ಲವರು
ತಗ್ಗಿದ ತಲೆಗಳ ಎತ್ತಲಾಗಲೇ ಇಲ್ಲ
ಜಾತಿ ಎಂಬ ಬಾವಿಯ ಆರದ ನೀರು
ಸಿಹಿಯಲ್ಲ, ಉಪ್ಪುಪ್ಪು.

ಆದೇ ಆಗ ಮೂಡಿದ್ದ
ಪೂರ್ವದಲ್ಲೊಬ್ಬ ಪ್ರಖರ ಸೂರ್ಯ
ದೀನ ದಲಿತರ ಹಾಡುಗಳು
ಮುಖಪುಟದ ಮೇಲೆ ಮೂಡಲಾರಂಭಿಸಿದವು
ಮಂತ್ರಗಳ ಮೇಲೋಚ್ಛಾಟನೆ ಮಾಡಿ.

ಆತನ ಕಣ್ಣುಗಳಲ್ಲಿ ತೀಕ್ಷ್ಣ ಹೊಳಪು
ಭಂಡಾರ ಮೆತ್ತಿದ ಹಣೆಗಳು
ತಲೆತಗ್ಗಿಸಿದವು.

ಬೆಚ್ಚಿಬಿದ್ದರು ಧರ್ಮಸೈತಾನರು
ಮೈಗಂಟಿದ ದಾರ ಬಿಗಿಯಾಗಿ
ಉಸಿರುಗಟ್ಟಿದಂತೆ

ಜಲಪಾತದ ವಾಙ್ಮಯಕ್ಕೆ
ಬೆದರಿದ ಪುರಾಣಗಳು
ಪಟಪಟನೇ ಉದುರಿಬಿದ್ದವು.

ಅದೊಂದು ಧಾತುವಿನಿಂದ
ಹೊಮ್ಮಿದ, ಪಲ್ಲವಿಸಿದ
ರಕ್ತದಲ್ಲೇ ಬೆಂಕಿಯುಗುಳುವ
ಲಾವಾ ತುಂಬಿಕೊಂಡ
ಬೆಂಕಿಯುಂಡೆಗಳು
ವರ್ತಮಾನದ ಬಾಗಿಲ ಕಾವಲುಗಾರರು

ಕತ್ತಲೆಗೂಡಿನ ದೀಪಗಳು
ಜಗ್ಗನೇ ಉರಿಯುತ್ತಿವೆ.
ಬಾಯಿಲ್ಲದವನ ಕೂಗಿಗೆ
ಕಂಚಿನ ಕಂಠ ಎರವಲು ಸಿಕ್ಕಿದೆ.
ದಲಿತರ ಕೇರಿಗಳು
ದಿಗ್ವಿಜಯದ ಕೇಕೆಗಳು

ಪ್ರತಿ ಉದಯವೂ
ಮಾರ್ದವದ ಸೌಂದರ್ಯ.
*****