
ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು,
ತಾವರೆಯ ಹೊಸ ಅರಳ ಹೊಳೆವ ಕೆಂಪು.
ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು,
ಕೊಳಲು ಮೋಹಿಸಿ ನುಡಿವ ಗಾನದಿಂಪು.
ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ,
ಮುಳುಗಿದೆನು ಅಷ್ಟಷ್ಟು ಪ್ರೇಮದೊಳಗೆ.
ಬತ್ತುವುವು ಕಡಲುಗಳು ಮುಂದಾಗಿ, ಎಲೆ ಚೆಲುವೆ,
ಬತ್ತಲಾರದು ತೊಟ್ಟು ಪ್ರೇಮದೊಳಗೆ.
ಬತ್ತುವುವು ಮುಂದಾಗಿ ಕಡಲುಗಳು, ಎಲೆ ಚೆಲುವೆ,
ಕರಗುವುವು ಬಂಡೆಗಳು ಬಿಸಿಲಿನೊಳಗೆ,
ಕರಗಲಾರದು ಚೂರು ಪ್ರೇಮದೊಳಗೆಲೆ ಚೆಲುವೆ,
ಬೆರೆದಿರಲು ಜೀವಕಳೆ ದೇಹದೊಳಗೆ.
ಹೋಗಿ ಬರುವೆನೆ ಹೆಣ್ಣೆ , ಪ್ರೇಮದೊಂದೇ ಹೆಣ್ಣೆ,
ಹೋಗಿಬರುವೆನು ಸಹಿಸು, ಎರಡು ಗಳಿಗೆ.
ಕೋಟಿಯೋಜನವಿರಲಿ, ದಾಟಿ ಬರುವೆನು, ಹೆಣ್ಣೆ,
ಬೇಗ ಬರುವೆನು ಹಾರಿ ನಿನ್ನ ಬಳಿಗೆ
*****
Burns : O my love’s like a red, red rose














