ಕರೇ ಮನುಷ್ಯಾ ದಿಗಿಲು ಯಾಕ?
ಮಲ್ಲಿಗೆ ಹುಡುಗಿ ಒಲಿದಾಳ ನಿನಗ

ಕಣ್ಣನಾಗ ಚಿಕ್ಕಿ ಬಳಗ
ಸುರಗಿ ಕ್ಯಾದಗಿ ಎದೆಯಾ ಒಳಗ
ಹಾಡೊ ಕೋಗಿಲ ಕೂಳ್ಳಿನ ಕೆಳಗ
ಆಡೊ ನವಿಲು ಹೆಜ್ಜೆಯ ತಳಗ

ಬೆಂಕಿಯ ದೇಹಾ
ಮಣ್ಣಿನ ಜೀವ
ನದಿಯ ಭಾವ
ಕಲ ಕಲ ಕಲ ಕಲ…

ಕತ್ತಿ ನಾಲಿಗಿ
ಕೈಯಾ ಬಡಿಗಿ
ಚಿಗರಿ ನಡಿಗಿ
ಸೂರ್‍ಯನ ಹಾಂಗ ಕುದ್ದೂ ಕುದಿವಾ
ಚಂದ್ರನ ಹಾಂಗ ತಂಪೂ ಎರೆವಾ

ಸಿಟ್ಟಿನಾಗ ಸೊಕ್ಕಿದ ಸಲಗಾ
ಪ್ರೀತಿಯಾಗ ಪಚ್ಚೆ ಮರುಗ
ಮಿಂಚೊ ನಾಗ ಮನದ ಒಳಗ
ಫಳ ಫಳ ಫಳ ಫಳ…

ಕರೇ ಮನುಷ್ಯಾ ದಿಗಿಲು ಯಾಕೆ?
ಮಲ್ಲಿಗಿ ಹುಡುಗಿ ಒಲಿದಾಳ ನಿನಗ

ಕುಣಿಸೊ ಹರಯಾ
ಕುಣಿಸೊ ಕಾಯ
ಕಾಡಿಗಿ ಹಚ್ಚಿ ಕೆನ್ನಿಯ ಕಚ್ಚಿ
ಆಡಿ ಕೂಡಿ, ಕೂಡಿ ಆಡಿ ಕಳೆಯೊ ಮೋಹ

ಮೂಳಿ ಕಡಿವಾ
ಹೆಂಡ ಕುಡಿವಾ ದಣಿಯದೆ ಕುಣಿವಾ
ಥಕ ಥಕ ಥಕ ಥಕ…

ಕರೇ ಮನುಷ್ಯಾ ದಿಗಿಲು ಯಾಕ?
ಮಲ್ಲಿಗೆ ಹುಡುಗಿ ಒಲಿದಾಳ ನಿನಗ

ಕೃಷ್ಣನ ಹಾಂಗ
ಕಪ್ಪಗೆ ಇರುವ
ಕರೆದರೆ ಒಡನೆಯೆ
ಓಡಿ ಬರುವ…

ಬಾರೊ ಹುಡುಗಾ
ಬಿದಿರ ಮೆಳೆಗ
ತುಂಬೆದ ಉಕ್ಕೆದ
ಆಶೆಯ ಕೊಳಗ
ಝಮ ಝಮ ಝಮ ಝಮ…

ಕರೇ ಮನುಷ್ಯ ದಿಗಿಲು ಯಾಕ?
ಮಲ್ಲಿಗೆ ಹುಡುಗಿ ಕರಕೊ ಒಳಗ…
*****