ಮುಸ್ಸಂಜೆಯ ಮಿಂಚು – ೯

ಮುಸ್ಸಂಜೆಯ ಮಿಂಚು – ೯

ಅಧ್ಯಾಯ ೯ ಅಮ್ಮ-ಮಗನ ಕಥೆ

ಸರೋಜಮ್ಮ-ಗೋವಿಂದಪ್ಪ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಪೂಜೆ, ವ್ರತ, ಆಸ್ಪತ್ರೆ ಎಲ್ಲಾ ಆದರೂ ಫಲ ಮಾತ್ರ ದೊರೆತಿರಲಿಲ್ಲ. ಮಕ್ಕಳಿಲ್ಲದ ಸಂಕಟ ಕಾಡಿ, ಹಿಂಸಿಸುತ್ತಿತ್ತು. ಒಂದು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ದೇವರೇ ವರ ಕೊಟ್ಟಂತೆ, ಆಗ ತಾನೇ ಹುಟ್ಟಿದ ಗಂಡುಮಗುವನ್ನು ರಸ್ತೆ ಬದಿ ಮಲಗಿಸಿ ಹೋಗಿದ್ದಾರೆ ಎಂದು ತಿಳಿದೊಡನೆ ಆ ಮಗುವನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು. ಯಾರೋ ಹೆತ್ತು ಬಿಸುಟು ಹೋದ ಕಂದ ಇವರ ಮನೆ ಬೆಳಗುವ ದೀಪವಾಗಿ, ಕತ್ತಲೆ ತುಂಬಿದ ಮನೆಗೆ ಬೆಳಕು ನೀಡಿತ್ತು.

ಮಗುವಿಗೆ ಜಗದೀಶನೆಂದು ಹೆಸರಿಟ್ಟು ತುಂಬ ವಾತ್ಸಲ್ಯದಿಂದ ಸ್ವಂತ ಮಗುವಿನಂತೆಯೇ ಸಾಕತೊಡಗಿದರು. ಮಗು ದಿನದಿನಕ್ಕೆ ಹುಣ್ಣಿಮೆ ಚಂದ್ರನಂತೆ ಬೆಳೆದು, ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಪಡೆದು, ಅಪ್ಪ-ಅಮ್ಮನ ಬದುಕಿಗೆ ತಂಪು ತಂದನು, ಇಲ್ಲಿಯವರೆಗೆ ಸುಖಾಂತವಾಗಿಯೇ ನಡೆಯುತ್ತಿದ್ದ ಈ ಪುಟ್ಟ ಸಂಸಾರದಲ್ಲಿ ಗೋವಿಂದಪ್ಪನ ಅನಿರೀಕ್ಷಿತ ಸಾವು ಆಘಾತವನ್ನೇ ತಂದಿತು. ಸರೋಜಮ್ಮ ಪತಿಯ ಸಾವಿನಿಂದ ಕಂಗೆಟ್ಟರೂ ಮಗನ ಮೊಗ ನೋಡಿಕೊಂಡು, ದುಃಖ ಮರೆಯುವಂತಾದರು. ದಿನಗಳು ಹೀಗೆ ಉರುಳುತ್ತಿದ್ದಂತೆ ಮಗನ ಮದುವೆ ಮಾಡಿ, ಸೊಸೆಯನ್ನು ತಂದು, ಮೊಮ್ಮಕ್ಕಳನ್ನು ಕಾಣಬೇಕೆಂದು ಸರೋಜಮ್ಮ ಕನಸು ಕಾಣತೊಡಗಿದರು. ಅದಕ್ಕಾಗಿ ಹೆಣ್ಣು ಹುಡುಕುತ್ತಿರುವಾಗಲೇ ಜಗದೀಶ್ ತಾನು ಮಚ್ಚಿರುವ ಹುಡುಗಿಯನ್ನು ಮದುವೆಯಾಗುತ್ತೇನೆಂದು ಹಟ ಹಿಡಿದಾಗ ಭ್ರಮನಿರಸನವಾಗಿತ್ತು ಸರೋಜಮ್ಮನಿಗೆ. ತಾವೇ ಹುಡುಕಿದ, ತಮ್ಮದೇ ಜಾತಿಯ ಹುಡುಗಿಯನ್ನು ಸೊಸೆಯಾಗಿ ತರಬೇಕೆಂದು ಆಸೆಪಡುತ್ತಿರುವಾಗಲೇ ಜಗದೀಶನ ಹಟ ಇರಿಸುಮುರಿಸಾಗಿತ್ತು. ತಾನು ಒಪ್ಪಿದ ಹೆಣ್ಣನ್ನೇ ಮದುವೆಯಾಗಿ, ಮನೆಗೆ ಕರೆತಂದೇ ಬಿಟ್ಟಾಗ ಸರೋಜಮ್ಮ ದಿಗ್ಭಾಂತರಾದರು. ಮಗ ಇಷ್ಟೊಂದು ಮುಂದುವರಿಯುತ್ತಾನೆಂದು ಕನಸಿನಲ್ಲಿಯೂ ನೆನಸದ ಸರೋಜಮ್ಮ ಕೋಪದಿಂದ ಕಿಡಿಕಿಡಿಯಾದರು. ಮನೆಗೆ ಸೇರಿಸದೆ ಮಗ-ಸೊಸೆಯನ್ನು ಹೊರಗಟ್ಟಿದರು. ಜಗದೀಶ್ ಅಂಗಲಾಚಿ ಬೇಡಿಕೊಂಡ. “ದುಡುಕಬೇಡ ಅಮ್ಮ, ನಾ ಮೆಚ್ಚಿದ ಹೆಣ್ಣನ್ನೇ ಮದುವೆ ಮಾಡಿಕೊಂಡಿರುವುದು ನಿನ್ನ ದೃಷ್ಟಿಯಲ್ಲಿ ತಪ್ಪಾದರೂ

ಮಾಡದೆ ತಾಳಿ ಕಟ್ಟಿದ್ದೇನೆ. ಹಾಗಂತ ತಾಯಿಯನ್ನು ಬಿಟ್ಟುಬಿಡಲು ಸಾಧ್ಯವೇ? ನನಗೆ ನೀನೂ ಬೇಕು, ಹೆಂಡತಿಯೂ ಬೇಕು, ಕಾಲಕ್ಕೆ ತಕ್ಕಂತೆ ಬದಲಾಗಿ, ಸೊಸೆಯನ್ನು ಒಪಿಕೋ. ನಾನೇನೋ ಬೇರೆ ಮನೆ ಮಾಡಿ ಬದುಕಬಲ್ಲೆ. ಆದರೆ ವಯಸ್ಸಾಗಿರೋ ನೀನು ಒಂಟಿಯಾಗಿ ಹೇಗಿರಲು ಸಾಧ್ಯ? ನಾನಲ್ಲದೆ ನಿನಗಾರಿದ್ದಾರೆ? ನನ್ನ ತಪ್ಪನ್ನು ಕ್ಷಮಿಸಿ ಮನೆಗೆ ಕರ್ಕೊಳ್ಳಮ್ಮ” ಎಂದೆಲ್ಲ ಕೇಳಿಕೊಂಡರೂ ಸರೋಜಮ್ಮ ಕಲ್ಲಾಗಿದ್ದರು. ಮಗ ತನ್ನ ಮಾತನ್ನು ಮೀರಿ ನಡೆದದ್ದೇ ದೊಡ್ಡ ಅಪರಾಧವಾಗಿತ್ತು, ಅದನ್ನು ಯಾವ ಕಾರಣಕ್ಕೂ ಕ್ಷಮಿಸದಾದರು. ಆಮ್ಮನ ಕಾಠಿಣ್ಯತೆ ತಾನು ಎಷ್ಟು ಬೇಡಿದರು ಕರಗದು ಎಂದು ಅರಿವಾಗಿ ಜಗದೀಶ್ ಹೆಂಡತಿಯೊಂದಿಗೆ ಹೊರ ನಡೆದು, ಬೇರೆ ಮನೆ ಮಾಡಿದ. ಪ್ರತಿದಿನವು ತಾಯಿಯನ್ನು ಮಾತಾಡಿಸಿಕೊಂಡು ಹೋಗುತ್ತಿದ್ದ. ಮನೆಗೆ ಬೇಕಾಗಿರುವುದನ್ನು ತಂದು ಹಾಕುತ್ತಿದ್ದ. ಇಷ್ಟಾದರೂ ಮಗನೊಂದಿಗೆ ಸರೋಜಮ್ಮ ಮಾತನಾಡುತ್ತಿರಲಿಲ್ಲ. ಅವನೊಬ್ಬನೇ ಮಾತಾಡಿಕೊಂಡು ಹೋಗಬೇಕಿತ್ತು. ಇಂದಲ್ಲ ನಾಳೆ ಅಮ್ಮ ಕರಗುವಳೆಂದೇ ಜಗದೀಶ್ ನಂಬಿದ್ದ. ಆದರೆ, ಅವನ ನಂಬಿಕೆ ಸುಳ್ಳಾಯಿತು. ಹಟವಾದಿ ಸರೋಜಮ್ಮ ಮಗನ ಈ ಬರುವಿಕೆಯೂ ಹಿಂಸೆ ಎನಿಸಿ, ತಾಯಿಗಿಂತ ಆ ಹೆಣ್ಣೇ ಹೆಚ್ಚು ಎಂದು ತೋರಿಸಿಕೊಂಡ ಮೇಲೆ ಮಗನ ಮುಖವನ್ನೇ ನೋಡಬಾರದೆಂದು ನಿರ್ಧರಿಸಿದರು. ತಾನು ಇಲ್ಲಿಯೇ ಇದ್ದರೆ ಮಗ ದಿನಾ ಬರುತ್ತಾನೆ, ಹಾಗೆ ಬಂದಾಗಲೆಲ್ಲಾ ಅವನು ಆ ಹೆಣ್ಣಿಗೆ ಸೇರಿದವನು ಎಂಬುದು ಚುಚ್ಚಿ ತೋರಿಸುವಂತಾಗಿ ತಾನು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ತಾನೀಗ ಎಲ್ಲಿಗಾದರೂ ಮರೆಯಾಗಿ ಹೋಗಿಬಿಡಬೇಕು, ತನ್ನ ನೆರಳು ಕೂಡ ಗೊತ್ತಾಗಬಾರದು. ತಾನು ದೂರಾದ ಮೇಲಾದರೂ ಅವನಿಗೆ ತನ್ನ ತಪ್ಪು ಗೊತ್ತಾಗಿ, ಪಶ್ಚಾತ್ತಾಪದಿಂದ ನರಳಲಿ ಎಂದು ತೀರ್ಮಾನಿಸಿಕೊಂಡರು. ಗಂಡ ಸಂಪಾದಿಸಿದ ಹಣ ಬ್ಯಾಂಕಿನಲ್ಲಿತ್ತು. ತನ್ನ ಮುಂದಿನ ಬದುಕಿಗೆ ಅದು ಸಾಕು, ಈ ಮನೆ ಜಗದೀಶನಿಗೆ ಸೇರಬೇಕಾದದ್ದು, ಸ್ವಂತ ಮನೆ ಇರುವಾಗ ಬಾಡಿಗೆ ಮನೆಯಲ್ಲೇಕಿರಬೇಕು ? ಇಲ್ಲೇ ಇದ್ದುಕೊಳ್ಳಲಿ, ಯಾರಿಗೆ ಯಾರೂ ಇಲ್ಲ. ನನ್ನ ದಾರಿ ನನಗೆ ಎಂದುಕೊಂಡು ‘ನಮ್ಮ ಮನೆ’ಯ ಬಗ್ಗೆ ಯಾರಿಂದಲೋ ಮಾಹಿತಿ ಪಡೆದಿದ್ದ ಸರೋಜಮ್ಮ ತಮ್ಮ ಬಟ್ಟೆಬರೆಯೊಂದಿಗೆ ಊರು ತೊರೆದು, ‘ನಮ್ಮ ಮನೆ’ಯ ಆಶ್ರಯಕ್ಕೆ ಬಂದು ಸೇರಿದ್ದರು.

ಜಗದೀಶ್ ಅಮ್ಮನಿಗಾಗಿ ಹುಡುಕಾಡಿ ಸೋತು ಕೊನೆಗೆ ಎಲ್ಲಿಯೂ ನೆಮ್ಮದಿಯಾಗಿರಲಿ ಎಂದು ಸುಮ್ಮನಾಗಿಬಿಟ್ಟಿದ್ದ. ತನ್ನಿಂದಲೇ ತಾಯಿ ಈ ಊರೇ ಬಿಟ್ಟು ಹೋಗಿರುವ ಸಂಕಟ ಸದಾ ಚುಚ್ಚುತ್ತಿದ್ದರೂ ಎಂದಾದರೊಮ್ಮೆ ಮಗನನ್ನು ಕ್ಷಮಿಸಿ ಬಂದುಬಿಡಲಿ ಎಂದು ದೇವರನ್ನು ಬೇಡಿಕೊಳ್ಳುತ್ತ ತನ್ನ ಸಂಸಾರದಲ್ಲಿ ಮುಳುಗಿಹೋಗಿದ್ದ.

ತಮ್ಮದೇ ವಯಸ್ಸಿನವರ ಸಹವಾಸ ದೊರೆತದ್ದು, ಅವರೊಂದಿಗೆ ಕಷ್ಟ-ಸುಖ ಹಂಚಿಕೊಳ್ಳುತ್ತ ನೆಮ್ಮದಿಯಾಗಿಯೇ ಇದ್ದ ಸರೋಜಮ್ಮನಿಗೆ ದಿನಗಳು ಕಳೆದಂತೆ ತಾನು ಒಂಟಿ, ತಾನು ಅನಾಥ ಎಂಬ ಭಾವ ಕಾಡತೊಡಗಿತು. ಅಂದು ಮಗನ ಅಪರಾಧ ದೊಡ್ಡದಾಗಿ ಕಾಣುತ್ತಿದ್ದದ್ದು ಈಗೀಗ ಮೆಚ್ಚಿ ಮದುವೆಯಾದದ್ದೇನು ತಪ್ಪು, ಮೆಚ್ಚಿರುವ ವಿಷಯ ಅವನೇನು ಮುಚ್ಚಿಟ್ಟಿರಲಿಲ್ಲ. ತಾನು ಒಪ್ಪದಿದ್ದಾಗ ತಾನೇ ಆತ ತನಗೆ ತಿಳಿಯದಂತೆ ಮದುವೆಯಾಗಿ ಹೆಂಡತಿಯನ್ನು ಕರೆತಂದದ್ದು, ತಾನು ಮನೆಗೆ ಸೇರಿಸದ ಹೊರ ತಳ್ಳಿದರೂ ಮಗ ತನ್ನನ್ನೇನೂ ದೂರ ಮಾಡಿರಲಿಲ್ಲ. ತನ್ನ ಮೌನ, ಕೋಪ, ಹಟ ಲೆಕ್ಕಿಸದೆ ದಿನಾ ಬರುತ್ತಿದ್ದ, ತನ್ನ ಕ್ಷೇಮ ವಿಚಾರಿಸುತ್ತಿದ್ದ. ಇಷ್ಟೆಲ್ಲ ಮಾಡುತ್ತಿದ್ದರೂ ಮಗನಿಗೆ ತಿಳಿಯದಂತೆ ತಾನು ಹೊರಟುಬಂದದ್ದು, ಯಾರೂ ಇಲ್ಲದ ಅನಾಥೆ ಎಂದು ಇಲ್ಲಿ ಸೇರಿರುವುದು ಮುಳ್ಳಿನಂತೆ ಚುಚ್ಚತೊಡಗಿತು. ತನಗಾರೂ ಇಲ್ಲ ಎಂಬ ಭಾವ ಬದಲಾಗಿ ಮಗನಿದ್ದಾನೆ, ಅವನನ್ನು ನೋಡಬೇಕು, ಅವನ ಹೆಂಡತಿಯನ್ನು ಸೊಸೆಯೆಂದು ಒಪ್ಪಿಕೊಳ್ಳಬೇಕು, ಮಗ-ಸೊಸೆ, ಮೊಮ್ಮಕ್ಕಳೊಡನೆ ಇರಬೇಕು ಎಂಬ ಅನಿಸಿಕೆ ದಿನದಿನಕ್ಕೆ ಬಲಗೊಳ್ಳತೊಡಗಿತು.

ತಾನೇ ತಪ್ಪಿತಸ್ಥಳು. ಅಂದು ಪ್ರೀತಿಯಿಂದ ಮಡಿಲಿಗೆ ಹಾಕಿಕೊಂಡು ಹೆತ್ತ ಮಗನಂತೆ ಸಾಕಿ, ಸಲಹಿ, ಅವನು ಮಾಡಿದ್ದ ಒಂದೇ ಒಂದು ತಪ್ಪನ್ನು ಕ್ಷಮಿಸಲಾರದೆ, ನಿರ್ದಯಿಯಂತೆ ಅವನನ್ನು ತೊರೆದು ಬಂದದ್ದು ಅಪರಾಧ. ತಾನು ಎಲ್ಲಿದ್ದೇನೆ? ಹೇಗಿದ್ದೇನೆ ಎಂಬ ಸುಳಿವು ಕೂಡ ನೀಡದೆ ಇರುವುದು ಕೂಡ ಅಪರಾಧವೇ. ಮಗ ಹೇಗಿದ್ದಾನೋ? ಎಷ್ಟು ನೋವು ಅನುಭವಿಸುತ್ತಿದ್ದಾನೋ? ತಾನು ಹೊರಟುಬಿಡಬೇಕು ಎಂದುಕೊಂಡಾಗಲೆಲ್ಲ ಅಭಿಮಾನ ಅಡ್ಡ ಬಂದು ತಡೆಯುತ್ತಿತ್ತು. ಯಾವ ಮುಖ ಹೊತ್ತು ಅಲ್ಲಿಗೆ ಪುನಃ ಹೋಗಲಿ? ಈಗ ಹೋದರೆ ಮಗ-ಸೊಸೆ ಸ್ವೀಕರಿಸಿಯಾರೇ? ಅಮ್ಮ ಅನ್ನುವ ಪ್ರೀತಿ, ಅತ್ತೆ ಎನ್ನುವ ಗೌರವ ತೋರಿಯಾರೇ ಎಂಬ ದ್ವಂದ್ವದಲ್ಲಿ ಬೇಯುತ್ತಿದ್ದ ಸರೋಜಮ್ಮ ಮನಸ್ಸಿನ ಕ್ಷೋಭೆ ಹೆಚ್ಚಿಸಿಕೊಂಡು ಕಾಯಿಲೆ ಬಿದ್ದರು. ಇದೆಲ್ಲವನ್ನೂ ಯಾರ ಮುಂದೂ ಹೇಳಿಕೊಳ್ಳಲಾರದೆ, “ಸರೂ ಅಜ್ಜಿ, ಸರೂ ಅಜ್ಜಿ” ಎಂದು ಪ್ರೀತಿ ತೋರುತ್ತಿದ್ದ ರಿತುವಿನ ಮುಂದೆ ಮನದಾಳದ ಭಾವನೆಗಳನ್ನೆಲ್ಲ ಹೇಳಿಕೊಂಡು ಅತ್ತಿದ್ದರು. ನೊಂದು ಪಕ್ವವಾದ ಮನಸ್ಸು ಈಗ ಹದಗೊಂಡಿತ್ತು. ಮಗನ ಮಿಲನಕ್ಕಾಗಿ ಕಾತರಿಸುತ್ತಿತ್ತು.

ಸರೂ ಅಜ್ಜಿಯ ಬೇಗುದಿಯನ್ನೆಲ್ಲ ಬಲ್ಲ ರಿತು ತಾನೇ ಒಂದು ಪರಿಹಾರ ಹುಡುಕಿದ್ದಳು. ಅಜ್ಜಿಯ ಮಗನ ವಿಳಾಸ ತೆಗೆದುಕೊಂಡು ಎಲ್ಲವನ್ನೂ ವಿವರಿಸಿ ಪತ್ರಿಸಿದ್ದಳು. ಈಗಾಗಲೇ ಸಾಕಷ್ಟು ನೊಂದಿರುವ ತಾಯಿಯನ್ನು ಮತ್ತಷ್ಟು ನೋಯಿಸದೆ ಹೆಂಡತಿಯ ಜತೆ ಬಂದು ಕರೆದುಕೊಂಡು ಹೋಗುವುದಾಗಿ ಜಗದೀಶ್ ಉತ್ತರಿಸಿದ್ದ. ಇಂದು ಅವರು ಬರುವವರಿದ್ದರು. ಅದಕ್ಕಾಗಿಯೇ ರಿತು ಸರೂ ಅಜ್ಜಿಯ ಜತೆ ಹೋಗದೆ ಅವರ ಬರುವನ್ನು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗದೆ ಜಗದೀಶ್ ಮಗಳು, ಹೆಂಡತಿಯೊಂದಿಗೆ ಬಂದಿಳಿದ. ಅಮ್ಮನನ್ನು ಕಾಣುವ ತವಕದಿಂದಿದ್ದ ಜಗದೀಶ್ ಅಮ್ಮ ಆಸ್ಪತ್ರೆಯಲ್ಲಿರುವುದು ತಿಳಿದು ಭೂಮಿಗಿಳಿದು ಹೋದ.

“ತಾನು ಪಾಪಿ, ನನ್ನ ಮುಖ ನೋಡಲೂ ಇಷ್ಟವಿಲ್ಲದ ಅಮ್ಮ ನನ್ನ ಬಿಟ್ಟು ಹೋಗಿಯೇ ಬಿಡುತ್ತಾಳೇನೋ?” ಗೊಳೋ ಎಂದು ಅತ್ತೇಬಿಟ್ಟನು.

“ಏನೂ ಆಗಿಲ್ಲ ಅಂಕಲ್, ನಿಮ್ಮಗಳ ನೆನಪಿನಿಂದ ಅಜ್ಜಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಯೋಚನೆ ಮಾಡಿ ಮಾಡಿ ಜ್ವರ ಬರಿಸಿಕೊಂಡಿದ್ದಾರೆ. ಈವಾಗ ನಿಮ್ಮನ್ನು ನೋಡಿದ ಕೂಡಲೇ ಅಜ್ಜಿಯು ಹೇಗೆ ಹುಷಾರಾಗ್ತಾರೆ ನೋಡಿ” ಎಂದು ಸಮಾಧಾನಿಸಿ ಆಸ್ಪತ್ರೆಗೆ ಕರೆದೊಯ್ದಳು.

ಸೋತು ಸೊಪ್ಪಾಗಿ, ಹಾಸಿಗೆಯಲ್ಲಿ ಮಲಗಿದ್ದ ತಾಯಿಯನ್ನು ಕಂಡೊಡನೆ, “ಅಮ್ಮಾ, ನಾನು ನಿನ್ನ ಮಗ ಬಂದಿದ್ದೀನಿ. ನನ್ನ ತಬ್ಬಲಿ ಮಾಡಿ ಹೋಗಬೇಕು ಅಂತ ಮಾಡಿದ್ದೀಯಮ್ಮಾ, ಈಗಾಗಲೇ ನನ್ನ ದೂರ ಮಾಡ್ಕೊಂಡು ದೊಡ್ಡ ಶಿಕ್ಷೆಯನ್ನೇ ಕೊಟ್ಟುಬಿಟ್ಟಿದ್ದೀಯಾ, ಈ ಲೋಕದಿಂದಲೇ ದೂರ ಹೋಗಿ ನನ್ನ ಕೊಲ್ಲಬೇಡಮ್ಮ, ಇದನ್ನು ಸಹಿಸೋ ಶಕ್ತಿ ನನಗಿಲ್ಲಮ್ಮ, ನೀನೆಲ್ಲಿದ್ದೀಯೋ? ಹೇಗಿದ್ದೀಯೋ? ಏನೇನು ಕಷ್ಟಪಡ್ತಾ ಇದ್ದೀಯೋ ಅನ್ನೋ ನೋವು ದಿನಾ ನನ್ನ ಕಿತ್ತು ತಿನ್ತಾ ಇತ್ತು. ಮಗನಾಗಿ ನಾನಿದ್ದು, ನೀನು ಒಂಟಿಯಾಗಿ ಇಲ್ಲಿ ಇರಬೇಕಾಯ್ತಲ್ಲ? ನನ್ನ ಆ ದೇವ್ರು ಕ್ಷಮಿಸುವುದಿಲ್ಲ. ಅಮ್ಮಾ ಅಮ್ಮ ನನ್ನ ನೋಡಮ್ಮ” ಎಂದು ಜಗದೀಶ್ ಕಣ್ಣೀರುಗರೆಯುತ್ತ ಪ್ರಲಾಪಿಸಿದ. ತಾಯಿ ಹಾಗೇ ಅಲ್ಲಿ ಮಲಗಿರುವುದನ್ನು ಆತನ ಹೃದಯ ಸಹಿಸದಾಗಿತ್ತು. ಅಮ್ಮನ ಅಂತಿಮ ಕ್ಷಣಗಳೇ ಬಂದುಬಿಟ್ಟವೇನೋ ಎಂದು ಹೆದರಿ ಕಂಪಿಸಿದ. ಈಗಲಾದರೂ ಅಮ್ಮನನ್ನು ಕರೆದೊಯ್ದು ನೊಂದ ಹೃದಯಕ್ಕೆ ತಂಪೆರೆಯುವಂತೆ ನೋಡಿಕೊಳ್ಳಬೇಕು, ಅಮ್ಮನ ಕೊನೆಗಾಲದ ದಿನಗಳನ್ನು ಸ್ವರ್ಗಗೊಳಿಸಬೇಕೆಂದು ಅಂದುಕೊಂಡದ್ದೆಲ್ಲ ಎಲ್ಲಿ ಸುಳ್ಳಾಗುವುದೋ ಎಂದು ಕೊರಗಿದ.

ಮಗನ ಮೊರೆ ದೇವರಿಗೆ ಮುಟ್ಟಿತೇನೋ ಎಂಬಂತೆ ಸರೋಜಮ್ಮನಿಧಾನವಾಗಿ ಕಣ್ತೆರೆದರು. ಕಣ್ಣು ಬಿಟ್ರೊಡನೆ ಕಾಣಿಸಿದ್ದು ಮಗ. ಈ ಸಮಯದಲ್ಲಿ ಇಲ್ಲಿ ಆತನನ್ನು ನಿರೀಕ್ಷಿಸಿರದ ಸರೋಜಮ್ಮ ಈ ಅನಿರೀಕ್ಷಿತ ದರ್ಶನದಿಂದ ಆನಂದತುಂದಿಲರಾಗಿ, “ಜಗ್ಗು ಜಗ್ಗು, ಮಗು ನೀನು ಬಂದುಬಿಟ್ಟಿದ್ದೀಯಾ? ನಿನ್ನ ನಾ ನೋಡ್ತಾ ಇರುವುದು ಕನಸಲ್ಲ ತಾನೇ? ನನ್ನ ತಪ್ಪನ್ನ ಕ್ಷಮ್ಸಿ ಬಂದುಬಿಟ್ಟಿದ್ದೀಯಾ ಮಗನೇ ನನ್ನ ಕಂದ” ಎದ್ದು ಕುಳಿತು ಮಗನನ್ನು ಅಪ್ಪಿಕೊಂಡು ಅಳಲಾರಂಭಿಸಿದರು. ಅಮ್ಮ ಮಗನ ಈ ಅಪೂರ್ವ ಸಂಗಮ, ಹೃದಯಂಗಮ ದೃಶ್ಯ ಎಲ್ಲರ ಚಿತ್ತ ಕಲಕಿ ದ್ರವಿಸುವಂತೆ ಮಾಡಿತು.

“ಅಮ್ಮಾ, ಈ ಮಗನ ಮೇಲೆ ನಿನಗ್ಯಾಕಮ್ಮಾ ಅಷ್ಟೊಂದು ಕೋಪ? ನಾನು ಮಾಡಿದ್ದು ಒಂದೇ ಒಂದು ತಪ್ಪು. ಆ ತಪ್ಪನ್ನ ಹೊಟ್ಟೆಗೆ ಹಾಕ್ಕೊಂಡು ನನ್ನ ಕ್ಷಮ್ಸಿ, ನಮ್ಮ ಜತೆಯಲ್ಲಿ ಇರೋದು ಬಿಟ್ಟು, ಇದೇನಮ್ಮಾ ಈ ಅವಸ್ಥೆ? ದೇವರು ಎಲ್ಲಾ ಕಡೆ ಇರೋಕೆ ಆಗೋಲ್ಲ ಅಂತಾನೇ ತಾಯಿನಾ ಸೃಷ್ಟಿಸಿದ್ದಾನೆ ಅಂತಾರೆ. ಅಂಥದ್ದರಲ್ಲಿ ನನಗೆ ಈ ಶಿಕ್ಷೆ ಯಾಕಮ್ಮಾ? ಅವತ್ತು ಅನಾಥನಾಗಿ ಬೀದೀಲಿ ಬಿದ್ದಿದ್ದ ನನ್ನ, ನಿನ್ನ ಮಡಿಲಿಗೆ ಹಾಕ್ಕೊಂಡು ತಾಯಿ ಆದೆ. ಆದರೆ ಆಮೇಲೆ ಯಾಕಮ್ಮಾ ಕಠಿಣಳಾಗಿಬಿಟ್ಟೆ? ನಾನು ತಪ್ಪು ಮಾಡಿದೆ ನಿಜ. ಆದ್ರೆ ನೀನು ತಾಯಿ ಅಲ್ವೇನಮ್ಮಾ? ಮಕ್ಕಳ ತಪ್ಪನ್ನ ತಾಯಿ ಅಲ್ಲದೆ ಮತ್ಯಾರಮ್ಮಾ ಕ್ಷಮಿಸುತ್ತಾರೆ? ಆವತ್ತು ನೀನು ನನ್ನ ಸಾಕಿ, ಬೆಳೆಸಿ, ಬದುಕು ನೀಡಿದೆ. ಆದ್ರೆ ಇವತ್ತು ನಾನು ನಿನ್ನ ಬೀದಿಪಾಲು ಮಾಡಿಬಿಟ್ಟಿದ್ದೀನಲ್ಲಮಾ? ನಾನೆಂಥ ಮಗನಮ್ಮಾ? ನನ್ನ ಸ್ವಾರ್ಥ ನೋಡಿಕೊಂಡು ನಿನ್ನ ನೋಯಿಸಿಬಿಟ್ಟೆ” ದುಃಖಿತನಾಗಿ ನುಡಿದ.

“ನಂದೇ ತಪ್ಪು ಕಣೋ. ನಾ ಹೇಳಿದಂತೆ ಕೇಳಬೇಕು ನೀನು ಅಂತ ಬಯಸಿದೆ. ನಾನು ಒಪ್ಪದ ಹೆಣ್ಣನ್ನ ಮದ್ವೆ ಆದೆ ಅಂತ ನಿನ್ನ ದ್ವೇಷಿಸಿದೆ, ಕೋಪಿಸಿಕೊಂಡೆ. ನಿನ್ನ ನೆರಳೂ ನೋಡಬಾರದು ಅಂತ ನಿನ್ನಿಂದ ದೂರ ಹೋದೆ. ಅದರ ಪ್ರತಿಫಲವನ್ನು ಅನುಭವಿಸುತ್ತಾ ಇದ್ದೀನಿ ಕಣೋ, ನನ್ನ ಮನೆ, ನನ್ನ ಮಗ-ಸೊಸೆ ಜತೆ ಆನಂದವಾಗಿ ಇರಬಹುದಿದ್ದ ನಾನು, ನನ್ನವರಿಂದ ದೂರ ಆಗಿ, ಒಂಟಿಯಾಗಿ, ನನ್ನ ನೋವನ್ನು ನಾನೇ ನುಂಗುತ್ತ, ಅನಾಥೆಯಂತೆ ಬದುಕುತ್ತಿದ್ದೇನೆ ಕಣೋ ಜಗ್ಗು. ಈಗ ಗೊತ್ತಾಗ್ತಾ ಇದೆ, ನನ್ನವರ ಬೆಲೆ ಏನು ಅಂತ. ಪ್ರತಿದಿನ, ಪ್ರತಿಕ್ಷಣ ನಿನ್ನನ್ನ ನೆನೆಸಿಕೊಳ್ತಾ, ದಿನದಿನಕ್ಕೆ ಸಾವಿಗೆ ಹತ್ತಿರವಾಗ್ತಾ ಇದ್ದೀನಿ ಕಣೋ, ನಿನ್ನಿಂದ ದೂರ ಇರೋ ನೋವು ಸಹಿಸೋಕೆ ನನ್ನಿಂದ ಸಾಧ್ಯವಾಗ್ತಾ ಇಲ್ಲ ಜಗ್ಗು” ಅಷ್ಟು ದಿನಗಳ ನೋವನ್ನೆಲ್ಲ ತೋಡಿಕೊಂಡರು.

“ಇನ್ನು ಈ ರೀತಿಯ ನೋವು ಕೊಡಲ್ಲ ಅಮ್ಮ ನಾನು. ನೀನು ನಮ್ಮ ಮನೆಗೆ ಬರ್ತಿದ್ದೀಯಾ, ನನ್ನ ಜತೆಯಲ್ಲಿಯೇ ಇರ್ತಿಯಾ, ನಿನ್ನ ಮೊಮ್ಮಗಳನ್ನ ನೋಡಿದಿಯಾ ಅಮ್ಮಾ?” ಮಗಳನ್ನು ಹತ್ತಿರ ಎಳೆದುಕೊಂಡು ಅಮ್ಮನತ್ತ ತಳ್ಳಿದ.

ಬೆರಗಿನಿಂದ ಅಪ್ಪನ, ಅಜ್ಜಿಯ ಮಾತುಗಳನ್ನೆಲ್ಲ ಕೇಳುತ್ತಾ ನಿಂತವಳಿಗೆ ದಿಢೀರನೆ ಅಜ್ಜಿಯತ್ತ ಅಪ್ಪ ತಳ್ಳಿದಾಗ ತಬ್ಬಿಬ್ಬಾದಳು.

ಸರೋಜಮ್ಮ ಮೊಮ್ಮಗಳನ್ನು ತಬ್ಬಿಕೊಂಡು ಹಣೆಗೆ ಮುತ್ತಿರಿಸಿ, “ನನ್ನ ಕಂದಾ, ಜಗ್ಗು ಹೀಗೆ ಇದ್ದ ನಿನ್ನ ವಯಸ್ಸಿನಲ್ಲಿ, ಎಲ್ಲಾ ಅಪ್ಪನಂತೆಯೇ ಇದ್ದೀಯಾ. ನಾನೆಂಥ ಪಾಪಿ ನೋಡು, ನೀನು ಇಷ್ಟು ದೊಡ್ಡವಳಾದ ಮೇಲೆ ನಿನ್ನ ನೋಡ್ತಾ ಇದ್ದೀನಿ. ನೂರು ವರ್ಷ ಸುಖವಾಗಿ ಬಾಳು ಕಂದಾ” ಹೃದಯತುಂಬಿ ಹೇಳಿದರು.

“ಅಜ್ಜಿ, ನೀನು ಇನ್ನೇಲೆ ನಮ್ಮ ಮನೆಯಲ್ಲಿಯೇ ಇರಬೇಕು. ನಮ್ಮಜತೆ ಬರ್ತಿಯ ಅಲ್ವಾ ಅಜ್ಜಿ” ಮೊಮ್ಮಗಳು ಮುದ್ದುಗರೆದಳು.

ದೂರದಲ್ಲಿಯೇ ನಿಂತಿದ್ದ ಸೊಸೆಯತ್ತ ತಿರುಗಿದ ಸರೋಜಮ್ಮ “ಬಾಮ್ಮಾ ಇನ್ನೂ ನನ್ನ ಮೇಲೆ ಬೇಸರನಾ ನಿಂಗೆ? ನಾನು ಒಪ್ಪಿರಲಿ ಬಿಡಲಿ ನೀನು ಅವತ್ತೇ ನನ್ನ ಸೊಸೆ ಆಗಿದ್ದೆ ಕಣಮ್ಮಾ, ನಾನು ದಡ್ಡಿ, ಮನೆಯಲ್ಲಿರೋ ಸ್ವರ್ಗಾನಾ ದೂರ ಮಾಡ್ಕೊಂಡು ಅಶಾಂತಿಯ ನರಕದಲ್ಲಿ ಇದುವರೆಗೂ ಬೇಯುತ್ತಿದ್ದೆ. ನನ್ನ ಕ್ಷಮ್ಸಿ ಬಿಡಮ್ಮಾ.”

“ಅಯ್ಯೋ, ಅಷ್ಟು ದೊಡ್ಡ ಮಾತೆಲ್ಲ ಆಡಬೇಡಿ ಅತ್ತೆ. ಈಗ್ಲಾದರೂ ನಮ್ಮ ಮನೆಗೆ ಬಂದು, ನಮ್ಮ ಜತೆ ಇರಬೇಕು ಅತ್ತೆ, ನನ್ನಿಂದ ಅಮ್ಮ-ಮಗ ದೂರ ಅದರಲ್ಲ ಅನ್ನೋ ಚಿಂತೆ ನನ್ನ ಸುಡ್ತಾ ಇದೆ. ಅದಕ್ಕೆ ನೀವು ಮತ್ತೆ ಒಂದಾಗಿ, ನನ್ನೆದೆಗೆ ತಂಪು ತನ್ನಿ ಅತ್ತೆ. ನಿಮ್ಮನ್ನ ಹೆತ್ತ ತಾಯಿಯಂತೆ ನೋಡಿಕೊಳ್ತೀನಿ. ನನ್ನ ತಪ್ಪನ್ನು ಒಪ್ಪಿಕೊಂಡು ನಮ್ಮ ಮನೆಗೆ ಬನ್ನಿ ಅತ್ತೆ” ಬೇಡಿದಳು ಸೊಸ.

“ನಿನ್ನಂಥ ರತ್ನನ ಗಾಜಿನ ಚೂರು ಅಂತ ತಿಳ್ಕೊಂಡು ಮೂರ್ಖಳಾಗಿಬಿಟ್ಟೆ ನಾನು. ಇನ್ನು ಈ ತಪ್ಪನ್ನ ಮಾಡೋಲ್ಲ. ಈ ಮುದಿ ವಯಸ್ಸಿನಲ್ಲಿ ನೀವಲ್ದೆ ನಂಗ್ಯಾರು ಆಸರೆ? ನಾನು ನಿಮ್ಮ ಜತೆ ಬರ್ತೀನಿ. ನನ್ನ ಮಗನ ಕೈಯಲ್ಲಿಯೇ
ಪ್ರಾಣ ಬಿಡಬೇಕು ನಾನು. ಆ ದೇವರು ದೊಡ್ಡವನು, ನನ್ನ ಮೊರೆ ಕೇಳಿಸಿಕೊಂಡು ಬಿಟ್ಟ. ನನ್ನ ಮಗನ್ನ ನನ್ನತ್ರ ಬರೋ ಹಾಗೆ ಮಾಡಿಬಿಟ್ಟ.”

“ಆ ದೇವರಲ್ಲ ಕಣಮ್ಮಾ ನಿನ್ನತ್ರ ನನ್ನ ಕರೆಸಿದ್ದು, ಈ ದೇವತೆ. ನನ್ನ ವಿಳಾಸ ಹುಡುಕಿ, ನಂಗೆ ನಿನ್ನ ವಿಚಾರ ತಿಳಿಸಿ, ಅಮ್ಮ-ಮಗನ್ನ ಒಂದುಮಾಡಿದ ಪುಣ್ಯವತಿ” ರಿತುವಿನತ್ತ ಬೆರಳು ಮಾಡಿ ತೋರಿದ ಜಗದೀಶ್.

“ನಮ್ಮ ಮನೆ”ಗೆ ತಂಗಾಳಿಯಂತೆ ಬಂದು, ನನ್ನ ಬದುಕನ್ನ ನೇರ ಮಾಡಿದ ಮಹಾತಾಯಿ ಕಣೆ ರಿತು ನೀನು. ನಾನೇನು ಬಾಯಿಬಿಟ್ಟು ಹೇಳದೆ ಹೋದರೂ ನನ್ನ ಮನಸ್ಸಿನ ಆಸೆನಾ ಅರ್ಥಮಾಡಿಕೊಂಡು, ನನ್ನ ಮಗನ ಕರೆಸಿಬಿಟ್ಟೆ, ಆ ದೇವರು ನಿಂಗೆ ಒಳ್ಳೆಯದು ಮಾಡಲಿ” ಹಾರೈಸಿದಳು.

ಮಗನನ್ನು ಕಂಡಕೂಡಲೇ ಸರೋಜಮ್ಮನ ಕಾಯಿಲೆ ಓಡಿಯೇಬಿಟ್ಟಿತು. ಸೋತು ಸೊಪ್ಪಾಗಿದ್ದ ಸರೋಜಮ್ಮ ಈಗ ಸಾಕಷ್ಟು ಚೇತರಿಸಿಕೊಂಡರು. ಮಗನೊಂದಿಗೆ ಹೊರಟು ನಿಂತಾಗ ವೆಂಕಟೇಶ್, ರಿತು ಸಂತೋಷದಿಂದಲೇ ಕಳುಹಿಸಿಕೊಟ್ಟರು. ಅಷ್ಟು ದಿನವೂ ಜತೆವಾಸಿಗಳಾಗಿದ್ದ ಆಶ್ರಮದಲ್ಲಿದ್ದವರೆಲ್ಲ ಸ್ವಂತ ಗೂಡಿನಲ್ಲಿ ತನ್ನವರೊಂದಿಗಿರಲು ಹೊರಟಿರುವ ಸರೋಜಮ್ಮನನ್ನು ಕಣ್ಣೀರಿಡುತ್ತಲೇ ಬೀಳ್ಕೊಟ್ಟರು.

“ರಿತು, ಏನೂ ಯೋಚಿಸುತ್ತಾ ಕುಳಿತುಬಿಟ್ಟೆ? ಸರೋಜಮ್ಮಹೊರಟುಹೋಗಿದ್ದು ಬೇಸರ ಆಯ್ತೆ?” ಅನ್ಯಮನಸ್ಕಳಾಗಿ ಕುಳಿತಿದ್ದರಿತುವನ್ನು ಕೇಳಿದರು ವೆಂಕಟೇಶ್‌. ರಿತು, ಸರೂ ಅಜ್ಜಿ ಸರೂ ಅಜ್ಜಿ ಅಂತ ತುಂಬಾ ತುಂಬಾನೇ ಅವರನ್ನು ಹಚ್ಚಿಕೊಂಡಿದ್ದಳು. ಈಗ ಆಕೆ ಇಲ್ಲದಿರುವುದು ರಿತುವಿಗೆ ಬೇಸರವಾಗಿರಬೇಕೆಂದು ಗ್ರಹಿಸಿದರು.

“ಇಲ್ಲ ಸರ್, ಸರೂ ಅಜ್ಜಿ ಇಲ್ಲಿದ್ದು, ಸದಾ ಮಗನನ್ನ ನೆನೆಸಿಕೊಂಡು ಕೊರಗುವುದನ್ನು ನನ್ನಿಂದ ನೋಡೋಕೆ ಆಗ್ತಾ ಇರಲಿಲ್ಲ. ತುಂಬಾ ಸ್ವಾಭಿಮಾನಿ ಅಜ್ಜಿ. ತಮ್ಮ ನೋವನ್ನ ಯಾರೊಂದಿಗೂ ಹೇಳಿಕೊಳ್ಳದೆ ಒಳಗೆ ಕೊರಗಿ, ಕೊರಗಿ, ನವೆದು ಹೋಗ್ತಾ ಇದ್ದರು. ಬದುಕಿನ ಸಂಧ್ಯಾ ಸಮಯದಲ್ಲಿ ಹೆತ್ತ ಮಕ್ಕಳು ಕಿರಣವಾಗಿ ಬರಬೇಕು ಸರ್, ಆಗಲೇ ಆ ಪಕ್ವ ಜೀವಿಗಳಿಗೆ ಸಾಂತ್ವನ ನೀಡಿದಂತೆ. ಎಲ್ಲ ಮಕ್ಕಳು ಈ ಸತ್ಯವನ್ನು ಅರಿತುಕೊಂಡು ಹೆತ್ತ ಕರುಳಿಗೆ ತಂಪು ನೀಡಿದರೆ, ಒಂದಿಷ್ಟು ಪ್ರೀತಿ ನೀಡಿದರೆ ‘ನಮ್ಮ ಮನೆ’ಗಳಂಥ ಆಶ್ರಮಗಳ ಅವಶ್ಯಕತೆಯೇ ಇರುವುದಿಲ್ಲ. ಜಗದೀಶ್ ಹೆತ್ತ ಮಗನಲ್ಲದಿದ್ದರೂ ಸಾಕಿ, ಸಲಹಿದ ತಾಯಿಗಾಗಿ ಮರುಗುತ್ತಾರೆ. ಆಕೆಯ ಸೇವೆ ಮಾಡಿ ಋಣ ತೀರಿಸಿಕೊಳ್ಳಲು ಹಂಬಲಿಸುತ್ತಾರೆ. ತಾಯಿ ತನ್ನಿಂದ ದೂರ ಇದ್ದಾರೆ ಅಂದಾಗ ಅದೆಷ್ಟು ಸಂಕಟಪಟ್ಟಿದ್ದಾರೆ. ಅವರ ಅಮ್ಮ ಇಲ್ಲಿದ್ದಾರೆ ಅಂತ ಗೊತ್ತಾದ ಕೂಡಲೇ ಓಡಿ ಬಂದುಬಿಟ್ಟರು. ಅಂಗಲಾಚಿ ಬೇಡಿಕೊಂಡು ಆ ತಾಯಿನ ಮನೆಗೆ ಕರೆದೊಯ್ದು ದೇವತೆಯಂತೆ ನೋಡಿಕೊಳ್ಳುತ್ತಾರೆ. ಈ ಗುಣ ಎಲ್ಲಾ ಮಕ್ಕಳಿಗೂ ಯಾಕೆ ಬರಲ್ಲ ಸಾರ್? ಅದನ್ನೇ ಯೋಚಿಸುತ್ತಾ ಇದ್ದೆ.”

“ಇದು ಜೀವನ ರಿತು. ಒಳ್ಳೆಯದು – ಕೆಟ್ಟದ್ದು ಅನ್ನೋ ಎರಡೂ ಮುಖಗಳೂ ಇಲ್ಲೇ ಇವೆ. ಒಂದು ಕಡೆ ಮಕ್ಕಳು ಕೆಟ್ಟವರಾದರೆ, ಮತ್ತೊಂದು ಕಡೆ ಹೆತ್ತವರೇ ಕೆಟ್ಟವರಾಗಿರುತ್ತಾರೆ. ಅದೆಲ್ಲ ಅವರವರ ಜನ್ಮಗುಣ. ಒಟ್ಟಿನಲ್ಲಿ ತಿಳಿವಳಿಕೆಯುಳ್ಳ ಯಾವ ಮನುಷ್ಯನೂ ಹೆತ್ತವರನ್ನು ಕಡೆಗಣಿಸಲಾರ. ಯಾಕೆಂದರೆ, ಬದುಕು ಚಕ್ರ ಇದ್ದಂತೆ. ಇಂದು ಮಕ್ಕಳ ಸ್ಥಾನದಲ್ಲಿದ್ದವರು ಜೀವನ ಚಕ್ರ ತಿರುಗಿದಂತೆ ಹೆತ್ತವರ ಸ್ಥಾನಕ್ಕೆ ಬಂದಿರುತ್ತಾರೆ. ತಾವು ಮಾಡಿದ್ದನ್ನೇ ತಮ್ಮ ಮಕ್ಕಳಿಂದಲೂ ನಿರೀಕ್ಷಿಸಬೇಕಾದರೆ ಮೊದಲು ತಾವು ಆದರ್ಶವಾಗಿ ನಡೆಯಬೇಕಲ್ಲವೇ? ತಾವೇ ಹೆತ್ತವರನ್ನು ಕಡೆಗಣಿಸಿ, ನಿರ್ಲಕ್ಷಿಸಿದರೆ ತಮ್ಮ ಮಕ್ಕಳಿಂದೇನು ನಿರೀಕ್ಷಿಸಲು ಸಾಧ್ಯ? ಆತ್ಮಸಾಕ್ಷಿ ಅಂತ ಒಂದಿರುತ್ತದೆ ನೋಡು. ಅದಕ್ಕಾದರೂ ಅಂಜಿ ನಡೆಯಲೇಬೇಕು. ಅಂಥ ಆತ್ಮಸಾಕ್ಷಿಗೂ ಅಂಜಿ ನಡೆಯದ ಸ್ವಾರ್ಥಿ ಮಕ್ಕಳನ್ನು ಹೆತ್ತವರೇ ಇಂಥ ಆಶ್ರಯ ಬೇಡಿ ಬರುವುದು. ಒಟ್ಟಿನಲ್ಲಿ ಅವರವರ ಪೂರ್ವ ಜನ್ಮ ಫಲ” ವೇದಾಂತದ ಮೊರೆ ಹೊಕ್ಕರು ವೆಂಕಟೇಶ್.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತ್ತಲ ಗೂಡಿನ ದೀಪ
Next post ಕರೇ ಮನುಷ್ಯಾ ದಿಗಿಲು ಯಾಕ?

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…